ಕಳೆದೂ ಸಿಕ್ಕವರುಃ ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆಃ ಭಾಗ ೧೮

To prevent automated spam submissions leave this field empty.

(೫೩)


ಶಾಂತಿನಿಕೇತನದಲ್ಲಿ ಪ್ರತಿವರ್ಷ ಪ್ರತಿ ಗುಂಪಿನಲ್ಲೂ ಎಲ್ಲೆಲ್ಲಿಂದಲೋ ಬಂದವರಿರುತ್ತಿದ್ದರು. ಅವರ ದೇಶ-ಭಾಷೆಗಳ ವೈವಿಧ್ಯತೆಯು ನಮ್ಮ ದೈನಂದಿನ ಚಟುವಟಿಕೆಗೇ ಮುಳುವಾಗದಿದ್ದಲ್ಲಿ--ಆಸಕ್ತಿಕರವಾಗಿರುತ್ತಿತ್ತು. ೨೦೦೪-೫ರಲ್ಲಿ ಲಂಡನ್ನಿನಾಯಲ್ ಕಾಲೇಜಿನಲ್ಲಿ ಓದುತ್ತಿದ್ದಾಗ ನನ್ನ ೧೩ ಮಂದಿ ಕ್ಲಾಸ್‍ಮೆಟ್‍ಗಳು ೧೩ ದೇಶಗಳಿಂದ ಬಂದವರಾಗಿದ್ದರು. ಎಲ್ಲರೂ ಎಲ್ಲರ ಭಾಷೆಯನ್ನು ತಿಳಿದಿರುವುದಿರಲಿ, ಪ್ರತಿಯೊಬ್ಬರ ದೇಹ-ಭಾಷೆಯೂ ಎನೇನೋ ತಪ್ಪು ಅರ್ಥಗಳನ್ನು ಕಳುಹಿಸುತ್ತಿತ್ತು. ಜೋಕ್ ಹೇಳಿದರೆ ಮೆಕ್ಸಿಕೊದವ ರೆಡ್ ಇಂಡಿಯನ್ನನಂತೆ "ಜೋಕು ನಮ್ಮ ಸಂಪ್ರದಾಯದಂತಿಲ್ಲದ ಕಾರಣ ನಿನ್ನ ಹತ್ಯೆಯು ಆವಶ್ಯಕ" ಎಂಬಂತೆ ಕ್ರಿಕೆಟಿಗ ಕ್ರಿಸ್ ಗೇಲನ ಭಾವವನ್ನು (ಅಥವ ನಿರಂತರ ಭಾವರಹಿತತೆ) ವ್ಯಕ್ತಪಡಿಸುತ್ತಿದ್ದ. ಚರ್ಚೆಯೊಂದು ಚೆನ್ನಾಗಿದೆ ಎನ್ನಲು ಜಪಾನಿ ಕುಳ್ಳಿ ಸಹಪಾಠಿ ’ಚೆನ್ನಾಗಿಲ್ಲ’ ಎಂಬಂತೆ ತಲೆಯನ್ನು ಅಡ್ಡಡ್ಡ ಆಡಿಸುತ್ತಿದ್ದಳು. "ಹೌದು" ಎನ್ನಲು ’ಹೌದು’ ಮತ್ತು ’ಇಲ್ಲ’ ಎಂಬ ಎರಡೂ ತರಹ ಏಕೆ ಶಿರ ಹಾಗೂ ಭುಜವನ್ನು ಅಲುಗಿಸುತ್ತೀರ ಎಂದು ಎಲ್ಲರೂ ನನ್ನನ್ನೇ ಕೇಳುತ್ತಿದ್ದರು. "ನಾನು ಭಾರತೀಯ, ಅದಕ್ಕೇ" ಎಂದು ಅವರ ಪ್ರಶ್ನೆಯನ್ನೇ ತಿದ್ದುವ ಉಮೇದಿನ ಉತ್ತರ ನೀಡುತ್ತಿದ್ದೆ.


     ಕಲಾಭವನದಲ್ಲಿ ೧೯೯೨ರಲ್ಲಿ ಕೋರಿಯದಿಂದ ನನ್ನ ಕ್ಲಾಸ್‍ಮೆಟ್ ಆಗಲು ಬಂ ಚಾಮ್‍ನಾನ್. ಅಲ್ಲೇ ಕ್ಯಾಂಪಸ್ಸಿನಲ್ಲೇ ಬೆಳಿಗ್ಗೆಯೇ ಅಡ್ಡಾಡುತ್ತಿದ್ದೆ ನಾನು. ಅದಕ್ಕೆ ಶಿಕ್ಷೆಯೋ ಎಂಬಂತೆ ಪ್ರಾಂಶುಪಾಲರು ನನಗೆ ಕರೆ ಕಳುಹಿಸಿದರು. ಅಂದರೆ "ಅಲ್ಲಿ ಯಾರು ಯಾವ ಸ್ಥಿತಿಯಲ್ಲಿದ್ದರೂ ಅವರನ್ನು ಕರೆದು ತಾ" ಎಂಬ ಆ’ದೇಶ’ವಾಗಿತ್ತದು.


(೫೪)    


ಕೋರಿಯದ ಆ ಚಿಂಕಿ ಕುಳಿತಿದ್ದ. ’ಚಿಂಕಿ’ಎನ್ನುವುದು ’ನೀಗ್ರೋ’ ಎಂದಂತೆ, ’ಸ್ಕಾವೆಂಜರ್’ ಎಂದಂತೆ, ನಿಷಿದ್ಧ, ವಸಾಹತೀಕೃತರ ಪದಗಳು ಎಂದು ಆಗಿನ್ನೂ ನನಗೆ ಗೊತ್ತಿರಲಿಲ್ಲ. ಹುಡುಗರೆ ಭುಜದ ಮೇಲೆ ಕೈಹಾಕಿ ನಡೆವುದು ’ಗೇ’ಗಳು ಮಾತ್ರ ಎಂದು ತಿಳಿದಿರಲಿಲ್ಲ. ಚಾಮ್ನಾನ್ ಎಂದು ಆತನ ಹೆಸರು ತಿಳಿವ ಮುನ್ನವೇ ಆತನನ್ನು ’ಅಂತರಾಷ್ಟ್ರೀಯ’ ಅತಿಥಿಕೋಣೆಗೆ ಕರೆದೊಯ್ಯುತ್ತಿದ್ದೆ. ಆತ ಆಸ್ಟ್ರೇಲಿಯದಿಂದಲೋ ಅಲಾಸ್ಕಾದಿಂದಲೋ ಬಂದವನಾಗಿದ್ದರೆ ಆತನನ್ನು ’ಅಂತರರಾಷ್ಟ್ರೀಯ’ನೆಂತಲೂ, ಇಲ್ಲೇ ಕೋರಿಯದಿಂದ ಬಂದವನಾದ್ದರಿಂದ ’ಅಂತರಾಷ್ಟ್ರೀಯ’ನೆಂತಲೂ ಕರೆದು ಭಾಷೆಯ ಬಗ್ಗೆ ಸಿಕ್ಕಾಪಟ್ಟೆ ಭಾಷಾಟಕ್ಕೆ (’ಗುದ್ದಾಟಕ್ಕೆ ’ಪರ್ಯಾಯವಾಗಿ) ತೊಡಗಿರುವ ಸಂಪದಿಗರ ಖುಷಿಯನ್ನು ಕೋರಿಯನ್ ಭಾಷೆಯನ್ನು ಬಿಟ್ಟು ಬೇರೇನೂ ಬರದ ಚಾಮ್ನಾನನಿಗೆ ಹೇಗೆ ಬಿಡಿಸಿಹೇಳುವುದು?!


     "ಸ್ನಾನ ಮಾಡಬೇಕೆ?" ಎಂದಾತನನ್ನು ಕೇಳಿದೆ.


     "ವಾತ್?" ಎಂದ. ’ವಾತರ್, ವಾತರ್’ ಎಂದು ಎರಡೂ ಕೈಗಳನ್ನು ನನ್ನ ತಲೆಯ ಮೇಲೆ ತಂದು ಸ್ನಾನವನ್ನು ಸಂಕೋಚ ಬಿಟ್ಟು ನಡುಬೀದಿಯಲ್ಲಿಯೇ ಅಭಿನಯಿಸಿ ತೋರಿಸಿದೆ. ಮತ್ತೆ ವಾತ್ ವಾತ್ ಎಂದ. ಆಥನಿಗೆ ಅರ್ಥವಾಗಲಿಲ್ಲ, ಪಾಪ ಅವರ ಊರಲ್ಲಿ ಸ್ನಾನ ಮಾಡುತ್ತಿರಲಿಲ್ಲವೆಂದು ಕಾಣುತ್ತದೆ! ಎಂದು ಸುಳ್ಳು ಸುಳ್ಳೇ ಹೇಳಿಕೊಂಡು ನನಗೆ ಸಮಾಧಾನ ಮಾಡಿಕೊಂಡೆ.


     ಅತಿಥಿಕೋಣೆಯವರೆಗೂ ನಾವಿಬ್ಬರೂ ಹೋಗುವಷ್ಟರಲ್ಲಿ ನಾನು ಅಲ್ಲಿಯವರೆಗೂ ಕಲಿತ ಅಭಿನಯವನ್ನೆಲ್ಲ ಖರ್ಚುಮಾಡಿ ನೊಡಿದೆ. ಆತನ ಶರೀರ ಮತ್ತು ಶಾರೀರದೀಂದ ’ವಾತ್’ ಎಂಬ ಪ್ರಶ್ನಾರ್ಥಕ ಚಿಹ್ನೆಯನ್ನೊರತುಪಡಿಸಿ ಬೇರೇನೂ ವ್ಯಕ್ತವಾಗಲಿಲ್ಲ. ನಾನೆಂತಹ ಕೆಟ್ಟ ನಟನೆಂಬುದನ್ನು ಅಂದು ಅರ್ಥ ಮಾಡಿಕೊಂಡೆ!


     ಅತ್ಯಂತ ವ್ಯವಸ್ಥಿತವಾಗಿ ಬದುಕುತ್ತಿದ್ದ ಚಾಮ್ನಾನ್ ಅಷ್ಟೇ ವ್ಯವಸ್ಥಿತವಾಗಿ, ಫ್ಯಾಕ್ಟರಿಯಲ್ಲಿ ಅಥವ ಸೆರೆಮನೆವಾಸದಲ್ಲಿ ಮಾಡುವ ನಿಯಮಬದ್ಧ ಯಾಂತ್ರೀಕರಣದಂತೆ ಬದುಕುತ್ತಿದ್ದ, ಚಿತ್ರಬಿಡಿಸುತ್ತಿದ್ದ. ಒಮ್ಮೆ ಊಟಕ್ಕೆ ಕರೆದಿದ್ದ ಕೆಲವು ಗೆಳೆಯರನ್ನುಃ ಒಂದು ಈರುಳ್ಳಿ ಹೂವು, ಒಂದು ಅರ್ಧ ಕತ್ತರಿಸಲಾದ ಕೋಸು, ಒಂದು ಅರೆಬೆಂದ ಮೊಟ್ಟೆ, ಹಾಗೂ ನಾಲ್ಕೆಲೆ ಕೊತ್ತಮೀರಿ--ಇವುಗಳನ್ನು ನಮಗೆ ತಿನ್ನಲು ಕೊಟ್ಟಿದ್ದ. ಈ ಮುಂಚಿನ ವಾಕ್ಯದ ಪ್ರತಿಯೊಂದು ತರಕಾರಿಗಳ ಮುಂದೆಯೂ ’ಹಸಿ’ ಎಂದು ಸೇರಿಸಿಕೊಳ್ಳಬೇಕಾಗಿ ವಿನಂತಿ! ಆತನ ಮನೆ ಹಾಗೂ ಸ್ಟೂಡಿಯೊ--ಎರಡೂ ಸಹ, ಸದಾ ಹೊಸದಾಗಿ ಆರಂಭೋತ್ಸವಗೊಳ್ಳಬೇಕಾದ ಅಂಗಡಿಯಂತೆ, ಅಷ್ಟು ಅಚ್ಚುಕಟ್ಟಾಗಿ ವಸ್ತುಗಳನ್ನು ಜೋಡಿಸಿಟ್ಟಿರುತ್ತಿದ್ದರು. ಆತನ ಸೃಷ್ಟಿಯ ಚಿತ್ರಗಳೂ ಸಹ ತಂಕಾ ಚಿತ್ರಗಳಂತೆ ಕರಾರುವಾಕ್  ಶಿಸ್ತುಬದ್ಧವಾಗಿರುತ್ತಿದ್ದವು.


     ನಾನು ಅಲ್ಲಿ ವ್ಯಾಸಂಗ ಮುಗಿಸಿಕೊಂಡು ಬಂದ ನಂತರ ಒಂದೆರೆಡು ವರ್ಷಗಳ ನಂತರ ಬಂದ ಸುದ್ಧಿ ಎಂದರೆ, ಒಂದು ವರ್ಷ ಹೆಚ್ಚಿಗೆ ಕಲಾಭವನದಲ್ಲಿಯೇ ಉಳಿದುಕೊಂಡು ಚಿತ್ರರಚನೆ ಮಾಡಿದ ಚಾಮ್ನಾನ್ ವಾಪಸ್ ಕೋರಿಯಕ್ಕೆ ಹೋಗುವಾಗ, ಲೋಕಲ್ ವಿಮಾನವೊಂದರಲ್ಲಿ ಪ್ರಯಾಣಿಸುವಾಗ, ಅದು ಕ್ರಾಷ್ ಆಗಿ ಈತ ಸತ್ತನಂತೆ! ಆತ ಹಿಂದೆಂದೋ ನನಗೆ ಕೊಟ್ಟಿದ್ದ, ಆತನ ಪುಟ್ಟ ಗ್ರಾಫಿಕ್ ಕೃತಿಯೊಂದನ್ನು ಮನೆಯೆಲ್ಲ ಹುಡುಕಿ ನೋಡಿದೆ. ಸಿಗಲಿಲ್ಲ!


(೫೫)


ಮಿಝೋರಾಮ್, ನಾಗಾಲ್ಯಾಂಡ್, ಅಸ್ಸಾಮಿನಿಂದ ಬರುತ್ತಿದ್ದ ವಿದ್ಯಾರ್ಥಿಗಳು ಇದ್ದಕ್ಕಿದ್ದಂತೆ ಮಾಯವಾಗುತ್ತಿದ್ದರು. ಅವರಲ್ಲಿ ಕೆಲವರು ಸಂಶೋಧನಾ ವಿದ್ಯಾರ್ಥಿಗಳೂ ಇರುತ್ತಿದ್ದರು. ಆಗೆಲ್ಲ ಅಲ್ಫಾ, ನಕ್ಸಲ್, ಮಾರ್ಕ್ಸ್‍ವಾದಿ ಉಗ್ರರು ಅಲ್ಲೆಲ್ಲ ಇದ್ದು, ಗೆಳೆಯನೊಬ್ಬನ ಬರೋಡದ ಗೆಳೆಯನೊಬ್ಬನಾಗಿದ್ದ ಕಲಾವಿದ್ಯಾರ್ಥಿಗೆ ಒಮ್ಮೆ ಯಾರೋ ಅಸ್ಸಾಮಿನ ಉಗ್ರರು ಹಿಡಿದು ಶೂಟ್ ಮಾಡಿದರಂತೆ. ಈಗಿನ್ನೂ ಬದುಕಿದ್ದಾನಾತ. ಹೈಸ್ಕೂಲಿನ ಎನ್.ಸಿ.ಸಿ ತರಬೇತಿಯ ಕಾಲಕ್ಕೆ ಗುರಿಯ ಅಭ್ಯಾಸಕ್ಕಾಗಿ ರೈಫಲ್-ಶೂಟಿಂಗ್ ಮಾಡುವಾಗ ಗುಂಡಿಗಾಹುತಿಯಾಗುವ ಕಾಗದವಿರುತ್ತದಲ್ಲ, ಹಾಗಿದೆ ಆತನ ದೇಹಭಾಗ. ಏನಿಲ್ಲವೆಂದರೂ ಹನ್ನೆರೆಡು ಗುಂಡಿನ ತೂತು ಆತನ ಟಾರ್ಸೋ ಭಾಗದಲ್ಲಿದ್ದು, ಅದನ್ನೊಂದು ವಿಜಯಪತಾಕೆಯಂತೆ ಆತ ಎಲ್ಲರಿಗೂ ಕಳೆದ ಎರಡು ಧಶಕಗಳಲ್ಲಿ ತೆರೆದು ತೋರಿದ್ದಿದೆ!


     ಯಾರಾದರೂ ಆರುತಿಂಗಳ ಕಾಲ ಕಲಾಭವನಕ್ಕೆ ಬರದಿದ್ದಲ್ಲಿ ಅಂತಹವರ ಮನೆಗೆ ಪ್ರಾಂಶುಪಾಲರು ಮೆಮೊ ಕಳಿಸುತ್ತಿದ್ದರು. ವರ್ಷವಾದರೂ ಬರದಿದ್ದಲ್ಲಿ, ಅಂತಹವರು ಈಶಾನ್ಯ ಭಾಗದವರಾಗಿದ್ದಲ್ಲಿ ಅಂತಹವರು ’ಸತ್ತಿದ್ದಾರೆ’ ಎಂದೂ, ಅವರ ಹೆಸರನ್ನು ಕಾಲೇಜಿನ ಹೆಸರಿನಿಂದ ತೆಗೆದುಹಾಕಬೇಕೆಂದೂ ಸ್ವತಃ ಪ್ರಾಂಶುಪಾಲರೇ ಕುಲಪತಿಗಳಿಗೆ ಕಾಗದ ಬರೆದುಹಾಕುತ್ತಿದ್ದರು. ಭಾರತದ ಪ್ರಧಾನಿ ಯಾರೇ ಆಗಿರಲಿ, ಅವರೇ ಶಾಂತಿನಿಕೇತನದ ವಿಶ್ವವಿದ್ಯಾಲಯದ ಕುಲಪತಿಗಳು!


(೫೬)


ಕಳೆದ ಹದಿನೆಂಟು ವರ್ಷಗಳಲ್ಲಿ ಕಲಾಭವನದ ಸುದ್ಧಿಯು ಬೆಂಗಳೂರಿನಲ್ಲೂ ಸಾಕಷ್ಟೂ ತಿಳಿದುಬರುತ್ತಿದೆ. ಅದರಲ್ಲಿ ಮುಖ್ಯ ಸುದ್ಧಿ ಮಾಧ್ಯಮವೆಂದರೆ ಗೆಳೆಯರು, ಸೀ-ನಿಯರ‍್ಗಳು ಹಾಗೂ ಕಿರಿಯರು. ಅನೇಕ ಗೆಳೆಯರು ತೀರಿಕೊಂಡಿದ್ದರು. ಬರುಬರುತ್ತ ಸುಮಾರು ಮಂದಿನ ಸಾವಿನ ಸುದ್ಧಿ ಸಿಗಹತ್ತಿತು. ಕೊನೆಕೊನೆಗೆ ಬದುಕಿರುವ ಹಳೆಯ ಗೆಳೆಯರಿಗಿಂತಲೂ ಸತ್ತವರ ಪಟ್ಟಿಯೇ ದೊಡ್ಡದಾಗಿ ಕಾಣತೊಡಗಿತು. "ಗೊತ್ತಿಲ್ಲ" ಎನ್ನುವ ಬದಲಿಗೆ "ಬದುಕಿಲ್ಲ" ಎಂದೇನಾದರೂ ತಪ್ಪಾಗಿ ಸುದ್ಧಿವಾಹಕರೆಲ್ಲ ತರ್ಜುಮೆಮ ಮಾಡುತ್ತಿರಬಹುದೆ? ಎಂದೂ ಅನುಮಾನ ಶುರುವಾಗ ಹತ್ತಿತ್ತು.


     ಮೊದಲ ಅಧ್ಯಾಯದಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಹೋಗಿ ಮೊಹ್ಮದನ ಬೆನ್ನ ಮೇಲೆ ಆಸಿಡ್ ಸುರಿದಿದ್ದನಲ್ಲ ನಿರ್ಜರ್, ಆತ ಸತ್ತನೆಂಬ ಸುದ್ದಿ ಹತ್ತು ವರ್ಷದ ಹಿಂದೆ ಸಿಕ್ಕಿತ್ತು. ಸತ್ತದ್ದಂತೂ ಗ್ಯಾರಂಟಿ ಆದರೆ ಅದು ನಿರ್ಜರನೋ ದುರ್ಜರನೋ ಎಂಬುದು ಮಾತ್ರ ಅನುಮಾನ ಎಂಬ ಮತ್ತೊಂದು ಖಚಿತ ಸುದ್ದಿಯೂ ಸಿಕ್ಕಿತು. ಆತನ ಗೆಳತಿ ಮಂಗಳ (ಇದೊಂದು ’ಹೆಸರು ಬದಲಾಗಿಸಲಾಗಿದೆ’ ಎಂದು ವಿವರಿಸಬೇಕಿಲ್ಲವಷ್ಟೇ) ಸಹ ಕಲಾಭವನದಲ್ಲಿ ನಾನು ಓದುವ ಕಾಲಕ್ಕೆ ಓದುತ್ತಿದ್ದಾಕೆ. ಆ ಸುದ್ಧಿ--ಆತ ಸತ್ತ ಹಾಗೂ ಸತ್ತವನು ಆತನೋ ಅಲ್ಲವೋ ಎಂಬ ಅನುಮಾನದ ಗ್ಯಾರಂಟಿ ಸುದ್ಧಿ--ಆಕೆಗೆ ಸಿಕ್ಕ ಕಾಲಕ್ಕೆ ಅವರಿಬ್ಬರೂ ಪರಸ್ಪರ ಗೆಳೆತನ ತೊರೆದು ’ಯುಗಗಳೇ ಆದವು’ ಎನ್ನಿಸುವಷ್ಟು ವರ್ಷಗಳಾಗಿಹೋಗಿತ್ತು. ಆದರೂ ಆಗೊಮ್ಮೆ ಈಗೊಮ್ಮೆ ಆಕೆ ಆತನ ಬಗ್ಗೆ ಮಾತನಾಡುತ್ತ, ಅನೇಕ ಘಟನೆಗಳನ್ನು ಹೇಳುತ್ತಿದ್ದಳು.


(೫೭)


ನಿರ್ಜರನೋ ದುರ್ಜರನೋ ಸತ್ತು ಐದು ವರ್ಷವಾಯಿತೆಂದು ಮಂಗಳ ಐದು ವರ್ಷದಿಂದಲೂ ಹೇಳುತ್ತಿದ್ದಾಳೆ. ಮೊನ್ನೆ ಒಂದು ದಿನ ಆಕೆ ಸಿಕ್ಕಿ ಆತನ ಕುರಿತು ತಿಳಿಸಿದ ವಿಷಯ ಕುತೂಹಲಕರವಾಗಿತ್ತುಃ


     "ನಾನು ಮುಂಬೈಯಲ್ಲಿ ಒಂದು ದಿನ ’ಖೆಮೊಲ್ಡ್’ ಗ್ಯಾಲರಿಯಿಂದ ಹೊರಬರುತ್ತಿದ್ದೆ, ಫೌಂಟೆನ್ನಿನ ಹತ್ತಿರ. ಸಂದಿಯೊಂದರಲ್ಲಿ ತಿರುಗಿ ಹೋಗುತ್ತಿದ್ದೆ ಮಧ್ಯಾಹ್ನದ ಹೊತ್ತು. ಜನವಿಲ್ಲದ ಕಡೆ, ಒಂಟಿತನವಿರುವ ಕಡೆಯೇ ಈ ಭೀತಿ ಅನ್ನೋದು ಹುಟ್ಟುವುದಾದರೂ ಏಕೆ? ಎಂದುಕೊಂಡು ನಡೆದು ಹೋಗುತ್ತಿದ್ದೆ. ಎದುರಿಗೆ ಅವ ಬರುತ್ತಿದ್ದ. ಯಾರನ್ನೋ ನೆನಪು ತರುತ್ತಿದ್ದ. ಆತನನ್ನು ನಾನು ಹೇಗೆ ಅನುಮಾನದಿಂದ ನೋಡುತ್ತಿದ್ದೆನೋ ಆತನೂ ನನ್ನನ್ನು ಅಷ್ಟೇ ತೀವ್ರವಾದ ಅನುಮಾನದಿಂದ ನೋಡತೊಡಗಿದ. ಇಬ್ಬರ ನಡಿಗೆಯೂ ನಿಧಾನವಾದರೂ ಹತ್ತಿರ ಹತ್ತಿರವಾದೆವು. ಆತ ಒಮ್ಮೆಲೆ ಕಿರುಚಿ, ಹಿಂದೆ ತಿರುಗಿ ಓಡತೊಡಗಿದ. ನಾನೂ ಕಿರುಚಿ ಓಡತೊಡಗಿದೆ. ಬೈ ಮಿಸ್ಟೇಕ್ ಆತ ಹೋದ ಕಡೆಗೆ ಓಡಿದ್ದೆ. ಆಮೇಲೆ ಧೈರ್ಯ ಮಾಡಿ ಕಡೆಗೂ ಆತನ ಕತ್ತಿನಪಟ್ಟಿ ಹಿಡಿದು ಕೆನ್ನೆಗೆ ನಾಲ್ಕು ಬಿಗಿದೆ. ಆತನೇ ನಿರ್ಜರ್" ಎಂದಳು ಮಂಗಳ.


     "ಅಂದರೆ ನಿರ್ಜರ್ ಬದುಕಿದ್ದಾನೆಂದಾಯಿತು, ಮತ್ತು ಆತ ನಿರ್ಜರ್ ಎಂದಂತೆಯೂ ಆಯಿತು" ಎಂದೆ.


     "ಹೌದು. ಆದರೆ ಆಸಕ್ತಿಕರವಾದ ವಿಷಯ ಅದಲ್ಲ. ನಾನು ಓಡಿದ್ದು ಆತನ ಪ್ರೇತ ನೋಡಿದ ಸಲುವಾಗಿ ಎಂದುಕೊಂಡೆ. ಓಡಿದ್ದು ಮಾತ್ರ ಆತನ ಕಡೆಗೇ. ಆದರೆ ನನಗೆ ಅನುಮಾನ ಬಂದದ್ದೂ ಆತನೂ ಕಿರಿಚುಕೊಂಡು ಓಡತೊಡಗಿದಾಗ. ಆತನನ್ನು ನಿಲ್ಲಿಸಿ ಕಾರಣ ಕೇಳಿದಾಗ ಏನು ಹೇಳಿದ ಗೊತ್ತೆ?!"


"ಏನಂದ?"


"ನಾನೂ ಸತ್ತಿದ್ದೇನೆಂದು ಆತನಿಗೆ ಯಾರೋ ಹತ್ತುವರ್ಷದ ಹಿಂದೆ ಹೇಳಿದ್ದರಂತೆ. ಇಬ್ಬರೂ ಇಬ್ಬರನ್ನೂ ಸತ್ತಿದ್ದೇವೆ ಎಂದುಕೊಂಡು ಖುಷಿಯಾಗಿದ್ದೆವಲ್ಲ" ಎಂದು ನಗತೊಡಗಿದಳು. ಸಿನೆಮಗಳಲ್ಲಾಗುವಂತೆ ಇವರಿಬ್ಬರ ನಡುವೆ ಮತ್ತೆ ರೊಮ್ಯಾನ್ಸ್ ಏನೂ ಶುರುವಾಗಿಲ್ಲ!


     ಈ ವರ್ಷ ಏಪ್ರಿಲ್ನಲ್ಲಿ ಶಾಂತಿನಿಕೇತನಕ್ಕೆ ಹೋದಾಗ ಎದುರಾದವನು ಈಗಾಗಲೇ ಸತ್ತಿದ್ದಾನೆಂದು ಜನಪ್ರಿಯನಾಗಿದ್ದ ಚಾಮ್ನಾನ್! ವ್ಯತ್ಯಾಸವೆಂದರೆ ಅರ್ಧಂಬರ್ದ ಇಂಗ್ಲೀಷ್ ಬೇರೆ ಕಲಿತಿದ್ದ. ಊಟವನ್ನೂ ಬೇಯಿಸುವುದನ್ನೂ ಚೆನ್ನಾಗಿ ಕಲಿತಿರಬಹುದು.


     "ಯಾರು ಹೇಳಿದ್ದು ನಿನಗೆ, ನಾನು ಸತ್ತಿದ್ದೇನೆಂದು?" ಎಂದು, ಈ ಸುದ್ಧಿ ಕೇಳಿ ಯಾಕಾದರೂ ಬದುಕಿದ್ದೇನೋ ಎಂಬ ಭಾವದಲ್ಲಿ ಆತ ನನ್ನನ್ನು ಕೇಳಿದ.


     "ಯಾರ್ಯಾರು ಸತ್ತಿದ್ದಾರೆಂಬ ಅನುಮಾನದ ಪಟ್ಟಿಯನ್ನು ಮಾತ್ರ ಕೊಡಬಲ್ಲೆ. ಆದರೆ ಹೇಳಿದವರು ಯಾರೆಂದು ಹೇಗೆ ಹೇಳಲಿ?" ಎಂದೆ.


     "ಚಾಮ್ನಾನ್ ನಿನ್ನದೊಂದು ಗ್ರಾಫಿಕ್ ಪ್ರಿಂಟ ನನ್ನ ಬಳಿ ಇದೆ. ನೀನು ಪ್ರಸಿದ್ಧ ಕಲಾವಿದನಾಗಿರುವುದರಿಂದ ಅದು ಬಹಳ ಬೆಲೆಯಾಗಿ ಒದಗಿಬರುತ್ತದೆ ನನಗೆ" ಎಂದು ತಮಾಷೆ ಮಾಡಿದ್ದೆ. ಆದರೆ ಬೆಂಗಳೂರಿಗೆ ಬಂದು ಮತ್ತೆ ಹುಡುಕಿದೆ. ಅದಾಗಲೇ ಕಳೆದುಹೋಗಿದ್ದ ಪ್ರಿಂಟ್, ಮತ್ತೆ ಹುಡುಕಿದಾಗಲೂ ಸಿಗಲಿಲ್ಲ! ಕಲಾಭವನದಲ್ಲಿ ಸತ್ತವರು ಮಾತ್ರ ಆಗಾಗ ಸಿಗುತ್ತಲೇ ಇರುತ್ತಾರಷ್ಟೇ!//


    


 


 


 


 


 

ಲೇಖನ ವರ್ಗ (Category):