ವಿಶ್ವದ ಅಂತಿಮ ನಿಗೂಢವೆಂಬ ದೈನಂದಿನ ತಲೆನೋವು -- ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆಃ ಭಾಗ ೨೩

To prevent automated spam submissions leave this field empty.


(೬೯)


     "ತರ್ಲೆ, ಮುಗ್ಧ ಉತ್ತರಗಳ ಆಚೆಗಿನ ಉತ್ತರ ಹೇಳು ಪ್ರಕ್ಷುಬ್ ದಾಃ ಬದುಕಿನ ಅರ್ಥ ಕೇಳುತ್ತಿಲ್ಲ, ನಾವು ಕೊಟ್ಟದ್ದೇ ಅದರ ಅರ್ಥ. ಕಲೆಯೂ ಹಾಗೆಯೇ. ಆದರೆ ಬದುಕಿನ, ವಿಶ್ವದ ನಿಗೂಢತೆ ಏನೆಂಬುದು ಮೊದಲ ಪ್ರಶ್ನೆ. ಇದು ನಿಗೂಢ ಏಕಾಯಿತು ಎಂಬುದು ತೀರ ಕುತೂಹಲದ ಪ್ರಶ್ನೆ."


     "ನೀನು ಕೇಳಿದ ಎಲ್ಲ ಪದಗಳನ್ನೂ ಬಳಸಿ ಹೇಳುತ್ತೇನೆ ಕೇಳು, ಅನಿಲ್ ಎಂಬ ಸಂಜಯ. ’ನನ್ನ ಆಚೆಗೆ ಉತ್ತರ ಬಯಸುವುದು ನಿಷಿದ್ಧವೆಂಬುದು ವಿಶ್ವದ ಮೊದಲ ನಿಯಮ. ಉದಾಹರಣೆಗೆ ಝೆನ್ ತತ್ವ. ’ನಾನು ಹೇಗೆ ಉತ್ತರ ಕಂಡುಕೊಳ್ಳುವುದು ಹೇಳಿ’ ಎಂದು ಇನ್ನೊಬ್ಬರೆದಿರು ಪ್ರಲಾಪಿಸುವುದರ ಮೂಲಕ ಆಗುವ ಸೈಡ್ ಎಫೆಕ್ಟ್ ಎಂದರೆ ಅಂತಹವರನ್ನು ಗುರುವನ್ನಾಗಿಸಿಬಿಡುತ್ತೇವೆ."


     "ಪ್ರಕ್ಷುಬ್, ತೀರ ಗಮನಿಸಿ ನೋಡಿದರೆ ವಿಶ್ವದ ಬಗ್ಗೆ ನಮ್ಮಲ್ಲಿ ಪ್ರಶ್ನೆ ಹುಟ್ಟುವುದುಃ ನಾವು ತೀರ ಆತಂಕಿತರಾಗಿರುವಾಗ ನಾವು ಸ್ವತಃ ವಿಶ್ವದ ಹಿಂದೆ ಬೀಳುತ್ತೇವೆ. ತೀರ ನಿರಾಳವಾಗಿರುವಾಗ ವಿಶ್ವವು ನಮ್ಮ ಹಿಂದೆ ಬೀಳುತ್ತದೆ!"


     "ಇದನ್ನು ಮೀರಿಯೂ ವಿಶ್ವದ ನಿಗೂಢಗಳ ಬಗ್ಗೆ ಆಸಕ್ತಿ ಇರಿಸಿಕೊಳ್ಳುವುದು ಮನಸ್ಸೆಂಬ ಮರ್ಕಟದ ಪರಿಣಾಮ. ನಮ್ಮ ಕುತೂಹಲವು ತಣಿಸದವರೆಗೂ ವಿಶ್ವವು ತನ ನಿಗೂಢತೆಯನ್ನು ಬಿಟ್ಟುಕೊಡದು. ಇದನ್ನು ಆಳವಾಗಿ ಯೋಚಿಸಿ ನೋಡು" ಎಂದೆ.


 (೭೦)


     ಇಷ್ಟು ಆಳವಾದ ಚರ್ಚೆಗಳನ್ನು ಕೇಳಿಯೇ ಕೆಲವರು ನಮ್ಮ ಪಕ್ಕ ಕುಳಿತವರು, ಎದ್ದು ಹೋಗುತ್ತಿದ್ದರು--ವಿಶ್ವವನ್ನೇ ತೊರೆದು ಹೋಗುವಷ್ಟು ಬೇಸರದಲ್ಲಿ. ಆಗಿನ್ನೂ ದೂರದರ್ಶನ, ಮೊಬೈಲುಗಳ ಏಕಾಂತತೆಯು ಭೂಮಿಯನ್ನು ಆಕ್ರಮಿಸಿರಲಿಲ್ಲವಾದ್ದರಿಂದ ಪ್ರಕ್ಷು ಆಗಾಗ ವಿಚಿತ್ರವಾಗಿ ಮಾತನಾಡುತ್ತಿದ್ದ.  


     "ಇಪ್ಪತ್ತೊಂದನೇ ಶತಮಾನದ ಮೊದಲ ಶತಮಾನವೆಂಬ ಜಾಗದಿಂದ ಕುಳಿತು ಈಗ ನಾನು ಇಲ್ಲಿ ಕುಳಿತಿರುವುದನ್ನು ಗಮನಿಸಿದರೆ, ಒಂದು ಆಶ್ಚರ್ಯವಾಗುವುದೆಂದರೆ, ಇಲ್ಲಿ ಈಗ ಹೇಗಪ್ಪಾ ಟಿವಿ ಮೊಬೈಲು ಇಲ್ಲದೆ ಇದ್ದೇವೆ ಎನ್ನಿಸುತ್ತಿದೆ" ಎಂದಿದ್ದ.


     "ಮೊಬೈಲು ಎಂದರೆ ಪೋಲೀಸರ ಹತ್ತಿರ ವಾಕಿ-ಟಾಕಿ ಇರುತ್ತದಲ್ಲ, ಅಂತಹದ್ದ?"


     "ಅದಕ್ಕಿಂತ ಸೂಕ್ಷ್ಮ, ಸಣ್ಣ, ತೆಳ್ಳಗೆ. ಬೊಜ್ಜು ಮೈಯವರು ಬೊಜ್ಜಿನ ಮಡಿಕೆಗಳಲ್ಲಿ ಅಡಗಿಸಿಡಬಹುದಾದಷ್ಟು ಪುಟ್ಟದಾದವು ಇನ್ನು ಇಪ್ಪತ್ತು ವರ್ಷವೆಂಬ ಜಾಗದಲ್ಲಿ ನನಗೆ ಕಾಣುತ್ತಿದೆ" ಎನ್ನುತ್ತಿದ್ದ. ಭವಿಷ್ಯ ನನಗೆ ಗೊತ್ತಿದೆ ಎಂಬ ಬೆದರಿಕೆಯನ್ನು ಯಾವಾಗಲೂ ಪ್ರಕ್ಷುಬ್ಧ ನನ್ನೆದಿರು ಒಡ್ಡುತ್ತಿದ್ದ.                                                             


     "ನಿನ್ನ ಭವಿಷ್ಯ ಹೇಳಲೆ ಅನಿಲ್?"


     "ಹ್ಞೂಂ. ನೀನು ಕೈವಾರ ತಾತಪ್ಪ, ನಾಸ್ಟ್ರಾಡಾಮಸ್ ನೋಡು." ಎಂದರೂ ಆತ ನನ್ನ ಭವಿಷ್ಯ ಹೇಳುವುದು ಬೇಡವಾಗಿತ್ತು ನನಗೆ. ನನ್ನ ಕುರಿತ ಕೆಲವು ಸಣ್ಣಪುಟ್ಟ ಭವಿಷ್ಯವೇ ನನ್ನನ್ನು ಗಾಭರಿಗೊಳಿಸಿತ್ತು. ಅಂತಹ ಒಂದು ಘಟನೆಃ ೧೯೭೭ರಲ್ಲಿ, ನಾನು ಮಲ್ಲೇಶ್ವರದ ಹಿಮಾಂಶು ಜ್ಯೋತಿ ಕಲಾ ಪೀಠದಲ್ಲಿ ಏಳನೇ ತರಗತಿ ಓದುತ್ತಿರುವಾಗ, ಒಂದು ದಿನ ಮಧ್ಯಾಹ್ನ ಊಟದ ಡಬ್ಬಿ ಮುಗಿಸಿ, ಅದನ್ನು ತೊಳೆಯಲು ಕೊಳಾಯಿಯ ಸಮೀಪ ಸಾಲಿನಲ್ಲಿ ನಿಂತಿರುವಾಗ, ಮಾಲತಿ ಮೇಡಂ ನಮ್ಮ ಹತ್ತಿರ ಬಂದು, "ಅನಿಲ್ ಕುಮಾರ್ ಯಾರು?" ಎಂದಿದ್ದರು.


