ಮೀಸೆ ಮೀಮಾಂಸೆ".

To prevent automated spam submissions leave this field empty.

 


 


 


 


ಮೀಸೆ ಇದ್ದ ಮುಖ ನೋಡಿ, ನೋಡಿ ಆ ಮೀಸೆ ಬೋಳಿಸಿದಾಗ ಛೀ, ಥೂ, ನೋಡೋಕ್ಕೆ ಆಗೋಲ್ಲ ಕಮೆಂಟ್ ಮಾಡೋವ್ರು ಹೆಂಗಸ್ರೇ! ಪತಿಯನ್ನು ಕಂಡ್ರೆ ಕಣ್ಣುರಿ-ಕಾಣ್ದಿದ್ರೆ ಹೊಟ್ಟುರಿ............. ಈ ಅನುಭವ ನಿಮ್ಮದೂ ಆಗಿರಬಹುದಲ್ಲವೇ.....


 


ಮೀಸೆ-ಮೀಮಾಂಸೆ


 


ಮೊನ್ನೆ ಮೀಸೆ ಟ್ರಿಮ್ ಮಾಡಿಕೊಳ್ತಿದ್ದ ನನ್ನ ಯಜಮಾನರು ಬಂದು "ಮೀಸೆ ಟ್ರಿಮ್ ಮಾಡ್ಕೊಂಡೆ, ಕನ್ನಡಿ ಸರಿ ಇಲ್ಲ, ಸರಿಯಾಗಿ ಇದೆಯಾ ನೋಡು" ಎಂದರು. ಅವನ ಮೂತಿ ಹಿಡಿದು ಅತ್ತ-ಇತ್ತ ತಿರುಗಿಸಿ, ನನ್ನ ಕಣ್ಣ ಕನ್ನಡಿಯಲ್ಲಿ ಕಂಡೆ ನಿನ್ನ ಮೀಸೆ ಎನ್ನುತ್ತಾ...ವಯಸ್ಸಾಯಿತು ಅರ್ಧಕಪ್ಪು-ಬಿಳುಪು, ಇತ್ತ ದಪ್ಪ-ಅತ್ತ ಸಣ್ಣ, ಈ ಪರಿಯ ಸೊಬಗಾ, ಯಾಕೋ ದಿನಾ ಕಷ್ಟ ಪಡ್ತೀಯ, ಪೂರ ಬೋಳಿಸ್ಬಿಡು ರಾಜ, ಹೇಗಿರ್ತೀಯಾ ನೊಡೋಣ ಎಂದು ಕಿಸಕ್ಕನೆ ನಕ್ಕೆ. ಶುದ್ಧ ತರಲೆ ಅಂತಾ ಗೊತ್ತಿದ್ದೊ, ಗೊತ್ತಿದ್ದೊ ನಿನ್ ಹತ್ರ ಕೇಳ್ತೀನಲ್ಲಾ...ಎನ್ನುತ್ತಾ ಮತ್ತೆ ಕನ್ನಡಿ ಹಿಡಿದ ಹುಸಿಮುನಿಸು ತೋರುತ್ತಾ.


ಬರೀಬೇಕು ಏನಾದ್ರು ಎಂದು ಅಂದುಕೊಂಡವಳಿಗೆ ಸಿಕ್ಕಿತು "ಮೀಸೆ ಮೀಮಾಂಸೆ". ಮೀಸೆ ಹೊತ್ತ ಗಂಡಸಿಗೆ ಡಿಮ್ಯಾಂಡಪ್ಪೋ, ಡಿಮ್ಯಾಂಡು. ಮೀಸೆ ಇದ್ದ ಮುಖ ನೋಡಿ, ನೋಡಿ ಆ ಮೀಸೆ ಬೋಳಿಸಿದಾಗ ಛೀ, ಥೂ, ನೋಡೋಕ್ಕೆ ಆಗೋಲ್ಲ ಕಮೆಂಟ್ ಮಾಡೋವ್ರು ಹೆಂಗಸ್ರೇ! ಪತಿಯನ್ನು ಕಂಡ್ರೆ ಕಣ್ಣುರಿ-ಕಾಣ್ದಿದ್ರೆ ಹೊಟ್ಟುರಿ............. 


ನನ್ ಬಾಲ್ಯದಲಿ ನಾ ಹೆದರುತ್ತಿದ್ದು ಪೋಲಿಸ್ ಮೀಸೆಮಾಮನಿಗೆ ಮಾತ್ರ. ದೊಡ್ಡ ಗಿರಿಜಾಮೀಸೆ, ಡೊಳ್ಳುಹೊಟ್ಟೆ, ಇದ್ದ ಆತ ಬೀಟ್ ಪೋಲೀಸ್. ಆತನಿಗೆ ನಾ ಇಟ್ಟ ನಾಮ ಮೀಸೆ-ಮಾಮ.  ತಿಂಗಳಿಗೊಮ್ಮೆ ಬೀಟ ಹಣ ಪಡೆಯಲು ಮನೆಯತ್ತ ಬಂದರೆ ಅಮ್ಮನ ಸೆರಗಿನ ಹಿಂದೆ ಓಡಿ ಅವಿತುಕೊಳ್ಳುತ್ತಿದ್ದೆ. ಇಂದು ಆ ಮೀಸೆಗಾ ನಾ ಹೆದರುತ್ತಿದ್ದುದು ಎಂದು ನೆನೆದರೆ ನಗು ಬರುತ್ತೆ!.


