ಚಿತ್ರರಚನೆಯು ತರ್ಕವೆಂಬ ನಂಬಿಕೆ ರೂಪದ ತರ್ಕದೊಳಗಿನ ನಂಬಿಕೆಯೆ? -- ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆಃ ಭಾಗ ೧೯

To prevent automated spam submissions leave this field empty.

(೫೮)


     "ಚಿತ್ರಕಲೆ ಕಲಿಸುವುದೆಂದರೆ ಆಶುಕವಿತೆ ಬರೆದಂತೆ" ಎಂಬುದು ಕಲಾಭವನದಲ್ಲಿ ಚಾಲ್ತಿಯಲ್ಲಿದ್ದ ಸಮಕಾಲೀನ ಗಾದೆ. ಕವಿತೆ ಕಲಿಸುವ, ಕಥೆ ಬರೆಯಲು ಹೇಳಿಕೊಡುವ, ಕಾದಂಬರಿ ಹೆಣೆಯುವ ಮಗ್ಗ ಇರುವ ಸಾಹಿತ್ಯಶಾಲೆ ಎಲ್ಲಿಯೂ ಇಲ್ಲ. ಇರುವ ’ಪಾರ್ಟ್-ಟೈಂ’ ಬರವಣಿಗೆಯ ವರ್ಕ್‌ಶಾಪ್‍ಗಳು ನಗರಗಳಲ್ಲೇ ಇರುವುದು, ಅದೂ ವಿದೇಶೀ ಭಾಷೆಯ ಸಂಘಗಳೊಂದಿಗೇ ತಾಳೆ ಹಾಕಿಕೊಂಡಿರುವುದನ್ನು ನೋಡಿದರೆ, ಕ್ರಿಯಾತ್ಮಕವಾಗಿ ಬರೆಯುವುದು, ಸೃಷ್ಟಿಸುವುದು ಬರೀ ವಿದೇಶೀಯರ ಗೋಳಷ್ಟೇ ಎನ್ನಿಸಿಬಿಡುತ್ತದೆ.


    ಸುಕೇತು ಮೆಹ್ತನ ’ಮ್ಯಾಕ್ಸಿಮಮ್ ಸಿಟಿ’ಯಲ್ಲಿ ಬಾಂಬೆಯ ಹೋಟೆಲೊಂದರಲ್ಲಿ ಪಾತ್ರೆ ತೊಳೆವ ಹುಡುಗನ ಪಾತ್ರವೊಂದಿದೆ. ಆತನಿಗೆ  ಅತೀವ ಚಟ. ಆದರೆ ಅದು ಒಂದೇ  ಒಂದು ಚಟ. ಅದೇನೆಂದರೆ, ಕಾಗದದ ಮೇಲೆ ಪೆನ್ಸಿಲಿನಿಂದ ಬರೆವುದು. ತಿಳಿಯಿತೆ? ಆ ಹುಡುಗನಿಗೆ ಬರವಣಿಗೆಯ ಚಟಕ್ಕಿಂತಲೂ ’ಕಾಗದದ ಮೇಲೆ ಬರೆವ’ ಚಟವೇ ಹೆಚ್ಚು!!


   ಅಂತೆಯೇ "ಯಾಕೆ ನಾವೆಲ್ಲ ಕಲಾಕೃತಿ ರಚಿಸುತ್ತೇವೆ?" ಎಂಬ ಒಂದು ಪ್ರಶ್ನೆಗೆ ಮಾತ್ರ ಯಾರೂ--ಮಾರ್ಕ್ಸಿಸ್ಟರು ಹಾಗೂ ಮಾರ್ಕ್ಸ್-ನಿಷ್ಟರು--ಇವರಿಬ್ಬರನ್ನೂ ಒಳಗೊಂಡಂತೆ, ಕೂಡಲೆ ಉತ್ತರಕೊಡಲು ತಯಾರಿರುತ್ತಿರಲಿಲ್ಲ ಕಲಾಭವನದಲ್ಲಿ. ಅದಕ್ಕಿಂತಲೂ ಮುಖ್ಯವಾದ ಪ್ರಶ್ನೆಯೆಂದರೆ "ಯಾಕೆ ಎಲ್ಲರೂ ನೇಪಾಳಿ ಕಾಗದದ ಮೇಲೆಯೇ, ಬಣ್ಣಗಳಿಂದಲೇ ಚಿತ್ರ ರಚಿಸುತ್ತಾರೆ?" ಎಂಬ ಪ್ರಶ್ನೆಯು ಕಲಾಭವನಕ್ಕೇ ನಿರ್ದಿಷ್ಟವಾದ ಪ್ರಶ್ನೆ. ಈ ಎರಡೂ ಪ್ರಶ್ನೆಗಳ ನಡುವಿನ ವ್ಯತ್ಯಾಸ ತಿಳಿಯದವರು ಕಲಾಕೃತಿ ರಚಿಸುವುದು ಇಂದಿನ ಬೌದ್ಧಿಕ ಪರಿಸ್ಥಿತಿಯಲ್ಲಿ ’ಎತ್ತು ಗಾಣವ ತಾ ಸುತ್ತಿಬಂದಂತೆ ಸರ್ವಜ್ಞ!’ ಅಥವ ಪೋಲಿಗಳು ಹೇಳುವಂತೆ ’ಎತ್ತು ಗಂಜಲ ಹುಯ್ದಂತೆ!!’ 


     ಕೆಲವು ಎಡಪಂಥೀಯ ಹುಡುಗಿಯರು ಕೆಲವೊಮ್ಮೆ ನೀವು ಪ್ರಶ್ನೆ ಕೇಳುವುದಕ್ಕೂ ಮುನ್ನವೇ ಉತ್ತರ ಕೊಟ್ಟುಬಿಡುತ್ತಿದ್ದರು. ಎಡಪಂಥೀಯರು ಎಂದರೆ ಎಡಗೈಯಲ್ಲಿ ಬಲಗೈಯ ಎಲ್ಲ ಕೆಲಸಗಳನ್ನೂ ಮಾಡುವವರು ಎಂದರ್ಥವೂ ಇತ್ತು ಕಲಾಭವನದ ಪೋಲಿ ಗುಂಪಿನಲ್ಲಿ. ಉದಾಹರಣೆಗೆ ಅವರುಗಳು ಯಾರಿಗೂ ಬಲಗೈಯಲ್ಲಿ ಹ್ಯಾಂಡ್ ಶೇಕ್ ಮಾಡುತ್ತಿರಲಿಲ್ಲ. "ಯಾಕೆ ಕಲಾಕೃತಿ ರಚಿಸುತ್ತೇವೆ ಎಂದು ತಿಳಿದುಕೊಳ್ಳುವ ಸಲುವಾಗಿಯೇ ಕಲಾಕೃತಿಗಳನ್ನು ರಚಿಸುತ್ತೇವೆ" ಎಂಬುದು ಅತ್ಯಂತ ಸರಳವಾಗಿ ಅರ್ಥವಾಗುವ ಅತ್ಯಂತ ಸಂಕೀರ್ಣ ಉತ್ತರವೂ ಆಗಿತ್ತು. ಅತ್ಯಂತ ಸಂಕೀರ್ಣವಾದ ಕಲೆಯ ಸೃಷ್ಟಿಯನ್ನು ಕುರಿತ ಈ ವಾದವನ್ನು ಗಮನಿಸಿಃ


(೫೯)


"ಕಲಾಭವನದಲ್ಲಿ ಚಿತ್ರಬಿಡಿಸುವುದು ನಮ್ಮನ್ನು ಅರಿತುಕೊಳ್ಳಲು. ಆದ್ದರಿಂದ ಚಿತ್ರಿಸುವುದು ಒಂದು ಧ್ಯಾನ ವಿಧಾನ"


"ನಾಸ್ತಿಕರು ಅಥವ ಅಗ್ನೋಸ್ಟಿಕ್ ಕಲಾವಿದ್ಯಾರ್ಥಿಗಳಿಗೆ ಇಲ್ಲಿ ಪ್ರವೇಶವಿಲ್ಲದಂತಾಯ್ತು? ಏಕೆಂದರೆ ಅವರುಗಳು ಧ್ಯಾನದಲ್ಲಿ ನಂಬಿಕೆ ಇಲ್ಲದವರು" ಎಂಬ ಲೇವಡಿ ಚಿಂತನೆಯೂ ವ್ಯಕ್ತವಾಗುತ್ತಿತ್ತು.


"ಹಾಗಲ್ಲ. ನಂಬಿಕೆಯು ಒಂದು ಬಗೆಯ ತರ್ಕವೇ ಅಥವ ತರ್ಕವೇ ಒಂದು ತೆರನಾದ ನಂಬಿಕೆಯೆ ಎಂಬೆರೆಡು ಪ್ರಶ್ನೆಗಳೂ ತಾಳೆ ಹಾಕಿಕೊಂಡಿರುವಾಗ, ಚಿತ್ರಬಿಡಿಸುವುದು ಅದನ್ನು ಮಾಡದೇ ಇರುವುದರ, ಮಾಡದಿರುವವರ ವಿರುದ್ಧದ ಪ್ರತಿಭಟನೆಯೂ ಹೌದು" ಎಂದಿದ್ದ ಪ್ರಕ್ಷುಬ್ಧ. ತಾನು ಮೋಕ್ಷವಂತನೆಂದು ಅರ್ಥವಾಗದ ಧ್ವನಿಯಲ್ಲಿ ನುಡಿದಿದ್ದ ಪ್ರಕ್ಷುಬ್ಧ ಒಂದು ದಿನ ಸಂಜೆ ಸ್ಟುಡಿಯೊದಲ್ಲಿ ಕಲಾಕೃತಿಯೊಂದನ್ನು ತೋರಿಸಿದ್ದ. ಸಾಧಾರಣ ಮಟ್ಟದ ಕೆಲವು ಆಕಾರಗಳುಳ್ಳ ಪೈಂಟಿಂಗ್ ಅದಾಗಿತ್ತು. ಅದನ್ನೇ ದಿಟ್ಟಿಸುವಂತೆ ಸೂಚಿಸಿದ್ದ, ಅತ್ಯಂತ ನಿಷ್ಠೆಯಿಂದ. "ನಿಷ್ಠೆಯೇ ಮುಖ್ಯವಾಗಿರಬೇಕು, ಏಕಾಗ್ರತೆಯಲ್ಲ, ಅದ್ಭುತವೊಂದನ್ನು ತೋರಿಸುತ್ತೇನೆ" ಎಂದೂ ಎಚ್ಚರಿಸಿದ್ದ. ತಮಾಷೆಯಾಗಿ ಪ್ರಾರಂಭಗೊಂಡಿತು ಈ ಪ್ರಕ್ರಿಯೆ.


"ಎನೂ ತರಲೆ ಮಾತನಾಡಬಾರದು, ಮಾತನಾಡಿಕೊಳ್ಳಲೂಬಾರದು"


"ಹ್ಞೂಂ" ಎಂದೆ.


"ದಿಟ್ಟಿಸಿ ನೋಡು ಈ ಚಿತ್ರವನ್ನೇ. ಏನೇನೆಲ್ಲ ಕಾಣುತ್ತದೆ ಹೇಳು?" ಕೇಳಿದ್ದ.


"ಚೌಕಟ್ಟು, ಒಳಗಿನ ಕ್ಯಾನ್ವಾಸ್, ಬಟ್ಟೆಯ ನೂಲಿನಿಂದ ಹೆಣಿಗೆಮಾಡಲಾದ ಕ್ಯಾನ್ವಾಸಿನ ಮೇಲಿನ ತೈಲವರ್ಣ, ತೈಲವರ್ಣವು ಕಲಾವಿದನ ಆಗಿನ ಮಾನಸಿಕ ಭಾವನೆಯಂತೆ ಆಡಿಸಿದ ದೇಹದ ಅಂಗವಾದ ಕೈಗಳ ಚಲನೆಯಂತೆ ಆಡಿದ ಕುಂಚದ ನಕ್ಷೆ...ಇತ್ಯಾದಿ ಇತ್ಯಾದಿ"ಗಳನ್ನು ವಿವರಿಸಿದೆ.


"ಎನೋ ಮಿಸ್ ಆಗಿದೆ" ಎಂದ.


"ಏನಿರಬಹುದು! ಹ್ಞಾಂ, ಒಬ್ಬನೇ ಕಲಾವಿದನ ಕೈಗಳ ಚಲನೆಗಳ ದಾಖಲೆಯಾಗದಿರಬಹುದು ಆ ಕ್ಯಾನ್ವಾಸ್."


"ಬೇರೊಂದು ಆಯಾಮದಿಂದ ಈ ಚಿತ್ರವನ್ನು ನೋಡು, ನೋಡುವ", ಎಂದ ಪ್ರಕ್ಷು.


"ನಾನು ಹೇಳ್ತೇನೆ," ಎಂದು ಮುಂದುವರೆಸಿದ್ದಳು ಸಂಜನ, "ಈ ಕ್ಯಾನ್ವಾಸ್ ಚಿತ್ರದಲ್ಲಿ ಈಗ ನಾವೆಲ್ಲ ಏನನ್ನು ಮಾತನಾಡಿ ಮುಂದೆ ಬರೆಯಲಿದ್ದೇವೆಯೋ, ಅದು ಮಾತ್ರವಿದೆಯೇ ಹೊರತು ಇಲ್ಲಿ ಭೌತಿಕವಾಗಿ ಏನು ಚಿತ್ರಿತವಾಗಿದೆಯೋ ಅದು ಗೌಣವಾಗುತ್ತದೆ, " ಎಂದಳು.


"ಗುಡ್" ಎಂದ ಪ್ರಕ್ಷು. ’ಹೌದಲ್ಲ’ ಎನ್ನಿಸಿತು.


"ಯಾರೋ ಇಲ್ಲಿ ತಮ್ಮ ದೈಹಿಕ ಚಲನವಲನದ ಗುರುತು ಬಿಟ್ಟು ಹೋದುದನ್ನು ಕಲೆ ಎನ್ನಬಹುದು. ಆದರೆ ಹಾಗೆ ಗುರ್ತಿಸಿ ಹೋದ ವಸ್ತುವಿಗೆ (ಕಲಾಕೃತಿ) ಏಕಿಷ್ಟು ಪ್ರಾಮುಖ್ಯತೆ ಕೊಡಬೇಕು?"


"ಬದುಕಿನಂತೆಯೇ ಕಲೆ. ಸಾಯುವವರೆಗೂ ಮನುಷ್ಯ ಮಾಡಿದ್ದನ್ನು ಜನ ನೆನೆಯುತ್ತಾರೆಯೇ ಹೊರತು ಆತ ಸತ್ತದ್ದನ್ನು ದೊಡ್ಡದು ಮಾಡರು"


"ದೈವ ಹಾಗೂ ಸಾವಿನ ನಂತರವನ್ನು ನಂಬದವರು, ಸತ್ತ ಮೇಲೆ ಏನೂ ಇಲ್ಲ ಎಂದು ನಂಬಿದವರು ಕಲಾವಿದರಾದರೆ, ಕ್ಯಾನ್ವಾಸನ್ನು (ಉದಾಹರಣೆಗೆ) ಹಣದ ರೂಪ ಹೊರತುಪಡಿಸಿ ಬೇರಿನ್ಯಾವ ದಿವ್ಯ ಭಾವದಿಂದಲೂ ನೋಡರು"


"ಅಂತಲ್ಲಿ ನಂಬಿಕೆ ಇಲ್ಲದವರ ನಂಬಿಕೆಯಾಗಿ ಮೂಡಿಬರುತ್ತದೆ ಕಲಾಕೃತಿ. ದಿನಚರಿ ಬರೆಯುವವರು, ಬರೆಯಲು ಸುಸ್ತಾದಾಗ ಬರೆಯದೇ ಇರುವುದಕ್ಕೂ, ’ಬರೆಯಲು ಸುಸ್ತಾಗುತ್ತದೆ’ ಎಂದು ದಿನಚರಿ ಬರೆಯಲಿಕ್ಕೂ ಅಜಗಜಾಂತರ ವ್ಯತ್ಯಾಸವಿದೆ".


"ಸೂಝಿ ಗಾಬ್ಲಿಕಳ ’ಆಧುನಿಕತೆ ಸೋತಿದೆಯೆ?" ಪುಸ್ತಕದಲ್ಲಿನ ಉದಾಹರಣೆ ನೋಡುಃ ತನ್ನ ಭುಜಕ್ಕೆ ಗುಂಡು ಹಾರಿಸಿಕೊಂಡಾತ ಇನ್ನು ಮುಂದೆ ಗುಂಡಿನ ಅವ್ಯಕ್ತ ಭಯವಿಲ್ಲವೆಂದು ಸಾರಿದ ಆ ಅನುಭವಾಭಿನಯದ ನಂತರ. ತನ್ನದೇ ಕಾರಿಗೆ ತನ್ನ ದೇಹವನ್ನೇ ಮೊಳೆಯಿಂದ ಹೊಡೆಯಿಸಿಸಿಕೊಂಡು ಊರೆಲ್ಲ ಸುತ್ತಾಡಿಸಿಕೊಂಡಾತ ಕ್ರೈಸ್ತನ ಶಿಲುಬೀಕರಣಕ್ಕೆ ಅಕ್ಷರಶಃ ಚಾಲನೆ ನೀಡಿಬಿಟ್ಟ. ಆದರೂ ಒಂದೇ ಪ್ರಶ್ನೆಃ ಜನ ಕಲಾಕೃತಿ ರಚಿಸುವುದು ಏಕೆ?"//


 


 


 

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು