ಪಿಜೆಯಾತೀತ ಗುಂಪು-- ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆಃ ಭಾಗ ೨೪

To prevent automated spam submissions leave this field empty.

(೭೧)


ಹಿಂದಿನ ಸಂಚಿಕೆಯಿಂದಃ (...ಹೀಗೆ ಒಂದಿಡೀ ತಂಡವೇ ಇಂಟಲೆಕ್ಷುಯಲ್ ವರ್ಗವೊಂದನ್ನು ಅವಮಾನಿಸಲು ಅವಕಾಶಕ್ಕಾಗಿ ಕಾದುಕುಳಿತಿದ್ದರು. ಇದರ ಪರಿಣಾಮವಾಗಿ ಬುದ್ದಿಜೀವಿ ವಿದ್ಯಾರ್ಥಿಗಳಲ್ಲಿ ಹುಟ್ಟಿಕೊಂಡ ಪಂಥವೇ ’ಪಿಜೆಯಾತೀತ್’.)


      ಕಲಾಭವನದಲ್ಲಿ ’ಪಿಜೆ-ಯಾತೀತ್’ ಗುಂಪೆಂದರೆ 'ಬುದ್ದಿಜೀವಿಗಳ ತರಲೆ' ಎಂದಾಗಿತ್ತು. ಇರುವ ಜೋಕೊಂದನ್ನು ಬೆಳಸುತ್ತ ಹೋಗುವುದು. ಇದಕ್ಕೆ ಕಾರಣವೇನೆಂದರೆ, ಬುದ್ದಿವಂತ ಹುಡುಗರು ಸಹಜವಾಗಿ ಒಂದೆಡೆ ಸೇರಿ ವಿಪರೀತ ಬೌದ್ಧಿಕ ಚರ್ಚೆ, ಮಾತುಕಥೆಯಾಡುತ್ತಿದ್ದರು--ಇತರರು ಕೀಳರಿಮೆಯಿಂದ ನರಳುವಷ್ಟು.  ನಡುವೆ ಬೇಕಾದಷ್ಟು ಅಥವ ಬೇಡವಾದಷ್ಟು (ಬೀಚಿಯವರ ಕ್ಷಮೆ ಕೋರುತ್ತ) ಜೋಕುಗಳು ಹುಟ್ಟಿಕೊಳ್ಳುತ್ತಿದ್ದವು. ಅಂತಹ ಜೋಕನ್ನು ಮಾತ್ರ ಅರ್ಥಮಾಡಿಕೊಂಡು ನೆನಪಿಟ್ಟುಕೊಳ್ಳುತ್ತಿದ್ದ ಮತ್ತೊಂದು ಗುಂಪಿತ್ತು. ಅದನ್ನು ’ದಡ್ಡರ ಗುಂಪು’ ಎಂದು ಅದಾಗಲೇ ಪಿಜೆ-ಯಾತೀತರು ವರ್ಗೀಕರಣ ಮಾಡಿಯಾಗಿತ್ತು.


