’ಎಲ್ಲರಿಗೂ ಎಲ್ಲರೂ ಎಲ್ಲಾ ಕಾಲಕ್ಕೂ ಬುದ್ಧಿಕಲಿಸಲಾರರು’ -- ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆಃ ಭಾಗ ೨೯

To prevent automated spam submissions leave this field empty.

(೮೮)

     ಪ್ರಶ್ನಾಮೂರ್ತಿಯ ನಿಲುವಿನ ಭಂಗಿ, ತನ್ಮೂಲಕ ಆತನ ಇರುವಿಕೆಯು ಮರುದಿನದಿಂದ ’?’ ಆಕಾರದಿಂದ ’?/’ ಆಗಿ ಕಾಣಹತ್ತಿತು ನಮಗೆಲ್ಲ, ಮಾಮ ಆತನಿಗೆ ಕೊಟ್ಟ ಒದೆಯಿಂದಾಗಿ. "ಆತನಿಗೆ ಜಾಡಿಸಿ ಒದ್ದರೂ, ಹುಟ್ಟಿನಿಂದ ಮೈಗೂಡಿಗೊಂಡಿರುವ ಪ್ಯಾದೆತನ ಹೇಗೆ ಹೋದೀತು" ಎಂದು ಮಾಮ ಗೊಣಗಿಕೊಂಡ. ಆ ದಿನ ಮಧ್ಯಾಹ್ನ ನಮಗೆ ನಮ್ಮ ಬದುಕಿನ ಅತ್ಯಂತ ಸಂಕೋಚದ, ಎಂಬರಾಸಿಂಗ್ ದಿನವಾಗುವ ಎಲ್ಲ ಸಾಧ್ಯತೆ ಇತ್ತು. ಅದನ್ನು ತಪ್ಪಿಸಿಕೊಂಡೆವೋ, ಅಥವ ಇಕ್ಕಟ್ಟಿಗೆ ಸಿಲುಕಿ ಆಮೇಲೆ ತಪ್ಪಿಸಿಕೊಂಡೆವೂ ಎಂಬುದು ಇಂದಿಗೂ ತಿಳಿಯದಾಗಿದೆ. ಆದುದಿಷ್ಟುಃ

      ಕಲ್ಪನಕ್ಕ, ಬಿಗ್-ಡ್ಯಾಡಿ, ಮಾಮ, ನಾನು ಮತ್ತು ಒಂದಿಬ್ಬರು("ಮಾಮನವರೆ, ಅನಿಲ್‍ರವರೆ, ನಮಗೂ ಒಂದು ಅಥವ ಅರ್ಧ ಸಣ್ಣ ರೋಲ್ ಇದ್ದರೆ ಕೊಡಿ" ಎಂದು ತಾವಾಗಿ ಬೇಡಿಕೊಂಡು, ಬೇರೆ ಯಾರಿಗೋ ತೋಡಿದ ಖೆಡ್ಡದಲ್ಲಿ ಬಂದು ಬಿದ್ದವರಿವರು) ಕ್ಯಾಂಟೀನಿನ ಬಳಿ ಇದ್ದೆವು. ನಿರಂತರ ಚಹದ ಸಂಪೂರ್ಣ ಜವಾಬ್ದಾರಿ ’?/’ ಆಕಾರದ ಪ್ರಶ್ನಾಮೂರ್ತಿಯೇ ಹೊತ್ತಿದ್ದರಿಂದ ಇತರರಿಗೆ ಬಹಳ ಕಷ್ಟವಾಗಿ ಹೋಯಿತು -- ಮಾಮನಿಗೆ ಹಾಗೂ ನನಗೆ ಯಾವ ರೀತಿ ಸೇವೆ ಮಾಡುವುದೆಂದು! ದಿನಕ್ಕೆ ನಲವತ್ತು ಕಿಲೋಮೀಟರ್ ಸೈಕಲ್ ತುಳಿಯುತ್ತಿದ್ದ ನನಗಂತೂ ಆಗೆಲ್ಲ ಹೊಟ್ಟೆಯೆಂಬುದು ತಳವಿಲ್ಲದ ಬಕೆಟ್ಟಿನಂತಿತ್ತು. ತಿನ್ನುವಾಗಲೂ ಹಸಿವಾಗುತ್ತಿತ್ತು. ಅಷ್ಟರಮಟ್ಟಿಗೆ ಮತ್ತೊಬ್ಬರ ಖೆಡ್ಡದಲ್ಲಿ ಬಿದ್ದವರಿಗೆ ನಾನು ’ವರ’ವಾಗಿ ಕಂಡುಬಂದೆ. ಕೆಲವೊಮ್ಮೆ ಬೇಕಾದ್ದು, ಹಲವಾರು ಬಾರಿ ಬೇಡವಾದ್ದೆಲ್ಲ ತಂದು ತಿನ್ನಿಸತೊಡಗಿದರು.

     "ನೀವೇನೂ ಸಂಕೋಚವಿಲ್ಲದ ತಿನ್ನಲು ತಂದುಕೊಡಿ. ನನ್ನದೇನೂ ಅಭ್ಯಂತರವಿಲ್ಲ" ಎಂದು ಅವರುಗಳನ್ನು ಹುರಿದುಂಬಿಸುತ್ತಿದ್ದೆ, ಪಾಪ!

