ಮೌನವೆಂಬ ಮಹಾನಿಧಿ

To prevent automated spam submissions leave this field empty.

ಮೌನವನ್ನು ಕುರಿತು ಮಾತನಾಡಿದರೆ ಅಥವ ಅದನ್ನು ಕುರಿತು ಬರೆಯುತ್ತ ಹೋದರೆ ಅದು ವಿರೋಧಾಭಾಸವೇ ಆಗುತ್ತದೆ. ಏಕೆಂದರೆ ಮೌನವೆನ್ನುವುದು ಅದರ ಶುದ್ಧ ಸ್ವರೂಪದಲ್ಲಿ ಒಂದು ಅನಿರ್ವಚನೀಯ ಸ್ಥಿತಿ. ಅಂದರೆ ಮಾತುಗಳೆಲ್ಲವನ್ನೂ ನಿರಾಕರಿಸಿದ ಮತ್ತು ಕೇವಲ ಅನುಭವದ ಮೂಲಕವೇ ಸಕಲಕ್ಕೂ ಉತ್ತರಕೊಡಬಲ್ಲ ತಾಕತ್ತು ಮೌನಕ್ಕಿದೆ. ಸರಿಯಾದ ಮಾತುಗಳು ಹುಟ್ಟುವುದೂ ಮೌನದ ಗರ್ಭದಲ್ಲೇ!

 

ಸದಾ ಮಾತನಾಡುತ್ತಲೇ ಇರುವುದು ಶಕ್ತಿಯ ಅಪವ್ಯಯ ಅನ್ನುತ್ತಾರೆ ತಿಳಿದವರು. ಅವರ ಪ್ರಕಾರ ಮೌನವೆನ್ನುವುದು ಶಕ್ತಿ ಸಂಚಯನದ ಒಂದು ಸಾಧನ. ಜನರಿಂದ ಬಹಳ ದೂರವೇ ಉಳಿಯುವ ಯೋಗಿಗಳೂ, ಸಿದ್ಧಪುರಷರೂ ಮೌನಿಗಳಾಗಿದ್ದರೂ ಜನರ ಒಳದನಿUಳನ್ನು ಆಲಿಸಿ ಸಮಾಧಾನಕಾರವಾದ ಉತ್ತರವನ್ನು ನೀಡಬಲ್ಲವರು. ಪರಿಪೂರ್ಣ ಮೌನ ಎಂಥವರಲ್ಲೇ ಆಗಲಿ ನಿರ್ಮಲ ಭಾವಗಳನ್ನು ಉದ್ದೀಪಿಸಬಲ್ಲುದು. ಎಮರ್ಸನ್ ‘ಭಗವಂತನಾಡುವ ಪಿಸುಮಾತುಗಳನ್ನು ಆಲಿಸಲು ಮೌನವೊಂದೇ ಸಾಧನ’ ಎನ್ನುತ್ತಾನೆ. ಮೌನದ ಮೂಲಕವೇ ಜಿಜ್ಞಾಸುಗಳೊಂದಿಗೆ ಭಗವಾನ್ ರಮಣರು ಮಾತನಾಡುತ್ತಿದ್ದರೆಂಬ ಪ್ರತೀತಿಯೂ ಇದೆ. ರಮಣರು ಹೇಳುವ ಹಾಗೆ ಮೌನವೆಂಬುದೇ ಅನಂತವಾದ ಮಾತು.

 