     ಹೊಸದಾಗಿ ಹುಟ್ಟಿಕೊಂಡ ಜೋಕನ್ನು ಮತ್ತೆ ಮತ್ತೆ ಸಿಕ್ಕಸಿಕ್ಕವರಿಗೆಲ್ಲ ಹೇಳುವುದು ’ಪಿಜೆಯಾತೀತ್’ ಗುಂಪಿನ  ಸದಸ್ಯರ ಚಟವೂ ಆಗಿತ್ತು. ’ಬುದ್ಧಿವಂತರೆಂದರೆ ಸಾಕಷ್ಟು ದಡ್ಡರನ್ನು ಸುತ್ತಲೂ ಗುಡ್ಡೆಹಾಕಿಕೊಂಡಿರುವವರು’ ಎಂಬುದು ಈ ಸಂಘದ ನಾಣ್ನುಡಿಯಾಗಿತ್ತು (ಬೇಸ್-ಲೈನ್). ಮಿಂಚುವುದೆಂದರೆ ಯಾರಿಗೆ ಬೇಡ, ಹೇಳಿ? ಮೊದಲೇ ಆ ಜೋಕನ್ನು ಕೇಳಿಸಿಕೊಂಡಿದ್ದ ದಡ್ಡರ ಗುಂಪಿನವರು ಮತ್ತೇ ಆ ಜೋಕನ್ನು ವಿವರಿಸುವ ಪಿಜೆ-ಯಾತೀತರ ಪಕ್ಕ ಕುಳಿತು, ಕೊನೆಯನ್ನು ಮೊದಲೇ ಹೇಳಿಬಿಟ್ಟು ರಸಭಂಗ ಮಾಡಿ, ಪಿಜೇಶ್ವರರನ್ನು ಪಿಟ್ಜ ಮಾಡಿಬಿಡುತ್ತಿದ್ದರು. ಆಗ ಬುದ್ಧಿವಂತರಾದ ಪೀಜೇಶ್ವರರು ತಾವು ನಿಜಕ್ಕೂ ಬುದ್ದಿವಂತರೆಂದು ಸಾಬೀತು ಪಡಿಸಬೇಕಿತ್ತಲ್ಲ. ಆಗ ಹುಟ್ಟಿಕೊಂಡ ಗುಂಪೇ ’ಪಿಜೆಯಾತೀತ್’. ತಮ್ಮ ಬುದ್ಧಿವಂತಿಕೆಯಿಂದ ಹುಟ್ಟಿದ ಜೋಕುಗಳ ಪುನರುತ್ಥಾನವಾಗುವಾಗ, ಅದನ್ನು ಭ್ರೂಣಹತ್ಯೆ ಮಾಡುತ್ತಿದ್ದ ದಡ್ಡರಿಗೇ (ಋಷಿ ಮುನಿಗಳ ತಪಸ್ಸಿನಲ್ಲಿ ರಾಕ್ಷಸರು ಬಂದು ಇಸ್ಸಿ ಮಾಡಿದಂತಿದು) ಬಿಸ್ಕಟ್ ಹಾಕಿದಂತಹ ಒಂದು ಪ್ರಸಂಗ ನೋಡಿಃ


(೭೨) 


ಪಿಜೆಯಾತೀತ್ ಸದಸ್ಯನೊಬ್ಬ ಹೇಳಿದ ಜೋಕುಃ


     ಜೈಲ್ ಸಿಂಗ್ ಅಮೇರಿಕದ ಸ್ಟಾರ್ ಹೋಟೆಲಿನ ಈಜುಕೊಳದ ಬಳಿ ಮಲಗಿದ್ದ. ಆತನನ್ನು ಸಂದರ್ಶಿಸಲು ಬಂದ ಪತ್ರಕರ್ತನೊಬ್ಬ, "ಆರ್ ಯು ರಿಲ್ಯಾಕ್ಸಿಂಗ್?" ಎಂದು ಕೇಳಿದ. "ನೋ, ಐ ಆಮ್ ಜೈಲ್ ಸಿಂಗ್" ಎಂದುತ್ತರ ಬಂದಿತು. ಸ್ವಲ್ಪ ಸಮಯದ ನಂತರ ಎನ್ನಾರೈ ಸರ್ದಾರ್ ಒಬ್ಬ ಜೈಲ್ ಸಿಂಗ್ ಸಮೀಪವೇ ಬಂದು ಮಲಗಿದ್ದ. ಜೈಲ್ ಆತನನ್ನು ಕುರಿತು, "ಆರ್ ಯು ರಿಲ್ಯಾಕ್ಸಿಂಗ್?" ಎಂದು ಕೇಳಿದ. "ಹೌದು" ಎಂದನಾತ. "ಹಾಗಾದರೆ ಸಮ್‍ಬಡಿ ವಾಸ್ ಲುಕಿಂಗ್ ಫಾರ್ ಯು" ಎಂದ.  ಈ ಹಂತದಲ್ಲಿ, ಹಿಂದಿನ ವಾಕ್ಯವನ್ನು ದಡ್ಡರ ಗುಂಪಿನವರಲ್ಲೊಬ್ಬಳು ಅವಸರದಲ್ಲಿ ಎಲ್ಲರಿಗೂ ಕೇಳುವಂತೆ ಹೇಳಿ, ಪೀಜೇಶ್ವರನ ರಸಭಂಗ ಮಾಡಿಬಿಡುತ್ತಿದ್ದಳು! 


ಆಗ ತಡಬಡಾಯಿಸಿದ ’ಪಿಜೆಯಾತೀತ್’ ಸದಸ್ಯ ಮುಂದುವರೆಸುತ್ತಿದ್ದ,


"ಆ ಎನ್ನಾರೈ ಸರ್ದಾರ್ ಎದ್ದು, ಎಲ್ಲರನ್ನೂ ವಿಚಾರಿಸಿದ, ’ತನ್ನನ್ನು ಯಾರಾದರೂ ವಿಚಾರಿಸಿ ಬಂದಿದ್ದರೆ, ವಾಸ್ ದೇರ್ ಸಮ್‍ಬಡಿ ಲುಕಿಂಗ್ ಫಾರ್ ಮಿ?’ ಎಂದು. ಹಾಗೆ ಸ್ವಾಗತಕಾರಿಣಿಯನ್ನೂ ಕೇಳಿದ.


"ನೋ ಸರ್. ದೇರ್ ವಾಸ್ ’ನೋಬಡಿ’ ಲುಕಿಂಗ್ ಫಾರ್ ಯು" ಎಂದಳು ಸ್ವಾಗತಕಾರ್ತಿ.


     ಆ ಎನ್ನಾರೈಜಿ ಸಿಟ್ಟಿನಲ್ಲಿ ಬಂದು ಜೈಲ್ ಸಿಂಗನ ಕಪಾಳಕ್ಕೆ ಬಿಗಿದು ಹೇಳಿದ,


 "ಇಟ್ ವಾಸ್ ನಾಟ್ ’ಸಮ್‍ಬಡಿ’ ಲುಕಿಂಗ್ ಫಾರ್ ಮಿ, ಇಟ್ ವಾಸ್ ’ನೋಬಡಿ’. ಬೇಕಂತ ದಾರಿ ತಪ್ಪಿಸುವೆಯ?!"


 ದಡ್ಡರ ಗುಂಪಿನ ನಾಯಕಿ "ಈ ಮುಂದುವರೆದ ಭಾಗವನ್ನು ನನಗೆ ಈ ಮೊದಲು ನೀನು ಹೇಳಿಯೇ ಇಲ್ಲವಲ್ಲ!" ಎಂದು ಆಕ್ಷೇಪಿಸುತ್ತಿದ್ದಳು.


     ಆಗ ಎಲ್ಲರೂ ನಕ್ಕುಬಿಡುತ್ತಿದ್ದರು.


     ಪಿಜೆಯಾತೀತ್ ಬುದ್ದಿವಂತ ದಡ್ಡರ ಗುಂಪಿನ ಹುಡುಗಿಯನ್ನುದ್ದೇಶಿಸಿ ಮುಂದುವರೆಸಿದ್ದಃ


     "ನಿನ್ನದೂ ಒಂದು ಜೋಕಿದೆ. ನೀನು ಹಿಂದಿನ ಜನ್ಮದಲ್ಲಿ ನ್ಯೂಯಾರ್ಕಿನಲ್ಲಿ ಶ್ರೀಮಂತಳಾಗಿದ್ದೆ. ಅರ್ಜೆಂಟಾಗಿ ಟ್ಯಾಕ್ಸಿಯಲ್ಲಿ ಪತ್ತೇದಾರಿ ಸಿನೆಮ ನೋಡಲು ಹೋದೆ. ಟ್ಯಾಕ್ಸಿ ಬಾಡಿಗೆ ಪಾವತಿ ಮಾಡುವಾಗ ಡ್ರೈವರನಿಗೆ ಟಿಪ್ಸ್ ಕೊಡುವುದನ್ನು ಮರೆತೆ. ಆಗ ಆತ ಸಿಟ್ಟಲ್ಲಿ ನಿನಗೆ ಹೇಳಿದ್ದೇನು ಗೊತ್ತೆ?"


"ಏನು?"


"ಹೋಗಿ, ಹೋಗಿ. ಟಿಪ್ಸ್ ಕೊಡದೆ ಹೋಗುತ್ತಿರುವಿರಿ. ಆ ಸಿನೆಮದಲ್ಲಿ ಪತ್ತೆದಾರಿಯೇ ಕೊಲೆಗಾರ". ಎಲ್ಲರೂ ಮತ್ತೆ ಜೋರಾಗಿ ನಕ್ಕರು! ದಡ್ಡರಗುಂಪಿನ ಸದಸ್ಯೆ ಮೈಯೆಲ್ಲ ’ಪರ ಪರ’ ಪರಚಿಕೊಂಡು ಅಳು ಬರುವ ಮುನ್ನವೇ ಜಾಗ ಖಾಲಿಮಾಡಿದಳು.


(೭೩)


ಪಿಜೇಶ್ವರರ ಮತ್ತೊಂದು ’ಹಳೆ ಜೋಕು-ಹೊಸ ಪಂಚು’ ಸ್ಯಾಂಪಲ್ ನೋಡಿಃ ತನ್ನ ಕೊಡಲಿಯು ಕೊಳದಲ್ಲಿ ಜಾರಿದಾಗ ಅಳುತ್ತಿದ್ದ ಸತ್ಯವಂತನ ಮೊರೆಗೆ ಒಲಿದ ದೇವರು ಬಂದು ಚಿನ್ನ-ಬಂಗಾರಗಳ ಕೊಡಲಿ ಎತ್ತಿ ತಂದು ತೋರಿಸಿ ಅದು "ನಿನ್ನದೆ?" ಎಂದಾತನನ್ನು ಪರೀಕ್ಷಿಸಿದಾಗ "ಇಲ್ಲ"ವೆಂದ ಸೌದೆ ಕಡಿಯುವ ಸತ್ಯವಂತನಿಗೆ ಚಿನ್ನದ, ಬಂಗಾರದ, ಕಬ್ಬಿಣದ ಕೊಡಲಿಗಳು ಒಟ್ಟಿಗೆ ವರವಾಗಿ ದೊರೆತ ಕಥೆ ಎಲ್ಲರಿಗೂ ತಿಳಿದದ್ದೇ. ಪಿಜೆಯಾತೀತರು ಅದನ್ನು ಇಂಪ್ರೊವೈಸ್ ಮಾಡಿದ ರೀತಿ ನೋಡಿಃ


     ಸತ್ಯವಂತನ ಮೊಮ್ಮೊಕ್ಕಳ ಮೊಮ್ಮಕ್ಕಳ ಮೊಮ್ಮೊಗನೂ ಅದೇ ಕೊಳದ ಬಳಿ ಸೌದೆ ಕಡಿವಾಗ, ಆತನ ಮಡದಿ ಆತನಿಗೆ ಮಧ್ಯಾಹ್ನದ ಊಟ ತರುವ ಹೊತ್ತಿಗೆ, ಆಕೆ ಜಾರಿ ಕೊಳದಲ್ಲಿ ಬಿದ್ದು ಮುಳುಗಿದಳು.


ಆತ ಅತ್ತ,


ದೇವರು ಸ್ವರ್ಗದಿಂದ ಬಂದ ಇತ್ತ.


     "ಪ್ರಶ್ನೆಯೇನೂ ಕೇಳಬೇಡ ದೇವ. ನನ್ನ ಹೆಂಡತಿಯನ್ನು ಜೀವಂತವಾಗಿ ನೀರಿನಿಂದ ಹೊರತೆಗೆದು ಕೊಡು. ಅಷ್ಟೇ"


     ದೇವರು ಮುಳುಗಿ, ಮೊದಲು ಹೇಮಾ ಮಾಲಿನಯನ್ನು ಎತ್ತಿತಂದು ತೋರಿಸಿದ, "ನಿನ್ನವಳೆ?" "ಇಲ್ಲ".