"ಈ ವರ್ಷದ ಕನ್ನಡದ ನಾಟಕವೆಂದರಲ್ಲಿ ಪಾತ್ರವಹಿಸುತ್ತೀಯ?" ಎಂಬ ಪ್ರಶ್ನೆರೂಪದ ಆದೇಶ ನೀಡಿದ್ದರು.


"ಓಕೆ ಮೇಡಂ" ಎಂದಿದ್ದೆ.


     ಪ್ರಕ್ಷುಬ್ ದಾ ಈ ಘಟನೆಯನ್ನು ನನಗೆ ವಿವರಿಸಿದ್ದ, ಆ ಘಟನೆಯು ನಡೆದ ಹದಿನೈದು ವರ್ಷದ ನಂತರ ಆತನನ್ನು ಮೊದಲ ಸಲ ನಾನು ಭೇಟಿ ಮಾಡಿದ್ದು. ಪ್ರಕ್ಷು ಈ ಘಟನೆಯಲ್ಲಾದ ಮಾತುಕಥೆಯನ್ನೂ, ಕನ್ನಡದ ಡಯಲಾಗನ್ನೂ (ಬರದಿದ್ದರೂ), ಒಂದು ಪದವನ್ನೂ ಬಿಡದಂತೆ ಹೇಳಿದ್ದ.


     ಈ ಘಟನೆಯ ಪ್ರತಿಯೊಂದು ಪದವೂ ನನಗೂ ನೆನಪಿನಲ್ಲಿರಲು ಒಂದು ನಿರ್ದಿಷ್ಟ ಕಾರಣವಿತ್ತು. ಅದೂ ವಿಚಿತ್ರವಾಗಿತ್ತು. ಮಾಲಿನಿ ಮೇಡಂ ನನ್ನನ್ನು ಮಾತನಾಡಿಸುವ ಮುಂಚಿನ ದಿನರಾತ್ರಿಯ ಕನಸಿನಲ್ಲಿ ಆ ನಾಳಿನ ಘಟನೆಯ ಸಾದ್ಯಂತ ಕನಸು ಬಿದ್ದಿತ್ತು. ಕನಸಿನಲ್ಲಿ ಮಧ್ಯಾಹ್ನದ ಊಟ, ಮೇಡಂ ಜೊತೆ ಮಾತು ಎಲ್ಲವೂ ಯಥಾವತ್ತಾಗಿತ್ತು.


     ಆ ಕನಸಿನ ಸಮಗ್ರ ವಿವರವನ್ನೂ ಬಿಡಿಸಿ, ಬಿಡಿಸಿ ನನಗೇ ವಿವರಿಸಿದ್ದ ಪ್ರಕ್ಷು. ಅಂದಿನಿಂದ ಆತನೊಂದಿಗೆ ಈ ಭವಿಷ್ಯ, ಭೂತಕಾಲದ ವಿವರ ಕೇಳುವುದನ್ನು ಬಿಲ್ ಕುಲ್ ನಿಲ್ಲಿಸಿಬಿಟ್ಟಿದ್ದೆ.


     "ಒಂದು ನೆನಪಿಟ್ಟುಕೊ ಪ್ರಕ್ಷು. ಭವಿಷ್ಯವನ್ನು ತಿಳಿದರೂ ಅದನ್ನು ಬದಲಿಸಲಾಗದು. ಬದಲಿಸಲಾಗುವುದನ್ನು ಭವಿಷ್ಯವೆನ್ನಲಾಗದು. ನನ್ನ ಭೂತವನ್ನು ನೀನು ಹಿಡಿದಲ್ಲಿ ಅದು ನಿನ್ನ ನಿಗೂಢ ಶಕ್ತಿಯ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತದೆಯೇ ಹೊರತು ಸಂಬಂಧಗಳೂ ಕೆಡಬಹುದು. ಜನ ನಿನ್ನನ್ನು ಭವಿಷ್ಯ-ಭೂತ ಗೊತ್ತುಮಾಡಿಕೊಳ್ಳಲು ಈ ದಿಕ್ಸೂಚಿ ವಸ್ತುವಿನಂತೆ ಬಳಸಬಲ್ಲರೇ ಹೊರತು ಮನುಷ್ಯನೆಂದಲ್ಲ. ಆದಿಭೌತಿಕ ಶಕ್ತಿ ಆಕಸ್ಮಿಕವಾಗಿ ದೊರಕಿರುವವರ ಹಣೆಯಬರಹವೇ ಇಷ್ಟು. ಜ್ಞಾನ ಸಂಗ್ರಹ ಓಕೆ. ಆದರೆ ಜ್ಞಾನದ ಉತ್ಪತ್ತಿ ಅದರ ಸಂಗ್ರಹಕ್ಕಿಂತ ಎಂದಿಗೂ ಲೇಸು, ತಿಳಿದುಕೊ" ಎಂದಿದ್ದೆ, ಗಾಭರಿಯಿಂದ. ಪ್ರಕ್ಷು ಅರ್ಥಪೂರ್ಣವಾಗಿ ನಕ್ಕಿದ್ದ. ಅಂದಿನಿಂದ ಆತ ಒಬ್ಬ ಹಿರಿಯ ಗೆಳೆಯನಾಗಿ ಉಳಿದುಕೊಂಡನೇ ಹೊರತು ಮೋಕ್ಷಪಡೆದವನ ಸ್ಟಂಟ್‍ಗಳನ್ನೆಲ್ಲ ಮಾಡುತ್ತಿರಲಿಲ್ಲ!        


                                                                          (೭೧)


