ಬೆಂಗಳೂರು ಬೆಂದಕಾಳೂರಲ್ಲ!

To prevent automated spam submissions leave this field empty.

 

  ವೀರಬಲ್ಲಾಳನೆಂಬ ಹೊಯ್ಸಳ ರಾಜನು ಅಜ್ಜಿಯೊಬ್ಬಳು ಕೊಟ್ಟ ಬೆಂದಕಾಳುಗಳನ್ನು ತಿಂದು ಆ ಊರನ್ನು ಬೆಂದಕಾಳೂರು ಎಂದು ಕರೆದ. ಅದೇ ನಂತರ ಬೆಂಗಳೂರು ಎಂದು ಹೆಸರಾಯಿತು ಎಂಬ ಜನಪದ ಕಥೆಯಿದೆ.

  ಇದನ್ನೆ ದಿಟವೆಂದು ಎಲ್ಲೆಡೆಯಲ್ಲಿಯೂ ಸಾರಲಾಗುತ್ತಿದೆ.ಇದೊಂದು ಯಾವುದೇ ಆಧಾರವಿಲ್ಲದ ಕಟ್ಟುಕಥೆ! ಹಿಂದೊಮ್ಮೆ ಒಬ್ಬರಿಗೆ ಬೆಂಗಳೂರು ಎಂಬುದು ಬೆಂದಕಾಳೂರು ಎಂಬುದರ ಅಪಭ್ರಂಶವಲ್ಲ ಎಂದು ಹೇಳಿದ್ದಕ್ಕೆ ಅವರು "ನನಗೆ ಸತ್ಯಕ್ಕಿಂತ ಅಜ್ಜಿ ಹೇಳಿದ ಕಥೆಯೇ ಅಪ್ಯಾಯಮಾನ" ಎಂದು ಉತ್ತರಿಸಿದ್ದರು.

 ಅಜ್ಜಿ ಕಥೆಯ ಬಗ್ಗೆ ಜನಪದದ ಬಗ್ಗೆ ಗೌರವವಿದ್ದರೆ ಅದಕ್ಕೆ ನನ್ನ ಆಕ್ಷೇಪವಿಲ್ಲ. ಆದರೆ ಅದೇ ಕಥೆಯನ್ನು ಅವರು ಮಕ್ಕಳಿಗೆ ಹೇಳುತ್ತಾರೆ. ಮತ್ತೆ ಮಕ್ಕಳು ಕಥೆಯನ್ನೇ ದಿಟವೆಂದು ಬಗೆಯುತ್ತವೆ. ಇತಿಹಾಸ ಮಣ್ಣಲ್ಲಿ ಮುಚ್ಚಿಹೋಗುತ್ತದೆ!

 

  ಹೊಯ್ಸಳ ರಾಜ ವೀರಬಲ್ಲಾಳನ ಕಾಲ ಹನ್ನೆರಡು ಮತ್ತು ಹದಿಮೂರನೆಯ ಶತಮಾನ.  "ಬೆಂಗಳೂರು" ಎಂಬ ಹೆಸರಿನ ಉಲ್ಲೇಖ ಬೇಗೂರಿನ ಬಳಿ ದೊರೆತ ಒಂಭತ್ತನೆಯ ಶತಮಾನದ ಶಾಸನದಲ್ಲಿ ದೊರಕುತ್ತದೆ.ವಿವರಗಳಿಗಾಗಿ ಕೆಳಗಿನ ಸುದ್ದಿಗಳನ್ನು ನೋಡಬಹುದು.

 

http://www.deccanherald.com/content/39953/here-lies-bengaluru-inscriptio...

http://www.hindu.com/2004/08/20/stories/2004082016400300.htm

 

ಹಾಗಾಗಿ ವೀರಬಲ್ಲಾಳನು ಹುಟ್ಟುವ ಮೊದಲೇ ಬೆಂಗಳೂರು ಎಂಬ ಹೆಸರು ಬಳಕೆಯಲ್ಲಿತ್ತು.

 

ಹಾಗಿದ್ದರೆ ಬೆಂಗಳೂರು ಎಂಬ ಪದದ ನಿಷ್ಪತ್ತಿ ಏನಿರಬಹುದು?

 

  ನನ್ನ ಊಹೆ ಹೀಗಿದೆ:

 

 ಅಚ್ಚ ಕನ್ನಡದಲ್ಲಿ "ಬೇಂಗ" ಎಂದರೆ ಶ್ರೀಗಂಧ. ಬೆಂಗಳೂರು ಎಂದರೆ ಶ್ರೀಗಂಧವಿರುವ ಊರು ಎಂಬ ಹೆಸರು ಬಂದಿರಬಹುದು. ಶಾಸನ ದೊರೆತಿರುವ ಬೇಗೂರು ಹೊಸೂರು ರಸ್ತೆ ಮತ್ತು ಬನ್ನೇರುಘಟ್ಟ ರಸ್ತೆಯ ನಡುವೆ ಇದೆ. ಬನ್ನೇರುಘಟ್ಟ ಆಗೆಲ್ಲ ದಟ್ಟ ಕಾಡು (ಈಗಲೂ ಸಹ. ಆದರೆ "ದಟ್ಟ" ಅಲ್ಲ!) ಈ ಜಾಗೆಯಲ್ಲಿ ಶ್ರೀಗಂಧದ ಮರಗಳ ಬೆಳವಣಿಗೆಯ ಸಾಧ್ಯತೆ ಇದೆ.

 

 ಅಲ್ಲದೇ ಬೇಗೂರು ತಾಣವು ತಮಿಳುನಾಡು, ಆಂಧ್ರ, ಕರುನಾಡು ಕೂಡುವ ಬಿಂದು. (junction point). ಈ ಕೂಡುತಾಣದಿಂದಲೇ ಇತರೆಡೆಗೆ ಶ್ರೀಗಂಧದ ಸಾಗಣೆ ಆಗುತ್ತಿರಬಹುದು. ಕರುನಾಡು ಶ್ರೀಗಂಧದ ರಫ್ತಿನಲ್ಲಿ ಮೊದಲಿನಿಂದಲೂ ಪ್ರಸಿದ್ಧಿ. ಹಾಗಾಗಿ ಈ ಜಾಗಕ್ಕೆ ಬೇಂಗಳೂರು ಎಂಬ ಹೆಸರಿದ್ದು ಆಡುಮಾತಲ್ಲಿ ಬೆಂಗಳೂರು ಆಗಿರಬಹುದು.

 

 "ಸಂಡು" ಎಂದರೂ ಸಹ ಶ್ರೀಗಂಧ. ಸಂಡು>ಚಂಡು>ಚಂದು>ಚಂದನ ಆಗಿರಬಹುದು ಎಂದು ಕೆಲ ಊಹೆಗಳಿವೆ. "ಸಂಡೂರು" ಎಂಬ ಊರು ಬಳ್ಳಾರಿ ಜಿಲ್ಲೆಯಲ್ಲಿದೆ. ಇಲ್ಲಿ ಶ್ರೀಗಂಧದ ಬೆಳವಣಿಗೆ ಇತ್ತೇ ಎಂಬುದರ ಬಗ್ಗೆ ನನಗೆ ಹೆಚ್ಚಿನ ತಿಳಿಮೆಯಿಲ್ಲ. ಬಲ್ಲವರು ತಿಳಿಸಬೇಕಾಗಿ ಕೊರಿಕೆ.

 

 ಎರಡೂ ಊರಿನ ಪದನಿಷ್ಪತ್ತಿಯು ನನ್ನ ಊಹೆ. ಇದರ ಬಗ್ಗೆ ಆಕ್ಷೇಪ ಅಥವಾ ಪ್ರಶ್ನೆಗಳಿದ್ದರೆ ಸ್ವಾಗತ. ಬೇರೆ ನಿಷ್ಪತ್ತಿಯ ಸಾಧ್ಯತೆಗಳಿದ್ದರೆ ಬಲ್ಲವರು ದಯವಿಟ್ಟು ತಿಳಿಸಬೇಕು.

 

 credits: ಬರಹಕ್ಕೆ ಬರತ್ (ವೈಭವ) ಅವರ ಬೆಂಬಲ ಪಡೆದಿರುತ್ತೇನೆ.

 

 

 

 

 

 

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಸಾಲಿಮಠರೇ, ನಮಸ್ಕಾರಗಳು. ಶಾಸನದಲ್ಲಿ ಕ್ರಿ.ಶ.೮೯೦ ರ ಬೆ೦ಗಳೂರು ಯುಧ್ಧದ ಬಗ್ಗೆಯೂ ಉಲ್ಲೇಖವಿದೆ ಎ೦ದು ತಿಳಿದುಬ೦ದಿತು. ಅಲ್ಲಿಗೆ ಬೆ೦ಗಳೂರು ಅದರಕ್ಕಿ೦ತ ಮು೦ಚೆಯೇ ಅಸ್ತಿತ್ವದಲ್ಲಿತ್ತು ಎ೦ಬುವ ಅರ್ಥವಲ್ಲವೇ ಅ೦ದರೆ ಸರಿ ಸುಮಾರು ೭ ಅಥವಾ ೮ ನೇ ಶತಮಾನಗಳಿ೦ದಲೂ ಬೆ೦ಗಳೂರು ಇದ್ದಿರಬಹುದು. ೯ ನೇ ಶತಮಾನದಲ್ಲಿ ಅದು ತನ್ನ ಉಚ್ಛ್ರಾಯ ಸ್ಥಿತಿಯನ್ನು ಮುಟ್ಟಿತ್ತು ಎ೦ದು ತಿಳಿದುಕೊಳ್ಳಬಹುದಲ್ಲವೇ? ಅಲ್ಲಿಗೆ ಶಾಸನದ ಪ್ರಕಾರ, ಬೆ೦ದ ಕಾಳನ್ನು ತಿ೦ದಿದ್ದು ಎಲ್ಲಾ ಬೋಗಸ್ ಅ೦ಥಾ ಆಯ್ತು! ಬೆ೦ದಕಾಳೂರು ಎನ್ನುವುದೂ ಬೆ೦ಗಳೂರಿನ ಮೂಲ ನಾಮವಲ್ಲ ಎ೦ಬ ಐತಿಹಾಸಿಕ ಸತ್ಯದ ಬಗ್ಗೆ ಈಗ ನಮ್ಮ ಸರ್ಕಾರ ಏನು ಮಾಡುತ್ತೆ ಅ೦ಥ ವೀಕ್ಷಿಸಬೇಕು. ಹಿ೦ದೊಮ್ಮೆ ಬೆ೦ಗಳೂರನ್ನು ಬೆ೦ದಕಾಳೂರು ಎ೦ದು ಪುನರ್ನಾಮಕರಣ ಮಾಡಬೇಕೆ೦ದು ಒತ್ತಾಯ ಮಾಡಿದ್ದ ಬಗ್ಗೆ ಕೇಳಿದ್ದೆ. ಒಳ್ಳೆಯ ವಿವಾದಾತ್ಮಕ ವಿಷಯದ ಬಗ್ಗೆ ಬೆಳಕು ಚೆಲ್ಲಿದ್ದೀರಿ. ಧನ್ಯವಾದಗಳು.

ಲೇಖನವನ್ನು ಬರೆದ ಸಾಲಿಮಠರಿಗೆ ಧನ್ಯವಾದಗಳು. ನಮ್ಮ ರಾಜಧಾನಿಗೆ ಬೆಂಗಳೂರು ಎಂಬ ಹೆಸರು ಬಂದಿರುವ ಬಗೆ. - ಇದು ಬಹುಶಃ ಬೆಂದ ಕಾಳಿನ ಕತೆಯ ಕಾರಣ ಬಂದಿರಲಿಕ್ಕಿಲ್ಲ. ಇದು ಬಹುಜನ ಸಂಶೋಧಕರ ಅಭಿಪ್ರಾಯ. - ಬೆಂಗಾವಲೂರು ಎಂಬ ವಿವರಣೆ ಸೂಕ್ತ ನೆನಿಸಿದರೂ ಬಹುಶಃ ಅದು ನಿಜವಿರಲಾರದು ಎಮ್ದು ಅನಿಸುತ್ತದೆ. - ಬೆಂಗಳೂರಿಗೆ ಈ ಹೆಸರು ಬರಲು ಈ ಪ್ರದೇಶದಲ್ಲಿ ವಿಪುಲವಾಗಿ ಬೆಳೆಯುತ್ತಿದ್ದ ಬೆಂಗೇಮರ ಕಾರಣ ಎನ್ನುವುದು ಹೆಚ್ಚು ಜನರ ಅಭಿಪ್ರಾಯ. ಬೆಂಗೇಮರಕ್ಕೆ ಕನ್ನಡದಲ್ಲಿ ರಕ್ತಹೊನ್ನೆ ಎಂಬ ಮತ್ತೊಂದು ಹೆಸರಿದೆ. ಇದರ ಶಾಸ್ತ್ರೀಯ ನಾಮಧೇಯ ಟೆರೋಕಾರ್ಪಸ್ ಮಾರ್ಸುಪಿಯಂ. ಇದನ್ನು ಇಂಡಿಯನ್ ಕಿನೋ ಟ್ರೀ ಎಂದು ಕರೆಯುವರು. ಇದು ಫೇಬಿಯೇಸಿ ಕುಟುಂಬಕ್ಕೆ ಸೇರಿದ ಒಣ, ಬೆಟ್ಟಗುಡ್ಡಗಳ, ಎಲೆ ಉದುರುವ ಕಾಡುಗಳಲ್ಲಿ ಬೆಳೆಯುವ ಮರ. ಎಲೆ, ಹೂವು ಹಾಗೂ ಚಕ್ಕೆ ಔಷಧೀಯ ಗುಣಗಳನ್ನು ಹೊಂದಿದೆ. ಸಾಗುವಾನಿಯನ್ನು ಪಡೌಕ್ ಎಂಬ ಹೆಸರಿನಲ್ಲಿ ಮಾರುವುದುಂಟು. ಟೆರೋಕಾರ್ಪಸ್ಸಿನಲ್ಲಿ ನಾನಾ ಪ್ರಭೇದಗಳುಂಟು. ಹೆಚ್ಚಿನ ಮಾಹಿತಿ: - ಒಂದು ಕಾಲದಲ್ಲಿ ಬೆಂಗೇಮರವು ಬೆಂಗಳೂರಿನಿಂದ ಹಿಡಿದು ತಿರುಪತಿ ಬೆಟ್ಟಗಳವರೆಗಿನ ಕಾಡುಗಳಲ್ಲಿ ದಟ್ಟವಾಗಿ ಬೆಳೆಯುತ್ತಿತ್ತು. ತಿರುಪತಿ ತಿಮ್ಮಪ್ಪನ ಈಗಿನ ವಿಗ್ರಹವನ್ನು ಬೇಂಗೇ ಮರದಿಂದ ಕೆತ್ತಲಾಗಿದೆ ಎಂಬ ವಾದವಿದೆ. - ತಿರುಪತಿ ತಿಮ್ಮಪ್ಪನ ವಿಗ್ರಹವನ್ನು ಮರದಲ್ಲಿ ಕೆತ್ತಲಾಗಿದೆಯೇ, ಶಿಲೆಯಲ್ಲಿ ಕತ್ತಲಾಗಿದೆಯೇ ಎಂಬುದಕ್ಕೆ ಅಧಿಕೃತ ಮಾಹಿತಿ ದೊರೆಯುವುದಿಲ್ಲ. ಅಲ್ಲಿರುವ ಮೂರ್ತಿ ವಿಷ್ಣುವಿನದೇ, ಶಿವನದೇ, ದೇವಿಯದೇ, ಬುದ್ಧನದೇ ಎಂಬುದರ ಬಗ್ಗೆ ಜಿಜ್ಞಾಸೆಯಿದೆ. ಶ್ರೀರಾಮಾನುಜಾಚಾರ್ಯರು ಇಲ್ಲಿರುವ ವಿಗ್ರಹ ವಿಷ್ಣುವಿನದು ಎಂದು ಸಾರಿ ವೈಷ್ಣವಾಗಮ ರೀತ್ಯ ಪೂಜೆ ಪುನಸ್ಕಾರಗಳನ್ನು ನಡೆಸಲು ಅಪ್ಪಣೆಯನ್ನು ನೀಡಿದರು. ಹಾಗೆಯೇ ನಡೆಯುತ್ತಿದೆ. - ತಿಮ್ಮಪ್ಪನ ವಿಗ್ರಹ ಬಹುಶಃ ಬೇಂಗೇ ಮರದ್ದೇ ಆಗಿರಬೇಕು. ತಿಮ್ಮಪ್ಪನಿಗೆ ಸಲ್ಲುವ ಪೂಜಾ ವಿವರಗಳನ್ನು ಗಮನಿಸಿ. ಪ್ರತಿಶುಕ್ರವಾರ ಬೆಳಿಗ್ಗೆ ನಿಜಪಾದ ದರ್ಶನ ಎನ್ನುವ ಕೈಂಕರ್ಯ ನಡೆಯುತ್ತದೆ. ಈ ಅವಧಿಯಲ್ಲಿ ತಿಮ್ಮಪ್ಪನ ವಿಗ್ರಹಕ್ಕೆ ಕನಿಷ್ಟ ಅಲಂಕಾರವಿರುತ್ತದೆ. ಪುರೋಹಿತರು ಪುನಗಿನ ಬೆಕ್ಕಿನ (ಹೌದು. ಪುನಗಿನ ಬೆಕ್ಕು. ಸಿವೆಟ್ ಕ್ಯಾಟ್ ಎಂದು ಕರೆಯುವರು. ಇದರ ವೃಷಣಗಳಿಂದ ಪುನುಗು ಎಂಬ ಸುವಾಸನೆಯನ್ನು ತಯಾರಿಸುವರು. ಸಾತ್ವಿಕ ದೇವರಿಗೆ-ಅಂದರೆ ಕೇವಲ ಪೊಂಗಲ್, ಪುಳಿಯೊಗರೆ, ಲಾಡು, ವಡೆಯ ನೈವೇದ್ಯ ಸ್ವೀಕರಿಸುವ ದೇವರಿಗೆ-ಪುನುಗಿನ ಬೆಕ್ಕು+ಮೂಲಿಯುಕ್ತ ತೈಲದಿಂದ ವಾರಕ್ಕೊಮ್ಮೆ ಮಾಲೀಶ್ ನಡೆಯುತ್ತದೆ) ತುಪ್ಪದಿಂದ ತಯಾರಿಸಿದ ವಿಶೇಷ ತೈಲವನ್ನು ವಿಗ್ರಹಕ್ಕೆ ಲೇಪಿಸುತ್ತಾರೆ. ಮರವು ಹಾಳಾಗದಿರಲು ಇಂತಹ ತೈಲವನ್ನು ಲೇಪಿಸುವುದನ್ನು ಸಹಜ. - ತಿಮ್ಮಪ್ಪನ ವಿಗ್ರಹವನ್ನು ಬೇಂಗೇಮರದಿಂದ ಮಾಡಿರುವ ಕಾರಣ, ತಿಮ್ಮಪ್ಪನನ್ನು ಬೇಂಕಟನಾಥ ಎಂದು ಕರೆಯುವರು. ಕಾಲಕ್ರಮೇಣ ಈ ಹೆಸರು ವೇಂಕಟನಾಥ, ವೇಂಕಟೇಶ್ವರ ಎಂದು ಆಯಿತು. ಆದರೆ ನಾವು ತಪ್ಪು ತಪ್ಪಾಗಿ ವೆಂಕಟನಾಥ/ವೆಂಕಟೇಶ್ವರ ಎಂದು ಕರೆಯುತ್ತೇವೆ. ಆಸಕ್ತರು ಭಾರತರತ್ನ ಡಾ.ಸುಬ್ಬುಲಕ್ಷ್ಮಿಯವರು ಹಾಡಿರುವ ವೇಂಕಟೇಶ್ವರ ಸುಪ್ರಭಾತವನ್ನು ಸೂಕ್ಷ್ಮವಾಗಿ ಗಮನಿಸಲಿ. ಅವರು ಸ್ಪಷ್ಟವಾಗಿ ವೇಂಕಟನಾಥ ಎಂದೇ ಉಚ್ಛರಿಸುವುದನ್ನು ಕೇಳಬಹುದು. - ಬೆಂಗೇಮರ ಹಾಗೂ ಬೇಂಕಟನಾಥನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯಬಯಸುವರು ಉದಯಭಾನು ಕಲಾಸಂಘ ಪ್ರಕಟಿಸಿರುವ ಬೆಂಗಳೂರು ದರ್ಶನ ಎಂಬ ಬೃಹತ್ ಕೃತಿಯನ್ನು ನೋಡಬಹುದು. ಹಾಗೆಯೇ ಸಾ.ಕೃ.ರಾಮಚಂದ್ರರಾವ್ ಅವರು ಬರೆದಿರುವ ತಿರುಪತಿ ತಿಮ್ಮಪ್ಪ ಕೃತಿಯನ್ನು ಪರಿಶೀಲಿಸಬಹುದು. -ನಾಸೋ

ವಿವರಗಳಿಗೆ ಧನ್ಯವಾದಗಳು ನಾಸೋ ಅವರೆ. ಅಂದಹಾಗೆ - ತಮಿಳಿನಲ್ಲಿ ’ವೇಂಗಡಂ’ ಎಂದರೆ ತಿರುಮಲೆ/ತಿರುಪತಿ. ಹೀಗಾಗಿ ಇದು ಸ್ಥಳವಾಚಕವೂ ಹೌದು. ಬೆಂಗೇ ಮರದಿಂದಲೇ ವೇಂಗಡಂ ಬಂದಿದೆಯೇ ಇಲ್ಲವೇ ಅನ್ನುವುದೂ ಯೋಚಿಸಬೇಕಾದ ಸಂಗತಿ ಎನಿಸುತ್ತದೆ. ವೇಂಗಡದಲ್ಲಿ ನೆಲೆಸಿದ ದೇವರೂ ವೇಂಗಡನಾಥ ನಾಗುವನಲ್ಲವೇ?

ತಿರುಪತಿಯನ್ನು ವೇಂಗಡಂ ಎಂದು ಕರೆಯುವುದು ನಿಜ. ಏಕೆಂದರೆ ತಿರುಪತಿಯ ಸುತ್ತಮುತ್ತಲ ಪ್ರದೇಶದಲ್ಲಿ ಬೇಂಗೆಮರಗಳ ದಟ್ಟ ಕಾಡಿತ್ತು. ಬೇಂಗೆಮರಗಳ ಪ್ರದೇಶವನ್ನು ತಮಿಳರು ವೇಂಗಡಂ ಎಂದು ಕರೆದಿರಬಹುದು. (ಮೂಲಕಥೆಯ ಪ್ರಕಾರ ಈ ಪ್ರದೇಶ ವರಾಹಸ್ವಾಮಿಗೆ-ಸ್ಥಳೀಯ ಬುಡಕಟ್ಟಿನ ಜನರಿಗೆ-ಸೇರಿದ್ದು) ತಿಮ್ಮಪ್ಪನು ಪದ್ಮಾವತಿಯನ್ನು ಮದುವೆಯಾಗಿ ಈ ಪ್ರದೇಶದ ಒಡೆಯನಾದಮೇಲೆ ಆತನು ವೇಂಕಟನಾಥನು ಆಗಿದ್ದಿರಬಹುದು. ಆತನ ವಿಗ್ರಹವನ್ನೂ ಬೇಂಗೆಮರದಿಂದ ಮಾಡಿರುವ ಕಾರಣ ಆತನು ಬೇಂಕಟನಾಥ/ವೇಂಕಟನಾಥನಾದ ಎನ್ನುವುದು ಸಾ.ಕೃ.ರಾ ಅವರ ಅಭಿಪ್ರಾಯ. ಹಂಸಾನಂದಿಯವರಿಗೆ ಧನ್ಯವಾದಗಳು. -ನಾಸೋ

ಹರ್ಶ ಮತ್ತು ನಾನು ಚಾಟ್ ಮಾಡುತ್ತಿದ್ದಾಗ ಇದು ಹುಟ್ಟಿತು.... ಹರ್ಶ...ಹಂಚಿಕೊಂಡಿದಕ್ಕೆ ನನ್ನಿ ಬೆಂಗಾವಲೂರು - ಇದು ಸರಿಯಲ್ಲ ಅನ್ಸುತ್ತೆ. ಯಾಕಂದ್ರೆ ಎಶ್ಟೊಂದು ಬೆಂಗಾವಲೂರುಗಳು ಇರಬೇಕಿತ್ತು ಬೇಂಗ, ಬೆಂಗ, ಬೇಣ್ಣ -- ಎರಡೂ ಸರಿ - ರೆಡ್ ಸ್ಯಾಂಡಲ್ವುಡ್ Ka(ಕನ್ನಡ). (Lush.) bēṅga P. marsupium. Tu(ತುಳು). bēṅṅa, beṅga red sandalwood, http://dsal1.uchicag... ಹಾಗಾಗಿ ವೇಂಕಟ,ವೇಂಗಡ, ವೆಂಕಟ -- ಎಲ್ಲವೂ ಸರಿ....ತಮಿಳಿನಲ್ಲಿ ವೇಂಕೈ ಅನ್ನುತ್ತಾರೆ. ಕನ್ನಡನಾಡಿನಲ್ಲಿ ’ಬೇಗೂರು’ ಎಂಬ ಹಲವು ಊರುಗಳು ಇರುವುದು ಇದೇ ಕಾರಣಕ್ಕಾಗಿ. (ಬೇಂಗ ಮರದ) ಅದು ಹಳೆಗನ್ನಡದಲ್ಲಿ ಬೇಂಗೂರು --ಹೊಸಗನ್ನಡದಲ್ಲಿ ಬೇಗೂರು ಆಗಿದೆ. ಒಟ್ಟಿನಲ್ಲಿ ನಮ್ಮ ಗಂದದ ಗುಡಿಯಾದ ನಾಡಿನ ರಾಜದಾನಿಗೆ ಗಂದದ ಹೆಸರು ಇರುವುದು ತುಂಬ ಒಳ್ಳೇದು. ಬೆಂಗ(ಮರಗ)ಳ+ಊರು= ಬೆಂಗಳೂರು --ಇದೇ ಸರಿಯಾದ ವಿವರಣೆ ಅಂತ ಹೇಳಬಹುದು ಆದರೆ ಇದನ್ನೆಲ್ಲ ನಮ್ಮ ಅದಿಕಾರಿಗಳಿಗೆ, ರಾಜಕಾರಿಣಿಗಳಿಗೆ ತಿಳಿಸಿ ಹೇಳುವವರು ಯಾರು? ಇನ್ನು ಹಾಗೆ ಕೊಸರು, ಕೋಲಾರ = ಕೊಲ್ಲ+ಹಾರ = ಕೊಲ್ಲರ ಹಾಡಿ(ಹಳ್ಳಿ) ...ಕೊಲ್ಲ ಎಂಬ ಜನಾಂಗ ಇಲ್ಲಿ ನೆಲೆಸಿತ್ತು ಎನ್ನುವುದಕ್ಕೆ ಪುರಾವೆ. (ಇದೇ ರೀತಿಯದು ಇನ್ನೊಂದು -- ಕೊಲ್ಲೂರು- ಕರಾವಳಿ ಕಡೆ) ಅಗ್ರಹಾರ = ಅಗ್ರ(ಬ್ರಾಹ್ಮಣ)ರ+ ಹಾರ= ಬ್ರಾಹ್ಮಣರ ಹಳ್ಳಿ

>>5520 Ta. vēṅkai East Indian kino tree, Pterocarpus marsupium. Ma. vēṅṅa P. marsupium or santalinus (or Avicennia or Terminalia tomentosa). Ka. (Lush.) bēṅga P. marsupium. Tu. bēṅṅa, beṅga red sandalwood, P. santalinus. Te.<< Pterocarpus marsupium=Indian Kino tree=ರಕ್ತಹೊನ್ನೆಮರ=ಪೂರ್ವಘಟ್ಟಗಳಲ್ಲಿ ಬೆಳೆಯುತ್ತದೆ. Pterocarpus santalinus = Red Sanders or Red Sandalwood tree=ರಕ್ತಚಂದನ=ಇದೂ ಪೂರ್ವಘಟ್ಟಗಳಲ್ಲಿಯೇ ಹೆಚ್ಚು ಬೆಳೆಯುತ್ತದೆ. ಇವೆರಡೂ ಸಹಾ ಫೇಬಿಯೇಸಿ ವಂಶಕ್ಕೇ ಸೇರುತ್ತವೆ. ಆದರೆ ಇವೆರಡೂ ಭಿನ್ನ ಪ್ರಭೇದಗಳು. Avicennia ಮರವನ್ನು ಅಕ್ಯಾಂಥೇಸಿ ವಂಶಕ್ಕೆ ಸೇರಿಸಬೇಕೋ ಅಥವ ಒಂದೇ ಒಂದು ಗಣವಿರುವ ಅವಿಸೆನ್ನಿಸ್ಸಿಯೇ ಸೇರಿಸಬೇಕೋ ಎಂಬ ಗೊಂದಲವಿದೆ. Terminalia tomentosa ಎನ್ನುವುದು ಮತ್ತಿಮರ. ಹೌದು. ಸಾಗುವಾನಿ ಮತ್ತಿ ಈ ಮರದ್ದೇ. (ಈ ಮರದ ವಿಶೇಷವೇನೆಂದರೆ, ಇದರ ಜಲವಾಹಕನಾಳಗಳ (ಜೈಲಮ್) ಸ್ಥಳವನ್ನು ಅಂದಾಜಿನ ಮೇಲೆ ಗ್ರಹಿಸಿ, ಕೊಡಲು ಅಥವ ಮಚ್ಚಿನಿಂದ ಕಚ್ಚು ಮಾಡಿದರೆ ಬಿಂದಿಗೆಗಟ್ಟಲೇ ನೀರು ಕಾರಂಜಿಯಂತೆ ಚಿಮ್ಮುತ್ತದೆ! ಇದು ಶುದ್ಧವಾದ ನೀರು. ಬುಡಕಟ್ಟುಜನರು ನೀರಿನ ಕೊರತೆಯುಂಟಾದಾಗ ಈ ಮರದ ನೀರನ್ನೇ ಕುಡಿಯುವರು) ನನ್ನ ದೃಷ್ಟಿಯಲ್ಲಿ A Dravidian etymological dictionary ಯು ಬೇಂಗೆಮರವನ್ನು ರಕ್ತಚಂದನ ಎಂದು ತಪ್ಪಾಗಿ ಹೆಸರಿಸಿದೆ. -ನಾಸೋ

ನಾಸೋ ಸಾರ್, A Dravidian etymological dictionary - ಇಲ್ಲಿ ಕೊಟ್ಟಿರುವುದನ್ನ ತಪ್ಪಾಗಿ ಅರ್ತೈಸಿದ್ದೀರ ಅನ್ಸುತ್ತೆ. ಅವರು ಕೊಟ್ಟಿರುವ ಬೊಟಾನಿಕಲ್ ಹೆಸರುಗಳು ಆಯ ನುಡಿಯಲ್ಲಿ ಬಳಕೆಯಲ್ಲಿ ತಕ್ಕಂತೆ ಇವೆ ಹಾಗು ಬೇರೆ ಬೇರೆಯಾಗಿವೆ ಎಂಬುದನ್ನ ಗಮನಿಸಿ. ತಮಿಳಿನಲ್ಲಿ ಮಾತ್ರ, Ta. vēṅkai East Indian kino tree, Pterocarpus marsupium ಮಲೆಯಾಳದಲ್ಲಿ ಮಾತ್ರ, Ma. vēṅṅa Pterocarpus marsupium or santalinus (or Avicennia or Terminalia tomentosa) ಕನ್ನಡದಲ್ಲಿ ಮಾತ್ರ, Ka. (Lush.) bēṅga Pterocarpus marsupium ತುಳುವಿನಲ್ಲಿ ಮಾತ್ರ ರೆಡ್ ಸ್ಯಾಂಡಲ್ವುಡ್= ಬೆಂಗ (ಕನ್ನಡದಲ್ಲಿ ಅಲ್ಲ), Tu. bēṅṅa, beṅga red sandalwood, P. santalinus. ಹಾಗೆ, ನೀವು ಸರಿಯಾಗಿ ಗುರುತಿಸಿರುವಂತೆ Terminalia tomentosa ಮತ್ತಿ ಎಂಬುದು ದ್ರಾವಿಡ ನುಡಿಗಂಟು ಕೂಡ ಗುರುತಿಸಿದೆ http://dsal1.uchicag... Ta. marutu, marutam Terminalia tomentosa. Ma. marutu T. alata. Ka. matti(ಮತ್ತಿ), maddi, mar̤ti several Terminalia species, ದಯವಿಟ್ಟು ದ್ರಾವಿಡ ನುಡಿಗಂಟನ್ನು ಹಗುರವಾಗಿ ನೋಡದಿರಿ ಹದುಳವಿರಲಿ, ಬರತ್ http://ybhava.blogsp...

ವೈಭವ ಅವರೆ, ನಾನು ನಿಘಂಟನ್ನು ಲಘುವಾಗಿ ಪರಿಗಣಿಸಿಲ್ಲ. ಅಂತಹ ಭಾವ ನಿಮಗೆ ಬಂದಿದ್ದರೆ ಕ್ಷಂಎಯಿರಲಿ. ಒಂದು ಮರಕ್ಕೆ ವಿವಿಧ ಪ್ರಾದೇಶಿಕ ಭಾಷೆಗಳಲ್ಲಿ ಬೇರೆ ಬೇರೆ ಹೆಸರನ್ನು ನೀಡಿ, ಗೊಂದ್ದಲಕ್ಕೆ ಅವಕಾಶವನ್ನು ನೀಡಬಾರದು ಎಂದೇ ದ್ವಿನಾಮ ಪದ್ಧತಿಯು ಜಾರಿಗೆ ಬಂದಿತಲ್ಲವೆ! ಈ ಹಿನ್ನೆಲೆಯಲ್ಲಿ ಕನ್ನಡಕ್ಕೆ ಸಂಬಂಧಪಟ್ಟ ಹಾಗೆ ರಕ್ತಹೊನ್ನೆ ಹಾಗೂ ರಕ್ತಚಂದನ ಬೇರೆ ಬೇರೆ ಮರಗಳು ಎನ್ನುವುದನ್ನು ಸ್ಪಷ್ಟಪಡಿಸಲು ಇಷ್ಟೆಲ್ಲ ಹೇಳಬೇಕಾಯಿತು. ನಿಘಂಟುಕಾರರು ಆಯಾ ಭಾಷೆಯಲ್ಲಿರುವ ಪ್ರಯೋಗವನ್ನು ಹಾಗೆಯೇ ನಮೂದಿಸುತ್ತಾರೆ. ಆದರೆ ನಾವು ದ್ವಿನಾಮ ಪದ್ಧತಿಯನ್ನು ಆಧರಿಸಿ ಗಿಡ, ಮರ, ಪ್ರಾಣಿ, ಪಕ್ಷಿಗಳನ್ನು ಗುರುತಿಸುವುದು ಮೇಲು. ಇದರಿಂದ ನಿಖರತೆಯನ್ನು ಸಾಧಿಸಬಹುದು. ಗೊಂದಲವನ್ನು ನಿವಾರಿಸಬಹುದು. Pterocarpus marsupium ಮರವನ್ನು ರಕ್ತಹೊನ್ನೆ ಎಂದೇ ಕರೆಯುತ್ತಾರೆ ಎನ್ನುವುದಕ್ಕೆ ಬೆಗಳೂರು ದರ್ಶನ ಕೃತಿಯನ್ನು ತಾವು ನೋಡಬಹುದು. -ನಾಸೋ

‘ಬೆಂಗಳೂರು ದರ್ಶನ’ – ಎರಡು ಸಂಪುಟಗಳಲ್ಲಿ ಪ್ರಕಟವಾಗಿರುವ ಬೃಹತ್ ಕೃತಿ. ಇದನ್ನು ಬೆಂಗಳೂರಿನ ಉದಯ ಭಾನು ಕಲಾ ಸಂಘದವರು ಪ್ರಕಟಿಸಿದ್ದಾರೆ. (ಉದಯಭಾನು ಕಲಾ ಸಂಘ, ರಾಮಕೃಷ್ಣ ಬಡಾವಣೆ, ಗವಿಪುರ ಛತ್ರದ ಎದುರು, ಕೆಂಪೇಗೌಡನಗರ, ಬೆಂಗಳೂರು-೫೬೦ ೦೧೯. ನರಸಿಂಹ, ಕಾರ್ಯದರ್ಶಿ, ದೂರವಾಣಿ: ೨೬೬೦೧೮೩೧) ಇದರ ಬೆಲೆ ರೂ.೧೦೦೦/-. ಬೆಂಗಳೂರಿನ ಬಗ್ಗೆ ಸಮಗ್ರ ಮಾಹಿತಿಯನ್ನು ಕೊಡುವ ಪುಸ್ತಕ. -ನಾಸೋ

<<ಕೋಲಾರ = ಕೊಲ್ಲ+ಹಾರ = ಕೊಲ್ಲರ ಹಾಡಿ(ಹಳ್ಳಿ) ...ಕೊಲ್ಲ ಎಂಬ ಜನಾಂಗ ಇಲ್ಲಿ ನೆಲೆಸಿತ್ತು ಎನ್ನುವುದಕ್ಕೆ ಪುರಾವೆ.>>> ಇದಕ್ಕೆ ವಿವರಣೆ ನೀಡಲು ಸಾದ್ಯವೇ...?

ಹೆಚ್ಚಿನ ವಿವರಣೆಗೆ ಶಂ.ಬಾ.ಜೋಶಿಯವರ ’ಶಂ.ಬಾ ಸಂಪುಟ’ ಎಂಬ ಹೊತ್ತಗೆ ಓದಿ. ಅವರು ಹೇಳಿರುವುದು ಕೊಲ್ಲರು ದ್ರಾವಿಡರಿಗಿಂತ ಹಳಬರು. ಮೊದಮೊದಲು ತೆಂಕು ಬಾರತದಲ್ಲಿ ನೆಲೆಸಿದ್ದು ಆಮೇಲೆ ಬಂಗಾಳದ ಆಚೆಗೆ(ನಾರ್ತ್-ಈಸ್ಟ್) ಗುಳೆ ಹೋದರು ಅಂತ ಹೇಳಿದ್ದಾರೆ.

ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಅದು ಬೆ೦ಗಾವಲು ಪಡೆಯ ಊರಾಗಿತ್ತು, ಹಾಗಾಗಿ ವಿಜಯನಗರ ಕಾಲದ ಕೆಲವು ಇತಿಹಾಸದ ಪ್ರಸ್ತಾವಗಳಲ್ಲಿ "ಬೆ೦ಗಾವಲೂರು" ಎಂದು ಕರೆಯಲಾಗಿದ್ದು ಕಾಲಾ೦ತರದಲ್ಲಿ ಅಪಭ್ರ೦ಶವಾಗಿ ಬೆ೦ಗಳೂರು ಆಗಿದೆ ಎನ್ನುವುದು ಸತ್ಯಕ್ಕೆ ಹತ್ತಿರ ಅನ್ನಿಸುತ್ತದೆ.

೯ನೇ ಶತಮಾನದಲ್ಲೇ ಬೆಂಗಳೂರು ಎಂದು ಇಲ್ಲಿ ಉಲ್ಲೇಖವಿರುವಾಗ ವಿಜಯನಗರದ ಕಾಲದ ಬೆಂಗಾವಲು ಪಡೆಗಳ ಊರು ಎಂಬ ವಾದ ಸರಿ ಕಾಣುವುದಿಲ್ಲ. ವಿಜಯನಗರ ಸಾಮ್ರಾಜ್ಯದ ಸ್ಥಾಪನೆ ಆದದ್ದೇ ೧೪ನೇ ಶತಮಾನದಲ್ಲಿ.

ಗುರುಗಳೆ ಮತ್ತೆ ನೀವು ಬಂದದ್ದು ನನ್ನಲ್ಲಿ ಸಂತಸ ಮೂಡಿಸಿದೆ. ನಿಮ್ಮಿಂದ ಹಲವಾರು ವಿಚಾರಗಳನ್ನು ತಿಳಿಯಬಹುದೆಂದು. ಹರ್ಷ ನಿಮ್ಮಂತವರ ಅವಶ್ಯಕತೆಯಿದೆ ಸಂಪದಕ್ಕೆ ಬಹಳಷ್ಟು ಇದೆ. ಸತತವಾಗಿ ನೀವು ಸಂಪದದಲ್ಲೇ ಇರಿ ಸರ್. ಮಾತುಗಳು ಹೋಗುತ್ತೆ ಬರುತ್ತೆ. ಇವತ್ತಿನ ನಿಮ್ಮ ಲೇಖನದ ಬಗ್ಗೆ ನಾನೂ ಚರ್ಚೆ ಮಾಡಬೇಕೆಂದರೆ ಮತ್ತೆ ವಿಕೀಪಡಿಯಾ ಅಥವಾ ಗೂಗಲ್ ನಲ್ಲಿ ಸಿಕ್ಕಂತಹ ಮಾಹಿತಿಯನ್ನು ಇಲ್ಲಿ ಹಾಕಬೇಕು ಅದು ನನಗೆ ಇಷ್ಟವಿಲ್ಲ. ನಿಮ್ಮೆಲ್ಲರ ಚರ್ಚೆಯಿಂದ ವಿಷಯ ತಿಳಿದುಕೊಳ್ಳುವ ಕುತೂಹಲದಲ್ಲಿ ನಾನಿದ್ದೇನೆ. ಧನ್ಯವಾಗದಳು

ಮಾಹಿತಿಗೆ ಧನ್ಯವಾದ ಹರ್ಷ. ಅಲ್ಲದೇ ಬೇಗೂರು ತಾಣವು ತಮಿಳುನಾಡು, ಆಂಧ್ರ, ಕರುನಾಡು ಕೂಡುವ ಬಿಂದು. (junction point) ಒಂಬತ್ತನೆಯ ಶತಮಾನದಲ್ಲಿಯೇ ತಮಿಳುನಾಡು, ಆಂಧ್ರ ಹಾಗು ಕರುನಾಡು ಕೂಡುವ ಬಿಂದು ಈಗಿನ ಜಾಗದಲ್ಲಿಯೇ ಇತ್ತೆಂದು ಉಹಿಸುತ್ತಿದ್ದೀರಾ ಅಥವಾ ಖಚಿತ ಮಾಹಿತ ಇದೆಯಾ? ೯ನೇ ಶತಮಾನ ಎಂದರೆ ಬಹುಷಃ ರಾಷ್ಟ್ರಕೂಟರು ಆಳುತ್ತಿದ್ದ ಕಾಲವಿರಬಹುದು. ಆಗಲು ಆಂಧ್ರ, ಕರುನಾಡಿನ ಕಲ್ಪನೆ ಇದ್ದಿದ್ದರೂ ಅದಕ್ಕೆ ನಿರ್ದಿಷ್ಟವಾದ ಸರಹದ್ದು ಇರುವ ಸಾಧ್ಯತೆ ಕಾಣುತ್ತಿಲ್ಲ.

<<ಅಚ್ಚ ಕನ್ನಡದಲ್ಲಿ "ಬೇಂಗ" ಎಂದರೆ ಶ್ರೀಗಂಧ. ಬೆಂಗಳೂರು ಎಂದರೆ ಶ್ರೀಗಂಧವಿರುವ ಊರು ಎಂಬ ಹೆಸರು ಬಂದಿರಬಹುದು>> ಬೆಂಗಳೂರು 'ಬೇಂಗ'ಳೂರೇ ಆಗಿದ್ದರೆ ಚೆನ್ನು. ಗಂಧದೂರು ನಮ್ಮ ಊರು ಎಂದು ಹಾಡಬಹುದು :-) ಬೆಂಗಳೂರು ಬೆಂದಕಾಳೂರು ಆಗಿರಲಿಕ್ಕೆ ಸಾಧ್ಯವಿಲ್ಲ ಎನ್ನುವ ಮಾಹಿತಿ ಕೊಟ್ಟದ್ದಕ್ಕೆ ಸಾಲಿಮಠರಿಗೆ ಧನ್ಯವಾದಗಳು. ಚರ್ಚೆ, ಸಂಶೋಧನೆ ಮುಂದುವರಿಯುತ್ತದೆ ಎಂದು ಆಶಿಸುತ್ತೇನೆ. ಶಾಮಲ

ಥಟ್ ಅಂತ ಹೇಳಿಯಲ್ಲಿ ಸಮೀಕರಣವನ್ನು ರಚಿಸಲು ಹೇಳಿದಾಗ,ಗಣಿತದ ನಿಯಮಗಳನ್ನೂ ಪಾಲಿಸಿದರೆ,ನೀವೆಣಿಸಿದ ಉತ್ತರ ಸಿಗದು. ಉದಾ: 16-14X10-16=4 ಆಗದು.ನಿಯಮಗಳ ಪ್ರಕಾರ Xಕ್ಕೆ ಮೊದಲ ಆದ್ಯತೆ ನಿಡಬೇಕು. :)

ಮಾನ್ಯರೆ, ನೀವೆಂದಂತೆ ಸಂಡೂರು ಬಳ್ಳಾರಿ ಜಿಲ್ಲೆಯಲ್ಲಿದೆ. ಇಲ್ಲಿ ಯಾವುದೇ ರೀತಿಯಲ್ಲಿ ಚಂದನದ ಗಿಡಗಳು ಬೆಳೆಯುತ್ತಿರಲಿಲ್ಲ. ಸಂಡೂರು ಹೆಸರು ಬರಲು ಕಾರಣ ಇಲ್ಲಿರುವ ಸ್ಕಂದನ ದೇವಸ್ಥಾನ. ಕಾರ್ತಿಕೇಯ ಅಥವಾ ಸ್ಕಂದನ ಪ್ರಾಚೀನ ದೇವಸ್ಥಾನ ಇಲ್ಲಿದ್ದುದಕ್ಕಾಗಿ, ಇದನ್ನು ಸ್ಕಂದಪುರ ಎಂದು ಕರೆಯುತ್ತಿದ್ದರು. ಸ್ಕಂದಪುರ>ಸ್ಕಂದೂರು>ಸೊಂಡೂರು ಎಂದಾಯ್ತು. ಬ್ರಿಟೀಶರ ಆಳ್ವಿಕೆಯಲ್ಲಿ ಆಂಗ್ಲ ಅಧಿಕಾರಿಗಳು ಇದನ್ನು ಸ್ಯಾಂಡೂರು ಎಂದು ಉಚ್ಚಾರಣೆ ಮಾಡುತ್ತಿದ್ದುದರಿಂದ ಇದು ಮುಂದೆ ಸಂಡೂರು ಎಂದಾಯ್ತು. ಆದರೆ ಇಂದಿಗೂ ಸ್ಥಳೀಯರಲ್ಲಿ ಸೊಂಡೂರು ಎಂಬ ಬಳಕೆಯೇ ಇದೆ. ನೋಡಿ: ಕಲ್ಲು>ಕೊಲ್ಲು, ದಬ್ಬು(ತಳ್ಳು)>ದೊಬ್ಬು, ಕಣ್ಣು>ಕೊಣ್ಣು, ಕುಮಾರಸ್ವಾಮಿ>ಕೊಮಾರಸ್ವಾಮಿ. ಇಲ್ಲಿ ಎಲ್ಲವೂ ಓಕಾರದಿಂದ ಪ್ರಾರಂಭವಾಗುವ ಶಬ್ದಗಳಿವೆ. ಅದು ಇಲ್ಲಿನ ಆಡುಭಾಷೆಯೂ ಹೌದು. ನಾಗರಿಕರ ಬಾಯಲ್ಲಿ ಮಾತ್ರ ಸಂಡೂರು, ಸ್ಥಳೀಯರಲ್ಲಿ ಇದು ಇಂದಿಗೂ ಸೊಂಡೂರು. ಇಲ್ಲಿ ಈ ಮೊದಲು ಅರಣ್ಯವಿತ್ತಾದರೂ ಶ್ರೀಗಂಧದ ಮರಗಳಿರಲಿಲ್ಲ ಹೀಗಾಗಿ ಇದನ್ನು ನಿಮ್ಮ ಹೇಳಿಕೆಯಂತೆ ಸಂಡು ಅಥವಾ ಶ್ರೀಗಂಧರ ಊರು ಎನ್ನಲು ಸಾಧ್ಯವಿಲ್ಲ ಎಂಬುದು ನನ್ನ ಸ್ಪಷ್ಟೀಕರಣ. -ಸಿದ್ಧರಾಮ ಹಿರೇಮಠ ಕೂಡ್ಲಿಗಿ. ಮರೆತ ಮಾತು : ಸಂಡೂರು ಕೂಡ್ಲಿಗಿಯಿಂದ ಕೇವಲ ೩೦ ಕಿ.ಮೀ ದೂರವಿದೆ. ಹಾಗೂ ನಾನು ಸ್ನಾತಕೋತ್ತರ ಪದವಿ ಪಡೆದಿರುವುದೂ ಸಂಡೂರಿನ ನಂದಿಹಳ್ಳಿಯ ಸ್ನಾತಕೋತ್ತರ ಕೇಂದ್ರದಲ್ಲಿ. ಸಂಡೂರಿನ ಬಗ್ಗೆ ಹೆಚ್ಚು ಮಾಹಿತಿ ನನಗೆ ತಿಳಿದಿದೆ ಎಂಬುದರಿಂದಲೇ ಈ ಸ್ಪಷ್ಟನೆ.

ನಾನು ಈಗೀಗ ಕಂಡುಕೊಂಡ ಅರಿವು. ೧. ಯಾವುದೇ ಊರಿನ ಹೆಸರುಗಳ ಬಗ್ಗೆ ಆರಯ್ಯು/ಸಂಶೋದನೆ ಮಾಡುವಾಗ ಅಲ್ಲಿರುವ ಪರಿಸರದ (ಗುಡ್ಡ,ಬೆಟ್ಟ, ಬಯಲು, ಹೊಳೆ, ಕೆರೆ, ಪ್ರಾಣಿ, ಮರ/ಗಿಡದ ಜಾತಿಗಳು...)ಗಮನ ಹರಿಸಿದರೆ ಸುಳಿವು ಸಿಗುತ್ತವೆ ೨. ಅಲ್ಲಿ ನೆಲಸಿದ್ದ ಜನಾಂಗ/ಬುಡಕಟ್ಟು ಜನರು, ಅವರ ನುಡಿ ಇವುಗಳು ಆರಯ್ಯು/ಸಂಶೋದನೆಯಲ್ಲಿ ನೆರವಿಗೆ ಬರುತ್ತದೆ ( ಸೋಲಿಗ, ಯರವ, ಕುರುಂಬ, ಜೇನು ಕುರುಬ, ಕೊಲ್ಲ, ಲಟ್ಟ, ಕನ್ನ, ರಟ್ಟ) ಮತ್ತು ಇವಕ್ಕೆ ಕಲ್ಬರಹ ಮತ್ತು ಇನ್ನಿತರ ನಂಬತಕ್ಕ ಆದಾರಗಳನ್ನು ನೋಡುವುದು ಒಳಿತು. ಯಾವುದೇ ವ್ಯಕ್ತಿ/ದೇವರು ಮತ್ತು ಇವುಗಳ ಮೇಲೆ ಹೆಣೆದ ಕಟ್ಟುಕತೆಗಳು ನಮ್ಮನ್ನು ದಾರಿ ತಪ್ಪಿಸಬಹುದು. ಅವು ಬಹುಪಾಲು ದಿಟವಾಗಿರುವುದಿಲ್ಲ.

ಕಾವಲ್ = ಮೀಸಲಿಟ್ಟ ಸ್ಥಳ ಬೇಂಗ+ಕಾವಲ್+ಊರು = ಬೇಂಗಾವಲೂರು. ಬೆಂಗಳೂರಿನಲ್ಲಿ ಶ್ರೀಗಂಧದ ಕಾವಲ್ ಎಂಬ ತಾಣವಿದೆ. ಶ್ರೀಗಂಧದ ಕಾವಲ್ ಎಂಬುದು ಶ್ರೀಗಂಧಕ್ಕಾಗಿ ಮೀಸಲಿಟ್ಟ ಸ್ಥಳ ಎಂಬ ಅರ್ಥದಲ್ಲಿ ಬೞಕೆಗೊಂಡಿರಬಹುದು. ಹಾಗೆ ನೋಡುವಾಗ ಬೇಂಗದ ಕಾವಲ್ ಬೇಂಗಾವಲೂರು ಆಗುವ ಸಾಧ್ಯತೆಯಿದೆ.