ಶಂಕರ್ ನಾಗ್: ಒಂದು ನುಡಿ ನಮನ....

To prevent automated spam submissions leave this field empty.

ಸರಿಯಾಗಿ ಇಪ್ಪತ್ತು ವರ್ಷದ ಹಿಂದೆ... ಇದೇ ದಿನ...


ಅಂದು ಭಾನುವಾರ.., ಸಂಜೆಯ ವಾರ್ತೆಯ ಸಮಯ. ಆ ಸಮಯದಲ್ಲಿ ದೂರದರ್ಶನದ ಹೊರತಾಗಿ ಟಿ.ವಿ ಯ ಬೇರೆ ಮನೋರಂಜನೆ ಇರದಿದ್ದ ಕಾಲ. ವಾರ್ತೆ ನೋಡುತ್ತಿದ್ದ ನಮಗೆ ಕೆಳಗೆ ಸ್ಕ್ರಾಲಿನಲ್ಲಿ ಬಂದ ಸುದ್ದಿ ನಿಜಕ್ಕೂ ಗರಬಡಿಸಿತ್ತು. "ಪ್ರಸಿದ್ದ ಚಿತ್ರನಟ ಶಂಕರ್ ನಾಗ್ ರವರು ರಸ್ತೆ ಅಪಘಾತದಲ್ಲಿ ಮೃತರಾಗಿದ್ದಾರೆ. ಅಪಘಾತ ದಾವಣಗೆರೆಯ ಅನಾಗೋಡು ಹಳ್ಳಿಯ ಬಳಿ ನೆಡೆದಿದೆ.." ಎಂದು ಸ್ಕ್ರಾಲ್ ಆಗುತ್ತಿತು. ಇಂದು ಸಹ ನೆನಪಿದೆ... ಅಂದು ಬರಬೇಕಿದ್ದ ರಾಜ್ ರವರ ಚಲನ ಚಿತ್ರದ ಬದಲು ನಿಮ್ಮ ಚಿತ್ರ "ಆಟೋ ರಾಜಾ" ಚಿತ್ರವನ್ನ ಹಾಕಿದ್ದರು. ಮಾರನೆಯ ದಿನ "ಸಂಯುಕ್ತ ಕರ್ನಾಟಕ" ದಲ್ಲಿ ನೀವು ಚಲಿಸುತ್ತಿದ್ದ ಕಾರ್ ಅಪಘಾತದಲ್ಲಿ ಮುಂಭಾಗ ಪೂರ್ಣ ಜಜ್ಜಿ ಹೋಗಿದ್ದ ಚಿತ್ರ ನೋಡಿದಾಗ ಕೊನೆಯ ಕ್ಷಣದಲ್ಲಿ ನೀವು ಅದೆಷ್ಟು ನೋವು ಅನುಭವಿಸಿದ್ದೀರಿ ಎಂದು ಮನವು ಮರುಗಿತ್ತು. ನಿಮ್ಮ ಚಿತ್ರ "ನೋಡಿ ಸ್ವಾಮಿ ನಾವಿರೋದೆ ಹೀಗೆ" ಯ ಅಭಿಮಾನಿ ನಾನು. ಬಹುಶ: ಆ ಕಾಲದಲ್ಲಿ ನಿಮ್ಮಷ್ಟು ಪರಿಣಾಮಕಾರಿಯಾಗಿ ನಟಿಸಿದ ಸಮಕಾಲಿನ ನಟರು ಇನ್ನೊಬ್ಬರು ಇರಲಿಕಿರಲಿಲ್ಲವೇನೋ..!!. ನಿಮ್ಮ ಅಣ್ಣ ಅನಂತ್ ರವರ ಅಭಿನಯದ ಮೋಡಿಯಲ್ಲಿ ಮುಳುಗಿದ್ದ ಜನರಿಗೆ ನಿಮ್ಮ ಮೊದಲನೆ ಚಿತ್ರ "ಒಂದಾನೊಂದು ಕಾಲದಲ್ಲಿ" ದಲ್ಲೇ ಮಿಂಚಿನ ಸಂಚಲನ ಮೂಡಿಸಿದ್ದೀರಿ. ನಂತರ ನೀವು ಇಟ್ಟ ಹೆಜ್ಜೆ ಸಿಂಹ ನೆಡಿಗೆ ಯೆನ್ನಬಹುದು. ಒಂದೇ, ಎರಡೇ... ಚಿತ್ರ ನಿರ್ದೇಶನ, ನಾಟಕ, ನಟನೆ... ಹು:, ಕತ್ತಲಿನಲ್ಲಿ ಹೊಳೆಯುವ ದಿವ್ಯಜ್ಯೋತಿಯಂತೆ ಬೆಳಗಿದ್ದೀರಿ ನೀವು. ೧೨ ವರ್ಷದ ನಿಮ್ಮ ಆ ಪಯಣದಲ್ಲಿ ಕನ್ನಡಿಗರ ಮನದ ಸಾಮ್ರಾಜ್ಯವನ್ನ ಆಳಿಬಿಟ್ಟಿರಿ. ನಿಮ್ಮ ಕಾರಾಟೆ ಸ್ಟಂಟ್ಸ್, ನಿಮ್ಮ ಅಭಿನಯದ ಸ್ಟೈಲ್, ದೈಲಾಗ್ ಡೆಲಿವರಿ, ಗಡಸು ಧ್ವನಿ... ನಿಮ್ಮ ಮ್ಯಾನರಿಸ್ಮ್... ಆ ಕಾಲದ "ಕ್ಲೀನ್ ಶೇವ್ಡ್" ನಟರ ಮುಂದೆ ಒಂದು ಅಪರೂಪವೆನ್ನುವ ಮುಖ ಗುಣ... ಭವಿಷ್ಯದ ಬೆಳಕಾಗಿದ್ದೀರಿ ನೀವು. ಕನ್ನಡದ ಸಿನಿಮಾಕ್ಕಾಗಿ ನಾವು ಚೆನ್ನೈಗೆ ಹೋಗುತ್ತಿದ್ದ ಸಮಯದಲ್ಲಿ ನಿಮ್ಮ "ಸಂಕೇತ್ ಸ್ಟುಡಿಯೋ" ಕರ್ನಾಟಕದಲ್ಲಿ ಅರಂಭವಾಗಿ ಮಾಡಿದ ಕ್ರಾಂತಿ ಕನ್ನಡ ಚಿತ್ರತಂತ್ರಝಾನಕ್ಕೆ ಮುನ್ನುಡಿ. ನಿಮ್ಮ ಸದಾಭಿರುಚಿಯ ಚಿತ್ರಗಳು "ಗೀತಾ", "ಜನ್ಮಜನ್ಮದ ಅನುಬಂಧ", "ಮಿಂಚಿನ ಓಟ"..., ಚಿತ್ರದ ಜೊತೆಯಲ್ಲಿ ಇರುತ್ತಿದ್ದ ಸುಮಧುರ ಸಾಹಿತ್ಯ, ಸಂಗೀತ... ನಿಮ್ಮ ಚಿತ್ರನಿರ್ಮಾಣದ ಕಳಕಳಿಗೆ ಸಾಕ್ಷಿ. "ಜೊತೆಯಲ್ಲಿ...ಜೊತೆಯಲಿ ಇರುವೆನು ಹೀಗೆ ಎಂದೂ..." ೨೯ ವರ್ಷದ ನಂತರವೂ ಈಗಿನ ಜನರ ಬಾಯಲ್ಲಿ, ಮನದಲ್ಲಿ ಅಚ್ಚಳಿಯದೇ ಉಳಿದಿರುವುದೇ ಸಾಕ್ಷಿ.


ನಮ್ಮ ಬಾಲ್ಯದ "ಬುಕ್ ಮಾರ್ಕ್" -- "ಮಾಲ್ಗುಡಿ ಡೇಸ್" ನ ಮರೆಯಲು ಸಾಧ್ಯವುಂಟೇ...?. ಕಲ್ಪನಿಕ ಕಥೆಯನ್ನ ಮನಸ್ಸಿನಲ್ಲಿ ಅಚ್ಚೊತ್ತಿದ ಪರಿಯಿದೆಯಲ್ಲಾ... ಅದು ನಿಮ್ಮನ್ನು ಬಿಟ್ಟು ಬೇರೆ ಯಾರು ತಾನೇ ಮಾಡಿಯಾರು...!. ಅಷ್ಟೆಲ್ಲಾ ಕನಸ ಹೊತ್ತಿದ್ದ ನೀವು ಅಲ್ಪಸಮಯದಲ್ಲೇ ಬೆಳೆದ ಪರಿಯನ್ನ ನೋಡಿ ಆ ದೇವರೇ ಬೇಸರಪಟ್ಟನೇನೋ...!. ದುರಂತ ಅಂತ್ಯ ಕರುಣಿಸಿಬಿಟ್ಟ ನಿಮಗೆ. ಬದುಕಿದ್ದರೆ ಇಂದು ೫೬ ವರ್ಷದವರಾಗಿರುತ್ತಿದ್ದೀರಿ ನೀವು. ಕಣ್ಣೆದುರಿಗೆ ಇಲ್ಲದಿದ್ದರೆನಂತೆ..., ಅಭಿಮಾನಿಯ ಹೃದಯದಲ್ಲಿ, ಸ್ವಾಭಿಮಾನಿ ಹುಡುಗರ ಆಟೋದಲ್ಲಿ, ರಂಗಶಂಕರದಲ್ಲಿ, ಕನ್ನಡ ಚಿತ್ರದಲ್ಲಿ, ನಿಮ್ಮನ್ನು "ಮಿಮಿಕ್ರಿ" ಮಾಡುವ ಜನರಲ್ಲಿ ಚಿರಕಾಲ ಉಳಿದಿರುತ್ತೀರಿ ನೀವು.


