ಚಾಪೆ, ರಂಗೋಲೆಗಳ ನಡುವಣ ಅವಕಾಶವನ್ನು ಮೈದಾನವನ್ನಾಗಿಸಿಕೊಂಡವರು--ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆಃ ಭಾಗ ೩೨

To prevent automated spam submissions leave this field empty.

(೯೮)


     ಪ್ರಶ್ನಾಮೂರ್ತಿ ನಟಿಸಿದ, ಎಂದೂ ಸೆಟ್ಟೇರದ, ಪ್ರಶ್ನೆ ಮಾತ್ರ ಮರವೇರಿದ "ಗಾಜಿನ್ಮನೇಲಿ ಟೋಪಿ" ಕಥೆ ಶಾಂತಿನಿಕೇತನದ ಕಲಾಭವನದಲ್ಲಿಯೇ ಜಗತ್ಪ್ರಸಿದ್ಧವಾಗಿತ್ತು, ನಾನಲ್ಲಿ ಇನ್ನೂ ತರಗತಿಯನ್ನು ಸೇರುವ ಮುನ್ನವೇ. ಆದರೆ ಅದರ ಕಾರಣಕರ್ತರು ಯಾರೆಂಬುದು ಇನ್ನೂ ಪ್ರಸಿದ್ಧವಾಗದ್ದರಿಂದ ನನಗಲ್ಲಿ ಸೀಟು ಸಿಕ್ಕಿತೆಂದೇ ನಾನಂದುಕೊಂಡಿದ್ದೆ. ಆದರೆ ಕಲಾಭವನದಲ್ಲಿಯೇ raggingನ ಕಥೆ ನೋಡಿದ ಮೇಲೆ ನಾವೆಲ್ಲ ಎಂಥಹ ಬಚ್ಚಾಗಳು ಎಂದು ತಿಳಿಯಿತು. ಅಲ್ಲಿ ಮ್ಯೂರಲ್ ವಿಭಾಗದ ಉಪನ್ಯಾಸಕರಾಗಿದ್ದ ನಂದುದ (ನಂದುಲಾಲ್ ಮುಖರ್ಜಿ) ಹಾಸ್ಟೆಲಿನ ವಾರ್ಡನ್ ಸಹ ಆಗಿದ್ದರು.


 


     ಒಂದು ಇತಿಮಿತಿ ಮೀರದಂತೆ ರೇಗಿಂಗ್ ಅನ್ನು ವೀಕ್ಷಿಸುತ್ತ ಕುಳಿತುಬಿಡುತ್ತಿದ್ದರು. ಹೊಸದಾಗಿ ಸೇರಿದ ಹುಡುಗರನ್ನು ಹಿರಿಯರು ಒಂದು ನಿರ್ದಿಷ್ಟ ದಿನಾಂಕದ ತನಕ ಗೋಳಲ್ಲಿ ಗೋಳು ಹುಯ್ದುಕೊಳ್ಳುತ್ತಿದ್ದರು. ಎತ್ತರದ, ದುಂಡನೆಯ ಮರದ ಮೇಲಕ್ಕೆ ಕೋಲೊಂದನ್ನು ಎಸೆದು "ಅದನ್ನು ತೆಗೆದುಕೊಂಡು ಬಾ" ಎಂದು ಒಬ್ಬನನ್ನು ಓಡಿಸುತ್ತಿದ್ದರು, "ನನಗೆ ಮರ ಹತ್ತಲು ಬರುವುದಿಲ್ಲ" ಎಂದು ಆತ ಬೇಡಿಕೊಂಡರೂ ಬಿಡದೆ. ಆತನ ಕೈಲಿ ಅಥವ ಕಾಲಿನಲ್ಲಿ ಅಥವ ಕೈಕಾಲುಗಳಲ್ಲಿ ಮರ ಹತ್ತಲು ಆಗದಿದ್ದಲ್ಲಿ ತುಂಬ ಸಣ್ಣದಾದ (HB)ಪೆನ್ಸಿಲ್ ಅನ್ನು ಆತನ ಕೈಗಿತ್ತು ಇನ್ನೂರು ಅಡಿ ಇದ್ದ ಹುಡುಗಿಯರ ಹಾಸ್ಟೆಲ್ಲಿನ ಕಾಂಪೌಂಡಿನಾದ್ಯಂತ, ಮನುಷ್ಯನನ್ನು ಹೊರತುಪಡಿಸಿದ ಪ್ರಾಣಿಯ ’ಭಾವಚಿತ್ರ’ರಚಿಸುವಂತೆ ಪೀಡಿಸುತ್ತಿದ್ದರು! ಇಡೀ ಒಂದು ದಿನ ಕಾಲಾವಕಾಶವನ್ನು ನೀಡುತ್ತಿದ್ದರು. ಊಟದ ಮೆಸ್ಸಿನಿಂದ ಊಟದ ತಟ್ಟೆ ತುಂಬ ಊಟವನ್ನೂ ಆತನಿಗೆ ತಂದು ನೀಡುತ್ತಿದ್ದರು! 


  ಮತ್ತೂ ವಿಶೇಷವೆಂದರೆ ಒಬ್ಬ ಹುಡುಗನಿಗೆ ಸೀನಿಯರ್‍ ಒಬ್ಬ ಏನನ್ನೋ ಹೇಳಿಕೊಟ್ಟು, ಪ್ರಿನ್ಸಿಪಾಲರ ಬಳಿ ಆತನೇ ಕಳುಹಿಸಿದ್ದಃ


"ಕೀ ಹೋಲೋ?" (ಏನ್ಸಮಾಚಾರ?) ಪ್ರಿನ್ಸಿಪಾಲರು ಕೇಳಿದ್ದರು.


"ತುಮಿ ಬೊಕ ಸಾರ್" (ನಾಲಾಯಕ್ ನೀನು) ಎಂದ ಬೆಂಗಾಲಿ ಒಂಚೂರೂ ಬರದ ಬಡ ಮೊದಲ ವರ್ಷದ ವಿದ್ಯಾರ್ಥಿ.


ಸಿಟ್ಟಿಗೆದ್ದರು ಪ್ರಾಂಶುಪಾಲರು...


(೯೯)


     ಕಲಾಭವನದ ಡ್ರಾಯಿಂಗ್ ರೂಮಿನಲ್ಲೊಂದು ಪುರಾತನವಾದ, ಓಬಿರಾಯನ ಕಾಲದ, ದೂರದರ್ಶನವನ್ನು ಅನ್ವೇಷಿಸುವ ನಾಲ್ಕಾರು ಶತಮಾನದ ಮುಂಚೆಯೇ ತಯಾರಿಸಲಾಗಿದ್ದಂತಹ ಒಂದು ದೂರದರ್ಶನ. ಅದರಲ್ಲಿ ಬರುತ್ತಿದ್ದುದು ಡಿಡಿ ಮಾತ್ರ! ಒಮ್ಮೆ ಕನ್ನಡದ ಚಿತ್ರಹಾರ್ ಕಾರ್ಯಕ್ರಮದಲ್ಲಿ ಪುಟ್ಟಣ್ಣ ಕಣಗಾಲರ "ಗೆಜ್ಜೆಪೂಜೆ" ಸಿನೆಮದ ಎಸ್. ಜಾನಕಿಯವರ ’ಗಗನವು ಎಲ್ಲೋ...’ ಹಾಡಿನಲ್ಲಿ ಮರಗಳ ಮರೆಯಲ್ಲಿ ಕ್ಯಾಮರ ಚಲಿಸುತ್ತ, ಮರಗಳ ಅತ್ತಲಿರುವ ನಾಯಕ ನಾಯಕಿಯರ ನಡಿಗೆಯನ್ನು ದೃಶ್ಯೀಕರಿಸಿದ ರೀತಿ ಹಾಗೂ ಒಂದೆಡೆ ರಾಗವು ಎತ್ತರದ ’ಪಿಚ್’ಗೆ ಹೋದ ರೀತಿ ಕಂಡು ಅಲ್ಲಿದ್ದ ಅಸ್ಸಾಂ, ಮೇಘಾಲಯ ಮುಂತಾದ ಕಡೆಯಿಂದ ಬಂದಿದ್ದ ಹುಡುಗರೆಲ್ಲ ದಂಗಾಗಿಹೋದರು. "ವಾಹ್ ವಾಹ್" ಎಂಬುದನ್ನು ಸಿನೆಮಗಳಲ್ಲಿ ಕೃತಕವಾಗಿ ಚಿತ್ರೀಕರಿಸಿರುವುದನ್ನಷ್ಟೇ ಕಂಡಿದ್ದ ನನಗೆ ಭಾಷೆ, ಸಂಸ್ಕೃತಿಗಳ್ಯಾವುದೂ ತಿಳಿಯದ ದೃಶ್ಯೀಕರಣಕ್ಕೇ ಅವರುಗಳು ’ವಾವ್’ ಎಂದದ್ದು ಕಂಡು ಬೆಚ್ಚಿಬಿದ್ದೆ. "ನಮ್ಮ ಭಾಷೆ ಇದು" ಎಂದು ಉಬ್ಬಿಹೋಗಿ ಕನ್ನಡದ ಹುಡುಗರೆಲ್ಲ ಅವರಿಗೆ ಪುಟ್ಟಣ್ಣನ ದೊಡ್ಡನವತಾರವನ್ನು ವಿವರಿಸುವಷ್ಟರಲ್ಲೇ ಸೀನಿಯರ‍್ಗಳೆಲ್ಲ ದಢಾರನೆ ಬಾಗಿಲು ’ಮುರಿದು’ ಒಳಬಂದಂತೆ, ಬಾಗಿಲು ದೂಡಿಕೊಂಡು ಒಳಬಂದರು!


