ವಿರೋಧ ಪಕ್ಷಗಳು ಏನು ಮಾಡುತ್ತಿದೆ

To prevent automated spam submissions leave this field empty.

ರಾಜ್ಯ ಸರ್ಕಾರ ತೆಗದುಕೊಂಡಂತಹ ಅನೇಕ ವಿಷಯಗಳು ಚರ್ಚೆಯೇ ಆಗುತ್ತಿಲ್ಲ. ಇವುಗಳು ಜನಪರ ಇದೆಯೋ ಇಲ್ಲವೋ ಎನ್ನುವುದು ಆ ನಂತರದ ವಿಷಯ. ಆದರೆ ಇದೀಗ ನಡೆಯುತ್ತಿರುವ ಅನೇಕ ವಿದ್ಯಮಾನಗಳಿಗೆ ವಿರೋಧ ಪಕ್ಷಗಳು ಸರಿಯಾಗಿ ದನಿಯೆತ್ತದ ಕಾರಣ ಅದು ಅಲ್ಲಿಗೆ ಅಂತ್ಯವಾಗುತ್ತಿದೆ. ಇದರ ಪ್ರತಿಕೂಲ ಪರಿಣಾಮ ನಾಗರಿಕರ ಮೇಲೆ ಆಗುತ್ತಿದೆ. ಎಸ್.ಇ.ಜೆಡ್ ಯೋಜನೆಯಡಿಯಲ್ಲಿ , ಗೃಹ ನಿರ್ಮಾಣದ ಅಡಿಯಲ್ಲಿ ಕೂಷಿ ಭೂಮಿ  ಕಬಳಿಕೆಯಾಗುತ್ತಲೇ ಇದೆ. ಅಲ್ಪ ಮೊತ್ತದ ಹಣ ನೀಡುವ ಮೂಲಕ ರೈತರ ಬಾಯಿ ಮಚ್ಚಿಸಲಾಗುತ್ತಿದೆ. ಇದಕ್ಕೆ ರೈತ ವಿರೋಧ ವ್ಯಕ್ತಪಡಿಸಿದರೆ ಪೊಲೀಸರಿಂದ ಲಾಠಿ ಚಾರ್ಜ್ ಮಾಡಿಸುವಂತಹ ಕಾರ್ಯ, ಇಲ್ಲಾ ಸ್ಥಳೀಯ ಮುಖಂಡರಿಂದ ಹಿಂಸೆ ನೀಡುವಂತಹ ಕಾರ್ಯ ನಡೆಯುತ್ತಲೇ ಇದೆ.

ನಡೆಯುತ್ತಿರುವ ಹಲವಾರು ಕಾಮಗಾರಿಗಳು ಬಿಜೆಪಿ ಪಕ್ಷದ ಮುಖಂಡರ, ಕಾರ್ಯಕರ್ತರ ಅಧೀನದಲ್ಲಿದೆ. ಸ್ಥಳೀಯ ಚಿಕ್ಕ ಪುಟ್ಟ ಯೋಜನೆಗಳಾದ ಗಂಗಾ ಕಲ್ಯಾಣ, ಸಬ್ಸಿಡಿ ದರದಲ್ಲಿ ವಿತರಿಸುವ ಟಿಲ್ಲರ್,ಟ್ರಾಕ್ಟರ್ ಕೂಡ ಪಕ್ಷದ ಕಾರ್ಯಕರ್ತರುಗಳಿಗೆ ಹೆಚ್ಚಿನ ಮಟ್ಟದಲ್ಲಿ ಸಿಗುತ್ತಿದೆ. ಇದರಲ್ಲಿ ಅಧಿಕಾರಿಗಳು ತಮ್ಮ ಕಾರ್ಯ ವೈಖರಿಯನ್ನು ಮರೆತಿದ್ದಾರೆ. ನಿಜವಾದ ಫಲಾನುಭವಿಗೆ ಯೋಜನೆಗಳು ತಲುಪುತ್ತಲೇ ಇಲ್ಲ. ಪಕ್ಷವೇ ಮುಖ್ಯವಾಗಿದೆ. ಬಗರ್ ಹುಕಂ ವಿಚಾರದಲ್ಲೂ ಇದೇ ತಾರತಮ್ಯ ನಡೆಯುತ್ತಿದೆ. ಇತರೆ ಪಕ್ಷದವರಾದರೆ ಅವರನ್ನು ದಬ್ಬಾಳಿಕೆಯಿಂದ ಬಿಡಿಸುವಂತಹ ಕಾರ್ಯ ನಡೆಯುತ್ತಿದೆ. ಇದು ರಾಜ್ಯದೆಲ್ಲೆಡೆ ನಡೆಯುತ್ತಿರುವ ಸಂಗತಿಗಳು. ಇನ್ನು ನೆರೆ ಸಂತ್ರಸ್ತ ಪರಿಸ್ಥಿತಿಯನ್ನು ಹೇಳುವಂತೆಯೇ ಇಲ್ಲ. ಮನೆಗಳು ಇನ್ನೂ ಅವರಿಗೆ ಕನಸಾಗಿಯೇ ಇದೆ.

ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಹೆಚ್ಚಿನ ಪ್ರಭಾವ ಇರುವಂತಹ ಮುಖಂಡರನ್ನು ವಿವಿಧ ಆಮಿಷ ಒಡ್ಡಿ ಖರೀದಿಸುವಂತಹ ಪ್ರಯತ್ನ ನಡೆಯುತ್ತಲೇ ಇದೆ. ಅಕಸ್ಮಾತ್ ಮುಖಂಡ ಒಪ್ಪದೇ ಹೋದರೆ ಆತನನ್ನು ವಿವಿಧ ರೀತಿಯಲ್ಲಿ ಹಿಂಸಿಸುವಂತಹ ಕಾರ್ಯವಾಗುತ್ತಿದೆ. ಇವೆಲ್ಲವೂ ವಿರೋಧ ಪಕ್ಷದವರಿಗೆ ಗೊತ್ತಿಲ್ಲವಾ ಅಥವಾ ಆಡಳಿತ ಪಕ್ಷದೊಂದಿಗೆ ಶಾಮೀಲಾಗಿದ್ದಾರಾ. ಇದು ವಿರೋಧ ಪಕ್ಷದ ಕಾರ್ಯಕರ್ತರಲ್ಲಿ ಎದ್ದಿರುವ ಪ್ರಶ್ನೆ. ದೇಶಪಾಂಡೆ, ಸಿದ್ದರಾಮಯ್ಯ,ಡಿಕೇಶಿ ಇವರೆಲ್ಲರೂ ಪತ್ರಿಕಾ ಹೇಳಿಕೆಗಳನ್ನು ಕೊಡುವುದಕ್ಕೆ ಮಾತ್ರ ಸೀಮಿತವಾಗಿದ್ದಾರೆ. ಇವರಲ್ಲೆ ಆಂತರಿಕ ಭಿನ್ನಾಭಿಪ್ರಾಯಗಳು ಮುಗಿಲು ಮುಟ್ಟಿದೆ. ಇನ್ನು ಇತರರ ದನಿ ಇವರಿಗೆಲ್ಲಿ ಕೇಳಬೇಕು. ಕಾರ್ಯಕರ್ತ ಕಷ್ಟದಲ್ಲಿದ್ದರೆ ಪ್ರೋತ್ಸಾಹಕ್ಕೆಂದು ಬರುವಂತವನು ಒಬ್ಬನೂ ಇಲ್ಲ. ಹಾಗಿದ್ದರೆ ಬೂತ್ ಮಟ್ಟದಲ್ಲಿ ಕಾಂಗ್ರೆಸ್ ಬಲವರ್ಧನೆಯಾಗಬೇಕು ಎಂದರೆ ಹೇಗೆ ಎನ್ನುವುದು.

ಹಾಲಪ್ಪನ ಪ್ರಕರಣದಲ್ಲಿ ಆರಂಭದಲ್ಲಿ ತೋರಿದ ಉತ್ಸಾಹ  ಇದೀಗ ಇಲ್ಲ. ಸಂತೋಷ್ ಹೆಗ್ಡೆ ಪ್ರಕರಣ ಆಗಲೇ ಮುಗಿದ ಅಧ್ಯಾಯ. ರೈತರ ಮೇಲಿನ ದಬ್ಬಾಳಿಕೆಗಳಿಗೆ ಕೇವಲ ಹೇಳಿಕೆ ಮತ್ತೆ ಕೆಸರರೆಚಾಟ.ಕೆಲವೆಡೆ ಪ್ರತಿಭಟನೆ ಬಿಟ್ಟರೆ ಇಲ್ಲವೇ ಇಲ್ಲ ಎನ್ನಬಹುದು. ಗಣಿಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನವರು ಭಾಗಿಯಾಗಿರುವುದರಿಂದ ಅದರ ಬಗ್ಗೆ ಸೊಲ್ಲೆತ್ತಲು ಯಾರೂ ತಾಯಾರಿಲ್ಲ. ಸೋನಿಯಾ ಗಾಂಧಿ ಇಲ್ಲಿನ ವಿಷಯ ಗೊತ್ತಿದ್ದರೂ ಸುಮ್ಮನಿದ್ದಾರಾ ಅಥವಾ ಕರ್ನಾಟಕದಲ್ಲಿ ಕಾಂಗ್ರೆಸ್ ಬೇಡವೇ ಬೇಡ ಎನ್ನುವ ತೀರ್ಮಾನವಾ ಎನ್ನುವುದು ಪ್ರಶ್ನೆಯಾಗಿದೆ. ಇವರಿಗೆ ಹೋಲಿಸಿದರೆ ಕನ್ನಡ ಸಂಘಟನೆಗಳೇ ವಾಸಿ. ಸ್ವಲ್ಪ ಮಟ್ಟಿಗಾದರೂ ದೊಡ್ಡ ದನಿಯಲ್ಲಿ ಹೋರಾಡುತ್ತಿವೆ. ಇಂತಹ ವಿರೋಧ ಪಕ್ಷ ಅವಶ್ಯಕತೆಯಿದೆಯಾ. ಇದೇ ಯಡಿಯೂರಪ್ಪ ವಿ.ಪಕ್ಷ ನಾಯಕರಾಗಿದ್ದ ಸಂದರ್ಭದಲ್ಲಿ ಸಣ್ಣ ವಿಷಯಕ್ಕೂ ಹೋರಾಟಗಳು ನಡೆಯುತ್ತಿತ್ತು. ಇವೆಲ್ಲವನ್ನೂ ಕಾಂಗ್ರೆಸ್ ಏಕೆ ಮಾಡುತ್ತಿಲ್ಲ. ಜೆಡಿಎಸ್ ಪ್ರಾದೇಶಿಕ ಪಕ್ಷವಾಗಿದ್ದರೂ ಅಪ್ಪ ಮಕ್ಕಳು ರಾಜ್ಯ ಸರ್ಕಾರದ ಅನ್ಯಾಯಗಳಿಗೆ ಹೋರಾಡುತ್ತಲೇ ಇದ್ದಾರೆ. ಕೇವಲ ನೈಸ್ ಗೆ ಮಾತ್ರ ಅಲ್ಲ. ಮೊನ್ನೆ ನಡೆದ ಘಟನೆಗೆ ಹಿರಿಯ ದೇವೆಗೌಡ ಉತ್ತಮ ಸ್ಪಂದನೆ ವ್ಯಕ್ತಪಡಿಸಿದ್ದಾರೆ. ಇದು ರೈತನಿಗೆ ದೊರೆತ ನೈತಿಕ ಬೆಂಬಲವಾಗಿದೆ. ಆದರೆ ಕಾಂಗ್ರೆಸ್ ಮಾತ್ರ ಎಂದಿನಂತೆ ಹೇಳಿಕೆ ನಿಡಿ ತನ್ನ ಪಾಡಿಗೆ ತಾನಿದೆ. ಅಲ್ಲೀಗ ಅಧ್ಯಕ್ಷರ  ಪೈಪೋಟಿ. ಅಂತೂ ಇವರಿಂದಾಗಿ ಸರ್ಕಾರಕ್ಕೆ ತಾನು ಆಡಿದ ಆಟವೇ ಆಟ ಎನ್ನುವಂತಾಗಿದೆ. ಇದರಿಂದಾಗಿ ಆಡಳಿತದಲ್ಲಿರುವವರು ಎಲ್ಲರೂ ಖುಷ್ ಆಗಿರುವುದಂತೂ ಸತ್ಯ.

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಒಮ್ಮೊಮ್ಮೆ ಎಲ್ರು ಸೇರಿ ನಮ್ ರಾಜ್ಯ/ದೇಶವನ್ನ ಲೂಟಿ ಮಾಡ್ತಿದಾರೆ ಅಂತ ಅನ್ಸತ್ತೆ... :-( ಪ್ರತಿಪಕ್ಷ ಸ್ಥಾನದಲ್ಲಿ ಕೂತು ಸರಕಾರದ ಕಿವಿಹಿಂಡಲು ಆ ಪಕ್ಷಕ್ಕೆ ಅನುಭವವಿಲ್ಲ.. ಇನ್ನೊಂದಕ್ಕೆ ಸರ್ಕಾರ ನಡಿಸಿ ಅನುಭವವಿಲ್ಲ... ಇನ್ನೊಂದು ಆಟಕ್ಕುಂಟು ಲೆಕ್ಕಕ್ಕಿಲ್ಲ >> ಅಕಸ್ಮಾತ್ ಮುಖಂಡ ಒಪ್ಪದೇ ಹೋದರೆ ಆತನನ್ನು ವಿವಿಧ ರೀತಿಯಲ್ಲಿ ಹಿಂಸಿಸುವಂತಹ ಕಾರ್ಯವಾಗುತ್ತಿದೆ. ಇದರಬಗ್ಗೆ ಹೆಚ್ಚಿನ ಮಾಹಿತಿ ಇದ್ದರೆ ಕೊಡಿ.. :-) -ವಿನಾಯಕ

ವಿನಾಯಕ್ ಪ್ರತಿಕ್ರಿಯೆಗೆ ಧನ್ಯವಾದಗಳು. >> ಅಕಸ್ಮಾತ್ ಮುಖಂಡ ಒಪ್ಪದೇ ಹೋದರೆ ಆತನನ್ನು ವಿವಿಧ ರೀತಿಯಲ್ಲಿ ಹಿಂಸಿಸುವಂತಹ ಕಾರ್ಯವಾಗುತ್ತಿದೆ<< ಬಹಳಷ್ಟು ಕಡೆ ಇದು ನಡೆದಿದೆ. ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದಂತವರಿಗೆ ಅನುದಾನ ಸಿಗದ ಹಾಗೆ ನೋಡಿಕೊಳ್ಳುವುದು. ಅವರ ವ್ಯಾಪಾರ ವಹಿವಾಟಿಗೆ ತೊಂದರೆ ಕೊಡುವಂತಹುದು. ಜಮೀನು ವ್ಯಾಜ್ಯಗಳನ್ನು ಸೃಷ್ಟಿ ಮಾಡುವಂತುಹುದು ಹೀಗೆ ಹತ್ತು ಹಲವು.

********ಹಾಸ್ಯ************ ವಿರೋಧ ಪಕ್ಷ ಮಾಡುತ್ತಿರುವ ಕೆಲವು ಕೆಲ್ಸಗಳು ೧) ಎಲ್ಲದಿಕ್ಕೂ ಪತ್ರಿಕೆಗಳಲ್ಲಿ, ಟಿವಿ ಯಲ್ಲಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ೨) ನೆರೆ ಪರಿಹಾರದ ಹಣವನ್ನು ಭವಿಷ್ಯ ನೆರೆ ಪರಿಹರಕ್ಕೆ ಬಳಸುವ ಚಿಂತನೆ ನಡೆಸಿದ್ದಾರೆ ೩) ಏನೇ ಆಗಬೇಕಾದರು ಹೈಕಮ್ಯಾಂಡ್ ನಿಂದ ಅಪ್ಪಣೆಗಾಗಿ ಕಾಯುತ್ತಿದ್ದಾರೆ. ೪) ಇನ್ನೊಂದು ವಿರೋಧ ಪಕ್ಷದವರು, ಚುನಾವಣೆ ಹತ್ತಿರ ಬಂದಾಗೆಲ್ಲ ಒಂದು ವಿಷಯ ಹಿಡಿದು ಲಾಭ ತರುವ ಪ್ರಯತ್ನ ನಡೆಸುತ್ತಿದ್ದಾರೆ. ೫) ಆ ಪಕ್ಷದ ನೇತಾರರು ಮುಖ್ಯಮಂತ್ರಿಗಳನ್ನ್ನು ಇನ್ನು ಯಾವ ಹೊಲಸು ಪದ ಬಳಸಿ ಬಯ್ಯಬಹುದು ಎಂದು ನಿಘಂಟು ಗಳನ್ನು ಹುಡುಕುತ್ತಿದ್ದಾರೆ ;) ಇದೆಲ್ಲ ನೋಡಿದ ಮೇಳೆ ರಾಜ್ಯಪಾಲರು, ಇವರೆಲ್ಲರ ಜವಾಬ್ದಾರಿಯನ್ನು ತಮ್ಮ ಹೆಗಲ ಮೇಲೆ ಹಾಕಿಕೊಂಡವರಂತೆ ಕೆಲಸ ನಿರ್ವಹಿಸುತ್ತಿದ್ದಾರೆ.

ರಾಜ್ಯದ ಸಂಸತ್ ಸದಸ್ಯರೀರ್ವರು (ಅಪ್ಪ ಮತ್ತು ಮಗ) ರಾಜ್ಯದ ವಿರೋಧಪಕ್ಷದ ನಾಯಕರುಗಳನ್ನೆಲ್ಲಾ ಅಪಹರಣ ಮಾಡಿರುವಂತಿದೆ. ಎಲ್ಲಿ ನೋಡಿದರೂ ಅವರೀರ್ವರದೇ ಕಾರುಬಾರು... ಸ್ಥಳೀಯ ನಾಯಕರುಗಳೆಲ್ಲಾ ಬಾಯ್ಮುಚ್ಚಿ ಕೂತುಕೊಂಡಿರುವುದು ಆಡಳಿತಪಕ್ಷಕ್ಕೆ ಲಾಭದಾಯಕವಾಗಿರುವಂತೆ ಕಾಣಿಸುತ್ತಿದೆ. ಒಮ್ಮೊಮ್ಮೆ, ಈ ಅಪ್ಪ ಮಕ್ಕಳು ಮತ್ತು ಯಡ್ಯೂರಪ್ಪನವರ ನಡುವೆ ಏನಾದರೂ ಒಪ್ಪಂದ ಆಗಿದೆಯೇ ಎನ್ನುವ ಅನುಮಾನವೂ ಕಾಡುತ್ತದೆ. "ನೀವು ಬೈದಂತೆ ಮಾಡುತ್ತಿರಿ ನಾನು ಅತ್ತಂತೆ ಮಾಡುತ್ತಾ ಇರುತ್ತೇನೆ... ಆಗ ಬೇರೆಯವರೆಲ್ಲಾ ಸುಮ್ಮನಿರುತ್ತಾರೆ...", ಅಂತ. ಹಿಂದೆ ಉಗ್ರಪ್ಪ ಮಾತಾಡಿದ್ದು ಜಾಸ್ತಿ ಆಗ್ತಿತ್ತು... ಇಂದು ಸಿದ್ದರಾಮಯ್ಯ ಮಾತಾಡೋದು ಕಡಿಮೆ ಅನಿಸ್ತಿದೆ ಇಲ್ಲಾಂದ್ರೆ ಅಸಂಬದ್ಧ ಅನಿಸ್ತಿದೆ! ಇನ್ನುಳಿದ ಕಾಂಗ್ರೇಸಿಗರಿಗೆ (ಡಿಕೆಶಿ ಮತ್ತು ದೇಶಪಾಂಡೆ ಮತ್ತಿರರು) ಅವರ ಪಕ್ಷದ ಆಂತರಿಕ ಸಮಸ್ಯೆಗಳದೇ ಚಿಂತೆ. - ಆಸು ಹೆಗ್ಡೆ

JDS ನಲ್ಲಿ ಮಾತಾಡೊದು ಬರೀ 3ರೇ ಜನ.. ಅಪ್ಪ, ಮಗ ಮತ್ತೆ ದತ್ತ.. ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ಆಗಾಗ ಮೋಟಮ್ಮ, ಡಿಕೆಶಿ ಮತ್ತೆ ಆರ್ ವಿ.. ಬೇರೆ ಯಾವ MLA ಗಳು ಮಾತಾಡಿದ್ದು ಗೊತ್ತೇ ಇಲ್ಲ.... ಇನ್ನು ಇವರನ್ನು ಕೇಳೊರ್ಯಾರು ಅಂತ ಆಡಳಿತ ಪಕ್ಷದವರು ಆಡಿದ್ದೇ ಆಟ :-)

ಸುರೇಶ್ ಸರಿಯಾಗಿ ಹೇಳಿದ್ದೀರಾ, ಉಗ್ರಪ್ಪವಿದ್ದಾಗ ಉಗ್ರ ನರಸಿಂಹನ ಅವತಾರವೆತ್ತಿ ಕೂಗಾಡಿದ್ದೇ ಕೂಗಾಡಿದ್ದು, ಇವರಿಂದ ಯಡಿಯೂರಪ್ಪನವರಿಗೆ ಇನ್ನಿಲ್ಲದ ಇರುಸು ಮುರಿಸು ಆಗುತ್ತಿದ್ದಂತು ನಿಜ. ಪತ್ರಿಕಾಗೋಷ್ಠಿಯೊಂದರಲ್ಲಿ ಕಿತ್ತಾಡಿದ್ದರು. ಸಿದ್ದರಾಮಯ್ಯ ಪ್ರತಿಯೊಂದಕ್ಕೂ ನಗುತ್ತಾ ಉತ್ತರಿಸುವುದರಿಂದ ಇವರ ಪ್ರತಿಕ್ರಿಯೇ ಏನೂ ಅನ್ನುವುದೇ ಅರ್ಥವಾಗದಂತಿದೆ. ಪ್ರತಿಕ್ರಿಯೆಗೆ ಧನ್ಯವಾದಗಳು.

ಸುರೇಶ್ ರವರೆ, ವಿರೋಧ ಪಕ್ಷ ಅ೦ದರೆ watching dogs ಅ೦ತ ಸಮಾಜ ಪುಸ್ತಕದಲ್ಲಿ ಒದಿದ ನೆನಪು..... ಆದರೆ ನಮ್ಮ ರಾಜ್ಯದ ಕಾಯುವ ನಾಯಿ(ಡಾಗ್) ಗಳು ಬೊಗಳೊದ್ನೆ ಮರ್ತಿದವೆ.....ಅಲ್ಲಲ್ಲಿ ಯಾವುದಾದರು ಮೂಲೆಲಿ ಆಗಾಗ ಕಿರುಚಿ. ಸುಮ್ಮನಾಗ್ತವೆ.... ಇವರು ಹೀಗೆಕೆ ಗೊತ್ತೆ...? ಅಲ್ಲ ಇವರು ಯಡ್ಯೂರಪ್ಪನವರಿ೦ದ ಖ೦ಡಿತವಾಗಿಯು ವಿರೊಧ ಪಕ್ಷದಲ್ಲಿರುವಾಗ ಹೇಗೆ ಕಿರುಚಬೇಕು ಅ೦ತ ತಿಳಿದುಕೊಳ್ಳಬೇಕು..... ಬಿ.ಜೆ.ಪಿ ಯವರಿಗೆ ಆಡಳಿತ ನೆಡಸಲು ಅನುಭವದ ಕೊರತೆ.... ಕಾ೦ಗ್ರೆಸ್ ಗೆ ವಿರೊಧಪಕ್ಷದಲ್ಲಿ ನೆಡಸಲು ಅನುಭವದ ಕೊರತೆ.... ಜೆ.ಡಿ.ಸ್ ಗೆ ನಾಯಕರ ಕೊರತೆ.... ಅಲ್ಲಿಗೆ ಮುಗಿದೊಯ್ತು.........!!!!

ಮಂಜುನಾಥ್, ನನಗೆ ಅನ್ನಿಸಿದ ಮಟ್ಟಿಗೆ ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್ ಚೇತರಿಸಿಕೊಳ್ಳುವುದು ಸ್ವಲ್ಪ ಕಷ್ಟನೇ ಅನ್ನಿಸುತ್ತಿದೆ. ಯಾಕೆಂದರೆ ರೆಡ್ಡಿಗಳ ಹಣದ ಬಲ, ಹಾಗೇ ಚುನಾವಣೆ ಹೇಗೆ ಮಾಡಿದರೆ ಉತ್ತಮ ಫಲಿತಾಂಶ ಬರುತ್ತದೆ ಎನ್ನುವುದನ್ನು ಬಿಜೆಪಿಯವರು ಕರಗತ ಮಾಡಿಕೊಂಡಿರುವುದರಿಂದ ಕಾಂಗ್ರೆಸ್ ಸದ್ಯಕ್ಕೆ ಆಧಿಕಾರ ಹಿಡಿಯುವುದು ಕನಸಿನ ಮಾತೆ. ಇನ್ನು ಸೋನಿಯಾ ಗಾಂಧಿ ಹೆಚ್ಚಿನ ನಿಗಾ ವಹಿಸಿದರೆ ಮಾತ್ರ ಸ್ವಲ್ಪ ಚೇತರಿಸಿಕೊಳ್ಳಬಹುದೇನೋ. ಜಾತ್ಯಾತೀತ ಪಕ್ಷಗಳು ಒಂದಾಗುತ್ತದಾ ಎಂದು ನೋಡಿದರೆ ಬರೀ ಕಿತ್ತಾಡುವುದರಲ್ಲೇ ಸಮಯ ಕಳೆಯುತ್ತಿದೆ. ಇವರದ್ದೇನಿದ್ದರೂ ಅರಣ್ಯ ರೋದನ.

ನಾಡಿಗರೆ, ಈ ಕಾ೦ಗ್ರೆಸ್ಸಿಗರು ದೇಶಕ್ಕೆ ಇದುವರೆಗೂ ಮಾಡಿರುವ ಸೇವೆ(!)ಯನ್ನು ನೋಡಿದರೆ ಅವರು ಮತ್ತೆ೦ದೂ ಅಧಿಕಾರಕ್ಕೆ ಬರುವುದೇ ಬೇಡ ಹಾಗೂ ಅವರ ಅಸ್ತಿತ್ವವೇ ಇರುವುದು ಬೇಡ ಅನ್ನಿಸುತ್ತದೆ. ಹೀಗಿರುವಾಗ ಕನ್ನಡ ಪರ ಸ೦ಘಟನೆಗಳು ಒಳ್ಳೆಯ ಕೆಲಸ ಮಾಡುತ್ತಿದ್ದರೆ ಅವರಿಗೇ ಏಕೆ ಮತದಾನ ಮಾಡಬಾರದು? ಅವರಿಗೆ ಅಧಿಕಾರ ಏಕೆ ಸಿಗಬಾರದು? ಈ ಬಾರಿ ನಾನ೦ತೂ ಕರವೇಗೆ ಮತ ಹಾಕಿದ್ದೆ, ಆದರೆ ನಡೆದ ೪೦% ಮತದಾನದಲ್ಲಿ ನನ್ನ ಮತಕ್ಕೆಲ್ಲಿ ಬೆಲೆ? ಉಳಿದ ೬೦% ಮತದಾರರು ತೆಪ್ಪಗೆ ಮನೆಯಲ್ಲಿ ಮಲಗಿದ್ದು ಈಗ ಯಡ್ಯೂರಪ್ಪ ಸರಿಯಿಲ್ಲ ಎ೦ದು ಬೊಬ್ಬೆಯಿಡುತ್ತಿದ್ದಾರೆ! ಇದಕ್ಕೇನಾದರೂ ಅರ್ಥವಿದೆಯೇ? ತಾವು ನು೦ಗಿ ನೀರು ಕುಡಿದ ನೆರೆ ಪರಿಹಾರ ನಿಧಿಯ ಲೆಕ್ಕವನ್ನು ಅರಗಿಸಿಕೊಳ್ಳುವುದರಲ್ಲಿ ಕಾ೦ಗ್ರೆಸ್ ಮುಖ೦ಡರು ನಿರತರಾಗಿರುವಾಗ ಅವರಿ೦ದ ಇನ್ನೇನು ತಾನೆ ನಿರೀಕ್ಷಿಸಲು ಸಾಧ್ಯ? ನಿಜವಾಗಿಯೂ ನಮ್ಮ ವಿದ್ಯಾವ೦ತರಿಗೆ ಈ ದೇಶದ ಬಗ್ಗೆ ಸ್ವಲ್ಪವಾದರೂ ಅಭಿಮಾನವಿದ್ದರೆ ತಮ್ಮ ನಿದ್ದೆಯಿ೦ದೆದ್ದು ಬ೦ದು ಮತದಾನ ಮಾಡಬೇಕು, ಪಾರ್ಥೇನಿಯ೦ನ೦ತೆ ಕೊಬ್ಬಿ ಬೆಳೆಯುತ್ತಿರುವ ಭ್ರಷ್ಟ ಕಾ೦ಗ್ರೆಸ್ ಪಕ್ಷವನ್ನು ಬುಡಸಮೇತ ಕಿತ್ತು ಬಿಸಾಡಬೇಕು.

ಮಂಜು, ನಡೆದಿರೋ 40% ಮತದಾನದಲ್ಲಿ ಹಣ,ಹೆಂಡದ ಮೇಲೆ ಏನಿಲ್ಲವೆಂದರೂ 30%ಮತದಾನ ನಿರ್ಧಾರವಾಗಿರುತ್ತದೆ. ಇನ್ನು ಉತ್ತಮ ಜನಪ್ರತಿನಿಧಿಯನ್ನು ಆರಿಸಬೇಕು ಎಂದರೆ ಹೇಗೆ ಸಾಧ್ಯ. ಸತ್ಯ ಮಂಜು ಪ್ರಜ್ಞಾವಂತರು ಮನೆಯಲ್ಲಿ ಕೂತು ಮಾತನಾಡುತ್ತಾರೆಯೇ ವಿನಃ ಮತಕೇಂದ್ರಕ್ಕೆ ಬರುವುದಿಲ್ಲ. ನಿಮ್ಮ ಕನ್ನಡ ಅಭಿಮಾನಕ್ಕೆ ನನ್ನದೊಂದು ನಮಸ್ಕಾರ. ಪ್ರತಿಕ್ರಿಯೆಗೆ ಧನ್ಯವಾದಗಳು.