ಸಂಪದ ಸಂಮಿಲನ ೨ ( 13.06.10 )

To prevent automated spam submissions leave this field empty.



ಸುಮಾರು ದಿನಗಳಿಂದ ಕಾಯುತ್ತಿದ್ದ, ಸಂಪದದ ಸಂಮಿಲನದ ಆ ಸುದಿನದ ರಸ ಘಳಿಗೆ ಬಂದೇ ಬಿಟ್ಟಿತ್ತು.
 ಬೆಳಿಗ್ಗೆ ಎಲ್ಲರೂ ದೊಮ್ಮಲೂರಿನ ಸಿ ಐ ಎಸ್ ಭವನದಲ್ಲಿ ಒಟ್ಟು ಸೇರಿದೆವು. ನಾವೆಣಿಸಿದ್ದಕ್ಕಿಂತ ಜಾಸ್ತಿಯೇ ಜನರು ಸೇರಿದ್ದು, ಅತಿಥಿಗಳನ್ನೂ ಸೇರಿದಂತೆ ಎಲ್ಲರಿಗೂ ವಿಸ್ಮಯ ಮತ್ತು ಖುಷಿ ಎರಡೂ ಮೇಳೈಸುವಂತೆ ಆಗಿತ್ತು, ಇಲ್ಲಿಯವರೆಗೆ ಬರೇ ನಮ್ಮ ನಮ್ಮ ಲೇಖನಗಳಿಂದಲೇ ಪರಿಚಯೀ ಸ್ನೇಹಿತರಾಗಿದ್ದ ನಾವೆಲ್ಲಾ ಮುಖತಃ ಭೇಟಿಯಾಗುತ್ತಿರುವುದೇ ಎಲ್ಲರಿಗೂ ದೊಡ್ಡ ಸಂತಸದ ವಿಷಯವೇ ಆಗಿತ್ತು .

ಆರಂಬಿಕ ಪರಿಚಯದ ಮಾತುಕಥೆ ಮುಗಿಸಿ, ನಿಜವಾದ ಕಾರ್ಯಕ್ರಮ ಆರಂಭವಾಯ್ತು. ಕವಿ ಪ್ರೇಮಿ, ಚಟುವಟಿಕೆಯ ಆಗರವಾದ ಹರೀಶ್ ಆತ್ರೇಯ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ದಂಗು ಬಡಿಸಿದರು. ಯಾರಿಗೂ ಸ್ವಲ್ಪವೂ ಸಪ್ಪೆ ಎನಿಸದ ಹಾಗೆ ಪ್ರತಿಯೊಬ್ಬರನ್ನೂ ಅವರವರ ಪರಿಚಯ ಅವರವರ ಉತ್ತಮ ಲೇಖನ ಅಥವಾ  ಕವಿತೆಗಳಿಂದಲೇ  ಆರಂಭಿಸಿದ್ದು ಹಾಗೂ ಎಲ್ಲಿಯೂ ಬೇಸರಕ್ಕೆಡಮಾಡದೇ,  ಎಕತಾನತೆ ತಾರದೇ ವೈವಿಧ್ಯಮಯವಾಗಿ ಬರುವಂತೆ ರೂಪಿಸಿದ್ದು ಅವರ ಉದಯೋನ್ಮುಖ ಚಟುವಟಿಕೆಗಳ ಹಾಗೂ ತನ್ನತನವನ್ನು ಎತ್ತಿ ತೋರಿಸುತ್ತಿತ್ತು. ಕೊನೆಯವರೆಗೂ ಯಾರ್ಯಾರು ಈ ಕಾರ್ಯಕ್ರಮಕ್ಕೆ ಬರಲಿದ್ದಾರೆ ಎಂಬುದು ಗೊತ್ತಿಲ್ಲದಿದ್ದರೂ ಎಲ್ಲಾ ಹಾಜರಾದ ಸಂಪದಿಗರ ವಿವರಗಳನ್ನು ತಾವೇ ಸ್ವತಹ ಹೆಕ್ಕಿ ತೆಗೆದು ಅದನ್ನು ಪ್ರಿಂಟ್ ಮಾಡಿಯೂ ತಂದಿದ್ದು ಅವರ ಕಾರ್ಯ ಕುಶಲತೆಗೆ ಸಾಕ್ಷಿಯಾಗಿ, ನಮ್ಮ  ಈ ದಿನದ ಕಾರ್ಯಕ್ಷಮತ್ವತೆಗೆ ಮೂಲ ಕಾರಣೀ ಭೂತರಾಗಿದ್ದ ಹರಿಪ್ರಸಾದ ನಾಡಿಗರ ಅಯ್ಕೆಗೆ ತಲೆದೂಗಲೇ ಬೇಕಾಗಿತ್ತು.
ವಯ್ಯಕ್ತಿಕವಾಗಿ ನಾನು ನಾಡಿಗರನ್ನು ಅವರ ಈ ಸಂಪದದಂತಹಾ ಉತ್ತಮ ಅಭಿರುಚಿಯನ್ನು ಪ್ರತಿ ಕನ್ನಡಿಗರಲ್ಲಿ ಮೂಡಿಸುವ ಉತ್ತಮಕಾರ್ಯವನ್ನು ಅರಂಭಿಸಿದುದಕ್ಕಾಗಿ ಅಭಿನಂದಿಸಲೆಂದೇ ಹೆಚ್ಚು ಮುತುವರ್ಜಿ ವಹಿಸಿ ಇವತ್ತಿನ ಈ ಕಾರ್ಯಕ್ರಮಕ್ಕೆ ಹಾಜರಾಗಿದ್ದೆ, ಏಕೆಂದರೆ ನನ್ನಲ್ಲಿನ ಕವಿತ್ವವನ್ನು ಕನ್ನಡದ ಬಗೆಗಿನ ಗೌರವವನ್ನು ಹೆಚ್ಚಿಸುವಂತೆ ಮಾಡಿ ಅನೇಕಾನೇಕ ಉತ್ತಮ ಸಂಪದಿಗರನ್ನು ಪರಿಚಯಮಾಡಿಸಿ, ಅವರೆಲ್ಲರ ಉತ್ತಮೋತ್ತಮ ಲೇಖನಗಳನ್ನು ಉಣಬಡಿಸುವಂತೆ ಮಾಡಿದ್ದೂ ಅಲ್ಲದೇ ಉತ್ತಮೋತ್ತಮ ಶ್ರೇಷ್ಠ ಗೆಳೆಯರನ್ನೂ ದೊರಕಿಸಿಕೊಟ್ಟ ಈ ಸಂಪದಕ್ಕೆ ನಾನು ಚಿರಋಣಿ.  ಅವರೇ ಸ್ವತಹ ಕರೆಮಾಡಿ ಸ್ವಲ್ಪ ಮಟ್ಟಿಗೆ ಅವರನ್ನು ಮುಖತಃ ಭೇಟಿಯಾಗದ ಬೇಗುದಿಯನ್ನು ಕಡಿಮೆ ಮಾಡಿದ್ದರು.

 

 

ಹಾಗೆ ಹೇಳುವುದಾದರೆ ನಾವು ಬೇರೆಯವರ ಲೇಖನ,ಕವಿತೆ, ಕಥೆಗಳನ್ನು ನಮ್ಮ ನಮ್ಮ ದೃಷ್ಟಿಯಲ್ಲೇ ಓದುವುದಕ್ಕೂ, ಬರೆದವರ ಅಂದಿನ ಅದೇ ಯೋಚನೆಯೊಂದಿಗೆ ಅವರೊಡನೆಯೇ ಬೆರೆತು ಅನುಭವಿಸುವದಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಹೆಸರು ಮಾತ್ರದಿಂದ ತಮ್ಮ ತಮ್ಮ ಕೃತಿಗಳಿಂದ ನಮ್ಮ ಮನ ಸೂರೆಗೊಂಡ ಚೇತೂ, ಆತ್ರೇಯ, ಈ ಮುಖಾ ಮುಖಿಯಿಂದ ಇನ್ನೂ ಆತ್ಮೀಯರಾಗಿ ನಮ್ಮ ಮನೆಯವರೇ ಅನ್ನಿಸಿದರು. ಇನ್ನು ತರುಣ ಕವಿ ತೇಜಸ್ವೀಯವರ "ಗುರಿ", ಮತ್ತಿತರ ಕವನ ವಾಚನದಿಂದ  ನೆರೆದವರೆಲ್ಲರ ಮನಸೂರೆಗೊಂಡರೆ, ಆತ್ಮೀಯ ಚುಟುಕು ಕವಿ ಚೇತನ್ ಕೂಡುವಳ್ಳಿಯವರಿಂದ ಕಾವ್ಯವಾಚನ ಮತ್ತು ಚುಟುಕದಿಂದ ನಮ್ಮೆಲ್ಲರ  ಮನಗೆದ್ದರು. ನಾಗರಾಜರವರಿಂದ  ಸಂಪದ ಪರಿಚಯ ಹಾಗೂ ಮಳೆನೀರಿನ ಕೊಯ್ಲಿನ ಬಗೆಗೆ ವಿಶೇಷ ಜ್ಞಾನವರ್ಧಕ ಮಾತುಗಳನ್ನಾಡಿದರು. ಹೊಳೆನರಸೀಪುರ ಮಂಜುನಾಥರು ತಮ್ಮ ವಿಶೇಷ ಗಂಭೀರ ಕಂಠ ಸಿರಿಯಿಂದ ತಮ್ಮ ವಿಶಿಷ್ಟ ಕಥೆ "ಅಫಘಾತ"ದ ಮಾಯಾಲೋಕಕ್ಕೆ   ಕೊಂಡೊಯ್ದರೆ,ಶ್ರೀಮತಿ ಶ್ಯಾಮಲಾ ಜನಾರ್ಧನನ್ ಅವರು ತಮ್ಮ ಕಥಾವಾಚನ ಹಾಗೂ ತಮ್ಮದೇ ವಿಶೇಷ ಶೈಲಿಯ ವಿಮರ್ಶೆಯನ್ನೂ ನಮಗೆಲ್ಲರಿಗೂ ಉಣಬಡಿಸಿದರು. ಶ್ರೀಮತಿ ರೂಪಾ ರವರು ಸಂಪದದೊಂದಿಗಿನ ತಮ್ಮ ಸಂಭಂದದ ಅನಿಸಿಕೆಯನ್ನೂ ಮತ್ತು ಚಿಕ್ಕಚೊಕ್ಕ ಕಥೆಯನ್ನೂ   ಅವರದೇ ಶೈಲಿಯಲ್ಲಿ ವಾಚಿಸಿ ರಂಜಿಸಿದರೆ, ಸಂಪದಿಗರೆಲ್ಲರ ಮೆಚ್ಚಿನ ಆತ್ಮೀಯ ಆಸುಮನ ಅವರು "ಸಖಿ, ಬೆಳೆಯುವದೆಂತು,ಮತ್ತು ಸಂಗಾತಿ ಯಾವಾಗ ಬೇಕು" ಎಂಬಂತಹ ಅರ್ಥಗರ್ಭಿತ,ಹಾಗೂ ಅಮೂಲ್ಯ ಹಾಗೂ ವೈಶಿಷ್ಟ ಪೂರ್ಣ ಕಾವ್ಯ ವಾಚಿಸಿ ನಮ್ಮೆಲ್ಲರ ಮನ ಗೆದ್ದರು. ಆತ್ಮೀಯ, ಹಿರಿಯ, ಚೇತನ ಕವಿ ನಾಗರಾಜ ಅವರಿಂದ  ಸಂಪದದ ಬೆಳವಣಿಗೆ ಹೇಗೆ ? ಹಾಗೂ ನಮ್ಮೆಲ್ಲರ ಸಾಂಸ್ಕೃತಿಕ ಬೆಳವಣಿಗೆಯ ಬಗೆಗಿನ ಹಿತವಚನ ಮತ್ತೆ ಮತ್ತೆ ಕೇಳುವಂತಿತ್ತು. ಸಭೆ ಹಾಗೂ ಕಾರ್ಯಕ್ರಮದ ಆರಂಭ ಪ್ರಾರ್ಥನೆ ಮತ್ತು ಹಾಡುಗಳನ್ನು ಶ್ರೀಮತಿ ಶಾಂತಿ ಗೋಪೀನಾಥ್ ತಮ್ಮ ಸುಶ್ರಾವ್ಯ ಕಂಠದಿಂದ ಹಾಡಿದ್ದರೆ, ನಮ್ಮೆಲ್ಲರ ಅಚ್ಚುಮೆಚ್ಚಿನ ಕವಿ, ಪ್ರೇಮಿ, ಹಾಗೂ ಪ್ರಶಂಶನೀಯ ಸೂತ್ರಧಾರ ಹರೀಶ್ ರಿಂದ  "ಉತ್ತರ ಕವನ" ವಾಚನ ಕೇಳುವಂತಿತ್ತು.ಮಧ್ಯೆ ಮಧ್ಯೆ ನಡೆದ ಮಾತು ಕಥೆಯೂ ಇವೆಲ್ಲವಕ್ಕೂ ಕಳಶವಿಟ್ಟಂತೆ ಸೊಗಸಾಗಿ ಮೌಲ್ಯವರ್ಧಿಸುವಂತಿತ್ತು. ಅಂಜನ ಕುಮಾರ ಅವರಿಂದ ಮಾತು ಕಥೆ ತಮ್ಮ ಅನುಭವದ ಹಿತವಚನ ಮೆಲುಕು ಹಾಕುವಂತಿತ್ತು.

 

 

 

ವಾರವಿಡೀ ಏಕತಾನತೆಯಲ್ಲಿ ಕೆಲಸ ಆಫೀಸು ಅಂತ  ಇದ್ದವರಿಗೆ, ಅದೆಲ್ಲವನ್ನೂ ಒಂದು ದಿನದ ಮಟ್ಟಿಗೆ ಮರೆಯಲು, ಮತ್ತು ತಮ್ಮ ತಮ್ಮ ಒಳಗಿನ ಸ್ವಂತಿಕೆಯನ್ನು ತಮ್ಮಂತವರೆದುರೇ ತೋರಿಸಲು ಅನುವು ಮಾಡಿಕೊಟ್ಟಂತಹ ಈ ಸಂಪದ ಸಂಮಿಲನ ಕಾರ್ಯಕ್ರಮ ಒಂದು ವರದಾನವೇ ಸರಿ. ತಾವು ಸ್ವತಹ  ಬಾರದಿದ್ದರೂ ನಮಗೆಲ್ಲರಿಗೂ ಮಧ್ಯೆ ಮಧ್ಯೆ ಸ್ಪೂರ್ತಿ ಸೆಲೆಯಂತೆ ಜಲ ಪಾನದ, ಕಾಫಿ ಬಿಸ್ಕಿಟ್ ನ ವ್ಯವಸ್ಥೆ ಮಾಡಿಸಿದ್ದು,  ನಾಡಿಗರ ಗೈರು ಹಾಜರಿಯನ್ನು ಮತ್ತೆ ಮತ್ತೆ ನೆನಪಿಸುವಂತಿತ್ತು. ಅಂತೂ ಈ ಸಂಪದ ಸಂಮಿಲನ ವಾಸ್ತವದಲ್ಲಿ ನಮ್ಮೆಲ್ಲರ ಕಣ್ಮನ ಸೂರೆಗೊಂಡು ನಿಜದ ಅರ್ಥ ಮೂಡಿಸಿತು. ಸಂಪದದ ಸಂಮಿಲನ ಸಾವಿರ ಸಾವಿರ ಸಂಖ್ಯೆಯಲ್ಲಿ ಸಂಪದಿಗರನ್ನು ಸೇರಿಸಿ ಮಾಡುವಂತಹದ್ದಾಗಲಿ ಎಂದು ಹಾರೈಸುತ್ತ, ಮರೆಯಲಾಗದಂತಹ ಅನುಭವವನ್ನು ಕೊಟ್ಟ ಈ ಸಂಪದಕ್ಕೆ ಅನಂತಾನಂತ ಧನ್ಯವಾದಗಳನ್ನು ಅರ್ಪಿಸುತ್ತೇನೆ.

 

 

ಸಂಪದದ ಸಂಮಿಲನ    ಸ್ಥಳ : ಕೃಪೆ    CIS  ಭವನ ದೊಮ್ಮಲೂರು

ಸಂಪದ ಸಂಮಿಲನ     ಆಯ್ದ   ಚಿತ್ರಗಳು 

( http://sampada.net/image/26035 )


ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಗೋಪಿನಾಥರಾಯರೇ, ನಿಮ್ಮ ಅಭಿಪ್ರಾಯಕ್ಕೆ ನನ್ನ ಸಹಮತವಿದೆ. ಸ೦ಪದ ನಿಜಕ್ಕೂ ಮಾಡುತ್ತಿರುವ ಮಾಯೆಯನ್ನು ಬಣ್ಣಿಸಲು ಪದಗಳು ಸಿಗುತ್ತಿಲ್ಲ.

ಹೌದು, ಎಲ್ಲರೂ ಬ೦ದಿದ್ದರೆ ಅದಿನ್ನೂ ವಿಶೇಷವಾಗಿರುತ್ತಿತ್ತು . ಮು೦ದಿನ ಸ೦ಮಿಲನಗಳಿಗೆ ಹೆಚ್ಚಿನ ಸ೦ಖ್ಯೆಯಲ್ಲಿ ಸ೦ಪದಿಗರೆಲ್ಲಾ ಸೇರಲು ಇದು ಮುನ್ನುಡಿಯಾಗಲಿ.

ಗೋಪಿನಾಥ್ ರವರೆ, ನಮ್ಮ ಕಾರ್ಯಕ್ರಮ ತುಂಬಾ ಚೆನ್ನಾಗಿ ನಡೆಯಿತು. ನಿಮ್ಮೆಲ್ಲರನ್ನು ನೋಡಿ ನನಗೆ ಬಹಳ ಸಂತೋಷವಾಯಿತು. ನಮ್ಮ ಉಳಿದ ಸಂಪದಿಗರು ಬಂದಿದ್ದರೆ ಇನ್ನು ಹೆಚ್ಚಿನ ಕಳೆ ಕಟ್ಟಿರುತಿತ್ತು. ಈ ಮೂಲಕ ಮತ್ತೊಮ್ಮೆ ಎಲ್ಲರಿಗು ಧನ್ಯವಾದಗಳು. ನಮ್ಮ ಕಾರ್ಯಕ್ರಮ ಆಯೋಜಕ ಹಾಗು ನಿರೂಪಕ ಹರೀಶ್ ಗೆ , ವಿಶೇಷ ಧನ್ಯವಾದ.

ಹೌದು ನಿಜ ತೇಜಸ್ವೀ ಅವರೇ ಆದರೇನು ಇನ್ನೊಮ್ಮೆ ಎಲ್ಲರನ್ನೂ ಸೇರಿಸಿ ಇನ್ನೂ ಚೆನ್ನಾಗಿ ಆಯೋಜಿಸಿದರಾಯ್ತು ಅಲ್ಲವೇ?

ಗೋಪಿನಾಥರೆ, ಚಿತ್ರಗಳನ್ನು ನೋಡಿದ ಮೇಲೆ ನಾನು ಬರಬೇಕಿತ್ತು ಅನ್ನಿಸುತ್ತಿದೆ,ಮುಂದಿನ ಸಂ’ಮಿಲನದ ಹೊತ್ತಿಗೆ ಬೆಂಗಳೂರಿನಲ್ಲಿ ಇದ್ದಲ್ಲಿ ಎಲ್ಲರನ್ನೂ ಭೇಟಿಯಾಗುವ ಆಕಾಂಕ್ಷೆ ಹೊತ್ತಿರುವೆ. ಚಿತ್ರಗಳು ತುಂಬಾ ಚೆನ್ನಾಗಿದೆ . -ಚೈತನ್ಯ

ಹೌದು ಚೈತನ್ಯರೇ ಎಲ್ಲರೂ ಬಂದಿದ್ದರೆ ...... ಅಂತಲೇ ಪಾಪ ಹರೀಶ್ ತಾರೀಖು ಮುಂದೆ ದೂಡಿದ್ದರು ಇರಲಿ ಇನ್ನೊಮ್ಮೆ ಆಯೋಜಿಸುವಾಗ ನೋಡಿಕೊಳ್ಳೋಣ,ಅಲ್ಲವೇ

>>ನಾಡಿಗರ ಗೈರು ಹಾಜರಿಯನ್ನು ಮತ್ತೆ ಮತ್ತೆ ನೆನಪಿಸುವಂತಿತ್ತು.<< ನನ್ನ ಗೈರು ನಿಮಗೆಲ್ಲಾ ಇಷ್ಟೊಂದು ಬೇಸರ ಮೂಡಿಸುತ್ತದೆ ಅಂದುಕೊಂಡಿರಲಿಲ್ಲ. ಗೋಪಿನಾಥರೆ ಮುಂದಿನ ಬಾರಿ ನಡೆಯುವ ಸಂಪದ ಸಂಮಿಲನಕ್ಕೆ ನನ್ನ ಏನೇ ಕೆಲಸವಿದ್ದರೂ ಬದಿಗೊತ್ತಿ, ನಿಮ್ಮೊಂದಿಗೆ ಸೇರುತ್ತೇನೆ ಎಂದು ಈ ಮೂಲಕ ಪ್ರತಿಜ್ಞೆ ಮಾಡುತ್ತಿದ್ದೇನೆ. ಇದು ಸತ್ಯ,ಸತ್ಯ,ಸತ್ಯ. ಅಂದ ಹಾಗೆ - ಹರಿಪ್ರಸಾದ್ ನಾಡಿಗರೋ ಅಥವಾ ಸುರೇಶ್ ನಾಡಿಗರೋ ಎನ್ನುವುದು ಸಂಶಯ ಗೋಪಿನಾಥ್, ಕಾರ್ಯಕ್ರಮದ ವಿವರಣೆ ಚೆನ್ನಾಗಿ ನೀಡಿದ್ದೀರಾ. ಧನ್ಯವಾದಗಳು

<<ಅಂದ ಹಾಗೆ - ಹರಿಪ್ರಸಾದ್ ನಾಡಿಗರೋ ಅಥವಾ ಸುರೇಶ್ ನಾಡಿಗರೋ ಎನ್ನುವುದು ಸಂಶಯ>>ಇಬ್ಬರು ನಾಡಿಗರೂ ನಮ್ಮವರೇ, ಸ೦ಶಯ ಬೇಡ, ಆದರೆ ವಿಪರ್ಯಾಸವೆ೦ದರೆ ಇಬ್ಬರೂ ಗೈರು ಹಾಜರಾಗಿದ್ದು. :)

ನಮ್ಮ ಮಂಜು ಹೇಳಿದಂತೆ ಇಬ್ಬರು ನಾಡಿಗರೂ ಹಾಜರಾಗಿರಲಿಲ್ಲವಲ್ಲ ನೋಡೋಣ ನಿಮ್ಮ ಪ್ರತಿಜ್ಞೆ ಎಷ್ಟರಮಟ್ಟಿಗೆ ನೆರವೇರುತ್ತೆ ಅಂತ

ಚೇತೂ ಎಲ್ಲರೂ ನಮ್ಮವರೇ ಅಂದುಕೊಂಡಾಗಿನ ಖುಶಿಯೇ ಈಗ ಎಲ್ಲರಲ್ಲೂ ಉಕ್ಕಿ ಬರುತ್ತಾ ಇದೆ ಇದಕ್ಕೆ ಎಲ್ಲರೂ ಕಾರಣರೇ ಆಗಾಗ ನಡೆಯುವ ಇಂತಹ ಸಂ ಮಿಲನಗಳೇ ಇದಕ್ಕೆ ಪುಟ ಕೊಟ್ಟು ಹೊಳೆಸುತ್ತವೆ ಇದೇ ಅಲ್ಲವೇ ಹೊಸ ಚಿಗುರು ಹಳೆ ಬೇರು ನನಗೆ ತುಂಬಾ ಖುಷಿಯಾಗಿದ್ದು ಶಾಸ್ತ್ರಿಗಳ ಪ್ರತಿಕ್ರಿಯೆಗಾಗಿ

ನಿನ್ನೆ ಮಂಜುನಾಥರು ರಿಲೀಸ್ ಮಾಡಿದ ವರದಿಗೆ ನಾನು ಈ ರೀತಿ ಪ್ರತಿಕ್ರಿಯಿಸಿದ್ದೆ: <ಬೆಳಗ್ಗೆ ’ಪುರಂದರದಾಸರ ಫುಟ್ಬಾಲ್ ಪದ’ ಗೀಚಿ, ’ಸಂಪದ’ಕ್ಕೆ ಸೇರಿಸಿ, ಪೂರ್ವಯೋಜಿತ ಕಾರ್ಯಕ್ರಮವೊಂದಕ್ಕೆ ಹೋಗಿ, ಇದೀಗ ವಾಪಸಾದವನೇ ಈ ಸಚಿತ್ರಲೇಖ ನೋಡಿದೆ. ಬಹಳ ಸಂತೋಷವಾಯಿತು. ನಾನೂ ’ಸಂಮಿಲನ’ದಲ್ಲಿ ಹಾಜರಿರಬೇಕಾಗಿತ್ತೆನ್ನಿಸಿತು. ಇರಲಿ. ಮುಂದೊಮ್ಮೆ ಹೆಚ್ಚಿನ ಸಂಖ್ಯೆಯಲ್ಲಿ ಭೆಟ್ಟಿಯಾಗೋಣ. ಸ್ವೀಟ್ ಮಾತುಗಳ ಜೊತೆಜೊತೆಗೇ, ’ಥೇಟ್ ಮೆಣಸಿನಕಾಯಿ’ ಆಗಿ ನಾಡಿನ ಇಂದಿನ ಜ್ವಲಂತ ವಿಷಯ/ಸಮಸ್ಯೆಗಳ ಬಗ್ಗೆ ಚರ್ಚಿಸೋಣ ಕೂಡ.> ಇದಕ್ಕೆ ಮಂಜು ಈ ಕೆಳಗಿನಂತೆ ಉತ್ತರಿಸಿದ್ದಾರೆ: <ಶಾಸ್ತ್ರಿಗಳೆ, ನಿಮ್ಮ೦ಥ ಹಿರಿಯರು ಈ ಕಾರ್ಯಕ್ರಮಕ್ಕೆ ಬರಬೇಕಿತ್ತು. ನಾವೆಲ್ಲರೂ ನಿಮ್ಮ೦ಥವರನ್ನು ನಿರೀಕ್ಷಿಸಿದ್ದೆವು. ಸ೦ಪದ ಸ೦ಮಿಲನಕ್ಕೆ ನೀವು ಬ೦ದಿದ್ದರೆ ಬೇರೆಯದೇ ರೀತಿಯ ಕಳೆ ಕಟ್ಟುತ್ತಿತ್ತು. ಇರಲಿ, ಮು೦ದಿನ ಸಲ ನಿಮ್ಮನ್ನುನಿರೀಕ್ಷಿಸುತ್ತೇವೆ.> ಇದಕ್ಕೆ ನನ್ನ ಪ್ರತ್ಯುತ್ತರ ಹೀಗಿದೆ: "ಮುಂದಿನ ಸಲ ನಾನು ಬರುತ್ತೇನೆ. ’ಕಳೆ’ಯುತ್ತೇನೆ, ಕೂಡುತ್ತೇನೆ, ಗುಣಿಸುತ್ತೇನೆ, ಭಾಗಿಸುತ್ತೇನೆ." (ಏಕತಾನವನ್ನು ಕಳೆಯುತ್ತೇನೆ, ಸಹೃದಯರ ಮನಸ್ಸುಗಳನ್ನು ಕೂಡುತ್ತೇನೆ, ಸಂತಸವನ್ನು ಗುಣಿಸುತ್ತೇನೆ, ಹೊಣೆಗಾರಿಕೆಗಳನ್ನು ಭಾಗಿಸುತ್ತೇನೆ.)

ನನಗೆ ತುಂಬಾ ಖುಷಿಯಾಗಿದ್ದು ಶಾಸ್ತ್ರಿಗಳ ಪ್ರತಿಕ್ರಿಯೆಗಾಗಿ ಶಾಸ್ತ್ರಿಗಳೆ ಕರಗಿದೆ ನಿಮ್ಮ ಪ್ರೋತ್ಸಾಹದ ನುಡಿಗಳಿಗೆ ಆಸುಮನದ ಶಬ್ದಗಳಲ್ಲಿ ಎಂದರೆ ನೀವು ಬಂದಿದ್ದರೆ "ಸೋನೆ ಪೆ ಸುಹಾಗಾ" ಅನ್ನಿಸುತ್ತಿತ್ತು. ಪ್ರತಿಕ್ರಿಯೆಗಳಿಗೆ ಅಭಾರಿ

ಗೋಪೀನಾಥ್, ಮಂಜುನಾಥ್ ಮತ್ತು ನೀವು ಒಂದು ತರಹದ "ಬ್ರೇಕಿಂಗ್ ನ್ಯೂಸ್" ಕೊಟ್ಟು ಸಂಪದದಲ್ಲಿ ಸಂಚಲನಕ್ಕೆ ಕಾರಣರಾಗಿದ್ದೀರಿ. ಚಿತ್ರಗಳು ಮತ್ತು ಚಿತ್ರಗಳಿಗೊಪ್ಪುವ ನುಡಿಗಳು, ಕಂಡೋದಿದವರ ಹೊಟ್ಟೆ ಉರಿಸುವಂತೆ ಮಾಡುತ್ತಿವೆ. ಧನ್ಯವಾದಗಳು - ಆಸು ಹೆಗ್ಡೆ

ಹೌದು ಹೆಗ್ಡೆಯವರೆ ನನಗೂ ನಿಮ್ಮೊಡನೆ ಕಳೆದ ಘಳಿಗೆಯ ನೆನಪು ಸದಾ ಆಗುತ್ತಲಿರುತ್ತದೆ ಸಂಪದಕ್ಕೆ ಸದಾ ಋಣಿ ನಾನು ಇದಕ್ಕಾಗಿ

ನಾವಡರೇ ಬೇಸರಪಡದಿರಿ ಎಲ್ಲರೂ ಆಶಿಸಿದರೆ ನಿಮ್ಮಲ್ಲಿ ಸಂಮಿಲನವಾಗಲು ಎಷ್ಟು ಹೊತ್ತು? ಅಲ್ಲಿಯವರೆಗೆ ದಯವಿಟ್ಟು ಕಾಯಿರಿ

ನಾವಡರು ಆಹ್ವಾನಿಸಿದ್ದಾರೆ ಹೊರನಾಡಿಗೆ. ಹೊರನಾಡು, ಒಳನಾಡು, ಕಾಡು, ಕಾಂಕ್ರೀಟ್ ನಾಡು.. ಅಲ್ಲಲ್ಲಿ ಆಗಾಗ ಭೆಟ್ಟಿಯಾಗುತ್ತಿರೋಣ. ತುಟ್ಟಿಯಾಗಿರುವ ಸಮಯವನ್ನು ಹೊಂದಿಸಿಕೊಳ್ಳಲು ನಾನೂ ಪ್ರಯತ್ನಿಸುವೆ. ಆತ್ರೇಯ, ಬೆಳ್ಳಾಲ ಮೊದಲ್ಗೊಂಡು ಎಲ್ಲ ಸಂಪದಿಗ ಮಿತ್ರರೂ ಮೆಚ್ಚುಗೆಗೆ ಪಾತ್ರರು.

ಗೋಪಿನಾಥ್ ಅವರೇ.... ನಿಮ್ಮನ್ನೂ ನಿಮ್ಮ ಪತ್ನಿಯವರನ್ನೂ ಭೇಟಿಯಾಗಿದ್ದು ನನಗೆ ತುಂಬಾ ಸಂತೋಷವಾಯಿತು. ನಿಜಕ್ಕೂ ಒಟ್ಟಿಗೆ ಸೇರಿ ವಿಚಾರ ವಿನಿಮಯ ಮಾಡಿಕೊಳ್ಳುವುದು ಎಷ್ಟು ಚಂದ ಎಂಬುದು ನನ್ನ ಅನುಭವಕ್ಕೆ ಬಂತು. ಸಂಪದದಲ್ಲಿ ಬರಹ, ಪ್ರತಿಕ್ರಿಯೆ, ಉತ್ತರ ಪ್ರತಿಕ್ರಿಯೆಗಳಲ್ಲೇ ಪರಿಚಿತರಾಗಿದ್ದ ನಾವೆಲ್ಲರೂ ಅಲ್ಲಿ ಸೇರಿದ್ದು ನಿಜಕ್ಕೂ ಅವಿಸ್ಮರಣೀಯ... ಮುಂದಿನ ಸಂಮಿಲನದಲ್ಲಾದರೂ ಎಲ್ಲರೂ ಭಾಗವಹಿಸಲಿ ಎಂದು ಆಶಿಸೋಣ. ಅಂದಹಾಗೆ ಒಂದು ವಿಷಯ ಇಲ್ಲಿ ಹೇಳಲೇಬೇಕು. ನಾನು ಓದಿದ ಕಥೆಯ ಲೇಖಕಿ ನಾನಲ್ಲ. ನಾನು ಇದುವರೆಗೂ ಕಥೆ ಬರೆದಿಲ್ಲ.... ಲೇಖಕರೂ ಸಂಪದಿಗರೇ.... ಅವರ ಗೈರು ಹಾಜರಿಯಲ್ಲಿ, ಅನುಮತಿ ಪಡೆದು ನಾನು ಓದಿದೆ ಅಷ್ಟೆ.... ಕಥೆಗೆ ಸಂದ ಎಲ್ಲಾ ಮೆಚ್ಚುಗೆಯೂ ಲೇಖಕರಿಗೇ ಸಲ್ಲಬೇಕು..... ಅವರ ಪರಿಚಯ ನನ್ನ ಬರಹದಲ್ಲಿ ಮಾಡಿ ಕೊಡುತ್ತೇನೆ... ನೋಡಿ... :-) ಶ್ಯಾಮಲ

ಶಾಮಲಾ ಅವರೇ ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ನಿಮ್ಮ ಅನಿಸಿಕೆಗಳನ್ನು ಎದುರುನೋಡುತ್ತಿರುವೆವು