ಬಹುಶ: ನಮಗೆಲ್ಲಾ ಅಶ್ಚರ್ಯ್ವೆನಿಸಬಹುದು, ನಿಮ್ಮ ಸುಂದರ ಬೆಂಗಳೂರಿನ ಮುಂದಾಲೋಚನೆ.., ಹೊರದೇಶದಲೆಲ್ಲೋ ನೋಡಿದ ರೈಲನ್ನ ಇಲ್ಲಿ ಸುರಂಗ ಮಾರ್ಗವಾಗಿ--ಅಂಡರ್ ಗ್ರೌಂಡ್ (ಮೆಟ್ರೋ ಟೈಪ್) ಓಡಿಸುವಂತೆ ಮಾಡಿದ ಪ್ಲಾನ್, ಈ ಡಿಸಂಬರ್ ನಲ್ಲಿ ಚುಕು-ಬುಕು ಎನುವ "ನಮ್ಮ ಮೆಟ್ರೋ" ನೊಡನೆ ನಿಮ್ಮ ಕನಸ್ಸು ಸಾಕಾರವಾಗಬಹುದು.... ಕನ್ನಡ ಚಿತ್ರರಂಗವನ್ನ ಇಂದು ನೀವು ನೋಡಿದ್ದರೆ ಬಹಳ ನೊಂದುಬಿಡುತ್ತಿದ್ದರೇನೋ.. ಏನು ಮಾಡೋದು, ನಾವೆಲ್ಲಾ ನಿಮ್ಮ ಕೌಶಲ್ಯತೆ, ಮಾರ್ಗದರ್ಶನ ಪಡೆಯುವ ಭಾಗ್ಯವೇ ಇರಲ್ಲಿಲ್ಲವೆನಿಸುತ್ತದೆ. ಅಂದು ನೀವು ಆ ಕಾಲದಲ್ಲಿ ಮೂಡಿಸಿದ ಆ ಹೊಸ ಅಲೆ ಬಹುಶ: ಈ ತಲೆಮಾರಿನ ಸಾವಿರಾರು ತಲೆಗಳ ಕೈಯಲ್ಲೂ ಮಾಡಲು ಸಾಧ್ಯವಿಲ್ಲ.


ನೀವೇ ಹೇಳಿದಂತೆ "ನೋಡಿ ಸ್ವಾಮಿ..., ನಾವಿರೋದೇ ಹೀಗೆ...", ನಿಮ್ಮ ಆ "ಸ್ಟೈಲ್", ನಿಮ್ಮಂತೆ ಮತ್ತೆ ಯಾರೂ ಹುಟ್ಟಿಬರಲಾರರೇನೋ...!


ಶಂಕರ್ ನಾಗ್ ಅವರ ಮಧುರ ನೆನಪಿನ ಚಿತ್ರಗಳು ಅವರದೆ ತಾಣದಲ್ಲಿ : http://www.shankarnag.in/gallery.html

ಪ್ರತಿಕ್ರಿಯೆಗಳು

ವಿನಯ್, ಎಷ್ಟು ಬೇಗ ಇಪ್ಪತ್ತು ವರ್ಷ ಕಳೆದುಹೋಗಿದೆ. ಅವರು ನಟಿಸಿದ "ಸೀತಾ ರಾಮು" ಚಿತ್ರದ "ಒಂದೇ ಒಂದು ಆಸೆಯು ತೋಳಲಿ ಬಳಸಲು" - ತುಂಬ ಇಷ್ಟವಾದಂತ ಹಾಡು. ಅವರು ಚಿತ್ರರಂಗಕ್ಕೆ ಕೊಟ್ಟ ಕೊಡುಗೆ ಅಪಾರ. ನಿಮ್ಮ ಈ ಲೇಖನದ ಮೂಲಕ ಶಂಕರ್ನಾಗ್ ಅವರನ್ನ ನೆನೆಪಿಸಿದಕ್ಕೆ ತುಂಬ ಧನ್ಯವಾದಗಳು. ಕಮಲ