     ಭೂಮಿಯಾತೀತ ಪ್ರಶ್ನೆಗಳಿಂದ ಸುಸ್ತಾಗಿ ಹಾಸ್ಯದ ಕಡೆ ಗಮನ ಹರಿಸುತ್ತಿದ್ದೆವು. ’ಪಿಜೆಯಾತೀತ್’ ಎಂಬೊಂದು ಗುಂಪು ಮಾಡಿಕೊಂಡೆವು. ಇರುವ ಜೋಕ್‍ಗಳನ್ನು ಬೆಳೆಸುತ್ತ ಹೋಗುವುದು. ಅದಕ್ಕೂ ಒಂದು ಕಲಾಭವನಕ್ಕೇ ನಿರ್ದಿಷ್ಟವಾದ ಕಾರಣವೊಂದಿತ್ತು. ಯಾವುದೇ ಕಲಾಶಾಲೆಯಲ್ಲಿ ಓದಲು, ಬರೆಯಲು ಮತ್ತು ಮಾತನಾಡಲು ಬರುವವರ ಬಗ್ಗೆ ಒಂದು ಹೊಟ್ಟೆಕಿಚ್ಚಿರುತ್ತದೆ, ಬರದವರಿಗೆ. ಅದನ್ನು ಕೆಟ್ಟ ಓದು, ಬರಹ ಮತ್ತು ಹಲ್ಕ ಮಾತುಗಳಿಂದ ಅಂತಹವರು ವ್ಯಕ್ತಪಡಿಸುತ್ತಾರೆ.ಹಲ್ಕ ಎಂದರೆ ಲಘು ಎಂದರ್ಥ. ನೀವಂದುಕೊಂಡ ರೀತಿಯೂ ಹೌದು, ಬಿಡಿ.     ಹೀಗಿರುವಾಗ, ಪೈಂಟಿಂಗ್, ಶಿಲ್ಪ ಮತ್ತು ಗ್ರಾಫಿಕ್ ವಿಭಾಗದಿಂದ ಒಂದು ಗುಂಪು ಹುಡುಗಿಯರು ಯಾವಾಗಲೂ ನಮ್ಮ ಮುಖಭಂಗ ಮಾಡಲು ಕಾಯುತ್ತಿದ್ದರು--ಕಾರಣವೇನೂ ಇಲ್ಲದೆ. ತೀರ ಗಮನಿಸಿ ನೋಡಿಃ ಕಾರಣವೇನೂ ಇಲ್ಲದೇನೇ ಕೆಲವರು ನಿಮ್ಮನ್ನು ಆಜೀವಪರ್ಯಂತ ಇಷ್ಟಪಡುತ್ತಾರೆ ಅಥವ ದ್ವೇಷಿಸುತ್ತಾರೆ. ಅವರಿಗೆ ರಾಜ್ಕುಮಾರ್ ಇಷ್ಟವಿಲ್ಲದಿದರೆ, ಇಷ್ಟಪಡುವ ನಿಮ್ಮನ್ನು ಕಂಡರೆ ಸ್ವಲ್ಪ ಕಲ್ಲು ಎಡವಿದವರಂತಾಡುತ್ತಿರುತ್ತಾರೆ--ಮತ್ಯಾವುದೋ ರಕ್ತಸಂಬಂಧದ ಮೂಲಕ ಅಥವ ಸಿನೀಮೀಯವಾಗಿ ರಕ್ತದಾನದ ಆಸ್ಪತ್ರೆಯ ಪ್ರಸಂಗಗಳು ನಿಜಜೀವನದಲ್ಲಿ ಎದುರಾಗಿ, ನಿಮ್ಮನ್ನು ಕಂಡವರಾಗದವರನ್ನು ನಿಮ್ಮೊಂದಿಗೆ ಬೆಸೆಯುವವರೆಗೆ. ಅಷ್ಟೇ ಏಕೆ, ನಿಮ್ಮನ್ನೇ ಗಮನಿಸಿ ನೋಡಿಕೊಳ್ಳಿಃ ನೀವೂ ಯಾರೋ ತೀರ ಪಾಪದ ವ್ಯಕ್ತಿಯೊಬ್ಬರನ್ನ ಕಂಡರೆ ವಿನಾಕಾರಾಣ ಕಲ್ಲು ಎಡವುತ್ತಿರುವಂತೆ ಆಡುತ್ತಿರುತ್ತೀರ. ಕೆಲವೊಮ್ಮೆ ನಿಮ್ಮ ಮಿತ್ರರಿಗಿಂತಲೂ ಶತ್ರುಗಳು ಕಡಿಮೆ ಘಾಸಿಗೊಳಿಸಿರುತ್ತಾರೆ ನಿಮ್ಮನ್ನು. ಗೆಳೆಯರಾದರೋ, ಅವರ ಎಲ್ಲ ತಪ್ಪುಗಳನ್ನೂ ನೀವು ನಿರಂತರ ಕ್ಷಮಿಸುತ್ತಿರಬೇಕು. ಶತ್ರುಗಳು, ಪಾಪ, ಈ ಅರ್ಥದಲ್ಲಿ ನಿಮ್ಮ ನಿಜವಾದ ಮಿತ್ರರು!


     ಹೀಗೆ ಒಂದಿಡೀ ತಂಡವೇ ಇಂಟಲೆಕ್ಷುಯಲ್ ವರ್ಗವೊಂದನ್ನು ಅವಮಾನಿಸಲು ಅವಕಾಶಕ್ಕಾಗಿ ಕಾದುಕುಳಿತಿದ್ದರು. ಇದರ ಪರಿಣಾಮವಾಗಿ ಬುದ್ದಿಜೀವಿ ವಿದ್ಯಾರ್ಥಿಗಳಲ್ಲಿ ಹುಟ್ಟಿಕೊಂಡ ಪಂಥವೇ ’ಪಿಜೆಯಾತೀತ್’.//

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು