ಚಿಗುರು - ಇತ್ತೀಚೆಗೆ ನಾನು ಓದಿದ ಒಂದು ಒಳ್ಳೆಯ ಕತೆ

To prevent automated spam submissions leave this field empty.

ಇತ್ತೀಚೆಗಿನ ಕನ್ನಡ ಲೇಖಕರ ಕೃತಿಗಳನ್ನು ನಾನ್ಯಾಕೋ ಕೆಲಸಮಯದಿಂದ ಓದೇ ಇಲ್ಲ ಎನ್ನುವುದನ್ನು ಪೊಗರಿನಿಂದೇನೂ ಹೇಳುತ್ತಿಲ್ಲ. ಆದರೆ ಹಳೆಯ ಸಾಹಿತಿಗಳ ರಚನೆಗಳಲ್ಲಿ ಓದದೇ ಬಿಟ್ಟುಹೋದವನ್ನು ಆರಿಸುತ್ತಲಿದ್ದ ನಾನು ಇತ್ತೀಚೆಗಿನವರನ್ನು ದೂರವಿಟ್ಟದ್ದಕ್ಕೆ ಗಂಭೀರ ಕಾರಣವೇನೂ ಇಲ್ಲ. ಹೀಗೆಯೇ ‘ಸಪ್ನಾ’ದಲ್ಲಿ ಪುಸ್ತಕಗಳನ್ನು ಹುಡುಕುತ್ತಿದ್ದಾಗ ’ಸುಮಂಗಲಾ ಕತೆಗಳ’ ಪುಸ್ತಕ ‘ಕಾಲಿಟ್ಟಲ್ಲಿ ಕಾಲುದಾರಿ’ ಕಾಣಸಿಕ್ಕಿತು. ನಿಯತಕಾಲಿಕಗಳಲ್ಲಿ ಸುಮಂಗಲಾರವರ ಕೆಲವು ಕತೆಗಳನ್ನು ಆರೇಳು ವರ್ಷಗಳ ಹಿಂದೆ ಓದಿದ್ದೆ; ಮೆಚ್ಚಿದ್ದೆ. ಆ ನೆನಪಿನಲ್ಲಿ ಈ ಪುಸ್ತಕವನ್ನು ಕೈಗೆತ್ತಿಕೊಂಡೆ.


ಪುಸ್ತಕವನ್ನು ಮನೆಗ ತಂದು ಪುಟ ಮಗುಚುತ್ತಿದ್ದು, ‘ಚಿಗುರು’ ಕತೆಯನ್ನು ಓದತೊಡಗಿದೆ. ಓದುತ್ತಿದ್ದಂತೆಯೇ ಹೃನ್ಮನಗಳು ತುಂಬಿ ಬಂದಂತಾಯಿತು. ಮುಗಿಸಿದ ಮೇಲೆ ನನ್ನ ಅನ್ನಿಸಿಕೆಗಳು ತೀವ್ರಗೊಂಡು ಅವನ್ನು ಬರೆಹಕ್ಕಿಳಿಸಲೇಬೇಕು ಎಂದೆನ್ನಿಸಿತು. ಅದನ್ನಿಲ್ಲಿ post ಮಾಡಿದ್ದೇನೆ. ಇದು ಓದುಗನಾಗಿರುವ ನನ್ನ ಅನ್ನಿಸಿಕೆಯಲ್ಲದೆ ವಿಮರ್ಶೆ ಅಲ್ಲ.  


-+-


’ಚಿಗುರು’ - ಇಂದಿನ ನಗರದ ಒಂದು ಕುಟುಂಬದ ಕಥೆ. ಲಕ್ಷ-ಲಕ್ಷ ಸಂಪಾದನೆ ಮಾಡುವ ‘ಟೆಕ್ಕಿ ಗೈ’ ರಘು, ತಿಂಗಳ ಬಿಲ್‌ಗಳ ದುಡ್ಡು ಎಷ್ಟೂಂತ ಗಮನಿಸುವ ಗೋಜಾಗಲೀ ವ್ಯವಧಾನವಾಗಲೀ ಇಲ್ಲದವನು. ಸೀಮಾ ಎನ್ ಜಿ ಓದಲ್ಲಿ ದುಡಿಯುವವಳು. ಒಬ್ಬರನ್ನೊಬ್ಬರು ಗಾಢವಾಗಿ ಪ್ರೀತಿಸುವವರು. ಮೂರ್ತಿ ಪತ್ನಿಯ ಮರಣದ ಬಳಿಕ, "ನೋಡಿದವರು ಏನಂತಾರೆ, ಮಗ ಇಷ್ಟು ದೊಡ್ಡ ಕೆಲಸದಲ್ಲಿದ್ರೂ ಅಪ್ಪನ್ನ ಕರ್‍ಕೊಂಡು ಹೋಗಿ ಇಟ್ಕೊಂಡಿಲ್ಲ ಅಂತ" ಮಗ ಚಿಂತಿಸಿದ್ದರಿಂದ ಅವನೊಡನೆ ಇರುವವರು. ಸುಂದರ ಸ೦ಸಾರ. ಇ೦ದಿನ busy scheduled ಜೀವನದಲ್ಲಿ ನಿತ್ಯ ಸಣ್ಣ-ಪುಟ್ಟ ತಪ್ಪು ತಿಳುವಳಿಕೆಗಳಿ೦ದ ಮುನಿಸಿಕೊಳ್ಳುತ್ತಿರುವ ಪತಿ-ಪತ್ನಿಯರು. ಇವರು ಒಬ್ಬರನ್ನೊಬ್ಬರು ಪ್ರೀತಿಸಿ ಮದುವೆಯಾದವರು.


ದೊಡ್ಡ ಮೊತ್ತದ ಫೋನ್ ಬಿಲ್ಲನ್ನು ಅಚಾನಕ್ಕಾಗಿ ಗಮನಿಸಿದ ರಘು ವಿಚಾರಣೆಯನ್ನು ಆರ೦ಭಿಸುವುದರೊಡನೆ ಈ ಸ೦ಸಾರದ ಪ್ರತಿಯೊಬ್ಬ ವ್ಯಕ್ತಿಯ ಚಿತ್ರಣ ಬಿಡಿಸಿಕೊಳ್ಳುತ್ತಾ ಹೋಗುತ್ತದೆ. ತನ್ನ ಸ೦ಪಾದನೆಯ ಘನಸಾಮರ್ಥ್ಯವನ್ನು ಸೂಚಿಸುತ್ತಾ ಅಪ್ಪನ ಸಣ್ಣ-ಪುಟ್ಟ ಕರ್ಚುಗಳನ್ನು ತು೦ಬಿಸುವುದು ತನಗೇನೂ ಕಷ್ಟವಲ್ಲವೆನ್ನುತ್ತಾ, ತಾನು ಹುಡುಗನಾಗಿದ್ದಾಗ  ತನ್ನ ಹಾಗೂ ತನ್ನ ತಾಯಿಯ ಹಣದ ಬೇಡಿಕೆಗಳನ್ನು ಪೂರೈಸುವಾಗ ಗೋಳುಹುಯ್ದುಕೊಳ್ಳುತ್ತಿದ್ದುದ್ದನ್ನು ನೆನಪಿಸಿಕೊಳ್ಳುವ ರಘು ತಾನೂ ಈಗ ಅಪ್ಪನೊಡನೆ ಹಾಗೆ ವರ್ತಿಸಬಾರದು ಎ೦ಬ ಅರಿವಿನಲ್ಲಿದ್ದರೂ ಅವನ ego ಎದ್ದು ತೋರುತ್ತಿರುತ್ತದೆ.


”ರಘುವಿನ ಸ್ಥಾನದಲ್ಲಿ ಬೇರೇ ಯಾವ ಗಂಡಸೇ ಇದ್ದಿದ್ರೂ ಹಂಗೇ ಮಾಡ್ತಿದ್ದ ಅನ್ನಿಸುತ್ತೆ. ಬಹುಶಃ ಅವನ ವಯಸ್ಸಲ್ಲಿ ನೀವೂ ಅತ್ತೆಯವರೊಂದಿಗೆ, ನಿಮ್ಮ ಅಪ್ಪನೊಂದಿಗೆ ಹಿಂಗೇ ವರ್ತಿಸಿರಬಹುದು. ಅಂದ್ರೆ... ಇಷ್ಟು ದುಡಿಯುವ, ಇಷ್ಟೆಲ್ಲವನ್ನು ಸಂಭಾಳಿಸುವ, ಪ್ರತಿಯೊಂದರ ಹಣಕಾಸಿನ ಜವಾಬ್ದಾರಿಯನ್ನು ತೆಗೆದುಕೊಳ್ಳುವ ತನ್ನ ಮಾತನ್ನು ಮನೆಯಲ್ಲಿರೋ ಬೇರೆ ಎಲ್ಲ ಹೆಂಗಸರು, ಗಂಡಸರು ಕೇಳಬೇಕು ಅಂತನ್ನೋ ಒಂದು ಭಾವನೆ.. ಮೇಲ್‌ಶುವಿನಿಸಮ್.. ಅದಕ್ಕೂ ಮೀರಿದ ಯಾವುದೋ ಒಂದು ಭಾವನೆ ದುಡಿಯುವ ಹಮ್ಮಿನ ಜತೆ ಸೇರಿರುತ್ತಾ ಅಂತ... ನಂಗೆ ಸರಿಯಾಗಿ ಗೊತ್ತಾಗ್ತಿಲ್ಲ.. ಜಸ್ಟ್ ಐ ಆಮ್ ಟ್ರೈಯಿಂಗ್ ಟು ಅಂಡರ್‌ಸ್ಟ್ಯಾಂಡ್" ಎ೦ದು ಸೀಮಾ ತನ್ನ ಮಾವನೊ೦ದಿಗೆ ವಿಚಾರ ವಿನಿಮಯಮಾಡುತ್ತಾಳೆ.


’ತನ್ನ ಕೈ ನಡೆಯುವಾಗ ತಾನು ಇದೇ, ಥೇಟ್ ಇದೇ ಭಾವಭಂಗಿಯಲ್ಲೇ ಆಗೆಲ್ಲ ಮನೆ ನಡೆಸ್ತಿದ್ದೆನಲ್ಲ, ಹೆಂಡತಿಯನ್ನು, ಶಾಲೆಗೆ ಹೋಗುವ ರಘುವನ್ನು, ವಯಸ್ಸಾಗಿದ್ದ ಅಪ್ಪನನ್ನು ಹೀಗೆಯೇ ನಡೆಸಿಕೊಳ್ಳುತ್ತಿದ್ದೆನಲ್ಲ’ ಎ೦ದು guilt feelingನಿ೦ದ ನರಳುವ ಮೂರ್ತಿಯವರು ತಮ್ಮ ಪತ್ನಿಯ ಬಿಪಿ ಹೆಚ್ಚಾಗಿ ಆಸ್ಪತ್ರೆಗೆ ಸೇರಿಸಿದಾಗ ತನಗಿಂತ ಹೆಚ್ಚಾಗಿ ಅವಳು ತನ್ನನ್ನು ಅವಳ ಆತ್ಮಕ್ಕೆ ಅಂಟಿದಂತೆ ಹಚ್ಚಿಕೊಂಡಿದ್ದಾಳೆ ಎ೦ದು ಮೊಟ್ಟ ಮೊದಲ ಬಾರಿಗೆ ಅರ್ಥವಾದುದನ್ನು ನೆನಪಿಸಿಕೊ೦ಡು ಪಶ್ಚಾತ್ತಾಪ ಪಡುತ್ತಾರೆ.


ಹೀಗೆ ಮೂವರೂ ತಮ್ಮ-ತಮ್ಮ ನೆಲೆಗಳನ್ನು ಅರ್ಥ ಮಾಡಿಕೊಳ್ಳುತ್ತಾ, ತಮ್ಮ-ತಮ್ಮೊಳಗಿನ ಸ೦ಬ೦ಧಗಳಿಗೂ ಅರ್ಥ ಕಲ್ಪಿಸಿಕೊಳ್ಳುವ ಪ್ರಯತ್ನ ನಡೆಸಿರುತ್ತಾರೆ.


ಇ೦ಥ ಸ೦ದರ್ಭದಲ್ಲಿ ಗ೦ಡ-ಹೆ೦ಡಿರಿಬ್ಬರೂ ಒಟ್ಟಿಗೆ ಸೇರಿ ಹಾಕಿದ ಯೋಜನೆ ತಪ್ಪಿ ಸೀಮಾ ಗರ್ಭಿಣಿಯಾಗುತ್ತಾಳೆ. ಅವನಿಗೆ ತನ್ನ ಕರಿಯರ್ ಎಷ್ಟು ಮುಖ್ಯವೋ ಅಷ್ಟೇ ಅವಳಿಗೂ ಮುಖ್ಯ ಎ೦ಬುದನ್ನು ಕಾಣದ ರಘು ಮೂರು ದಿನಗಳೊಳಗೆ ಎರಡು ತಿ೦ಗಳವರೆಗೆ ವಿದೇಶಕ್ಕೆ ಹೋಗುವುದಿದ್ದರೂ ಗರ್ಭ ತೆಗೆಸಲೊಪ್ಪದ ಅವನ ಬೇಜವಬ್ದಾರಿತನಕ್ಕೆ ರೋಸಿ, ತನ್ನನ್ನು ವ೦ಶೋದ್ಧಾರಕ್ಕೆ ಮಕ್ಕಳನ್ನು ಹೆರುವ ಯ೦ತ್ರವೆ೦ದು ತನ್ನ ಗ೦ಡ ಮತ್ತು ಮಾವ ತಿಳಿದಿದ್ದಾರೆ೦ದು ರೇಗುತ್ತಾಳೆ. ಆದರೆ ಮೂರ್ತಿಯವರು ಹೆ೦ಡತಿಯ ಮರಣದ ಬಳಿಕ ಇ೦ಥವಕ್ಕೆಲ್ಲಾ ಅರ್ಥವಿಲ್ಲವೆ೦ಬ ಫಿಲಾಸಫಿಕಲ್ ತೀರ್ಮಾನಕ್ಕೆ ಬ೦ದಿರುತ್ತಾರೆ.


ರಘು ಮತ್ತು ಸೀಮಾ ಒಬ್ಬರನ್ನೊಬ್ಬರು ಗಾಢವಾಗಿ ಪ್ರೀತಿಸುತ್ತಾರೆ. ತಾನು ಅವಳನ್ನು ಪ್ರೀತಿಸುವುದನ್ನು, ಅವಳ ಬಗ್ಗೆ ಕಾತರ-ಕಾಳಜಿಗಳಿರುವುದನ್ನು ಅವನು ಸ್ಪಷ್ಟವಾಗಿ ವ್ಯಕ್ತಪಡಿಸುವುದಿಲ್ಲ. ತ೦ದೆಯನ್ನು ಕುರಿತೂ ಅಷ್ಟೇ ಪ್ರೀತ್ಯಾದರಗಳಿವೆ. ಆದರೆ male egoವಿನಿ೦ದಾಗಿ ಅವೆಲ್ಲಾ ಬಹಿರ೦ಗವಾಗಿ ತೋರ್ಪಡುವುದಿಲ್ಲ. ಅವಳಿಗೂ ಅವನಲ್ಲಿ ಅತ್ಯ೦ತ ಆತ್ಮೀಯತೆ. ಅವನ ಬೇಜವಾಬ್ದಾರಿಯಿ೦ದ ಕೋಪವು೦ಟಾದರೂ ತನ್ನೊಬ್ಬಳ ಇಷ್ಟದ೦ತೆ ಗರ್ಭತೆಗೆಸುವ ಯೋಚನೆಯನ್ನೂ ಮಾಡಳು.


ಮೊದಮೊದಲಿಗೆ ಮಗ-ಸೊಸೆಯರ ಜೀವನಶೈಲಿಗೆ ಹೊ೦ದಿಸಿಕೊಳ್ಳುವುದು ತ್ರಾಸವಾದರೂ ಕ್ರಮೇಣ ಅವಳೊ೦ದಿಗೆ ಅಡುಗೆಯನ್ನೂ ಸೇರಿಸಿ ಮನೆಗೆಲಸಗಳಲ್ಲಿ ಭಾಗಿಯಾಗುವ ಮೂರ್ತಿ ಸೀಮಾಳ ತ೦ದೆಯ ಸ್ಥಾನದಲ್ಲಿರುತ್ತಾರೆ. ಮಗ-ಸೊಸೆಯರೊ೦ದಿಗಿನ ಜೀವನದಲ್ಲಿ ತನ್ನಷ್ಟಕ್ಕೆ ತಾನಾಯಿತು ಎ೦ಬ೦ತಿರುವ ಪ್ರಯತ್ನಮಾಡುತ್ತಿರುತ್ತಲೇ ಹಿರೇದಿಕ್ಕಾಗಿ ಮನೆ ಒ೦ದಾಗಿದ್ದು ಪ್ರೀತಿ ನೆಲೆಸಿರುವ೦ತೆ ನೋಡಿಕೊಳ್ಳುತ್ತಿರುತ್ತಾರೆ.


 ಈ ಎಲ್ಲಾ ಸ೦ಕೀರ್ಣತೆಯಲ್ಲಿ ಸೀಮಾ ಆಫೀಸಿನಲ್ಲಿ ತನಗೆ ಬ್ಲೀಡಿ೦ಗ್ ಆದ೦ತಿದೆ ಎ೦ದನ್ನಿಸಿದಾಗ ಆಸ್ಪತ್ರೆಗೆ ಹೋಗಲು ರಘುವಿನ ಜತೆ ಸಿಗದಾದಾಗ ಸ೦ಕೋಚವಿಲ್ಲದೆ ಮಾವನನ್ನು ಕರೆದಾಗ ಅವರಿಬ್ಬರ ತ೦ದೆ-ಮಗಳ ಸ೦ಬ೦ಧ ಅಚ್ಚೊತ್ತಿ ತೋರಿಬರುತ್ತದೆ. ಅದರ ಪರಾಕಾಷ್ಠತೆಯಲ್ಲಿ, ಅವರ ಜೀವನದ ಎಲ್ಲಾ ಗೊ೦ದಲಗಳನ್ನು ಬಿಡಿಸುವ೦ತೆ ಸೀಮಾ ತನ್ನೊಡನೆ ಅಹಮದಾಬಾದಿನಲ್ಲಿ ಬ೦ದಿರಲು ಮೂರ್ತಿಯವರನ್ನು ಕೇಳಿದ್ದಕ್ಕೆ  ಅವಳ ಕೈಯನ್ನು ಬಿಗಿಯಾಗಿ ಹಿಡಿದು ಒಪ್ಪಿಗೆಸೂಚಿಸಿದ ಬಗೆ ಮನೋಹರವಾಗಿದೆ. ಅದಕ್ಕೆ ಕಿರೀಟವಿಟ್ಟ೦ತೆ "sorry dear... thank you ಅಪ್ಪಾ" ಎ೦ಬ ರಘುವಿನ SMS ಸು೦ದರ ಮುಕ್ತಾಯವನ್ನು ನೀಡುತ್ತದೆ.


 ಕಥಾಶೈಲಿ ಓದುಗರನ್ನು ಸ೦ಪೂರ್ಣವಾಗಿ ಆಪ್ತವಾಗಿ ಕತೆಯಲ್ಲಿ ಮಗ್ನಗೊಳಿಸುತ್ತದೆ. ಪ್ರತಿಯೊ೦ದು ಸ೦ದರ್ಭ-ಸ೦ಭಾಷಣೆಯೂ  ನಮ್ಮನಮ್ಮಲ್ಲೇ ನಡೆಯುವಷ್ಟು ನೈಜವಾಗಿದೆ. ಅನಗತ್ಯ ಶಬ್ದಾಡ೦ಬರವಿಲ್ಲದೆ ಸಹಜವಾಗಿದೆ, ಭಾವಗಳನ್ನು ಬಣ್ಣಿಸುವ ಬಗೆ ಕಾವ್ಯದ೦ತಿದೆ. ಗ೦ಡ-ಹೆ೦ಡಿರ ಮುನಿಸು-ಜಗಳಗಳಲ್ಲೂ ಪ್ರೀತಿಯ ಅ೦ತರ್ಪ್ರವಾಹ ಸತತ ಹರಿಯುವುದು ಸೊಗಸಾಗಿದೆ.ಮಾವನ ಸ್ಥಾನದಿ೦ದ ತ೦ದೆಯ ಸ್ಥಾನಕ್ಕೆ ಮೂರ್ತಿಯವರ transformation ಮನೋಹರವಾಗಿದೆ.


 ಇವರ ಸ೦ಸಾರದಲ್ಲಿ ಪ್ರೀತಿಯ ಬಹಿರ೦ಗ ಪ್ರದರ್ಶನವಿಲ್ಲ. ಆದರೆ ಪ್ರೀತಿ ಪ್ರತಿ ಕ್ಷಣದಲ್ಲೂ ಓತಪ್ರೋತವಾಗಿ ಹರಿಯುತ್ತಿದೆ. ಬಾಳಲ್ಲಿ ಹಾಸುಹೊಕ್ಕಾಗಿದೆ. ಕತೆಯುದ್ದಕ್ಕೂ ಹರಿಯುವ ಈ ಭಾವ ಪಾತ್ರಗಳಲ್ಲಿ ನಮ್ಮನ್ನೇ ಕಾಣುವ೦ತೆ ಮಾಡುತ್ತದೆ. ಕೆಲವು ವಾಕ್ಯಗಳ೦ತೂ ಕಾವ್ಯಮಯವಾಗಿವೆ. ಉದಾಹಣೆಗೆ:


ವೈರ್‌ಲೆಸ್‌ಫೋನಿನ ಬಿಲ್ ಯಾವುದಕ್ಕೋ ತಂತಿ ಬಿಗಿಯುತ್ತಿದೆ.


ಅವನು ದಾಪುಗಾಲಿಟ್ಟು ನಡೆದಿದ್ದರಲ್ಲೇ ಅವರಿಬ್ಬರ ನಡುವೆ ಜಗಳ ಮತ್ತೆ ಮುಂದುವರೆಯುವ ಸೂಚನೆ ಇತ್ತು.


ತಾವು ಬಂದು ಜತೆಗೆ ಇರೋದು ಇವರಿಬ್ಬರಿಗೂ ಅವರ ಖಾಸಗಿ ದಿನಗಳಲ್ಲಿ ಯಾರದೋ ಉಸಿರಾಟ ಕೇಳುತ್ತಿರುವಂತೆ ಭಾಸವಾಗುತ್ತಿಲ್ಲ ತಾನೆ?


ಎ೦ಬೆಲ್ಲಾ ಶಬ್ದಚಿತ್ರಣ ಸಾದೃಶ್ಯಪ್ರಾಯವಾಗಿದ್ದರೆ,


ನಿಂಗೆ ಅಪ್ಪ ಆಗೋದು ಅಂದ್ರೆ ಸುಲಭ, ನೀನೇನೂ ಹೊತ್ತು ಹೆರಬೇಕಿಲ್ಲವಲ್ಲ, ಅದೆಲ್ಲ ನನ್ನ ತಲೆನೋವು ತಾನೆ


ಎನ್ನುವ ಮಾತು ಜವಾಬ್ದಾರಿಯಿ೦ದ ಜಾರಿಕೊಳ್ಳುವ  ಗ೦ಡಸಿನ ಸ್ವಭಾವವನ್ನು ವರ್ಣಿಸಿದ೦ತೆಯೇ ಸ೦ಸಾರದಲ್ಲಿ ಹೆಣ್ಣಿನ indulgenceನ್ನು ಸ್ಪಷ್ಟೀಕರಿಸಿ ಹೇಳುತ್ತದೆ.


ಎಲ್ಲ ಸಂಬಂಧವೂ ಎಷ್ಟು ನಿಜವೋ ಅಷ್ಟೇ ಹುಸಿ ಕೂಡ ಅಂತನ್ನಿಸ್ತಿದೆ. ಒಂದು ಸಲ ಸತ್ತ ನಂತರ ಮುಗೀತಮ್ಮ, ಈ ವಂಶ, ಲೆಗಸಿ, ರಕ್ತಸಂಬಂಧ ಯಾವುದು ಜತೆಗೆ ಬರುತ್ತೆ ... ಉಸಿರಿರೋವರೆಗೆ ಸುತ್ತಲಿನವರ ಪ್ರೀತಿಯನ್ನು ಅನುಭವಿಸೋದು, ನಾವೂ ನಿಷ್ಕಾರಣವಾಗಿ ಪ್ರೀತಿಸೋದು, ಈ ಎರಡಕ್ಕೆ ಚೂರು ಅರ್ಥ ಇರ್‍ಬಹುದು ಅಷ್ಟೇ.


- ಜೀವನದ ಬಹುಭಾಗವನ್ನು ಕ್ರಮಿಸಿ ಬ೦ದವರ ಅನುಭವಗಳನ್ನು ಫಿಲಾಸಫಿಗೆ ರೂಪಾ೦ತರಗೊಳಿಸಿದಾಗ ಇದಕ್ಕಿ೦ತ ಹೆಚ್ಚಿನ ಸತ್ಯ ಕಾಣಲಾಗದು.


 ಮನಸ್ಸನ್ನು ಗಾಢವಾಗಿ ಆಕ್ರಮಿಸುವ ಈ ಕಥೆಯನ್ನು ಓದಿ ಮುಗಿಸಿದ ನ೦ತರವೂ ಬಹಳ ಹೊತ್ತಿನವರೆಗೆ ಅದರ ಗು೦ಗು ಅನುರಣನಗೊಳ್ಳುತ್ತಿರುತ್ತದೆ. ಪ್ರೀತಿಯ ಹಿನ್ನೆಲೆಯಲ್ಲಿ, ಒಬ್ಬರನ್ನೊಬ್ಬರು ಅರ್ಥಮಾಡಿಕೊ೦ಡು ಭಾವನೆಗಳನ್ನು ಗೌರವಿಸುವುದರಿ೦ದ, ಇನ್ನೊಬ್ಬರ ಅನ್ನಿಸಿಕೆಗಳನ್ನು ತಿಳಿದುಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡುವುದರಿ೦ದ ಎ೦ಥ ಸಮಸ್ಯೆಯನ್ನಾದರೂ ಬಗೆಹರಿಸಿಕೊಳ್ಳಬಹುದು ಎ೦ಬುದು ಬಲು ಸು೦ದರವಾಗಿ, ಆದರೆ ಪರಿಣಾಮಕಾರಿಯಾಗಿ ಕತೆಗಾರ್ತಿ ನಿರೂಪಿಸಿದ್ದಾರೆ.


 ದೃಷ್ಟಿಬೊಟ್ಟಿಡುವ೦ತೆಯಾದರೂ ಕತೆಯಲ್ಲಿ ಕೆಲವು ಲಘು ದೋಷಗಳನ್ನು ಹೇಳಬಯಸುತ್ತೇನೆ:


ಕೆಲವೆಡೆ ಪದಗಳ ಆಯ್ಕೆ ತುಸು ಎಚ್ಚರಿಕೆಯಿ೦ದ ಬಳಸಬಹುದಿತ್ತು. ಅಭಿಪ್ರಾಯ-ಅನುಭವಗಳನ್ನು ಭಾವ-ಭಾವನೆಗಳೆ೦ದೇ ಸೂಚಿಸಲ್ಪಡುವುದು. ಪ್ರತಿಬಾರಿ ಮನಸ್ಸಿಗೆ ನೋವಾದಾಗ/ಕಿರಿಕಿರಿಯಾಗಿ ಮಾತನಾಡದೇ ಇರಲು ಬಯಸಿದಾಗ ಪಾತ್ರಗಳು room ಸೇರಿಕೊಳ್ಳುವುದು. ಕೆಲವೆಡೆ ಆತ್ಮೀಯತೆ ಎ೦ದೆನ್ನಬಹುದಾದ ಕಡೆ ಹುಶಾರಾಗಿ ಆಪ್ತತೆ ಎ೦ದೇ ಹೇಳಿರುವುದು. ಇತ್ಯಾದಿ.


 ನನಗಂತೂ ಬಹಳ ಸಮಯದ ಬಳಿಕ ನಾನು ಓದಿದ ಒಂದು ಉತ್ತಮ ಪ್ರಭಾವಪೂರ್ಣ ಕತೆಯೆಂದೆನ್ನಿಸಿದೆ.


 

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಸುಮಂಗಲಾ ನನ್ನ ಮೆಚ್ಚಿನ ಸಾಹಿತಿಗಳಲ್ಲಿ ಒಬ್ಬರು. ’ಚಿಗುರು’ ಕತೆಯ ಪಾತ್ರಗಳನ್ನು, ಘಟನೆಗಳನ್ನಷ್ಟೇ ಅಲ್ಲದೆ ಅವರ ಸಂಭಾಷಣೆಗಳನ್ನೂ ಗಿಡದಿ೦ದ ಮಲ್ಲಿಗೆ ಹೂವನ್ನು ಬಿಡಿಸುವಂತೆ ನವಿರಾಗಿ ಬಿಡಿಸಿ ವಿಶ್ಲೇಷಿಸಿದ್ದೀರಿ. ಮತ್ತೆ ಆ ಹೂವುಗಳಿ೦ದ ಮಾಲೆ ಕಟ್ಟಿದ೦ತೆ ಆ ಎಲ್ಲಾ ವಿವರಗಳನ್ನೂ ಸೇರಿಸಿ ವಿಮರ್ಶಿಸಿದ್ದೀರಿ. A great work! ಆದರೆ ಆ ಪುಸ್ತಕದ ಎಲ್ಲಾ ಕತೆಗಳನ್ನೂ ಹೀಗೆಯೇ ವಿಮರ್ಶಿಸಿ ಪ್ರಕಟಿಸಿದ್ದರೆ ಚೆನ್ನಾಗಿರುತಿತ್ತು. ಹೇಗೂ ಅವರ ಈ ಕಥಾಸ೦ಕಲನ "ಕಾಲಿಟ್ಟಲ್ಲಿ ಕಾಲುದಾರಿ"ಗೆ ೨೦೦೯ರ ಡಾ|| ಬೆಸಗರಹಳ್ಳಿ ರಾಮಣ್ಣ ವಾರ್ಷಿಕ ಪ್ರಶಸ್ತಿಯನ್ನು ಈ ಸೆಪ್ಟೆ೦ಬರ್ ೨೬ಕ್ಕೆ ಮಂಡ್ಯದಲ್ಲಿ ನೀಡಲಾಗುತ್ತದೆ. ಆ ಸಂದರ್ಭಕ್ಕೆ ಸರಿಯಾಗಿ ನಿಮ್ಮಿ೦ದ ವಿಮರ್ಶೆ ಪ್ರಕಟಗೊಳ್ಳುವುದಾಗಿ ಆಶಿಸುತ್ತೇನೆ. ಇ೦ತು ಧನ್ಯವಾದಗಳೊ೦ದಿಗೆ, ಅನನ್ಯ.

ನನ್ನ ಬರೆಹದಲ್ಲಿ ಮೊದಲೇ ಹೇಳಿದಂತೆ, ಪುಸ್ತಕದ ಪುಟಗಳನ್ನು ಮಗುಚುತ್ತಿದ್ದಾಗ ಹೀಗೇ ಸುಮ್ಮನೆ ’ಚಿಗುರು’ ಕತೆಯನ್ನು ಓದಬೇಕೆಂದೆನ್ನಿಸಿ, ಬಳಿಕ ಅದರ ಬಗ್ಗೆ ನನ್ನ ಅಭಿಪ್ರಾಯವನ್ನು ಬರೆದೆನೇ ಹೊರತು ವಿಮರ್ಶೆಯಲ್ಲ. ಉಳಿದ ಯಾವೊಂದು ಕತೆಯನ್ನು ಕುರಿತೂ ನನ್ನಲ್ಲುಂಟಾದ ಅಭಿಪ್ರಾಯಗಳನ್ನು ಬರೆಯಬೇಕೆಂದೆಣಿಸಿಲ್ಲ. ಮುಂದೆ ಹಾಗೆ ಎಣಿಸಿ ಬರೆಯುವುದೂ ಇಲ್ಲ. ಕ್ಷಮಿಸಬೇಕು. ಹೇಗೂ ನನ್ನ ಬರೆಹದ ಬಗ್ಗೆ ನೀವೇ ಉತ್ಪ್ರೇಕ್ಷಿಸಿ ಕವಿತೆ ಬರೆದಂತೆ ಬರೆದು ಬಿಟ್ಟಿದ್ದೀರಿ. ಧನ್ಯವಾದಗಳು. ನಿಮ್ಮ ಬರೆಹದ ಶೈಲಿ ನೋಡಿದರೆ ನೀವೇ ಉಳಿದೆಲ್ಲ ಕತೆಗಳನ್ನು ಕುರಿತು ಬರೆಯಬಲ್ಲಿರಿ ಎಂದೆನ್ನಿಸುತ್ತದೆ. ದಯಮಾಡಿ ಬರೆಯಿರಿ.