ಕಾಸಿಲ್ಲದಿದ್ದರೆ ಕ್ರಿಯಾಶೀಲತೆ! -- ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆಃ ಭಾಗ ೨೦

To prevent automated spam submissions leave this field empty.

(೬೦)


"ಕಲೆಗೂ ಜೀವನಕ್ಕೂ ಇರುವ ಒಂದೇ ಸಾಮ್ಯತೆ--ಅವುಗಳ ನಿಗೂಢತೆ. ಅವುಗಳ ಬಗ್ಗೆ ಎಲ್ಲ ತಿಳಿದವರು ಬದುಕುವುದರಲ್ಲಿ, ಕಲಾಸೃಷ್ಟಿಯಲ್ಲಿ ಆಸಕ್ತಿಯನ್ನೇ ಕಳೆದುಕೊಂಡುಬಿಡಬಹುದು. ಜನ್ಮಪೂರ್ತಿ ಬದುಕಲು ಆಗುವಷ್ಟು ಹಣ ದೊರಕಿಬಿಟ್ಟರೆ ಶೇಖಡ ೯೯ ಕಲಾವಿದರು ಕಲೆಯನ್ನು ಸೃಷ್ಟಿಸುವುದನ್ನು ಬಿಟ್ಟುಬಿಡುತ್ತಾರೆ"


"ಉಳಿದ ೧ ಶೇಖಡ?"


"ಖುಷಿಯಿಂದ ಹೃದಯಸ್ಥಂಭನವಾಗಿಬುಡುತ್ತದೆ!"


"ಅಂದರೆ ಚಿತ್ರಿಸುವುದು, ಹಾಡುವುದು, ಬರೆಯುವುದು, ಕುಣಿಯುವುದು, ಇವೆಲ್ಲ ಮಾಡುವುದು ವಿಚಿತ್ರವಾದ ಹಸಿವಿನಿಂದ. ಊಟದಿಂದ ತುಂಬದ, ಪಾನೀಯಗಳಿಂದ (ಎಲ್ಲ ರೀತಿಯ) ಸಂತೃಪ್ತವಾಗದ, ದೈಹಿಕ ಆಸೆಗಳ ಪೂರೈಕೆಯಿಂದ (ಮತ್ತೆ ಎಲ್ಲ ರೀತಿಯ--ನಿಯಮಬದ್ಧವಾದ, ನೀತಿಬದ್ಧವಾದ, ಕಾನೂನುಬದ್ಧವಾದ ಮತ್ತೂ ಇವೆಲ್ಲಕ್ಕಿಂತಲೂ ವ್ಯತಿರಿಕ್ತವಾದ!) ಶಮನವಾಗದ ಹಸಿವು ಇರುತ್ತದೆ ಮಾನವರಲ್ಲಿ. ಹಣ ಕಳೆದ ಐನೂರು ವರ್ಷಗಳಿಂದ ಅಥವ ಹೊಸ-ವಸಾಹತುಶಾಹಿತ್ವ ಹುಟ್ಟಿಕೊಂಡ ಮೇಲೆ, ಇವೆಲ್ಲಕ್ಕಿಂತಲೂ ಹೆಚ್ಚಿನ ’ರುಚಿ’ ತೋರಿಸಿದೆ ಎಲ್ಲರಿಗೂ.


     ಹಣದ ರುಚಿಯ ವಿಶೇಷವೆಂದರೆ ಅದು ತೀರಿಸುವುದಾಗಿ ಭರವಸೆ ನೀಡುವ ಆಸೆಯೆಂಬುದರ ರೂಪುರೇಷೆಯನ್ನು ಎಂದಿಗೂ ಸ್ಪಷ್ಟಗೊಳ್ಳಿಸದು. ಅಗೋಚರ, ಅಮೂರ್ತವಾದುದ ಬಗ್ಗೆ ಮನುಷ್ಯರಿಗೆ ಯಾವಾಗಲೂ ಒಂದು ವೀಕ್‍ನೆಸ್ ಮೊದಲಿನಿಂದಲೂ ಇದೆ. ಅಥವ ವೀಕ್‍ನೆಸ್‍ನಿಂದಾಗಿಯೇ ಮನುಷ್ಯ ಅಗೊಚರ ಮತ್ತು ಅಮೂರ್ತಗಳಿಗೆ ಆಕರ್ಷಣೆ ಎಂಬ ಭಯದಿಂದ ಸಂಸ್ಥೆಗಳನ್ನು ಸ್ಥಾಪಿಸಿದ್ದಾನೆ (ದೈವಸ್ಥಾನ, ಪೋಲಿಸ್ ಮತ್ತು ಹುಚ್ಚಾಸ್ಪತ್ರೆ). ಆದ್ದರಿಂದಲೇ, ಸಾಕಷ್ಟು ದುಡ್ಡಿದ್ದವನು ಕಲೆ ಸೃಷ್ಟಿಸಲಾರ. ಆತ ಸೃಷ್ಟಿಸಿದ್ದು ಕಲೆಯಾಗಲಾರದ್ದು. ಐಟಿ ಶ್ರೀಮಂತರು, ಬ್ಯೂರಾಕ್ರಸಿ ಮತ್ತು ಕಲಾವಿದರ ಸಂಸಾರಸ್ಥರು--ಇವರೆಲ್ಲರೂ ಕಲಾಸೃಷ್ಟಿ ಮಾಡಿದ್ದೇವೆಂದು ನಾಲ್ಕು ದಿನ ಮೆರೆದಾಡಬಹುದು. ಪಾಪ, ಆ ವಲಯದೊಳಗಿನಿಂದ ನಿಜಕ್ಕೂ ಕಲೆಯ ಸೃಷ್ಟಿಯ ಆಸೆಹೊತ್ತವರ ಪಾಡು ಹೇಳತೀರದು," ಎಂದು ಮಾತು ಮುಗಿಸಿದ್ದ ಪ್ರಕ್ಷುಬ್ ದಾ.