ದಶಕಗಳ ಹಿಂದೆ "ಪಟ್ಟಾಭಿಷೇಕ(ಹೇರ‍್‍ಕಟ್) ಮಾಡಲು ಮನೆಗೆ ಬರುತ್ತಿದ್ದ ಹಜಾಮ. ಕೈಯಲ್ಲಿ ಅಂಗೈ ಅಗಲ ಕನ್ನಡಿ ಹಿಡಿದು  "ಮೀಸೆ ಟ್ರಿಮ್ ಮಾಡ್ಲಾ ಬುದ್ಧೀ" ಎನ್ನುತ್ತಿದ್ದ. ನಂಜನೋ, ಕೆಂಪನೋ ಅಂದಿನ ಕಾಲದಲ್ಲಿ ಮನೆ, ಮನೆಗೆ ಪುಟ್ಟ ಟಿನ್ ಡಬ್ಬಿ ಹಿಡಿದು ಹಾಜರ್. ಮಹಾರಾಜರಿಗೂ ಇದ್ದ ಕ್ಷೌರಿಕನಿಗೆ ಬಟರಿಂಗ್ ಕಮ್ಮಿ ಏನಿರಲಿಲ್ಲ. ಹೇರ‍್‍ಕಟ್ ಜೊತೆಗೆ ಮೀಸೆ ಟ್ರಿಮ್. ಪಾಪ ತೂಗು ಕತ್ತಿಯ ಮೇಲೆ ಅವನ ಕೆಲಸ. ಆ ಮೀಸೆ ಟ್ರಿಮ್, ತಪ್ಪಾದಲ್ಲಿ ಅವನ ಅಧೋಗತಿ. ಅದೆಷ್ಟು ಸ್ಲ ನಿಮಗೇ ಆಗಿಲ್ಲ ಈಟುದ್ದ ಮೀಸೆ ಮೀಸೆ ಟ್ರಿಮ್ ಮಾಡಿಕೊಳ್ಳಲು ಹೋಗಿ ಅರ್ಧ ಮೀಸೆ ಕಟ್ ಆಗಿ ಕಡೆ ಥು ಹಾಳಾದು, ಇವತ್ಯಾಕೋ ಎದ್ ಘಳಿಗೆ ಸರಿ ಇಲ್ಲ ಎಂದಾದ ಅನುಭವ.


ನನ್ನಣಂದಿರೋ, ಭಾವಂದಿರೋ "ಹಾಳಾದ್ದು, ಮೀಸೆ ಬೋಳಿಸಿದಲ್ಲಿ" ನಮ್ಮ ಕಿಸಿ, ಮುಸಿ ಆಮೇಲೆ ಜೋರಾಗಿ ನಗು. ಯಾಕೆ ಸುಮ್ನೆ ನಗೋದು ಅವ್ನ ನೋಡಿ, ಥು, ಮೂತಿ ನೋಡೋಕ್ಕೆ ಆಗೋಲ್ಲ ಕಣೋ, ಬೇಗ ಬೆಳ್ಸು ಆ ಬೆಳೆನಾ ಅಂತ ಅಮ್ಮ ಹೇಳಿದ್ರಂತೂ ನಮ್ಮ ನಗು ಮುಗಿಲೇರುತ್ತಿತ್ತು. ಆಗ, ನೋಡಬೇಕಿತ್ತು ಅಣ್ಣಂದಿರ ಮುಖ! ನಮ್ಮನ್ನು ಕಂಡೊಡನೆ ಕೈ ಮೂತಿಯತ್ತ ಮರೆಯಾಗುತ್ತಿತ್ತು. ಕಾಲೇಜಿನಲ್ಲಂತೂ ಥು ಹೋಗೆ ಅವನಿಗೆ ಮೀಸೆ ಇಲ್ಲ, "ಮೀಸೆ ಇಲ್ಲದವ ?? ಅಂತ ಅಂದದ್ದೊ ಇದೆ.  ಗೇಲಿ ಮಾಡಿದ್ದೇ ಮಾಡಿದ್ದು ಆ ಮೀಸೆ ಕಳೆದುಕೊಂಡವರ ಪಾಡು ಬೇಡ, ಬೇಡ. ಏನೇ ಹೇಳಿ ಮೀಸೆ ಬಿಟ್ಟವರು-ಅದನ್ನು ಬೋಳಿಸೋಕ್ಕೆ ಖಂಡಿತ ಧೈರ್ಯ ಬೇಕು. ಬಲ್ಲವನೇ ಬಲ್ಲ ಆ ಮೀಸೆಯ ಶಕ್ತಿಯಾ!


ಇದಂತೂ ಮಾತ್ರ ತಮಾಷೇ ಅಲ್ಲ-ಹಿಂದಿನ ಕಾಲದಲ್ಲಿ ಹಳ್ಳಿಗಳಲ್ಲಿ ತಪ್ಪು ಮಾಡಿದವರಿಗೆ ಅರ್ಧಮೀಸೆ ಬೋಳ್ಸಿ, ಕತ್ತೆ ಮೇಲೆ ಕೂರ‍್ಸಿ, ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿಸೋವ್ರು.  ಕ್ರೂರತನ ಅಲ್ಲವೇ ಅದು! ಇದರ ಘಲ, ಮಾರನೆಯ ದಿನ ಅವನ ಹೆಣ ಕೆರೆ, ಭಾವೀಲಿ ತೇಲುತ್ತಿತ್ತು. ಸಧ್ಯ ಕಾಲ ಬದಲಾಗಿದೆ. ಮೀಸೆ ಇದ್ದರೂ ಸೈ, ಇಲ್ಲದಿದ್ದರೂ ಸೈ. ಮೀಸೆ ಇಲ್ಲ ಅಂತ ಯಾರೂ ನಗೋಲ್ಲ. ಮೀಸೆ ತಾನೇ ಇವತ್ತು ಬೋಳಿಸಿದ್ರೆ, ಇನ್ನೆರಡು ದಿನದಲ್ಲಿ ಬೆಳೆಯುತ್ತೆ ಅನ್ನುವ ಕಾಲವಿದು. ಹಣ್ದ ಇದ್ರೆ ಸೈ ಇಲ್ಲದಿದ್ದರೆ ಬೆಟ್ ಕಟ್ಟಲೂ ಮೀಸೆ ಸಹಕಾರಿ. ಸೋತ್ರೆ ಮೀಸೆ ಕಟ್.


ಸ್ತ್ರೀಮೂಲ, ನದಿಮೂಲ ಎಂಬಂತೆ ಮೀಸೆ ಮೂಲ ಏನು? ಹುಡುಕಿದಾಗ ತಿಳಿದದ್ದು "ಮುಸ್ತ್ಯಾಚ್" ಎಂಬುದು ಫ್ರೆಂಚ್ ಪದ. ಹುಟ್ಟು ೧೬ನೇ ಶತಮಾನ, ಲ್ಯಾಟಿನ್‍ನಲ್ಲಿ ಮೊಸ್ಟ್ಯಾಷಿಯೋ, ಗ್ರೀಕರು ಮುಸ್ತಾಕಿಯೋನ್. ಮಿಲಿಟರಿ ವ್ಯವಸ್ಥೆ ಬಂದಂತೆ ಮೀಸೆಗೂ ಬಂತು ಗ್ರ‍ೇಡ್. ಯೋಧ, ಕ್ಯಾಪ್ಟನ್, ಲೆಫ್ಟಿನೆಂಟ್ ಗ್ರೇಡ್‍ಕೊಟ್ಟಂತೆ ಮಿಲಿಟರಿಯವನ ಮೀಸೆಯೂ ಗ್ರೇಡಿಗೆ ತಕ್ಕಂತೆ ರೂಪುಗೊಳ್ಳುತ್ತಿತ್ತು. ಮೀಸೆ ಮಿಲಿಟರಿ ಲಕ್ಷಣಂ ಎಂದಾದದ್ದು ಈ ಕಾಲದಿಂದಲೇ ಇರಬೇಕು.


ಮೀಸೆಗೆ ಚರಿತ್ರೆ ಇದೆಯೋ ಇಲ್ವೋ ಗೊತ್ತಿಲ್ಲ, ಆದ್ರೆ ಮೀಸೆ ಜೊತೆಗೇ ಹುಟ್ಟಿಕೊಂಡ ಅರ್ಥಪೂರ್ಣ ಗಾದೆ, ಹಾಡು, ನಾಣ್ನುಡಿಗಳಂತೂ ಕಮ್ಮಿ ಇಲ್ಲ. "ಜಟ್ಟಿ ಬಿದ್ರೂ ಮೀಸೆ ಮಣ್ಣಾಗಲಿಲ್ಲ", ಅಂಬಲಿ ಕುಡಿಯುವವನಿಗೆ ಮೀಸೆ ತಿಕ್ಕುವವನೊಬ್ಬ, ದೋಸೆ ತಿನ್ನುವಾಗ ಮೀಸೆ ಮುರಿವ ಹಾಗೆ, ರಾಜನಿಗೆ ಮೀಸೆ ಮೇಲೆ ಕೈ ಹೋದರೆ ಸಭೆಯೇ ಕಾಣುವುದಿಲ್ಲ, ಮೀಸೆ ಬಂದವನಿಗೆ ದೇಶ ಕಾಣದು ಹೀಗೆ ಅನುಭವದ ನುಡಿಮುತ್ತುಗಳು. ಸಿಪಾಯಿರಾಮು ಚಿತ್ರದ "ಬಾಜಿ ಕಟ್ಟಿ ನೋಡು ಬಾರೋ", ಮೀಸೆ ಮಾವ" ದಿನವಿಡೀ ರೇಡಿಯೋದಲ್ಲಿ ಉಲಿಯುತ್ತಿತ್ತು.


ಮೀಸೆ ಎನ್ನಿ, ವೀರಪ್ಪನ್ ಎನ್ನಿ. ಹಾಗೆ ಹಿಟ್ಲರ್ ಎನ್ನಿ. ಇಬ್ರೂ ಗಾಳಿಗೆ ಹಾರಿ ಹೋಗುವಂತಹ ಸಣಕಲು ದೇಹಿಗಳು, ನರಹಂತಕರು. ಒಬ್ಬನಿಗೆ ಗಿರಿಜಾಮೀಸೆ ಮತ್ತೊಬ್ಬನಿಗೆ ಮೂಗಿನ ಹೊಳ್ಳೆಗೆ ಸರಿಯಾಗಿ ಅಂಟಿದ ಮೀಸೆ. ಆ ಮೀಸೆ ನೋಡಿಯೇ ಗಡ-ಗಡ ಎಂದು ನಡುಗುತ್ತಿದ್ದರೆನೋ ಜನ. ಅತ್ತ ದರಿ, ಇತ್ತ ಪುಲಿ ಜೊತೆಗೆ ಸದಾ ತೂಗು ಕತ್ತಿ ನೆತ್ತಿಯ ಮೇಲೆ. ಈರ್ವರೂ ಸತ್ತಾಗ ಅಯ್ಯಪ್ಪಾ ಅಂತೂ ನೀ ಸತ್ಯಲ್ಲಪ್ಪಾ ಎಂದು ನಿಟ್ಟುಸಿರು ಬಿಟ್ಟು ತಮಗೆ ಇದ್ದ ಬದ್ದ ಮೀಸೆ ತೀಡಿದವರೆಷ್ಟೋ.


ಅಪ್ರತಿಮ ಹಾಸ್ಯ ಕಲಾವಿದ ಚಾರ್ಲಿಚಾಪ್ಲಿನ್ ನಗೆಯಷ್ಟೇ ಆತನ ಮೀಸೆಯೂ ಪ್ರಸಿದ್ಧಿ. ಆ ಮೀಸೆ ಚಾಪ್ಲಿನ್ ಓರ್ವನಿಗೇ ಸೈ. ಆತನ ಆಂಗಿಕ ಅಭಿನಯ, ನಡಿಗೆಯ ಶೈಲಿ, ಉಡುಗೆ ತೊಡುಗೆ, ಹುಬ್ಬು, ಮುಖಚರ್ಯೆ, ಹಾವಭಾವಗಳಲ್ಲೇ ಮಾತಿಲ್ಲದೇ ಮೋಡಿಮಾಡಿದವ. ಆ ಮೀಸೆ ಅವರ ವ್ಯಕ್ತಿತ್ವಕ್ಕೆ ಮೆರುಗು ತಂದಿತ್ತು. ಸಂಪೂರ್ಣ ಚಾರ್ಲಿ ಚಾಪ್ಲಿನ್‍ನ ಉಡುಗೆ, ನಡಿಗೆ, ಹಾವಭಾವದ ಜೊತೆಗೆ ತನ್ನದೇ ಉತ್ಕೃಷ್ಟ ನಟನೆಗೆ ಹೆಸರಾದ ರಾಜ್‍ಕಪೂರ್ ಮಾತ್ರ ಚಾರ್ಲಿ ಚಾಪ್ಲಿನ್ ಮೀಸೆ ತನ್ನ ಮುಖಕ್ಕೆ ಅನುಕರಿಸಲಿಲ್ಲ.


ಮೀಸೆ ಸಾಮಾನ್ಯದಲ್ಲ ಬಿಡಿ, ಸ್ಪರ್ಧೆಗೂ ಸೈ. ಅತೀ ಉದ್ದನೆಯ ಮೀಸೆಯ ಸರದಾರ ಭಾರತದ ಬಜನ್‍ಸಿನ್ಹ ಜುವಾರ್ಸಿನ್ಹ ಗುರ್ಜಾರ್. ಈತನ ಮೀಸೆಯ ಉದ್ದ ಹನ್ನೆರಡು ಅಡಿ ಆರಿಂಚು. ಈ ಬೆಳೆಗೆ ೨೨ ವಸಂತ. ಇದು(೨೦೦೪) ವಿಶ್ವದಾಖಲೆ ಎನಿಸಿತ್ತು. ಕ್ರಿಕೆಟ್ ಆಟಗಾರರಾದ ಕಪಿಲ್, ವೆಂಗ್‍ಸರ್ಕಾರ್, ಡೇವಿಡ್ ಬೂನ್, ಕ್ಲೈವ್ ಲಾಯ್ಡ್ ಮೀಸೆ ಕೂಡ ಹೆಸರುವಾಸಿ ಆಗಿತ್ತು. ಆದ್ರೆ ಮೀಸೆ-ದಾಡಿ ಜುಗಲ್‍ಬಂದಿ ಬ್ರಿಜೇಶ್ ಪಟೇಲ್ ಸ್ಟೈಲ್ ಮಾತ್ರ ಸಖತ್ತಾಗಿತ್ತು.


ರಾಜಾ ಮೀಸೆ ಅಂತ ಹೆಸರೇನೋ ಇದೆ ಆದ್ರೆ, ಪೌರಾಣಿಕ ಪಾತ್ರದಲ್ಲಿನ ರಾಮ, ಕೃಷ್ಣ, ವಿಷ್ಣು, ಶಿವನಿಗೆ, ಜೊತೆಗೆ ಇಂದ್ರಾದಿ ದೇವತೆಗಳೂ ಕ್ಲೀನ್‍ಶೇವ್ಡ್. ಪಾಪ, ಸೀತೆ, ರುಕ್ಮಿಣಿ, ಲಕುಮಿ, ಗಿರಿಜೆ ಮತ್ತು ಅಪ್ಸರೆಯರ ಪರ್ಮಿಶನ್ ಸಿಕ್ಕಲಿಲ್ಲವೇ ಅಥವಾ ಮೀಸೆ ಇಲ್ಲದ್ದು ಅವರಿಗೆ ವರವೇ-ಶಾಪವೇ?  ಬ್ರಹ್ಮ ಮಾತ್ರ ಇದಕ್ಕೆ ಹೊರತು-ಸರಸ್ವತಿ ಇತ್ತ ಪರ್ಮಿಷನ್-ಮೀಸೆ, ದಾಡಿ ಪರ್ಮನೆಂಟ್. ಋಷಿ ಮುನಿಗಳೂ ಬ್ರಹ್ಮನ ಫಾಲೋಯರ‍್ಸ್. ದಾನವರಿಗಂತೂ ಭರ್ಜರಿ ಮೀಸೆ. ಮೀಸೆಗೂ ಸ್ವಭಾವಕ್ಕೂ ಹೊಂದಾಣಿಕೆ ಇದೆಯಾ? ವಿಜ್ಞಾನಿಗಳು ರಿಸರ್ಚ್ ಸಬ್ಜೆಕ್ಟ್. ಅಂದ ಹಾಕೆ ಪ್ರಸಿದ್ಧ ವಿಜ್ಞಾನಿ ಐನ್‍ಸ್ಟೀನ್ ಕೂಡ ದಪ್ಪ ಮೀಸೆಯವ.


ಐವರು ಪಾಂಡವರಲ್ಲಿ ಭೀಮ ಗಂಡುಗಲಿ ಎಂದೇ ಹೆಸರಾಗಿದ್ದ.  ಯುದ್ಧದಲಿ ಕರ್ಣ-ಭೀಮ ಎದುರು-ಬದುರು ನಿಂದಾಗ  ಕರ್ಣ ಭೀಮನನ್ನು "ತೂಬರಕ"  ಹೋಗು, ಹೋಗು ಭೋಜನ ಮಾಡು ಎಂದು ಹೀಯಾಳಿಸುತ್ತಾನೆ. "ತೂಬರಕ" "-ಮೀಸೆ-ದಾಡಿ ಇಲ್ಲದವ". ಹಾಗಾದಲ್ಲಿ ಭೀಮನಿಗೆ ಜೆನೆಟಿಕ್ ಪ್ರಾಬ್ಲಂ ಇತ್ತಾ?


ಮಾವನ ಮೀಸೇಯ ಮಹತ್ತು- ಹಿಂದಿನ ಕಾಲದಲ್ಲಿ ಮೀಸೆ ಕಂಡಾಕ್ಷಣ ಸೊಸೆಯಂದಿರು ಹೆದರಿ ಕೋಣೆ ಸೇರೋರು. ಜಗಜಟ್ಟಿಗಳು, ರಾಜ-ಮಹಾರಾಜರು ಆಹಾ ಉದ್ದುದ್ದ ಮೀಸೆ ಬಿಟ್ಟು, ಬೀಗಿದ್ದೇ ಬೀಗಿದ್ದು. ಸತ್ತ ಹುಲಿ, ಚಿರತೆ ಜೊತೆಗೆ ಕೈಯಲ್ಲೊಂದು ಕೋವಿ, ಮೀಸೆ ಮೇಲೆ ಕೈ-ಕೊಲ್ಲುವುದಕ್ಕೂ ಸೈ ಎಂದು ಫೋಟೋಗೆ ಪೋಸ್ ಕೊಟ್ಟಿದ್ದೇ ಕೊಟ್ಟದ್ದು. ಹಾಡೇ ಇದೆ ಬಿಡಿ-"ಮೀಸೆ ತಿರುವಿ ಕುಣಿದವರೆಲ್ಲ ಮಣ್ಣಾದರು ಕೋಟೆ ಕಟ್ಟಿ ಮೆರೆದವರೆಲ್ಲ ಏನಾದರು" ಅಂತ.


