ನಾ ಕಂಡುಕೊಂಡ ಇಸ್ಲಾಂ

To prevent automated spam submissions leave this field empty.

ಇಸ್ಲಾಂ ಧರ್ಮದ ಬಗೆಗಿನ ಸಂಶಯ, ಅಪನಂಬಿಕೆಗಳು, ತಾರಕಕ್ಕೇರಿದ್ದು ನಮ್ಮೆಲ್ಲರ ಮಧ್ಯೆ ಇರುವ, ನಾವು ದಿನವೂ ಕಾಣುವ ಇಸ್ಲಾಮಿನ ಆಚಾರ ವಿಚಾರಗಳು ಇದ್ದಕ್ಕಿದ್ದಂತೆ ಅಪರಿಚಿತವಾಗಿ ಇದೀಗ ತಾನೇ ಭೂಲೋಕಕ್ಕೆ ಅವತರಿಸಿದ ಅನರ್ಥದಂತೆ ಚಿತ್ರಿಸಲಾಗುತ್ತಿದೆ ಮುಸ್ಲಿಮರನ್ನು ಮತ್ತು ಅವರು ನಂಬಿಕೊಂಡು ಬಂದ ಧರ್ಮವನ್ನು. ಸೆಪ್ಟಂಬರ್ ೧೧, ೨೦೦೧ ರಲ್ಲಿ ಅಮೆರಿಕೆಯ ಗಗನಚುಂಬಿ ಕಟ್ಟಡಗಳನ್ನು ೧೯ ಜನ ಅರಬ್ ಮೂಲದ ಯುವಕರು ಕದ್ದೊಯ್ದ ವಿಮಾನಗಳನ್ನು ಕ್ಷಿಪಣಿಗಳಂತೆ ಉಪಯೋಗಿಸಿ ನೆಲಸಮಗೊಳಿಸಿದ್ದು, ಸಾವಿರಾರು ಜನರ ಸಾವು ನೋವುಗಳಿಗೆ ಕಾರಣವಾಗಿದ್ದು ಇಸ್ಲಾಮಿನ ಬಗ್ಗೆ ಭಯ ಜನರ ಮನಸ್ಸಿನಲ್ಲಿ ಬೇರೂರಲು ಸಹಾಯಮಾಡಿತು. ತಮ್ಮ ಸ್ವಾರ್ಥ, ಕ್ಷುಲ್ಲಕ, "ಅಡಗಿರಿಸಿದ ಕಾರ್ಯತಂತ್ರ" ಸಾಧಿಸುವ ನಿಟ್ಟಿನಲ್ಲಿ ಇಸ್ಲಾಂ ವಿರೋಧಿಗಳು ಮಾಧ್ಯಮಗಳ ಸಹಾಯದಿಂದ ಈ ಭಯ ಜನರ ಮನಸ್ಸಿನಲ್ಲಿ ಮತ್ತಷ್ಟು ಬೇರೂರಿಸಿ ಒಬ್ಬ ಮುಸ್ಲಿಮನ ದರ್ಶನವಾದರೂ ಮುಗಿಬೀಳುವಂತೆ ಅಥವಾ ವಿಷ ಜಂತುವನ್ನು  ಕಂಡಂತೆ ಆಡಲು ಕಾರಣಕರ್ತರಾದರು.


ಇಷ್ಟೊಂದು ನಿರ್ಭೀತಿಯಿಂದ, ಅಸಾಧಾರಣ ದೈರ್ಯದಿಂದ, ಸ್ವಂತ ಜೀವವನ್ನೂ ಲೆಕ್ಕಿಸದೆ ಆಕ್ರಮಣ ಮಾಡಿದವರ  ideology ಯಾವುದು, ಅದರ ಉದ್ದೇಶವೇನು ಹೀಗೆ ಕುತೂಹಲ ಮುಗಿಲು ಮುಟ್ಟಿ ಇಸ್ಲಾಮಿನ ಬಗ್ಗೆ ಅಲ್ಪ ಸ್ವಲ್ಪ ಜ್ಞಾನವಿದ್ದವರೆಲ್ಲಾ ಏಕಾಏಕಿ ಇಸ್ಲಾಮಿನ ಪಂಡಿತರಾಗಿ ಪುಸ್ತಕಗಳನ್ನೂ, ಲೇಖನಗಳನ್ನೂ ಬರೆದರು. ತನಗೆ ಅರ್ಥವಾಗದ ಖಾಯಿಲೆ ತಗುಲಿ ಕೊಂಡಾಗ ಖೊಟ್ಟಿ ವೈದ್ಯರ ಮೊರೆ ಹೋಗುವ ವ್ಯಕ್ತಿಯ ಹಾಗೆ ಜನರು ಅರೆ ಬುದ್ಧಿವಂತ ಪಂಡಿತರ ಮೊರೆ ಹೋದರು ಇಸ್ಲಾಮನ್ನು ಅರಿಯಲು. ಆದರೆ ಅವರಿಗೇ ಸಿಕ್ಕಿದ್ದು ಅರೆಬೆಂದ, ಕಪೋಲಕಲ್ಪಿತ ವಿಚಾರಗಳು. ಈ ಬೆಳವಣಿಗೆ ಪಾಶ್ಚಾತ್ಯ ದೇಶಗಳಿಗೆ ಮಾತ್ರ ಸೀಮಿತವಾಗಲಿಲ್ಲ. ಸಾಗರ ದಾಟಿ ನಮ್ಮ ತೀರಕ್ಕೂ ಬಂದವು ಸಂಶಯಗಳು, ಕಪೋಲಕಲ್ಪಿತ ವಿಚಾರಗಳು. ಕೆಲವು ಸಂಪದಿಗರ ಬಯಕೆಯಂತೆ ಇಸ್ಲಾಮಿನ ಬಗ್ಗೆ ಬರೆಯಲು ನಾನು ತೀರ್ಮಾನಿಸಿದೆ ಅರ್ಧ ಮನಸ್ಸಿನಿಂದ. ೮೦೦ ವರ್ಷ ಗಳಿಗೂ ಮಿಕ್ಕು ಆಳಿದ ಒಂದು ಸಂಸ್ಕೃತಿ, ತಮ್ಮ ಭಾಷೆ, ಉಡುಗೆ, ತೊಡುಗೆ, ವಾಸ್ತು ಶಿಲ್ಪಿ, ಸಂಗೀತ ಹೀಗೆ ಬದುಕಿನ ಸಂಸ್ಕೃತಿಯ ಎಲ್ಲಾ ಮಜಲುಗಳಲ್ಲಿ ತನ್ನದೇ ಆದ, ಎಂದಿಗೂ ಅಳಿಸಲಾಗದ, ಛಾಪನ್ನು ಒತ್ತಿದ ಧರ್ಮವನ್ನು ಮತ್ತೊಮ್ಮೆ ನಾಡಿನವರಿಗೆ ಪರಿಚಯಮಾಡಿ ಕೊಡಬೇಕಾದ ಅವಶ್ಯಕತೆ ಬಗ್ಗೆ  ದುಃಖ ತೋರಿದರೂ ನಾನು ನಂಬಿದ ಮತ್ತು ೧೬ ಕೋಟಿಗೂ ಮಿಕ್ಕು ಜನರು ಕೊಂಡಾಡುವ ಒಂದು ಸಂಸ್ಕೃತಿಯ ಬಗ್ಗೆ ಬರೆಯೋಣ ಎನ್ನಿಸಿತು. ಭಾರತವನು ಆಳಿದ ಮುಸ್ಲಿಮ ಅರಸರು, ಚಕ್ರವರ್ತಿಗಳು ಆಳಬೇಕಾದ ರೀತಿಯಲ್ಲಿ ಆಳಿದ್ದರೆ ಈ ಲೇಖನ ಬರೆಯುವ ಅವಶ್ಯಕತೆ ಇರುತ್ತಿರಲಿಲ್ಲವೇನೋ. ನಾನು ಇಸ್ಲಾಂ ಪಂಡಿತನಲ್ಲ. ನನ್ನ ದೈನಂದಿನ ಬದುಕಿನ ಇಸ್ಲಾಮನ್ನು ನಿಮಗೆ ಪರಿಚಯ ಮಾಡಿಸುವತ್ತ ನನ್ನ ಪ್ರಯತ್ನ ಮಾಡುತ್ತೇನೆ. ಸಂದು ಹೋದ ಕಾಲದ, ವೈಭವದ ಬಗ್ಗೆ ಪ್ರಲಾಪಿಸದೆ, ಹಲುಬದೆ, ನನ್ನ ಸಂಸ್ಕೃತಿ ಮಾತ್ರ ಮೇಲು ಎನ್ನುವ ಉಡಾಫೆತನ ತೋರಿಸದೆ, ನಿಮ್ಮ ಮುಂದೆ ಇಟ್ಟಿದ್ದೇನೆ ನಾನು ನಂಬಿದ ನಂಬಿಕೆ, ಧರ್ಮ, ಮತ್ತು ಜೀವನ ರೀತಿಯ ಒಂದು ತುಣುಕನ್ನು.   


ಇಸ್ಲಾಂ ಅಂದರೇನು:  ಇಸ್ಲಾಂ ಅಂದರೆ ಶರಣಾಗುವುದು, ನಿರಾಕಾರನಾದ ಪ್ರಭುವಿನ ಆಜ್ಞೆಗಳಿಗೆ ಶರಣಾಗುವುದು ಎಂದು. ಸಲಾಂ ಎಂದರೆ ಶಾಂತಿ ಎನ್ನುವ ಪದದ ಮೂಲವೂ ಇದೇ ಆದ್ದರಿಂದ ಇಸ್ಲಾಂ ಶಾಂತಿಯ ಧರ್ಮವೂ ಹೌದು. ಆದರೆ characteristically ಇಸ್ಲಾಮನ್ನು ಶಾಂತಿಯ ಧರ್ಮ ಮಾತ್ರ ಎಂದು ವಿವರಿಸಲಾಗದು. ಒಂದು ಕೆನ್ನೆಗೆ ಹೊಡೆದರೆ ಮತ್ತೊಂದು ಕೆನ್ನೆ ತೋರಿಸಬೇಕೆನ್ನುವ ಅಸ್ವಾಭಾವಿಕ impractical ನಡವಳಿಕೆಗೆ ಇಸ್ಲಾಂ ಒಪ್ಪದೇ ಸಾಮಾಜಿಕ ನ್ಯಾಯಕ್ಕಾಗಿ, ಮನುಷ್ಯನ ಸ್ವಾಭಾವಿಕ ಆತ್ಮ ಗೌರವಕ್ಕಾಗಿ, ಕುಟುಂಬ,ಜೀವ, ಸೊತ್ತುಗಳ ರಕ್ಷಣೆಗಾಗಿ ಸಿದ್ಧರಾಗಲು ಕರೆ ನೀಡುತ್ತದೆ. ಆದರೆ ಯಾವುದೇ ರೀತಿಯ ಹೋರಾಟವೂ ದೇವಾಜ್ಞೆಗಳ ಚೌಕಟ್ಟಿನಲ್ಲಿ, ನ್ಯಾಯ ಸಮ್ಮತ ರೀತಿಯಲ್ಲಿ ನಡೆಯಬೇಕೆನ್ನುವ ಇಸ್ಲಾಂ ಅದೇ ಉಸಿರಿನಲ್ಲಿ ಎದುರಾಳಿಯನ್ನು ಕ್ಷಮಿಸಿ, ಹೃದಯ ವೈಶಾಲ್ಯತೆ ತೋರಿ ದೈವಸಂಪ್ರೀತಿಗಳಿಸಿಕೊಳ್ಳಲು ಕರೆ ನೀಡುತ್ತದೆ ತನ್ನ ಅನುಯಾಯಿಗಳಿಗೆ.  


