ಅನನ್ಯ ಟಾಗೂರರಿಗೆ ಸೀಮಿತ ಚೌಕಟ್ಟುಃ ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆಃ ಭಾಗ ೧೫

To prevent automated spam submissions leave this field empty.


(೪೭)


     ಕಾಗದಕ್ಕೂ ಕಲಾಭವನಕ್ಕೂ ಅಳಿಸಲಾಗದ, ಹರಿಯಲಾಗದ ಸಂಬಂಧ. ಟಾಗೂರ್ ಸ್ವತಃ ಚಿತ್ರರಚನೆಗೆ ತೊಡಗಿದ್ದು, ಅವರ ಸಾಹಿತ್ಯಕ್ಕೆ ನೋಬೆಲ್ ಪ್ರಶಸ್ತಿ ಬಂದ ನಂತರ. ಆಗ ಅವರಿಗೆ ಅರವತ್ತೇಳು ವರ್ಷ ವಯಸ್ಸು. ವ್ಯಾನ್ ಗೋ ಇಪ್ಪತ್ತೇಳನೇ ವಯಸ್ಸಿಗೆ ಚಿತ್ರರಚನೆ ಪ್ರಾರಂಭಿಸಿ, ಮುವತ್ತೇಳನೇ ವಯಸ್ಸಿಗೆ ತನ್ನ ತಲೆಗೆ ತಾನೇ ಬಂದೂಕಿನಿಂದ ಶೂಟ ಮಾಡಿಕೊಂಡ--ತಡವಾಗಿ ಚಿತ್ರಕಲೆ ಪ್ರಾರಂಭಿಸಿದೆನೆಂಬ ಕಾರಣಕ್ಕಾಗಿಯಲ್ಲ. ಇಪ್ಪತ್ತೆಂಟನೇ ವಯಸ್ಸಿಗೇ ತೀರಿಕೊಂಡ ಆಧುನಿಕ ಭಾರತದ ಮೊದಲ ಮಹಿಳಾ ಕಲಾವಿದ ಅಥವ ಮೊದಲ ಕಲಾವಿದೆ ಅಮೃತಾ ಶೆರ‍್ಗಿಲ್, ಟಾಗೂರರ ಸಮಕಾಲೀನೆ. ಇಬ್ಬರೂ ೧೯೪೦ರ ದಶಕದಲ್ಲಿ ಕೊನೆಯಾದವರು. ಚಾರುಹಾಸನ್ ಅಭಿನಯಕ್ಕೆ ಬಂದದ್ದು, ಎಂ.ಕೆ.ಇಂದಿರ ಬರವಣಿಗೆ ಪ್ರಾರಂಭಿಸಿದ್ದು ಐವತ್ತು ವಯಸ್ಸು ಮೀರಿದ ನಂತರವೇ. ಅಂದರೆ ವಯಸ್ಸಾಗುತ್ತ ಕಲಾವಿದರು ಪ್ರೌಢರಾಗುತ್ತಾರೆ ಎಂಬುದು ಸ್ವಲ್ಪ ತೊಂದರೆದಾಯಕ ನಿಲುವು--ಕರ್ನಾಟಕ ಸರ್ಕಾರದ ಸಾಂಸ್ಕೃತಿಕ ನೀತಿಯಂತೆ. ಒಂದು ಲಕ್ಷ ರೂಪಯಿ ಮೌಲ್ಯದ ’ವರ್ಣಶಿಲ್ಪಿ ಕೆ.ವೆಂಕಟಪ್ಪ ಪ್ರಶಸ್ತಿ’ಯನ್ನು ಯಾವ ಕಲಾವಿದನೂ/ಳೂ, ಎಂದಿಗೂ, ತಮ್ಮ ಐವತ್ತೈದನೇ ಹುಟ್ಟುಹಬ್ಬ ಆಚರಿಸಿಕೊಳ್ಳದೆ ಪಡೆದುಕೊಳ್ಳಲು ಸಾಧ್ಯವೇ ಇಲ್ಲ! ಈ ನಿಟ್ಟಿನಿಂದ ಕರ್ನಾಟಕದಲ್ಲಿ ಹುಟ್ಟಿದ್ದಿದ್ದರೆ ವ್ಯಾನ್ ಗೋ, ಅಮೃತಾ ಶೆರ‍್ಗಿಲ್ ಎಂದಿಗೂ ವೆಂಕಟಪ್ಪ ಪ್ರಶಸ್ತಿಯನ್ನು ಪಡೆಯುತ್ತಿರಲಿಲ್ಲ, ಮತ್ತು ಟಾಗೋರ್ ಚಿತ್ರರಚನೆ ಪ್ರಾರಂಭಿಸುವ ಮುನ್ನವೇ, ಈ ಪ್ರಶಸ್ತಿಯ ಹುಟ್ಟಿಗೆ ಮುನ್ನವೇ, ಈ ಪ್ರಶಸ್ತಿಗೆ ಭಾಜನರಾಗಿಬಿಟ್ಟಿರುತ್ತಿದ್ದರೋ ಏನೋ! ವಯಸ್ಸಾಗುವುದೂ ಒಂದು ಕಲಾತ್ಮಕ ಸಾಧನೆ ಎಂದು ನಿರೂಪಿಸುತ್ತದೆ ಕೆ.ವಿ.ಪ್ರಶಸ್ತಿ!!


     ಟಾಗೂರ್ ಚಿತ್ರರಚನೆಗೆ ತೊಡಗಿಕೊಂಡದ್ದು ಕುತೂಹಲಕರಃ ತನ್ನ ಕವನಗಳಲ್ಲಿ ತಪ್ಪಾದುದನ್ನು ತಿದ್ದಿ, ತಿದ್ದಿದ ಕಾರಣದಿಂದಲೇ ಕವನ ಕೈತಪ್ಪಿಹೋಗಿ, ಆ ಗೀಚಿದ ಡೂಡಲ್‍ಗಳನ್ನೇ ಚಿತ್ರವನ್ನಾಗಿಸಿ, ಅದನ್ನು ತನ್ನ ಕಲಾವಿದ ಶಿಷ್ಯರೆದಿರು ಪ್ರದರ್ಶಿಸಲು ಹಿಂಜರಿದು, ಮೊದಲಿಗೆ ಜರ್ಮನಿಯಲ್ಲಿ ಆ ನಂತರ ಮುಂಬಯಿಯಲ್ಲಿ ತನ್ನ ಕಲಾಕೃತಿಗಳ ಮೊದಲ ಪ್ರದರ್ಶನವನ್ನು ಮಾಡಿ, ಆ ನಂತರವಷ್ಟೇ ತನ್ನ ಶಿಷ್ಯರೆದಿರು ಬೆಂಗಾಲದ ಕೊಲ್ಕತ್ತದ ತನ್ನ ವಂಶದ ಮನೆಯಾದ ’ಜೊರಾಸಂಕೊ’ದಲ್ಲಿ ಪ್ರದರ್ಶಿಸಿದ ಟಾಗೂರ್ ಎಲ್ಲೋ ಒಂದೆಡೆ ತಮ್ಮ ಕಲೆಯ ಮೂಲಕ ಸಾವು-ಜನನದ ನಡುವೆ ವ್ಯತ್ಯಾಸವಿಲ್ಲವೆಂದು ಸಾಧಿಸಿದವರು.     ಅವರ ಕಾವ್ಯದ ಸಾವು, ಚಿತ್ರಕಲೆಯಾಗಿ ಮರುಹುಟ್ಟು ಪಡೆಯಿತು. ಅದೇ ಕಾಲಕ್ಕೆ (೧೯೨೦ರ ದಶಕದ ಆಸುಪಾಸು) ಕೊಲ್ಕತ್ತದಲ್ಲಿ ಅಭನೀಂದ್ರನಾಥ್ ಟಾಗೂರರ ಬಳಿ ಚಿತ್ರಕಲೆ ಕಲಿತ ಕರ್ನಾಟಕದ ಕಲಾವಿದ ಕೆ.ವೆಂಕಟಪ್ಪ ವಾಪಸ್ ತಮ್ಮ ಆಶ್ರಯದಾತರಾದ ಮೈಸೂರು ಮಹಾರಾಜರ ಬಳಿ ಬಂದಾಗ ಚಿತ್ರಕಲೆಯನ್ನು ತೊರೆದು ’ವೀಣೆಯ ಹುಚ್ಚಿಗೆ’ ಬಿದ್ದರು. ಇದಕ್ಕೆ ಕಾರಣ ಅರಮನೆಯಲ್ಲಿ ಚಿತ್ರಕಲೆಗಿಂತಲೂ ಸಂಗೀತಕ್ಕೇ ಹೆಚ್ಚಿದ್ದ ಪ್ರಾಶಸ್ತ್ಯ! ಕೆ.ವಿಯವರ ಗುರುಗಳಾದ ಅಭನೀಂದ್ರನಾಥ್ ಟಾಗೂರರು ತಮ್ಮ ಶಿಷ್ಯ ದೃಶ್ಯಕಲೆಯಿಂದ ವಿಮುಖನಾಗಿ ಶ್ರವ್ಯ ಮಾಧ್ಯಮಕ್ಕೆ ಹೊರಳಿದ್ದನ್ನು ಕಂಡು, ಅದಕ್ಕೆ ಆಕ್ಷೇಪ ವ್ಯಕ್ತಪಾಡಿಸಿ, ಆತನಿಗೊಂದು ಪತ್ರ ಬರೆದರು. ಅದಕ್ಕೆ ಕೆ.ವಿ ಉತ್ತರಿಸಿದ್ದು ಅಕ್ಷರದ ರೂಪದ ಪತ್ರದ ಮುಖೇನವಲ್ಲ. ಬದಲಿಗೆ ಗುರುವಿಗೆ ಉತ್ತರವನ್ನು "ವೀಣೆಯ ಹುಚ್ಚು" (೧೯೨೨) ಎಂಬ ಚಿತ್ರದ ಮೂಲಕ! ಆಜನ್ಮ ಬ್ರಹ್ಮಚಾರಿಯಾಗಿಯೇ ಉಳಿದುಬಿಟ್ಟ ಕೆ.ವಿಯವರ ಈ ಚಿತ್ರದಲ್ಲಿ ವೀಣೆಯೆಂಬ ಹೆಣ್ಣಿನ ಮುಂದೆ ಮಂಡಿಯೂರಿ ಕೂಳಿತಿದ್ದಾರೆ ಕೆ.ವಿ. ಚಿತ್ರದೇವತೆಯನ್ನು ಕಂಬಕ್ಕೆ ಕಟ್ಟಿಹಾಕಲಾಗಿದೆ. ಮತ್ತು ಗುರು ಅಭನೀಂದ್ರನಾಥರ ಶಿಲ್ಪವನ್ನು ಎತ್ತರದ ಸ್ಥಳದಲ್ಲಿರಿಸಲಾಗಿದೆ.


ಅಕ್ಷರದಿಂದ ಚಿತ್ರಕ್ಕೆ ವಲಸೆ ಹೋದ ಟಾಗೂರರ ಕಲಾಶಾಲೆಯ ಶಿಷ್ಯವೃತ್ತಿ ಕೈಗೊಂಡಿದ್ದ ಕೆವಿ ಅದೇ ಚಿತ್ರದಿಂದ ಸಂಗೀತಕ್ಕೆ ವಲಸೆ ಹೊರಟದ್ದಕ್ಕೆ ಅಕ್ಷರ ರೂಪದ ಆಕ್ಷೇಪ ವ್ಯಕ್ತಪಡಿಸಿದ ಗುರುವಿಗೆ ಉತ್ತರಿಸಿದ್ದು ಚಿತ್ರದ ಮೂಲಕ. ಇಂತಹ ಅಂತರಶಿಸ್ತೀಯ ವೈಪರೀತ್ಯಗಳ ಪ್ರತಿಭೆಯ ಮೊತ್ತವೇ ನನ್ನನ್ನು ಕಲಾಭವನದತ್ತ ಸೆಳೆಯಲು ಕಾರಣವಾಗಿರಲಾರದು. ಏಕೆಂದರೆ ನಾನಲ್ಲಿ ಹೋದ ನಂತರವೇ ಇವೆಲ್ಲ ತಿಳಿದುಬಂದದ್ದು!


     ಹಣ್ಣನ್ನು ಕಟ್ಟಿಕೊಡಲು ಬಳಸುವ ರೈಸ್ ಪೇಪರನ್ನು (ನೇಫಾಳಿ ಕಾಗದ) ಕಲಾಭವನದಲ್ಲಿ ಕಲೆಗೆ ಬಳಸತೊಡಗಿದ ಕೂಡಲೆ, ರೈಸ್ ಪೇಪರಿನ ಬೆಲೆ ನೂರ್ಮುಡಿಗೊಂಡಿತು! ಒಮ್ಮೆ ಕಲಾಭವನದ ಆಡಳಿತಾಂಗವಾದ ’ನಂದನ್ ಸದನ’ದಲ್ಲಿ ಅಸಲಿ ಟಾಗೂರರ, ಅಲ್ಲಲ್ಲ ಟಾಗೂರರ ಅಸಲಿ ಕಾಗದದ ಮೇಲೆ ರಚಿಸಲಾದ ಕಲಾಕೃತಿಯೊಂದನ್ನು ಮುಟ್ಟಿನೋಡುವ ಅವಕಾಶ ದೊರಕಿತ್ತು. ಈಗ ಅವಕಾಶವೆನ್ನಿಸಿದರೂ ಆಗ ಅದು ಸೌಭಾಗ್ಯವೇ ಆಗಿತ್ತು. ’ಮೂರು’ ಮುಖಗಳಿರುವ ಅಗಲದ (ಕಂಪ್ಯೂಟರ್ ಭಾಷೆಯಲ್ಲಿ ಇದನ್ನು ಲ್ಯಾಂಡ್‍ಸ್ಕೇಪ್ ಫಾರ್ಮ್ಯಾಟ್ ಎನ್ನುತ್ತಾರಲ್ಲ ಅಂತಹದ್ದು, ಮತ್ತು ಪೋರ್ಟೇಟ್ ಆಕಾರವಲ್ಲದ್ದು!) ಕಾಗದಚಿತ್ರ ನೋಡಲು ಸಿಕ್ಕಿತು. ಕಾಗದದ ಸುತ್ತಲೂ ಮತ್ತೊಂದು ಒರಟು ಕಾಗದದ/ರಟ್ಟಿನ ಚೌಕಟ್ಟು. ರಟ್ಟಿನ ಒಂದು ಭಾಗವು ಸ್ವಲ್ಪ ಅಂಟುಬಿಟ್ಟಿಕೊಂಡಂತಿತ್ತು.     ಸ್ವಲ್ಪ ರಟ್ಟನ್ನು ಕಾಗದದಿಂದ ಬಿಡಿಸಿ ನೋಡಿದೆ. ಅಗೋ, ರಟ್ಟಿನ ಕೆಳಗೆ, ಕಾಗದದ ಮೇಲೆ, ಆ ಕಡೆಯೊಂದು ಈ ಕಡೆಯೊಂದರಂತೆ ಎರಡು ಹೆಚ್ಚಿನ ಭಾವಚಿತ್ರಗಳಿದ್ದವು! ಅಂದರೆ, ಟಾಗೂರರ ಆ ಕಾಗದದ ಚಿತ್ರದಲ್ಲಿ ಎಲ್ಲರೂ ಭಾವಿಸಿದಂತೆ ಮೂರು ಭಾವಚಿತ್ರಗಳಿರದೆ ಐದು ಭಾವಚಿತ್ರಗಳಿದ್ದವು. ನೆನಪಿಡಿ, ಇಂದಿಗೂ ಕಲಾಭವನದಲ್ಲಿ ಎಲ್ಲ ಕಲಾವಿದರೂ ಸಮಾನರೇ. ಆದರೆ ಟಾಗೂರ್ ಮಾತ್ರ ಹೆಚ್ಚು ಸಮ! ಅಂತಹವರಿಗೆ (ಅವರಿಗೆ, ಅಂದರೆ ಟಾಗೂರರಿಗೆ ಮಾತ್ರ) ಇರುವ ’ಉತ್ತರಾಯಣ’ವೆಂಬ ಸಂಗ್ರಹಾಲಯದಲ್ಲಿ ಅವರ ಸಾಧನೆಯನ್ನು ಕಾಪಾಡಿದುವ ರೀತಿಗೆ ಇದೊಂದು ಉದಾಹರಣೆಯಷ್ಟೇ!


     ಆಡಳಿತಶಾಹಿಯ ದೃಷ್ಟಿಯಲ್ಲಿ (ಅಥವ ದೃಷ್ಟಿದೋಷದಲ್ಲಿ) ಟಾಗೂರ್ ಅಂದರೆ ರವೀಂದ್ರನಾಥರೇ. ಮತ್ತು ಅವರೇ ಬೆಂಗಾಲದಲ್ಲೆಲ್ಲ ಜಗತ್ಪ್ರಸಿದ್ಧ ಕಲಾವಿದ. ಉಳಿದ ನೂರಾರು ಟಾಗುರ‍್ಗಳು ಮುಖ್ಯರಲ್ಲ. ಆದರೆ ಕಲಾಬಳಗವನ್ನು ’ಜನ’ವೆನ್ನುವುದಾದಲ್ಲಿ, ಜನಮನದಲ್ಲಿ ಇಂದು ಆತ್ಮೀಯರೆನಿಸಿರುವ ಕಲಾವಿದರುಃ ರಾಮ್‍ಕಿಂಕರ್, ಬಿನೋದ್ ಬಿಹಾರಿ, ಅಭನೀಂದ್ರನಾಥ್ ಟಾಗೂರ್, ಗಗನೇಂದ್ರನಾಥ್ ಟಾಗೂರ್, ನಂದಲಾಲ್ ಮತ್ತು ಬಿನೋದ್ ಬಿಹಾರಿ ಮುಖರ್ಜಿ!


     ಕಲೆ ಎಲ್ಲರನ್ನೂ ಕೈಬೀಸಿ ಕರೆಯುತ್ತದೆ, ಕೆಲವರನ್ನು ಮಾತ್ರ ಎತ್ತರದಲ್ಲಿ ಕೂರಿಸುತ್ತದೆ. ಹಾಗೆ ಮಾಡುವಾಗ ಈಗಾಗಲೇ ನಿಜವಾಗಲೂ ಎತ್ತರದಲ್ಲಿರುವವರನ್ನು ಸ್ವಲ್ಪ ಬದಿಗೆ ಸರಿಸಿ ಬೀಳಿಸಿಬಿಡುತ್ತದೆ!//

ಲೇಖನ ವರ್ಗ (Category):