ತಾಯ್ತನ ವೈಭವಿಕೃತಗೊಂಡಷ್ಟು ತಂದೆತನ ವೈಭವಿಕೃತಗೊಂಡಿಲ್ಲ ಯಾಕೆ?

To prevent automated spam submissions leave this field empty.

ನಾಳೆ ಅಪ್ಪನ ದಿನ. ಜಗತ್ತಿನೆಲ್ಲೆಡೆ ಅಪ್ಪನಿಗೊಂದು ಥ್ಯಾಂಕ್ಸ್ ಹೇಳುವ ದಿನ. ಆತ ನಮ್ಮನ್ನು ಹುಟ್ಟಿಸಿ ಬೆಳೆಸಿದ್ದಕ್ಕೆ, ನಮ್ಮ ಕನಸುಗಳನ್ನು ಸಾಕಾರಗೊಳಿಸಿದ್ದಕ್ಕೆ ನಮನ ಸಲ್ಲಿಸುವ ದಿನ. ಆದರೆ ಖೇದದ ಸಂಗತಿಯೆಂದರೆ ಮೊದಲಿನಿಂದಲೂ ಅಮ್ಮನ ದಿನ ವಿಶೇಷತೆ ಪಡೆದಷ್ಟು ಅಪ್ಪನ ದಿನ ಅದ್ಯಾಕೋ ಅಷ್ಟೊಂದು ವಿಶೇಷತೆಯನ್ನು ಪಡೆದೇ ಇಲ್ಲ. ಏಕೆಂದರೆ ಜಗತ್ತಿನ ಯಾವುದೇ ಭಾಗವನ್ನು ತೆಗೆದುಕೊಂಡರೂ ಅಲ್ಲಿ ಅಮ್ಮನಿಗೆ ವಿಶೆಷ ಆದ್ಯತೆ. ಅವಳಿಗೆ ಮೊದಲ ಸ್ಥಾನ. ಅಪ್ಪ ಎಷ್ಟೇ ಮಾಡಿದರೂ ಅವನಿಗೆ ಸದಾ ಎರಡನೆ ಸ್ಥಾನ. ಪುರುಷ ಪ್ರಧಾನ ಸಮಾಜದಲ್ಲೂ ಒಂದು ಕುಟುಂಬ ಕಟ್ಟಿ ಬೆಳೆಸುವಷ್ಟರಲ್ಲಿ ಅಮ್ಮನ ಪಾತ್ರವನ್ನು ಗುರುತಿಸುವಷ್ಟು ಅಪ್ಪನ ಪಾತ್ರವನ್ನು ಗುರುತಿಸುವದರಲ್ಲಿ ಏನೋ ಒಂದು ತರದ ಉದಾಸೀನ. ಅಮ್ಮ ಸರಿಯಿದ್ದರೆ ಸಾಕು. ಅಪ್ಪ ಹೇಗಿದ್ದರೇನು? ಎನ್ನುವ ಉಢಾಪೆ. ಅಚ್ಚರಿಯೆಂದರೆ ತಾಯ್ತನ ವೈಭವಿಕೃತಗೊಂಡಷ್ಟು ತಂದೆತನ ಯಾಕೆ ವೈಭವಿಕೃತಗೊಂಡಿಲ್ಲವೆಂದು?

 

ಒಂದು ಕುಟುಂಬವನ್ನು ಕಟ್ಟಿ ಬೆಳೆಸುವದರಲ್ಲಿ, ಸಾಕಿ ಸಲುಹುವದರಲ್ಲಿ ಅಮ್ಮನ ಪಾತ್ರದ ಮುಂದೆ ಅಪ್ಪನದು ಗೌಣ ಅನಿಸಿಬಿಡುತ್ತದೆ. ಯಾಕೆ? ಅಂತೆಯೇ ನೀವು ಯಾವುದೇ ಸಾಹಿತ್ಯ ತೆಗೆದುಕೊಂಡರೂ ಅಲ್ಲಿ ತಾಯ್ತನ ವೈಭವಿಕೃತಗೊಂಡಷ್ಟು ತಂದೆತನ ವೈಭವಿಕೃತಗೊಂಡೇ ಇಲ್ಲ. ಯಾಕೆ? ಲೇಖಕರು, ಕವಿಗಳು ತಾಯ್ತನವನ್ನು ಹಾಡಿ ಹೊಗಳಿದಷ್ಟು ತಂದೆತನವನ್ನು ಹಾಡಿಹೊಗಳಲೇ ಇಲ್ಲ! ಯಾಕೆ? ಕಾನೂನು ಕಟ್ಟಳೆಗಳಲ್ಲೂ ಮಕ್ಕಳ ವಿಚಾರದಲ್ಲಿ ಅಮ್ಮನಿಗೇ ಅಗ್ರಸ್ಥಾನ. ಯಾಕೆ? ವಿಚ್ಛೇದನದ ಸಮಯದಲ್ಲಿ ಕೋರ್ಟು ಕೂಡ ಒಂದು ನಿರ್ಧಿಷ್ಟ ಅವಧಿಯವರೆಗೆ ಮಕ್ಕಳು ಅಮ್ಮನ ಆರೈಕೆಯಲ್ಲಿ ಬೆಳೆಯಬೇಕೆಂದು ತಾಕೀತು ಮಾಡುತ್ತದೆ. ಯಾಕೆ?

 

ಇದಕ್ಕೆ ಕಾರಣ ಬಹಳ ಸ್ಪಷ್ಟವಿದೆ. ಹೆಣ್ಣಿಗೆ ಅಗಾಧ ತಾಳ್ಮೆ, ಸಹನೆ, ಪ್ರೀತಿ, ವಾತ್ಸಲ್ಯ ಇರುವದೇ ಆಗಿದೆ. ಹೆಣ್ಣಿಗಿರುವಷ್ಟು ಜವಾಬ್ದಾರಿ, ತಾಕತ್ತು ಗಂಡಿಗಿಲ್ಲ ಎನ್ನುವ ನಂಬಿಕೆಯಿದೆ. ಹಿಂದೆಲ್ಲ ಅಮ್ಮ ಮನೆಯಲ್ಲಿದ್ದುಕೊಂಡೇ ಬೆಳಿಗ್ಗೆ ಬೇಗ ಎದ್ದು ತಿಂಡಿ, ಅಡಿಗೆ ಮಾಡಿ ಗಂಡನನ್ನು ಹೊರಗೆ ದುಡಿಯಲು ಕಳಿಸುವದು, ಮಕ್ಕಳನ್ನು ಶಾಲೆಗೆ ಕಳಿಸುವದರಿಂದ ಹಿಡಿದು ಮನೆಯ ಬೇರೆಲ್ಲ ಕೆಲಸ ಮಾಡಿ ಅವರ ಆರೈಕೆ ಮಾಡುವದರಲ್ಲಿ ಅವಳು ಸೈ ಅನಿಸಿಕೊಳ್ಳುತ್ತಿದ್ದಳು. ಹೀಗಾಗಿ ಅವಳಿಗೆ ವಿಶೇಷ ಸ್ಥಾನವಿತ್ತು. ಅವಳಿಗೆ ಪ್ರೀತಿ, ಒಲವು, ಮಮಕಾರ ಸುರಿಸುವದರಲ್ಲಿ ಸಾಕಷ್ಟು ಸಮಯವಿರುತ್ತಿತ್ತು. ಆದರೆ ಅಪ್ಪನದು ತೋರ್ಪಡಿಸದ ಪ್ರೀತಿ. ಆತನದು ಸದಾ ಉರಿ ಉರಿಯುವ ದರ್ಪದ ಮುಖ. ಆತ ಹೆಗಲ ಮೇಲೆ ಎಲ್ಲಾ ಜವಾಬ್ದಾರಿಗಳನ್ನು ಹೊತ್ತು ಬಾಳಬಂಡಿ ಓಡಿಸಲು ಸಿದ್ಧನಾಗಿದ್ದರಿಂದ ಆತನೇ ಮನೆಯ ಯಜಮಾನ, ಆತನದು ಜವಾಬ್ದಾರಿಯುತ ನಡೆ. ಈ ಎಲ್ಲ ಪ್ರಕ್ರಿಯೆಯಲ್ಲಿ ಆತ ಒಂದಿಷ್ಟು ಜೋಲು ಮುಖವನ್ನಿಟ್ಟುಕೊಂಡಿದ್ದರೆ, ಮಕ್ಕಳೊಂದಿಗೆ ಅಷ್ಟಾಗಿ ಬೆರೆಯುವದರಲ್ಲಿ ಸೋತು ಹೋಗುತ್ತಿದ್ದರೆ ಅಚ್ಚರಿಯೇನಿಲ್ಲ.

 

ಆದರೆ ಇಂದು ಅಪ್ಪ ಅಮ್ಮ ಇಬ್ಬರೂ ಬಹಳಷ್ಟು ಬದಲಾಗಿದ್ದಾರೆ. ಸಂಸಾರದ ಬಾಳಬಂಡಿಯ ನೊಗವನ್ನು ಅಪ್ಪ ಅಮ್ಮ ಇಬ್ಬರೂ ಸರಿ ಸಮನಾಗಿ ಹೊತ್ತಿದ್ದಾರೆ. ಸದಾ ಮನೆಯಲ್ಲೇ ಕುಳಿತು ಮಕ್ಕಳನ್ನು ನೋಡಿಕೊಳ್ಳುತ್ತಿದ್ದ ಅಮ್ಮ ಇಂದು ಹೊರಗೆ ದುಡಿದು ಸುಸ್ತಾಗಿ ಬರುವ ಅಮ್ಮನಾಗಿದ್ದಾಳೆ. ಸದಾ ಹೊರಗಡೆಯೇ ಉಳಿಯುತ್ತಿದ್ದ ಅಪ್ಪ ಅಮ್ಮನಂತೆ ಅಡಿಗೆ ಮನೆಗೆ ನುಗ್ಗಿ ಮಕ್ಕಳಿಗೆ ಹಾಲು ಕಾಯಿಸಿಕೊಡುತ್ತಾನೆ, ತಿಂಡಿ ಮಾಡಿಕೊಡುತ್ತಾನೆ. ಅಮ್ಮನಿಗೆ ಮನೆಗೆಲಸದಲ್ಲಿ ಸಹಾಯಮಾಡುತ್ತಾನೆ. ಅವನು ಕೂಡ ಅಮ್ಮನಂತೆ ಮಕ್ಕಳನ್ನು ಎತ್ತಿ ಆಡಿಸುತ್ತಾನೆ, ನ್ಯಾಪಿ ಬದಲಿಸುತ್ತಾನೆ, ರಚ್ಚೆ ಹಿಡಿಯುವ ಮಕ್ಕಳನ್ನು ಸಮಾಧಾನಪಡಿಸುತ್ತಾನೆ. ಅವರನ್ನು ರೆಡಿ ಮಾಡಿ ಸ್ಕೂಲಿಗೂ ಕಳಿಸುತ್ತಾನೆ. ಹೋ ವರ್ಕ್ ಮಾಡಿಸುತ್ತಾನೆ. ಅಮ್ಮನಂತೆ ಮುದ್ದು ಮಾಡುತ್ತಾನೆ, ಲಲ್ಲೆಗೆರೆಯುತ್ತಾನೆ. ಆದರೂ ಅಮ್ಮನ ಆರೈಕೆ, ಪ್ರೀತಿ, ವಾತ್ಸಲ್ಯಗಳ ನಿಟ್ಟುಸಿರುಗಳ ಮುಂದೆ  ಅಪ್ಪನದು ಅಷ್ಟಾಗಿ ಲೆಕ್ಕಕ್ಕೇ ಬರುವದಿಲ್ಲ ಯಾಕೆ?

 

ಇವತ್ತು ಅಪ್ಪ ಎಂದರೆ ಪ್ರೀತಿ, ಅಪ್ಪ ಎಂದರೆ ವಾತ್ಸಲ್ಯ, ಅಪ್ಪ ಎಂದರೆ ಆಸರೆ, ಅಪ್ಪ ಎಂದರೆ ನೆರಳು. ಅಪ್ಪ ಎಂದರೆ ಸ್ಪೂರ್ತಿ, ಅಪ್ಪ ಎಂದರೆ ನೆನಪುಗಳ ಆಗರ, ಅಪ್ಪ ಎಂದರೆ ಕನಸುಗಳನ್ನು ಕಟ್ಟಿ ಕೊಡುವವ, ಕೊಂಡು ಕೊಡುವವ, ಹಂಚಿಕೊಳ್ಳುವವ. ಅಪ್ಪ ಎಂದರೆ ಸ್ನೇಹಿತ, ಅಪ್ಪ ಎಂದರೆ ಮಾರ್ಗದರ್ಶಿ, ಅಪ್ಪ ಎಂದರೆ ಭರವಸೆಯ ಬೆಳಕು. ಅಪ್ಪ ಎಂದರೆ ಒಂದು ಸಣ್ಣ ಗದರಿಕೆಯೊಂದಿಗೆ ಪ್ರೀತಿಯ ಮಳೆಯಲ್ಲಿ ತೋಯಿಸುವವ. ಅಪ್ಪ ಎಂದರೆ ಇನ್ನೂ ಏನೇನೋ ಆಗಿದ್ದಾನೆ! ಮಕ್ಕಳ ಬೆಳವಣಿಗೆಯಲ್ಲಿ ಆತನೂ ಅಮ್ಮನಂತೆ ಸರಿ ಸಮನಾಗಿ ಜೀವ ತೇಯುತ್ತಾನೆ. ಆದರೂ ಇನ್ನೂ ಆತ ಅಮ್ಮನಂತೆ “truth” ಆಗದೆ “myth” (Mother is a truth, father is a myth) ಆಗಿಯೇ ಗೇಲಿಗೊಳಗಾಗುತ್ತಿರುವದು ಮಾತ್ರ ವಿಷಾದಕರ!

-ಉದಯ್ ಇಟಗಿ

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಇಟಗಿಯವರೆ, ಅಪ್ಪನ ದಿನಕ್ಕೆ ಚಿ೦ತೆಗೆ ಹಚ್ಚುವ೦ತಿದೆ ನಿಮ್ಮ ಲೇಖನ, ಅಭಿನ೦ದನೆಗಳು.<<ಅಪ್ಪನದು ತೋರ್ಪಡಿಸದ ಪ್ರೀತಿ. ಆತನದು ಸದಾ ಉರಿ ಉರಿಯುವ ದರ್ಪದ ಮುಖ>>ಈ ಸಾಲು ಮಾತ್ರ ಸದಾ ಮು೦ಗೋಪಿಯಾಗಿದ್ದ ದುಡುಕುಬುದ್ಧಿಯ ನನ್ನ ಅಪ್ಪನನ್ನು ನೆನಪಿಸಿತು.

ಇಟಗಿ ಅವರೇ, >>>ಇವತ್ತು ಅಪ್ಪ ಎಂದರೆ ಪ್ರೀತಿ, ಅಪ್ಪ ಎಂದರೆ ವಾತ್ಸಲ್ಯ, ಅಪ್ಪ ಎಂದರೆ ಆಸರೆ, ಅಪ್ಪ ಎಂದರೆ ನೆರಳು. ಅಪ್ಪ ಎಂದರೆ ಸ್ಪೂರ್ತಿ, ಅಪ್ಪ ಎಂದರೆ ನೆನಪುಗಳ ಆಗರ, ಅಪ್ಪ ಎಂದರೆ ಕನಸುಗಳನ್ನು ಕಟ್ಟಿ ಕೊಡುವವ, ಕೊಂಡು ಕೊಡುವವ, ಹಂಚಿಕೊಳ್ಳುವವ. ಅಪ್ಪ ಎಂದರೆ ಸ್ನೇಹಿತ, ಅಪ್ಪ ಎಂದರೆ ಮಾರ್ಗದರ್ಶಿ, ಅಪ್ಪ ಎಂದರೆ ಭರವಸೆಯ ಬೆಳಕು. ಅಪ್ಪ ಎಂದರೆ ಒಂದು ಸಣ್ಣ ಗದರಿಕೆಯೊಂದಿಗೆ ಪ್ರೀತಿಯ ಮಳೆಯಲ್ಲಿ ತೋಯಿಸುವವ. ಅಪ್ಪ ಎಂದರೆ ಇನ್ನೂ ಏನೇನೋ ಆಗಿದ್ದಾನೆ! ಮಕ್ಕಳ ಬೆಳವಣಿಗೆಯಲ್ಲಿ ಆತನೂ ಅಮ್ಮನಂತೆ ಸರಿ ಸಮನಾಗಿ ಜೀವ ತೇಯುತ್ತಾನೆ. ಆದರೂ ಇನ್ನೂ ಆತ ಅಮ್ಮನಂತೆ “truth” ಆಗದೆ “myth” (Mother is a truth, father is a myth) ಆಗಿಯೇ ಗೇಲಿಗೊಳಗಾಗುತ್ತಿರುವದು ಮಾತ್ರ ವಿಷಾದಕರ!>>> ಇದರ ನಿಜವಾದ ಅರಿವು ನನಗಾಗಿದ್ದು ನಾನು ತಂದೆಯಾದ (ಒಂದು ವರ್ಷದ ಮಗನಿದ್ದಾನೆ ) ಮೇಲೆ !!! ಒಳ್ಳೆಯ ಬರಹ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು -ಚೈತನ್ಯ ಭಟ್

ಇಟಗಿಯವರೇ, ನಮಸ್ಕಾರಗಳು. ಚಿ೦ತನಾತ್ಮಕ ಲೇಖನ. ನನ್ನ ತ೦ದೆಯವರೂ ಹಾಗೆಯೇ. ಎ೦ದೂ ತಮ್ಮ ಮಕ್ಕಳ ಮೇಲಿನ ಪ್ರೀತಿಯನ್ನು ವ್ಯಕ್ಥಪಡಿಸಿದವರೇ ಅಲ್ಲ! >>ಆದರೂ ಇನ್ನೂ ಆತ ಅಮ್ಮನಂತೆ “truth” ಆಗದೆ “myth” (Mother is a truth, father is a myth) ಆಗಿಯೇ ಗೇಲಿಗೊಳಗಾಗುತ್ತಿರುವದು ಮಾತ್ರ ವಿಷಾದಕರ!<< ನೂರಕ್ಕೆ ನೂರರಷ್ಟು ಸತ್ಯ. ನಮಸ್ಕಾರಗಳು.

ನಿಜವಾಗಿಯೂ ಅಪ್ಪನ ವ್ಯಕ್ತಿತ್ವ, ಕರ್ತವ್ಯಗಳೆಲ್ಲವೂ "ಥ್ಯಾಂಕ್ಸ್ ಲೆಸ್ ಜಾಬ್" (ಧನ್ಯವಾದಗಳೇ ಸಿಗದ) ಅಲ್ಲವೇ ಪಾಪ! ಧನ್ಯವಾದಗಳು ಇಟಗಿಯವರೇ

ತಾಯ್ತನ ವೈಭವೀಕೃತಗೊಂಡಷ್ಟು ತಂದೆತನ ವೈಭವೀಕೃತಗೊಂಡಿಲ್ಲ; ಅನಿಸಿಕೆ ಸತ್ಯ. ಆಮಾಯಕ ಹೆಣ್ಣನ್ನು ನಂಬಿಸಿ, ಭೋಗಿಸಿ ಅವಳಿಗೆ ಹೊಟ್ಟೆ ಬರಿಸಿ ಬಿಟ್ಟೆ ಎಂದು ಜವಾಬ್ದಾರಿಯಿಂದ ನುಣುಚಿಕೊಂಡು ವಿಜಯದ ನಗೆ ಬೀರುವ ನಡತೆಗೆಟ್ಟ ದುರುಳರು ನಮ್ಮ ಸಮಾಜದಲ್ಲಿರುವುದರಿಂದ ಹೆಣ್ಣಿಗೆ ಹೆಚ್ಚು ಮರ್ಯಾದೆ.