ಸಾತ್ವಿಕ ಮೌನವು ಅಂತರಂಗದ ಕೊಳೆಯನ್ನು ಗುಡಿಸಿಹಾಕುವ ಪೊರಕೆಯಾಗಿದೆ. ಅಂತರಂಗವು ಶುಚಿಯಾಗಿ ವಿವೇಕ, ಆರ್ದ್ರತೆ, ಸಹೃದಯತೆ, ಸಹಸ್ಪಂದನ ಇತ್ಯಾದಿ ದೈವೀಗುಣಗಳು ವ್ಯಕ್ತಿತ್ವದಲ್ಲಿ ಪಡಿಮೂಡಿ ಬರಬೇಕಾದರೆ ಮೌನದ ವ್ರತ ಹಿಡಿಯಲೇ ಬೇಕಾಗುತ್ತದೆ. ಯೋಚನೆಗಳಿಗೆ ಸರಿಯಾದ ದಿಕ್ಕು ದೆಶೆ, ಭಾವನೆಗಳಿಗೆ ಗಟ್ಟಿ ಬುನಾದಿ ಬರುವುದು ಮೌನದಿಂದ ಮಾತ್ರ ಸಾಧ್ಯವಿರುವ ಸಂಗತಿಗಳು. ಆಡುವ ಮಾತಿಗೆ ತೂಕ, ಘನತೆ, ಅರ್ಥವಂತಿಕೆಗಳೆಲ್ಲ ಬೇಕಾದರೆ ಮಾತನ್ನು ಅಪರೂಪಕ್ಕೆ ಮಾತ್ರ ಆಡಬೇಕಾಗುತ್ತದೆ. ಅದೇ ವಾಚಾಳಿಯ ಮಾತು ಯಾವತ್ತೂ ಹಗುರಾಗಿ ನಗಣ್ಯವೆನ್ನಿಸುಕೊಳ್ಳುತ್ತಲೇ ಇರುತ್ತದೆ.

 

ಮೌನವೆಂದರೆ ಮಾತನಾಡದೇ ಸುಮ್ಮನಿರುವುದು ಎಂದಲ್ಲ. ಹೊರಗೆ ಮಾತಲ್ಲಿ ತೋರಿಸದಿದ್ದರೂ ಒಳಗೇ ಸದಾ ಕಾಡುವ ಚಿಂತೆ, ಬಯಕೆ, ಭಯ, ಗೊಂದಲ ಮುಂತಾದುವಕ್ಕೆ ಕುದಿಯುತ್ತಲೇ ಇರುವ ಸಂದರ್ಭಗಳು ಸಾಮಾನ್ಯ ಮನುಷ್ಯನ ಜೀವನದಲ್ಲಿ ಇದ್ದೇಇರುವ ಸಂಗತಿಗಳು. ಅವುಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದೇ ಮೌನದ ಸಾಧನೆ. ಮನಸ್ಸಿನೊಳಗಿನ ಎಲ್ಲ ಚಲನೆಗಳನ್ನೂ ಹಿಡಿತದಲ್ಲಿಟ್ಟುಕೊಂಡು ಬುದ್ಧಿಯನ್ನು ಯಾವುದೋ ಶ್ರದ್ಧಾಕೇಂದ್ರವೊಂದರಲ್ಲಿ ನಿಲ್ಲಿಸುವುದು ವಾಚಾಳಿಯಿಂದ ಸಾಧ್ಯವಿಲ್ಲದ ಸಂಗತಿ. ಮೌನೋಪಾಸನೆಯಿಂದ ಮಾತ್ರ ಶ್ರದ್ಧ್ಧೆಯ ವಿವೇಕ ಹೆಚ್ಚುತ್ತದೆ.

 

ಬದುಕಿನ ಹಲವು ಸ್ತರಗಳಲ್ಲಿ ಮಾತು ಸೋತು ಹೋದಾಗ ಮೌನ ಗೆದ್ದಿರುವ ಸಂದರ್ಭಗಳಿದ್ದೇ ಇರುತ್ತವೆ. ಅತ್ಯಂತ ನವಿರು ಭಾವಗಳನ್ನು ಮಾತು ಸ್ಪಷ್ಟವಾಗಿ ಹೊರಹಾಕದೇ ಹೋದ ನಿದರ್ಶನಗಳೂ ಇರುತ್ತವೆ. ಆದರೆ ವಾತ್ಸಲ್ಯ, ಕರುಣೆ, ಅನುರಾಗ ಮುಂತಾದ ಸ್ನಿಗ್ಧ ಭಾವಗಳನ್ನು ಮೌನ ಯಶಸ್ವಿಯಾಗಿ ಅಭಿವ್ಯಕ್ತಿಸಿ ಹೃದಯ ಸಂವಾದವನ್ನು ಆರಂಭಿಸಿಬಿಡುತ್ತದೆ.
ಮೌನದ ದೇಗುಲದಲ್ಲಿ ಮಾತೇ ಜ್ಯೋತಿರ್ಲಿಂಗವಾಗಿ ಬದಲಾಗುತ್ತದೆ. ಮೌನದ ಮಣ್ಣಿನಲ್ಲಿ ಮಾತಿನ ಬೀಜ ಬೆಳಕೇ ಆಗಿ ಕುಡಿಯೊಡೆಯುತ್ತದೆ. ಮೌನದ ಚಿಪ್ಪೊಡೆದು ಬಂದ ಮಾತಿಗೆ ಮುತ್ತಿನ ಬೆಲೆ ಬರುತ್ತದೆ.

 

ಪು.ತಿ.ನ ತಮ್ಮ ಕವಿತೆಯೊಂದರಲ್ಲಿ ಹಾಡಿದ ಹಾಗೆ- ಭಾವನೆ ಕಾಯುವ ನಾಂತಿಹ ಮೌನ, ಮೋಕ್ಷಾನಂದದ ಜೀವನ್ ಮೌನ, ಓ ಕಡು ಸೋಜಿಗವೀ ಮೌನ! ಚಿನ್ಮೌನ!

 

ಶಬ್ದ ಮಾಲಿನ್ಯದಿಂದ ಆವೃತವಾಗಿರುವ ಪ್ರಸ್ತುತ ವರ್ತಮಾನದಲ್ಲಿ ಶುದ್ಧ ಮೌನದ ದಾರಿ ಸುಲಭಕ್ಕೆ ಸರಳಕ್ಕೆ ಸಿಕ್ಕಲಾರದು. ಮಾತು ಮತ್ತು ಮೌನದ ನಡುವೆ ಇರುವುದು ಸೇತುವೆಯಲ್ಲ, ಬದಲಿಗೆ ಅದು ಇರುವ ಇಲ್ಲದಿರುವ ತೆಳ್ಳನೆಯ, ಅಳಿಸಿಬಿಡಬಹುದಾದ ಬದಲಿಸಿಬಿಡಬಹುದಾದ ಬಹುಶೃತ ಧಾರೆ. ಅದರ ವ್ಯತ್ಯಾಸ ಸಾಧನೆಯಿಂದಷ್ಟೇ ಗುರ್ತಿಸಲು ಸಾಧ್ಯವಿರುವಂತಹುದು.

ಲೇಖನ ವರ್ಗ (Category): 
ಸರಣಿ: 

ಪ್ರತಿಕ್ರಿಯೆಗಳು

((((ಮೌನದ ದೇಗುಲದಲ್ಲಿ ಮಾತೇ ಜ್ಯೋತಿರ್ಲಿಂಗವಾಗಿ ಬದಲಾಗುತ್ತದೆ. ಮೌನದ ಮಣ್ಣಿನಲ್ಲಿ ಮಾತಿನ ಬೀಜ ಬೆಳಕೇ ಆಗಿ ಕುಡಿಯೊಡೆಯುತ್ತದೆ. ಮೌನದ ಚಿಪ್ಪೊಡೆದು ಬಂದ ಮಾತಿಗೆ ಮುತ್ತಿನ ಬೆಲೆ ಬರುತ್ತದೆ. ಅದರ ವ್ಯತ್ಯಾಸ ಸಾಧನೆಯಿಂದಷ್ಟೇ ಗುರ್ತಿಸಲು ಸಾಧ್ಯವಿರುವಂತಹುದು.)))) ಅತ್ಯುತ್ತಮ ವಿಚಾರಧಾರೆ ಸರ್ ಧನ್ಯವಾದಗಳು

ಚಿ೦ತನಾತ್ಮಕ ಲೇಖನ ರಾಮಸ್ವಾಮಿಗಳೆ, ಅದಕ್ಕೇ ಇರಬೇಕು, ಹಿರಿಯರು ಹೇಳಿರುವುದು, "ಮಾತು ಬೆಳ್ಳಿ, ಮೌನ ಬ೦ಗಾರ"!

