ಗಾಜಿನ್ಮನೇಲಿ ಟೋಪಿ -- ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆಃ ಭಾಗ ೨೭

To prevent automated spam submissions leave this field empty.

(೮೧)

     ಮರುದಿನ ಬೆಳಿಗ್ಗೆ ಒಂಬತ್ತೂವರೆಗೆ, ಸೈಕಲ್ಲು ತುಳಿಯುತ್ತ ಅಶೋಕ ಹೋಟೆಲ್ ಕಡೆಯಿಂದ ಚಿತ್ರಕಲಾ ಪರಿಷತ್ತಿನ ಒಳಕ್ಕೆ ಹೋಗಲು ಬಲಕ್ಕೆ ತಿರುಗಿದೆ. ಸಿನೆಮಗಳಲ್ಲಿ ಹೀರೋ ಒಂದೆಡೆ ನಿಂತಿದ್ದು, ಕಾರಿನಲ್ಲಿ ಕ್ಯಾಮರ ಇರಿಸಿಕೊಂಡು ನಿಧಾನವಾಗಿ ಅವನ ಬಳಿಗೆ ಫೋಕಸ್ ಹೋಗುತ್ತದಲ್ಲ, ಹಾಗೆ ನಾನು ಸೈಕಲ್ಲಿನ ಮೇಲಿನಿಂದಲೇ ಪರಿಷತ್ತಿನ ಒಳಗೇ ಎರಡೂ ಸೊಂಟಗಳ ಮೇಲೆ ಎರಡೂ ಕೈಗಳನ್ನಿರಿಸಿಕೊಂಡಿದ್ದ ವ್ಯಕ್ತಿಯ ಬಳಿ ಹೋದೆ. ಆದರೆ ಪೆಡಲ್ ಮಾಡದಿದ್ದುದ್ದರಿಂದ, ಆತನೇ ನನ್ನ ಬಳಿ ಬಂದಂತಿತ್ತು. "ಎಲ್ಲೋ ನೋಡಿದಂತಿದೆಯಲ್ಲ" ಎಂದು ಸೂಕ್ಷ್ಮವಾಗಿ ಆ ವ್ಯಕ್ತಿಯನ್ನು ನೋಡುತ್ತಲೇ ಆತನಿಗೆ ಡಿಕ್ಕಿ ಹೊಡೆಯುವಷ್ಟು ಹತ್ತಿರಕ್ಕೆ ಬಂದು ನಿಂತೆ.

     ಆ ವ್ಯಕ್ತಿ ನಗುತ್ತಿತ್ತು. ಮರೆತವರನ್ನು ಗುರ್ತಿಸಲು ಏನೋ ಒಂದು ಗುರ್ತು ಬೇಕಿರುತ್ತದೆ. ಆದರೆ ಈ ವ್ಯಕ್ತಿಯು ಏನೋ ಒಂದು ಗುರ್ತನ್ನು ಅಳಿಸಿಹಾಕಿದ್ದರಿಂದ ಗುರ್ತುಸಿಗದಂತಾಗಿದೆ! ಮಾಮನ ಸೀರಿಯಲ್ಲಿನಲ್ಲಿ ನಟಿಸಲು ಎಲ್ಲಾ ಯೋಗ್ಯತೆ ಇದ್ದೂ ಈತ (ತೆಳ್ಳಗಿರುವುದು, ನಟನೆ ಬರದಿರುವುದು, ಶತಮೂರ್ಖನಾಗಿರುವುದು--ಇತ್ಯಾದಿ) ಇದ್ದ ಒಂದೇ ಒಂದು ಕೊರತೆಯನ್ನೂ ಒಂದೇ ದಿನದಲ್ಲಿ ಬಗೆಹರಿಸಿಕೊಂಡುಬಿಟ್ಟಿದ್ದ ಈತ. ಪ್ರಶ್ನೆಮೂರ್ತಿ ಮೀಸೆ ತೆಗೆದುಬಿಟ್ಟಿದ್ದ! ಜೊತೆಗೆ ಬರ್ಮುಡ ಚಿಡ್ಡಿ ಹಾಕಿದ್ದ! ಆಗಿನ ಬೆಲ್-ಬಾಟಮ್ ಕಾಲಕ್ಕೆ ಅದು ಅತ್ಯಂತ ಸಾಹಸಮಹವಾದುದು. ಏಕೆಂದರೆ ಬರ್ಮುಡ ಚೆಡ್ಡಿ ಹಾಕಿದವರನ್ನು ಎಚ್.ಎಂ.ಟಿ ಹಳ್ಳೀಗಮಾರ (’ಹೆಗಲ್ ಮೇಲೆ ಟವಲ್’)ಗೆಳೆಂದು ಪರಿಗಣಿಸಲಾಗುತ್ತಿತ್ತು ಹೊರತು ಸ್ಟೈಲ್-ಕಿಂಗ್ ಎಂದಲ್ಲ.

     ನಗು ತಡೆಯಲಾಗದೆ, ಅದನ್ನು ತೋರಿಸಲೂ ಆಗದೆ, ನಾನು ತುಂಬ ಸಂಕಟಪಟ್ಟುಬಿಟ್ಟೆ ಅಂದು. ಪ್ರಶ್ನೆಮೂರ್ತಿ ಇತರರಿಂದ ಗೋಳು ಹೊಯ್ಯಿಸಿಕೊಳ್ಳದೆ, ತಿಳಿದೋ ತಿಳಿಯದೆಯೋ ತನ್ನ ಜೀವನದಲ್ಲಿ ಮೊದಲಬಾರಿಗೆ ಮತ್ತೊಬ್ಬರನ್ನು ಗೋಳು ಹೊಯ್ದುಕೊಂಡದ್ದು ಅಂದೇ! ಅಷ್ಟು ನಗು ಬರಿಸಿಬಿಟ್ಟಿದ್ದ, ಆದರೆ ನಗದಂತೆಯೂ ಮಾಡಿಬಿಟ್ಟಿದ್ದ.

    "ಏನಮ್ಮ, ಅನಿಲ. ಓಕೆನ?" ಎಂದು ತೆಗೆದಿದ್ದ ಮೀಸೆಯ ಮೇಲೆ ಕೈಯಿಟ್ಟು, ಪ್ರಶ್ನೆ ಶೇಪಿನಲ್ಲಿ ಪೋಸ್ ಕೊಟ್ಟ. ವಿಷಯ ಗಾಂಭೀರವಾಗಿತ್ತು.

(೮೨)

     ಪ್ರಶ್ನಾಮೂರ್ತಿಯನ್ನು ಮೂರ್ಖನನ್ನಾಗಿಸಿಯೇ ತೀರಿಸಬೇಕು ಎಂದು ನಾನು ಮತ್ತು ಮಾಮ ತೀರ್ಮಾನಿಸಿದೆವು, ಆತನನ್ನು ನಮ್ಮಿಬ್ಬರ ನಡುವೆ ಕುಳ್ಳಿರಿಸಿಕೊಂಡೇ! ಏಕೆಂದರೆ ಮೀಸೆ ತೆಗೆದು, ಬೆಲ್‍ಬಾಟಮ್ ಪ್ಯಾಂಟನ್ನು ಅರ್ಧ ಕತ್ತರಿಸಿ ಬರ್ಮುಡ ಮಾಡಿಕೊಳ್ಳುವ ಮೂಲಕ ಪ್ರಶ್ನೆಯು "ನನ್ನನ್ನು ಮೂರ್ಖನನ್ನಾಗಿಸಲೇಬೇಕು" ಎಂದು ಸ್ಪಷ್ಟ ಆದೇಶ ನೀಡಿದ್ದಾಗಿತ್ತು ನಮಗೆಲ್ಲ. ಎಂದೂ ಯಾರಿಗೂ ಒಂದರ್ಧ ಟೀ ಕೊಡಿಸುತ್ತಿರಲಿಲ್ಲ ಪ್ರಶ್ನೆ, ಏಕೆಂದರೆ ಆತನ ಬಳಿ ಕಾಸಿರುತ್ತಿರಲಿಲ್ಲ! ಆದರೆ ನಮ್ಮ ಬಳಿಯೂ ಕಾಸಿಲ್ಲದಿರುವುದರಿಂದ ಆತನನ್ನು ಮೂರ್ಖನನ್ನಾಗಿಸುವುದರಲ್ಲಿ ಆಗ ನಮಗೇನೂ ತಪ್ಪು ಕಾಣಿಸಲಿಲ್ಲ. ಬೆಳಿಗ್ಗೆಯಿಂದ ಸಂಜೆಯವರೆಗೂ ನಾನು, ಮಾಮ ನಂತರ ನಮ್ಮ ಶೂಟಿಂಗ್ ತಂಡವನ್ನು ಗೊತ್ತಿದ್ದೋ (ನಾವು ಸೇರಿಸಿಕೊಂಡವರು, ಸತ್ಯ ತಿಳಿದಿದ್ದವರು) ಗೊತ್ತಿಲ್ಲದೆಯೋ (ತಾವೇ ಹಳ್ಳಕ್ಕೆ ಬಿದ್ದವರು) ಸೇರಿದ್ದವರಿಗೆಲ್ಲ ಪ್ರಶ್ನಾಮೂರ್ತಿ ಚಹ ಕೊಡಿಸುತ್ತಿದ್ದ ಕ್ಯಾಂಟೀನಿನಿಂದ, ಸಾಲದ ಲೆಕ್ಕದಲ್ಲಿ. ಆತನ ಬಳಿ ಕ್ಯಾಷ್ ಇರುತ್ತಿರಲಿಲ್ಲ! ಆದರೂ ಜಿಪುಣನೆನ್ನಿಸಿಕೊಂಡಿದ್ದ!

     "ಗಾಜಿನ್ಮನೇಲಿ ಟೋಪಿ" ಎಂದು ಹೆಸರಿಟ್ಟೆವು ಸೀರಿಯಲ್ಲಿಗೆ, ಪ್ರಶ್ನೆಯ ಅನುಮತಿ ಪಡೆದೇ. ನನ್ನ ಸಹಪಾಠಿ ಇಂಡಸ್ಟ್ರಿಯಲಿಸ್ಟ್ ಒಬ್ಬರ ಪುತ್ರಿ ಪಾಟೀಲರು ಹತ್ತುಸಾವಿರದ ಕೃತಕ ಚಿಕ್ಕೊಂದನ್ನು ಮಾಮನಿಗೆ ಕೊಡುಗೆಯಾಗಿ ಕೊಟ್ಟರು ಸೀರಿಯಲ್ಲಿಗಾಗಿ, ಪ್ರಶ್ನೆಯ ಎದಿರಿಗೇ. ಅರ್ಧಗಂಟೆಯಲ್ಲಿ ಅದನ್ನು ವಾಪಸ್ಸೂ ಪಡೆದುಬಿಟ್ಟರು, ಪ್ರಶ್ನೆಯ ಅನುಪಸ್ಥಿತಿಯಲ್ಲಿ. ಈ ಮುಂಚಿನ ಎರಡು ವಾಕ್ಯಗಳ ನಡುವಿನ ಅರ್ಧಗಂಟೆಯಲ್ಲಿ ಮಾಮ ಮತ್ತು ನನ್ನ ನಡುವೆ ಪ್ರಶ್ನೆಯನ್ನು ಕ್ಯಾಂಟೀನಿನ ಬಳಿ ಕೂರಿಸಿಕಂಡು "ಚೆಕ್ ಅಸಲಿಯೋ ಅಲ್ಲವೋ, ನಮ್ಮನ್ನೂ ಈಗಲಾದರೂ ನಂಬುತ್ತೀಯ?" ಎಂದು ಕೇಳಿದ್ದೆವು. ಕೇಳಿದ ಧನಿಯಲ್ಲಿಯೇ "ಹ್ಞೂಂ" ಅನ್ನು ಎಂಬ ಆದೇಶವಿತ್ತು. ಆತನಿಗೆ ಚೆಕ್ಕನ್ನು ತೋರಿಸಿದ್ದಕ್ಕೆ ಕಾರಣಃ ನಮ್ಮಿಬ್ಬರಿಗೂ ಚಹ ಕುಡಿಯಬೇಕಿತ್ತು! 

(೮೩)

     ಮರುದಿನ ಸಂಜೆ, ನಾಲ್ಕು ಗಂಟೆಗೆ ಕ್ಲಾಸ್ ಮುಗಿದ ಕೂಡಲೆ ಶಂಕರ‍್ನಾಗ್-ಬಿಟ್ಟು-ದೆಹಲಿಯಲ್ಲಿರುವಮಾಲ್ಡೀವ್ಸ್‍ಗೆ ಹೋಗಿ-ಮಾಮ-ಜವಾಬ್ದಾರಿ-ತೆಗೆದುಕೊಂಡಿದ್ದ--ಪ್ರಶ್ನಾಮೂರ್ತಿ ನಾಯಕನಾದ--ಟೀವಿ ಸೀರಿಯಲ್ಲಿನ ಶೂಟಿಂಗ್ ರಿಹರ್ಸಲ್ ಇತ್ತು. ಕಲ್ಪನಕ್ಕ ಮತ್ತು ಬಿಗ್ ಡ್ಯಾಡಿಯರನ್ನು ವಿಶೇಷವಾಗಿ ಆಹ್ವಾನಿಸಿದ್ದೆವು. ನಾಲ್ಕಾರು ಕಪ್‍ಗಳ ಬಿಟ್ಟಿ ಚಹಾ ಸೇವಿಸುವ ನೆಪದಲ್ಲಿ ಎರಡು ಪುಟದಷ್ಟು ಮೊದಲ ಎಪಿಸೋಡು ತಯಾರಾಗಿತ್ತು.//

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು