"ಅಕ್ಕಡಾ, ಎನ್ನಡಾ, ಬೀಚ್ ಮೆ ಲಿಟಲ್ ಕನ್ನಡಾ" -- ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆಃ ಭಾಗ ೩೦

To prevent automated spam submissions leave this field empty.


(೯೧)


     ಪ್ರಶ್ನಾಮೂರ್ತಿ ’?’ ಆಕಾರದಿಂದ ’?/’ ರೂಪಾಂತರಗೊಂಡ ದಿನದ ಎರಡು ದಿನದ ನಂತರ, ಒಂದು ದಿನ ಬೆಳಿಗಿನ ಜಾವ ದೇವಸಂದ್ರದ ನಮ್ಮ ಮನೆಯಲ್ಲಿ ಮಲಗಿದ್ದಾಗ ನನ್ನ ತಾಯಿ ನನ್ನನ್ನು ಏಳಿಸಿದರು. "ಯಾರೋ ಫ್ರೆಂಡ್ ಬಂದಿದಾರೆ ನೋಡೋ" ಎಂದರು. ಬೆಳಿಗ್ಗೆ ಬೆಳಿಗ್ಗೆ ಯಾರೂ ನಮ್ಮ ಮನೆಗೆ ಬರಲಾರರು ಎಂದುಕೊಂಡೇ ಹೊರಬಂದು ನೋಡುತ್ತೇನೆ. ಅಲ್ಲಿ ಗೆಳೆಯ, ಕಾಲೇಜಿನ ಜ್ಯೂನಿಯರ್ ಮಾರಿಷ್ ಪಾಲ್ ನಿಂತಿದ್ದಾನೆ!


"ಏನೋ ಇಷ್ಟು ಬೆಳಿಗ್ಗೆ?" ಎಂದು ಇಂಗ್ಲೀಷಿನಲ್ಲಿ ಕೇಳಿದೆ.


     "ಬೆಳಿಗ್ಗೆ ಐದು ಗಂಟೆಯಿಂದಲೂ ಶಿವಾನಂದ ಸರ್ಕಲ್ಲಿನ ಬಳಿ ಕಾದು ಕಾದು ಸಾಕಾಯ್ತು. ಅದಕ್ಕೇ ನಡೆದುಕೊಂಡೇ ಬಂದುಬಿಟ್ಟೆ. ವಾಯ್ಸ್ ರೆಕಾರ್ಡಿ‍ಂಗ್ ಇಲ್ಲವೆ?" ಎಂದು ಮುಗ್ಧವಾಗಿ ಕೇಳಿದ.


     ಮಾರಿಷ ತನಗೆ ಆಜನ್ಮವಾಗಿ ಇದ್ದ ಪೋಲಿಯೋ ಕಾಲಿನಲ್ಲಿ ಏಳು ಕಿಲೋಮೀಟರ್ ನಡೆದು ನಮ್ಮ ಮನೆಗೆ ಬಂದಿದ್ದ, ಕಾಲೇಜಿನಿಂದ. ಅದಕ್ಕೆ ಮುನ್ನ, ಆ ದಿನ ಬೆಳಿಗ್ಗೆ ಎರಡು ಗಂಟೆಕಾಲ ಕಾದುನಿಂತಿದ್ದ, ಮತ್ತೆರೆಡು ಗಂಟೆ ನಿಂತೇ ನಡೆದಿದ್ದ. ಸೈಕಲ್ಲಿನಲ್ಲಿ ಡಬಲ್ಸ್ ತುಳಿದುಕೊಳ್ಳುತ್ತ ಅವನನ್ನೂ ಕರೆದುಕೊಂಡು ಕಾಲೇಜಿಗೆ ಬಂದೆ. ಆಗಿದ್ದುದಿಷ್ಟು. ಯಾರಿಗೋ ತೋಡಿದ ಖೆಡ್ಡದಲ್ಲಿ ಯಾರೋ ಬಿದ್ದರಲ್ಲ, ಹಿಂದಿನ ಎಪಿಸೋಡ್‍ಗಳಲ್ಲಿ, ಅವರಲ್ಲಿ ಇವನೂ ಒಬ್ಬ!


