ಕಲಾವಾದಗಳು ಕಾನೂನಿನ ’ಕಣ್ಣಲ್ಲಿ’ ಅಪರಾಧವಾದೆಡೆ? -- ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆಃ ಭಾಗ ೨೫

To prevent automated spam submissions leave this field empty.

(ಕೃಪೆಃwww.artindiamag.com/.../pre_lead_assay03.html)


(೭೫)


ಹಿಂದಿನ ಸಂಚಿಕೆಯಿಂದ...("ಇಂದು ಮಧ್ಯರಾತ್ರಿ ಜೋಕನ್ನು ದಯವಿಟ್ಟು ನೆನೆಸಿಕೊಳ್ಳುತ್ತೀರೆಂದು ಆಣೆಪ್ರಮಾಣ ಮಾಡಿ. ಅದ್ಬುತ ಹಾಸ್ಯವಿದೆ ಅದರಲ್ಲಿ", ಎಂದು ಪ್ರತಿ ದಡ್ಡ ಹುಡುಗಿಯ ಬಳಿ ಪ್ರಮಾಣ ಮಾಡಿಸಿಕೊಂಡಿದ್ದ. ನಕ್ಕವರಿಗಿಂತಲೂ ಹೆದರಿಕೊಂಡಿದ್ದವರೇ ಹೆಚ್ಚಿದ್ದರು ಮರುದಿನ!!)


     ಮಾರ್ಕ್ಸನ ವಾದಕ್ಕೆ ಕಲಾಭವನದಲ್ಲಿ ವಿಚಿತ್ರವಾದ ಸಪೋರ್ಟ್ ಸಿಗುತ್ತಿತ್ತು. ಮಾರ್ಕ್ಸನ್ನು ಒಳಪಡಿಸಿ, ಎಲ್ಲ ತತ್ವಶಾಸ್ತ್ರಗಳಿಗೂ ಪದಗಳ, ಬರವಣಿಗೆಯ ಸ್ನೇಹ ದೊರಕಿದಂತೆ ದೃಶ್ಯದ ಸಾತತ್ಯತೆ ಕಡಿಮೆಯೇ. ಅಥವ, ಪದಗಳಿಲ್ಲದ ತತ್ವಶಾಸ್ತ್ರವೇ ಇಲ್ಲ. ಚಿತ್ರಕಲೆಯೂ ಹಾಗೆಯೇಃ ಪದವಿಲ್ಲದ ಚಿತ್ರವಿಲ್ಲ. ಯೋಚಿಸಿ ನೋಡಿ. ಬರವಣಿಗೆ, ಮಾತು ಇಲ್ಲದ ಚಿತ್ರವು ಚಿತ್ರವಾಗಿರಲು ಸಾಧ್ಯವೇ ಇಲ್ಲ!   


     ೧೯೯೦ರಲ್ಲಿ ಅಲ್ಲಿ ವ್ಯಾಸಂಗ ಮಾಡುವಾಗ, ಅಲ್ಲಿದ್ದ ಇಬ್ಬರು ಜೀವಂತ ದಂತಕಥೆಗಳೆಂದರೆ ಕೆ.ಜಿ.ಸುಬ್ರಹ್ಮಣ್ಯಂ ಮತ್ತು ಸೋಮನಾಥ್ ಹೋರ್.   ಕೆ.ಜಿ.ಎಸ್ ಬಗ್ಗೆ ಈಗಾಗಲೇ ಸಾಕಷ್ಟು ಬರೆದಾಗಿದೆ, ಇನ್ನೂ ಬರೆಯಬೇಕೆನಿಸಿದರೂ ಸಹ. ಹೋರ್ ಮತ್ತು ಕೆಜಿಎಸ್ ಇಬ್ಬರೂ ಆಗಾಗ ಕ್ಯಾಂಪಸ್ಸಿಗೆ ಬರುತ್ತಿದ್ದರು. ಕ್ಯಾಂಟೀನಿನ ಬಳಿ ಕುಳಿತು, ಸಿಗರೇಟು ಸೇದುತ್ತ, ಚಾಯ್ ಸೇವಿಸುತ್ತ ಸಾಕಷ್ಟು ಮಾತುಕಥೆಯಾಡುತ್ತಿದ್ದರೂ, ಅವರ ಮಾತುಗಳು ಕೇಳಿಸುತ್ತಿರಲಿಲ್ಲ. ಅಂತಹ ಒಂದು ಮಾನಸಿಕ, ದೈಹಿಕ ಕರ್ಫ್ಯೂವಿನಂತರ ’ಅಂತರ’ವು ಅವರುಗಳು ಕುಳಿತಿದ್ದ ಜಾಗದಿಂದ ವಿದ್ಯಾರ್ಥಿಗಳು ನಿಂತಿರುವ ನಡುವೆ, ಅಲ್ಲಿತ್ತು. ಕಲಾಭವನದಲ್ಲಿ ಹಿರಿಯರನ್ನು ಪ್ರಶ್ನಿಸುವುದೆಂದರೆ, ಅವರಿಗೆ ಎದುರಾಡಿದಂತೆ ಎಂಬರ್ಥವಿದೆ. ಕೆ.ಜಿ.ಎಸ್ ನಡೆನುಡಿ, ಮಾತು, ಗತ್ತು, ಅಧಿಕಾರತ್ವ -- ಇವೆಲ್ಲ ನಮಗೆ ರಾಜ್ ಕುಮಾರ್ ನೆನಪಿಗೆ ತರುತ್ತಿದ್ದರು, ಕರ್ನಾಟಕದಿಂದ ಹೋದ ವಿದ್ಯಾರ್ಥಿಗಳಿಗೆ. ಯಾವ ದೃಶ್ಯಸಾಮ್ಯತೆ ಇಲ್ಲದಿದ್ದಾಗ್ಯೂ, ಅಣ್ಣಾವ್ರು ತೀರ ಭಾವುಕರೆನಿಸಿದರೂ, ಬುದ್ಧಿಜೀವಿಯಾದ ಕೆ.ಜಿ.ಎಸ್ ಅವರನ್ನು ನಿನಪಿಸುತ್ತಿದ್ದುದು ಏಕೆಂದರೆ ಅವರಿಬ್ಬರಲ್ಲಿದ್ದ ಒಂದು ಜನಪ್ರಿಯತೆಯ, ಜನಪ್ರೀತಿಯ ಅಂಶ. ಮುಂದೆ, ಎರಡು ದಶಕಗಳ ಕಾಲ, ಸ್ನೇಹಿತರೊಂದಿಗೆ ಜಗಳವಾಡಲು ನನಗೆ ದೊರಕಿದ ವಿಷಯವೂ ಇದೇಃ


     ಯಾರೋ ಒಬ್ಬರಿಗೆ ಮಾತ್ರ, ಇನ್ಯಾರೋ ಒಬ್ಬರು ನಿರ್ದಿಷ್ಟವಾಗಿ ಮೂರನೆಯವ‍ರ್ಯಾರದ್ದೋ ’ನೆನಪು’ ತರುತ್ತಾರೆ. ಮಿಕ್ಕುಳಿದವರಿಗೆ ಈ ಹೋಲಿಕೆ ಸರಿ ಎನ್ನಿಸುವುದಿಲ್ಲ. ಏಕೆಂದರೆ ಮೊದಲನೆಯವರು "ಎರಡನೆಯವರು ಮೂರನೆಯವರಂತೆ ’ಕಾಣುತ್ತಾರೆ’ " ಎಂದು ತಪ್ಪಾಗಿ ಮಾತನಾಡಿರುತ್ತಾರೆ. "ಸ್ಟ್ರೈಕ್" ರಷ್ಯನ್ ಸಿನೆಮದಲ್ಲಿ ಮೊದಲಿಗೆ ಪಾತ್ರಧಾರಿಗಳ ಮುಖಗಳನ್ನು ತೋರಿಸುವಾಗ, ಅವರು ಯಾವ ಪ್ರಾಣಿಯನ್ನು ಹೋಲುತ್ತಾರೆ ಎಂಬುದನ್ನು ಪಕ್ಕದ ಫ್ರೇಮಿನಲ್ಲಿ ತೋರಿಸಿರುವುದು ಬಹಳ ಪ್ರಸಿದ್ಧ. ಅದನ್ನು ನೋಡಿ ಪ್ರಾಣಿಗಳು "ನಮಗೇಕೆ ಮನುಷ್ಯರ ಮುಖದೊಂದಿಗೆ ಹೋಲಿಕೆ ಮಾಡಿ ಅವಮಾನಿಸಿದ್ದೀರಿ?" ಎಂದೇನು ಮನುಷ್ಯನಾದ ನಿರ್ದೇಶಕನೊಂದಿಗೆ ಜಗಳವಾಡುತ್ತವೆಯೆ? ಇದನ್ನೇ ಶಿವರಾಮ ಕಾರಂತರು ಹೇಳಿದ್ದು, "ನಮ್ಮ ಅಳತೆಯನ್ನು ಮೀರಲಾರದ ದೇವರುಗಳು" ಎಂದು.


(೭೬)     ಸೋಮನಾಥ್ ಹೋರ್ ದುಃಖವೇ ಮೈವೆತ್ತಂತಹ ಮುಖಭಾವ. ಕಷ್ಟಷ್ಣತೆಯ ವ್ಯಕ್ತಿತ್ವ, ಸ್ವಲ್ಪ ನಮ್ಮ ಕನ್ನಡದ ನಟ ಸದಾಶಿವ ಬ್ರಹ್ಮಾವರ‍್ರಂತೆ. ಸಣ್ಣಗೆ ಉದ್ದಕ್ಕಿದ್ದರು ಅಥವ ಸಣ್ಣಗಿದ್ದುದ್ದರಿಂದ ಇರುವುದಕ್ಕಿಂತಲೂ ಉದ್ದಕ್ಕಿದ್ದರು ಅಥವ ಕಾಣುತ್ತಿದ್ದರು. ಸದಾ ಶಾಂತಿನಿಕೇತನದ ಸುತ್ತಮುತ್ತಲೂ ಸೈಕಲ್ ಹಿಡಿದು ನಡೆದುಕೊಂಡು ಹೋಗುವುದನ್ನು ಕೆಜಿಎಸ್ ಅರ್ಥಪೂರ್ಣವಾಗಿ ಒಂದೆಡೆ ಬರೆದಿದ್ದಾರೆ. "ಅವರು ಬೆಂಗಾಲದ, ೧೯೩೦ರ ತೆಭಾಗಾ ರೈತ ಚಳುವಳಿಯ ಇತಿಹಾಸವನ್ನು ಮೈಮೇಲೆ ಆವರಿಸಿಕೊಂಡವರಂತಿದ್ದು, ಸೈಕಲ್ಲಿನೊಂದಿಗೆ ಅವರು ಚಲಿಸುವುದು, ಅಂತಹ ಚಳುವಳಿಯನ್ನು ಇನ್ನೂ ಜೀವಂತವಾಗಿರಿಸಿರುವುದರ ಸಂಕೇತ" ಎಂಬರ್ಥದಲ್ಲಿದೆ ಕೆಜಿಎಸ್‍ರ ನುಡಿಗಳು.


     ಇಂದಿಗೂ ಹೋರರ "ವೂಂಡ್ಸ್" (ಗಾಯಗಳು) ಸರಣಿ ಗ್ರಾಫಿಕ್ ಪ್ರಿಂಟ್‍ಗಳು ಬಹಳ ಅರ್ಥಪೂರ್ಣ. ೨೦ನೇ ಶತಮಾನದ ಮಹತ್ವಪೂರ್ಣ ಕೃತಿಯಾದರೂ ಅದೇಕೋ ಅಷ್ಟಾಗಿ ಜನಪ್ರಿಯವಾಗಿಲ್ಲ, ಅಥವ ಆಗಿದ್ದದ್ದು ಕ್ರಮೇಣ ನಶಿಸಿದೆ. ಆ ಕೃತಿಸರಣಿಯಲ್ಲಿ ಬಿಳಿಯ ಹ್ಯಾಂಡ್-ಮೇಡ್ ಹಾಳೆಯ ಮೇಲೆ ಗಾಯದ ಚಿತ್ರದ ಬದಲು ಉಬ್ಬಿದೆ, ’ಗಾಯದಂತೆಯೇ ಉಬ್ಬಿದೆ’. ಚರ್ಮದ ಮೇಲೆ ಗಾಯವಾಗುತ್ತದೆಯೋ ಅಥವ ದೇಹಕ್ಕಂಟಿಕೊಂಡ ಸತ್ತಚರ್ಮದ ಪ್ರಸ್ತುತ ಅವಸ್ಥೆಯನ್ನು ಗಾಯವೆನ್ನುತ್ತೇವೆಯೋ ಎಂಬ ಪ್ರಶ್ನೆಯನ್ನು ಈ "ವೂಂಡ್ಸ್" ಸರಣಿ ಪ್ರಶ್ನಿಸುತ್ತ ನಮ್ಮ ಕಲಾನಂಬಿಕೆಗಳನ್ನು ಸಾಕಷ್ಟು ಗಾಯಗೊಳಿಸುತ್ತದೆ.


     ಅಲ್ಲಿಯವರೆಗೂ ಭಾರತೀಯ ಕಲೆಯ ಇತಿಹಾಸದಲ್ಲಿ ಗಾಯ, ನೋವು, ದುಃಖ, ದುರಂತ -- ಇವೆಲ್ಲಕ್ಕೂ ಒಂದೇ ತೆರನಾದ ಚಿತ್ರಗಳು ಇರುತ್ತಿದ್ದವು. ಅತ್ಯಂತ ದುಃಖಭರಿತವಾದ, ನಾಟಕೀಯವಾದ ಚಿತ್ರಗಳವು. ಆದರೆ ದುರಂತದಿಂದ ಗಾಯವನ್ನು ಬೇರ್ಪಡಿಸಿ ಅದರ ಬಗ್ಗೆ ಚಿಂತಿಸುವಂತೆ ಮಾಡಿದ ಪ್ರಮುಖ ಕೃತಿ "ವೂಂಡ್ಸ್". ಕಾಗದದ ಮೇಲೆ ಚಿತ್ರಬರುವ ಬದಲು, ಕಾಗದವನ್ನೇ ಚಿತ್ರವಾಗಿಸಲಾಗಿದೆ ಇಲ್ಲಿ! ಗಾಯವನ್ನು ವಾಸಿ ಮಾಡಿ, ಮತ್ತೆ ಜೀವಂತ ಚರ್ಮದ ಭಾಗವಾಗಿಸುವ ಚೇತೋಹಾರಿ ಯತ್ನದಂತೆ ಹೋರರ ಈ ಪ್ರಯತ್ನ. ಈ ಕೃತಿಸರಣಿ ಬರುವವರೆಗೂ ನಾಟಕೀಯವಾಗಿ ದುಃಖವನ್ನು ಸೂಚಿಸುವ ಕೃತಿಗಳು ಸಹಾನುಭೂತಿಯನ್ನುಕ್ಕಿಸುವ ಬದಲಿಗೆ ’ದಿನವೂ ಸಾಯುವವರಿಗೆ ಅಳುವವರ್ಯಾರು’ ಎಂಬ ಕ್ಲೀಷೆಯನ್ನೇ ಹುಟ್ಟಿಹಾಕಿತ್ತುತ್ತು.


     ಹೀಗೆ ಗಾಯವನ್ನು , ಚಿತ್ರವನ್ನು ಕಾಗದದ ಮೇಲಿರಿಸುವ ಬದಲು, ಚರ್ಮದ, ಕಾಗದದ ’ಭಾಗವೇ’ ಆಗುವಂತೆ ಮಾಡಲು, ಹೋರ್ ಸ್ವತಃ ಕಾಗದ ತಯಾರಿಸುವ ಶ್ರೀನಿಕೇತನ ಕಾಗದದ ಕಾರ್ಖಾನೆಗೇ ಹೋಗಿ, ಕಾಗದ ತಯಾರಾಗುವ ಹಂತವಾಗಿಯೇ, ಕಲಾಕೃತಿಯನ್ನೂ ತಯಾರಿಸಿಬಿಟ್ಟರು!     ಸಿನೆಮ ರೀಲು ತಯಾರಿಸುವಾಗಲೇ ಸಿನೆಮವನ್ನು ತಯಾರಿಸಿದಂತೆ, ಕ್ಯಾಮರಾ ರೀಲು ತಯಾರಿಸುವಾಗಲೇ ದೃಶ್ಯವನ್ನು ತಯಾರಿಸಿದಂತೆ, ರಿಹರ್ಸಲ್ ನಡೆವಾಗಲೇ ನಾಟಕವೂ ತಯಾರಾದಂತೆ ಇದು! ಚಿತ್ರಕಲೆಯಲ್ಲಿ ರೇಖಾಚಿತ್ರವು ಚಿತ್ರಕಲೆಗಿಂತಲೂ ಕಡಿಮೆ ದರ್ಜೆಯದ್ದು, ಗ್ರಾಫಿಕ್‍ಗಿಂತಲೂ ಚಿತ್ರಕಲೆ ಹೆಚ್ಚಿನದ್ದು, ಚಿತ್ರಕಲೆಗಿಂತಲೂ ವಿಡಿಯೋ ಕಲೆ ದೊಡ್ದದು --ಹೀಗೆ ವ್ಯತ್ಯಾಸಗಳು ಕಾಲಕಾಲಕ್ಕೆ, ಕಾಲಾನುಕ್ರಮದಲ್ಲಿ ಆಗಿಹೋಗಿವೆ, ಆಗುತ್ತಿವೆ. ಇಂತಹ ಎಲ್ಲ ವ್ಯತ್ಯಾಸಗಳನ್ನು, ಸಾಮಾಜಿಕ ಜಾತಿ-ವರ್ಗಗಾಳ ಏರುಪೇರುವಿನಂತಹ ಶ್ರೇಣೀಕರಣವನ್ನು ಅಥವ ಯಜಮಾನಿಕೆಯನ್ನು (ಹೆಜಿಮೊನಿಕ್) ಎಲ್ಲಕಾಲಕ್ಕೂ ಅಣಕ ಮಾಡುತ್ತದೆ ಸೋಮನಾಥ್ ಹೋರರ "ವೂಂಡ್ಸ್" ಸರಣಿ ಚಿತ್ರಗಳು! ಅವುಗಳನ್ನು ಗ್ರಾಫಿಕ್ ಎನ್ನಬಹುದು, ಉಬ್ಬು ಶಿಲ್ಪವೆನ್ನಬಹುದು, ವರ್ಣವೇ ಇಲ್ಲದ ಚಿತ್ರವೆನ್ನಬಹುದು, ಇತ್ಯಾದಿ. ಒಂದರ್ಥದಲ್ಲಿ ಇದನ್ನು ’ಸಿಮ್ಯುಲೇಷನ್’ ಎನ್ನುತ್ತೇವೆ. ಯಾವದು ಅಸಲಿಯಲ್ಲವೋ, ಆದರೂ ನಕಲಿಯಲ್ಲವೋ, ಜೊತೆಗೆ ನಕಲೂ ಮಾಡಲಾಗುವುದಿಲ್ಲವೋ ಅದನ್ನೇ ಸಿಮ್ಯುಲೇಷನ್ ಎನ್ನುವುದು. ಕಾಗದದ ಮೇಲೆ ಗಾಯವೋ, ಗಾಯದ ಸುತ್ತಲೂ ಕಾಗದವೋ ಎಂಬ ಜಗತ್ತಿನ ನೋವು ಮತ್ತದರ ಸುತ್ತಲಿನ ಜೀವನದ ಬಗ್ಗೆಗಿದೆ ಹೋರರ ’ಗಾಯ’ಗಳು. 


                                                                (೭೭)   


      ಇಂತಹ ಹೋರ್ ಒಮ್ಮೆ ಮುವತ್ತು ಕಿಲೋ ತೂಕದ ಬ್ರಾಂಜ್ ಶಿಲ್ಪವೊಂದನ್ನು ಸೃಷ್ಟಿಸಿದ್ದರು. ತುಂಬ ಬೆಲೆಯುಳ್ಳದ್ದಾದ್ದರಿಂದ, ಬ್ರಾಂಜ್ ಶಿಲ್ಪವನ್ನು ತಯಾರಿಸುವ ಶಿಲ್ಪಿಗಳು ಸ್ವಂತ ಖರ್ಚಿನಲ್ಲಿ ಮೂರುನಾಲ್ಕು ಕಿಲೋಗಿಂತಲೂ ಹೆಚ್ಚು ಬಳಸುವುದಿಲ್ಲ, ಯಾರಾದರೂ ಆಯೋಜಿಸಿ, ಖರ್ಚುವಹಿಸದಿದ್ದರೆ. ತಾಯಿಮಗುವಿನ ಹೋರರ ಆ ಶಿಲ್ಪವು ಒಂದು ದಿನ ಕಳುವಾಯಿತು, ಶಾಂತಿನಿಕೇತನದ, ಕಲಾಭವನದ ಶಿಲ್ಪಕಲಾ ವಿಭಾಗದಲ್ಲಿಯೇ! ಅದೂ ಟಾಗೂರರ ನೋಬೆಲ್ ಪಾರಿತೋಷಕವು ಕಳುವಾಗುವ ಮೂರ್ನಾಲ್ಕು ದಶಕಗಳ ಮುನ್ನವೇ. ಹುಳಿದ್ರಾಕ್ಷಿಯ ಸುದ್ದಿ ಏನಪ್ಪಾ ಎಂದರೆ, ಯಾರೋ ಹೋರರ ಈ ಕೃತಿಯ ಪ್ರತಿಭೆಯ ಪ್ರಖರತೆಯನ್ನು ತಡೆಯಲಾಗದೆ ಅದನ್ನು ರಾತ್ರೋರಾತ್ರಿ ಕದ್ದು, ರಾತ್ರೋರಾತ್ರಿಯೇ ಅದೇ ವಿಭಾಗದಲ್ಲಿಯೇ ಕರಗಿಸಿಬಿಟ್ಟಿದ್ದರು ಎಂದು. ಸುಟ್ಟುಹೋದ ಶವವು ಹೇಗೆ ಸಾಕ್ಷಿಯನ್ನು ಉಳಿಸುವುದಿಲ್ಲವೋ ಹಾಗೆ ಇದು.


     ಹೋರರು ಎಫ್.ಐ.ಆರ್. ದಾಖಲಿಸಿದರು ಪೋಲಿಸರೊಂದಿಗೆ. ಎಲ್ಲವೂ ಶಿಲ್ಪಕಲಾವಿಭಾಗದಲ್ಲೇ ಆದುದರಿಂದ, ಸುಲಭಕ್ಕೆ ಕಳ್ಳರು ಸಿಕ್ಕಿಹಾಕಿಕೊಳ್ಳುವ ಎಲ್ಲ ಸಾಧ್ಯತೆ ಇತ್ತು.  ಆಗ, ಕದ್ದಿದ್ದ ಮತ್ತೊಬ್ಬ ಶಿಲ್ಪಕಲಾ ಪ್ರೊಫೆಸರರು ಹೋರರ ಬಳಿ ಬಂದು, ೧೯೩೦-೪೦ರ ದಶಕದ ಹೋರರ ಸಾಮಾಜಿಕ ಚಳುವಳಿಯ ಪೋಲಿಸ್ ಕೇಸಿನ ಫೈಲನ್ನು ಹೊರತೆಗೆದು, ವಿಶ್ವವಿದ್ಯಾಲಯದ ಅವರ ಕೆಲಸ ಮತ್ತು ನಂತರದ ಪಿಂಚಣಿ ಕಳೆದುಕೊಳ್ಳುವಂತೆ ಮಾಡುವುದಾಗಿಯೂ, ಈಗಿನ ಕೇಸನ್ನು ಹಿಂದೆಗೆದುಕೊಳ್ಳಬೇಕೆಂದೂ ಬೇಡಿಕೆಯ ಒತ್ತಾಯ ಮಾಡಿದರು. ಕೇಸ್ ಅಲ್ಲಿಗೆ ಮುಗಿಯಿತು. ಭಾರತದ ೨೦ನೇ ಶತಮಾನದ ಒಂದು ಅದ್ಭುತ ಕೃತಿ ನಾಶವಾಯಿತು.//


 

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಈ ರೀತಿ ಕದ್ದು ಕರಗಿಸುವುದಾದರೆ... ಇತ್ತೀಚೆಗೆ ನಾನೊಂದು ಅದ್ಭುತ ಎನ್ನುವುದಕ್ಕೆ ಭೂತ(ಕಾಲ)(ಕಾಲು) ಇಲ್ಲದಂತಹ ಹೊಸ ಭಾವ ಚಿತ್ರವೊಂದನ್ನು ನೋಡಿರುವೆ, ಅದನ್ನು ಹಾಗೆ ಕರಗಿಸುವುದರಿಂದ, ಆ ಭಾವ ಚಿತ್ರಕ್ಕೆ ಈಗಾಗುತ್ತಿರುವ ಅನುಮಾನ, ಅಪಮಾನಗಳಿಂದ ತಪ್ಪಿಸಿಕೊಂಡು... ಕರಗಿದ ನಂತರ ಆ ಭಾವ ಚಿತ್ರಿತ ವ್ಯಕ್ತಿಯ ಹೆಸರಿನ ಪ್ರಖ್ಯಾತಿಯಲ್ಲಿ ಆ ಶಿಲ್ಪವು ಪ್ರ’ಖ್ಯಾತ"ಗೊಳ್ಲಬಹುದೇನೋ...

ಅಧೋ ಭೂತ ಎನ್ನುವ ಭಾವಚಿತ್ರವನ್ನು ಕದ್ದು ಕರಗಿಸಿ ಸಿಕ್ಕಿಹಾಕಿಕೊಂಡರೆ, ಆ ಭಾವಚಿತ್ರದ ಪ್ರಖ್ಯಾತಿಯಿಂದ ಕರಗಿಸಿದ ವ್ಯಕ್ತಿ ಕುಖ್ಯಾತನಾಗಬಹುದು.. ಕಂಡಿತ..! ಭಾವಚಿತ್ರವು ನಿರ್ಲಿಪ್ತ ಎನ್ನುವುದು ಅದರ ಭಾವಗಳು ಅದನ್ನು ದಿಟ್ಟಿಸಿ ನೋಡುವುದರಿಂದ ನಮ್ಮ ಮನದಲ್ಲೇಳುವ ತರಂಗಗಳಷ್ಟೇ ಅಲ್ಲವೇ?. ಅದನ್ನು ಭಾವ’ಚಿತ್ರ’ದ ಭಾವನೆಗಳು ಎಂದರಾದೀತೆ..?