"ಕಪಿ ಅವ್ತಾರ್ದಲ್ಲಿ ಇರೋಕಿಂತ್ಲೂ ಬೋ ಸಂದಾಕ್ ಕಾಣ್ತಿದೀಯ ಮಗ" -- ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆಃ ಭಾಗ ೩೧

To prevent automated spam submissions leave this field empty.

 

(೯೪)

     ವಾಸ್ತು, ಫೆಂಗ್ ಶೂಯಿ ಪ್ರಕಾರ, ಖಗೋಳವಿಜ್ಞಾನ-ಭವಿಷ್ಯವಾದದ ಪ್ರಕಾರ, ಸಮಸ್ತ ಭೂಮಂಡಲದ ಚರಾಚರಗಳೆಲ್ಲವೂ ಒಟ್ಟಾಗಿ ಸೇರಿ, ಅಂತೂ ಪ್ರಶ್ನಾಮೂರ್ತಿಗೊಂದು ಮೋಕ್ಷ ದೊರಕಿಸಿಕೊಡುವ ದಿನವನ್ನು ದಯಮಾಡಿಸಿತ್ತು. ಎಷ್ಟೋ ದಿನಗಳ ರಿಹರ್ಸಲ್ಲಿನ ನಂತರ ಅಂದು ಮೊದಲ ಧಾರವಾಹಿಯ ನೈಜ ಕ್ಯಾಮರದಲ್ಲಿ, ನೈಜ ಶೂಟಿಂಗ್ ಇಟ್ಟುಕೊಂಡೆವು ಕಬ್ಬನ್ ಪಾರ್ಕಿನಲ್ಲಿ! ಮೊದಲ ಸೀನ್, ಅದೇ, "ಅಕ್ಕಡಾ ಎನ್ನಡಾ ಬೀಚ್ ಮೆ ಲಿಟಲ್ ಕನ್ನಡ"ವನ್ನು ಸಾವಿರ ಸಲ ಬಾಯಿಪಾಠ ಮಾಡಿಕೊಂಡೇ ಪ್ರಶ್ನೆಯು ಬೆಳಗ್ಗಿನಿಂದ ಎಲ್ಲರಿಗೂ ಕಾಲೇಜಿನಲ್ಲಿ ಸಿಹಿ ಹಂಚುತ್ತಿದ್ದ. ತಾಪತ್ರಯವೇ ಬೇಡವೆಂದು ತನ್ನ ಮನೆಯಿಂದಲೇ ತಾಯಿ, ನೆಂಟರಿಸ್ಟರ ಕೈಲಿ ಚೌಚೌಬಾತ್ ಮಾಡಿಸಿಕೊಂಡು ಬಂದಿದ್ದ. ಹತ್ತಿರದ ಊರುಗಳಿಂದ ನೆಂಟರುಗಳೂ ಒಂದಿಬ್ಬರು ಬಂದಿದ್ದರು. ಅವರು ಬಂದುದರ ಪ್ರಯೋಜನ ಪಡೆದುಕೊಳ್ಳುವಂತೆ ಅವರಿಂದಲೇ ಅಡುಗೆ ಮಾಡಿಸಿದ್ದನೀತ! ಎರಡು ಲಾಭವಿತ್ತು ಅದರಲ್ಲಿ. ಸ್ವಂತ ಪಾಕೆಟ್ ಮನಿಯನ್ನು ಮನೆಯಿಂದ ಅಡುಗೆ ಮಾಡಿಸಿಕೊಂಡು ಬರಲು ಖರ್ಚು ಮಾಡಬೇಕಿರಲಿಲ್ಲ.

     ಭಯಂಕರ ಜಿಪುಣನಾದ ಪ್ರಶ್ನೆ ಏನಿಲ್ಲವೆಂದರೂ ಮನೆಯಲ್ಲಿ ಇನ್ನೂರು ರೂಪಾಯಿ ಖರ್ಚು ಮಾಡಿಸಿದ್ದನೆನಿಸುತ್ತದೆ, ಚೌಚೌಬಾತಿಗೆ. ಕ್ಯಾಂಟೀನಿನಲ್ಲಿ ಸಾಲದಲ್ಲೇ ನಮಗೆಲ್ಲ ತಿಂದು ಕುಡಿಸಿದ್ದ ಪ್ರಶ್ನೆಯ ಲೆಕ್ಕವೇ ಸುಮಾರು ಎಪ್ಪತ್ತೈದು ರೂಪಾಯಿ ಆಗಿತ್ತೆನಿಸುತ್ತದೆ, ೧೯೯೦ರ ಏಪ್ರಿಲ್ಲಿನಲ್ಲಿ. ಸಾಲವನ್ನು ಕ್ಯಾಂಟೀನಿನವನಿಗೆ ಪಾವತಿ ಮಾಡುವುದನ್ನು ಪ್ರಶ್ನೆ ಮುಂದೂಡುತ್ತಲೇ ಇದ್ದುದಕ್ಕೆ ಕಾರಣ--ಹಾಗೇ ಸುಮ್ಮನೆ ಆ ಲೆಕ್ಕವು ಮಾಯವಾದೀತು ಅಥವ ಮಾಯವಾಗಲಿ ಎಂದು. ಜಿಪುಣರ ಯೋಚಿಸುವ ಕ್ರಮವಿದು. ಅಥವ ಹೀಗಿರಬಹುದೇನೋಪ್ಪ!

     ಸಂಜೆಯ ಹೊತ್ತು, ಮುಗಿದ ನಂತರ, ದಿನಕ್ಕೆ ಮೊರ್ನಾಲ್ಕು ಗಂಟೆಗಳ ಕಾಲದ ಪಾರ್ಟ್ ಟೈಮ್ ಡಿಸೈನರ್ ಆಗಿ, ತಿಂಗಳಿಗೆ ನಾಲ್ಕುನೂರು ರೂಪಾಯಿ ಸಂಬಳ ಪಡೆಯುತ್ತಿದ್ದ ಪ್ರಶ್ನೆಯು, ಕೆಲಸಕ್ಕೆ ಹೋಗಿ ಅಥವ ಹೋಗದೆ ಅಥವ ಉಂಡೆನಾಮ ತೀಡಿ ಹದಿನೈದು ದಿನವಾಗಿತ್ತು. ಹೆಚ್ಚೂಕಡಿಮೆ ಐನೂರು ರೂಪಾಯಿ ಆತನಿಗಾಗಿ ಯಾರುಯಾರೋ ಖರ್ಚು ಮಾಡಿದಂತಾಗಿತ್ತು, ಕ್ಯಾಮರಾಕ್ಕೆ ಮುಖ ತೋರಿಸುವ ಮುನ್ನವೇ.

     ಅಂದಿನ ವಿಶೇಷವೆಂದರೆ ಸ್ವತಃ ಗೋಪಿ ಚೌಚೌಬಾತನ್ನು ಆಲದ ಎಲೆಯ ಮೇಲೆ ಹಾಕಿ ಹಾಕಿ ಎಲ್ಲರಿಗೂ ಕೊಡುತ್ತಿದ್ದುದು. ಮತ್ತೂ ವಿಶೇಷವೆಂದರೆ ಮೊದಲು ಹುಡುಗಿಯರಿಗೆ ನಂತರ ಹುಡುಗರಿಗೆ ನೀಡುತ್ತಿದ್ದುದು. ಮತ್ತೊಂದು ವಿಶೇಷವೆಂದರೆ, ಹುಡುಗಿಯರಿಗೆ (ಹುಡುಗರಿಗಿಂತಲೂ) ಒಂದಳತೆ ಹೆಚ್ಚು ತಿಂಡಿ ಹಾಕಿಕೊಡುತ್ತಿದ್ದುದು. ಕೊನೆಯ ವಿಶೇಷವೆಂದರೆಃ ಬ್ರಹ್ಮಚಾರಿಯಾದ, ರಾಮಾಯಣ ಖ್ಯಾತಿಯ ಹನುಮಂತನ ವೇಷ ತೊಟ್ಟು ಪ್ರಶ್ನೆ ನಿಂತಿದ್ದುದು. ಆ ಅಪ-ರೂಪದಲ್ಲಿ ಪ್ರಶ್ನೆ ನೇರವಾಗಿ ಅತ್ಯಂತ ಬರಪೀಡಿತವಾದ ಸೊಮಾಲಿಯನ್ ಹನು-ಮ್ಯಾನನಂತೆ ಕಾಣುತ್ತಿದ್ದ. ರವಿವರ್ಮ, ಎಂ.ಟಿ.ವಿ.ಆಚಾರ್ಯ ಮತ್ತು ಎಸ್.ಎಂ.ಪಂಡಿತರು ರಚಿಸಿರುವ ಹನುಮಂತರ ಚಿತ್ರಗಳು ಹತ್ತಾರು ಪ್ಯಾಕ್‍ಗಳುಳ್ಳ ಬಲಭೀಮನಂತಿದ್ದರೆ, ಪ್ರಶ್ನಾಮೂರ್ತಿ ಋಷಿಮುನಿಗಳ ಆಶ್ರಮದಲ್ಲಿ, ಕಾಲಕಾಲಕ್ಕೆ ಉಟತಿಂಡಿಯಿಲ್ಲದೆ ಅಥವ ಕಾಲಾಪಾನಿ ಶಿಕ್ಷೆಗೊಳಗಾಗಿ ಆಕಸ್ಮಿಕವಾಗಿ ತಪ್ಪಿಸಿಕೊಂಡು, ಬದುಕಿಬಂದ ನರಪೇತಲ ಸ್ಟಿಕ್-ಫಿಗರ್ ಆಗಿಯೊ ಕಾಣುತ್ತಿದ್ದ. ಹೊಳೆವ ನೀಲಿ ಚಡ್ಡಿ ತೊಟ್ಟು (ಉಪೇಂದ್ರರ "H20" ಸಿನೆಮದಲ್ಲಿ "ಹೂವೆ ಹೂವೆ" ಎಂದು ಹಾಡುವ ನಾಯಕಿ ಧರಿಸಿರುತ್ತಾಳಲ್ಲ ಅಂತಹದ್ದು), ಮುಖಕ್ಕೆ ಸೋಪನ್ನು ಇಡಲು ಬಳಸುವ ಕೆಂಪನೆ ಬಣ್ಣದ ಪ್ಲಾಸ್ಟಿಕ್ ಹಿಡಿಗೆ ಅತ್ತಿತ್ತ ತೂತುಮಾಡಿ, ದಾರ ಪೋಣಿಸಿ ಉಬ್ಬಿದ ಬಾಯಿಯನ್ನಾಗಿ ಅದನ್ನು ಕಟ್ಟಿಕೊಂಡಿದ್ದ. ಅದರಲ್ಲಿನ ಸೋಪಿನ ಪುಡಿಯನ್ನು ಸರಿಯಾಗಿ ತೊಳೆದಿರಲಿಲ್ಲವೆಂದು ಕಾಣುತ್ತದೆ, ಆದ್ದರಿಂದ ಆಗಾಗ ಸೀನುತ್ತಿದ್ದ. "ಈ ಎಕ್ಸ್-ಟ್ರಾ ಫಿಟ್ಟಿಂಗ್ ಸೋಪಿನ ಬಾಕ್ಸ್ ಎಲ್ಲ ಏಕೆ ಬೇಕಿತ್ತು. ಸಹಜವಾಗಿ ನಿನ್ನ ತದ್ರೂಪವೇ ಹನುಮನಲ್ಲವೆ!" ಎಂದು ಕಾಂಪ್ಲಿಮೆಂಟ್ ಬೇರೆ ನೀಡಿಬಿಟ್ಟಿದ್ದ ಮಾಮ.

     ಎಲ್ಲರೂ ತಿಂಡಿ ತಿಂದು, ತಿಂದ ತಪ್ಪಿಗೆ ’ಕಬ್ಬನ್‍ಪಾರ್ಕಿನವರೆಗೂ ಯಾವನಪ್ಪ ಹೋಗೋದು’ ಎಂದುಕೊಳ್ಳುತ್ತಿರುವಾಗ ಅಂತಹವರುಗಳಿಗೆಲ್ಲ ಅಮೃತವಾಣಿಯಾಗಿ ಬಂದಿತು ಮಾಮನ ಮಾತುಗಳುಃ

     "ದಯವಿಟ್ಟು ಯಾರೂ ಬರಬಾರದು ಪಾರ್ಕಿಗೆ. ಶೂಟಿಂಗ್ ತೊಂದರೆಯಾಗುತ್ತದೆ. ಅದೊಂದು ಆತ್ಮೀಯ ಶಾಟ್. ತಾನು ಲೈನ್ ಹೊಡೆಯಬೇಕಿರುವ ಹುಡುಗಿಯ ಅಣ್ಣನಿಗೆ ತನ್ನ ಆಸೆಯನ್ನು ಹೇಳಿಕೊಳ್ಳುವ ಅಪರೂಪದ ವೈಯಕ್ತಿಕ, ಪರ್ಸನಲ್ ದೃಶ್ಯವದು. ಅಂತಲ್ಲಿ ಬೇರೆಯವರೆಲ್ಲ, ಶೂಟಿಂಗ್ ನೋಡುವ ನೆಪದಲ್ಲಿ ಕತ್ತೆ-ಕುದುರೆ-ನಾಯಿಗಳೆಲ್ಲ, ನನ್ನ ಮೊದಲ ನಿರ್ದೇಶನದ ಮೊದಲ ಶಾಟಿನಲ್ಲೇ ಮುಖ ತೋರಿಸಿವುದು ನನಗಿಷ್ಟವಿಲ್ಲ. ಯಾವ ಹಲ್ಕಾ** **ಅಲ್ಲಿ ಬರಬೇಕಿಲ್ಲ. ತಿಂದಿದ್ದಾಯ್ತಲ್ಲ, ಇನ್ನು ಮನೇಗೋಗಿ. ನಿಮ್ಮ ಆಶೀರ್ವಾದ ನಮ್ಮ ಮೇಲಿರಲಿ, ಅಷ್ಟೇ" ಎಂದುಬಿಟ್ಟ ಮಾಮ!

     ಪಾರ್ಕಿಗೆ ಹೋಗುವ ಮೂಲಕ ಯಾರಿಗೂ ಕತ್ತೆ-ಕುದುರೆ-ನಾಯಿಗಳಾಗುವ, ’ಹಲ್ಕಾ** **’ ಅನ್ನಿಸಿಕೊಳ್ಳುವ ಆಸೆಯಿಲ್ಲದೆ ಎಲ್ಲರೂ ಬೇರೆಲ್ಲಿಗೋ ದೌಡಾಯಿಸಿದರು. "ನೀನು ಹೇಳುವುದರಲ್ಲೂ ಸತ್ಯವಿದೆ ಮಾಮ" ಎಂದರು ಸೋಂಬೇರಿಗಳೆಲ್ಲ. ನಾನು, ಮಾಮ, ’ಬೇರೆಯವರ-ಖೆಡ್ಡದಲ್ಲಿ-ಮತ್ಯಾರೋ ಬಿದ್ದವರು’ ಮತ್ತು ಬೀಳದವರು, ಕ್ಯಾಮರ, ಕೆಲವು ತಾಂತ್ರಿಕ ಸಲಕರಣೆಗಳು, ಇತ್ಯಾದಿಗಳೊಂದಿಗೆ ಕಾರ್ ಹತ್ತಿದೆವು.

     ಮಧ್ಯಾಹ್ನ ಸರಿಯಾಗಿ ಹನ್ನೆರೆಡು ಗಂಟೆಗೆ ಪಾರ್ಕಿಗೆ ಬಂದೆವು. ಯಾರಿಲ್ಲದಿದ್ದರೂ ಪ್ರಶ್ನಾಮೂರ್ತಿಗೆ ಚೌಚೌಬಾತ್ ಮಾಡಿಕೊಟ್ಟಿದ್ದ ಅವರ ಊರಿನವರೊಂದತ್ತು ಮಂದಿ ಅಲ್ಲಿ ಜಮಾಯಿಸಿಬಿಟ್ಟಿದ್ದರು. "ನನ್ನ ಜೀವನದ ಮೊದಲ ಸೀರಿಯಲ್ಲಿನ, ಪ್ರಥಮ ನಿರ್ದೇಶನದ, ಆರಂಭದ ಶಾಟಿನಲ್ಲಿ ಹನುಮಂತನಂತಿರುವ-ನಿನ್ನ ನೆಂಟರ ಮೊತಿಗಳು ಬರುವುದು ನನಗೆ ಸುತಾರಾಂ, ಬಿಲ್‍ಕುಲ್ ಇಷ್ಟವಿಲ್ಲ. ನೀನು ಕಪಿಯಾದೆ ಅಂತ ನಿಮ್ಮ ನೆಂಟರಿಷ್ಟರನ್ನೆಲ್ಲ ಯಾಕೆ ಮಂಗಗಳನ್ನಾಗಿಸುತ್ತೀಯ" ಎಂದು ನಿರ್ದೇಶಕ ಮಾಮ ಕೂಗಾಡಿದ.

