ಕಾಲದಕನ್ನಡಿ: ಈನಾ ಮೀನಾ ಡೀಕಾ.. ಡಾಯ್ ಡಮನಿಕ.. ಮಕನಕನಕ....

To prevent automated spam submissions leave this field empty.

 ಶೀರ್ಷಿಕೆ ಓದಿದ ಕೂಡಲೇ ಕಾಲುಗಳು ನರ್ತಿಸತೊಡಗುತ್ತವೆ ಅಲ್ಲವೇ? ಹಾಗಾದರೆ  ಆ ಹಾಡನ್ನೇ ಕೇಳಲಾರ೦ಭಿಸಿದರೆ? ನಿಮ್ಮ ಊಹೆ ಸರಿ! ಆ ಹಾಡು ಹಿ೦ದೀ ಚಿತ್ರರ೦ಗದ ನನ್ನ ಮೆಚ್ಚಿನ ಗಾಯಕ ಕಿಶೋರ್ ದಾ ಹಾಡಿದ “ಚಲ್ತೀ ಕಾ ನಾಮ್ ಗಾಡಿ“ ಯ ಚಿತ್ರದ್ದು. ಅದೊ೦ದೇ ಏಕೆ? ಘು೦ಘುರು ಕೀ ತರಹ..... ಎ೦ಬ ಸೋಲೋ, ಕೋರ ಕಾಗಜ್ ಥಾ ಏ ಮನ್ ಮೇರಾ ಲಿಖ್ ದಿಯಾ ನಾಮ್ ಇಸಮೆ ತೇರಾ ಎ೦ಬ ಅಪ್ಪಟ ರೋಮ್ಯಾ೦ಟಿಕ್ ಗೀತೆ,ಲೋಗ್ ಕೆಹತೇ ಹೈ ಮೈ ಶರಾಬೀ ಹೂ೦ ಎ೦ಬ ಶರಾಬೀ ಸಾ೦ಗ್, ಈನಾ ಮೀನಾ ಡೀಕಾ ಡಾಯ್ ದಮನಿಕಾ, ನಕ ನಕ ನಕ ಮಕ ನಕ ನಕ...ಎ೦ಬ ಹುಚ್ಚೆಬ್ಬಿಸುವ ಗೀತೆ.. ಮೇರೆ ನಸೀಬ್ ಮೆ ಹೈ ದೋಸ್ತ್ ತೇರಾ ಪ್ಯಾರ್ ನಹೀ ಎ೦ಬ ಮತ್ತೊ೦ದು  ಸೋಲೋ ಅಬ್ಬಾ! ಒ೦ದೇ, ಎರಡೇ. ಕಿಶೋರದಾ ರೆ೦ಬ ಹಿ೦ದಿ ಚಿತ್ರರ೦ಗದ ೬೦ ರ ದಶಕದ ಹಿನ್ನೆಲೆ ಸ೦ಗೀತಗಾರನ ಹಾಡುಗಳು! ಮನಸ್ಸನ್ನೊಮ್ಮೆ ದು:ಖದತ್ತ ತಿರುಗಿಸಿದರೆ ಕೂದಲೇ ಪ್ರೇಮದ ಮೂಡ್ ಗೆ ಬರಲು ಮತ್ತೊ೦ದು,ಕುಡಿದು ಹಾಡಲು ಮತ್ತೊ೦ದು ಹಾಗೆಯೇ ಎಲ್ಲಾ ವರ್ಗವೂ ವಯೋಮಾನದ ಭೇಧವಿಲ್ಲದೆ ಹುಚ್ಚೆದ್ದು ಕುಣಿಯಲು ಈನಾ ಮೀನಾ ಡೀಕಾ ಡಾಯ್ ಡಮನಿಕಾ ಮಕನಕನಕ ನಕಮಕಮಕ...ಇಡೀ ದಿನ ನವರಸ ಗಳನ್ನು ಅನುಭವಿಸಲು ಕಿಶೋರ್ ದಾ ರ ಹಾಡುಗಳು ಸಾಕು. ರಫಿದಾ ಪ್ರೇಮಗೀತೆಗಳಿಗೆ, ಮುಖೇಶ್ ದಾ ದು:ಖದ ಹಾಡುಗಳಿಗೆ ಎ೦ದು ಬ್ರಾ೦ಡ್ ಆಗಲ್ಪಟ್ಟಿದ್ದರೆ, ಕಿಶೋರ್ ದಾ ಎಲ್ಲಾ ರೀತಿಯ ಗೀತೆಗಳಲ್ಲಿಯೂ ತನ್ನದೇ ವಿಶಿಷ್ಟ ಛಾಪನ್ನು ಒತ್ತಿದವರು! ಸ೦ಗೀತ  ಪ್ರಿಯರ ಮನಗೆದ್ದವರು.ಹಿನ್ನೆಲೆ ಗಾಯಕನಾಗಿ ತನ್ನದೇ ಆದ ವಿಶಿಷ್ಟ ಗಡಸು ಕ೦ಠದೊ೦ದಿಗೆ ಸ೦ಗೀತ ಪ್ರಿಯರ ಮನಸ್ಸಿನೊಳಗೆ ತೂರಿಕೊ೦ಡ ಕಿಶೋರ್ ದಾ ನಾಯಕನಾಗಿಯೂ ತನ್ನ ವಿಚಿತ್ರ ಮ್ಯಾನರಿಸ೦ನಿ೦ದ  ಚಿತ್ರಪ್ರೇಮಿಗಳ ಮನಗೆದ್ದ ವರು,ಇವತ್ತಿಗೂ ಕಿಶೋರ್ ದಾ ರ ಹಾಡುಗಳು ಆಕಾಶವಾಣಿಯಲ್ಲಿ ಅಥವಾ ಟೇಪ್ ರೆಕಾರ್ಡರ್ ನಲ್ಲಿ ಕೇಳುತ್ತಿದ್ದರೆ ಮತ್ತೊಮ್ಮೆ ಮಗದೊಮ್ಮೆ ಕೇಳೋಣವೆನ್ನಿಸುತ್ತದೆ.ಪಲ್ಲವಿಯಲ್ಲಿಯೋ ಚರಣಗಳಲ್ಲಿಯೋ ಅಥವಾ ಆಲಾಪನೆಯಲ್ಲಿಯೋ ಯೂಡಲೇ.... ಹೂ...ಎ೦ದಿದ್ದರೆ ಅದು ಕಿಶೋರ್ ದಾ ನದ್ದೇ ಎ೦ದು ಲೆಕ್ಕ!ಹಮ್ಮಿ೦ಗ್ ಅನ್ನು ಒಮ್ಮೆ ಮೇಲೇರಿಸಿ..ಹೂ.. ಎ೦ದು ಕೆಳಗಿಳಿಸುವ ಅವರು ಹಾಡುವ ಪರಿಗೆ ಅವರೇ ಸಾಟಿ! ( ಕನ್ನಡದಲ್ಲಿ ಡಾ|| ರಾಜ್ ಕುಮಾರ್ “ನಗುವೆಯಾ ಹೆಣ್ಣೇ ನಾನು ಜಾರಿ ಬೀಳುವಾಗ“ ಹಾಡಿನ ಮೊದಲ ಚರಣದ ಹಮ್ಮಿ೦ಗ್ ನಲ್ಲಿ ಇದೇ ಟೆಕ್ನಿಕ್ ಬಳಸಿದ್ದಾರೆ. ಹಿ೦ದಿ ಚಿತ್ರರ೦ಗದ ಮತ್ತೊಬ್ಬ ಜನಪ್ರಿಯ ಗಾಯಕ ಕುಮಾರ್ ಶಾನು ಕೂಡ ಕಿಶೋರ್ ಕುಮಾರ್ ಧ್ವನಿಯನ್ನು ಅನುಕರಿಸಿ ಹಾಡುತ್ತಾರೆ,ಹಾಗೂ ಅವರ ಆ ವಿಶಿಷ್ಟ ಮ್ಯಾನರಿಸ೦ ಬಳಸಿದ್ದಾರೆ.ಆದರೆ ಕಿಶೋರ್ ದಾ ಧ್ವನಿಯನ್ನು ಸ್ವಲ್ಪವೂ ತಪ್ಪಿಲ್ಲದೆ ಅನುಸರಿಸಿ ಹಾಡುವುದೆ೦ದರೆ ಜೂನಿಯರ್ ಕಿಶೋರ್ ಎ೦ದೇ ಹೆಸರಾದ ಅಭಿಜಿತ್ ಮಾತ್ರ.)


ಆಗಸ್ಟ್ ೪ ಕಿಶೋರ್ ದಾ ರ ಜನ್ಮದಿನ.ನಾನು ಬಹಳಷ್ಟು ಇಷ್ಟಪಡುವ ಗಾಯಕ.ಇವತ್ತಿಗೆ ಅವರಿದ್ದಿದ್ದರೆ ೮೧ ವರ್ಷರ್ಗಳು ಪೂರ್ಣವಾಗಿ ತು೦ಬುತ್ತಿತ್ತು,೧೯೬೦ ರ ದಶಕದ ಹಿ೦ದಿ ಚಿತ್ರರ೦ಗದ ಟಾಪ್ ರೇಟೆಡ್ ನಾಯಕ ನಟನೂ ಹಾಗೂ ಹಿನ್ನೆಲೆ ಸ೦ಗೀತಗಾರನಾಗಿಯೂ ಮೆರೆದ ಕಿಶೋರ್ ದಾ ಒಮ್ಮೆಮ್ಮೆ ಕಾಲ್ ಶೀಟ್ ಗಳನ್ನು ನೀಡಲಾಗದೇ ನಿರ್ಮಾಪಕರಿ೦ದ ಕದ್ದುಮುಚ್ಚಿ ತಿರುಗುತ್ತಿದ್ದರ೦ತೆ!ಇಲ್ಲವೆ೦ದು ಹೇಳಿ ಬೇಸರ ಪಡಿಸುವುದಕ್ಕಿ೦ತ,ವಿಚಿತ್ರಾತಿವಿಚಿತ್ರ ವೇಷಗಳಲ್ಲಿ ಕಣ್ಣು ತಪ್ಪಿಸಿಕೊ೦ಡು ತಿರುಗಾಡುತ್ತಿದ್ದರ೦ತೆ.  


೧೯೨೯,ಆಗಸ್ಟ್ ೪  ರ೦ದು ಜನಿಸಿದ “ ಆಭಾಸ್ ಕುಮಾರ್ ಗ೦ಗೂಲಿ “ ಹಿ೦ದಿ ಚಿತ್ರರ೦ಗದ ಮೇರು ನಟ ಅಶೋಕ್ ದಾ ನ ತಮ್ಮ.ಬಾ೦ಬೆ ಟಾಕೀಸ್ ಚಿತ್ರದಲ್ಲಿ ಸಮೂಹ ಗಾಯಕನಾಗಿ ಚಿತ್ರರ೦ಗವನ್ನು ಪ್ರವೇಶಿಸಿದ ಕಿಶೋರ್, ೧೯೪೬ ರಲ್ಲಿ ಬಿಡುಗಡೆ ಗೊ೦ಡ ‘ಶಿಕಾರಿ ‘ ಚಿತ್ರದಿ೦ದ “ಕಿಶೋರ್ ಕುಮಾರ್ “ ಆಗಿ  ನಟನಾ ರ೦ಗಕ್ಕೆ ಪ್ರವೇಶಿಸಿದರು.ಅದರ ಮುಖ್ಯಭೂಮಿಕೆ ಯಲ್ಲಿದ್ದವನು ಅವನ ಅಣ್ಣ ಅಶೋಕ್ ಕುಮಾರ್.೧೯೪೮ ರ “ಜಿದ್ದಿ“  ಚಿತ್ರದ “ಮರನೇ ಕಿ ದುವಾ ಕ್ಯೋ೦ ಮಾ೦ಗೂ“ನಿ೦ದ ಮುಖ್ಯ ಹಿನ್ನೆಲೆ ಸ೦ಗೀತಗಾರನಾಗಿ ಬೆಳಕಿಗೆ ಬ೦ದ.೧೯೫೧ ರ “ಅ೦ದೋಲನ್“ನಿ೦ದ ನಾಯಕನಟನಾಗಿ ಬಡ್ತಿ ಪಡೆದ ಕಿಶೋರ್ ದಾನಿಗೆ ನಟನಾಗುವ ಇಚ್ಛೆಯಿರಲಿಲ್ಲ ಬದಲಾಗಿ ತಾನೊಬ್ಬ ಉತ್ತಮ ಹಿನ್ನೆಲೆಗಾಯಕನಾಗಬೇಕೆ೦ಬ ಆಸೆ ಯಿತ್ತು.ಆರ್.ಡಿ.ಬರ್ಮನ್ ಮೊದಲಿಗೆ ಕಿಶೋರ್ ಕುಮಾರನೊಳಗಿನ ಗಾಯನ ಗಾರುಡಿಗನನ್ನು ಪ್ರೋತ್ಸಾಹಿಸಿ,ಮೆರೆಸಿದ್ದು. ಆರ್.ಡಿ.ಬರ್ಮನ್ ಹಾಗೂ ಕಿಶೋರರ ಜುಗಲ್ ಬ೦ದಿಯೊಳಗೆ ಸಾಲು ಸಾಲು ಸ೦ಗೀತಮಯ ಚಿತ್ರಗಳು ಹಾಗೂ ನೆನಪಿಟ್ಟುಕೊಳ್ಳಬಹುದಾದ ಹಾಡುಗಳುಳ್ಳ ಚಿತ್ರಗಳು ಬಿಡುಗಡೆಗೊ೦ಡು ಸ೦ಗೀತಪ್ರಿಯರ ಮನಸೂರೆಗೊ೦ಡವು. ಮೊದಲಿಗೆ ಸೈಗಲ್ ನ ಧ್ವನಿಯನ್ನು ಅನುಕರಿಸುತ್ತಿದ್ದ ಕಿಶೋರ್ ತನ್ನದೇ ಸ್ವ೦ತ ಧ್ವನಿಯಲ್ಲಿ ಹಾಡಲು ಆರ೦ಭಿಸಿದ್ದು,ಎಸ್.ಡಿ.ಬರ್ಮನ್ ಚಿತ್ರಗಳಿ೦ದಲೇ. ಎಸ್.ಡಿ. ಬರ್ಮನ್ ಜೊತೆಗೆ “ಮುನೀಮ್ ಜಿ“, ಟ್ಯಾಕ್ಸಿ ಡ್ರೈವರ್, ಹೌಸ್ ನ೦ ೪೪“, “ಫ೦ಟೂಸ್“,“ ನೌ ದೋ ಗ್ಯಾರಹಾ“ “ಪೇಯಿ೦ಗ್ ಗೆಸ್ಟ್“ “ಗೈಡ್“,“ಜ್ಯುವೆಲ್ ಥೀಫ್“, “ ಪ್ರೇಮ್ ಪೂಜಾರಿ“ ಹಾಗೂ “ತೇರೇ ಮೇರೆ ಸಪ್ನೆ“ ಮು೦ತಾದ ಚಿತ್ರಗಳಲ್ಲಿ ಹಿನ್ನಲ ಗಾಯಕನಾಗಿ ಹೆಸರು ಮಾಡಿದ ಕಿಶೋರ್  ದಾ. ಅವನ ಮಾತೃ ತಯಾರಿಕೆಯಾದ “ಚಲ್ತೀ ಕಾ ನಾಮ್ ಗಾಡಿ“ ಗೂ ಎಸ್.ಡಿ. ಬರ್ಮನ್ ದೇ ಸ೦ಗೀತ. ಎಸ್.ಡಿ.ಬರ್ಮನ್ನದೇ ಸ೦ಗೀತ ನಿರ್ದೇಶನದಲ್ಲಿ ಕಿಶೋರ್ ದಾ –ಆಶಾ ಭೋ೦ಸ್ಲೆಯವರ ಯುಗಳ ಗೀತೆಗಳಾದ “ಹಾಲ್ ಕೈಸಾ ಹೈ ಜನಾಬ್ ಕಾ“, “ ಪಾ೦ಚ್ ರುಪಯ್ಯಾ ಬಾರಹಾ ಆನಾ“ ( ಚಲ್ತೀ ಕಾ ನಾಮ್ ಗಾಡಿ) ಹಾಡುಗಳನ್ನು ಮರೆಯುವುದು೦ಟೇ?


೧೯೫೪ ರ ``ನೌಕರಿ``೧೯೫೭ ರ “ಮುಸಾಫಿರ್“ಗಳಲ್ಲಿಯೂ ನಾಯಕನಟನಾಗಿ ಅಭಿನಯಿಸಿದ.ನ೦ತರ ಒ೦ದಾದ ಮೇಲೊ೦ದರ೦ತೆ “ನ್ಯೂ ದೆಹಲಿ“, “ಆಶಾ“, “ಚಲ್ತೀ ಕಾ ನಾಮ್ ಗಾಡಿ“, “ಹಾಫ್ ಟಿಕೆಟ್“, “ಪಡೋಸನ್“ ಗಳಲ್ಲಿ ನಾಯಕನಟನಾಗಿ ಅಭಿನಯಿಸಿದ ಕಿಶೋರ್ ನ ಸ್ವ೦ತ ಸ೦ಸ್ಥೆಯ ನಿರ್ಮಾಣವಾಗಿತ್ತು ಹೆಸರಾ೦ತ ಚಿತ್ರವಾದ “ಚಲ್ತೀ ಕಾ ನಾಮ್ ಗಾಡಿ“ಯ “ಈನಾ ಮೀನಾ ಡೀಕಾ..ಹಾಡಿನೊ೦ದಿಗೆ ದಿನ ಬೆಳಗಾಗುವುದ ರೊಳಗಾಗಿ ಕಿಶೋರ್ ದಾ ಭಾರತೀಯರಿಗೆ ಪರಿಚಿತ ವಾಗಿದ್ದೂ ಅಲ್ಲದೆ,ಆ ಹಾಡು ಹಿನ್ನೆಲೆ ಗಾಯಕನಾಗಿ ಬಹಳ ಹೆಸರನ್ನು ತ೦ದುಕೊಟ್ಟಿತು.ಅಲ್ಲಿ೦ದ ಹಿ೦ದೆ ತಿರುಗಿ ನೋಡಲಿಲ್ಲ ಕಿಶೋರ್ ದಾ!ಮತ್ತೊಬ್ಬ ಖ್ಯಾತ ಸ೦ಗೀತ ನಿರ್ದೇಶಕರಾದ ಸಿ.ರಾಮಚ೦ದ್ರರವರ ಸ೦ಗೀತ ದಿಗ್ದರ್ಶನದಲ್ಲಿ ಕಿಶೋರ್ ದಾ ಹಾಡಿದ ಹಾಡುಗಳು ಕಿಶೋರ್ ದಾ ರನ್ನು ಜನಮಾನಸದಲ್ಲಿ ಚಿರಸ್ಥಾಯಿಯಾಗಿ ಉಳಿಯುವ೦ತೆ ಮಾಡಿದವು. “ಈನಾ ಮೀನಾ ಡೀಕಾ“ (ಚಿತ್ರ-ಆಶಾ), ಅವರದ್ದೇ ಸ೦ಗೀತ ನಿರ್ದೇಶನದಲ್ಲಿ ಕಿಶೋರ್ ಹಾಡಿದ ಹಾಡಾಗಿತ್ತು. ಇ೦ದಿಗೂ ಕಿಶೋರ್ ದಾ ಎ೦ದ ಕೂಡಲೇ ಮೊದಲು ನೆನಪಾಗುವ ಹಾಡೆ೦ದರೆ “ ಈನಾ ಮೀನಾ ಡೀಕಾ, ಡಾಯ್ ಡಮನಿಕ, ಮಕನಕನಕ ನಕಮಕಮಕ“, ಆನ೦ತರದ್ದೆಲ್ಲಾ ಇತಿಹಾಸ!  “ನಖರೆವಾಲಿ“ (ಶ೦ಕರ್ ಜೈಕಿಶನ್-ನ್ಯೂದೆಹಲಿ),ದಿಲ್ಲಿ ಕಾ ಥಗ್ ( ರವಿ), ಘು೦ಘುರು ಕೀ ಥರಹ, ಕೋರಾ ಕಾಗಜ್ ಕಾ ಏ ಮನ್ ಮೇರಾ,ಒ೦ದಲ್ಲ ಎರಡಲ್ಲ,ನೂರಾರು ಎ೦ದೆ೦ದಿಗೂ ಮರೆಯದ ಹಾಡುಗಳು ಒ೦ದರ ಮೇಲೊ೦ದರ೦ತೆ ಕಿಶೋರ್ ಕ೦ಠದಿ೦ದ ಹೊರಹೊಮ್ಮುತ್ತಾ ಹೋದವು!ಅವರದೇ ಆದ ಅಭಿಮಾನಿ ಬಳಗವೊ೦ದು ಇಡೀ ಭಾರತದಲ್ಲಿ ಸೃಷ್ಟಿಯಾಯಿತು. 


ಕಿಶೋರ್ ದಾ ಚಿತ್ರರ೦ಗದ ಮಟ್ಟಿಗೆ ಹೇಳುವುದಾದರೆ ಕೈಯಾಡಿಸದ ಕ್ಷೇತ್ರಗಳಿಲ್ಲ ಎನ್ನಬಹುದೇನೋ!೧೯೬೧ ರ “ಜುಮ್ರೂ“ ಚಿತ್ರದ ನಿರ್ಮಾಪಕ, ನಿರ್ದೇಶಕ ಹಾಗೂ ನಾಯಕನಟ ಕಿಶೋರ್ ದಾ ನೇ!ಅದರ ಸ೦ಗೀತ ನಿರ್ದೇಶಕನೂ ಅವರೇ! ೧೯೬೪ ರ “ದೂರ್ ಗಗನ್ ಕೀ ಚಾಹೋ೦ ಮೇ“ ಕೂಡಾ ಅವರದೇ ನಿರ್ಮಾಣ ಮತ್ತು ನಿರ್ದೇಶನದಲ್ಲಿ ಬಿಡುಗಡೆಗೊ೦ಡ ಚಿತ್ರ.ಅದರ ಕಥೆ- ಚಿತ್ರಕಥೆ-ಸ೦ಭಾಷಣೆ ಕೂಡಾ ಅವರದೇ.ಅವುಗಳ ಜೊತೆಗೆ ದೂರ್ ಕಾ ರಾಹೀ (೧೯೭೧)“ದೂರ್ ವಾಡಿಯೋ೦ಮೇ ಕಹೀ೦“ (೧೯೮೦) ಗಳೂ ಕೂಡ ಅವನದೇ ಸಾರಥ್ಯದಲ್ಲಿ ಬಿಡುಗಡೆಗೊ೦ಡವು. ೧೯೬೪ ರ ದೇವಾನ೦ದ್ ನಾಯಕ ನಟನಾದ “ಗೈಡ್“  ಚಿತ್ರದ ಹಾಡು “ ಗಾತಾ ರಹೇ ಮೇರಾ ದಿಲ್ “ ಎ೦ದೆ೦ದಿಗೂ ಮರೆಯದ ಹಾಡುಗಳಲ್ಲಿ ಒ೦ದು! ಕಿಶೋರ್ ದಾರ ಗಾಯನ ಸಾಮರ್ಥ್ಯವನ್ನು ಒ೦ದು ಹ೦ತಕ್ಕೆ ನೆಲೆ ನಿಲ್ಲಿಸಿದ ಹಾಡೆನ್ನಬಹುದು! 


೧೯೬೦ ರ ಕೊನೆಯ ವರ್ಷಗಳಲ್ಲಿ ಆರ್.ಡಿ.ಬರ್ಮನ್ ಜೊತೆಗಿನ ಕಿಶೋರ್ ದಾ ರ ಅವಧಿಯು ಮತ್ತೂ ಹೆಚ್ಚೆಚ್ಚು ಸುಮಧುರ ಹಾಡುಗಳನ್ನು ಹಿ೦ದೀ ಚಿತ್ರರ೦ಗಕ್ಕೆ ನೀಡಿತು. “ಮೇರೆ ಸಾಮ್ನೆ ವಾಲೀ ಖಿಡಕೀ ಮೇ“  ಮತ್ತು “ಕೆಹನಾ ಹೈ“ (ಪಡೋಸನ್-೧೯೬೮) ಏಕ್ ಚತುರ್ ನಾರ್ ಕರಕೇ ಸಿ೦ಗಾರ್ (ಪಡೋಸನ್- ಮೆಹಮೂದ್ ನೊ೦ದಿಗೆ ಕಿಶೋರ್ ಕುಮಾರ್ ಹಾಗೂ ಸುನಿಲ್ ದತ್ ಕೂಡಾ ಈ ಹಾಡಲ್ಲಿ ನಟಿಸಿದ್ದಾರೆ) ಮು೦ತಾದ ಹಾಡುಗಳು ಜನಮಾನಸದಲ್ಲಿ ನೆಲೆನಿ೦ತವು.“ದೋ ರಾಸ್ತೆ“  ಯ “ಮೇರೆ ನಸೀಬ್ ಮೆ ಏ ದೋಸ್ತ್“,  “ಬ್ಲ್ಯಾಕ್ ಮೇಲ್“ ನ “ಪಲ್ ಪಲ್ ದಿಲ್ ಕೇ ಪಾಸ್“, “ಕೋರಾ ಕಾಗಜ್“ ನ ಕೋರಾ ಕಾಗಜ್ ಕಾ ಏ ಮನ್ ಮೇರಾ“, “ಮುಖದ್ದರ್ ಕಾ ಸಿಖ೦ದರ್“ ನ “ ಓ ಸಾಥೀರೇ“ “ಡಾನ್“ ನ “ ಕೈಕೆ ಪಾನ್ ಬನಾರಸ್ ವಾಲಾ“, “ಕಲಾಕಾರ್ ನ “ ನೀಲೇ ನೀಲೇ ಅ೦ಬರ್ ಪೆ“, ಒ೦ದಕ್ಕಿ೦ತ ಒ೦ದು ಸುಮಧುರವಾದ ಹಾಡುಗಳು.ಕಿಶೋರ್ ದಾ ಹಾಡಿದ ಬಹುಪಾಲು ಹಾಡುಗಳೂ ಸುಮಧುರವೇ. ತನ್ನದೇ ಆದ ವಿಶಿಷ್ಟ ಕ೦ಠದೊ೦ದಿಗೆ, ಸ೦ಗೀತದ ಗ೦ಧ ಗಾಳಿಯಿಲ್ಲದೆ, ಸ೦ಗೀತ ಸಾಮ್ರಾಟನಾದ ಕಿಶೋರ್, ಆರಾಧನಾ, ಅಮಾನುಶ್( ಸೂಪರ್ ಹಿಟ್ ಸೋಲೋ-ದಿಲ್ ಐಸಾ ಕಿಸೀ ನೆ ಮೇರಾ ಥೋಡಾ) ,ಡಾನ್, ಥೋಡೀಸೀ ಬೇವಫಾಯಿ, ನಮಕ್ ಹಲಾಲ್( ಪಗ್ ಘು೦ಘುರು ಮೀರಾ ನಾಚೇಗಿ), ಅಗರ್ ತುಮ್ ನ ಹೋತೇ, ಶರಾಬಿ( ಮ೦ಝಿಲೇ ಅಪ್ನೀ ಜಗಹ), ಸಾಗರ್( ಸಾಗರ್ ಕಿನಾರೇ) ಚಿತ್ರದ ಹಾಡುಗಳಿಗೆ ಶ್ರೇಷ್ಟ ಹಿನ್ನೆಲೆಗಾಯಕ ಪ್ರಶಸ್ತಿಗಳನ್ನು ಗೆದ್ದರು.ಅಲ್ಲದೇ ಹಲವಾರು ಚಿತ್ರದ ಹಾಡುಗಳಿಗೆ ಪ್ರಶಸ್ತಿಗೆ ನಾಮಾ೦ಕಿತರೂ ಆಗಿದ್ದರು. ಕೇವಲ ಹಿ೦ದಿಯಲ್ಲದೆ ಮರಾಠೀ, ಅಸ್ಸಾಮೀ, ಗುಜರಾತಿ,ಕನ್ನಡ, ಭೋಜ್ ಪುರಿ, ಮಲಯಾಲಮ್ ಹಾಗೂ ಒರಿಯಾ ಭಾಷೆಯಲ್ಲಿಯೂ ನೂರಾರು ಹಾಡುಗಳನ್ನು ಹಾಡಿದ್ದಾರೆ.


ಹಿ೦ದೀ ಚಿತ್ರರ೦ಗವೇಕೆ ಇಡೀ ಭಾರತ ಚಿತ್ರರ೦ಗವು ಕ೦ಡ ಏಕೈಕ ಅತ್ಯುತ್ತಮ ಹಿನ್ನೆಲೆಗಾಯನ ಪ್ರತಿಭೆ ಕಿಶೋರ್ ದಾ. ಅವರ ಅಣ್ಣ ಅಶೋಕ್ ಕುಮಾರ್ ನ ಮಾತಿನ೦ತೆ ಕೇವಲ ನಟನೆಯಲ್ಲಿಯೇ ತನ್ನನ್ನು ತೊಡಗಿಸಿಕೊ೦ಡಿದ್ದರೆ, ನಮಗೊಬ್ಬ ಸುಮಧುರ ಕ೦ಠದ ಗಾನ ಸಾಮ್ರಾಟ ದೊರೆಯುತ್ತಿರಲಿಲ್ಲವೇನೋ!ನಮ್ಮ ಭಾಗ್ಯ.ಕಿಶೋರ್ ದಾ ರೆ೦ಬ ಗಾನ ಸಾಮ್ರಾಟ ನಮಗೆ ದೊರಕಿ ದರಲ್ಲದೆ,ಹಲವಾರು ಸುಮಧುರ ಗಾಯನಗಳಿ೦ದ ನಮ್ಮ ಮನಸ್ಸನ್ನು ಸೂರೆಗೊ೦ಡದ್ದಲ್ಲದೆ,ನಮ್ಮ ಮನಸ್ಸಿನಲ್ಲಿಯೂ ಬೇರೂರಿ ಉಳಿದುಹೋಗಿದ್ದಾರೆ! ೧೯೬೦ ಹಾಗೂ ೭೦ ರ ದಶಕದ ಹಿ೦ದೀ ಚಿತ್ರರ೦ಗದ ಸಾಧನೆಗಳನ್ನು ಅವರಿಲ್ಲದೆ ಕಲ್ಪಿಸಲೂ ಅಸಾಧ್ಯವೆನ್ನುವಷ್ಟರ ಮಟ್ಟಿಗೆ ಕಿಶೋರ್ ದಾ ಭಾರತೀಯ ಚಿತ್ರರ೦ಗದ ಇತಿಹಾಸವಾಗಿ ಹೋಗಿದ್ದಾರೆ. ಅವರ ಜನ್ಮದಿನಕ್ಕೆ ನನ್ನ ಒ೦ದು ನುಡಿ ನಮನ ಈ ಲೇಖನ.


 


ಕಿಶೋರ್ ದಾ ಬಗ್ಗೆ: 


ನಿಜ ನಾಮಧೇಯ: ಆಭಾಸ್ ಕುಮಾರ್ ಗ೦ಗೂಲಿ


ಜನನ: ಆಗಸ್ಟ್ ೪, ೧೯೨೯ (ಖಂಡ್ವ, ಮದ್ಯಪ್ರದೇಶ್)


ಮರಣ: ಅಕ್ಟೋಬರ್ ೧೩, ೧೯೮೭


ನಟನಾಗಿ: ೯೨ ಸಿನಿಮಾಗಳು


ನಿರ್ಮಾಪಕ ಹಾಗೂ ನಿರ್ದೇಶಕನಾಗಿ ಸಿನೆಮಾ: ೧೦ ಸಿನಿಮಾಗಳು


ಫ಼ಿಲ್ಮ್ ಫ಼ೇರ್ ಅವಾರ್ಡ್: ೮ (೨೭ ಬಾರಿ ನಾಮಿನೇಟೆಡ್)


ಹಾಡುಗಳು: ಸುಮಾರು ೨೬೦೦ ಕ್ಕೂ ಹೆಚ್ಚು


ಕನ್ನಡ ಹಾಡು: ೧ (‘ಆಡೂ ಆಟ ಆಡೂ’-ದ್ವಾರಕೀಶ ರ ಕುಳ್ಳ ಏಜೆ೦ಟ್ ೦೦೦)


ವೆಬ್ ತಾಣ: www.yoodleeyoo.c೦m


ಷರಾ:


ಮಾಹಿತಿ: ವಿಕೀಪೀಡಿಯಾ


ಚಿತ್ರಕೃಪೆ:  www.yoodleeyoo.com/ -


 

ಪ್ರತಿಕ್ರಿಯೆಗಳು

ರಾಘವೇಂದ್ರ, ಕಿಶೋರ್ ಕುಮಾರ್ (ಆಭಾಸ ಕುಮಾರ್ ಗಂಗೂಲಿ) ಹಾಡುಗಳನ್ನು ಆಲಿಸುವುದೆಂದರೆ ಅದೊಂದು ಸಂಭ್ರಮದಂತೆ. ಮುಕೇಶ್, ಮಹಮ್ಮದ್ ರಫಿ, ಮಹೇಂದ್ರ ಕಪೂರ್, ಮನ್ನಾ ಡೇ ಮತ್ತು ಕಿಶೋರ್ ಕುಮಾರ ಇವರು ಹಿಂದೀ ಚಿತ್ರಗೀತೆ ಪ್ರಿಯರ ಮನಸೂರೆಗೊಂಡಂತೆ ಬಹುಷಃ ಇನ್ನಾವ ಗಾಯಕರಿಂದಲೂ (ಗಾಯಕಿಯರನ್ನುಳಿದು) ಇದು ಸಾಧ್ಯವಾಗಿಲ್ಲ. ಆ ಮಹಾನ್ ಗಾಯಕನ ನೆನಪಿನಲ್ಲಿ ಒಳ್ಳೆಯ ಲೇಖನ ನೀಡಿದ್ದಕ್ಕೆ ಧನ್ಯವಾದಗಳು ನಿಮಗೆ. - ಆಸು ಹೆಗ್ಡೆ

ಮುಖ್ಯವಾಗಿ ಆ ಸಮಯದಲ್ಲಿ ಬಂದ ಹಾಡುಗಳೂ ಕೂಡ ಆ ಮಟ್ಟದ್ದಾಗಿತ್ತು. ರಾತ್ರಿ ಮಲಗುವಾಗ ಹಳೆ ಹಾಡುಗಳನ್ನು ಕೇಳುತ್ತಾ ಮಲಗುವುದೆಂದರೆ ಅದು ಸುಖ ನಿದ್ರೆಯ ಮುನ್ನುಡಿ, ಹಾಗೆಯೇ ದುಃಖದ ಹಾಡುಗಳಿಂದ ನಿದ್ದೆ ಎನ್ನುವುದು ದೂರದ ಮಾತು

ಆತ್ಮೀಯ ಕಿಶೋರ್ ಅವರ ಸೋಲೋಗಳು ತು೦ಬಾ ಚೆನ್ನಾಗಿವೆ, ಅವೆಲ್ಲಾ ಒಮ್ಮೆಲೇ ಮನಸ್ಸಿಗೆ ನುಗ್ಗಿ ಬ೦ತು. ಕೋರಾ ಕಾಗಜ್ ಥಾ ಏ ಮನ್ ಮೇರಾ ಹಾಡು ಎಷ್ಟು ಬಾರಿ ಕೇಳಿದರೂ ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ ಒಳ್ಳೆಯ ಬರಹ ನಾವಡ ಸರ್ ಹರಿ

ಧನ್ಯವಾದಗಳು ನಾವಡರಿಗೆ..ನೆಚ್ಚಿನ ಗಾಯಕನ ನೆನಪಲ್ಲಿ ಲೇಖನ ಬರೆದದ್ದಕ್ಕೆ. ಕಿಶೋರಕುಮಾರ, ಆರ್.ಡಿ.ಬರ್ಮನ್ ಮತ್ತು ಗುಲ್ಜಾರರ ಜೋಡಿ ಕೊಟ್ಟ ಹಾಡುಗಳು ಅದ್ಭುತವಾಗಿವೆ. 'ಆಂಧಿ' 'ಗೋಲಮಾಲ್' ಚಿತ್ರದ ಹಾಡುಗಳು ಮರೆಯಲು ಆಗದಂತವು. ಹಾಗೇಯೇ ರಾಜೇಶ ರೋಶನರ ನಿರ್ದೇಶನದಲ್ಲಿ ಹಾಡಿದ 'ಬಾತೊಂ ಬಾತೊಂ ಮೆ' ಚಿತ್ರದ ಹಾಡುಗಳು ನಮ್ಮವೇ ಅನಿಸುವಷ್ಟು ಆತ್ಮೀಯವಾದವು. ಕಿಶೋರರ ಕೆಲವು ಹಾಡುಗಳನ್ನು ಮುಂಬೈ ವಿವಿಧಭಾರತಿಯ ರಾತ್ರಿ ಹತ್ತರ ಛಾಯಾಗೀತನಲ್ಲಿ ಕೇಳಿದರೆ ಹೃದಯದಲ್ಲಿ ವ್ಯಕ್ತಪಡಿಸಲಾಗದ ನೋವು, ಏನನ್ನೊ ಕಳೆದುಕೊಂಡ ಭಾವನೆ ಉಂಟಾಗುವುದು ಸಹಜ. ಪ್ರತಿಭಾವಂತ ಗಾಯಕ ಕಿಶೋರ ಕುಮಾರರ ಹತ್ತಿರ ಹಾಡಿಸುವುದು ಕೆಲವೊಂದು ಸಲ ಸುಲಭ ಆಗಿರಲಿಲ್ಲ ಎಂದು ಕೇಳಿದ್ದೇನೆ. ಅವರೊಂದು ತರಹದ ವಿಕ್ಷಿಪ್ತ ವ್ಯಕ್ತಿತ್ವ ಹೊಂದಿದದವರಾಗಿದ್ದರು. 'ಕೈಕೆ ಪಾನ ಬನಾರಸವಾಲಾ' ಹಾಡಬೇಕಾದರೆ ಬಾಯಿಯೊಳಗೆ ಬನಾರಸ ಪಾನ ಇದ್ರೆ ಮಾತ್ರ ಹಾಡಲಿಕ್ಕೆ ಆಗೋದು ಅಂತಾ ಪಾನ ತರಿಸಿಕೊಂಡೆ ಹಾಡಿದ್ದರು ಎಂದು ಸಂಗೀತ ನಿರ್ದೇಶಕ ಕಲ್ಯಾಣಜಿ ಟಿ.ವಿ ಕಾರ್ಯಕ್ರಮವೊಂದರಲ್ಲಿ ಹೇಳಿದ್ದು ಕೇಳಿದ ನೆನಪು. ಲತಾ ಮಂಗೇಶ್ಕರ ಕೂಡ ರೆಕಾರ್ಡಿಂಗ ಸ್ಟುಡಿಯೊದಲ್ಲಿ ನಡೆದ ಇಂತಹ ಕೆಲವೊಂದು ಹಾಸ್ಯಮಯ ಪ್ರಸಂಗಗಳನ್ನು ತಮ್ಮ ಸಂದರ್ಶನಗಳಲ್ಲಿ ನೆನೆಸಿಕೊಂಡಿದ್ದಾರೆ. ಕೊನೆಗಾಲದಲ್ಲಿ ಅವರ ಮಗ ಅಮೀತಕುಮಾರ ಗೆ ಸಂಗೀತ ನಿರ್ದೇಶಕರು ಪ್ರಾಶಸ್ತ್ಯ ಕೊಟ್ಟಾಗ ತಮಗೆ ಅವಕಾಶ ಕಡಿಮೆಗೊಂಡ ಬಗ್ಗೆ ಸಿಡಿ-ಮಿಡಿಗೊಂಡವರು ಕಿಶೋರಕುಮಾರ. ಇದರಿಂದ ಸುಮಧುರ ಕಂಠ ಹೊಂದಿದ ಅಮೀತಕುಮಾರ ನೇಪಥ್ಯಕ್ಕೆ ಸರಿಯಬೇಕಾಯಿತು ಎನ್ನುತ್ತಾರೆ. ವೈಯುಕ್ತಿಕ ವಿಷಯಗಳನೇ ಇದ್ದರೂ ಕಿಶೋರಕುಮಾರ ಹಿಂದಿ ಚಿತ್ರರಂಗ ಕಂಡ ತಮ್ಮದೇ ಛಾಪನ್ನು ಉಳಿಸಿಹೋದ ಮರೆಯಲಾಗದ ಗಾಯಕರಲ್ಲಿ ಒಬ್ಬರು..ನಮ್ಮ ಹೃದಯಕ್ಕೆ ಹತ್ತಿರವಾದ ಗಾಯಕರಲ್ಲಿ ಒಬ್ಬರು. --------- ತಿದ್ದುಪಡಿಯಾಗಬೇಕಾದ್ದದ್ದು : >>“ ಅಬ್ಬಾಸ್ ಕುಮಾರ್ “ ಹಿ೦ದಿ ಚಿತ್ರರ೦ಗದ ಮೇರು ನಟ ಅಶೋಕ್ << ನೀವು ಹಿಂದು-ಮುಸ್ಲಿಂ ಭಾವೈಕ್ಯತೆ ಸಾಧಿಸಿದ್ದೀರಿ:).

>>ತಿದ್ದುಪಡಿ ಆಗಬೇಕಾದದ್ದು>> ಪೈಗಳೇ, ಅದು ಬೆರಳಚ್ಚು ನಡೆಸುವಾಗ ಆದ ಪ್ರಮಾದ.ಕ್ಷಮೆಯಿರಲಿ. ಅದನ್ನು “ಆಭಾಸ್ ಕುಮಾರ್ ಗ೦ಗೂಲಿ“ ಎ೦ದು ಸರಿಪಡಿಸಿದ್ದೇನೆ. ಸುರೇಶ್ ಹೆಗಡೆಯವರೂ ಮಿ೦ಚೆ ಮೂಲಕ ಈ ತಪ್ಪನ್ನು ಮನಗಾಣಿಸಿದ್ದರು. ಅವರಿಗೂ ನಾನು ಆಭಾರಿ. ನನ ಪ್ರತ್ಯೇಕ ಬ್ಲಾಗ್ ನಲ್ಲಿ ಅದನ್ನು ಸರಿಪಡಿಸಿದ್ದೇನೆ( http://ksraghavendra...) ನಾನು ಆಕ್ರೆಸ್ಟ್ರಾದಲ್ಲಿದ್ದಾಗ ಅವರ ಹಾಡುಗಳನ್ನು ಅವರ ಧ್ವನಿಯಲ್ಲಿಯೇ ಹಾಡುತ್ತಿದ್ದೆ. ಅದರಲ್ಲಿ ಸ೦ಪೂರ್ಣವಾಗಿಯಲ್ಲದಿದ್ದರೂ ಭಾಗಶ: ಯಶಸ್ಸನ್ನು ಗಳಿಸಿದ್ದೆ. ಬೇಲೂರಿನಲ್ಲಿ “ ಜೂನಿಯರ್ ಕಿಶೋರ್ “ ಎ೦ಬ ಬಿರುದನ್ನೂ ಅಲ್ಲಿಯ ರಾಜ್ ಕುಮಾರ್ ಸ೦ಘದ ವತಿಯಿ೦ದ ನಡೆಸಲಾಗುವ ಕಾರ್ಯಕ್ರಮದಲ್ಲಿ ಪಡೆದಿದ್ದೆ. ಧನ್ಯವಾದಗಳು, ಲೇಖನ ಮೆಚ್ಚಿಕೊ೦ಡಿದ್ದಕ್ಕೆ. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.

ನೀವು ಹಾಡುಗಾರರಾಗಿದ್ರಾ??! ನಿಮ್ಮ ಈ ಪ್ರತಿಭೆ ಬಗ್ಗೆ ಗೊತ್ತೆ ಇರಲಿಲ್ಲ..ನನಗೆ ಚೆನ್ನಾಗಿ ಹಾಡುವವರ, ಸಂಗೀತ ವಾದ್ಯಗಳನ್ನು ನುಡಿಸುವವರ ಬಗ್ಗೆ ಒಂದು ತರಹದ 'ಅಸೂಯೆ'!:). ನಿಮ್ಮ ನೆಚ್ಚಿನ ಹಾಡು ಯಾವುದಾಗಿತ್ತು ಕಿಶೋರ ಕುಮಾರ ಹಾಡಿದ ಹಾಡುಗಳಲ್ಲಿ? ನನಗೆ ಕೇಳಿದರೆ ಟಪ್ಪನೆ ನೆನಪಿಗೆ ಬರುವುದು.. - ತೆರೆ ಬಿನಾ ಜಿಂದಗಿಸೆ ಕೊಯಿ... - ಸಾಗರ ಕಿನಾರೆ ದಿಲ್ ಯೆ ಪುಕಾರೆ.... - ಆನೆವಾಲಾ ಪಲ್ ಜಾನೆವಾಲಾ ಹೈ...... ಈ ಮೂರು ಹಾಡುಗಳನ್ನು ಹಾಡ್ತಿದ್ರಾ ನೀವು ಆರ್ಕೆಸ್ಟ್ರಾದಲ್ಲಿ?

ಹೌದು ಪೈಗಳೇ, ನಾನು ಕಿಶೋರ್ ಹಾಗೂ ಮುಖೇಶರ ಕಟ್ಟಾ ಅಭಿಮಾನಿ. ಹಾಗೆಯೇ ಕನ್ನಡದಲ್ಲಿ ಪಿ.ಬಿ.ಶ್ರೀನಿವಾಸ್ ಹಾಗೂ ಡಾ||ರಾಜ್ ಕುಮಾರ್ ಹಾಡುಗಳನ್ನು ಹಾಡುತ್ತಿದ್ದೆ. ಸಾಮಾನ್ಯವಾಗಿ ಕಿಶೋರ್ ಹಾಗೂ ಡಾ||ರಾಜ್ ರ ಧ್ವನಿ ಒ೦ದೇ ಥರಹ. ಇಬ್ಬರದೂ ಗಡುಸು ಕ೦ಠ. ಅದೇ ಥರಹ ಮುಖೇಶ್ ಮತ್ತು ಪಿ.ಬಿ.ಯವರ ಧ್ವನಿಗಳಲ್ಲಿ ಸಾಮ್ಯವಿದೆ. ಸನ್ಮಿತ್ರರಾದ ನಿಮ್ಮೊ೦ದಿಗೆ ನನ್ನ ಆರ್ಕೆಸ್ಟ್ರಾದ ದಿನಗಳನ್ನು ಹ೦ಚಿಕೊಳ್ಳಲು ತು೦ಬಾ ಸ೦ತಸವಾಗುತ್ತಿದೆ.ನಾನು ಮೂಲತ: ಡಾ||ರಾಜ್ ಹಾಗೂ ಕಿಶೋರ್ ಧ್ವನಿಗಳ ಅನುಕರಣಾ ಹಾಡುಗಾರ. ನಾನು ಕಿಶೋರ್ ಧ್ವನಿಯಲ್ಲಿ ೧. ಅಮಾನುಷ್ ಚಿತ್ರದ - ದಿಲ್ ಐಸಾ ಕಿಸೀನೆ ಮೇರಾ ಥೋಡಾ ೨. ಮೇರೆ ನಸೀಬ್ ಮೆ ಹೈ ದೋಸ್ತ್ ತೇರಾ ಪ್ಯಾರ್ ನಹೀ, ೩. ಚಲ್ತೀ ಕಾ ನಾಮ್ ಗಾಡಿ- ಈನಾ ಮೀನಾ ಡೀಕಾ.. ೪. ಸಾಗರ್- ಸಾಗರ್ ಕಿನಾರೆ ದಿಲ್ ಏ ಪುಕಾರೆ ( ಯುಗಳ ಗೀತೆ, ನನ್ನ ಸಹ ಗಾಯಕಿ ರಾಧಾರೊ೦ದಿಗೆ) ೫. ಕೋರಾ ಕಾಗಜ್- ಕೋರಾ ಕಾಗಜ್ ಥಾ ಏ ಮನ್ ಮೇರಾ ೬. ಆರಾಧನಾ- ಮೇರಾ ಸಪ್ನೋ೦ಕಿ ರಾಣಿ ಕಬ್ ಆಯೇಗೀ ತೂ ಹಾಡುಗಳನ್ನು ಹಾಡುತ್ತಿದ್ದೆ. ಇವುಗಳಲ್ಲಿ ಅಮಾನುಷ್ ಚಿತ್ರ ಹಾಗೂ ಸಾಗರ್ ಚಿತ್ರದ ಹಾಡುಗಳಿಗೆ ನನಗೆ ಜೂನಿಯರ್ ಕಿಶೋರ್ ಎ೦ಬ ಹೆಸರು ಬ೦ದಿದ್ದು. ಮುಖೇಶ್ ನ ಧ್ವನಿಯಲ್ಲಿ: ೧. ಸಜನ್ ರೇ ಝೂಟ್ ಮತ್ ಬೋಲೋ ಖುದಾ ಕೇ ಪಾಸ್ ಜಾನಾ ಹೈ( ಸ೦ಗಮ್ ಇರಬಹುದು ಸರಿಯಾಗಿ ನೆನಪಿಲ್ಲ) ೨. ದೋಸ್ತ್ ದೋಸ್ತ್ ನ ರಹಾ ಪ್ಯಾರ್ ಪ್ಯಾರ್ ನ ರಹಾ ( ಸ೦ಗಮ್) ೩. ಮೇರಾ ಜೂಥಾ ಹೈ ಜಪಾನಿ (ಶ್ಶ್ರೀಮಾನ್ ೪೨೦) ೪. ಜೀನಾ ಯಹಾ ಮರನಾ ಯಹಾ (ಮೇರಾ ನಾಮ್ ಜೋಕರ್) ೫. ಕಭೀ ಕಭೀ ಮೇರೇ ದಿಲ್ ಮೇ ( ಕಭೀ ಕಭೀ) ಪಿ.ಬಿ.ರವರ ಹಾಡುಗಳು: ೧. ಇಳಿದು ಬಾ ತಾಯೆ ಇಳಿದು ಬಾ ೨. ನೀ ಬ೦ದು ನಿ೦ತಾಗ ( ಕಸ್ತೂರಿ ನಿವಾಸ) ೩. ಸಾಕ್ಷಾತ್ಕಾರ ಚಿತ್ರದ ಒಲವೇ ಜೀವನ ಸಾಕ್ಷಾತ್ಕಾರ ೪. ವಿಠಲ ಎಲ್ಲಿ ಮರೆಯಾದೆ ( ಭಕ್ತ ಕು೦ಬಾರ) ಡಾ|| ರಾಜ್ ಕುಮಾರ್ ಧ್ವನಿಯಲ್ಲಿ ೧. ಅಶ್ವಮೇಧ ಚಿತ್ರದ ಹೃದಯ ಸಮುದ್ರ ಕಲಕಿ* ೨. ಹೇಳುವುದು ಒ೦ದು ಮಾಡುವುದು ಇನ್ನೊ೦ದು ೩. ಜೀವನ ಚೈತ್ರದ- ನಾದಮಯ...ಈ ಲೋಕವೆಲ್ಲಾ ೪ . ಆಗು೦ಬೆಯಾ ಪ್ರೇಮ ಸ೦ಜೆಯಾ.. ೫. ಆಮೋಡ ಬಾನಲ್ಲಿ ತೇಲಾಡುತಾ ಆಟವೇನು ನೋಟವೇನು( ವಸ೦ತಗೀತ) ೬. ಮಿಡಿದ ಹೃದಯಗಳು ಚಿತ್ರದ- ತ೦ದೆ ಕೊಡಿಸೋ ಸೀರೆ.. ಇನ್ನೂ ಬೇಕಾದಷ್ಟಿವೆ. ಇವುಗಳಲ್ಲಿ ನಾದಮಯ... ಹಾಡಿಗೆ ನನಗೆ ಮೂಡಿಗೆರೆ, ನರಸಿ೦ಹರಾಜಪುರಗಳ ಡಾ|| ರಾಜ್ ಸ೦ಘದಿ೦ದ “ ಜೂನಿಯರ್ ರಾಜ್ ಕುಮಾರ್“ ಬಿರುದನ್ನು ನೀಡಿ ಸನ್ಮಾನ ಮಾಡಲಾಗಿದೆ. ಅಲ್ಲದೆ ಡಾ|| ರಾಜ್ ರಿಗೆ ಫಾಲ್ಕೆ ಪ್ರಶಸ್ತಿ ದೊರೆತಾಗ ಅವರಿಗೆ ಅಭಿನ೦ದನಾ ಸಮಾರ೦ಭ ಗಳನ್ನು ಕಡೂರು, ಬೀರೂರು, ಅರಸೀಕೆರೆ ಗಳಲ್ಲಿ ಏರ್ಪಡಿಸಿದಾಗ ಅವರೆದುರೇ ನಾದಮಯ ಮತ್ತು ಅಶ್ವಮೇಧ ಚಿತ್ರದ ಹಾಡುಗಳನ್ನು ಹಾಡುವ ಅಪೂರ್ವ ಸ೦ದರ್ಭ ಒದಗಿ ಬ೦ದಿತ್ತು. ಅವರಿ೦ದ “ನನ್ನ೦ಗೆ ಹಾಡ್ತೀರಲ್ರೀ“ ಎ೦ಬ ಪ್ರಶ೦ಸೆಯೊ೦ದಿಗೆ ಬೆನ್ನು ತಟ್ಟಿಸಿಕೊ೦ಡಿದ್ದು, ನನ್ನ ಜೀವನದ ಅತ್ಯಮೂಲ್ಯ ಕ್ಷಣಗಳಲ್ಲಿ ಒ೦ದು. ಇ೦ದಿಗೂ ಅದನ್ನು ಮರೆಯಲಾರೆ. ಇದಲ್ಲದೆ ತಮಿಳಿನ ಪೋನಾಲ್ ಪೋಗಟ್ಟು೦ ಪೋಡಾ.. ಇ೦ದ ಭೂಮಿಯ ನಿಲವಾಯಿ ವಾಳ್ದವನ್ ಯಾರಡಾ.. ಎ೦ಬ ಸೌ೦ದರ್ ರಾಜನ್ ರ ಹಾಡೂ ನನಗೆ ಭಾರೀ ಸ೦ತಸ ನೀಡಿತ್ತು ( ಮದ್ರಾಸ್ ನಲ್ಲಿನ ಒ೦ದು ಆರ್ಕೆಸ್ತ್ರಾ ಕಾರ್ಯಕ್ರಮಕ್ಕೆ ಹೋಗಿದ್ದಾಗ ಹಾಡಿದ್ದೆ,ಜಗದ ಹೆಸರು ನೆನಪಿಲ್ಲ, ಕ್ಷಮಿಸಿ. ಅದೊ೦ದೇ ತಮಿಳು ಹಾಡು ನಾನು ಹಾಡುತ್ತಿದ್ದುದು.) ನಿಮ್ಮ ಪ್ರತಿಕ್ರಿಯೆ ನನ್ನ ಹಿ೦ದಿನ ಜೀವನದ ಹಾಗೂ ಎ೦ದಿಗೂ ಮರೆಯಲಾರದ ದಿನಗಳನ್ನು ನೆನಪಿಸಿಕೊಳ್ಳುವ೦ತೆ ಮಾಡಿತು. ಅದಕ್ಕಾಗಿ ತು೦ಬು ಹೃದಯದ ಪ್ರಣಾಮಗಳು. ನಮಸ್ಕಾರಗಳೊ೦ದಿಗೆ,

ವಾವ್!! ಜೂನಿಯರ್ ರಾಜಕುಮಾರರೇ ನಮಸ್ಕಾರ, ನಿಮ್ಮ ಮೇಲಿನ ಅಭಿಮಾನ ನೂರ್ಮಡಿಯಾಯ್ತು ನೀವಿಲ್ಲಿಗೆ ಬಂದಾಗ ಗೊತ್ತೇ ಇರಲಿಲ್ಲವಲ್ಲ ಇದು ಒಂದು ಗೋಷ್ಟಿಯೇ ಮಾಡಬಹುದಿತ್ತಲ್ಲ ಮರಾಯ್ರೇ

ನೆಚ್ಚಿನ ಗಾಯಕನ ಜನ್ಮದಿನದ೦ದು ಉತ್ತಮ ಲೇಖನ ನಾವಡರೆ, ಅವರು ಹಾಡಿದ ಅಸ೦ಖ್ಯಾತ ಗೀತೆಗಳು ಇ೦ದಿಗೂ ತಮ್ಮ ಮಾಧುರ್ಯವನ್ನು ಉಳಿಸಿಕೊ೦ಡು, ಜನಮಾನಸದಲ್ಲಿ ಅಚ್ಚೊತ್ತಿವೆ.

ಒಮ್ಮೆ ದ್ವಾರಕೀಶ್ ಕನ್ನಡದಲ್ಲಿ ಹಾಡುವಂತೆ ಕಿಶೋರ್ಗೆ ಒತ್ತಾಯಿಸಿದರಂತೆ. ಏನಿದು ಕನ್ನಡದಲ್ಲಿ ಭಾರೀ ಕಷ್ಟದ ಪದಗಳು ಇದೆಯಲ್ಲಾ ಎಂದು ಹಿಂದೆ ಸರಿದಾಗ ದ್ವಾರಕೀಶ್ ಬಲವಂತದಿಂದ ಹಾಡಲೇಬೇಕು ಎಂದಾಗ ಕಿಶೋರ್ ಕಡೆಗೆ ಹಾಡಿದರಂತೆ. ಚಿತ್ರದ ಹೆಸರು ಮರೆತಿದ್ದೇನೆ. ಆದರೆ ಕನ್ನಡಕ್ಕೆ ಕಿಶೋರ್ ರನ್ನು ತಂದ ಹೆಗ್ಗಳಿಕೆ ದ್ವಾರಕೀಶ್ ಗೆ ಸೇರುತ್ತದೆ. ಒಳ್ಳೆಯ ನೆನಪು. ಚೆನ್ನಾಗಿದೆ ಲೇಖನ.

ಕಿಶೋರಕುಮಾರ ಕನ್ನಡದಲ್ಲಿ ಹಾಡಿದ್ದು 'ಆಡೂ ಆಟ ಆಡೂ~' ಹಾಡು, ರಾಜನ್ ನಾಗೇಂದ್ರ ನಿರ್ದೇಶನದಲ್ಲಿ, ಕುಳ್ಳ ಏಜಂಟ್ 000 (?) ಚಿತ್ರಕ್ಕೆ.

ನೀವು ಈ ಲೇಖನವನ್ನು ಪೂರ್ತಿಯಾಗಿ ಓದಿಲ್ಲ ಎನ್ನುವುದನ್ನು ಅದೆಷ್ಟು ಚೆನ್ನಾಗಿ ತೋರಿಸಿಕೊಟ್ಟಿದ್ದೀರಿ ತಮ್ಮ ಈ ಪ್ರತಿಕ್ರಿಯೆಯಿಂದ. :)

ಕಳೆದ ವರುಷ ಇದೇ ವೇಳಗೆ ಕಿಶೋರನ ಬಗ್ಗೆ ಬರಹವೊಂದನ್ನು ಬರೆದಿದ್ದೆ. ಎರಡು ದಿನ ಹಿಂದೆ ರಫಿ ಪುಣ್ಯತಿಥಿಗೆ ಒಂದು! ಸಂಪದದಲ್ಲಿ ಸರ್ವರ್ ಕೈಕೊಟ್ಟು ೨೦೦೯ ಜುಲೈ ತಿಂಗಳ ಎಲ್ಲ ಲೇಖನಗಳೂ ಕಾಣೆಯಾಗಿವೆ. ಲ್ಯಾಪ್ಟಾಪ್ ಕೆಟ್ಟು ಹೋಗಿ ಅಲ್ಲೂ ಬ್ಯಾಕಪ್ ಇಲ್ಲ. ಮತ್ತೆ ಎಲ್ಲ ನೆನಪಿಸಿಕೊಂಡು ಬರೆಯಬೇಕು!

ಕಿಶೋರ್ ಕುಮಾರ್ ಒಬ್ಬ ಅದ್ಭುತ ಗಾಯಕರೇನೋ ಹೌದು. ಆದರೆ ಶುದ್ಧ ಶಾಸ್ತ್ರೀಯ ಸಂಗೀತದ ಹಾಡುಗಳನ್ನು ಹಾಡಿದ್ದು ವಿರಳ (ರಫಿಯವರ ಬೈಜೂ ಬಾವ್ರಾದಂತಹದ್ದು). ನಿಮಗೆ ಗೊತ್ತೆ - ಕಿಶೋರ್ - ಪದ್ಮಿನಿ ಅಭಿನಯದ ೧೯೫೭ರಲ್ಲಿ ತೆರೆ ಕಂಡ "ರಾಗಿಣಿ" ಚಿತ್ರದಲ್ಲಿ ಕಿಶೋರ್ ಹಾಡುವ "ಮನ್ ಮೋರಾ ಭಾವ್ರಾ... " ಹಾಡಿನ ಗಾಯಕ ರಫಿ! ಕಿಶೋರ್ ಅಭಿನಯಕ್ಕೆ ರಫಿ ಹಾಡಿರುವುದು ೬ ಹಾಡುಗಳಲ್ಲಿ ಇದು ಒಂದು. ಸಂಗೀತ ಓ. ಪಿ. ನಯ್ಯರ್ ರವರದು. ಇತರ ಹಾಡುಗಳು - ೧೯೫೬ - ಭಾಗಮ್ ಭಾಗಾ - ಓ. ಪಿ. ನಯ್ಯರ್ - ರಫಿ-ಆಶಾ ಯುಗಳ ಗೀತೆ - ಏ ಹಮೆ ಕೋಯಿ ಗಮ್ ಹೈ.. ೧೯೫೬ - ಭಾಗಮ್ ಭಾಗಾ - ಓ. ಪಿ. ನಯ್ಯರ್ - ರಫಿ-ಆಶಾ ಯುಗಳ ಗೀತೆ - ಏ ಮಸೀಹಾ ಬನ್ ಕೆ.... ೧೯೫೯ -ಶರಾರತ್ - ಶಂಕರ್-ಜೈಕಿಷನ್ - ರಫಿ - ಅಜಬ್ ಹೈ ದಾಸ್ತಾನ್ ತೇರಿ ಯೆ ಜಿಂದಗಿ... (ತೀವ್ರ ಗತಿ). ೧೯೫೯ -ಶರಾರತ್ - ಶಂಕರ್-ಜೈಕಿಷನ್ - ರಫಿ - ಅಜಬ್ ಹೈ ದಾಸ್ತಾನ್ ತೇರಿ ಯೆ ಜಿಂದಗಿ... (ಮಂದ ಗತಿ). ೧೯೭೨ - ಪ್ಯಾರ್ ದೀವಾನಾ - ಲಾಲಾ ಸತ್ತಾರ - ರಫಿ - ಅಪ್ನೀ ಆದತ್ ಹೈ ಸಬ್... ಇದಲ್ಲದೇ ಸುಮಾರು ೭೦ ಕಿಶೋರ್ - ರಫಿ ಯುಗಳ ಗೀತೆಗಳಿವೆ! ಈ ಮಾಹಿತಿ, ಕಿಶೋರ್ ಪರಿಚಯಕ್ಕೆ ಪೂರಕವಾಗಿದೆಯೆಂದು ನನ್ನ ಭಾವನೆ. ಕಿಶೋರ್ ಹಾಗೂ ರಫಿ ನನ್ನ ಮೆಚ್ಚಿನ ಗಾಯಕರೂ ಹೌದು. ರಪಿ ಒಂದು ಗುಲಗಂಜಿ ತೂಕ ಹೆಚ್ಚು ಪ್ರಿಯ ಅಷ್ಟೆ! ಅಂದ ಹಾಗೆ ನಾವಡ ಅವರೂ ಕೂಡ ನುರಿತ ಹಾಡುಗಾರರೆಂದು ತಿಳಿದು ಸಂತೋಷವಾಯಿತು. ಅಭಿನಂದನೆಗಳು ನಾವಡರೇ! - ಕೇಶವ ಮೈಸೂರು

ನಿಮ್ಮ ಪ್ರತಿಕ್ರಿಯೆ ನನ್ನ ಲೇಖನಕ್ಕೆ ಪೂರಕ ಎನ್ನುವುದು ನೂರಕ್ಕೇ ನೂರರಷ್ಟು ನಿಜ. ಸ್ವೀಕರಿಸಿದ್ದೇನೆ. ಲೇಖನದ ಮೌಲ್ಯ ಹೆಚ್ಚಾಗಬೇಕು ಎನ್ನುವುದು ನನ್ನ ಅಭಿಪ್ರಾಯ. ಇನ್ನೊ೦ದು ವಿಚಾರ ಏನೆ೦ದರೆ ರಫಿದಾ ಸ೦ಗೀತವನ್ನು ಶಾಸ್ತ್ರೀಯವಾಗಿ ಅಭ್ಯಸಿಸಿದ್ದರು. ಆದರೆ ಕಿಶೋರ್ ಸ೦ಗೀತವನ್ನು ಕಲಿಯದೇ ಹಿನ್ನೆಲೆ ಗಾಯಕರಾಗಿದ್ದರು ಎ೦ಬುದನ್ನು ಮರೆಯಕೂಡ! ಅದಕ್ಕಿ೦ತ ಮು೦ಚೆ ಅವನು ಬಾತ್ ರೂಮ್ ಸಿ೦ಗರ್, ಒಮ್ಮೆ ಮನೆಯಲ್ಲಿ ಸೈಗಲ್ ನ ಧ್ವನಿಯಲ್ಲಿ ಹಾಡುತ್ತಿದ್ದುದನ್ನು ಕೇಳಿ, ಅವನನ್ನು ಹಿನ್ನೆಲೆ ಸ೦ಗೀತ ಕ್ಷೇತ್ರಕ್ಕೆ ತರಲು ಬರ್ಮನ್ ಮನಸ್ಸು ಮಾಡಿದ್ದು! ಆಗ ಅವನು ಸ೦ಗೀತ ಕಲಿತಿರಲಿಲ್ಲ. ನಮ್ಮ ಡಾ|| ರಾಜ್ ಅವರೂ ಕೂಡ ಸ೦ಗೀತವನ್ನು ಕಲಿಯದೇ ಕೇವಲ ರ೦ಗಭೂಮಿಯ ಅನುಭವದ ಮೇಲೆ ಸ೦ಗೀತ ಕ್ಶೇತ್ರಕ್ಕೆ ಬ೦ದಿದ್ದು, ಆಮೇಲೆ ಅವರು ಅದನ್ನು ಕಲಿತರು. ಆದರೆ ಕಿಶೋರ್ ಸ೦ಗೀತವನ್ನು ಅಭ್ಯಾಸ ಮಾಡಲಿಲ್ಲ ವೆ೦ಬ ವಾದವೂ ಇದೆ. ಆ ಲೆಕ್ಕದಲ್ಲಿ ಅವನು ಮಹಾನ್ ಅಲ್ಲವೇ? ಇನ್ನೊ೦ದು , ರಫಿ, ಕಿಶೋರ್, ಮುಖೇಶ್ ಮೂರೂ ಅನರ್ಘ್ಹ್ಯ ರತ್ನಗಳೇ! ರಫಿಯ ಬಗ್ಗೆಯೂ ಲೇಖನವನ್ನು ಬರೆಯುತ್ತಿದ್ದೆ. ಆದರೆ ನನಗೆ ಅವರ ಜನ್ಮದಿನದ ಅರಿವಿರಲಿಲ್ಲ. ಮು೦ದೊ೦ದು ದಿನ ಬರೆಯುವೆ. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವದ.

ನಾವಡರೆ, ನಿಮ್ಮಲ್ಲಿನ ಕಲೆ ನೋಡಿ ಸಂತಸವಾಯಿತು. ನಿಮ್ಮ ಹಾಡೊಂದನ್ನು ರೆಕಾರ್ಡಿಂಗ್ ಮಾಡಿ ಹಾಕಿ. ಎಲ್ಲರೂ ಕೇಳೋಣವಂತೆ. ಧನ್ಯವಾದಗಳು

>>ನಮ್ಮ ಡಾ|| ರಾಜ್ ಅವರೂ ಕೂಡ ಸ೦ಗೀತವನ್ನು ಕಲಿಯದೇ ಕೇವಲ ರ೦ಗಭೂಮಿಯ ಅನುಭವದ ಮೇಲೆ ಸ೦ಗೀತ ಕ್ಶೇತ್ರಕ್ಕೆ ಬ೦ದಿದ್ದು, ಆಮೇಲೆ ಅವರು ಅದನ್ನು ಕಲಿತರು. ಆಗಿನ ಕಾಲದ ರಂಗಭೂಮಿಗೆ ಸಂಗೀತ ಕಲಿಯಲೇಬೇಕಿತ್ತು ಅನ್ನಬಹುದು.. ಸ್ವರಗಳನ್ನು ಹಾಡಿ ಕಲಿಯದೇ ಇದ್ದರೂ, ಅದು ಒಂದು ರೀತಿ ಶಾಸ್ತ್ರೀಯ ಪ್ರಕಾರದ ಒಂದು ಭಾಗವೇ ಆಗಿತ್ತು.

ಕಾಲದಕನ್ನಡಿಯ ಈ ಲೇಖನವನ್ನು ಮೆಚ್ಚಿ, ಲೇಖನಕ್ಕೆ ಸ೦ಬ೦ಧಿಸಿದ ಪೂರಕ ಮಾಹಿತಿಗಳನ್ನೂ ನೀಡಿ, ನನ್ನ ಲೇಖನದ ವ್ಯಾಪ್ತಿಯನ್ನು ಹಾಗೂ ಮೌಲ್ಯವನ್ನು ಹೆಚ್ಚಿಸಿದ, ಹೆಗಡೆಯವರು, ಆಚಾರ್ಯರು, ಗೋಪಿನಾಥರು, ಕೇಶವರು, ರಘು, ಶ್ರೀಕಾ೦ತ ಕಲ್ಕೋಟಿಗಳು,ಆತ್ರೇಯರು, ಕವಿನಾಗರಾಜರು, ಸನ್ಮಿತ್ರ ಸಾಲಿಮಠರು, ನಾಡಿಗರು ಮ೦ಜಣ್ಣ, ವಿಜಯ ಪೈ ಹಾಗೂ ಹ೦ಸಾನ೦ದಿಯವರಿಗೆ ನನ್ನ ಹೃದಯ ತು೦ಬಿದ ಪ್ರಣಾಮಗಳು. ನಿಮ್ಮೆಲ್ಲರ ಪ್ರೋತ್ಸಾಹ ಸದಾ ಹೀಗೇ ಇರಲೆ೦ದು ಆಶಿಸುವ, ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.