(೬೧)


ಹಣ ಸಾಲದಾಗಿತ್ತು ನಮಗೆ, ಕಲಾಭವನದಲ್ಲಿ ಒಮ್ಮೆ. ಅದೂ ಸಾಧಾರಣ ’ಒಮ್ಮೆ’ಯಲ್ಲವದು, ಕೊನೆಯ ಒಮ್ಮೆಯಾಗಿತ್ತು. ಎರಡು ವರ್ಷದ ಎಂ.ವಿ.ಎ ವ್ಯಾಸಂಗ ಮುಗಿಸಿಕೊಂಡು ಅಂತಿಮವಾಗಿ ನಮ್ಮ ನಮ್ಮ ಊರುಗಳಿಗೆ ಹಿಂದಿರುಗುವ ಸಮಯವಾಗಿತ್ತದು. ಕರ್ನಾಟಕದಿಂದ ಹೋಗಿದ್ದ ನಾಲ್ಕಾರು ಜನರೆಲ್ಲರ ಬಳಿಯೂ ಹಣ ಮುಗಿದು ಹೋಗಿ, ಕಾಸೂ ಇಲ್ಲದಂತಾಗಿತ್ತು. ಅಂದರೆ ಬಂದ ಬಂದ್ ಆಗಿ ಚಿಲ್ಲರೆಗೂ ಪರದಾಡುವ ಚಿಲ್ಲರೆ ಜನರಾಗಿಬಿಟ್ಟಿದ್ದೆವು. ಹೆಚ್ಚು ಕಡಿಮೆ ಇಡಿಯ ಕಲಾಭವನ ಕಾಲಿಯಾಗಿ, ಮಾಮಾನ ಕ್ಯಾಂಟೀನು ಮತ್ತು ಊಟದ ಮೆಸ್ ಬಂದ್ ಆಗಿ, ನಮ್ಮ ಹೊಟ್ಟೆಯೇ ಮೆಸ್ ಆಗಿಬಿಟ್ಟಿತ್ತು. ಊರಿಗೆ ಹಿಂದಿರುಗಳು ರೈಲು ಟಿಕೆಟ್ಟು ತಯಾರಿತ್ತು, ಇನ್ನು ನಾಲ್ಕು ದಿನದ ನಂತರ. ಆದರೆ ಆ ನಾಲ್ಕು ದಿನದ ನಾಷ್ಟಾ, ಊಟಕ್ಕೆ ಹಣ ಮಾತ್ರ ಟೈಟ್ ಆಗಿತ್ತು. ಕಾಸು ಕಡಿಮೆ ಆದ್ದರಿಂದ ನಾವುಗಳು ಕ್ರಿಯಾಶೀಲರು ಎಂಬುದು ಮಾತ್ರ ಖಂಡಿತವಾಗಿತ್ತು!


     ಎಲ್ಲರಿಗೂ ವಿಶ್ವಭಾರತಿ ವಿಶ್ವವಿದ್ಯಾಲಯದ ಬ್ಯಾಂಕಿನಲ್ಲಿ ಅಕೌಂಟಿತ್ತು. "ಅಕೌಂಟ್ ಬಂದ್ ಮಾಡಲು ಇಲ್ಲಿಗೆ ಬಂದೆವು" ಎಂದು ಮೇನೇಜರನಿಗೆ ಹೇಳಿದರೂ "ಇರುವ ಕಾಸು ಬಳಿದುಕೊಂಡುಹೋಗಲು" ಎಂದು ಕೊನೆಗೂ ಹೇಳಬೇಕಾಗಿಬಂತು, "ಕನಿಷ್ಠ ನೂರೊಂದು ರೂಪಾಯಿ ಖಾತೆಯಲ್ಲಿರಬೇಕು" ಎಂದವರು ಕಟ್ಟುನಿಟ್ಟು ಮಾಡಿದಾಗ!


     ನಮ್ಮೆಲ್ಲರದ್ದೂ ಇದ್ದಬದ್ದ ತಲಾ ನೂರಿನ್ನೂರು ರುಪಾಯಿಗಳನ್ನು ಬಾಚಿಕೊಂಡೆವು. ಗುಲ್ಬರ್ಗದ ಗೆಳೆಯ, ಇಂಗ್ಲೀಷಿನಲ್ಲಿ ಹಣದ ಅರ್ಥವನ್ನೂ ತನ್ನ ಹೆಸರಿನೊಂದಿಗೆ ಸೇರಿಸಿಕೊಂಡಿರುವ ’ಡಿ.ಎಂ’ (ಉದಾಹರಣೆಗೆ ದಾದಾ ಮೊನಿ) ಮಾತ್ರ ಗಾಭರಿಯಾಗಿದ್ದ. ತನ್ನ ಖಾತೆಯಲ್ಲಿ ಎಷ್ಟು ಹಣವಿದೆ ಎಂದು ವಿಚಾರಿಸಿದ್ದನಾತ. ನಂತರ ಅದನ್ನು ಹಿಂದೆಗೆಯಲು ಚೆಕ್ ಸಹ ನೀಡಿದ್ದ. ಮುಕ್ಕಾಲು ಗಂಟೆ ಕಳೆದರೂ ಆತನ ಹೆಸರು, ಟೋಕನ್ ಎರಡೂ ಅಥವ ಎರೆಡರಲ್ಲಿ ಒಂದೂ ಕರೆಯಲ್ಪಡಲಿಲ್ಲ.  


  ಅಂತೂ ಕೊನೆಗೆ ಬ್ಯಾಂಕಿನ ಉದ್ಯೋಗಿಯೊಬ್ಬಳು ಆತನ ಹೆಸರು ಕರೆದಳು, ಜೋರಾಗಿ ನಗುತ್ತ. ಎಲ್ಲರೂ ಆಕೆಯ ಕಡೆಗೆ ನಂತರ ಆಕೆಯ ಕರೆಗೆ ಓಗೊಟ್ಟು ಓಡೋಡಿ ಬಂದ ಡಿ.ಎಂ ಕಡೆ ತಿರುಗಿದರು.


     "ಡಿ.ಎಂ! ಮೂರು ರೂಪಾಯಿ ಐವತ್ತು ಪೈಸೆಯನ್ನು ಡ್ರಾ ಮಾಡಿಕೊಳ್ಳುತ್ತೀಯ?"


"ಹೌದು. ಅಷ್ಟೇ ಹಣವಿರುವುದು ನನ್ನ ಅಕೌಂಟಿನಲ್ಲಿ"


"ಬರೀ ಮೂರು ರೂಪಾಯಿ ಐವತ್ತು ಪೈಸೆಯನ್ನು ಇಲ್ಲಿಯವರೆಗೂ ಈ ಬ್ಯಾಂಕಿನ ಇತಿಹಾಸದಲ್ಲಿ ಯಾರೂ ಹಿಂಪಡೆದಿಲ್ಲ"


"ಅದರಲ್ಲಿ ತಮಾಷೆ ಮಾಡುವುದೇನು ಬಂತು? ಎಲ್ಲರೂ ನಮ್ಮನ್ನೇ, ಅಲ್ಲಲ್ಲ ನನ್ನನ್ನೇ ನೋಡುತ್ತಿದ್ದಾರೆ" ಎಂದ ಡಿ.ಎಂ.


"ಬರೀ ಮುನ್ನೂರ ಐವತ್ತು ಪೈಸೆ?!"


     ಡಿ.ಎಂನ ಸಿಟ್ಟು ನೆತ್ತಿಗೇರಿತ್ತು. "ನಿಯಮಕ್ಕೆ ವಿರುದ್ಧವೇ ಇದು?" ಎಂದು ಕೇಳಿದ. "ಇಲ್ಲ" ಎಂದಳಾಕೆ.


"ಇನ್ನು ಮೂರು ದಿನ ಊಟ ಮಾಡಲು ಕಾಸಿಲ್ಲ. ನಿಮ್ಮ ಮನೆಗೆ ಬರಲೆ?!" ಎಂದು ಡಿ.ಎಂ ಹೇಳಿದಾಕ್ಷಣ, ಗಾಭರಿಯಾದಳಾಕೆ. ’ಸಾರಿ’ ಕೇಳಿದಳು. ಆಕೆಯೊಂದಿಗೆ ನಗುತ್ತಿದ್ದವರೆಲ್ಲ ನಗುವಿಗೆ ವಿರುದ್ಧವಾದ ಭಾವವನ್ನು ತಮ್ಮ ಮೋರೆಗಳ ಮೇಲೆ ಬರೆದುಕೊಂಡರು. ಅಲ್ಲಿದ್ದ ಪೋಲಿಗೆಳೆಯನೊಬ್ಬನ ಮಾತುಗಳಲ್ಲಿ ಹೇಳುವುದಾದರೆ, "ಮುನ್ನೂರೈವತ್ತು ಪೈಸೆ ಹಿಂದೆಗೆಯುವುದು ನಿಯಮಬದ್ದವಾಗಿರುವುದು ಗೊತ್ತಾದ ಕೂಡಲೆ ಬ್ಯಾಂಕಿನವರೆಲ್ಲ ಮೇಲಿಂದು ಕೆಳಗಿಂದು ಎರಡನ್ನೂ ಮುಚ್ಕೊಂಡು ಸುಮ್ನಾದ್ರು!"


(೬೨)


  ಮತ್ತೆ ಹತ್ತು ನಿಮಿಷ ಕಳೆಯಿತು. ಹಣಪಾವತಿ ಮಾಡುವವ (ಟೆಲ್ಲರಿನಲ್ಲಿ?) ಮತ್ತೆ "ಡಿ.ಎಂ" ಎಂದು ಕರೆದ. ಮತ್ತೆ ಡಿ.ಎಂ ಮುಖ ಸಿಟ್ಟಿಗೇರಿತು. ಆ ಮುನ್ನೂರೈವತ್ತು ಪೈಸೆಯೂ ಇಲ್ಲದಿದ್ದಲ್ಲಿ ಎಂಬ ಗಾಭರಿಯಿಂದ! "ಏನು? ನಾನೇ ಡಿ.ಎಂ" ಎಂದ.


"ಐನೂರು ರೂಪಾಯಿ ಇದೆ ನಿಮ್ಮ ಅಕೌಂಟಿನಲ್ಲಿ. ಇದ್ಯಾಕೆ ಮುನ್ನೂರೈವತ್ತು...." ಎನ್ನುತ್ತಲೇ ಡಿ.ಎಂ ಜೋರಾಗಿ ನಗತೊಡಗಿದ, ಎಲ್ಲರೂ ನೋಡುವಂತೆ. ಅಥವ ಎಲ್ಲರೂ ನೋಡಲೆಂದೇ!


     "ಈ ಬ್ಯಾಂಕಿನಲ್ಲಿರುವವರೆಲ್ಲರೂ, ಕೆಲಸ ಮಾಡುವವರೆಲ್ಲರೂ ಬನ್ನಿ. ಊಟ ಕೊಡಿಸುವೆ." ಎಂದು ಹಿಂದಿ ಮಿಶ್ರಿತ ಬೆಂಗಾಲಿಯಲ್ಲಿ ಕೂಗಿ ಹೇಳಿ, ಕನ್ನಡದಲ್ಲಿ, "ಬೋಸುಡಿ ಮಕ್ಳ, ಬಡತನಾನೂ ನಗೋ ವಿಷ್ಯ ಆಗೋಯ್ತೇನ್ರೋ ನಿಮ್ಗೆಲ್ಲ!!" ಎಂದು ಕಿಚಾಯಿಸಿದ. ಕನ್ನಡದ ಹುಡುಗರಾದ ನಾವೆಲ್ಲರೂ ನಗತೊಡಗಿದೆವು. ಅಲ್ಲಿನವರಿಗೇನೂ ಅರ್ಥವಾಗದೆ ಬೆಪ್ಪಾಗಿದ್ದರು!


     ಮಾರನೇ ದಿನ ಡಿ.ಎಂ ಎಡಪಂಥೀಯರಲ್ಲಿ ಬಹಳ ಜನಪ್ರಿಯನಾಗಿಬಿಟ್ಟ. ’ಬಲ’ಪಂಥೀಯರು, ’ಮಾರ್ಕ್ಸ್’ನಿಷ್ಥರು ಮಾತ್ರ ಸಪ್ಪೆ ಮೋರೆಮಾಡಿಕೊಂಡಿದ್ದರು. ಡಿ.ಎಂ ಎಂಥಹ ಪಾಪದ ಗೆಳೆಯನೆಂದರೆ, ಶತೃಗಳು ದ್ವೇಷಿಸಲೂ ಆಗದಂತಹ ಪ್ಯಾದೆ ಲುಕ್ ಆತನದ್ದು!!//

ಲೇಖನ ವರ್ಗ (Category):