"ನಸೀರುದ್ದೀನ್ ಷಾ ನನ್ನ ಜೊತೆ ಅಭಿನಯಿಸೋಕೆ ನನ್ನದೇನೂ ಅಭ್ಯಂತರವಿಲ್ಲ"!-- ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆಃ ಭಾಗ ೨೮

To prevent automated spam submissions leave this field empty.

     ಮರುದಿನ ಬೆಳಿಗ್ಗೆ ಎಲ್ಲರಿಗಿಂತಲೂ ಮುಂಚೆ ಬಂದಿದ್ದ ಪ್ರಶ್ನಾಮೂರ್ತಿ, ಎಂದಿನಂತೆ. ಒಂದೆರೆಡು ಗಂಟೆಗಳ ಕಾಲದ ನಂತರ ನನ್ನ ಕ್ಲಾಸ್‍ರೂಮಿಗೆ ಬಂದು ಹೊರಬರುವಂತೆ ಕರೆದ. ಆಚೆ ಬಂದ ಕೂಡಲೆ ಆತ ಕೇಳಿದ್ದು ಇದು, "ಯಾಕೆ ಗುರು. ನನ್ನನ್ನು ಯಾರೂ ಮಾತಾಡಿಸುತ್ತಲೇ ಇಲ್ಲ. ಅಷ್ಟು ಹೊಟ್ಟೆ ಉರೀನ ಈ ಜನಕ್ಕೆ, ನಾನು ಟೀವಿ ಸೀರಿಯಲ್ ಹೀರೋ ಆಗಿರೋದು?" ಎಂದ. ಆತನನ್ನು ಅಲ್ಲಿ ನಿಂತಿದ್ದ ಹತ್ತಾರು ಸೈಕಲ್ಲುಗಳ ನಡುವೆ ನಿಂತಿದ್ದ ಒಂದೇ ಒಂದು ಬೈಕಿನ ಬಳಿ ಎಳೆದೊಯ್ದು, ಕನ್ನಡಿಯ ಬಳಿ ಆತನ ಮೂತಿಯನ್ನು ಹಿಡಿದೆ. ಬೈಕಿನ ಬಳಿ ಕರೆದೊಯ್ಯಲು ಕಾರಣ, ’ಸೈಕಲ್ಲುಗಳ ನಡುವೆ ನಿಲ್ಲಿಸಿ ಆತನ ಸ್ಟಾರ್-ಗಿರಿಗೆ ಅಪಮಾನವಾಗದಿರಲಿ ಎಂದು ಆತ ಅಂದುಕೊಳ್ಳಲಿ’ ಎಂದು!

     "ಮೀಸೆ ಮಾಯ. ಚೆಡ್ಡಿ ಚೆಲುವ. ಕಣ್ಣಿಗೆ ನಟ ಗಂಗಾಧರ್‍ ತರಹದ ಕಪ್ಪುಕನ್ನಡಕ. ನಿನ್ನ ತಾಯಿಯೂ ನಿನ್ನನ್ನು ಗುರ್ತಿಸೋಲ್ಲ, ಈ ನಿನ್ನ ಹನುಮಾವತಾರದಲ್ಲಿ. ಅದಕ್ಕೆ ಯಾರೂ ಮಾತನಾಡಿಸ್ತಿಲ್ಲ" ಎಂದೆ.

     "ಓ. ಹಾಗಾ ವಿಷಯ. ಅದಕ್ಕೇ ಇರಬೇಕು, ಇವತ್ತು ಬೆಳಿಗ್ಗೆ ಮನೆಯಿಂದ ಈಚೆ ಬಂದಾಕ್ಷಣ ಏನೋ ಮರೆತು ಒಳಗೆ ಹೋದಾಗ ನನ್ನಮ್ಮ ಮತ್ತು ನನ್ನ ತಂಗಿ ಮೊದಲು ಗಾಭರಿಯಾಗಿ ನಂತರ ಮುಸಿಮುಸಿ ನಕ್ಕದ್ದು, ನನ್ನನ್ನು ನೋಡಿ" ಎಂದು ಮತ್ತೆ ಪ್ಯಾದೆಯಾದ ಪ್ರಶ್ನೆ!

"ಎಲ್ರೂ ಮೈಮೇಲೆ ಬಟ್ಟೆ ಹಾಕಿಕೊಂಡರೆ ನೀನು ಬಟ್ಟೆಯ ಒಳಕ್ಕೆ ದೇಹವನ್ನು ತುರುಕಿದಂತಿದ್ದೀಯ," ಎಂದೆ. 

"ಗುರ್ರ್ ರ್ರ್ ರ್ರ್" ಎಂದ ಪ್ರಶ್ನೆ.

"ಅಲ್ಲ. ನೀನು ಬಟ್ಟೆಯ ಒಳಕ್ಕೆ ದೇಹವನ್ನು ತುರುಕಿದಂತಿಲ್ಲದಿದ್ದರೆ ಹೇಳು. ಮಾಮನಿಗೆ ಹೇಳಿ ಬೇರೆ ನಟರನ್ನು ಹುಡುಕುವ" ಎಂದೆ.

"ಯಾವನ್ ಹೇಳ್ದ ನೀನು ಹೇಳಿದ್ದು ತಪ್ಪು ಅಂತ. ಬೇಕಾದ್ರೆ ಬಟ್ಟೆಯ ಒಳಗೆ ದೇಹವೇ ಇಲ್ಲದಂತವನು ನಾನು ಅನ್ನುವ ಹಾಗೆ ಬೇಕಾದ್ರೂ ನಟಿಸಬಲ್ಲೆ" ಎಂದುಬಿಟ್ಟು,"ಸರಿ, ಸ್ಕ್ರಿಪ್ಟ್ ಈಗ್ಲೇ ಕೊಟ್ರೆ ಓದಿಕೊಂಡು ತಯಾರಾಗ್ತೀನಿ ಸಾಯಂಕಾಲ ಶೂಟಿಂಗಿಗೆ ಅನಿಯಣ್ಣ" ಎಂದಾತ ಕೇಳಿದಾಗ ನಾನು ಬೆಚ್ಚಿದರೆ, ಒಳಗಿದ್ದ ನನ್ನ ಸಹಪಾಠಿ ಹುಡುಗ-ಹುಡುಗಿಯರು ಕಿಸಕ್ಕೆಂದರು.

"ಇದ್ಯಾವ ಹೊಸ ವರಸೆ ಕಣಯ್ಯ. ನಿನಗಿಂತ ನಾನು ಕೇವಲ ಒಂದೇ ವರ್ಷ ದೊಡ್ದವ್ನು. ಅಣ್ಣಗಿಣ್ಣ ಅಂತೆಲ್ಲ ಕರೀಬೇಡ" ಎಂದೆ.

"ಇಲ್ಲ, ಮಾಮ ಹೇಳಿದಾನೆ. ಶೂಟಿಂಗ್ ಮುಗಿಯೋವರೆಗೂ ನಿನ್ನನ್ನು ಹಾಗೆ ಕರೆಯಬೇಕೆಂದು" ಎಂದ.

"ಅಂದ್ರೆ ಶೂಟಿಂಗ್ ಮುಗಿದ ಕೂಡಲೆ ’ಅನಿಲ’ ಅಂತ ಕರೀತಿಯ?" ಎಂಬ ಪ್ರಶ್ನೆಗೆ ’ಹೌದು’ ಎಂದು ಕೂಡಲೆ ತಲೆಯಾಡಿಸಿದ.

(೮೪)

     ಪ್ರಶ್ನಾಮೂರ್ತಿ ಮತ್ತು ಗೆಳೆಯನೊಬ್ಬ ಕುಮಾರ ಕೃಪ ಗೆಸ್ಟ್ ಹೌಸ್ ಗೋಡೆಯ ಅರುಗಿನಲ್ಲಿ ನಡೆಯುತ್ತ ಮಾತನಾಡುತ್ತ ಹೋಗುವ, ಸೀರಿಯಲ್ಲಿನ ದೃಶ್ಯವದು. ಕ್ಯಾಮರ ಇಲ್ಲದುದರಿಂದ ಎರಡೂ ಕೈಗಳನ್ನೂ ಕ್ಯಾಮರಗಳಂತೆ ಹಿಡಿದು ಮಾಮ "ಸ್ಟಾರ್ಟ್" ಎಂದು ಕಿರುಚಿದ. ಕಲಾಶಾಲೆಯ ಡ್ರಾಯಿಂಗ್ ಬೋರ್ಡ್ ಒಂದಕ್ಕೆ ಚಿನ್ನಾರಿ ಕಾಗದವನ್ನು ಅಂಟಿಸಿ ಅದನ್ನು "ಹಿಡಿದುಕೊಂಡು ಅಲುಗಾಡದೆ ನೆಟ್ಟಗೆ ನಿಲ್ಲಿ" ಎಂಬ ಆದೇಶಭರಿತ ಬೇಡಿಕೆಯನ್ನಿರಿಸಿ, ಕಲ್ಪನಕ್ಕ ಮತ್ತು ಬಿಗ್-ಡ್ಯಾಡಿಯರಿಗೇ ಆ ಕೆಲಸವನ್ನು ಕೊಟ್ಟುಬಿಟ್ಟಿದ್ದೆವು!

"ಏಯ್ ಮಾಮ, ಅನಿಲ, ಈಗ್ಲೂ ನಮಗೆ ಅನುಮಾನವಿದೆ. ಪ್ರಶ್ನೆ ಬಕ್ರಾ ಆಗೋಲ್ಲ. ಆತ ’ನಟಿಸುವಂತೆ ನಟಿಸುತ್ತಿದ್ದಾನೆ’ಯಷ್ಟೇ" ಎಂದರವರಿಬ್ಬರು. ಅವರು ಹೇಳುತ್ತಿದ್ದುದು, ಕಣ್ಣಮುಂದೆ ಮುಂದೆ ನಡೆದದ್ದು --ಎರಡೂ ಮ್ಯಾಚ್ ಆಗಲಿಲ್ಲ!

     ರಿಹರ್ಸಲ್ ಶುರುವಾಯಿತು. ಕುಮಾರಕೃಪ ಗೋಡೆಯನ್ನೇ ಶೂಟಿಂಗಿಗೆ ಆಯ್ದುಕೊಳ್ಳಲು ಕಾರಣ ಅದು ಚಿತ್ರಕಲಾ ಪರಿಷತ್ತಿನ ಒಂದು ಮೂಲೆಯಲ್ಲಿದ್ದು, ಉಪಾಧ್ಯಾಯರಿಗ್ಯಾರಿಗೂ ಕಾಣುವಂತಿರಲಿಲ್ಲ. ಪರಿಷತ್ತಿನ ಮಿದುಳು, ಹೃದಯ, ಮನಸ್ಸು, ದೇಹ--ಇವೆಲ್ಲವೂ ಆಗಿದ್ದ, ಆಗ ಬದುಕಿದ್ದ ಪ್ರೊ.ಎಂ.ಎಸ್.ನಂಜುಂಡರಾವ್ ಮೇಷ್ಟ್ರಂತೂ ಬಹಳ ಶಿಸ್ತಿನವರಾಗಿದ್ದರು. ಇಡಿಯ ನಾಲ್ಕು ಎಕರೆ ಕ್ಯಾಂಪಸ್ಸಿನಲ್ಲಿ, ಅಲ್ಲಿನ ವಾಚ್‍ಮನ್ ದೊಡ್ಡಯ್ಯ ಮಧ್ಯರಾತ್ರಿಯಲ್ಲಿ ಒಂದು ಸಣ್ಣ ಬೀಡಿಯನ್ನು ಸಂಪೂರ್ಣವಾಗಿ ಸೇದಿ, ಯಾವುದೋ ಮೂಲೆಯ ನೆಲದಲ್ಲಿ ಹೊಸಕಿ ಹಾಕಿ ಅದುಮಿದ್ದರೂ, ಅದು ಹೇಗೋ ಮೇಷ್ಟ್ರ ಕಣ್ಣು-ಮೂಗು ಗ್ರಹಿಸಿಬಿಡುತ್ತಿತ್ತು. ಅರವತ್ತು ವರ್ಷದ ದೊಡ್ಡಯ್ಯನನ್ನು ಕೆಲಸದಿಂದ ಡಿಸ್‍ಮಿಸ್ ಮಾಡುತ್ತಿದ್ದರು, ಆಗಾಗ, "ಇಲ್ಲೇ ಈ ಪಾತಿಯಲ್ಲೇ ಗಿಡ ನೆಡಿ ಸರಿ. ಪ್ರತಿವರ್ಷ ಎಲ್ಲ ಮಿನಿಸ್ಟ್ರುಗಳೂ ಇಲ್ಲೇ ಗಿಡ ನೆಡೋದು" ಎಂಬ ಆರ್.ಕೆ.ಲಕ್ಷ್ಮಣ್ ವ್ಯಂಗ್ಯಚಿತ್ರವೊಂದರಂತಾಯಿತಿದು. ಮೇಷ್ಟ್ರು ದೊಡ್ಡಯ್ಯನನ್ನು ಆಗಾಗ ಡಿಸ್‍ಮಿಸ್ ಮಾಡುತ್ತಲೇ ಇದ್ದರು. 

     "ಹೋಗ್, ನಿಮ್ಮಪ್ಪನ್ನ ಕರ್ಕೊಂಡ್ ಬಾ" ಎಂದು ಆಗಲೇ ಅರವತ್ತಾಗಿದ್ದ ದೊಡ್ಡಯ್ಯನನ್ನು ಒಂದು ವಾರ ಓಡಿಸಿಬಿಡುತ್ತಿದ್ದರು. ಅಂತಹವರ ಹದ್ದಿನ ಕಣ್ಣನ್ನು ತಪ್ಪಿಸಿ ನಮ್ಮ ಪ್ರಹಸನ ನಡೆಸಬೇಕಿತ್ತು!

     ಪ್ರಶ್ನಾಮೂರ್ತಿಗೆ ಮತ್ತು ಆತನ ಗೆಳೆಯ ಜ್ಯೂಸ್ ಮುರುಳಿಗೆ (ಈತನಿಗೆ ಈ ಪ್ರಹಸನ ಸುಳ್ಳೆಂದು ತಿಳಿದಿತ್ತು) ಮಾಮಾ-ನಾನು ಬರೆದುಕೊಟ್ಟು, ಬಾಯ್ಪಾಟ ಮಾಡಿಸಿದ ಸ್ಕ್ರಿಪ್ಟ್ ಹೀಗಿತ್ತುಃ

ಪ್ರ.ಮೂಃ ನಿನ್ ತಂಗಿ ಮಸ್ತು ಫಿಗರ್ ಗುರು.

ಜ್ಯೂ.ಮುಃ ಯಾಕ್ಲೆ ಎಂಗೈತೆ ಮೈಗೆ?

ಪ್ರ.ಮೂಃ ಅಲ್ಲಮ್ಮ, ಸೌಂದರ್ಯಶಾಸ್ತ್ರದ ಪ್ರಕಾರ ಸುಂದರವಾದುದನ್ನು ಸುಂದರ ಎಂದು ಕರೆದರೆ ತಪ್ಪೇನು?

ಜ್ಯೂ.ಮುಃ ಸುಂದರವಾಗಿರುವುದನ್ನು ಹೆಸರಿಡಿದು ಕರೆಯದಿದ್ದರೂ ಅದು ಸುಂದರವಾಗಿರೋಲ್ವೆ?

ಪ್ರ.ಮೂಃ ಇರುತ್ತೆ.

ಜ್ಯೂ.ಮುಃ "ಮತ್ತೇನು ನಿನ್ನ ಮಧ್ಯಸ್ಥಿಕೆ, ಬಡ್ಡೇತದ್ದೆ. ಅವ್ಳ ತಂಟೆಗೆ--ಮಾತಲ್ಲಾದರೂ ಸರಿ--ಬಂದ್ರೆ, ಬರೀ ಬಾಯ್ಮಾತಲ್ಲಲ್ಲದೆ ಅಕ್ಷರಶಃ ಸೊಂಟ ಮುರೀತಿನಿ" ಎನ್ನುತ್ತ ಮುರುಳಿ ಪ್ರಶ್ನೆಯ ಪ್ರುಷ್ಠಕ್ಕೆ ಮೊಣಕಾಲಿನಿಂದ ಒದ್ದ. ಪ್ರಶ್ನೆ ಕೆಳಕ್ಕೆ ಬಿದ್ದ.

(೮೫)

     "ಕಟ್ ಕಟ್, ಕ್ಯಾಮರ ಬರೋ ಹೊತ್ತಾಯ್ತು, ಕತ್ತಲಾಗ್ತಿದೆ, ರಿಹರ್ಸಲ್ ಸರಿಯಾಗದಿದ್ರೆ ಇಂದು ಶೂಟಿಂಗ್ ಕ್ಯಾನ್ಸಲ್" ಎಂದು ಮಾಮ ಕೋಪ ನಟಿಸಿದ.  

     ಆತಂಕದಿಂದ ಮುಖ ಸಪ್ಪೆ ಹಾಕಿಕೊಂಡ ಪ್ರಶ್ನೆ, "ನಾನು ಸರಿಯಾಗೇ ಬಿದ್ದೆ ಮಾಮ. ಇವ್ನು ನನಗೆ ಸರಿಯಾಗಿ ಒದೀಲಿಲ್ಲ ಅಷ್ಟೇ. ಹೋಗ್ಲಿ ಮಾಮ ನೀನೇ ರಿಯಲಿಸ್ಟಿಕ್ ಆಗಿ ನನಗೆ ಒದ್ದು ಬಿಡು. ಶಾಟ್ ಸಹಜವಾಗಿರಲಿ. ಬಾ ರಿಹರ್ಸ್ ಮಾಡುವ" ಎಂದುಬಿಟ್ಟ!

     ರೋಗಿ ಬಯಸಿದ್ದು, ವೈದ್ಯ ಹೇಳಿದ್ದು ಒಂದೇ ಆಗಿಬಿಟ್ಟಿತು. ಪ್ರಶ್ನೆ ಕ್ಯಾಮರ ಶಾಟ್ ಎಂದು ಹೇಳಿದರೆ, ಮಾಮ ಪೈಟಿಂಗ್ ಶಾಟ್ ಎಂದು ಬೇಕೆಂದೇ ತಪ್ಪರ್ಥ ಮಾಡಿಕೊಂಡ. ಮರುದಿನ ಪ್ರಶ್ನೆಯ ಲುಕ್ ಮಾತ್ರವಲ್ಲ, ನಡೆಯುವ ಭಂಗಿಯೇ ಬದಲಾಗಿತ್ತು. ಮೀಸೆ ಇಲ್ಲದ, ಕಪ್ಪುಗಾಜಿನ ಕನ್ನಡಕದ, "?" ಮಾರ್ಕಿನ ನಿಲುವಿನ ಪ್ರಶ್ನೆಮೂರ್ತಿ ನಡೆವಾಗಿನ ಭಂಗಿಗೆ ಒಂದು ವಿಚಿತ್ರ ಅಸಮತೆ ಬಂದುಬಿಟ್ಟಿತ್ತು. ಹಳ್ಳಿಯಲ್ಲಿ ಬಾಡೂಟ ಮಾಡುವಾಗ ಏಕಾಗ್ರತೆಗೆ ಭಂಗ ತರುವಂತೆ ಕೈಬಾಯಿಯನ್ನೇ ಬಿಡದೇ ನೋಡುತ್ತ, ನಿರೀಕ್ಷಿಸುತ್ತ ಕೂರುವ ಬೀದಿನಾಯಿಯು, ಯಜಮಾನನ ಊಟವಾದ ನಂತರ ಸೊಂಟ ಮುರಿಸಿಕೊಂಡರೂ ಅಳಿದುಳಿದ ಮೂಳೆಗಾಗಿ ಹಲ್ಲುಕಚ್ಚಿಕೊಂಡು ಹಿಂದೆ ಬೀಳುವ ನಾಯಿಯಂತೆ ನಡೆಯತೊಡಗಿದ್ದ ಪ್ರಶ್ನೆ. ಸರಿಯಾಗಿ ನಡೆಯಲೂ ಆಗದಂತಾಗಿದ್ದ--ಮಾಮಾನ ಶಾಟ್‍ನ ಪ್ರತಿಫಲವಾಗಿ--ಪ್ರಶ್ನೆಯನ್ನು ’ಅಸಮಕಾಲೀನ ಕಲಾವಿದ’ ಎಂದು ಕರೆಯತೋಡಗಿದೆವು. ನಿನ್ನೆ ಸಂಜೆಯ ರಿಹರ್ಸಲ್ಲಿನ ನೆಪದಲ್ಲಿ ಮಾಮ ಆತನ ಸೊಂಟಕ್ಕೆ ಅಷ್ಟು ಜೋರಾಗಿ ಒದ್ದಿದ್ದ!! ಬಿಗ್ ಡ್ಯಾಡಿ ತನ್ನ ಕಣ್ಣನ್ನೇ ನಂಬದಾಗಿದ್ದ, ಕಲ್ಪನಕ್ಕಳ ಕಣ್ಗಳಲ್ಲಿ ನೀರು ಮಡುವು ನಿಂತಿತ್ತು!

(೮೬)

     ಮುಂದಿನ ಆರುದಿನ "ಗಾಜಿನ್ಮನೇಲಿ ಟೋಪಿ"ಯ ಮೂರು ರಿಹರ್ಸಲ್‍ಗಳು,ಕ್ಯಾಮರಾ ಸಹಾಯವಿಲ್ಲದೆಯೇ ನಡೆಯಿತು. ಪ್ರಶ್ನಾಮೂರ್ತಿ ತನ್ನ ಜೀವನದಲ್ಲೇ ಮಾಡಿರದಿದ್ದ ಏರೋಬಿಕ್ಸ್, ಕವಾಯತ ಹಾಗೂ ಯೋಗದ ಪೋಸ್ಛರ‍್ಗಳನ್ನೆಲ್ಲ ಮಾಡಿಸಿಬಿಟ್ಟ ಮಾಮ. ಇಡೀ ಕಾಲೇಜಿನ ಮುನ್ನೂರು ಚಿಲ್ಲರೆ ವಿದ್ಯಾರ್ಥಿಗಳಲ್ಲಿ ಒಬ್ಬರೂ "ನಾನು ರಿಹರ್ಸಲ್ ನೋಡಲಿಲ್ಲ" ಎನ್ನದಂತೆ, ಅವರನ್ನೆಲ್ಲ ಹುಡುಕಿ ಹುಡುಕಿ, ಕರೆಸಿ ಪ್ರಶ್ನೆಯ ಮೂಲಕ ’ಗೆಜ್ಜೆಪೂಜೆ’ ಮಾಡಿಸುತ್ತಿದ್ದೆವು. ಸಾದ್ಯಂತವಾಗಿ ಪ್ರಶ್ನೆ ಅರೆನಗ್ನನಾಗಿದ್ದ--ದೇಹದ ಮೇಲಿನ ಅರ್ಧಭಾಗ ಮಾತ್ರ. ಆತನದ್ದು ಮೊದಲೇ ’ಜೀರೋ ಫಿಗರ್’. ಆತನ ಎದೆಯ ಕವಚದ ಮೂಳೆಗಳನ್ನು ಒಟ್ಟಾಗಿ ಎಣಿಸಿದಾಗ ಆತನಿಗೆ ಆ ಕಾಲಕ್ಕೇ ಹನ್ನೆರೆಡು ಪ್ಯಾಕ್‍ಗಳಿದ್ದವು!

     ತನ್ನ ತಾಯಿಗೆ ತನ್ನ ನಟನೆಯ ಬಗ್ಗೆ ಹೇಳಿಬಿಟ್ಟಿದ್ದ ಪ್ರಶ್ನೆ. ಶ್ರೀರಾಮಪುರದ ವೈಕುಂಠರಾಜುರವರ ’ವಾರಪತ್ರಿಕೆ’ ಆಫೀಸಿನ ಪಕ್ಕದ ಪ್ರಶ್ನೆಯ ಮನೆಯ ವಟಾರದಲ್ಲಿ ಎಲ್ಲರಿಗೂ ಅದು ತಿಳಿದುಬಿಟ್ಟಿತ್ತು. "ಈಗ್ಲೇ ಆಟೋಗ್ರಾಫ್ ಎಲ್ಲ ಕೊಡ್ಬೇಡ ಗುರು" ಎಂದು ಗೆಳೆಯರೆಲ್ಲ ಛೇಡಿಸಿದರೆ, "ಛೆ, ಛೆ. ಈಗ್ಲೆ ಅದೆಲ್ಲ ಬೇಡ" ಎಂದು ಗಂಭೀರವಾಗಿ ಪ್ರತಿಕ್ರಿಯಿಸುತ್ತಿದ್ದ ಪ್ರಶ್ನೆಯು, ಸ್ಪೇನಿನ ಉದ್ಘ್ರಂತ ಸಾಹಿತ್ಯದ ಡಾನ್ ಕ್ಯುಯೋಟ್‍ನ (Don Quoxite) ಕನ್ನಡದ ಅವತರಣಿಕೆಯಾಗಿ ನಮಗೆ ಕಂಡುಬಿಟ್ಟ! ಒಂದೇ ವಾರದಲ್ಲಿ ಚಿತ್ರಕಲಾ ಪರಿಷತ್ತಿಗೇ ಜಗತ್ಪ್ರಸಿದ್ಧನಾಗಿಬಿಟ್ಟಿದ್ದ ಪ್ರಶ್ನಾಮೂರ್ತಿ!

     ಆ ದಿನಗಳಲ್ಲೇ ಒಮ್ಮೆ ಪ್ರಶ್ನೆಯೊಂದಿಗೆ ನಾನು ಮಾಮಾ ನಡೆಯುತ್ತ, ಶಿವಾನಂದ ಸರ್ಕಲ್ ಕಡೆಗೆ ಹೋಗುತ್ತಿದ್ದೆವು. ಈಗಾಗಲೇ ತನಗೆ ತಾನೇ ಸ್ಟಾರ‍್ವ್ಯಾಲ್ಯೂ ತಂದುಕೊಂಡುಬಿಟ್ಟಿದ್ದ ಪ್ರಶ್ನೆ ಗೆಳೆಯರೊಂದಿಗೆ ನಡೆದುಹೋಗುವಂತೆ ನಮ್ಮಿಬ್ಬರೊಂದಿಗೆ ನಡೆಯುತ್ತಿರಲಿಲ್ಲ. ಬದಲಿಗೆ ನಮ್ಮಿಬ್ಬರ ನಡುವೆ ಹಂಚಿಕಡ್ಡಿಯಂತೆ ನುಸುಳಿ, ನಾವಿಬ್ಬರೂ ಆತನಿಗೆ ಅಂಗರಕ್ಷಕರೋ ಎಂಬಂತೆ ಮಾಡಿಬಿಡುತ್ತಿದ್ದ. ಕೆಲವು ಕದ್ದು ಮುಚ್ಚಿ ಪ್ರಶ್ನೆಯು ತನಗೆ ಭವಿಷ್ಯದಲ್ಲಿ ಬರಲಿರುವ ತಾರಾಪಟ್ಟವನ್ನು ವಿವರಿಸಿ, ಚರ್ವಿತಚರ್ವಣವಾಗಿ ಹೇಳಿ, ಬಲವಂತವಾಗಿ ಆಟೋಗ್ರಾಫ್‍ಗಳನ್ನು ಚೀಟಿಗಳಲ್ಲಿ ಬರೆದು, ಅವರುಗಳ ಕಿಸೆಗಳಿಗೆ ತುರುಕಿದ ಸುದ್ದಿಯಂತೂ ನಮಗೆ ಬಹಳ ಮಜಾ ನೀಡಿತು! ಒಮ್ಮೊಮ್ಮೆ ನಮ್ಮನಮ್ಮ ಮನೆಗಳಲ್ಲಿ ಯಾವ್ಯಾವ ಸಂದರ್ಭಗಳಲ್ಲಿಯೋ ಪ್ರಶ್ನೆಯ ದಶಾವತಾರ ನೆನಪಾಗಿ ವಿನಾಕಾರಣ ನಕ್ಕುಬಿಡುತ್ತಿದ್ದೆವು. ಏಕೆಂದರೆ ಆತನಾವತಾರಗಳನ್ನು ಸೃಷ್ಟಿಸಿದವರು, ಸೃಷ್ಟಿಸುತ್ತಿದ್ದವರು ಮತ್ತು ಪಂದ್ಯ ಗೆಲ್ಲಬೇಕಿದ್ದ ಜವಾಬ್ದಾರಿ ಮತ್ತು ತಲೆನೋವು ಇದ್ದದ್ದು ನಮಗೇ ಹೊರತು ಪ್ರಶ್ನೆಗಲ್ಲವಲ್ಲ. ಎಲ್ಲಿಯವರೆಗೂ ಆತ ಜಸ್ಟ್ ಪ್ರಶ್ನೆಯಾಗಿರುತ್ತಾನೋ ಅಲ್ಲಿಯವರೆಗೂ ನಮ್ಮ ಗೆಲುವು ಕಟ್ಟಿಟ್ಟ ಬುತ್ತಿಯಾಗಿತ್ತು. ತನ್ನ ಸುತ್ತಲೂ ನಿರ್ಮಾಣವಾಗುತ್ತಿದ್ದ ಚಕ್ರವ್ಯೂಹಕ್ಕೆ ಪ್ರಶ್ನೆಯು ಉತ್ತರ ಹುಡುಕಬಾರದಿತ್ತು, ಅಷ್ಟೇ!

     ತೆಲುಗಿನ ಸ್ಪುರದ್ರೂಪಿ ನಟ ವೆಂಕಟೇಶ್ ಸ್ಕೂಲ್ ಟೀಚರ್/ವಾರ್ಡನ್ ಆಗಿರುವಾಗ ಆತನೊಂದಿಗೆ ಒನ್-ವೇ ಪ್ರೀತಿಯಲ್ಲಿ ಸಿಕ್ಕಿಹಾಕಿಕೊಳ್ಳುವ ವಿದ್ಯಾರ್ಥಿನಿಯ ಕಥೆಯುಳ್ಳ ಸಿನೆಮವೊಂದರ ಪೋಸ್ಟರ್ ಅಲ್ಲಿ ದೊಡ್ಡದಾಗಿ ಗಾಂಧಿಭವನದ ಗೋಡೆಗೆ ಅಂಟಿಸಲಾಗಿತ್ತು. "ಅವ್ನು ನೋಡೋಕೆ ಸುಮಾರಾಗಿದ್ದಾನೆ ಸಿವ. ಆದ್ರೆ ಆಕ್ಟಿಂಗ್ ಇಲ್ಲ. ಅವ್ನು ಮೊದ್ಲು ಟಿವಿ ಸೀರಿಯಲ್ಲಿನಲ್ಲಿ ನಟಿಸಬೇಕಾಗಿತ್ತು. ಎಡವಿಬಿಟ್ಟ, ಸಿನೆಮಕ್ಕೆ ನೇರವಾಗಿ ಬರುವ ಮೂಲಕ. ನಟನೆಗೆ ಸೌಂದರ್ಯ ಮುಖ್ಯವಲ್ಲ ಗುರು" ಎಂದು ಬಿಟ್ಟಿ ಉಪದೇಶ ನೀಡತೊಡಗಿಬಿಟ್ಟ ಪ್ರಶ್ನೆ! "ಹೌದು ನಮ್ಮ ಸೀರಿಯಲ್ಲಿಗೆ ಅಪ್ಪಿತಪ್ಪಿಯೂ ಯಾವ ಕೋನದಿಂದಲೂ ಕುರೂಪವನ್ನು ಬಿಟ್ಟುಕೊಡದ ನಿನ್ನಂತವನೇ ಬೇಕು," ಎಂದೆವು. ಮೈಯೆಲ್ಲ ಉರಿದು ಹೋದ ನಮ್ಮನ್ನು ಒಂದಷ್ಟು ಸಮಾಧಾನ ಮಾಡಲು ಮತ್ತೆ ತಲಾ ಮೂರು ಮೂರು ಕಪ್ ಚಹಾ ಹಾಗೂ ಸಂಜೆಯ ಬಿಸಿ ಮಸಾಲೆ ದೋಸೆಯನ್ನು ಕೊಡಿಸಬೇಕಾಯಿತು ಪ್ರಶ್ನೆ ಪಾಪ, ಸಾಲದ ಲೆಕ್ಕದಲ್ಲಿ!

(೮೭)

     ಅದೇ ಸಮಯದಲ್ಲಿ "ಮನೆ" ಕನ್ನಡ ಚಲನಚಿತ್ರದ ಶೂಟಿಂಗನ್ನು ಮಲ್ಲೇಶ್ವರದಲ್ಲಿ ನಡೆಸುತ್ತಿದ್ದರು ಗಿರೀಶ್ ಕಾಸರವಳ್ಳಿ. ಅದರ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದ ನಸೀರುದ್ದೀನ್ ಷಾ ಬೆಂಗಳೂರಿನಲ್ಲೇ ಇದ್ದರು. ಇದನ್ನೇ ನೆಪಮಾಡಿಕೊಂಡ ಮಾಮ ಮರುದಿನ ಪ್ರಶ್ನೆಯೊಂದಿಗೆ ಮಾತಿಗಿಳಿದ.

"ಒಂದು ರಿಕ್ವೆಸ್ಟ್ ಪ್ರಶ್ನೆಯವರೆ" ಎಂದ. ಬಹುವಚನವೂ ಸಹ ನಮ್ಮ ಸೀರಿಯಲ್ಲಿನ ಪ್ರಹಸನದ ನಾಟಕದ ಭಾಗವಾಗಿ ಒಂದು ವಾರಕಾಲವಾಗಿತ್ತು. ಪ್ರಶ್ನೆಗಿದು ಖುಷಿಕೊಟ್ಟಿತ್ತು.

"ನರ್ವಸ್ ಆಗಬೇಡ ಮಾಮ. ಏನದು ಹೇಳು, ಕಾಸೊಂದನ್ನು ಬಿಟ್ಟು"

"ಏನಿಲ್ಲ. ಮನೆ ಶೂಟಿಂಗಿಗೆ ನಾಸಿರುದ್ದೀನ್ ಷಾ ಬೆಂಗಳೂರಿನಲ್ಲಿದ್ದಾರೆ."

"ಓಕೆ. ನಂಗೊತ್ತು. ಏನೀಗ?"

"ಏನಿಲ್ಲ. ನೀನು ಬೇಜಾರು ಮಾಡಿಕೊಳ್ಳದಿದ್ದರೆ, ಇಲ್ಲ ಅಂತ ಅನ್ನೋದಿಲ್ಲ ಅಂತ ಮೊದಲೇ ಭಾಷೆ ಕೊಟ್ಟರೆ ಒಂದು ಮಾತು".

"ಏನೇಳ್ಮಾಮ. ವಿಷಯ ಹೇಗಿದೆಯೋ ಅದರೆ ಮೇಲೆ ಆಧರಿಸಿರುತ್ತೆ ನನ್ನ ಹ್ಞೂಂ".

     "ನಮ್ಮ, ಅಲ್ಲ ನಿನ್ನ ಎಪಿಸೋಡೊಂದರಲ್ಲಿ ನಸೀರುದ್ದೀನ್ ಷಾರನ್ನು ಒಂದು ಅತಿಥಿ ಪಾತ್ರವಾಗಿಸಬೇಕು ಅಂದುಕೊಂಡಿದ್ದೇನೆ. ಒಳ್ಳೆ ಮೈಲೇಜು. ಒಪ್ಪಿಕೋ" ಎಂದು ವಿನಮ್ರತೆ ನಟಿಸುತ್ತ ಹೇಳಿದ ಮಾಮ. ಪ್ರಶ್ನಾಮೂರ್ತಿಯನ್ನು ಬಕ್ರ ಮಾಡುವ ಪ್ರಹಸನದ ರೂವಾರಿಯಾದ ಮಾಮ ಮುಂದೆ ಇಪ್ಪತ್ತು ವರ್ಷಗಳಲ್ಲಿ ಏಳೆಂಟು ಸಿನೆಮಗಳಲ್ಲಿ ನಿಜವಾಗಿಯೂ ನಟಿಸಲು (ಅವುಗಳಲ್ಲಿ ಎರಡು ಸಿನೆಮಗಳ ನಾಯಕ ನಟ ಕೂಡ!) ಅಂದೇ ಪೂರ್ವತಯಾರಿಯೋ ಎಂಬಷ್ಟು ಚೆನ್ನಾಗಿತ್ತು ಆತನ ವಿನಮ್ರತೆಯ ನಟನೆ.

      ಪ್ರಶ್ನಾಮೂರ್ತಿ ಚಿಂತಾಕ್ರಾಂತನಾದ, "?" ಮಾರ್ಕಿನಲ್ಲಿ ಅತ್ತಿತ್ತ ಕುಂಟುತ್ತ ನಡೆದ, ಗಾಗಲ್ಸ್ ತೆಗೆದು ಬರ್ಮುಡ ಚೆಡ್ಡಿಗೆ ಒರೆಸಿ ಒರೆಸಿ ಇಟ್ಟ. ಇನ್ನು ಸ್ವಲ್ಪ ಹೊತ್ತಾದರೆ ಆತನ ಚೆಡ್ಡಿಯೇ ಗಾಗಲ್ಸ್‍ನಷ್ಟು ಹೊಳೆಯತೊಡಗುತ್ತದೆ ಎಂದು ಭಾಸವಾಗತೊಡಗಿತು ನಮಗೆಲ್ಲ, ಅಷ್ಟು ಸೀರಿಯಸ್ಸಾಗಿ ತೆಗೆದುಕೊಂಡುಬಿಟ್ಟಿದ್ದ ಈ "ಗಾಜಿನ್ಮನೇಲಿ ಟೋಪಿ" ಸೀರಿಯಲ್ಲನ್ನ.

     "ಅಲ್ಲ. ನಸೀರುದ್ದೀನರೇ ಕಾಸರವಳ್ಳಿಯವರ ಮುಖೇನ, ಶಂಕರ‍್ನಾಗ್‍ರ ಮುಖೇನ ನಿನ್ನನ್ನು ಕೇಳುವಂತೆ ನನ್ನಲ್ಲಿ ವಿನಾಂತಿಸಿದ್ದಾರೆ" ಎಂದು ಪ್ರಶ್ನೆಗೆ ಅತ್ಯಂತ ಕ್ಲಿಷ್ಟಕರವಾಗುವಂತ ಕನ್ನಡ ವಾಕ್ಯವನ್ನು ಉದುರಿಸಿದ್ದ ಮಾಮ!

     ಕೊನೆಗೂ ತೀರ್ಮಾನ ಕೊಟ್ಟ ಪ್ರಶ್ನೆ, "ಓಕೆ. ನೀನು ನನಗೆ ಮೊದಲ ನಟನೆಯ ಚಾನ್ಸ್ ಕೊಟ್ಟಿದ್ದೀಯ. ಇಲ್ಲ ಅನ್ನಲಾರೆ. ಐ ಡೋಂಟ್ ಮೈಂಡ್ ನಾಸಿರುದ್ದೀನ್ ಷಾ ಆಕ್ಟಿಂಗ್ ವಿಥ್ ಮೀ" ಎಂದುಬಿಟ್ಟ!

     ’ಎಲಾ ಇವನ ಆತ್ಮವಿಶ್ವಾಸವೇ!’ ಎಂದುಕೊಂಡೆ.

     "ಎಲಾ ದುರಹಂಕಾರದ ಪರಮಾವಧಿಯೇ" ಎಂದ ಮಾಮ ನನ್ನನ್ನುದ್ದೇಶಿಸಿ ಹೇಳಿದ, "ಅನಿಲ. ಇವತ್ತೋ ನಾಳೆಯೋ ಇವನಿಗೆ ಸತ್ಯ ಹೇಳಿಬಿಡೋಣ ಅಂದ್ಕೊಂಡಿದ್ದೆ. ಇನ್ನು ಇದು ಮುಗೀಲೇಬಾರ್ದು, ನಾವು ಡಿಗ್ರಿ ಮುಗಿಸೋವರೆಗೂ" ಎಂದು ಪಣತೊಟ್ಟುಬಿಟ್ಟ!!!

     ಮುಂದೊಂದು ದಿನ ಈ ಇಡಿಯ ಪ್ರಹಸನವನ್ನು, ನಸಿರುದ್ದೀನ್‍ರ ಬಗ್ಗೆ ನಡೆದ ಡಯಲಾಗನ್ನು ನಟ ಓಂಪುರಿಯವರಿಗೆ ಮಾಮ, ಶಿವಾನಂದ ಸರ್ಕಲ್ಲಿನ ’ಸೀ ರಾಕ್’ ಹೋಟೆಲ್ಲಿನಲ್ಲಿ ಹೇಳಿದ್ದು, ಅವರು ಬಿದ್ದು ಬಿದ್ದು ನಕ್ಕಿದ್ದ ಸುದ್ದಿಯನ್ನು ನಾನು ನಂಬದೆ ಇರಲಾರದಾದೆ.//

 

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

"ಇನ್ನು ಸ್ವಲ್ಪ ಹೊತ್ತಾದರೆ ಆತನ ಚೆಡ್ಡಿಯೇ ಗಾಗಲ್ಸ್‍ನಷ್ಟು ಹೊಳೆಯತೊಡಗುತ್ತದೆ..." ಪ್ರಹಸನದ one-liners ಸಖತ್ತಾಗಿವೆ. ೮೦ರ ದಶಕದ ಚಷ್ಮೇ ಬದ್ದೂರ್ ಅಂತಹ ಕಾಮೆಡಿಗಳ ನೆನಪಾಗತ್ತೆ. ಬೆಂಗಳೂರಿನ ’ಸೂಪರ್’ಇಚಿತ (ವಿ ಕ ಪತ್ರಿಕೆಯ ತಿಕ್ಕಲು ಶೀರ್ಷಿಕೆಗಳ ಪ್ರಭಾವ ಅಂದುಕೊಂಡುಬಿಡಿ) ಜಾಗಗಳಲ್ಲಿ ನಡೆಯುವ ಈ ಪ್ರಸಂಗಗಳು ಶಾಂತಿನಿಕೇತನದವುಗಳಿಗಿಂತ ಜಾಸ್ತಿ ಮೋಜಾಗಿವೆ. ಪ್ರಭು