"ನಾನು ದೆಹಲಿಯಲ್ಲಿದ್ದಾಗ ಮಕ್ಕಳನ್ನು ಸೇರಿಸಿಕೊಂಡು ನಾಟಕ ಆಡಿಸುತ್ತಿದ್ದೆ. ಪ್ರಶ್ನಾಮೂರ್ತಿಯನ್ನು ಹಾಕಿಕೊಂಡು ಟೆಲಿ ಸೀರಿಯಲ್ ಮಾಡುತ್ತಿದ್ದೀರಂತಲ್ಲ. ನಾನೂ ನಿಮ್ಮ ಜೊತೆಗಿರುವೆ" ಎಂದಿದ್ದ ಮಾರೀಷ ಹಿಂದಿನ ದಿನ.


"ಆಯ್ತಪ್ಪ, ಬಾ, ವೆಲ್ಕಮ್. ನಿನಗೆ ಯಾವ ಪಾತ್ರ ಬೇಕು?" ಎಂದ ಮಾಮ.


"ನನಗೆ ಪಾತ್ರ ಬೇಡ. ನಿರ್ದೇಶಕನ ಅಸಿಸ್ಟೆಂಟ್ ಆಗುವೆ" ಎಂದನಾತ ಸಹಜವಾಗಿ.


     "ನಾಳೆ ಬೆಳಿಗ್ಗೆ ಕಾರಿನಲ್ಲಿ ನಾವೆಲ್ಲ ಗುರುರಾಜ ಕಲ್ಯಾಣ ಮಂಟಪದ ಪಕ್ಕದ ಶಂಕರ‍್ನಾಗ್‍ರ ಸಂಕೇತ್’ ರೆಕಾರ್ಡಿಂಗ್ ಸ್ಟುಡಿಯೋಗೆ ಹೋಗುತ್ತಿದ್ದೇವೆ. ಮುಂಜಾನೆ ಐದು ಗಂಟೆಗೆಲ್ಲ ಶಿವಾನಂದ ಸರ್ಕಲ್ಲಿನಲ್ಲಿ ನಿಂತಿರು ಅಥವ ಕುಳಿತಿರು, ಸುಸ್ತಾದರೆ. ನಿನ್ನನ್ನು ಗುರ್ತು ಹಿಡಿವುದೂ ಸುಲಭ, ಏಕೆಂದರೆ ನೀನೊಬ್ಬನೇ ಮನುಷ್ಯ ಅಷ್ಟು ಹೊತ್ತಿನಲ್ಲಿ ಅಲ್ಲಿ ನಿಲ್ಲುವುದು. ಬಂದು ಸಹಾಯ ಮಾಡು. ನಮ್ಮ ’ಗಾಜಿನ್ಮನೇಲಿ ಟೋಪಿ’ ಸೀರಿಯಲ್ಲಿಗೆ ವೆಲ್ಕಮ್, ವೆಲ್ಕಮ್" ಎಂದು ಮಾರ್ಮಿಕವಾಗಿ ಹೇಳಿದ್ದ ಮಾಮ, ಉಪೇಂದ್ರ ಶೈಲಿಯಲ್ಲಿ, ಆ ಶೈಲಿ ಹುಟ್ಟುವ ಮುನ್ನವೇ, ಆತನಿಗೆ.


     ಶಿವಾನಂದ ಸರ್ಕಲ್ಲಿನಿಂದ ನೂರು ಹೆಜ್ಜೆ ದೂರದಲ್ಲೇ ’ಸಂಕೇತ್’ ಸ್ಟುಡಿಯೋ ಇದ್ದದ್ದು ಮಾರಿಷನಿಗೆ ಗೊತ್ತಿರಲಿಲ್ಲ, ಏಕೆಂದರೆ ಆತ ಉಳಿದುಕೊಂಡಿದ್ದದ್ದು ಅಲ್ಲಿಂದ ಇನ್ನೂರು ಹೆಜ್ಜೆ ದೂರವಿದ್ದ ಚಿತ್ರಕಲಾ ಪರಿಷತ್ತಿನಲ್ಲಿಯೇ!! ದೆಹಲಿಯ ಕ್ಯಾತ ಕಲಾವಿದ ದಂಪತಿಗಳ ಮಗನಾದ ಮಾರಿಷ, ಪರಿಷತ್ತಿನಲ್ಲಿಯೇ, ಹೊರರಾಜ್ಯದ ಮೇಷ್ಟ್ರುಗಳು ಇದ್ದ (ಈಗಿನ ಕ್ಯಾಂಟಿನ್ ಮತ್ತು ಈಗಿನ ಟಾಯ್ಲೆಟ್‍ಗಳ ನಡುವೆ ಇತ್ತು ಆಗಿನ ಆ ಕೋಣೆ) ರೂಮಿನಲ್ಲೇ, ಅವರೊಂದಿಗೇ ಅಡುಗೆ, ತಿಂಡಿ, ವ್ಯಾಸಂಗ ಮಾಡಿಕೊಂಡು ಇದ್ದುಬಿಟ್ಟಿದ್ದ. ಹಾಗೆ ಇರಲು ಮೇಷ್ಟ್ರು ನಂಜುಂಡರಾವ್ ಅನುಮತಿ ನೀಡಿದ್ದರು.


     ಹಿಂದಿನ ದಿನ ರಾತ್ರಿಯೇ ಆತ ರೂಮಿನಲ್ಲಿ ಮಲಗುವ ಬದಲು, ಕಾಲೇಜಿನ ಗ್ಯಾಲರಿಯ ವರಾಂಡದಲ್ಲಿ ಸೆಖೆಯೆಂದು ವಾಚ್‍ಮನ್ ಹಾಗೂ ಇತರೆ ಮೇಷ್ಟ್ರುಗಳ ಜೊತೆ ಮಲಗಲು ಅನುವಾದ.


"ಏನಿದು. ಸ್ನಾನ ಮಾಡಿ ಎಲ್ಲಿಗೋ ಹೋಗಲು ತಯಾರಾಗಿ ನಿದ್ರೆ ಮಾಡುವಂತಿದೆಯಲ್ಲ. ಕನಸಿನಲ್ಲಿ ಟ್ರೆಕ್ಕಿಂಗ್ ಹೊರಟಿರುವೆಯ?" ಎಂದು ಕೇಳಿದ್ದರು ಅಜಿತ್ ಕುಮಾರ್ ದುಬೆ ಮೇಷ್ಟ್ರು. ಅವರೂ ಹೊರರಾಜ್ಯದವರು, ಆ ರೂಮಲ್ಲೇ ವಾಸವಾಗಿದ್ದರು.


"ಮಾಮ ಮತ್ತು ಅನಿಲ್ ಬೆಳಿಗ್ಗೆ ಐದುಗಂಟೆಗೆ ರೆಕಾರ್ಡಿಂಗ್ ಕರೆದಿದ್ದಾನೆ"


"ಮಾಮ ಇರುವ ಯೋಜನೆಯ ಅದು?" ಎಂದು ಕೇಳಿದ್ದರು ದುಬೆ.


ಹೌದೆಂದು ತಲೆಯಾಡಿಸಿದ. "ಹಾಗಾದರೆ ಒಂದು ಕೆಲಸ ಮಾಡು. ಈಗಲೇ ಸ್ನಾನ ಮಾಡಿ, ಶರ್ಟುಪ್ಯಾಂಟು ತೊಟ್ಟು, ಶೂ ಲೇಸ್ ಸಹ ಹಾಕಿಕೊಂಡು ಬಿಡು. ಏಕೆಂದರೆ, ನಿನ್ನ ಶೂಗಳಿಗೆ ಒಟ್ಟೂ ಇನ್ನೂರಾದರೂ ಲೇಸಿನ ತೂತುಗಳಿರಬೇಕು. ಬೆಳಿಗ್ಗೆ ನೀನು ಎದ್ದವನು ಹಾಗೇ ಹೋಗಿಬಿಡಬಹುದು," ಎಂದರು ದುಬೆ. ಮಾಮನ (ಕು)ಖ್ಯಾತಿ ಅಷ್ಟಿತ್ತು! ಮಾರಿಷ ಆ ಕೊರೆವ ಚಳಿಯಲ್ಲಿ ಕ್ಯಾಂಟಿನ್ ಸಮೀಪದ ನಲ್ಲಿಯಲ್ಲಿ ಸ್ನಾನ ಮಾಡಿದ್ದ. ವಸ್ತ್ರ, ಶೂ ಸಜ್ಜಿತನಾಗಿ ಮಲಗಿ ಬೆಳಿಗ್ಗೆ ನಾಲ್ಕೂವರೆಗೆ ಎದ್ದು, ಕ್ರಿಯಾಕರ್ಮಗಳನ್ನೆಲ್ಲ ಅರೆಬರೆ ಮುಗಿಸಿ, ಸರ್ಕಲ್ಲಿನಲ್ಲೆರೆಡು ಗಂಟೆ ಕಾಲ ಕಾಯ್ದು, ಮತ್ತೆರೆಡು ಗಂಟೆ ನಡೆದು, ನಮ್ಮ ಮನೆಗೆ ನಡೆದು ಬಂದು, ವಾಪಸ್ ಸೈಕಲ್ಲಲ್ಲಿ ಡ್ರಾಪ್ ತೆಗೆದುಕೊಂಡು ಪರಿಷತ್ತಿಗೆ ಹಿಂದಿರುಗಿದ ಕೂಡಲೇ ತನ್ನ ರೂಮಿನ ಹಾಸಿಗೆಯಲ್ಲಿ ಡ್ರಾಪಾಗಿಬಿಟ್ಟ.


(೯೨)


     "ನಾವು ನಿನಗೆ ಅಡಿಯಿಂದ ಮುಡಿಯವರೆಗೂ ಮೋಸ ಮಾಡುತ್ತಿದ್ದೇವೆ ಪ್ರಶ್ನಾಮೂರ್ತಿ" ಎಂದು ಮಾಮ, ನಾನು ಮತ್ತು ಒಂದಿಬ್ಬರು ಒಟ್ಟಿಗೆ ಅಂದೇ ಮಧ್ಯಾಹ್ನ ಹೇಳಿಬಿಟ್ಟೆವು, ನಮ್ಮ ಕಾಸಿನಲ್ಲಿ ಆತನಿಗೆ ಚಾಯ್ ಕುಡಿಸಿ. ಕೂಡಲೇ ಆಶ್ಚರ್ಯ ಕಾದಿತ್ತು ನಮಗೆ. "ನಾನು ನಟಿಸುವಲ್ಲಿ ತಪ್ಪು ಮಾಡುತ್ತಿದ್ದರೆ ಕೆನ್ನೆಗೆ ನಾಲ್ಕು ಬಾರಿಸಿಬಿಡಿ, ಈ ರೀತಿ ಮಾತ್ರ ನನ್ನ ಪಾತ್ರವನ್ನ ನನ್ನಿಂದಲೇ ಕಿತ್ತು ಬೇರೆಯವರಿಗೆ ಕೊಡುವ ಪ್ರಯತ್ನ ಮಾತ್ರ ಮಾಡಬೇಡಿ," ಎಂದು ಪ್ರಶ್ನಾಮೂರ್ತಿ ಮಾಮನ ಕಾಲನ್ನು ಅಕ್ಷರಶಃ ಹಿಡಿದುಕೊಂಡುಬಿಟ್ಟ, ವಿಕ್ಟೋರಿಯನ್ ಶೈಲಿಯಲ್ಲಿ, ಒಂದು ಕಾಲೂರಿ ಮತ್ತೊಂದನ್ನು ಮಡಿಚಿ. ಅಷ್ಟರಲ್ಲಿ ನಂಜುಂಡರಾವ್ ಮೇಷ್ಟ್ರು ಅಲ್ಲಿಗೆ ಬಂದು ಆ ದೃಶ್ಯವನ್ನು ನೋಡಿಬಿಟ್ಟರು. ಮಾಮನ ಶೂಲೇಸನ್ನು ಹೊಂದಿಸುತ್ತಿರುವವನಂತೆ ನಟಿಸತೊಡಗಿದ ಪ್ರಶ್ನೆಯ ಕಣ್ಣಂಚಲ್ಲಿ ಮಾತ್ರ ನೀರು! ’ಗಾಜಿನ್ಮನೇಲಿ ಟೋಪಿ’ ಎಂಬ ಅನಧೀಕೃತ ಸೀರಿಯಲ್ಲಿನ ಅಧೀಕೃತ ಕಾರಣಕರ್ತರೆಲ್ಲ ಗೊಂದಲದಲ್ಲಿ ಬಿದ್ದೆವು.


     "ನಾವು ನಿನಗೆ ಮೋಸ ಮಾಡುತ್ತಿದ್ದೇವೆ" ಎಂದು ಎದುರಿನವನಿಗೆ ಹೇಳಿದರೂ ಆತ ನಂಬದಿದ್ದರೆ, ಆತನನ್ನು ಮೋಸ ಮಾಡುವುದು ಅತೀ ಸುಲಭದ, ಮೂರ್ಖತನದ ಮತ್ತು ಮಹಾನ್ ಬೋರಿಂಗ್ ಕೆಲಸ! ಅದನ್ನು ಈಗ ನಾವು ಇನ್ನು ಮುಂದೆ ಮಾಡಬೇಕಾಗಿ ಬಂದಿತು!


 (೯೩)


     ಮತ್ತೊಂದೆರೆಡು ದಿನಗಳ ನಂತರ ಶೂಟಿಂಗ್ ಇರಿಸಿಕೊಂಡೆವು. ಈ ಸಲ ನಿಜವಾಗಿಯೂ ಕ್ಯಾಮರ ತರಿಸಿದ್ದೆವು. ಇಲ್ಲದಿದ್ದರೆ ಪ್ರಶ್ನೆ ನಮ್ಮನ್ನೂ ನಂಬುತ್ತಲೇ ಇರಲಿಲ್ಲವಲ್ಲ, ಅದಕ್ಕೆ. ಮೊದಲ ಓಪನಿಂಗ್ ಡಯಲಾಗನ್ನಂತೂ ಆತ ಸಾವಿರ ಸಲ ಬಾಯಿಪಾಠ ಮಾಡಿದ್ದ -- "ಅಕ್ಕಡಾ, ಎನ್ನಡಾ, ಬೀಚ್ ಮೆ ಲಿಟಲ್ ಕನ್ನಡಾ," "ಅಡಿಕ್ಕಿರೆ ಪಾರ್ ಮೂಂಜಿಲೆ ಒರು ಆಂಜನೇಯ. ನೀ ತೂಂಗು, ನಾ ಪೋಯಿಟುವರೆ ಡೇ ಪೈಯ," ಇತ್ಯಾದಿಗಳಿಂದಾಗಿ ಆತ ಬಹು-ಭಾಷಾ ನಟನಾಗಲಿದ್ದ ಒಂದೇ ಕನ್ನಡ ಸೀರಿಯಲ್ಲಿನ ಮುಖಾಂತರ!


    ಕ್ಯಾಮರಾ ನೋಡಿದ ಮೇಲಂತೂ ಪ್ರಶ್ನೆಯಲ್ಲಿದ್ದಿರಬಹುದಾದ ಕೋಟಿಯಲ್ಲೊಂದು ಭಾಗದಷ್ಟು ಅನುಮಾನವೂ ಇಲ್ಲದಂತಾಯ್ತು. ಆದರೂ ಆತನಿಗೆ ಸೂಚನೆ ನೀಡಿದೆವು, "ನೋಡು ಪ್ರಶ್ನೆ. ಈಗಲೂ ಯೋಚನೆ ಮಾಡಿ ನೋಡು. ಆಕ್ಷನ್ ಸೀನ್, ಸ್ಟಂಟ್ ಸೀನ್‍ಗಳಲ್ಲಿ ಬಳಸುವ ಕಾರುಗಳಿಗೆ ಇಂಜಿನ್ನೇ ಇರುವುದಿಲ್ಲವಂತೆ" ಎಂದು. ನಾವು ಮುಂದೆ ಪಾಪಪ್ರಜ್ಞೆಯಿಂದ ನರಳಬಾರದೆಂದು, ಕೃಷ್ಣ ಶಂಖ ಊದುವ ಸಮಯಕ್ಕೆ ಸರಿಯಾಗಿ ಧರ್ಮರಾಯ "ಎಂಬ ಆನೆ" ಎಂದು ಬಡಬಡಿಸಿದಂತೆ ಹೇಳಿ ನೋಡಿದೆವು. ಪ್ರಶ್ನೆ ಕ್ಯಾಮರಾ ನೋಡುತ್ತಲೇ ಫ್ಯಾಂಟಮ್ ಆಗಿಹೋಗಿದ್ದ--ಇಬ್ಬರಿಗೂ ಕಿವಿಗಳಿರುವುದಿಲ್ಲವಲ್ಲ. "ಕ್ಯಾಮರಾ ನೋಡಿದ್ದೀನ, ನನಗೆ ೧೦೧ ಶೇಕಡ ನಂಬಿಕೆ ಬಂದಿದೆ" ಎಂದುಬಿಟ್ಟ.


"೧೦೧ ಶೇಕಡ ಎಂದರೆ ೧ ಶೇಖಡ ಎಂದಲ್ಲವೇ?" ಎಂದದಾರೋ ಕೇಳಿದವರನ್ನು ಪ್ರಶ್ನೆಯಾಕಾರದಿಂದಲೇ ಹೆಬ್ಬಾವಿನಾದಿಯಾಗಿ ಸುತ್ತಿ ಎಸೆವಷ್ಟು ಸಿಟ್ಟು ಬಂದುಬಿಟ್ಟಿತು ಕ್ವೆಶ್ಚನ್ನಿಗೆ!


     ಮಾರೀಷ್ ಪಾಲ್ ಇಲ್ಲದ ಸೀರಿಯಲ್ ಯೋಜನೆಯ ಅನುಷ್ಠಾನದ ನಾಟಕದಲ್ಲಿ ಸಕ್ರಿಯ ಪಾತ್ರಧಾರಿಯಾಗಿ, ನಮ್ಮೊಡನೆಯೇ ಇರುತ್ತಿದ್ದ. ’ಇದು ಸುಳ್ಳು’ ಎಂದು ಆತನಿಗೆ ಹೇಳಿದಾಗ, ಹತಾಶನಾಗದೆ, "ಈಗಲಾದರೂ ಇದನ್ನು ನಿಜ ಮಾಡಲಾಗದೆ?" ಎಂದು ಕೇಳಿಬಿಟ್ಟ."ಹೌದಲ್ಲ" ಎನ್ನಿಸಿತು. ಮೂರು ದಿನದ ನಂತರ ಅದನ್ನು ನಿಜ ಮಾಡಿದೆವೂ ಸಹ--ಯಾರೂ ಕಲ್ಪಿಸದ ರೀತಿಯಲ್ಲಿ, ಕಬ್ಬನ್ ಪಾರ್ಕಿನಲ್ಲಿ. ಮಾರಿಷನ ಐಡಿಯಕ್ಕೆ ಅಷ್ಟು ಬೆಲೆ ಬಂದುಬಿಟ್ಟಿತ್ತು.


      ೧೯೯೦ರ ಆಸುಪಾಸಿನಲ್ಲಿ ನಡೆದ ಈ ’ಗಾಜಿನ್ಮನೇಲಿ ಟೋಪಿ’ ಪ್ರಹಸನದ ನಂತರ, ಶಾಂತಿನಿಕೇತನದಲ್ಲಿ ಓದಿ ನಾನು ಹಿಂದಿರುಗಿದ ಒಂದೆರೆಡು ವರ್ಷಗಳಲ್ಲಿಯೇ, ಮಾರೀಷ ತನ್ನ ಪದವಿ ಶಿಕ್ಷಣ ಮುಗಿಸಿಕೊಳ್ಳುವ ಮುನ್ನವೇ ಒಂದು ಮಧ್ಯರಾತ್ರಿ ಹಂಪಿಯ ಪರದೇಶೀ ಕಲಾವಿದನೊಂದಿಗೆ ಪಾರ್ಟಿಯೊಂದರಿಂದ ಹಿಂದಿರುಗುವಾಗ, ಯಾರೂ ಇಲ್ಲದ ವಿಂಡ್ಸರ್ ಮೇನರ್ ಸೇತುವೆ ಕೆಳಗೆ, ಬಂದ ಒಂದೇ ಒಂದು ಆಂಬುಲೆನ್ಸ್ ಇಬ್ಬರನ್ನೂ ಸ್ಥಳದಲ್ಲೇ ಬಲಿತೆಗೆದುಕೊಂಡಿತ್ತು. ೧೯೯೦ರ ದಶಕದಲ್ಲಿ ಆ ಸ್ಥಳದ ತೀರ ಹತ್ತಿರದಲ್ಲಿ ತೀರಿಕೊಂಡ ಇಬ್ಬರು ಪರಿಷತ್ತಿನ ವಿದ್ಯಾರ್ಥಿಗಳಲ್ಲಿ ಮಾರಿಷ ಮೊದಲಿಗ. 


     ಆತ ಕಲಾವಿದನಾಗಿ ದೆಹಲಿಗೆ ಹಿಂದಿರುಗಲೇ ಇಲ್ಲ!//

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಹೌದು :-) ಸಮ್‍ಥಿಂಗ್ ಈಸ್ ’ಬೆಟರ್ ದೆನ್’ ನಥಿಂಗ್ ಅನ್ನೋ ಹಾಗೆ ಅನ್ನುವುದನ್ನು ಹೇಳಿ, ಹೇಳಿ ರೂಢಿಯಾಗಿ, "ಸಮ್‍ಥಿಂಗ್ ಈಸ್ ನಥಿಂಗ್ ಅನ್ನೋ ಹಾಗೆ" ಅನ್ನುತ್ತಾನೆ ಗೆಳೆಯನೊಬ್ಬ. ಹಾಗಾಯಿತಿದು!!