ರಾಷ್ಟ್ರಭಾಷೆಯಿಲ್ಲದ ರಾಷ್ಟ್ರದಲ್ಲಿ…

To prevent automated spam submissions leave this field empty.

ಅದು ೧೯೩೭ ರ ಸಮಯ ಇಡಿ ದೇಶ ಸ್ವಾತಂತ್ರ್ಯ ಹೋರಾಟದಲ್ಲಿ ಮುಳುಗಿತ್ತು.ಆದರೆ ಇತ್ತ ತಮಿಳು ನಾಡಿನಲ್ಲಿ ಬೇರೆಯದೇ ಹೋರಾಟ ಶುರುವಾಗಿತ್ತು! ಒಂದು ಕಡೆ ನೋಡಿದರೆ ವಿದೇಶಿಗಳ ವಿರುದ್ಧ ಹೋರಾಟ ಇನ್ನೊಂದು ಕಡೆ ಇದೆ ದೇಶದ ಮತ್ತೊಂದು ಭಾಷೆಯ ಹೇರಿಕೆಯ ಮೇಲೆ ಹೋರಾಟ! ಅದು ‘ಹಿಂದಿ ಹೇರಿಕೆಯ ವಿರುದ್ಧ’!
ಮೇಲ್ನೋಟಕ್ಕೆ ಸ್ವಾತಂತ್ರ್ಯ ಹೋರಾಟದಂತಹ ಸಮಯದಲ್ಲಿ ದಂಗೆಯೆದ್ದ ತಮಿಳರ ಮೇಲೆ ಕೋಪ ಉಕ್ಕಿ ಬರುವುದು ಸಹಜವೇ.ಆದರೆ ಅವರೇನು ಸುಮ್ ಸುಮ್ನೆ ಬಾಯಿ ಬಡ್ಕೊತಿದ್ರಾ? ಅವರು ಹಾಗೆ ತಿರುಗಿ ಬೀಳುವಂತೆ ಮಾಡಿದ್ದಾದರು ಏನು? ಮಾಡಿದ್ದಾದರೂ ಯಾರು? ಅವ್ರ ಹೆಸರು ಸಿ.ರಾಜಗೋಪಾಲಚಾರಿ.


ಮದ್ರಾಸ್ ಪ್ರೆಸಿಡೆನ್ಸಿಯಲ್ಲಿ ೧೯೩೭ರಲ್ಲಿ ನಡೆದ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದ ನ್ಯಾಷನಲ್ ಕಾಂಗ್ರೆಸ್ಸಿನ ರಾಜಗೋಪಾಲಚಾರಿಯವರು, ಶಿಕ್ಷಣದಲ್ಲಿ ‘ಹಿಂದಿ’ ಕಲಿಕೆಯನ್ನ ಕಡ್ಡಾಯ ಮಾಡಿಬಿಟ್ಟರು.ಅಷ್ಟು ಸಾಕಾಯ್ತು ಪೆರಿಯಾರ್ ನೇತೃತ್ವದಲ್ಲಿ ಶುರುವಾದ ಹೋರಾಟ ಮೂರು ವರ್ಷಗಳಷ್ಟು ಕಾಲ ನಡೆದು ಕಡೆಗೆ ೧೯೪೦ರಲ್ಲಿ ಬ್ರಿಟಿಷರು ಆ ನಿರ್ಧಾರವನ್ನ ವಾಪಸ್ ಪಡೆದ ಮೇಲಷ್ಟೇ ತಮಿಳುನಾಡು ಶಾಂತವಾಗಿದ್ದು.ಹಿಂದಿಯನ್ನ ರಾಷ್ಟ್ರ ಭಾಷೆ ಮಾಡುವ ನಾಯಕರ ಆಸೆಗೆ ಈ ಹೋರಾಟ ಭಂಗ ತರುವಲ್ಲಿ ತಮಿಳರ ಹೋರಾಟ ಯಶಸ್ವಿಯಾಗಿತ್ತು.


ಗಾಂಧೀಜಿ,ಸಾವರ್ಕರ್,ಸುಭಾಷ್,ಅಂಬೇಡ್ಕರ್,ನೆಹರೂ ಸೇರಿದಂತೆ ಆಗಿನ ಎಲ್ಲ ಮೊದಲ ಸಾಲಿನ ನಾಯಕರು ಈ    ವಿಷಯದಲ್ಲಿ ಎಡವಿದವರೇ.ಸ್ವಾತಂತ್ರ್ಯ ಪೂರ್ವದಲ್ಲೇ ನಡೆದ ಇಂತ ಹೋರಾಟದಿಂದಾದರೂ ಆಗಿನ ನಾಯಕರುಗಳು ಈ ದೇಶದ ಭಾಷ ವೈವಿಧ್ಯತೆಯನ್ನ ಸೂಕ್ಷ್ಮವಾಗಿ ಗಮನಿಸಬೇಕಾಗಿತ್ತು, ಆದರೆ ಗಮನಿಸಲಿಲ್ಲ.ಸ್ವಾತಂತ್ರ್ಯ ಬಂದ ಮೇಲೆ ಮತ್ತೊಂದು ಎಡವಟ್ಟು ಮಾಡಿದ್ರು.ಅದು ೧೫ ವರ್ಷಗಳ ನಂತರ ಹಿಂದಿಯೊಂದೇ ಭಾರತದ ಆಡಳಿತಾತ್ಮಕ ಭಾಷೆಯಾಗುತ್ತದೆ ಅನ್ನೋ ಅಂಶವನ್ನ ಸಂವಿಧಾನದಲ್ಲಿ ಸೇರಿಸಿದ್ದು! ಮತ್ತೆ ಎದ್ದು ನಿಂತರು ತಮಿಳರು.ಸರಿ ಸುಮಾರು ಎಪ್ಪತ್ತು ಜೀವಗಳು ಬಲಿದಾನಗೈದವು.ಕಡೆಗೆ ಆಗಿನ ಪ್ರಧಾನಿ ಶಾಸ್ತ್ರಿಗಳು ಹಿಂದಿಯೇತರ ರಾಜ್ಯಗಳು ಬಯಸುವವರೆಗೂ ಇಂಗ್ಲಿಷ್ ಸಹ ನಮ್ಮ ಆಡಳಿತಾತ್ಮಕ ಭಾಷೆಗಳಲ್ಲೊಂದಾಗಿರುತ್ತದೆ ಅಂತ ಹೇಳಿಕೆ ಕೊಟ್ಟ ಮೇಲೆ ಪರಿಸ್ಥಿತಿ ಹತೋಟಿಗೆ ಬಂದಿದ್ದು.ಆಗ ಕೈಗೊಂಡ ತಪ್ಪು ನಿರ್ಧಾರದಿಂದ ೧೯೬೭ರಲ್ಲಿ ಪಟ್ಟ ಕಳೆದುಕೊಂಡ ಕಾಂಗ್ರೆಸ್ಸ್ ಎಂಬ ಕಾಂಗ್ರೆಸ್ ಇವತ್ತಿನವರೆಗೆ ತಮಿಳುನಾಡಿನಲ್ಲಿ ಪತ್ತೆಯಿಲ್ಲದಂತಾಗಿದೆ.


ಈ ಎರಡು ಪ್ರಬಲ ಹೋರಾಟದಿಂದಾಗಿ ಹಿಂದಿಯನ್ನ ಮುಂಬಾಗಿಲ ಮೂಲಕ ಹಿಂದಿಯೇತರ ರಾಜ್ಯಗಳು (ದಕ್ಷಿಣ ಹಾಗೂ ಪೂರ್ವ) ಒಪ್ಪುವುದಿಲ್ಲ ಅಂತ ಮನವರಿಕೆಯಾದ ನಂತರ ಕೇಂದ್ರ ಸರ್ಕಾರ ಹಿಂಬಾಗಿಲ ಮೂಲಕ ಪರೋಕ್ಷವಾಗಿ ಹಿಂದಿ ಹೇರಿಕೆಯನ್ನ ಶುರು ಹಚ್ಚಿಕೊಂಡಿದ್ದು.ಈ ಹಂತದಲ್ಲೇ ಬಂದಿದ್ದು ತ್ರಿಭಾಷಾ ಸೂತ್ರ!


ಅದನ್ನ ಹಲವು ರಾಜ್ಯಗಳು ಒಪ್ಪಿಕೊಂಡವು.ಅದರಲ್ಲಿ ಕರ್ನಾಟಕವು ಒಂದಾಗಿತ್ತು.ಅವೈಜ್ಞಾನಿಕ ತ್ರಿ ಭಾಷ ಸೂತ್ರದಿಂದಾಗಿ ಕನ್ನಡ ನಾಡಿನಲ್ಲಿ ಕನ್ನಡ ಕಲಿಯದೇ ಸಹ ಒಬ್ಬ ಕನ್ನಡ ವಿದ್ಯಾರ್ಥಿ ಹೈ-ಸ್ಕೂಲ್ ಅನ್ನು ಸಂಸ್ಕೃತ,ಇಂಗ್ಲಿಷ್ ಹಾಗೂ ಹಿಂದಿ ಕಲಿತು ಮುಗಿಸಬಹುದಿತ್ತು.ಸಾಹಿತಿಗಳು,ಬುದ್ದಿಜೀವಿಗಳು ದನಿಯೆತ್ತಿದ್ದರಿಂದಾಗಿ ಬಂದ ‘ಗೋಕಾಕ್ ವರದಿ’ ಕನ್ನಡಕ್ಕೆ ಶಾಲೆಯಲ್ಲಿ ಪ್ರಥಮ ಭಾಷೆಯ ಸ್ಥಾನಮಾನ ನೀಡಬೇಕು ಅಂತ ಹೇಳಿತ್ತು.ಆದರೆ ಸರ್ಕಾರ ಕೆಲವು ಜನರ ವಿರೋಧ ನೋಡಿ ವರದಿ ಜಾರಿಗೆ ತರಲಿಲ್ಲ.ನಿಧಾನಕ್ಕೆ ಮತ್ತೆ ಚಳುವಳಿ ಶುರುವಾಯಿತು.ಕನ್ನಡಿಗರು ಯಥಾ ಪ್ರಕಾರ ಮಲಗೆ ಇದ್ದರು!!