ರಾಮಸ್ವಾಮಿ ಸಾರ್ ನಿಮ್ಮ ಲೇಖನ ಚೆನ್ನಾಗಿದೆ. ಮೌನ ನಮ್ಮ ಆತ್ಮದ ಭಾಷೆಯೆಂದು ತೋರುತ್ತದೆ ಆದರೆ ಕಾಲಕ್ರಮೇಣ ನಾವುಗಳು ಮಾತಿನ ಮಂಟಪ ಕಟ್ಟಿಕೊಂಡು ಅಲ್ಲೇ ಪಟ್ಟಾಂಗ ಹೊಡೆಯುತ್ತಾ ಕೂತುಬಿಡುತ್ತೇವೆ! ಬೌದ್ಧ ಧ್ಯಾನ ಪ್ರಕಾರವಾದ ವಿಪಶ್ಯನದಲ್ಲಿ ಮೌನವೇ ಸಾಧನ. ಹಾಗೆಯೇ ಮೌನದ ಕುರಿತಾದ ಒಂದು ಸುಂದರ ಆಂಗ್ಲ ಕವನ ಕೊಡುತ್ತಿದೇನೆ ಗಮನಿಸಿ: Silence Silence is not a lack of words. Silence is not a lack of music. Silence is not a lack of curses. Silence is not a lack of screams. Silence is not a lack of colors or voices or bodies or whistling wind. Silence is not a lack of anything. Silence is resting, nestling in every leaf of every tree, in every root and branch. Silence is the flower sprouting upon the branch. Silence is the mother singing to her newborn babe. Silence is the mother crying for her stillborn babe. Silence is the life of all these babes, whose breath is a breath of God. Silence is seeing and singing praises. Silence is the roar of ocean waves. Silence is the sandpiper dancing on the shore. Silence is the vastness of a whale. Silence is a blade of grass. Silence is sound And silence is silence. Silence is love, even the love that hides in hate. Silence is the pompous queen and the harlot and the pimp hugging his purse on a crowded street. Silence is the healer dreaming the plant, the drummer drumming the dream. It is the lover's exhausted fall into sleep. It is the call of morning birds. Silence is God's beat tapping all hearts. Silence is the star kissing a flower. Silence is a word, a hope, a candle lighting the window of home. Silence is everything --the renewing sleep of Earth, the purifying dream of Water, the purifying rage of Fire, the soaring and spiraling flight of Air. It is all things dissolved into no-thing--Silence is with you always.....the Presence of I AM - Elaine Maria Upton

ನಿಮ್ಮ ಲೇಖನ ಬಹಳ ಅರ್ಥಗರ್ಭಿತವಾಗಿದೆ ಸರ್. ನನಗೆ ಯಾವಾಗಲೂ ಮೌನವಾಗಿರುವುದಕ್ಕೆ ತುಂಬಾ ಇಷ್ಟ. ಆದ್ರೆ ನನ್ನ ಆತ್ಮೀಯರನ್ನು ನೋಡಿದ ಕೂಡಲೇ ಮಾತು ತಾನೇ ತಾನಾಗಿ ಹರಿಯುತ್ತದೆ. ಏನ್ ಮಾಡೋದು ಸರ್?

ಮೌನವೆಂದರೆ ಮನಸ್ಸು ಸಂಪೂರ್ಣವಾಗಿ ಮಾತಾಡುವುದನ್ನು ನಿಲ್ಲಿಸಿದ ಸ್ಥಿತಿ. ಇದನ್ನು ಸಿದ್ದ ಸಮಾಧಿಯೋಗ ಕಾರ್ಯಕ್ರಮದ 'ಮೌನ ಶಿಬಿರ'ದಲ್ಲಿ ಅನುಭವಿಸಿರುವೆನು. ನಿಮ್ಮ ಲೇಖನ ಚೆನ್ನಾಗಿದೆ.