ಇಸ್ಲಾಮಿನ ಮೂಲಭೂತ ನಂಬಿಕೆ ಮತ್ತು ಅಡಿಗಲ್ಲೆಂದರೆ ಏಕದೇವೋಪಾಸನೆ. ಈ ವಿಷಯದ ಬಗ್ಗೆ ಇಸ್ಲಾಂ ನ ನಿಲುವು uncompromising. ಏಕದೇವೋಪಾಸನೆಯ ಈ ವೈಶಿಷ್ಟ್ಯ ಕ್ರೈಸ್ತ ಧರ್ಮಕ್ಕೆ ಸೇರಿದ ಇಸ್ಲಾಂ ಟೀಕಾಕಾರರ ಮತ್ತು ಹಿಂದೂ ಧಾರ್ಮಿಕ ಗುರುಗಳ ಮೆಚ್ಚುಗೆಯನ್ನೂ ಗಳಿಸಿತು. ಈ ನಿಲುವನ್ನು ಯಾವುದೇ ಕಾರಣಕ್ಕೂ ಸಡಿಲಿಸದೆ ಇದ್ದ ಕಾರಣ ಪ್ರವಾದಿಗಳು ತಮ್ಮ ಹುಟ್ಟೂರಾದ ಮಕ್ಕಾ ಪಟ್ಟಣದಿಂದ ಹೊರಗಟ್ಟಲ್ಪಟ್ಟರು.


"ಕಾಬಾ" ಇರುವುದು ಮಕ್ಕಾ ನಗರದಲ್ಲಿ. ಚೌಕಾಕಾರದ, ಕಪ್ಪು ವಸ್ತ್ರದಿಂದ ಹೊದೆಯಲ್ಪಟ್ಟ ಈ ಕಟ್ಟಡದ ಸುತ್ತಾ ಆಗಿನ ಕಾಲದ ಮಕ್ಕಾ ಮತ್ತು ಅರೇಬಿಯಾದ ನಿವಾಸಿಗಳು ಪ್ರದಕ್ಷಣೆ ಹಾಕುತ್ತಿದ್ದರು. ೩೬೦ ಕ್ಕೂ ಹೆಚ್ಚು ವಿಗ್ರಹಗಳಿದ್ದ ಈ ಭವನಕ್ಕೆ ಸ್ತ್ರೀಯರು ನಗ್ನರಾಗಿ ಪ್ರದಕ್ಷಿಣೆ ಮಾಡುತ್ತಿದ್ದರು. ಸಾಮಾಜಿಕವಾಗಿ ಅಲ್ಲಿನ ಜನರು ಕುಡಿತ, ಜೂಜು, ಪರಸ್ತ್ರೀ ಸಂಗ, ಬಡ್ಡಿ ವ್ಯವಾಹಾರ, ವ್ಯಾಪಾರದಲ್ಲಿ ಮೋಸ, ತೂಕದಲ್ಲಿ ಮೋಸ, ಕಾಳ ಧಂಧೆ, ಹುಟ್ಟಿದ ಮಗು ಹೆಣ್ಣಾದರೆ ಜೀವಂತವಾಗಿ ಹೂಳುವುದು ಹೀಗೆ ನೂರಾರು ಅನಿಷ್ಟಗಳಿಂದ ತಮ್ಮ ಜೀವನ ಶೈಲಿಯನ್ನಾಗಿ ಮಾಡಿ ಕೊಂಡಿದ್ದರು. ಈ ದುರ್ವರ್ತನೆಗಳು ಕೂಡದು, ನಮ್ಮ ಪ್ರತೀ ಕ್ರಿಯೆಗಳು ದೇವನನ್ನು ಸಾಕ್ಷಿಯನ್ನಾಗಿ ಇಟ್ಟುಕೊಂಡು, ಅವನ ಸಂಪ್ರೀತಿಗಾಗಿ ನಮ್ಮ ಬದುಕನ್ನು ಮುಡಿಪಿಡಬೇಕು ಎಂದ ಪ್ರವಾದಿಗಳ ಮಾತು ಅಲ್ಲಿನ ಜನರಿಗೆ ಹಿಡಿಸಲಿಲ್ಲ. ನಮ್ಮ ಆರಾಧನಾ ಕ್ರಮಗಳು ಮತ್ತು ಜೀವನ ರೀತಿಯನ್ನು ವಿರೋಧಿಸದೆ ಇದ್ದರೆ ನಿನ್ನ ಕಾಲಿನ ಬುಡಕ್ಕೆ ನಮ್ಮ ಸಂಪತ್ತನ್ನೆಲ್ಲಾ ಸುರಿಯುತ್ತೇವೆ, ನಿನ್ನನ್ನು ನಮ್ಮ ನಾಯಕನನ್ನಾಗಿ ಮಾಡುತ್ತೇವೆ, ರಾಜನನ್ನಾಗಿ ಅಂಗೀಕರಿಸುತ್ತೇವೆ ಎಂದು ಆಮಿಷ ತೋರಿಸಿದ ಬುಡಕಟ್ಟಿನ ಜನರ ಮಾತಿಗೆ ಒಪ್ಪದೇ ಆರಾಧನೆ ಸೃಷ್ಟಿ ಕರ್ತನಿಗೆ ಮಾತ್ರ, ನಮ್ಮ ಕೈಯ್ಯಾರೆ ಸೃಷ್ಟಿಸಿದ ಸೃಷ್ಟಿಗಳಿಗಲ್ಲ ಎಂದು ಸೊಲ್ಪವೂ ವಿಚಲಿತರಾಗದೆ ಧೃಢ ಸ್ವರದಲ್ಲಿ ಪ್ರವಾದಿಗಳು ಹೇಳಿದಾಗ ಅವರನ್ನು ಮಕ್ಕಾ ನಗರದಿಂದ ಹೊರಗಟ್ಟಿದರು ಅಲ್ಲಿನ ನಿವಾಸಿಗಳು.  ಪ್ರವಾದಿಗಳು ತಮ್ಮ ಅನುಚರರೊಂದಿಗೆ ಭಾರವಾದ ಹೃದಯದಿಂದ ತಮ್ಮ ಪ್ರೀತಿಯ ಮಕ್ಕಾ ಪಟ್ಟಣ ಬಿಟ್ಟು ಮದೀನಾ ನಗರಕ್ಕೆ ಬಂದರು. ಇದನ್ನು "ಹಿಜರಿ" ಎಂದು ಕರೆಯುತ್ತಾರೆ. ಹಿಜರಿ ಎಂದರೆ ವಲಸೆ ಎಂದರ್ಥ. ಏಕದೇವೋಪಾಸನೆಯ ವಿಷಯದಲ್ಲಿ ಮಕ್ಕಾ ಜನರೊಂದಿಗೆ ರಾಜಿ ಮಾಡಿ ಕೊಂಡಿದ್ದರೆ ಪ್ರವಾದಿಗಳು ಕಷ್ಟ ಕಾರ್ಪಣ್ಯ, ಸಾಮಾಜಿಕ ಬಹಿಷ್ಕಾರಗಳನ್ನು ಎದುರಿಸ ಬೇಕಿರಲಿಲ್ಲ. ಪ್ರವಾದಿಗಳ ಈ ನಿಲುವು ಅವರಿಗೆ ಹೊಸ ಬೆಂಬಲಿಗರನ್ನು ಗಳಿಸಿ ಕೊಟ್ಟಿತು.  


ಮಾನವರೆಲ್ಲಾ ಸಮಾನರು, "ಸನ್ನಡತೆಯ ಗಂಡು" ಮತ್ತು "ಸನ್ನಡತೆಯ ಹೆಣ್ಣು" ಇವೆರಡೇ ಜಾತಿಗಳು ಎಂದು ಸಾರಿದ ಪ್ರವಾದಿಗಳಿಗೆ ಮದೀನಾ ನಗರದಲ್ಲಿ ಅಭೂತಪೂರ್ವವಾದ ಸ್ವಾಗತ ಸಿಕ್ಕಿತು. ಕಡು ಕಪ್ಪ್ಪು ತ್ವಚೆಯ ಗುಲಾಮರು ಸಮಾಜದ ಕುಲೀನ ವರ್ಗದವರೊಂದಿಗೆ ಬೆರೆತು ಸರಿ ಸಮಾನರಾಗಿ ಬಾಳುತ್ತಿದ್ದರು. ನಮಾಜಿನ ಸಮಯ ನೀಡುವ ಕರೆ "ಅದಾನ್" ಪ್ರಪ್ರಥಮವಾಗಿ ಕಾಬಾ ಭವನದ ಮೇಲೆ ನಿಂತು ನೀಡಿದ್ದು ಇಥಿಯೋಪಿಯಾ ದೇಶದ ಗುಲಾಮ "ಬಿಲಾಲ್". ಈ ಸಮಾನತೆಯ ಮೋಹಕ ಆದರ್ಶ ವಿಶ್ವದಾದ್ಯಂತ ದಂಡು ದಂಡಾಗಿ ಜನ ಇಸ್ಲಾಮಿಗೆ ಶರಣಾಗುವಂತೆ ಮಾಡಿತು.         