ಕನ್ನಡ ಹೋರಾಟಗಾರರ ಕರೆಗೆ ಓ ಗೊಟ್ಟು ಡಾ|| ರಾಜ್ ಕುಮಾರ್ ಎದ್ದು ಹೊರಟರು.ಹಾಗೆ ಶುರುವಾಯಿತು ‘ಗೋಕಾಕ್ ಚಳುವಳಿ’ ಅನ್ನುವ ಸುವರ್ಣ ಅಧ್ಯಾಯ.ರಾಜ್ ರಂಗ ಪ್ರವೇಶದಿಂದ ಮಲಗಿದ್ದ ಜನರು ಬೀದಿಗಿಳಿದರು,ಸರ್ಕಾರ ತಲೆಬಾಗಿತು.ಕನ್ನಡ ಕಲಿಕೆ ಕಡ್ಡಾಯವಾಯಿತು.ಅವತ್ತೆನಾದರು ಗೋಕಾಕ್ ಚಳುವಳಿಯಾಗದೆ ಇದ್ದಿದ್ದರೆ ಬಹುಷಃ ನಾನಿವತ್ತು ಇದನ್ನ ಕನ್ನಡದಲ್ಲಿ ಬರೆಯುತಿದ್ದೆನಾ!? ಗೊತ್ತಿಲ್ಲ.


ನಾವೇನೋ ನಮ್ಮ ರಾಜ್ಯದಲ್ಲಿ ಕನ್ನಡ,ಇಂಗ್ಲೀಷ್,ಹಿಂದಿ ಕಲಿಯುತ್ತ ಬಂದೆವು.ಅಲ್ಲೂ ಹಿಂದಿ ಕಲಿಕೆಯ ಸಮಯದಲ್ಲಿ ಮುಗ್ದ ಮಕ್ಕಳಿಗೆ ‘ಹಿಂದಿ ನಮ್ಮ ರಾಷ್ಟ್ರ ಭಾಷೆ’ ಅನ್ನೋ ಶುದ್ಧ ಸುಳ್ಳನ್ನ ಕಲಿಸಲಾಯಿತು,ಬಹುಷಃ ಈಗಲೂ ಕಲಿಸಲಾಗುತ್ತಿದೆ.ಅಸಲಿಗೆ ಈ ದೇಶದಲ್ಲಿ ‘ರಾಷ್ಟ್ರ ಭಾಷೆ’ಯೇ ಇಲ್ಲ ಅನ್ನುವುದು ಬಹಳಷ್ಟು ಜನಕ್ಕೆ ತಿಳಿದಿಲ್ಲ! (ಆರ್ಟಿಕಲ್ ೩೪೩).ಜಗತ್ತಿನ ಯಾವುದೇ ಭಾಷೆ ಕಲಿಯೋದು ತಪ್ಪಲ್ಲ ಹಾಗೆ ಹಿಂದಿ ಕಲಿಯೋದು ತಪ್ಪಲ್ಲ,ಆದರೆ ಅದನ್ನ ಸುಳ್ಳು ಸುಳ್ಳೇ ರಾಷ್ಟ್ರ ಭಾಷೆ ಅದಿಕ್ಕೆ ಕಲೀರಿ ಅಂತ ಮುಗ್ದ ಮಕ್ಕಳಿಗೆ ಹೇಳಿ ಕಲಿಸೋದು ಇದ್ಯಲ್ಲ ಅದು ತಪ್ಪು.ಅಂತ ವ್ಯವಸ್ತೆಗೆ,ಜನರೆಡೆಗೆ ಧಿಕ್ಕಾರವಿರಲಿ.


ಹಾಗೆ ನೋಡಿದರೆ ಈ ತ್ರಿ-ಭಾಷ ಸೂತ್ರವೇನೋ ಒಳ್ಳೆಯದೇ.ಆದರೆ ಈಗಿನಂತೆ ಇಂಗ್ಲೀಶ್ ಹಾಗೂ ಹಿಂದಿಯನ್ನ ೨ ಭಾಷೆಗಳಾಗಿ ಕಡ್ಡಾಯವಾಗಿ ಕಲಿಸುವ ನಿರ್ಧಾರವಿದೆಯಲ್ಲ, ಅದು ಒಳ್ಳೆಯದ್ದಲ್ಲ.ಇಂಗ್ಲೀಷ್ ಬಹುತೇಕ ಜನರಿಗೆ ಅನ್ನ ಕೊಡುವ ಭಾಷೆ ಹಾಗಾಗಿ ಅದು ಕಲಿಯೋಣ.ಇನ್ನುಳಿದಂತೆ ಅವರವರ ಮಾತೃ ಭಾಷೆಯು ಅಗತ್ಯವಾಗಿ ಕಲಿಯಲೇಬೇಕು.ಸಮಸ್ಯೆಯಿರುವುದು ಮೂರನೇ ಭಾಷೆಯಲ್ಲಿ!.ಮೂರನೇ ಭಾಷೆಯಾಗಿ ಹಿಂದಿಯನ್ನ ಏಕೆ ಕಡ್ಡಾಯವಾಗಿ ಕಲಿಯಬೇಕು? ಕಲಿತು ಒಬ್ಬ ಕನ್ನಡಿಗ ಕರ್ನಾಟಕದಲ್ಲಿ ಯಾರೊಂದಿಗೆ ವ್ಯವಹರಿಸಬೇಕಿದೆ?,ಅದೇ ಇನ್ನೊಂದು ಭಾಷೆಯಾಗಿ ಯುನೆಸ್ಕೋದ ವರದಿಯಂತೆ ಭಾರತದ ಅಳಿವಿನಂಚಿನಲ್ಲಿರುವ ೧೯೬ ಭಾಷೆಗಳಲ್ಲಿ ಸೇರಿ ಹೋಗಿರುವ ನಮ್ಮ ನೆಲದ ಭಾಷೆಗಳಾದ ‘ತುಳು,ಕೊಂಕಣಿ,ಕೊಡವ’ ಭಾಷೆಗಳನ್ನೇ ಏಕೆ ನಾವು ಕಲಿಯ ಬಿಡುವುದಿಲ್ಲ ಈ ತ್ರಿಭಾಷ ನೀತಿ? ನಮ್ಮ ಆಯ್ಕೆಯ ಭಾಷೆಗಳನ್ನ ಕಲಿಯಬಿಟ್ಟರಷ್ಟೇ ಈ ತ್ರಿ ಭಾಷ ನೀತಿಗೆ ಒಂದು ಅರ್ಥ ಬರುವುದು.


ಹಿಂದಿಯನ್ನ ವಿರೋಧಿಸುವವರನ್ನ ದೇಶ ದ್ರೋಹಿಗಳು ಅನ್ನೋ ಮಟ್ಟದಲ್ಲಿ ನೋಡುವ ಮಂದಿಯೇ ಈ ದೇಶದಲ್ಲಿ ಹೆಚ್ಚಿದ್ದಾರೆ. ೧೯೪೬ ರ ಡಿಸೆಂಬರ್ ೧೦ರಂದು ಶಾಸನ ಸಭೆಯಲ್ಲಿ ನಡೆದ ಈ ಘಟನೆಯೇ ಇಂತ ಮನಸ್ಥಿತಿಗಳಿಗೆ ಒಂದು ಉದಾಹರಣೆ.


ಆ ಸದಸ್ಯನ ಹೆಸರು ಧುಲೆಕರ್.ಸದನದಲ್ಲಿ ಮಾತನಾಡ ನಿಂತವನು ಹಿಂದಿಯಲ್ಲಿ ಮಾತನಾಡುತ್ತಲೇ ಹೊರಟ, ಸಭಾಧ್ಯಕ್ಷರು ಹಿಂದಿ ಬಾರದ ಸದಸ್ಯರು ಸದನದಲ್ಲಿರುವುದರಿಂದ ಇಂಗ್ಲೀಶ್ ಬಳಸಲು ಹೇಳಿದಾಗ, ಈತ “ಹಿಂದಿ ಬರದಿರುವ ಜನ ಇಂಡಿಯಾದಲ್ಲಿರಲು ಲಾಯಕ್ಕಿಲ್ಲ’ ಅಂತ ಹೇಳಿದ್ದ.ಅಷ್ಟೇ ತೀಕ್ಷ್ಣವಾಗಿ “ಹಾಗಿದ್ದರೆ,ನಿಮಗೆ ಹಿಂದಿ-ಇಂಡಿಯ ಬೇಕೋ ಇಲ್ಲ ಪರಿಪೂರ್ಣ ಇಂಡಿಯ ಬೇಕೋ ಅನ್ನುವುದನ್ನ ನೀವೇ ನಿರ್ಧರಿಸಿ” ಅನ್ತ ಹೇಳಿದವರು ಕೃಷ್ಣಾಮಚಾರಿಗಳು.ಹಿಂದಿಯ ಹೇರಿಕೆಗಾಗಿ ಕೇಂದ್ರ ಸರ್ಕಾರ ವರ್ಷಕ್ಕೆ ೩೬ ಕೋಟಿಗಳಷ್ಟು ತೆರಿಗೆಯ ಹಣವನ್ನ ಸುರಿಯುತ್ತಿದೆ.ಯಾವ ಪುರುಷಾರ್ಥಕ್ಕಾಗಿ? ಅತ್ತ ನೋಡಿದರೆ ಈ ಮಣ್ಣಿನ ೧೯೬ ಭಾಷೆಗಳು ಅಳಿವಿನಂಚಿನಲ್ಲಿವೆ ಈ ಹಣವನ್ನ ಎಲ್ಲ ಭಾಷೆಗಳ ಅಭಿವೃದ್ದಿಗೆ ಬಳಸಿದರೆ ಒಳ್ಳೆಯದಲ್ಲವೇ.


ಹಿಂದಿ ರಾಷ್ಟ್ರ ಭಾಷೆ ಅಂತ ಹೇಳೋ ಹಸಿ ಸುಳ್ಳನ್ನ ನಿಲ್ಲಿಸಿ ಹಾಗೆ ಹಿಂದಿ ಅಂದರೆ ದೇಶ ಪ್ರೇಮ ಅನ್ನೋ ಕತೆಗಳನ್ನೆಲ್ಲ ಇಂತ ಜನರು ನಿಲ್ಲಿಸಬೇಕಿದೆ.ಹಿಂದಿಗೆ ಕೇಂದ್ರ ಸರ್ಕಾರ ಕೊಡುತ್ತಿರುವ ಅನಗತ್ಯ ಪ್ರಾಮುಖ್ಯತೆಯನ್ನ ನಿಲ್ಲಿಸಿ ಆಯಾ ರಾಜ್ಯದ ಆಡಳಿತ  ಭಾಷೆಯಲ್ಲೇ ಕೇಂದ್ರವು ಆಯಾ ರಾಜ್ಯಗಳೊಂದಿಗೆ ವ್ಯವಹರಿಸಬೇಕು.ಹಾಗೆ ಮಾಡುವುದರಿನ್ದಷ್ಟೇ ಅನಗತ್ಯ ಇಂಗ್ಲೀಶ್ ಬಳಕೆಯನ್ನ ತಪ್ಪಿಸಬಹುದು.


ಅಷ್ಟಕ್ಕೂ ‘ಒಂದು ಭಾಷೆ ಸತ್ತರೆ ಅದು ಸಂಸ್ಕೃತಿಯ ಸಾವು ಅನ್ನುವುದನ್ನ ಸೋಕಾಲ್ಡ್  ದೇಶ ಭಕ್ತರು ಹಾಗೂ ಇಂಗ್ಲೀಶ್ ವಿರೋಧಿಗಳು ಅರ್ಥ ಮಾಡಿಕೊಳ್ಳಲಿ.ಅದ್ಯಾವ್ ಆಧಾರದ ಮೇಲೆ ಹಿಂದಿ ಇಲ್ಲಿಯ ರಾಷ್ಟ್ರ ಭಾಷೆ ಆಗ್ಬೇಕು ಅಂದ್ರೆ ಅದು ಬಹುಸಂಖ್ಯಾತರ ಭಾಷೆಯಪ್ಪ ಅಂತ ಮಾತನಾಡುವವರು ಒಂದು ವಿಷಯ ನೆನಪಿಟ್ಟುಕೊಳ್ಳಬೇಕು.ಉಪಖಂಡವನ್ನ ಭಾರತ ದೇಶ ಅಂತ ಹಿಡಿದಿಟ್ಟವರು  ಬ್ರಿಟಿಷರು.ಅಲ್ಲಿಯವರೆಗೂ ಭಾರತ ಅನ್ನೋ ದೇಶ ಈಗಿನಂತೆ ಒಂದಾಗಿ ಇರಲಿಲ್ಲ.ಆಗ ಇಲ್ಲಿ ನಡೆಯುತಿದ್ದಿದ್ದು ಆಯಾ ಜನರ ನೆಲದ ಭಾಷೆಯೇ.ಅವರು ಹೋದ ಮೇಲೆ ನಾವೇನೋ ಇಂದು ಒಂದು ದೇಶವಾಗಿದ್ದೇವೆ.ನಮ್ಮದು ವೈವಿಧ್ಯತೆಯಲ್ಲಿ ಏಕತೆಯನ್ನ ಹೊಂದಿರುವ ದೇಶ.ಯಾವುದೋ ಒಂದು ಭಾಷೆಯ ಮೂಲಕ ಏಕತೆ ಮೂಡಿಸುತ್ತೇವೆ ಅಂತ ಹೊರಡುವ ಭ್ರಮೆಯಿಂದ ವೈವಿಧ್ಯತೆ ನಾಶವಾಗದಿರಲಿ.ವೈವಿದ್ಯತೆ ನಾಶವಾದರೆ ಅಲ್ಲಿಗೆ ಏಕತೆಯು ನಾಶವಾದಂತೆಯೇ ಸರಿ. ನಮ್ಮ ಜನರ ಭಾಷೆ ಸಂಸ್ಕೃತಿಯನ್ನ ನಾವೇ ಉಳಿಸದಿದ್ದರೆ ಬ್ರಿಟಿಷರ ಅಡಿಯಿದ್ದ ಭಾರತಕ್ಕೂ ಈಗಿನ ಸ್ವತಂತ್ರ ಭಾರತಕ್ಕೂ  ವ್ಯತ್ಯಾಸವೆನಿರುತ್ತದೆ? ನಿರ್ಧರಿಸಬೇಕಾದವ್ರು ಕೇಂದ್ರ ಸರ್ಕಾರದವರು,ಉತ್ತರದ ರಾಜ್ಯಗಳವರು ಹಾಗೂ ಹಿಂದಿ ಅಂದ್ರೆ ಇಂಡಿಯ ಅನ್ನೋ ಭ್ರಮೆಯಲ್ಲಿರೋ ನಮ್ಮ ಸ್ನೇಹಿತರು,ಹಿತೈಷಿಗಳು.


ನೆನಪಿರಲಿ, ಈ ದೇಶದ ಪ್ರತಿ ಭಾಗದ ಜನರ ಭಾಷೆ,ಆಚರಣೆ,ಸಂಸ್ಕೃತಿಗಳ ಸಮ್ಮಿಲನವೇ ಭವ್ಯ ಭಾರತ ಭವಿಷ್ಯವಾಗಬೇಕು.ಆಗಷ್ಟೇ ನಮ್ಮ ನೆಮ್ಮದಿಯ ನಾಳೆಗಳಿಗಾಗಿ ತಮ್ಮ ಪ್ರಾಣಾರ್ಪಣೆ ಮಾಡಿದವರ ತ್ಯಾಗಕ್ಕೂ ಒಂದು ಗೌರವ.


ರಾಕೇಶ್ ಶೆಟ್ಟಿ | రాకేశ్ శెట్టి |രാകേഷ് ഷെട്ടി |ராகேஷ் ஷெட்டி |রাকেশ সেটটি | રાકેશ શેટ્ટી| राकेश शेट्टी | ਰਾਕੇਸ਼ ਸ਼ੇੱਟੀ | راکیش شتے | राकॆश शेट्टी  :)

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ರಾಕೇಶ್, ಒಂದು ಒಳ್ಳೆಯ ಬರಹ. ಭಾಷೆ ವಿಚಾರಕ್ಕೆ ಬಂದರೆ ತಮಿಳರನ್ನು ಮೆಚ್ಚಲೇಬೇಕು. ಹೌದು. ಶಾಲೆಗಳಲ್ಲಿ ನಮ್ಮ ಮಕ್ಕಳಿಗೆ ರಾಷ್ಟ್ರಭಾಷೆ ಹಿಂದಿಯಂದೇ ಕಲಿಸುತ್ತಿದ್ದಾರೆ.

ಹೌದು.ಮುಗ್ದ ಮನಸುಗಳಲ್ಲಿ ಇಂತ ಹಸಿ ಸುಳ್ಳು ಹೇಳಿಕೊಡುವುದನ್ನ ಮೊದಲು ನಿಲ್ಲಿಸಬೇಕು.ಈ ವಿಷಯವಾಗಿ ಎರಡು ತರ ಪ್ರಯತ್ನಿಸಬಹುದು, ಮೊದಲೆನೆಯದಾಗಿ ಮಕ್ಕಳಿಗೆ ಯಾವುದೇ ಭಾಷೆಯ ಬಗ್ಗೆ ದ್ವೇಷ ಮೂಡದಂತೆ ಸತ್ಯ ಏನು ಅಂತ ಹೇಳಿಕೊಡಬೇಕು.ಎರಡನೆಯದಾಗಿ ಈ ಸುಳ್ಳನ್ನ ಮುದ್ರಿಸುವ ಪುಸ್ತಕ ಪ್ರಕಾಶಕರಿಗೆ ಪತ್ರ ಬರೆದು ಕೇಳಬೇಕು. ಯಾವ್ ತರಗತಿಯ ಪುಸ್ತಕದಲ್ಲಿ ಹೀಗೆ ಹೇಳಿಕೊಡುತ್ತಾರೆ ಅನ್ನೋ ಮಾಹಿತಿಯಿದ್ದರೆ ಹಂಚಿಕೊಳ್ಳಿ. ಧನ್ಯವಾದಗಳು :)

ತುಂಬಾ ಒಳ್ಳೆಯ ಮಾಹಿತಿ ರಾಕೇಶ್ ... ಹಿಂದಿ ಬಾರದವರನ್ನು ದೇಶದ್ರೋಹಿಗಳಂತೆ ನೋಡುತ್ತಾರೆ ... ಬೇರೆಲ್ಲೂ ಇಲ್ಲ ನಮ್ಮ ಬೆಂಗಳೂರಿನಲ್ಲೇ..ನಮ್ಮ ಜನರೇ .... ಅಲ್ಲಿಯವರೆಗೆ ಹಿಂದಿ ನಮ್ಮ ಮೇಲೆ ಪ್ರಭಾವ ಬೀರಿದೆ.....

ಅಂತು ಹಿಂದೆ ಹೇಳಿದ ಹಾಗೆ ಒಂದು ದೀರ್ಘ ಲೇಖನವನ್ನೇ ಬರೆದಿದ್ದೀರಿ, ಲೇಖನ ಉತ್ತಮ ಮಾಹಿತಿಗಳೊಂದಿಗೆ ಚೆನ್ನಾಗಿ ಮೂಡಿ ಬಂದಿದೆ. ಆದರೆ <<ವೈವಿಧ್ಯತೆಯಲ್ಲಿ ಏಕತೆಯನ್ನ ಹೊಂದಿರುವ ದೇಶ.>> ಒಪ್ಪುವ ಮಾತು, ಆದರೆ ಆಗಿರುವ ಪರಿಸ್ಥಿತಿಯನ್ನು ಸ್ವಲ್ಪ ಅರ್ಥ ಮಾಡಿಕೊಳ್ಳಿ, ನಮ್ಮ ತಮಿಳರು ಉತ್ತರ ಭಾರತಗಳಿಗೆ ಹೋದಾಗ ಭಾಷೆ ಬರದೆ ಪರದಾಡುವ ಸ್ಥಿತಿ , ಮತ್ತು ಅದೇ ನಮ್ಮ ಉತ್ತರ ಭಾರತದವರು ತಮಿಳು ನಾಡಿಗೆ ಬಂದಾಗ ಆಗುವ ಭಾಷೆಯ ತೊಂದರೆಗಳು ನಿಮಗೆ ಗೊತ್ತಿಲ್ಲವೇ. ದೇಶದ ಎಲ್ಲರು ಪರಸ್ಪರ ಭಾವನೆಗಳನ್ನು ಹಂಚಿಕೊಳ್ಳಲು ಒಂದೇ ಭಾಷೆಯ ಆಗತ್ಯವಿಲ್ಲವೇ. ಒಂದು ಬಾಷೆಯನ್ನು ದೇಶದ ಎಲ್ಲಾ ಜನರು ಅರಿತಾಗ, ರಾಜ್ಯ ಸಂಸ್ಕೃತಿ ಮತ್ತು ವೈವಿಧ್ಯತೆಗಳ ಪರಿಚಯ ಇಡೀ ರಾಷ್ಟ್ರಕ್ಕೆ ಆಗುವುದಿಲ್ಲವೇ (ತುರ್ಜುಮೆ ಮುಖಾಂತರ)...ದೇಶದ ಎಲ್ಲಾ ಜನರಿಗೂ ಒಂದು ಬಾಷೆಯ ಅರಿವಾಗುವುದರಿಂದ ವೈವಿಧ್ಯತೆಯನ್ನು ಕಳೆದುಕೊಳ್ಳದೆ ಏಕತೆಯನ್ನುಸಾಧಿಸಬಹುದಲ್ಲವೇ

<<ನಮ್ಮ ತಮಿಳರು ಉತ್ತರ ಭಾರತಗಳಿಗೆ ಹೋದಾಗ ಭಾಷೆ ಬರದೆ ಪರದಾಡುವ ಸ್ಥಿತಿ , ಮತ್ತು ಅದೇ ನಮ್ಮ ಉತ್ತರ ಭಾರತದವರು ತಮಿಳು ನಾಡಿಗೆ ಬಂದಾಗ ಆಗುವ ಭಾಷೆಯ ತೊಂದರೆಗಳು ನಿಮಗೆ ಗೊತ್ತಿಲ್ಲವೇ.>> ಇದು ಸರಿ ಮತ್ತೆ - ಹಾಗಿದ್ರೆ ಒಂದು ಕೆಲಸ ಮಾಡಬಹುದಲ್ವಾ? ತಮಿಳನ್ನೇ ಉತ್ತರದವರಿಗೂ ಕಡ್ಡಾಯ ಮಾಡಿಬಿಟ್ಟರೆ ಹೇಗೆ ;) ?

ನಾನು ಮೇಲೆ ಹೇಳಿರುವುದು ಎರಡು ರಾಜ್ಯಗಳ ಉದಾಹರಣೆ ಅಷ್ಟೇ , ಇದು ಕರ್ನಾಟಕ, ಕೇರಳ ಮತ್ತು ಆಂಧ್ರ ದವರಿಗೂ ಅನ್ವಯಿಸುತ್ತೆ . ಆಗ ಈ ಎಲ್ಲಾ ನಾಲ್ಕು ಬಾಷೆಗಳನ್ನು ಕಲಿಯಲು ಹೇಳಬೇಕೇ. ಎಲ್ಲರನ್ನು ಒಗ್ಗೂಡಿಸುವ ಒಂದು ಭಾಷೆಬೇಡವೇ

ನಾನೆಲ್ಲಿ ಹೇಳಿರುವೆ ಹಿಂದಿಯೇ ಹಾಗಬೇಕು ಅಂತೇಳಿ, ನನ್ನ ಮೇಲಿನ ಪ್ರತಿಕ್ರಿಯೆಯಲ್ಲಿ ನಾನು ಹೇಳ ಬಯಸಿರುವುದು ಒಂದು ಬಾಷೆಯ ಆಗತ್ಯವಿದೆ ಎಂದು, ನಾನು ಹಿಂದಿಯ ಬಗ್ಗೆ ಪ್ರಸ್ತಾಪವೇ ಮಾಡಿಲ್ಲ. ದಯವಿಟ್ಟು ಪೂರ್ವಗ್ರಹರಾಗಿಪ್ರತಿಕ್ರಿಯಿಸಬೇಡಿ

ರಘು, ಇದರ ಬಗ್ಗೆ ನನ್ನ ಅನಿಸಿಕೆ ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. ಇಂಗ್ಲಿಷ್ ಭಾಷೆಗೆ ಅನ್ನ ಹುಟ್ಟಿಸುವ ಶಕ್ತಿಯಿದೆ. ಹಾಗಾಗಿ, ಎಲ್ಲೆಡೆ ಬಹಳಷ್ಟು ಜನರು ಇಂಗ್ಲಿಷ್ ಕಲಿಯುತ್ತಿದ್ದಾರೆ. ಇಂಗ್ಲಿಷ್ ಭಾಷೆ ಇತರೆ ದೇಶಗಳಲ್ಲೂ ಬಳಸಬಹುದಾದ ಭಾಷೆಯಾಗಿದೆ. ಹಾಗಿರುವಾಗ, ಇಂಗ್ಲಿಷ್‍ಅನ್ನು ಬೇರೆ ರಾಜ್ಯಕ್ಕೆ ಹೋದಾಗಲೂ ಬಳಸಬಹುದು. ನೀವು ಹೇಳುತ್ತಿರುವ ತೊಂದರೆ ಈ ವ್ಯವಸ್ಥೆಯಿಂದ ನಿವಾರಣೆಯಾಗುತ್ತದೆ.

ಬೇರೆ ಭಾಷೆ ಕಲೀಲಿ ಅಂತಾನೆ ತಾನೇ ಇರೋದು ತ್ರಿಭಾಷ ನೀತಿ ಅದರಿಂದ ಯಾರಿಗೆ ಯಾವ ಭಾಷೆ ಕಲಿಯೋ ಆಸಕ್ತಿ ಇದೆಯೋ ಅದನ್ನ ಕಲಿಯಲಿ.ಆದರೆ ಕಡ್ಡಾಯವಾಗಿ ಹಿಂದಿಯನ್ನೇ ಕಲಿಯಿರಿ ಅಂತೆಳೋದು ಬೇಡ ಅನ್ನೋದು ನನ್ನ ಅನಿಸಿಕೆ.ತೀರ ಎಲ್ಲ ಪ್ರದೇಶಗಳು ಒಂದೇ ಭಾಷೆ ಕಲಿಯುವಂತೆ ಮಾಡೋಣ ಅಂತ ಹೊರಟು ಅಲ್ಲಿನ ಭಾಷೆಗಳಿಗೆ ಮುಳುಗು ನೀರು ತರುವ ಈಗಿನ ನೀತಿ ಸರಿಯಿಲ್ಲ.ಕಲಿಯುವ ಆಸಕ್ತಿ ಇರುವವರು ಯಾವ ಭಾಷೆಯನ್ನಾದರೂ ಕಲಿಯುತ್ತಾರೆ.ಇಲ್ಲದಿದ್ದರೆ ನೀವು ಶಾಲೆಯಲ್ಲಿ ಓದಿಸಿದರು ಕಲಿಯುವುದಿಲ್ಲ.ಈಗ ನಮ್ಮಲ್ಲೇ ಶಾಲೆ ಮುಗಿಸಿ ಬಂದ ಎಷ್ಟು ಜನ ಹಿಂದಿಯಲ್ಲಿ ಮಾತನಾಡಬಲ್ಲರು?ಭಾಷೆ ಕಲಿಯುವುದು ಬಿಡುವುದು ಅವರವ ಆಸಕ್ತಿಯ ಮೇಲೆ ಅವಲಂಬಿತವಾದದ್ದು ಅದನ್ನ ಯಾರೂ ಕೂಡ ಹೇರಬಾರದು ಮತ್ತೂ ಹೇರಲಾಗದು ಕೂಡ. ಒಮ್ಮೆ ಯುರೋಪ್ ಯುನಿಯನ್ನಲ್ಲಿ ಭಾಷಾ ನೀತಿ ಹೇಗಿದೆ ಅಂತ ನೋಡಿ. ಹಿಂದಿಯನ್ನ ಯಾರು ವಿರೋಧಿಸುತ್ತಿಲ್ಲ (atleast ಕನ್ನಡಿಗರು),ಅದರ ಹೇರಿಕೆಯನ್ನ ವಿರೋಧಿಸುತ್ತೆದೇವೆ ಅಷ್ಟೇ.ಇವತ್ತು ಮೂರ್ಖ ಸರ್ಕಾರಗಳು ಕರ್ನಾಟಕ-ಕೇಂದ್ರ ಕಛೇರಿಗಳಲ್ಲೇ ಕನ್ನಡವನ್ನ ಕಾಣದಂತೆ ಮಾಡಿ ಹಿಂದಿ ಪ್ರತಿಷ್ಟಾಪನೆ ಮಾಡಿದರೆ ಅದು ಹೇರಿಕೆಯಲ್ಲವೇ? ಮತ್ತದನ್ನ ವಿರೋಧಿಸುವುದು ಬೇಡವೇ? ಇರಲಾರದೆ ಇರುವೆ ಬಿಟ್ಕೊಂಳ್ಳೋ ಕೆಲಸ ಮಾಡೋ ಬದಲು ಸಂವಿಧಾನದ ೮ನೆ ಪರಿಚ್ಹೆದದಲ್ಲಿರುವ ಎಲ್ಲ ಭಾಷೆಗಳಿಗೂ ಸಮಾನ ಹಕ್ಕನ್ನ ನೀಡಿ.ಕೇವಲ ಹಿಂದಿಯ ಮೇಲೆ ಸುರಿಯುತ್ತಿರುವ ಹಣವನ್ನ ಭಾರತದ ಎಲ್ಲ ಭಾಷೆಗಳ ಅಭಿವೃದ್ದಿಗೆ ನೀಡಿದರೆ ಒಳ್ಳೆಯದು. ಹಾಗೆ ಹಿಂದಿ ಹೇರಿಕೆಯನ್ನ ವಿರೋಧಿಸುತ್ತ ಇಂಗ್ಲಿಷ್ ಅನ್ನೇ ರಾಷ್ಟ್ರ ಭಾಷೆ ಮಾಡೋಣ ಅನ್ನುವ ಮಾತುಗಳು ಸಹ ಒಪ್ಪತಕ್ಕದ್ದಲ್ಲ.

ನಾವು ನೀವು ಎಷ್ಟೇ ಚರ್ಚಿಸಿದರು ಇದು ಸಾಧ್ಯವಿಲ್ಲ ಅನ್ನುವುದೇ ಸರ್ವಕಾಲಿಕ ಸತ್ಯ.ಬೇಕಿದ್ದರೆ ಕೇಂದ್ರ ಸರ್ಕಾರ ಇನ್ನ ನೂರು ವರುಷ ಹೀಗೆ ಪ್ರಯತ್ನಿಸುತ್ತಿರಲಿ.ಹೇರಿಕೆ ಹೆಚ್ಚಾದಂತೆ ವಿರೋಧವು ಹೆಚ್ಚೇ ಆಗುತ್ತದೆ.

ರಾಕೇಶ್, <<ಹಾಗೆ ಹಿಂದಿ ಹೇರಿಕೆಯನ್ನ ವಿರೋಧಿಸುತ್ತ ಇಂಗ್ಲಿಷ್ ಅನ್ನೇ ರಾಷ್ಟ್ರ ಭಾಷೆ ಮಾಡೋಣ ಅನ್ನುವ ಮಾತುಗಳು ಸಹ ಒಪ್ಪತಕ್ಕದ್ದಲ್ಲ.>> ಇದು ನನ್ನ ಮೇಲಿನ ಅನಿಸಿಕೆಗೆ ಉತ್ತರವಾಗಿ ಹೇಳಿದ್ದಾದರೆ, ನನ್ನ ಅನಿಸಿಕೆಯನ್ನು ನೀವು ತಪ್ಪಾಗಿ ಅರ್ಥೈಸಿಕೊಂಡಿರುವಿರಿ.

ಇಲ್ಲ ಪ್ರಿಯಾಂಕ್. ಇದು ನಿಮಗಲ್ಲ ಹೇಳಿದ್ದು,ಹಿಂದೆ ಸಂಪದದಲ್ಲಿ ಇದೆ ವಿಷಯದ ಚರ್ಚೆಯಾಗುವಾಗ ಆ ರೀತಿಯ ಕಮೆಂಟುಗಳನ್ನ ನೋಡಿದ್ದೇ. ಆ ಮನಸ್ಥಿತಿಯು ಒಳ್ಳೆಯದಲ್ಲ ಅಂತೇಳಲಷ್ಟೇ ಇಲ್ಲಿ ಬಳಸಿದ್ದೇನೆ.

<<ತಮಿಳನ್ನೇ ಉತ್ತರದವರಿಗೂ ಕಡ್ಡಾಯ ಮಾಡಿಬಿಟ್ಟರೆ ಹೇಗೆ ;) ?>> ಮೊದಲು ಉತ್ತರದವರು ತಮ್ಮ ಭಾಷೆಯನ್ನು ತಾವು ಸರಿಯಾಗಿ ಕಲಿಯಲಿ. ಆನಂತರ ಬೇರೆ ರಾಜ್ಯಗಳಲ್ಲಿ ಹಿಂದಿ ಸಾಮ್ರಾಜ್ಯ ವಿಸ್ತರಣೆಯಾಗಲಿ ಹಾಗೂ ಇತರೇ ಭಾಷೆಗಳನ್ನು ಕಲಿಯುವ ಉತ್ಸಾಹ ತೋರಲಿ. ರಾಜ್ಯವಾರು ಸಾಕ್ಷರತಾ ಪ್ರಮಾಣದ ವಿವರ ಇಲ್ಲಿದೆ ನೋಡಿ: http://en.wikipedia.... ತುಂಬಾ ಮಂದಿ ಉತ್ತರ ಭಾರತೀಯರಿಗೆ ಕರ್ಣಾಟಕದಲ್ಲಿ ಕನ್ನಡ, ಕೇರಳದಲ್ಲಿ (ಕ್ಷಮಿಸಿ ಕೇರಳಂ-ನಲ್ಲಿ) ಮಲೆಯಾಳಂ, ಆಂಧ್ರಪ್ರದೇಶದಲ್ಲಿ ತೆಲುಗು ಭಾಷೆಗಳಿವೆ ಎಂಬುದೇ ಗೊತ್ತಿರುವುದಿಲ್ಲ. ಆ ಮಟ್ಟಿಗಿನ ನಿರ್ಲಕ್ಷ್ಯ. ಪರಿಸ್ಥಿತಿ ಹೀಗಿರುವಾಗ ಇತರರಿಗೆ ಹಿಂದಿ ಕಲಿಸಲೇಬೇಕೆಂಬ ದುರಹಂಕಾರ ಏಕೆ ಇವರಿಗೆ?

ಪ್ರಶ್ನೆ ಯಾರು ಯಾರಿಗೆ ಯಾವ ಭಾಷೆ ಕಲಿಸಬೇಕು ಎಂದಲ್ಲ, ನಮ್ಮಿ ದೇಶಕ್ಕೆ ರಾಷ್ಟ್ರಬಾಷೆಯ ಆಗತ್ಯ ಇದೆಯೆ ಇಲ್ಲವೇ. ಆ ರಾಷ್ಟ್ರಬಾಷೆ ಹಿಂದಿಯೇ ಆಗಬೇಕೆಂದೇನು ಇಲ್ಲ

ನಿಜ ಮಂಜುನಾಥ್, ನಾನೂ ಗಮನಿಸಿದ ಹಾಗೆ ಬಹುತೇಕ ಉತ್ತರ ಭಾರತೀಯರಿಗೆ ದಕ್ಷಿಣದೆಡೆಗೆ ಅಸಡ್ಡೆಯೇ.ಬಹು ಪಾಲು ಜನರು ತಿಳಿದಿರುವುದು ದಕ್ಷಿಣದ ಭಾಷೆ ತಮಿಳು ಅಂತ! ಇಲ್ಲಿ ಬಹುತೇಕ ಮೂರನೇ ಭಾಷೆಯಾಗಿ ಸಂಸ್ಕೃತವನ್ನ ಕಲಿಸಲಾಗುತ್ತದೆ.ಆದರೆ ನಾನ್ ಕಂಡ ಯಾರೊಬ್ಬರು ಸಂಸ್ಕೃತದಲ್ಲಿ ಮಾತನಾಡಲು ಬರುತ್ತದ? ಅಂತ ಕೇಳಿದ್ರೆ,ಯಾಕ್ ಬರಬೇಕು ಹಿಂದಿ ಎಲ್ಲ ಕಡೆ ನಡೆಯುತ್ತಲ್ಲ ಅನ್ನೋವ್ರೆ.ಅಂದ್ರೆ ಹಿಂದಿ ಅನ್ನೋದು ನ್ಯಾಷನಲ್ ಉಳಿದವೆಲ್ಲ ಲೋಕಲ್ಲು ಅನ್ನೋ ಭೂತ ತಲೆ ಹೊಕ್ಕಿ ಕುಳಿತಿದೆ ಇವರಿಗೆ,ಅದೇ ಭೂತ ಇಲ್ಲಿಂದ ದಕ್ಷಿಣದಲ್ಲೂ ಆವಾಹನೆಯಾಗಿದೆ ಕೆಲವರ ಮೇಲೆ.

ಎರಡು ಕೈ ಸೇರಿದರಷ್ಟೇ ಚಪ್ಪಾಳೆ ಸಾಧ್ಯ ರಘು ಅವರೇ, ಭಾಷೆ-ಧರ್ಮದ ವಿಷಯಕ್ಕೆ ಬಂದಾಗ ಪ್ರಾಕ್ಟಿಕಲ್ ಆಗಿ ಯೋಚಿಸಿ ಅವರವರ ಆಚರಣೆಗಳಿಗೆ ಧಕ್ಕೆ ಬರದಂತೆ ಬಿಡುವುದೇ ಸೂಕ್ತ ಅಲ್ಲವೇ?,ಇನ್ನ ಭಾರತ ಈಗ ಇರುವಂತೆಯೇ ಇರಲಿದೆ.ರಾಷ್ಟ್ರ ಭಾಷೆಯಿಲ್ಲದೆಯೇ ಇಷ್ಟು ದಿನ ಬದುಕಿಲ್ಲವೇ ಹಾಗೆ ಇನ್ನು ಮುಂದೆಯು ಇದ್ದೆ ಇರುತ್ತದೆ.

ರಾಷ್ಟ್ರ ಬಾಷೆಯಿಂದ ಒಗಟ್ಟು ಮೂಡುವುದಿಲ್ಲವೇ, ಏಕೀಕರಣದ ಭಾವನೆ ಬರುವುದಿಲ್ಲವೇ .......?? ರಾಜ್ಯಗಳನ್ನು ಮೀರಿ ಭಾವಗಳು ಬೆಸೆಯುವುದಿಲ್ಲವೇ , ನೆರೆ ರಾಷ್ಟ್ರಕ್ಕೆ ಸಂಪರ್ಕ ಕಲ್ಪಿಸಲು ಪ್ರಯತ್ನ ಪಡುವ ನಾವು ರಾಜ್ಯಗಳ ಮಧ್ಯೆ ಬಾಷೆಯಿಂದಾಗಿ ಅಂತರವೇ .....ಹೇಳಿ ರಾಕೇಶ್ ರವರೆ

ರಘು, "ನಾವೆಲ್ಲರೂ ಸಮಾನರು, ವಿವಿಧತೆಯೇ ನಮ್ಮ ವಿಶೇಷತೆ" ಎಂದು ಹೇಳುವ ಮೂಲಕ ಒಗ್ಗಟ್ಟು ಸಾಧಿಸಲಾಗುವುದಿಲ್ಲವೆಂದು ನಂಬಿದ್ದೀರಾ? ಎರಡನೇಯದಾಗಿ, "ನಮ್ಮಲ್ಲಿ ಎಲ್ಲಾ ಭಾಷೆಗಳಿದ್ದರೂ ಒಂದು ಭಾಷೆ ಮೇಲು. ನೀವು ದೇಶದ ಪ್ರಜೆಯಾಗಿರಬೇಕೆಂದರೆ, ಈ ಒಂದು ಭಾಷೆ ಕಲಿಯಲೇಬೇಕು" ಎಂದು ಹೇಳುವ ಮೂಲಕ ಉಳಿದ ಭಾಷಿಕರಲ್ಲಿ ಕೀಳರಿಮೆ ತುಂಬುವುದು, ಒಗ್ಗಟ್ಟು ಸಾಧಿಸುವಲ್ಲಿ ಪರಿಣಾಮಕಾರಿಯಾಗುವುದಿಲ್ಲ. ಬದಲಾಗಿ ಒಗ್ಗಟ್ಟಿಗೇ ಮಾರಕ. ನೀವು ಈ ಬ್ಲಾಗನ್ನು ಖಂಡಿತ ಓದಿ: http://enguru.blogsp...

it is also true that most of the north indians dont know that there r 4 states in south and also true with most of the south indians ..Ignorance is individual ..can not be generalized.. common lang in south is english and hindi in north.. ಹಿಂದಿ ಬಹಳ ಸರಳ ಭಾಷೆ..ಅದನ್ನು ಕಲೆಯುವುದರಿಂದ ಬಹಳ ಲಾಭ..ಉತ್ತರ ಭಾರತ ದ ಎಲ್ಲ ಬೇರೆ ಭಾಷೆಗಳ ಪರಿಚಯವೂ ಆದ ಹಾಗೇ.. ಹಿಂದಿ ಸಿನೆಮಾಗಳ ಕಾರಣ ಹಿಂದಿ ಮಾತನಾಡಲು ಕಲೆಯುವುದು ಇನ್ನೂ ಸರಳವಾಗುತ್ತದೆ..:) .lets all learn Hindi and accept it as national language..

ಸುಜಾತ ಅವರೇ, ಹಿಂದಿ ಒಪ್ಪಿಕೊಳ್ಳುವುದು ನಮ್ಮ ಭಾಷೆಗೆ ಎಳ್ಳು ನೀರು ಬಿಟ್ಟಂತೆಯೇ. ಹೇಗೆ ಅಂತ ಈ ಬ್ಲಾಗಿನಲ್ಲಿ ವಿವರಿಸಲಾಗಿದೆ, ನೋಡಿ: http://enguru.blogsp...

ಯಾರ ಬ್ಲಾಗ್ ಓದದೆ ವಿಚಾರ ಮಾಡಿರಿ.. ಇಂಗ್ಲಿಷ್ ನಂತರ ಹಿಂದಿ ನಂತರ ಕನ್ನಡ....3 languages in Karnataka. ಕನ್ನಡ ದಿಂದ ಕನ್ನಡಿಗರಾಗಿ, ಹಿಂದಿ ಯಿಂದ ಭಾರತೀಯರಾಗಿ ಇಂಗ್ಲಿಷ್ ನಿಂದ ವಿಶ್ವ ಮಾನವರಾಗಿ ಜೀವಿಸೋಣ..

ಹಿಂದಿಯನ್ನ ಕಲಿಸಬೇಡಿ ಅಂತ ಯಾರು ಹೇಳಿಲ್ಲ ಸುಜಾತ ಅವರೇ,ರಾಷ್ಟ್ರ ಭಾಷೆ ಅನ್ನೋ ಸುಳ್ಳು ಹೇಳಿ,ಒತ್ತಾಯ ಪೂರ್ವಕವಾಗಿ ಕಲಿಸಬೇಡಿ,ರಾಜ್ಯದ ಕಛೇರಿಗಳಲ್ಲಿ ಕನ್ನಡನ ಪಕ್ಕಕ್ಕಿಟ್ಟು ಹಿಂದಿ ಬಳಸಿ ಕನ್ನಡ ಕಲಿತು ಪ್ರಯೋಜನವಿಲ್ಲ ಅನ್ನೋ ಕೀಳರಿಮೆ ಬೆಳೆಸಬೇಡಿ ಅಂತಷ್ಟೇ ಹೇಳ್ತಾ ಇರೋದು. ಇನ್ನ ನಿಮ್ಮ ಭಾಷೆ priority ನ ನಾನು ಹೀಗೆ ಬರೀತೀನಿ. ಕನ್ನಡ,ಇಂಗ್ಲೀಷ್,ಹಿಂದಿ. ಇಂಗ್ಲೀಷ್ - ಅನ್ನಕ್ಕೆ ಕನ್ನಡ - ಜೀವನಕ್ಕೆ ಹಿಂದಿ - ನಮ್ಮ ದೇಶದ ಭಾಷೆ ಅನ್ನೋ ಪ್ರೀತಿಗೆ.(ಭಾರತೀಯ ಅನ್ನೋ ಪ್ರೀತಿಗಲ್ಲ,ಯಾಕೆ ಅಂದ್ರೆ ಅದನ್ನ ಕಲಿದ್ರೆ ಇದ್ರೂ ನಾನೂ ಭಾರತೀಯನೇ)

ಇವತ್ತಿನ ಮಾರುಕಟ್ಟೆ ಮತ್ತು ವ್ಯಾಪಾರ ವಹಿವಾಟುಗಳನ್ನು ಮನದಲ್ಲಿಟ್ಟುಕೊಂಡು ಹೇಳಿ ಹಿಂದಿ ಅವಶ್ಯವಲ್ಲವೆ, ದಕ್ಷಿಣ ಭಾರತವನ್ನು ಬಿಟ್ಟು ಬೇರೆಲ್ಲ ಕಡೆ ಒಬ್ಬ ಸಾಮಾನ್ಯ ವ್ಯಾಪಾರಸ್ತ ಹಿಂದಿಯಲ್ಲಿ ವ್ಯವಹರಿಸಬಹುದು , ಅದೇ ಒಬ್ಬ ಸಾಮಾನ್ಯ ವ್ಯಾಪಾರಸ್ಥ ಓರಿಯ , ಬೆಂಗಾಲಿ , ಅಸ್ಸಾಮಿ ಎಲ್ಲಾ ಬಾಷೆಗಳನ್ನು ಕಲಿಯಬೇಕೆ. ಸರ್ಕಾರ ನಮ್ಮ ಮೇಲೆ ಹೇರ ಬಯಸುತ್ತಿರುವುದನ್ನು ಒತ್ತಟಿಗಿತ್ತು ಯೋಚಿಸಿ ನೋಡಿ

ವ್ಯಾಪಾರಗಳಿಗೆ ಲಾಭ ಬೇಕಾದರೆ ಸ್ಥಳಿಯರ ಭಾಷೆಯಲ್ಲೇ ಸೇವೆ ಕೊಡುತ್ತವೆ.ಸ್ಥಳಿಯರಿಗೆ ಉದ್ಯೋಗವು ದೊರೆಯುತ್ತದೆ.ಹಿಂದಿ ಅದ್ಹೇಗೆ ವ್ಯಾಪಾರಕ್ಕೆ ಮುಖ್ಯ? ಉದಹರಣೆಗೆ ಬೆಂಗಳೂರಿನ ರೇಡಿಯೋ ವಾಹಿನಿಗಳನ್ನೇ ತೆಗೆದುಕೊಳ್ಳಿ.ಮೋಡ ಮೊದಲು ಹೈ-ಫೈ ಅನ್ನೋ ಗುಂಗಿಗೆ ಬಿದ್ದು ಕನ್ನಡ ಹಾಡುಗಳನ್ನ ನಾಮಕಾವಸ್ತೆಗೆ ಬಳಸಿ ಹಿಂದಿ ಹಾಡುಗಳನ್ನೇ ಹೆಚ್ಚಾಗಿ ಬಳಸುತಿದ್ದರು.ಕನ್ನಡ ಬಳಸಿದರೆ ಏನು ಲಾಭ ಅಂತ ಯಾವಾಗ ಅರ್ಥವಾಯಿತೋ ಆಮೇಲೆ ೨೪ ಗಂಟೆ ಕನ್ನಡದ ಹಾಡುಗಳೇ ಬರುತ್ತಿವೆ.ಬೆಂಗಳೂರಿನಲ್ಲಿರುವ ೧೦ ಚಾನೆಲ್ಗಳಲ್ಲಿ ೯ ಕನ್ನಡ ಹಾಡುಗಳನ್ನೇ ಪ್ರಸಾರ ಮಾಡುತ್ತವೆ.

ರಘು ಅವರೇ, ವ್ಯಾಪಾರಸ್ತನಾದವನು ತಾನು ಎಲ್ಲಿ ವ್ಯಾಪಾರ ಮಾಡ್ತಾನೋ ಅಲ್ಲಿಯ ಭಾಷೆ ಕಲಿಯಲೇಬೇಕು, ಕಲೀತಾರೆ ಕೂಡ. ಉದಾಹರಣೆಗೆ, ತಮಿಳ್ನಾಡಿಗೆ ವ್ಯಾಪಾರಕ್ಕೆ ಹೋದ ಮಾರ್ವಾಡಿ ತಮಿಳು ಕಲಿಯುತ್ತಾನೆ. ಒರಿಸ್ಸಾಕ್ಕೆ ವ್ಯಾಪಾರಕ್ಕೆ ಹೋದ ಗುಜರಾತಿ ಒರಿಯಾ ಕಲಿಯುತ್ತಾನೆ. ಹಿಂದಿ ಕಲಿಯುವುದು ತನ್ನ ವ್ಯಾಪಾರಕ್ಕೆ ಅನುಕೂಲ ಅಂತನ್ನಿಸಿದವನು ಅವನಾಸೆಯಂತೆ ಕಲಿಯಲಿ - ಯಾವುದೇ ತಡೆಯಿಲ್ಲ. ಸರ್ಕಾರವು ಬಲವಂತವಾಗಿ ಹೇರುವುದು ಬೇಕಾಗಿಲ್ಲ. ಸರ್ಕಾರಕ್ಕೆ ಎಲ್ಲಾ ಭಾಷೆಗಳೂ ಒಂದೇ ಆಗಿರಬೇಕಲ್ಲವೇ?

ಇಲ್ಲಿಂದ ಒರಿಸ್ಸಾ ದವರ ಜೊತೆ ಒರಿಯದಲ್ಲಿ ವ್ಯವಹರಿಸಲೇ , ಇಲ್ಲಿಂದ ಬೆಂಗಾಲಿಗಳ ಜೊತೆ ಬೆಂಗಾಲಿಯಲ್ಲಿ ವ್ಯವಹರಿಸಲೇ , ಇಲ್ಲಿಂದ ಅಸ್ಸಾಂ ನವರ ಜೊತೆ ಅಸ್ಸಾಮಿಯಲ್ಲಿ ವ್ಯವಹರಿಸಲೇ

ರಘು, ಇಲ್ಲಿಂದಾ ಒರಿಸ್ಸಾದವರ ಜೊತೆ ವ್ಯವಹರಿಸುವಂತಹ ವ್ಯಾಪಾರ ಯಾವುದು ಅಂತ ತಿಳಿಯಲಿಲ್ಲ. ನಾನು ಹೇಳಿದ್ದು, ಅಲ್ಲಿ ಹೋಗಿದ್ದುಕೊಂಡು ಮಾಡುವ ವ್ಯಾಪಾರದ ಬಗ್ಗೆ. ನೀವು ಹೇಳಿದಂತಹ ವ್ಯಾಪಾರ ಇದ್ದರೂ, ಆ ರೀತಿಯ ವ್ಯಾಪಾರವನ್ನು ನಾಡಿನ ಜನತೆಯೆಲ್ಲಾ ಮಾಡುವುದಿಲ್ಲವಲ್ಲ. ಎರಡನೇಯದಾಗಿ, ಹಿಂದಿ ಬಲ್ಲದೇ ಇರುವವರೊಡನೇ ವ್ಯಾಪಾರ ಸಾಧ್ಯವೇ ಇಲ್ಲವೆಂದು ನೀವು ನಂಬಿರುವಂತಿದೆ. ಹಾಗಿದ್ದರೆ, ಬೇರೆ ದೇಶಗಳ ಜೊತೆ ನಮ್ಮ ವ್ಯಾಪಾರ ಹೇಗೆ ನಡೆಯುತ್ತಿದೆ ಯೋಚಿಸಿದ್ದೀರಾ? ಮೂರನೆಯದಾಗಿ, ಕಲಿಯಲು ಇಚ್ಚೆಯಿರುವವರನ್ನು ತಡೆಯುವುದರಲ್ಲಿ ಅರ್ಥವಿಲ್ಲ.. ಹಾಗೆಯೇ, ಹೇರಿಕೆ ಮಾಡುವುದರಲ್ಲಿ ಅರ್ಥವಿಲ್ಲ. ಸರ್ಕಾರಕ್ಕೆ ಹೇರಿಕೆಯ ಬಾಧಕಗಳು ಅರ್ಥವಾದಂತಿಲ್ಲ.

ಅದಕ್ಕೆ ನಾನು ಹೇಳುವುದು ದೇಶದ ಎಲ್ಲಾ ಜನರು ಮಾತಾಡುವ ಸಮಾನ ಬಾಷೆ ಬೇಕು ಅಂತ, ಹಿಂದಿಯೇ ಬೇಕು ಅಂತ ನಾನೆಲ್ಲೂ ಹೇಳಿಲ್ಲ, ನನ್ನ ಸಮರ್ಥನೆ ಒಂದು ರಾಷ್ಟ್ರೀಯ ಬಾಷೆಯ ಅಗತ್ಯ ಇದೆ. ವ್ಯಾಪಾರ ಯಾವುದು ಅಂತ ಕೇಳಿದರೆ, ಕೊಡಲು ಬೇಕಾದಷ್ಟು ಉದಾಹರಣೆಗಳಿವೆ , ಆದರೆ ಪ್ರತಿಕ್ರಿಯೆಯ ಜಾಗ ಸಾಲುವುದಿಲ್ಲವೇನೋ, ಎಲ್ಲಿದ್ದಿರ ಸ್ವಾಮಿ ಸ್ವಲ್ಪ ಎಚ್ಚರವಾಗಿ ಪ್ರಪಂಚ ಬಹಳ ಮುಂದೆಹೋಗಿದೆ

>>ಎಲ್ಲಿದ್ದಿರ ಸ್ವಾಮಿ ಸ್ವಲ್ಪ ಎಚ್ಚರವಾಗಿ ಪ್ರಪಂಚ ಬಹಳ ಮುಂದೆಹೋಗಿದೆ ನೀವು ಬೇರೆಯವರಿಗೆ ಬಹಳ ಕರೆ ಕೊಡ್ತಿರಪ್ಪ ;) ಪ್ರಪಂಚ ಹಿಂದಿ ಹಿಡ್ಕೊಂಡು ಮುಂದೆ ಹೋಗಿದೆ ಅಲ್ವಾ?,ಯುರೋಪ್ ಒಕ್ಕೂಟ ಗೊತ್ತ ನಿಮ್ಗೆ? ಅವ್ರು ಇದೆ ಪ್ರಪಂಚದಲ್ಲೇ ಇರೋದು ಅವರು ಯಾವುದೇ ರಾಷ್ಟ್ರ ಭಾಷೆಯನ್ನ ಹೊಂದಿಲ್ಲ,ಆದರೆ ಅಭಿವೃದ್ದಿ ಹೊಂದಿದ್ದಾರೆ! ರಾಷ್ಟ್ರ ಭಾಷೆಯಿಲ್ಲದೆಯೇ ನಮ್ಮ ದೇಶ ೬೩ ವರ್ಷಗಳನ್ನ ಪೂರೈಸಿದೆ,ಇನ್ನ ಮುಂದೆಯೂ ಹೀಗೆಯೇ ನಡೆಯಲಿದೆ.ಹಾಗಿರುವಾಗ ಸುಮ್ಮನೆ ಏಕೆ ರಾಷ್ಟ್ರ ಭಾಷೆ ಬೇಕು ಅಂತ ಬೊಬ್ಬಿಡಬೇಕು?

>>>>ಅದೇ ಒಬ್ಬ ಸಾಮಾನ್ಯ ವ್ಯಾಪಾರಸ್ಥ ಓರಿಯ , ಬೆಂಗಾಲಿ , ಅಸ್ಸಾಮಿ ಎಲ್ಲಾ ಬಾಷೆಗಳನ್ನು ಕಲಿಯಬೇಕೆ. ಸರ್ಕಾರ ನಮ್ಮ ಮೇಲೆ ಹೇರ ಬಯಸುತ್ತಿರುವುದನ್ನು ಒತ್ತಟಿಗಿತ್ತು ಯೋಚಿಸಿ ನೋಡಿ>>>> ರಘು, ಅದೇ ಹೇಳುತ್ತಿರುವುದು, ಯಾರಿಗೆ ಅಗತ್ಯವಿದೆಯೋ ಅವರು ಧಾರಾಳವಾಗಿ ಕಲಿತುಕೊಳ್ಳಲಿ. ಅದು ಬಿಟ್ಟು ಶಿಕ್ಷಣದಲ್ಲಿ ಕಡ್ಡಾಯ ಮಾಡಿ, ರಾಷ್ಟ್ರಭಾಷೆ ಅಂತ ಸುಳ್ಳು ಹೇಳಿ, ಅದನ್ನು ಕಲಿತರೆ ಮಾತ್ರ ನೀನು ಭಾರತೀಯನಾಗುತ್ತಿಯ ಅಂತ ನಂಬಿಸಿ, ಕೋಟ್ಯಂತರ ರೂಪಾಯಿ ತೆರಿಗೆ ಹಣ ಖರ್ಚು ಮಾಡಿ ಪ್ರಚಾರ ಮಾಡಿ ಹೇರುವುದೇಕೆ? ೧೦೦ ಜನಕ್ಕೆ ಬೇಕಾಗುವುದನ್ನು ಕೋಟಿ ಕೋಟಿ ಜನರ ಮೇಲೆ ಹೊರಿಸುವುದೇಕೆ?

ಸುಜಾತ ಅವರೇ, ಕನ್ನಡಿಗರು ಬಹುತೇಕ ಎಲ್ಲರಿಗೂ ಹಿಂದಿ ಬರುತ್ತದೆ ಎಂಬಂತಾದರೆ ಆಗುವ ಪರಿಣಾಮಗಳ ಬಗ್ಗೆ ಇಲ್ಲಿ ಹೇಳುತ್ತೇನೆ. ನೀವೂ ಯೋಚಿಸಿ ನೋಡಿ. ೧. ದಿನಸಿ ಅಂಗಡಿಗಳು, ಹೋಟಲ್‍ಗಳು, ಸೂಪರ್ ಮಾರ್ಕೆಟ್‍ಗಳು, ಶಾಪಿಂಗ್ ಮಾಲ್‍ಗಳು ಇಲ್ಲೆಲ್ಲಾ ಕನ್ನಡ ಬರದಿದ್ದರೂ ಪರವಾಗಿಲ್ಲ, ಹಿಂದಿ ಬರುವವರನ್ನೇ ಕೆಲಸಕ್ಕೆ ನೇಮಿಸಿಕೊಳ್ಳಲಾಗುವುದು. ೨. ಕರ್ನಾಟಕದಲ್ಲಿ ಸಾರ್ವಜನಿಕೆ ಸ್ಥಳಗಳಲ್ಲೆಲ್ಲಾ ಹಿಂದಿಯೇ ಬಳಕೆಯಾಗುತ್ತದೆ. ೩. ಮನೆಯಿಂದಾ ಹೊರಗಿಳಿದರೆ ಹಿಂದಿಯೇ ಮಾತನಾಡಬೇಕು ಎಂಬಂತಹ ಸ್ಥಿತಿ ಉಂಟಾಗುತ್ತದೆ. ೪. ಮನೆಯ ಒಳಗೂ, ಉದ್ದಿನಬೇಳೆ, ಅಕ್ಕಿ ಹಿಟ್ಟು ಪದಗಳೆಲ್ಲಾ ಮಾಯವಾಗಿ ಹಿಂದಿ ಪದಗಳು ಬಂದು ಕೂರುತ್ತವೆ. ೫. ಯಾವುದೇ ಬ್ಯಾಂಕು, ರೈಲ್ವೇ ಇಲಾಖೆ, ಇಂತಲ್ಲೆಲ್ಲಾ ಕೆಲಸ ಮಾಡಿಸಿಕೊಳ್ಳಬೇಕಾದರೆ ಹಿಂದಿ ಬರಬೇಕು ಎಂಬಂತಹ ಸ್ಥಿತಿ ಬಂದೊದಗುತ್ತದೆ. ಇದೆಲ್ಲಾ ನಮಗೆ ಬೇಕಾ? ಯೋಚಿಸಿ ನೋಡಿ. ಕನ್ನಡಿಗರು ಕನ್ನಡದಿಂದನೇ ಭಾರತೀಯರಾಗಿದ್ದಾರೆ. ಕನ್ನಡವು ಭಾರತೀಯ ಭಾಷೆಗಳಲ್ಲೊಂದು ಅನ್ನೋದು ನೀವು ಮರೆತಿರುವಂತೆ ಕಾಣುತ್ತದೆ. "ಹಿಂದಿಯಿಂದ ಮಾತ್ರ ಭಾರತೀಯ" ಎಂಬ ಭ್ರಮೆಯಿಂದ ಹೊರಗೆ ಬನ್ನಿ.

ಇಲ್ಲಿ ಭಾಷೆ ಯನ್ನು ಮನಸ್ಸಿನ ಭಾವನೆ , ಭಾರತೀಯತೆ ಗೆ ಉಪಯೋಗ ಮಾಡಲು ಬರದು.. ಭಾಷೆ ಯನ್ನು ನಡಾವಳಿ ,ಜೀವನ ಚಲನೆ ಗಾಗಿ ... ಹಿಂದಿ ಭಾಷಿಕರು ಕನ್ನಡ ಅಥವ ತೆಲುಗು/ತಮಿಳ್ ಭಾಷಿಕರಿಗಿಂತ ಹೆಚ್ಚು ಇದ್ದರೆ..ಮತ್ತು ಹಿಂದಿ ಮತ್ತು ಅದಕ್ಕೆ ಹೋಲುವ ಭಾಷೆ ಯಾ ಜಗದ ವಿಸ್ತಾರವು ಹೆಚ್ಚು...ಕನ್ನಡ ಕ್ಕಿಂತ.. ನಾನು ಹೇಳುವುದು ಏನು ಅಂದ್ರೆ..ಮೂರು ಭಾಷೆ ಕಲಿಯುವುದು..ಮಕ್ಕಳಿಗೆ ತೊಂದರೆ ಆಗುವುದಿಲ್ಲ..ದೊಡ್ಡವರಿಗೆ ಆಗುತ್ತದೆ ಏಕೆಂದರೆ 'ಅಹಂ ' ಕಾರಣ.. let learning be a revolution and ignite the minds..

ಇಚ್ಚೆಯಿದ್ದೋರು ಸ್ಪಾನಿಶ್, ಮಾಂಡರಿನ್ ಕೂಡಾ ಕಲಿಯಲಿ. ಅವುಗಳ ಭಾಷಿಕರೂ ಹೆಚ್ಚು. ಇಚ್ಚೆಯಿದ್ದವರ ಕಲಿಕೆಗೆ ಯಾವುದೇ ಅಡ್ಡಿಯಿಲ್ಲ. ಆದರೆ, ಸರ್ಕಾರವು ಪ್ರಯತ್ನಪೂರ್ವಕವಾಗಿ ಯಾವುದೇ ಭಾಷೆಯನ್ನು ಹೇರಿಕೆ ಮಾಡುವುದು ಸಲ್ಲದು.

ಸುಜಾತ, >>ಮೂರು ಭಾಷೆ ಕಲಿಯುವುದು..ಮಕ್ಕಳಿಗೆ ತೊಂದರೆ ಆಗುವುದಿಲ್ಲ..ದೊಡ್ಡವರಿಗೆ ಆಗುತ್ತದೆ ಏಕೆಂದರೆ 'ಅಹಂ ' ಕಾರಣ.. ಹಾಗೆ ಮುಗ್ಧ ಮಕ್ಕಳಿಗೆ ಸುಳ್ಳು ಸುಳ್ಳೇ 'ರಾಷ್ಟ್ರ ಭಾಷೆ' ಅಂತ ಕಲಿಸೋದು ಗೊತ್ತಾಗೋದಿಲ್ಲ, ದೊಡ್ಡವರಿಗೆ ಗೊತ್ತಾದ್ರೂ ಹೇಳೋದಿಲ್ಲ.ಅಲ್ವಾ? ಸತ್ಯ ಹೇಳಿ ಕಲಿಸಲಿ.ಯಾರ್ ಬೇಡ ಅಂತಾರೆ.ಅದು ಕಲಿಕೆಯ ಮಟ್ಟಕ್ಕೆ ಸೀಮಿತವಾಗಲಿ.ಕೇಂದ್ರ ಸರ್ಕಾರದ ಕಡತಗಳು,ಕಛೇರಿಗಳು ಆಯಾ ರಾಜ್ಯದ ಭಾಷೆಯೊಂದಿಗೆ ಇಂಗ್ಲೀಷಿನಲ್ಲಿ ನಡೆಯಲಿ.ಕೇಂದ್ರ ಸರ್ಕಾರ 'ಹಿಂದಿ'ಗೆ ಮಾತ್ರ ನೀಡಿರೋ ಸ್ಥಾನ-ಮಾನವನ್ನ ಎಲ್ಲ ರಾಜ್ಯದ ಆಡಳಿತ ಭಾಷೆಗಳಿಗೂ ನೀಡಲಿ.ಅನ್ನೋದು ನನ್ನ ಆಶಯ.

>>>>ಕನ್ನಡ ದಿಂದ ಕನ್ನಡಿಗರಾಗಿ, ಹಿಂದಿ ಯಿಂದ ಭಾರತೀಯರಾಗಿ ಇಂಗ್ಲಿಷ್ ನಿಂದ ವಿಶ್ವ ಮಾನವರಾಗಿ ಜೀವಿಸೋಣ>>>> @ಸುಜಾತಾ ಕನ್ನಡದಿಂದ ಭಾರತೀಯರಾಗಲಿಕ್ಕಾಗಲ್ವಾ?! ಹಿಂದಿ ಕಲಿತವರು ಮಾತ್ರ ಭಾರತೀಯರಾ! ಇಲ್ಲಿ ರಾಷ್ಟ್ರೀಯತೆಯ ಪ್ರಶ್ನೆ ಬರಲ್ಲ. ಮಾತು ಬರದೇ ಇದ್ದವನೂ ಕೂಡ ಭಾರತೀಯನೇ ಆಗಿರುತ್ತಾನೆ. ಎಲ್ಲಾ ಭಾಷೆಯವರೂ ಭಾರತೀಯರೆ. ಹಿಂದಿ ಕಲಿಯಲು ಇಷ್ಟವಿದ್ದವರು ಕಲಿಯಲಿ, ಬೇಡ ಅಂದೋರ್ಯಾರು. ಆದರೆ ಅದನ್ನು ಶಾಲೆಯಲ್ಲಿ ಕಡ್ಡಾಯ ಮಾಡಿರುವುದು ಮತ್ತು ಅದನ್ನು ಎಲ್ಲಾ ಕಡೆ ಹೇರುತ್ತಿರುವುದು ಮಾತ್ರ ತಪ್ಪು ಅಂತ ಇಲ್ಲಿ ಹೇಳುತ್ತಿರೋದು.

ಪ್ರಸ್ತುತ ಪರಿಸ್ಥಿತಿಯನ್ನು ಬಿ೦ಬಿಸುವ ವಿಚಾರ ಪೂರ್ಣ ಲೇಖನ ರಾಕೇಶ್. ತಮಿಳರ ಭಾಷಾಭಿಮಾನವನ್ನು ಮೆಚ್ಚಬೇಕು, ಆದರೂ "ವಿವಿಧತೆಯಲ್ಲಿ ಏಕತೆ" ಸಾಧಿಸಬೇಕಾದರೆ ಒ೦ದು ರಾಷ್ಟ್ರೀಯ ಭಾಷೆಯ ಅವಶ್ಯಕತೆಯ೦ತೂ ಇದೆ.

ಇಂಗ್ಲಿಷ್ ಭಾಷೆಗೆ ಅನ್ನ ಹುಟ್ಟಿಸುವ ಶಕ್ತಿಯಿದೆ. ಹಾಗಾಗಿ, ಎಲ್ಲೆಡೆ ಜನರು ಇಂಗ್ಲಿಷ್ ಕಲಿಯುತ್ತಿದ್ದಾರೆ. ಇಂಗ್ಲಿಷ್ ಭಾಷೆ ಇತರೆ ದೇಶಗಳಲ್ಲೂ ಬಳಸಬಹುದಾದ ಭಾಷೆಯಾಗಿದೆ. ಹಾಗಿರುವಾಗ, ಇಂಗ್ಲಿಷ್‍ಅನ್ನು ಬೇರೆ ರಾಜ್ಯಕ್ಕೆ ಹೋದಾಗಲೂ ಬಳಸಬಹುದು. ನೀವು ಹೇಳಿದಂತೆ ಏಕತೆ ಸಾಧಿಸಲು ಎಲ್ಲರೂ ಬಲ್ಲ ಒಂದು ಭಾಷೆಯ ಅಗತ್ಯವಿದ್ದದ್ದೇ ಆದರೆ, ಅದು ಇಂಗ್ಲಿಷ್‍ನಿಂದಾಗಬಹುದು. ಕೆಲವು ರಾಜ್ಯದ ಮಕ್ಕಳಿಗೆ ಮೂರು ಭಾಷೆ ಕಲಿಯುವ ಹೊರೆ ಇಂಗ್ಲಿಷ್‍ಅನ್ನು ಲಿಂಕ್ ಲಾಂಗ್ವೇಜ್ ಅಂತ ಒಪ್ಪುವುದರಿಂದ ತಪ್ಪಿದಂತಾಗುತ್ತದೆ.

>>ಆದರೂ "ವಿವಿಧತೆಯಲ್ಲಿ ಏಕತೆ" ಸಾಧಿಸಬೇಕಾದರೆ ಒ೦ದು ರಾಷ್ಟ್ರೀಯ ಭಾಷೆಯ ಅವಶ್ಯಕತೆಯ೦ತೂ ಇದೆ. ಅದೇ ಕಷ್ಟ ಸಾಧ್ಯ,ಒಂದು ವೇಳೆ ಕನ್ನಡಿಗರು ಇದನ್ನ ಒಪ್ಪಿದರೂ ಎಂದಿಗೂ ತಮಿಳರು ಇದನ್ನ ಒಪ್ಪಲು ಸಾಧ್ಯವೇ ಇಲ್ಲ.ಅದನ್ನೇ ನಾನು ಲೇಖನದಲ್ಲೋ ಹೇಳಿದ್ದೇನೆ 'ಏಕತೆ' ಮೂಡಿಸುವ ಭ್ರಮೆಯಲ್ಲಿ 'ವೈವಿದ್ಯತೆ'ಯನ್ನು ನಾಶ ಮಾಡಿದರೆ,ಕಡೆಗೆ ಏಕತೆಯು ಇರುವುದಿಲ್ಲ.ಹಾಗೆ ನೋಡಹೋದರೆ ಭಾರತದಲ್ಲಿ ಸಣ್ಣ ಪುಟ್ಟ ವಿಷಯ ಬಿಟ್ಟರೆ ಏಕತೆಗೆ ಎಂದು ಭಂಗ ಬಂದಿಲ್ಲ.ಮೇಲೆ ರಘು ಅವರಿಗೆ ಕೊಟ್ಟ ಪ್ರತಿಕ್ರಿಯೇಯನ್ನೊಮ್ಮೆ ನೋಡಿ.

ನಾನು ಒಪ್ಪಿದರೆ ಓಕೆ ಅನ್ನುವ ಆಗಿದ್ದರೆ ಭಾರತದ ಯಾವುದೇ ಭಾಷೆಯಾದರೂ ನಂಗೆ ಒಪ್ಪಿಗೆಯೇ.ಆದರೆ ಅದರಿಂದ ಇನ್ನೊಂದು ಭಾಷೆಗೆ,ಭಾಷೆಯ ಜನರಿಗೆ ಧಕ್ಕೆಯಾಗದಿದ್ದರೆ ಮಾತ್ರ.ಹಲವು ಭಾಷೆಗಳನ್ನ ಕಲಿಯುವುದು ನನ್ನ ಆಸಕ್ತಿಗಳಲ್ಲೊಂದು.ನಾನು ಯಾವುದೇ ಭಾಷಾ ವಿರೋಧಿಯಲ್ಲ.ನಿಮಗೆ ಗೊತ್ತಿರಲಿ ಅಂತ ಹೇಳುತಿದ್ದೇನೆ ನನಗೆ ೬ ಭಾಷೆಗಳು ಬರುತ್ತೆ :)

ಯಾವುದು? ಇನ್ನೊಂದು ಭಾಷೆಗೆ ಧಕ್ಕೆ ಬಾರದಿರಲಿ ಅಂದಿದ್ದು ಅಡ್ಡ ಗೋಡೆಯ ಮೇಲೆ ದೀಪವಿಡುವ ಹೇಳಿಕೆಯೇ? ಅಥವಾ ನಾನೊಬ್ಬ ಒಪ್ಪಿದರೆ ಎಲ್ಲ ಸರಿ ಹೋಗುತ್ತದೆ ಅನ್ನುವುದೇ?

<<ಇನ್ನೊಂದು ಭಾಷೆಗೆ,ಭಾಷೆಯ ಜನರಿಗೆ ಧಕ್ಕೆಯಾಗದಿದ್ದರೆ ಮಾತ್ರ>> ಹೌದು ಉತ್ತದರದಲ್ಲಿ ನಿಶ್ಚಿತತೆ ಇಲ್ಲ ಬರೀ ಬಾಧಕಗಳನ್ನೇ ಹೇಳಿದರೆ ಹೇಗೆ , ಸಾಧಕಗಳನ್ನು ಸಹ ಯೋಚಿಸಿ

ರಾಕೇಶ್ ಶೆಟ್ಟರೆ, ನಿಮ್ಮ ಸಿಗ್ನೇಚರ್ ತೆಲುಗು ಲಿಪಿಯಲ್ಲಿ ಏಕೋ ಸರಿ ಇಲ್ಲ ಅನ್ನಿಸ್ತಿದೆ - ರಾಕೇಶ್ ಶೆಟ್ಟಿ ಅಂತ ಬರೆಯುವ ಬದಲು ರಾಕೇಶ್ ಶೆಟ್‍ಟಿ ಅಂತ ಆಗಿದೆ. ಸರಿ ಮಾಡ್ಬಿಡಿ :)

Pages