ಟಿ. ಎನ್. ಸೀತಾರಾಮ್ ಕಥೆ ಕದ್ದಿದ್ದಾರೆಯೆ?

To prevent automated spam submissions leave this field empty.

ಕನ್ನಡದ ಮಟ್ಟಿಗೆ ಕಥೆ ಕದಿಯುವದು ಹೊಸದೇನಲ್ಲ. ಕೆಲವು ಲೇಖಕರು ಇಂಗ್ಲೀಷ್ ಸಾಹಿತ್ಯದಿಂದ ನೇರವಾಗಿ ಕಾಪಿ ಹೊಡೆದು ಅದು ತಮ್ಮದೇ ಎಂಬಂತೆ ಘೋಷಿಸಿಕೊಂಡು ಬಿಡುತ್ತಾರೆ. ಇನ್ನು ಕೆಲವರು ಕಥೆಯ ಮುಖ್ಯ ತಿರುಳನ್ನು ಹಾಗೆ ಇಟ್ಟುಕೊಂಡು ಅಲ್ಪ ಸ್ವಲ್ಪ ಪಾತ್ರ ಬದಲಾವಣೆ ಹಾಗೂ ಚಿತ್ರಣದೊಂದಿಗೆ ತಮ್ಮದೇ ಸ್ವಂತದ್ದೆಂಬಂತೆ ತಮ್ಮ ಹೆಸರು ಹಾಕಿಕೊಳ್ಳುತ್ತಾರೆ. ಇದು ಹಿಂದಿನಿಂದಲೂ ನಡೆದು ಬಂದ ಸಂಗತಿ. ಕನ್ನಡದ ಕೆಲವು ಕಾಂಜಿ ಪಿಂಜಿ ಲೇಖಕರು ಇಂಗ್ಲೀಷ್ ಸಾಹಿತ್ಯವಿರಲಿ ಕನ್ನಡದ ಇತರೆ ಬರಹಗಾರರ ಕಥೆಯನ್ನೋ ಕಾದಂಬರಿಯನ್ನೋ ಕದ್ದು ಸಿಕ್ಕಿ ಬಿದ್ದಿದ್ದುಂಟು. ಅವರೆಲ್ಲ ಹೋಗಲಿ. ಕಳೆದ ವರ್ಷ ನಮ್ಮ ಹೆಸರಾಂತ ಲೇಖಕ ಜೋಗಿಯವರು ಕೂಡ ಇಂಗ್ಲೀಷ್ ಸಾಹಿತ್ಯದ ಮೊಪಾಸನ ‘ದಿ ಆರ್ಟಿಸ್ಟ್’ ಕಥೆಯನ್ನು ಕದ್ದು ಸಿಕ್ಕಿ ಬಿದ್ದಿದ್ದರು. ಅದಲ್ಲದೆ ಅವರ ‘ರಾಯಭಾಗದ ರಹಸ್ಯ ರಾತ್ರಿ’ ಕಥಾಸಂಕಲನದಲ್ಲಿನ ‘ಯಡಕುಮೇರಿಯ ಸುರಂಗದಲ್ಲಿ’ ಎಂಬ ಒಂದು ಕತೆ ಆಂಗ್ಲ ಕತೆಗಾರ ಚಾರ್ಲ್ಸ್ ಡಿಕನ್ಸ್ನ ‘ದಿ ಸಿಗ್ನಲ್ ಮ್ಯಾನ್’ ಕಥೆಯನ್ನು ಹೋಲುತ್ತದೆ.ಹಾಗೆಯೇ ಎ.ಆರ್.ಮಣಿಕಾಂತ್ ಕೆಲವು ಲೇಖನಗಳನ್ನು/ಕಥೆಗಳನ್ನು ಬಹಳಷ್ಟು ಈಮೇಲ್ ಕಥೆಗಳಿಂದ ಭಟ್ಟಿ ಇಳಿಸಿದ್ದಾರೆ. ಆದರೆ ಇವರ್ಯಾರು ಸೌಜನ್ಯಕ್ಕಾದರೂ ಮೂಲವನ್ನು ಪ್ರಸ್ತಾಪಿಸುವ ಇರಾದೆಗೆ ಹೋಗಿಲ್ಲ. ಆದರೆ ಜೋಗಿಯವರು ಮಾತ್ರ ಸಿಕ್ಕಿ ಬಿದ್ದಾಗ “ಮೊಪಾಸಾ ಕತೆಗಳನ್ನು ನಾನೂ ಓದಿದ್ದೇನೆ. ನನ್ನ ಸಂಗ್ರಹದಲ್ಲಿರುವ 189 ಕಥೆಗಳಲ್ಲಿ ಆ ಕತೆ ಇರಲಿಲ್ಲ. ಹೀಗಾಗಿ ನನಗೆ ಯಾರದ್ದೆಂದು ತಿಳಿಯಲಿಲ್ಲ. ಯಡಕುಮೇರಿಯ ಸುರಂಗದಲ್ಲಿ ಕತೆಗೂ ಸಿಗ್ನಲ್ ಮ್ಯಾನ್ ಕತೆಗೂ ಸಾಮ್ಯ ಇದೆಯೇನೋ. ನಾನು ಆ ಕತೆಯನ್ನು ಓದಿರಲಿಲ್ಲ. ನನ್ನ ಕತೆ ಅದಕ್ಕಿಂತ ಚೆನ್ನಾಗಿದೆ.” ಎಂಬ ಉತ್ತರವನ್ನು ಕೊಟ್ಟು ನಮ್ಮನ್ನು ನಂಬಿಸಲು ಪ್ರಯತ್ನಿಸಿದರು. ಅದು ನಿಜವಿರಬಹುದೇನೋ! ಏಕೆಂದರೆ ಈ ವಿಶಾಲ ಜಗತ್ತಿನಲ್ಲಿ ಇಬ್ಬರ ಕಲ್ಪನೆಗಳು ಒಂದೇ ಆಗಿರಲಿಕ್ಕೆ ಸಾಧ್ಯವಿಲ್ಲ ಎಂದು ಹೇಳುವದಾದರು ಹೇಗೆ? ಹಾಗೆ ಕಲ್ಪನೆಗಳು ಒಂದಾಗಿ ಕ್ರುತಿಯೊಂದು ಹೊರಬಂದಾಗ ಹೆಚ್ಚು ತೂಕ ಬರುವದು ಮೂಲ ಲೇಖಕನಿಗೆ, ಹಾಗೂ ಎರಡನೆಯವನದು ಏನಿದ್ದರೂ ‘ಕೃತಿಚೌರ್ಯ’ ಎಂದು ಬ್ರ್ಯಾಂಡ್ ಆಗುವದು ಸಹಜ. ಆ ನಿಟ್ಟಿನಲ್ಲಿ ನಮ್ಮ ಕನ್ನಡದ ನಿರ್ದೇಶಕರು ಕಥೆ ಕದಿಯುವದರಲ್ಲಿ ಹೊಸಬರೇನಲ್ಲ. ಬೇರೆ ನಿರ್ದೇಶಕರಿರಲಿ “ಮಾಯಾಮೃಗ”, “ಮನ್ವಂತರ”, “ಮುಕ್ತ” ದಂತಹ ಧಾರಾವಾಹಿಗಳನ್ನು ಕೊಟ್ಟ ಸೂಕ್ಷ್ಮ ಮನಸ್ಸಿನ ನಿರ್ದೇಶಕ ಸೀತಾರಾಮ್ ಕೂಡ ಕಥೆ ಕದಿಯುತ್ತಾರೆಂದರೆ ನಂಬಲಿಕ್ಕೆ ಆಗುತ್ತೆ? ಹೌದೆಂದು ಹೇಳಬೇಕಾಗುತ್ತ! ಏಕೆಂದರೆ ಅವರ ಎರಡನೆ ಚಿತ್ರ “ಮೀರಾ, ಮಾಧವ, ರಾಘವ” ಅಲ್ಪ ಸ್ವಲ್ಪ ಬದಲಾವಣೆಯೊಂದಿಗೆ ಇಂಗ್ಲೀಷ್ ಸಾಹಿತ್ಯದ ಹೆನ್ರಿಕ್ ಇಬ್ಸನ್ನನ “ಎ ಡಾಲ್ಸ್ ಹೌಸ್” ಎನ್ನುವ ಜನಪ್ರಿಯ ನಾಟಕದ ಮೂಲಕಥೆಯನ್ನು ಆಧರಿಸಿದೆ. ಇದು ಅಂತಿಂಥ ನಾಟಕವಲ್ಲ! ಇಬ್ಸನ್ನನ ಮಾಸ್ಟರ್ ಪೀಸ್! ಜಗತ್ತಿನಲ್ಲಿ ಮೊಟ್ಟ ಮೊದಲ ಬಾರಿಗೆ ಸ್ತ್ರೀ ವಿಮೋಚನೆ ಬಗ್ಗೆ ಮಾತನಾಡಿದ ಹಾಗೂ ಮಹಿಳೆಯರಿಗೆ ವೋಟಿಂಗ್ ಪವರ್ ತಂದುಕೊಡುವದರ ಮೂಲಕ ಭಾರಿ ಸುದ್ದಿಯನ್ನು ಮಾಡಿದ ನಾಟಕ! ಆ ಮೂಲಕಥೆಯನ್ನು ಹಾಗೇ ಇಟ್ಟುಕೊಂಡು ಅಲ್ಪ ಸ್ವಲ್ಪ ಬದಲಾವಣೆಯೊಂದಿಗೆ ಸಿತಾರಾಮ್ ಅವರು ಹೇಗೆ ಅತ್ಯಂತ ಜಾಣತನದಿಂದ ಈ ಕಥೆಯನ್ನು ಹೆಣೆದಿದ್ದಾರೆ ನೋಡಿ. ಮೊದಲಿಗೆ ಇಬ್ಸನ್ನನ ನಾಟಕವನ್ನು ಗಮನಿಸೋಣ.


ಇಬ್ಸನ್ನನ ನಾಟಕ “ಎ ಡಾಲ್ಸ್ ಹೌಸ್” ನಲ್ಲಿ ಬರುವ ಕಥಾನಾಯಕಿಯ ಹೆಸರು ನೋರಾ ಹೆಲ್ಮರ್. ಅವಳ ಗಂಡ ಟ್ರೊವಾಲ್ಡ್ ಹೆಲ್ಮರ್. ಅವರಿಗೆ ಮೂರು ಜನ ಮಕ್ಕಳು. ಅವನು ಈಗಷ್ಟೆ ಬ್ಯಾಂಕಿನಲ್ಲಿ ಮ್ಯಾನೆಜರ್ ಹುದ್ದೆಗೆ ಬಡ್ತಿ ಪಡೆದಿದ್ದಾನೆ. ಹೀಗಾಗಿ ಅವನಿಗೆ ಯಾವುದೇ ಹಣಕಾಸಿನ ತೊಂದರೆಯಿಲ್ಲ. ಆದರೆ ನೋರಾಳಿಗೆ ಒಂದಿಷ್ಟು ಸಾಲವಿದೆ. ಆ ಸಾಲವನ್ನು ಅವಳು ಗುಟ್ಟಾಗಿ ಕೆಲಸ ಮಾಡುತ್ತಾ ತೀರಿಸುತ್ತಿದ್ದಾಳೆ. ಇದರ ಬಗ್ಗೆ ಅವಳ ಗಂಡನಿಗೆ ಏನೇನೂ ಗೊತ್ತಿಲ್ಲ. ಈ ಸಾಲವನ್ನು ಗಂಡನಿಗೆ ಗೊತ್ತಿಲ್ಲದಂತೆ ಅವನಿಗೋಸ್ಕರ ಮಾಡಿದ್ದಳು. ಮದುವೆಯಾದ ಹೊಸತರಲ್ಲಿ ಅವನು ಯಾವುದೋ ಖಾಯಿಲೆಯಿಂದ ಹಾಸಿಗೆ ಹಿಡಿಯುತ್ತಾನೆ. ಆಗ ವೈದ್ಯರು ನೋರಾಳಿಗೆ ಅವನಿಗೆ ತುರ್ತಾಗಿ ಇಟಲಿಯಲ್ಲಿ ಚಿಕಿತ್ಸೆ ಕೊಡಿಸದೆ ಹೋದರೆ ಅವನು ಬದುಕುವದಿಲ್ಲ ಎಂದು ಹೇಳುತ್ತಾರೆ. ಇಟಲಿಯಲ್ಲಿ ಟ್ರೀಟ್ಮೆಂಟ್ ಕೊಡಿಸಬೇಕೆಂದರೆ ಸಾಕಷ್ಟು ಹಣ ಬೇಕಾಗುತ್ತದೆ. ಆದರೆ ಅಷ್ಟೊಂದು ಹಣವನ್ನು ಎಲ್ಲಿಂದ ತರುವದು? ಮೇಲಾಗಿ ಹಣದ ಬಗ್ಗೆ ಯೋಚನೆ ಮಾಡುತ್ತಾ ಕೂಡುವ ಕಾಲವಲ್ಲ ಇದು. ಸರಿಯೆಂದು ಅವಳಪ್ಪನಲ್ಲಿಗೆ ಹೋಗುತ್ತಾಳೆ. ಆದರೆ ಅವಳಪ್ಪನು ಕೂಡ ಖಾಯಿಲೆಯಿಂದ ಹಾಸಿಗೆ ಹಿಡಿದಿರುತ್ತಾನೆ. ಇಂಥ ಸಂದರ್ಭದಲ್ಲಿ ಅವನನ್ನು ದುಡ್ಡು ಕೇಳುವದು ಸರಿಯಲ್ಲ ಎಂದುಕೊಳ್ಳುತ್ತಾಳೆ. ಆದರೆ ಗಂಡನಿಗೆ ತುರ್ತಾಗಿ ಚಿಕಿತ್ಸೆ ಕೊಡಿಸಲೇಬೇಕು. ಆಗ ಅನಿವಾರ್ಯವಾಗಿ ಸಾಲ ಕೊಡುವವನಾದ ಕ್ರೊಗ್ಸ್ಟ್ಯಾಡ್ ಎಂಬವನಲ್ಲಿಗೆ ಹೋಗುತ್ತಾಳೆ. ಅವನು ಅವಳ ಗಂಡನ ಬ್ಯಾಂಕಿನಲ್ಲಿಯೇ ಗುಮಾಸ್ತನಾಗಿ ಕೆಲಸ ಮಾಡುತ್ತಿರುತ್ತಾನೆ. ಅವನೊಬ್ಬ ಕ್ರಿಮಿನಲ್. ಅಂಥವನನ್ನು ಸಾಲ ಕೊಡೆಂದು ಕೇಳುತ್ತಾಳೆ ಹಾಗೂ ಸಾಲ ತೆಗೆದುಕೊಳ್ಳುವ ವಿಷಯ ಗಂಡನಿಗೆ ಗೊತ್ತಾಗಬಾರದೆಂದು ತಾಕೀತು ಮಾಡುತ್ತಾಳೆ. ಆದರೆ ಚಾಣಾಕ್ಷನಾದ ಕ್ರೊಗ್ಸ್ಟ್ಯಾಡ್ ಈ ದುಡ್ಡಿಗೆ ನಿನ್ನ ಹತ್ತಿರ ಏನು ಸೆಕ್ಯೂರಿಟಿಯಿದೆ ಎಂದು ಕೇಳುತ್ತಾನೆ. ಅವಳು ಅದನ್ನು ಒದಗಿಸಲು ಅಸಹಾಯಕಳಾದಾಗ ಬಾಂಡ್ ಪೇಪರ್ ಮೇಲೆ ಅವಳಪ್ಪನ ಸಹಿ ಹಾಕೆಂದು ಹೇಳುತ್ತಾನೆ. ಅವಳು ಹಿಂದೆ ಮುಂದೆ ನೋಡದೆ ದುಡ್ಡಿನ ತುರ್ತಿಗೆ ಅವಳಪ್ಪನ ಸಹಿಯನ್ನು ಫೋರ್ಜರಿ ಮಾಡುತ್ತಾಳೆ ಹಾಗೂ ಗಂಡನ ಹತ್ತಿರ ಅವಳಪ್ಪ ಕೊಟ್ಟನೆಂದು ಸುಳ್ಳು ಹೇಳುತ್ತಾಳೆ. ಆದರೆ ಮುಂದೆ ಇದೆ ಕ್ರೊಗ್ಸ್ಟ್ಯಾಡ್ ನ ಕೆಲಸ ಹೋಗುವ ಸಂಭವ ಬರುತ್ತದೆ. ಆಗ ಅವನು ನೋರಾಳ ಹತ್ತಿರ ಬಂದು ಅವಳ ಗಂಡನಿಗೆ ಏನಾದರು ಹೇಳಿ ತನ್ನ ಕೆಲಸ ಹೋಗದಂತೆ ನೋಡಿಕೊಳ್ಳಲು ಹೇಳುತ್ತಾನೆ. ನೋರಾ ತನ್ನ ಪ್ರಯತವನ್ನು ಮಾಡುತ್ತಾಳೆ. ಆದರೆ ತುಂಬಾ ಪ್ರಾಮಾಣಿಕನಾದ ಹೆಲ್ಮರ್ ಅವಳ ಮಾತನ್ನು ಕೇಳುವದಿಲ್ಲ. ಆಗ ಕ್ರೊಗ್ಸ್ಟ್ಯಾಡ್ ನೋರಾಳಿಗೆ “ಈ ವಿಷಯದಲ್ಲಿ ನಿನ್ನ ಗಂಡನಿಗೆ ಹೇಳಿ ಮನವೊಲಿಸದೆ ಹೋದರೆ ನಾನು ನಿನ್ನ ಫೋರ್ಜರಿ ವಿಷಯವನ್ನು ನಿನ್ನ ಗಂಡನಿಗೆ ಹೇಳಬೇಕಾಗುತ್ತದೆ” ಎಂದು ಬ್ಲ್ಯಾಕ್ ಮೇಲ್ ಮಾಡ ತೊಡಗುತ್ತಾನೆ. ಇಲ್ಲಿಂದ ನೋರಾ ಸಂಕಷ್ಟಕ್ಕೆ ಸಿಲುಕುತ್ತಾಳೆ. ಮುಂದೆ ಹೆಲ್ಮರ್, ಕ್ರೊಗ್ಸ್ಟ್ಯಾಡ್ ಒಬ್ಬ ಕ್ರಿಮಿನಲ್ ಎನ್ನುವ ಕಾರಣಕ್ಕೆ ಅವನನ್ನು ಕೆಲಸದಿಂದ ತೆಗೆದುಹಾಕುತ್ತಾನೆ. ಆದರೆ ಸುಮ್ಮನಿರದ ಕ್ರೊಗ್ಸ್ಟ್ಯಾಡ್ ವಿಷಯವನ್ನು ನೇರವಾಗಿ ಹೆಲ್ಮರ್ ನಿಗೆ ಹೇಳಿ ಬ್ಲ್ಯಾಕ್ ಮೇಲ್ ತಂತ್ರದ ಮೂಲಕ ತನ್ನ ಕೆಲಸವನ್ನು ಉಳಿಸಿಕೊಳ್ಳಬಹುದೆಂದು ಲೆಕ್ಕಾಚಾರ ಹಾಕಿ “ನನ್ನನ್ನು ಕೆಲಸದಿಂದ ತೆಗೆದು ಹಾಕಿದರೆ ನಿನ್ನ ಹೆಂಡತಿ ಫೋರ್ಜರಿ ಮಾಡಿದ ಪತ್ರ ನನ್ನ ಹತ್ತಿರ ಇದೆ. ಅದನ್ನು ಪೋಲಿಸರಿಗೆ ಕೊಟ್ಟರೆ ಆಗ ಪರಿಣಾಮ ಏನಾಗಬಹುದೆಂದು ಯೋಚಿಸು” ಎಂದು ವಿವರಿಸುವ ಒಂದು ಪತ್ರವನ್ನು ಹೆಲ್ಮರ್ ನ ಲೆಟರ್ ಬಾಕ್ಸ್ ನಲ್ಲಿ ಹಾಕುತ್ತಾನೆ. ಇದನ್ನು ಓದಿದ ಹೆಲ್ಮರ್ ಹೆಂಡತಿ ನೋರಾಳನ್ನು ತರಾಟೆಗೆ ತೆಗೆದುಕೊಳ್ಳುತ್ತಾನೆ. “ನೀನು ಒಬ್ಬ ಕ್ರಿಮಿನಲ್. ನಿನ್ನಿಂದಾಗಿ ನನ್ನ ಮಾನ, ಮರ್ಯಾದೆ ಎಲ್ಲಾ ಹಾಳಾಯಿತು. ಇನ್ನು ನಾವಿಬ್ಬರು ಒಟ್ಟಿಗಿರಲು ಹೇಗೆ ಸಾಧ್ಯ?” ಎಂದು ಆಪಾದಿಸುತ್ತಾನೆ. ಇದು ನೋರಾಳ ಮನಸ್ಸಿನ ಮೇಲೆ ಬಹಳಷ್ಟು ಪರಿಣಾಮ ಬೀರುತ್ತದೆ. ಆದರೆ ಮಾರನೆ ದಿವಸ ಕ್ರೊಗ್ಸ್ಟ್ಯಾಡ್ ನಿಂದ “ನನ್ನ ತಪ್ಪಿನ ಅರಿವಾಗಿದೆ. ನಾನೀಗ ಬದಲಾಗಿದ್ದೇನೆ. ನಾನು ಯಾವುದೇ ಪೋಲಿಸ್ ಕಂಪ್ಲೇಟ್ ಕೊಡುವದಿಲ್ಲ ಹಾಗೂ ನೋರಾ ಫೋರ್ಜರಿ ಮಾಡಿದ ಬಾಂಡ್ ಪೇಪರ್ ನ್ನು ವಾಪಾಸು ಕಳಿಸಿದ್ದೇನೆ.” ಎನ್ನುವ ಪತ್ರ ಬರುತ್ತದೆ. ಇದನ್ನು ಓದಿದ ಹೆಲ್ಮರ್ ಕುಣಿದು ಕುಪ್ಪಳಿಸುತ್ತಾನೆ. “ನೋರಾ, ಆದದ್ದನ್ನೆಲ್ಲಾ ಮರೆತುಬಿಡು. ನಾನು ನಿನ್ನನ್ನು ಕ್ಷಮಿಸಿದ್ದೇನೆ” ಎಂದು ಹೆಲ್ಮರ್ ಹೆಂಡತಿಗೆ ಹೇಳುತ್ತಾನೆ. ಆದರೆ ಈಗಾಗಲೆ ಅವನ ಮಾತಿನಿಂದ ಬಹಳಷ್ಟು ನೊಂದಿರುವ ನೋರಾ ಅವನನ್ನು ತೊರೆದು ಹೋಗಲು ನಿರ್ಧರಿಸುತ್ತಾಳೆ. ಆದರೆ ಹೋಗುವ ಮುನ್ನ ಗಂಡನಿಗೆ “ನಾನು ಎಷ್ಟೆಲ್ಲ ಕಷ್ಟಪಟ್ಟೆ. ನಿನಗೋಸ್ಕರ ತಾನೆ ನಾನು ಸಾಲ ಮಾಡಿದ್ದು. ನಿನ್ನನ್ನು ಉಳಿಸಿಕೊಳ್ಳೊದಕ್ಕೆ ತಾನೆ ನಾನು ಸಾಲ ಮಾಡಿದ್ದು? ಆದ್ರೆ ನಾನು ಅಪರಾಧಿ ಅಂತ ಗೊತ್ತಾದ ತಕ್ಷಣ ನಾವಿಬ್ರೂ ಬೇರೆ ಬೇರೆ ಅನ್ನೋ ತರ ಮಾತಾಡಿದಿ. ಈಗ ಕಷ್ಟ ಕಳೀತು ಅಂತಾ ಬಾ ಅಂತಾ ಕರೀತಾ ಇದಿಯಾ. ಇದು ಹೇಗೆ ಸಾಧ್ಯ? ನಿನ್ನಂತ ದ್ರೋಹಿಯೊಂದಿಗೆ ಒಟ್ಟಿಗೆ ಇರೋದಕ್ಕಿಂತ ದೂರ ಹೋಗೋದೆ ಮೇಲು. ಗುಡ್ ಬೈ.” ಎಂದು ಹೇಳಿ ಗಂಡನನ್ನು ಹಾಗೂ ಮಕ್ಕಳನ್ನು ಬಿಟ್ಟು ಹೋಗುತ್ತಾಳೆ. ಪ್ರೇಕ್ಷಕರಿಗೆ ಬಾಗಿಲು ಮುಚ್ಚಿದ ಸದ್ದು ಕೇಳುತ್ತದೆ.


ಈ ನಾಟಕ ಮಹಿಳಾ ಪ್ರಧಾನ ನಾಟಕ. ಇಡಿ ಯೋರೋಪಿನಲ್ಲಿ ಸಂಚಲನವನ್ನು ಮೂಡಿಸಿತ್ತು. ಈ ನಾಟಕದ ಆಗಮನದೊಂದಿಗೆ ಮಹಿಳೆಯರು ತಮ್ಮ ಹಕ್ಕಿಗಾಗಿ ಹೋರಾಡತೊಡಗಿದರು. ಪರಿಣಾಮವಾಗಿ ಮಹಿಳಾ ಸಂಘಟನೆಗಳು, ಸ್ತ್ರೀ ಶಕ್ತಿಗಳು ಹುಟ್ಟಿಕೊಂಡವು. ಈ ನಾಟಕದ ಮೂಲಕಥೆಯನ್ನು ಆಧಾರವಾಗಿಟ್ಟುಕೊಂಡು ಸೀತಾರಾಮರು ಆ ಕಡೆ ಈ ಕಡೆ ಹಿಗ್ಗಿಸಿ ತಮ್ಮದೇ ಕಥೆಯೆಂಬಂತೆ “ಮೀರಾ, ಮಾಧವ, ರಾಘವ” ದಲ್ಲಿ ಬಿಂಬಿಸಿದ್ದಾರೆ.


“ಮೀರಾ, ಮಾಧವ, ರಾಘವ” ದಲ್ಲಿ ರೌಡಿ ರಾಘವ ಕಥಾನಾಯಕಿ ಮೀರಾಳನ್ನು ಮದುವೆ ಆಗೆಂದು ಪೀಡಿಸುತ್ತಿರುತ್ತಾನೆ. ಆದರೆ ಅವಳು ಅವನನ್ನು ನಿರಾಕರಿಸಿ ಲೆಕ್ಚರರ್ ಆಗಿರುವ ಮಾಧವನನ್ನು ಮದುವೆ ಆಗುತ್ತಾಳೆ. ಮಾಧವನಿಗೆ ಮೊದಲಿನಿಂದಲೂ ಐ.ಎ.ಎಸ್ ಮಾಡಬೇಕೆಂಬ ಮಹಾದಾಸೆ ಇರುತ್ತದೆ. ಆದರೆ ದುಡ್ಡಿನ ಅಡಚಣೆಯಿಂದಾಗಿ ಅವನ ಕನಸು ತಟಸ್ಥವಾಗಿರುತ್ತದೆ. ಆದರೆ ಮೀರಾ ತನ್ನ ತೌರು ಮನೆಯ ಆಸ್ತಿಯಲ್ಲಿ ಭಾಗ ಕೇಳಿ ಅದರಿಂದ ಬಂದ ದುಡ್ಡಿನಿಂದ ನಿನ್ನನ್ನು ಐ.ಎ.ಎಸ್ ಮಾಡಿಸುತ್ತೇನೆ ನೀನು ಹೋಗಿ ಬಾ ಎಂದು ಗಂಡನನ್ನು ದೆಹಲಿಗೆ ಕಳಿಸುತ್ತಾಳೆ. ತೌರು ಮನೆಯ ಆಸ್ತಿಯಲ್ಲಿ ಸದ್ಯಕ್ಕೆ ಆಸ್ತಿಯಲ್ಲಿ ಭಾಗ ಸಿಗುವದಿಲ್ಲ ಎಂದು ಗೊತ್ತಾದ ಮೇಲೆ ಇದರಿಂದ ತನ್ನ ಗಂಡನ ಐ.ಎ.ಎಸ್ ಮಾಡುವ ಕನಸು ನುಚ್ಚು ನೂರಾಗುತ್ತದೆ ಅವನನ್ನು ಹೇಗಾದರು ಮಾಡಿ ಐ.ಎ.ಎಸ್ ಮಾಡಿಸಲೇಬೇಕೆಂದು ನಿರ್ಧರಿಸಿ ಸಹಾಯಕ್ಕಾಗಿ ತನ್ನ ಗೆಳತಿ ಕಲ್ಯಾಣಿಯ ತಂದೆ ಬಳಿ ಹೋಗುತ್ತಾಳೆ. ಅವರು ಒಂದು ಫೈನಾನ್ಸ್ ಕಂಪನಿಯಲ್ಲಿ ಮಾನೇಜರ್ ಆಗಿ ಕೆಲಸ ಮಾಡುತ್ತಿದ್ದು ಹತ್ತು ಲಕ್ಷದಷ್ಟು ಹಣವನ್ನು ಅವರಿಗೆ ಕೊಡಲು ಪವರ್ ಇಲ್ಲವೆಂದು ಹೇಳಿ ಮೀರಾಳನ್ನು ತನ್ನ ಬಾಸ್ ಬಳಿ ಕರೆದುಕೊಂಡು ಹೋಗುತ್ತಾರೆ. ಮೀರಾಳ ದುರಾದೃಷ್ಟಕ್ಕೆ ಆ ಬಾಸ್ ಬೇರೆ ಯಾರೂ ಅಲ್ಲದೆ ಈ ಹಿಂದೆ ಅವಳನ್ನು ಮದುವೆಯಾಗೆಂದು ಪೀಡಿಸುತ್ತಿದ್ದ ರಾಘವನಾಗಿರುತ್ತಾನೆ. ಅವನು ಹತ್ತು ಲಕ್ಷದಷ್ಟು ಹಣವನ್ನು ಕೊಡಲು ಮುಂದಾಗುತ್ತಾನೆ. ಆದರೆ ಅದಕ್ಕೆ ಮೀರಾಳ ಹತ್ತಿರ ಸೆಕ್ಯುರಿಟಿ ಕೇಳುತ್ತಾನೆ. ಅವಳು ಅದನ್ನು ಒದಗಿಸಲು ಅಸಹಾಯಕಳಾದಾಗ ಅವನು ಒಂದು ಬಾಂಡ್ ಪೇಪರ್ ಮೇಲೆ ಅವಳ ಗಂಡನೇ ಅವನಿಂದ ಸಾಲ ತೆಗೆದುಕೊಂಡಿರುವಂತೆ ಅವಳ ಕೈಲಿ ಬರೆಸಿ ಅವಳ ಗಂಡನ ಸಹಿಯನ್ನು ಫೋರ್ಜರಿ ಮಾಡಲು ಹೇಳುತ್ತಾನೆ. ಮತ್ತು ಪಕ್ಕದಲ್ಲಿ ಸಾಕ್ಷಿಯಾಗಿ ಅವಳಿಗೆ ಸಹಿ ಹಾಕಲು ಹೇಳುತ್ತಾನೆ. ಏಕೆಂದರೆ ಅವಳ ಗಂಡ ಹೇಗೂ ಐ.ಎ.ಎಸ್ ಆಫಿಸರ್ ಆಗುವವ. ಮುಂದೆ ಅವನಿಂದಾದರೂ ವಸೂಲಿ ಮಾಡಬಹುದೆಂಬುದು ಅವನ ಮುಂದಾಲೋಚನೆ. ಮೀರಾ ಇಷ್ಟೆಲ್ಲ ಮಾಡಲು ಹಿಂದೆ ಮುಂದೆ ನೋಡುತ್ತಳಾದರೂ ಗಂಡನ ಐ.ಎ.ಎಸ್ ಗೆ ತೊಂದರೆಯಾಗಬಾರದೆಂದು ಗಂಡನ ಸಹಿ ಮಾಡಿ ದುಡ್ಡು ತೆಗೆದುಕೊಂಡು ಬರುತ್ತಾಳೆ. ಆದರೆ ಗಂಡನ ಹತ್ತಿರ ತೌರು ಮನೆಯವರು ದುಡ್ಡು ಕೊಟ್ಟರೆಂದು ಸುಳ್ಳು ಹೇಳುತ್ತಾಳೆ. ನಂತರ ರಾಘವ ದುಡ್ಡಿಗೆ ಬಡ್ಡಿ ಕೊಡೆಂದು ಪೀಡಿಸುತ್ತಾನೆ. ಇಲ್ಲವಾದರೆ ತನ್ನ ಕ್ಲಬ್ಬಿನಲ್ಲಿ ಹಾಡೆಂದು ಕೇಳುತ್ತಾನೆ. ಮೀರಾ ಯಾರಿಗೂ ಗೊತ್ತಿಲ್ಲದಂತೆ ಕ್ಲಬ್ಬಿಗೆ ಹೋಗಿ ಹಾಡಿ ಬರುತ್ತಾಳೆ. ಇತ್ತ ಗಂಡ ಐ.ಎ.ಎಸ್ ಪಾಸ್ ಮಾಡಿ ಹೇಮಗಿರಿ ಜಿಲ್ಲೆಗೆ ಜಿಲ್ಲಾಧಿಕಾರಿಯಾಗಿ ಬರುತ್ತಾನೆ. ಮುಂದೆ ಅದೇ ಊರಿನವನಾದ ರಾಘವ ಎಲೆಕ್ಷನ್ ಗೆ ನಾಮಿನೇಶನ್ ಫೈಲ್ ಮಾಡಲು ಹೋಗುತ್ತಾನೆ. ಆದರೆ ಅಷ್ಟರಲ್ಲಿ ಅವನೊಬ್ಬ ದೊಡ್ಡ ಕ್ರಿಮಿನಲ್ ಆಗಿದ್ದರಿಂದ ಅವನ ಮೇಲೆ ಗಡಿಪಾರು ಆಜ್ಞೆಯನ್ನು ಜಿಲ್ಲಾಧಿಕಾರಿ ಮಾಧವ ಹೊರಡಿಸಿರುತ್ತಾನೆ. ಹೀಗಾಗಿ ಅವನಿಗೆ ನಾಮಿನೇಶನ್ ಫೈಲ್ ಮಾಡಲಾಗುವದಿಲ್ಲ. ಆದರೆ ನಾಮಿನೇಶನ್ ಫೈಲ್ ಮಾಡಲು ಇನ್ನೂ ಸಮಯವಿರುವದರಿಂದ ಆ ಆರ್ಡರ್ ನ್ನು ಕ್ಯಾನ್ಸಲ್ ಮಾಡಿಸಲು ಮಾಧವನ ಹೆಂಡತಿ ಮೀರಾಳನ್ನು ಕೇಳುತ್ತಾನೆ. ಆದರೆ ಅವಳು ತನ್ನ ಗಂಡ ಪ್ರಾಮಾಣಿಕ, ದಕ್ಷ ಅಧಿಕಾರಿಯಾಗಿದ್ದರಿಂದ ಇಂಥದನ್ನು ಮಾಡುವದಿಲ್ಲವೆಂದು ಹೇಳಿದಾಗ ಅವಳು ಫೋರ್ಜರಿ ಮಾಡಿರುವ ವಿಷಯವನ್ನು ಅವಳ ಗಂಡನಿಗೆ ಹೇಳುತ್ತೇನೆಂದು ಬ್ಲ್ಯಾಕ್ ಮೇಲ್ ಮಾಡುತ್ತಾನೆ. ಅವಳು ಕೂಡ ಈ ಸಂಕಷ್ಟದಿಂದ ಹೇಗಾದರು ಪಾರಾದರೆ ಸಾಕೆಂದು ಗಂಡನಿಗೆ ಆರ್ಡರ್ ಕ್ಯಾನ್ಸಲ್ ಮಾಡಲು ಹೇಳುತ್ತಾಳೆ. ಆದರೆ ಪ್ರಾಮಾಣಿಕ ಅಧಿಕಾರಿಯಾದ ಅವನು ಕ್ಯಾನ್ಸಲ್ ಮಾಡಲು ನಿರಾಕರಿಸುತ್ತಾನೆ. ಆರ್ಡರ್ ಕ್ಯಾನ್ಸಲ್ ಆಗದೆ ಹೋದಾಗ ಕ್ರೋಧಗೊಂಡ ರಾಘವ ಒಂದು ದಿನ ನೇರವಾಗಿ ಮಾಧವನ ಹತ್ತಿರ ಬಂದು ಅವನ ಹೆಂಡತಿ ಫೋರ್ಜರಿ ಮಾಡಿರುವ ವಿಷಯವನ್ನು ಹೇಳುತ್ತಾನೆ. ಅಲ್ಲಿಂದ ಮುಂದೆ ಮೀರಾ ಸಂಕಷ್ಟಕ್ಕೆ ಸಿಲುಕುತ್ತಾಳೆ. ಗಂಡ ಹೆಂಡತಿಯರ ಮಧ್ಯ ಇದೆ ವಿಷಯಕ್ಕೆ ಜಗಳ ಶುರುವಾಗುತ್ತದೆ. ಸಾಲ ಮಾಡಿದ ಕಾರಣವನ್ನು ಅವಳು ಹೇಳಲೇ ಬೇಕಾಗುತ್ತದೆ. ಆದರೆ ಮಾಧವ ಈ ಫೋರ್ಜರಿ ಪತ್ರ ಪೋಲಿಸ್ ನವರ ಕೈಗೆ ಸಿಕ್ಕರೆ ಇಬ್ಬರೂ ಜೈಲಿಗೆ ಹೋಗಬೇಕಾಗುತ್ತದೆ ಇದರಿಂದ ತನ್ನ ಮಾನ ಮರ್ಯಾದೆಯೆಲ್ಲ ಹರಾಜಾಗುತ್ತದೆ ಎಂದು ಹೇಳುತ್ತಾನೆ. ಕೊನೆಗೆ ಹೆಂಡತಿಗೆ ಅವನ ಹತ್ತಿರ ಪ್ರೀತಿಯ ನಾಟಕವಾಡಿ ಆ ಓರಿಜಿನಲ್ ಕಾಪಿಯನ್ನು ತೆಗೆದುಕಂಡು ಬಾ ಎಂದು ಹೇಳುತ್ತಾನೆ. ಅವಳು ಅದೇ ಪ್ರಕಾರ ಮುಚ್ಚಿದ ಖಾಲಿ ಲಕೋಟಿಯನ್ನು ರಾಘವನ ಹತ್ತಿರ ತೆಗೆದುಕೊಂಡು ಇದರಲ್ಲಿ “ನಿನ್ನ ಆರ್ಡರ್ ಕ್ಯಾನ್ಸಲ್ ಮಾಡಿರುವ ಕಾಪಿಯಿದೆ. ನನಗೆ ನನ್ನ ಓರಿಜಿನಲ್ ಕಾಪಿ ಕೊಡು” ಎಂದು ಕೇಳುತ್ತಾಳೆ. ಆದರೆ ಚಾಣಾಕ್ಷನಾದ ರಾಘವ ಓರಿಜಿನಲ್ ಕಾಪಿ ತೋರಿಸುವ ನಾಟಕವಾಡಿ ಅವಳ ಕೈಯಿಂದ ಲಕೋಟಿಯನ್ನು ಕಿತ್ತುಕೊಳ್ಳುತ್ತಾನೆ. ಅದು ಖಾಲಿಯಿರುವದನ್ನು ನೋಡಿ ಓರಿಜಿನಲ್ ಕಾಪಿ ಕೊಡುವದಿಲ್ಲ ಎಂದು ಹೇಳುತ್ತಾನೆ. ಮುಂದೇನು ಮಾಡಬೇಕೆಂದು ಗೊತ್ತಾಗದೆ ಮೀರಾ ಪಕ್ಕದಲ್ಲಿಯೇ ಇದ್ದ ಅವನ ಪಿಸ್ತೂಲಿನಿಂದ ಶೂಟ್ ಮಾಡುತ್ತಾಳೆ. ಆಮೇಲೆ ಗಂಡನ ಹತ್ತಿರ ಬಂದು ತಪ್ಪೊಪ್ಪಿಕೊಳ್ಳುತ್ತಾಳೆ. ಆದರೆ ಗಂಡ ಅವಳನ್ನು ಆ ಕೊಲೆ ಕೇಸಿನಿಂದ ಪಾರು ಮಾಡಬಹುದಾಗಿತ್ತಾದರೂ ಹಾಗೆ ಮಾಡದೆ “ಒಳ್ಳೆ ಲಾಯರ್ ನ್ನ ನೇಮಿಸಿ ಕೇಸ್ ಫೈಟ್ ಮಾಡೋಣ ಶಿಕ್ಷೆಯಾಗುತ್ತೆ. ಅದಾದ ಮೇಲೆ ಬಿಡುಗಡೆನೂ ಆಗುತ್ತೆ. ಆದ್ರೆ ಒಂದು ಮಾತು ಮೀರಾ, ಬಿಡುಗಡೆಯಾದ ಮೇಲೆ ನಿನ್ನ ದಾರಿ ನಿನಗೆ, ನನ್ನ ದಾರಿ ನನಗೆ. ಯಾಕೆಂದ್ರೆ ಒಬ್ಬ ಕೊಲೆಗಾರ್ತಿ ಡೀಸಿ ಹೆಂಡತಿಯಾಗಿ ಉಳಿಯೋದಕ್ಕೆ ಸಾಧ್ಯನಾ?” ಎಂದು ಖಡಾ ಖಂಡಿತವಾಗಿ ಹೇಳುತ್ತಾನೆ. ಆದರೆ ಸಿನಿಮಾದ ಕೊನೆಯಲ್ಲಿ ರಾಘವ ಬದುಕುಳಿಯುತ್ತಾನೆ. ಆಶ್ಚರ್ಯ ಎಂಬಂತೆ ಅವನು ಬದಲಾಗುತ್ತಾನೆ ಹಾಗೂ ಮೀರಾಳ ಮೇಲೆ ಯಾವುದೇ ಕಂಪ್ಲೇಟ್ ಕೊಡದೆ ಅವಳ ಫೋರ್ಜರಿ ಡಾಕುಮೆಂಟ್ಸ್ ನ್ನು ವಾಪಾಸು ಕೊಡುತ್ತಾನೆ. ಆಗ ಅವಳ ಗಂಡ ಮಾಧವ “ಬಾ, ಇನ್ನೇನು ಕಷ್ಟ ಕಳಿತಲ್ಲ, ಹ್ಯಾಪಿಯಾಗಿ ಸಿಲೆಬ್ರೇಟ್ ಮಾಡೋಣ” ಎಂದು ಹೇಳುತ್ತಾನೆ. ಆದರೆ ಮೀರಾ ಅವನ ವರ್ತನೆಗೆ ಬೇಸರಪಟ್ಟುಕೊಂಡು ಅತ್ಯಂತ ತಿರಸ್ಕಾರದಿಂದ ಅವನನ್ನು ಬಿಟ್ಟು ಹೋಗುತ್ತಾಳೆ. ಹೋಗುವ ಮುನ್ನ ಅವನು ಪರಿ ಪರಿಯಾಗಿ ಕೇಳಿಕೊಂಡರೂ ಅವಳು ಇರದೆ ಹೊರಟು ಹೋಗುತ್ತಾಳೆ. ಆದರೆ ಹೋಗುವ ಮುನ್ನ “ನಾನು ನಿನಗೋಸ್ಕರ ಎಷ್ಟೆಲ್ಲ ಕಷ್ಟಪಟ್ಟೆ. ನಿಮ್ಮ ಐ.ಎ.ಎಸ್ ಕನಸು ನನಸು ಮಾಡಕ್ಕೋಸ್ಕರ ಸಾಲ ಮಾಡಿದೆ. ಆದ್ರೆ ನಾನು ಅಪರಾಧಿ ಅಂತ ಗೊತ್ತಾದ ತಕ್ಷಣ ನನ್ನನ್ನು ಬಚಾವ್ ಮಾಡಲು ಸಾಧ್ಯವಿದ್ದರೂ ನೀನು ಹಾಗೆ ಮಾಡಲಿಲ್ಲ. ನಿನಗೆ ನಿನ್ನ ಪ್ರೆಸ್ಟಿಜ್ ಮುಖ್ಯ ಆಯ್ತು. ಅಧಿಕಾರ ದೊಡ್ಡದು ಆಯ್ತು. ಪ್ರೀತಿಸೊ ಹೆಂಡತಿ ಜೈಲಿಗೆ ಹೋದ್ರು ಚಿಂತೆ ಇಲ್ಲ, ನಿನಗೆ ನಿನ್ನ ಕೆಲಸಾನೆ ದೊಡ್ಡದು ಅಯ್ತು. ಇದಕ್ಕಿಂತ ದ್ರೋಹ ಬೇಕಾ? ಈಗ ಕಷ್ಟ ಕಳೀತು ಅಂತಾ ಬಾ ಮೀರಾ ಒಟ್ಟಿಗಿರೋಣ ಅಂತಾ ಕರೀತಾ ಇದಿಯಾ. ಇದು ಹೇಗೆ ಸಾಧ್ಯ ಮಾಧವ? ಗುಡ್ ಬೈ.” ಎಂದು ಹೇಳಿ ಹೊರಟು ಹೋಗುತ್ತಾಳೆ. ಅಲ್ಲಿಗೆ ಸೀತಾರಾಮ್ “ಇದು ಕೊನೆಯಲ್ಲ, ಹೊಸ ಬದುಕಿನ ಹೆಜ್ಜೆ” ಎಂದು ತೋರಿಸುವದರ ಮೂಲಕ ಸಿನಿಮಾ ಮುಗಿಸುತ್ತಾರೆ.


ಈಗ ಹೇಳಿ ಇವೆರೆಡರ ಕಥೆ ಒಂದೇ ಆಗಿಲ್ಲವೆ? ಇಲ್ಲಿ ಮೀರಾ ನೋರಾಳನ್ನು, ರಾಘವ ಕ್ರೊಗ್ಸ್ಟ್ಯಾಡ್ ನನ್ನು, ಮಾಧವ ಹೆಲ್ಮರ್ ನನ್ನು ಪ್ರತಿನಿಧಿಸುವದಿಲ್ಲವೆ? ಹಾಗೂ ಘಟನೆಗಳು ಕೂಡ ಹೆಚ್ಚು ಕಮ್ಮಿ ಒಂದೇ ಆಗಿಲ್ಲವೆ? ಈ ಸಣ್ಣ ನಾಟಕವನ್ನು ಸೀತಾರಾಮರು ಒಂದು ಸಿನಿಮಾಕ್ಕೆ ಆಗುವಷ್ಟು ಸರಕನ್ನಾಗಿ ಹಿಗ್ಗಿಸಿಕೊಂಡು ಈ ಚಿತ್ರ ತೆಗೆದಿಲ್ಲವೆ? ಸೀತಾರಾಮರು ನಿರ್ದೇಶಕರಲ್ಲದೆ ಮೂಲತಃ ಲೇಖಕರು ಹೌದು. ಕನ್ನಡಕ್ಕೆ “ಕ್ರೌರ್ಯ” ದಂಥ ಶ್ರೇಷ್ಠ ಕಥೆಯನ್ನು ಹಾಗೂ “ನಮ್ಮೊಳಗೊಬ್ಬ ನಾಜೂಕಯ್ಯ” ದಂಥ ಉತ್ತಮ ನಾಟಕವನ್ನು ಸೀತಾರಾಮರು ಕೊಟ್ಟಿದ್ದಾರೆ. ಅಂಥವರು ಈ ರೀತಿ ಕಥೆ ಕದಿಯುವದು ಸರಿಯೇ?


ಈ ಸಿನಿಮಾ ಬಂದಿದ್ದು 2007ರಲ್ಲಿ. ಆದರೆ ಆಗ ಈ ನಕಲಿನ ವಿಷಯ ಕುರಿತಂತೆ ಸುದ್ದಿಯಾಗಿತ್ತೋ ನನಗೆ ಗೊತ್ತಿಲ್ಲ. ಈಗ್ಗೆ ಆರು ತಿಂಗಳಿನ ಹಿಂದೆ ನಾನು ದೂರದ ಲಿಬಿಯಾದಲ್ಲಿ ಕುಳಿತು ಕಸ್ತೂರಿ ಚಾನೆಲ್ಲಿನಲ್ಲಿ ಈ ಸಿನಿಮಾವನ್ನು ನೋಡಿದೆ. ಅರ್ಧ ಸಿನಿಮಾ ನೋಡುತ್ತಿದ್ದಂತೆ ಅರೆ ಇದು ಇಬ್ಸನ್ನನ “ಎ ಡಾಲ್ಸ್ ಹೌಸ್” ನಾಟಕದ ತರಾನೆ ಇದೆಯೆಲ್ಲಾ? ಕ್ಲೈಮ್ಯಾಕ್ಸ್ ನೋಡಿಯೇ ಬಿಡೋಣ ಎಂದು ನೋಡಿದರೆ ಅದು ಕೂಡ ಹಾಗೆಯೇ ಇತ್ತು. ಆಮೇಲೆ ಬಹುಶಃ ಟೈಟಲ್ ಕಾರ್ಡಿನಲ್ಲಿ ಮೂಲ ಕಥೆಯನ್ನು ಪ್ರಸ್ತಾಪಿಸರಬೇಕು, ನಾನು ಗಮನಿಸಿರಿಲಿಕ್ಕಿಲ್ಲ ಎಂದುಕೊಂಡು ಸುಮ್ಮನಾದೆ. ಆದರೆ ಈ ಸಾರಿ ಬೆಂಗಳೂರಿಗೆ ಹೋದಾಗ “ಮೀರಾ, ಮಾಧವ, ರಾಘವ” ಸಿ.ಡಿ.ಯನ್ನು ತೆಗೆದುಕೊಂಡು ಬಂದು ಇಲ್ಲಿ ಮತ್ತೊಮ್ಮೆ ನೋಡಿದೆ. ಎಲ್ಲಿಯೂ ಮೂಲಕಥೆಯ ಪ್ರಸ್ತಾಪವಿಲ್ಲ. ಈಗ ಹೇಳಿ ಸೀತಾರಾಮರು ಕಥೆ ಕದ್ದಿದ್ದಾರೆ ಅನಿಸುವದಿಲ್ಲವೆ? ಅಥವಾ 21ನೇ ಶತಮಾನದ ಇವರದು ಹಾಗೂ 19ನೇ ಶತಮಾನದ ಇಬ್ಸನ್ನನ ಕಲ್ಪನೆಗಳು ಒಂದೇ ಆಗಿದ್ದವಾ? ಈ ಪ್ರಶ್ನೆಗಳಿಗೆ ಸೀತಾರಾಮರೇ ಉತ್ತರಿಸಬೇಕು.


-ಉದಯ್ ಇಟಗಿ

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಟಿ ಎನ್ ಸೀತರಾಂರವರು ಕನ್ನಡದ ಒಬ್ಬ ಒಳ್ಳೆಯ ಕಥೆಗಾರ-ನಿರ್ದೇಶಕರು ಅಂತ ಮಾತ್ರ ತಿಳಿದಿದ್ದೆ. ಆದರೆ ಅವರಲ್ಲಿ ಈ ರೀತಿಯ ಒಂದು ಮನೋಭಾವ ಇದೆಯೆಂದು ನಿಮ್ಮ ಲೇಖನ ಓದಿದ ಮೇಲೆಯೇ ತಿಳಿದದ್ದು. ನಾಚಿಕೆಗೇಡು ? ಇತೀ ಶಿವರಾಂ ಕಲ್ಮಾಡಿ