ಮಕ್ಕಳಾಟಕ್ಕೆ ಅಸುನೀಗಿದ ‘ಅನುಕರಿಸುವ’ ಪಕ್ಷಿ - 'White-Bellied Drongo'.

To prevent automated spam submissions leave this field empty.

ಮಕ್ಕಳ ಕೈಗೆ ಸಿಕ್ಕು ಆಟದ ವಸ್ತುವಾಗಿ ಪರಿಣಮಿಸಿ ಜರ್ಜರಿತವಾದ ಬಿಳಿ ಹೊಟ್ಟೆಯ ಟಿಸಿಲು ಬಾಲ; ವೈಟ್ ಬೆಲೀಡ್ ಡ್ರೋಂಗೊ..ಕ್ಲಿಕ್ಕಿಸಿದವರು: ಬಿ.ಎಂ.ಕೇದಾರನಾಥ.

 

ಯುವ ಮಿತ್ರ ಪರಿಕ್ಷಿತ ರೋಣ ನಾಲ್ಕು ದಿನಗಳ ಕೆಳಗೆ ಶಾಲೆ ಮುಗಿಸಿಕೊಂಡು ಮನೆಗೆ ಹೊರಟಿದ್ದ. ಮನೆ ಹತ್ತಿರದ ಚಹಾ ಅಂಗಡಿ ಕಟ್ಟೆಯ ಮೇಲೆ ಹತ್ತಾರು ಮಕ್ಕಳು ಗುಂಪಾಗಿ ಯಾವುದೋ ‘ಮಸಲತ್ತು’ ನಡೆಸುತ್ತಿರುವಂತೆ ಕಂಡಿತು. ಸಮೀಪ ಹೋಗುವ ಧೈರ್ಯ ಮಾಡಿ ಕೆಲ ಹುಡುಗರ ಮಧ್ಯೆ ನುಸುಳಿದ. ಪಾಪ ಯಾವುದೋ ಪಕ್ಷಿಯ ಮರಿಯೊಂದನ್ನು ಹಿಡಿದು ತಂದು ರೆಕ್ಕೆ ಕತ್ತರಿಸಿ ಆಟವಾಡುತ್ತಿದ್ದಾರೆ ಎಂಬ ವಾಸನೆ ಆತನಿಗೆ ಬಡಿಯಲು ತಡವಾಗಲಿಲ್ಲ. 

 

ಕೂಡಲೇ ಅವರಿಗೆ ಆ ಪಕ್ಷಿಯನ್ನು ಬಿಟ್ಟುಬಿಡುವಂತೆ ಮನವಿ ಮಾಡಿದ. ತಾನೇ ಖುದ್ದಾಗಿ ಅದನ್ನು ದೂರ ಬಿಟ್ಟುಬರುವುದಾಗಿಯೂ ಅವರಿಗೆ ಹೇಳಿದ. ಗೌಳಿಗರ ಆ ವಿಘ್ನಸಂತೋಷಿ ಮಕ್ಕಳಿಗೆ ಈ ಮಾತು ಪಥ್ಯವೆನಿಸಲಿಲ್ಲ. ಜಾಗ ಖಾಲಿ ಮಾಡದಿದ್ದರೆ ನೆಟ್ಟಗಾಗುವುದಿಲ್ಲ ಎಂದು ಧಮಕಿ ಬೇರೆ ಹಾಕಿದರು. ಇವನಿಗಂತೂ ರೇಗಿಹೋಯಿತು. ಓಡೋಡಿ ಕಲ್ಲೂರ್ ಮಾಮಾ ಮನೆಗೆ ಬಂದು ಅವರಿಗೆ ಸುದ್ದಿ ತಿಳಿಸಿದ. ತಡ ಮಾಡದೇ ಪ್ರೊ. ಗಂಗಾಧರ ಕಲ್ಲೂರ ಪರಿಕ್ಷಿತನೊಂದಿಗೆ ಹೊಟೇಲ್ ಬಳಿ ಧಾವಿಸಿದರು. ಗುಂಪು ಇನ್ನೂ ಅಲ್ಲಿಯೇ ನೆರೆದಿತ್ತು. ಕಲ್ಲೂರ್ ಸರ್ ಸರಸರನೇ ಗುಂಪಿನೊಳಗೆ ಹೊಕ್ಕವರೇ, ಆ ಪಕ್ಷಿ ಮರಿಯನ್ನು ಎತ್ತಿಕೊಂಡು ನಡೆದೇ ಬಿಟ್ಟರು. ಗೌಳಿಗರ ಮಕ್ಕಾಳ್ಯಾರು ಇವರನ್ನು ಗೋಳು ಹೊಯ್ದುಕೊಳ್ಳಲು ಮುಂದಾಗಲಿಲ್ಲ. ಆದರೆ ಅವರನ್ನು ಕರೆದೊಯ್ದ

ಪರಿಕ್ಷಿತನನ್ನು ಮಾತ್ರ ದುರುಗುಟ್ಟಿ ನೋಡಿದರು. ಇವನಿಗಂತೂ ಹಕ್ಕಿ ಮರಿಯನ್ನು ಅವರಿಂದ ರಕ್ಷಿಸಿದ ಖುಷಿ ಒಳಗೊಳಗೇ!

 

ಬದುಕಿಸಿಕೊಳ್ಳುವ ಬಯಕೆಯಲ್ಲಿ ಸಿಂಗಾಪೂರ್ ಚೆರ್ರಿ ತಿನ್ನಿಸಲು ಮುಂದಾದ ನಾವು..ಚಿತ್ರ: ಬಿ.ಎಂ.ಕೇದಾರನಾಥ.

 

ಕಲ್ಲೂರ್ ಸರ್ ಅವನ ಸಮಯಪ್ರಜ್ಞೆಗೆ ಮೆಚ್ಚಿ, ಶಹಭಾಷ್ ಹೇಳಿ ಹಕ್ಕಿಗಳ ಕುರಿತಾದ ಪುಸ್ತಕವೊಂದನ್ನು ಉಡುಗೊರೆಯಾಗಿ ನೀಡಿ ಬೆನ್ನು ತಟ್ಟಿದರು. ನಿಜವಾಗಿಯೂ ಸಮಸ್ಯೆ ಪ್ರಾರಂಭವಾಗಿದ್ದು ಇಲ್ಲಿಂದ. ಯಾವ ಜಾತಿಗೆ ಸೇರಿದ ಹಕ್ಕಿ ಮರಿ ಇದು ಎಂದು ಮೇಲ್ನೋಟಕ್ಕೆ ಗೊತ್ತಾಗದಷ್ಟು ಅದು ವಿರೂಪಗೊಂಡಿತ್ತು. ರೆಕ್ಕೆ ಕತ್ತರಿಸಿ, ಕಾಲಿಗೆ ದಾರ ಕಟ್ಟಿ, ರಾಡಿಯಲ್ಲಿ ಮುಳುಗಿಸಿ ಎಬ್ಬಿಸಿ ಒಟ್ಟಾರೆ ಚನ್ನಪಟ್ಟಣದ ಆಟದ ಬೊಂಬೆಯಾಗಿಸಿದ್ದರು ದೈತ್ಯರು. ಕಲ್ಲೂರ್ ಸರ್ ಸಹ ವಿಚಲಿತಗೊಂಡರು. ಅದಕ್ಕೆ ಸ್ನಾನ ಮಾಡಿಸಿ, ಬಟ್ಟೆಯಲ್ಲಿ ಮೈ ಒರೆಸಿ, ಎಳೆ ಬಿಸಿಲಿಗೆ ಮೈಒಡ್ಡಿಸಿ, ರಟ್ಟಿನ ಪೆಟ್ಟಿಗೆಯಲ್ಲಿಟ್ಟರು. ಆದರೆ ಊಟಕ್ಕೇನು ನೀಡುವುದು?

 

ಬಿಳಿ ಹೊಟ್ಟೆಯ ಟಿಸಿಲು ಬಾಲದ ಮರಿಯನ್ನು ಬದುಕಿಸಿಕೊಳ್ಳಲು ಪ್ರೊ. ಗಂಗಾಧರ ಕಲ್ಲೂರ ಪ್ರಯತ್ನನಿರತರಾಗಿರುವುದು. ಚಿತ್ರ: ಬಿ.ಎಂ.ಕೇದಾರನಾಥ.

 

ಅಂತೂ ಕೊನೆಗೆ ಮೈ ಒಣಗಿದ ಮೇಲೆ ಹಕ್ಕಿ ಮರಿ ಮೂಲ ಬಣ್ಣಕ್ಕೆ ತಿರುಗಿತು. ಅದು ಪಶ್ಚಿಮ ಘಟ್ಟದ ತಪ್ಪಲಿನಗುಂಟ ಹಬ್ಬಿರುವ ಕುರುಚಲು ಕಾಡಿನಲ್ಲಿ ವಾಸಿಸುವ ಬಿಳಿ ಹೊಟ್ಟೆಯ ಟಿಸಿಲು ಬಾಲ ಅಥವಾ ಅಂಬರಗುಬ್ಬಿ; ಅರ್ಥಾತ್, White Bellied Drongo. ಅಳ್ನಾವರ ರಸ್ತೆಯ ಮೇಲಿರುವ ದಡ್ಡಿ ಕಮಲಾಪೂರದ ವರೆಗೆ ದನ-ಕರುಗಳನ್ನು ಮೇಯಿಸಲು ಹೋಗುವ ಗೌಳಿಗರ ಮಕ್ಕಳು ಯಾವುದೋ ಗಿಡದಲ್ಲಿದ್ದ ಗೂಡಿನಿಂದ ಈ ಮರಿಯನ್ನು ಎಗರಿಸಿತಂದು ಮೂರ್ನಾಲ್ಕು ದಿನ ಉಪವಾಸ ಕೆಡವಿದ್ದಾರೆ ಎಂದು ಪ್ರೊ. ಕಲ್ಲೂರ ತರ್ಕಿಸಿದರು.

 

ವೈಟ್ ಬೆಲೀಡ್ ಡ್ರೋಂಗೋ -ಆಹಾರ ವೆಂದರೆ ಕೀಟಗಳು, ರೆಕ್ಕೆಯ ಹ್ಯಾತೆಗಳು, ಶಿವನ ಕುದುರೆ. ಕಾಲಕಾಲಕ್ಕೆ  ಲಭ್ಯತೆಯ ಅನುಸರವಾಗಿ ಕೆಲ ನಿರ್ದಿಷ್ಠ ಹೂವಿನ ಗಿಡಗಳಾದ Butea, Salmalia ಹಾಗೂ Erithrina ಹೂವುಗಳ ಮಕರಂಧ ಸಹ ಹೀರಿ ಅದು ತನ್ನ ಉದರಂಭರಣ ಮಾಡುತ್ತದೆ. ದಾಂಡೇಲಿ, ಹಳಿಯಾಳ ಹಾಗೂ ಅಳ್ನಾವರ ಭಾಗಗಳಲ್ಲಿ ಈ ಗಿಡಗಳು ಹೆಚ್ಚಾಗಿದ್ದು, ಈ ಪಕ್ಷಿಯ ಸಮುದಾಯ ಆ ಭಾಗಗಳಲ್ಲಿಯೇ ಹೆಚ್ಚಾಗಿ ಗೋಚರಿಸುತ್ತದೆ. ಧಾರವಾಡದಲ್ಲಿ ಈ ಪಕ್ಷಿಯನ್ನು ತಂದಿಟ್ಟು, Geographical Transformation ಗೆ ಕಾರಣೀಭೂತರಾದ ಗೌಳಿ ಮಕ್ಕಳು ಆ ಹಕ್ಕಿಯ ಪ್ರಾಣದೊಂದಿಗೆ ಚೆಲ್ಲಾಟವಾಡುತ್ತಿದ್ದೇವೆ ಎಂಬ ಅರಿವೂ ಸಹ ಇಲ್ಲದೇ ಹೋಗಿದ್ದು, ಈ ದುರಂತಕ್ಕೆ ಕಾರಣ.

 

ಕೊನೆಪಕ್ಷ ನೀರಾದರೂ ಕುಡಿಸಿ ಬದುಕಿಸಿಕೊಂಡು, ಉಳವಿ ಚೆನ್ನಬಸವೇಶ್ವರ ದೇವಸ್ಥಾನದ ಆವರಣದಲ್ಲಿರುವ ಸಿಂಗಾಪೂರ್ ಚೆರ್ರಿ ಹಣ್ಣುಗಳನ್ನು ತಿನ್ನಿಸಿ ನೋಡಬಹುದೇ? ಎಂಬ ತರ್ಕ ಪ್ರೊ. ಕಲ್ಲೂರ ಹಾಗೂ ನಾನು ಮಾಡಿದೆವು. ಕಲ್ಲೂರ ಸರ್ ಪ್ರಥಮ ಪ್ರಯತ್ನವಾಗಿ ಮನನೊಂದ ಡ್ರೊಂಗೋ ಹಕ್ಕಿಗೆ ನೀರು ಕುಡಿಸಲು ಶತಾಯುಗತಾಯ ಪ್ರಯತ್ನಿಸಿದರು. ಹಕ್ಕಿ ಮುಖ ತಿರುಗಿಸುತ್ತಿದ್ದಂತೆ ನಮಗಾದ ನೋವು ಅಷ್ಟಿಷ್ಟಲ್ಲ. ಬಹುಶ: ಮನುಷ್ಯರ ಬಗ್ಗೆಯೇ ಅದಕ್ಕೆ ಹೇಸಿಗೆ ಹುಟ್ಟಿದಂತೆ ನನಗೆ ಕಂಡಿತು.

 

ಪ್ರೊ. ಗಂಗಾಧರ ಕಲ್ಲೂರ ತಮ್ಮ ಅಂಗೈಯಲ್ಲಿ ನೀರನ್ನು ಹಾಕಿಕೊಂಡು ವೈಟ್ ಬೆಲೀಡ್ ಡ್ರೊಂಗೋ ಗೆ ಕುಡಿಸಲು ಯತ್ನಿಸುತ್ತಿರುವುದು. ಕ್ಲಿಕ್ಕಿಸಿದವರು: ಬಿ.ಎಂ.ಕೇದಾರನಾಥ.

 

ಯಾವತ್ತೂ ಗುಂಪಿನಲ್ಲಿಯೇ ಇರಲು ಬಯಸುವ, ಹಲವಾರು ಹಕ್ಕಿಗಳೊಂದಿಗೆ ಸಖ್ಯ ಬೆಳೆಸಿ ಖುಷಿಯಾಗಿ, ಸ್ವಚ್ಛಂದದಿಂದ ಗಲಾಟೆ ಎಬ್ಬಿಸಿ ತನ್ನ ಉದರಂಭರಣ ಮಾಡಲು ಹವಣಿಸುವ ಹಕ್ಕಿ ರೆಕ್ಕೆ ಕತ್ತರಿಸಿಕೊಂಡು, ದೈಹಿಕವಾಗಿ-ಮಾನಸಿಕವಾಗಿ ಜರ್ಜರಿತವಾಗಿ ವ್ಯಾಕುಲಗೊಂಡಂತೆ ಬಿದ್ದುಕೊಂಡದ್ದು ನೋಡಿ ನಮಗೆ ದಿಕ್ಕೇ ತೋಚದ ಅನುಭವ. ಹಾಗೂ ಹೀಗೂ ಪ್ರೊ. ಕಲ್ಲೂರ ಈ ಹಕ್ಕಿ ಸುಂದರವಾಗಿ ಸೀಟಿ ಊದಿದಂತೆ ಸುಶ್ರಾವ್ಯವಾಗಿ ಹಾಡುತ್ತದೆ; ಜತೆಗೆ ಒಳ್ಳೆ ಮಿಮಿಕ್ರಿ ಕಲಾವಿದ ಎಂಬುದನ್ನು ಅರಿತು, ಸುಮಾರು ಅರ್ಧಗಂಟೆ  ಸುಶ್ರಾವ್ಯವಾಗಿ  ಸೀಟಿ ಹೊಡೆದು ಅದರೊಟ್ಟಿಗೆ ಸಂವಾದಿಸಿ, ನಂಬಿಕೆ ಹುಟ್ಟುವಂತೆ ಪ್ರಯತ್ನಿಸಿದರು. ಕೊನೆಗೆ ಹಕ್ಕಿ ತಾನೂ ಕೂಡ ಹಾಡುತ್ತ ‘ಕಾಲ್’ ಕೊಡಲು ಶುರುಮಾಡಿತು. ನಮಗಂತೂ ಹೋದ ಜೀವ ಮರಳಿ ಬಂದಂತಾಯಿತು.

 

 

ಗೌಳಿ ಮಕ್ಕಳು ಡ್ರೊಂಗೋ ರೆಕ್ಕೆಗಳನ್ನು ಹೀಗೆ ಕತ್ತರಿಸಿದ್ದರು. ಚಿತ್ರ: ಬಿ.ಎಂ.ಕೇದಾರನಾಥ.

 

ಕೂಡಲೇ ಉಳವಿ ಚೆನ್ನಬಸವೇಶ್ವರ ದೇವಸ್ಥಾನದ ಆವರಣಕ್ಕೆ ಕೊಂಡೊಯ್ದು ಸಿಂಗಾಪೂರ ಚೆರ್ರಿ ಹಣ್ಣಿನ ಗಿಡದ ಟೊಂಗೆಯ ಮೇಲೆ ಕುಳ್ಳಿರಿಸಿದೆವು. ಹಣ್ಣು ಹೆಕ್ಕಲು ಬಂದ ಇತರ ಹಕ್ಕಿಗಳು ಸಹ ಅಲ್ಲಿದ್ದವು. ಕುರೂಪಿಯಾಗಿ ಕಂಡ ಈ ಹಕ್ಕಿಯ ಬಳಿ ಯಾವ ಹಕ್ಕಿಯೂ ಸುಳಿಯಲು ಮನಸ್ಸು ಮಾಡಲಿಲ್ಲ. ಇದೂ ಕೂಡ ಹಣ್ಣು ಹೆಕ್ಕುವ ಯಾವ ಪ್ರಯತ್ನವನ್ನೂ ಮಾಡಲಿಲ್ಲ. ಕೊನೆಗೆ ನಾಲ್ಕಾರು ಹಣ್ಣು ಹರಿದು ತಂದು ಬಲವಂತವಾಗಿ ನಾವೇ ತಿನ್ನಿಸಿದೆವು. ಕೊನೆಗೆ ಹಣ್ಣನ್ನು ಹಕ್ಕಿಯ ಮುಂದಿಟ್ಟು ಕಾಯ್ದಿದ್ದು ಆಯಿತು.                    

ಸಿಂಗಾಪೂರ್ ಚೆರ್ರಿ ಹಣ್ನನ್ನು ತಿನ್ನಲು ನೀಡಿದರೂ ಯಾವುದೇ ಆಸಕ್ತಿ ತೋರಿಸದೇ ಹಾಗೆ ಕುಳಿತ ಡ್ರೊಂಗೋ. ಕ್ಲಿಕ್ಕಿಸಿದವರು: ಬಿ.ಎಂ.ಕೇದಾರನಾಥ.

 

ಎರಡು ದಿನ ಜೀವ ಹಿಡಿದಿಟ್ಟುಕೊಂಡು, ಅನಿವಾರ್ಯವೆಂಬಂತೆ ಆ ಹಣ್ಣುಗಳನ್ನೇ ತಿಂದು ಬದುಕುವ ಉತ್ಸಾಹ ಡ್ರೊಂಗೋ ತೋರಿತು. ಆದರೆ ದಿನದಿಂದ ದಿನಕ್ಕೆ ನಿಶ್ಯಕ್ತವಾಗುತ್ತ ಸಾಗಿತ್ತು. ಪ್ರೊ. ಕಲ್ಲೂರ ನಿರ್ಧಾರ ಮಾಡಿದರು. ಕರ್ನಾಟಕ ವಿಶ್ವವಿದ್ಯಾಲಯದ ಸಸ್ಯಶಾಸ್ತ್ರದ ಉದ್ಯಾನವನದಲ್ಲಿ ಬಿಟ್ಟುಬರುವುದು ಅವರ ನಿರ್ಧಾರವಾಗಿತ್ತು. ಬೆಳಿಗ್ಗೆ ವಾಕಿಂಗ್ ಹೋದಾಗ ಅಲ್ಲಿಯೇ ಒಂದು ಮರದ ಟೊಂಗೆಯ ಮೇಲೆ ಕುಳ್ಳಿರಿಸಿ ತಮ್ಮ ಯೋಗ, ವ್ಯಾಯಾಮ ಪೂರ್ತಿಗೊಳಿಸಿದರು. ವಾಪಸ್ ಬರುವಾಗ ಕುತೂಹಲದಿಂದ ಗಮನಿಸಲು ಹೋದರೆ ಅಲ್ಲಿಯೇ ಕಣ್ಣು ಪಿಳುಕಿಸುತ್ತ ಕುಳಿತಿತ್ತು ಡ್ರೊಂಗೋ!

 

ಅನಿವಾರ್ಯವಾಗಿ ಕಲ್ಲೂರ್ ಸರ್ ಅದನ್ನು ಮತ್ತೆ ಮನೆಗೆ ಕರೆತಂದರು. ಆರೈಕೆ ಹಾಗೆಯೇ ಮುಂದುವರೆಯಿತು. ಇಂದು ಬೆಳಿಗ್ಗೆ ನಮ್ಮ ಹಾರೈಕೆ, ಚಿಕಿತ್ಸೆ ಯಾವುದೂ ಫಲಿಸದೇ ಅದು ಮೃತಪಟ್ಟಿತು.

 

ಗಂಡು-ಹೆಣ್ಣು ಹಕ್ಕಿಗಳಲ್ಲಿ ಪ್ರತ್ಯೇಕಿಸದಷ್ಟು ಸಾಮ್ಯತೆಗಳಿದ್ದು, ಮಾರ್ಚ್ ತಿಂಗಳಿನಿಂದ ಜೂನ ತಿಂಗಳಿನ ವರೆಗೆ ಅವು ಗೂಡು ಕಟ್ತಿ ೪ ರಿಂದ ೫ ಮೊಟ್ಟೆಗಳನ್ನು ಇಡುತ್ತವೆ. ತಿಳಿ ಬಿಳಿ ಬಣ್ಣದ ಮೇಲೆ ಕಂದು ಚುಕ್ಕೆಗಳನ್ನುಳ್ಳ ಮೊಟ್ಟೆಗಳು ಅತ್ಯಂತ ಆಕರ್ಷಕವಾಗಿರುತ್ತವೆ. ನಾವು ಚಹಾ ಕುಡಿಯುವ ಕಪ್ಪಿನ ಆಕಾರದಲ್ಲಿರುವ ವೈಟ್ ಬೆಲೀಡ್ ಡ್ರೊಂಗೋ ಗೂಡಿಗೆ ಸಿಮೆಂಟ್ ಅಂದ್ರೆ ಜೇಡರ ಬಲೆ. ಮಧ್ಯದಲ್ಲಿ ಹತ್ತಿಯ ಮೆತ್ತನೆಯ ಹಾಸಿಗೆ ಹಾಸಿ ೨೧ ದಿನಗಳ ಕಾಲ ಅವು ಕಾವು ಕೊಡುತ್ತವೆ. ೩ ರಿಂದ ೪ ಮರಿಗಳು ಆ ಮೊಟ್ಟೆಯಿಂದ ಜೀವತಳೆಯುತ್ತವೆ. ಗಂಡು-ಹೆಣ್ಣು ಎರಡೂ ಹಕ್ಕಿಗಳು ಕುಟುಂಬ ನಿರ್ವಹಣೆಯ ಜಾವಾಬ್ದಾರಿ ಸಮಾನಾಗಿ ಹಂಚಿಕೊಂಡು ನಿಭಾಯಿಸುತ್ತವೆ.

 

ತನ್ನ ಗೂಡನ್ನು, ಮರಿಗಳನ್ನು ಇತರೆ ವೈರಿಗಳಿಂದ ರಕ್ಷಿಸಿಕೊಳ್ಳುವಲ್ಲಿ ಇವು ಭಯಂಕರ ಯುದ್ಧವನ್ನೇ ಸಾರಿಬಿಡಬಲ್ಲವು. ಆದರೂ, ಮನುಷ್ಯನ ಆಕ್ರಮಣದ ಮುಂದೆ ಅವು ಅಸಹಾಯಕ ಎಂಬುದಕ್ಕೆ ಈ ಪ್ರಕರಣ ಸಾಕ್ಷಿ.

 

 

 

 

 

 

 

 

 

 

 

 

 

 

 

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಪಕ್ಷಿ ಪ್ರಾಣ ಬಿಟ್ಟಿದ್ದು ಕೇಳಿ ತುಂಬಾ ದುಃಖವಾಯಿತು. ಆದರೂ ಆ ಹುಡುಗನ ಪ್ರಾಣಿ ದಯೆ ಹಾಗೂ ಸಮಯಪ್ರಜ್ಞೆ ಮೆಚ್ಚುಗೆಯಾಯಿತು. -ಪ್ರಸನ್ನ.ಎಸ್.ಪಿ

ಉತ್ತಮ ಲೇಖನ ಹರ್ಷರವರೆ... ಎಂದಿನಂತೆ ಸಚಿತ್ರ, ಮಾಹಿತಿಪೂರ್ಣ ಬರಹ ಆದರೆ ಆ ಅಂಬರಗುಬ್ಬಿಯ ಸಾವು ಮಾತ್ರ ವಿಷಾದಕರ. ಮನುಷ್ಯನ ದಬ್ಬಾಳಿಕೆಗೆ ಕೊನೆ ಎಂದೋ?

ಎಂದಿನಂತೆ ಸೂಪರ್ ಬರಹ ಹಾಗೂ ನಿರೂಪಣೆ ಹರ್ಷ ಅವರೇ. ನಿಮ್ಮ, ಪರೀಕ್ಷಿತ್, ಹಾಗೂ ಪ್ರೊ. ಕಲ್ಲೂರ್ ಅವರ ಪ್ರಯತ್ನ ಅಭಿನಂದನಾರ್ಹ. ಡ್ರೊಂಗೋ ಮರಿ ಸತ್ತಿದ್ದು ತಿಳಿದು ತುಂಬಾ ಬೇಜಾರಾಯ್ತು. :-(

ಆತ್ಮೀಯ ಪ್ರಸನ್ನ ಅವರೆ, ನನಗೂ ಬೇಜಾರಿದೆ. ಕೊಲ್ಲುವವರಿಗಿಂತ ಕಾಯುವವ ಮೇಲು ಎಂದು ಕೇಳಿದ್ದೆ. ಆದರೆ ಮೇಲಿನವನ ಆಸೆ ಏನಿತ್ತೋ? ತಮ್ಮ ಪ್ರತಿಕ್ರಿಯೆಗೆ ಧನ್ಯವಾದ.

ಹರ್ಷವರ್ಧನ್, ಮನುಜ ಮನುಜರನೇ ಕಿತ್ತು ತಿನ್ನುತ್ತಿರುವ ಈ ಕಾಲದಲ್ಲಿ ನಿಮ್ಮಂಥವರೂ ಇದ್ದಾರಲ್ಲಾ... ನಾವೂ ಇದ್ದೇವೆ, ನಮ್ಮ ಜೀವನಕ್ಕೊಂದು ಅರ್ಥ ಕೊಡಲೇ ವಿಫಲರಾಗುತ್ತಿದ್ದೇವಲ್ಲಾ... ನಿಮ್ಮ ಈ ಸೇವಾಮನೋಭಾವದ ಕಾರ್ಯಗಳಿಗೆ ನನ್ನಿಂದ ಸದಾ ಶುಭ ಹಾರೈಕೆಗಳು! - ಆಸು ಹೆಗ್ಡೆ ಕೊನೆಯ ಚಿತ್ರವನ್ನು ಇಲ್ಲಿಂದ ತೆಗೆದರೇ ಒಳ್ಳೆಯದೇನೋ...

ಆತ್ಮೀಯ ಆಸು ಹೆಗ್ಡೆ ಅವರೆ, ತಮ್ಮ ಪ್ರೀತಿಯ ಪ್ರತಿಕ್ರಿಯೆಗೆ ಧನ್ಯವಾದ. ತಮ್ಮ ಅನಿಸಿಕೆಯಂತೆ ಕೊನೆಯ ಚಿತ್ರ ಅಳಿಸಿದ್ದೇನೆ. ತಮ್ಮ ಹಾರೈಕೆ ಹೀಗೆ ನಮಗೆ ಶ್ರೀರಕ್ಷೆಯಾಗಿರಲಿ.

ಎಷ್ಟೆಲ್ಲ ಪ್ರಯತ್ನದ ನ೦ತರವೂ ಬಡ ಹಕ್ಕಿಯ ಜೀವ ಹಾರಿ ಹೋಯಿತಲ್ಲ! ಹರ್ಷವರ್ಧನರೆ, ಮತ್ತೊ೦ದು ಉತ್ತಮ ಲೇಖನ, ಪ್ರಕೃತಿಯ ಮೇಲೆ ಮಾನವನ ದಬ್ಬಾಳಿಕೆಯನ್ನು ಮಾರ್ಮಿಕವಾಗಿ ಬಿ೦ಬಿಸುತ್ತದೆ.

ಆತ್ಮೀಯ ಮಂಜು ಸರ್, ತಮ್ಮ ಪ್ರತಿಕ್ರಿಯೆ ನಮಗೆ ನೈತಿಕ ಬೆಂಬಲ ನೀಡುತ್ತದೆ. ಹೀಗೆ ಓದಿ, ಪ್ರತಿಕ್ರಿಯಿಸುತ್ತಿರಿ. ತಮಗೇನಾದರೂ ಉಪಾಯ ಹೊಳೆದರೆ ನಮಗೊ ತಿಳಿಸಿ, ಧಾರವಾಡದಲ್ಲಿ ಅಳ್ವಡಿಸುವ ಪ್ರಯತ್ನ ಮಾಡುತ್ತೇನೆ. ಪ್ರತಿಕ್ರಿಯೆಗೆ ಧನ್ಯವಾದ.

ಹರ್ಷ ಅವರೇ ಮತ್ತೊಂದು ಉತ್ತಮ ನಿರೂಪಣೆಯುಳ್ಳ ಕಳಕಳಿಯ ಲೇಖನ ನಿಮ್ಮಿಂದ ಎಲ್ಲರೂ ವಂದನಾರ್ಹರು ಪುಟ್ಟ ಪರೀಕ್ಷಿತನ ಕಾಳಜಿ ಮಾದರಿ.

ಅಯ್ಯೋ ಅನ್ನಿಸಿತು. ರಕ್ಷಣೆಯ ಪ್ರಯತ್ನಗಳ ಬಗ್ಗೆ ಅತೀವ ಸಂತಸವೂ ಆಯಿತು. ಹಕ್ಕಿ ಮೃತಪಟ್ಟಿದ್ದಕ್ಕೆ ವ್ಯಥೆಯೂ ಆಯಿತು. ಮನಕಲಕುವ ಲೇಖನ.