ಕಾಲದಕನ್ನಡಿ- ಪರ್ಜನ್ಯ ಹೋಮದಿ೦ದಲೇ ಮಳೆಯೇ? ಅಥವಾ ...

To prevent automated spam submissions leave this field empty.

      ದೇವರೇ ಹಾಗೆ! ನಾವು ಅವನನ್ನು ದೂರ ತಳ್ಳಿದಷ್ಟೂ  ಹೊಸ ಹೊಸ ಸಾಕ್ಷಿಗಳಿ೦ದ “ನನ್ನ ಅವಶ್ಯಕತೆ ನಿನ್ನ ಜೀವನಕ್ಕಿದೆ ನೋಡು“ ಎನ್ನುತ್ತಾ ನಮ್ಮ ಜೀವನದಲ್ಲಿ ಕಾಲಿಟ್ಟೇ ಇಡುತ್ತಾನೆ! ಅವನೊ೦ದಿಗೆ ಬದುಕುವುದು ನಮಗೆ ಅಭ್ಯಾಸವಾಗಿ ಹೋಗಿದೆ. ಭಾರೀ ಕಷ್ಟದಲ್ಲಿದ್ದಾಗ ಪ್ರತಿದಿನ ಬೆಳಿಗ್ಗೆ ಎದ್ದ ಕೂಡಲೇ “ದೇವರೇ,ಈ ದಿನ ನಾದ್ರೂ ಚೆನ್ನಾಗಿರಲಯ್ಯ“ಅ೦ತ ಬೇಡಿಕೊಳ್ಳುತ್ತಲೂ ಭಾರೀ ಸುಖದಲ್ಲಿದ್ದಾಗ “ ದೇವರೇ ನಿನ್ನೆ ಇದ್ದಹಾಗೆ ಇವತ್ತೂ, ನಾಳೆನೂ, ಮು೦ದೆನೂ ಇರುವ ಹಾಗೆ ಅನುಗ್ರಹಿಸಯ್ಯ“ ಅ೦ತ ಬೇಡಿಕೊಳ್ಳುವುದು  ನಮ್ಮ ಅಭ್ಯಾಸವಾಗಿ ಹೋಗಿದೆ.ನಾನು ಒ೦ದು ರೀತಿಯಲ್ಲಿ ಆಸ್ತಿಕನೂ ಹೌದು-ಮತ್ತೊ೦ದು ವಿಧದಲ್ಲಿ ನಾಸ್ತಿಕ ಹೌದು! ಎಲ್ಲವುದನ್ನೂ ಅವನ ತಲೇ ಮೇಲೇ ಹಾಕೋದೂ ಇಲ್ಲ, ಎಲ್ಲದರದ್ದೂ ಅವನಿಗೇ ಕ್ರೆಡಿಟ್ ಕೋಡೋದಿಲ್ಲ! 


      ಪ್ರತಿವರ್ಷ ನಮ್ಮ ಹೊರನಾಡಿನಲ್ಲಿ ಏಪ್ರಿಲ್ ಹೊತ್ತಿನಲ್ಲೆಲ್ಲಾ ಮಳೆಯ ಆಗಮನವಾಗುತ್ತದೆ. ಸಾಮಾನ್ಯವಾಗಿ ನವರಾತ್ರಿ ಮುಗಿದು ದೀಪಾವಳಿಯ ಸಮಯದಲ್ಲಿ ಒ೦ದೆರಡು ಮಳೆ ಬ೦ದರೆ ಆ ವರ್ಷದ ಮಳೆಗಾಲ ಖತ೦,ನವೆ೦ಬರ್ ನ೦ತರ ಶಿವರಾತ್ರಿ ಯವರೆ ಗೂ ಛಳಿಯೋ ಛಳಿ,ಮತ್ತೆ ಪ್ರತಿವರ್ಷ ಅಕ್ಷಯತದಿಗೆಯ೦ದು ಮಳೆಯ ಆಗಮನ!ನಮಗೆ ಅಕ್ಷಯ ತದಿಗೆ ಬ೦ತೆ೦ದರೆ ಮಳೆಗಾಲ ಆರ೦ಭವಾದ೦ತೆಯೇ. ಅಕ್ಷಯತದಿಗೆಯ೦ದು ಎ೦ದಿನ೦ತೆ ಮಳೆ ಬಿದ್ದು ಆನ೦ತರ  ಜೂನ್ ವರೆಗೂ ೧೦-೧೫ ದಿನ ಮಳೆ ಬರುತ್ತಿತ್ತು.ಇದು ಇಲ್ಲಿಯವರೆವಿಗೂ ಅನೂಚಾನವಾಗಿ ನಡೆದು ಬ೦ದ ಪ್ರಕ್ರಿಯೆ! ಈ ಮಧ್ಯೆ ೨೦೦೬ ನೇ ಇಸವಿ,೨೦೦೮ ನೇ ಇಸವಿ ಹಾಗೂ ಪ್ರಸಕ್ತ ವರ್ಷ ಮಾತ್ರವೇ ಮಳೆ ದಿಕ್ಕುತಪ್ಪಿರುವುದು.ಆದರೆ  ೨೦೦೭ ನೇ ಇಸವಿ ಹಾಗೂ ೨೦೦೯ ನೇ ಇಸವಿ ಎರಡೂ ವರ್ಷಗಳೂ ಮಳೆ ಚೆನ್ನಾಗಿಯೇ ಆಗಿದೆ.ಆದರೆ ೨೦೦೬,೨೦೦೮ ಮತ್ತು ಪ್ರಸಕ್ತ ವರ್ಷ ಎ೦ದಿನ೦ತೆ ಅಕ್ಷಯತದಿಗೆ ಯ೦ದು ಮಳೆಯ ಆಗಮನವಾದರೂ ನ೦ತರದ ದಿನಗಳಲ್ಲಿ ಮಳೆರಾಯ ಮುನಿಸಿಬಿಟ್ಟ. ಜೂನ್ ತಿ೦ಗಳು ಎ೦ದಿನ೦ತೆ ಇಡೀ ರಾಜ್ಯದಲ್ಲಿ ಮಳೆಯಾದರೂ ನಮ್ಮಲ್ಲಿ ಇಲ್ಲ! ಬಿರು ಬೇಸಗೆಯ ದಿನಗಳ೦ತೆ, ಸೆಖೆಯ ಆಟ! ಈ ವರ್ಷವೂ ಹಾಗೆಯೇ ಏಪ್ರಿಲ್ ಮತ್ತು ಮೇ ತಿ೦ಗಳಲ್ಲಿ ಬರಬೇಕಾದ ಮಳೆ   ಜೂನ್  ಮತ್ತು ಜುಲೈನಲ್ಲಿಯೂ ಬರಲೇ ಇಲ್ಲ! ಕೃಷಿಕರು ಕ೦ಗಾಲು,ನಾಟಿ ಮಾಡಿರ ಬೇಕು ಇಷ್ಟೊತ್ತಿಗೆ! ಎಲ್ಲಿ೦ದ ಮಾಡೋದು? ಮಳೆಯೇ ಇಲ್ಲ!


      ಮಳೆರಾಯ ಇವತ್ತು ಬರಬಹುದು, ನಾಳೆ ಬರಬಹುದು ಅ೦ತ ಕಾದಿದ್ದೇ, ಕಾದಿದ್ದು. ಹೂ೦...ಹೂ೦.. ನಾನು ಬರೋಲ್ಲಾ ಅ೦ತ ಅವನು.. ಪಕ್ಕದ ಕಳಸ,( ಇಲ್ಲಿ೦ದ ೮ ಕಿ.ಮೀ.ದೂರ) ಶೃ೦ಗೇರಿ ( ೭೫ ಕಿ.ಮೀ ದೂರ) ಕೊಪ್ಪ (೭೦.ಕಿ.ಮೀ ದೂರ) ಬಾಳೆ ಹೊನ್ನೂರು (೪೮ ಕಿ.ಮೀ.ದೂರ)ಬಾಳೆಹೊಳೆ ( ೨೮.ಕಿ.ಮೀ ದೂರ) ಕುದುರೆಮುಖ( ೨೮ ಕಿ.ಮೀ.ದೂರ) ಎಲ್ಲಾ ಕಡೆ  ಮಳೆ ಭಾರೀ ಸದ್ದು ಮಾಡಿ ಬೀಳುತ್ತಿದ್ದರೂ ನಮ್ಮ ಕಡೆ ಬರಲೇ ಇಲ್ಲ. ಇದೊಳ್ಳೆ ಕಥೆಯಾಯ್ತಲ್ಲ ಅ೦ತ ನಮ್ಮ ಧರ್ಮಕರ್ತರು ಪರ್ಜನ್ಯ ಹೋಮ ಮಾಡೋಣ ಎ೦ದು ಶ್ರೀಕ್ಷೇತ್ರದಲ್ಲಿ ದಿನ ನಿಶ್ಚೈಯಿಸಿದರು. ಗ್ರಾಮಗಳಿಗೆ ಡ೦ಗುರ ಸಾರಿದ್ದಾಯ್ತು,ಮೊನ್ನೆ ಈ ತಿ೦ಗಳ  ೨೧ ನೇ ತಾರೀಕು ಪರ್ಜನ್ಯ ಜಪದ ಮಹಾಸ೦ಕಲ್ಪವೆ೦ದೂ, ೨೨ ನೇ ತಾರೀಕು ಜಪ ಮು೦ದುವರಿಯುವುದೆ೦ದೂ, ೨೩ ನೇ ತಾರೀಕಿನ ಶುಕ್ರವಾರ ಪರ್ಜನ್ಯ ಹೋಮದ ಪೂರ್ಣಾಹುತಿ ಹಾಗೂ ಜಗನ್ಮಾತೆಯವರಿಗೆ ಕಲಶಾಭಿಷೇಕ  ಎ೦ದು  ಆಟೋದಲ್ಲಿ ಊರ ತು೦ಬಾ  ಘೋಷಣೆಯ ಮೂಲಕ ತಿಳಿಸಿದ್ದಾಯ್ತು.ಎಲ್ಲಾ ಸಿಧ್ಧತೆಗಳೂ ಮುಗಿದವು.ನಾನು ನಮ್ಮ ಧರ್ಮಕರ್ತ ರನ್ನು ಕೇಳಿದೆ, “ಸಾರ್,ನಿಜವಾಗಿಯೂ ಮಳೆ ಬರುತ್ತಾ? ಅದಕ್ಕೆ  ಅವರು ಅ೦ದರು “ಸ್ವಲ್ಪ ಸುಮ್ಮನಿರು ಮಾರಾಯ ನೀನು“ ನಾನು ತೆಪ್ಪಗಾದೆ.


      ಆ ದಿನ ಬೆಳಿಗ್ಗೆ ತ೦ತ್ರಿಗಳಿ೦ದ ಜಪದ ಮಹಾಸ೦ಕಲ್ಪ  ಆರ೦ಭ. ತ೦ತ್ರಿಗಳಿಗೆ ನಾನು ಕೇಳಿದೆ,“ ಅಲ್ರೀ ,ನೀವು ಜಪ ಮಾಡಿ ಮಳೆ ಬರುತ್ತಾ?ಹೇಗಿದ್ದರೂ ೨೭ ರ ನ೦ತರ ಮಳೆ ಬ೦ದೇ ಬರುತ್ತದೆ ಅ೦ಥ ಹವಾಮಾನ ಇಲಾಖೆಯವರ ವರದಿ ಇದೆ.ಅದನ್ನೇ ನೀವು ನಾವು ಹೋಮ ಮಾಡಿ ಮಳೆ ಬ೦ತು ಅ೦ಥ ಕ್ರೆಡಿಟ್ ತಗೋಬೇಡಿ“ ಅ೦ದೆ.ಅದಕ್ಕೆ ಅವರು ಹೇಳಿದರು “ನಾವಡರೇ ನೀವು ಈ ಹಿ೦ದೆ ಎರಡು ಬಾರಿಯೂ ಪರ್ಜನ್ಯ ಹೋಮ ಮಾಡಿದಾಗ ಇದೇ ಮಾತು ಹೇಳಿದ್ರಿ,ಆಮೇಲೆ ತೆಪ್ಪಗಾ ದಿರಿ“ಅ೦ದರು.  “ಆಗಲಿ ಈ ವರ್ಷನೂ ಪರೀಕ್ಷೆ“ ಅ೦ದೆ ನಾನು! ಜಪ ಆರ೦ಭಿಸಿದ ಸುಮಾರು ೨ ಗ೦ಟೆಗಳ ನ೦ತರ ಎಲ್ಲೋ ಇದ್ದ ಮೋಡಗ ಳೆಲ್ಲಾ ಒಟ್ಟಿಗೇ ನಮ್ಮ ನೆತ್ತಿಯ ಮೇಲೆ ಸೇರಲು ಆರ೦ಭಿಸಿದವು!“ಈ ವರ್ಷವೂ ನನಗೆ ಸೋಲೇನಮ್ಮಾ ತಾಯಿ? “ ಅ೦ತ ನಾನು ಮನಸ್ಸಿನಲ್ಲಿಯೇ ಶ್ರೀ ಅನ್ನಪೂರ್ಣೇಶ್ವರೀಯನ್ನು ಬೇಡಿಕೊ೦ಡೆ. ಆ ದಿನವಿಡೀ ಮಳೆ ಬರಲೇ ಇಲ್ಲ! ತ೦ತ್ರಿಗಳತ್ತ ನನ್ನ ವ್ಯ೦ಗ್ಯ ನಗು  ಮುಗಿಯುವ ಹಾಗೆ ಕಾಣಲಿಲ್ಲ! ತ೦ತ್ರಿಗಳು ಬೇಸರ ಮಾಡಿಕೊಳ್ಳಲೂ ಇಲ್ಲ!ಮಾರನೇ ದಿನ ಬೆಳಿಗ್ಗೆ  ಸತತ ವಾಗಿ  ಬರಲಿಕ್ಕೆ ಆರ೦ಭವಾದ ಮಳೆ ಇವತ್ತಿಗೂ ನಿ೦ತಿಲ್ಲ! ಮಧ್ಯೆ-ಮಧ್ಯೆ ೧/೨ ಯಾ ೧ ಗ೦ಟೆ ಪುರುಸೊತ್ತು ಕೊಟ್ಟಿದ್ದರೂ ಮಳೆ ಸ೦ಪೂರ್ಣವಾಗಿ ನಿ೦ತದ್ದಿಲ್ಲ!ಎ೦ದಿನ೦ತೆ ನನ್ನ ಸೋಲು,ಪರ್ಜನ್ಯ ಜಪ ಹಾಗೂ-ಹೋಮದ್ದೇ ತನ್ಮೂಲಕ ಪ್ರಕೃತಿ ಯಾ ದೇವರ ಜಯ! ಹಿ೦ದೆ ಎರಡು ವರ್ಷಗಳಲ್ಲಿ ಪರ್ಜನ್ಯ ಜಪ ಹಾಗೂ ಹೋಮ ಮಾಡಿದ್ದಾಗ ಲೂ ಇದೇ ತರಹವೇ! ಜಪ ಮಾಡಿದ ನ೦ತರ ಸುರಿಯುತ್ತಿದ್ದ ನಮ್ಮನ್ನೆಲ್ಲಾ ಮಳೆ ಕ೦ಗಾಲಾಗಿಸಿತ್ತು! ಈ ವರ್ಷವೂ ಹಾಗೆಯೇ, ಜುಲೈ ೧೦ ರ ಒಳಗೇ ಒ೦ದೆರಡು ಬಾರಿ ಕಳಸ ಹಾಗೂ ಹೊರನಾಡುಗಳ ಸ೦ಪರ್ಕ ಸೇತುವೆಯ ಮೇಲೆ ನೀರು ಹರಿಯಲು ಆರ೦ಭಿಸಿ, ಒ೦ದೆರಡು ದಿನ ಎರಡೂ  ಊರುಗಳ ಸ೦ಪರ್ಕ ಕಡಿತಗೊಳ್ಳಬೇಕಿತ್ತು! ಆದರೆ  ಈ ಸಲ ಸ್ವಲ್ಪ ತಡವಾದರ(ಪರ್ಜನ್ಯ ಹೋಮ ಮಾಡಿದ ನ೦ತರ) ಇನ್ನೆ ರಡು ದಿನ ಇದೇ ತರಹ ಮಳೆ ಬ೦ದರೆ ಎರಡೂ ಗ್ರಾಮಗಳ ಸ೦ಪರ್ಕ ಕಡಿಯುವು ದ೦ತೂ ಹೌದು! 


     ನನಗೆ ಅರ್ಥವಾಗದ್ದು ಏನೆ೦ದರೆ ನಿಜವಾಗಿಯೂ ಮಾಮೂಲಿಯಾಗಿ ಮಳೆ ಬರುವ ಹಾಗೆಯೇ ಬ೦ತೋ ಅಥವಾ ಹೋಮ ಮಾಡಿದ್ದಕ್ಕೆ ಮಾತ್ರವೇ ಮಳೆ ಬ೦ತೋ ಎ೦ಬುದು,ಹೋಮ ಮಾಡದೇ ಇದ್ದರೆ ಮಳೆ ಬರುತ್ತಿರಲಿಲ್ಲವೇ?ಪರ್ಜನ್ಯ ಜಪದ ಮಹಾ ಸ೦ಕಲ್ಪವನ್ನು ಮಾಡಿ,ಜಪವನ್ನು ಆರ೦ಭಿಸಿದ ನ೦ತರವೇ ಎಲ್ಲೋ ಇದ್ದ ಮೋಡಗಳು ಒ೦ದೆಡೆ ಕಲೆತವೇಕೆ ಅದಕ್ಕಿ೦ತ ಮೊದ ಲೇ  ಆಗಬಹುದಿತ್ತಲ್ಲವೇ ಈ ಪ್ರಕ್ರಿಯೆ? ಹಾಗಾದರೆ ಅದೇ ದಿನ ಮಳೆ ಬರದೆ ಮಾರನೆಯ ದಿನದಿ೦ದ ಮಳೆ ಆರ೦ಭ ಗೊ೦ಡಿದ್ದು ಏಕೆ? ಜಪ ಆರ೦ಭಿಸಿದ ನ೦ತರವೇ ಸುರಿಯಬೇಕಿತ್ತಲ್ಲ? ಜಪದ ಶಕ್ತಿಯಿ೦ದ ಮಳೆ ಬ೦ದಿತು ಎ೦ದಾದರೆ ಇವತ್ತಿಗೂ ಬಿಡದೇ ಸುರಿಯುತ್ತಿರುವುದೇಕೆ?


     ನಮ್ಮ ಪೂರ್ವಜರೆಲ್ಲಾ ಪ್ರಕೃತಿ ಆರಾಧಕರು, ಮಳೆಗೆ ಅಧಿಪತಿಯಾದ  ವರುಣ ನಲ್ಲದೆ ಅಗ್ನಿ, ರವಿ, ಗಿಡ, ಮರಗಳನ್ನೆಲ್ಲಾ ಪೂಜಿ ಸುತ್ತಿದ್ದರು. ಮಳೆ-ಬೆಳೆ ಎಲ್ಲಾ ಚೆನ್ನಾಗಿ ಅಗಿ ನಾಡು ಸುಭಿಕ್ಷವಾಗಿತ್ತು! ಆದರೆ ಈಗೀಗ ಮಳೆ ಎಲ್ಲಾ ಕಡಿಮೆಯಾಗಿ ಕಪ್ಪೆ ಮದುವೆ, ಕತ್ತೆ ಮದುವೆ, ಪರ್ಜನ್ಯ ಹೋಮ ಮು೦ತಾದ ಆಚರಣೆಗಳು ಆರ೦ಭವಾದವು. ಅವುಗಳನ್ನು ಮಾಡಿದ ನ೦ತರ ಮಳೆ ಬ೦ದಿರು ವುದೂ ಹೌದು! ಇವನ್ನೆಲ್ಲಾ ಗಮನಿಸುತ್ತಿದ್ದರೆ, ದೇವರು ಎನ್ನುವ ಶಕ್ತಿಯ ಮಹಿಮೆ ಏನು? ಎ೦ಬುದರ ಅರಿವು ಆಗುತ್ತಿದೆ! ಒ೦ದು ಕಡೆ ನಾಗಾಲೋಟದಲ್ಲಿ ಸಾಗುತ್ತಿರುವ ವೈಜ್ಞಾನಿಕ ಬೆಳವಣಿಗೆಗಳು, ಕೃತಕ ಮೋಡ ಬಿತ್ತನೆ ಮು೦ತಾದ ಮಳೆ ಬರಿಸುವ ಹೊಸ-ಹೊಸ ಕ್ರಮಗಳು,ಅವುಗಳ ನಡುವೆ ಈ ನಮ್ಮ  ನ೦ಬಿಕೆ(ಮೂಢ?)ಗಳು,ಇವುಗಳಲ್ಲಿ ಯಾವುದನ್ನು ನ೦ಬಬೇಕು ಹಾಗೂ ಯಾವು ದನ್ನು ನ೦ಬಬಾರದೆ೦ಬುದೇ ಜಿಜ್ಞಾಸೆ!

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

<<ಅದೇ ದಿನ ಮಳೆ ಬರದೆ ಮಾರನೆಯ ದಿನದಿ೦ದ ಮಳೆ ಆರ೦ಭ ಗೊ೦ಡಿದ್ದು ಏಕೆ?>>ಅಯ್ಯೋ ಮಾರಾಯರೆ, ಜಪ ಮಾಡಿದವರು ಮನೆಗೆ ಹೋಗೋದು ಬೇಡ್ವೇ?? :) ಪ್ರಕೃತಿಯ ಆರಾಧಕರಾದ ಆರ್ಯರ ಕಾಲದಿ೦ದಲೂ ಈ ಆರಾಧನೆ ಆಚರಣೆಯಲ್ಲಿದೆ ಎ೦ದು ಓದಿದ ನೆನಪು ನಾವಡರೆ. ಪರ್ಜನ್ಯ ಜಪಕ್ಕೆ ಅದರದೇ ಆದ ವಿಶೇಷ ಶಕ್ತಿಯಿದೆ ಎನ್ನುವುದು ಸುಳ್ಳಲ್ಲ! ಪರ್ಜನ್ಯಾಸ್ತ್ರದ ಉಲ್ಲೇಖ ಮಹಾಭಾರತ, ರಾಮಾಯಣಗಳೆರಡರಲ್ಲೂ ಇದೆ. ಆದರೆ ವೈಜ್ಞಾನಿಕವಾಗಿ ಮೋಡ ಬಿತ್ತನೆ ಮಾಡಿದರೂ ಬರದ ಮಳೆ ಜಪದಿ೦ದ ಬರುತ್ತದೆನ್ನುವುದನ್ನು ನ೦ಬಲು ಇ೦ದಿನ ತ೦ತ್ರಜ್ಞಾನದ ಯುಗದಲ್ಲಿ ಕಷ್ಟವೇ ಸರಿ, ಆದರೆ ತ೦ತ್ರಜ್ಞಾನ ಉತ್ತರಿಸಲಾಗದ ಅದೆಷ್ಟೋ ರಹಸ್ಯಗಳು ಪ್ರಕೃತಿಯ ಗರ್ಭದಲ್ಲಿ ಸಾಕಷ್ಟಿವೆ. ಪ್ರಕೃತಿಯ ಮು೦ದೆ ಮಾನವ ತು೦ಬಾ ಕುಬ್ಜ!!

>>ಆದರೆ ತ೦ತ್ರಜ್ಞಾನ ಉತ್ತರಿಸಲಾಗದ ಅದೆಷ್ಟೋ ರಹಸ್ಯಗಳು ಪ್ರಕೃತಿಯ ಗರ್ಭದಲ್ಲಿ ಸಾಕಷ್ಟಿವೆ. ಪ್ರಕೃತಿಯ ಮು೦ದೆ ಮಾನವ ತು೦ಬಾ ಕುಬ್ಜ!!<< ಹೌದು, ಪ್ರಕೃತಿಯೂ ನಮ್ಮನ್ನು ಆಟ ಆಡಿಸುತ್ತಲೇ ಇರುತ್ತದೆ, ಅದೊ೦ದು ಥರಾ ಮಕ್ಕಳ ಕಾಲಿಗೆ ಹಗ್ಗ ಕಟ್ಟಿ ಒಮ್ಮೆ ಎಳೆಯೋದು-ಮತ್ತೊಮ್ಮೆ ಬಿಡೋದು ಹಾಗೆ. ಒ೦ದು ವರ್ಷ ಮಳೆಯೇ ಇಲ್ಲ, ಮತ್ತೊ೦ದು ವರ್ಷ ಸಾಧಾರಣ, ಮಗದೊ೦ದು ವರ್ಷ ಅತಿವೃಷ್ಟಿ. ಮಾನವ ಹೊಸ-ಹೊಸ ಆವಿಷ್ಕಾರಗಳನ್ನು ಮಾಡುತ್ತಲೇ ಇದ್ದಾನೆ. ಆದರೆ ಎಲ್ಲ ಇದ್ದರೂ ಹಳೆಯದೇ ಚೆನ್ನಾಗಿತ್ತು ಎ೦ದು ನಿಟ್ಟುಸಿರು ಬಿಡುವ ನಮ್ಮ ಪರಿಸ್ಥಿತಿ ಬದಲಾಗಿಲ್ಲ. ಕೆಲವು ಆವಿಷ್ಕಾರಗಳು ಸ೦ತಸ ನೀಡಿ, ಬದುಕಿನ ಹಾಗೂ ಕೂರ್ಮಿಕರ ಹಾದಿ ಸುಗಮಗೊಳಿಸಿದರೆ, ಮತ್ತೆ ಕೆಲವೊ೦ದರ ದರವನ್ನು ಬಡವರಿ೦ದ ಭರಿಸಲೇ ಆಗುವುದಿಲ್ಲ! ಸೃಷ್ಟಿ ನಿಯಾಮಕನ ಇಚ್ಛೆ ಏನೋ?

ಸರ್ , ತುಂಬಾ ಚಿಂತನೆಗೆ ಹಚ್ಚುವ ಸುಮಧುರ ಲೇಖನ. ಧನ್ಯವಾದಗಳು. ಹೋಮದಿಂದ ಮಳೆ ಬರುತ್ತೆ ಎಂದು ಆಶಯದಲ್ಲಿದ್ದ ತುಂಬಾ ಜನರ ಆಶಯದ ಸಕಾರತ್ಮಕ ಪ್ರಕ್ರಿಯೆನೇ(Positive thinking of so many people.) ಮಳೆ ಬರಲು ಕಾರಣ ಇರಬಹುದು. ಸಕರತ್ಮಕ ಪ್ರಕ್ರಿಯೆ ಇಂದ ಏನು ಸಾಧ್ಯ ಇಲ್ಲ ನೀವೇ ಹೇಳಿ?. ನಮಸ್ಕಾರಗಳು.

ರಾಘವೇಂದ್ರ, ಒಮ್ಮೆ ದಶಂಬರ-ಜನವರಿ-ಫೆಭ್ರವರಿ ಈ ಮೂರು ತಿಂಗಳುಗಳಲ್ಲಿ, ಯಾವುದಾದರೊಂದು ತುಂಬಾ ಬಿಸಿಲಿದ್ದ ದಿನ ಮಧ್ಯಾಹ್ನ ೧೨ ಘಂಟೆಗೆ, ಈ ಪರ್ಜನ್ಯ ಹೋಮ ಮಾಡಿಸಿದರೆ ಹೇಗೆ? ಸುಖಾ ಸುಮ್ಮನೆ ತಲೆಯೊಳಗೆ ಅನುಮಾನದ ಹುಳ ಬಿಟ್ಕೊಂಡು, ನಮ್ಮ ತಲೆಯೊಳಗೂ ಹುಳ ಬಿಡುವ ಪ್ರಯತ್ನ ಮಾಡುವುದರ ಬದಲು, ಈ ನನ್ನ ಸಲಹೆಯನ್ನು ಸ್ವೀಕರಿಸುತ್ತೀರೆಂದು ನನ್ನ ಅನಿಸಿಕೆ. :) - ಆಸು ಹೆಗ್ಡೆ

>>ಒಮ್ಮೆ ದಶಂಬರ-ಜನವರಿ-ಫೆಭ್ರವರಿ ಈ ಮೂರು ತಿಂಗಳುಗಳಲ್ಲಿ, ಯಾವುದಾದರೊಂದು ತುಂಬಾ ಬಿಸಿಲಿದ್ದ ದಿನ ಮಧ್ಯಾಹ್ನ ೧೨ ಘಂಟೆಗೆ, ಈ ಪರ್ಜನ್ಯ ಹೋಮ ಮಾಡಿಸಿದರೆ ಹೇಗೆ?<< ಪ್ರಯತ್ನಿಸಬಹುದು. ಆದರೆ ಆಗ ಮಳೆಯ ಅಗತ್ಯವಿರುವುದಿಲ್ಲ. ನನಗೆ ಗೊತ್ತಿದ್ದ ಹಾಗೆ ಪರ್ಜನ್ಯ ಹೋಮವನ್ನು ಮಳೆಗಾಲದಲ್ಲಿ ಮಳೆ ಬರದಿದ್ದಾಗ ಮಾಡುತ್ತಾರೆ. ಆದರೆ ನೀವು ಹೇಳಿದ್ದನ್ನು ಒಮ್ಮೆ ಪ್ರಯತ್ನಿಸಿ ನೋಡಲು ಏನೂ ಅಡ್ದಿ ಇಲ್ಲ. >>ಸುಖಾ ಸುಮ್ಮನೆ ತಲೆಯೊಳಗೆ ಅನುಮಾನದ ಹುಳ ಬಿಟ್ಕೊಂಡು, ನಮ್ಮ ತಲೆಯೊಳಗೂ ಹುಳ ಬಿಡುವ ಪ್ರಯತ್ನ ಮಾಡುವುದರ ಬದಲು, ಈ ನನ್ನ ಸಲಹೆಯನ್ನು ಸ್ವೀಕರಿಸುತ್ತೀರೆಂದು ನನ್ನ ಅನಿಸಿಕೆ.<< ಅನುಮಾನವನ್ನು ಬಗೆಹರಿಸಿಕೊಳ್ಳಲೇ ಬೇಕು. ಇಲ್ಲದಿದ್ದರೆ ನಾನು ರಾತ್ರಿ ಮಲಗುವುದು ಹೇಗೆ? ಅಲ್ಲದೆ ನಿಮಗಾದರೋ ನಾಳೆಯಿ೦ದಲೇ ವಾರಾ೦ತ್ಯ, ನನಗೆ ಹಾಗೆ ಇಲ್ಲ. ನನಗೆ ವರ್ಷವಿಡೀ ಕಾಯಕ. ನಾನಿಲ್ಲಿ ಕೆಲಸ ಮಾಡೋದು, ನೀವು ಎರಡು ದಿನ ಆರಾಮಾಗಿರೋದು ಅ೦ದ್ರೆ, ದೇವರಿಗೆ ಬೇಸರವಾಗುತ್ತೆ. ಅದ್ದರಿ೦ದ ಎರಡೂ ದಿನ ಸ್ವಲ್ಪ ಯೋಚನೆಗೊ೦ದಿಷ್ಟು ಸರಕಿರಲಿ ಅ೦ಥ. ಬೇಸರಿಸಬೇಡಿ ( ಇಷ್ಟೆಲ್ಲಾ ಬರೆಯುವುದಕ್ಕೆ ಸ್ವಾತ೦ತ್ರ್ಯ ಪಡೆದುಕೊ೦ಡಿದ್ದಕ್ಕೆ) ನಮಸ್ಕಾರಗಳೊ೦ದಿಗೆ,

ದಶ೦ಬರ್, ಜನವರಿ, ಫೆಬ್ರವರಿ ತಿ೦ಗಳಲ್ಲಿ ಯಾರೂ ಪರ್ಜನ್ಯಹೋಮ ಮಾಡುವುದಿಲ್ಲ ಸುರೇಶ್, ಅದೇನಿದ್ದರೂ ಮಳೆ ಬರುವ ಕಾಲದಲ್ಲಿ ಮಳೆ ಬರದಿದ್ದಾಗ ಮಾತ್ರ! ಇದರ ಬಗ್ಗೆ ಸ್ವಲ್ಪ ಕೂಲ೦ಕುಶವಾಗಿ ಪರಿಶೀಲಿಸಿ ಪ್ರತಿಕ್ರಿಯಿಸಿದರೆ ನಿಮಗೆ ಆಭಾರಿ ನಾನು!!

:):) ಹಾ ಹ ... ಸಂಶಯ ಪರಿಹರಿಸಲು ಇದನ್ನು ಬರಿ ಪರೀಕ್ಷೆಗೆಂದು ಮಾಡಿದರೆ ಬರಲಿಕ್ಕಿಲ್ಲ. ಆದರೆ ಜೊತೆ ತುಂಬಾ ಜನರ ನಂಬಿಕೆ ಕೂಡ ಮುಖ್ಯವಾಗುತ್ತೆ ಅಂತ ನನ್ನ ಅನಿಸಿಕೆ.

<< ಒಮ್ಮೆ ದಶಂಬರ-ಜನವರಿ-ಫೆಭ್ರವರಿ ಈ ಮೂರು ತಿಂಗಳುಗಳಲ್ಲಿ, ಯಾವುದಾದರೊಂದು ತುಂಬಾ ಬಿಸಿಲಿದ್ದ ದಿನ ಮಧ್ಯಾಹ್ನ ೧೨ ಘಂಟೆಗೆ, ಈ ಪರ್ಜನ್ಯ ಹೋಮ ಮಾಡಿಸಿದರೆ ಹೇಗೆ >> ಮಳೆ ಬರಲಾರದೇನೋ? ೧. ದೇವರ ಇರುವು ತರ್ಕದ ಮೇಲೆ ಅವಲಂಬಿತವಾಗಿಲ್ಲ ಅಥವಾ ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ದೇವರು ತರ್ಕಕ್ಕೆ ಪ್ರಯೋಗಕ್ಕೆ ನಿಲುಕುವನಲ್ಲ. ೨. ದೇವರು ಸರ್ವವನ್ನೂ ಅರಿತಿದ್ದರೆ ನಿಮ್ಮ ಪ್ರಯೋಗದ ಉದ್ದೇಶವನ್ನು ಅರಿಯನೇ? ಅರಿತ ಮೇಲೂ ಮಳೆ ಬರಿಸಿ ತನ್ನ ಶಕ್ತಿ ವ್ಯಯ (?) ಮಾಡಿಯಾನೆ? ಎನ್ನುವ ಪ್ರಶ್ನೆ ಬರುತ್ತಿದೆ ನನಗೆ. ೩. ನನ್ನ ಪಂಥದಲ್ಲಿ ಅಥವಾ ಪ್ರಯೋಗದಲ್ಲಿ ಗೆದ್ದರೆ ಮಾತ್ರ ನಿನ್ನನ್ನು ನಂಬುತ್ತೇನೆ ಎಂದು ನೀವು ದೇವರಿಗೆ ಹೇಳಿದರೆ ಆತ ನಿಮ್ಮನ್ನೇ ಗೆಲ್ಲಿಸಬಹುದು. ಯಾಕಂತೀರಾ? ತಾನು ಗೆದ್ದು ದೇವರಿಗೆ ಏನೂ ಆಗಬೇಕಾದ್ದಿಲ್ಲ. ಮತ್ತು ಇನ್ನೊಬ್ಬರಿಗೆ ಉಪಕಾರ ಮಾಡುವುದೇ ದೇವರ ಗುಣ. ಹಾಗಾಗಿ ನಿಮ್ಮ ಪಂಥಾಹ್ವಾನದಲ್ಲಿ ಸೋತು ನಿಮ್ಮನ್ನೇ ಗೆಲ್ಲಿಸಿ ಉಪಕಾರ ಮಾಡಬಹುದಲ್ಲವೇ? :) ೪. ತರ್ಕಕ್ಕೆ ನಿಲುಕದ ದೇವರನ್ನು ನಂಬಬೇಕೋ ಬಿಡಬೇಕೋ ಅವರವರಿಗೆ ಬಿಡಬೇಕು. ನಾನಂತೂ ನಂಬುತ್ತೇನೆ. ೫. ಆಧ್ಯಾತ್ಮದ ದೃಷ್ಟಿಯಿಂದ ನೋಡುವುದಾದರೆ ಅರಿವು (Consciousness) ಎನ್ನುವುದೂ ಒಂದು ಬಗೆಯ ಶಕ್ತಿ. ಆ ಶಕ್ತಿಯಿಂದ ಏನನ್ನಾದರೂ ಸಾಧಿಸಬಹುದು. ಹೇಗೆ ಎಂದು ಗೊತ್ತಿರಬೇಕಷ್ಟೆ. ನಿಮಗೆ ’ಅರಿವು’ ಅನ್ನು ಅಳೆಯಲು ಸಾಧ್ಯವಾದರೆ ಹಾಗೂ ಅದರ ಮುಖಾಂತರ ಪ್ರಯೋಗಗಳನ್ನು ನಡೆಸಲು ಸಾಧ್ಯವಾದರೆ ತರ್ಕದ ಮೂಲಕವೂ ನಾವಡರು ಹೇಳಿದುದರಲ್ಲಿ ನಿಜವಿದೆಯೋ ಅಥವಾ ಸುಳ್ಳೆಂದೋ ಸಾಬೀತುಪಡಿಸಬಹುದೇನೋ?

ಮುಖಕ್ಕೆ ಸೋಪು ಹಚ್ಚಿಕೊ೦ಡ ನ೦ತರ ಕಣ್ ಮುಚ್ಚಿದ್ದ್ರೂ ಕೈ ಸೀದಾ ಸೋಪಿನ ಡಬ್ಬದ ಹತ್ತಿರವೇ ಹೋಗುತ್ತದಲ್ಲವೆ ಮಹೇಶ್? ಇದು ಅದಾವ ಶಕ್ತಿ ಅನ್ನೋಣ??

ಬಹುಶ: ಈ ನ೦ಬಿಕೆಗಳು ಹಾಗೆಯೇ ಅನ್ನಿಸುತ್ತೆ ನೀರ್ಕಜೆಯವರೆ, ಅರಿವು ಅಥವಾ ಜ್ಞಾನೋದಯವೆ೦ಬುದು ನಾವು ಬಯಸಿದಾಗ ಸಿಗುವ೦ಥಹದ್ದಲ್ಲ. ಅದಕ್ಕಾಗಿ ಅಲೆಯಬೇಕು. ದೇವರನ್ನು ನಾವು ಪರೀಕ್ಷಿಸ ಹೊರಟರೆ ನಾವು ಪಡೆಯುವುದು ನಕಾರಾತ್ಮಕ ಅಭಿಪ್ರಾಯ ನ್ನೇ! ಆ ಮೂಲಕ ನಾವು ಪುನ: ಪುನ: ಅವನನ್ನು ಮೊರೆ ಹೋಗಲಾಗಿ ನ೦ತರ ಸಕಾರಾತ್ಮಕ ಅಭಿಪ್ರಾಯವನ್ನು ಪಡೆಯುತ್ತೇವೆ! ಮತ್ತು ಆ ನ೦ಬಿಕೆಗಳೆ ನಮಗೆ ದೇವರ ಅಸ್ತಿತ್ವವನ್ನು ತಿಳಿಸಿಕೊಡುವುದು. ದೇವರೆನ್ನುವ ಒ೦ದು ಶಕ್ತಿಯೇ ಅತೀತವಾದದ್ದು! ಸಕಾರಾತ್ಮಕ ಧೋರಣೆಯನ್ನು ಇಟ್ಟುಕೊ೦ಡು, ಅನ್ಯಥಾ ಶರಣ೦ ನಾಸ್ತಿ ಎ೦ದು, ಬೇಡುತ್ತಾ, ನಮ್ರ ಪ್ರಾರ್ಥನೆಯನ್ನು ಗೈದು, ಪರ್ಜನ್ಯ ಹೋಮವನ್ನು ಮಾಡಿದರೆ ದಶ೦ಬರ್, ಜನವರಿ ಹಾಗೂ ಫೆಬ್ರವರಿ ತಿ೦ಗಳುಗಳಲ್ಲಿಯೂ ಮಳೆಯನ್ನು ಪಡೆಯಬಹುದೇನೋ?

<<ನನಗೆ ಅರ್ಥವಾಗದ್ದು ಏನೆ೦ದರೆ ನಿಜವಾಗಿಯೂ ಮಾಮೂಲಿಯಾಗಿ ಮಳೆ ಬರುವ ಹಾಗೆಯೇ ಬ೦ತೋ ಅಥವಾ ಹೋಮ ಮಾಡಿದ್ದಕ್ಕೆ ಮಾತ್ರವೇ ಮಳೆ ಬ೦ತೋ ಎ೦ಬುದು,ಹೋಮ ಮಾಡದೇ ಇದ್ದರೆ ಮಳೆ ಬರುತ್ತಿರಲಿಲ್ಲವೇ?ಪರ್ಜನ್ಯ ಜಪದ ಮಹಾ ಸ೦ಕಲ್ಪವನ್ನು ಮಾಡಿ,ಜಪವನ್ನು ಆರ೦ಭಿಸಿದ ನ೦ತರವೇ ಎಲ್ಲೋ ಇದ್ದ ಮೋಡಗಳು ಒ೦ದೆಡೆ ಕಲೆತವೇಕೆ ಅದಕ್ಕಿ೦ತ ಮೊದ ಲೇ ಆಗಬಹುದಿತ್ತಲ್ಲವೇ ಈ ಪ್ರಕ್ರಿಯೆ? ಹಾಗಾದರೆ ಅದೇ ದಿನ ಮಳೆ ಬರದೆ ಮಾರನೆಯ ದಿನದಿ೦ದ ಮಳೆ ಆರ೦ಭ ಗೊ೦ಡಿದ್ದು ಏಕೆ? ಜಪ ಆರ೦ಭಿಸಿದ ನ೦ತರವೇ ಸುರಿಯಬೇಕಿತ್ತಲ್ಲ? ಜಪದ ಶಕ್ತಿಯಿ೦ದ ಮಳೆ ಬ೦ದಿತು ಎ೦ದಾದರೆ ಇವತ್ತಿಗೂ ಬಿಡದೇ ಸುರಿಯುತ್ತಿರುವುದೇಕೆ?>> ರಾಘವೇಂದ್ರರ ಈ ತರಹದ ಪ್ರಶ್ನೆಗಳಿಗೆ ಉತ್ತರವಾಗಿ ನಾನದನ್ನು ಬರೆದೆ ಅಷ್ಟೇ. ನನ್ನ ನಂಬಿಕೆಯ ಬಗ್ಗೆ ನಾ ಬರೆದಿಲ್ಲ. ನನ್ನ ಅನಿಸಿಕೆಗಳೇನೂ ಅಲ್ಲಿಲ್ಲ.

<<ಇನ್ನೆ ರಡು ದಿನ ಇದೇ ತರಹ ಮಳೆ ಬ೦ದರೆ ಎರಡೂ ಗ್ರಾಮಗಳ ಸ೦ಪರ್ಕ ಕಡಿಯುವು ದ೦ತೂ ಹೌದು!>> ಮಳೆ ನಿಲ್ಲಿಸುವುದಕ್ಕೆ ಯಾವುದಾದರೂ ಜಪ ಹೋಮ ಇದೆಯಾ?ನಿಮ್ಮ ತಂತ್ರಿಗಳನ್ನು ಕೇಳಿನೋಡಿ! ಅವರಿಂದಲೇ ಮಾಡಿಸಿ ಮೇಲಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.

ಹೀಗೂ ಉಂಟೆ..! :) ಹಿಂದೊಮ್ಮೆ 'ಹೀಗೂ ಉಂಟೆ' ಕಾರ್ಯಕ್ರಮದಲ್ಲಿ ಯಾವುದೋ ಊರಿನ ಯೋಗಿಯೋಬ್ಬರು (ಯೋಗಿ ಅಂದ್ರೆ ಅವ್ರು ಕಾವಿ ಧರಿಸೋಲ್ಲ, ಓಟದ ರಾಣಿ ಪಿ.ಟಿ ಉಷಾ ಅವರಿಗೆ ಇವರು ಗುರು ಆಗಿದ್ದರಂತೆ. ಹಿಮ್ಮುಖವಾಗಿ ಸರಾಗವಾಗಿ ಓಡಬಲ್ಲರು ಇವರು) ಮಳೆಗಾಗಿ ಧ್ಯಾನಕ್ಕೆ ಕುಳಿತರೆ ವರ್ಷಧಾರೆಯಾಗುತ್ತದೆ ಅಂತ ತೋರಿಸಿದ್ದರು.ಅವರು ಊರು,ಹೆಸರು ನೆನಪಿಲ್ಲ. ಈ ಜಗತ್ತಿನಲ್ಲಿ ನಮ್ಮ ಊಹೆಗೆ,ವಿಜ್ಞಾನಕ್ಕೆ ನಿಲುಕದ್ದು ತುಂಬಾ ವಿಷಯಗಳಿವೆ

ಹೌದು ಶೆಟ್ಟರೆ, ನಮ್ಮ ಊಹೆಗೂ ನಿಲುಕದ ಎಷ್ಟೋ ಸ೦ಗತಿಗಳಿವೆ. ಪೈಗಳು ಹೇಳಿದಹಾಗೆ ನಾವು ಅದನ್ನು ಸರಿಯಾಗಿ ಅರ್ಥೈಸಿಕೊಳ್ಳದೆ, ಇಷ್ಟೇ ಅ೦ಥ ತೀರ್ಮಾನ ಮಾಡಿಬಿಡ್ತೀವಿ. ನಮಸ್ಕಾರಗಳು.

ಸತ್ಯನಾರಾಯಣರೇ, ನಿಮ್ಮ ವ್ಯ೦ಗ್ಯದ ಪ್ರತಿಕ್ರಿಯೆಯಲ್ಲಿಯೂ ಒಳ್ಳೆಯ ವಿಚಾರವಿದೆ. ನಮ್ಮ ತ೦ತ್ರಿಗಳನ್ನು ಕೇಳಿದ್ದಕ್ಕೆ ಅವರು ಹೇಳಿದ ಉತ್ತರ: “ ನನಗೆ ಗೊತ್ತಿದ್ದ ಹಾಗೆ ನಮ್ಮ ನಿಮ್ಮ ಪೂರ್ವಜರಿಗೆಲ್ಲಾ ಕೆಟ್ಟದ್ದು ಮಾಡುವುದು ಗೊತ್ತಿರಲಿಲ್ಲ. ಅವರೆಲ್ಲಾ ಸಕಾರಾತ್ಮಕವಾಗಿ ಚಿ೦ತಿಸುತ್ತಿದ್ದರು. ಮತ್ತೆ ಆವಾಗ ಈಗ ನಾವು ಹೊಡಕೊ೦ಡ೦ಗೆ ಹೊಡಕೊ೦ತಿರಲಿಲ್ಲ. ಅದಕ್ಕೇ ಅವರು ಮಳೆ ಬರೋದಿಕ್ಕೆ, ಮಕ್ಕಳು ಹುಟ್ಟೋದಿಕ್ಕೆ, ಮದುವೆಯಾಗೋದಿಕ್ಕೆ ಮು೦ತಾದಕ್ಕೆಲ್ಲ ಸರಿನೋ ತಪ್ಪೋ ಆ ಮೂಲಕವಾದರೂ ಆ ಸ೦ಕಟದಿ೦ದಲಾದರೂ ದೇವರನ್ನು ಪ್ರಾರ್ಥಿಸಲಿ ಅ೦ತ ಹೋಮ, ಹವನ ಮತ್ತು ಜಪ, ಶ್ಲೋಕ ಪಠಣೆ ಮು೦ತಾದ ಆಸ್ತಿಗಳನ್ನುಮು೦ದಿನ ಪೀಳೆಗೆಗೆ ಅ೦ತ ಬಿಟ್ಟುಹೋಗಿದ್ದಾ ರ೦ತೆ. ಅವರಿಗೆ ಮು೦ದೊ೦ದು ದಿನ ನಾವೆಲ್ಲಾ ಹೀಗೆ ಉಲ್ಟಾ ಮಾತಾಡ್ತೀವಿ, ದೇವರ ಅಸ್ತಿತ್ವವನ್ನೇ ಪ್ರಶ್ನೆ ಮಾಡ್ತೀವಿ ಅ೦ಥ ಗೊತ್ತಿದ್ದರೆ ಆಗ್ಲೇ ಮಕ್ಕಳು ಹುಟ್ಟದೇ ಇರಲಿಕ್ಕೊ೦ದು ಮ೦ತ್ರ ( ಆಪರೇಷನ್ನೇ ಬೇಡ) ಬರುತ್ತಿದ್ದ ಮಳೆ ನಿ೦ತು ಹೋಗೋಕ್ಕೊ೦ದು ಮ೦ತ್ರ, ಆಗ್ತಾ ಇರೋ ಮದುವೆ ನಿ೦ತು ಹೋಗೋಕ್ಕೆ ಒ೦ದು ಮ೦ತ್ರ ( ಎರಡೂ ಕಡೆ ಖರ್ಚು ಉಳಿತಾಯ, ಹಣ ವೇಸ್ಟಾಗೋದು ತಪ್ಪುತ್ತೆ) ಹೀಗೆ ಒ೦ದಕ್ಕೊ೦ದು ಉಲ್ಟಾ ನೂ ಬರೆದಿಡುತ್ತಿದ್ದರು“ ನಾನು ಏನೂ ಮಾತಾಡ್ಲೇ ಇಲ್ಲ!

<<ನಮ್ಮ ನಿಮ್ಮ ಪೂರ್ವಜರಿಗೆಲ್ಲಾ ಕೆಟ್ಟದ್ದು ಮಾಡುವುದು ಗೊತ್ತಿರಲಿಲ್ಲ.>> ಇದಕ್ಕೆ ನನ್ನ ಸಹಮತವಿದೆ. ಎರಡೂ ಹಳ್ಳಿಗಳ ನಡುವೆ ಸಂಪರ್ಕ ಕಡಿದು ಹೋಗುವಷ್ಟು ಪ್ರವಾಹ ಬಂದು ಆಗುವ ಻ನಾಹುತವನ್ನು ತಪ್ಪಿಸುವುದು ಕೆಟ್ಟದ್ದನ್ನು ಮಾಡಿದಂತೆ ಆಗುವುದಿಲ್ಲ ಎಂಬುದು ನನ್ನ ಅನಿಸಿಕೆ. ಇಲ್ಲಿ ವ್ಯಂಗ್ಯದ ಪ್ರೇಶ್ನೆಯೇ ಇಲ್ಲ. ನಿಮಗೆ ಹಾಗೆ ಅನ್ನಿಸಿದ್ದರೆ ಕ್ಷಮೆಯಿರಲಿ.

ನಿಮ್ಮ ಅನಿಸಿಕೆಯೂ ಸರಿ, ತ೦ತ್ರಿಗಳ ಅನಿಸಿಕೆಯೂ ಸರಿಯೇ, ಎಲ್ಲದೂ ನಮ್ಮ ಕೈಯಲ್ಲೇ ಇದ್ದಿದ್ದರೆ ಈ ಜಿಜ್ಞಾಸೆಯ ಅಗತ್ಯವೇ ಇರಲಿಲ್ಲ ಅಲ್ಲವೇ?

:):) ಹಾ ಹ ... ಸರ್ ಮಳೆ ಹೋಗಲಿ ಎಂದು ಗೊಣಗುವವರನ್ನು ನೋಡಿದ್ದೇನೆ. ಆದರೆ ಹೋಮ? :):). ಶೃದ್ಧೆ , ಭಕ್ತಿ ಮತ್ತು ವಿಶ್ವಾಸದಿಂದ ಮಾಡಿದ ಹಾಗೆ ಮಾಡಿದರೆ ನಿಲ್ಲಲು ಬಹುದೇನೋ?.

>>ಮಳೆ ನಿಲ್ಲಿಸುವುದಕ್ಕೆ ಯಾವುದಾದರೂ ಜಪ ಹೋಮ ಇದೆಯಾ?<< ಇದೆ ರಾಯರೆ, ಕುಂಟುಜನ್ಯ ಜಪಾ ಅಂತ. ಇದಕ್ಕೆ ಹೋಮ ಹವನ ಬೇಡವಂತೆ. ಹೋಮದ ಕುಂಡಕ್ಕೆ ಬರೀ ನೀರು ಹುಯ್ದರೆ ಸಾಕಂತೆ. ಮಳೆ ಹಂಗೇ ನಿಂತು ಹೋಗುತ್ತೆ ಅಂತಾರೆ.

ಬಿಆರೆಸ್, ಬಹುಶಃ ನಿಮ್ಮ೦ಥ ವಿದ್ಯಾವ೦ತರೂ ಸಹ ಇ೦ಥ ಬಾಲಿಶ ಪ್ರಶ್ನೆಗಳನ್ನು ಕೇಳುವ೦ಥಾಗಿದ್ದೇ ನಮ್ಮ ದೇಶದ ದೌರ್ಭಾಗ್ಯವೇನೋ ಅನ್ನಿಸುತ್ತಿದೆ ನನಗೆ!! :)

ಮಂಜು ಸರ್ ನೀವು ಎಂದಾದರೂ ಬೆಂಗಳೂರಿನ ಬಸವನಗುಡಿಯಲ್ಲಿರುವ ಬ್ಯಾಷನಲ್ ಹೈಸ್ಕೂಲಿಗೆ ಭೇಟಿ ಕೊಟ್ಟಿದ್ದೀರಾ? ಅಲ್ಲಿ ಹೆಚ್. ನರಸಿಂಹಯ್ಯನವರು ಕುಳಿತುಕೊಳ್ಳುತ್ತಿದ್ದ ಕೊಠಡಿಯಲ್ಲಿ ಹಾಗೂ ಆಡಿಟೋರಿಯಮ್ಮಿನಲ್ಲಿ ದೊಡ್ಡದಾಗಿ '?' ಚಿಹ್ನೆಯನ್ನು ಬರೆಸಿದ್ದಾರೆ. ಯಾರಾದರೂ ಅದರ ಕಡೆ ನೋಡಿದರೆ ಸಾಕು, ಹೆಚ್.ಎನ್. ಒಂದು ಮಾತು ಹೇಳುತ್ತಿದ್ದರು. ಪ್ರಶ್ನಿಸದೆ ಏನನ್ನೂ ಒಪ್ಪಿಕೊಳ್ಳಬೇಡ ಎಂದು. ಅದಕ್ಕೆ ನಾನು ಪ್ರಶ್ನೆ ಕೇಳಿದ್ದೇನೆ. ಅದು ಬಾಲಿಶ ಎಂದು ನಿಮಗನ್ನಿಸಿದರೆ ನಾನೇನು ಹೇಳಲಿ.

ನಮಗೆ ಗೊತ್ತಿಲ್ಲದಿರುವ, ಅಧ್ಯಯನ ಮಾಡದೆಯೆ ನಮಗೆ ತಿಳಿದಂತೆ ಅರ್ಥೈಸಿರುವ ಸಾಕಷ್ಟು ವಿಷಯಗಳಿವೆ ಎಂಬುದು ನನ್ನ ಅನಿಸಿಕೆ. ಈ ಕೆಳಗೆ ಮಹಾರಾಷ್ಟ್ರದ ಕೆಲವು ಹಳ್ಳಿಗಳಲ್ಲಿ ಮಾಡಿದ 'ಉಪ್ಪು ಸುಡುವ' ಪ್ರಯೋಗದ ಬಗ್ಗೆ ಪ್ರಜಾವಾಣಿಯಲ್ಲಿ ಬಂದ ಲೇಖನದ ಕೊಂಡಿ ಕೊಟ್ಟಿದ್ದೇನೆ. ಅಲ್ಲಿ ಬರೆದ್ದದ್ದನ್ನು ಗಮನಿಸಿದರೆ, ಇಂಥಹ ಯಾವುದೇ ಕಾರ್ಯ ಮಾಡಲು ವಾತಾವರಣ ಪೂರಕವಾಗಿರಬೇಕು..ವಾತಾವರಣದಲ್ಲಿ ಶೇ 50 ರಷ್ಟು ಆರ್ದ್ರತೆ ಇರಬೇಕಾದದ್ದು ಅನಿವಾರ್ಯ. ಬೇಸಿಗೆ ಕಾಲದಲ್ಲಿ ಮಟ-ಮಟ ಮಧ್ಯಾಹ್ನ ಮಳೆ ಬಿಳಿಸುವ ಮಾತಿಲ್ಲ ಇಲ್ಲಿ..ಹಾಗೆಯೇ ಮಳೆ ನಿಲ್ಲಿಸುವ ತಂತ್ರಗಳನ್ನು ಹೇಳಿಲ್ಲ! http://www.prajavani...

>>ಇಂಥಹ ಯಾವುದೇ ಕಾರ್ಯ ಮಾಡಲು ವಾತಾವರಣ ಪೂರಕವಾಗಿರಬೇಕು..ವಾತಾವರಣದಲ್ಲಿ ಶೇ 50 ರಷ್ಟು ಆರ್ದ್ರತೆ ಇರಬೇಕಾದದ್ದು ಅನಿವಾರ್ಯ.<< ಇದು ಸ್ವಲ್ಪ ಈಗಿನ ಯೋಚನೆಗೆ ಹತ್ತಿರವಾದುದು. ಪೈಗಳೇ. ಹೋಮವನ್ನು ಮಾಡುವ ಸಮಯದಲ್ಲಿ ಮಳೆ ಬೀಳಲು ಪೂರಕವಾದ ವಾತಾವರಣ ಇತ್ತೇನೋ, ಅದಕ್ಕೆ ಸರಿಯಾಗಿ ಈ ಹೋಮದ ಧೂಮವೂ ಸೇರಿಕೊ೦ಡು, ಮಳೆ ಬಿತ್ತು ಎನ್ನುವುದು ವಾಸ್ತವಕ್ಕೆ ಹತ್ತಿರ. ಧನ್ಯವಾದಗಳು.

ಪೈಗಳೇ,ನಿಮ್ಮ ಕೊ೦ಡಿಯಲ್ಲಿನ ಮಾಹಿತಿ ಸೊಗಸಾಗಿದೆ. ಅದಕ್ಕೂ ಈ ಪರ್ಜನ್ಯ ಹೋಮದ ರೀತಿಗೂ ಸ್ವಲ್ಪ ಸಾಮ್ಯವಿದೆ. ಆದರೆ ಹೋಮಕ್ಕೆ ಬಳಸುವ ಸಾಮಗ್ರಿಗಳಲ್ಲಿ ಸೋಡಿಯ೦ ಕ್ಲೋರೈಡ್ ಇರೋಲ್ಲ. ಮೋಡ ಬಿತ್ತನೆಗೂ ಇದನ್ನೇ ಬಳಸುತ್ತಾರೆಯೇ?

ನಾವುಡರೆ ಧನ್ಯವಾದಗಳು, ನಾವು ನಡೆಸುವ ಎಷ್ಟೋ ಆಚರಣೆಗಳಿಗೆ ಈ ನಿಮ್ಮ ಪ್ರಶ್ನೆಯು ಅನ್ವಯವಾಗುವಂತದ್ದಾಗಿದೆ. ಈ ಕುರಿತು ಚರ್ಚೆಯನ್ನು ಇನ್ನೂ ಉತ್ತಮವಾಗಿ ನಡೆಸಲು ಸಾಧ್ಯವಿದೆ. ಅದಕ್ಕೆ ಈ ಲೇಖನವನ್ನೊಮ್ಮೆ ಓದಿದರೆ ಉಪಯುಕ್ತವಾಗುತ್ತದೆ ಎಂಬ ಆಶಯ. ಇಂಗ್ಲೀಷಿನಲ್ಲಿದ್ದ ಈ ಲೇಖನವನ್ನು ಕನ್ನಡಕ್ಕೆ ನಮ್ಮ ಸಿ. ಎಸ್. ಎಲ್. ಸಿ ಸಂಶೋಧನಾ ತಂಡವು ಅನುವಾದಿಸಿರುತ್ತದೆ. ಲೇಖನದ ಹೆಸರು;- "ಫ್ರೇಜರನ ಗೋಲ್ಡನ್ ಬೊ: ಒಂದು ಟೀಕೆ" ಇದರ ಮೂಲ ಲೇಖಕರು: ಲುಡ್ವಿಗ್ ವಿಟ್ಗೆನ್ಸ್ಟೆಯ್ನ್-http://cslcku.wordpr... ಪ್ರೀತಿಯಿಂದ ಪ್ರವೀಣ್ ಸಿ ಎಸ್ ಎಲ್ ಸಿ

ಪ್ರವೀಣ್ ನಿಮ್ಮ ಕೊ೦ಡಿಯ ಲೇಖನವನ್ನು ಓದಿದೆ. ಅರ್ಥೈಸಿಕೊಳ್ಳುವುದು ಸ್ವಲ್ಪ ಕ್ಲಿಷ್ಟಕರ.ನಾನು ಅದನ್ನು ಹೀಗೆ ಅರ್ಥಸಿಕೊ೦ಡಿದ್ದೇನೆ: ನಿಮ್ಮ ಪ್ರಕಾರ ( ಲೇಖನದಲ್ಲಿ ನಾನು ಎ೦ಬ ಪದ ಬಳಕೆಯಿ೦ದ ) ನ೦ಬಿಕೆ ಮತ್ತು ಆಚರಣೆಗಳು ಒಟ್ಟಿಗೇ ಮನೆಮಾಡಿಕೊ೦ಡಿರುತ್ತವೆ ಎ೦ಬ ವಿಚಾರ ಸರಿ. ನಿಮ್ಮ ವಿಚಾರದ ಮೂಲಕ ಹೋಗುವುದಾದರೆ ಮಳೆ ಬರುತ್ತೆ ಎನ್ನುವ೦ಥಹ ನ೦ಬಿಕೆಯಿ೦ದಲೇ ಪರ್ಜನ್ಯ ಹೋಮದ ಆಚರಣೆಯೆ೦ದು ಅರ್ಥೈಸಿಕೊಳ್ಳಬಹುದಲ್ಲವೇ? ಎರಡೂ ಒಟ್ಟಿಗೇ ಸೇರಿದಾಗ ಒ೦ದು ನಿಗದಿತ ಪರಿಣಾಮ ಉ೦ಟಾಗಲೇ ಬೇಕಲ್ಲವೇ? ಹಾಗಾಗಿ ಮಳೆಗಾಲದಲ್ಲಿ ಮಳೆಬರದಿದ್ದಾಗ ಪರ್ಜನ್ಯ ಹೋಮ ಮಾಡಿದರೆ ಮಳೆ ಬರುತ್ತದೆ ಎ೦ಬ ಅರ್ಥ ಆಗುತ್ತದೆ. ಅಲ್ಲಿಗೆ ಇವೆಲ್ಲಾ ದೇವರ ಲೀಲೆಗಳೇ ಎ೦ದಲ್ಲವೇ ಅರ್ಥ? ಹಾಗೂ ಬೇಸಿಗೆ ಕಾಲದಲ್ಲಿ ಇವನ್ನು ಮಾಡಿದರೆ ಮಳೆ ಬರುವುದಿಲ್ಲ ಎ೦ಬ ನ೦ಬಿಕೆಯೇ ಅವರನ್ನು ಬೇಸಿಕೆ ಕಾಲದಲ್ಲಿ ಹೋಮ ಮಾಡದಿರುವುದರ ಹಿ೦ದೆಯೂ ಇದೆ ಎ೦ಬ ಅರ್ಥ ಬರುತ್ತದೆ. ಹಾಗೆಯೇ ದೇವರೂ ಎನ್ನುವುದೂ ಒ೦ದು ನ೦ಬಿಕೆಯೇ ಮತ್ತು ಆ ನ೦ಬಿಕೆಯ ಹಿನ್ನೆಲೆಯಲ್ಲಿಯೇ ನಮ್ಮ ಪೂಜೆ , ಪುನಸ್ಕಾರ ಹಾಗೂ ಹೋಮ,ಹವನಗಳೆ೦ಬ ಆಚರಣೆಗಳಲ್ಲವೇ? ಪರೋಕ್ಷವಾಗಿಯಾದರೂ ದೇವರ ಲೀಲೆ ಎ೦ದೇ ಅರ್ಥವಾಗುತ್ತದೆಯಲ್ಲವೇ? ನನ್ನ ಅರ್ಥೈಸುವಿಕೆ ತಪ್ಪಾಗಿರಬಹುದು. ನಿಮ್ಮ ಅನಿಸಿಕೆ? ನಮಸ್ಕಾರಗಳೊ೦ದಿಗೆ,

ಪ್ರೀತಿಯ ನಾವುಡರೆ, ನೀವು ಲೇಖನವನ್ನು ಸ್ವಲ್ಪ ತಪ್ಪಾಗಿ ಅರ್ಥಮಾಡಿಕೊಂಡಿದ್ದೀರೆನಿಸುತ್ತಿದೆ. ಅದಕ್ಕೆ ನೀವು ಕಾರಣರಲ್ಲ ಎಂಬುದನ್ನು ನಾನು ಒತ್ತಿಹೇಳಬಯಸುತ್ತೇನೆ. ಈ ಲೇಖನವು ವ್ಯವಸ್ಥಿತವಾಗಿ ಬರೆದುದಾಗಿರದೇ, ಗೋಲ್ಡನ್ ಬೌ ಪುಸ್ತಕವನ್ನು ಓದುವಾಗ ಮಾಡಿರುವ ವಿಮರ್ಶೆಯ ತುಣುಕುಗಳ ಸಂಗ್ರಹವಾಗಿದೆ. ಅಲ್ಲದೇ ಲೇಖನವು ನಮ್ಮೆಲ್ಲಾ ಪ್ರಶ್ನೆಗಳಿಗೂ ಉತ್ತರಕೊಡುತ್ತದೆ ಎಂಬುದನ್ನು ಪ್ರತಿಪಾದಿಸಲಾಗುವುದಿಲ್ಲ ಬದಲಾಗಿ ನಮ್ಮನ್ನು ಆಳವಾಗಿ ಆಲೋಚಿಸಲು ಹಚ್ಚುತ್ತದೆ. ಹಾಗಾಗಿ ಲೇಖನದ ಕೆಲವು ಭಾಗಗಳನ್ನಿಟ್ಟುಕೊಂಡು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವುದು ಉತ್ತಮ. <<ಒಟ್ಟಾರೆಯಾಗಿ ಈ ಆಚರಣೆಯ ಬಗ್ಗೆ ನಾವು ಇಷ್ಟು ಮಾತ್ರ ಹೇಳಬಹುದು: ಎಲ್ಲಿ ಒಂದು ಆಚರಣೆ ಮತ್ತು ನಂಬಿಕೆ ಒಟ್ಟಾಗಿ ಸಂಭವಿಸುತ್ತದೆಯೋ, ಅಲ್ಲಿ ಆ ಆಚರಣೆಯು ಆ ನಂಬಿಕೆಯಿಂದ ಹುಟ್ಟಿಕೊಂಡಿರುವುದಿಲ್ಲ. ಬದಲಾಗಿ, ಅವೆರೆಡೂ ಆ ಸಂದರ್ಭಕ್ಕೆ ಅಲ್ಲಿ ಒಟ್ಟಾಗಿ ಮೇಳೈಸಿರುತ್ತವೆ ಅಷ್ಟೆ.>>(ಲೇಖನದ ಭಾಗ) ಬೇರೆ ರೀತಿಯಲ್ಲಿ ಹೇಳುವುದಾದರೆ, ಇಲ್ಲಿ ಆಚರಣೆ ಹಾಗೂ ನಂಬಿಕೆ ಎರಡೂ ಒಟ್ಟಿಗೆ ಇವೆ ಎಂದಷ್ಟೆ ಹೇಳಬಹುದು. (ಇದನ್ನು ನೀವು ಸರಿಯಾಗೆ ಗ್ರಹಿಸಿದ್ದೀರಿ.) ಆದರೆ, ಆ ನಂಬಿಕೆಯಿಂದಲೇ ಆಚರಣೆ ಅಸ್ತಿತ್ವ್ವದಲ್ಲಿದೆಯೇ ಅಥವಾ ಆ ಆಚರಣೆಯಿಂದ ನಂಬಿಕೆ ಹುಟ್ಟಿದೆಯೇ ಎಂಬುದಾಗಿ ಹೇಳುವುದು ಸಾಧ್ಯವಿಲ್ಲ. (ಇದನ್ನು ತಪ್ಪಾಗಿ ಗ್ರಹಿಸದ್ದೀರಿ-ನಿಮ್ಮ ವಿಚಾರದ ಮೂಲಕ ಹೋಗುವುದಾದರೆ ಮಳೆ ಬರುತ್ತೆ ಎನ್ನುವ೦ಥಹ ನ೦ಬಿಕೆಯಿ೦ದಲೇ ಪರ್ಜನ್ಯ ಹೋಮದ ಆಚರಣೆಯೆ೦ದು ಅರ್ಥೈಸಿಕೊಳ್ಳಬಹುದಲ್ಲವೇ?) ನೀವು ಹೇಳಿದ ಈ ವ್ರತಾಚರಣೆ ಹಾಗೂ ಮಳೆಬರುತ್ತದೆ ಎಂಬ ನಂಬಿಕೆ ಈಗ ಒಟ್ಟಿಗೆ ಇವೆಯಷ್ಟೆ. ಹಾಗೆಂದು ಮಳೆಬರುತ್ತದೆ ಎಂಬ ನಂಬಿಕೆಯಿಂದಲೇ ಈ ಆಚರಣೆ ಹುಟ್ಟಿದೆ ಎಂದಾಗಲೀ, ಆಚರಣೆಯಿಂದಲೇ ಈ ನಂಬಿಕೆ ಹುಟ್ಟಿದೆ ಎಂದಾಗಲೀ ಹೇಳಲು ಸಾಧ್ಯವಿಲ್ಲ. ಲೇಖನದಲ್ಲಿನ ಉದಾಹರಣೆಯಲ್ಲಿ ಹೇಳುವಂತೆ, "ಮಳೆ ಬರಲಿ ಎಂದು ಮಾಡುವ ವ್ರತಾಚರಣೆಗಳು ಬಹಳ ಪ್ರಭಾವಕಾರಿ ಎಂದೆನಿಸುವುದು ಸಹಜ. ಏಕೆಂದರೆ, ಮಳೆಗೆ ಸಂಬಂಧಿಸಿದ ಈ ರೀತಿಯ ವ್ರತಾಚರಣೆ ಕೈಗೊಂಡ ತಕ್ಷಣದಲ್ಲೋ ಅಥವಾ ತಡವಾಗಿಯೊ, ಒಟ್ಟಿನಲ್ಲಿ ಒಂದಲ್ಲ ಒಂದು ದಿನ ನಿಸ್ಸಂಶಯವಾಗಿ ಮಳೆ ಬಂದೆಬರುತ್ತದೆಯಲ್ಲವೆ". ಲೇಖಕನ ಪ್ರಕಾರ "ಆಚರಣೆಗಳನ್ನು ನಾವು ವೈಜ್ಞಾನಿಕವಾಗಿ ಅರ್ಥಮಾಡಿಕೊಳ್ಳಲು ಹೊರಟಾಗ ಮಾತ್ರ ಸಮಸ್ಯೆಗಳು ಹುಟ್ಟುವುದು". ಅಂದರೆ ಇಂತಹ ಆಚರಣೆಗಳಿಗೆ ವೈಜ್ಞಾಜಿಕ ವಿವರಣೆಯನ್ನು ನೀಡಲು ಹೊರಟ ಸಂದರ್ಭದಲ್ಲಿ ಏನಾಗುತ್ತದೆಯೆಂದರೆ, ಈ ಆಚರಣೆ ಮತ್ತು ನಂಬಿಕೆಗಳ ನಡುವೆ ಸಂಬಂಧವನ್ನು ಕಲ್ಪಿಸುವ ಕೆಲಸವನ್ನು ಮಾಡುತ್ತವೆ. ಯಾವಾಗ ಅವುಗಳ(ಆಚರಣೆ ಮತ್ತು ನಂಬಿಕೆ) ನಡುವೆ ನಿರ್ದಿಷ್ಟ ಸಂಬಂಧ ಏರ್ಪಡುವುದಿಲ್ಲವೋ ಆಗ ಅವುಗಳನ್ನು "ಮೂಢ"ನಂಬಿಕೆಗಳೆಂದೂ, ಅವೈಜ್ಞಾನಿಕ, ಅವೈಚಾರಿಕವಾದವುಗಳೆಂದು ನಿರ್ಣಯಿಸಿ ಅಂತಹ ಆಚರಣೆಗಳ ನಾಶಕ್ಕೆ ಮುಂದಾಗುತ್ತಾರೆ. ಅಲ್ಲದೇ ಇಂತಹ ಆಚರಣೆಯಲ್ಲಿ ತೊಡಗಿರುವವರನ್ನು ಮೂಢರು, ದಡ್ಡರು, ಮೂರ್ಖರೂ ಎಂದೂ ತೀರ್ಮಾನಿಸಲಾಗುತ್ತದೆ. ಕೆಲವೊಮ್ಮೆ ಅಂತಹ ಸಂಧರ್ಭದಲ್ಲಿ ಸಂಘರ್ಷವೇರ್ಪಟ್ಟರೂ ಆಶ್ಚರ್ಯವೇನಿಲ್ಲ. ಪ್ರತಿಕ್ರಿಯೆ ದೊಡ್ಡದಾಗಿದ್ದರೆ ಕ್ಷಮಿಸಿ, ಹಾಗೆಯೇ ಸ್ಪಷ್ಟತೆ ಇಲ್ಲದಿದ್ದರೆ ಮತ್ತೊಮ್ಮೆ ಕೇಳಿ ಯಾಕೆಂದರೆ ಈ ವಿಚಾರಗಳ ಕುರಿತ ಆಲೋಚನೆಯ ಬಾಲ್ಯಾವಸ್ಥೆಯಲ್ಲಿದ್ದೇನೆ.

ಪ್ರವೀಣ್, ನನ್ನ ಅರ್ಥೈಸುವಿಕೆಯಲ್ಲಿ ತಪ್ಪಿರಬಹುದು. ಆದರೆ ಚರ್ಚಿಸುವುದರಲ್ಲಿ ತಪ್ಪಿಲ್ಲ ಅಲ್ಲವೇ? ಏಕೆ೦ದರೆ ಆ ಲೇಖನವೂ ಕ್ಲಿಷ್ಟಕರವೇ! ಸುಲಭದಲ್ಲಿ ಅರ್ಥವಾಗುವ೦ಥಹದ್ದಲ್ಲ! >>ಇದನ್ನು ತಪ್ಪಾಗಿ ಗ್ರಹಿಸದ್ದೀರಿ-ನಿಮ್ಮ ವಿಚಾರದ ಮೂಲಕ ಹೋಗುವುದಾದರೆ (ಇದನ್ನು ತಪ್ಪಾಗಿ ಗ್ರಹಿಸದ್ದೀರಿ-ನಿಮ್ಮ ವಿಚಾರದ ಮೂಲಕ ಹೋಗುವುದಾದರೆ ಮಳೆ ಬರುತ್ತೆ ಎನ್ನುವ೦ಥಹ ನ೦ಬಿಕೆಯಿ೦ದಲೇ ಪರ್ಜನ್ಯ ಹೋಮದ ಆಚರಣೆಯೆ೦ದು ಅರ್ಥೈಸಿಕೊಳ್ಳಬಹುದಲ್ಲವೇ?)<< ಮಳೆ ಬರದಿದ್ದಾಗ, ಮಳೆ ಬರಿಸುವುಧು ಹೇಗೆ ಎನ್ನುವ ಪ್ರಶ್ನೆ ಉಧ್ಬವವಾಗುತ್ತದೆ. ತನ್ಮೂಲಕ ಪೂರಕ ಕ್ರಮಗಳತ್ತ ಕಣ್ಣು ಹಾಯಿಸಿದಾಗ ವೈಜ್ಞಾನಿಕ ಕ್ರಮಗಳು ಹಾಗೂ ಪರ್ಜನ್ಯ ಹೋಮದ ಹಾಗೂ ಇತರೆ ಆಚರಣೆಗಳ ವಿವರ ಕ೦ಡುಬ೦ದು, ಹಿ೦ದೆ ಅದನ್ನು ಮಾಡಿರ ಬಹು ದಾದ ಉದ್ದೇಶಗಳು ಹಾಗೂ ಫಲಗಳ ಬಗ್ಗೆ ಚರ್ಚಿಸಿ, ಸೂಕ್ತವಾಗುವ ಆಚರಣೆಯನ್ನು ಮಾಡುತ್ತೇವೆ. ಪರ್ಜನ್ಯ ಹೋಮವನ್ನು ಮಾಡಿದರೆ ಮಳೆ ಬರುತ್ತದೆ ಎನ್ನುವ ಪೂರಕ ನ೦ಬಿಕೆಯಿ೦ದಲೇ ಅದನ್ನು ಮಾಡುವುದಲ್ಲವೇ? ನ೦ಬಿಕೆಯಿರದಿದ್ದಲ್ಲಿ ಅದನ್ನು ಮಾಡುವ ಗೊಡವೆ ಯೇಕೆ? ಆಗ ಮಳೆ ಬರುತ್ತೆ ಎನ್ನುವ೦ಥಹ ನ೦ಬಿಕೆಯಿ೦ದಲೇ ಪರ್ಜನ್ಯ ಹೋಮದ ಆಚರಣೆಯೆ೦ದು ಅರ್ಥೈಸಿಕೊಳ್ಳಬಹು ದಲ್ಲವೇ? ನ೦ಬಿಕೆ ಇದ್ದರಲ್ಲವೇ ಆಚರಣೆಗಳು? ನ೦ಬಿಕೆಯಿ೦ದ ಆಚರಣೆ, ತನ್ಮೂಲಕ ಅದರ ಫಲಿತಾ೦ಶದ ಮೇಲೆ ಪುನ: ನ೦ಬಿಕೆ ಬೆಳೆಯುವುದು ಅಥವಾ ಅಳಿಯುವುದು ಅ೦ದರೆ ಪರ್ಜನ್ಯ ಹೋಮ ಮಾಡಿದ ನ೦ತರ ಬರುವ ಮಳೆಯಿ೦ದ, ಮು೦ದೆ ಅದನ್ನು ಆಚರಿಸುವಾಗ ತಾನೇ ತಾನಾಗಿ ಆ ನ೦ಬಿಕೆ ಬ೦ದೇ ಬರುತ್ತದೆ! ಮಳೆ ಬರದಿದ್ದಲ್ಲಿ ಅದರ ನಕಾರಾತ್ಮಕ ಫಲಿತಾ೦ಶವನ್ನೂ ಲೆಕ್ಕಕ್ಕೆ ತೆಗೆದುಕೊ೦ಡು, ಆಚರಣೆ ಯಲ್ಲಿ ಏರುಪೇರಾಗಬಹುದು.ಮತ್ತೊ೦ದು ವಿಚಾರವೆ೦ದರೆ ಧಾರ್ಮಿಕ ಆಚರಣೆಗಳಲ್ಲಿ ಕೇವಲ ನ೦ಬಿಕೆ ಎನ್ನುವ೦ಥಹದು ಮಾತ್ರವೇ ಕೆಲಸ ಮಾಡುವ೦ಥಹದು. ಇದು ನಕಾರಾತ್ಮಕ ಫಲಿತಾ೦ಶವನ್ನು ಬೀರಿದರೂ ಆಚರಣೆಯ ಬಗ್ಗೆ ಜನರಲ್ಲಿನ ನ೦ಬಿಕೆ ಹಾಗೂ ಆಚರಿಸು ವವರ ಸ೦ಖ್ಯೆಯಲ್ಲಿ ಕಡಿಮೆಯಾಗುವುದಿಲ್ಲ, ಬದಲಾಗಿ ಹೆಚ್ಚುತ್ತಲೇ ಹೋಗುತ್ತದೆ.ಈವರ್ಷ ಮಳೆ ಬರಲಿಲ್ಲ ವೆ೦ದು ಪರ್ಜನ್ಯ ಹೋಮಮಾಡಿ ದಾಗಲೂ ಮಳೆ ಬರಲಿಲ್ಲವೆ೦ದಿಟ್ಟುಕೊಳ್ಳಿ. ಆದರೂ ಮು೦ದಿನ ವರ್ಷ ಮಳೆ ಬರದಿದ್ದಾಗಲೂ ಇದೇ ಕ್ರಮವನ್ನು ಅನುಸರಿಸುತ್ತಾರೆಯೇ ವಿನ: ಅವರಿಗೆ ಹಿ೦ದಿನ ವರ್ಷದ ನಕಾರಾತ್ಮಕ ಫಲಿತಾ೦ಶವು ಅವರ ನ೦ಬಿಕೆಯನ್ನು ಕು೦ದಿಸಲಾರದು. “ ಹೋದ ವರ್ಷ ಬರಲಿಲ್ಲ ಅ೦ದರೆ ಏನಾಯ್ತು ಮಾರಾಯ? ಈವರ್ಷವೂ ಮಾಡಿ ನೋಡುವ!“ ಎನ್ನುತ್ತಾರೆಯೇ ವಿನ:ಅದರಲ್ಲಿನ ನ೦ಬಿಕೆಯನ್ನೇನೂ ಕಡಿಮೆ ಮಾಡಿಕೊಳ್ಳುವುದಿಲ್ಲ! ಅಲ್ಲವೇ? >>ಲೇಖನದಲ್ಲಿನ ಉದಾಹರಣೆಯಲ್ಲಿ ಹೇಳುವಂತೆ, "ಮಳೆ ಬರಲಿ ಎಂದು ಮಾಡುವ ವ್ರತಾಚರಣೆಗಳು ಬಹಳ ಪ್ರಭಾವಕಾರಿ ಎಂದೆನಿಸುವುದು ಸಹಜ. ಏಕೆಂದರೆ, ಮಳೆಗೆ ಸಂಬಂಧಿಸಿದ ಈ ರೀತಿಯ ವ್ರತಾಚರಣೆ ಕೈಗೊಂಡ ತಕ್ಷಣದಲ್ಲೋ ಅಥವಾ ತಡವಾಗಿಯೊ, ಒಟ್ಟಿನಲ್ಲಿ ಒಂದಲ್ಲ ಒಂದು ದಿನ ನಿಸ್ಸಂಶಯವಾಗಿ ಮಳೆ ಬಂದೆಬರುತ್ತದೆಯಲ್ಲವೆ".<< ಆಗ ಆ ನ೦ಬಿಕೆ ಮತ್ತು ಆಚರಣೆಗಳತ್ತ ಜನರ ಒಲವು ಹೆಚ್ಚುತ್ತಾ ಹೋಗುತ್ತದೆಯಲ್ಲವೇ? >>ಲೇಖಕನ ಪ್ರಕಾರ "ಆಚರಣೆಗಳನ್ನು ನಾವು ವೈಜ್ಞಾನಿಕವಾಗಿ ಅರ್ಥಮಾಡಿಕೊಳ್ಳಲು ಹೊರಟಾಗ ಮಾತ್ರ ಸಮಸ್ಯೆಗಳು ಹುಟ್ಟುವುದು". ಅಂದರೆ ಇಂತಹ ಆಚರಣೆಗಳಿಗೆ ವೈಜ್ಞಾಜಿಕ ವಿವರಣೆಯನ್ನು ನೀಡಲು ಹೊರಟ ಸಂದರ್ಭದಲ್ಲಿ ಏನಾಗುತ್ತದೆಯೆಂದರೆ, ಈ ಆಚರಣೆ ಮತ್ತು ನಂಬಿಕೆಗಳ ನಡುವೆ ಸಂಬಂಧವನ್ನು ಕಲ್ಪಿಸುವ ಕೆಲಸವನ್ನು ಮಾಡುತ್ತವೆ. ಯಾವಾಗ ಅವುಗಳ(ಆಚರಣೆ ಮತ್ತು ನಂಬಿಕೆ) ನಡುವೆ ನಿರ್ದಿಷ್ಟ ಸಂಬಂಧ ಏರ್ಪಡುವುದಿಲ್ಲವೋ ಆಗ ಅವುಗಳನ್ನು "ಮೂಢ"ನಂಬಿಕೆಗಳೆಂದೂ, ಅವೈಜ್ಞಾನಿಕ, ಅವೈಚಾರಿಕವಾದವುಗಳೆಂದು ನಿರ್ಣಯಿಸಿ ಅಂತಹ ಆಚರಣೆಗಳ ನಾಶಕ್ಕೆ ಮುಂದಾಗುತ್ತಾರೆ. ಅಲ್ಲದೇ ಇಂತಹ ಆಚರಣೆಯಲ್ಲಿ ತೊಡಗಿರುವವರನ್ನು ಮೂಢರು, ದಡ್ಡರು, ಮೂರ್ಖರೂ ಎಂದೂ ತೀರ್ಮಾನಿಸಲಾಗುತ್ತದೆ. ಕೆಲವೊಮ್ಮೆ ಅಂತಹ ಸಂಧರ್ಭದಲ್ಲಿ ಸಂಘರ್ಷವೇರ್ಪಟ್ಟರೂ ಆಶ್ಚರ್ಯವೇನಿಲ್ಲ. << ಈ ಮಾತಿಗೆ ನನ್ನ ಸಹಮತವಿದೆ. ಸಾಮಾನ್ಯವಾಗಿ ನಮ್ಮ ಹಿ೦ದಿನ ಹಾಗೂ ಇ೦ದಿನ ಆಚರಣೆಗಳ ಹಿ೦ದೆ ಒ೦ದು ಬಲವಾದ ನ೦ಬಿಕೆ ಇದ್ದೇ ಇತ್ತು ಹಾಗೂ ಇರುತ್ತದೆ ಎನ್ನುವುದು ನನ್ನ ಅಭಿಪ್ರಾಯ. ಮೇಲೆ ಹೇಳಿದ೦ತೆ ನ೦ಬಿಕೆ ಮತ್ತು ಆಚರಣೆಗಳ ನಡುವೆ ನಿರ್ದಿಷ್ಟ ಸ೦ಬ೦ಧವಿದ್ದಾಗಲೇ ನ೦ಬಿಗೆ ಆಚರಣೆಯಾಗಿ ಕೆಲಸ ಮಾಡುತ್ತದೆ.ಸಮಾನ್ಯವಾಗಿ ನಮ್ಮ ಆಚರಣೆಗಳನ್ನು ವೈಜ್ಞಾನಿಕವಾಗಿ ಸಾಧಿಸ ಹೊರಟರೂ ಅದರಲ್ಲಿ ಯಶಸ್ವಿಯಾಗಲೂ ಬಹುದೇನೋ ಅಲ್ಲವೇ? ನಮಸ್ಕಾರಗಳೊ೦ದಿಗೆ,

ಯಾವುದೇ ಆಚರಣೆಗಳನ್ನು ನಮ್ಮ ಕಣ್ಣಿಗೆ ಕಂಡದ್ದೆ ಸತ್ಯ ಎಂಬಂತೆ ಸರಿ/ತಪ್ಪು, ಕಪ್ಪು/ಬಿಳುಪು ಎಂಬ ನಿರ್ಧಾರಕ್ಕೆ ಬರಲಾಗುವುದಿಲ್ಲ. ಪೂರ್ವಿಕರ ಆಚರಣೆಗಳಿಗೆ ಅವರ ಕಾಲದ ಅವಶ್ಯಕತೆ, ಇರಬಹುದಾದ ಕಾರಣ ಇವನ್ನು ಅಧ್ಯಯನ ಮಾಡಬೇಕಾಗುತ್ತದೆ. ಆಚರಣೆಗಳು ಕಾರಣವಿಲ್ಲದೇ ಹುಟ್ಟಿರುವುದಿಲ್ಲ. ಪೀಳಿಗೆಯಿಂದ ಪೀಳಿಗೆಗೆ ಇವುಗಳ ವರ್ಗಾವಣೆ ಆಗಬೇಕಾದಾಗ ಕೆಲವರು ಗೊತ್ತಿದ್ದೊ ಅಥವಾ ಅಜ್ಞಾನ, ಅಲಕ್ಷದಿಂದಲೋ ತಪ್ಪು ಕಲ್ಪನೆಗಳನ್ನು ವರ್ಗಾಯಿಸಿರುವ ಸಾಧ್ಯತೆಗಳು ಬಹಳಷ್ಟು ಇರುತ್ತವೆ. ಹೀಗೆಯೇ ಮುಂದುವರಿದು ಒಂದು ಅರ್ಥಗರ್ಭಿತವಾಗಿರಬಹುದಾದ ಆಚರಣೆ ಕೂಡ ಕಪ್ಪೆ ಮದುವೆ, ಕತ್ತೆ ಮೆರವಣಿಗೆಗಳ ಜೊತೆ ಸಮಾನ ಸ್ಥಾನ ಕೊಡಲ್ಪಟ್ಟು ಮೌಢ್ಯದ ಪಟ್ಟಕ್ಕೆ ಏರಿಸಲ್ಪಡುತ್ತದೆ..ಹಾಗೇಯೇ ಹಳೆಯ ಕಾಲದಲ್ಲಿ ಪರೀಸ್ಥಿತಿಗನುಗುಣವಾಗಿ ಮಾಡುತ್ತಿದ್ದ, ಆಗ ಅವಶ್ಯಕವಿದ್ದ ಕೆಲವು ಆಚರಣೆಗಳು ತಲೆ-ಬುಡ ಗೊತ್ತಿಲ್ಲದೇ ಇಂದಿಗೂ ಆಚರಿಸಲ್ಪಡುತ್ತಿವೆ. ಪರ್ಜನ್ಯ ಯಜ್ಞದ ವಿಷಯಕ್ಕೆ ಬಂದರೆ, ಯಜುರ್ವೇದ ಸಂಹಿತೆಯಲ್ಲಿ ಯಜ್ಞಕುಂಡ ನಿರ್ಧಿಷ್ಟವಾಗಿ ಹೀಗೇಯೇ ಇರಬೇಕೆಂಬ ಗಾತ್ರ ಸಹಿತ ವಿವರಣೆ, ಯಜ್ಞಕ್ಕೆ ಬಳಸಬೇಕಾದ ಸಾಮಗ್ರಿಗಳ ವಿವರಣೆ ಇದೆಯಂತೆ . ಇತ್ತೀಚಿಗೆ ಈ ಬಗ್ಗೆ ಹೆಚ್ಚಿನ ಸಂಶೋಧನೆಗೆ (ವೈಜ್ಞಾನಿಕವಾಗಿ ಅಂಕಿ-ಅಂಶಗಳೊಡನೆ ) ಪುಣೆ ಹತ್ತಿರದ ಒಬ್ಬರು ತೊಡಗಿಕೊಂಡಿದ್ದಾರೆ. ಹಾಗೆಯೇ ಉಪ್ಪು ದಹಿಸುವ ಪ್ರಯೋಗಗಳಲ್ಲಿ ಡಾ.ರಾಜ ಮರಾಠೆ ತೊಡಗಿಕೊಂಡಿದ್ದಾರೆ. ವಿಮಾನದ ಮೂಲಕ ಸಿಲ್ವರ್ ಆಯೋಡಾಯಿಡ್, ಡ್ರೈ ಐಸ್ ಗಳನ್ನು ಚಿಮುಕಿಸುವ..ಇಲ್ಲಿಯೇ ಸಿಲ್ವರ್ ಆಯೋಡಾಯಿಡ್ ಜನರೇಟರ್ ಗಳನ್ನು ಸ್ಥಾಪಿಸುವ ವೆಚ್ಚಗಳಿಗಿಂತ ಕಡಿಮೆ ವೆಚ್ಚದಲ್ಲಿ ಪರ್ಯಾಯ ಸಿಕ್ಕರೆ ಒಳ್ಳೆಯದಲ್ಲವೆ? ------------------- ಈ ಸಣ್ಣ ಕಥೆ ಓದಿ.. ಒಂದು ಹಳ್ಳಿಯ ಮನೆ. ಹೊಲ-ಗದ್ದೆ ಇದ್ದವರು. ಮನೆಯಲ್ಲಿ ಧವಸ-ಧಾನ್ಯಗಳ ಸಂಗ್ರಹ ಯಾವಾಗಲೂ ಇರುತ್ತಿತ್ತು. ಹೀಗಿರುವಾಗ ಒಮ್ಮೆ ಇಲಿಗಳ ಕಾಟ ವಿಪರೀತವಾಯಿತು. ಉಪಾಯ ಕಾಣದೇ ಆ ಮನೆಯವರು ಬೆಕ್ಕನ್ನೊಂದನ್ನು ತಂದು ಸಾಕಿದರು. ವರ್ಷದಲ್ಲಿ ಆಗಾಗ ಮನೆಯಲ್ಲಿ ಕೆಲವು ದೊಡ್ಡ ಪೂಜೆ, ಪುನಸ್ಕಾರಗಳಿರುತ್ತಿದ್ದವು. ಪೂಜೆಯ ಹೊತ್ತಿನಲ್ಲಿ ಈ ಬೆಕ್ಕು ಅಲ್ಲಿ-ಇಲ್ಲಿ ತಿರುಗಾಡಿ ತೊಂದರೆ ಕೊಡುತ್ತಿತ್ತು. ಇದನ್ನು ನೋಡಿದ ಮನೆಯ ಹಿರಿಯ ಪೂಜೆಗಿಂತಲೂ ಮೊದಲು ಬೆಕ್ಕನ್ನು ಹಿಡಿದು ಒಂದು ಬುಟ್ಟಿಯ ಕೆಳಗೆ ಮುಚ್ಚಿಡಲು ಸುರುಮಾಡಿದರು. ಪ್ರತಿ ಪೂಜೆಗೆ ಮೊದಲು ಈ ಕೆಲಸ ಮಾಡಿಯೇ ಉಳಿದ ಕೆಲಸ ಮಾಡುತ್ತಿದ್ದರು ಆ ಹಿರಿಯರು. ಮನೆಯ ಮಕ್ಕಳು ಇದನ್ನು ನೋಡುತ್ತಲೇ ಬೆಳೆದರು, ಏಕೆಂದು ಪ್ರಶ್ನೆ ಮಾಡಲ್ಲಿಲ್ಲ. ಹೀಗಿರಲು ಒಂದು ದಿನ ಆ ಹಿರಿಯರು ತೀರಿಕೊಂಡರು. ಕಾಲಾನಂತರ ಮನೆಯಲ್ಲಿ ಇಲಿ ಕಾಟವು ಕಡಿಮೆಯಾಯಿತು. ಬೆಕ್ಕನ್ನು ಸಾಕುವ ಪ್ರಮೇಯ ಆ ಮನೆಯವರಿಗೆ ಬರಲಿಲ್ಲ. ಪೂಜೆ-ಪುನಸ್ಕಾರಗಳನ್ನು ಎಂದಿನಂತೆ ಆಗಾಗ ಹಮ್ಮಿಕೊಳ್ಳಲಾಗುತ್ತಿತ್ತು. ಆ ಸಮಯದಲ್ಲೆಲ್ಲ ಪೂಜೆ ಸುರು ಮಾಡುವ ಮೊದಲು ನೆರೆಮನೆಯವರಿಂದಲೊ, ಬೇರೆಯವರಿಂದಲೊ ಬೆಕ್ಕನ್ನು ತಂದು ಬುಟ್ಟಿಯ ಕೆಳಗೆ ಮುಚ್ಚಿಡಲಾಗುತ್ತಿತ್ತು... ನಮ್ಮ ಕೆಲವು ಸಂಪ್ರದಾಯಗಳು ಇಂದು ಈ ಸ್ಥಿತಿಯಲ್ಲಿವೆ:)

ಪೈ ಗಳೇ ಮಾಹಿತಿಗಾಗಿ ಧನ್ಯವಾದಗಳು. ನೀವು ನೀಡಿದ ಸಣ್ಣ ಕಥೆ ಚೆನ್ನಾಗಿದೆ. ನಿಮ್ಮ ಅಭಿಪ್ರಾಯಕ್ಕೂ ನನ್ನ ಸಹಮತವಿದೆ.ಕಡಿಮೆ ಖರ್ಚಿನಲ್ಲಿ ಉತ್ತಮ ಫಲಿತಾ೦ಶವನ್ನು ಪಡೆಯುವುದಾದರೆ ಒಳ್ಳೆಯದೇ. ಉಪ್ಪು ದಹಿಸುವ ಕ್ರಿಯೆಯನ್ನು ಯಾರು ಬೇಕಾದರೂ ಮಾಡಬಹುದು. ತಲುವ ಖರ್ಚೂ ಸಹ ಹೆಚ್ಚಲ್ಲ. ರಾಜ ಮರಾಠೆಯವರ ಪ್ರಯೋಗಗಳಿಗೆ ಯಶ ಸಿಗಲೆ೦ಬ ನನ್ನ ಹಾರೈಕೆಯಿದೆ. ನಮಸ್ಕಾರಗಳೊ೦ದಿಗೆ,

ನನ್ನ ಅನಿಸಿಕೆಯೇನೆಂದರೆ, ಇಂಥಹ ವಿಷಯಗಳಲ್ಲಿ ನಂಬಿಕೆಯಷ್ಟೇ.. ಆ ಕಾರ್ಯದಲ್ಲಿ ಉಪಯೋಗಿಸಬೇಕಾದ ವಸ್ತುಗಳು, ಮಾಡಬೇಕಾದ ವಿಧಾನ ಮುಖ್ಯ. ಅವುಗಳ ದಹನದಿಂದ ವಾತಾವರಣದಲ್ಲಿ ಆಗಬಹುದಾದ ಬದಲಾವಣೆ ಮುಖ್ಯ. ----- ಹಿಂದಿನ ಪ್ರತಿಕ್ರಿಯೆಯಲ್ಲಿ ಡಾ.ರಾಜ ಮರಾಠೆವರ ಈ ಪ್ರಸೆಂಟೇಶನ್ನಿನ ಕೊಂಡಿ ಕೊಡುವುದು ಮರೆತುಹೋಗಿತ್ತು. http://live.kpoint.i...

ಪ್ರೀಯ ನಾವಡರೇ, ನಿಮ್ಮ ಲೇಖನ ಚಿಂತನೆಗೆ ಹಚ್ಚುವಂತಹದ್ದಾಗಿದೆ ಇತ್ತೀಚೆಗೆ "ವಿಜಯ ಕರ್ನಾಟಕ" ದಿನಪತ್ರಿಕೆಯಲ್ಲಿ ಶ್ರೀ. ರಾಧಾಕೃಷ್ಣ ಭಡ್ತಿ ಯವರ "ನೀರು ನೆರಳು" (ಪ್ರತಿ ಶುಕ್ರವಾರ) ಇತ್ತೀಚಿನ ಅಂಕಣಗಳು ವೇದಗಳ ಬಗ್ಗೆ ಅವುಗಳ ನೀರು ಹಾಗೂ ಮಳೆಗಳ ಕಾಳಜಿ ಬಗ್ಗೆ ಸವಿವರವಾಗಿ ಬರೆದಿದ್ದಾರೆ. ಹೋಮದಿಂದ ಹೇಗೆ ಮಳೆ ತರಿಸಬಹುದು (ಶಕ್ತಿಯಿದ್ದರೆ) ಮಂತ್ರಗಳ ತರಂಗಗಳು ಹೇಗೆ ಮೋಡಗಳಲ್ಲಿ ಸಂಚಲನ ಉಂಟು ಮಾಡಬಹುದು ಎಲ್ಲದರಬಗ್ಗೆ ಸಂಶೋಧನಾತ್ಮಕ ಬರಹಗಳನ್ನು ಬರೆದಿದ್ದಾರೆ.

ರಾಮಚಂದ್ರಪುರ ಮಠದಲ್ಲಿ ಮೊದಲನೆ ಬಾರಿಗೆ ರಾಮಾಯಣ ಮಹಾಸತ್ರ ನಡೆದಾಗ ಹೆಚ್ಚು ಪ್ರಚಾರವೂ ಅದಕ್ಕೆ ಸಿಕ್ಕಿತ್ತು. ನನ್ನ ತಂದೆ ತಾಯಿಯ ಒತ್ತಾಸೆಯಂತೆ ಅವರನೊಡನೆ ಆ ಸತ್ರದಲ್ಲಿ ಎರಡು ದಿನ ಭಾಗವಹಿಸಿದ್ದೆ. ಅಲ್ಲಿ ನಡೆಯುವ ಹೋಮದಿಂದ ವಾತಾವರಣದಲ್ಲಾಗುವ ಬದಲಾವಣೆಯನ್ನು ಗುರುತಿಸಲು ಇಸ್ರೋದ ಕೆಲವು ಉಪಕರಣಗಳನ್ನು ಅಳವಡಿಸಲಾಗಿತ್ತು. ನಾವು ಹೊಸನಗರ ತಲುಪುವ ಸಮಯಕ್ಕೆ ಸುತ್ತಮುತ್ತ ಪ್ರದೇಶಗಳಲ್ಲಿ ಭರ್ಜರಿ ಮಳೆ. ಕಾಕತಾಳೀಯವೇ ಗೊತ್ತಿಲ್ಲ. ಇದು ನಡೆದದ್ದು ಏಪ್ರಿಲ್ ೨೦ ೨೦೦೬. ಇಸ್ರೋದ ಇಂಜಿನಿಯರುಗಳೊಡನೆ ನಡೆದ ಚರ್ಚೆಯಲ್ಲಿ ಏನೂ ಬದಲಾವಣೆ ಗಮನಕ್ಕೆ ಬಂದಿಲ್ಲವೆನ್ನುವುದು ತಿಳಿಯಿತು ಮತ್ತು ಮಠದ ೫-೬ ಕಿಮೀ ದೂರದಲ್ಲಿ ಮಳೆ ಬಂದ ಬಗ್ಗೆಯೂ ಆತ ಆಶ್ಚರ್ಯ ವ್ಯಕ್ತಪಡಿಸಿದರು. ಪರ್ಜನ್ಯ ಜಪದಿಂದಲಾದರೂ, ಮೋಡ ಬಿತ್ತನೆಯಿಂದಾದರೂ ಸರಿ, ಮಳೆಯಂತೂ ಬರಲಿ. ಪ್ರಕೃತಿ ಹಸಿರುಟ್ಟು ನಲಿಯಲಿ. ಇಲ್ಲಿ ನನ್ನ ಅನುಭವವನ್ನಷ್ಟೆ ಬರೆದಿದ್ದೇನೆ. ಯಾವ ಪೂರ್ವಗ್ರಹವೂ ಇಲ್ಲ. ಏಕೆಂದರೆ ನನ್ನ ದೃಷ್ಟಿಯನ್ನು ಕೆಲವು ಮಾಹಾನ್ ದಿವ್ಯ ವಿಶಾಲದೃಷ್ಟಿಯುಳ್ಳ ಸಂಪದಿಗರು ದೃಷ್ಠಿಸಿ ನೋಡುತ್ತಿದ್ದಾರೆ. ;)

ಆತ್ಮೀಯ ಸ೦ಪದ ಗೆಳೆಯರೇ, ನನ್ನ ಈ ಲೇಖನಕ್ಕೆ ಪ್ರತಿಕ್ರಿಯಿಸಿ, ನಿಮ್ಮ ಭ೦ಡಾರದಿ೦ದ ಅಮೂಲ್ಯ ಮಾಹಿತಿಗಳನ್ನು ನನ್ನೊ೦ದಿಗೆ ಹ೦ಚಿಕೊ೦ಡು,ನನ್ನ ಲೇಖನದ ಮೌಲ್ಯವನ್ನು ಏರಿಸಿದುದ್ದಕ್ಕಾಗಿ ತಮ್ಮೆಲ್ಲರಿಗೂ ನಾನು ಆಭಾರಿಯಾಗಿದ್ದೇನೆ. ನಿಮ್ಮ ಪ್ರೋತ್ಸಾಹ ಎ೦ದಿಗೂ ಸದಾ ಹಿಗೆಯೇ ಇರಲೆ೦ದು ಆಶಿಸುವೆ. ಧನ್ಯವಾದಗಳು. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.

ರಾಘವೇಂದ್ರರೇ, ಇಂತಹ ವಿಷಯಗಳಿಗೆ ಪ್ರತಿಕ್ರಿಯಸುವಷ್ಟು ನಾನು ಪ್ರಬುದ್ಧನಲ್ಲ. ಬಂದಿರುವ ಪ್ರತಿಕ್ರಿಯೆಗಳು ಚೆನ್ನಾಗಿವೆ. ನಂಬಿಕೆಗಳು, ಒಮ್ಮನಸ್ಸಿನ ಬೇಡಿಕೆಗಳು ಫಲ ನೀಡುತ್ತವೇನೋ! ಮಾಲ್ಗುಡಿ ದಿನಗಳ ಕಥೆಯಲ್ಲಿ (ಆರ್. ಕೆ. ನಾರಾಯಣ್ ರವರ, ಆಂಗ್ಲಭಾಷೆಯ ಪುಸ್ತಕ) ಮಳೆಗಾಗಿ ಪ್ರಾರ್ಥಿಸುವ ಪ್ರಸಂಗ ನೆನಪಿಗೆ ಬಂತು!

ಇದೊಂದು ಸಕ್ಕತ್ ಕಿರಿಕ್ ವಿಷಯ ಸರ್... ಚೇಸ್ ಮಾಡಿ ಮಾಡಿ ಸಾಕಾಯ್ತು. http://sampada.net/a... http://sampada.net/a... ಯಾವುದು ದಿಟನೋ ಯಾವುದು ಬೊಗಳೇನೋ ಎಲ್ಲ ಅಯೋಮಯ! ಪರ್ಜ್‌ನ್ಯ ಹೋಮಾನ ಚಿತ್ರದುರುಗ, ಬಿಜಾಪುರ ರಾಯಚುರು ಕಡೆಯ ಬರಡುನೆಲದಲ್ಲಿ ಯಾಕೆ ಮಾಡಿಸಬಾರದು? ರಾಜಸ್ತಾನ ಕಚ್ಚಿನ ಕಡೆ ಯಾಕೆ ಮಾಡಿಸಬಾರದು? ಈವಾಗ ಮಾಡಿಸಿ ನೋಡಿದರೆ ಗೊತ್ತಾಗಬಹುದಲ್ವಾ? ನನ್ನ ಅನುಭವಕ್ಕೆ ಬಂದಂತೆ ಮನುಷ್ಯ ದೇವರ ಬಗ್ಗೆ ಹೆಚ್ಚು ತಿಳಿಯುತ್ತಾ ಹೋದಂತೆ ಹೆಚ್ಚು ನಾಸ್ತಿಕನಾಗುತ್ತಾ ಹೋಗುತ್ತಾನೆ. ಆದರೆ ದೇವರ ಬಗ್ಗೆ ನಂಬಿಕೆ ಕಳೆದುಕೊಳ್ಳುವುದಿಲ್ಲ. ವೈಚಾರಿಕತೆ ಮೂಡುತ್ತದೆ. ಇನ್ನೂ ಪೂಜೆಯ ಢಂಬಾಚಾರಗಳಲ್ಲಿ ಮುಳುಗಿರುವವರು ದೇವರ ಬಗ್ಗೆ ಆಳಕ್ಕೆ ತಿಳಿಯಲು ಮೊಗಸಿಲ್ಲ ಎಂದೇ ನನ್ನ ಅನಿಸಿಕೆ. ಬೆಳಗಾಗಿ ನಾನೆದ್ದು ಯಾರ್ಯಾರ ನೆನೆಯಲಿ.. ಎಳ್ಳು ಜಿರಿಗಿಎ ಬೆಳೆಯೋಂಟ ಭುಮಿತಾಯ್ಗೆ ಎದ್ದೊಂದರೆ ಗಳಿಗಿ ನೆನೆಯೋಣ! ಬೆಳಗಾಗೆದ್ದು ಒಮ್ಮೆ ದೇವರಿಗೆ ಕೈಮುಗಿದು ಕಸುಬಿನಲ್ಲಿ ತೊಡಗಿಕೊಳ್ಳುವುದು ಸಧ್ಯಕ್ಕೆ ನಾನು ಪಾಲಿಸುತ್ತಿರುವ ಪಾಲಿಸಿ. ಪ್ರಶ್ನಿಸಿ ಬೈಸಿಕೊಳ್ಳುವುದು ಎಂದಿನ ಮುಗಿಯದ ಹವ್ಯಾಸ!! ಹಿಂಗೆ ಬತ್ತವೆ ಪ್ರಶ್ನೆಗಳು, 1. ಟ್ರಸ್ಟಿಗಳು ಭಕ್ತರನ್ನು ಮುಂಡಾಯಿಸುತ್ತಿರುವುದು ಮಾದೇಶ್ವರನಿಗ ಗೊತ್ತಾಗುವುದಿಲ್ಲವೇ? ೨. ಗುಡಿಯ ಮುಂದೆ ಕೂತಿರುವ ಭಿಕ್ಷುಕರು ಚನ್ನಬಸವಣ್ಣನನ್ನು ನಂಬಿಲ್ಲವೇ ? ನಂಬಿದ್ದರೆ ಇನ್ನೂ ಉದ್ಧಾರ ಯಾಕೆ ಆಗಿಲ್ಲ? ೩. ಗಂಗೆಯಲ್ಲಿ ಮಿಂದರೆ ಪಾಪ ತೊಳೆದು ಹೋಗುವುದಾದರೆ ಕಾನೂನು ಯಾಕೆ ಬೇಕು? ೪. ದೇವರು ಹಿಮಾಲಯದಲ್ಲಿ ಮಾತ್ರ ಇರುವುದಾ? ನಮ್ಮ ಮನೆಯಲ್ಲಿ ಇಲ್ಲವಾ? ಇತ್ಯಾದಿ ಇತ್ಯಾದಿ.. ಕಡೆಗೆ ಷರೀಫ ಸಹೇಬರ ಪದ.. ಗುಡಿಯ ನೋಡಿರಣ್ಣಾ ದೇಹದ ಗುಡಿಯ ನೋಡಿರಣ್ಣಾ... ಆರು ಮೂರು ಕಟ್ಟಿ ಮೇಲಕೆ ಏರಿದವನೆ ಗಟ್ಟಿ! ಗಟ್ಟಿಯಾಗೋಣ ಅಷ್ಟೇ (ಸ್ವಘಟ್ಟಿಯಲ್ಲ ;) )

ಒಳ್ಳೆಯ ಪ್ರತಿಕ್ರಿಯೆ. ಹಾಗೆಯೇ ನಿಮ್ಮ ಪ್ರಶ್ನೆಗಳಿಗೆ ನನ್ನ ಉತ್ತರ (ಕೊನೆಗೆ ಉತ್ತರವೇ ಪ್ರಶ್ನೆಯಾಗುವುದು ನಿಜ :) : 1. ಟ್ರಸ್ಟಿಗಳು ಭಕ್ತರನ್ನು ಮುಂಡಾಯಿಸುತ್ತಿರುವುದು ಮಾದೇಶ್ವರನಿಗ ಗೊತ್ತಾಗುವುದಿಲ್ಲವೇ? << ಭಕ್ತರ ಮೂರ್ಖತನಕ್ಕೆ ಬೆಲೆತೆರಲೇ ಬೇಕು ಅಲ್ಲವೇ? >> ೨. ಗುಡಿಯ ಮುಂದೆ ಕೂತಿರುವ ಭಿಕ್ಷುಕರು ಚನ್ನಬಸವಣ್ಣನನ್ನು ನಂಬಿಲ್ಲವೇ ? ನಂಬಿದ್ದರೆ ಇನ್ನೂ ಉದ್ಧಾರ ಯಾಕೆ ಆಗಿಲ್ಲ? << ನಂಬಿರಲಿಕ್ಕಿಲ್ಲ. ನಂಬಿದ್ದರೂ ’ನನಗೆ ಇವತ್ತು ಅತಿ ಹೆಚ್ಚು ಭಿಕ್ಷೆ ಕೊಡಿಸಪ್ಪ’ ಎಂದು ಕೇಳಿರಬಹುದು :) >> ೩. ಗಂಗೆಯಲ್ಲಿ ಮಿಂದರೆ ಪಾಪ ತೊಳೆದು ಹೋಗುವುದಾದರೆ ಕಾನೂನು ಯಾಕೆ ಬೇಕು? << ಕಾನೂನು ಬೇಕು ಪಾಪಿಗಳನ್ನು ಹುಟ್ಟುಹಾಕಲು >> ೪. ದೇವರು ಹಿಮಾಲಯದಲ್ಲಿ ಮಾತ್ರ ಇರುವುದಾ? ನಮ್ಮ ಮನೆಯಲ್ಲಿ ಇಲ್ಲವಾ? << ದೇವರನ್ನು ’ಹುಡುಕುವವನಿಗೆ’ ಎಲ್ಲಿಯೂ ಸಿಗುವುದು ಡೌಟು. >>

ನಂಬಿದ್ರೆ ತಪ್ಪೇನು ಇಲ್ವಲ್ಲಾ, ನಂಬಿಕೆ ಹುಸಿಯಾಗದಿದ್ರೆ ಸಾಕು. ರೈತ ಸುಖಿಯಾದ್ರೆ ನಾವೆಲ್ಲಾ ಸುಖಿ ಅಲ್ವೇನರೀ ನಾವಡರೆ, -ಅಶ್ವಿನಿ