ಗಣೇಶೋತ್ಸವಕ್ಕೆ ಗೀಜಗ ಹಕ್ಕಿಯ ಗೂಡಿನ ಅಲಂಕಾರ ಬೇಡ ಎಂಬ ಅರಿಕೆ.

To prevent automated spam submissions leave this field empty.

ಧಾರವಾಡದ ಸುಪರ್ ಮಾರ್ಕೇಟ್ ನಲ್ಲಿ ಕಳೆದ ವರ್ಷದ ಗಣೇಶ ಚತುರ್ಥಿ ಸಂದರ್ಭದಲ್ಲಿ ಗಣೇಶನ ಅಲಂಕಾರಕ್ಕಾಗಿ ಹುಡಗನೋರ್ವ ಗೀಜಗದ ಗೂಡು ಕಿತ್ತು ತಂದು ಮಾರಾಟಕ್ಕಿಟ್ಟಿರುವುದು. ಚಿತ್ರ: ಕೇದಾರನಾಥ.

 

ಪ್ರತಿ ವರ್ಷದಂತೆ  ಈ ವರ್ಷವೂ ಮತ್ತೆ ಗಣೇಶ ಚತುರ್ಥಿ ಬಂದಿದೆ. ಇದೇ ಶನಿವಾರ ಸಪ್ಟೆಂಬರ್ ೧೧ ರಂದು ವಿಘ್ನವಿನಾಶಕನನ್ನು ಶೃದ್ಧಾ-ಭಕ್ತಿಗಳಿಂದ ನಾಡು ಪೂಜಿಸಲಿದೆ.

 

ಆದರೆ ಹಬ್ಬದ ಆಚರಣೆಯ ಹೆಸರಿನಲ್ಲಿ ಪರಿಸರಕ್ಕೆ ಕಂಟಕವಾಗಬಲ್ಲ, ತನ್ಮೂಲಕ ನಾವೇ ನಿಸರ್ಗಕ್ಕೆ ವಿಘ್ನವಾಗುವ ಕೆಲ ಕೆಟ್ಟ ಆಚರಣೆಗಳಿಗೆ ಇತಿಶ್ರೀ ಹಾಡಬೇಕಿದೆ. ಪ್ರತಿ ಬಾರಿ ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ  ಮನೆ-ಮನೆಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಯ ಸಂದರ್ಭದಲ್ಲಿ ಅಲಂಕಾರಕ್ಕಾಗಿ ಗೀಜಗ ಹಕ್ಕಿಯ ಗೂಡು ಬಳಸುವುದನ್ನು ನಾವೇ ಕಡ್ಡಾಯ ಮಾಡಿಕೊಂಡಂತಿದೆ! ಕೊಂಡುಕೊಳ್ಳುವವರಿದ್ದರೆ ಮಾರುಕಟ್ಟೆಯಲ್ಲಿ ಮಾರುವವರೂ ಇರುತ್ತಾರೆ.

 

ದಯವಿಟ್ಟು ಈ ಬಾರಿ ಯಾರೂ ಗೀಜಗನ ಗೂಡುಗಳನ್ನು ಅಲಂಕಾರದ ಹೆಸರಿನಲ್ಲಿ ಖರೀದಿಸಬೇಡಿ ಎಂದು ಧಾರವಾಡ ಜಿಲ್ಲೆ ವೈಲ್ಡ್ ಲೈಫ್ ವಾರ್ಡನ್ ಪ್ರೊ. ಗಂಗಾಧರ ಕಲ್ಲೂರ ಹಾಗೂ ಸುರೇಶ ಹೊನ್ನೂರ ಮನವಿ ಮಾಡಿದ್ದಾರೆ.

 

ಪಾಪ ಏನೂ ಅರಿಯದ ಮುಗ್ಧ ಮರಿಗಳು ಗೂಡನ್ನು ಕಿತ್ತು ತಂದಾಗ ತಂದೆ-ತಾಯಿಯಿಂದ ಅಗಲಿ ಆಹಾರಕ್ಕಾಗಿ ಪರಿತಪಿಸುತ್ತ ಸುಪರ್ ಮಾರ್ಕೇಟ್ ನಲ್ಲಿ ಬಿಕರಿಗೆ ಬಿದ್ದಿರುವುದು.

 

ಗೀಜಗ ಹಕ್ಕಿಯ ಒಣಗಿದ ಹುಲ್ಲಿನ ಗೂಡಿಗಿಂತ ಹಸಿರು ಹುಲ್ಲಿನ ಜೋಳಿಗೆ ಗೂಡು ಚೆಂದ ಕಾಣಿಸುತ್ತದೆ. ಹಾಗಾಗಿ ಹಸಿರು ಹುಲ್ಲಿನ ಗೂಡಿಗೆ ಮಾರುಕಟ್ಟೆಯಲ್ಲಿ ಎಲ್ಲಿಲ್ಲದ ಬೇಡಿಕೆ. ಹಾಗಾಗಿ, ಒಂದು ದಿನದ ವ್ಯಾಪಾರಕ್ಕಾಗಿ ಹುಡುಗ ಬುದ್ಧಿಯ ಜನ ಕೋಟೆ, ಕೊತ್ತಲ, ಪಾಳು ಬಿದ್ದ ಬಾವಿ, ಹೊಂಡ, ಕೆರೆ ಬದುವು ಹುಡುಕಿಕೊಂಡು ಹೋಗಿ ಮರಿ, ಮೊಟ್ಟೆ ಯಾವುದನ್ನೂ ಲೆಕ್ಕಿಸದೇ ಗೂಡುಗಳನ್ನು ಕಿತ್ತು ತಂದು ಪೇಟೆಯಲ್ಲಿ ಮಾರುತ್ತಾರೆ. ಬಹುಶ: ಗೀಜಗನ ಜೀವನ ಪದ್ಧತಿ ಹಾಗು ಬದುಕಿನ ಬಗ್ಗೆ ನಮಗೆ ಸರಿಯಾದ ತಿಳಿವಳಿಕೆ ಇಲ್ಲ.

ಧಾರವಾಡದ ಬೆಳಗಾವಿ ನಾಕಾ ಬಳಿ ಬಾಯ್ ಪಾಸ್ ಸಮೀಪ ಸ್ವಚ್ಛಂದವಾಗಿ ಗೂಡು ನಿರ್ಮಿಸುತ್ತಿರುವ ಗೀಜಗ ಹಕ್ಕಿ. ಚಿತ್ರ: ಕೇದಾರನಾಥ.

 

ನಮ್ಮ ದೇಶದ ಖ್ಯಾತ ಪಕ್ಷಿ ಶಾಸ್ತ್ರಜ್ಞ ಡಾ. ಸಲೀಂ ಮೊಯಿಜುದ್ದೀನ್ ಅಬ್ದುಲ್ ಅಲಿ ತಮ್ಮ ಆತ್ಮ ಕಥೆಯಲ್ಲಿ ಗೀಜಗ ಪಕ್ಷಿ ಹಾಗು ಸುಂದರವಾದ ಆ ಪಕ್ಷಿಯ ಗೂಡಿನ ಬಗ್ಗೆ ಅತ್ಯಂತ ಮುತುವರ್ಜಿಯಿಂದ ಉಲ್ಲೇಖಿಸುತ್ತಾರೆ. ಸಿವಿಲ್ ಇಂಜಿನೀಯರಿಂಗ್ ನಲ್ಲಿ ಪರಿಣತಿ ಪಡೆದಂತೆ ಗಂಡು ಗೀಜಗ ಅತ್ಯಂತ ಚಾಕಚಕ್ಯತೆಯಿಂದ ಭತ್ತ ಹಾಗು ಮೆದೆಯ ಹಸಿರು ಹುಲ್ಲು ಬಳಸಿ ಗೂಡು ಕಟ್ಟುತ್ತದೆ. ಈ ಗಂಡು ಕಟ್ಟಿದ ಗೂಡು ನೋಡಲು ವಧುಗಳ ದಂಡೇ ನೆರೆಯುತ್ತದೆ. ಮುಕ್ಕಾಲು ಭಾಗದಷ್ಟು ಗೂಡು ನೇಯ್ದಾದ ಮೇಲೆ ಗಂಡಿನ ಕುಶಲತೆಗೆ ಮನಸೋತ ಹೆಣ್ಣು ಗೀಜಗವೊಂದು ಜೊತೆಯಾಗುತ್ತದೆ. ಮುಂದೆ ತನಗೆ ಬೇಕಾದ ಹಾಗೆ ಅನುಕೂಲವಾಗುವ ರೀತಿಯಲ್ಲಿ ಗೂಡನ್ನು ಗಂಡಿನಿಂದ ರೂಪಿಸಿಕೊಳ್ಳುತ್ತದೆ. ನಂತರ ನೂತನ ಗೃಹ ಪ್ರವೇಶದ ನಂತರ ‘ಹನಿಮೂನ್’.

 

ಪೇಟೆಯಲ್ಲಿ ಮಾರಾಟಕ್ಕೆ ತಂದ ಗೀಜಗ ಹಕ್ಕಿಯ ಗೂಡಿನಲ್ಲಿ ರೆಕ್ಕೆ ಮೂಡದ ಎರಡು ಮರಿಗಳು ಕಂಡುಬಂದದ್ದು ಹೀಗೆ.


ಈ ಸರಸದ ಬಳಿಕ ಹೆಣ್ಣು ಗೀಜಗ ಗೂಡಿನಲ್ಲಿ ಮೊದಲ ತತ್ತಿ ಇಟ್ಟ ವಿಚಾರ ತಿಳಿಯುತ್ತಲೇ ಗಂಡು ಗೂಡಿನಿಂದ ಪಡಪೋಷಿಯಂತೆ ಪರಾರಿ! ಕೆಲವೇ ತಾಸುಗಳಲ್ಲಿ ಮತ್ತೊಂದೆಡೆಗೆ ಹೊಸ ಗೂಡನ್ನು ನೇಯಲು ಪ್ರಾರಂಭಿಸುತ್ತದೆ. ಇಲ್ಲಿಯೂ ಮುಕ್ಕಾಲು ಭಾಗ ಗೂಡಿನ ರಚನೆಯಾದ ನಂತರ ಹೊಸ ವಧುವಿನ ಆಗಮನ. ಮತ್ತೆ ಅದೇ ಕಥೆಯ ಪುನರಾವರ್ತನೆ. ಹೀಗೆ ಹತ್ತಾರು ಹೆಣ್ಣು ಗೀಜಗಗಳಿಗೆ ತನ್ನ ಹೊಸ ಹೊಸ ಮನೆಗಳನ್ನು ತೋರಿಸಿ ಮರುಳು ಮಾಡಿ ಗರ್ಭದಾನ ಮಾಡುತ್ತದೆ ಗಂಡು ಗೀಜಗ.

ಹೇಗಿದೆ ಪಕ್ಷಿ ಲೋಕದ ಸಾಂಸಾರಿಕ ಜೀವನ? ಅದು ವಿಸ್ಮಯಗಳ ಆಗರ. ಇಲ್ಲಿ ಪ್ರೇಮ ಪತ್ರಗಳ ಬಟವಾಡೆ ಇದೆ. ವಧು-ವರರ ಅನ್ವೇಷಣೆಯ ಸಂಭ್ರಮವಿದೆ. ಹೆಣ್ಣನ್ನು ಗೆಲ್ಲಲು ನಾನಾ ತಂತ್ರ ಹೂಡುವ ಗಂಡುಗಳು, ಹಾಗೆಯೇ ಮನಸೋತ ಹೆಣ್ಣಿನ ಸೆರಗು ಹಿಡಿದು ಅಮ್ಮವ್ರ ಗಂಡ ಎನಿಸಿಕೊಳ್ಳುವ ಮಾವನ ಮನೆಯ ಅಳಿಯಂದಿರು ಇಲ್ಲಿದ್ದಾರೆ! ಎಲ್ಲ ಮುಗಿದ ಬಳಿಕ ಕೈಕೊಡುವ ಹೆಣ್ಣುಗಳ ಇಲ್ಲಿದ್ದಾರೆ! ಹಾಗೆಯೇ ಕೈಕೊಡುವ ಪಡಪೋಷಿ ಗಂಡಂದಿರು ಸಹ ಇರುವ ಸೋಜಿಗ ಇಲ್ಲಿ ಮನೆ ಮಾಡಿದೆ. ನಾಲ್ಕಾರು ಹುಡುಗಿಯರನ್ನು ಪ್ರೀತಿಸಿದ, ವಿರಹ ವೇದನೆಯಲ್ಲಿ ಬೆಂದ ಹುಡುಗರಿದ್ದಾರೆ. ಹೆಣ್ಣನ್ನು ಹೆರುವ ಯಂತ್ರವಾಗಿಸಿ ಅಂಡಲೆಯುವ ಪೋಲಿ ಗಂಡುಗಳಿದ್ದಾರೆ. ಬಯಲಿಗೆ ಬಿದ್ದ ಕಥೆಗೆ ಜೀವನ ಪೂರ್ತಿ ಅಳುವ ಹುಡುಗಿಯ ಪ್ರಾರಬ್ಧವಿದೆ. ಸಮಾಜ ಮನ್ನಣೆ ನೀಡುವ ಬದುಕಿನ ಆದರ್ಶವೆಂದು ಏಕ ಪತ್ನಿ ಹಾಗು ಏಕಪತಿ ವೃತಸ್ಥರಾಗಿ ಜೀವನಯಾನ ನಡೆಸುವ ಜೀವಲೋಕದ ವೈಚಿತ್ರ್ಯಗಳಿವೆ! ಹಾಗೆಯೇ ಸಂಪ್ರದಾಯದ ಹೆಸರಿನಲ್ಲಿ ವಿಧವೆ-ವಿಧುರರ ಶೋಕ ಗೀತೆಗಳೂ ಇವೆ.

 

ಗಣೇಶನ ಅಲಂಕಾರಕ್ಕೆ ಎಂದು ಕಿತ್ತು ತರಲಾದ ಗೂಡಿನಲ್ಲಿ ಕಂಡುಬಂದ ಗೀಜಗದ ಮೊಟ್ಟೆ. ಚಿತ್ರ: ಕೇದಾರನಾಥ.

 

ಸಾರಸ್ ಕ್ರೇನ್ ಎಂದು ಕರೆಯಲ್ಪಡುವ ಕ್ರೌಂಚ ಪಕ್ಷಿ ಅಪ್ಪಟ ಸಂಪ್ರದಾಯವಾದಿ. ಚುಂಚಿಗೆ ಚುಂಚು ತಾಕಿಸಿ ವಿವಾಹ ಬಂಧನಕ್ಕೆ ಒಳಗಾದ ಗಂಡು ಇಲ್ಲವೆ ಹೆಣ್ಣು ಕ್ರೌಂಚ ಪಕ್ಷಿ ಜೀವನಪರ್ಯಂತ ಏಕ ಪತಿ ಅಥವಾ ಪತ್ನಿ ವೃತಸ್ಥವಾಗಿ ಜೀವನ ಸಾಗಿಸುತ್ತವೆ. ಇಬ್ಬರಲ್ಲಿ ಒಬ್ಬರು ಆಕಸ್ಮಿಕವಾಗಿ ಸಾವನ್ನಪ್ಪಿದರೂ ಮರು ಮದುವೆಯ ಮಾತಿಲ್ಲ! ಜೀವನ ಪರ್ಯಂತ ಒಂಟಿಯಾಗಿಯೇ ಬದುಕುತ್ತವೆ.

ಆದರೆ ಜಕಾನಾ ಎಂಬ ನೀರು ಹಕ್ಕಿಯ ವರ್ತನೆ ಮಾತ್ರ ತೀರ ವಿಚಿತ್ರ. ಗೂಡು ಕಟ್ಟುವುದು, ಮೊಟ್ಟೆಗಳಿಗೆ ಕಾವು ಕೊಡುವುದು ಹಾಗು ಮರಿಗಳ ಲಾಲನೆ, ಪಾಲನೆ ಮಾಡುವುದು ಗಂಡಿನ ಜವಾಬ್ದಾರಿ! ಗೂಡಿನಲ್ಲಿ ಕೊನೆಯ ತತ್ತಿ ಇಟ್ಟ ಬಳಿಕ ಹೆಣ್ಣು ಪಕ್ಷಿ ಎಲ್ಲ ಹೊಣೆಯನ್ನು ಗಂಡಿಗೆ ನೀಡಿ ಅಲ್ಲಿಂದ ಕಾಲ್ತೆಗೆಯುತ್ತದೆ. ಒಟ್ಟಾರೆ ಹೆಣ್ಣು ಜಕಾನಾ ಬಜಾರಿಯಾಗುತ್ತದೆ. ಗೂಡಿನ ಎದುರೇ ಹಾರಾಡುತ್ತ ಮತ್ತೊಂದು ಗೂಡನ್ನು ಕಟ್ಟಿಕೊಂಡು ಹಳೆಯ ಗಂಡಿಗೆ ವಿಚ್ಛೇದನ ಬಿಸಾಕುತ್ತದೆ! ಬಡಪಾಯಿ ಈ ಮಾಜಿ ಗಂಡ ಜಕಾನಾ ಪ್ರೀತಿಸಿ ಕೈಹಿಡಿದ ಹೆಂಡತಿ ಮನೆ ಬಿಟ್ಟು ಹೋದ ವೇದನೆ ಅನುಭವಿಸುತ್ತ ಮೊಟ್ಟೆಗಳಿಗೆ ಕಾವು ಕೊಡುತ್ತ, ಮರಿಗಳ ಪೋಷಣೆ ಮಾಡಬೇಕು.

 

ಗಣೇಶನ ಪ್ರತಿಷ್ಠಾಪನೆಗಾಗಿ ಅಲಂಕಾರದ ಸಾಮಗ್ರಿ ಖರೀದಿಸಲು ಬಂದವರು ಕುತೂಹಲದಿಂದ ಗೀಜಗದ ಗೂಡಿನಲ್ಲಿರುವ ಮೊಟ್ಟೆ-ಮರಿಗಳನ್ನು ವೀಕ್ಷಿಸಲು-ಖರೀದಿಸಲು ಮುಗಿಬಿದ್ದಿರುವುದು. ಚಿತ್ರ: ಕೇದಾರನಾಥ.


ಇತ್ತ ಬಜಾರಿ ಹೆಣ್ಣು ಜಕಾನಾ ಸೊಕ್ಕಿನಿಂದ ಹೊಸ ಗಂಡಿನೊಂದಿಗೆ ಸರಸ ಆರಂಭಿಸುತ್ತದೆ. ತನ್ನ ಹಳೆಯ ಗಂಡನ ಮನೆ ಎದುರು ಹಾರಾಡುತ್ತ ಮಕ್ಕಳ ಸಾಕಣೆ ಹೇಗೆ ನಡೆದಿದೆ ಎಂದು ಮೇಲುಸ್ತುವಾರಿ ನಡೆಸುತ್ತದೆ. ಹೀಗೆ ಹೆಣ್ಣು ಜಕಾನಾ ಯಾವತ್ತೂ ಸದಾ ವಿಚ್ಛೇದನ ಪತ್ರ ಇಟ್ಟುಕೊಂಡೇ ಪ್ರತಿ ಬಾರಿ ಹಸೆಮಣೆ ಏರುತ್ತದೆ. ನಾಲ್ಕಾರು ಗಂಡುಗಳಿಗೆ ಹೀಗೆ ಸಲೀಸಾಗಿ, ರಾಜಾರೋಷವಾಗಿ ವಿಚ್ಛೇದನಾ ಚೀಟಿ ನೀಡುತ್ತ, ತನ್ನ ಸಂತಾನೋತ್ಪತ್ತಿ ಕೆಲಸ ಅನಾಯಾಸವಾಗಿ ನಡೆಸುತ್ತದೆ.

 

ಕೆರೆ-ಕೊಳ್ಳ, ಹಳ್ಳ-ತೊರೆ ಹಾಗೂ ಹೊಂಡ, ಪಾಳು ಬಿದ್ದ ಬಾವಿಗಳಲ್ಲಿ ಅತ್ಯಂತ ತುದಿಗೆ ಗೀಜಗ ಸಮೂಹ ಹೀಗೆ ಗುಂಪಿನಲ್ಲಿ ಗೂಡು ನೇಯ್ದಿರುತ್ತವೆ. ಚಿತ್ರ: ಕೇದಾರನಾಥ.

 

ಹೀಗೆ ಪರಿಸರದ ಜೀವಿ ವೈವಿಧ್ಯ ಹಾಗೂ ಅದು ತನ್ನ ಸುತ್ತ ಹೆಣೆದುಕೊಂಡಿರುವ ನಿಸರ್ಗದ ಸಂಕೀರ್ಣ ವ್ಯವಸ್ಥೆ ನಮ್ಮ ಜ್ಞಾನಕ್ಷಿತಿಜಕ್ಕೆ ನಿಲುಕದ್ದು. ಹಾಗಾಗಿ ಸುಖಾಸುಮ್ಮನೆ ಈ ಸಂಕೀರ್ಣ ಪರಿಸರ ವ್ಯವಸ್ಥೆಯಲ್ಲಿ ನಾವು ಮೂಗು ತೂರಿಸಿ, ವಿಘ್ನವಿನಾಶಕನ ಆರಾಧನೆಯ ಹೆಸರಿನಲ್ಲಿ ಪರಿಸರಕ್ಕೆ ನಾವೇ ವಿಘ್ನವಾಗುವುದು ಬೇಡ ಎಂದು ಪ್ರೊ. ಗಂಗಾಧರ ಕಲ್ಲೂರ್, ಸುರೇಶ ಹೊನ್ನೂರ ಹಾಗೂ ಚಂದ್ರು ಶಿಂಧೆ ಮನವಿ ಮಾಡಿದ್ದಾರೆ.

 

ಹಾಗೇನಾದರೂ ಈ ಬಾರಿ ಗೀಜಗನ ಗೂಡು ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಇಟ್ಟಿದ್ದು ತಮ್ಮ ಗಮನಕ್ಕೆ ಬಂದರೆ ಕೂಡಲೇ  ಹುಬ್ಬಳ್ಳಿ-ಧಾರವಾಡದವರು(ಪ್ರೊ. ಗಂಗಾಧರ ಕಲ್ಲೂರ 0836-2741197, ಸುರೇಶ ಹೊನ್ನೂರ 94485 65136 ಅಥವಾ ಚಂದ್ರಕಾಂತ ಶಿಂಧೆ -9902031947, ಹರ್ಷವರ್ಧನ್ ಶೀಲವಂತ 98865 21664) ಸಂಪದಿಗರು ಸಮೀಪದ ಅರಣ್ಯ ಇಲಾಖೆಗೆ ಅಥವಾ ಪೊಲೀಸ್ ಠಾಣೆಗೆ ದೂರು ನೀಡಿ ಎಂಬ ಕೋರಿಕೆ.

 

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಇದು ಮಾನವತೆಯ ಲಷ್ಕಣವಲ್ಲ. ಸು೦ದರ ಗೀಜಗದ ಮರಿ, ಮೋಟ್ಟೆ ನೋಡಿದಾಗ ಬಹಳ ಬೇಸರವಾಯಿತು. ಈ ಅಪರೂಪದ ಹಕ್ಕಿ ಕಟ್ಟುವ ಗೂಡು ಒ೦ದು ವಿಸ್ಮಯ. ನನ್ನ ಕ್ಯಾಮರಾ ಕಣ್ನಿನಲ್ಲಿ ಎಲ್ಲಿ ಕ೦ಡರೂ ಸೆರೆ ಹಿಡಿಯುತ್ತೇನೆ. ಈ ಹಕ್ಕಿಗೂ ಉಳಿಗಾಲವಿಲ್ಲದಿರುವುದನ್ನು ಕಲ್ಪಿಸಲೂ ಅಸಾಧ್ಯ. ಅಪರಾಧಿಗಳಿಗೆ ತಕ್ಕ ಶಾಸ್ಥಿ ಮಾಡುವ ಶಕ್ತಿ ಕಾನೂನಿಗಿದೆಯೇ ?

ಆತ್ಮೀಯ ರಮೇಶ, ಕಾನೂನುಗಳಿಗೆ ನಮ್ಮಲ್ಲಿ ಬರವಿಲ್ಲ. ಆದರೆ ಪಾಲಿಸುವವರಿಗೆ ಅವು ಬೇಕಿಲ್ಲ. ಮುರಿಯುವವರಿಗೆ ಅವುಗಳ ನಿರ್ವಿಣ್ಯತೆಯ ಬಗ್ಗೆ ಗೊತ್ತಿದೆ. ಮೇಲಾಗಿ ತಮ್ಮ ಹಕ್ಕುಗಳನ್ನು ಆಗ್ರಹಿಸಲು ಮೂಕ ಹಕ್ಕಿಗೆ ಸಾಧ್ಯವಿಲ್ಲ. ಹಾಗಾಗಿ ಮುಂಗೈ ಜೋರಿಗೆ ಇಲ್ಲಿ ಮಣೆ. ನಮ್ಮಂತೆ ಅವುಗಳಿಗೂ ಈ ಭೂಮಿಯ ಮೇಲೆ ಬದುಕುವ ಹಕ್ಕಿದೆ ಎಂಬ ಸರಳ ಸತ್ಯದ ಅರಿವಾದರೆ ಕ್ಷೇಮ.

ಪ್ರಶಂಸನೀಯ ಬರಹ ಸರ್....ಬಹುಶ: ೪-೫ ವರ್ಷಗಳಿಂದ, ಸಾಧನಕೇರಿಯ ನಡುಗಡ್ಡೆಯ ಮರ, ಗೀಜಗ-ಹಕ್ಕಿಯ ಗೂಡಿಲ್ಲದೇ ಬಿಕೋ ಅಂತಿರೋದು...ಇದೇ ಕಾರಣದಿಂದ ಅನ್ಸುತ್ತೆ. ಪಾಪ...ಪ್ರತೀ ಬಾರಿ, ಈ ಹಕ್ಕಿಗಳು ಇಲ್ಲಿ ತಮ್ಮ ಮನೆನೇ ಮಾಯಾ ಆಗ್ತಿರೊದು ನೋಡಿ, ಇಲ್ಲಿಗೆ ಬರೋದೇ ನಿಲ್ಸಿದ್ವೋ ಏನೊ...?!, ಆದರೆ, ಸುದೈವವೆಂಬಂತೆ ಈ ಬಾರಿ ಸಾಧನಕೇರಿ-ಕೆಲಗೇರಿ ಕೆರೆಗಳ ದುರಸ್ಥಿ, ರಕ್ಷಣಾ ಕಾರ್ಯ ಭರದಿಂದ ನಡೀತಿದೆ...., ಇನ್ನು ಗೀಜಗ ಹಕ್ಕಿಗೆ 'ಬಾರೋ ಸಾಧನಕೇರಿಗೆ' ಅನ್ನೊಣ...ನೀವು ಕೂಡಾ ಒಮ್ಮೆ ವಿಸಿಟ್ ಮಾಡಿ, ಸರ್ಕಾರದವರು ಅಪ್ಪಿ-ತಪ್ಪಿ ಒಳ್ಳೆ ಕೆಲ್ಸಾ ಮಾಡಿರೋದನ್ನ ಅಭಿನಂದಿಸೋಣ. ಪಾಪ ಸರ್ಕಾರದವರನ್ನಷ್ಟೇ ಯಾಕ್ ಅನ್ಬೇಕು....ಇಂಥಾ ಸುಂದರ ಜಾಗ ಗಳನ್ನೆಲ್ಲಾ....ಸುಂದರವಾಗಿಟ್ಕೋಳ್ಳೊದು ನಮ್ಮೆಲ್ಲರ ಜವಾಬ್ದಾರಿ ಕೂಡಾ...ಏನಂತೀರಿ...?

ಆತ್ಮೀಯ ವಾಸುಕಿ ಅವರೆ, ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ದಯವಿಟ್ಟು ತಮಗೆ ಬಿಡುವಾದಾಗ ಈ ಕೆಳಗಿನ ಲಿಂಕ್ ಪರಾಮರ್ಶಿಸಿ.. http://sampada.net/a... ಧನ್ಯವಾದ.

ಒಳ್ಳೆ ಅರಿವು ಮೂಡಿಸುವ ಲೇಖನ . ನಮ್ಮ ಮುಂದಿನ ಪೀಳಿಗೆ ಯವರು ಕೇವಲ ಚಿತ್ರಗಳನ್ನು ನೋಡಿ ಆನಂದ ಪಡಬೇಕಾಗುತ್ತದೆ. ಈಗಿನ ದಿನಗಳಲ್ಲಿ ಗುಬ್ಬಚ್ಚಿಗಳು ಬೆಂಗಳೂರಿನಲ್ಲಿ ಕಾಣುವುದು ಬಹಳ ಬಹಳ ವಿರಳ . ಬಾಲ್ಯದಲ್ಲಿ ನಾವು ಅಕ್ಕಿ ಆರಿಸುವಾಗ ಭತ್ತಕ್ಕಾಗಿ ಬರುತ್ತಿದ್ದ ನೆಂಟರು ಈಗ ಇಲ್ಲದಂತಾದರು :( .