ಸರ್ವೋದಯ ಚೇತನ, ಸ್ವಾತಂತ್ರ್ಯ ಸೇನಾನಿ ಧಾರವಾಡದ ದಾಬಡೆ ಅಸ್ತಂಗತ.

To prevent automated spam submissions leave this field empty.

ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಜರುಗಿದ ಕಾರ್ಯಕ್ರಮವೊಂದರಲ್ಲಿ ಹಿರಿಯ ಚೇತನ ನರಸಿಂಹ ದಾಬಡೆ ಅವರು.

 

ಕಳೆದ ಭಾನುವಾರದ ಸಂಜೆಯ ಸೂರ್ಯನೊಂದಿಗೆ ಸ್ವಾತಂತ್ರ್ಯ ಹೋರಾಟದ ಪ್ರಖರ ಚೇತನವೊಂದು ಅಸ್ತಂಗತವಾಯಿತು. ಸರ್ವೋದಯದ ಕ್ರಾಂತಿಚೇತನ, ಸ್ವಾತಂತ್ರ್ಯ ಸೇನಾನಿ ನರಸಿಂಹ ದಾಬಡೆ ಇಹದ ವ್ಯಾಪಾರ ಮುಗಿಸಿದರು. ಉತ್ತರ ಕರ್ನಾಟಕದ ಸಾಕ್ಷಿಪ್ರಜ್ಞೆಯಾಗಿದ್ದ ಈ ಖಾದಿಮಾನವ ಇನ್ನಿಲ್ಲವಾದಾಗ ಸ್ವಾತಂತ್ರ್ಯ ಹೋರಾಟದ ಬಹುದೊಡ್ಡ ಕೊಂಡಿ ಕಳಚಿದಂತಾಯಿತು.

 

ಬ್ರಿಟೀಷರೆ ಭಾರತ ಬಿಟ್ಟು ತೊಲಗಿ ಎಂಬ ‘ಚಲೇಜಾವ್’ ಚಳವಳಿಯ ಸಂಸ್ಮರಣಾ ದಿನಕ್ಕೆ ಒಂದು ದಿನ ಮುಂಚೆ ಈ ಹಿರಿ ಜೀವ ನಮ್ಮನ್ನಗಲಿದರು. ೯೫ ವಸಂತಗಳ ಅರ್ಥಪೂರ್ಣ ಬಾಳು ಬದುಕಿದ ‘ಅಪ್ಪ’ ನರಸಿಂಹ ದಾಬಡೆ, ಧಾರವಾಡದ ತೇಜಸ್ವಿನಗರದ ತಮ್ಮ ಶ್ರೀನಿವಾಸದಲ್ಲಿ  ಭಾನುವಾರ ಸಂಜೆ ೫.೨೫ಕ್ಕೆ ಕೊನೆಯುಸಿರೆಳೆದರು. ತಾಯಿಯಂತೆ ಸಲುಹಿದ ಸೊಸೆ ಶಾರದಾ, ಮಗಳು ಭಾರತಿ, ಮಗ ಡಾ. ಗೋಪಾಲ್ ಅವರ ಸಖ್ಯದಲ್ಲಿ ಶಾಂತವಾಗಿ ಮರಳಿ ಬಾರದ ಲೋಕಕ್ಕೆ ಅವರು ತೆರಳಿದರು.  ರಾತ್ರಿ ೮ ಗಂಟೆಯ ವೇಳೆಗೆ ಡಾ. ಎಂ.ಎಂ. ಜೋಷಿ ಕಣ್ಣಿನ ಆಸ್ಪತ್ರೆಯ ವೈದ್ಯರು ಆಗಮಿಸಿ, ಅವರ ಕಣ್ಣುಗಳನ್ನು  ದಾನವಾಗಿ ಪಡೆದುಕೊಂಡರು. ಧನ್ಯವಾಗಿತ್ತು ಬದುಕು ಸಾವಿನಲ್ಲೂ! ಸೋಮವಾರ ಬೆಳಿಗ್ಗೆ ಹೊಸಯಲ್ಲಾಪುರದ ರುದ್ರಭೂಮಿಯಲ್ಲಿ ಅವರ ಪಾರ್ಥಿವ ಶರೀರದ ಅಂತ್ಯಸಂಸ್ಕಾರ ಜರುಗಿತು.

 

 

ಇಹ ಲೋಕ ತ್ಯಜಿಸಿದ ಆದರ್ಶ ಪುರುಷನ ಕಳೆವರದ ಮುಂದೆ ಸೊಸೆ ಶಾರದಾ, ಮಗ ಡಾ. ಗೋಪಾಲ್, ಮಗಳು ಭಾರತಿ ಹಾಗೂ ಅಳಿಯ ಮತ್ತು ಪಾಲಿಕೆ ಸದಸ್ಯ ಶಿವು ಹಿರೇಮಠ.

 

ಸ್ವಾತಂತ್ರ್ಯ ಹೋರಾಟದ ದಿನಗಳಲ್ಲಿ ತಾವು ಅನುಭವಿಸಿದ ಜೈಲುವಾಸವೇ ತಮ್ಮ ಜೀವನದ ಅತ್ಯಂತ ಸಂಭ್ರಮದ ಕ್ಷಣಗಳು ಎನ್ನುತ್ತಿದ್ದ ಅವರು, ಬ್ರಿಟೀಷರ ಪಾಲಿಗೆ ಸಿಂಹಸ್ವಪ್ನವಾಗಿದ್ದವರು. ಗಾಂಧೀಜಿಯವರ ಕರೆಗೆ ಓ ಗೊಟ್ಟು ವಿಧಾಯಕ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡ ದಾಬಡೆ ಅವರು, ಹಿಂದುಳಿದ ವರ್ಗಗಳ ಪ್ರತಿ ವಿಶೇಷ ಕಾಳಜಿ ಹೊಂದಿದ್ದರು. ಸಮಾಜದಿಂದ ತುಳಿತಕ್ಕೊಳಗಾದ, ಅನ್ಯಾಯಕ್ಕೀಡಾದ ಹಾಗೂ ತುಚ್ಛೀಕರಿಸಲ್ಪಟ್ಟ ಹರಿಜನರ ಗೌರವಾನ್ವಿತ ಬದುಕಿಗಾಗಿ, ಆರ್ಥಿಕ ಸ್ವಾವಲಂಬಿತ್ವಕ್ಕಾಗಿ ಅವರು ಸ್ವಾತಂತ್ರ್ಯಾ ನಂತರ ಅವರು ಅಹರ್ನಿಶಿ ದುಡಿದವರು.

 

ಗ್ರಾಮಗಳಿಗೆ ಸ್ವರಾಜ್ಯ ಪ್ರಾಪ್ತಿ, ತನ್ಮೂಲಕ ಗ್ರಾಮೀಣ ಜನರ ಆರ್ಥಿಕ ಸ್ವಾವಲಂಬಿತ್ವ ಪ್ರೇರೇಪಿಸುವುದು ಅವರ ಉದ್ದೇಶವಾಗಿತ್ತು. ಖಾದಿ ಗ್ರಾಮೋದ್ಯೋಗಗಳು ಮತ್ತು ಗುಡಿ ಕೈಗಾರಿಕೆಗಳ ಪುನರುತ್ಥಾನಕ್ಕೆ ಅವರು ಬಹುವಿಧದಲ್ಲಿ ಶ್ರಮಿಸಿದ್ದರು. ಮಹಾತ್ಮಾ ಗಾಧೀಜಿ ಅವರ ಜೀವನದಿಂದ ಪ್ರಭಾವಿತರಾಗಿ ಅತ್ಯಂತ ಸರಳ ಬದುಕು ರೂಢಿಸಿಕೊಂಡಿದ್ದ ದಾಬಡೆ ಅವರು, ಜೀವನದುದ್ದಕ್ಕೂ ದೇಶಭಕ್ತಿಯ ಪ್ರತೀಕದಂತಿರುವ ಖಾದಿಯನ್ನೇ ತೊಟ್ಟಿದ್ದರು. ಅವರ ಈಡೀ ಕುಟುಂಬ ಮಾತ್ರವಲ್ಲ, ಅವರ ಪ್ರಭಾವಕ್ಕೆ ಒಳಗಾದ ಹಾಗೂ ಅವರಿಂದ ಖಾದಿ ದೀಕ್ಷೆ ಪಡೆದ ಅನೇಕರು ಖಾದಿ ಉಡುವುದನ್ನೇ ಧ್ಯೇಯವಾಗಿಸಿಕೊಂಡಿದ್ದಾರೆ. ಇಂದಿಗೂ ಶಿರಸಾ ಪಾಲಿಸುತ್ತಿದ್ದಾರೆ. 

 

 

ಮಗಳಂತೆ ಸಾಕ್ಷೀಕರಿಸಿದ ಸೊಸೆ ಶಾರದಾ ಅವರೊಂದಿಗೆ ಅಪ್ಪ ನರಸಿಂಹ ದಾಬಡೆ ಧಾರ್ವಾಡದ ಕಲಾಭವನದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ.

 

ಮಾನವೀಯ ಕಳಕಳಿ ಹಾಗೂ ಸಾಮಾಜಿಕ ಬದ್ಧತೆಯ ಅಪರೂಪದ ಸಂಗಮದಂತಿದ್ದ ದಾಬಡೆ ಅವರು, ಕಳೆದ ವರ್ಷ ಉತ್ತರ ಕರ್ನಾಟಕದಲ್ಲಿ ಅತಿವೃಷ್ಟಿ ಸಂದರ್ಭದಲ್ಲಿ ನೆರೆಸಂತ್ರಸ್ತರಾದ ಜನರಿಗೆ ಅವರು ಸಹಾಯಹಸ್ತ ಚಾಚಿದ್ದರು. ಸ್ವಾತಂತ್ರ್ಯ ಹೋರಾಟಗಾರರಿಗೆ ಸರಕಾರ ನೀಡುವ ಪಿಂಚಣಿಯಲ್ಲಿ ಅವರು ೪೦ ಸಾವಿರ ರೂಪಾಯಿಗಳನ್ನು ಮುಖ್ಯಮಂತ್ರಿಗಳ ಪ್ರಕೃತಿ ವಿಕೋಪ ಪರಿಹಾರ ನಿಧಿಗೆ ದಾನಮಾಡಿದ್ದರು. ಪಿಂಚಣಿಯ ಅರ್ಧದಷ್ಟು ಮೊತ್ತವನ್ನು ಅವರು ವಿಧಾಯಕ ಕಾರ್ಯಗಳಿಗೆ, ಸರ್ವೋದಯ ಚಳವಳಿಗೆ ವಿನಿಯೋಗಿಸುತ್ತ ಬಂದ ಅಪರೂಪದ ಮಾನವತಾವಾದಿ ದಾಬಡೆ ಅವರು. ಪಿಂಚಣಿ ಹಣವನ್ನು ಸ್ವಂತಕ್ಕಾಗಿ ಎಂದಿಗೂ ಬಳಸಿಕೊಳ್ಳದ ಅವರು, ಸಮಾಜ ಕಾರ್ಯಕ್ಕೆ ಹಾಗೂ ಸಮಾಜದಲ್ಲಿ ಒಳ್ಳೆಯ ಕೆಲಸ ಮಾಡಿದ ಸಾಮಾಜಿಕ ಕಾರ್ಯಕರ್ತರೊಬ್ಬರಿಗೆ ಪ್ರೋತ್ಸಾಹ ಧನವನ್ನಾಗಿ ನೀಡುತ್ತ ಬಂದವರು.

 

ನಿಸರ್ಗದತ್ತವಾಗಿ ದೊರಕುವ ಹಾಗೂ ನವೀಕರಿಸಬಹುದಾದ ಇಂಧನ ಮೂಲಗಳನ್ನು ಅವಶ್ಯಕತೆಗೆ ತಕ್ಕಷ್ಟು ಬಳಸಿಕೊಳ್ಳಬೇಕು ಎಂಬ ತತ್ವವನ್ನು ಅವರು ಪ್ರಾಯೋಗಿಕವಾಗಿ ತಮ್ಮ ಮನೆಗೆ ಅಳವಡಿಸಿದ್ದರು. ಮನೆಯ ಮೇಲ್ಛಾವಣಿಯಿಂದ ಸಂಗ್ರಹಿಸಲಾದ ನೀರು ಅಲ್ಲಿನ ಮನೆಯಂಗಳದ ಕೈತೋಟ ಹಾಗೂ ಉದ್ಯಾನಕ್ಕೆ ಒದಗುವಂತೆ ಹಾಗೂ ದಿನಬಳಕೆಗೆ ಪ್ರಾಪ್ತವಾಗುವಂತೆ, ಸೌರಶಕ್ತಿಯಿಂದ ಮನೆ ಬೆಳಗುವಂತೆ, ಗೋಬರ್ ಗ್ಯಾಸ್ ನಿಂದ ಮನೆಯ ಅಡುಗೆ, ಮನೆಯಲ್ಲಿ ಉತ್ಪನ್ನವಾಗುವ ತ್ಯಾಜ್ಯ ಗೊಬ್ಬರವಾಗಿ ಪರಿವರ್ತನೆಗೊಂಡು ಮನೆಯಂಗಳದ ಉದ್ಯಾನಕ್ಕೆ ಸಹ ಒದಗುವಂತೆ ಅವರು ವ್ಯವಸ್ಥೆಗೊಳಿಸಿದ್ದರು.

 

ಪರಿಸರ ಸ್ನೇಹಿ ಬದುಕು ರೂಪಿಸಿ, ರೂಢಿಸಿಕೊಳ್ಳುವಲ್ಲಿ ಅವರದ್ದು ಭಗೀರಥ ಪ್ರಯತ್ನ. ದಾಬಡೆ ಅವರ ಈ ಪ್ರಯತ್ನಕ್ಕೆ ಅವರ ಪುತ್ರ ಡಾ. ಗೋಪಾಲ, ಸೊಸೆ ಶಾರದಾ, ಮಗಳು ಭಾರತಿ ಹಾಗೂ ಮೊಮ್ಮಕ್ಕಳು ಹೆಗಲೆಣೆಯಾಗಿದ್ದರು. ಈ ಪ್ರಕೃತಿಯಲ್ಲಿ ಮನುಷ್ಯನ ಹೆಜ್ಜೆ ಗುರುತುಗಳು ಚಿಕ್ಕದಿದ್ದಷ್ಟು ಒಳ್ಳೆಯದು ಎಂಬ ವಿಚಾರಕ್ಕೆ ಅವರು ಬದ್ಧರಾಗಿದ್ದರು.  

 

 

ಮಗಳು ಭಾರತಿ ಅವರೊಂದಿಗೆ ಧಾರವಾಡದ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಮನವಿ ಸಲ್ಲಿಸಿ ವಾಪಸ್ಸಾಗುತ್ತಿರುವ ಸೇನಾನಿ ನರಸಿಂಹ ದಾಬಡೆ.

 

ಧಾರವಾಡದ ಗಾಂಧಿ ಶಾಂತಿ ಪ್ರತಿಷ್ಠಾನ ಹಣಕಾಸಿನ ತೊಂದರೆಯಲ್ಲಿದ್ದಾಗ ದತ್ತಿ ನೀಡಿ, ಅದನ್ನು ಕಾಪಾಡಿದ್ದರು. ಪ್ರಸ್ತುತ ಅಧ್ಯಕ್ಷ ಪ್ರೊ. ಕೆ.ಎಸ್. ಭಸ್ಮೆ ಈ ಮಾತು ಹೇಳುವಾಗ ಗದ್ಗದಿತರಾಗಿದ್ದರು. ‘ಧಾರ್ವಾಡದ ಗಾಂಧೀಜಿನ ಮತ್ಯಾವಾಗ ನೋಡೋದು ನಾವು?’ ಎಂಬ ಪ್ರಶ್ನಾರ್ಥಕ ಚಿನ್ಹೆ ಅವರ ಮುಖದಲ್ಲಿ ಎದ್ದುಕಾಣುತ್ತಿತ್ತು.  

 

ಗ್ರಾಮ ಸ್ವರಾಜ್ಯದ ಕನಸು ಕಂಡು ಸರ್ವೋದಯದ ಮೂಲಕ ಧಾರವಾಡದ ಅಕ್ಕ-ಪಕ್ಕದ ಗ್ರಾಮಗಳಲ್ಲಿ ಸೇವೆ ಮಾಡಿದ ಚೇತನ ದಾಬಡೆ ಅವರು. ದೇಶ ಸೇವೆಯ ಸಂಸ್ಕಾರವನ್ನು ತಮ್ಮ ಮಕ್ಕಳು, ಸೊಸೆಯಂದಿರು ಹಾಗೂ ಮೊಮ್ಮಕ್ಕಳಿಗೂ ಹಾಕಿದವರು. ದೇಶ ಮತ್ತು ಸಮಾಜದ ಹಿತಕ್ಕೆ ಯಾವಾಗಲೂ ಸತ್ಯಾಗ್ರಹದ ಮೂಲಕ ಹೋರಾಟದ ಹಾದಿ ಹಿಡಿಯುತ್ತಿದ್ದ ದಾಬಡೆ ಅವರು, ಇತ್ತೀಚೆಗೆ ಆಯೋಡಿನ್ ಉಪ್ಪನ್ನು ಮಾತ್ರ ಮಾರಾಟ ಮಾಡಬೇಕು ಎಂದು ಸರಕಾರ ಹೊರಡಿಸಿದ ಕಡ್ಡಾಯ ನಿಯಮದ ವಿರುದ್ಧ ಎಚ್.ಎಸ್. ದೊರೆಸ್ವಾಮಿ ಅವರೊಂದಿಗೆ ಧಾರವಾಡದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಅವರು ಇಳಿ ವಯಸ್ಸಿನಲ್ಲಿಯೂ ಪ್ರತಿಭಟನೆಗೆ ಇಳಿದಿದ್ದು ನಮ್ಮ ಕಣ್ಣಿಗೆ ಕಟ್ಟಿದಂತಿದೆ.

 

 

ಧಾರ್ವಾಡದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿರುವ ಸೇನಾನಿ ನರಸಿಂಹ ದಾಬಡೆ, ಎಚ್.ಎಸ್. ದೊರೆಸ್ವಾಮಿ, ಪ್ರೊ. ಬಸವಪ್ರಭು ಹೊಸಕೇರಿ ಹಾಗೂ ಮತ್ತಿತರರು.

 

ನಾನು ದಾಬಡೆ ಅವರ ಸ್ವಾತಂತ್ರ್ಯ ಶರಣ್ಯರು ಕೃತಿಯ ಬಿಡುಗಡೆಯ ಸಂದರ್ಭದಲ್ಲಿ ಸಂದರ್ಶನಕ್ಕಾಗಿ ಅವರ ಮನೆಗೆ ಹೋದಾಗ,  ದಾಬಡೆ ಅವರು ಸೂಚ್ಯವಾಗಿ ನನಗೆ ಹೇಳಿದ್ದರು. ಸಂದರ್ಶನದ ಸಾರಂಶ ಇಂತಿದೆ: ಖಾದಿ ಧರಿಸುವುದು ಕಡ್ಡಾಯವಾಗಬೇಕು. ಶಾಲಾ-ಕಾಲೇಜುಗಳಲ್ಲಿ ಕಡ್ಡಾಯವಾಗಿ ಖಾದಿ ಸಮವಸ್ತ್ರಗಳನ್ನು ಮಕ್ಕಳಿಗೆ ತೊಡಿಸಬೇಕು; ತನ್ಮೂಲಕ ರಾಷ್ಟ್ರೀಯತೆಯ ಚಿಂತನೆ ಬಿತ್ತಲು ಸಾಧ್ಯವಾಗಬೇಕು. ಪಠ್ಯ, ಪುಸ್ತಕಗಳಲ್ಲಿ ಸ್ವಾತಂತ್ರ್ಯ ಹೋರಾಟದ ಸುವರ್ಣ ಅಧ್ಯಾಯಗಳು, ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನ, ಕೊಡುಗೆಗಳ ಕುರಿತು ಪಾಠಗಳು ಅಳವಡಬೇಕು. ಇಂದಿನ ಪೀಳಿಗೆಗೆ ಗ್ರಾಮೀಣ ಭಾರತದ ಸವಾಲುಗಳು ಹಾಗೂ ಕಲಿತವರ ಸಾಮಾಜಿಕ ಜವಾಬ್ದಾರಿಗಳ ಪ್ರತಿ ತಿಳಿವಳಿಕೆ, ಅರಿವು ಮೂಡಿಸಬೇಕಾದ ಅವಶ್ಯಕತೆ ಇದೆ. ಹಾಗಾಗಿ ರಾಷ್ಟ್ರಪ್ರೇಮ ಸ್ಫುರಿಸುವ, ದೇಶಪ್ರೇಮ ಬಿತ್ತುವ ಪಾಠಗಳು ಸೇರಿಸಲ್ಪಡಬೇಕು ಎಂದು ಅಭಿಪ್ರಾಯಪಟ್ಟಿದ್ದರು.

 

ಅಂದಿನ ಪ್ರಧಾನಮಂತ್ರಿ ಶ್ರೀಮತಿ ಇಂದಿರಾ ಗಾಂಧಿ ಅವರಿಂದ ತಾಮ್ರ ಫಲಕದ ಗೌರವಕ್ಕೆ ಭಾಜನರಾಗಿದ್ದ ಈ ಹಿರಿಯ ಚೇತನ ಯಾವತ್ತೂ ಪ್ರಶಸ್ತಿ, ಪುರಸ್ಕಾರ ಹಾಗೂ ಪ್ರಸಿದ್ಧಿಯ ಕಡೆ ತಿರುಗಿಯೂ ನೋಡಲಿಲ್ಲ. ಉತ್ತರ ಕರ್ನಾಟಕದ ಕಾಡುಗಳಲ್ಲಿ ಒಂಟಿ ಸಲಗನಂತೆ ಅವರು ನಡೆದಿದ್ದೇ ಹಾದಿ ಮಾಡಿಕೊಂಡಿದ್ದರು. ಅವರಿಗೆ ತಾಯಿ ಭುವನೇಶ್ವರಿಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಲಭಿಸಲಿ ಎಂಬುದು ಈ ಭಾಗದ ಜನರ ಒತ್ತಾಸೆಯಾಗಿತ್ತು. ತನ್ಮೂಲಕ ಉತ್ತರ ಕರ್ನಾಟಕ ಭಾಗದ ಸ್ವಾತಂತ್ರ್ಯ ಹೋರಾಟದ ಕೊಂಡಿಯೊಂದನ್ನು ಗೌರವಿಸಿದ, ನಮ್ಮನ್ನು ನಾವು ಗೌರವಿಸಿಕೊಂಡ ಧನ್ಯತೆ ಪ್ರಾಪ್ತವಾಗುತ್ತಿತ್ತು. ಈ ನಮ್ಮ ಕನಸು ನಸಾಗಲಿಲ್ಲ. ಈಗಲಾದರೂ ನಮ್ಮ ಸರಕಾರ ಅವರ ಇಚ್ಛೆಯಂತೆ ಮಕ್ಕಳ ಪಠ್ಯಪುಸ್ತಕದಲ್ಲಿ ಸ್ವಾತಂತ್ರ್ಯ ಹೋರಾಟದ ಮಹತ್ವವನ್ನು ಬಿಂಬಿಸುವ ಪಾಠಗಳನ್ನು ಸೇರಿಸಲು ಮುಂದಾಗುವುದೇ?

 

 

ಹೋಗಿ ಬರಲೆ ನಾನು ಇನ್ನು ಕೇಳಬೇಡ ಎಲ್ಲಿಗೆ? ಇದು ಕೊನೆ ನಮಸ್ಕಾರ ನಾಡಿಗರೆ ಎನ್ನುತ್ತಿರುವಂತಿದೆ ಸೇನಾನಿ ನರಸಿಂಹ ದಾಬಡೆ ಅವರ ಈ ಭಂಗಿ.

 

ಸ್ವಾತಂತ್ರ್ಯ ಸೇನಾನಿ ನರಸಿಂಹ ದಾಬಡೆ ತಮ್ಮ ಈ ಇಳಿ ವಯಸ್ಸಿನಲ್ಲಿಯೂ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ, ಗಾಂಧಿ ಜಯಂತಿಯ ಕಾರ್ಯಕ್ರಮಗಳಿಗೆ ಹಾಜರಾತಿಯಿಂದ ವಿನಾಯಿತಿ ಪಡೆದಿದ್ದಿಲ್ಲ. ಈ ಬಾರಿಯ ಆಗಸ್ಟ್ ೧೫ ರ ಕಾರ್ಯಕ್ರಮದಲ್ಲಿ ಅವರ ಸ್ಫೂರ್ತಿದಾಯಕ ಮಾತುಗಳನ್ನು ಕೇಳುವ ಭಾಗ್ಯ ನಮಗಿಲ್ಲ. ಇನ್ನು ಅವರು ನೆನಪು ಮಾತ್ರ.

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ನರಸಿ೦ಹ ದಾಬಡೆ, ಎಲೆ ಮರೆಯ ಕಾಯಿಯ೦ತೆ ಗಾ೦ಧೀವಾದವನ್ನು ಪಾಲಿಸಿ ಅಹಿ೦ಸಾವಾದದ ಹಾದಿಯಲ್ಲಿ ನಡೆದವರು, ಅನುಕರಣೀಯ ಬದುಕನ್ನು ಬಾಳಿದವರು, ಅ೦ಥವರ ಸಾವು ನಿಜಕ್ಕೂ ನಾಡಿಗೆ ಬಹು ದೊಡ್ಡ ನಷ್ಟ. ಅವರ ಆತ್ಮಕ್ಕೆ ಶಾ೦ತಿ ಸಿಗಲೆ೦ದು ಪ್ರಾರ್ಥಿಸುವೆ. ಅವರ ಬಗ್ಗೆ ಉತ್ತಮ ಲೇಖನ ನೀಡಿದ ನಿಮಗೆ ವ೦ದನೆಗಳು ಹರ್ಷವರ್ಧನರೆ.

ಅವರ ಮನೆಯವರಿಗೆ ದುಃಖವನ್ನು ಸಹಿಸುವ ಶಕ್ತಿ ನೀಡಲಿ ಎಂದು ಬೇಡಿಕೊಳ್ಳುತ್ತೇನೆ. ನಮಗೆ ಅವರನ್ನೂ ಅವರು ನಡೆದ ದಾರಿಯನ್ನೂ ಪರಿಚಯಿಸಿ ಕೊಟ್ಟಿದ್ದಕ್ಕಾಗಿ ವಂದನೆಗಳು.

ಆದರ್ಶ ವ್ಯಕ್ತಿಯ ಕಣ್ಮರೆಯಾಯಿತು. ನಿಮ್ಮ ಈ ಶ್ರದ್ಧಾಂಜಲಿಯ ಬರಹ ಮೌಲ್ಯಯುತ ಮತ್ತು ಸಾಂದರ್ಭಿಕ. ಕೇವಲ ಪೂರ್ವಾಗ್ರಹ ಪೀಡಿತ ಮತ್ತು ಏಕತಾನತೆಯ ಬರಹಗಳು ಬರುತ್ತಿರುವಾಗ ಬದಲಾವಣೆಯಂತೆ ಬಂದ ಈ ಲೇಖನ ಚೇತೋಹಾರಿಯಾಗಿದೆ. ಅಗಲಿದ ಸ್ವಾತಂತ್ರ್ಯ ಸೇನಾನಿಗೆ ನಮನಗಳು.