ಎಲ್ಲವನ್ನೂ ಗಮನಿಸುವದಷ್ಟೇ ಮಾನವನಿಗಿರುವ ಒಂದೇ ಅರ್ಹತೆ, ಅವಕಾಶಃ ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆಃ ಭಾಗ ೧೬

To prevent automated spam submissions leave this field empty.

(೪೮)


     ಕಲಾಭವನದಲ್ಲಿ ಮೊರು ಅಲ್ಲ ನಾಲ್ಕು ತರಹದ ವಿಕ್ಷಿಪ್ತರಿದ್ದರು. ಅಲ್ಲಿ ಬರುತ್ತಿದ್ದ ಕ್ಯಾಪ್ಟನ್ ದಾ ಅಂತಹವರು, ಬಾವುಲ್ ಸಂಗೀತಗಾರರು, ಸ್ವತಃ ಕಲಾವಿದ್ಯಾರ್ಥಿಗಳು ಮತ್ತು ವಿಕ್ಷಿಪ್ತ್ ದಾ! ಬಾವು ಸಂಗೀತಗಾರರು ಏಕತಾರವನ್ನು ಮೀಟುತ್ತ ಹಾಡುತ್ತಿದ್ದರೆ ಬೇರೆಯದೇ ಒಂದು ಲೋಕ ಸೃಷ್ಟಿಯಾಗುತ್ತಿತ್ತು. ಕಲಾಭವನದ ಪಕ್ಕದಲ್ಲಿದ್ದ ಸಂಗೀತ ಭವನದ ಶಾಸ್ತ್ರೀಯ ಕಲಿಕೆಯೆಂದರೆ ರವೀಂದ್ರ (ರೊಬಿಂದರ್) ಸಂಗೀತ. ಬಾವುಲ್ ಗಾನ ಅಲ್ಲಿ ನಿಷಿದ್ಧ.


     ಬಾವುಲ್ ಗೀತೆ ಹಾಡುತ್ತಿದ್ದವರು ನಮ್ಮ ಹಾಲಕ್ಕಿ ಒಕ್ಕಲಿಗರಂತೆ--ಬಹಳ ನಿಗೂಢ ಜನ. ಅಂತಹವನೊಬ್ಬ ಅಂಜನವನ್ನು ಗೃಹಿಣಿಗೆ ಕೊಟ್ಟಾಗ ಆಕೆ ರಾಗಿ ಬೀಸೋ ಕಲ್ಲಿಗೆ ಬಳಿದಳಂತೆ. ರಾತ್ರಿ ಆ ಬೀಸೋಕಲ್ಲು ತಾನಾಗಿ ಗುಡುಗಿಕೊಂಡು ಅವನಿದ್ದಲ್ಲಿಗೆ ಹೋಯಿತಂತೆ. ಲೈಂಗಿಕತೆಗೂ ಬಾವುಲ್ ಸಂಗೀತಕ್ಕೂ ಅವಿನಾಭಾವ ಸಂಬಂಧ. ಸಂಗೀತವನ್ನು ಔಪಚಾರಿಕವಾಗಿ ಕಾಲೇಜಿನಲ್ಲಿ ಕಲಿವ ಗೆಳತಿಯರೂ ಮಂತ್ರಮುಗ್ಧರಾಗಿ ಬಾವುಲ್ ಸಂಗೀತಕ್ಕೆ, ಪುಂಗಿಗೆ ತಲೆಯಾಡಿಸುವ ಹಾವಿನಂತಾಗಿಬಿಡುತ್ತಿದ್ದರು.          ಲೋಕಲ್ ಟ್ರೈನುಗಳಲ್ಲಿ ಬಾವುಲ್ ಗಾನ ಇಲ್ಲದ ಸಂದರ್ಭಗಳೇ ಇಲ್ಲ.


     ಅಂತಹ ಜಗತ್ತಿನ ಎಲ್ಲೆಡೆಯಿಂದ ಒಮ್ಮೆ, ಒಟ್ಟಿಗೆ ಸೇರುವ ಬಾವುಲ್ ಸಮ್ಮೇಳನ ವಾರಗಟ್ಟಲೆ ’ಜಯದೇವ ಮೇಳ’ದಲ್ಲಿ ನಡೆಯುತ್ತದೆ, ಅಜಯ್ ನದಿಯ ದಡದಲ್ಲಿ. ಗೀತಗೋವಿಂದ ಖ್ಯಾತಿಯ ಜಯದೇವ ಕವಿ ಹುಟ್ಟಿದ ಊರದು. ಶಾಂತಿನಿಕೇತನದಿಂದ ಒಂದು ಗಂಟೆ ಬಸ್ ಪ್ರಯಾಣ. ಪ್ರಕ್ಷುಬ್ಧನ ಜೊತೆ ಒಂದು ಸಂಜೆ ಗೆಳೆಯರಷ್ಟು ಜನ ಹೊರಟೆವು.


     ಊರು ಕತ್ತಲಲ್ಲಿ ಹತ್ತಿರವಾಗುತ್ತಿದ್ದಂತೆ ಏನೋ ಒಂದು ಆಲೌಕಿಕ ಅನುಭವ. "ಏನದು?" ಎಂದೆ. "ಏನಿಲ್ಲ ಗಾಂಜಾ, ಚರಸ್ ಇಡೀ ಊರನ್ನೇ ಆವರಿಸಿಕೊಂಡಿದೆ. ಅದರ ಪರಿಣಾಮ" ಎಂದ ಪ್ರಕ್ಷು.


"ಅಫೀಮು ಕಾರಣವೇ ಹೊರತು ಅದೇ ಪರಿಣಾಮವಲ್ಲ, ಅಲ್ಲವೆ?" ಎಂದೆ.


"ನಿನಗೊಂದು ಆಲೌಕಿಕ ಅನುಭವ ಇಂದು ಖಂಡಿತ ಆಗಲಿದೆ. ಬಾ" ಎಂದ. ಪ್ರಶ್ನಿಸುವ ಅರ್ಥಹೀನತೆ ಅರಿತು ಅವನೊಂದಿಗೇ ಇದ್ದೆ. ’ಮಧ್ಯ’ರಾತ್ರಿ ರಾತ್ರಿ ಕೊರೆವ ಚಳಿ. ಅಚ್ಚರಿಯೆಂದರೆ ಅಷ್ಟೇಲ್ಲ ಡ್ರಗ್ಸ್ ಅಲ್ಲಿದ್ದರೂ ಕುಡಿತ ಮಾತ್ರ ಎಲ್ಲೂ ಕಾಣಲಿಲ್ಲ!


     ಮುನ್ನೆಚ್ಚರಿಕೆಯ ಪರಿಣಾಮವಾಗಿ ಕಂಬಳಿ ಹೊದ್ದು ನದಿಯ ತಟದಲ್ಲಿ ಕುಳಿತಿದ್ದೆವು, ನಾವೊಂದು ಮೊರ್ನಾಲ್ಕು ಜನ. ಯಾರೋ ಬೆಂಕಿ ಹಾಕಿದ್ದರು. ಅಲ್ಲಲ್ಲೇ ಮೂರ್ನಲ್ಕು ಅಡಿ ಎತ್ತರದ ಕಪ್ಪುಕಾಳಿ ವಿಗ್ರಹ. ಅವುಗಳ ಅಕ್ಕಪಕ್ಕದಲ್ಲಿ ಭಕ್ತಾದಿಗಳು ಹಚ್ಚಿ ಇರಿಸಿದ್ದ ಹಣತೆ ದೀಪಗಳು. ಅವುಗಳಲ್ಲಿ ಎದ್ದುಕಾಣುತ್ತಿದ್ದುದು ಹೊರಚಾಚಿದ, ಅರ್ಧ ದೇಹದಷ್ಟು ಅಳತೆಯ ಕೆನ್ನಾಲಗೆ. ಪ್ರತಿ ಕಾಳಿಯ ಸುತ್ತಲೂ ಸಣ್ಣ ಚಪ್ಪರಗಳು.


     ಆ ಮಧ್ಯರಾತ್ರಿಯಲ್ಲಿಯೊ ಕೊರೆವ ಚಳಿಯಲ್ಲಿಯೂ ಮರಗಟ್ಟುವ ನೀರಿನಲ್ಲಿ ಜನ ಸ್ನಾನಮಾಡುತ್ತಿದ್ದರು!


(೪೯)


ನದಿಯ ನೀರಿನ ಅಂಚಿಗೇ ಬೆಂಕಿ ಹಾಕಿದ್ದರು ಯಾರೋ. ಅದರ ಪಕ್ಕವೇ ಹೋಗಿ ಕುಳಿತೆ. ಬೆಂಗಾಲದ ಕಲಾವಿದರ ನಿಗೂಢ ನಿಸರ್ಗಚಿತ್ರಗಳನ್ನು ಹೋಲುತ್ತಿತ್ತು ಎದುರಿಗಿದ್ದ ಮಸುಕಾದ ಕ್ಷಿತಿಜ, ನದಿ ಹಾಗೂ ಆಕಾಶ. ’ಯಾವುದೋ ಕನ್ನಡದ ಕವನ ಸಂಕಲನದ ಶೀರ್ಷಿಕೆ ಇದ್ದಂತಿದೆ’ ಎಂದು ಆಗ ಅನಿಸಿದ್ದು ಈಗಲೂ ನೆನಪಿದೆ!


     ಪ್ರಕ್ಷುಬ್ಧನ ಪಕ್ಕಕ್ಕೆ ಕುಳಿತ ನನಗೆ ಏನೋ ವಿಕ್ಷಿಪ್ತವೆನಿಸುತ್ತಿದೆಯೆಂದು ಎಡಕ್ಕೆ ತಿರುಗಿ ನೋಡಿದೆ. ಬಲಕ್ಕಿದ್ದ ಪ್ರಕ್ಷು. ಯಾರೋ ಬೊಂಬಿನಿಂದ ಬೆಂಕಿಯಿದ್ದೆಡೆ ಕೆದಕುತ್ತಿದ್ದರು. ಒಂದು ಬೊಂಬು ಮಾತ್ರ ಯಾರದೋ ಕಾಲಿನಂತೆ ಸೊಟ್ಟಕ್ಕೆ ಎದ್ದು ನಿಂತಿತ್ತು. ಅದರಿಂದ ಪ್ಲಾಸ್ಟಿಕ್ ಸುಡುವಾಗ ಮೆಲ್ಲನೆ ತೊಟ್ಟಿಕ್ಕುವ ಮೇಣದಂತೆ ಏನೋ ಉದುರುತ್ತಿತ್ತು. ದೂರದಲ್ಲಿ ಒಂದಷ್ಟು ಜನ ತಲೆ ಬೋಳಿಸಿಕೊಂಡವರು ಇತ್ತಲೇ ಭಾವರಹಿತವಾಗಿ ನೋಡುತ್ತಿದ್ದರು.


     ಬೊಂಬು ಹಿಡಿದಾತ ಆ ಕಾಲಿನಂತಿದ್ದದನ್ನು ಜೋರಾಗಿ ಬಾರಿಸಿ, ಕೆಳಕ್ಕೆ ಬೀಳಿಸಿದ. ಏನೊ ವಿಚಿತ್ರ ವಾಸನೆ ಬೇರೆ.


     ಆದರೂ ಅದನ್ನೆಲ್ಲ ಬದಿಗಿರಿಸಿ, ಪ್ರಕ್ಷುಬ್ಧನನ್ನು ಕುರಿತು, "ನನ್ನ ಚಿಕ್ಕವಯಸ್ಸಿನಲ್ಲಿ ಜಯದೇವ ಕವಿ ವಿರಚಿತ ಕನ್ನಡ ಸಿನೆಮ ಹಾಡುಗಳನ್ನು ಕೇಳಿದ್ದೇನೆ. ಟಾಗೂರ್, ವಿವೇಕನಂದ, ಶಾರದಾಮಾತೆ ಇವರೆಲ್ಲ ನಮ್ಮವರೇ ಎಂದುಕೊಂಡಿದ್ದೆವು. ಇಷ್ಟೂ ದೂರದಿಂದ ನಾನಿರುವಲ್ಲಿಗೆ ಬಂದು ಇವರುಗಳು ಕನ್ನಡದ ಸೊಗಡನ್ನು ಇಲ್ಲಿಗೇಕೆ ತರಲಿಲ್ಲ. ಇದೊಂದು ರೀತಿಯ ಆಂತರಿಕ ವಸಾಹತೀಕರಣ" ಎಂದೆ.


(೫೦)


"ಗಂಭೀರ ಚರ್ಚೆಗಿದು ಸಮಯವೇ ಅಲ್ಲ. ಇದು ನಂಬಿಕೆಯ, ವಿಸ್ಮೃತಿಯ ಕಾಲವಿದು," ಎಂದ.


"ಅಂದರೆ ನಂಬಿಕೆಯು ಗಂಭೀರವೇ ಅಲ್ಲವೆಂದೆ?"


"ಹಾಗಲ್ಲ. ಕಲಾಭವನದಲ್ಲಿ ನೀನು ಕಲಿವುದು ಅಷ್ಟರಲ್ಲೇ ಇದೆ. ಆದರೆ ಈ ಜಾಗಕ್ಕೆ ಬಂದಾಗ, ಅಂದರೆ ಕಲಾಭವನಕ್ಕೆ ಸಾವಿರಾರು ಮೈಲು ದೂರದಿಂದ ಬಂದಿರುವಾಗ, ಇಲ್ಲಿ ಆಗಿ ಹೋದ ಆತ್ಮಗಳ ಸಾತತ್ಯತೆ ಸದಾ ಜೊತೆಗಿರಿಸಿಕೊಳ್ಳಲು ಒಂದು ಉಪಾಯವಿದೆ"


"ಏನದು?"


"ನಾವು ನಂಬದಿದ್ದರೂ, ಸತ್ತವರು ನಮ್ಮ ಸುತ್ತಲೂ ಇರುತ್ತಾರೆ ಎಂಬ ನಂಬಿಕೆ ನಮ್ಮನ್ನು ಸದಾ ಎಚ್ಚರದಲ್ಲಿರಿಸುತ್ತದೆ. ನಾವು ಮಾಡುವ ಪಾಪಗಳನ್ನು ಅವರು ನೋಡಿಯೊ ಏನನ್ನೂ ಮಾಡದೆ ನಮ್ಮನ್ನು ಸುಮ್ಮನೆ ನಿರುಕಿಸುತ್ತಿರುತ್ತಾರೆ ಎಂಬ ಅವರುಗಳ ಅಸಹಾಯಕತೆಯ ಕಲ್ಪನೆಯೇ ಸಾಕು, ನಮ್ಮನ್ನು ಗಾಭರಿಗೊಳಿಸಲು"


"ಮತ್ತೆ ಪ್ರಕ್ಷುಬ್ಧನ ಮೋಕ್ಷಪೂರಿತ ಅಯೋಮಯ ಹೇಳಿಕೆ" ಎಂದೆ.


"ನಿಜ ಹೇಳು ಅನಿಲ್. ನಮಗೆ ಅರ್ಥವಾಗದಿದ್ದರೂ, ಅರ್ಥವಿಲ್ಲದಿದ್ದರೂ ಕೇಳುವ-ನೋಡುವ-ಮೊಸುವ ಶ್ರವ್ಯ-ದೃಶ್ಯ-ಸ್ಪರ್ಶವು ಅಗೋಚರ ಅನುಭವಗಳನ್ನು ಹುಟ್ಟಿಹಾಕುತ್ತವೆ. ಅದನ್ನು ಗಮನಿಸಿದರೆ ಮಾತ್ರ ಮೋಕ್ಷದ ಮೊದಲ ಹೆಜ್ಜೆ ಪ್ರಾರಂಭ. ಎಲ್ಲವನ್ನೂ ಗಮನಿಸುವುದಷ್ಟೇ ಮಾನವರಿಗಿರುವ ಒಂದೇ ಅರ್ಹತೆ, ತಮ್ಮನ್ನು ಎಲ್ಲದರಿಂದ ಬಿಡಿಸಿಕೊಳ್ಳಲು"


"ಅದೇನೋ ಆಲೌಕಿಕ ಅನುಭವವೆಂದೆ?"


"ಹೌದು. ಈಗಲೂ ಸಹ ನೀನು ಮಾಡುತ್ತಿರುವ ಪಾಪಕರ್ಮ ಎಂಥಹದ್ದು. ಯಾರದೋ ದುಃಖದ ಶಾಕದ ಬಿಸಿಯಲ್ಲಿ ನಿನ್ನ ಮೈ ಬೆಚ್ಚಗೆ ಮಾಡಿಕೊಳ್ಳುತ್ತಿರುವೆ"


"ಏನು ಮತ್ತೆ ಮರ್ಕ್ಸಿಸಮ್ಮ."


""ಅಲ್ಲ. ಎಡಕ್ಕೆ ತಿರುಗಿ ನೋಡು. ನೀನು ಮೈ ಬೆಚ್ಚಗಾಗಿಸಿಕೊಳ್ಳುತ್ತಿರುವ ಉರಿಯು, ಹೆಣ್ಣೊಬ್ಬಳ ದೇಹವನ್ನು ಸುಡುತ್ತಿರುವ ಚಿತೆ. ನಾಲ್ಕು ದಿನಗಳ ಹಿಂದೆ ಸತ್ತ ಆಕೆ ಸಮೀಪದ ಹಳ್ಳಿಯವಳು. ಇಂದು ಸಂಸ್ಕಾರಗೊಂಡಲ್ಲಿ ಆಕೆಗೆ ಸ್ವರ್ಗ ಪ್ರಾಪ್ತಿಯೆಂದು ನಂಬಿ, ನಾಲ್ಕು ದಿನ ಈ ಜಯದೇವ ಜನ್ಮಸ್ಥಾನದಲ್ಲಿರಿಸಿ ಇಂದು ಸುಡುತ್ತಿದ್ದಾರೆ. ನೀನು ನೋಡಿದರೆ ಅದರ ಭೌತಿಕ ಲಾಭ ಪಡೆಯುತ್ತಿದ್ದೀಯ. ’ಎಲ್ಲವನ್ನೂ ಗಮನಿಸುವುದಿದ್ದಲ್ಲಿ’ ನೀನು ಹೀಗೆ ಮಾಡುತ್ತಿರಲಿಲ್ಲ," ಎಂದ.


ಹೌಹಾರಿ ಪಕ್ಕಕ್ಕೆ ತಿರುಗಿ ನೋಡಿದೆ. ಬಾಗಿದ್ದ ಕಾಲಿನಿಂದ ಸುರಿಯುತ್ತಿದ್ದ ಮೇಣದಂತಹ ತೊಟ್ಟುಗಳು ರಕ್ತದ ಬಿಸಿಯೇರಿದ ರೂಪವೆಂದು ಅರಿವಾದದ್ದು ಆಗಲೇ!//


 

ಲೇಖನ ವರ್ಗ (Category):