ಅಗಸನ ಕುಯುಕ್ತಿ - ಕತ್ತೆಯ ಛಲ

To prevent automated spam submissions leave this field empty.

ಈ ಕತೆ ನನ್ನದೇ ಕಲ್ಪನೆಯೇನಲ್ಲ.ಮಿಂಚಂಚೆಯಲ್ಲಿ ಬಂದಿತ್ತು. ಸಂಪದದಲ್ಲಿ ಇದನ್ನು ಓದಿರುವವರು ನೂರಾರು ಮಂದಿ ಇದ್ದಿರಬಹುದು. ಆದರೆ ಇನ್ನೂ ಓದದೇ ಇರುವ ಸಜ್ಜನರಿಗಾಗಿ ಕನ್ನಡಿಸಿದ್ದೇನೆ. :)

 

ಅಗಸನೊಬ್ಬನ ಕತ್ತೆ ಆಳದ ಬಾವಿಗೆ ಬಿತ್ತು. ಆ ಬಾವಿ ಅಗಸನದ್ದೇ. ನೀರೇನೂ ಇದ್ದಿಲ್ಲ ಆದಕಾರಣ ಕತ್ತೆಗೆ ಬಹಳ ನೋವಾಯಿತು. ಪಶು ಸಹಜ ಪ್ರವೃತ್ತಿ, ಯಾತನೆಯಿಂದ ಅದು ಕಿರುಚಲಾರಂಭಿಸಿತು. ಅಗಸ ಅದನ್ನು ಮೇಲೆತ್ತುವುದರ ಲಾಭಾಲಾಭಗಳನ್ನು ಲೆಕ್ಕ ಹಾಕಿ "ಕತ್ತೆಗೆ ವಯಸ್ಸಾಗಿದೆ. ಈ ಬಾವಿಯಿಂದ ಇದನ್ನು ಹೊರತರಲು ಕೂಲಿಯವರಿಗೆ ಹೆಚ್ಚು ದುಡ್ಡು ಕೊಡಬೇಕಾದೀತು, ಆಮೇಲೆ ಇದನ್ನು ಸಾಕಬೇಕೆಂದರೆ ವೃಥಾ ವೆಚ್ಚ! ಅಲ್ಲದೆ ಬಾವಿಯನ್ನು ಮುಚ್ಚಿಸಲೇಬೇಕಾಗಿದೆ. ಹೀಗಾಗಿ ಕತ್ತೆಯನ್ನು ಒಳಗೇ ಬಿಟ್ಟು ಬಾವಿಯನ್ನು ಮುಚ್ಚಿಸಿದರಾಯಿತು!" ಎಂಬ ತೀರ್ಮಾನಕ್ಕೆ ಬಂದ.

ಸರಿ. ತನ್ನ ಮನೆಯವರು ಹಾಗು ಕೆಲಸದವರನ್ನು ಕರೆಸಿ, ಬಾವಿಯಲ್ಲಿ ಮಣ್ಣು ಎಳೆದು ತುಂಬಲಾರಂಭಿಸಿದ. ಕತ್ತೆಗೆ ಈ ಉದ್ದೇಶ ಅರ್ಥವಾಗಿ ತನ್ನ ಭಾಷೆಯಲ್ಲಿಯೇ ರೋಧಿಸಿತು.  ಈ ಆರ್ತನಾದ ಅಗಸನಿಗೇಕೆ ಅರ್ಥವಾದೀತು? ತನ್ನ ಕೆಲಸವನ್ನು ಮುಂದುವರೆಸಿದ. ಆದರೆ ಮುಂದೆ ನಡೆದ ಘಟನೆಯನ್ನು ಆತ ಊಹಿಸದಾದ.

ಎಲ್ಲರೂ ಸೇರಿ ಬಾವಿಯಲ್ಲಿ ಸುಮಾರು ನಾಲ್ಕು ಅಡಿಗಳಷ್ಟು ಮಣ್ಣೆಳೆದು ಆಗಿತ್ತಷ್ಟೆ. ಕತ್ತೆ ಏನಾಗಿರಬಹುದೆಂದು ಕುತೂಹಲದಿಂದ ಬಗ್ಗಿ ನೋಡಿದಾಗ ಆ ಕತ್ತೆ ಆ ಮಣ್ಣಿನಡಿಯಿಂದ ಎದ್ದು ನಿಂತಿತ್ತು. ಮಾತ್ರವಲ್ಲ ನಂತರ ತನ್ನ ಮೇಲೆ ಹಾಕುತ್ತಿದ್ದ ಪ್ರತಿಯೊಂದು ಬುಟ್ಟಿ ಮಣ್ಣನ್ನೂ ತನ್ನ ಮೈಮೇಲಿಂದ ಕೊಡವಿ ಹಾಕಿ ಅದೇ ಮಣ್ಣಿನ ಮೇಲೆಯೇ ಬಂದು ನಿಲ್ಲುತ್ತಿತ್ತು. ಹೀಗೇ ಮಾಡುತ್ತಲೇ ಅದು ಅರ್ಧ ಬಾವಿಯನ್ನು ದಾಟಿಯೇ ಬಿಟ್ಟಿತು.

ಮುಂದೇನು? ಎಲ್ಲರೂ ಸೇರಿ ಕತ್ತೆಯಂತೆ ಮಣ್ಣು ಎಳೆದು ಎಳೆದು ಹಾಕುತ್ತಿದ್ದರೆ, ಕತ್ತೆ ಮಾತ್ರ ನಿರ್ಲಿಪ್ತವಾಗಿ, ಬುದ್ಧಿವಂತಿಕೆ ಹಾಗು ಅಸಾಧಾರಣ ಛಲದಿಂದ ಆ ನೋವಿನಲ್ಲೂ ನಿರಂತರ ಪ್ರಯತ್ನ ಮಾಡಿ ಮಣ್ಣು ಕೊಡವಿ ಹಾಕಿ ಬಾವಿಯಿಂದ ಮೇಲೆ ಬಂದು ಸೇರಿತು.

ನೀತಿ: ನಮ್ಮ ಜೀವನದಲ್ಲೂ ಎಲ್ಲ ಕಡೆಗಳಿಂದ ನಮ್ಮ ಮೇಲೂ ಮಣ್ಣಿನ ರಾಶಿ ಬಂದು ಬೀಳಬಹುದು. ತಡಯಿಲ್ಲದೆ ಬಂದು ಬೀಳುತ್ತಿದೆ ಎಂದು ಅಳುತ್ತಿದ್ದರೆ, ಸಮಾಧಿಯಾಗುವುದು ಖಚಿತ. ಹಾಗಾಗಿ ಸರಿಯಾದ ಸಮಯದಲ್ಲಿ ; ಅತ್ಯಂತ ತ್ವರಿತವಾಗಿಯೇ ನಮ್ಮ ಜೀವವುಳಿಸಿಕೊಳ್ಳುವ ತೀರ್ಮಾನ ತೆಗೆದುಕೊಳ್ಳಬೇಕು. ಅಷ್ಟೇ ಅಲ್ಲ ಜೀವವುಳಿಸಿಕೊಳ್ಳುವವರೆಗೂ ಹೋರಾಟ ನಡೆಸಬೇಕು. ಸತ್ತರೂ ಚಿಂತೆ ಇಲ್ಲ, ಬದುಕುವ ಪ್ರಯತ್ನವನ್ನು ಬಿಡಕೂಡದು.

ತಮಾಶೆ: ಕತ್ತೆ ಹೊರಗೆ ಬಂದು ಅಗಸನಿಗಿಂತ ಬುದ್ದಿವಂತಿಕೆಯನ್ನೇನೋ ತೋರಿಸಿತು. ಆದರೆ ಪುನಃ ಅಗಸನ ಕೈಗೆ ಸಿಗದಿರುವ ಬುದ್ಧಿವಂತಿಕೆಯನ್ನು ತೋರಿಸಿತೋ ಇಲ್ಲವೋ ಗೊತ್ತಿಲ್ಲ. ಒಂದು ವೇಳೆ ಅಗಸನ ಕೈಗೆ ಸಿಗದೆ ಓಡಿಹೋದಲ್ಲಿ ನಿಜವಾಗಿಯೂ ಅದು ಬುದ್ದಿವಂತ ಕತ್ತೆಯೇ ಸರಿ. ಒಂದು ವೇಳೆ ಅದು ಪುನಃ ಅವನತ್ತಲೇ ನಡೆಯಿತೆಂದರೆ ತನ್ನ ಯಜಮಾನನು ತಪ್ಪಿತಸ್ಥ ಎಂದು ಹಲುಬುತ್ತ ಕೂಡದೆ "ತನ್ನನ್ನು ಮುಚ್ಚಿಹಾಕುವುದು ಯಜಮಾನನಿಗೆ ಇದ್ದ ಅನಿವಾರ್ಯತೆ, ಅದನ್ನು ಮೀರಲು ಆತನಿಗೂ ಆಗಿದ್ದಿಲ್ಲ, ಹಾಗಾಗಿ ಎಷ್ಟಾದರೂ ಅವನು ನನ್ನವನೇ" ಎಂದು ಉದಾತ್ತವಾಗಿ ಭಾವಿಸಿತು ಎಂದು ತಿಳಿಯಲು ಅಡ್ಡಿಯೇನು?

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಕತೆ-ನೀತಿ ಚೆನ್ನಾಗಿದೆ. ಬುದ್ಧಿವಂತಿಕೆ ಹಾಗು ಅಸಾಧಾರಣ ಛಲದಿಂದ ಕೂಡಿದ ಕತ್ತೆ ಖಂಡಿತ ಪುನಃ ಯಜಮಾನನ ಕೈಗೆ ಸಿಕ್ಕಿರಲಿಕ್ಕಿಲ್ಲ. :) ಜೀವ ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಏನನ್ನು ಬೇಕಾದರೂ ಕಲಿಸುತ್ತದೆ!

ರಘು , ಇದನ್ನು ಓದಿ, ನನ್ನ ಅಣ್ಣನು ಆಫೀಸಿನಲ್ಲಿ ಹೊಸದಾಗಿ ಕೆಲಸಕ್ಕೆ ಸೇರಿದಾಗ , ತುಂಬಾ ಕೆಲಸವನ್ನು ಕೊಟ್ಟು ಕಿರುಕುಳ ಮಾಡಿದರೂ, ಛಲದಿಂದ ಅದನ್ನೆಲ್ಲಾ ಮಾಡಿ, ಅವರು ಮೇಲೆ ಬಂದರು .. ಅವರ ಕಥೆಯು ಇದರ ಸಾರಾಂಶವನ್ನು ಹೋಲುತದೆ. ನಿಮ್ಮ ತಮಾಷೆ ಬರಹವು ನಿಜಕ್ಕೂ ಯೋಚನೆ ಮಾದಬೇಕದ್ದೆ :) (ಸುಮಾರು ೫-೬ ವರ್ಷದ ಹಿಂದೆ ಈ ಕಥೆಯನ್ನು ರವಿ ಬೆಳೆಗೆರೆಯ 'ಓ ಮನಸೇ' ಪುಸ್ತಕದಲ್ಲಿ ಓದಿದ್ದೆ . )

ಧನ್ಯವಾದ ವೀರೇಂದ್ರರೆ! ನನ್ನ ವೈಯುಕ್ತಿಕ ಜೀವನವು ಸಹ ಇದಕ್ಕೆ ಹೊಂದಿಕೆಯಾಗುವಂತೆಯೇ ಇದೆ. ಅಂದ ಹಾಗೆ ನಾನು ಈ ಕಥೆಯನ್ನು ಕನ್ನಡೀಕರಿಸುವಾಗ ಎಲ್ಲೋ ಓದಿದ್ದೀನಲ್ಲ ಈ ಕಥೆಯನ್ನು ಅಂದುಕೊಳ್ತಾ ಇದ್ದೆ. ಓ ಮನಸೇ ಪುಸ್ತಕದ ವಿಷಯ ನೆನಪು ಮಾಡಿದಿರಿ. ಸಂತಸ. ನಂಗೆ ಈಗ ಜ್ಞಾಪಕ ಆಯ್ತು.

ರಘುನಂದನ, ಕಥೆ ತುಂಬಾ ಚೆನ್ನಾಗಿದೆ. ಒಳ್ಳೇ ನೀತಿ ಕಥೆ. ಇದೇ ರೀತಿಯ ಕಥೆ ಈ ಕಥೆಯ ಕೆಳಗಿನ ಕೊಂಡಿಗಳಲ್ಲೇ ಸಿಕ್ಕಿತು ಅಂದರೆ "ಈ ಪುಟವನ್ನು ಹೋಲುವ ಪುಟಗಳು, ಸಂಪದ ಆರ್ಕೈವಿನಿಂದ" ಇಲ್ಲಿ ಸಿಕ್ಕಿತು. ಇದೋ ನೋಡಿ. http://sampada.net/a...

ಅರೆ ಹೌದಲ್ಲ! ಸಂಪದ ತುಂಬಾ ತುಂಬಾ ಬೆಳೆದಿದೆ.(ಇನ್ನೂ ಬೆಳೆಯಲಿ!:) ) ಎಷ್ಟೋ ಲೇಖನಗಳು ಓದೋಕೆ ಮುಂಚೆಯೇ ತೆರೆಮರೆಗೆ ಸರಿದು, ಎಲ್ಲೋ ಅವಿತುಕೊಂಡು ಬಿಡುತ್ತಿವೆ. ನೋಡಿರಲಿಲ್ಲ. ಚೆನ್ನಾಗಿ ಬರೆದಿದ್ದಾರೆ.