ಇನ್ನು ಚಿತ್ರಗಳಲ್ಲಂತೂ ನಾಯಕನಿಗೆ ಪೆನ್ಸಿಲ್ ಅಥವ ಸಿ ಮೀಸೆ, ಖಳನಾಯಕನಿಗೆ ಕರಡಿ ಮೀಸೆ. ಸಾಹಿತಿ, ಪ್ರೇಮರೋಗಿಯ ಟ್ರೇಡ್‍ಮಾರ್ಕ್ ಕುರುಚಲು ಗಡ್ಡ, ಮೀಸೆ. ನೀಟಾದ ಪೆನ್ಸಿಲ್ ಮೀಸೆ ಹೊತ್ತದ್ದು ರಾಜ್‍ಕುಮಾರ್, ಶಿವಾಜಿ, ಎಂಜಿಆರ್. ಸ್ವಲ್ಪ ಇಂಪ್ರೂವ್ ರಜನಿಕಾಂತ್, ವಿಷ್ಣುವರ್ಧನ್, ಅನಂತನಾಗ್.  ಇತ್ತೀಚಿನ ಸೂರ್ಯವಂಶ, ಯಜಮಾನದಲ್ಲಿ ವಿಷ್ಣುವಿಗೆ  ಭರ್ಜರಿ ಮೀಸೆ, ಅದು ಮೆರಗೂ ನೀಡಿತ್ತು. ಇನ್ನು  ಅವಳಿ ಮಕ್ಕಳ ಕಥೆ ಆದ್ರೆ ಒಬ್ಬನಿಗೆ ಮೀಸೆ, ಮತ್ತೊಬ್ಬ ಕ್ಲೀನ್‍ಶೇವ್ಡ್. ಈಗ ಕಾಲ ಬದಲಾಗಿದೆ ಬಿಡಿ ಅಂದು ಮೀಸೆ ಇದ್ದ ನಾಯಕನಿಗೆ ಮಾರುಕಟ್ಟೆ ಈಗ ಮೀಸೆ ಇಲ್ಲದ ನಾಯಕನಿಗೇ ಮಾರುಕಟ್ಟೇ. ಸಲ್ಮಾನ್, ಶಾರೂಖ್, ಅಮೀರ್ ಖಾನ್‍ಗಳು,  ಸಂಜಯ್ ದತ್, ಹೃತಿಕ್ ರೋಶನ್ ಮುಂತಾದವರ ಕ್ಲೀನ್‍ಶೇವ್ಡ್ ನೋಡಿ ಬಹುತೇಕ ಯುವಕರೂ ಕ್ಲೀನ್‍ಶೇವ್ಡ್ ಫ್ಯಾಷನ್ ಮಾಡಿಕೊಂಡಿರೋದು ಯಾವ ನ್ಯಾಯ?  ಕಾಲಂ ಮಾರಿಪೋಚಿ!.


ಮೀಸೆ ವೈವಿಧ್ಯ ನೋಡಿ... ಚಾಪ್ಲಿನ್ ಮೀಸೆ, ಗಿರಿಜಾ ಮೀಸೆ, ಚಿಗುರು ಮೀಸೆ, ಕಡ್ದಿ ಮೀಸೆ, ಹುರಿಮೀಸೆ, ಕುರಿಮೀಸೆ, ಬೆಕ್ಕಿನ ಮೀಸೆ, ಜಿರಲೆ ಮೀಸೆ, ವಿರಜಾ ಮೀಸೆ, ಕಡ್ಡಿ ಮೀಸೆ, ಬಂಗಾರು ಮೀಸೆ, ಮೊಟ್ಟೆ ಮೀಸೆ, ಪೊದೆಮೀಸೆ, ಫಿಲ್ಟರ್ ಮೀಸೆ ಲೆಕ್ಕ ಹಾಕುತ್ತಾ ಹೋದಲ್ಲಿ ದೊಡ್ಡ ಪಟ್ಟಿಯೇ ಬೆಳೆದೀತು. ನಿಮ್ಮ ಮೀಸೆ ಸವರಿ "ನಿಮ್ಮ ನಿಮ್ಮ ಮೀಸೆ ಯಾವ ಕ್ಯಾಟಗರಿಗೆ ಸೇರಿದ್ದು ಎಂದು ಅರಿತುಕೊಳ್ಳಿ. ಹೆಸರಿನಲ್ಲೇನಿದ್ದರೂ ಕಾಲ ಕಾಲಕ್ಕೆ ತಕ್ಕಂತೆ ತನ್ನ ರೂಪು, ಲಾವಣ್ಯಗಳನ್ನು ಬದಲಾಯಿಸುತ್ತಲೇ ಬಂದಿದೆ ಮೀಸೆ.


ಅಂದ ಹಾಗೆ ಆ ಮೀಸೆ ಬಗ್ಗೆ ನಿಮ್ಮ ಪತ್ನೀನ ಕೇಳುವ ಮೊದಲು ಯೋಚಿಸಿ ನೋಡಿ! ---ಹೊಸದಾಗಿ ಮದ್ವೆ ಆದವರು ಕೇಳಿದ್ರೆ ಹುಡುಗಿ ನಾಚುತ್ತಾ  "ಹುರಿ ಮೀಸೆ ಅಂಚಲಿ, ಚುಚ್ಚುವ ಮಿಂಚಿದೆ ಅಂತ ಹಾಡಿದ್ರೂ ಹಾಡಿಯಾಳು". ಇನ್ನು ನನ್ನಂತೆ ಬೇಕಾದಾಗ ಹೊಸತು-ಬೇಡವಾದಾಗ ಹಳತು ಎನಿಸುವ ದಾಂ-ಪತ್ಯ ಕಂಡವರು "ಮೀಸೆ ಮೆಣಸಿನಕಾಯಿ ಹೊಟ್ಟೆ ಹಲಸಿನಕಾಯಿ" ಎಂದಾರು. 


ಹೌದು -"ಗಿರಿಜಾ ಮೀಸೆ" ಅಂತಾರಲ್ಲ ಯಾಕೆ?  ಶಿವನಂತೂ ಮೀಸೆ ಬಿಟ್ಟಿಲ್ಲ...ಆದ್ರೂ ಮೀಸೆಗೆ "ಗಿರಿಜೆಯ ಹೆಸರು ಏಕೆ ಕೂಡಿಕೊಂಡಿತು ಅಂತ"?  ನಿಮಗೇನಾದ್ರು ತಿಳಿದಿದೆಯಾ?ಇದೇ ಲೇಖನ "ದಟ್ಸ್ ಕನ್ನಡ" ದಲ್ಲೂ ಪ್ರಕಟವಾಗಿದೆ. 


 


http://thatskannada.oneindia.in/nri/article/2010/0920-an-essay-about-moustache.html


 

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಏನ್ರಿ ಅದು ಮೀಸೆ ವರ್ಣನೆ ಅಬ್ಬಾ, ಹೆಂಗಸರಿಗೆ ನಮ್ಮ ಮೀಸೆ ಮೇಲೆ ಇಷ್ಟ ಗಮನ ಇದೆ ಅಂತ ಇವತ್ತೇ ಗೊತ್ತಾಗಿದ್ದು. ನಿಮ್ಮ ಬರಹ ಶೈಲಿ ತುಂಬಾ ಇಷ್ಟವಾಯ್ತು .

ಹೌದು ವಾಣಿ ನಾನು ಕೆಲವೊಮ್ಮೆ ಯೋಚಿಸ್ತೀನಿ ಈಗಿನ ಕಾಲದ ಹುಡುಗರು ಮೀಸೆ ಯಾಕೆ ಬಿಡೊಲ್ಲ ಅಂತ.... ನಿಮ್ಮ ಲೇಖನ ಚೆನ್ನಾಗಿದೆ..ಮೊದಲು ಇಷ್ಟು ಉದ್ದ ಇದೆ ಅಂದುಕೊಂಡು ಓದ್ಲಾ ಬೇಡ್ವಾ ಅಂತಿದ್ದೆ... ನಿಮ್ಮ ಲೇಖನ ಓದಿಸಿಕೊಂಡು ಹೋಯಿತು... :)

ನಾನೂ ಕಟ್ ಮಾಡೋಣ ಅಂತ ಯೋಚಿಸಿದೆ, ಮೀಸೆ ಬಿಡಲೇ ಇಲ್ಲ ಉದ್ದಕ್ಕೆ ಬೆಳೆಯುತ್ತಾ ಹೋಯಿತು, ಮೀಸೆಯಂತೆ ಲೇಖನ ಅರ್ಧ ಬೋಳಿಸಿದರೆ ಚೆನ್ನಾಗಿರೋಲ್ಲ ಎಂದು ಸುಮ್ಮನಾದೆ. ವಂದನೆಗಳು-ವಾಣಿ

ವಾಣಿ, ಉತ್ತಮ ಮೀಮಾಂಸೆ! ಮೀಸೆಹೊತ್ತ ನನಗೇ ಗೊತ್ತಿರದ ಹತ್ತಾರು ವಿಷಯಗಳು! ಒಂದಲ್ಲ ಒಂದು ದಿನ ಈ ಮೀಸೆಯ ಬಗ್ಗೆ, ಮೀಸೆ ಬಾರದವರೂ, ಬರೆದಾರೆಂಬ ನನ್ನ ನಿರೀಕ್ಷೆ ಸುಳ್ಳಾಗಲಿಲ್ಲ, ನೋಡಿ! <<ಮೊನ್ನೆ ಮೀಸೆ ಟ್ರಿಮ್ ಮಾಡಿಕೊಳ್ತಿದ್ದ ನನ್ನ ಯಜಮಾನರು ಬಂದು "ಮೀಸೆ ಟ್ರಿಮ್ ಮಾಡ್ಕೊಂಡೆ, ಕನ್ನಡಿ ಸರಿ ಇಲ್ಲ, ಸರಿಯಾಗಿ ಇದೆಯಾ ನೋಡು" ಎಂದರು. ಅವನ ಮೂತಿ ಹಿಡಿದು ಅತ್ತ-ಇತ್ತ ತಿರುಗಿಸಿ, ನನ್ನ ಕಣ್ಣ ಕನ್ನಡಿಯಲ್ಲಿ ಕಂಡೆ ನಿನ್ನ ಮೀಸೆ ಎನ್ನುತ್ತಾ...ವಯಸ್ಸಾಯಿತು ಅರ್ಧಕಪ್ಪು-ಬಿಳುಪು, ಇತ್ತ ದಪ್ಪ-ಅತ್ತ ಸಣ್ಣ, ಈ ಪರಿಯ ಸೊಬಗಾ, ಯಾಕೋ ದಿನಾ ಕಷ್ಟ ಪಡ್ತೀಯ, ಪೂರ ಬೋಳಿಸ್ಬಿಡು ರಾಜ, ಹೇಗಿರ್ತೀಯಾ ನೊಡೋಣ ಎಂದು ಕಿಸಕ್ಕನೆ ನಕ್ಕೆ. >> ಅವರು ಹಠಾತ್ ಅವನು ಆದದ್ದು ಯಾಕೋ ಗೊತ್ತಾಗ್ಲಿಲ್ಲ. ಎಂದದ್ದು ಅವರು. ಮೂತಿ ಹಿಡಿದದ್ದು ಅವನದ :) - ಆಸು ಹೆಗ್ಡೆ

ನಮಸ್ಕಾರ , ಇದೆಂಥಾ ನಿರೀಕ್ಷೆ, ಪ್ರೀತಿಯಲ್ಲಿ ಅವರು-ಅವನಾಗುವುದು ಸಹಜವಲ್ಲವೇ? ಸಧ್ಯಕ್ಕೆ ಆ ಮೂತಿ ಅವನದೇ....ಬೇರೆ ?? ವಂದನೆಗಳು-ವಾಣಿ

ಆತ್ಮೀಯ ಮೀಸೆ ಬಗ್ಗೆ ರಿಸರ್ಚ್ ಮಾಡಿರೋ ಹಾಗಿದೆ. ಹಿ೦ದಿ ನಟರಿಗೆ ಮೀಸೆ ಬಗ್ಗೆ ಅಷ್ಟೊ೦ದು ಅಸ್ಥೆ ಇದ್ದ೦ತಿಲ್ಲ. ಅದೇನಿದ್ರೂ ದಕ್ಷಿಣಭಾರದ ನಟರಿಗೆ ಮಾತ್ರ. ಮೀಸೆ ಇದ್ರೆ ಮೂಗಿನೊಳಗೆ ಧೂಳು ಹೊಗೆ ಎಲ್ಲಾ ಸಲೀಸಾಗಿ ಹೋಗಲ್ಲ. ಫಿಲ್ಟೆರ್ ಆಗಿ ಹೋಗ್ತಾವೆ :) ಮಕ್ಕಳಿಗೆ ಮೀಸೆ ಒ೦ದು ಆಟದ ವಸ್ತುವಾಗಿ ಕ೦ಡು ಅದನ್ನ ಎಳೆದಾಡುತ್ತಾ (ಅಷ್ಟು ಉದ್ದ ಇದ್ರೆ ಮಾತ್ರ) ಖುಷಿ ಪಡ್ತಾವೆ. ಹರಿ

ನಮಸ್ಕಾರ, ರಿಸರ್ಚ್ ಏನಿಲ್ಲ ಹರಿಯವರೇ, ತೋಚಿದ್ದು-ಗೀಚಿದ್ದು ಮಾತ್ರ. ವಂದನೆಗಳು-ವಾಣಿ

ಅಬ್ಬಬ್ಬಾ! ಹೆ೦ಗಸರು ಈ ಥರಾ ಮೀಸೆಯ ಬಗ್ಗೆ ಮೀಮಾ೦ಸೆ ಮಾಡ್ತಾರಾ?? ಸಕತ್ ಕಣ್ರೀ ವಾಣಿ, ಚೆನ್ನಾಗಿದೆ.

ನಮಸ್ಕಾರ, ಟೈಟಲ್ ಮಾತ್ರ, ಮೀಮಾಂಸೆ, ಇದೊಂದು ಹರಟೆ ಮಾತ್ರ, ಬರೀ ತೋಚಿದ್ದು-ಗೀಚಿದ್ದು. ವಂದನೆಗಳು-ವಾಣಿ