     "ಗುಡ್" ಎಂದ ದೇವ ಮತ್ತೆ ಮಾಧುರಿ ದೀಕ್ಷಿತಳನ್ನು ಎತ್ತಿ ತಂದು ತೋರಿಸಿ, "ನಿನ್ನವಳೆ?" ಎಂದ. "ಹೌದು" ಎಂದುಬಿಟ್ಟ ಸತ್ಯವಂತನ ಮೊಮ್ಮೊಗನ್ಮೊಮ್ಮೊಗನ್ಮೊಮ್ಮೊಗ!! ಛಟೀರ್ ಎಂದು ಆತನ ಕೆನ್ನೆಗೆ ಹೊಡೆದ ದೇವರು ಹೇಳಿದ, "ಎಂತ ಸತ್ಯವಂತನ ವಂಶದಲ್ಲಿ ಎಂಥಹ ಹಸಿಸುಳ್ಳ!" ಎಂದು ತೀರ ಡಿಪ್ರೆಸ್ ಆಗಿಬಿಟ್ಟ. ದೇವರನ್ನು ಸಮಾಧಾನ ಮಾಡುತ್ತ ಆ ಸೌದೆಹೊಡೆಯುವಾತ ತನ್ನ ಸುಳ್ಳಿಗೇ ಸೃಷ್ಟೀಕರಣ ನೀಡಿದ್ದು ಹೀಗೆಃ


     "ಮಾಧುರಿಯನ್ನೂ ನನ್ನವಳೇನಲ್ಲ ಎನ್ನುತ್ತೀನ ನಾನು, ಆಗ ನೀನು ಮತ್ತೆ ನನ್ನ ಹೆಂಡತಿಯನ್ನೂ ಹೊರತರುತ್ತೀಯ. ಆಗ ಅವಳೇ ನನ್ ಹೆಂಡ್ತಿ ಅಂತೀನ, ನೀನು ನನ್ನ ಸತ್ಯ ಬುದ್ಧಿಗೆ ಮೆಚ್ಚಿ ಹೇಮಾ, ಮಾಧುರಿಯರನ್ನೂ ’ಇಟ್ಟುಕೋ ನಿನ್‍ನಿಗೇ’ ಎಂದುಬಿಟ್ಟರೆ, ಹೇಗೆ. ನನ್ನ ಸಂಪಾದನೆ ಅವರ ಮೇಕಪ್ಪಿಗೂ ಸಾಲುವುದಿಲ್ಲ. ಹೇಳಿ ನಾನು ಸುಳ್ಳು ಹೇಳಿದ್ದು ಸರಿಯೋ ತಪ್ಪೋ?" ಎಂದು ದೇವರಿಗೇ ಸವಾಲ್ ಹಾಕಿದ. ಬೆಸ್ತುಬಿದ್ದ ದೇವರು ಅದೇ ಕೊಳದಲ್ಲಿ ಮುಳಿಗಿದವನು ಮತ್ತೆ ಮೇಲೆ ಏಳುವುದು ೨೦೧೨ರ ಡಿಸೆಂಬರ್ ನಂತರವೇ ಅಂತೆ!!


(೭೪)


     ದಿನಕ್ಕೊಂದೆರೆಡು ಇಂತಹ ಜೋಕು ಸೃಷ್ಟಿಯನ್ನು ಗಂಭೀರವಾಗಿ ಪರಿಗಣಿಸುತ್ತಿದ್ದೆವು ನಾವುಗಳು, ನಮ್ಮ ಮೆದುಳಿನ ಏರೋಬಿಕ್ಸಿನ ಕಾರಣಕ್ಕಾಗಿ, ಕಾರಣದಿಂದಾಗಿ. ಒಂದು ದಿನ ಪ್ರಕ್ಷು ಹೇಗಾದರೂ ಮಾಡಿ ದಡ್ಡರ ಆದರೆ ಧಿಮಾಕಿನ ಹುಡುಗಿಯರನ್ನು ಒಂದು ದಿನದ ಮಟ್ಟಿಗಾದರೂ ಹೆದರಿಸಬೇಕು, ಆದರೆ ಅದಕ್ಕೆ ಪಿಜ್-ಯಾತೀತ್ ಕಾರಣವಾಗಬಾರದು ಎನ್ನುವಂತಹ ಜೋಕೊಂದನ್ನು ಎಲ್ಲಿಂದಲೋ ಹಿಡಿದು ತಂದು, ಇಂಪ್ರೂವೈಸ್ ಮಾಡಿದ. ರಾತ್ರಿ, ಊಟದ ಮೆಸ್ಸಿನ ಹೊರಗೆ, ಊಟದ ನಂತರ ಕಾದು ನಿಂತು, ಹಾಸ್ಟೆಲ್ಲಿಗೆ ಹೋಗುತ್ತಿದ್ದ ದಡ್ಡರ ಗುಂಪಿನ ಹುಡುಗಿಯರನ್ನು ಹುಡುಕಿ ಹುಡುಕಿ, ಅವರ ಜೊತೆ ಜೊತೆ ನಡೆದುಕೊಂಡು ಹೋಗುತ್ತ ಈ ಕೆಳಕಂಡ ಜೋಕನ್ನು ಹೇಳಿ ಮುಗಿಸಿದ್ದ. ಮರುದಿನ ಬೆಳಿಗ್ಗೆ, ಮುಕ್ಕಾಲು ಪಾಲು ಹುಡುಗಿಯರು ಸ್ವಲ್ಪ ಇರಿಸುಮುರಿಸು ಪ್ರಕಟಿಸಿದ್ದರು. ಆದರೆ ಪ್ರಕ್ಷು ಹೆದರಿಸಿದ್ದ ಎಂದು ಅವರುಗಳು ದೂರು ನೀಡಲು ಏನೂ ಆಧಾರವಿರಲಿಲ್ಲ. ಏಕೆಂದರೆ ಆತ ಹೇಳಿದ್ದದ್ದು ಒಂದು ಜೋಕ್ ಅಷ್ಟೇಃ


ಜೋಕ್ ಹೀಗಿದೆಃ


ಕನ್ನಡದ ಪತ್ರಕರ್ತನೊಬ್ಬ ಇಂಗ್ಲೆಂಡಿಗೆ ಟ್ಯಾಕ್ಸಿಯಲ್ಲಿ, ನಂತರ ಏರೋಪ್ಲೇನಿನಲ್ಲಿ ಆ ನಂತರ ಟ್ಯೂಬಿನಲ್ಲಿ ಹೋದ. ಅಲ್ಲೊಂದು ಹಳ್ಳಿಗೆ ಅತ್ಯಂತ ಭೀಕರ ದೆವ್ವದ ಮನೆಯನ್ನು ಸಂದರ್ಶಿಸಲು ಹೋದ! ಜಗತ್ತಿನಲ್ಲಿ ಅತ್ಯಂತ ಹೆಚ್ಚಿನ ಗಾಳಿಸಂಚಾರವಿರುವ ಅಥವ ಹೆಚ್ಚಿನ ಪ್ರೇತಬಾಧೆ ಇರುವ ಕಟ್ಟಡಗಳ ದೇಶ ಇಂಗ್ಲೆಂಡ್. ಆದ್ದರಿಂದಲೇ ರಾಣಿಯರಲ್ಲಿ ಇನ್ನೂ ನಿಯತ್ತಿರಿಸಿಕೊಂಡಿರುವ ಒಂದೇ ದೇಶ ಇಂಗ್ಲೆಂಡ್!! ಸಂಜೆ ನಾಲ್ಕು ಗಂಟೆಗೇ ಕತ್ತಲಾಗುತ್ತಿತ್ತು, ಆ ’ಸೂರ್ಯಮುಳುಗದ’ ಕತ್ತಲ ನಾಡಿನಲ್ಲಿ. ಜನರಹಿತವಾದ ಈ ಹಳ್ಳಿಯಲ್ಲಿ ಒಬ್ಬನೇ ಮುದುಕ ಸಿಕ್ಕಿದ. ಅಲ್ಲ, ನೀವೆಂದುಕೊಂಡಂತೆ ಆತ ದೆವ್ವವಲ್ಲ!


"ಇಷ್ಟು ಹೊತ್ತಿನಲ್ಲಿ ಆ ದೆವ್ವದ ಬಂಗಲೆ ಹುಡುಕುವುದು ಸುಲಭವಲ್ಲ. ಸದ್ಯಕ್ಕೆ ಇಂದು ಹೋಟೆಲೊಂದರಲ್ಲಿ ಇಳಿದುಕೋ. ನಾಳೆ ಬೆಳಿಗ್ಗೆ ದೆವ್ವದ ಮನೆಯ ಸಂದರ್ಶಿಸುವೆಯಂತೆ" ಎಂದುಪದೇಶ ನೀಡಿದ.


ಅಂತೆಯೇ ಹೋಟೆಲ್ಲಿನಲ್ಲಿಳಿದು, ರಾತ್ರಿ ಊಟ ಮುಗಿಸಿ ಮಲಗಿಬಿಟ್ಟ ಕನ್ನಡ ಪತ್ರಕರ್ತ. ಮಧ್ಯರಾತ್ರಿ ಎಚ್ಚರವಾಯಿತು. ಒಳಗಿನಿಂದ ಚಿಲಕ ಹಾಕಲಾಗಿದ್ದ ಆತನ ಕೋಣೆಯೊಳಗೆ ಕನ್ನಡಿಯ ಎದಿರು ಭಾರತೀಯ ಹೆಂಗಸೊಬ್ಬಳು ತಲೆ ಬಾಚಿಕೊಳ್ಳುತ್ತಿದ್ದಳು!


"ಯಾರು ನೀನು?" ಎಂದು ನಿದ್ರೆಗಣ್ಣಿನ ಗಾಭರಿಯಲ್ಲಿಯೇ ಕೇಳಿದ.


"ನೀನು  ಅಷ್ಟು ದೂರದಿಂದ ಪಾಪ ಬಂದು ಹುಡುಕುತ್ತಿರುವುದು ನನ್ನನ್ನೇ" ಎಂದಳು!


"ನಾನು ಹುಡುಕುತ್ತಿರುವುದು ಕಟ್ಟಡಗಳನ್ನ. ಹುಡುಗಿಯರನ್ನಲ್ಲ"


"ಕಟ್ಟಡಗಳನ್ನು ಯಾವ ಕಾರಣಕ್ಕಾಗಿ ಹುಡುಕಿತ್ತಿರುವೆಯೋ ಆ ಕಾರಣವೇ ನಾನು" ಎಂದು ಈತನ ಕಡೆ ತಿರುಗಿ ನಿಂತು, ತನ್ನ ಶಿರವನ್ನು ತನ್ನದೇ ಕೈಗಳಿಂದ ಹೊರತೆಗೆದು, ಒಂದು ಕೈಯಲ್ಲಿ ಬ್ಯಾಲೆನ್ಸ್ ಮಾಡಿ, ಮತ್ತೊಂದರಲ್ಲಿ ಮತ್ತೆ ತಲೆ ಬಾಚುತ್ತ, ಮಂದಸ್ಮಿತಳಾಗಿ ನಿಂತಳು!


ಎದ್ದು ಬಿದ್ದು ಮತ್ತೆ ಎದ್ದು ಮೊದಲ ಮಹಡಿಯಲ್ಲಿದ್ದ ಆ ರೂಮಿನಿಂದ ಮೆಟ್ಟಿಲಿಳಿದು ಆತ ಓಡಿಬಂದ. ಕೆಳಗೆ, ಕೆಲಸ-ಊಟ ಎರಡನ್ನೂ ಮುಗಿಸಿ, ಇಸ್ಪೀಟು ಆಟ ಆಡುತ್ತ ಕುಳಿತಿದ್ದರು ಹೋಟೆಲ್ ಮಾಲಿಗಳು, ’ಮಧ್ಯ’ರಾತ್ರಿಯಲ್ಲಿ.


"ಮೇಲೆ ನನ್ನ ರೂಮಿನಲ್ಲಿ ಹೆಂಗಸಿದ್ದಾಳೆ" ಎಂದ ಕನ್ನಡಕರ್ತ ಅದೇ ಗಾಭರಿಯಲ್ಲಿ, ಅವರುಗಳನ್ನುದ್ದೇಶಿಸಿ.


"ನೀನೇನು ಗೇನ?" ಎಂದು ಎಲ್ಲರೂ ನಕ್ಕರು.


"ನಿಮಗೆ ಅರ್ಥವಾಗುತ್ತಿಲ್ಲ. ಆಕೆ ತನ್ನ ತಲೆಯನ್ನು ಹೊರತೆಗೆದು ತಲೆ ಬಾಚಿಕೊಂಡು ನಗುತ್ತಿದ್ದಾಳೆ ಕೂಡ!!"


ಮಾಲಿಗಳು ಪರಸ್ಪರ ಮುಖ ನೋಡಿಕೊಂಡರು. ಇಸ್ಪೀಟೆಲೆಗಳನ್ನು ಕೆಳಕ್ಕಾಕಿದರು. ಎಲ್ಲರೂ ತಮ್ಮ ತಮ್ಮ ಹಿಂಬದಿಯ ಜೇಬುಗಳಿಗೆ ಕೈಗಳನ್ನು ಹಾಕಿ, ಬಾಚಣಿಗೆ ಹೊರತೆಗೆದು, ತಮ್ಮ ತಮ್ಮ ಶಿರಗಳನ್ನು (ಕತ್ತುಗಳನ್ನು) ಹೊರತೆಗೆದು, ಬಾಚಿ ಮಂದಸ್ಮಿತರಾದರು!


ಕನ್ನಡಕರ್ತ ಉಸಿರು ಹಿಡಿದು ಓಡಿದ ಸುಮಾರು ದೂರ, ಅರ್ಧಗಂಟೆ ಕಾಲ. ಕೊನೆಗೆ ಭಯಕ್ಕಿಂತ ಸುಸ್ತು ಹೆಚ್ಚಾಗಿ ಆತನನ್ನು ಬಾಧಿಸಿತು.


ಒಂದೆಡೆ ನಿಂತ. ಮುಖದ ಬೆವರು ಒರೆಸಿಕೊಂಡ. ಒರೆಸಿಕೊಂಡ ಕೈಗಳನ್ನು ನೋಡಿಕೊಂಡ. ಬೆವರಿನ ಬದಲು ರಕ್ತವಿತ್ತು. ಮತ್ತೆ ಮತ್ತೆ ಒರೆಸಿಕೊಂಡ. ಬೆವರಿನ ಬದಲು ರಕ್ತವಿತ್ತು, ಮತ್ತೆ ಮತ್ತೆ.


"ಶಿಟ್" ಎಂದು--ಇಂಗ್ಲೆಂಡಿನಲ್ಲಿದ್ದುದ್ದರ ಪ್ರಭಾವದಿಂದಲೋ ಅಥವ ಕನ್ನಡದಲ್ಲಿ ಅಷ್ಟು ಸುಗಂಧಭರಿತ ಬೈಯ್ಗುಳವಿಲ್ಲದ ಕಾರಣವಿಲ್ಲದ್ದರಿಂದಲೋ--ಹೇಳಿ, ಜೇಬಿಗೆ ಕೈಹಾಕಿ, ಕರವಸ್ತ್ರವನ್ನು ಹೊರತೆಗೆದು, ಮತ್ತೊಂದು ಕೈಯಿಂದ ತನ್ನ ಶಿರವನ್ನು ಕುತ್ತಿಗೆಯಿಂದ ಬೇರ್ಪಡಿಸಿ, ಕರವಸ್ತ್ರದಿಂದ ಮುಖಕ್ಕಂಟಿದ್ದ ರಕ್ತದ ಕಲೆಗಳನ್ನು ಸಾಧ್ಯಂತವಾಗಿ ಒರೆಸಿ, ಪಕ್ಕಕ್ಕೆಸೆದು (ಶಿರವನ್ನು) ನಡೆಯತೊಡಗಿದ!!!


"ಇಂದು ಮಧ್ಯರಾತ್ರಿ ಈ ಜೋಕನ್ನು ದಯವಿಟ್ಟು ನೆನೆಸಿಕೊಳ್ಳುತ್ತೀರೆಂದು ಆಣೆಪ್ರಮಾಣ ಮಾಡಿ. ಅದ್ಬುತ ಹಾಸ್ಯವಿದೆ ಅದರಲ್ಲಿ", ಎಂದು ಪ್ರತಿ ದಡ್ಡ ಹುಡುಗಿಯ ಬಳಿ ಪ್ರಮಾಣ ಮಾಡಿಸಿಕೊಂಡಿದ್ದ. ನಕ್ಕವರಿಗಿಂತಲೂ ಹೆದರಿಕೊಂಡಿದ್ದವರೇ ಹೆಚ್ಚಿದ್ದರು ಮರುದಿನ!!///


 

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು