ಹೀಗೇ............ ಲೋಕಾಭಿರಾಮ...... ಮತ್ತು ........ಒಂದು.. ಮಳೆಯ............ ಸಂಜೆ

To prevent automated spam submissions leave this field empty.ಮಧ್ಯಾಹ್ನ ಊಟಕ್ಕೆ ಸ್ವಲ್ಪ  ತಡವಾಗಿಯೇ  ಬಂದಿದ್ದೆ, ಮುಗಿಸಿ ಹೊರಡಲು ನೋಡಿದರೆ ಹೊರಗೆ ಜಡಿಮಳೆ.
ಅರ್ಧ ಖುಷಿಯಲ್ಲಿ, ಮಳೆಯನ್ನು ಮನೆಯ ಕಿಟಕಿಯಿಂದ ನೋಡುತ್ತಕುಳಿತೆ. ಪ್ರಹರಿ ಮುಂದುವರಿಸಲು ಲಹರಿಯಿರದೇ ಹಾಗೇ ಮಯೂರ ಓದುತ್ತ ಕುಳಿತೆ. ಏನೂ ರಾಯರು ಹೀಗೇ ಮಾಡಿದರೆ ನಿಮ್ಮ ಬಾಸ್ ನಾಳೆಯಿಂದ ಮನೇಲೇ ಇರಿ ಎಂದರೆ ಏನ್ರೀ ಮಾಡ್ತೀರಾ ಎಂದಳು.ನನಗೆ ಕೊಡುವ ಸಂಬಳಕ್ಕೆ ಯಾರು ಬರ್ತಾರೆ ಬಿಡೇ ಎಂದೆ .
ಆಗಲೇ ಜಂಗಮವಾಣಿ ಉಲಿಯಿತು
"ಎಲ್ಲಿದ್ದೀರಿ ಐದು ನಿಮಿಷದಲ್ಲಿ ಸೈಟಿಗೆ ಬರ್ತಾ ಇದ್ದೇನೆ.... ಅಲ್ಲೇ ಇದ್ದೀರಲ್ಲಾ... " ಈಗ ಸ್ವರ ಡಾಕ್ಟರ್ ದ್ದು.( Claint) ನನ್ನವಳು ಈಗ ಹೇಳಿ ಎಂಬಂತೆ ನಕ್ಕಳು.
"ನಾನು ಮೀನ ಮೇಷ ಎಣಿಸುವಷ್ಟರಲ್ಲಿ  ಅವರೇ..ಹೋಗಲಿ ಬಿಡಿ ನಾನೇ ನೋಡ್ಕೊಳ್ತೇನೆ" ಎಂದರು ,ಈಗ  ಅವಳೆಡೆ ನೋಡಿ ನಗುವುದು ನನ್ನ  ಸರದಿಯಾಗಿತ್ತು.
ಮಳೆ ಇನ್ನೂ ಹಣಿಕುತ್ತಿತ್ತು,  ಜತೆಗೆ ಹತ್ತಿರದ ಮರಗಿಡಗಳೆಲ್ಲವೂ, ಇನ್ನಂತೂ ಮಳೆ ನಿಂತರೂ ಇವುಗಳ ಟಪ ಟಪ ನಿಲ್ಲದು ನನ್ನ ಮನದಲ್ಲಿನ ಹಳೆಯ ನೆನಪುಗಳ ಹಾಗೆ .
"ಯಾಕ್ರೀ ಇವತ್ತು ವಾಕಿಂಗ್ ಇಲ್ಲವಾ" ಎಂದಳು ಮನದೊಡತಿ.
"ಮಳೆ ಬರ್ತಾ ಇದೆಯಲ್ಲಾ" ಎಂದೆ ಅರ್ಧ ಮನಸ್ಸಿನಿಂದ. ಕೊಡೆ ತೋರಿಸಿದಳು, "ಒಂದರಲ್ಲೇ ಹೋಗೋದು ಹೇಗೆ ?" ನನ್ನ ಪ್ರಶ್ನೆ

ಕಿರಿಯವ "ಒಂದರಲ್ಲೇ ಹೋಗಿ" ಎಂಬ ರಸಿಕ  ಸಲಹೆಯಿತ್ತ. ಬರುವಾಗ ಇವತ್ತು ಪಾನಿ ಪುರಿ ತನ್ನಿ ಎಂಬ  ತನ್ನ ಡಿಮಾಂಡೂ ಇಟ್ಟ.

ಮತ್ತೊಂದು ಕೊಡೆ ನಿಮ್ಮ ಹತ್ತಿರವೇ ಇಟ್ಟಿದ್ದೇನೆ ನೋಡಿ ಎಂದಳು , ನನಗಿಂತ ನೀನೇ "ಪಕ್ಕಾಮಿಲಿಟರಿ" ನೋಡು ಎಂದೆ.


ನಾವಿಬ್ಬರೂ ಸುಮಾರು ೧೯-೨೦ ವರುಷಗಳಿಂದ ಅನೂಚಾನವಾಗಿ ರೂಢಿಸಿಕೊಂಡು ಬಂದ ಅಭ್ಯಾಸವಿದು, ಏನೇ ಬರಲಿ ನಮ್ಮ ೬ ರಿಂದ ೭ ವಾಕಿಂಗ  ಸಮಯ , ಅದು ನಿಲ್ಲದು . ನಮ್ಮೆಲ್ಲಾ ಇಲ್ಲಿಯವರೆಗಿನ ದಶ, ಸಪ್ತ, ಪಂಚ, ದ್ವೈ ಮತ್ತು ವಾರ್ಷಿಕ ಯೋಜನೆಗಳೆಲ್ಲಾ ಈ ಸಮಯದಲ್ಲೇ ರೂಪಿತಗೊಂಡಿದ್ದವು.

 

ಒರಿಸ್ಸಾದಲ್ಲಿರುವಾಗಲೊಮ್ಮೆ ಹೀಗಾಗಿತ್ತು, "ರೀ ಏಳ್ರೀ ಎಂದಳು' ಮನದನ್ನೆ,

ಬೆಳಕು ಹಾಕಿದರೆ ಮಗ ನಿದ್ದೆಯಿಂದ ಏಳುತ್ತಾನೆ ಅಂತ ಕತ್ತಲೆಯಲ್ಲಿಯೇ ದಿರುಸು ಧರಿಸಿ ಹೊರಟೆವು. ೪-೫ ಕಿ ಮೀ ನಡೆದು ವಾಪಾಸ್ಸು ಬರುವಾಗ ಸೆಕ್ಯುರಿಟಿಯವ "ಗುಡ್ ನೈಟ್ ಸರ್" ಎಂದ. ಅಚ್ಚರಿಯಿಂದ "ಎಷ್ಟಾಯ್ತು ಸಮಯ" ಎಂತ ಕೇಳಿದೆ "ಒಂದು ಗಂಟೆ ಯಾಯ್ತು ಸರ್" ಎಂದನಾತ. ಅವಳ ಕೈಗಡಿಯಾರ ನಿದ್ದೆಮಾಡಿತ್ತು  ಯಾವಾಗಲೋ .ಯಾಕೋ ಅದು ನೆನಪಿಗೆ ಬಂದು ನಕ್ಕೆ, ವಿಷಯ ತಿಳಿದು ಅವಳೂ ದನಿಗೂಡಿಸಿದಳು.


ಇಲ್ಲಿ  ಈ ಮಳೆಯಲ್ಲಿ ರಸ್ತೆಯಲ್ಲಿನ  ವಾಹನಗಳೂ ನನ್ನ ಮನಸ್ಸಿನ ಹಾಗೆ ಕೆಲಸದಿಂದ ವಿಮುಖವಾದ ಹಾಗಿತ್ತು. ಮಳೆಯಿಂದಾಗಿ ವಾತಾವರಣವೇ ಮಿಂದು ಸ್ವಚ್ಛವಾಗಿದ್ದಂತಿತ್ತು.
ಹೀಗೇ ಮಳೆ ಬರುತ್ತಿದ್ದರೆ ಕಾರಿನಲ್ಲೇ ವಾಕಿಂಗ್ ಹೋಗ ಬೇಕಾಗುತ್ತೋ ಏನೋ ಎಂದೆ, ನಕ್ಕಳು.
ಪಕ್ಕದ ರಸ್ತೆಯಲ್ಲಿ ಬರುತ್ತಿರುವ ಗಡ್ಡದವ  ನನ್ನ ನೋಡಿ ನಕ್ಕ. ನಮ್ಮ ಓಡಿ ಹೋದ ಭಟ್ಟರ ಮಗನ  ಹಾಗೆ ಇದ್ದಾನಲ್ಲಾ ಅನ್ನಿಸಿತು.

 

ಪಕ್ಕನೆ ಕವಿ ನಾಗರಾಜರ ಸರಳುಗಳ ಹಿಂದೆ ನೆನಪಿಗೆ ಬಂತು.ಪಾಪ ಎಷ್ಟು ಆಗ ಜನರಿಗೆ ಹೀಗೆ ಆಗಿರಲಿಕ್ಕಿಲ್ಲ, ಆಗಿನ  ಒಂದೊಂದು ಕ್ಷಣವೂ ಮರು ಹುಟ್ಟು ಅವರಿಗೆ .

http://sampada.net/article/2714


ದಿನಾ ಏನನ್ನಾದರೂ ( ಮಂಡಕ್ಕಿ ಉಪ್ಕರಿ, ಬನ್ಸ್) ತೆಗೆದುಕೊಂಡು ಹೋಗುತ್ತಿದ್ದ ನಮ್ಮನ್ನು ನೋಡಿ ಮಂಗಳೂರು ಅಂಗಡಿಯವ ವಂದಿಸಿದ, ಅಲ್ಲ  ಇವತ್ತು ಪಕ್ಕದ ಅಂಗಡಿಯ ಪಾನಿ ಪುರಿಯವನ ಹತ್ತಿರ ನಮ್ಮ ವ್ಯಾಪಾರ. ಎಲ್ಲರನ್ನೂ ಖುಷಿ ಪಡಿಸಲು ಸಾಧ್ಯವೇ?  ಪಕ್ಕದಲ್ಲೇ ಹಲಸಿನ ಹಣ್ಣಿನವ ಹೊಸ  ಮರದಲ್ಲೇ ಹಣ್ಣು ಆಗಿದ್ದು ಎಂದ ಸರಿಯಪ್ಪಾ ಕೊಡು ಎಂದೆ ಇದಂತು ನಮ್ಮ ಖುಷಿಗೆ , ಇದೇ ಹಳ್ಳಿಯಲ್ಲಾದರೆ  ತಿನ್ನಲು  ಜನವಿಲ್ಲ ,ಇಲ್ಲಿ ಒಂದು ತೊಳೆಗೆ  ೨-೩ ರುಪಾಯಿ ಕೊಡಬೇಕು.ತಿನ್ನದಿದ್ದರೆ ಮನಸ್ಸು ಕೇಳಬೇಕಲ್ಲ?  ಆಗಲೇ ತಿಂಗಳ ಬಜೆಟ್ ಮೀರುವ ವಾರ್ನಿಂಗ್ ಬಂದಾಗಿತ್ತು ಮನೆಯಾಕೆಯಿಂದ. ಪಕ್ಕದಲ್ಲಿ ಹೆಂಗಸೊಬ್ಬಳು  ಅಲವತ್ತು ಕೊಳ್ಳುತ್ತಿದ್ದರು , ದಿನಾ ಮ್ಯಾಗಿ ಮ್ಯಾಗಿ ಅನ್ನುತ್ತಿದ್ದರಂತೆ ಅವರ ಮಕ್ಕಳು ಅಂಗಡಿಯಲ್ಲಿ ಅಕ್ಕಿ ಶಾವಿಗೆ ಸಿಗುತ್ತೆ ಬಿಸಿನೀರಿನಲ್ಲಿ ಮೂರೂ ನಾಲ್ಕು ನಿಮಿಷ ಇಟ್ಟು ನೀರು  ಬಸಿದು ಉಪ್ಪಿಟ್ಟು ಮಾಡಿ ಕೊಡಿ ಎಂದಳು ನನ್ನ ಶ್ರೀಮತಿ, ಹೌದಾ ನನಗೆ ಗೊತ್ತಿರಲಿಲ್ಲ ಇವತ್ತಿನಿಂದ ಇದನ್ನೇ  ಮಾಡಿ ನೋಡ್ತೇನೆ ,  ಮಾಡುವ ವಿಧಾನ ಗೊತ್ತಿರಲಿಲ್ಲ ಧನ್ಯವಾದಗಳು ಎಂದಳಾಕೆ. 


ಮಳೆಯಲ್ಲಿ  ಹೊರ ಹೋಗುವುದೆಂದರೆ ಒಂತರಾ ಮಜಾ.  ಅದೂ  ಕೊಡೆಯನ್ನು ಹಿಡಿದು ವಾಕಿಂಗ್ !!!

ಇದೇ ಹಳ್ಳಿಯಲ್ಲಾದರೆ...ಹಿಂದೊಮ್ಮೆ ನಾನೂ ನನ್ನ ಅಣ್ಣ  ಭಿರುಮಳೆಯಲ್ಲೊಮ್ಮೆ ಸಿಕ್ಕಿ ನದಿ ದಾಟಲಾಗದೇ ಅಸಹಾಯಕತೆಯಿಂದಾಗಿ ದಿನವಿಡೀ ಅನಿವಾರ್ಯವಾಗಿ ನಾವಿಕನಿಗೆ ಕಾದದ್ದು ನೆನಪಿಗೆ ಬಂತು, ಕೆಂಪನೆಯ ತುಂಬಿ ಉಕ್ಕಿ ಹರಿಯುತ್ತಿರುವ ಸೆಳೆತದ ನೀರು, ಎಡೆಬಿಡದೆ ಹೊಯ್ಯುತ್ತಿರುವ ಮಳೆ , ಮನೆಯ ನೆನಪು ಎಲ್ಲವು  ಸೇರಿಕೊಂಡು ಒಂದು ವಿಶಿಷ್ಟ ವಿಚಿತ್ರ ಗೂಢ ಸನ್ನಿವೇಶವನ್ನೇ ಸೃ ಷ್ಟಿಸಿ ಒಂದು ವಿಚಿತ್ರ ಲೋಕವನ್ನೇ ನಮ್ಮ ಸುತ್ತಲೂ ಎರಕ ಹೊಯ್ದು ಬಿಟ್ಟಿದ್ದವು .ಆ ಮಳೆಯಲ್ಲೂ ಮೂವರನ್ನು ಕೂರಿಸಿಕೊಂದು ಹೋಗುತ್ತಿದ್ದ ಬೈಕ್ ಸವಾರನನ್ನು ನೋಡಿ ಜೋರಾಗಿ ಕೂಗಿದೆ. ಆತ ನನ್ನನ್ನೂ ಹತ್ತಿಸಿಕೊಂಡು ಹೋಗಬೇಕಾಗುತ್ತೊ ಎಂಬ ಹಾಗೆ ಮುಖ ಮಾಡಿ ನಿಧಾನ ಮಾಡಿದ. ಬದಿ ಗುತ್ತು ತೆಗೆದಿಲ್ಲ  ಎಂದು ಸಂಜ್ಞೆಯಲ್ಲೇ ತೋರಿಸಿದೆ. ( Side Stand ), ಸಮಯ ಸರಿಯಿಲ್ಲದಿದ್ದರೆ ಎಂತಹ ದೊಡ್ಡ ಅನಾಹುತವಾಗುತ್ತಿತ್ತು ಎಂಬ ಪ್ರಜ್ಞೆ ಅದರ ಚಾಲಕನಿಗೆ  ಇದ್ದ ಹಾಗಿರಲಿಲ್ಲ.

ನೀವು ಮಳೆಯಲ್ಲಿ ಸಂಜೆ ಗತ್ತಲೆಯಲ್ಲಿ ಕಾರಿನಲ್ಲಿಹೋಗುತ್ತಿದ್ದೀರಾ, ಮುಂದಿನ  ತಿರುವಿನಲ್ಲಿ ಕಾಡು ಶುರುವಾಗುತ್ತೆ, ಆಗಲೇ ಆ ಮಳೆಯಲ್ಲಿ ಮೈಯೆಲ್ಲಾತೊಯ್ದು ತೊಪ್ಪೆಯಾದ ವ್ಯಕ್ತಿಯೊಬ್ಬ ನಿಮಗೆ ಕೈತೋರಿಸುತ್ತಾನೆ, ನೀವು ಕಾರು ನಿಲ್ಲಿಸಿದರೆ ಒದ್ದೆಯಾದ ಅವನನ್ನು  ಕರೆದುಕೊಂಡು ಹೋಗಬೇಕಾಗುತ್ತದೆ, ಆದರೂ ಜಿಜ್ಞಾಸೆಯಲ್ಲೇ ನಿಲ್ಲಿಸುತ್ತೀರಾ. ನೀವು ಏನೂ ಹೇಳುವ ಮೊದಲೇ  ಆತ ಮುಂದೆ ಮಣ್ಣು ಕುಸಿದು ಆಗಲೇ ೩-೪ ಅಪಘಾತ ಆಗಿದೆಯೆಂದೂ ನಿಮ್ಮನ್ನು ಎಚ್ಚರಿಸಲು ಇಲ್ಲಿ ನಿಂತಿದ್ದನೆಂದೂ ಹೇಳುತ್ತಾನೆ. ಹಲಕೆಲವೊಮ್ಮೆ  ಸತ್ಯಕ್ಕೂ ನಾವು ನೋಡಿದುದಕ್ಕೂ ತುಂಬಾ  ವ್ಯತ್ಯಾಸವಿರುತ್ತದೆ.


"ಮೋರ್ "ಅಂಗಡಿ ಪರಿಚಾರಕಿ, ನಾವಿಬ್ಬರು ಮಾತನಾಡುತ್ತಿದ್ದುದನ್ನು ನೋಡಿ ಒಂದೇ ಬಿಲ್ಲು ಮಾಡ್ಲಾ ಸಾರ್ ಎಂದು ಕೇಳಿದಳು , ಧಾರಾಳವಾಗಿ ಮಾಡಮ್ಮಾ ಎಂದೆ.

ದೆಹಲಿಯಲ್ಲೊಮ್ಮೆ ಹೀಗೇ ನಾವು ಸಂಜೆ ತಿರುಗಾಡುತ್ತಿರುವುದನ್ನು ನೋಡಿ ಅಂಗಡಿಯವನೊಬ್ಬ ನೀವು ಒಂದೇ ಆಫೀಸಿನವರಾ ಮೇಡಮ್ ಎಂದುದು ಜ್ಞಾಪಕಕ್ಕೆ ಬಂದು ಇಬ್ಬರೂ ನಕ್ಕೆವು.
ಸಂಜೆ ವಾಕಿಂಗ್ ಮುಗಿಸಿ ಮನೆಗೆ ಬಂದಾಗ ಬಾಗಿಲು ತೆರೆದ ಸಣ್ಣವನ ಮುಖವರಳಿತು, ನಮ್ಮ ಕೈ ನೋಡಿ, ಮೇಲಿನ ವಿಷಯ ಬರೆಯಲು ಕಾರಣ  ಸಣ್ಣವನಿಗೆ  ಚಿಕ್ಕಂದಿನಲ್ಲಿ ಆದ  ಒಂದು ಘಟನೆ, ನಾವು ಚಿಕ್ಕ ವಿಷಯ ಅಂತ ನಿರ್ಲಕ್ಷಿಸಿದ್ದು ತುಂಬಾ ವಿಕೋಪಕ್ಕೆ ತಿರುಗಿತ್ತು, ಅದನ್ನು ಇನ್ನೊಮ್ಮೆ ಯಾವಾಗಲಾದರೂ ಬರೆಯುತ್ತೇನೆ.

ಯಾಕೋ ಅಕಾಸ್ಮಾತಾಗಿ ನಮ್ಮೆಲ್ಲರ ಬೇಕು ಬೇಡಿಕೆ ಗಳನ್ನು ಪೂರೈಸುತ್ತಿದ್ದ ತಂದೆಯವರ ನೆನಪೂ ಬಂತು. ಬರುವ ಹಣದಲ್ಲೇ ಕರಾರುವಾಕ್ಕಾಗಿ ನಮ್ಮೆಲ್ಲರ ಹಿತಮಿತ ಅರಿತು ಹೇಗೆ ಪೂರೈಸುತ್ತಿದ್ದರು ಅವರು.
ಇಲ್ಲಿ ಎಷ್ಟು ಸಿಕ್ಕಿದರೂ ಕಡಿಮೆಯೇ.ನಮ್ಮ ಸಂಜೆಯ  ಕಾಲ್ನಡಿಗೆ ಜತೆ ಮನಸ್ಸಿನ ಸಂಚಾರವೂ ಆಗಿತ್ತು.
ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಗೋಪಿನಾಥ್ ಅವರೇ, ನಾನೇ ಮಳೆಯಲ್ಲಿ ವಾಕಿಂಗ್ ಮುಗಿಸಿ ಬಂದಂತೆ ಅನಿಸಿತು. ಚೆನ್ನಾಗಿ ವರ್ಣಿಸಿದ್ದೀರ. ಮಳೆಗಾಲದಲ್ಲಿ ದಿನಾ ಸಂಜೆ ಕಚೇರಿಯಿಂದ ಮನೆಗೆ ಹೊರಡುವ ವೇಳೆ ಮಳೆಯಲ್ಲೇ ದ್ವಿಚಕ್ರ ವಾಹನದಲ್ಲಿ ಹೋಗುತ್ತೇನೆ. ಜಿಟಿ ಜಿಟಿ ಮಳೆಯೇ ಇರಲಿ, ಧೋ ಅಂತ ಜೋರಾಗಿಯೆ ಮಳೆ ಸುರಿಯುತ್ತಿರಲಿ ವಾಹನವನ್ನು ನಿಲ್ಲಿಸದೇ ನನ್ನ ಪಯಣ ಮನೆಯ ಕಡೆ ಸಾಗುತ್ತಿರುತ್ತದೆ. ಆ ಅನುಭವವೇ ಸುಂದರ. ಕಮಲ (ಚಿತ್ರ)

[[ದಶ, ಸಪ್ತ, ಪಂಚ, ದ್ವೈ ಮತ್ತು ವಾರ್ಷಿಕ ಯೋಜನೆಗಳೆಲ್ಲಾ ಈ ಸಮಯದಲ್ಲೇ ರೂಪಿತಗೊಂಡಿದ್ದವು.]] ಗೋಪಿನಾಥರೇ, ನಿಮ್ಮ ವಾಕಿಂಗ್ ಪರಿಚಯ ಚೆನ್ನಾಗಿದೆ. ತಂಪು ಹೊತ್ತಿನಲ್ಲಿ ನನ್ನನ್ನೂ ನೆನೆಸಿಕೊಂಡಿದ್ದಕ್ಕೆ ಖುಷಿಯಾಯಿತು. ಚಿತ್ರಗಳೂ ಚೆನ್ನಾಗಿವೆ.

ನಿಮ್ಮ ಆತ್ಮೀಯ ಪ್ರತಿಕ್ರೀಯೆಗೆ ಧನ್ಯವಾದಗಳು ಕವಿಯವರೇ ನಿಮ್ಮ ಅನುಭವ ನನ್ನನ್ನು ಗಾಢವಾಗಿ ಕಾಡತೊಡಗಿದ್ದು, ಕೆಲಸ ಮಾಡಲೂ ಬಿಟ್ಟಿರಲಿಲ್ಲ.

ಮಳೆಗಾಲದ ಅನುಭವವೇ ಅಮೋಘ! ಚೆನ್ನಾಗಿ ಬರೆದಿದ್ದೀರಿ, ಆದರೆ ಎಲ್ಲೋ sequence ಎಡವಟ್ಟಾದ ಹಾಗೆ ಕಾಣಿಸಿತು, ಬಹುಶಃ ನನಗೆ ಮಾತ್ರ ಹಾಗೆ ಕಂಡಿತೋ ಏನೋ :)

ಸಂತೋಶ್ ನಿಮ್ಮ ಅನಿಸಿಕೆ ಸರಿಯೇ ಇರಬಹುದು. ನಾನು ನನ್ನ ಮನಸ್ಸಿನ ಅನಿಸಿಕೆ ಮತ್ತು ನೋಟದ ಅನಿಸಿಕೆ ಅಷ್ಟು ಪರಿಣಾಮಕಾರಿಯಾಗಿ ಹೊಂದಿಸಿಕೊಳ್ಳಲು ಸಾಧ್ಯವಾಗದೇ ಇರಬಹುದು. ಪ್ರತಿಕ್ರೀಯೆಗೆ ಧನ್ಯವಾದಗಳು, ಮುಂದಿನ ಲೇಖನದಲ್ಲಿ ಪ್ರಯತ್ನಿಸುವೆ.

ಯಾಕೆ ರಘು ಅವರೇ ನೀವು ಬೆಳಿಗ್ಗೆ ಹೋಗಿ ಆರೋಗ್ಯಕ್ಕೆ ಒಳ್ಳೆಯದು, ಮೊದಲು ನಾವು ಬೆಳಿಗ್ಗೆಯೇ ಹೋಗುತ್ತಿದ್ದೆವು, ಬೆಂಗಳೂರಿನ ಬೆಳಗಿನ ಹವೆ ನನಗೆ ಒಗ್ಗುವುದಿಲ್ಲ ಅಂತ ಸಂಜೆ ಹೋಗುತ್ತೇವೆ ಮೆಚ್ಚಿದ್ದಕ್ಕೆ ವಂದನೆ

ಗೋಪಿನಾಥ್ ರವರೆ, ನಿಮ್ಮ ಮೊದಲನೇ ಚಿತ್ರ ತುಂಬಾ ಸುಂದರವಾಗಿದೆ. ಮಳೆಯಲ್ಲಿನ ವಾಕಿಂಗ್ ಅನುಭವವೇ ಮಜಾ, ಬಿಸಿ ಬಿಸಿ ಬೋಂಡ ತಿನ್ನಲು ಒಳ್ಳೆಯ ಸಮಯ. ಇದರ ಅನುಭವವೇ ಸಂತೋಷ ಕೊಡುವಂತಹದು

ಚೆನ್ನಾಗಿದೆ ರಾಯರೆ ನಿಮ್ಮ ಲೋಕಾಭಿರಾಮದ ಸ೦ಜೆಯ ವಾಕಿ೦ಗ್ ಅನುಭವ. ಚಿತ್ರಗಳನ್ನು ನೋಡಿ ನನ್ನ ಹೊಟ್ಟೆ ಉರಿದು ಹೋಯಿತು! ಎ೦ಥಾ ಬೆ೦ಗಳೂರಿನ ಸು೦ದರ ಸ೦ಜೆಗಳನ್ನು ನಾನು ಕಳೆದುಕೊಳ್ಳುತ್ತಿದ್ದೇನಲ್ಲ ಎ೦ದು!!

೩೦ ನೇ ತಾರೀಖಿನ ವಿಜಯಕರ್ನಾಟಕದ ಲವಲವಿಕೆಯಲ್ಲಿ ಮೊದಲ ಪೇಜ್ ನಲ್ಲಿ ದೆ " ಮತ್ತೊಬ್ಬ ಸಾವಿತ್ರಿ ಈಕೆ ಆಕೆಯಲ್ಲ ನಿಮ್ಮಾಕಿ....... ಪಂಚಮಿ ಎನ್ನುವ ಹೊಸ ಹುಡುಗಿ ನಾಯಕಿ ಯಾಗಿ ಪರಿಚಯವಾಗಿದ್ದಾಳೆ" ಎಂತ ಇದೆ

ಹೌದೇನು, ನಾನು ಗಾಭರಿಯಾಗಿದ್ದೆ, ಇದಾರಪ್ಪಾ ನನ್ನ ಮಗಳ ಹೆಸರು ಬದಲಿಸಿದವರು ಎ೦ದು? ಬಹುಶಃ ಆ ವರದಿಗಾರನಿಗೆಲ್ಲೋ ಹೆಸರು ಮರೆತಿರಬೇಕು, ಬೇರೆಲ್ಲಾ ಪತ್ರಿಕೆಗಳಲ್ಲೂ ಸರಿಯಾಗಿಯೇ ಬ೦ದಿದೆ.