‘ಆಪರೇಷನ್ ಕಾಮನ್ ಕೋಬ್ರಾ’ ಯಶಸ್ವಿ! ಬದುಕುಳಿದ ‘ಗೋದಿ ನಾಗರ’.

To prevent automated spam submissions leave this field empty.

ಕೃಷಿ ವಿಶ್ವವಿದ್ಯಾಲಯ, ಧಾರವಾಡದ ಪಶು ವೈದ್ಯಕೀಯ ವಿಭಾಗದಲ್ಲಿ ಹಾವಿನ ಗಾಯಕ್ಕೆ ಹೊಲಿಗೆ ಹಾಕುವ ಮೂಲಕ ಚಿಕಿತ್ಸೆ ನೀಡುತ್ತಿರುವ ಡಾ. ಅನಿಲ ಪಾಟೀಲ ಹಾಗೂ ಪರಿಸರ ಪ್ರೇಮಿ, ಉರಗ ತಜ್ಞ ಪ್ರೊ. ಗಂಗಾಧರ ಕಲ್ಲೂರ. ಚಿತ್ರ: ಬಿ.ಎಂ. ಕೇದಾರನಾಥ.

 

ಧಾರವಾಡದ ಸತ್ತೂರ ಬಳಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ದಂತ ವೈದ್ಯಕೀಯ ಮಹಾವಿದ್ಯಾಲಯದ ಬಳಿ ಹಳೆಯ ಮನೆಯೊಂದರ ಸೌಂದರ್ಯೀಕರಣ ಕೆಲಸ ನಡೆದಿದೆ. ಮನೆಯ ಆಧಾರ ಖಂಬವೊಂದನ್ನು ಆಳು ಮಕ್ಕಳು ಒಡೆಯುವಾಗ ಆಯ ತಪ್ಪಿ ಸರಳಿಗೆ ಬಿತ್ತು. ಸರಳಿನ ಅಡಿಯಲ್ಲಿ ಗೋಧಿ ನಾಗರ ಹಾವು ಪ್ರಾಣ ಭಯದಿಂದ ಅಡಗಿ ಕುಳಿತಿತ್ತು. ಹಾರೆಯ ಪೆಟ್ಟು ನಾಗರ ಹಾವಿಗೂ ತಗುಲಿತು. ಹೆಡೆಯ ಕೆಳಗೆ ಗೋಣಿನ ಬಳಿ ಸುಮಾರು ಒಂದಿಂಚಿನಷ್ಟು ಗಾಯವಾಗಿ, ಹಾವು ನೋವು ತಾಳಲಾರದೇ ಬುಸುಗುಡುತ್ತ ಹೊರಳಾಡಲಾರಂಭಿಸಿತು.

 

ಕೆಲಸದಲ್ಲಿದ್ದ ಕೆಲವರು ನಾಗರ ಹಾವನ್ನು ಅರೆ ಜೀವ ಮಾಡಿ ಬಿಟ್ಟರೆ, ಅದು ಹತ್ತಾರು ವರ್ಷಗಳ ಕಾಲ ಸೇಡಿಟ್ಟುಕೊಂಡು ಹುಡುಕಿ ಬಂದು ಹಾರೆ ಏಟು ಹಾಕಿದವನನ್ನು ಕಚ್ಚಿ ಕೊಲ್ಲುತ್ತದೆ ಎಂದು ಹೆದರಿಸಲು ಮೊದಲು ಮಾಡಿದರು. ಅವರಲ್ಲಿ ಕೆಲವರು ಅದು  ಮೂಢನಂಬಿಕೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಹೀಗೆ ಥರಹೇವಾರಿ ಭಿನ್ನಾಭಿಪ್ರಾಯಗಳು ಹುಟ್ಟಿ ನೆರೆದವರೆಲ್ಲ ಪೇಚಾಟಕ್ಕೆ ಸಿಲುಕಿದರು. ಅಂತೂ ಧೈರ್ಯ ಮಾಡಿ ಪೆಟ್ಟು ತಿಂದ ನಾಗರಹಾವನ್ನು ಬುಟ್ಟಿಯೊಂದರಲ್ಲಿ ಬಂಧಿಸಿಟ್ಟು ‘ಚಿಂತಕರ ಚಾವಡಿ’ ಆರಂಭಿಸಿದರು. ಈ ಮಧ್ಯೆ ಸ್ಥಳಕ್ಕೆ ಆಗಮಿಸಿದ ಮನೆಯ ಮಾಲೀಕರು ಮಾನವೀಯತೆಯಿಂದ ವರ್ತಿಸಿ, ಉರುಗ ತಜ್ಞ ಪ್ರೊ. ಗಂಗಾಧರ ಕಲ್ಲೂರ ಅವರಿಗೆ ದೂರವಾಣಿ ಕರೆ ಮಾಡಿದರು.

 

ತಡ ಮಾಡದೇ, ಗೆಳೆಯ ಸುರೇಶ್ ಅವರೊಂದಿಗೆ ಸ್ಥಳಕ್ಕೆ ಧಾವಿಸಿದರು. ಹಾವಿಗೆ ಹಾರೆ ಎರೆದವನಿಗೆ ಸಾಂತ್ವನ ಹೇಳಿ, ವ್ಯಗ್ರಗೊಂಡಿದ್ದ ಹಾವನ್ನು ಎತ್ತಿಕೊಂಡು ತಡ ಮಾಡದೇ ಕೃಷಿ ವಿಶ್ವವಿದ್ಯಾಲಯದ ಪಶು ಚಿಕಿತ್ಸಾಲಯಕ್ಕೆ ಹೊತ್ತು ತಂದರು. ಆಪತ್ಪಾಂಧವ ಡಾ. ಅನಿಲ್ ಪಾಟೀಲ ಯಥಾ ರೀತಿ ಸರ್ವ ಸನ್ನದ್ಧ ಸ್ಥಿತಿಯಲ್ಲಿ ಹಾವಿಗೆ ಜೀವದಾನ ನೀಡಲು ತಯಾರಾಗಿದ್ದರು. ಕೇವಲ ಹತ್ತು ನಿಮಿಷದಲ್ಲಿ ಪ್ರೊ. ಕಲ್ಲೂರ ಅವರ ಸಹಾಯ ಪಡೆದು ಗಾಯವನ್ನು ತೊಳೆದು, ಮುಲಾಮು ಸವರಿದರು.  ಹಾವಿಗೆ ಹೆಚ್ಚು ನೋವಾಗದಂತೆ ಸ್ಥಳೀಯವಾಗಿ ಅರವಳಿಕೆ ಚುಚ್ಚುಮದ್ದು ನೀಡಿ ಚಕಚಕನೇ ೬ ಹೊಲಿಗೆ ಹಾಕಿದರು. ಬಸವಳಿದಿದ್ದ ಹಾವು  ಪ್ರತಿಭಟನೆ ತೋರದೇ ‘ಆಪರೇಷನ್ ಟೇಬಲ್’ ಮೇಲೆ ಹಾಯಾಗಿ ಮಲಗಿತ್ತು!

 

 

ಗಾಯಗೊಂಡ ನಾಗರ ಹಾವಿಗೆ ಹೊಲಿಗೆ ಹಾಕುವ ಮುನ್ನ ‘ಲೋಕಲ್ ಅನಸ್ತೇಷಿಯಾ’ ಕೊಡುತ್ತಿರುವ ಡಾ. ಅನಿಲ್ ಪಾಟೀಲ; ಸಹಕಾರ ಪ್ರೊ. ಗಂಗಾಧರ ಕಲ್ಲೂರ. ಚಿತ್ರ: ಬಿ.ಎಂ.ಕೇದಾರನಾಥ.

 

ಗೋದಿ ನಾಗರ ‘Common Cobra' ಎಂದು ಕರೆಯಿಸಿಕೊಳ್ಳುವ ಈ ಹಾವು ಸಾಮಾನ್ಯವಾಗಿ ಉಷ್ಣ ಪ್ರದೇಶದಲ್ಲಿ ಹೆಚ್ಚು ಕಾಣಸಿಗುತ್ತದೆ. ಆದಷ್ಟು ತಂಪಾದ ನೆರಳಿನಲ್ಲಿ ವಾಸಿಸಲು ಇಷ್ಟಪಡುವ ಹಾವು ಇದು.  ದಟ್ಟವಾದ ಅರಣ್ಯವಂತೂ ಅವುಗಳ ವಾಸಸ್ಥಾನಕ್ಕೆ ಹೇಳಿ ಮಾಡಿಸಿದ ಜಾಗ. ಹಾವುಗಳಲ್ಲೇ ಅತ್ಯಂತ ಸುಂದರ ಹಾಗೂ ಚರ್ಮೋದ್ಯಮದಲ್ಲಿ ಹೆಚ್ಚು ಬೇಡಿಕೆ ಇರುವ ಹಾವು ಇದು. 

 

ಬಯಲು ಪ್ರದೇಶ, ತೋಟ ಪಟ್ಟಿ, ಸೌದೆ ಬಣಿವೆಗಳು, ಬಚ್ಚಲು ಮೋರೆ, ಗೋಡೆಗಳ ಬಿರುಕು, ಪಾಳುಬಿದ್ದ ಹಗೆಗಳು, ಇಲಿಗಳ ಬಿಲಗಳು, ಹಳೆ ಗೋರಿಗಳು, ಹಾಳು ಬಿದ್ದ ಗುಡಿ-ಗುಂಡಾರಗಳು, ಹಾಳು-ಹುತ್ತಗಳು, ಸೊಪ್ಪು-ಸೌದೆಗಳಿಂದಾದ ಗುಡಿಸಲುಗಳ ಛಾವಣಿ, ಹುಲ್ಲು ಬಣಿವೆ, ಮರದ ಡೊಗರುಗಳಲ್ಲಿ ಗೋದಿ ನಾಗರ ಹೆಚ್ಚಾಗಿ ವಾಸಿಸುತ್ತವೆ. ಹಾಗೆಯೇ, ಪಕ್ಷಿಗಳಲ್ಲಿಯ ಗೂಡುಗಳಲ್ಲಿಯ ತತ್ತಿ, ಮರಿಗಳ ಅನ್ವೇಷಣೆಗಾಗಿ ಮರಗಳನ್ನು ಏರಬಲ್ಲುದಲ್ಲದೇ, ನೀರಿನಲ್ಲಿಯೂ ಲೀಲಾಜಾಲವಾಗಿ ಏರಬಲ್ಲುದು.

 

ಡಾ. ಅನಿಲ ಪಾಟೀಲ ಹಾಗೂ ಪ್ರೊ. ಗಂಗಾಧರ ಕಲ್ಲೂರ ಗಾಯಗೊಂಡ ಗೋದಿ ನಾಗರ ಹಾವಿನ ಚಿಕಿತ್ಸೆಯಲ್ಲಿ ತೊಡಗಿರುವುದು.

 

ಐದರಿಂದ ಆರು ಅಡಿಗಳ ವರೆಗೆ ಬೆಳೆಯ ಬಲ್ಲ ಗೋದಿ ನಾಗರವನ್ನು ಹೆಡೆಯ ದೆಸೆಯಿಂದ ಸುಲಭವಾಗಿ ಗುರುತಿಸಬಹುದು. ಕುತ್ತಿಗೆಯಿಂದ ಆರಂಭವಾಗುವ ಹೆಡೆಯ ಹಿಂದೆ ಕನ್ನಡಕದ ಮಾದರಿಯಲ್ಲಿ ‘ಪದ್ಮಪಾದ’ ಮೂಡಿರುತ್ತದೆ. ಅದು ಇಂಗ್ಲೀಷ ‘v’ ಅಕ್ಷರ ಹೋಲುವುದರಿಂದ ‘V Shaped Spectacle Marked Common Cobra’ ಎಂದು ಸಹ ತಜ್ಞರು ದಾಖಲಿಸುತ್ತಾರೆ. ಕೆಲ ಗೋದಿ ನಾಗರಗಳಿಗೆ ಹೆಡೆಯ ಮೇಲೆ ವೃತ್ತಾಕಾರದ ಗುರುತು ಮಾತ್ರವಿದ್ದು, ಮಧ್ಯದಲ್ಲಿ ಕರಿ ಚುಕ್ಕೆಗಳಿರುತ್ತವೆ. ಈ ಹಾವಿಗೆ ‘ಬಂಗಾಲ ನಾಗರ’ ಎಂದು ಸಹ ಕರೆಯುತ್ತಾರೆ. ಪಶ್ಚಿಮ ಬಂಗಾಳ ಪ್ರಾಂತದಲ್ಲಿ ಇಂತಹ ಹಾವುಗಳು ಹೆಚ್ಚಾಗಿ ಕಾಣಸಿಗುತ್ತವೆ. ಕಚ್ಛ್, ರಾಜಸ್ಥಾನ್. ಕಾಠೇವಾಡ ಮತ್ತು ಮಧ್ಯ ಪ್ರದೇಶದಲ್ಲಿ ಕಾಣ ಸಿಗುವ ಗೋದಿ ನಾಗರದ ಹೆಡೆಯ ಮೇಲೆ ಮತ್ತು ಹಿಂದೆ ಯಾವ ಗುರುತೂ ಕಾಣ ಸಿಗುವುದಿಲ್ಲ.

 

ಗೋದಿ ನಾಗರ ಸರ್ಪದ ಮೈಮೇಲೆ ಅಗಲವಾದ ಮತ್ತು ಚಪ್ಪಟೆಯಾದ ಫಲಕಗಳಿರುತ್ತವೆ. ಶಿರದ ಮೇಲೆ ಶಿರಫಲಕ ‘Head Shields’ ಸಹ ಇವುಗಳಿಗೆ ಮೆರಗು ತಂದಿದೆ. ಮೇಲ್ದವಡೆಯ ಅಂಚಿನಲ್ಲಿರುವ ಮೂರನೇ ಫಲಕ ‘Third Supra Labial Shields’ ಮೂಗಿನ ಹೊಳ್ಳೆಗಳು ಮತ್ತು ಕಣ್ಣುಗಳ ನಡುವಿನ ಕ್ಷೇತ್ರವನ್ನು ಆವರಿಸಿರುತ್ತದೆ. ಕೆಲ ಉರಗ ತಜ್ಞರು ಇದನ್ನು ‘ಕವಚ’ ಎಂದು ಸಹ ಕರೆದಿದ್ದಾರೆ. ಕುತ್ತಿಗೆಯ ಕೆಳಗೆ ಎರಡು ಅಥವಾ ಮೂರು ಕಪ್ಪಾದ ‘ಉದರ ಫಲಕಗಳು’ ‘Belly Shields’ ಇದ್ದು, ಈ ಫಲಕಗಳ ಆಧಾರದ ಮೇಲೆ ಕಚ್ಚಿಸಿಕೊಂಡ ವ್ಯಕ್ತಿಯ ಸಾವಿನ ಘಳಿಗೆಗಳಿಗೆ ಹೋಲಿಸುವ ಪರಿಪಾಠ ನಮ್ಮ ಗ್ರಾಮೀಣ ಪ್ರದೇಶದಲ್ಲಿದೆ. ಅರ್ಥಾತ್ ಎರಡು ಫಲಕಗಳ ಹಾವು ಕಚ್ಚಿದರೆ ಎರಡು ಘಳಿಗೆಯಲ್ಲಿ ಅಥವಾ ಮೂರು ಫಲಕಗಳುಳ್ಳ ಹಾವು ಕಚ್ಚಿದರೆ ಮೂರು ಘಳಿಗೆಯಲ್ಲಿ ಸಾವು ಸಂಭವಿಸುತ್ತದೆ ಎಂಬ ಲೆಕ್ಕಾಚಾರ ನಮ್ಮ ಜನರದ್ದು.

 

ಡಾ. ಅನಿಲ ಪಾಟೀಲ ಕಾಳಜಿಯಿಂದ ಆರೂ ಹೊಲಿಗೆಗಳನ್ನು ಹಾಕಿ ಔಷಧ ಸಿಂಪಡಿಸಿದಾಗ ಗೋಧಿ ನಾಗರ ನಿರಾಳವಾಗಿರುವುದು.

 

ಆದರೆ ಇದು ಮೂಢನಂಬಿಕೆ ಎನ್ನುತ್ತಾರೆ ಪ್ರಾಣಿ ಶಾಸ್ತ್ರಜ್ಞ ಪ್ರೊ. ಎನ್.ಟಿ. ಮೋಟೆಬೆನ್ನೂರ. ಹಾವು ಕಚ್ಚಿಸಿಕೊಂಡ ವ್ಯಕ್ತಿಯ ಸಾವು-ಬದುಕು ತೀರ್ಮಾನವಾಗುವುದು ಕಚ್ಚಿದ ಹಾವು ಮತ್ತು ಅದು ಹರಿಬಿಟ್ಟ ವಿಷದ ಪ್ರಮಾಣದ ಮೇಲೆ ಅವಲಂಬಿತವಾಗಿರುತ್ತದೆ; ಸಾಕಷ್ಟು ಸಂದರ್ಭಗಳಲ್ಲಿ ಹಾವು ಕಚ್ಚಿಸಿಕೊಂಡ ವ್ಯಕ್ತಿ ವಿಷದ ಬದಲಾಗಿ ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪುತ್ತಾನೆ. ಈ ಕುರಿತಂತೆ ಜಾಗೃತಿ ಮೂಡಿಸುವ, ಪ್ರಥಮ ಚಿಕಿತ್ಸೆ ನೀಡಿ ಉಪಚರಿಸುವ ವಿಧಾನಗಳನ್ನು ಕಲಿಸಿಕೊಡುವ ಅವಶ್ಯಕತೆ ಇದೆ ಎಂದು ಅವರು ಅಭಿಪ್ರಾಯ ಪಡುತ್ತಾರೆ.

 

ಸಾಮಾನ್ಯವಾಗಿ ಗೋದಿ ನಾಗರ ಸೇರಿದಂತೆ ಯಾವುದೇ ಪ್ರಜಾತಿಯ ಹಾವುಗಳು ಸುಖಾಸುಮ್ಮನೆ ಯಾರನ್ನೂ ಕಚ್ಚುವುದಿಲ್ಲ. ಕಚ್ಚಿದರೂ ಸಾಯ ಹೊಡೆಯುವ ಪ್ರಮಾಣದಲ್ಲಿ ವಿಷ ಕಕ್ಕುವುದಿಲ್ಲ. ಕೇವಲ ತಮ್ಮ ಆತ್ಮರಕ್ಷಣೆಗಾಗಿ ಅವು ಆಕ್ರಮಣ ಮಾಡುತ್ತವೆ. ಸಾಲದ್ದಕ್ಕೆ, ಆದಷ್ಟು ಮನುಷ್ಯರಿಂದ ದೂರ, ಕಣ್ಮರೆಯಾಗಿ ಬದುಕಲು ಹವಣಿಸುತ್ತವೆ. ಅನಿವಾರ್ಯವಾಗಿ ಮನುಷ್ಯರೊಂದಿಗೆ ಸಂಘರ್ಷಕ್ಕೆ ಇಳಿಯುವ ಪ್ರಸಂಗ ಎದುರಾದರೆ ಹೆಡೆಯೆತ್ತಿ, ಭುಸುಗುಟ್ಟಿ ಹೆದರಿಸುತ್ತವೆ. ಈ ಹಂತದಲ್ಲಿ ‘ವಿಚಾರವಂತ ಮಾನವ’ ತುಸು ದೂರ ನಿಂತರೆ ತಾನೇ ಹೆಡೆ ಇಳಿಸಿ, ವೇಗವಾಗಿ ಸಮೀಪದ ಪೊದೆಗಳಿಗೆ ಹಾವು ಹೊಕ್ಕುತ್ತದೆ. ಮನುಷ್ಯ  ಕೆಲ ಬಾರಿ ‘ಜಾಣತನ’ ವೆಂಬಂತೆ ‘ಹುಂಬತನ’ ಪ್ರದರ್ಶಿಸಲು ಮುಂದಾದಾಗಲೂ, ಹಾವುಗಳು ಹೆಡೆ ಯೆತ್ತಿ ನೆಲಕ್ಕೆ ಹೊಡೆದು, ಕಚ್ಚಿಯೇ ಬಿಡುವೆ ಎಂದು ‘ಧಮಕಿ’ ತೆರೆದಿ ಸಿಟ್ಟು ಪ್ರದರ್ಶಿಸಿ ದೇಹ ಉಬ್ಬಿಸಿ ನಿಲ್ಲುತ್ತವೆ. ಆಗಲೂ ನಾವು ಬಂಧಿಸಲು ಮುಂದಾದರೆ ಅವು ಪ್ರಾಣರಕ್ಷಣೆಗಾಗಿ ಅನಿವಾರ್ಯವಾಗಿ ದಾಳಿ ಮಾಡುತ್ತವೆ.

 

ಗೋದಿ ನಾಗರವನ್ನು ಬದುಕಿಸಿದ ಖುಷಿಯಲ್ಲಿ ಪ್ರೊ. ಗಂಗಾಧರ ಕಲ್ಲೂರ ಹಾಗೂ ಡಾ. ಅನಿಲ ಪಾಟೀಲ. 

 

ಇತ್ತೀಚೆಗೆ ನಾನು ‘Biology Letters’ ಜರ್ನಲ್ ಓದುತ್ತಿದ್ದಾಗ ಆಘಾತಕಾರಿ ಸುದ್ದಿ ಗಮನಕ್ಕೆ ಬಂತು. ಉರಗ ತಜ್ಞರು ಸುಮಾರು ೮ ಪ್ರಜಾತಿಗಳಿಗೆ ಸೇರಿದ ೧೭ ಬಗೆಯ ಉರಗ ಸಂತತಿಯ ಗಣತಿ ಕೈಗೊಂಡಿದ್ದರು. ಕಳೆದ ಒಂದು ದಶಕಕ್ಕೆ ಹೋಲಿಸಿದರೆ ಅವುಗಳ ಸಂತತಿಯಲ್ಲಿ ಗರಿಷ್ಠ ಪ್ರಮಾಣದ ಇಳಿಕೆ ಕಂಡುಬಂದಿದೆ. ಅವುಗಳಲ್ಲಿ ೧೦ ಪ್ರಜಾತಿಯ ಹಾವುಗಳಲ್ಲಿ ೯೦% ಇಳಿಕೆ ಕಂಡುಬಂದಿದೆ. ಇದು ಆತಂಕದ ವಿಷಯ ಎಂದು ಜರ್ನಲ್ ಉಲ್ಲೇಖಿಸಿದೆ.

 

ಜತೆಗೆ ಉರಗ ಸಂತತಿಯ ಗಣತಿ ತೀರ ಸಂಕೀರ್ಣವಾಗಿದ್ದು, ಕ್ಲಿಷ್ಠ ರೀತಿಯಿಂದ ಕೂಡಿದೆ. ಉರಗಗಳಿಗೆ ರೇಡಿಯೋ ಕಾಲರ್ ಅಳವಡಿಸುವ, ದೇಹದ ಬುಡದಲ್ಲಿ ಚಿಪ್ ತೂರಿಸುವ, ಋತುಮಾನಕ್ಕೆ ತಕ್ಕಂತೆ ಅವು ಬದಲಾಯಿಸುವ ಪರಿಸರ-ಪ್ರದೇಶಗಳಿಗೆ ತೆರಳಿ ಅಧ್ಯಯನ ನಡೆಸುವ ಅನಿವಾರ್ಯತೆಗಳು, ಪ್ರತಿ ವರ್ಷ ಸತತವಾಗಿ ‘ಟ್ರ್ಯಾಕ್ ರೆಕಾರ್ಡ್’ ಇಟ್ಟುಕೊಳ್ಳಬೇಕಾದ ಪರಿಸ್ಥಿತಿಗಳು ಉರಗಗಳ ಕುರಿತ ಅಧ್ಯಯನವನ್ನು ನೆನೆಗುದಿಗೆ ಕೆಡವಿದೆ. ಉರಗಗಳ ಸಂತತಿಯಲ್ಲಿನ ಏರುಪೇರು ಜೀವಿವೈವಿಧ್ಯ ಹಾಗೂ ಆಹಾರ ಸರಪಳಿಗೆ ಮಾರಕವಾಗುವ ಸಾಧ್ಯತೆಗಳಿದ್ದು, ಅವುಗಳಿಗೂ ಸಂರಕ್ಷಿತ ಪ್ರಯೋಗಾಲಯಗಳನ್ನು ಸ್ಥಾಪಿಸಿ, ಸಂತಾನೋತ್ಪತ್ತಿ ಮಾಡಿ, ಸ್ವತಂತ್ರಗೊಳಿಸುವ ಪ್ರಯೋಗಗಳಿಗೆ ಇಳಿಯಬೇಕಾಗಬಹುದು ಎಂದು  ತಜ್ಞರು ಎಚ್ಚರಿಸಿದ್ದಾರೆ. ಜತೆಗೆ ಇದು ೧೯೯೮ ರಿಂದ ನಿರಂತರವಾಗಿ ಏರುತ್ತ ಹೋದ ಜಾಗತಿಕ ತಾಪಮಾನದ ಪ್ರಭಾವವೋ? ‘ಅಲ್ ನಿನೋ’ ಮುಂತಾದ ಪ್ರಕೃತಿ ವಿಕೋಪ, ಚಂಡಮಾರುತಗಳ ಪ್ರಕೋಪ ಪ್ರಭಾವವೋ?  ಎಂದು ಅನ್ವೇಷಿಸಲು ಉರಗ ಶಾಸ್ತ್ರಜ್ಞರು ಸಂಶೋಧನೆಯಲ್ಲಿ ತೊಡಗಿದ್ದಾರೆ.

 

 

ಬದುಕುಳಿದ ಗೋದಿ ನಾಗರದೊಂದಿಗೆ ಕೆರೆ ಹಾವು..ಬದುಕಿಸಿದ ಧನ್ಯತೆಯಲ್ಲಿ ಪ್ರೊ. ಕಲ್ಲೂರ, ಡಾ. ಪಾಟೀಲ ಹಾಗೂ ಸಿಬ್ಬಂದಿ. ಚಿತ್ರ: ಬಿ.ಎಂ.ಕೇದಾರನಾಥ.

 

ಈ ಪರಿಯ ಸೊಬಗಿರುವ ಗೋದಿ ನಾಗರವನ್ನು ರಕ್ಷಿಸಿ, ಊಟ ನೀಡಿ ಉಪಚರಿಸಿದ ತಂಡ ಇನ್ನೆರಡು ದಿನಗಳಲ್ಲಿ ಅದು ಚೇತರಿಸಿಕೊಳ್ಳುವ ಭರವಸೆ ನೀಡಿದ್ದಾರೆ. ಸದ್ಯ ಕೃಷಿ ವಿಶ್ವ ವಿದ್ಯಾಲಯದ ಪಶು ಚಿಕಿತ್ಸಾಲಯದ ಪಂಜರವೊಂದರಲ್ಲಿ ಬಂಧಿಯಾಗಿ ಅದು ಚಿಕಿತ್ಸೆಗೆ ಸ್ಪಂದಿಸುತ್ತಿದೆ. ಶನಿವಾರದ ವೇಳೆಗೆ ಗಾಯ ಮಾಯಲಿದ್ದು, ಪ್ರೊ. ಗಂಗಾಧರ ಕಲ್ಲೂರ್ ಮಿತ್ರ ಸುರೇಶ ಅವರೊಂದಿಗೆ, ಕರ್ನಾಟಕ ವಿಶ್ವವಿದ್ಯಾಲಯದ ಆವರಣದಲ್ಲಿ ಅದನ್ನು ಬಿಡುಗಡೆಗೊಳಿಸಲಿದ್ದಾರೆ. ಮಾನವೀಯತೆ ಮೆರೆದ ಈ ಪರಿಸರ ಮಿತ್ರರಿಗೆ ಅಭಿನಂದನೆಗಳು.

 

 

 

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಹಾವು ಕಂಡೊಡನೆ ಬೆಚ್ಚಿ ಬಿದ್ದು ಹಿಡಿ, ಬಡಿ, ಹೊಡಿ, ಕೊಲ್ಲುಗಳನ್ನೇ ಮಾಡುವ ಮಾನವನಿ೦ದ ಕಚ್ಚಿ ಕೊಲ್ಲುವ ಹಾವಿಗೆ ಉಪಚಾರವೇ? ಹರ್ಷವರ್ಧನರೆ, ನಿಮೆಲ್ಲ ಲೇಖನಗಳನ್ನೂ ಓದುತ್ತಾ ಬ೦ದಿದ್ದೇನೆ. ಇದು ಬಹುಶಃ ನಿಮ್ಮ ಲೇಖನಗಳಿಗೆಲ್ಲ ಮುಕುಟಪ್ರಾಯವಾಗಿದೆ.

ಆತ್ಮೀಯ ಸರ್, ನೀವು ಪ್ರೀತಿಯಿಂದ ಓದಿ ಹೀಗೆ ಪ್ರತಿಕ್ರಿಯಿಸುತ್ತಿರುವುದರಿಂದ ನಾನು ಈ ಕೆಲಸ ಮುಂದುವರೆಸುವುದು ಸಾಧ್ಯವಾಗಿದೆ. ತಮ್ಮ ಅನಿಸಿಕೆ ನನಗೆ ಪ್ರೋತ್ಸಾಹ ನೀಡಿದೆ. ತಮಗೆ ಧನ್ಯವಾದ.

ಹರ್ಷವರ್ಧನ್, ನಿಮ್ಮ ಬರವಣಿಗೆಯ ಶೈಲಿ ತುಂಬಾ ಇಷ್ಟವಾಗುತ್ತದೆ. ಹಾಗಾಗಿ ನಿಮ್ಮೆಲ್ಲಾ ಲೇಖನಗಳೂ ಓದಿಸಿಕೊಂಡು ಹೋಗುತ್ತವೆ. ಲೇಖನಗಳಿಗೆ ಆಸುಮನ ಸ್ಪಂದಿಸಿದರೂ, ವಿಶೇಷವಾದ ಪ್ರತಿಕ್ರಿಯೆಗಳು ಅಲ್ಲಿ ಮೂಡದಿರುವುದರಿಂದ, ಬರೀ "ಚೆನ್ನಾಗಿದೆ, ಧನ್ಯವಾದಗಳು" ಎನ್ನುವ ಔಪಚಾರಿಕವಾದ (ನಿಮಗೆ ಗೊತ್ತೇ ಇರುವ :) ) ಮಾತುಗಳನ್ನು ಬರೆಯುವುದಕ್ಕೆ ಹಿಂಜರಿಯುತ್ತಿರುತ್ತೇನೆ. ಕಲ್ಲ ನಾಗರನಿಗೆ ಹಾಲೆರೆದು ಸಂತೈಸಿ ಪೂಜಿಸುವ ಮಂದಿಗಿಂತ, ಪೆಟ್ಟಾದ ಹಾವಿನ ಆರೈಕೆಮಾಡಿ ಮಾನವೀಯತೆ ಮೆರೆದ ಈ ಮಂದಿಗೆ ತಲೆಬಾಗಿ ವಂದಿಸುತ್ತೇನೆ, ಅಂತೆಯೇ, ಈ ಸಮಾಚಾರವನ್ನು ನಮ್ಮೊಂದಿಗೆ ಹಂಚಿಕೊಂಡ ನಿಮಗೂ ಕೂಡ. - ಆಸು ಹೆಗ್ಡೆ

ಆತ್ಮೀಯ ಆಸು ಹೆಗಡೆ ಸರ್, ನಿಮ್ಮ ಹಾರೈಕೆಯ ಶ್ರೇಯ ಸಲ್ಲಬೇಕಾಗಿದ್ದು ನನ್ನ ವಿದ್ಯಾಗುರುಗಳಾದ ಪ್ರೊ.ಡಾ. ಎ.ಎಸ್. ಬಾಲಸುಬ್ರಮಣ್ಯ ಹಾಗೂ ವೃತ್ತಿಗುರುಗಳಾದ ಬಕ್ಕೇಮನೆ ನಾಗೇಶ ಹೆಗಡೆ ಅವರಿಗೆ. ಅವರಿಂದ ಕಲಿತ ಪಟ್ಟುಗಳನ್ನು ಇಲ್ಲಿ ಪ್ರಯೋಗಿಸುತ್ತಿದ್ದೇನೆ. ತಾವು ಓದಿ, ಖುಷಿ ಪಟ್ಟು, ಬೆನ್ನು ತಟ್ಟಿ ಪ್ರತಿಕ್ರಿಯೆ ಬರೆಯುವುದು ನನ್ನಲ್ಲಿ ಚೇತನ ಮೂಡಿಸಿದೆ. ತಮಗೆ ಧನ್ಯವಾದಗಳು.

ಆತ್ಮೀಯ ಸುರೇಶ್ ಅವರೆ, ನೀವು ಗುರುತಿಸಿದ್ದು ಸರಿ. ಆ ಇನ್ನೊಂದು ಹಾವಿನ ಬಗ್ಗೆ ಮುಂದೆ ಬರೆಯುತ್ತೇನೆ. ಗೋದಿ ನಾಗರ ಹಾವಿನ ಆಪರೇಶನ್ ನಡೆಯುತ್ತಿದ್ದಾಗ ಆಕಸ್ಮಿಕವಾಗಿ ಅದೂ ಕೂಡ (ಕೆರೆ ಹಾವು) ಉಣ್ಣೆ ಕಚ್ಚಿಸಿಕೊಂಡು ಅಲ್ಲಿಗೆ ಬಂದಿತ್ತು. ತಮ್ಮ ಪ್ರತಿಕ್ರಿಯೆಗೆ ಧನ್ಯವಾದ.

ಉರಗ ಸಂತತಿಯ ರಕ್ಷಣೆಯಾಗಬೇಕಿದೆ, ಈ ವಿಷಯದಲ್ಲಿ ನಾವೆಲ್ಲರೂ ಜಾಗೃತರಾಗಬೇಕು... ಮತ್ತೊಂದು ಉತ್ತಮ ಬರಹ... ಧನ್ಯವಾದಗಳು ಹರ್ಷರವರೆ.

ನಿಜವಾಗಿಯೂ ಪ್ರಾಣಿ/ಪಕ್ಷಿ ಸಂತತಿ ಬಗ್ಗೆ ಇರುವ ಕಳಕಳಿ ಮತ್ತು ಅವುಗಳ ರಕ್ಷಣೆಗೆ ಮಾಡುವ ಪ್ರತಿ ಕೆಲಸವೂ ಪ್ರಶಂಸಾರ್ಹ. ನಿಮ್ಮ ಲೇಖನಗಳಲ್ಲಿ ಪ್ರಾಣಿ ಜೀವನದ ಬಗ್ಗೆ ಉತ್ತಮ ಮಾಹಿತಿ ಇರುತ್ತದೆ .

ಅತ್ಮೀಯ ಪ್ರಾಣಿಗಳ ಬಗ್ಗೆ ಹೆಚ್ಚು ಹೆಚ್ಚು ವಿಷಯಗಳನ್ನು ನಿಮ್ಮಿ೦ದ ತಿಳಿಯುತ್ತಿದ್ದೇನೆ.ಮತ್ತು ನೀವು ಅದರ ರಕ್ಷಣೆ ಮಾಡುವ ವೈಖರಿ ಕ೦ಡು ಬೆರಗಾಗಿದ್ದೇನೆ.ಡಾ|| ಅನಿಲ್ ಪಾಟೀಲರ ಸೇವೆ ನಿಜಕ್ಕೂ ಶ್ಲಾಘನೀಯ. ನಿಮ್ಮಲ್ಲೊ೦ದು ಬಿನ್ನಹ.ದಿನಕ್ಕೊ೦ದು ಪ್ರಾಣಿ ಪಕ್ಷಿಯ ಬಗ್ಗೆ ತಿಳಿಸಿಕೊಡಲು ಸಾಧ್ಯವೇ? ಪ್ರಾಣಿಯ ಹೆಸರು ಜೀವ ಶಾಸ್ತ್ರದ ಹೆಸರು, ಅದರ ಆಹಾರ ಬೆಳವಣಿಗೆ ಹೀಗೆ ಎಲ್ಲಾ ವಿಚಾರಗಳನ್ನು ತಿಳಿಸಿಕೊಡಲು ಸಾಧ್ಯವೇ? ಹರಿ

ಆತ್ಮೀಯ ಹರೀಶ್ ಅತ್ರೇಯ ಅವರೆ, ತಮ್ಮ ಕೋರಿಕೆಗೆ ನಾನು ಧನ್ಯ. ದಯವಿಟ್ಟು ನನಗೊಂದು ವಿವರವಾದ ಮಿಂಚಂಚೆ ರವಾನಿಸಿದರೆ ನಿರ್ಧರಿಸಿ ತಮಗೆ ತಿಳಿಸಿವೆ. ನನ್ನ ಮಿಂಚಂಚೆ ವಿಳಾಸ: harshavardhan.sheela...