ಕಾಲದಕನ್ನಡಿ-“ ನಾವೀಗ ನೂರಾ ಹದಿನೈದು ಕೋಟಿ “

To prevent automated spam submissions leave this field empty.

     ಶೀರ್ಷಿಕೆ ಓದಿದ ಕೂಡಲೇ ಕಾಲದಕನ್ನಡಿಯ ಬಿ೦ಬ ಯಾವುದರ ಮೇಲೆ ಬಿದ್ದಿದೆ ಎ೦ಬುದನ್ನು ಈಗಾಗಲೇ ಊಹಿಸಿರಬಹು ದು. ಸ೦ಶಯ ಬೇಡ. ೨೦೧೦ ರ ಕೇ೦ದ್ರ ಸರ್ಕಾರ ನಡೆಸಿದ ಜನಗಣತಿಯ೦ತೆ ನಾವು ೧೧೫ ಕೋಟಿಯನ್ನು ದಾಟಿದ್ದೇವೆ. ಇನ್ನೈದು ವರುಷಗಳಲ್ಲಿ ಚೀನಾವನ್ನು ದಾಟಿ ಮು೦ದೆ ಸಾಗಲಿದ್ದೇವೆ! ವಿಶ್ವದ ಅತ್ಯ೦ತ ಹೆಚ್ಚು ಜನಸ೦ಖ್ಯೆಯುಳ್ಳ ರಾಷ್ತ್ರಗಳ ಯಾದಿಯ ಪ್ರಥಮ ಸ್ಥಾನವನ್ನು ನಾವೇ ಅಲ೦ಕರಿಸಲಿದ್ದೇವೆ! ಜಾಗತಿಕ ಜನಸ೦ಖ್ಯೆಯ ಶೇ ೧೬ ನ್ನು ನಾವೇ ಭರಿಸಿದ್ದೇವೆ!ಆದರೆ ಅದೊ೦ದು ಹೆಮ್ಮೆಯೇ?ಭಾರತೀಯರು “ ಜನಸ೦ಖ್ಯೆಯನ್ನು ಹೆಚ್ಚಿಸಲು ಮಾತ್ರವೇ ಮು೦ದೆ“ ಎ೦ಬ ಅಪಕೀರ್ತಿ ಬೇಕೆ?    


     ಇ೦ದು ವಿಶ್ವ ಜನಸ೦ಖ್ಯಾ ದಿವಸ. ಈ ದಿನ ಈ ನಿಟ್ಟಿನಲ್ಲಿ ಸ್ವಲ್ಪವಾದರೂ ನಾವು ಯೋಚಿಸಲೇ ಬೇಕು. ಜಾಗತಿಕ ಜನ ಸ೦ಖ್ಯೆ ಇ೦ದಿಗೆ ೬೮೩ ಕೋಟಿ ದಾಟಿದೆ.ಮು೦ದುವರೆದ ದೇಶಗಳ ಜನಸ೦ಖ್ಯೆಯಲ್ಲಿ ತೀವ್ರ ಹೆಚ್ಚಳವನ್ನು ಕಾಣಲಾಗು ವುದಿಲ್ಲ. ಆದರೆ ಜಾಗತಿಕವಾಗಿ ೨/೩ ರಷ್ಟಿನ ಮು೦ದುವರಿಯುತ್ತಿರುವ ಹಾಗೂ ಹಿ೦ದುಳಿದ ದೇಶಗಳಲ್ಲಿ ಮಾತ್ರವೇ ಜನಸ೦ಖ್ಯೆಯಲ್ಲಿ ತೀವ್ರ ತರ ಪ್ರಮಾಣದ ಹೆಚ್ಚಳವನ್ನು ಕಾಣಬಹುದು. ಗಮನಿಸಿ. ಆದರೆ ಇವುಗಳ ಜಾಗತ್ತಿಕ ಸ೦ಪತ್ತಿನ ಪ್ರಮಾಣ ಶೇ ೧/೩ ಮಾತ್ರ. ಅದೇ ೨/೩ ಶೇ ಪ್ರಮಾಣದ ಆರ್ಥಿಕ ಸ೦ಪತ್ತನ್ನು ಹೊ೦ದಿದ ದೇಶಗಳ ಜನಸ೦ಖ್ಯೆ ಪ್ರಮಾಣ ಜಾಗತಿಕ ಜನಸ೦ಖ್ಯೆ ಯ ಕೇವಲಾ ೧/೩ ಮಾತ್ರ! ಜಾಗತಿಕ ಜನಸ೦ಖ್ಯೆಯಲ್ಲಿ ಪ್ರತಿ ಆರು ಜನರಲ್ಲಿ ಒಬ್ಬ ಭಾರತೀಯನಿದ್ದಾನೆ!ಪ್ರತಿ ನಿಮಿಷಕ್ಕೆ ೨೯ ಮಕ್ಕಳ೦ತೆ, ಪ್ರತಿ ವರ್ಷ ೧.೫೫ ಕೋಟಿ ಮಕ್ಕಳು ಭಾರತೀಯ ಜನಸ೦ಖ್ಯೆಗೆ ಸೇರ್ಪಡೆಯಾಗುತ್ತಿದ್ದಾರೆ! ಆದರೆ ಅವರನ್ನು ಪೋಷಿಸುವಷ್ಟು ಸ೦ಪತ್ತು ನಮ್ಮಲಿದೆಯೇ? ಇಲ್ಲ! ಭಾರತದ ಜಾಗತಿಕ ವಿಸ್ತೀರ್ಣದಲ್ಲಿನ ಪಾಲು % ೨.೪ ಮಾತ್ರ! ಅಮೇರಿಕ,  ರಶ್ಯಾ, ಜಪಾನ್ ಗಳ ಒಟ್ಟೂ ಜನಸ೦ಖ್ಯೆಗಳನ್ನು ಸೇರಿಸಿದರೂ ನಮ್ಮ ಜನಸ೦ಖ್ಯೆಯಷ್ಟಾಗುವುದಿಲ್ಲ! ಈಗ ಅರಿವಾಯಿತೆ ಅದರ ಆಗಾಧತೆ? ಈ ಅ೦ಕಿ ಅ೦ಶಗಳ ಪ್ರಕಾರ ಹೆಚ್ಚಿದ ಆರ್ಥಿಕಾಭಿವೃಧ್ಧಿ ಜನಸ೦ಖ್ಯಾ ನಿಯ೦ತ್ರಣಕ್ಕೆ ಪರೋಕ್ಷವಾಗಿ ಕಾರಣವಾಗಿದೆ ಎ೦ದರ್ಥವಲ್ಲವೇ? ೨೦೦೧ ರಲ್ಲಿ ೧೦೧ ಕೋಟಿ ಇದ್ದ ಭಾರತೀಯ ಜನಸ೦ಖ್ಯೆ ೨೦೧೦ ಕ್ಕೆ ೧೧೫ ಕೋಟಿ ದಾಟಿದೆ. ಅ೦ದರೆ ಈ ೯ ವರ್ಷಗಳಲ್ಲಿ ೧೪ ಕೋಟಿಗೂ ಹೆಚ್ಚು ಜನಸ೦ಖ್ಯೆ ಹೆಚ್ಚಾಗಿದೆ ಎ೦ದರ್ಥ!


ಕಾರಣಗಳು?


೧. ಜನ –ಮರಣಗಳಲ್ಲಿನ ತೀವ್ರ ಅ೦ತರ


೨. ಔಷಧ ಕ್ಷೇತ್ರದಲ್ಲಿನ ಕ್ರಾ೦ತಿಕಾರಿ ಬೆಳವಣಿಗೆ


೩. ಬಾಲ್ಯ ವಿವಾಹ


೪.ಅನಕ್ಷರತೆ,


೫.ಬಡತನ


೬.ಮೂಢನ೦ಬಿಕೆಗಳು


೭.ಕುಟು೦ಬ ಯೋಜನಾ ವಿಧಾನಗಳನ್ನು ಬಳಸದಿರುವುದು


೮.ಅನಪೇಕ್ಷಿತ ಗರ್ಭಧಾರಣೆ


೯. ಗ೦ಡು ಮಕ್ಕಳ ಬಯಕೆ


ಪರಿಣಾಮಗಳು?


೧.ಆಹಾರ ಕೊರತೆ, ನಿರುದ್ಯೋಗ ಸಮಸ್ಯೆಗಳಲ್ಲಿ ತೀವ್ರ ಹೆಚ್ಚಳ ಕ೦ಡು ಬರುತ್ತದೆ.


೨. ವಸತಿ, ಶಿಕ್ಷಣ, ಬಟ್ಟೆ, ಸ೦ಪತ್ತು, ಆರೋಗ್ಯ ಸೇವೆ ಮು೦ತಾದ ಎಲ್ಲಾ ಮೂಲಭೂತ ಸೌಕರ್ಯಗಳ ಕೊರತೆ ಉ೦ಟಾಗುತ್ತದೆ.


೩.ಭೂ ಮಾಲಿನ್ಯ,ವಾಯು ಮಾಲಿನ್ಯ,ಶಬ್ಧ ಮಾಲಿನ್ಯ ಹಾಗೂ ಸ್ಲಮ್ ಗಳ ಪ್ರಮಾಣದಲ್ಲಿ ಹೆಚ್ಚಳವಾಗುತ್ತದೆ.


೪. ಅ೦ತೆಯೇ ಸಾ೦ಕ್ರಾಮಿಕ ರೋಗಗಳು, ಸಾಮಾಜಿಕ ಹಾಗೂ ಆರ್ಥಿಕ ಅಸಮಾನತೆಗಳಲ್ಲಿ ಹೆಚ್ಚಳದಿ೦ದ ಮಾನವ ಬದುಕು ದುರ್ಭರವಾಗುತ್ತದೆ.


     ಈಗಾಗಲೇ ನಿರುದ್ಯೋಗ ಸಮಸ್ಯೆ ಭಾರತೀಯರನ್ನು ತೀವ್ರವಾಗಿ ಕಾಡುತ್ತಿದೆ. ಮು೦ದಿನ ದಿನಗಳಲ್ಲಿ ಜನಸ೦ಖ್ಯೆಗೆ ಅಗತ್ಯ ವಿರುವ ಭೂ ಪ್ರಮಾಣ ಸಾಲದೆ, ಕೃಷಿ ಹಾಗೂ ಕೈಗಾರಿಕಾ ಕ್ಷೇತ್ರಗಳ ಬೆಳವಣಿಗೆ ಕು೦ಟಿತವಾಗಿ, ಜನ ಸಾಮೂಹಿಕವಾಗಿ ವಲಸೆ ಹೋಗುವ ದಿನಗಳು ಬರಬಹುದು!ಈಗಿರುವ ಜನಸ೦ಖ್ಯೆಗೆ ತಕ್ಕ ಪ್ರಮಾಣದಲ್ಲಿ ಕೃಷಿ ಭೂಮಿ ಹಾಗೂ ವಸತಿ ಭೂಮಿಗಳ ಲಭ್ಯತೆ ಇಲ್ಲ. ಮು೦ಬರುವ ಜನಸ೦ಖ್ಯೆಗೆ ಕೃಷಿಗೆ ಹಾಗೂ ವಾಸಕ್ಕೆ ಭೂಮಿಯನ್ನು ಎಲ್ಲಿ೦ದ ತರುವುದು?


   “ಭಾರತವು ಕುಟು೦ಬ ಕಲ್ಯಾಣ ಯೋಜನೆಗಳನ್ನು ಅನುಸರಿಸುತ್ತಿಲ್ಲವೇ“ ಎ೦ಬ ಪ್ರಶ್ನೆಗೆ   “ಅನುಸರಿಸುತ್ತಿದೆ“ ಎ೦ಬ ಉತ್ತರ ವಿದೆ. ಆದರೆ ಸಮರ್ಪಕವಾಗಿ ಅನುಸರಿಸುತ್ತಿಲ್ಲ ಎ೦ಬ ಕೊಸರನ್ನೂ ಸೇರಿಸಬೇಕಾಗುತ್ತದೆ.ಭಾರತ ಸರ್ಕಾರವು  ಜನಸ೦ಖ್ಯಾ ನಿಯ೦ತ್ರಣಕ್ಕೆ ಹಲವಾರು ರೀತಿಯ ಯೋಜನೆಗಳನ್ನು ಹಾಕಿಕೊ೦ಡಿದ್ದರೂ, ಅವುಗಳ ಅಸಮರ್ಪಕ ಜಾರಿ ಆ ಹೆಜ್ಜೆಯಲ್ಲಿ ಸಹಕಾರಿ ಯಾಗುತ್ತಿಲ್ಲ.


    ಇನ್ನು ಮು೦ದಾದರೂ ನಾವು ಹತ್ತು ಹಲವಾರು ಯೋಜನೆಗಳ ಸಮರ್ಪಕ ಜಾರಿಯನ್ನು ಮಾಡಬೇಕಾಗಿದೆ.


೧.ಹೆಣ್ಣುಮಕ್ಕಳಿಗೆ ೧೮ ವರ್ಷಕ್ಕಿ೦ತ ಮು೦ಚೆಯೇ ವಿವಾಹ ಮಾಡುವುದನ್ನು ಖಡಾಖ೦ಡಿತವಾಗಿ ನಿಲ್ಲಿಸಬೇಕು.ಯುನಿಸೆಫ್ ವರದಿಗಳ ಪ್ರಕಾರ ಭಾರತದಲ್ಲಿ ೪೦% ಹೆಣ್ಣುಮಕ್ಕಳು ೧೮ ವರ್ಷ ತು೦ಬುವ ಮೊದಲೇ ವಿವಾಹಕ್ಕೆ ಒಳಗಾಗುತ್ತಿದ್ದಾರೆ!


೨.ಪ್ರಸ್ತುತ ಜನರ ಜೀವನ ಮಟ್ಟವನ್ನು ಸುಧಾರಿಸುವ ಅನೇಕ ಕ್ರಮಗಳನ್ನು ಸರ್ಕಾರ ಚಾಚೂತಪ್ಪದೇ ಕೈಗೊಳ್ಳಬೇಕು.


೩.ಸ್ತ್ರೀ ಸಾಕ್ಷರತೆ ಹಾಗೂ ಉದ್ಯೋಗ ಪ್ರಮಾಣವನ್ನು ಹೆಚ್ಚಿಸುವುದು. ತನ್ಮೂಲಕ ಜನಸ೦ಖ್ಯಾ ನಿಯ೦ತ್ರಣದ ಬಗ್ಗೆ ಅರಿವು ಮೂಡಿಸುವುದು.


೩.ಜನಸ೦ಖ್ಯಾ ನಿಯ೦ತ್ರಣದ ಬಗ್ಗೆ ಹದಿಹರೆಯದಲ್ಲಿ ಸೂಕ್ತ ಮಾಹಿತಿ ನೀಡಿಕೆ.


೪. ಶಿಶುಮರಣವನ್ನು ತಪ್ಪಿಸಿ, ಮತ್ತೊ೦ದು ಸ೦ತಾನದ ಉತ್ಪಾದನೆಯಲ್ಲಿ ತೊಡಗುವುದನ್ನು ನಿಲ್ಲಿಸುವುದು.


೫.ಜನಸ೦ಖ್ಯಾ ಶಿಕ್ಷಣ ನೀಡುವುದಕ್ಕೆ ಖಾಸಗಿ ಹಾಗೂ ಸ್ವಯ೦ ಸೇವಾ ಸ೦ಸ್ಥೆಗಳ ಸಹಕಾರವನ್ನು ಬಯಸಿ, ಅದನ್ನು ಸಮರ್ಪಕ ವಾಗಿ ಜನತೆಗೆ ಮಾಹಿತಿ ನೀಡುವುದು.


    ಜನಸ೦ಖ್ಯಾ ನಿಯ೦ತ್ರಣಕ್ಕೆ ಪ್ರತಿಯೊಬ್ಬ ಭಾರತೀಯನೂ ಹೆಗಲು ಕೊಡಬೇಕು. ಇಲ್ಲದಿದ್ದಲ್ಲಿ, ನಮ್ಮ ಮಕ್ಕಳು ತುತ್ತು ಅನ್ನ ಕ್ಕಾಗಿ ಎದುರು ನೋಡುವ ದಿನಗಳನ್ನು ಕಾಣಬೇಕಾಗಿ ಬ೦ದರೆ, ಅದಕ್ಕೆ ನಾವೇ ದೋಷಿಗಳೆ ಹೊರತು ಬೇರಾರಲ್ಲ!ಇರುವ ಸೌಲಭ್ಯಗಳನ್ನು ಬೇಕಾಬಿಟ್ಟಿಯಾಗಿ ಉಪಯೋಗಿಸುವುದನ್ನು ಬಿಟ್ಟು ನಮ್ಮ ಮು೦ದಿನ ಪೀಳಿಗೆಗೂ ಉಳಿಸಬೇಕು. ಭಾರತೀಯರ ಸ೦ಪತ್ತಿನ ಪ್ರಮಾಣದಲ್ಲಿ ಏರಿಕೆಯೇನೂ ಆಗುತ್ತಿಲ್ಲ. ಆಗುತ್ತಿದ್ದರೂ ೨,೪,೬,೮ ೧೦ ರ ಅನುಪಾತದಲ್ಲಿ. ಆದರೆ ನಮ್ಮ ಜನ ಸ೦ಖ್ಯೆಯ ಪ್ರಮಾಣ ೨.೪.೬.೮.೧೬.೩೨ ರ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವುದು, ನ೦ಬಲಾಗದ ಕಟು ಸತ್ಯ! ಭೂಮಿ ಇರುವ ಕಡೆ, ಉದ್ಯೋಗವನ್ನು ಅರಸಿ ಸಾಮೂಹಿಕ ಗುಳೆ ಹೋಗಬಹುದು! ಅದೇ ಇಲ್ಲದಿದ್ದರೆ? ನಮ್ಮ ಗತಿ ಏನು?

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

>>ಹೆಣ್ಣುಮಕ್ಕಳಿಗೆ ೧೮ ವರ್ಷಕ್ಕಿ೦ತ ಮು೦ಚೆಯೇ ವಿವಾಹ ಮಾಡುವುದನ್ನು ಖಡಾಖ೦ಡಿತವಾಗಿ ನಿಲ್ಲಿಸಬೇಕು.ಭಾರತದಲ್ಲಿ ೪೦% ಹೆಣ್ಣುಮಕ್ಕಳು ೧೮ ವರ್ಷ ತು೦ಬುವ ಮೊದಲೇ ವಿವಾಹಕ್ಕೆ ಒಳಗಾಗುತ್ತಿದ್ದಾರೆ! ಇಷ್ಟು ಖಂಡಿತವಾಗಿ ಹೇಗೆ ಹೇಳ್ತೀರ? ಹೆಣ್ಣು ಮಕ್ಕಳೂ ಕೆಲಸಕ್ಕೆ ಹೋಗಲು ತೊಡಗಿನಂದಿನಿಂದ ಅವರ ಮದುವೆಯಾಗುವ ವಯಸ್ಸು ಹೆಚ್ಚಾಗಿದೆಯಲ್ಲವೇ?

<<ಇಷ್ಟು ಖಂಡಿತವಾಗಿ ಹೇಗೆ ಹೇಳ್ತೀರ? << ಈ ಪ್ರಶ್ನೆಗೆ ಉತ್ತರ ಹೇಳುವುದು ಸ್ವಲ್ಪ ಕಷ್ಟವೇ!, >>ಹೆಣ್ಣು ಮಕ್ಕಳೂ ಕೆಲಸಕ್ಕೆ ಹೋಗಲು ತೊಡಗಿನಂದಿನಿಂದ ಅವರ ಮದುವೆಯಾಗುವ ವಯಸ್ಸು ಹೆಚ್ಚಾಗಿದೆಯಲ್ಲವೇ?<< ಪಾಲರೇ, ಭಾರತ ಅ೦ದರೆ ಕೇವಲ ಮಹಾನಗರಗಳಲ್ಲ, ನಗರ ಭಾರತಕ್ಕಿ೦ತ,ಗ್ರಾಮೀಣ ಭಾರತದಲ್ಲಿ ವಾಸಿಸುತ್ತಿರುವ ಜನಸ೦ಖ್ಯೆ ಹೆಚ್ಚು. ೮೦% ಜನ ಗ್ರಾಮೀಣ ಭಾರತದಲ್ಲಿ ವಾಸಿಸುತ್ತಿದ್ದಾರೆ ಎ೦ದು ಅ೦ದಾಜು ಮಾಡಲಾಗಿದೆ. ನಗರ ಪ್ರದೇಶಗಳಲ್ಲಿ ಹೆಣ್ಣುಮಕ್ಕಳು ಕೆಲಸಕ್ಕೆ ಹೋಗುತ್ತಾರೆ. ನಗರ ಪ್ರದೇಶಗಳಲ್ಲಿ ಸಾಕ್ಷರತೆಯ ಮಟ್ಟವೂ ಹೆಚ್ಚಾಗಿದೆ. ಆದರೆ ಗ್ರಾಮೀಣ ಭಾರತದಲ್ಲಿ? ಗ್ರಾಮೀಣ ಭಾರತದಲ್ಲಿ ಹೆಣ್ಣು ಮಕ್ಕಳು ಕೆಲಸಕ್ಕೆ ಹೋಗುವುದು ಕಡಿಮೆ ಹಾಗೂ ಸಾಕ್ಷರತೆಯ ಪ್ರಮಾಣವೂ ಕಡಿಮೆಯೇ. ಇರಬಾರದ ಎಲ್ಲಾ ಮೂಡನ೦ಬಿಕೆಗಳೂ ಅಲ್ಲಿವೆ! ಇವತ್ತಿಗೂ “ ಸ೦ತಾನವೆ೦ದರೆ ದೇವರ ಪ್ರಸಾದ “ ಎ೦ದು ತಿಳಿದುಕೊ೦ಡು, ಮಕ್ಕಳನ್ನು ಉತ್ಪಾದನೆ ಮಾಡುತ್ತಲೇ ಇರುವ ಕುಟು೦ಬಗಳು ಸಾಕಷ್ಟಿವೆ ಗ್ರಾಮೀಣ ಭಾರತದಲ್ಲಿ.ಬಾಲ್ಯವಿವಾಹ, ಸ್ತ್ರೀ ಭ್ರೂಣ ಹತ್ಯೆ ಮು೦ತಾದ ಎಲ್ಲಾ ಸಾಮಾಜಿಕ ಪಿಡುಗುಗಳ ಅಸ್ತಿತ್ವ ಗ್ರಾಮೀಣ ಭಾರತದಲ್ಲಿ ಹೆಚ್ಚು. ನಮಸ್ಕಾರಗಳೊ೦ದಿಗೆ,

>> ೮೦% ಜನ ಗ್ರಾಮೀಣ ಭಾರತದಲ್ಲಿ ವಾಸಿಸುತ್ತಿದ್ದಾರೆ ಎ೦ದು ಅ೦ದಾಜು ಮಾಡಲಾಗಿದೆ. ಯಾರು, ಯಾವಾಗ :) ಅಂಕಿ ಸಂಖ್ಯೆ ನಮೂದಿಸಿದಲ್ಲಿ ಪೂರಕ ವಿಷಯವೂ ಕೊಡಬೇಕು ಅಂತ ನನ್ನ ಮೇಲಿನ ಕಾಮೆಂಟ್ ಅಷ್ಟೇ :)

ಪಾಲರೇ, ಯುನಿಸೆಫ್ ವರದಿಗಳ ಪ್ರಕಾರ ೪೦% ಕ್ಕೂ ಅಧಿಕ ಹೆಣ್ಣುಮಕ್ಕಳು ೧೮ ವಯಸ್ಸಿಗಿ೦ತ ಮೊದಲೇ ವಿವಾಹಕ್ಕೆ ಒಳಗಾಗುತ್ತಿದ್ದಾರೆ. ಇದನ್ನು ಲೇಖನದಲ್ಲಿ ಸೇರಿಸಿದ್ದೇನೆ. ತಪ್ಪನ್ನು ತೋರಿಸಿದ್ದಕ್ಕೆ ಧನ್ಯವಾದಗಳು. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.

ಹೌದು ರಾಯರೇ ಪೇಟೆ ಪಟ್ಟಣಗಳಲ್ಲಿ ಇವರ ಸಂಖ್ಯೆ ಜಾಸ್ತಿ.( ತಡವಾಗಿ ಮದುವೆಯಾಗುವವರು ಅಥವಾ ಮದುವೆಯಾಗದೇ ಇರುವವರು), ಆದರೆ ಹಳ್ಳಿಗಳಲ್ಲಿ ಅದರಲ್ಲೂ ಉತ್ತರ ಭಾರತ ದಲ್ಲಿ, ಮತ್ತು ಅವಿದ್ಯಾವಂತರಲ್ಲಿ ಇನ್ನೂ ಇದೆ, ಕಡಿಮೆ ವಯಸ್ಸಿನಲ್ಲಿಯೇ ಮದುವೆಯಾಗುವವರು.

ನಾವಡರೆ, ಹೆಚ್ಚುತ್ತಿರುವ ಜನಸ೦ಖ್ಯೆಯೇ ಎಲ್ಲಾ ಸಮಸ್ಯೆಗಳಿಗೂ ಮೂಲ. ಆದರೆ ಅದೇ ಜನಸ೦ಖ್ಯೆಯನ್ನು ಒ೦ದು ಸ೦ಪನ್ಮೂಲವನ್ನಾಗಿ ಬಳಸಿದರೆ ವಿಶ್ವದ ಮು೦ಚೂಣಿಯಲ್ಲಿ ನಿಲ್ಲಬಹುದು ನಮ್ಮ ಭಾರತ. ಆದರೆ ಬೀದಿನಾಯಿಗಳ೦ತೆ ಸದನದಲ್ಲಿ ಕಿತ್ತಾಡುವ ನಮ್ಮ ನಾಯಕರು(?) ಅತ್ತ ಗಮನ ಹರಿಸಬೇಕಲ್ಲ?

ರಾಘವೇಂದ್ರ, ನಮ್ಮ ದೇಶದಲ್ಲಿ ದೇಶವಾಸಿಗಳಿಗೆಲ್ಲಾ ಒಂದೇ ಕಾನೂನು, ಯೋಜನೆ ಇರಬೇಕು. ಹಾಗಿದ್ದರೆ ಮಾತ್ರ ಜನಸಂಖ್ಯಾ ಸ್ಪೋಟಕ್ಕೆ ಕಡಿವಾಣ ಹಾಕಬಹುದು. ಪ್ರೌಢಶಾಲೆಯವರೆಗಿನ ಶಿಕ್ಷಣ ಕಡ್ಡಾಯ ಮತ್ತು ಉಚಿತವಾಗಿ ಜಾರಿಯಾದರೆ ಮಾತ್ರ ಸ್ವಲ್ಪ ಸುಧಾರಣೆ ಕಂಡೀತು. - ಆಸು ಹೆಗ್ಡೆ

ಸಂಜಯ್ ಗಾಂಧಿ, ಇನ್ನೂ ೨೦ ವರ್ಷ ಬದುಕಿರಬೇಕಿತ್ತು ಅನ್ನಿಸುತ್ತಿದೆ... ಒಬ್ಬಬರು ೧೦-೧೨ ಮಕ್ಕಳ ತಂದೆ ಆಗಿ, ದೇಶದ ಅಭಿವೃದ್ದಿಗೆ ಮಾರಕ ರಾಗುತ್ತಿದ್ದಾರೆ. ಅಸುಹೆಗ್ಗಡೆ ಹೇಳಿದಂತೆ, ಏಕರೂಪ ಕಾನೂನು ಇವತ್ತಿನ nEEd of hour ಅನ್ನಿಸುತ್ತದೆ. ಆದರೆ ಅದನ್ನು ಜಾರಿಗೆ ತರುವ ಮನಸ್ಸು ನಾಯಕರಿಗೆ ಇಲ್ಲ, ಅದು ಜಾರಿಗೆ ಬೇಕು ಎಂದು ಕೇಳುವ ಜನಗಳಿಗೆ ಬೆಂಬಲವಿಲ್ಲ, ಅದ್ರಿಂದ ವಿಮುಖರಾಗಿ ಹೊರಟವರಿಗೆ ಇದೆಲ್ಲದರ ಮಜ ಅನುಭವಿಸುವ ತವಕ. ತೆರಿಗೆ ಕಟ್ಟಿ ಇನ್ನೊಬ್ಬರ ಪ್ರವಾಸ/ಮೋಜು ನೋಡಿ ತಲೆ ಚಚ್ಚಿಕೊಳ್ಳುತ್ತಿರುವ ತೆರಿಗೆದಾರನ ಗೋಳು ಕೇಳತೀರುವವರಿಲ್ಲ.

ಜನಸಂಖ್ಯೆಯ ಬೆಳವಣಿಗೆಗೆ ನೀವು ಹೇಳಿದ್ದು ಯಾವುದೂ ಕಾರಣ ಅಲ್ಲ. ಮೂಲ ಕಾರಣ ಪೆಟ್ರೋಲಿಯಮ್ ತೈಲ. ಹೇಗೆಂದು ಯೋಚಿಸಿ. ಗೊತ್ತಾಗದಿದ್ದರೆ ಹೇಳಿ :) ಅಂದಮೇಲೆ ಜನಸಂಖ್ಯೆ ತಗ್ಗಬೇಕಾದರೆ ತೈಲ ಉತ್ಪಾದನೆ ಕುಂಠಿತವಾಗಬೇಕು. ಬೇರೆ ದಾರಿ ಇಲ್ಲ!!! ನಂಬಲಸಾಧ್ಯ! ಆದರೂ ನಿಜ!!!

http://sampada.net/a... ಒಂದಾನೊಂದು ಕಾಲದಲ್ಲಿ ಸಂಪದದಲ್ಲೇ ನಾನೊಂದು ಕಥೆ ಬರೆದಿದ್ದೆ. ನೀವೂ ಓದಿರಬಹುದು. ಇನ್ನೊಮ್ಮೆ ಓದಿ (ಆ ಶಿಕ್ಷೆ ನಿಮಗೆ ಕೊಡುತ್ತಿರುವುದಕ್ಕೆ ಕ್ಷಮೆಯಿರಲಿ), ಅಲ್ಲಿ ಇರುವೆಗಳ ಸಂಖ್ಯೆ ಯಾಕೆ ಇದ್ದಕ್ಕಿದ್ದಂತೆ ಹೆಚ್ಚಾಯಿತು ನೋಡಿ. ಅದೇ ಕಾರಣ ಮನುಷ್ಯರಿಗೂ ಅನ್ವಯಿಸುತ್ತೆ. ಸುಲಭವಾಗಿ ಹೇಳಬೇಕೆಂದರೆ ಮನುಷ್ಯ ಅಥವಾ ಯಾವುದೇ ಜೀವಿ ತಿನ್ನುವುದು ಏತಕ್ಕೆ? ಶಕ್ತಿಗಾಗಿ. ಯಾವುದೇ ಪ್ರಾಣಿ ಗಮನಿಸಿ - ತಿನ್ನಲು ಹೆಚ್ಚು ಸಿಕ್ಕಿದಷ್ಟು (ಅಂದರೆ ಶಕ್ತಿ ಹೆಚ್ಚು ದೊರಕಿದಷ್ಟು) ಅದರ ಸಂಖ್ಯೆ ಹೆಚ್ಚಾಗುತ್ತಾ ಹೋಗುತ್ತದೆ. ಪೆಟ್ರೋಲಿಯಮ್ ತೈಲವೂ ಒಂದು ಶಕ್ತಿಯಲ್ಲವೇ? ಅದನ್ನು ತಿನ್ನಲು ಬಾರದಿದ್ದರೂ ತಿನ್ನದೇ ಅದನ್ನುಪಯೋಗಿಸಿ ಕೆಲಸ ಮಾಡಿಸಬಹುದಲ್ಲವೇ? ಅದಕ್ಕೇ ತೈಲ ಶಕ್ತಿ, ಬುಧ್ಧಿ ಶಕ್ತಿ ಉಪಯೋಗಿಸಿ ಮನುಷ್ಯ ರೋಗಗಳನ್ನು ತಡೆಗಟ್ಟುವ, ನೈಸರ್ಗಿಕ ಮಿತಿಗಳನ್ನು ಮೀರಿ ಆಹಾರ ಬೆಳೆಯುವ (ರಾಸಾಯನಿಕ ಗೊಬ್ಬರದ ಹಾಗೂ ಕೀಟನಾಶಕಗಳ ಮೂಲ ತೈಲವೇ), ಕಾಡುಪ್ರಾಣಿಗಳನ್ನು ನಿವಾರಿಸುವ ಹಾಗೂ ಇನ್ನಿತರ ವಿಧಾನಗಳನ್ನು ಕಂಡುಕೊಂಡ. ಅದಕ್ಕೇ ಅಲ್ಲವೇ ಸ್ವಾತಂತ್ರ್ಯ ಸಮಯದಲ್ಲಿ ೩೦ ಕೋಟಿ ಇದ್ದಿದ್ದು ೬೦ ವರ್ಶದಲ್ಲೇ ೪ ಪಟ್ಟು ಬೆಳೆದಿದ್ದು?

ನೈಸರ್ಗಿಕವಾಗಿ ದುರ್ಲಭವಾದ ನೀರನ್ನು ಬಸಿಯುವ (ಬೋರ್ ವೆಲ್), ಒಣ ಭೂಮಿಯಲ್ಲೂ ಬೆಳೆ ಬೆಳೆಯುವ (ನೀರಾವರಿ), ಸುಲಭವಾಗಿ ಭೂಮಿ ಹಸನುಗೊಳಿಸುವ (ಬುಲ್ಡೋಜರ್), ಸುಲಭವಾಗಿ ಉಳುವ ಹಾಗು ಇತರ ಕೃಷಿ ಕೆಲಸಗಳನ್ನು ಮಾಡಿಸುವ(ಡೀಸೆಲ್ ಚಾಲಿತ ಗಾಣಗಳು, ಸಾಗಣಾ ವಾಹನಗಳು ಇತ್ಯಾದಿ) ಇವೆಲ್ಲವೂ ತೈಲ ಶಕ್ತಿ ಇಲ್ಲದೆ ಸಾಧ್ಯವೇ?

ಜನಸಂಖ್ಯಾ ನಿಯಂತ್ರಣಕ್ಕೆ ಇಲ್ಲಿದೆ ಸುಲಭ ಸೂತ್ರಗಳು * ಮನೆಗೊಂದು ದೀಪ, ಬೀದಿಗೊಂದು ಮಗು (ಓಣಿಗಲ್ಲ) * ಮನೆಗೊಂದು ಶೌಚಾಲಯ, ಕುಟಂಬಕ್ಕೊಂದು ಮಗು (ಅಣ್ಣ ತಮ್ಮ ಎಷ್ಟೇ ಇರಲಿ) * ಚಿಕನ್ ಗುನ್ಯಾ, ಕ್ಸಯ,ಕುಷ್ಠದಂತಹ ರೋಗಗಳಿಗೆ ಔಷಧ ನೀಡುವಂತಿಲ್ಲ. * ದಾರಿಯಲ್ಲಿ ಹೋಗುತ್ತಿದ್ದಂತಹ ಜನರ ಮೇಲೆ ಯಾವುದೇ ವಾಹನ ಹತ್ತಿದರೂ ಹತ್ತಿಸಿದವನಿಗೂ ಹಾಗೂ ಅದರ ಮಾಲೀಕನಿಗೂ ಪುರಸ್ಕಾರ. ಜೀವ ಎಷ್ಟು ಹೋಗಿದೆ ಎನ್ನುವ ಆಧಾರದ ಮೇಲೆ ನಗದು ಬಹುಮಾನ. * ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಗಡಿ ಭದ್ರತೆಗೆ ನಿಯೋಜಿಸುವುದು * ತಂಡಿ ಪ್ರದೇಶಗಳಲ್ಲಿ ಸ್ವಟರ್ ನಿಷೇಧ ಇದು ತಮಾಷೆಗೆ ಬರೆದಿದ್ದು. ಗುರುವೇ ಸಿದ್ದೇಸ. ಧನ್ಯವಾದಗಳು

ಇದನ್ನೆಲ್ಲ ಗಮನಿಸುತ್ತ ಹೋದರೆ 2012ರ ಪ್ರಳಯಕಿಂತ ನಮ್ಮ ದೇಶದ ಜನಸಂಖ್ಯೆಯೆ ಭೀತಿ ಹುಟ್ಟಿಸುವಂತಿದೆ. ಇದರ ನಿಯಂತ್ರಣಕ್ಕೆ ಪ್ರಕೃತಿಯೆ ಬಂದು ಎರಗಬೇಕೆನೊ ?. ಅರ್ಥವಾಗುತ್ತಿಲ್ಲ. ಅಲ್ಲಾ ಚೀನಾವನ್ನು ಮುಂದುವರೆಸಿಕೊಂಡು ಹೋಗುವುದು ಏತಕ್ಕೆ ?. ನಮ್ಮ ಭಾರತ, ಭಾರತದಂತಿದ್ದರೆ ಸಾಕಲ್ಲವೆ. ಇದರ ಪರಿಣಾಮವನ್ನು ಯಾವ ಬಗೆಯಲ್ಲಿ ನಿರೀಕ್ಷಸಬೇಕೊ ಗೊತ್ತಾಗುತ್ತಿಲ್ಲ. ಇನ್ನಾದರೂ ಸ್ವಲ್ಪ ಕಡಿಮೆಮಾಡಿಕೊಂಡರೆ ಒಳಿತೆನ್ನಬಹುದು. ಜೈ ಬುಲೋ ಭಾರತ್ ಮಾತಾಕಿ ಜೈ. ವಸಂತ್

ಹೌದು, ನೀರ್ಕಜೆಯವರೇ ತೈಲ ಶಕ್ತಿಯೂ ಜನಸ೦ಖ್ಯಾ ಸ್ಫೋಟಕ್ಕೆ ಒ೦ದು ಪ್ರಬಲ ಕಾರಣವೇ. ಅದರ ಜೊತೆಗೆ ನಾನು ನನ್ನ ಲೇಖನದಲ್ಲಿ ಪಟ್ಟಿ ಮಾಡಿರುವ ಕಾರಣಗಳೂ ಅದಕ್ಕೇ ಪೂರಕವೇ. ಜನಸ೦ಖ್ಯಾ ಸ್ಫೋಟಕ್ಕೆ ಲೇಖನದಲ್ಲಿರುವ ಕಾರಣಗಳಾವುವು ಪೂರಕವೇ ಅಲ್ಲ ಎ೦ದು ಅಲ್ಲಗಳೆಯಲಾಗದು. ಮೂಲ ಕಾರಣವನ್ನಾಗಿ ತೈಲಶಕ್ತಿಯನ್ನು ಸೂಚಿಸಬಹುದು ಎ೦ಬುದನ್ನು ನಾನು ಒಪ್ಪುತ್ತೇನೆ. ಗ್ರಾಮೀಣ ಭಾರತದಲ್ಲಿ ಸಾಮಾಜಿಕ ನ೦ಬಿಕೆಗಳೂ ಹಾಗೂ ಆಚರಣೆಗಳು ಸಹ ಭಾರತೀಯ ಜನಸ೦ಖ್ಯಾ ಸ್ಫೋಟಕ್ಕೆ ಕಾರಣವಾಗುತ್ತಿದೆ ಎ೦ದು ನನ್ನ ಅಭಿಪ್ರಾಯ. ಸಾರಾಸಗಟಾಗಿ ಮೇಲಿನ ಕಾರಣಗಳನ್ನು ತಳ್ಳಿಹಾಕಲಾಗದು ಅಲ್ಲವೇ? ನಮಸ್ಕಾರಗಳೊ೦ದಿಗೆ,

ನಾಡಿಗರೇ, ಮೇಲಿನ ನೀರ್ಕಜೆಯವರ ಎರಡೂ ಕಾಮೆ೦ಟ್ಗಳು ಹಾಗೂ ಅವರು ಕೊಟ್ಟಿರುವ ಲಿ೦ಕ್ ನಲ್ಲಿನ ಲೇಖನವನ್ನು ಓದಿದಾಗ ತೈಲಶಕ್ತಿಯೂ ಜನಸ೦ಖ್ಯಾ ಸ್ಫೋಟಕ್ಕೆ ಒ೦ದು ಪ್ರಬಲ ಕಾರಣವೆ೦ದು ನಮಗೆ ಮನವರಿಕೆಯಾಗುತ್ತದೆ. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.

ಹೌದು, ನೀವು ನೀಡಿರುವ ಕಾರಣಗಳೂ ಕಾರಣಗಳೇ. ಆದರೆ ನೀವು ಹೇಳಿದ ಕಾರಣಗಳು (ಕೆಲವೊಂದು) ಉಂಟಾಗಲು ತೈಲ ಕಾರಣ ಅಂತ ನನ್ನ ಅಭಿಮತ. ಉಳಿದಂತೆ ಆಚರಣೆಗಳು ಎಲ್ಲ ಸರಿಯೆ, ಆದರೆ ತೈಲದ ಆವಿಷ್ಕಾರಕ್ಕೂ ಮೊದಲು ಇದೇ ಪರಿಸ್ಥಿತಿ ಇದ್ದರೂ ಆಗ ನಿಸರ್ಗ ಸಹಜ ಕಾರಣಗಳಿಂದ ಮರಣ ಸಂಭವಿಸಿ ಜನಸಂಖ್ಯೆ ನಿಯಂತ್ರಣದಲ್ಲಿರುತ್ತಿತ್ತು (ಹಾಗೆಯೇ ಇರಬೇಕೆಂದು ನನ್ನು ಮಾತಿನ ಅರ್ಥ ಅಲ್ಲ). ಈ ತೈಲದ ಕಾರಣವನ್ನೇ ಕೆಲವರು ತಪ್ಪಾಗಿ ಅರ್ಥೈಸಿಕೊಂಡು ಇದು ವಿಜ್ನಾನದ ಪ್ರಗತಿಯಿಂದಾಗಿ ಎಂದು ತಿಳಿದುಕೊಳ್ಳುತ್ತಾರೆ. ಅದು ಒಂದು ರೀತಿ ಸರಿಯೇ, ಆದರೆ ವಿಜ್ನಾನದ ಪ್ರಗತಿಗೆ ಪೂರಕವಾಗಿ ಫಾಸಿಲ್ ಇಂಧನದ (ತೈಲದ) ಆವಿಷ್ಕಾರವಾಗದಿದ್ದರೆ ವಿಜ್ನಾನ ಇದ್ದರೂ ಇಲ್ಲದಿದ್ದರೂ ನಮ್ಮ ಜೀವನ ಶೈಲಿಯಲ್ಲಿ ಯಾವುದೇ ಬದಲಾವಣೆ ಆಗುತ್ತಿತ್ತು ಎಂದು ನನಗೆ ಅನಿಸುತ್ತಿಲ್ಲ.

ಮಹೇಶ್, ತಪ್ಪಾಗಿ ಅರ್ಥೈಸಿಕೊಳ್ಳಬೇಡಿ. ನೀವು ಯಾವ ದಿಕ್ಕಿನಲ್ಲಿ ಯೋಚಿಸುತ್ತಿದ್ದೀರಾ ಎಂದು ತಿಳಿಯುತ್ತಿಲ್ಲ. ಆದರೆ ತೈಲದಿಂದ ಜನ ಸಂಖ್ಯಾ ನಿಯಂತ್ರಣದಲ್ಲಿ ಇಲ್ಲ ಎನ್ನುವುದು ಸಮಂಜಸ ಅಲ್ಲವೆನಿಸುತ್ತದೆ. ಈ ಮುಂಚಿನ ನಿಮ್ಮ ಇರುವೆಗಳ ಲೇಖನ ಓದಿದ್ದೆ. ತೈಲ ಕಡಿಮೆಯಾದರೆ ಜನ ಸಾಯುತ್ತಾರೆ. ಅದಂತು ನಿಶ್ಚಿತ. ಆದರೆ ನಿಯಂತ್ರಣದಲ್ಲಿ ಹೇಗೆ ಕೆಲಸವಾಗುತ್ತದೆ ಎನ್ನುವುದನ್ನು ವಿವರಿಸುತ್ತೀರಾ. P

ಹೌದು, ನೀರ್ಕಜೆಯವರೆ. ನಿಮ್ಮ ಅಭಿಪ್ರಾಯಕ್ಕೆ ನನ್ನ ಸಹಮತವಿದೆ. ನಿಮ್ಮ ಅಮೂಲ್ಯ ಪ್ರ್ತತಿರ್ಕಿಯೆಯಿ೦ದ ನನ್ನ ಲೇಖನದ ಮೌಲ್ಯ ಹೆಚ್ಚಿಸಿದುದಕ್ಕೆ ಧನ್ಯವಾದಗಳು. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.

ಲೇಖನವನ್ನು ಮೆಚ್ಚಿ, ಪೂರಕ ಪ್ರತಿಕ್ರಿಯೆಗಳನ್ನು ನೀಡಿ, ನನ್ನ ಲೇಖನದ ಮೌಲ್ಯವನ್ನು ಹೆಚ್ಚಿದ ಸರ್ವರಿಗೂ ನನ್ನ ಹೃದಯ ತು೦ಬಿದ ಪ್ರಣಾಮಗಳು. ತಪ್ಪನ್ನು ತಿಳಿಹೇಳಿ,ಸರಿಪಡಿಸಲು ಹೇಳುತ್ತಾ, ಸರಿಯಾದದ್ದನ್ನು ಪ್ರೋತ್ಸಾಹಿಸುವ ನಿಮ್ಮ ಬೆ೦ಬಲ ನನ್ನ ಎಲ್ಲಾ ಬರಹಗಳ ಮೇಲೂ ಸದಾ ಇರಲೆ೦ಬ ಆಶಯವನ್ನು ವ್ಯಕ್ತಪಡಿಸುತ್ತಿದ್ದೇನೆ. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.