     ಸ್ಕ್ರಿಪ್ಟ್ ಎರಡು ರೀತಿಯಲ್ಲಿ ಬರೆಯಬೇಕೆಂದು ಮಾಮ ನನಗೆ ಸೂಕ್ತ ನಿರ್ದೇಶನ ನೀಡಿದ್ದ. ಒಂದುಃ ಪ್ರಶ್ನಾಮೂರ್ತಿಯ ಟೆಲಿಸೀರಿಯಲ್ಲಿನ ಸ್ಕ್ರಿಪ್ಟ್. ಎರಡುಃ ಆತ ನಿಜಜೀವನದಲ್ಲಿ "ಇದು ಸುಳ್ಳು" ಎಂದು ಭಾವಿಸಲೇಬಾರದಂತೆ, ಅರ್ಧರ್ಧ ದಿನಕ್ಕೊಂದು ಹೊಸ ಯೋಜನೆಯನ್ನು ಆತನಿಗೆ ಹೇಳಿ, ಸ್ವಲ್ಪ ಸ್ವಲ್ಪ ಆತನನ್ನು ಉತ್ತೇಜಿಸುವ ಯೋಜನೆಯನ್ನು ಅನುಷ್ಠಾನಗೊಳಿಸುತ್ತಲೂ ಇದ್ದೆವುಃ

     ಉದಾಹರಣೆಗೆ, "ನಾಳೆ ಮಧ್ಯಾಹ್ನ ಎಥ್ನಿಕ್ ಡೇ ಇದೆ. ಪ್ರಿನ್ಸಿಪಾಲರು ಹೇಳಿದ್ದಾರೆ. ಸಾಕಷ್ಟು ಚಂದವಾಗಿ, ಅಲ್ಲಲ್ಲ ಇರುವುದಕ್ಕಿಂದಲೂ ಚೆಂದವಾಗಿ (ಅದು ಅಸಾಧ್ಯವೆಂದು ನನಗೆ ತಿಳಿದಿದ್ದರೂ ಸಹ!) ಸೀರೆ ಉಟ್ಟುಕೊಂಡು ಮಧ್ಯಾಹ್ನ ಬಂದುಬಿಡಿ. ಅಪ್ಪಿತಪ್ಪಿ ತಪ್ಪಿಸಿಕೊಂಡುಬಿಟ್ಟೀರ. ಧ್ವನಿ ಸೊಗಸಾಗಿ ಇರುವವರನ್ನು ಮಾತ್ರ ಆಯ್ಕೆ ಮಾಡಿದ್ದೇವೆ. ನೀವಿಗಳೆಲ್ಲ ಹಾಡಬೇಕು" ಎಂದು ಮೊದಲ ವರ್ಷದ ಕಲಾವಿದ್ಯಾರ್ಥಿನಿಯರೈವರಿಗೆ ಮಾಮ ಖಡಾಖಂಡಿತವಾಗಿ ತಾಕೀತು ಮಾಡಿದ್ದ, ಹಿಂದಿನ ದಿನ ಸಂಜೆಯೇ.   

     ಅವರುಗಳೆಲ್ಲ ಅಂತೆಯೇ ಬಂದಿದ್ದರು, ಪಾಪ, ಆಟೋದಲ್ಲಿ ಬಟ್ಟೆಯ ನೆರಿಗೆ ಕೆಡದಿರಲಿ ಎಂಬ ಕಾರಣಕ್ಕೆ. ದಿನವೂ ಅವರುಗಳು ಬರುವ ಬಸ್ಸಿನ ಡ್ರೈವರ್ ಮತ್ತು ಕಂಡಕ್ಟರ‍್ಗಳ ಬೇಸರಕ್ಕೆ ಇದು ಕಾರಣವಾಗಿತ್ತು ಎಂದು ಅನುಮಾನಾತೀತವಾಗಿ ನಾನು ಹೇಳಬಲ್ಲೆ. ಮದುವೆ ಮನೆಗಳಲ್ಲಿ ಗಮನಿಸಿ ನೋಡಿಃ ಹೊಸಬಟ್ಟೆಗೆ ತಕ್ಕಂತೆ ಜನ ತಮ್ಮ ದೇಹಗಳನ್ನು ಬಗ್ಗಿಸುತ್ತಾರೆ. ಮಿಕ್ಕಲ್ಲಿ ಹಳೆ ಬಟ್ಟೆಗಳನ್ನು ತೊಟ್ಟಿರುವಾಗ ಅದನ್ನು ತಮಗೆ ಸೂಕ್ತವಾದಂತೆ ಬಗ್ಗಿಸುತ್ತಾರೆ! ಶಾಂತಿನಿಕೇತನದಲ್ಲಿ ಪರೀಕ್ಷೆ ಬರೆವಾಗ, ಪ್ರತಿ ದಿನ ಒಂದೇ ಶರ್ಟನ್ನು ಹಾಕಿಕೊಳ್ಳುತ್ತಿದ್ದೆ, ಸಂಜೆ ಅದನ್ನು ಒಗೆದು ಬೆಳಗಿನವರೆಗೂ ಒಣಗಿಸಿದ ನಂತರ. ಅದನ್ನು ಕಂಫರ್ಟ್ ಝೋನ್ ಎನ್ನುತ್ತೇವೆ. 

(೮೯)

     ಪ್ರಶ್ನಾಮೂರ್ತಿಯ ಒಟ್ಟಾರೆ ಭೌತಿಕ ನಿಲುವು ’?/’ಕ್ಕೆ ಬದಲಾದ ಬೆಳಿಗ್ಗೆಯೇ ಆತನಿಗೆ ಹೇಳಿದ್ದೆವುಃ "ಗುರುವೆ, ಯಾರು ಏನೇ ಹೇಳಿದರೂ ’ನೀನುಂಟು, ಏಳು ಲೋಕವುಂಟು. ಎಲ್ಲರೂ ಎಲ್ಲರನ್ನೂ ಎಲ್ಲಾ ಕಾಲಕ್ಕೂ ಬುದ್ಧಿಕಲಿಸಲಾರರು. ಅಪಮಾನವೇ ಉದ್ದಾರಕ್ಕೆ ಅಡಿಪಾಯ’ ಎಂದು ಹೇಳಿಬಿಡು. ನಿನಗೆ ನಮ್ಮ ಸೀರಿಯಲ್ಲಿನಲ್ಲಿ ಸಂಪೂರ್ಣ ನಂಬಿಕೆ ಬರಬೇಕೆಂದರೆ ಮಧ್ಯಾಹ್ನದವರೆಗೂ ಕಾಯಿ. ನಿನ್ನ ಜ್ಯೂನಿಯರ್ ಹುಡುಗಿಯರೂ ಹೇಗೆ ತಯಾರಾಗಿ ನಿನ್ನ ಸೀರಿಯಲ್ಲಿಗೆ ಹಿನ್ನೆಲೆ ಗಾಯನ ಅಭ್ಯಾಸ ಮಾಡಿಕೊಳ್ಳಲು ಬರುತ್ತಾರೆ ನೋಡುತ್ತಿರು, ಆಟೋಗಳಲ್ಲಿ" ಎಂದೆವು.

     ಮಧ್ಯಾಹ್ನ ಹನ್ನೆರಡು ಗಂಟೆ ಸರಿಯಾಗಿ ಕ್ಯಾಂಟೀನಿನಲ್ಲಿ ನಾವು ಪ್ರಶ್ನಾಮೂರ್ತಿ ಕೃಪಾಪೋಷಿತ ಅದೆಷ್ಟನೆಯ ಚಹಾವನ್ನೋ ಕುಡಿಯುತ್ತ ಎರಡೂ ತರಹದ ಸ್ಕ್ರಿಪ್ಟ್‍ಗಳನ್ನು ಉತ್ತಮಪಡಿಸುತ್ತಿದ್ದಾಗ, ಕಲ್ಪನಕ್ಕ ಮತ್ತು ಬಿಗ್-ಡ್ಯಾಡಿ ಅದೆಲ್ಲಿಂದಲೋ ಪ್ರಶ್ನಾಮೂರ್ತಿಯನ್ನು ಕರೆದುತಂದರು. ಅವರು ಬರುತ್ತಿದ್ದ ಸತ್ಯವಂತ ರೀತಿಯಿಂದಾಗಿ ನಮಗೆ ಗಾಭರಿಯಾಯಿತು.

     "ಏಯ್ ಮಾಮ. ನಿನಗೆ ನೂರಲ್ಲ, ನೂರೈವತ್ತು ರೂಪಾಯಿ ಕೊಟ್ಟುಬಿಡ್ತೇವೆ. ಪ್ರಶ್ನೆಗೆ ಸತ್ಯ ಏನೆಂದು ತಿಳಿಸಿಬಿಡು. ಸಾಕು ಅವನನ್ನು ಗೋಳಾಡಿಸಿದ್ದು," ಅಂತ ಪ್ರಶ್ನೆಯನ್ನು ವರದಕ್ಷಿಣೆ ತರದ ಸೊಸೆಯನ್ನು ಆಕೆಯ ತವರುಮನೆಗೆ ತಳ್ಳಿದಂತೆ, ನಮ್ಮೆಡೆಗೆ ತಳ್ಳಿಬಿಟ್ಟರು.

"ಏನಮ್ಮಾ ಇದೆಲ್ಲ. ಇವ್ರು ಏನೇನೋ ಹೇಳ್ತಿದ್ದಾರೆ. ಸೀರಿಯಲ್ಲೇ ರೀಲಂತೆ?" ಎಂದ ಪ್ರಶ್ನೆ, ಪ್ರಶ್ನಾರ್ಥಕವಾಗಿ.

ಮಾಮ ಪ್ರಶ್ನೆಯನ್ನು ಬದಿಗೆ ಕರೆದುಕೊಂಡು ಹೋಗಿ, ಏನೋ ಪಿಸುಗುಟ್ಟಿದ, ನನಗೆ ಮಾತ್ರ ಕೇಳುವಂತೆಃ

"ನೋಡು ಪ್ರಶ್ನೆ, ಕಲ್ಪನಕ್ಕ ಮತ್ತು ಬಿಗ್-ಡ್ಯಾಡಿಯರ ಮುಖಭಾವಗಳು ಓಕೇನ, ಪರಿಣಾಮಕಾರಿಯಾಗಿದೆಯ?" ಎಂದ ಮಾಮ.

"ಅವ್ರಿಬ್ರೂ ಹೇಳ್ತಿದಾರೆ ನೀವಿಬ್ರೂ ನನ್ನನ್ನ ಬಕ್ರಾ ಮಾಡೋಕೆ ಇಷ್ಟೇಲ್ಲ ನಾಟಕ ಆಡ್ತಿದ್ದೀರಾಂತ. ಅದನ್ನೇ ಕೇಳಣಾ ಬನ್ನಿ ಅಂತ ಅವ್ರನ್ನ ನಾನು ಮತ್ತು ನನ್ನನ್ನ ಅವ್ರು ಕರೆದುಕೊಂಡು ಇಲ್ಲಿ ಬಂದಿದೀವಿ" ಎಂದ ಪ್ರಶ್ನೆ.

     ಮಾಮ ಪ್ರಶ್ನೆಯನ್ನೇ ದೀರ್ಘಾವಧಿ ದಿಟ್ಟಿಸಿ ನೋಡಿದ, ನಾನಾವಿಧದಲ್ಲಿ, ನಾನಾಪಟೇಕರನ ಶೈಲಿಯಲ್ಲಿ. ನನ್ನ ಹತ್ತಿರ ಬಾಗಿ ಅವನ ಕಡೆಗಿದ್ದ ದೃಷ್ಟಿಯನ್ನು ಒಂಚೂರೂ ಅಲುಗಿಸದೆ, ಏನೋ ನನಗೇ ಪಿಸುಗುಟ್ಟಿದ. ಆತ ಪಿಸುಗುಟ್ಟಿದ್ದು, ಕೇವಲ ’ಪಿಸುಗುಡುವಿಕೆ’ಯೇ ಆಗಿತ್ತು, ಅದರೊಳಗೆ ಒಂದೂ ಅರ್ಥವಾಗುವ ಮಾತುಗಳಿರಲಿಲ್ಲ! ಪ್ರಶ್ನೆಗೆ ಮಾತ್ರ ನಾವಿಬ್ಬರೂ ಏನನ್ನೋ ಪಿಸುಗುಟ್ಟಿದ್ದೇವೆ ಎಂದು ಭಾಸವಾಗುತ್ತಿತ್ತು.

     ಮಾಮ ಹಾಗೇ ದೃಷ್ಟಿಯನ್ನು--ಆತನ ಕಣ್ಗಳು ಕ್ಯಾಮರಾದ ಝೂಮ್ ಫೋಕಸ್ಸಿನ ಲೆನ್ಸು ಎಂಬಂತೆ--ಮತ್ತೂ ಪ್ರಶ್ನಾಮೂರ್ತಿಯ ಕಡೆಗೇ ತೆಗೆದುಕೊಂಡು ಹೋಗಿ, ಆತನ ಮುಖದ ಒಂದಿಂಚು ಹತ್ತಿರ ನಿಲ್ಲಿಸಿದ. ದೂರದಲ್ಲಿ ಹತಾಷರಾದಂತೆ ನಿಂತಿದ್ದ ಕಲ್ಪನಕ್ಕ ಮತ್ತು ಬಿಗ್-ಡ್ಯಾಡಿಯರ ಕಡೆ ನೋಡಿ, "ಓಕೆ. ಪರ್ಫೆಕ್ಟ್. ಕಂಗ್ರಾಟ್ಸ್" ಎಂದ. ಅವರಿಬ್ಬರೂ ’ಅಯ್ಯೋ ಪಾಪ, ಪ್ರಶ್ನೆಯ ಜೀವನ ಎಂದಿದ್ದರೂ ಪ್ರಶ್ನಾರ್ಥಕವೇ’ ಎಂದು ಕೈಚೆಲ್ಲಿ ಕುಳಿತರು. ಅವರ ಅಭಿಪ್ರಾಯಕ್ಕೆ ಒಂದು ಅಂಕ ದೊರೆತರೆ, ಮಾಮನ ಅಭಿಪ್ರಾಯಕ್ಕೆ ೯೯ ಅಂಕ ನೀಡುವ ಮನಸ್ಥಿತಿಯಲ್ಲಿದ್ದ ಪ್ರಶ್ನೆ!

ಮಾಮ ಎರಡನೇ ಸ್ಕ್ರಿಪ್ಟ್ ಅನ್ನು ಉತ್ತಮಪಡಿಸಿದ ಎಂದುಕೊಂಡೆ!

"ಇನ್ನೂ ಅರ್ಥವಾಗಲಿಲ್ವಾ ಪ್ರಶ್ನೆ?" ಎಂದ ಆತ.

"ಏನು? ಎಲ್ಲಾ ನಾಟಕಾನಾ?" ಎಂದು ವರ್ಣಿಸಲಸಧಳವಾದ ಮುಖಭಾವವನ್ನು ತೋರ್ಪಡಿಸಿದ ಪ್ರಶ್ನೆ, ಒಂದು ಕುಂಟೋ ಸ್ಟೆಪ್ ಹಾಕಿ ಮುಂದೆ ಬಂದ, ಮಾಮನಿಗೆ ಬಡಿಯುವಂತೆ.

"ಕರೆಕ್ಟಾಗಿ ಅರ್ಥಮಾಡಿಕೊಂಡಿದ್ದೀಯ. ನಾವು ನಿನ್ನತ್ರ ಆಡ್ತಿರೋದು ನಾಟ್ಕ ಅಂತ ನಿನ್ನ ನಂಬಿಸುವ ನಾಟ್ಕ ಆಡಿದಾರೆ ಕಲ್ಪನಕ್ಕ-ಬಿಗ್ ಡ್ಯಾಡಿ ಅನ್ನೋದು ನೀನು ಬೇಗ ಗ್ರಹಿಸಿದ್ದೀಯ" ಎಂದು ಮಾತು ತಿರುಚಿಬಿಟ್ಟ ಮಾಮ, ಮುಂದುವರೆದು,

"ಅಯ್ಯೋ ಮಂಕೆ. ಅದಕ್ಕೇ ನಿನಗೆ ಪ್ಯಾದೆ ಅನ್ನೋದು. ಸೀರಿಯಲ್ಲು ನಿಜ. ನೀನು ಮುಖ್ಯ ಪಾತ್ರಧಾರಿ ಅನ್ನೋದೂ ನಿಜ. ಕಲ್ಪನಕ್ಕ ಮತ್ತು ಬಿಗ್-ಡ್ಯಾಡಿಯರೂ ಆಸೆ ತಡೆದುಕೊಳ್ಳಲಾರದೆ ಇಂದು ಬೆಳಿಗ್ಗೆ ತಮಗೂ ಸಣ್ಣಪುಟ್ಟ ಪಾತ್ರ ಬೇಕೆಂದು ಹೇಳಿದರು. ಅಲ್ವೇನೋ ಅನಿಲ?" ಎಂದ ದೂರದಲ್ಲಿದ್ದ ನನ್ನನ್ನು ಕೇಳಿದ.

"ಆತ ಏನು ಹೇಳುತ್ತಿದ್ದಾನೋ ಅದೆಲ್ಲ ಸರಿ" ಎಂದೆ, ಆತನ ಮಾತುಗಳನ್ನು ಸರಿಯಾಗಿ ಕೇಳಿಸಿಕೊಳ್ಳಲಾಗದೆ.

     ಮಾಮ ಮುಂದುವರೆಸಿದ, "ಅವರಿಬ್ಬರಿಗೂ ಬೆಳಿಗ್ಗೆಯೇ ಹೇಳಿದ್ದೆ. ನೀವಿಬ್ಬರೂ ಹೇಗಾದರೂ ಮಾಡಿ ಪ್ರಶ್ನಾಮೂರ್ತಿಯ ಮುಖದಲ್ಲಿ ಮಧ್ಯಾಹ್ನದ ಹೊತ್ತಿಗೆ ಹತಾಷೆ ಮೂಡಿಸಲು ನಿಮ್ಮ ಅಭಿನಯದ ಮೂಲಕ ಸಫಲರಾದಲ್ಲಿ, ನೀವು ಒಳ್ಳೆಯ ನಟರೆಂದು, ನಿಮಗೆ ಸಣ್ಣಪಾತ್ರ ಗ್ಯಾರಂಟಿ ಕೊಡುತ್ತೇನೆ ಎಂದಿದ್ದೆ, ಗೊತ್ತ. ಅದಕ್ಕೇ ಇದೆಲ್ಲ ಸುಳ್ಳು ಎಂಬ ಬಾಂಬಿನಂತಹ ಡೈಲಾಗು ಅವ್ರ ಕಡೆಯಿಂದ. ಎಂಗ್ ಐಡಿಯಾ ಮಾಡಾವ್ರೆ ನೊಡೋ ಅನಿಲ" ಎಂದುಬಿಟ್ಟ!!!

(೯೦)

     ಈಗ ಅನುಮಾನವೆಂದರೇನೆಂದು ತಿಳಿಯದ ಹನುಮಂತನಂತಹ ಪ್ರಶ್ನಾಮೂರ್ತಿ ಪೆಚ್ಚಾದ, ಸಾವರಿಸಿಕೊಂಡು ಖುಷಿಯಾದ, ಒಟ್ಟಾಗಿ ಸುಸ್ತಾಗಿ ಕ್ಯಾಂಟಿನಿನ ಬಳಿ ಸುಮ್ಮನೆ, ಗಂಭೀರವಾಗಿ ಕುಳಿತ.ಮಾಮ ಕಲ್ಪನಕ್ಕ-ಡ್ಯಾಡಿಯರ ಕಡೆ ತಿರುಗಿ, "ಓಕೆ ಪರ್ಫೆಕ್ಟ್, ಕಂಗ್ರಾಟ್ಸ್" ಎಂದದ್ದು ಅವರಿಬ್ಬರನ್ನೇ ಗೊಂದಲಗೊಳಿಸಿದ್ದರೂ, ಪ್ರಶ್ನೆಗೆ ಮಾತ್ರ ಮಾಮನ ನಿರ್ದೇಶನದ ಮೇದಾವಿತನದ ಸಂಕೇತವಾಗಿ ಕಂಡುಬಂದಿತು.

     ಅಷ್ಟರಲ್ಲಿ ಕಲ್ಪನಕ್ಕ ಮತ್ತು ಬಿಗ್-ಡ್ಯಾಡಿಯರು ಬೆಂಗಾಲದ ಪಾಲ್ ಎಂಬ ಗುರುಗಳಿಗೆ ಸಂಕ್ಷಿಪ್ತವಾಗಿ ಪಂದ್ಯದ ವಿಷಯವನ್ನೆಲ್ಲ ಹೇಳಿಬಿಟ್ಟಿದ್ದರು. ಅವರುಗಳ ಪರವಾಗಿ ಪ್ರಶ್ನಾಮೊರ್ತಿಗೆ ಪಾಲ್‍ರವರು ಸಂದರ್ಭವನ್ನು, ಸತ್ಯವನ್ನು ವಿವರಿಸುವಂತೆ ಒತ್ತಾಯ ಮಾಡಿದರು. ’ಭೂಮಿ ಬಾಯಿಬಿಡುವುದು ಎಂದರೇನೆಂದು’ ಅಂದು ನನಗೆ ಮಾಮನಿಗೆ ಒಟ್ಟಾಗಿ ಅರ್ಥವಾಗತೊಡಗಿದು. "ಪ್ರಶ್ನೆ, ಇದೆಲ್ಲ ನಾಟಕ" ಎಂದಷ್ಟೇ ಪಾಲ್ ಹೇಳಿದರು ಆತನಿಗೆ. ನಾನು ಮತ್ತು ಮಾಮ ಸೀತಾಮಾತೆಯಂದಾಗಿಬಿಟ್ಟೆವು. ಬಾಯಿಬಿಡದ ಭೂಮಿಯ ಒಳಕ್ಕೆ ಅರ್ಧ ಅಡಿ ಇಳಿದಂತಾಯ್ತು, ಏಕೆಂದರೆ ಪಾಲ್ ಹೊಡೆದ ಡೈಲಾಗು--ಗುರುವಾಕ್ಯ--ನಮ್ಮ ತಲೆಯ ಮೇಲೆ ಬೃಹತ್ ಸುತ್ತಿಯೊಂದರಿಂದ ಒಡೆದಂತಿತ್ತು. 

     ಅದೇ ಕಾಲಕ್ಕೆ ಎರಡು ಆಟೋಗಳಲ್ಲಿ ಐವರು ಚಂದದ ಸೀರೆಯುಟ್ಟ ನಮ್ಮ ಜ್ಯೂನಿಯರ್ ಹುಡುಗಿಯರು ಕಾಲೇಜಿನ ಮರದ ಗೇಟಿನ ಬಳಿ ಇಳಿಯುತ್ತಿರುವುದು ಕಂಡುಬಂದಿತು! ಮಾಮನ ರಾವಣನಂತಹ ಹತ್ತುತಲೆ ಚಕಚಕನೆ ಕೆಲಸ ಮಾಡತೊಡಗಿತು.

"ಅಗೋ ಪ್ರಶ್ನಾಮೂರ್ತಿಯವರೆ. ನಿಮ್ಮ ಹಿನ್ನೆಲೆ ಗಾಯನ ಮಾಡುವ ಚೆಲುವೆಯರು. ಈಗಲಾದರೂ ಗೊತ್ತಾಯಿತೆ? ಯಾರು ಹೇಳಿದರೂ ನಂಬಬೇಡ ಅಂತ ನಾವು ಮೊದಲೇ ಹೇಳಲಿಲ್ಲವೆ?"

     "ಹಾಯ್ ಪ್ರಶ್ನೇ.." ಎಂದು ಹುಡುಗಿಯರು ಆತನೆಡೆಗೆ ಓಡೋಡಿ ಬರತೊಡಗಿದರು. ಏಕೆಂದರೆ ಜ್ಯೂನಿಯರ್ ಹುಡುಗಿಯರ್ಯಾರೂ ಪ್ರಶ್ನಾಮೂರ್ತಿಯ ಸಮ್ಮುಖದಲ್ಲಿ--ಕಾಲೇಜಿನ ಒಳಗೇ ಇರಲಿ, ಹೊರಗೇ ಇರಲಿ, ಬೆಳಿಗ್ಗೆಯೇ ಆಗಿರಲಿ, ಸಂಜೆಯೇ ಆಗಿರಲಿ, ಎಂಥಹ ಸಂದರ್ಭದಲ್ಲಿಯೂ ಸಹ, ತಿಂಡಿ ತೀರ್ಥಗಳಿಗೆ, ಕಲಾಸೃಷ್ಟಿಯ ವಸ್ತು, ಕಾಗದಗಳಿಗೆ--ಯಾವುದಕ್ಕೂ ಸ್ವಂತ ಕಾಸುಬಿಚ್ಚಿದ ಸಂದರ್ಭವೇ ಚಿತ್ರಕಲಾ ಪರಿಷತ್ತಿನ ಇತಿಹಾಸದಲ್ಲಿರಲಿಲ್ಲ. ಕೃತಜ್ಞತಾಪೂರ್ವಕವಾಗಿ ಪ್ರಶ್ನೆಯಿಂದ ಹಾಗೆ ಲಾಭ ಹೊಂದಿದ ಎಲ್ಲ ಹುಡುಗಿಯರೂ ಪ್ರಶ್ನಾಮೂರ್ತಿಯನ್ನು ಕಂಡಾಗಲೆಲ್ಲ, ತಮ್ಮದೇ ಮನೆಯ ಸಾಕಿದ ಜಾತಿನಾಯಿಯನ್ನು ಮುದ್ದುಮಾಡುವಂತೆ ಓಡಿ ಬಂದುಬಿಡುತ್ತಿದ್ದರು!!!

     ಹುಡುಗಿಯರು ತಂದ ಹಬ್ಬದ ವಾತಾವರಣ, ತೊಟ್ಟ ಉಡುಗೆ, ತನ್ನನ್ನು ಸಾಕಿದ ಜಾತಿ ನಾಯಿಮರಿಯಂತೆ ಅತ್ಯುತ್ಸಾಹದಲ್ಲಿ ಕೂಗುತ್ತ ಬರುತ್ತಿರುವುದು, ಮಾಮ ಹೇಳಿದ ’ಅವರುಗಳು ನಿನ್ನ ಸೀರಿಯಲ್ಲಿಗೇ ಹಾಡಲು ಇಂದು ಮಧ್ಯಾಹ್ನ ಬಂದೇ ಬರುತ್ತಾರೆ. ನಿನ್ನ ಕಂಡರೆ ಅವರಿಗೆಲ್ಲ ಎಷ್ಟು ಅಭಿಮಾನ. ನೋಡುತ್ತಿರು’ ಎಂಬ ಫ್ಲಾಷ್‍ಬ್ಯಾಕ್--ಇವೆಲ್ಲವೂ ನೆನೆಸಿಕೊಳ್ಳುತ್ತ, ನೋಡನೋಡುತ್ತಲೇ ಪ್ರಶ್ನೆ ಅರ್ಧ ಅಡಿ ಮೇಲೇರಿದಂತಾಯ್ತು, ಸಿನೆಮಗಳಲ್ಲಿ ಉಬ್ಬಿ ಹೋದವರು ಗಾಳಿಯಲ್ಲಿ ಹಾರಾಡುವಂತೆ. ಕೆಳಗೆ ನೋಡಿದರೆ, ಆತ ತುದಿಗಾಲಲ್ಲಿ ನಿಂತು ಬ್ಯಾಲೆನ್ಸ್ ಮಾಡುತ್ತಿದ್ದ. ಖುಷಿಯಾದಾಗಲೆಲ್ಲ ಆತ ಹಾಗೆ ಮಾಡುವುದು ವಾಡಿಕೆ ಎಂಬುದನ್ನು ನಾನು ಮರೆಯದಿದ್ದರೂ ಸಹ, ಕಾಲನ್ನು ಹಾಗಿಟ್ಟುಕೊಂಡೂ (’?/’) ಆತ ಹಾಗೆ ಮಾಡಿದ್ದು ಮೆಚ್ಚುವಂತಹುದ್ದೇ ಆಗಿತ್ತು!

     ಈಗ ಪ್ರಶ್ನೆ ವೈಕುಂಠರಾಜುರವರ ಕಥೆಯುಳ್ಳ ’ಉದ್ಭವ’ ಸಿನೆಮದ ಅನಂತನಾಗ್ ಹೇಳುವಂತಾಗಿದ್ದ. ಸ್ವತಃ ಮಾಮನೇ ’ಇದೆಲ್ಲ ಸುಳ್ಳು’ ಎಂದರೂ ನಂಬದ ಸ್ಥಿತಿಗೆ ಬಂದುಬಿಟ್ಟಿದ್ದ. ನಾಳೆಯ ನೈಜ ಶೂಟಿಂಗ್ ನೆನೆದು, ಥ್ರಿಲ್‍ಗೊಂಡು ಮೂರ್ಚಾವಸ್ತೆಯನ್ನು ಎಚ್ಚರವಾಗಿರುವಾಗಲೇ ಅನುಭವಿಸತೊಡಗಿದ್ದ!

     ಪಾಲ್ ಮೇಷ್ಟ್ರು ಆತನಿಗೆ ಮತ್ತೆ ಹೇಳಿದರು, "ಪ್ರಶ್ನೆ. ಇದೆಲ್ಲ ಬಕ್ವಾಸ್. ಸುಮ್ನೆ ಕ್ಲಾಸಿಗೋಗು" ಅಂತ.

ಆಗ ಪ್ರಶ್ನಾಮೂರ್ತಿ ಮಾಸ್ಟರ್-ಪೀಸ್ ಡೈಲಾಗನ್ನು ಉದುರಿಸಿದ, "ಚುಪ್ ರಹೀಯೇ ಸಾರ್. ಯಾರು ಏನೋ ಹೇಳಿದ್ರೂ ನಾನು ಕೇಳೋಲ್ಲ. ನೀನುಂಟು ಏಳು ಲೋಕವುಂಟು. ಎಲ್ಲರೂ ಎಲ್ಲರನ್ನೂ ಎಲ್ಲಾ ಕಾಲಕ್ಕೂ ಬುದ್ದಿ ಕಲಿಸಲಾರರು. ಅಪಮಾನವೇ ಉದ್ದಾರಕ್ಕೆ ಅಡಿಪಾಯ" ಎಂದುಬಿಟ್ಟ! ಪಾಲ್  ಶಿಷ್ಯನೊಬ್ಬನಿಂದ ಮುಖಭಂಗವಾದವರಂತಾಗಿ, ಕಲ್ಪನಕ್ಕ-ಡ್ಯಾಡಿಯರನ್ನು ಮನಸ್ಸಿನಲ್ಲೇ ಶಪಿಸುತ್ತ ಹೋಗಿಬಿಟ್ಟರು.

     ಮಾಮ ಪ್ರಶ್ನೆಯ ಹತ್ತಿರ ಬಂದು, ಆತನ ಬೆನ್ನ ಮೇಲೆ ಮೆಚ್ಚುಗೆಯ ಹೊಡೆತ ಕೊಟ್ಟು, ಕೈ ಹಾಕಿ ಹೇಳಿದ, "ನೀನುಂಟು ಲೋಕವುಂಟು ಅಲ್ಲಯ್ಯಾ, ’ನಾನುಂಟು’ ಏಳು ಲೋಕವುಂಟು ಅನ್ನಬೇಕು" ಎಂದ.

     "ಆಯ್ತು ಬಾಸ್" ಎಂದ ಪ್ರಶ್ನೆಯನ್ನು ಕ್ಲಾಸಿಗೆ ಕಳುಹಿಸಲಾಯಿತು. ಪಾಲ್ ಈಗ ಪ್ರಶ್ನಾಮೊರ್ತಿಯ ಮೇಲಿನ ಸಿಟ್ಟಿನಿಂದಾಗಿ, ನಮ್ಮ ಕಡೆಯವರಾಗಿಬಿಟ್ಟರು ಎಂದು ನಮಗಿಬ್ಬರಿಗೂ ಅನ್ನಿಸಿತು. ಹಾಗಿತ್ತು ಎಲ್ಲರಿಗೂ ತನ್ನ ಬಗ್ಗೆ ಸಿಟ್ಟುಬರಿಸಿಬಿಡುವ ಪ್ರಶ್ನೆಯ ಪ್ರಶ್ನಾತೀತ ಸಾಮರ್ಥ್ಯ ಅಥವ ಕೆಪ್ಯಾಟಿಟಿ!

     ಹುಡುಗಿಯರೆಲ್ಲರ ಕಡೆಗೆ ತಿರುಗಿ ಮಾಮ ಹೇಳಿದ, "ಪ್ರಶ್ನೆಯ ಲೆಕ್ಕದಲ್ಲಿ ದಯವಿಟ್ಟು ಚಹಾ ಕುಡಿಯಿರಿ. ಇವತ್ತಿನ ಎಥ್ನಿಕ್ ಡೇ ಮುಂದಕ್ಕೆ ಹೋಗಿದೆ. ದಯವಿಟ್ಟು ಪ್ರಶ್ನೆಯ ಹತ್ತಿರ ಆಟೋ ಚಾರ್ಜ್ ತೆಗೆದುಕೊಳ್ಳಿ. ಆದರೆ ಮತ್ತೆ ಆ ದಿನ ಇರುವಾಗ, ಬೇಜಾರು ಮಾಡಿಕೊಳ್ಳದೆ ಹೀಗೇ ಇರುವುದಕ್ಕಿಂತಲೂ ಸುಂದರವಾಗಿ ಬರಬೇಕು, ಪ್ಲೀಸ್. ಮತ್ತು ಅಪ್ಪಿತಪ್ಪಿ ಪ್ರಶ್ನೆ ಏನಾದರೂ ಪ್ರಶ್ನೆ ಕೇಳಿದರೆ, ನಾವೇನೂ ಮಾತಾಡುವಂತಿಲ್ಲ. ಇವೆಲ್ಲ ನಾಟಕದ ಸೂತ್ರಧಾರ ಮಾಮ ಎಂದಷ್ಟೇ ಹೇಳಿಬಿಡಿ. ಆತನಿಗೆಲ್ಲವೂ ಅರ್ಥವಾಗಿಬಿಡುತ್ತದೆ" ಎಂದ. ಹುಡುಗಿಯರು ನಾಚಿಕೆ ಬಿಟ್ಟು ಪ್ರಶ್ನೆಯನ್ನು ಆಟೋಚಾರ್ಜಿಗೆ ಕೇಳುವುದಿಲ್ಲ ಎಂದು ಆತನಿಗೂ ಚೆನ್ನಾಗಿ ಗೊತ್ತಿತ್ತು.

     ಇನ್ನು ಪ್ರಶ್ನೆಯನ್ನು ಬಕರಾ ಮಾಡುವ ಹೆಜ್ಜೆಹೆಜ್ಜೆಗಿನ ಅವಕಾಶವನ್ನು ವಿಧಿನಿಯಮ ಬರೆವವನಿಗೂ ಬದಲಿಸಲು ಸಾಧ್ಯವಾಗದಂತಾಯ್ತು!!///

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು