ಗುರುವಿಗೇ ತಿರುಮಂತ್ರದ ಪಾಠಃ ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆಃ ಭಾಗ ೧೭

To prevent automated spam submissions leave this field empty.

 (೫೦)


     ಕಲಾಭವನದಲ್ಲಿ ಚಿತ್ರಕಲೆಯನ್ನು ಕಲಿಸುತ್ತಾರೋ ಅಥವ ಚಿತ್ರಕಲೆಯ ’ಬಗ್ಗೆ’ ಕಲಿಸುತ್ತಾರೋ ಎಂಬ ಜಿಜ್ಞಾಸೆಯನ್ನು ಹೆಚ್ಚು ಕಲಿಯುತ್ತಿದ್ದೆವು! ಕಲಾಶಾಲೆಯು ನಮ್ಮನ್ನು ಪ್ರಭಾವಿಸುವ ಮುನ್ನವೇ ಅಲ್ಲಿನ ಜನಜೀವನ ಹಾಗೂ ವಾತಾವರಣವು ಹೆಚ್ಚು ಪ್ರಭಾವಿಸುತ್ತಿತ್ತು. ಅತ್ಯಂತ ನಿರ್ಗತಿಕ ಭಾರತೀಯರು ಇರುವುದು ಅಲ್ಲಿಯೇ. ’ಪರ್ ಕ್ಯಾಪಿಟ’ ಅಥವ ತಲೆಗಾದಾಯ (ಎನ್ನಬಹುದೆ?) ಅಥವ ಒಟ್ಟಾರೆಯಾಗಿ ಒಬ್ಬ ವ್ಯಕ್ತಿ ದಿನಕ್ಕೆ ಎಷ್ಟು ಸಂಪಾದಿಸುತ್ತಾನೆ ಎಂಬುದಿದೆಯಲ್ಲ, ಅದು ಅತಿ ಕಡಿಮೆ ಇರುವುದು ಬೆಂಗಾಲದಲ್ಲಿಯೇ. ೧೯೧೧ರಲ್ಲಿ ಭಾರತದ ರಾಜಧಾನಿಯು ಕೊಲ್ಕೊತ್ತದಿಂದ ದೆಹಲಿಗೆ ವರ್ಗಾವಣೆಗೊಂಡಾಗ, ಕೊಲ್ಕತ್ತದ ಜನಜೀವನಶೈಲಿಯೇ ಕುಸಿದು ಬಿದ್ದಿತು. ಕೊಲ್ಕೊತ್ತದಲ್ಲಿ ಈಗಲೂ ವಾಹನವೊಂದರಲ್ಲಿ ನೀವು ಪ್ರಯಾಣಿಸುತ್ತಿದ್ದರೆ, ನಿಮಗೆ ಮಾಡಬೇಕೆನ್ನಿಸುವುದು ಒಂದೇ ಕೆಲಸಃ ಕೆಳಗಿಳಿದು, ಹನುಮಂತನಂತೆ ವಿಶಾಲವಾಗಿ ಬೆಳೆದು, ಬೆಳೆವ ಮುನ್ನವೇ ಕೈಯಲ್ಲೊಂದು ಚಿಂದಿಬಟ್ಟೆ ಹಿಡಿದು, ಬೆಳೆವಾಗ ಬಟ್ಟೆಯೊ ದೊಡ್ಡದಾಗಿ, ಅಲ್ಲಿನ ಕಟ್ಟಡಗಳ ಮೇಲೆ ದಶಕಗಟ್ಟಲೆ ಕುಳಿತಿರುವ ಕೊಳೆಯನ್ನು ಒಮ್ಮೆಲೆ ಅಳಿಸಿಹಾಕಿಬಿಡಬೇಕು ಎನ್ನಿಸಿಬಿಡುತ್ತದೆ ನಿಮಗೆ!


     ೨೦೦೯ರಲ್ಲಿ ಕೊಲ್ಕೊತ್ತದ ಪಕ್ಕದ ಜಿಲ್ಲೆಯಾದ ’೨೪ ಪರಗಣ’ದಲ್ಲಿ ಎಮಾಮಿ ಸೌಂದರ್ಯ ಸಾಬೂನು ಕಂಪನಿಯವರು (ಎಮಾಮಿ ಚಿಸಲ್ ಆರ್ಟ್) ಒಂದು ಕಲಾಶಿಬಿರ ಏರ್ಪಡಿಸಿದ್ದರು. ಹತ್ತು ದಿನಗಳ ಕಾಲ ರೆಸಾರ್ಟಿನಲ್ಲಿ ರಾಜೋಪಚಾರ. ಕಾಂಪೌಂಡಿನ ಪಕ್ಕದಲ್ಲಿ ಡಬ್ಬಾ ಅಂಗಡಿಯಲ್ಲಿ ಚಹಾ ಕುಡಿಯಲು ಹೋಗುತ್ತಿದ್ದೆ. ಅಂಗಡಿಯ ಹೊರಗೆ ಹಣ್ಣುಹಣ್ಣು ಮುದುಕಿಯೊಬ್ಬಳು ಗೋಣೀಚೀಲವನ್ನು ಹಾಸಿ, ಅದರ ಮೇಲೆ ಸೀಬೇಕಾಯಿ ಹಾಗೂ ನೇರಳೆಹಣ್ಣಿನ ಗುಡ್ಡೆಗಳನ್ನು ಮಾರುತ್ತ, ಕೋಲಿನ ತುದಿಗೆ ಕೊಳಕು ಬಟ್ಟೆ ಕಟ್ಟಿ, ನೊಣ ಓಡಿಸುತ್ತಿದ್ದಳು. ಖಂಡಿತವಾಗಿಯೊ ಕೋಲನ್ನು ಆಡಿಸುವ ಶಕ್ತಿಯನ್ನು ಆ ಮುದುಕಿ ಕಳೆದುಕೊಂಡು ದಶಕಗಳೇ ಕಳೆದಿರಬೇಕು. ಕೋಲಿಗೆ ಕಟ್ಟಿದ ಬಟ್ಟೆಯನ್ನು ಒಗೆದದ್ದೂ ಸಹ ಆಕೆ ಶಕ್ತಿಯನ್ನು ಕಳೆದುಕೊಂಡ ದಿನದ ಹಿಂದಿನ ದಿನವೇ. ನೊಣಗಳು ಮೊರ್ಛೆ ಹೋಗಿ, ಹಣ್ಣುಗಳ ಗುಡ್ಡೆಯ ಮೇಲೆ ಕುಸಿದು ಬೀಳುತ್ತಿದ್ದುದಕ್ಕೆ ಕಾರಣ ಆ ಬಟ್ಟೆಯಿಂದ ಹೊರಡುವ ದುರ್ವಾಸನೆಯೇ ಆಗಿತ್ತು. ೨೦೦೯ರಲ್ಲಿ ಡಬ್ಬಾಅಂಗಡಿಯಲ್ಲಿನ ಚಹಕ್ಕೆ ಒಂದು ರೂಪಾಯಿ ಬೆಲೆ. ಶಾಂತಿನಿಕೇತನದಲ್ಲಿ ೧೯೯೨ರಲ್ಲಿ ದೊರಕುತ್ತಿದ್ದುದ್ದಕ್ಕಿಂತಲೂ ಎರಡು ಪಟ್ಟು! ಎರಡು ದಶಕದಲ್ಲಿ ಎರಡು ಪಟ್ಟು ಮಾತ್ರ ಬೆಲೆ ಏರುವುದು ಪರ್-ಕ್ಯಾಪಿಟ ಕನಿಷ್ಠವಿರುವ ಕಡೆಯೇ! ನೆಲಕ್ಕೆ ಹಾಸಿದ ಒಣ ಸಗಣಿಯ ಹಂದರ, ಗೂಡಿನಲ್ಲಿ ನಾಲ್ಕು ಡಬ್ಬಗಳು, ಅವುಗಳಲ್ಲಿನ ಮಿಠಾಯಿಗಳು ಅಂಗಡಿ ಪಕ್ಕದ ಮುದುಕಿ ಹುಟ್ಟಿದ ದಿನದಂದು ಆಕೆಯ ಮನೆಯವರು ಕೊಂಡು ತಂದಂತಿತ್ತು! ಚಹಾ ಅಂಗಡಿಯಲ್ಲಿ ದಿನಕ್ಕೆ ಏನಿಲ್ಲವೆಂದರೂ ನೂರು ರೂಪಾಯಿ ವ್ಯಾಪಾರ. ಮುದುಕಿಗೆ ಹೆಚ್ಚೆಂದರೆ ಹತ್ತರಿಂದ ಹದಿನೈದು ರೂಪಾಯಿ, ದಿನಕ್ಕೆ! ಇದನ್ನೇ, ಇಂತಹುದನ್ನೇ ಮಾರ್ಕ್ಸಿಸ್ಟ್ ಕೊಲ್ಕೊತ್ತದ ಮಹಾನ್ ಪರ್-ಕ್ಯಾಪಿಟ ಎನ್ನುವುದು!


(೫೧)


     ದೃಶ್ಯಕಲೆಯನ್ನು ಕಲಿವಾಗ ಎಷ್ಟು ಬಿಡುವಾಗಿಬಿಡುತ್ತೀರೆಂದರೆ, ಜೀವನದ ಬಗ್ಗೆಯೇ ಯೋಚಿಸತೊಡಗಿಬಿಡುತ್ತೇವೆ. ಏನನ್ನು ಚಿತ್ರಿಸಬೇಕು, ಹೇಗೆ ಚಿತ್ರಿಸಬೇಕು ಎನ್ನುವುದನ್ನು ಕಲಿವ ಕಾಲಕ್ಕೆ, ಸಹಜವಾಗಿ ’ಏಕೆ’ ಚಿತ್ರಿಸಬೇಕು ಎಂಬ ಪ್ರಶ್ನೆ ನಿಮ್ಮನ್ನು ಬಾಧಿಸಿತೋ--ನೀವು ಗ್ಯಾರಂಟಿ ಕಲಾವಿದರಾಗುವ ಅರ್ಹತೆ ಪಡೆದಿರಿ ಎಂದರ್ಥ! ಆಮೇಲೆ ಕಲಾವಿದರಾಗುವುದು ಬಿಡುವುದು ನಿಮ್ಮ ಆಯ್ಕೆ. ಕಲಾಕೃತಿ ರಚಿಸುವುದು, ಅದನ್ನು’ಸೂಕ್ತ’ ವ್ಯಕ್ತಿಗಳಿಗೆ ತೋರಿಸುವುದು, ಅವರ ನಡವಳಿಕೆ ಅನುಸರಿಸುವುದು--ಇವೆಲ್ಲ ಕಲಾವಿದರಾಗುವ ಪ್ರಕ್ರಿಯೆಯ ಭಾಗವೇ. ಇಂತಹವರನ್ನು ’ಕಲೆಯ-ಸಂರಕ್ಷಕರು’ ಎನ್ನುತ್ತೇವೆ. ಸ್ವತಃ ನಾವೇ ಕಲಾವಿದರಾದ ನಂತರ ನಾವೂ ಸಹ ಅಂತಹ ಕಾವಲುಗಾರರಾಗಿಬಿಡುತ್ತೇವೆ.


     ಇಂತಹ ರಿವಾಜುಗಳ ಬಗ್ಗೆ ಕಲಾಭವನದಲ್ಲಿ ಅತೀವ ಎಚ್ಚರವಿದೆ. "ನನಗೆ ಗ್ಯಾಲರಿಯವರನ್ನು ಪರಿಚಯಿಸಿ" "ನನ್ನ ಕಲಾಕೃತಿಯನ್ನು ಮಾರಾಟ ಮಾಡಿಸಿಕೊಡಿ" "ನನಗೆ ಅವರಿನಿಗಿಂತ/ಅವಳಿಗಿಂತ ಹೆಚ್ಚು ಅಂಕಗಳನ್ನು ಕೊಡಿ" ಎಂದೆಲ್ಲ ಬೆಂಗಾಲಿ ಹುಡುಗರು ಅದರಲ್ಲೂ ಹುಡುಗಿಯರು ಉಪಾಧ್ಯಾಯರುಗಳ ಬೆನ್ನು ಬೀಳುತ್ತಿದ್ದರು, ಅಡ್ಡ ಹಾಕಿಕೊಳ್ಳುತ್ತಿದ್ದರು ಕ್ಯಾಂಪಸ್ಸಿನಲ್ಲೇ. ಹೊರಗಿನವರಾದ ನಮಗೆ ಆಗೆಲ್ಲ ಬಹಳ ಮೋಜು. ಏಕೆಂದರೆ ಅಂತಹ ಸಂದರ್ಭಗಳಲ್ಲಿ ಉಪಾಧ್ಯಾಯರುಗಳನ್ನು ಪ್ರಸಿದ್ಧ ಕಲಾವಿದರು ಎಂದೇ ಭಾವಿಸಲಾಗುತ್ತಿತ್ತು. ಆಗೆಲ್ಲ ಉಪಾಧ್ಯಾಯರುಗಳ ಮುಖಭಾವಗಳನ್ನು ನೋಡುವಂತಿರುತ್ತಿತ್ತು. ಏಕೆಂದರೆ ಅವರುಗಳ ಮಾತುಕತೆಗೆಳೆಲ್ಲ ಬೆಂಗಾಲಿಯಲ್ಲಿದ್ದು, ಅವರ ಮಾತು ಅರ್ಥವಾಗದಿದ್ದರೂ ಭಾವ ಬಟಾಬಯಲಾಗಿಬಿಡುತ್ತಿತ್ತು.


     ಈ ಮತ್ತು ಇಂತಹ ಕಾರಣಗಳಿಗೆ ಆತ್ಮಹತ್ಯೆಯ ಪ್ರಯತ್ನಗಳು ಬಹಳ ನಡೆಯುತ್ತಿದ್ದವಲ್ಲಿ, ಉಪಾಧ್ಯಾಯರುಗಳದ್ದಲ್ಲ, ವಿದ್ಯಾರ್ಥಿಗಳದ್ದು. ಸಂತನು ಲೋದ್ (ಕ್ಯಾಪ್ಟನ್ ದನ ಗೆಳೆಯ) ಒಮ್ಮೆ ಶಾಂತಿನಿಕೇತನದ ಹೊರವಲಯದಲ್ಲಿ ತನ್ನ ಸ್ನೇಹಿತೆಯ ಜೊತೆ, ಹೆಚ್ಚು ಏಕಾಂಗಿತನವಿದ್ದಲ್ಲಿ ವಿರಮಿಸುತ್ತಿದ್ದಾಗ ಯಾರೋ ಒಬ್ಬ ಬಂದು ಗನ್ ತೋರಿಸಿದನಂತೆ. ಆಳೆತ್ತರದ ಸಂತನುವಿನ ಸಹಜ ನಿಲುವೇ ರೌಡಿಯ ಪೋಸಿನಲ್ಲಿದ್ದಂತಿದ್ದುದ್ದರಿಂದ ಆ ಕೇಡಿ ಶೋಟ್ ಮಾಡಿಯೇ ಬಿಟ್ಟನಂತೆ. ಆದರೆ ಬಂದೂಕು ಲಾಕ್ ಆಗಿದ್ದು, ಸಂತನು ಅದನ್ನು ಕಸಿದುಕೊಂಡು, "ನೋಡು ಮಗ, ಲಾಕ್ ತೆಗೆಯುವುದು ಹೀಗೆ" ಎಂದು ಕೇಡಿಗೇ ಗುರಿಯಿಟ್ಟ ಕಥೆ ಆಗ ಬಹಳ ಪ್ರಚಾರ ಪಡೆಯಿತು. ಮಾತಿನಮಲ್ಲನಾದ ಸಂತನುವಿನ ಕಥೆ ನಿಜವೇ ಇರಬಹುದು!


(೫೨)


     ಕೊಬಿತ ಅಥವ ಬೊಬಿತ ಎಂಬಾಕೆಯದ್ದು ಮತ್ತೊಂದು ಕಥೆ. ನನ್ನ ಕ್ಲಾಸ್‍ಮೆಟ್ ಆಗಿದ್ದ ಆಕೆಯ ಈ ಎರಡೂ ಹೆಸರು ನಿಜನಾಮಧೇಯವಲ್ಲವೆಂದು ಒತ್ತಿಹೇಳಬೇಕಿಲ್ಲವಷ್ಟೇ. ಕೊಲ್ಕೊತ್ತದಿಂದ ಬರುತ್ತಿದ್ದ ಆಕೆ ಅಪರೂಪಕ್ಕೆ ಹಾಗೆ ಮಾಡುತ್ತಿದ್ದಳು. ತಿಂಗಳಿಗೆ ಕೇವಲ ಐದಾರು ದಿನ ಬರುತ್ತಿದ್ದಳು. ಆದರೆ ಎರೆಡು ತಿಂಗಳಿಗಾಗುವಷ್ಟು ಕಲಾಕೃತಿಗಳ ಪ್ರಿಂಟ್‍ಗಳನ್ನು ಗ್ರಾಫಿಕ್ ವಿಭಾಗದಲ್ಲಿ ತಯ್ಯಾರಿಸಿಬಿಡುತ್ತಿದ್ದಳು.


     ಎಲ್ಲರಿಗೂ ಆಕೆ ಬಂದಳೆಂದರೆ ಮೊದಲು ಆಶ್ಚರ್ಯ, ನಂತರ ಸಿಟ್ಟು. ಏಕೆಂದರೆ ಆಕೆ ಕಲಾಭವನದಲ್ಲಿದ್ದಾಗಲೆಲ್ಲ ಆಕೆಯ ಸಹವರ್ತಿಗಳ ಮತು ಕೆಲವು ಸಹವರ್ತಿಗಳ ಎಲ್ಲ ವಸ್ತುಗಳೂ ಮಾಯವಾಗುತ್ತಿದ್ದವು! ಝಿಂಕ್ ಹಾಳೆ, ಮುದ್ರಣದ ಇಂಕು, ಮಾರ್ಕರ್ ಪೆನ್ನು, ಕೊನೆಗೆ ಕೆಲವರು ಕಾಡಿ-ಬೇಡಿ ಹಿರಿಯ ಉಪಾಧ್ಯಾಯರು ಉರುಫ್ ಖ್ಯಾತಕಲಾವಿದರ ಬಳಿ ಪಡೆದಿದ್ದ ಪ್ರಿಂಟ್‍ಗಳೂ, ಸಾವಿರಾರು ರೂಪಾಯಿ ಮೌಲ್ಯದ ಈ ಮತ್ತು ಇಂತಹ ಎಲ್ಲವೂ, ಕೇವಲ ಐವತ್ತು ಪೈಸೆ ಚಾಯ್ ಕುಡಿದು ಬರುವಷ್ಟರಲ್ಲಿ ಮಾಯವಾಗಿಬಿಟ್ಟಿರುತ್ತಿದ್ದವು. ’ಕೊಬಿತ ಅಥವ ಬೊಬಿತ’ ಊರುಬಿಟ್ಟ ಕೂಡಲೆ ಕಳ್ಳತನವೂ ಊರುಬಿಟ್ಟಿತು.


     ಒಮ್ಮೆ ಎಲ್ಲ ವಿದ್ಯಾರ್ಥಿಗಳೂ ಒಟ್ಟಿಗೆ ಸೇರಿ ಗ್ರಾಫಿಕ್ ವಿಭಾಗದ ಡೇವಿಡ್ ದ ನನ್ನು ಒಪ್ಪಿಸಿ ಕೊಬಿತಾಥವಬಬಿತಳ ಡ್ರಾಯರ್ ಬೀಗವನ್ನು ಒಡೆಸಿಹಾಕಿದ್ದರು, ಆಕೆಯ ಅನುಪಸ್ಥಿತಿಯಲ್ಲಿ. ಎಲ್ಲರೂ ಕಳೆದುಕೊಂಡಿದ್ದ ಎಲ್ಲವೂ ಅಲ್ಲಿದ್ದವು! ಆಗ ಅಲ್ಲಿ ಸಿಗದೇ ಹೊದದ್ದು ಕೇವಲ ಕೊಬಿತಾಥವಬಬಿತ!


     "ಇಲ್ಲ ಡೇವಿಡ್ ದ. ನಾನು ಕದಿಯಲಿಲ್ಲ. ಎಲ್ಲರೂ ಎಲ್ಲೆಡೆ ಎಲ್ಲೆಂದರಲ್ಲಿ ಬಿಟ್ಟುಹೋಗಿದ್ದ ವಸ್ತುಗಳನ್ನು ಎತ್ತಿ ಜೋಪಾನವಾಗಿ ನನ್ನ ಲಾಕರಿನಲ್ಲಿ ಇರಿಸಿದ್ದೆ. ನೋಡಿ, ಅವರು ಮಾಡಿರುವ ಕೃತ್ಯವನ್ನ. ಅವುಗಳನ್ನೆಲ್ಲ ಜೋಪಾನ ಮಾಡಿಸಿಟ್ಟಿದ್ದ ಲಾಕರನ್ನೇ ಒಡೆಸಿ ಹಾಕಿದ್ದಾರೆ, ಅದೂ ನಿಮ್ಮ ಸಮ್ಮುಖದಲ್ಲೇ" ಎಂದು ವಿವರಣೆ ನೀಡಿದ್ದಳಾಕೆ, ವಾಪಸ್ಸು ಬಂದಾಗೊಮ್ಮೆ, ವಿಚಾರಣೆಯ ಪ್ರಶ್ನೆಗೆ ಉತ್ತರ ನೀಡುತ್ತ.


     "ಬೇರೆಯವರ ಲಾಕರಿನಲ್ಲಿದ್ದದ್ದನ್ನು ನಿನ್ನ ಲಾಕರಿನಲ್ಲಿಟ್ಟುಕೊಂಡದ್ದು ಏಕೆ?"


     "ಅವರ ಲಾಕರ್ ಬೀಗವನ್ನು ಸುಲಭವಾಗಿ ಯಾರಾದರೂ ಒಡೆದುಬಿಡಬಹುದಾಗಿತ್ತು. ಅದನ್ನು ನಾನೇ ಸಾಬೀತುಪಡಿಸಿದ್ದೂ ಸಹ, ಸೆಕ್ಯುರಿಟಿ ಎಂತಹ ಅವಸಾನ ಸ್ಥಿತಿಯಲ್ಲಿದೆ ಎಂದು ಸಾಧಿಸಲು!!" ಎಂದಿದ್ದಳಾಕೆ.


     ಇತ್ತೀಚೆಗೆ, ಒಂದೂವರೆ ದಶಕದ ನಂತರ ಆಕೆಯನ್ನು ಚಿತ್ರಕಲಾ ಪರೀಷತ್ತಿನಲ್ಲಿ ಭೇಟಿ ಮಾಡಿದ್ದೆ, ಆಕಸ್ಮಿಕವಾಗಿ. ಅಚಾನಕ್ ನನ್ನ ಎರಡೂ ಕೈಗಳು ಎರಡು ಜೇಬಿಗಿಳಿದವು, ಒಳಗಿನ ವಸ್ತುಗಳು ಆಯಸ್ಕಾಂತಕ್ಕೆ ಆಕರ್ಷಿತವಾಗಿ ದೌಡಾಯಿಸುವ ಕಬ್ಬಿಣದಂತಾಗದಿರಲಿ ಎಂದು. ಆದರೂ ಮಾತನಾಡಿಸಬೇಕಲ್ಲ!


    "ಏನು ಕೊಬಿತಾಅಥವಬಬತಿ, ಹೇಗಿದ್ದೀಯ. ಏನು ಬೆಂಗಾಲದಿಂದ ಇಷ್ಟು ದೂರ?!" ಎಂದಿದ್ದೆ.


     "ಜಗತ್ಪ್ರಸಿದ್ಧವಾದ ಬೆಂಗಳೂರಿನ ಗುರುಜಿಯ ಆಶ್ರಮದಲ್ಲಿ ಸೇವೆ ಸಲ್ಲಿಸಲು ಬಂದಿದ್ದೇನೆ" ಎಂದಳಾಕೆ.


     ಆಗ ನನ್ನ ಕಣ್ಣ ಮುಂದೆ ಬಂದು ನಿಂತ ಗಾಭರಿಗೊಳಿಸುವ ಚಿತ್ರ ಒಂದೇ -- ಕೆಲವೇ ದಿನಗಳಲ್ಲಿ ಗುರುಜಿಯ ಮೀಸೆ-ದಾಡಿ ಅಚಾನಕ್ ಮಾಯವಾಗಿ, ಶಾಂತಿನಿಕೇತನದ ಕಲಾಭವನದ ಗ್ರಾಫಿಕ್ ವಿಭಾಗದ ಡ್ರಾಯರೊಂದರೊಳಗೆ ನುಸುಳಿ, ಅದರ ಒಂದು ಭಾಗವು ಹೊರಗೆ ಇಣುಕಿಹಾಕುತ್ತಿರುವ ಅಭೂತಪೂರ್ವ ದೃಶ್ಯವದು!!///

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಕೊಬಿತ/ಬಬಿತಳ ವ್ಯಕ್ತಿತ್ವ ಚಿತ್ರಣ ಚೆನ್ನಾಗಿದೆ. ಗುರೂಜಿಯ ದಾಡಿ, ಮೀಸೆಗಳನ್ನೂ ಆಕೆ ಕದಿಯಬಹುದೆಂಬ ನಿಮ್ಮ ಊಹೆ ಅದ್ಭುತ ಕಲ್ಪನೆ!