ಕ್ರಿಯಾಶೀಲವಾಗಿರುವುದೆಂದರೆ ’ಗಾಜಿನಮನೆ’ಯಲ್ಲಿ ಬದುಕಿದಂತೆ -- ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆಃ ಭಾಗ ೨೬

To prevent automated spam submissions leave this field empty.


(೭೮)


     ಕಲಾಭವನದಲ್ಲಿ ಕಲೆಯನ್ನು ಹೇಗೆ ಕಲಿಸುತ್ತಿದ್ದರು ಎಂಬುದಕ್ಕಿಂತಲೂ ಏನು ಕಲಿಯುತ್ತಿದ್ದೆವೆಂಬುದು ಮುಖ್ಯ. ಪ್ರಸಿದ್ಧ ಕಲಾವಿದರು ನಮ್ಮ ಗುರುಗಳಾಗಿದ್ದರೂ, ಅವರ ಎಲ್ಲ ಶಿಷ್ಯರೂ ಪ್ರಸಿದ್ಧರಾಗಲಿಲ್ಲ. ಇಲ್ಲದಿದ್ದರೆ ಮಿಕೆಲೆಂಜೆಲೊ, ಹುಸೇನ್, ಲತಾ ಮಂಗೇಶ್ಕರ್, ತೆಂಡೂಲ್ಕರ್, ಗಾಂಧಿ, ಟಾಗೋರ್ -- ಇವರೆಲ್ಲರ ಗುರುಗಳು ಯಾಕೆ ನಮಗೆ ಗೊತ್ತಿಲ್ಲ? ನಮ್ಮ ಹಣೆಯ ಬರಹವನ್ನೇ ನಾವೇ ಬರೆದುಕೊಳ್ಳುತ್ತಿರಬೇಕು, ಅದೂ ನಿರಂತರವಾಗಿ, ಎಂಬ ಝೆನ್ ಪಾಠವನ್ನು ಕಲಿಸಿತು ಕಲಾಭವನ. ಅಲ್ಲಿ ಕಲಿತುದಕ್ಕಿಂತಲೂ ಈಗಾಗಲೇ ಕಲಿತಿದ್ದನ್ನು ಪೊರೆ ಬಿಟ್ಟುಬಿಡುವುದು (ಅನ್-ಲರ್ನಿಂಗ್) ಹೇಗೆಂದು ಕಲಾಭವನ ನಮಗೆ ಕಲಿಸಿತ್ತು. ಪರೀಕ್ಷೆಗಳು ಅಲ್ಲಿ ನಾಮಕಾವಸ್ಥೆ. ಅದನ್ನೂ ಅತಿಗೆ ಒಯ್ದ ಒಂದು ಉದಾಹರಣೆ ಗಮನಿಸಿಃ


     ’ಸೂರ್ಯ’ ಅರ್ಥದ ವಿದ್ಯಾರ್ಥಿ ನಮ್ಮ ರಾಜ್ಯದವನೇ, ಅಲ್ಲಿ ಓದುತ್ತಿದ್ದ. ನಾನು ಮೊದಲ ವರ್ಷದ ಎಂ.ಎಫ್.ಎ ಓದುವಾಗ ಆತ ಡಿಗ್ರಿ ಕೊನೆಯ ವರ್ಷದಲ್ಲಿ ಓದುತ್ತಿದ್ದ. ಪರೀಕ್ಷೆ ಬರೆವಾಗ ನನ್ನ ಪಕ್ಕ ಆತ ಅಥವ ಆತನ ಪಕ್ಕ ನಾನು ಕುಳಿತಿರುವಂತೆ ವ್ಯವಸ್ಥೆ ಮಾಡಲಾಗಿತ್ತು--ಇಬ್ಬರ ವಿಷಯವೂ ಬೇರೆಬೇರೆಯಾದ್ದರಿಂದ ಪರಸ್ಪರ ನಕಲು ಮಾಡುವುದಿಲ್ಲವೆಂದು. ಇಬ್ಬರು ಪರೀಕ್ಷೆ ಬರೆಯತೊಡಗಿದೆವು. ಹನ್ನೆರೆಡೂವರೆಗೆ ಪರೀಕ್ಷೆ ಮುಗಿಯುವುದು. ನನ್ನ ಪಕ್ಕದ ಸೂರ್ಯನಾಮಾಂಕಿತನು ಹನ್ನೊಂದು ಗಂಟೆಗೇ ಎದ್ದು ಉತ್ತರ ಪತ್ರಿಕೆ ಕೊಟ್ಟು ಹೊರಟು ಹೋದ. "ಇವನ್ಯಾರೋ ತರಲೆ. ಎಷ್ಟೇ ಪ್ರತಿಭೆ ಇದ್ದಾಗ್ಯೂ ನಿರಂತರವಾಗಿ ತೊಡಗಿಸಿಕೊಳ್ಳುವುದೇ ನಿಜವಾದ ಪ್ರತಿಭೆ" ಎಂದಾತನನ್ನು ಬೈಯ್ದುಕೊಂಡೆ.


     ಹನ್ನೆರೆಡೂವರೆಗೆ ಉತ್ತರಪತ್ರಿಕೆ ಹಿಂದಿರುಗಿಸಿ ಹೊರಗೆ ಕ್ಯಾಂಟೀನ್ ಮಾಮಾನ ಬಳಿ ಚಹಕ್ಕೆ ಬಂದಾಗ, ಎಂದೂ ಯಾರೊಂದಿಗೂ ಹೆಚ್ಚಾಗಿ ಮಾತನಾಡದ ಸೂರ್ಯನಾಮಾಂಕಿತನು ನನ್ನ ಬಳಿ ಬಂದು ಕೂಗಾಡತೊಡಗಿದ. "ನಿನ್ನ ಕೈಗಡಿಯಾರ ನೋಡಿ ನಾನು ಒಂದು ಗಂಟೆ ಮುಂಚೆ ಎದ್ದು ಬಂದೆ, ಕಾಲಾವಕಾಶ ಮುಗಿದಿರಬಹುದೆಂದು ತಿಳಿದು" ಎಂದು ನನ್ನನ್ನು ಗೊಂದಲಕ್ಕೆ ಸಿಲುಕಿಸಿದ.


     ಆಗಿದ್ದುದಿಷ್ಟು. ನನ್ನ ಗಡಿಯಾರವು ಒಂದು ಗಂಟೆಕಾಲ ಮುಂದಿತ್ತು. ಹಿಂದಕ್ಕಾಕಿರಲಿಲ್ಲ. ಅಂದರೆ ಸಮಯ ಹನ್ನೊಂದಾಗಿದ್ದಾಗ, ಹನ್ನೆರೆಡು ತೋರಿಸುತ್ತಿತ್ತು. ಅದನ್ನೇ ನಿಜವೆಂದು ಭಾವಿಸಿ ಸೂರ್ಯನಾಮಾಂಕಿತನು "ಇನ್ನರ್ಧ ಗಂಟೆಯಷ್ಟೆಯಷ್ಟೇ ಇರುವುದು" ಎಂದುಕೊಂಡ ಎದ್ದು ಹೊರಬಂದಿದ್ದ. ಅಂದಿನ ಆ ಘಟನೆಯಲ್ಲಿ ನಾನು ತಪ್ಪಿತಸ್ತನೋ ಅಥವ ಆತ ಮೂರ್ಖನೋ ಇಂದಿಗೂ ನಿರ್ಧರಿಸಲು ಸಾಧ್ಯವಾಗಿಲ್ಲವೆಂದೇನಿಲ್ಲ, ನಿರ್ಧರಿಸಲು ಹೋಗಿಲ್ಲವಷ್ಟೇ!


     "ಏನು, ಕಂಪ್ಲೇಂಟ್ ಮಾಡ್ತೀಯ ಗುರೂ?" ಎಂದು ಕನ್ನಡದಲ್ಲೇ ಕೇಳಿದೆ, ಕನ್ನಡ ಕೇಳಿಯಾದರೂ ಕ್ಷಮೆ ಹಚ್ಚಾಗಲಿ ಎಂದು.


     "ಏನು ಪ್ರಯೋಜನ. ಅಂಕಗಳನ್ನು ಜಾಸ್ತಿ ತೆಗೆವುದರ ಮೂಲಕ ಕಲಾವಿದರೆನಿಸಿಕೊಂಡವರು ಮಹಾನ್ ಮೂರ್ಖರಲ್ಲವೆ?! ನೇರವಾಗಿಯಲ್ಲದಿದ್ದರೂ ಮುಂದೆ ನಾನು ಜನಪ್ರಿಯ ಕಲಾವಿದನೆನಿಸಿಕೊಳ್ಳಲು ನೀನು ಸಹಾಯ ಮಾಡಿದಂತಾಯ್ತು ಬಿಡು", ಎಂದ. ’ರಾಜಕಾರಣಿಯಾಗಲು ಒಮ್ಮೆಯಾದರೂ ಜೈಲಿಗೆ ಹೋಗಿಬಂದಿರಬೇಕು’ ಎಂಬ ನಾಣ್ನುಡಿಯಂತಾಯ್ತಿದು.


     ಜಾರುವ ಮರಳ ರಾಶಿಯಲ್ಲಿ ನಾವು ಊರಿದ ಹೆಜ್ಜೆಯ ಗುರ್ತನ್ನು ಹಿಡಿದಿರಿಸುವುದನ್ನು ಕಲೆ ಎನ್ನಬಹುದು. ಕಲಾಭವನದಲ್ಲಿ ಕಲಿಯುವುದು ಬೇರೆ. ಆ ’ಕಲಿಕೆ’ಯ ಸುತ್ತಲೂ ನಮ್ಮ ಜೀವನಶೈಲಿ ಹೆಣಿಗೆ ಹಾಕಿಕೊಳ್ಳುವ ಕ್ರಮ ಮಾತ್ರ ಅಸಾಧಾರಣ ಸಾಧ್ಯತೆಯುಳ್ಳದ್ದು. ನಮ್ಮನ್ನೂ ನಾವೇ ಕ್ರಿಯಾತ್ಮಕವಾಗಿ ಕಲಾಸೃಷ್ಟಿಯಲ್ಲಿ ತೊಡಗಿಕೊಳ್ಳುವ ಶೈಲಿಯು ನಮ್ಮ ಜೀವನಶೈಲಿಯನ್ನೂ ರೂಪಿಸಿ, ಮಾರ್ಪಡಿಸಿದ್ದರಲ್ಲಿ ವಿಶೇಷವೇನಿಲ್ಲ. ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ ಡಿಗ್ರಿ ಓದುವಾಗಲೇ ನಾವುಗಳು ಕೈಗೊಂಡ ಪ್ರಯೋಗಗಳನ್ನು ಸ್ನೇಹಿತರು ಸಾಹಸವೆನ್ನುತ್ತಾರೆ. ಆಗದವರು ಕಪಿಚೇಷ್ಟೆ ಎನ್ನುತ್ತಾರೆ. ಅದಕ್ಕೊಂದು ಸ್ಯಾಂಪಲ್ ನೋಡಿ..


(೭೯)


೧೯೮೯. ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ ನಾಲ್ಕನೇ ವರ್ಷದ ಚಿತ್ರಕಲಾ ವಿದ್ಯಾರ್ಥಿಯಾಗಿದ್ದೆ. ಮಹಾನ್ ತರಲೆ ಗೆಳೆಯರ ನಡುವೆ ಇದ್ದೆ. ಅದಕ್ಕಿಂತಲೂ ಹೆಚ್ಚಾಗಿ ಸ್ವತಃ ತರಲೆಯಾಗುವ ಯೋಗ್ಯತೆ ಇಲ್ಲದಂತಿದ್ದೆ. ಆದರೆ ಗೆಳೆಯರ ತರಲೆಗಳ ಒಳತಿರುಳಾದ ಕ್ರಿಯಾತ್ಮಕತೆಯನ್ನು ಸಾಕಷ್ಟು ಈರ್ಶ್ಯತೆಯಿಂದಲೇ ನೋಡುತ್ತಿದ್ದೆ.


     "ಪಂದ್ಯ ಕಟ್ಟು ಬೇಕಾದ್ರೆ. ನಮ್ಮ ಪ್ರಶ್ನಾಮೂರ್ತೀನ ಮೂರ್ಖನನ್ನಾಗಿಸೋದು ಬಹಳ ಸುಲಭ", ಎಂದು ಗೆಳೆಯ ಮಾಮ ತನ್ನ ಸೀನಿಯರ್ ಕಲ್ಪನಕ್ಕಳೊಂದಿಗೆ ಪಂದ್ಯ ಕಟ್ಟಿದ. ನಿಲ್ಲುವ, ನಡೆವ ಶೈಲಿಯಲ್ಲಿ ಥೇಟ್ ’?’ ಶೈಲಿಯಲ್ಲಿ ಪ್ಯಾದೆ ಗೆಳೆಯನೊಬ್ಬ ಕಾಣುತ್ತಿದ್ದುದ್ದರಿಂದ ಆತನನ್ನು ಪ್ರಶ್ನಾಮೂರ್ತಿಯೆಂದೇ ಕರೆಯುತ್ತಿದ್ದೆವು.


     "ಯಾರನ್ನಾದರೂ ಮೂರ್ಖನನ್ನಾಗಿಸಬಲ್ಲೆನೆಂದು ನೀನೆಂದುಕೊಂಡರೆ, ನೀನು ಮಹಾನ್ ದುರಹಂಕಾರಿಯಿರಬೇಕು. ಅಥವ ಆ ಮೂರ್ಖ ನಿಜಕ್ಕೂ ಅಸಹಾಯಕನಾಗಿರಬೇಕು. ನಮ್ಮ ಪ್ರಶ್ನಾಮೂರ್ತಿ ಅಂತಹವನಲ್ಲ" ಎಂದು ನೂರು ರೂಪಾಯಿ ಪಂದ್ಯಕಟ್ಟಿದಳು ಕಲ್ಪನಕ್ಕ. ಆಗಿನ ನೂರು ರೂಪಾಯಿ ಇಂದು ಏನಿಲ್ಲವೆಂದರೂ ಮೂರ್ನಾಲ್ಕು ಸಾವಿರ ರೂಪಾಯಿಯೇ, ಕಲಾಭವನದಲ್ಲಿ ಹದಿನೈದು ದಿನ ಬದುಕಿಬಿಡಬಲ್ಲಷ್ಟು ರೊಕ್ಕವದು!


     ಹದಿನೈದು ದಿನಗಳಲ್ಲಿ ಪ್ರಶ್ನಾಮೂರ್ತಿಯನ್ನು ಮೂರ್ಖಮೂರ್ತಿಯೆಂದು ಸಾಬೀತು ಪಡಿಸಬೇಕೆಂದು, ಅಡ್ವಾನ್ಸ್ ಆಗಿ ಬಿಗ್-ಡ್ಯಾಡಿಯ ಸಾಕ್ಷಿಯಲ್ಲಿ ಐವತ್ತು ರೂಪಾಯಿಯನ್ನು ನೀಡಲಾಯಿತು. ಇಲ್ಲದಿದ್ದಲ್ಲಿ ಒಂದಕ್ಕೆರೆಡು ವಾಪಸ್ ಕೊಡಬೇಕಿತ್ತು ಮಾಮ. ಸ್ವತಃ ಮಾಮ ನನ್ನ ಸಹಪಾಠಿಯಾಗಿದ್ದು, ಉಪಾಧ್ಯಾಯರೊಬ್ಬರ ಅತೀ ಪ್ರೀತಿಯಿಂದಾಗಿ ಚಿತ್ರಕಲೆಯನ್ನು ಮೂರನೇ ವರ್ಷದಲ್ಲಿ ಮುಗಿಸಲಾಗದೆ, ಶಿಲ್ಪಕಲೆಗೆ ತನ್ನ ಆಸಕ್ತಿಯನ್ನು ಔಪಚಾರಿಕವಾಗಿ ಬದಲಾಯಿಸಿಕೊಂಡಿದ್ದ.   (೮೦)


     ಆಗಷ್ಟೇ ಶಂಕರ‍್ನಾಗ್ ಚಿತ್ರಕಲಾ ಪರಿಷತ್ತಿನ ಆವರಣದಲ್ಲಿಯೇ "ನಾಗಮಂಡಲ" ನಾಟಕವನ್ನು ಅಭ್ಯಸಿಸಿ, ಆಡಿಸಿ, ಗೆದ್ದೂ ಜನಪ್ರಿಯರಾಗಿದ್ದರು. ಮಾಮಾ ಮೊದಲಿಂದಲೂ ಸಿನೆಮ ಹುಚ್ಚಿನವನಾಗಿದ್ದು, ಶಂಕರ‍್ನಾಗ್‍ರೊಂದಿಗೆ ಕಲಾನಿರ್ದೇಶಕನಾಗಿ ಕೆಲಸ ಮಾಡತೊಡಗಿದ್ದ. ಇದು ಮಾಮನ ಸಹಪಾಠಿಯಾದ ಪ್ರಶ್ನೆಮೂರ್ತಿಗೂ ಗೊತ್ತಿತ್ತು. ಪ್ರಶ್ನೆಗೂ ನಟನಾಗುವ ಅದಮ್ಯ ಬಯಕೆಗೆ ಉತ್ತರ ಬೇಕಿತ್ತು.


   "ಒಂದು ಪ್ರಾಬ್ಲಂ ಆಗಿಬಿಟ್ಟಿದೆ ಪ್ರಶ್ನೆ" ಎಂದ ಮಾಮ.


     "ನನ್ನತ್ರ ಹೇಳು ಮಗ, ಉತ್ತರ ಕೊಡಿಸೋಣವಂತೆ" ಎಂದ, ಅನುಮಾನವೆಂದರೇನೆಂದು ಎಂದೂ ತಿಳಿಯದ ಪ್ರಶ್ನೆ ಹೀಗೆ ಉತ್ತರಿಸಿದ್ದ. ’ನಿಮ್ ಹುಡ್ಗಿಗೆ ಮಕ್ಳಾಗೋ ಸಾಧ್ಯತೆ ಇಲ್ಲ’ವೆಂದು ಡಾಕ್ಟರ್ ಹೇಳಿದರೆ, ’ಸ್ವಲ್ಪ ಅಡ್ಜಸ್ಟ್ ಮಾಡಿ ನೋಡಿ, ನಾವು ಹೆಲ್ಟ್ ಮಿನಿಸ್ಟ್ರು ಕಡೆಯವ್ರು’ ಎನ್ನುವ  ವರ್ಗಕ್ಕೆ ಸೇರಿದವ ನಮ್ಮ ಪ್ರಶ್ನೆ.


     "ಶಂಕರ‍್ನಾಗ್ ಹದಿಮೂರು ಎಪಿಸೋಡ್ ಟಿ.ವಿ.ಸೀರಿಯಲ್ ಒಂದನ್ನು ಅರ್ಜೆಂಟಾಗಿ ಶೂಟ್ ಮಾಡಿ ಮುಗಿಸಬೇಕಿತ್ತು. ಈಗವರು ದೆಹಲಿಯಲ್ಲಿರುವ ಮಾಲ್ಡೀವ್ಸ್‍ಗೆ ಹೋಗಿದ್ದಾರೆ. ನಾನು ಅವರ ಬದಲು ಎಪಿಸೋಡ್‍ಗಳನ್ನು ನಿರ್ದೇಶಿಸಬೇಕು ಎಂದು ಅವರು ಆದೇಶ ನೀಡಿದ್ದಾರೆ".


     "ಲೇಯ್ ಮಗಾ. ಅವ್ರು ಮಾಲ್ಡೀವ್ಸ್ ಒಳಗಿರೋ ಡೆಲ್ಲಿಯಿಂದ ಹೊರಬರೋ ಮುಂಚೆ ನಂಗೊಂದ್ ಚಾನ್ಸ್ ಕೊಡೋ" ಎಂದ ಪ್ರಶ್ನೆ.


     "ಗುರೂ ನೀನು ಕೇಳೋದ್ ಹೆಚ್ಚಾ ನಾವ್ ಕೊಡೋದ್ ಹೆಚ್ಚಾ", ಎಂದ ಮಾಮ, ನನ್ನತ್ತ ತಿರುಗಿ ಕಣ್ಣು ಮಿಟುಕಿಸಿ ಮುಂದುವರೆಸಿದ, "ನಟನಲ್ಲದವನೊಬ್ಬ, ದಡ್ಡನಾದ ಶತಮೂರ್ಖನೊಬ್ಬ ಈ ನನ್ನ ಎಪಿಸೋಡಿನ ಹೀರೋ ಆಗಬೇಕಂತ ನನ್ನ ಬಯಕೆ" ಎಂದ.


     "ಹಿತ್ತಲ ಗಿಡ ಮದ್ದಲ್ಲ ಅಂದಂಗಾಯ್ತು, ನಾನಿಲ್ವೇ" ಎಂದ ಪ್ರಶ್ನೆ.


     "ಆದ್ರೂ, ಒಂಚೂರೂ ಆಕ್ಟಿಂಗ್ ಗಂಧಗಾಳಿ ಇರಬಾರದು"


     "ನಮ್ ತಾಯಿ ಸತ್ವಾಗ್ಲೂ ನಾನ್ಯಾವತ್ತೂ ಆಕ್ಟಿಂಗ್ ಮಾಡಿಲ್ಲ"


     "ಜೊತೆಗೆ ತೆಳ್ಳಗೆ ಇರಬೇಕು."


"ನಾನು ಜೀವನ ಪೂರ್ತಿ ತಿಂದು ಹೊಟ್ಟೆಕೆಡಿಸಿಕೊಂಡು ಗ್ಯಾಸ್ಟ್ರಿಕ್, ಅಲ್ಸರ್, ಅಸಿಡಿಟಿ ಒಟ್ಟಿಗೆಯಾದರೂ ನನ್ನ ಝೀರೋ ಫಿಗರ್ ಬದಲಾಗದು".


”ನಾವು ತುಂಬ ರಾಯಲ್ಟಿ ಕೊಡಲಾಗದು. ಒಂದು ಎಪಿಸೋಡಿಗೆ ಕೇವಲ ಐದು ಸಾವಿರ ರೂಪಾಯಿ. ಡಾಲರ‍್ಗಳಲ್ಲ".


"ನಿನ್ನ ಕಾಸು ನಿನ್ನತ್ರಾನೇ ಇಟ್ಕೋ".


"ಸರಿ ನಿನ್ನನ್ನ ನಂಬಬೌದಲ್ವೇ? ಈ ಎಪಿಸೋಡ್ ಶೂಟ್ ಆಗೋಕೆ ಮುಂಚೇನೇ ಯಾವುದೇ ಬೇರೆ ಹಾಲಿವುಡ್ ಫಿಲ್ಮ್ ಆಫರ್ ಬಂದ್ರೆ ನಮಗೆ ಕೈಕೊಡಬಾರ್ದು".


"ಏನ್ ಮಾಮಾ, ತಮಾಷೆ ಮಾಡ್ತಿದ್ದೀಯ?" ಎಂದ ಪ್ರಶ್ನಾಮೂರ್ತಿ, ಪ್ರಶ್ನಾರ್ಥಕವಾಗಿ.


"ಹಾಲಿವುಡ್ ಅಲ್ಲ, ಐ ಮೀನ್, ಬಾಲಿವುಡ್" ಎಂದ ಮಾಮ, ಉತ್ಪ್ರೇಕ್ಷೆಯನ್ನೂ ನೈಜತೆಯ ಮಟ್ಟಕ್ಕೆ ಇಳಿಸುತ್ತ. ಇಷ್ಟೂ ಸಂಭಾಷಣೆಯನ್ನು ಕಲ್ಪನಕ್ಕ ಮತ್ತು ಬಿಗ್-ಡ್ಯಾಡಿ ನೋಡುತ್ತಲೇ ಇದ್ದರೂ, ಇನ್ನೂ ಪ್ರಶ್ನೆಯನ್ನು ಮೂರ್ಖನಾದನೆಂದು ನಂಬಲು ತಯಾರಿರಲಿಲ್ಲ.


"ಮತ್ತೊಂದು ಅಂತಿಮ ಅವಶ್ಯಕತೆ. ಆಗಲ್ಲ ಅಂದ್ರೆ ಈಗ್ಲೇ ಹೇಳಬೇಕಿಲ್ಲ. ನಾಳೆ ಬೇಕಾದ್ರೆ ಹೇಳು. ಬಾಯ್ಮಾತಲ್ಲೇ ಹೇಳ್ಬೇಕಂತೇನಿಲ್ಲ. ಬೇರೆ ಯಾರನ್ನಾದರೂ ಹುಡುಕ್ಕೋತ್ತೇವೆ. ಮೀಸೆ ಇರಬಾರದು ನಮ್ಮ ಹೀರೋಗೆ" ಎಂದ ಮಾಮ.


    "ಹೌದು ಅಥವ ಇಲ್ಲ" ಎಂಬಂತ ಅರ್ಥಬರುವಂತೆ ಅರ್ಥಗರ್ಭಿತವಾಗಿ ನಕ್ಕ ಪ್ರಶ್ನೆಮೂರ್ತಿ.


     "ಇದು ಮಾತ್ರ ಸಾಧ್ಯವೇ ಇಲ್ಲ. ನೀನು ಸೋತೆ ಮಾಮ" ಎಂದರು ಬಿಗ್-ಡ್ಯಾಡಿ ಮತ್ತು ಕಲ್ಪನ, ಪ್ರಶ್ನೆಯನ್ನು ಮನೆಗೆ ಕಳಿಸಿಯಾದ ಮೇಲೆ.


    "ನಾಳೆ ಅಗ್ನಿಪರೀಕ್ಷೆ" ಎಂದು ಮಾಮ ನಗುತ್ತ ನನಗೆ ಸ್ಕ್ರಿಪ್ಟ್ ಒಂದನ್ನು ತಯಾರಿಸುವಂತೆ ಕೇಳಿಕೊಂಡು ಮಾಯವಾದ.


ಪ್ರಶ್ನೆಮೂರ್ತಿ ಮನೆಗೆ ಹೋಗುವ ಮುನ್ನ ಮಾಮ ಆತನಿಗೆ ಕೊನೆಯದಾಗಿ ಹೇಳಿದ್ದಿದುಃ


"ಗೊತ್ತಲ್ಲ. ಅನಿಲ ಸ್ಕ್ರೀಪ್ಟ್ ಬರೀತಿರೋದು?"


"ಅದಕ್ಕೆ ಮತ್ತೆ ಯಾವದೇ ಅನುಮಾನವಿಲ್ಲದೆ ನಟಿಸೋದಕ್ಕೆ ಕಣ್ಮುಚ್ಚಿಕೊಂಡು ಒಪ್ಪಿಕೊಂಡಿರೋದು. ಮಾಮನ ತೂತು ಚೀಲಕ್ಕೆ ತೇಪೆ ಅನಿಲ ಅಂತ ಗೊತ್ತಿಲ್ವ ನಂಗೆ" ಎಂದುಬಿಟ್ಟ. ನಾನು ಮತ್ತು ಮಾಮ ಈ ವಾಕ್ಯದ ಅರ್ಥದಿಂದಾಗಿ ಮೊದಲು ಗಂಭೀರರಾಗಿ ನಂತರ ಮಂದಹಾಸ ಬೀರಿದ್ದೆವು.//


 


  


   

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಒಳ್ಳೆ "ಕುತೂಹಲಕರ" ಘಟ್ಟದಲ್ಲಿ ಇವತ್ತಿನ ಕಂತನ್ನು ಮುಗಿಸಿದ್ದೀರ ಸರ್. ಪ್ರಶ್ನಾಮೂರ್ತಿ ಮೂರ್ಖನಾದನೋ ಇಲ್ಲವೋ ಅಂತ ನನಗಂತೂ ಕುತೂಹಲವಾಗಿದೆ. <<ಮಾಮನ ತೂತು ಚೀಲಕ್ಕೆ ತೇಪೆ ಅನಿಲ ಅಂತ ಗೊತ್ತಿಲ್ವ ನಂಗೆ>> ಅನ್ನೋದು ನನಗೆ ಸರಿಯಾಗಿ ಅರ್ಥ ಆಗ್ಲಿಲ್ಲ. :-) ಈ ವಾಕ್ಯದಲ್ಲಿ ನನ್ನ ಪ್ರಶ್ನೆಗೆ ಉತ್ತರವೂ ಇದೆ ಅನಿಸುತ್ತಿದೆ. ವಿಷಯಾಂತರ ಮಾಡ್ತಿದ್ದೀನಿ; ಆದರೂ ನನಗೆ ಶಾಂತಿ ನಿಕೇತನದಲ್ಲಿ ಕನ್ನಡಿಗರ representation ಬಗ್ಗೆ ಕೆಲವು ಪ್ರೆಶ್ನೆಗಳು. ಅಲ್ಲಿ ಕನ್ನಡಿಗ ವಿದ್ಯಾರ್ಥಿಗಳ ಸಂಖ್ಯಾಬಲ ಹೇಗಿತ್ತು/ಇದೆ? ಅಲ್ಲಿನ ಪ್ರೊಫೆಸ್ಸರುಗಳಲ್ಲಿ ಕನ್ನಡಿಗರು ಎಷ್ಟು ಮಂದಿ ಇದ್ದಾರೆ? ಅಲ್ಲಿನ ವಿದ್ಯಾರ್ಥಿಗಳಲ್ಲಿ ಹೆಚ್ಚಿನವರು ಯಾವ ರಾಜ್ಯದವರು (ಬೆಂಗಾಲಿ ಹಾಗು ಬೆಂಗಾಲಿಯೇತರ ಎಂದು ಪರಿಗಣಿಸಿದಲ್ಲಿ)? ಪ್ರಸನ್ನ

ಮಾಮ (ಮದ್ದನಹಳ್ಳಿಯ ಮಗಧೀರ) ಕಾಲೇಜಿನಲ್ಲಿ ಬಹಳ ನಟೋರಿಯಸ್ ಆಗಿದ್ದಾತ. ಯಾರೂ ಆತನನ್ನು ನಂಬುತ್ತಿರಲಿಲ್ಲ. ನಾನು ’ಗಾಂಧಿ’ ವರ್ಗಕ್ಕೆ ಸೇರಿದ್ದರಿಂದ ನನ್ನನ್ನು ನಂಬುತ್ತಿದ್ದರು. ಆದ್ದರಿಂದ ಮಾಮ ಹೇಳಿದ್ದನ್ನು ನಾನೂ ’ನಿಜ’ವೆಂದಾಗ ಪ್ರಶ್ನೆಮೊರ್ತಿ ನಂಬಿಬಿಟ್ಟಿದ್ದ. ಮುಂದಿನ ಕಥೆ ನಿರೀಕ್ಷಿಸಿ. ಶಾಂತಿನಿಕೇತನಕ್ಕಿಂತಲೂ ಲಂಡನ್ ಬ್ರಿಜ್ ಸುತ್ತಮುತ್ತಲೂ ಕನ್ನಡಿಗರು ಹೆಚ್ಚಿದ್ದರೆ. ಅಲ್ಲಿ ೧೯೯೨ರಲ್ಲಿ ಒಂದೇ ಒಂದು ಕನ್ನಡಿಗ-ಫ್ಯಾಮಿಲಿ ಇತ್ತು. ಅನಿವಾರ್ಯವಾಗಿ ಸರ್ಕಾರಿ ಕೆಲಸದ ವರ್ಗದ ನಿಯಮದ ಒತ್ತಡದಿಂದ ಹಾಗಿತ್ತೆಂದು ಕಾಣುತ್ತದೆ. ಈಗ, ೨೦೧೦ರಲ್ಲಿ ಅಲ್ಲಿಗೆ ಹೋದಾಗ, ಅವರ ಹೆಸರನ್ನೇ ಮರೆತದ್ದರಿಂದ ಅವರಲ್ಲಿದ್ದಾರ ಇಲ್ಲವ ತಿಳಿಯಲಿಲ್ಲ. ಗುಲಬರ್ಗ, ಮೈಸೂರು, ಮಂಗಳೂರು, ಬೆಂಗಳೂರು ಹಾಗೂ ತುಮಕೂರುಗಳಿಂದ ಆಗಾಗ ಸ್ನಾತಕೋತ್ತರ ಪದವಿ ಅಭ್ಯಾಸಕ್ಕೆ ಕನ್ನಡಿಗರು ಅಲ್ಲಿಗೆ ಹೋಗುತ್ತಿರುತ್ತಾರೆ. ಸೀಟು ಸಿಕ್ಕಲ್ಲಿ ಅಲ್ಲಿ ಓದಿಯೊ ಓದುತ್ತಾರೆ. ಆದರೆ ಅಲ್ಲಿಯೇ ನೆಲೆನಿಂತವರು ವಿರಳ. ವಿಶ್ವಂಭರಂ ಎಂಬ ಕನ್ನಡಿಗ ಕಲಾವಿದರು, ಗೋವಾದ ಕಲಾಶಾಲೆಯಲ್ಲಿ ಪಾಠ ಹೇಳುತ್ತಿದ್ದವರು, ಚಿತ್ರಕಲಾ ಪರಿಷತ್ತಿನ ಕಲಾಶಾಲೆಯಲ್ಲಿ ಪ್ರಿನ್ಸಿಪಾಲರಾಗಿದ್ದವರು, ಈಗ ದೆಹಲಿಯಲ್ಲಿರುವವರು ಶಾಂತಿನಿಕೇತನದಲ್ಲೊಂದು ಮನೆ ಕಟ್ಟಿದ್ದಾರೆ. ತಮಿಳರು, ತೆಲುಗರು ಅಲ್ಲಿ ಹೆಚ್ಚು. ಕೆ.ಜಿ.ಎಸ್ ಮತ್ತು ಶಿವಕುಮಾರ್ ಮೊಲತಃ ತಮಿಳು-ಕೇರಳದವರು. ಈಗ ಸಂಪೂರ್ಣವಾಗಿ ಬೆಂಗಾಲಿಮಯವಾಗುವಷ್ಟು ಚೆನ್ನಾಗಿ ಬೆಂಗಾಲಿ ಕಲಿತು, ಅತ್ಯಂತ ಜನಪ್ರಿಯ ಉಪಾಧ್ಯಾಯರುಗಳಾಗಿ ಹೆಸರು ಮಾಡಿದ್ದಾರೆ. ಅಲ್ಲಿ, ಯಾವಾಗಲೂ ಹೆಚ್ಚಿನ ವಿದ್ಯಾರ್ಥಿಗಳು--ಶೇಕಡ ೭೫--ಜಗತ್ತಿನ ಎಲ್ಲೆಲ್ಲೆಡೆಯಿಂದಲೋ ಬಂದಿರುವ ಬೆಂಗಾಲಿಗಳೇ! ನಾನಲ್ಲಿದ್ದಾಗ, ಅಪರೂಪಕ್ಕೆ ಏಳು ಮಂದಿ ಕನ್ನಡಿಗರಿದ್ದರು--ಒಂದು ಸಂಘ ಕಟ್ಟುವಷ್ಟು! ಕನ್ನಡ ಮೊಲದ ಆದರೆ ಕರ್ನಾಟಕದಲ್ಲಿ ಹುಟ್ಟಿಬೆಳೆದಿರದ ಇಬ್ಬರು ಕನ್ನಡತಿಯರು ಆಗಲೇ ಅಲ್ಲಿದ್ದರು. ಗುಲ್ಬರ್ಗದಿಂದ ಮೊವರು, ಬೆಂಗಳೂರಿನಿಂದ ಒಂದಿಬ್ಬರು ಒಟ್ಟಿಗಿದ್ದೆವು. --ಅನಿಲ್

[[’ನಿಮ್ ಹುಡ್ಗಿಗೆ ಮಕ್ಳಾಗೋ ಸಾಧ್ಯತೆ ಇಲ್ಲ’ವೆಂದು ಡಾಕ್ಟರ್ ಹೇಳಿದರೆ, ’ಸ್ವಲ್ಪ ಅಡ್ಜಸ್ಟ್ ಮಾಡಿ ನೋಡಿ, ನಾವು ಹೆಲ್ಟ್ ಮಿನಿಸ್ಟ್ರು ಕಡೆಯವ್ರು’ ಎನ್ನುವ ವರ್ಗಕ್ಕೆ ಸೇರಿದವ ನಮ್ಮ ಪ್ರಶ್ನೆ.]] ಹಾಸ್ಯ ಮಿಶ್ರಿತವಾಗಿ ವಿಚಾರವನ್ನು ಸಮರ್ಥವಾಗಿ ತಿಳಿಸುತ್ತಿದ್ದೀರಿ. ಚೆನ್ನಾಗಿ ಮೂಡಿಬರುತ್ತಿದೆ.