ಅಧ್ಯಾತ್ಮದ ಎರಡು ಮುಖಗಳು

To prevent automated spam submissions leave this field empty.

ಸತ್ಯದರ್ಶನ


ವಿಶ್ವವೇಕಿದೆ?
ಅದರ ಸೃಷ್ಟಿಯ ಹಿಂದೆ ಉದ್ದೇಶವಿದೆಯೆ?
ನಾವೇಕಿದ್ದೇವೆ?
ನಮಗೇನಾದರೂ ಆದೇಶವಿದೆಯೆ?

ಶಿಸ್ತು, ನಿಯಮಗಳಿಗನುಸಾರ ಗತಿಶೀಲ
ವಿಶ್ವ; ಉದ್ದೇಶರಹಿತವಾದರೆ ಇದು ಸಾಧ್ಯವಿಲ್ಲ.
ಮಿತಿ, ಆಯಾಮಗಳಧೀನ ಆಬಾಲ
-ವೃದ್ಧ; ಆದೇಶಕ್ಕೊಳಪಟ್ಟವರೆ ಎಲ್ಲ.

ಉದ್ದೇಶವೇನು?
ಆದೇಶವೇನು?

ಇರುವಿಕೆಯೆ ಉದ್ದೇಶ
ಅದುವೆ ಸತ್ಯ.
ಅರಿಯುವಿಕೆ ಆದೇಶ
ಬದುಕು ಮಿಥ್ಯ.

ಬದುಕು ಇರುವಿಕೆಯಲ್ಲ
ಅದರ ಪ್ರತಿರೂಪ
ಬದುಕಿನಾಚೆಯ ಎಲ್ಲ
ಶಕ್ತಿ ನಿಜರೂಪ

ಪ್ರತಿರೂಪ ರೂಪದೊಳಗೊಂದಾಗು
-ವುದು ಸತ್ಯ;
ಆತ್ಮ-ಪರಮಾತ್ಮನದು
ಇದೇ ಸಾಂಗತ್ಯ
ಇದೇ
ಅಧ್ಯಾತ್ಮ
ನಿತ್ಯ.

 

ಕಾಯಬೇಕು


ಆತ್ಮಾ ನದೀ ಭಾರತ ಪುಣ್ಯತೀರ್ಥಾ
ಸತ್ಯೋದಕಾ ಶೀಲತಟಾ ದಯೋರ್ಮಿಃ
                     (ಹಿತೋಪದೇಶ)


ಎಲೈ ಭರತವಂಶಸಂಜಾತನೇ,
ಆತ್ಮವೇ ನದಿ, ಪುಣ್ಯವು (ಇಳಿಯಲನುವಾಗುವ) ಘಟ್ಟ,
ಸತ್ಯವೇ ಜಲ,
ನಡತೆಯು ದಡ, ದಯೆಯೆಂಬುದೇ ಅಲೆ.

ಆತ್ಮದ ನದಿಯಲಿ ಮೀಯಬೇಕು
ಅಂತರಾತ್ಮಶುದ್ಧಿಗೆ
ಭೋಗಲಾಲಸೆರಹಿತ ಕಾಯ ಬೇಕು,
ಮತ್ತು ಕಾಯಬೇಕು.

ಪುಣ್ಯದ ಘಟ್ಟ ಇಳಿದು
ಸತ್ಯದ ಜಲ ಕುಡಿದ ಜೀವ
-ವನು ಆತ್ಮಸಂಗತಿಯೊಡನೆ
ದಯೆಯ ಅಲೆ ಸನ್ನಡೆಯ ದಡದೆಡೆ
ನಡೆಸಿದೊಡೆ
ಆ ಅನುಭವ ಪಡೆವ
ಈ ಭವ ಮೀರಿದರಿವಿಗಾಗಿ,
ಚಿತ್ತದಿ ಹೊಳೆವ ಆತ್ಮಜ್ಞಾನಕ್ಕಾಗಿ
ಚಿತ್ತಶುದ್ಧಿಯಿಂದ ಕಾಯಬೇಕು,

ಕಾಯಬೇಕು
ಪ್ರಾಮಾಣಿಕವಾಗಿ;
ಪ್ರಾಮಾಣಿಕನಾಗಿ.
ಕಾಯಬೇಕು
ವಿದಗ್ಧನಾಗಿ
ವಿಷಯಮುಕ್ತನಾಗಿ
ವಿಶ್ವಬಂಧುವಾಗಿ, ವಿಶ್ವಾತ್ಮನಾಗಿ,
ವಿಧಾತೃವಿನೊಲುಮೆಗಾಗಿ,
ವಿಮುಕ್ತಿಗಾಗಿ
ತಪೋನಿಷ್ಠ ತಥಾಗತನಂತೆ
ಕಾಯಬೇಕು.

ಕೊನೆಗೊಮ್ಮೆ
ದೇಹದ ಹಂಗಿರದ ಆತ್ಮ
ವಿಶ್ವವ್ಯಾಪಿಯಾಗಿ ವಿಜೃಂಭಿಸುವ
ವಿಭೂತಿಗಾಗಿ,
ಅಧ್ಯಾತ್ಮದನುಭೂತಿಗಾಗಿ
ಇಂದಿನಿಂದಲೆ
ನಾನು
ನಾನೆಂಬ
ಕಲ್ಮಷರಹಿತನಾಗಿ
ಕಾಯಬೇಕು
ಕರ್ತವ್ಯಮುಖಿಯಾಗಿ.

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಪೂರ್ಣವಾಗಿದೆ ಸರ್ ನೀವು ಪರಿಚಯಿಸಿದ ಎರಡು ಮುಖಗಳಿಂದ ನನಗಾದ(ನ)ರ್ಥ ನಿತ್ಯ ನಿರುತ ಜೀವನ ತವಕ ಪೂರ್ಣ ಕಾಯಕ ತೀಡಿ ತೀಡಿ ಸಿಕ್ಕ ಘಟ್ಟಗಳು ಮೆಲ್ಲ ಮೆಲ್ಲ ಇಳಿದು ದ್ವಂದ್ವ ಕಾಲ ಉರುಳಿದಂತೆ ಏರಿಏರಿ ಆರಿವು ಅದಕು ಇದಕು ಇದಕು ಅದಕು ಅದು ಇದು ಇದು ಅದುವೆಲ್ಲವಳಿದು ಆಗುವುದು ರೂಪ ಪ್ರತಿರೂಪ ಗಳತೀತ ವಿರಾಟ ದರ್ಶನ ವಂದನೆಗಳು

ನನ್ನ ಮನದ ತುಮುಲಗಳೇ ನಿಮ್ಮ ಬರಹದಲ್ಲಿ ಒಡಮೂಡಿದೆ. ಧನ್ಯವಾದಗಳು, ಶಾಸ್ತ್ರಿಗಳೇ. ಇಂದು ನನ್ನ ಕೊನೆಯ ದಿನಗಳ ಮೊದಲದಿನವೆಂದು ಭಾವಿಸಿ ಮುನ್ನಡೆಯುವಾಗ ಬಾಕಿ ಉಳಿದ ಕೆಲಸಗಳನ್ನು ಮುಗಿಸಬೇಕೆನ್ನುವ ಕರ್ತವ್ಯಮುಖಿಯಾಗಲು ಸಾಧ್ಯ.