     ಪ್ರಶ್ನಾಮೂರ್ತಿ ಅವರುಗಳಿಗೆಲ್ಲ ಹನುಮಾವತಾರದಲ್ಲೇ ಏನೇನೋ ಹೇಳುತ್ತಿದ್ದ. "ಎಷ್ಟು ಸಂದಾಕೈತೆ ನಿನ್ ಕಪಿಮೂತಿ. ತುಂಬ ಚೆನ್ನಾಗಿ ಕಾಣ್ತಿದೀಯ ಮಗಾ" ಅಂತ ಮುದುಕಮ್ಮಳೊಬ್ಬಳು ಪ್ರಶ್ನೆಯ ಮೊತಿಯೆಂಬ ಮೈಸೋಪಿನ ಕೆಂಪನೆ ಡಬ್ಬವನ್ನು ಕೈಗಳಲ್ಲಿ ಹಿಡಿದು ಮುದ್ದಾಡಿದಳು. ನೆಟಿಕೆ ತೆಗೆದಳು. ಕೊನೆಗೂ ಪ್ರಶ್ನೆ ಅವರುಗಳನ್ನು ಸಾಗಹಾಕಿದ. ಆತನ ಕೊನೆಯ ವಾಕ್ಯ ಕಿವಿಗೆ ಬಿತ್ತು, "ಎಂಗೂ ಸ್ಕ್ರೀನ್ ಮೇಲೆ ಬಂದಾಗ ನೋಡೀವ್ರಂತೆ. ನನ್ನ ಗುರ್ತು ಹಿಡ್ದೇ ಹಿಡೀತೀರ. ಜಪ್ತಿ ಮಡಿಕ್ಕಂಡಿರಿ, ಕಪಿ ಅವ್ತಾರ ನಂದು" ಎಂದು! ಅವರೆಲ್ಲ ಕಬ್ಬನ್‍ಪಾರ್ಕ್ ಸುತ್ತಾಡಲು ಹೊರಟೇಬಿಟ್ಟರು.

(೯೫)

     ಶೂಟಿಂಗ್ ಶುರುವಾಯ್ತು. "ಕ್ಯಾಮರಗಳು ಮೊರಿವೆ. ಒಂದು ಚಲಿಸುವ ಕಾರಿನಲ್ಲಿರುತ್ತದೆ. ಉಳಿದ ಎರಡು ಮರಗಳ ನಡುವೆ. ಅವು ಎಲ್ಲಿವೆ ಅಂತ ನಿನಗೆ ಹೇಳೋಲ್ಲ. ನ್ಯಾಚುರಲ್ ಆಗಿರಬೇಕು ಶಾಟ್. ನೀನು ಕಪಿಪಾತ್ರವೇ ಹೊರತು ಕಪಿಯಲ್ಲವಲ್ಲ. ಕ್ಯಾಮರ ಎಲ್ಲಿದೆ ಅಂತ ಗೊತ್ತಾಗಿಬಿಟ್ರೆ ಅದನ್ನೇ ಪಿಳಿಪಿಳೀ ಅಂತ ನೋಡ್ತಿರ್ತೀಯ. ತುಂಬ ನ್ಯಾಚುರಲ್ ಆಗಿ, ಮನಃಪೂರ್ವಕವಾಗಿ, ಬೇಕಾದರೆ ಕಣ್ಣುಮುಚ್ಚಿ ಅಭಿನಯಿಸಿಬಿಡು ಪ್ರಶ್ನೆ. ನಿನಗೆ ಅದ್ಭುತ ಭವಿಷ್ಯವಿದೆ. ಆಲ್ ದ ಬೆಸ್ಟ್. ಸುಮ್ನೆ ಕಣ್ಣುಮುಚ್ಚಿ ಅಭಿನಯಿಸಿಬಿಡು" ಎಂದ ಮಾಮ. "ಹ್ಞೂಂ ಮಾಮ. ಕಣ್ಣುಮುಚ್ಚಿ, ಬಿಡುವಷ್ಟರಲ್ಲೇ ಅಭಿನಯಿಸಿಬಿಡ್ತೇನೆ ನೋಡ್ತಿರು" ಎಂದ ಪ್ರಶ್ನೆ.

     ದೃಶ್ಯ ಅದೆಶಾಟ್ , ಟೇಕ್ ೧ಃ ಕಪಿರೂಪಿ ಪ್ರಶ್ನೆ ಮತ್ತು ಜ್ಯೂಸ್ ಮುರುಳಿ ಇಬ್ಬರೂ ಕಬ್ಬನ್‍ಪಾರ್ಕೊಂದರ ಮರದ ಸುತ್ತ ನಡೆದು ಬರುತ್ತಿರುತ್ತಾರೆ. ಮುರುಳಿಯ ತಂಗಿಯನ್ನು ಪ್ರೀತಿಸುವುದಾಗಿ ಪ್ರಶ್ನೆ. ಉತ್ತರ ಸಿಟ್ಟು. ಮುರುಳಿ ಮಾಮನಿಂದ ಕಲಿತ ಪಟ್ಟಿನಿಂದ ಈಗಾಗಲೇ ಕುಂಟಾಗಿದ್ದ ಕಪಿಪ್ರಶ್ನೆಗೆ ಆತನ ಮೊಣಕಾಲಿನ ಸ್ವಲ್ಪ ಮೇಲೆ, ಹಿಂಬದಿಯಿಂದ ಜಾಡಿಸಿ ಹೊಡೆವುದು. ಈಗಾಗಲೇ ಕುಂಟುತ್ತಿದ್ದ ಕಪಿಪ್ರಶ್ನೆ ಮತ್ತೂ ಕುಂಟತ್ತ ತೀರ ಬಾಗಿದ ಮರವೊಂದನ್ನು ಹತ್ತಬೇಕು, ಮುರುಳಿಯಿಂದ ತಪ್ಪಿಸಿಕೊಂಡು. ಆದರೆ ಮುರುಳಿ ತಪ್ಪಿ, ತಪ್ಪು ಕಾಲಿಗೆ ಒದ್ದದ್ದರಿಂದ ಎರಡೂ ಕಾಲುಗಳು ಕುಂಟಾದಂತಾಗಿ, ಪ್ರಶ್ನೆಯ ಎರಡೂ ವಕ್ರ ನಡೆಗಳು ಸೇರಿ, ನೇರ ನಡೆಯಾಗಿಹೋಯ್ತು. ಅಷ್ಟರಲ್ಲಿ ಸಿಕ್ಕಸಿಕ್ಕಂತೆಲ್ಲ, ಸಿಕ್ಕಸಿಕ್ಕಲ್ಲೆಲ್ಲ ಮುರುಳಿ ಆತನಿಗೆ ಒದೆಯುತ್ತಿರಲೇಬೇಕು. ಮಾಮನ ಆದೇಶದಂತೆ ಮುರುಳಿ ಮೊದಲ ಹೊಡೆತ ಜೋರಾಗಿ ಕೊಟ್ಟರೂ ಪ್ರಶ್ನೆ ಆತನಿಗೆ ಕೊಡಿಸಿದ್ದ ಕಾಫಿತಿಂಡಿಗಳ ದಯದಿಂದ ಆಮೇಲೆ ತೀರ ಲಘುವಾಗಿ ಒದ್ದ.

     ಹಾಗೂ ಹೀಗೂ ಐದಾರಡಿ ಮರ ಹತ್ತಿಬಿಟ್ಟ, ಬಾಲಮುದುರಿಕೊಂಡ ಪ್ರಶ್ನೆ, ಮುರುಳಿಗೆ ಹೆದರಿಕೊಂಡವನಂತೆ ನಟಿಸುತ್ತ. ಕೊಂಬೆಯೊಂದರಿಂದ ತಲೆ ಕೈಗಳನ್ನು ಈಚೆ ಹಾಕಿ ಕಣ್ಮುಚ್ಚಿಕೊಂಡು ಜೋರಾಗಿ ಕೈಯಲ್ಲಿರುವ ಕರಪತ್ರವನ್ನು ಎಲ್ಲ ದಿಕ್ಕಿನಲ್ಲೂ ಎಸೆಯುತ್ತ, ಕಣ್ತೆರೆಯದೆಯೇ ಆತ ಮೊರು ನಿಮಿಷ ಕಿರುಚುತ್ತಿರಬೇಕು ಕನ್ನಡ ಮತ್ತು ತಮಿಳಿನಲ್ಲಿ. ಸುಮಾರು ಆರಿಂಚು ಆರಿಂಚು ಅಳತೆಯ ಕರಪತ್ರದಲ್ಲಿ ನಾನು ಕಪಿರೂಪಿ ಪ್ರಶ್ನೆ. ಪ್ರಶ್ನಾಕಾರದ ಕಪಿ, ಮಾನವನ ಮೊಲಪುರುಷ. ನನಗಲ್ಲದೆ ಮತ್ಯಾರಿಗೂ ಹೆಣ್ಣು ಸಿಗಬಾರದು’ ಎಂದು ನೂರಾರು ಪತ್ರಗಳಲ್ಲಿ ಹಿಂದಿನ ರಾತ್ರಿಯೆಲ್ಲ ನಿದ್ರೆಗೆಟ್ಟು ಹಲವು ಜ್ಯೂನಿಯರ‍್ಗಳ ಕೈಲಿ ಬರೆಸಿದ್ದ ಮಾಮ. "ಮೊರು ನಿಮಿಷವಲ್ಲ, ನೂರು ನಿಮಿಷವಾದರು ನಾನು ಕಟ್ ಎಂದು ಹೇಳುವವರೆಗೂ ನೀನು ಕಣ್ತೆರೆಯುವಂತಿಲ್ಲ" ಎಂದೂ ಹೇಳಿಬಿಟ್ಟಿದ್ದ ಡೈರೆಕ್ಟರ್ ಮಾಮ, ಅಡಿಕ್ಕಿರೆ ಪಾರ್  ಮೊಂಜಿಲೆ ಒರು ಆಂಜನೇಯ, ನೀ ತೂಂಗು ನಾ ಪೋಯಿಟುವರೆ ಡೇ ಪೈಯ ಎಂಬುದನ್ನು ಗಾಯತ್ರಿ ಮಂತ್ರದಂತೆ ಹೇಳುತ್ತಿರಬೇಕು. ಅಣ್ಣಾವ್ರು "ಮಯೂರ" ಸಿನೆಮದಲ್ಲಿ ಉದ್ದುದ್ದ ಡೈಲಾಗನ್ನು ಅಸ್ಖಲಿತವಾಗಿ ಹೊಡೆವ ಸೀನು, ನಿಮ್ಮ ಶಿವಾಜಿ ಗಣೇಶನ್ "ಆದಿಪರಾಶಕ್ತಿ"ಯಲ್ಲಿ ಹೊಡೆವ ಮೈಲುದ್ದದ ಡೈಲಾಗ್ ನೆನೆಸಿಕೊ. ನಟನಾಗಿ ನಿನಗೆ ಇದು ಮೊದಲ ಶಾಟ್ ಆದರೆ ನಿರ್ದೇಶಕನಾಗಿ ಇದು ನನ್ನ ಜೀವನದ ಮೊದಲ ಶಾಟ್. ಏನಾದ್ರೂ ಹೆಚ್ಚೂಕಡಿಮೆ ಮಾಡ್ದೇ ಅಂದ್ರೆ, ಮರದಿಂದ ಕೆಳಕ್ಕೆ ನೀನು ಇಳಿಯೋಕ್ ಬಿಡೋಲ್ಲ, ಅಪ್ಪಿತಪ್ಪೀನೂ ನಿನ್ನ ಬಾಲ ಕತ್ತರಿಸೋಕೆ ಬಿಡಲ್ಲ", ಎಂದು ಹೆದರಿಸಿ ಹಿಪ್ಪಿಗಾಯಿ ಮಾಡಿಬಿಟ್ಟಿದ್ದ. "ಮೊದಲ ಶಾಟ್ ತೆಗೆವ ಮುನ್ನ ಸ್ವಲ್ಪ ರೀಸಸ್ ಮಾಡಬೇಕು, ಅರ್ಜೆಂಟು" ಎಂದು ಮನಃಪೂರ್ವಕವಾಗಿ ತನ್ನ ದೇಹದ ಒತ್ತಡವು, ಈ ಮಾತುಗಳೊಂದಿಗೆ ಬಾಡಿಯ ಒಳಗೇ ಇಮರಿ ಹೋದವು ಪ್ರಶ್ನೆಗೆ, ಗಾಭರಿಯಲ್ಲಿ.

(೯೬)

     ನಿಜಕ್ಕೂ ಅದ್ಭುತ ತನ್ಮಯತೆಯಿಂದ, ಸುದೀರ್ಘವಾಗಿ ಅಭಿನಯಿಸಿದ ಪ್ರಶ್ನಾಮೂರ್ತಿ. ಕನ್ನಡನಾಡಿನ ರಾಜಕೀಯ ಶಕ್ತಿಯ ಸಂಕೇತವಾದ ವಿಧಾನಸೌಧದ ಸಮೀಪವೇ ಪ್ರಶ್ನೆ ಬಾಯಿಂದ ಹತ್ತುಹಲವು ಬಾರಿ ಉದುರಿದ ತಮಿಳುವಾಕ್ಯಕ್ಕೆ ಸಂಪೂರ್ಣ ಅರ್ಥ ಇಂದಿಗೂ ಯಾರಿಗೂ ತಿಳಿದಿಲ್ಲ, ಆ ಸೌಧದ ಒಳಗಿನವರಿಗೆ ಮತ್ತು ಹೊರಗಿನವರಿಗೆ. ಮುರುಳಿಯನ್ನು ಮೊದಲಿಸುವುದಷ್ಟೇ ಆ ’ಮೊದಲ ಶಾಟ್’ನ ಉದ್ದೇಶ. ಕೋರ್ಟ್ ಪಕ್ಕದ ಕಬ್ಬನ್ ಪಾರ್ಕಿನ ಒಳಗಿನ ರಸ್ತೆಯ ಬದಿಗಿದ್ದ ಮರ, ಮರದ ಮೇಲೆ ವಿಚಿತ್ರವಾಗಿ ಉಡುಪು ಧರಿಸಿದಾತ (’ಕಪಿಯೊಂದು ಪ್ರಶ್ನೆಯ ಶೇಪಿನಲ್ಲಿತ್ತು’ ಎಂದು ಕೆಲವರು ಭಾವಿಸಿದರು) ಗಟ್ಟಿಯಾಗಿ ಕಣ್ಮುಚ್ಚಿ, ತನ್ಮಯನಾಗಿ ಅರ್ಥವಾಗದ ತಮಿಳಿನಲ್ಲಿ ಒಂದೇ ವಾಕ್ಯವನ್ನು ಕೂಗುತ್ತ, ಕಾಗದವನ್ನು ಚೆಲ್ಲಾಡುತ್ತ (ನಾನು ಕಪಿರೂಪಿ ಪ್ರಶ್ನೆ. ಪ್ರಶ್ನಾಕಾರದ ಕಪಿ, ಮಾನವನ ಮೊಲಪುರುಷ. ನನಗಲ್ಲದೆ ಮತ್ಯಾರಿಗೂ ಹೆಣ್ಣು ಸಿಗಬಾರದು’), ಎಲ್ಲರಿಗೂ ಆತನ ಬಗ್ಗೆ ಅನ್ನಿಸಿದ್ದನ್ನೇ ಆ ಪಾಂಪ್ಲೆಂಟ್‍ಗಳಲ್ಲೂ ಇರುವುದನ್ನು ಎಲ್ಲರೂ ನೋಡಿದರು. ಗಾಡಿ, ಕಾರು, ಸೈಕಲ್, ಬೈಕ್‍ಗಳಲ್ಲಿ ಓಡಾಡುವವರೆಲ್ಲ ನಿಲ್ಲಿಸಿ ನೋಡಿದರು. ಕೆಲವರು ಸ್ಟಾಂಡ್ ಹಾಕಿ ಮರದ ಕೆಳಕ್ಕೆ ಬಂದು, ಬೇರೆ ಆಂಗಲ್ಲಿನಿಂದ ನೋಡಿದರು. ಹತ್ತಿರಕ್ಕೆ ಬಂದ ಪೇದೆಯೊಬ್ಬ ಕರ್ತವ್ಯವಿಮುಖನಾಗಿ ನೋಡತೊಡಗಿದ. ಕಡ್ಲೆಕಾಯಿ ಮಾರುವವರು, ಲಾಯರ್‍ಗಳೆಲ್ಲ ನೊಡಿದರು.

     ಆದರೆ ಕೊನೆಗೆ-ಸುಮಾರು ಇಪ್ಪತ್ತೈದು ನಿಮಿಷದ ನಂತರ ಪ್ರಶ್ನೆಯನ್ನು ಸರಿಯಾಗಿ ಅರ್ಥಮಾಡಿಕೊಂಡವರೊಬ್ಬರು ’ಏಯ್ ಹುಚ್ಚ, ಇಳಿ ಕೆಳಕ್ಕೆ’ ಎಂದು ಆತನಿಗೆ ಕೇಳುವಂತೆ ಹತ್ತಿರ ಬಂದು ಸಣ್ಣ ಕಲ್ಲೊಂದನ್ನು ಆತನೆಡೆ ಎಸೆದರು. ಗಾಭರಿಯಾದ ಪ್ರಶ್ನೆ ಕಣ್ತೆರೆದು, "ನಾನು ಹುಚ್ಚನಲ್ಲ, ಕಪಿರೂಪದ ಪ್ರಶ್ನೆ, ಪ್ರಶ್ನಾರೂಪದ ಕಪಿ, ಮಾನವನ ಮೊಲಪುರುಷ.." ಎಂದು ಕೊನೆಯ ಬಾರಿಗೆ ಹೇಳಿ ಬಾಯ್ಮುಚ್ಚಿದ, ಕೆಳಗೆ ನೊಡಿದ.

     ಈ ಹೊತ್ತಿಗೂ ನಾನು, ಮಾಮ, ಪ್ರಶ್ನೆ, ಬಿಗ್-ಡ್ಯಾಡಿ, ಕಲ್ಪನಕ್ಕ ಎಲ್ಲರೂ ಒಟ್ಟಿಗೆ ಸಿಕ್ಕಾಗಲೆಲ್ಲ ಕಲ್ಪಿಸಿಕೊಳ್ಳಲು ಪ್ರಯತ್ನಿಸುವುದೊಂದೇ. ಆಗ ಪ್ರಶ್ನೆಗೆ ಮರದ ಮೇಲಿನ ಆ ಆಂಗಲ್ಲಿನಿಂದ ಕೆಳಗೆ ನೋಡಿದಾಗ ಕಂಡದ್ದೇನು? ಎಂದು!

(೯೭)

    ಅಂದು ನಡೆದ ಘಟನೆಯು ಪ್ರಶ್ನಾಮೊರ್ತಿಯ ದಡ್ಡತನದ ಚರಮಗೀತೆ. ’ಏಯ್ ಹುಚ್ಚ, ಇಳಿ ಕೆಳಕ್ಕೆ’ ಎಂಬ ಧ್ವನಿ ಕೇಳಿದ ಕೂಡಲೆ ಆತನಿಗಾದ ಅನುಭವವನ್ನು ಅವನ ಮಾತುಗಳಲ್ಲೇ ಕೇಳಿಃ

     "ಕಣ್ ಬಿಟ್ಟು ನೋಡ್ತೀನಿ. ಕೆಳಗೆ ನನಗೆ ಮೊದಲು ಕಾಣಿಸಿದ್ದು, ಮರದ ಬುಡಕ್ಕೆ ಒರಗಿಸಿದ್ದ ಥರ್ಮೊಕೋಲ್‍ನಿಂದ ತಯಾರಿಸಿ, ಚಿನ್ನಾರಿ ಪೇಪರ್ ಅಂಟಿಸಿದ್ದ ನನ್ನ ಹನುಮಾನ್-ಗದೆ. ಒಬ್ಬ ಪ್ಯಾದೆ ಮತ್ತು ಒಂದಿಬ್ಬರು ಲಾಯರ‍್ಗಳು. ಸುತ್ತಲೂ ಕಬ್ಬನ್‍ಪಾರ್ಕಿಗೆ ಪಿಕ್‍ನಿಕ್ಕಿಗಾಗಿ ಬಂದಿದ್ದ ಕೆಲವು ಸಂಸಾರಗಳು, ಅವರ ಮಕ್ಕಳು. ಎಲ್ಲರೂ ನನ್ನನ್ನು ಯಾವುದೋ ಕಪಿ ನೋಡಿದಂಗೆ ನೋಡ್ತಿದ್ದಾರೆ. ಮಾಮನ ಮೇಧಾವಿತನ ನನಗೆ ಅರ್ಥವಾಗಿದ್ದೂ ಆಗಲೇ. ನನಗೆ ಕಣ್ಣುಮುಚ್ಚಿಕೊಳ್ಳಲು ಹೇಳಿ, ಇವರನ್ನೆಲ್ಲ ಸೀರಿಯಲ್ಲಿನ ಭಾಗವಾಗಿಸಿಬಿಟ್ಟಿದ್ದಾನಲ್ಲ, ವಾರೆವಾ ಅಂದುಕೊಂಡೆ! ಆದ್ರೆ ಮಾಮ ಎಲ್ಲಿ ಕಾಣ್ತಲೇ ಇಲ್ಲವಲ್ಲ?! ಎಂದೂ ಯೋಚಿಸಿದೆ. ಮರದ ಸುತ್ತಲೂ ನೋಡಿದರೆ, ಥರ್ಮೊಕೋಲ್ ಹಾಳೆಗಳಿಗೆ ಅಂಟಿಸಿದ್ದ ರೆಫ್ಲೆಕ್ಟರ‍್ಗಳನ್ನು ಚಿಂದಿ ಆಯುವವರು ಎತ್ತಿಕೊಂಡು ಹೋಗುತ್ತಿದ್ದಾರೆ. ನಾನವರನ್ನು ’ಏಯ್ ಬಿಡ್ರೋ. ಅದು ನಮ್ದು’ ಎಂದು ಓಡಿಸಿಕೊಂಡು ಹೋದೆ. ದೊಡ್ಡವರೆಲ್ಲ ನಗತೊಡಗಿದರು. ಮಕ್ಕಳೆಲ್ಲ ಕೇಕೇ ಹಾಕಿ ನನ್ನ ಬಾಲ ಹಿಡಿಯಲು ನನ್ನ ಕಡೆಗೇ ಬಂದರು. "ನಿಮ್ದು ಅಲ್ಲ ಕಣೋ. ನಿಂದೂ ಅನ್ನು" ಎಂದ ಚಿಂದಿ ಆಯುವ ಚೂಟಿ ಹುಡುಗನೊಬ್ಬ ಅದೇ ಥರ್ಮೊಕೋಲ್ ಚಿನ್ನಾರಿ ಹಾಳೆಯ ಬೋರ್ಡಿನಿಂದ ನನ್ನ ಹೋಡೆಯುವಂತೆ ಮುಂದೆ ಬಂದ. ಅಷ್ಟರಲ್ಲಿ ನನ್ನ ಬಾಲವನ್ನು ಯಾರೋ ಹಿಡಿದು ಎಳೆದು ಹಾಕಿದರು. ನನ್ನ ಹನುಮಾನ್ ಚೆಡ್ದಿ ಅರ್ಧ ಲೂಸಾಯಿತು, ಒಳ‍ಉಡುಪು ಕಾಣುವಷ್ಟು..."

     "ಆಮೇಲೆ ಏನು ಮಾಡಿದೆ ಪ್ರಶ್ನೆ?" ಎಂದು ಮಾರನೇ ದಿನ ಪರಿಷತ್ತಿನ ಕ್ಯಾಂಟೀನಿನ ಬಳಿ ತನ್ನ ಖರ್ಚಿನಲ್ಲೇ ಆತನಿಗೆ ತಿಂಡಿ-ಕಾಫಿ ಕೊಡಿಸುತ್ತ ಮಾಮ ಕೇಳಿದ.

     "ಬೋ*ಮಕ್ಳ. ನೀವ್ಯಾರೂ ಅಲ್ಲಿರಲಿಲ್ಲ. ಕ್ಯಾಮರಾನೂ ಇಲ್ಲ, ಶೂಟಿಂಗೂ ಇಲ್ಲ. ನನಗೆ ತುಂಬಾ ಕ್ಲೋಸ್ ಅಂತ ನನಗೆ ನಾನೇ ಅಂದುಕೊಂಡುಬಿಟ್ಟಿದ್ದ ಕಲ್ಪನಕ್ಕ ಮತ್ತು ಬಿಗ್-ಡ್ಯಾಡಿ ನೆನ್ನೆ ಶೂಟಿಂಗಿಗೆ ಬರಲಾಗುವುದಿಲ್ಲ ಅಂತ ತಪ್ಪಿಸಿಕೊಂಡಾಗಲೇ ನಾನು ಅರ್ಥ ಮಾಡಿಕೊಂಡುಬಿಡಬೇಕಿತ್ತು -- ಇಡೀ ಶೂಟಿಂಗೇ ಸುಳ್ಳು ಅಂತ!!" ಎಂದುಬಿಟ್ಟ.

     "ಆಮೇಲೇನು ಮಾಡಿದೆ?" ಮಾಮ.

     "ಮಾಡೋದ್ ಏನು. ನನ್ನ ಅಸಲಿ ಬಟ್ಟೆಯೆಲ್ಲ ನಿಮ್ಮ ಕಾರಿನಲ್ಲೇ ಇತ್ತಲ್ಲ, ಹೇಗಿದ್ದರೂ ಶೂಟಿಂಗ್ ಆದ್ಮೇಲೆ ಕಾರಲ್ಲೇ ಕಾಲೇಜಿಗೆ ವಾಪಸ್ ಅಂದುಕೊಂಡು? ಬಾಲವಿಲ್ಲದ ಹನುಮನಾದ್ದರಿಂದ ಅಲ್ಲೇ ಕಲ್ಲಿನ ಬೆಂಚಿನ ಮೇಲೆ ಕುಳಿತುಕೊಳ್ಳಲು ಸುಲಭವಾಯ್ತು. ಕಬ್ಬನ್‍ಪಾರ್ಕಿನೊಳಕ್ಕೆ ಆಟೋ ಬರೋದಿಲ್ಲ. ವಿಧಾನಸೌಧದ ಸರ್ಕಲ್ಲಿನವರೆಗೂ ನಡೆದುಕೊಂಡು ಹೋದು. ಹಿಂದೆ ಮಕ್ಕಳು, ಚಿಂದಿಬಟ್ಟೆಯವರ ದಂಡು. ಸರ್ಕಲ್ ಹತ್ತಿರ ಟ್ರಾಫಿಕ್ ಪೋಲೀಸು ನನ್ನನ್ನು ಕಂಡು, "ಹನುಮಾನ್ ಸಾಹೇಬ್ರೆ, ಆಟೋ ಎಲ್ಲಿಗೆ ಬೇಕು? ಲಂಕೆಗೆ ಹೋಗಲಿಕ್ಕಾ?" ಎಂದು ತಮಾಷೆ ಮಾಡಿಬಿಟ್ಟ. ಮತ್ತೆ ವಾಪಸ್ ಕಬ್ಬನ್ ಪಾರ್ಕಿನ ಬೆಂಚಿನ ಮೇಲಕ್ಕೆ ಬಂದೆ. ಕತ್ತಲಾಗುವವರೆಗೂ ಕೂತಿದ್ದೆ. ಜೇಬಲ್ಲಿ ಕಾಸಿರೋದಿರ್ಲಿ, ಜೇಬೇ ಇರ್ಲಿಲ್ಲವಲ್ಲ, ಹನುಮಾನ್ ಚೆಡ್ಡಿಗೆ! ಕತ್ತಲಾದ ಮೇಲೆ, ಆಟೋ ಹಿಡಿದೆ ಶ್ರೀರಾಮಪುರದ ನಮ್ಮ ಮನೆಗೆ. "ಯಾವ ಕಂಪನಿ ಸಾ" ಎಂದ ಆಟೋದವ. "ನಾನು ಕಾಲೇಜು ಸ್ಟೂಡೆಂಟ್ ಕಣಯ್ಯ" ಎಂದೆ. "ನೋಡಿದ್ರೆ ನಿಜಾ ಅನ್ಸುತ್ತೆ ಬಿಡಿ," ಎಂದು ಮುಂದುವರೆಸಿದ, "ಈಗಿನ್ ಕಾಲ್ದಲ್ಲಿ ನಿಮ್ ಈ ವೇಸಾನ ಕಾಲೇಜು ವಿದ್ಯಾರ್ಥಿಗಳಿಗೆ ನೀಲೀಫಾರ್ಮ್ ಮಾಡ್ಬಿಟ್ರೆ ಅವ್ರಿಗ್ ತಕ್ಕಂತಿರುತ್ತೆ ಬಿಡಿ ಸಾ. ಈಗೇನ್ ನೈಟ್ ಕಾಲೇಜಿಗೆ ಹೊಂಟಿದ್ರಾ?" ಎಂದು ಹೇಳಿದ. ಅವ್ನು ಗಂಭೀರವಾಗಿ ಹೇಳ್ತಿದ್ದಾನ, ತಮಾಷೆ ಮಾಡ್ತಿದಾನ ಅಂತ ಗೊತ್ತಿಲ್ದೆ ಅವ್ನ ಮೇಲೆ ಸಿಟ್ ಬಂತು. ಈ ವೇಷದಲ್ಲಿ ನಾನು ಇಲ್ದೇ ಇದ್ದಿದ್ರೆ ದೇವ್ರಾಣೆ ಮನೇ ಹತ್ರ ಇಳಿದು ಯಾವ್ದಾದ್ರೂ ಓಣೀಲಿ ಓಡಿ, ಇವ್ನಿಗೆ ಕಾಸುಕೊಡ್ದೆ ಚಳ್ಳೆಹಣ್ಣು ತಿನ್ನಿಸ್ತಿದ್ದೆ. ಆಟೋದೋರ್ಗೆ ಬೆಂಗ್ಳೂರಲ್ಲಿ ಮೋಸ ಮಾಡಿದ್ರೆ ಯಾವ ಪಾಪಾನೂ ಸುತ್ತಿಕೊಳ್ಳೋಲ್ಲ ಬಿಡು" ಎಂದ.

     "ಮಗ್ನೆ, ನಿನ್ನ ಇಂತಹ ನೀಚಬುದ್ದಿ, ಜಿಪುಣತನ, ಸ್ವಾರ್ಥಬುದ್ಧಿ, ಜಂಭ -- ಇವೆಲ್ಲ ಕಂಡೇ ನಾವು ನಿನ್ನನ್ನ ಬಕ್ರಾ ಮಾಡೋಕೆ ಸ್ಕೆಚ್ ಹಾಕಿದ್ದದ್ದು, ಗೊತ್ತಾ?" ಎಂದ ಮಾಮ.

     "ಅದು ನಂಗೆ ಮೊದ್ಲೇ ಗೊತ್ತಿತ್ತು, ಗೊತ್ತಾ" ಎಂದ ಪ್ರಶ್ನೆ.

"ಜಟ್ಟಿ ಕೆಳಕ್ ಬಿದ್ರೂ ಮೀಸೆ ಮಣ್ಣಾಗ್ಲಿಲ್ಲ ಬಿಡು. ಮೀಸೆ ಬೇರೆ ತೆಗೆಸಿಬಿಟ್ಟಿದ್ದೀವಿ ನಿಂದು. ಇನ್ನಾ ಆರು ತಿಂಗ್ಳು ಕಾಯ್ಬೇಕು ಅದು ಬರೋಕೆ," ಎಂದ ಮಾಮ.

    (೯೭)

     ಶೂಟಿಂಗ್ ಪ್ರಾರಂಭಿಸಿ, ಪ್ರಶ್ನೆ ಮರ ಹತ್ತಿ ಕಣ್ಮುಚ್ಚಿದ ಕೂಡಲೆ ಮುರುಳಿ ಓಡಿಬಂದು ನಮ್ಮ ಅಂಬಾಸಿಡರ್ ಕಾರಲ್ಲಿ ಕುಂತುಬಿಟ್ಟ. ಮಾಮ, ನಾನು, ಮಾರಿಷ, ಡ್ರೈವರ್ -- ಎಲ್ಲರೂ ಅಲ್ಲಿಂದ ಕ್ಯಾಮರ ಸಮೇತ ಓಟಕಿತ್ತಿದ್ದೆವು. ಕಾರು ಟಿಫಾನಿಸ್ ಹತ್ತಿರ ಮತ್ತೆ ಮ್ಯೊಸಿಯಂ ಕಡೆ ತಿರುಗಿ, ಪ್ರೆಸ್ ಕ್ಲಬ್ ಮುಖಾಂತರ ವಿಧಾನಸೌಧ ದಾಟಿ ಮತ್ತೆ ಕಬ್ಬನ್‍ಪಾರ್ಕಿನ ಕಡೆಯ ಕೋರ್ಟ್ ಹತ್ತಿರ ಮರೆಯಲ್ಲಿ ಪಾರ್ಕ್ ಮಾಡಿದಾಗ ಪ್ರಶ್ನೆ ಚಿಂದಿ ಆಯುವ ಹುಡುಗರೊಡನೆ ಹೊಡೆದಾಡುತ್ತಿದ್ದ. ಮರೆಯಲ್ಲಿ, ಸುಮಾರು ಕಾಲುಮೊಟೆ ಬೇಯಿಸಿದ ಕಡ್ಲೆಕಾಯಿ ತಿನ್ನುತ್ತ, ಕತ್ತಲಾಗುವವರೆಗೂ ಕಪಿರೂಪಿಯ ಕಪಿಚೇಷ್ಟೆ ಗಮನಿಸುತ್ತಿದ್ದೆವು. ಆತನ ಎಲ್ಲ ಅವಗುಣಗಳು ಆ ಕ್ಷಣದಲ್ಲಿ ಇಮರಿ ಹೋಗುತ್ತಿದ್ದುದನ್ನು ನೋಡಿದೆವು, ಆತ ಜನ್ಮಪೂರ್ತಿ ನೆನಪಿಟ್ಟುಕೊಳ್ಳುವ ಆತನ ಆತ್ಮಚರಿತ್ರೆಯ ಮುಖಪುಟವನ್ನೂ ಅದು ನಡೆಯುತ್ತಿರುವಾಗಲೇ ನೋಡುತ್ತಿದ್ದೆವು ಮತ್ತು ಆತ ಪೋಲೀಸರಿಂದ ಬಯ್ಸಿಕೊಂಡು ವಾಪಸ್ ಪಾರ್ಕಿಗೆ ಬಂದಾಗ ಸ್ವಲ್ಪದರಲ್ಲಿ ಆತನ ಕಣ್ಣಿಗೆ ಬೀಳುವುದನ್ನು ತಪ್ಪಿಸಿಕೊಂಡೆವು.

     ಸುತ್ತಲೂ ಯಾವ ಕ್ಯಾಮರವೂ ಇರಲಿಲ್ಲ. ಆದರೆ ಆತನ ಕೈಯಾರೆ ಚೌಚೌಬಾತ್ ತಿಂದು ಮನೆಗೆ ಹೋಗುತ್ತೇವೆಂದಿದ್ದ ಸುಮಾರು ಐವತ್ತು ಜೋಡಿ ಕಣ್ಗಳು ಬೇಜಾರಾಗುವವರೆಗೂ ಮರಗಿಡಬಳ್ಳಿಗಳ ನಡುವೆ ನಿಂತು, ಕುಂತು, ಮಲಗಿ, ಉಕ್ಕಿಬರುವ ನಗುವಿನಿಂದ ಮಂಜಾದ ಕಣ್ಗಳು ಬಿಡುವು ಮಾಡಿಕೊಂಡಾಗೆಲ್ಲ ನೋಡಿ, ನೋಡಿ, ನೋಡಿ, "ದೃಶ್ಯಕಲೆಯ ಕಾಲೇಜು ಸೇರಿದ್ದಕ್ಕೂ ಸಾರ್ಥಕವಾಯಿತು ಇಂದು, ಕಣ್ಗಳು ಪಾವನವಾಯಿತು" ಎಂದು ಅಣ್ಣಾವ್ರ ಶೈಲಿಯಲ್ಲಿ ನಾಟಕೀಯವಾಗಿ, ಪ್ರಶ್ನೆಗೆ ಕೇಳಿಸದಷ್ಟೂ ಎಚ್ಚರದಲ್ಲಿ ಅಭಿನಯಿಸಿ, ಬಿದ್ದು ಒದ್ದಾಡಿ, ನಕ್ಕಿನಕ್ಕಿ ಬಿದ್ದು, ಬಿದ್ದು ಬಿದ್ದು ನಕ್ಕಿ ಹೊರಟುಹೋದರು.

     ಅಂದಿನ ಮತ್ತೊಂದು ವಿಶೇಷವೆಂದರೆ ಬಿಗ್ ಡ್ಯಾಡಿ ಮತ್ತು ಕಲ್ಪನಕ್ಕರೂ ನಮ್ಮೊಂದಿಗೆ ಮರೆಯಾಗಿ ಇದ್ದದ್ದು!

     ಕಾಲೇಜಿನ ಅಫೀಶಿಯಲ್ ಛಾಯಾಚಿತ್ರಕಾರನೇ ಆಗಿ ಹೋಗಿದ್ದ ವೀರರಾಜನಿಗೆ ಒಂದೆರೆಡು ಫೋಟೋ ತೆಗೆವಂತೆ ಹೇಳಿದ್ದೆವು. ಆಗೆಲ್ಲ ರೀಲ್-ಫೋಟೋಗಳೇ. ಪ್ರತಿ ಶಾಟನ್ನೂ ಯೋಚಿಸಿ ತೆಗೆಯಬೇಕಿತ್ತು. ಮೇಷ್ಟ್ರು ನಂಜುಂಡರಾಯರು ಬೇರೆ, "ಸುಮ್ನೆ ಪೋಲು ಮಾಡಬೇಡ ವೀರ. ಫ್ರೇಮಿನಲ್ಲಿ ನಾನಿಲ್ಲದಿದ್ದರೆ ಫೋಟೋ ತೆಗೆಯಲೇಬೇಡ" ಎಂದು ಹೇಳಿದ್ದಾರೆ ಎಂದು ನೆಪ ಮುಂದೂಡಿದ ಆತ, ಕೊನೆಗೂ ಒಂದೇ ಒಂದು ಫೋಟೋ ತೆಗೆ ಎಂದಾಗ, "ಫ್ರೇಮಿನಲ್ಲಿ ಮೇಷ್ಟ್ರು ಇಲ್ಲ" ಎಂದು ತಮಾಷೇ ಮಾಡಿದ.

     ಹ್ಞಾ ಡಿಜಿಟಲ್ ಯುಗವೇ, ಒಂದಷ್ಟು ಬೇಗ ಬರದಾಗಿತ್ತೆ ನೀನು, ನಮ್ಮ ಜಗತ್ತಿನ ಅದ್ಭುತವೊಂದನ್ನು ದಾಖಲಿಸಲು ಎಂದುಕೊಳ್ಳುತ್ತೇವೆ ಈಗೆಲ್ಲ, ಆ ಘಟನೆಯನ್ನು ನೆನೆಸಿಕೊಂಡಾಗಲೆಲ್ಲ. ಇದನ್ನು ಓದುವವರಿಗೆಲ್ಲ ಹಾಸ್ಯ, ನಮಗೆ ಮಾತ್ರ ಅದರ ದಾಖಲೆಯಿಲ್ಲದುದರ ಸಂಕಟ. ಆ ತಲೆಮಾರಿನ ಪರಿಷತ್ತಿನ ಯಾರೇ ಆದರೂ ಈ ಘಟನೆಯನ್ನು, ಯಾವುದೇ ಭೌತಿಕ ದಾಖಲೆ ಇಲ್ಲದಿದ್ದರೂ, ಮರೆಯಲಾರರು!

     ಈಗ ಹೇಳಿಃ ಇದು ಹಾಸ್ಯವೋ ಒಂದು ದುಃಖಗಾಥೆಯೋ--ಯಾರದ್ದು ಎಂಬುದು ಮುಖ್ಯವಲ್ಲದಿದ್ದರೂ ಸಹ, ಅಲ್ಲವೆ?///

 

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ನಮಗೂ (ಗೆಳೆಯರಿಗೆಲ್ಲರಿಗೂ) ದುಃಖವಾಗುತ್ತಿದೆ, ಅದರ ದಾಖಲೆ ಇಲ್ಲವಲ್ಲ ಎಂದು. ಒಬ್ಬ ಗೆಳೆಯ ಈಗಲೂ ಹೇಳುವಂತೆ, ’ಹೌದು ಸ್ವಾಮಿ, ನಾವಿದ್ದದ್ದೇ ಹಾಗೆ’. :-)

ವ್ಯಕ್ತಿಯೊಬ್ಬನನ್ನು ಮೂರ್ಖನನ್ನಾಗಿಸಲು ಈ ಪರಿ ಅವಮಾನವೇ? ಇದು ಹಾಸ್ಯವೇ? ತುಂಬಾ ಕೆಡುಕೆನಿಸಿತು.ನೀಚಬುದ್ದಿ, ಜಿಪುಣತನ, ಸ್ವಾರ್ಥಬುದ್ಧಿ, ಜಂಭ- ಯಾರದ್ದು ?

ಪೂರ್ಣಿಮರಿಗೆ, ನಿಜ. ನೀವು ಕೇಳಿರುವ ಮೂರೂ ಪ್ರಶ್ನೆಗೆ ಉತ್ತರ--ನಾವುಗಳೇ! ಆದರೆ ’ಆಗಿನ ನಾವುಗಳು’. ಇಪ್ಪತ್ತರ ವಯಸ್ಸಿನಲ್ಲಿದ್ದಾಗಿನ ಆಗಿನ ನಮ್ಮ ಕ್ರಿಯೆಗಳಿಗೆ ನಲ್ವತ್ತರ ವಯಸ್ಸಿನ ಈಗಿನ ನಾವು ಜವಾಬ್ದಾರರೆ? ಇದು ಮುಖ್ಯ ಪ್ರಶ್ನೆ. "ಹೌದು" "ಇಲ್ಲ" ಇವೆರೆಡೂ ತೆರನಾದ ಉತ್ತರ ಸಾಧ್ಯ ಇದಕ್ಕೆ. ಆಗ ನಾವಂದುಕೊಂಡದ್ದು ಪ್ರಶ್ನಾಮೂರ್ತಿಗೆ ನಾವು ಬುದ್ಧಿ ಕಲಿಸಬೇಕೆಂದು. ಆದರೆ ಅದು ಕಲ್ಪನಕ್ಕ ಮತ್ತು ಬಿಗ್ ಡ್ಯಾಡಿಯರ ಛಾಲೆಂಜಿನಿಂದಾಗಿ ಬಿಸಿರಕ್ತದ ರೊಚ್ಚಿಗೂ ಕಾರಣವಾಯಿತು. ಜೊತೆಗೆ ನಾವು ಆತನಿಗೆ ’ಬುದ್ಧಿ’ ಕಲಿಸುವ ಜೊತೆಗೆ, ಆತನನ್ನು ’ಬುದ್ಧಿವಂತನ’ನ್ನಾಗಿಸಬೇಕು ಎಂದುಕೊಂಡೆವೆಂದು ಕಾಣುತ್ತದೆ. ಈ ’ಕಲಿಸುವ’, ’ರೊಚ್ಚಿನ’ ಹಾಗೂ ’ಉದ್ದಾರ ಮಾಡಬೇಕೆಂಬ’ ಮೂರು ಅಂಶಗಳು ಅತ್ಯಂತ ತಪ್ಪು ರೀತಿಯಲ್ಲಿ ಬೆರೆತುಹೋದಂತೆಯೂ ಕಾಣುತ್ತದೆ. ಈಗ ಪ್ರಶ್ನಾಮೂರ್ತಿ ಮಲ್ಲೇಶ್ವರದಿಂದ ಮಲೇಸಿಯದವರೆಗೂ ಸುತ್ತಾಡಿ ಬಂದಿರುವ, ನಮ್ಮ ತಲೆಮಾರಿನಲ್ಲೇ ಹೆಚ್ಚು ಸಫಲತೆಯನ್ನು ಕಂಡಿರುವ ಟೆಕ್ನೋ ಸಾವಿ ಕಲಾವಿದ! ನಾವು ಬುದ್ಧಿಕಲಿಸಿದ್ದರಿಂದ ಹಾಗಾಯಿತು ಎಂದು ಖಂಡಿತ ನಾವುಗಳು ಭಾವಿಸಿಲ್ಲ. ಇದು ಖಂಡಿತ ಹಾಸ್ಯವಲ್ಲ. ಇಂಗ್ಲೀಷರು ಈ ತೆರನಾದ ಅಬ್ಸರ್ಡ್, ವಿಕ್ಷಿಪ್ತ ಸೆಟೈರ್ ಬರವಣಿಗೆಯಲ್ಲಿ ನಿಪುಣರು. ’ಪಾಪಿಲಾನ್’ ಕಾದಂಬರಿಯ ದುರಂತಗಳ ಸರಮಾಲೆಯಿಂದಾಗಿ ಇಂತಹ ನೈತಿಕ ಸಿಟ್ಟನ್ನು ಅದರ ಬರಹಗಾರನ ಮೇಲೆ ನನಗೂ ಉಂಟಾದುದಿದೆ. ಆದರೆ ಪ್ರಶ್ನೆ ಇರುವುದುಃ ಯಾವಾಗಲೂ ಓದುಗರಿಗೆ ’ಪ್ರಿಯವಾಗುವ ಚೌಕಟ್ಟಿನಲ್ಲೇ’ ಬರೆಯುವುದು ಬೂರ್ಜ್ವಾ ಮನೋಭಾವದ ಸಂಕೇತ. ಮಾರ್ಕ್ಸ್ ವಾದಿಗಳಿಗೆ ಸಿಟ್ಟುಬರಿಸುವಂತದ್ದು. ಈ ತೆರನಾದ ಬರವಣಿಗೆ ಪ್ರಾಯಶಃ ಕ್ರೈಸ್ತರ ’ಕನ್‍ಫೆಶನ್ನಿನಂತೆ’. ಪ್ರಿಯವಾಗುವಂತೆ ಮತ್ತು ವಾಸ್ತವದಂತೆ ಬರೆಯುವುದರ ನಡುವೆ ತೆಳು ವ್ಯತ್ಯಾಸವಿದೆ. ಅಂದ ಹಾಗೆ ಪ್ರಶ್ನಾಮೂರ್ತಿ ಈಗಷ್ಟೇ ಕೆಲವು ದಿನಗಳ ಹಿಂದೆ ಪಾರ್ಟಿ ಕೊಡಿಸಿದ್ದ ನಮಗೆಲ್ಲ. ನಾವ್ಯಾರೂ ಆತನನ್ನು ಅರ್ಧ ಗಂಟೆ ಕಾಲ ರೇಗಿಸಬಾರದೆಂದು ಮಾತನಾಡಿಕೊಂಡು ನಿರ್ಧರಿಸಿದೆವು. ಆತನಿಗೆ ಹತ್ತನೇ ನಿಮಿಷಕ್ಕೆ ಕಸಿವಿಸಿ, ಹದಿನೈದನೇ ನಿಮಿಷಕ್ಕೆ ಇರಿಟೇಷನ್ ಮತ್ತು ಇಪ್ಪತ್ತನೇ ನಿಮಿಷಕ್ಕೆ ಬೇಸರವಾಗಿಹೋಗಿ, ಇಪ್ಪತ್ತೈದನೇ ನಿಮಿಷದಲ್ಲಿ ಡಾಬಾದಲ್ಲಿ ಎಲ್ಲರೂ ಗಾಭರಿಯಾಗುವಂತೆ ಕಿರುಚಿದ್ದು ಹೀಗೆ, "ಏನ್ರೋ, ಎಲ್ರಿಗೂ ತಲೆಗಿಲೆ ಕೆಟ್ಟಿದೆಯಾ? ಆಗ್ಲಿಂದ್ಲೂ ನಾನೂ ನೊಡ್ತನೇ ಇದ್ದೀನಿ. ಯಾಕ್ರಮ್ಮ ಯಾರೂ ನನ್ನ ರೇಗಿಸ್ತಾನೇ ಇಲ್ಲ?" ಎಂದುಬಿಟ್ಟ. ಆತನ ಕಣ್ಗಳಲ್ಲಿ ಹತಾಶೆಯ ತುಸು ಕಣ್ಣೀರು ಬೇರೆ! ಆತನಿಗೆ ಯಾವಾಗಲೂ--ಹೇಗಾದರೂ ಸರಿ--ನಮ್ಮೆಲ್ಲರ ಗಮನ ಸೆಳೆವ ಆಸೆ ವ್ಯಕ್ತವಾಗಿ, ಒಳಗೊಂಡಿದದ್ದು, ನಾವು ಅದಕ್ಕೆ ಸೊಪ್ಪು ಹಾಕುತ್ತ ಬಂದದ್ದೂ ಹೀಗೆ! ಇಂದು ಸಂಜೆ, ಆತನನ್ನು ಕುರಿತಾದ ಈ ಇಡಿಯ ಎಪಿಸೊಡ್‍ಗಳನ್ನು ಓದಿ ಆತ ಫೋನ್ ಮಾಡಿ ಹೇಳಿದ್ದು ಇದು, "ಏನಮ್ಮಾ ಅನಿಲ, ನಿನ್ನ ’ಶಾಂತಿನಿಕೇತನವೆಂಬ ಆತ್ಮಚರಿತ್ರೇಲಿ’ ಮುವತ್ತೊಂದು ಎಪಿಸೋಡಿನಲ್ಲಿ ಐದು ಎಪಿಸೋಡು ನನಗಾಗಿ ಮೀಸಲಿಟ್ಟುಬಿಟ್ಟಿದ್ದೀಯ! ಥ್ಯಾಂಕ್ಸಮ್ಮ, ಎಂಗಾದ್ರೂ ಸರಿ ನನ್ನ ನೆನೆಸಿಕೊಳ್ಳುವ ಗೆಳೆತನ ಈಗಲೂ ನಿನ್ನಲ್ಲಿದೆಯಲ್ಲ, ಆವತ್ತು ಡಾಬಾದಲ್ಲಿ ಮಾಡಿದಂಗೆ ನನ್ನ ಇಗ್ನೋರ್ ಮಾಡ್ಲಿಲ್ಲವಲ್ಲ. ಥ್ಯಾಂಕ್ಸ್!!!”