ಗಣೇಶ ಶರಣಂ..ಶರಣಂ ಗಣೇಶ

To prevent automated spam submissions leave this field empty.

ಗಣೇಶ ಹಬ್ಬ ಎಂದಾಗ ನನಗೆ ನೆನಪಾಗೋದು ಮೈಸೂರಿನಲ್ಲಿ ಮನೆ, ಮನೆಗೂ ತಿರುಗಿ "ರೀ ಗಣೇಶನ್ನ ಇಟ್ಟಿದೀರಾ", ಕಡ್ಲೆಪುರಿ, ಕೋಡುಬಳೆ, ಸೌತೆಕಾಯಿ, ಅಹಾಅ... ಹೊಸಬಟ್ಟೆ ಧರಿಸಿ ಮನೆ, ಮನೆ ತಿರುಗಿ ಮೆರೆಯೋದು, ಸಿಗೋ ತಿನಿಸುಗಳನ್ನು ಎಗ್ಗು ತಗ್ಗಿಲ್ಲದೆ ಮುಕ್ಕೋದು ಧ್ಯೇಯವಾಗಿತ್ತು.ಈಗಿನಂತೆ ಟಿಶ್ಯೂ ಇರಲಿಲ್ಲ. ಉಂಡೆಗಳು. ಫ್ರಾಕ್ ಮಲ್ಟಿ ಪರ್ಪಸ್ ಯೂಸೇಜ್. ಜೊತೆಗೆ "ಗಣೇಶ ಬಂದ, ಕಾಯಿ ಕಡುಬು ತಿಂದ".  ಈಗ ಗಣೇಶನ್ನ ಇಟ್ಟಿದೀರ ಕಾಲ ಇಲ್ಲವೂ ಇಲ್ಲ, ಟಿ.ವಿ. ಯಲ್ಲೇ ನೂರೊಂದು ಗಣೇಶ ಕಾಣ್ತಾನೆ. ಕಾಲವೂ ಬದಲಾಗಿದೆ.


 


"ಪರದೇಸಿ" ವಾಸಿಗಳಾದ ನಮಗೆ ಮನೆ ಮಟ್ಟಿಗೆ ಹಬ್ಬ ಮಾಡಿದರೂ ದೀಪಾವಳಿ, ಗಣೇಶ, ಉಗಾದಿ, ಗೋಕುಲಾಷ್ಟಮಿಗಳು "ತೌರೂರು ಸುಖವೆಂದು" ..ಆ ಸಂಭ್ರಮ ಮಿಸ್ ಆಗುತ್ತೆ.


 


ಪುಸ್ತಕ ಮಾರಾಟ ಮಳಿಗೆಯಲ್ಲಿ ಕಣ್ಣಿಗೆ ಬಿತ್ತು "ಟೆಂಪಲ್ಸ್ ಇನ್ ಸೌತ್ ಈಸ್ಟ್ ಏಶಿಯಾ" ಪುಸ್ತಕ. ನಮ್ಮ ಹನುಮನಂತೆ ಚೀನಿಯರಿಗೂ ಮಂಕಿಗಾಡ್ ಇದ್ದಾನೆ. ಸುನ್-ವುಕೋಗ್ ಅವನ ನಾಮಧೇಯ, Great Sage Equal to heaven  ಇವನು. ಹನುಮ ಮಂಕಿ-ಗಾಡ್, ಗಣಪ-ಎಲೆಫೆಂಟ್-ಹೆಡ್-ಗಾಡ್. ಲಯನ್-ಹೆಡ್, ಪಿಗ್-ಹೆಡ್, ಹಾರ್ಸ್-ಹೆಡ್ ಎಂದು ಯಾಕೆ, ಹೇಗೆ ಎಂದು ಅವರಿಗೆ ಹೇಳುತ್ತಾ ಹೋದಲ್ಲಿ..ಕೊನೆಯೇ ಇರಲ್ಲ. ಈ ಹೆಡ್-ಗಾಡ್ ಗಣಪ ನಮ್ಮಲ್ಲೇ ಅಲ್ಲದೆ ದಕ್ಷಿಣ ಏಶಿಯಾದಲ್ಲೂ ಪೂಜನೀಯ. ಗಣೇಶ ಶರಣಂ..ಶರಣಂ ಗಣೇಶನ ದಕ್ಷಿಣ ಪೂರ್ವ ಏಶಿಯಾದ ನಾಡುಗಳಲ್ಲಿ ಹೇಗಿದ್ದಾನೆ...ಅರಿಯೋಣ ಬನ್ನಿ. (ಮಾಹಿತಿ ಸಂಗ್ರಹಣೆ  Temples in South East Asia.


 


ಮಯನ್ಮಾರ್-ಮಹಪೆಯಿನ್ನಿ


 


ಮಯನ್ಮಾರಿನಲ್ಲಿ ಗಣೇಶ ವ್ಯಾಪಾರಿ ಪ್ರಿಯ. ವ್ಯಾಪಾರಿಗಳು ತಾವು ಹೋದಡೆಯಲ್ಲೆಲ್ಲಾ ನಿರ್ವಿಘ್ನವಾಗಿ ವ್ಯಾಪಾರ ನಡೆಯಲೆಂದು ಚಿಕ್ಕ, ಚಿಕ್ಕ ಗಣಪತಿಯ ಮೂರ್ತಿಗಳನ್ನು ಕೊಂಡೊಯ್ಯುತ್ತಿದ್ದರು. ಇಲ್ಲಿ ಗಣಪನ ನಾಮ ಮಹಪಾನಿ. ಹನ್ನೊಂದು ಹಾಗೂ ಹನ್ನೆರಡನೆಯ ಶತಮಾನದ ಚರ್ತುಭುಜ ಪದ್ಮಾಸನ ಗಣಪತಿಯ ಮೂರುತಿ ಮಯನ್ಮಾರಿನ ಮ್ಯೂಸಿಯಂನಲ್ಲಿದೆ.


 


ಮಲೇಶಿಯಾ :ಸಿಂಗಪುರದಂತೆ ಮಲೇಷಿಯಾದಲ್ಲೂ ತಮಿಳರ ಪ್ರಾಬಲ್ಯ ಹೆಚ್ಚು. ಶತಮಾನಗಳ ಹಿಂದೆ ರಬ್ಬರ್ ಪ್ಲಾಂಟೇಶನ್‌ನಲ್ಲಿ ಕೆಲಸ ಮಾಡಲೆಂದು ಬಂದ ತಮಿಳುನಾಡಿನ ಕೂಲಿಗಾರರು ತಾವೂ ಹೊಸಜಾಗದಲ್ಲಿ ತಳವೂರಿದರಲ್ಲದೆ ನಮ್ಮ ಸಂಸ್ಕೃತಿಯನ್ನೂ ಈ ದೇಶಗಳಿಗೆ ತಂದು, ಪೋಷಿಸಿದ್ದಾರೆ. ಸಿಂಗಪುರದಂತೆಯೇ ಮಲೇಶಿಯಾದಲ್ಲೂ ಶಿವ, ಅಮ್ಮನ್ ದೇಗುಲಗಳು ಬಹಳಷ್ಟಿವೆ.


ಕೌಲಾಲಂಪುರದಲ್ಲಿ ಐದು ವಿನಾಯಕನ ದೇಗುಲವಿದೆ. ಮಲಕ್ಕ ಎಂಬ ಊರಿನಲ್ಲಿ ೧೭೮೧ರಲ್ಲಿ ಕಟ್ಟಿದ ಪೊಯ್ಯಾದ ವಿನಾಯಗರ್ ದೇಗುಲ ಪುರಾತನವಾದದ್ದು. ಅದೇ ಅಲ್ಲದೆ ಕ್ಲಾಂಗ್, ಇಪೋಹ್, ಪೆರಾಕ್ ಊರಿನಲ್ಲೂ ಸಿದ್ದಿ ವಿನಾಯಕರ್ ನೆಲೆಸಿದ್ದಾನೆ.


ಸಿಂಗಪುರ-ಮಲೇಶಿಯಾದ ಗಣಪನ ಮೂರ್ತಿಗಳು ನಮ್ಮ ಮೂರ್ತಿಗಳಂತೆಯೇ ಇದೆ.


 


ಸಿಂಗಪುರ : ಪಿಳ್ಳೆಯಾರ್, ವಿನಾಯಕರ್


 


ಸಿಂಗಪುರ ಚಿಕ್ಕದೇಶ. ಇಲ್ಲಿ ಮೂಲ ಭಾರತೀಯ ಜನಸಂಖ್ಯೆ ಶೇ. ೯%. ಅದರಲ್ಲಿ ತಮಿಳರು ಹೆಚ್ಚು ಸಂಖ್ಯೆಯಲ್ಲಿದ್ದಾರೆ. ನಾಲ್ಕು ರಾಷ್ಟ್ರ ಭಾಷೆಗಳಲ್ಲಿ ತಮಿಳು ಭಾಷೆಯೂ ಒಂದು. ಸರ್ವಧರ್ಮ ಸಮನ್ವಯಕ್ಕೆ ಮಹತ್ವ ನೀಡುವ ಈ ದೇಶದಲ್ಲಿ ಹೆಚ್ಚು "ಅಮ್ಮನ್", ಶಿವ ದೇಗುಲಗಳಿವೆ. ಅಲ್ಲಿ ಪಿಳ್ಳೆಯಾರ್, ವಿನಾಯಕರ್ ಇದ್ದೇ ಇದಾನೆ.


 


ಸೆಂಪಗ(ಸಂಪಿಗೆ) ವಿನಾಯಕರ್ ದೇಗುಲಕ್ಕೆ ೧೫೦ ವರುಷಗಳ ಇತಿಹಾಸವಿದೆ. ೧೫೦ ವರುಷಗಳ ಹಿಂದೆ ಸಂಪಿಗೆ ಮರದ ನೆರಳಿನಲಿ ನಿಲ್ಲಲು ಬಂದ ಶ್ರೀಲಂಕಾದ ಪಿಳ್ಳೆ ಎಂಬುವರು ಅನಾಥವಾಗಿ ಬಿದ್ದಿದ್ದ ಗಣಪನ ಮೂರುತಿಯನ್ನು ಕಂಡು ನಾಲ್ಕು ಕಲ್ಲನ್ನಿಟ್ಟು ಅಲ್ಲೇ ಚಪ್ಪರ ಏರಿಸಿ ಗಣಪನಿಗೆ ನೆರಳನಿತ್ತರು. ಆ ಚಪ್ಪರದ ದೇಗುಲ ಇಂದು ಬಹು ದೊಡ್ಡ ದೇಗುಲವಾಗಿದೆ. ಸಂಪಿಗೆಯ ವಿನಾಯಕ ತಮಿಳಿನಲಿ ಸೆಂಪಗ ವಿನಾಯಕರ್ ಆಗಿದ್ದಾನೆ.


 


ತಿರು ಪೊನ್ನಾಂಬಲಂ ಎಂಬುವರು ತಮಿಳುನಾಡಿನ ಚಿದಂಬರದಿಂದ ೧೯೨೫ ರಲ್ಲಿ ಇಂಡಿಯನ್ ನ್ಯಾಷನಲ್ ಆರ್ಮಿಯ ಸೈನಿಕರಾಗಿ ಸಿಂಗಪುರಕ್ಕೆ ಬಂದರು. ಅಲ್ಲಿಂದ ಬರುವಾಗ ತಂದ ಗಣಪನ ಮೂರ್ತಿಯನ್ನು ಮತ್ತೆ ಭಾರತಕ್ಕೆ ಮರಳಿ ಹೋಗುವಾಗ ಕೊಂಡೊಯ್ಯದೆ ಚೆಟ್ಟಿಯಾರ್ ಒಬ್ಬರಿಗೆ ಕೊಟ್ಟರು. ಆ ಚೆಟ್ಟಿಯಾರ್ ಸಿದ್ಧಿವಿನಾಯಕ ಮೂರುತಿಯನ್ನು ಲೊಯಾಂಗ್ ಎಂಬಲ್ಲಿ ಪ್ರತಿಷ್ಠಾಪಿಸಿದ್ದಾರೆ.ಜಪಾನ್ : ವಜ್ರಧಾತು, ವಿನಯಕ್ಷ


೯ ನೇ ಶತಮಾನದದಲ್ಲಿ ಜಪಾನೀಯ ಬೌದ್ಧ ಸನ್ಯಾಸಿ ಕೋಬೋ ದೈಶಿ ಗಣಪನನ್ನು ಜಪಾನಿಯರಿಗೆ ಪರಿಚಯಿಸಿದ. ಗಣಪತಿ ಅಲ್ಲಿ ವಜ್ರಧಾತು ಎಂದು ಕರೆಸಿಕೊಂಡ. ಜಪಾನಿ ಗಣಪನ ಕೈಯಲ್ಲಿ ಮೂಲಂಗಿ. ಈತನಿಗೆ ಮೂರು ಮುಖ, ಮೂರು ಕಣ್ಣು. ಹೆಣ್ಣು ಹಾಗೂ ಗಂಡಿನ ರೂಪ ಪೂಜಿತ ಗಣಪತಿ ತಾಂತ್ರಿಕ ಪೂಜೆಗೆ ಪ್ರಸಿದ್ಧಿಯಂತೆ. ಗಣಪತಿಯ ದೇವಸ್ಥಾನವನ್ನು ಕಂಗಿತೆನ್ ಎನ್ನುತ್ತಾರೆ.


 


ಟಿಬೆಟ್-ಮಂಗೋಲಿಯ : ಗಣೇಶ-ಗಣೇಶಿನಿ, ಧೋತಕರ್) : ಈ ದೇಶಗಳಲ್ಲಿ ಗಣಪ ಚತುರ್ಭುಜ, ಮೋದಕ, ಗುದ್ದಲಿ, ಮೂಲಂಗಿ ಹಾಗೂ ಅಂಕುಶಧಾರಿ. ದಾನವ ಸಂಹಾರಿಯೆನಿಪ ಈತ ಬೌದ್ಧ ದೇಗುಲಗಳಲ್ಲಿ ದ್ವಾರಪಾಲಕನಾಗಿ ನಿಂತಿದ್ದಾನೆ. ಗಣೇಶ ಹಾಗೂ ಗಣೇಶನಿ ಎಂದು ಗಂಡು-ಹೆಣ್ಣು ಎರಡೂ ಆಗಿದ್ದಾನೆ. ಇಲ್ಲಿನ ಗಣಪ ಮೂಲಂಗಿ ಪ್ರಿಯ ಹಾಗೇ ಇಲಿಯೂ ತನ್ನ ಬಾಯಲ್ಲಿ ಮೂಲಂಗಿ ಪಿಡಿದೆದೆಯಂತೆ. ಮಂಗೋಲಿಯದಲ್ಲಿ ಗಣಪನ ನಾಮ ಧೋತಕರ್, ಟಿಬೆಟ್ಟಿನ ಗಣಪನ ನಾಮ ಸೋಕಪ್ರಕ್.


 


ನೇಪಾಳದಲ್ಲಿ ಗಣೇಶನನ್ನು ಅಶೋಕ ವಿನಾಯಕ, ಚಂದ್ರ ವಿನಾಯಕ, ವಿಜಯ ಗಣಪತಿ, ಕರ್ಣ ವಿನಾಯಕ, ಜೈ ವಿನಾಯಕ, ಗಿರಿಜಾ-ಗಣೇಶ ಮುಂತಾದ ಹೆಸರುಗಳಿಂದ ಕರೆಯುತ್ತಾರೆ, ಪೂಜಿಸುತ್ತಾರೆ.


 


ನೇಪಾಳ ಅಪ್ಪಟ ಹಿಂದೂ ದೇಶ. ಹೇರಂಭ ಗಣೇಶನ ದೇಗುಲವನ್ನು ಸಾಮ್ರಾಟ್ ಅಶೋಕನ ಪುತ್ರಿ ಚಾರುಮತಿ ಎಂಬುವಳು ಕಟ್ಟಿಸಿದಳಂತೆ. ಇಲ್ಲಿ ಗಣೇಶ ಪಂಚಮುಖಿ, ದಶಭುಜ. ಕಾಠಮಂಡುವಿನ ಛಲಗಾವ್ ಎಂಬಲ್ಲಿನ ಸೂರ್ಯ ವಿನಾಯಕನಿಗೆ ಒಂದು ತಲೆ, ನಾಲ್ಕುಭುಜ, ಎರಡು ಇಲಿಗಳ ವಾಹನಧಾರಿ. ಸುಗ್ಗಿಯ ಕೊಯ್ಲಿನ ಹಬ್ಬದಲ್ಲಿ ಪಾರ್ವತಿ-ಗಣೇಶನಿಗೆ ಅಗ್ರ ಪೂಜೆ.


 


ಚೀನಾ :ಕ್ರಿಸ್ತಶಕ ೫ನೇ ಶತಮಾನದಲ್ಲಿ ಇಮ್ಮಡಿ ಚಂದ್ರಗುಪ್ತ ವಿಕ್ರಮಾದಿತ್ಯನ ಆಸ್ಥಾನಕ್ಕೆ ಭೇಟಿಯಿತ್ತ ಚೀನಿಯ ಫಾಯಿಯಾನ್ ಹಾಗೂ ೭ನೇ ಶತಮಾನದಲ್ಲಿ ಹರ್ಷನ ಆಸ್ಥಾನಕ್ಕೆ ಭೇಟಿಯಿತ್ತ ಚೀನಿಯ ಹುಯನ್ ತ್ಸಾಂಗ್ ಕೊಂಡೊಯ್ದರು ನಮ್ಮ ಸಂಸ್ಕೃತಿಯ ಅಂಶಗಳು. ಹಾಗೆ ಕೊಡೊಯ್ದ ಕೆಲವು ಮೂರ್ತಿಗಳಲ್ಲಿ ಶಕ್ತಿ ಗಣಪತಿಶಕ್ತಿ ಹಾಗೂ ಗಣಪತಿ ಕೂಡಿ ವಜ್ರಾಯನ ದ್ವಿಮುಖ ಗಣಪ ಅಂದಿನ ಶತಮಾನದಲ್ಲಿ ಪ್ರಸಿದ್ದಿಯಾಗಿದ್ದನಂತೆ.


 


ಥೈಲಾಂಡ್ :ಥೈಲಾಂಡಿನಲ್ಲಿ ಎಲ್ಲಿ ನೋಡಿದರಲ್ಲಿ ರಾಮ-ನಾಮ. ಬ್ಯಾಂಕಾಕಿನ ಅರಮನೆಯಲ್ಲಿ ಗಣೇಶನ ತೈಲಚಿತ್ರವಿದೆ. ಇಲ್ಲಿ ಗಣೇಶ ಪ್ರಕನೆಹ್ತ್. ವ್ಯಾಪಾರದಲ್ಲಿ ಲಾಭ ಕೊಡಿಸುವ ದೇವರು. ಅಲ್ಲಿ ವ್ಯಾಪಾರದಲ್ಲಿ ನಷ್ಟವಾದರೆ, ಗಣೇಶನ ಚಿತ್ರವನ್ನು ತಲೆಕೆಳಗಾಗಿ ಇಡುತ್ತಾರಂತೆ. ತಲೆಕೆಳಕಾದ ಗಣಪ ತಲೆನೋವು ತಾಳಲಾರದೆ ಮತ್ತೆ ವ್ಯಾಪಾರವನ್ನು ಕುದುರಿಸುತ್ತಾನೆ ಎಂಬ ನಂಬಿಕೆ.


 


ಜಾವಾ-ಕಲಂತಕ್


ಇಂದು ಜಾವಾದಲ್ಲಿ ಹಿಂದೂ ಸಂಸ್ಕೃತಿ ಇಲ್ಲದಿದ್ದರೂ ಶತಮಾನಗಳ ಹಿಂದೆ ಇಂಡೊನೇಶಿಯಾದ ಜಾವಾ, ಸುಮಾತ್ರ, ಬಾಲಿ ಪ್ರದೇಶಗಳು ಹಿಂದೂ ಸಂಸ್ಕೃತಿ ಚಾಲ್ತಿಯಲ್ಲಿತ್ತು. ಕಂಡು ಬರುವ ಜಾವಾದಲ್ಲಿ ಎಂಟನೇ ಶತಮಾನದಿಂದ ಗಣಪತಿಯ ದೇಗುಲ ಅಸ್ತಿತ್ವಕ್ಕೆ ಬಂದಿದೆ. ಇಲ್ಲಿ ಏಕಮುಖಿ, ಹಾಗೂ ಚತುರ್ಮುಖಿ ಗಣಪ. ಕಪಾಲ ಗಣೇಶ ಹಾಗೂ ಭೈರವ ಗಣಪ ಇಲ್ಲಿ ಪ್ರಸಿದ್ಧಿಯಾಗಿದ್ದ. ಹಿಂದೆ ಪೂಜಿಸುತ್ತಿದ್ದ ಗಣಪ ಇದೀಗ ಮ್ಯೂಸಿಯಂಗಳಲ್ಲಿ ವಾಸಿ. ಜಾವಾದ ಮ್ಯೂಸಿಯಂನಲ್ಲಿ ಇರುವ ಗಣೇಶ ಬೋರೋ ಗಣೇಶ. ಈತ ಸೊಂಡಿಲಿನಲ್ಲಿ ಹಣ್ಣನ್ನು ಇರಿಸಿಕೊಂಡಿದ್ದಾನೆ. ವಿಷೇಶವೆಂದರೆ ಅದೇಕೋ ಈತನ ಕಾಲ್ಗಳೆರಡೂ ಒಂದಕ್ಕೊಂಡು ಅಂಟಿವೆಯಂತೆ.


 


ಇಂಡೋನೇಶಿಯಾದ ಬಾಲಿಯಲ್ಲಿ ಇಂದಿಗೂ ಹಿಂದೂ ಸಂಸ್ಕೃತಿ ಹಾಸು ಹೊಕ್ಕಾಗಿದೆ. ಇಲ್ಲಿ ಗಣಪತಿ ಅಗ್ನಿದೇವತೆ. ಬಲಗೈಯಲ್ಲಿ ಪಂಜು ಎಡಗೈನಲ್ಲಿ ಪಾತ್ರೆ ಹಿಡಿದಿದ್ದಾನೆ.


 


ಕಾಂಬೋಡಿಯ-ಪ್ರಾಕೆನೆಸ್


ನಾಮ್‍ಪೆನ್ನಿನ ಮ್ಯೂಸಿಯಂ‍ನಲ್ಲಿ ದಂತ ಮುರಿದ, ಕೈಯಲ್ಲಿ ಪುಸ್ತಕ ಹಿಡಿದ ಗಣಪನ ಮೂರ್ತಿಯನ್ನು ಕಂಡಿದ್ದೆ. ನಮ್ಮ ಜೊತೆ ಬಂದಿದ್ದ ಗೈಡ್ ವೀರೇಕ್ ಕೆನೆಸ್ ಎಂದುಸುರಿದ್ದ. ಹಾಗೆಯೇ ಅಂಕೋರ‍್‍ವಾಟಿನ ದೇಗುಲದಲ್ಲಿ ಕಂಡಿದ್ದೆ ಗಣಪನ ಕೆತ್ತನೆಗಳನ್ನು. ಇಲ್ಲಿ ಈತ ಪ್ರಾ(ಪೂಜ್ಯ) ಕೆನೆಸ್(ಗಣೇಶ) ಎಂದು ಹೇಳಲ್ಪಡುತ್ತಾನೆ.


 


೭ನೇ(೮೯೦) ಶತಮಾನದಲ್ಲಿ ರಾಜ ಯಶೋವರ್ಮನೆಂಬುವನು ಚಂದ್ರಗಿರಿ ಎಂಬಲ್ಲಿ ಗಣೇಶನ ದೇಗುಲವನ್ನು ಕಟ್ಟಿದ್ದನೆಂದು ಹಾಗೂ ಪ್ರಸಾತ್ ಬಾಕ್ ಎಂಬಲ್ಲಿ ಗಣೇಶನ್ ದೇಗುಲಗಳು ಇದ್ದವೆಂದು ಖೆಮರ್ ಶಿಲಾಶಾಸನಗಳು ಹೇಳುತ್ತವೆ. ಇಲ್ಲಿನ ಗಣಪ ಮೋದಕ, ಕೊಡಲಿ, ಹಲ್ಲು ಹಾಗೂ ಅಂಕುಶ ಹಿಡಿದಿದ್ದಾನೆ.


 


ಓದುಗರೆಲ್ಲರಿಗೂ ಗೌರಿ-ಗಣೇಶ ಹಬ್ಬದ ಶುಭಾಶಯಗಳು. 

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಮೇಡಮ್ನೋರೆ, ಒಳ್ಳೆ ಇನ್ಪರ್ಮೇಸನ್ ಕೊಟ್ರಿ, ಗೊತ್ತಿರಲಿಲ್ಲ, ಹೀಗೂ ಉಂಟಾ ಅಂತ ನಾವು ಜಾಲದೊಳೆಗೆ ಹುಡುಕಾಡಿದ್ವಿ, ನೀವು ಹೇಳಿದ್ದು ದಿಟ, ನಮ್ಮಂತವರಿಗೆ ಆಗಾಗ್ಗೆ ಹಿಂಗೆ ಇನ್ಪರ್ಮೇಸನ್ ಕೊಡ್ತಿರಿ. ಅಡ್ಡಬಿದ್ದೆ...

ನಮಸ್ಕಾರ ಗೋಪಾಲ್, ಮಾಲತಿ, ವಿಜಯ್, ಗೋಪಿನಾಥ್ ಹಾಗೂ ರಮೇಶ್ ಅವರಿಗೆ, ನಿಮ್ಮೆಲ್ಲರ ಪ್ರತಿಕ್ರಿಯೆ ಹಾಗೂ ಪ್ರೋತ್ಸಾಹಕ್ಕೆ ವಂದನೆಗಳು. ವಾಣಿ