     ಒಳಗಿದ್ದ ಹೊಸಬರನ್ನೆಲ್ಲ ಒಂದೆಡೆ ಬರೀ ಒಳ‍ಉಡುಪಿನಲ್ಲಿರುವಂತೆ ಮಾಡಿದರು. ಎಲ್ಲರನ್ನೂ ಪೋಲೀಸ್ ಸ್ಟೇಷನ್ನಿನಲ್ಲಿ ಪಿಕ್‍ಪಾಕೆಟ್ ಮಾಡಿ, ಸಿಕ್ಕಿಹಾಕಿಕೊಂಡವರನ್ನು ಒಟ್ಟುಗೂಡಿಸಿದಂತೆ ಮಾಡಿದರು. ಎಲ್ಲ ಹೊಸ ಹುಡುಗರನ್ನು ಸೀನಿಯರ‍್ಗಳು--ಕುರಿಮಂದೆಯನ್ನು ಮೇಯಿಸುವಂತೆ--ಹೊರಕ್ಕೆಳೆದರು, ಕತ್ತಲಾಗಿದ್ದ ಕಲಾಭವನದಲ್ಲಿ ರಾತ್ರಿ ಹನ್ನೊಂದರ ಸುಮಾರಿನಲ್ಲಿ. ಕ್ಯಾಂಟೀನಿನ ಮರವೊಂದರ ಬಳಿ ಓಡಿಸಿಕೊಂಡು ಹೋದರು. ಹೊಸಬರೆಲ್ಲ ನಡುಗುತ್ತಲೇ ಓಡಿದರು ಆ ನಿರ್ದಿಷ್ಟ ಮರವೊಂದರ ಬಳಿಗೆ. ಅವರೆಲ್ಲ ಚಳಿಯಿಂದ ನಡುಗುತ್ತಿದ್ದಾರೋ ಅಥವ ಭಯದಿಂದಲೋ ಎಂಬುದನ್ನು ಬಿಡಿಸಿ ಅರ್ಥಮಾಡಿಕೊಳ್ಳಲಾಗದಂತೆ, ಅವೆರೆಡೂ ಕಾರಣಗಳು ಹಿತಮಿತವಾಗಿ ಬೆರೆತುಹೋಗಿದ್ದವು.


     ’ಆ ನಿರ್ದಿಷ್ಟ’ ಮರದ ಬಳಿ ಬಂದಾಗ, ಕತ್ತಲಿನಿಂದ ಕಾರ್ಗತ್ತಲಿಗೆ ಬಂದಂತಾಯ್ತು. ಕೆಲವು ಸೀನಿಯರ‍್ಗಳು ಒಂದೆರೆಡು ಟಾರ್ಚಿನ ಬೆಳಕನ್ನು ಜಿಪುಣಶೆಟ್ಟರಂತೆ ಹರಿಸಲೋ ಬೇಡವೋ ಎಂಬಂತೆ ನೇಣಿಗೆ ತೂಗಾಡುತ್ತಿದ್ದ ಶವದ ಮೇಲೆ ಹರಿಸಿ ಆರಿಸಿಬಿಟ್ಟರು. ಅಷ್ಟೇ. ಜ್ಯೂನಿಯರ‍್ಗಳನ್ನೆಲ್ಲ ಮತ್ತೆ ಡ್ರಾಯಿಂಗ್ ಕೋಣೆಗೆ ಕರೆತರಲಾಯಿತು, ಕೂಡಿಹಾಕಲಾಯಿತು.


ಸೀನಿಯರ್ ಒಬ್ಬ ಅವರೆಲ್ಲರಿಗೂ ಬಹಳ ’ನಿಯರ್’ ಬಂದು ಕೂಗಾಡತೊಡಗಿದಃ


     "ನಿಮ್ಮಲ್ಲಿ ಯಾರೋ ಒಬ್ಬರು ಪ್ರಾಂಶುಪಾಲರ ಬಳಿ ಹೋಗಿ ಸೀನಿಯರ್ ಒಬ್ಬನ ಮೇಲೆ ಆರೋಪ ಹೊರಿಸಿದ್ದೀರ, ಆತ ragging  ಮಾಡಿದನೆಂದು. ಆತ ಈಗ ಕಲಾಭವನದ ಆವರಣದಲ್ಲೇ ಮರವೊಂದಕ್ಕೆ ನೇಣು ಹಾಕಿಕೊಂಡಿದ್ದಾನೆ. ಯಾರು ಆರೋಪ ಹೊರಿಸಿದರೋ ಅವರು ಮುಂದೆ ಬನ್ನಿ. ಉಳಿದವರನ್ನು ಅರ್ಧರ್ಧ ಸೀಳುವುದನ್ನು ಉಳಿಸಿ. ಐದು ನಿಮಿಷ ಕಾಲಾವಕಾಶ ನೀಡುತ್ತೇವೆ. ನಿಮ್ಮಲ್ಲೇ ಗುರ್ತಿಸಿ ಇಲ್ಲ ತಪ್ಪಿತಸ್ಥ ಮುಂದೆ ಬರಲಿ. ಉಳಿದವರೆಲ್ಲರೂ ಸೇಫ್. ಇಲ್ಲದಿದ್ದಲ್ಲಿ ಎಲ್ಲರಿಗೂ ಒಂದೇ ಮಿಲಿಟರಿ ಶಿಕ್ಷೆ. ನೆನಪಿರಲಿ, ಐದೇ ನಿಮಿಷ" ಎಂದು ಹೊಸವಿದ್ಯಾರ್ಥಿಗಳನ್ನೆಲ್ಲ ಒಳಗೆ ಕೂಡಿಹಾಕಿ, ಸೀನಿಯರ‍್ಗಳನ್ನೆಲ್ಲ ಹೊರಡಿಸಿಕೊಂಡು ಹೊರಬಂದು, ಹೊರಗಿನಿಂದ ಚಿಲಕ ಹಾಕಿಬಿಟ್ಟ!


     ಹೊರಗಿನಿಂದ ಡ್ರಾಯಿಂಗ್ ರೂಮಿಗೆ ಇದ್ದ ಸುಮಾರು ಅರ್ಧ ಡಜನ್ ಕಿಟಕಿಗಳನ್ನು ಕೆಲವೇ ಸೆಂಟಿಮೀಟರ್ ತೆರೆದು, ಎಲ್ಲ ಹಿರಿಯ ವಿದ್ಯಾರ್ಥಿಗಲು ಮಜಾ ತೆಗೆದುಕೊಳ್ಳತೊಡಗಿದರು. ಒಳಗೆ ಎಲ್ಲರೂ ಗಡಗಡ ನಡುಗುತ್ತಿದ್ದಾರೆ, ಚಳಿಗೆ ಮತ್ತು ಭಯಕ್ಕೆ! ಒಬ್ಬರ ಮುಖ ಒಬ್ಬರು ನೋಡುತ್ತಿದ್ದರೆ. ಹೊಸದಾಗಿ ದೇಶದ ಬೇರೆ ಬೇರೆ ಪ್ರಾಂತ್ಯಗಳಿಂದ ಬಂದುದರಿಂದ, ಪರಸ್ಪರ ಸರಿಯಾದ ಪರಿಚಯವೂ ಇಲ್ಲ! ಸ್ವಲ್ಪ ಗೆಳೆಯರಾದವರೆಲ್ಲ, ತಮ್ಮಗಳನ್ನು ಹೊರತು ಪಡಿಸಿ ಬೇರೆಯವರನ್ನು ಅನುಮಾನದಿಂದ ನೊಡುತ್ತಿದ್ದಾರೆ. ಕೆಲವು ಚಾಣಾಕ್ಷರು ಒಟ್ಟಾಗಿ ಸೇರಿ ಯಾರೋ ಒಬ್ಬ ಪ್ಯಾದೆ ಲುಕ್ ಇದ್ದವನನ್ನು (ನಮ್ಮ ಪ್ರಶ್ನಾಮೂರ್ತಿಯಂತಹವನನ್ನು) ಗುರಿಮಾಡಿಬಿಟ್ಟರೆ ಹೇಗೆ ಎಂದೂ ಮಾತನಾಡಿಕೊಳ್ಳುತ್ತಿದ್ದಾರೆ. ಬೆಳಿಗ್ಗೆ ಪ್ರಾಂಶುಪಾಲರ ಬಳಿ ಹೊಸ ವಿದ್ಯಾರ್ಥಿಯೊಬ್ಬನನ್ನು ಸೀನಿಯರ್ ಒಬ್ಬ ಕಳಿಸಿದ್ದಿದ್ದು (’ನಾಲಾಯಕ್ ನೀನು’ ಎಂದು ಹೇಳಲು) ಮೂವರಿಗೆ ಮಾತ್ರ ತಿಳಿದಿತ್ತುಃ ಅವರು ಮೂವರಿಗೆ ಮಾತ್ರ! ಆದರೆ ಆ ವಿದ್ಯಾರ್ಥಿ ಪ್ರಾಂಶುಪಾಲರನ್ನು ಭೇಟಿ ಮಾಡಿದನೋ, ಹೇಳಿಕೊಟ್ಟದ್ದನ್ನು ಹೇಳಿದನೋ ಇಲ್ಲವೋ ಎಂಬುದು ಮಾತ್ರ ಆ ಹಿರಿಯ ವಿದ್ಯಾರ್ಥಿಗೆ ಗೊತ್ತಿರಲಿಲ್ಲ. ಒಂದು ಅಂದಾಜಿನ ಮೇಲೆ, ಅವನನ್ನೇ ಗಮನದಲ್ಲಿಟ್ಟುಕೊಂಡು ಹಿರಿಯ ವಿದ್ಯಾರ್ಥಿ ನೇಣಿಗೇರಿದ್ದ ಕೃತಕವಾಗಿ!


     ಕೊನೆಗೂ ಒಬ್ಬ ವಿದ್ಯಾರ್ಥಿಯನ್ನು--ಪ್ರಶ್ನಾಮೂರ್ತಿಯಂತಹವನನ್ನು--ಇತರೆ ವಿದ್ಯಾರ್ಥಿಗಳು ಒಪ್ಪಿಸಿಬಿಟ್ಟರು. ಅಥವ ಇತರ ಹೊಸಬರ ಗೋಳು ನೋಡಲಾರದೆ ಆ ಪುಣ್ಯಕೋಟಿಯೇ ಒಪ್ಪಿಬಿಟ್ಟಿತ್ತು, ತಾನು ಬಕ್ರಾ ಆಗಿಬಿಡಲು. "ನಾನೇ ಪ್ರಾಂಶುಪಾಲರಿಗೆ ಅವನ ಮೇಲೆ ಆರೋಪ ಹೊರಿಸಿದ್ದು, ragging ಮಾಡುತ್ತಿದ್ದಾನೆ ಎಂದು" ಎಂದುಬಿಟ್ಟ!


(೧೦೦)


     ಮಾರನೆಯ ದಿನ ಆತನ ಕುತ್ತಿಗೆಪಟ್ಟಿ ಹಿಡಿದುಕೊಂಡೇ ಸೀನಿಯರ‍್ಗಳು ಪ್ರಾಂಶುಪಾಲರ ಬಳಿ ಆತನನ್ನು ದರದರನೆ ಎಳೆದುಕೊಂಡೇ ಬಂದರು. ಕುತ್ತಿಗೆಪಟ್ಟಿ ಎಳೆಯುವ ಒಂದು ನಿಮಿಷದ ಮುನ್ನವಷ್ಟೇ ಆತನಿಗೆ ಶರ್ಟು ತೊಡಿಸಿದ್ದರು, ರಾತ್ರಿಯೆಲ್ಲ ಆತನನ್ನು ಕೊರೆವ ಚಳಿಯಲ್ಲಿ ಕೇವಲ, ಹೆಚ್ಚೂಕಡಿಮೆ, ಬೆತ್ತಲೆ ಇರಿಸಿದ ನಂತರ! ಕಲಾಭವನದ ಬೆಂಗಾಲಿ ಹುಡುಗರು (ಮತ್ತು ಹುಡುಗಿಯರು--ಈ ವಿಷಯವೊಂದರಲ್ಲೇ ಎರಡೂ ಲಿಂಗಗಳು ಒಂದೇ ಲೆವೆಲ್ಲಿನಲ್ಲಿ ನಿಲ್ಲುವುದು) ಏನನ್ನು ಬೇಕಾದರೂ ಸಹಿಸಿಯಾರು, ಆದರೆ ಶ್ರೇಣೀಕರಣವನ್ನಲ್ಲ. ಅಪ್ಪಿತಪ್ಪಿಯೂ ಎಂತಹ ಪ್ರಾಣಹೋಗುವ ಸಂದರ್ಭದಲ್ಲಿಯೂ ಸಹ, ಒಂದು ವರ್ಷ ಹಿರಿಯರಾದ ವಿದ್ಯಾರ್ಥಿಗಳನ್ನು ಕಿರಿಯರು, ಅವರುಗಳ ಹೆಸರುಗಳೊಂದಿಗೆ ’ದಾದಾ’ ’ದೀದಿ’ ಸೇರಿಸದಿರುವುದನ್ನು ಸಹಿಸುವುದಿಲ್ಲ ಮತ್ತು ಕ್ಷಮಿಸುವುದೂ ಇಲ್ಲ, ಇಪ್ಪತ್ತು ವರ್ಷಗಳ ನಂತರವು ಸಹ. ಈಗ ನೋಡಿದರೆ, ಬೆಂಗಾಲಿ ಬರದಾತನೊಬ್ಬ ಬೆಂಗಾಲಿ ಸೀನಿಯರ್ ಬಗ್ಗೆ ಪ್ರಾಂಶುಪಾಲರ ಬಳಿ ವರಾತ ಹಚ್ಚಿದ್ದು ಒಂದನೇ ತಪ್ಪು, ನಿರ್ದಿಷ್ಟವಾಗಿ ಆತನನ್ನು ನಿರ್ದಿಷ್ಟವಾಗಿ ಈತ ragging ಮಾಡದಿರುವಾಗ ತನ್ನ ಮೇಲೆಯೇ ’ಸುಳ್ಳು ಆರೋಪ ಹೊರಿಸಿಕೊಂಡದ್ದು’ ಎರಡನೇ ತಪ್ಪು, ಮತ್ತು ಬೇರೆ ಯಾರಿಗೋ ಪ್ರಾಂಶುಪಾಲರನ್ನು ಬೆಂಗಾಲಿಯಲ್ಲಿ ಬೈಯ್ಯಲು ಹಚ್ಚಿದ್ದಾಗಲೂ ತಾನೇ ಮಾಡಿದ್ದು ಎಂದು ಒಂದು ಸುಳ್ಳಿನ ಒಳಗೇ ಎರಡನೇ ಸುಳ್ಳನ್ನೂ ಒಳಗುಮಾಡಿ ಹೇಳಿದ್ದು ಈತನ ಮೂರನೇ ತಪ್ಪು. ಮತ್ತು ಮತ್ಯಾವನದ್ದೋ ಕೆಲಸ--ಅದೂ ಮಾರ್ಕ್ಸಿಸ್ಟ್ ನಾಡಿನಲ್ಲಿ--ಈತ ಮಾಡಿದ್ದು ನಾಲ್ಕನೇ ತಪ್ಪು!


(೧೦೧)


     "ನಾಲ್ಕೂ ತಪ್ಪುಗಳನ್ನೂ ಒಟ್ಟಿಗೇ ಮಾಡಿದ್ದಾನೆ ದಾದಾ" ಎಂದು ಹಿರಿಯ ವಿದ್ಯಾರ್ಥಿ ಪ್ರಾಂಶುಪಾಲರ ಮುಂದೆ ಅಲವತ್ತುಕೊಂಡ.


     "ಏನದು?" ಎಂದರು.


     "ಈತ ತಾನು ಮಾಡದ ತಪ್ಪನ್ನು ತಾನೇ ಮಾಡಿದ್ದಾಗಿ ಸುಳ್ಳು ಹೇಳಿದ್ದಾನೆ" ಎಂದ.


     "ಇತಿಹಾಸದಲ್ಲಿ ಯಾವ ಸಂದರ್ಭದಲ್ಲಾದರೂ ತಾನು ಮಾಡದ ತಪ್ಪನ್ನು ತಾನೇ ಮಾಡಿದ್ದು ಎಂದು ಒಪ್ಪಿಕೊಂಡ ತಪ್ಪನ್ನು ತಪ್ಪೆಂದು ಹೇಳುವುದು ತಪ್ಪಾಗಿರುವುದಿದೆಯೆ?" ಎಂದರೆ ಗುರುಗಳು.


     ಸೀನಿಯರ್ ವಿದ್ಯಾರ್ಥಿಯ ಬಾಯಿಮುಚ್ಚಿತು. ’ನಾಲಾಯಕ್ ನೀನು’ ಎಂದು ಗುರುಗಳಿಗೆ ಹೇಳಬೇಕೆಂದು ಕಳುಹಿಸಿದ್ದ ವಿದ್ಯಾರ್ಥಿಯು ಹಾಗೆ ಹೇಳುವ ಬದಲಿಗೆ, ಯಾರು ಹೇಳಿದ್ದು, ragging ನಡೆಯುತ್ತಿದ್ದುದು, ಇವೆಲ್ಲವನ್ನೂ ಸಾದ್ಯಂತವಾಗಿ ಹೇಳಿಬಿಟ್ಟಿದ್ದ. ಈಗ ಕಿರಿಯ ವಿದ್ಯಾರ್ಥಿಗಳ ಎದುರಿಗೆ ಸೀನಿಯರನನ್ನು ಛೇಡಿಸುವ ಕೆಲಸ ಪ್ರಾಂಶುಪಾಲರದ್ದಾಯಿತು. ಅವರು ಖುಷಿಯಾಗಿಯೇ ಆ ಕೆಲಸ ಮಾಡಿದರು. ಆತನನ್ನು ಮೂರು ತಿಂಗಳೂ ಕಲಾಭವನದಿಂದ ಡಿಬಾರ್ ಮಾಡಿಬಿಟ್ಟರು. ಆತನ ಭವಿಷ್ಯ ಹಾಳಾಗದಿರಲೆಂದು, ಆತನ ತಂದೆತಾಯಿಯರ ನೆಮ್ಮದಿ ಕೆಡದಿರಲೆಂದು ಪೂರ್ಣವಾಗಿ ತೆಗೆದುಹಾಕುವುದನ್ನು ತಡೆಹಿಡಿದಿದ್ದರು.


     ಖ್ಯಾತ ಗ್ರಾಫಿಕ್ ಕಲಾವಿದರೂ ಆಗಿರುವ ಈ ಪ್ರಾಂಶುಪಾಲರು ಮತ್ತೊಂದು ದಿನ ರಾತ್ರಿ ಹುಡುಗರು, ಹುಡುಗಿಯರು ರಾತ್ರಿ ಒಂಬತ್ತು ಗಂಟೆಯ ನಂತರವೂ ಮುಂದುವರೆಸಿದ್ದ ಒಂದು ದಿನದ ಹರತಾಳಕ್ಕೆ ಪ್ರತಿಕ್ರಿಯೆಯಾಗಿ ರುದ್ರಾವತಾರ ತಾಳಿ ಬಂದರು. ಹುಡುಗರ ನಾಯಕರನ್ನು, ಹುಡುಗಿಯರ ನಾಯಕಿಯರನ್ನು ಯಗ್ಗಾಮುಗ್ಗ ಬೈಯ್ಯತೊಡಗಿದರು. ವಿದ್ಯಾರ್ಥಿಗಳೆಲ್ಲ ನಿರ್ವಿಕಲ್ಪ ಸಮಾಧಿಯಲ್ಲಿರುವಂತೆ ಆ ಕೂಗಾಟವನ್ನು ತಾಳಿಕೊಂಡಿದ್ದರು. ವಿಶ್ವವಿದ್ಯಾಲಯದ ಉಪ-ಕುಲಪತಿಗಳು ಪಾಪ ಅಷ್ಟು ಹೊತ್ತಿನಲ್ಲು, ಊಟ ಮುಗಿಸಿಕೊಂಡು ಬಂದು ವಿದ್ಯಾರ್ಥಿಗಳ ಕಷ್ಟಸುಖ ವಿಚಾರಿಸಿದರು. ಹಾಸ್ಟೆಲ್ಲಿನಲ್ಲಿ ನೀರಿನ ಸರಬರಾಜು ಸರಿಯಾಗಿ ಆಗುತ್ತಿರಲಿಲ್ಲ, ಸಂಬಂಧಿಸಿದವರ ಸೋಂಬೇರಿತನದಿಂದಾಗಿ. ಅದಕ್ಕಾಗಿಯಲ್ಲದಿದ್ದರೂ, ಕಲಾಭವನದ ಪ್ರಾಂಶುಪಾಲರ ಕೂಗಾಟವನ್ನು ನೋಡಲಾರದೆ ಅಯ್ಯೋ ಎಂದೋ ಅಥವ ಅವರ ಅರಚಾಟಕ್ಕೆ ಹೆದರಿಯೋ ಉಪ-ಕುಲಪತಿ ನೀರಿನ ನಿರಂತರ ಸರಬರಾಜಿಗೆ ’ಅಸ್ತು’ ಎಂದುಬಿಟ್ಟರು.


    ಉಪ-ಕುಲಪತಿಗಳು ಅತ್ತ ಹೋಗುತ್ತಲೇ ನಮ್ಮ ಪ್ರಾಂಶುಪಾಲರು ಮಂದವಿಸ್ಮಿತರಾದರು. ನಿರ್ವಿಕಲ್ಪ ಸಮಾಧಿ ಸೇರಿದ್ದ ವಿದ್ಯಾರ್ಥಿಗಳು ಆ ಸಮಾಧಿಸ್ಥಿತಿಯಿಂದ ಮೆಟ್ಟಿಲುಗಳನ್ನು ಹತ್ತಿಕೊಂಡು ಮೇಲೆ ಬಂದರು. ವಿದ್ಯಾರ್ಥಿಗಳ ನಾಯಕ ನಾಯಕಿಯರ ಭುಜ ತಟ್ಟಿ, ತಬ್ಬಿ ಹಿಡಿದು, "ಸರಿಯಿತ್ತೆ ನಾಟಕ? ಸಮಸ್ಯೆ ಬಗೆಹರಿಯಿತಲ್ಲ?" ಎಂದು ಕೇಳುತ್ತ ನಗಾಡಿದರು. ಮೊದಲೇ ಕೆಲವು ವಿದ್ಯಾರ್ಥಿಗಳು ಹಾಗೂ ಪ್ರಾಂಶುಪಾಲರು ಸೇರಿ ಆಡಿದ ನಾಟಕದಿಂದ, ಉಪ-ಕುಲಪತಿಗೇ ಚಳ್ಳೆಹಣ್ಣು ತಿನಿಸಿದ್ದು, ತಿನಿಸುವುದು ಪ್ರಾಯಶಃ ಕಲಾಶಾಲೆಗಳೆಂಬ ಕಲಾ ಕಾಲೇಜುಗಳಲ್ಲಿ ಮಾತ್ರ ಸಾಧ್ಯವೇನೋ!//

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

//"ಇತಿಹಾಸದಲ್ಲಿ ಯಾವ ಸಂದರ್ಭದಲ್ಲಾದರೂ ತಾನು ಮಾಡದ ತಪ್ಪನ್ನು ತಾನೇ ಮಾಡಿದ್ದು ಎಂದು ಒಪ್ಪಿಕೊಂಡ ತಪ್ಪನ್ನು ತಪ್ಪೆಂದು ಹೇಳುವುದು ತಪ್ಪಾಗಿರುವುದಿದೆಯೆ?" ಈ ಪ್ರಶ್ನೆಗೆ ಉತ್ತರ ಹುಡುಕುವುದೂ ತಪ್ಪುಗಳಲ್ಲೊಂದಾದರೂ ಆ ತಪ್ಪನ್ನು ನಾನು ಮಾಡಬಾರದೆಂದು ನಿರ್ಧರಿಸಿದ್ದು ತಪ್ಪಲ್ಲವೆಂದು ಯಾರೂ ಹೇಳದಿರುವುದು ತಪ್ಪಾಗಿದೆಯೇ..? ;) ಚೆನ್ನಾಗಿದೆ ಅನಿಲ್ ಸರ್

ಯಾಕೋ ಕೆಲವು ದಿನಗಳಿಂದ "ಶಾಂತಿನಿಕೇತನ"ದಲ್ಲಿ ಹೊಸ ಲೇಖನ ಬರುತ್ತಿಲ್ಲವಲ್ಲ ಸರ್. ಪುನಃ ಶುರು ಮಾಡುತ್ತೀರೆಂದು ಭಾವಿಸುತ್ತೇನೆ. ಪ್ರಶ್ನಾಮೂರ್ತಿಯ ಮುಂದಿನ ವಿವರಗಳಿಗೆ ಕಾಯುತ್ತಿದ್ದೇನೆ :-)

+2. ಆತ್ಮೀಯ ಸಂತೋಷ ಮತ್ತು ಪ್ರಸನ್ನರಿಗೆ, ನನ್ನ ಲ್ಯಾಪ್ ಟಾಪ್ ಆತ್ಮಹತ್ಯೆ ಮಾಡಿಕೊಂಡಿದೆ. ಸೀಡಿಗಳನ್ನು ಬರ್ನ್ ಮಾಡಿ ಮಾಡಿ ಅದು ಹೊಗೆ ಬಂದು ಸುಟ್ಟು ಹೋಯಿತು! ಆದಷ್ಟೂ ಬೇಗ ಮುಂದಿನ ಕಂತನ್ನು ಮೇಲ್-ತುಂಬುವ (ಅಪ್-ಲೋಡ್?) ಪ್ರಯತ್ನ ಮಾಡುವೆ. ಧನ್ಯವಾದ ಅನಿಲ್

ಲ್ಯಾಪಿ ಆತ್ಮಹತ್ಯೆ ಮಾಡಿರಬೇಕಾದರೆ ಅದಕ್ಕೆ ಎಷ್ಟು ಹಿಂಸೆ ನೀಡಿದ್ದಿರೋ ಏನೋ? 'Gharelu himsa' ಘೋರ ಅಪರಾಧ! ಅದಕ್ಕಾಗಿ ನಿಮಗೆ ಕಠಿಣ ಶಿಕ್ಷೆ ವಿಧಿಸಲಾಗುವುದು :)

ಪ್ರಶ್ನಾ ಮೂರ್ತಿಯನ್ನು ಈ ಪರಿಯಲ್ಲಿ ಗೋಳುಹೊಯ್ದದ್ದಕ್ಕೆ ಬಹುಶಃ ಈಗ (ಲ್ಯಾಪ್ಟಾಪ್ ಹಾಳಾಗಿದ್ದು ) ನಿಮಗೆ ಅದರ ಪ್ರತಿಫಲ ದೊರೆಯುತ್ತಿದೆ ಅನಿಸುತ್ತಿದೆ. ಆತನ ಕಾಸಿನಿಂದಲೇ ಅಷ್ಟೆಲ್ಲ ಟೀ ಕಾಫಿ ಕುಡಿದೂ ಅವನನ್ನೇ ಜಿಪುಣ ಎಂದು ಜರೆದದ್ದೂ ಇದಕ್ಕೆ ಕಾರಣವಿರಬಹುದು. :-)