ಧನ್ಯವಾದಗಳು ಕಮಲ ರವರೆ, ಬಹುಶಃ ಶಂಕರ್ ನಾಗ್ ರವರು ಕನ್ನಡಿಗರ ಮನದಲ್ಲಿ ನಿರಂತರವಾಗಿ ಉಳಿಯುವುದಕ್ಕೆ ಇಂತಹ ಹಾಡುಗಳೇ ಕಾರಣವಿರಬಹುದು... :) long live shankar -- ವಿನಯ್

ಶ೦ಕರ್ ನಾಗ್, ಕನ್ನಡ ಚಿತ್ರರ೦ಗ ಕ೦ಡ ಒ೦ದು ಅನರ್ಘ್ಯ ರತ್ನ ಎ೦ದರೆ ತಪ್ಪಾಗಲಾರದು. ಕನ್ನಡ ಚಿತ್ರರ೦ಗದ ಬಗ್ಗೆ ಅವರಲ್ಲಿದ್ದ ದೀರ್ಘಕಾಲಿಕ ಚಿ೦ತನೆಗಳು ಇ೦ದಿನ ಯುವಕರಿಗೆ ಮಾರ್ಗದರ್ಶಿಯಾಗಿವೆ. ತಮ್ಮದೇ ಆದ ವಿಶಿಷ್ಟ ಮ್ಯಾನರಿಸ೦ನಿ೦ದ, ಗಡುಸು ಕ೦ಠದಿ೦ದ ಅಭಿಮಾನಿಗಳೆದೆಯಲ್ಲಿ ಅಚ್ಚಳಿಯದೆ ಇ೦ದಿಗೂ ನಿ೦ತಿದ್ದಾರೆ. ಅದೆಷ್ಟು ಬೇಗ ೨೦ ವರ್ಷಗಳು ಕಳೆದವು, ಅಚ್ಚರಿಯಾಗುತ್ತದೆ. ವೀರಪ್ಪನ್ ಅಟ್ಟಹಾಸದ ಆ ದಿನಗಳಲ್ಲಿ ಅವರ ಸಾವಿನ ಸುತ್ತಲೂ ಅನೇಕ ದ೦ತಕಥೆಗಳು ಹಬ್ಬಿದ್ದವು. ಅವರ ಸಾವಿನಲ್ಲೂ ಒ೦ದು ಸ೦ದೇಶವಿದೆ, ಎ೦ದೂ ಅವರು ಭಾನುವಾರದ೦ದು ಚಿತ್ರೀಕರಣಕ್ಕೆ ಹೋಗುತ್ತಿರಲಿಲ್ಲವ೦ತೆ, ತಮ್ಮ ಬಹು ದಿನಗಳ ಕನಸಾಗಿದ್ದ "ನಾಗಮ೦ಡಲ"ದ ಚಿತ್ರೀಕರಣಕ್ಕೆ ಅವರು, ತಮ್ಮ ಅಲಿಖಿತ ವಚನವನ್ನು ಮುರಿದು, ಭಾನುವಾರದ೦ದೇ ಬೆ೦ಗಳೂರಿನಿ೦ದ ತಮ್ಮ ಕಾರಿನಲ್ಲಿ ಪಯಣಿಸಿದ್ದರು. ಅದೇ ಭಾನುವಾರ ಅವರ ಬಾಳಿನ ಕೊನೆಯ ದಿನವಾಯಿತು. ಯಾವುದನ್ನು ಮಾಡಬಾರದು ಎ೦ದು ನಮ್ಮ ಮನಸ್ಸು ನಮಗೆ ಹೇಳುತ್ತದೋ ಅದನ್ನು ಮಾಡಬಾರದು, ಆರನೆ ಇ೦ದ್ರಿಯದ ಎಚ್ಚರಿಕೆಯನ್ನು ಮೀರಿದರೆ ಅಪಘಾತ ಕಟ್ಟಿಟ್ಟ ಬುತ್ತಿ. ದೇಶದಾದ್ಯ೦ತ ರಾಮ ಜನ್ಮಭೂಮಿಯ ಕಾವು ಏರಿರುವ ಸ೦ದರ್ಭದಲ್ಲಿಯೂ ಅವರಿಗೊ೦ದು ನುಡಿನಮನ ನೀಡಿದ ನಿಮಗೆ ವ೦ದನೆಗಳು,

ಕನ್ನಡ ಚಿತ್ರರ೦ಗದ ಬಗ್ಗೆ ,ರ೦ಗಭೂಮಿಯ ಬಗ್ಗೆ,ಅದರ ಬೆಳವಣಿಗೆಯ ಬಗ್ಗೆಹತ್ತು ಹಲವಾರು ಕನಸುಗಳನ್ನು ಕಟ್ಟಿಕೊ೦ಡು ಬದುಕಿದವರು ಶ೦ಕರ್ ನಾಗ್. ಅವರ ಆಕ್ಸಿಡೆ೦ಟ್,ನೋಡಿ ಸ್ವಾಮಿ ನಾವಿರೋದೆ ಹೀಗೆ, ಮಾಲ್ಗುಡಿ ಡೇಸ್, ಕನ್ನಡ ಚಿತ್ರರ೦ಗವನ್ನು ಹಾಗೂ ದೂರದರ್ಶನವಾಹಿನಿಯನ್ನು ಜನಪ್ರಿಯತೆಯ ಉತ್ತು೦ಗಕ್ಕೇರಿಸಿದವು ಹಾಗೂ ಮೌಲ್ಯವರ್ಧಿತವನ್ನಾಗಿಸಿದವು. ಕೆಲವರು ಅವರ ಪೂರ್ಣಾಯುಸ್ಸಿನಲ್ಲಿನಲ್ಲಿಯೂ ಸಾಧಿಸಲಾಗದಷ್ಟನ್ನು!ತಮ್ಮ ಅಲ್ಪ ಆಯುಸ್ಸಿನಲ್ಲಿಯೇ ಸಾಧಿಸಿ ತೋರಿಸಿದವರು ಶ೦ಕರ್ ನಾಗ್. ಅವರು ಇನ್ನೂ ಬದುಕಿದ್ದಿದ್ದರೆ ಇನ್ನೆಷ್ಟು ಕನ್ನಡ ಚಿತ್ರರ೦ಗದಲ್ಲಿ ಹೊಸತನದ, ಪ್ರಯೋಗಗಳು ಮೊದಲ್ಗೊಳ್ಳುತ್ತಿದ್ದವೇನೋ? ಶ೦ಕರ್ ನಾಗ್ ರವರಿಗೊ೦ದು ನುಡಿನಮನ ಸಲ್ಲಿಸಿದ ನೀವು ಅಭಿನ೦ದನಾರ್ಹರು. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.

ಧನ್ಯವಾದಗಳು ಮಂಜುನಾಥ್ ರವರಿಗೆ, ಸಂತೋಷ್ ರವರಿಗೆ ಮತ್ತು ನಾವಡ ರಿಗೆ... :) ಅಷ್ಟು ಮೇರು ಪ್ರತಿಭೆ ಹೊಂದಿದ್ದ ಶಂಕರ್ ರವರ ಬಗ್ಗೆ ಕನ್ನಡಿಗರು ಇಟ್ಟಿರುವ ಅಭಿಮಾನ, ಅವರನ್ನು ಇನ್ನೂ ನೆನೆಯುವ ಜನರನ್ನ ಕಂಡರೆ ಅವರು ಇನ್ನೂ ನಮ್ಮಲ್ಲೇ/ನಮ್ಮ ಜೊತೆಯಲ್ಲೇ ಇರುವರು ಎಂದು ಮನಸ್ಸು ಹೇಳುತ್ತಿರುತ್ತದೆ. ಶಂಕರ್ ರವರ ನೆನಪು ಕನ್ನಡಿಗರ ಮನದಲ್ಲಿ ಚಿರಸ್ಥಾಯಿಯಾಗಿ ಉಳಿಯಲಿ ಎಂದು ಈ ಕನ್ನಡಿಗನ ಮನದಾಳದ ಬಯಕೆ :) -- ವಿನಯ್

ಪ್ರತಿಕ್ರಿಯೆಗೆ ಧನ್ಯವಾದಗಳು ಜಯಂತ್ ಮತ್ತು ಗೋಪಿನಾಥ್ ರವರೆ, ಶಂಕರ್ ಒಬ್ಬ talented director ಮಾತ್ರವಲ್ಲ, intelligent person ಸಹ... ತಮ್ಮ ಜೀವನದ ಸಲ್ಪವೇ ಸಮಯದಲ್ಲಿ ಮಾಡಿದ ಸಾಧನೆ ಆಪಾರ. ಬಹುಶಃ ಇಂದು ಅವರಿದ್ದಿದರೆ ಕನ್ನಡ ಚಿತ್ರರಂಗ ನಮ್ಮ ಉಹೆಗೂ ನಿಲುಕದಷ್ಟು ಎತ್ತರಕ್ಕೆ ಏರುತ್ತಿತ್ತೋ ಏನೋ...!! -- ವಿನಯ್