ಆರಾಧನೆ:  ದಿನದಲ್ಲಿ ಐದು ಹೊತ್ತು ಯಾವುದೇ ಸಮಜಾಯಿಷಿ ಇಲ್ಲದೆ ನಮಾಜ್ ನಿರ್ವಹಿಸುವುದು ಇಸ್ಲಾಮಿನ ಮತ್ತೊಂದು ಅಡಿಗಲ್ಲು. ಹೆಣ್ಣಿಗೆ ಶಾರೀರಿಕ ತೊಡಕು ಹೊರತು ಪಡಿಸಿ, ಮತ್ತು ಗಂಡು ತನ್ನ ಕೊನೆಯುಸಿರಿರುವವರೆಗೂ ನಮಾಜನ್ನು ನಿರ್ವಹಿಸಲೇಬೇಕು. ಪ್ರಯಾಣದಲ್ಲೂ, ಶಾರೀರಿಕ ಅಸ್ವಸ್ಥ ಸ್ಥಿತಿಯಲ್ಲೂ, ರಣರಂಗದಲ್ಲೂ, ಯಾವುದೇ ವಿನಾಯಿತಿ ಇಲ್ಲದೆ ಕ್ಲಪ್ತ ಸಮಯಕ್ಕೆ ಸೃಷ್ಟಿ ಕರ್ತನ ಆರಾಧನೆಯಲ್ಲಿ ತೊಡಗಿಸಿಕೊಳ್ಳಬೇಕು. ಅರುಣೋದಯ ದ ಪ್ರಾರ್ಥನೆ, ಸೂರ್ಯ ನೆತ್ತಿಗೆ ಬಂದಾಗಿನ ಹೊತ್ತು, ಅಪರಾಹ್ನ, ಸಂಜೆ, ಮತ್ತು ರಾತ್ರಿ ಇವು ನಮಾಜ್ ಗೆಂದು ನಿಯುಕ್ತ ಗೊಂಡ ಸಮಯಗಳು. ಸಮಯ ತಪ್ಪಿಸಿದರೆ ಆ ಆರಾಧನೆ  ಚಲಾವಣೆ ಕಳೆದು ಕೊಂಡ ಕಾಸಿನಂತೆ. ನಿರರ್ಥಕ. ಸಮಯ ತಪ್ಪಿಸಿದ ಆರಾಧನೆ ನನಗೆ ಬೇಡ ಎನ್ನುತ್ತಾನೆ ಪರಮಾತ್ಮ. ಈ ನಿಯಮದಲ್ಲಿ ಬದುಕಿನಲ್ಲಿ ಯಶಸ್ಸಿಗೊಂದು ಪಾಠ ಇಲ್ಲಿದೆ ನೋಡಿ. ನಮಾಜ್ ಸಮಯಪ್ರಜ್ಞೆಯನ್ನು ಜನರಲ್ಲಿ ಬೆಳೆಸುತ್ತದೆ, ಸಮಯದ ಮಹತ್ವದ ಬಗ್ಗೆ ನಿಷ್ಠುರತೆ ತೋರಿಸುತ್ತದೆ. ಆದರೆ ಈ ಸಾರವನ್ನು ಮುಸ್ಲಿಮ್ ಜನಾಂಗ ಅರಿಯದೆ ಇರುವುದು ಖೇದಕರ.


ಇಸ್ಲಾಮಿನಲ್ಲಿ ಸ್ತ್ರೀ:  ಮನೋಹರವಾದ, ವಿಶ್ವ ಕೊಂಡಾಡಿದ ಆದರ್ಶಗಳಾದ ಏಕ ದೇವೋಪಾಸನೆ, ಮನುಷ್ಯರಲ್ಲಿ ಸಮಾನತೆ, ಯಾವುದೇ ಪರಿಸ್ಥಿತಿಯಲ್ಲೂ ದೇವರ ಆರಾಧನೆಯಂಥ ವಿಚಾರಗಳು ಮಾತ್ರವಲ್ಲ ಹೆಣ್ಣಿನ ಸ್ವಾತಂತ್ರ್ಯದ ಕಡೆಗೂ ಇಸ್ಲಾಂ ಗಮನ ಹರಿಸಿತು. ಆಗಿನ ಕಾಲದಲ್ಲಿ ಹೆಣ್ಣಿಗೆ ಆಸ್ತಿಯಲ್ಲಿ ಹಕ್ಕು ಯಾರೂ ಕೇಳಿರದ, ಕಂಡಿಲ್ಲದ ಒಂದು ಬೆಳವಣಿಗೆ. ಪ್ರಪ್ರಥಮವಾಗಿ ಹೆಣ್ಣಿಗೆ ತನ್ನ ತಂದೆಯ ಆಸ್ತಿಯಲ್ಲಿ ಹಕ್ಕನ್ನು ನೀಡುವ ಮೂಲಕ ಒಂದು ಕ್ರಾಂತಿ ಕಾರೀ ಬೆಳವಣಿಗೆಗೆ ಇಸ್ಲಾಂ ನಾಂದಿ ಹಾಡಿತು. ಇಸ್ಲಾಂ ಅನುಷ್ಠಾನಕ್ಕೆ ತಂದ ೮೦೦  ವರುಷಗಳ ತರುವಾಯ ಇಂಗ್ಲೆಂಡ್ ಈ ಕಾನೂನನ್ನು ಅನುಷ್ಠಾನಕ್ಕೆ ತಂದಿತು. ಹೆಣ್ಣಿಗೆ ಆತ್ಮವಿಲ್ಲ ಮತ್ತು ಸ್ವರ್ಗ ಲೋಕದಿಂದ ಮನುಷ್ಯ ಹೊರ ಹಾಕಲ್ಪಟ್ಟಿದ್ದು ಹೆಣ್ಣಿನ ತಪ್ಪಿನಿಂದ, ಪ್ರಪಂಚದ ಎಲ್ಲಾ ಕೋಲಾಹ, ಕಲಹಗಳಿಗೆ ಹೆಣ್ಣೇ ಕಾರಣ ಎಂದು ಮಹಿಳೆಯನ್ನು ಪಾಶ್ಚಾತ್ಯರಂತೆ ಜರಿಯದೆ ದೇವರಿಗೆ ಭಯ ಪಟ್ಟು ಬದುಕುವ ಗಂಡು ಮತ್ತು ಹೆಣ್ಣು ಹೇಗೆ ಸಮಾನರು ಎಂದು ಕುರಾನಿನ ಸೂಕ್ತದಲ್ಲಿ ವಿವರವಾಗಿ ಹೇಳಲಾಗಿದೆ. ಈಗಿನ ಹೆಣ್ಣಿನ ಶೋಷಣೆಗೆ, ದುರ್ಗತಿಗೆ ಮನುಷ್ಯನ ಅತಿಯಾಸೆ ಮತ್ತು ದಬ್ಬಾಳಿಕೆ ಕಾರಣವೇ ಹೊರತು ಧರ್ಮವಲ್ಲ ಎನ್ನುವುದನ್ನು ಇಸ್ಲಾಮಿನ ಆದರ್ಶಗಳನ್ನು ಅರಿತವರಿಗೆ ಅರಿವಾಗುವುದು.   ವಿಧವೆಯರಿಗೆ ಅವರ ಉಡುಗೆ ತೊಡುಗೆಗಳಲ್ಲಿ ಯಾವುದೇ ನಿರ್ದಿಷ್ಟ ನಿರ್ಬಂಧ ಹೇರದೆ ಅವರ ಮರು ವಿವಾಹಕ್ಕೆ ಅನುವು ಮಾಡಿಕೊಡಲು ಸಮಾಜದಿಂದ ಇಸ್ಲಾಂ ಬಯಸುತ್ತದೆ.


ಸ್ತ್ರೀಯರಿಗೆ ಯಾವುದೇ ಸ್ವಾತಂತ್ರ್ಯವಿಲ್ಲ ಎಂದು ಹೇಳುವ ಟೀಕಾಕಾರರಿಗೆ ಮುಸ್ಲಿಮ್ ಸಮಾಜ ಉತ್ತರ ನೀಡಿದೆ. ವಿಶ್ವದಲ್ಲಿ ಇದುವರೆಗೂ ಐದು (ತುರ್ಕಿ, ಪಾಕಿಸ್ತಾನ, ಬಾಂಗ್ಲ ದೇಶ, ಕಿರ್ಗಿಸ್ತಾನ್) ಮುಸ್ಲಿಂ ಮಹಿಳಾ ಪ್ರಧಾನಮಂತ್ರಿಗಳಾಗಿ ಸೇವೆ ಸಲ್ಲಿಸಿದ್ದು ಅವರನ್ನು ಆರಿಸಿದ ಮತದಾರರಲ್ಲಿ ಪುರುಷರೂ ದೊಡ್ಡ ಸಂಖ್ಯೆಯಲ್ಲಿ ಇದ್ದರು ಎನ್ನುವುದನ್ನು ಮನಗಾಣಬೇಕು. ಅಷ್ಟೇ ಅಲ್ಲದೆ ಜೋರ್ಡನ್, ಮತ್ತು ಕತಾರ್ ದೇಶಗಳ ರಾಣಿಯರು ಮತ್ತು ಸಿರಿಯಾ ದೇಶದ ಅಧ್ಯಕ್ಷರ ಪತ್ನಿ ಆ ದೇಶಗಳ ರಾಜಕಾರಣಗಳಲ್ಲಿ ಸಕ್ರಿಯವಾಗಿ ಬಾಗವಹಿಸುತ್ತಿರುವರು. ಪಾಕಿಸ್ತಾನದಲ್ಲಿ ಮೊಟ್ಟ ಮೊದಲ  ಮಹಿಳಾ ಬ್ಯಾಂಕನ್ನು ಸಂಸ್ಥಾಪನೆ ಮಾಡಿದ್ದು ಓರ್ವ ಮಹಿಳೆ.  


ಬಹು ಪತ್ನಿತ್ವ:  ಕೆಲವೊಂದು ಸನ್ನಿವೇಶಗಳಲ್ಲಿ, ಕಟ್ಟುನಿಟ್ಟಾದ ಷರತ್ತುಗಳೊಂದಿಗೆ ಪುರುಷ ಬಹು ಪತ್ನಿತ್ವ ಪಾಲಿಸಬಹುದು. ಆದರೆ ಪತ್ನಿಯರ ನಡುವೆ ನ್ಯಾಯ ಪಾಲಿಸುವಂತೆ ಇಸ್ಲಾಂ ಕಠಿಣ ಶರತ್ತುಗಳನ್ನು ಒಡ್ಡಿದ್ದರಿಂದ ಬಹುಸಂಖ್ಯಾತ ಮುಸ್ಲಿಮರು ಏಕ ಪತ್ನೀವ್ರತಸ್ಥರಾಗಿದ್ದಾರೆ ಎಂದು ನಾವು ಕಾಣಬಹುದು. ಈ ತೆರನಾದ ಒಂದಕ್ಕಿಂತ ಹೆಚ್ಚು ಹೆಂಡಿರನ್ನು ಹೊಂದುವ ಸೌಲಭ್ಯವಿದ್ದರೂ ವಿಶ್ವದ ಶೇಕಡಾ ೯೫ ಕ್ಕೂ ಅಧಿಕ ಮುಸ್ಲಿಂ ಪುರುಷರು ಓರ್ವ ಪತ್ನಿಯಿಂದಲೇ ಸಂತೃಪ್ತರಾಗಬೇಕಾದರೆ ಮುಸ್ಲಿಮರಲ್ಲಿರುವ ಆಳವಾದ ಧಾರ್ಮಿಕ ಪ್ರಜ್ಞೆ ಮತ್ತು ದೈವ ಭಯ ಇರುವುದರಿಂದಲೇ ಸಾಧ್ಯ ಎಂದು ಮನಗಾಣಬಹುದು.  


ಮುಸ್ಲಿಮೇತರರೊಂದಿಗೆ ಇಸ್ಲಾಂ:  ಸಂಪೂರ್ಣ ಅರೇಬಿಯಾ ತನ್ನ ಉನ್ನತ ಆದರ್ಶಗಳಿಗೆ ತಲೆ ಬಾಗಿ ನಡೆಯುತ್ತಿದ್ದರೂ ಪ್ರವಾದಿಗಳು ಯಹೂದ್ಯರೊಂದಿಗೆ ಒಳ್ಳೆಯ ಸಂಬಂಧ ಇಟ್ಟುಕೊಂಡಿದ್ದರು.


ಪ್ರವಾದಿಗಳ ನಂತರ ಖಲೀಫಾ ಆಳ್ವಿಕೆಯ ಪರಂಪರೆ ಆರಂಭವಾಯಿತು. ಪ್ರವಾದಿಗಳ ನಂತರದ ಸುಮಾರು ೫೦೦ -೬೦೦ ವರ್ಷಗಳನ್ನು ಇಸ್ಲಾಮಿನ ಸುವರ್ಣ ಯುಗ ಎಂದು ಇತಿಹಾಸಕಾರರು ಬಣ್ಣಿಸುತ್ತಾರೆ.


ಮುಸ್ಲಿಂ ಆಳ್ವಿಕೆಯಲ್ಲಿ ಮುಸ್ಲಿಮೇತರರ ಮೇಲೆ "ಜೆಜಿಯಾ" ತಲೆಗಂದಾಯ ವಿಧಿಸಿದ ಕಾರಣ ನೋಡೋಣ. ಎಲ್ಲಾ ಮುಸ್ಲಿಂ ರಾಜರುಗಳು ಈ ಪದ್ಧತಿಯನ್ನು ಅನುಸರಿಸಲಿಲ್ಲ. ಮುಸ್ಲಿಂ ಆಳ್ವಿಕೆಯಲ್ಲಿ, ಮುಸ್ಲಿಂ ದೇಶದಲ್ಲಿ ನೆಲೆಸುವ ಮುಸ್ಲಿಮೇತರರಿಗೆ ಕೆಲವು ಸೌಲಭ್ಯ ಕೊಡುವ ಕಾರಣ ಈ ತೆರಿಗೆ ವಿಧಿಸಲಾಯಿತು. ಮುಸ್ಲಿಮೇತರರು ಸೈನ್ಯದಲ್ಲಿ ಭಾಗವಹಿಸುವ ಅವಶ್ಯಕತೆಯಿಲ್ಲ, ಮತ್ತು ಪ್ರತೀ ಮುಸ್ಲಿಮನೂ ಪಾವತಿಸಲೇ ಬೇಕಾದ "zakah" ಎನ್ನುವ ತೆರಿಗೆಯಿಂದಲೂ ಮುಸ್ಲಿಮೇತರರಿಗೆ ವಿನಾಯಿತಿ ನೀಡಲಾಯಿತು. ಹಾಗೆಯೇ ಅವರ ಪ್ರಾಣ, ಆಸ್ತಿ ರಕ್ಷಣೆ ಸಹ ಮುಸ್ಲಿಂ ದೇಶದ ಹೊಣೆಯಾಗಿತ್ತು.  


ಯಾವ ಧರ್ಮಕ್ಕೆ ಸೇರಿದವನಾದರೂ ನೆರೆ ಹೊರೆಯವನೊಂದಿಗೆ ಸ್ನೇಹದಿಂದ  ಇರಲೂ, ನೆರೆಯವನ ಎಲ್ಲಾ ಅವಶ್ಯಕತೆ ಪೂರೈಸಲು ಮುಸ್ಲಿಮರನ್ನು ಇಸ್ಲಾಂ ಉತ್ತೇಜಿಸುತ್ತದೆ. ಇಸ್ಲಾಮಿನ ಎರಡನೇ ಖಲೀಫಾ (ಧರ್ಮಾಧಿಕಾರಿ, ಇಸ್ಲಾಮಿನಲ್ಲಿ "ರಾಜ" ಎನ್ನುವ ಪದ್ಧತಿಯಿಲ್ಲ, ಅದು ನವೀನ ಅವಿಷ್ಕಾರ) ಉಮರ್ ಅವರ ಕಾಲದಲ್ಲಿ ಒಬ್ಬ ಯಹೂದ್ಯ ವ್ಯಕ್ತಿ ತನ್ನ ಮನೆ ಪಕ್ಕದ ಖಾಲಿ ಜಾಗವನ್ನ ಮಾರುವಾಗ ದೊಡ್ಡ ಮೊತ್ತದ ಹಣ ಕೇಳುತ್ತಾನೆ. ಕಾರಣ ಕೇಳಿದಾಗ ಖಾಲಿ ಜಾಗದ ಪಕ್ಕದಲ್ಲಿ ಧರ್ಮ ನಿಷ್ಠ ಮುಸ್ಲಿಂ ವ್ಯಕ್ತಿ ವಾಸವಿರುವುದರಿಂದ ಆ ವ್ಯಕ್ತಿಯಿಂದ ಯಾವುದೇ ತಕರಾರು, ಸಮಸ್ಯೆಗಳು ಬರಲು ಸಾಧ್ಯವಿಲ್ಲದೆ ಇರುವುದರಿಂದ ಆ ಖಾಲಿ ಸ್ಥಳಕ್ಕೆ ಹೆಚ್ಚು ಹಣ ಎಂದು ವಿವರಣೆ ನೀಡುವ ಯಹೂದಿ ಪರೋಕ್ಷವಾಗಿ ಇಸ್ಲಾಮಿನ ಆದರ್ಶಗಳನ್ನು ಕೊಂಡಾಡುತ್ತಾನೆ.  


ಕೊನೆಯದಾಗಿ ಇಸ್ಲಾಮಿನ ಹೆಸರಿನಲ್ಲಿ ಹಿಂಸೆ, ರಕ್ತ ಪಾತ ಹರಿಸುತ್ತಿರುವವರು ತಾವು ನಂಬಿದ ಧರ್ಮದ ಆದರ್ಶಗಳಿಗೆ ದ್ರೋಹ ಬಗೆಯುತ್ತಿದ್ದು ಅವರ ಕುಕೃತ್ಯಗಳಿಗೆ ಇಸ್ಲಾಂನ  ಮೇಲೆ ಹೊಣೆ ಹೊರಿಸುವುದು ತಪ್ಪು.  ವಿನಾಕಾರಣ ಯಾವುದೇ ನಿರಪರಾಧಿ, ಮುಗ್ಧ ವ್ಯಕ್ತಿಯನ್ನು ಕೊಂದರೆ ಇಡೀ ಮಾನವಕುಲವನ್ನೇ ಕೊಂದಂತೆ ಎಂದು ಸಾರುವ ಇಸ್ಲಾಂ ಒಬ್ಬ ವ್ಯಕ್ತಿಯ ಜೀವ ಉಳಿಸಿದರೂ ಜೀವ ಉಳಿಸಿದ ವ್ಯಕ್ತಿ ಮಾನವ ಕುಲವನ್ನೇ ಉಳಿಸಿದ ಕೀರ್ತಿಗೆ ಪಾತ್ರನಾಗುತ್ತಾನೆ ಎಂದು ಹೇಳಿದ್ದರೆ ಭಯೋತ್ಪಾದನೆಯ ಬಗೆಗಿನ ಇಸ್ಲಾಮ್ ನ ನಿಲುವು ಏನು ಎಂದು ತಿಳಿಯುತ್ತದೆ.  ರಾಜಕೀಯ ಕಾರಣಗಳಿಗಾಗಿ ಹಿಂಸೆಯ ಮಾರ್ಗ ಹಿಡಿರುವ ದುರುಳರಿಗೆ ಅವರು ಮಾಡುತ್ತಿರುವುದು "ಪ್ರತಿಕ್ರಿಯಾತ್ಮಕ" ಹಿಂಸೆ ಎಂತಲೋ, "ಧರ್ಮಕ್ಕಾಗಿ ಕಯ್ಯೆತ್ತುವುದು" ಎಂತಲೂ ಮುಸ್ಲಿಮರು ಸಮರ್ಥಿಸದೆ ಒಕ್ಕೊರಲಿನಿಂದ ಖಂಡಿಸಿದ್ದಾರೆ. ರಕ್ತಪಾತ, ಸಾಮೂಹಿಕ ಕೊಲೆಯಂಥ ಕೃತ್ಯ ಎಸಗುವ ಜನರು ಇಸ್ಲಾಂ ಧರ್ಮಕ್ಕೆ ಸೇರಿದವರಲ್ಲ ಎಂದು ಕಳೆದವರ್ಷ ಹೈದರಾಬಾದಿನಲ್ಲಿ ಸೇರಿದ್ದ ದೇಶದ ಮುಸ್ಲಿಂ ಪಂಡಿತರುಗಳು ಇಸ್ಲಾಂ ವಿಶ್ವ ಶಾಂತಿ ಬಯಸುತ್ತದೆ ಎಂದು ಸಾರಿದ್ದರು.


ಮುಸ್ಲಿಮರಲ್ಲಿರುವ ಅನಕ್ಷರತೆ, ಮತ್ತಿತರ ನ್ಯೂನತೆಗಳಿಗೆ ಮುಸ್ಲಿಮರು ಹೊಣೆಯೇ ಹೊರತು ಅವರು ನಂಬುವ ಇಸ್ಲಾಂ ಧರ್ಮವಲ್ಲ. ಪವಿತ್ರ ಗ್ರಂಥ ಕುರಾನ್ ನ ಮೊದಲ ಸೂಕ್ತಗಳು ಆರಂಭಗೊಂಡಿದ್ದು ಈ ವಾಕ್ಯದಿಂದ; "ಓದು, ನಿನ್ನನ್ನು ಸೃಷ್ಟಿಸಿದ ಪ್ರಭುವಿನ ನಾಮದಿಂದ" ಎಂದು. ಇಸ್ಲಾಂ ಜ್ಞಾನಕ್ಕೆ ಎಷ್ಟು ಮಹತ್ವ ನೀಡಿದೆ ಎಂದು ಈ ಸೂಕ್ತದಿಂದ ತಿಳಿಯಬಹುದು. ಇಸ್ಲಾಂ ಧರ್ಮವನ್ನ ಅರಿಯಬೇಕೆಂದರೆ ನೇರವಾಗಿ ಧರ್ಮಗ್ರಂಥಗಳನ್ನು ಓದಿ ಅರ್ಥ ಮಾಡಿಕೊಳ್ಳಬೇಕೆ ವಿನಃ  ಮುಸ್ಲಿಮರ ನಡವಳಿಕೆ ನೋಡಿ ಇವರ ಧರ್ಮ ಹೀಗೆ ಎಂದು ತೀರ್ಪು ನೀಡುವುದು ತಪ್ಪು.      


ಪ್ರವಾದಿಗಳ ಬಗ್ಗೆ ಮೈಸೂರು ವಿಶ್ವವಿದ್ಯಾಲಯದ ಪ್ರೊಫೆಸರ್ ರಾಮಕೃಷ್ಣ ರಾವ್ ಸುಂದರವಾದ ಪುಸ್ತಿಕೆ ಬರೆದಿದ್ದಾರೆ. ಆಂಗ್ಲ ಭಾಷೆಯಲ್ಲಿ ಇರುವ ಆ ಪುಸ್ತಿಕೆ ಸೌದಿ ಅರೇಬಿಯಾದ ಮಸೀದಿಗಳಲ್ಲೂ ಕಾಣಬಹುದು. ಪುಸ್ತಿಕೆಯ ಹೆಸರು Muhammad, the prophet of Islam.    


 


           

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಅಬ್ದುಲ್ ಭಾಯ್ , ಮೊದಲನೇಯದಾಗಿ ಧನ್ಯವಾದಗಳು,ಸಂಪದಿಗರ ಬಯಕೆಯಂತೆ ನೀವು ಅರ್ಧಮನಸ್ಸಿನಿಂದ ಬರೆದ ಈ ಲೇಖನ ಅಲ್ಪ ಸ್ವಲ್ಪ ವಾದರೂ ವಿಷಯಗಳನ್ನು ತಿಳಿಸಬಹುದೇನೋ ಅಂತ. ಮೊದಲ ಎರಡು ಪ್ಯಾರಗಳ ಹೆಚ್ಚಿನ ವಾಕ್ಯಗಳು ಅಮೆರಿಕವನ್ನು ಗಮನದಲ್ಲಿಟ್ಟು ಮಾತ್ರ ಬರೆದಿದ್ದುವು.ಏಕೆಂದರೆ ಭಾರತೀಯರು ಹಲವು ಶತಕಗಳಿಂದ ಮುಸ್ಲಿಂ ಧರ್ಮದವರಿಂದ ಎಷ್ಟೋ ಅನಾಹುತಗಳನ್ನು ಎದುರಿಸುತ್ತ ಬಂದಿದ್ದರೂ ಇನ್ನೂ ವರೆಗೂ ಅವರನ್ನು ವಿಷ ಜಂತುವಿನ ಹಾಗೆ ಕಂಡಿಲ್ಲ..ಮನೆಯಲ್ಲಿ ಒಂದು ಜೋಂಡಿನ್ಗ ಬಂದರೂ ಏನು ಮಾಡುತ್ತೇವೆ ಅಂತ ನಿಮಗೆ ಗೊತ್ತೇ ಇದೆ..ಅದನ್ನು ಭಾರತದಲ್ಲಿ ಮಾಡಿಲ್ಲ.. ಇಲ್ಲಿ ಬರೆದದ್ದು 'ನೀವು ಕಂಡುಕೊಂಡ ಇಸ್ಲಾಂ'. ನೀವು ಕೊಟ್ಟ ತಿಳುವಳಿಕೆಗಳು ಸರಿಯೋ ತಪ್ಪೋ ಗೊತ್ತಿಲ್ಲ.ಇಲ್ಲಿನ ಮಿತ್ರರು ತಿಳಿಸುತ್ತಾರೆ ಅಂತ ಕಾಯುತ್ತಿದ್ದೇನೆ..ಅದಕ್ಕೇ ನನ್ನಲ್ಲಿರುವ ಪ್ರಶ್ನೆ ಕೇಳುತ್ತೇನೆ.. ಇಸ್ಲಾಂ ಬಗ್ಗೆ ನನ್ನ ಕೆ(ಹ)ಲವು ಪ್ರಶ್ನೆಗಳು ೧) ಪ್ರವಾದಿಗಳ ಹುಟ್ಟು ಸಾವಿನ ಬಗ್ಗೆ ತಿಳಿಸಿ. ೨) ನೀವು ಉಲ್ಲೇಖಿಸಿದ ಆ ನಿರಾಕಾರನಾದ ಪರಮಾತ್ಮ ಯಾರು?ಪ್ರವಾದಿಗಳು ಅವನನ್ನು ಹೇಗೆ ಅರಿತುಕೊಂಡು ಅವನ ಬಗ್ಗೆ ಜನರಿಗೆ ಸಂದೇಶಗಳನ್ನು ಕೊಡತೊಡಗಿದರು..? ೩)'ಇಸ್ಲಾಂ ತಾನು ಬೇರೆ ಧರ್ಮಗಳಿಗಿಂತ ಏಕೆ ಭಿನ್ನ ಎಂದು ವೈಜ್ಞಾನಿಕವಾಗಿ ತೋರಿಸಿದೆ' ಎಂದಿದ್ದೀರಿ..ಅದರ ಬಗ್ಗೆ ಎಲ್ಲಿಯೂ ಉಲ್ಲೇಖಿಸಿಲ್ಲ.. ೪)ಇಸ್ಲಾಂ,ಶಾಂತಿಯ ಧರ್ಮ. ಸರಿ..ಇಸ್ಲಾಂ ವಿಶ್ವ ಶಾಂತಿ ಬಯಸುತ್ತದೆ ಎಂದು ಸಾರಿದರೆ ಸಾಕೆ?ಹಾಗಾದರೆ ಸದ್ಯದ ಜಗತ್ತಿನ ಶಾಂತಿಗೆ ಇಸ್ಲಾಮಿನ ಕೊಡುಗೆ ಏನು?ವಿಶ್ವದ ಭಾಗಗಳಲ್ಲಿ ಜನರನ್ನು 'ಶಾಂತ' ಮಾಡುವುದು ವಿಶ್ವ ಶಾಂತಿಯೇ ?

ಪ್ರತಿ ಉಗ್ರವಾದಿ ಬಿನ್ ಲಾಡೆನ್ ಸದ್ದಾ೦ ಖೊಮೇನಿ ಕಸಾಬ್ ಅಫ್ಜಲ್ ಇವರೇ ಆಗಬೇಕೇ? ಕಾಣುವುದು ಏಕೆ? ಇಸ್ಲಾಮ್ ಅಷ್ಟೊ೦ದು ಪ್ರಭಾವಶಾಲಿ ಶಾ೦ತಿಯ ಪ್ರತೀಕವೆ೦ದಾದರೆ ಈ ಭಯೋತ್ಪಾದನೆ ಇಸ್ಲಾಮ ಅನುಯಾಯಿಗಳಲ್ಲೇ ಏಕೆ ಇಷ್ಟು ವಿಶ್ವವ್ಯಾಪಿ? ಈ ಭಾರತ ದೇಶದಲ್ಲಿ ಆಕ್ರಮಣ ಮಾಡಲು ಬ೦ದ ಬಾಬರ್ ಔರ೦ಗಜ಼ೇಬ್, ಘಜ಼್ನಿ ಮಹಮ್ಮದ್, ಅವರ ಕೊಡುಗೆಯೇನು? ಎಲ್ಲೋ ಸದ್ದಾಮನನ್ನು ಗಲ್ಲಿಗೇರಿಸಿದರೆ ಸ೦ಬ೦ಧವೇ ಇರದ ನಮ್ಮ ಬೆ೦ಗಳೂರಿನಲ್ಲಿ ಮುಸ್ಲಿಮರು ದೊ೦ಬಿಯೆಬ್ಬಿಸುತ್ತಾರೆ, ಕಾನೂನು ವ್ಯವಸ್ಥೆಯನ್ನು ಗಾಳಿಗೆ ತೂರುತ್ತಾರೆ ಏಕೆ? ಒ೦ದು ಬುರ್ಖಾದ ಬರಹ ಹೊರಬರುವುದೇ ತಡ ಇಡೀ ರಾಜ್ಯದಲ್ಲಿ ಬೆ೦ಕಿ ಹೊತ್ತಿಕೊಳ್ಳುತ್ತದೆ, ಏಕೆ? ಸ೦ವಿಧಾನಾತ್ಮಕ ಪ್ರಜಾಸತ್ತೆ ಇದ್ದರೂ ಅಮಾನವೀಯ ಫತ್ವಾಗಳನ್ನು ಹೊರಡಿಸುವ ಮುಲ್ಲಾ ಮೌಲ್ವಿಗಳ ವಿರುದ್ಧ ಇಸ್ಲಾಮ್ ಬುದ್ಧಿಜೀವಿಗಳು ನಿರ೦ತರ ಮೌನ ಆಚರಿಸುತ್ತರೆ ಏಕೆ? ಕೇರಳದಲ್ಲಿ ಒಬ್ಬ ಜಾರ್ಜ್ ಎ೦ಬ ಉಪನ್ಯಾಸಕ ಪ್ರವಾದಿ ಮಹಮ್ಮದ್ ನ ಬಗ್ಗೆ ಅಪಮಾನವಾಗುವ೦ತೆ(?) ಮಾತಾಡಿದ್ದಕ್ಕೆ ಹಾಡುಹಗಲಲ್ಲೇ ಬರ್ಭರವಾಗಿ ಆತನ ಕೈ ಕತ್ತರಿಸಿದ್ದು ಏಕೆ? ಇ೦ತಹ ನೂರಾರು ಪ್ರಶ್ನೆಗಳು, ವಿದ್ಯಮಾನಗಳು ಮು೦ದುವರೆಯುತ್ತಲೇ ಹೋಗುತ್ತವೆ. ನನಗೆ ಗೊತ್ತು ಇವೆಲ್ಲವನ್ನೂ ಇಸ್ಲಾಮ್ ಮತ ಸಮರ್ಥಿಸುವುದಿಲ್ಲವೆ೦ದು. ಆದರೂ ಇಸ್ಲಾಮ್ ಮತದ ಚೌಕಟ್ಟಿನಲ್ಲೇ ಜರುಗುವ ಇ೦ಥ ಕುಕೃತ್ಯಗಳನ್ನು ಇತರ ಮುಸ್ಲಿಮ್ ಬಾ೦ಧವರು(ಇಸ್ಲಾಮ್ ಧರ್ಮದಲ್ಲಿ ಶ್ರದ್ಧೆಯಿರುವವರು) ಮೌನವಾಗಿದ್ದುಕೊ೦ಡು, ಸಿಡಿದೇಳದೇ ಮೂಕಪ್ರೇಕ್ಷಕರಾಗಿ ಉಳಿಯುವುದರಿ೦ದಲೇ ಇತರರು ಇಸ್ಲಾಮ್ ಧರ್ಮದ ಬಗ್ಗೆ ಸ೦ಶಯಗ್ರಸ್ತರಾಗಿರುವುದು ಬಹುತೇಕ ಕಾರಣವೆ೦ದು ನಾನು ಭಾವಿಸುತ್ತೇನೆ ಹಾಗೆಯೇ ನ೦ಬುತ್ತೇನೆ. ಇ೦ತಹ ಸ೦ಶಯವನ್ನು ನಿವಾರಿಸುವ ಗುರುತರ ಹೊಣೆ, ತಮ್ಮಲ್ಲೇ ಆತ್ಮಾವಲೋಕನ ಮಾಡಿಕೊಳ್ಳುವ, ಸಾಮಾಜಿಕ ಕಳಕಳಿಯಿರುವ ಅಬ್ದುಲ್ಲಾ ರ೦ಥ, ವಿಶ್ವಶಾ೦ತಿಯಲ್ಲಿ ನ೦ಬುಗೆಯಿರುವ ಮುಸ್ಲಿಮರಿಗಿದೆ ಎ೦ದು ನಾನು ನ೦ಬುತ್ತೇನೆ.

ಅಬ್ದುಲ್-ನನ್ನ ಸೈಟು, ನನ್ನ ಮನೆ, ನನ್ನ ಕಾರು ಅಂದಂಗೆ ನನ್ನ ದರ್ಮ, ನನ್ನ ಸಂಸ್ಕೃತಿ ಅಂತ ಸಂಪದದಗೆ ನೋಡಿ ನೋಡಿ ಸಾಕಾಯ್ತು. ನಿಮ್ಮ ಟೈಟ್ಲು ಚೆನ್ನಾದೆ. ನಿಮ್ಮನ್ನ ಇನ್ನ ಇಟ್ಟಾಡ್ಸಕೆ ಬೇಕಾದ ಮಂದಿ ಅವ್ರೆ-ನಾನ ಯಾಕೆ ಬೇಕು? ಮ್ಯೇಲೆ ಡಾಕ್ಟರು ಮಾತು ನೋಡಿದರೆ ಎದೆ ಜಲ್ಲೆಂತದೆ. -ಚೆಂಗಣ್ಣ

ಅಬ್ದುಲ್, ಲೇಖನ ಬರೆದಿದ್ದಕ್ಕೆ ಧನ್ಯವಾದಗಳು. ಆದ್ರೆ ಪೂರ್ತಿ ಲೇಖನ, ಇಸ್ಲಾಂನಲ್ಲಿ ಎಲ್ಲವೂ ಸರಿ ಇದೆ ಮತ್ತು ಪ್ರಶ್ನಾತೀತ ಅ೦ತ ಮನಸಲ್ಲಿ ಇಟ್ಕೊ೦ಡು ಬರೆದಿರೊಹಾಗಿದೆ. ಯಾವದೇ ಧರ್ಮದಲ್ಲಿ ಎಲ್ಲವೂ ಸರಿ ಇರುವುದಿಲ್ಲ ಅನ್ನೋದು ಎಲ್ಲರಿಗೂ ತಿಳಿದಿರುವ ವಿಷಯ. ಅದನ್ನ ಒಪ್ಕೊ೦ಡು ಸರಿ ದಾರಿಗೆ ತರಬೇಕಾಗಿರೋದ್ರ ಬಗ್ಗೆನೂ ಬರೆದರೆ ಚನ್ನಾಗಿರುತ್ತೆ. ಕಾಫಿರ್ ಮತ್ತು ಜಿಹಾದ್ ಬಗ್ಗೆ ಯಾಕೆ ಮರೆತದ್ದು ? -- ಹರ್ಷ.

ಮರೆತಿದ್ದಲ್ಲ, ಎಲ್ಲಾ ವಿಷಯಗಳನ್ನೂ ಒಂದೇ ಲೇಖನದಲ್ಲಿ ಹಾಕಲು ಸಾಧ್ಯವಿಲ್ಲದ್ದರಿಂದ. ಸಮಯ ಸಿಕ್ಕಾಗ ಖಂಡಿತ ಬರೆಯುತ್ತೇನೆ, ವಂದನೆಗಳು.

ಕ್ಷಮಿಸಿ ಅಬ್ದುಲ್. ಲೇಖನದ ಕೊನೆಗೆ 'ಮು೦ದುವರೆಯುವುದು' ಎ೦ದು ಹಾಕಿದ್ದಲ್ಲಿ ನಾನು ಈ ಪ್ರಶ್ನೆ ಕೇಳುತಿರಲಿಲ್ಲ. -- ಹರ್ಷ.

ಆತ್ಮೀಯರೇ, ಆತ್ಮ ಮತ್ತು ಪರಮಾತ್ಮನ ನಡುವೆ ಕಟ್ಟುಕಟ್ಟಳೆಗಳನ್ನು ಹೇರುವ ಯಾವುದೇ ಧರ್ಮವನ್ನು ನಾನು ಒಪ್ಪುವುದಿಲ್ಲ. ಪ್ರಾಣಿಗಳು ಪ್ರಾಣಿಗಳಂತಿರುವುದೇ ಪ್ರಾಣಿ ಧರ್ಮ. ಮಾನವ ಮಾನವನಂತಾಗಿ ಬಾಳುವುದೇ ಮಾನವ ಧರ್ಮ. ಮಾನವನಿಗೆ ಮಾನವೀಯತೆಯೇ ಧರ್ಮ. ತನ್ನ ಸ್ಥಾನಕ್ಕೆ, ಹುದ್ದೆಗೆ, ಅವಹೇಳನವಾಗದಂತೆ, ತನ್ನ ಕಾರ್ಯಕ್ಷೇತ್ರದಲ್ಲಿನ ನೀತಿ ನಿಯಮಗಳನ್ನು ಪಾಲಿಸಿಕೊಂಡು, ಕೆಲಸ ಕಾರ್ಯಗಳನ್ನು ನೆರವೇರಿಸಿಕೊಂಡು ಹೋಗುವುದೇ ಮತ್ತು ಆ ರೀತಿಯಾಗಿ ಬಾಳುವುದೇ ಮಾನವನ ನಿಜವಾದ ಧರ್ಮ. ಅನ್ಯ ಧರ್ಮಗಳೆಲ್ಲವೂ ತಮ್ಮ ತಮ್ಮ ಬೇಳೆ ಬೇಯಿಸಿಕೊಳ್ಳಲು ಹುಟ್ಟಿಸಿಕೊಂಡ ಧರ್ಮಗಳು ಅಷ್ಟೇ. ಏಕೆಂದರೆ ಅವೆಲ್ಲವೂ ಮಾನವ ಕಲ್ಪಿತ ಮತ್ತು ಮಾನವ ನಿರ್ಮಿತ. ಪ್ರೀತಿಯ ಭಾಷ್ಯಕ್ಕಿಂತ ಮಿಗಿಲಾದ ವೇದ, ಬೈಬಲ್, ಗುರು ಗ್ರಂಥ ಅಥವಾ ಕುರ್ ಆನ್ ಇಲ್ಲ ಎಂಬುದೇ ನನ್ನ ಅನಿಸಿಕೆ. - ಆಸು ಹೆಗ್ಡೆ

ಸೋದರ ಅಬ್ದುಲ್, ಇಸ್ಲಾಂ ಕುರಿತು ನಿಮ್ಮ ಕಳಕಳಿ ಸಹಜವಾದದ್ದು. ಇಸ್ಲಾಮ್ ಹೆಸರಿನಲ್ಲಿ ನಡೆಯುತ್ತಿರುವ ಭಯೋತ್ಪಾದನೆ ತಡೆಗಟ್ಟಲು ನಿಷ್ಠಾವಂತ ಮುಸ್ಲಿಮರು ಏಕೆ ಮನಃಪೂರ್ವಕ ತೊಡಗಿಸಿಕೊಳ್ಳುವುದಿಲ್ಲ? [[[ಇಸ್ಲಾಮಿನ ಮೂಲಭೂತ ನಂಬಿಕೆ ಮತ್ತು ಅಡಿಗಲ್ಲೆಂದರೆ ಏಕದೇವೋಪಾಸನೆ. ಈ ವಿಷಯದ ಬಗ್ಗೆ ಇಸ್ಲಾಂ ನ ನಿಲುವು uncompromising.]]] ಈ ಕುರಿತು ಯಾರದೂ ತಕರಾರಿಲ್ಲ. ಆದರೆ ಇತರರೂ ಅದನ್ನೇ ಒಪ್ಪಬೇಕು ಎಂದು (ಅ)ಧರ್ಮಯುದ್ಧ ಮಾಡುವುದು ಎಷ್ಟು ಸರಿ? ಇತರ ಧರ್ಮೀಯರ ಬಗ್ಗೆ ಸಹಿಷ್ಣುತೆ ವಿಷಯದಲ್ಲಿ ಮುಸ್ಲಿಮರಲ್ಲಿ ಕೊರತೆಯಿದೆ ಎಂಬುದು ಎದ್ದು ಕಾಣುವ ಸಂಗತಿ. ಚರ್ಚಾಸ್ಪದ ವಿಷಯ ಕೈಗೆತ್ತಿಕೊಂಡು ಸಾದರಪಡಿಸುತ್ತಿದ್ದೀರಿ. ಒಳ್ಳೆಯದಾಗಲಿ. ಕುರಾನ್ ಏನು ಹೇಳುತ್ತದೆ ಮತ್ತು ಇಂದಿನ ವಾಸ್ತವ ಸಂಗತಿಗಳೇನು, ಮುಸ್ಲಿಮರ ಮನೋಭಾವನೆಗಳಲ್ಲಿ ಬದಲಾವಣೆ ಅಗತ್ಯವೇ, ಸಾಧ್ಯವೇ ಎಂಬ ಕುರಿತೂ ಬೆಳಕು ಚೆಲ್ಲಿರಿ.

ಆಬ್ದುಲ್ ರವರೆ, ಲೇಖನ ಚೆನ್ನಾಗಿದೆ. ಇಷ್ಟು ವಿಚಾರಗಳನ್ನು ತಿಳಿದಿರುವ ನಿಮ್ಮಂತಹ ಬುದ್ಧಿಜೀವಿಗಳೇಕೆ ಭಯೋತ್ಪಾದನೆ ವಿರುಧ್ಧ ದನಿಯೆತ್ತುತ್ತಿಲ್ಲ... ? ತಪ್ಪು ದಾರಿಯಲ್ಲಿ ಇರುವವರಿಗೆ ನಿಮ್ಮಂತಹವರು ಏಕೆ ತಿದ್ದಿ, ಬುದ್ಧಿ ಹೇಳಬಾರದು.. ?

ಗುರು, ಖಂಡಿತ ಎತ್ತಬೇಕು ಧ್ವನಿಯನ್ನು ಹಿಂಸೆಯ ವಿರುದ್ಧ, ಎತ್ತಿದ್ದಾರೆ ಕೂಡಾ ಮೌಲಿವಿಗಳು. ಆದರೆ ಮಾಧ್ಯಮಗಳಿಗೆ ಕುರುಡು, ಕಿವುಡು ರೋಗ ಹಿಡಿದರೆ ಆ ಧ್ವನಿ ಜನರಿಗೆ ತಲುಪುವುದಿಲ್ಲ ಅಷ್ಟೇ.

ಪ್ರಿಯ ಅಬ್ದುಲ್ ಅವರೆ, ನಿಮ್ಮ ಲೇಖನ ತುಂಬ ಮೇಲುಸ್ತರದ ಚಿಂತನೆಯುಳ್ಲದ್ದು ಮತ್ತು ಇಸ್ಲಾಮನ್ನು ಒಂದು ಒಲ್ಲೆಯ ಧರ್ಮ ಅಂತ ಪ್ರಚಾರ ಮಾಡುವಂಥದ್ದಾಗಿ ಕಂಡರೆ ಅಚ್ಚರಿಯಿಲ್ಲ. ಎಲ್ಲಾ ಧರ್ಮಗಳೂ ಒಳ್ಳೆಯ ಧರ್ಮಗಳೇ. ಎಲ್ಲಾ ಧರ್ಮಗ್ರಂಥಗಳೂ ಅವು ಹುಟ್ಟಿದ ಕಾಲಕ್ಕೆ ಬೇಕಾದ ಒಳ್ಳೆಯ ವಿಷಯಗಳನ್ನೇ ಹೇಳಿವೆ. ಹಿಂದೂ ಧರ್ಮ ತನ್ನ ಧರ್ಮಗ್ರಂಥಗಳಲ್ಲಿ ಇಂದಿಗೆ ಹೊಂದಿಕೆಯಾಗದ ವಿಚಾರಗಳನ್ನು ಬಿಡುತ್ತಾ ಬಂದಿದೆ.ಹೀಗೆ ಕಾಲಕ್ಕೆ ತಕ್ಕಂತೆ ಧರ್ಮಗ್ರಂಥದ ಮರುವಿಮರ್ಶೆ ಇಸ್ಲಾಮಿನಲ್ಲಿ ನಡೆದಿದೆಯೆ? ಅದಕ್ಕೆ ಧರ್ಮದಲ್ಲಿ ಅವಕಾಶವಿದೆಯೆ? ಮಹಿಳೆಯರು ಪ್ರಧಾನಿಗಳೋ ರಾಣಿಯರೋ ಆದುದು ಮಹಿಳೆಯರ ಸ್ಥಿತಿಗತಿ ಉತ್ತಮವಾಗಿದೆ ಎನ್ನಲು ಆಧಾರವಾದುದು ಅಚ್ಚರಿ. ವಾಸ್ತವವಾಗಿ ಮುಸ್ಲಿಮರು ಆಧುನಿಕ ಕಾಲಕ್ಕೆ ತಕ್ಕಂತೆ ಧಾರ್ಮಿಕವಾಗಿ ಬದಲಾಗಲು ಸಿದ್ಧವಿಲ್ಲದೇ ಇರುವುದೇ ನಮ್ಮಲ್ಲಿ ಹಲವು ರೀತಿಯ ಕೋಮು ಸಂಘರ್ಷಕ್ಕೆ ಕಾರಣವಾಗುತ್ತದೆ. ಯಾಕೆಂದರೆ ಆಧುನಿಕತೆಗೆ ತೆರೆದುಕೊಂಡ ಹಿಂದುಗಳು ಮತ್ತು ಮುಸ್ಲಿಮರು ಸಹಜವಾಗಿ ಮತ್ತು ಅಗತ್ಯವಾಗಿ ಮುಸ್ಲಿಮರೊಂದಿಗೆ ಸಹಬಾಳ್ವೆ ಮಾಡಬೇಕಾಗಿದೆ. ಪಬ್ಲಿಕ್ ಸ್ಪೇಸ್ ಗೆ ಮುಸ್ಲಿಮರು ಸ್ವಾಗತಾರ್ಹವಾಗಿಯೇ ಹೆಚ್ಚು ಹೆಚ್ಚು ಬರುತ್ತಿರುವಾಗ ಈ ವ್ಯತ್ಯಾಸ ಎದ್ದು ಕಾಣಲಾರಂಭಿಸುತ್ತಿದೆ. ಏಕದೇವೋಪಾಸನೆ ಎನ್ನುವುದು ಜಗತ್ತು ಮೆಚ್ಚಿದ ಆದರ್ಶವಾಗಿದ್ದುದು ಯಾವಾಗ ? ಹಳೆ ಕಾಲದ ಕತೆ ಇದು. ಈಗ ಬಹುತ್ವಕ್ಕೆ ಅವಕಾಶ ನೀಡಬೇಕೆನ್ನುವುದು ಎಲ್ಲ ಪ್ರಜ್ಞಾವಂತರ ಬಯಕೆ. ಸಹನೆ, ನೆರೆಯವರನ್ನು ಚೆನ್ನಾಗಿಟ್ಟಿರುವುದು ಎಲ್ಲ ನಿಜ. ಆದರೆ ಎಷ್ಟು ಇಸ್ಲಾಮ್ ರಾಷ್ಟ್ರಗಳಲ್ಲಿ ಉಪವಾಸದ ಮಾಸದಲ್ಲಿ ಇತರ ಧರ್ಮದವರು ತಮಗೆ ಹಸಿವಾದಾಗ ಬಹಿರಂಗವಾಗಿ ತಿನ್ನಲು (ಪಬ್ಲಿಕ್ಕಲ್ಲಿ ) ಅವಕಾಶವಿದೆ? ಇನ್ನು ಭಾರತದ ಬುದ್ಧಿಜೀವಿಗಳ ಮಾತನ್ನೇ ನೀವು ಯಥಾವತ್ತಾಗಿ ಹೇಳಿದ್ದೀರಿ, ಅದೇನೆಂದರೆ (೧) ಮುಸ್ಲಿಮರು ತಪ್ಪು ಮಾಡಿದರೆ ಅದು ಧರ್ಮದ ತಪ್ಪಲ್ಲ, ಬದಲಾಗಿ ಇಸ್ಲಾಮನ್ನು ತಪ್ಪಾಗಿ ಅನುಸರಿಸುವ ಮುಸ್ಲಿಮರ ತಪ್ಪು ಅಂತ ಒಂದು ವಾದ.(೨) ಮುಸ್ಲಿಮರು ತಪ್ಪು ಮಾಡಿದರೆ ಅವರು ತಮ್ಮ ಧರ್ಮಪ್ರಕಾರವಾಗಿ ನಡೆದುಕೋಂಡರು ಅವರದು ತಪ್ಪಿಲ್ಲ ಅಂತ ಎರಡನೇ ವಾದ. ಹಿಂದೊಮ್ಮೆ ಬೆಂಗಳೂರಿನ ಇಂಗ್ಲಿಶ್ ಪತ್ರಿಕೆಯಲ್ಲಿ ಪ್ರಕಟವಾದ ಕತೆ ಬಗ್ಗೆ ಮುಸ್ಲಿಮರು ಗಲಭೆ ಮಾಡಿದ್ದರ ಬಗ್ಗೆ ಇದೇ ಮಾತನ್ನು ಹೇಲಿದ್ದುಂಟು, ನಮ್ಮ ಸೋ ಕಾಲ್ಡ್ ಬುದ್ಧಿಜೀವಿಗಳು. ಇಷ್ಟೆಲ್ಲ ಹೇಳಿದರೂ ನೀವು ಒಬ್ಬ ಒಳ್ಳೆಯ ವ್ಯಕ್ತಿ ಎನ್ನುವುದು ನನಗೆ ನಿಮ್ಮ ಹಲವಾರು ಲೇಖನಗಳನ್ನು ಓದಿದಾಗ ಮನವರಿಕೆಯಾಗಿದೆ. ಶಾಂತಿ, ನೆಮ್ಮದಿಯ ಬಗೆಗಿನ ನಿಮ್ಮ ಕಾಳಜಿ ಕೂಡ ಪ್ರಶ್ನಾತೀತ. ಆದರೆ ಮೇಲಿನ ಲೇಖನದ ಥಾಟ್ಸ್ ಸೂಪರ್ಫಿಶಿಯಲ್ ಅಂತ ನನಗನ್ನಿಸಿತು, ಹೇಳಿದೆ, ಕ್ಷಮಿಸಿ.

ಇಸ್ಲಾಂ ಕುರಿತು ಮತ್ತೆ ತಿಳಿಯಬೇಕೆಂಬ ದಾಹದಿಂದ ನಿಮ್ಮ ಲೇಖನ ಓದಿದೆ. "ಧೈವಾಜ್ಞೆ" ಇಲ್ಲದಂತೆ, ಅದರ ಕಟ್ಟು ನಿಟ್ಟಿನ "ಆದೇಶ"ವಿಲ್ಲದಂತೆ ಇಸ್ಲಾಂ ಪಂಥವನ್ನು(ಧರ್ಮವನ್ನು) ಬರಿಯ ಪ್ರೀತಿಯಿಂದ ನೋಡಲು ಸಾಧ್ಯವೇ ಎಂಬ ಆಸೆ ಇನ್ನೂ ಈಡೇರಿಲ್ಲ. ಏಕೆಂದರೆ ಈಗ ನಾವೆಲ್ಲ ನಾಗರೀಕತೆಯಿಂದ ಹೆಚ್ಚು ಅನುಭವ - ಮಾಹಿತಿ ಪಡೆದಿದ್ದೇವೆ.(?..!!) ಅಥವ ಪ್ರಜಾತಾಂತ್ರಿಕ ಮನೋಭಾವವನ್ನು ಸ್ವೀಕರಿಸಿ ದೇವರಿಗೂ ಅಡಿಯಾಳಾಗದಂತೆ ಸ್ವಾಬಿಮಾನದಿಂದಲೇ ಎಲ್ಲರನ್ನು ಗೌರವದಿಂದ ಕಾಣುವ ಮನಸ್ಸನ್ನು ಬೆಳೆಸಿಕೊಳ್ಳುತ್ತಿದ್ದೇವೆ. ಹೀಗಿದ್ದಾಗ ಇವತ್ತಿನ ನಮ್ಮ ಸೂಕ್ಷ್ಮ ಮನಸ್ಸಿಗೆ ತಟ್ಟುವಂತೆ ಪಿಸುಮಾತಿನಲ್ಲಿ ಬದುಕಿನ ನೈತಿಕತೆಯನ್ನು ಕೇಳಿಸಿಕೊಳ್ಳಲು ಮನಸ್ಸು ಕಾತರಿಸಿಕೊಳ್ಳುತ್ತದೆ. ಹಾಗು ತಪ್ಪಿದ್ದಲ್ಲಿ ಪರಿವರ್ತನೆಯ ಉಪಾಯಗಳನ್ನು ಪಡೆಯಲು ಯಾಚಿಸಿಕೊಳ್ಳುತ್ತದೆ.( ಇಲ್ಲಿ ಭಯ ಅಥವ ಶಿಕ್ಷೆಯ ಪದಗಳಿಲ್ಲ) ಈ ನವ ಮನಸ್ಸುಗಳನ್ನು ಉದ್ದೇಶಿಸಲು ಇಸ್ಲಾಂ ಇನ್ಯಾವುದೇ ರೀತಿಯಲ್ಲಿ - ಅಥವ ಪರಿಭಾಷೆಯಲ್ಲಿ ಇತರ ನಂಬಿಕೆಯ ಜನರೊಂದಿಗೆ ಸಂವಾದ ನೆಡೆಸಲು ಪ್ರಯತ್ನಿಸಿದ್ದರೆ ದಯವಿಟ್ಟು ತಿಳಿಸಿ.

sreedhar, "ದೇವರಿಗೂ ಅಡಿಯಾಳಾಗದಂತೆ ಸ್ವಾಬಿಮಾನದಿಂದಲೇ ಎಲ್ಲರನ್ನು ಗೌರವದಿಂದ ಕಾಣುವ" – ಹರಿ, ಧರ್ಮಗಳ ಸಿದ್ಧಾಂತಗಳೇ ನಿಂತಿರುವುದು ದೇವರ ಅಸ್ತಿತ್ವವನ್ನು ಒಪ್ಪಿ, ಅವನ ಆದೇಶಗಳಿಗೆ ಅಡಿಯಾಳಾಗಿ ಬದುಕ ಬೇಕೆಂಬುದು. ಹೀಗಿರುವಾಗ ಧರ್ಮದಲ್ಲಿ ವಿಶ್ವಾಸ ಇಟ್ಟವನು ದೇವರಿಗೆ ಅಡಿಯಾಲಾಗಿಯೂ, ಸ್ವಾಭಿಮಾನಿಯಾಗಿಯೂ ಬದುಕಲು ಸಾಧ್ಯ ಎಂದು ನನ್ನ ಅಭಿಪ್ರಾಯ. ಇನ್ನು ಸೂಕ್ಸ್ಮ ಮನಸ್ಸಿಗೆ ತಟ್ಟುವಂಥ ಪಿಸುಮಾತುಗಳನ್ನು ಪವಿತ್ರ ಕುರಾನ್ ಗ್ರಂಥದಲ್ಲಿ ಕಾಣಬಹುದು, ಆದರೆ ನಮ್ಮ ಅರೆ ಬರೆ ಕಲಿತ ಮುಲ್ಲಾಗಳಿಗೆ ಧರ್ಮವನ್ನೂ ತಿಳಿಹೇಳುವ ನೈಪುಣ್ಯತೆ ಬಂದಿಲ್ಲ, ಕ್ರೈಸ್ತ ಗುರುಗಳಿಗೆ ಇರುವ ಥರ.

ಗಾಂಧೀಜಿ ಇದಕ್ಕೆ ಒಂದು ಉದಾಹರಣೆ...ಹೌದು. ದೇವರ ಮೇಲಿನ ಅವರ ಅಚಲ ನಂಬಿಕೆ ಮತ್ತು ಸ್ವಾಭಿಮಾನ ಇವರಲ್ಲಿ ಮೇಳೈಸಿತ್ತು....ಆದರೆ ಇವರು ದೇವರ ಮೂಲಕ ಧರ್ಮವನ್ನು ಪಡೆದವರು. ಧರ್ಮದ ಮೂಲಕ ದೇವರನ್ನು ಪಡೆದಾಗ ಮನುಶ್ಯ fanatic ಆಗಿಬಿಡುತ್ತಾನೋ ಏನೋ? ( ಸ್ವಗತದ ಮಾತು)

ಮಾನ್ಯರೆ , ಈ ನಿಮ್ಮ ಲೇಖನವನ್ನು ನಾನು ನಿಮ್ಮ " ಹಲೆಸೇತುವೆ " ಯಲ್ಲಿ ಓದಿದ್ದೆ , ನೀವು ಈ ಲೇಖನವನ್ನು ಇಲ್ಲಿ ಪ್ರಕಟಿಸದೆ ಇದ್ದರೆ ಒಳಿತಿತ್ತು.

ರಘು, ನಮಸ್ಕಾರಗಳು. ಸಂಪದದಲ್ಲಿ ಲೇಖನ ಪ್ರಕಟಿಸಿದ ನಂತರ ನಮ್ಮ ಬ್ಲಾಗ್ ನಲ್ಲೂ ಹಾಕಿ ಕೊಳ್ಳಬಹುದೇ ಎಂದು ಸಂಪದಿಗರಲ್ಲಿ ಒಮ್ಮೆ ಕೇಳಿದ್ದೆ. ಸಕಾರಾತ್ಮಕ ಅಭಿಪ್ರಾಯಗಳು ಬಂದವು, ಮಾತ್ರವಲ್ಲ ಬ್ಲಾಗ್ ಇರುವ ಬಹುತೇಕ ಎಲ್ಲಾ ಸಂಪದಿಗರೂ ಸಂಪದ ದಲ್ಲಿನ ತಮ್ಮ ಲೇಖನಗಳನ್ನು ತಮ್ಮ ಬ್ಲಾಗ್ ಗಳಲ್ಲೂ ಹಾಕಿ ಕೊಳ್ಳುತ್ತಿದ್ದಾರೆ.

ಹೌದು, ನೀವು ಹೇಳಿದ್ದು ನಿಜ ಪ್ರಸನ್ನ. ಆದರೆ ನಾನು ಮೊದಲು ಸಂಪದದಲ್ಲಿ ಹಾಕಿದ ನಂತರವೇ ನನ್ನ ಹಳೇ ಸೇತುವೆ ಗೆ ಪೋಸ್ಟ್ ಮಾಡೋದು. ಪ್ರತಿ ಬರಹಗಾರನಿಗೂ ತನ್ನ ಬರಹಗಳು ಗರಿಷ್ಠ ಸಂಖ್ಯೆಯ ಓದುಗರನ್ನು ತಲುಪಲಿ ಎನ್ನುವ ಆಸೆ ಇರುವುದು ಸಹಜವೇ.

ಹೌದು ಅಬ್ದುಲ್, ನನ್ನ ಬರಹಗಳು ಹೆಚ್ಚು ಜನಕ್ಕೆ ತಲುಪಬೇಕೆಂಬ ಕಾರಣಕ್ಕೆ ನಾನು ನನ್ನ ಬ್ಲಾಗಿಗಿಂತ ಸಂಪದಕ್ಕೆ ಹೆಚ್ಚು ಪ್ರಾಶಸ್ತ್ಯ ಕೊಡುತ್ತೇನೆ.

ರಘು, ಇಲ್ಲಿ ನಿಮ್ಮ ಅಭಿಪ್ರಾಯ ನನಗೆ ಸರಿ ಕಾಣಲಿಲ್ಲ. ಪ್ರತಿಯೊಬ್ಬ ಬರಹಗಾರನಿಗೂ ತನ್ನ ಬರಹವನ್ನು ತನಗಿಷ್ಟ ಬ೦ದಲ್ಲಿ ಪ್ರಕಟಿಸುವ ಅಧಿಕಾರವಿರುತ್ತದೆ. ತಮ್ಮ ವೈಯಕ್ತಿಕ ಬ್ಲಾಗಿನಲ್ಲಿ ಹಾಕಿದ ಲೇಖನವನ್ನು ಸ೦ಪದದಲ್ಲಿ ಹಾಕಿದರೆ ನನಗೇನೂ ತಪ್ಪು ಕಾಣಿಸಲಿಲ್ಲ. ಅ೦ತರ್ಜಾಲ ವಿಶ್ವವ್ಯಾಪಿ, ಅತಿ ಹೆಚ್ಚು ಜನರನ್ನು ಒ೦ದು ಬರಹ ತಲುಪಬೇಕಾದರೆ ಸಾಧ್ಯವಿರುವಲ್ಲೆಲ್ಲ ಪರಕಟಿಸುವುದು ಸೂಕ್ತ ಎ೦ದು ನನ್ನ ಅಭಿಪ್ರಾಯ.

ಪತ್ರಿಕೆಗಳಲ್ಲಿ ಪ್ರಕಟವಾದವುಗಳನ್ನೇ ಸಂಪದಿಗರು ಸಾರಾಸಗಟಾಗಿ ಇಲ್ಲಿ ಪ್ರಕಟಿಸುತ್ತಿರುವಾಗ, ಈ ಆಕ್ಷೇಪ ಅರ್ಥಹೀನವೆನಿಸುತ್ತದೆ. ನಿಮ್ಮ ಈ ಆಕ್ಷೇಪಣೆಗೆ ಕಾರಣವನ್ನೂ ನೀಡಬೇಕಲ್ಲಾ? ಸಂಪದದಲ್ಲಿ ಈ ನಿಟ್ಟಿನ ಯಾವುದೇ ನಿಯಮಗಳಿಲ್ಲ. ಒಟ್ಟಾರೆ, ಬಳಸುವ ಭಾಷೆ ಸಿರಿಗನ್ನಡವಾಗಿರಲಿ! ಸಂಪದ, ಸಿರಿಗನನ್ನಡ ಸಂಪದವಾಗಿಯೇ ಇರಲಿ! - ಆಸು ಹೆಗ್ಡೆ