’ನಂದನ್ ಮೇಳ’ವೆಂಬ ಕಲೆಯ ಕಲರ‍್ಫುಲ್ ಹಬ್ಬಃ ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆಃ ಭಾಗ ೧೩

To prevent automated spam submissions leave this field empty.

                                                                          (೪೧)


     ಕಲಾಭವನವು ಪ್ರತಿವರ್ಷ ನಿರೀಕ್ಷೆಯಿಂದ ಕಾಯುವುದು ’ನಂದನ್ ಮೇಳ’ಕ್ಕೆ. ಖ್ಯಾತ ಕಲಾವಿದ, ಕಲಾಗುರು, ಮಾಸ್ಟರ್ ಮೊಷಾಯ್ ನಂದಲಾಲ್ ಬೋಸ್ ಹುಟ್ಟಿದ ದಿನವಾದ ಡಿಸೆಂಬರ್ ೩ನೇ ತಾರಿಕಿನಂದು ಆರಂಭವಾಗಿ ಮೊರು ದಿನಗಳ ಕಾಲ ನಡೆಯುವ ಕಲಾಶಿಕ್ಷಕರ, ಕಲಾವಿದ್ಯಾರ್ಥಿಗಳ ಕಲಾಕೃತಿಗಳ ಮೇಳವೇ ’ನಂದನ್ ಮೇಳ’. ಅಂದು ನಾಟಕ, ಕಲಾಕೃತಿಗಳ ಮಾರಾಟ, ಕಲೆಗೆ ಸಂಬಂಧಿಸಿದ ಪೋಸ್ಟರ್‍ಗಳ ಭಿತ್ತಿಪ್ರದರ್ಶನ, ಮತ್ತು ಇವೆಲ್ಲಕ್ಕಿಂತಲೂ ಹೆಚ್ಚಾಗಿ ವಿದ್ಯಾರ್ಥಿಗಳ ಎಥ್ನಿಕ್ ತೊಟ್ಟ ಓಡಾಟದ ಪ್ರದರ್ಶನ. ಅದರಲ್ಲಿ ಸದಾ ಸೋಲುವುದು ಎಥ್ನಿಕ್ ವಸ್ತ್ರಾಲಂಕಾರವೇಃ ಏಕೆಂದರೆ ದಿನವೂ ಅವರು ಅದೇ ವಸ್ತ್ರದಲ್ಲಿರುತ್ತಾರೆ. ದಿನವೂ ತೊಡುವ ವಸ್ತ್ರವನ್ನು ಎಥ್ನಿಕ್ ಎಂದು ಹೇಗೆ ಕರೆವುದು? ಇತ್ತೀಚೆಗೆ ಬೆಂಗಳೂರಿನ ’ತಸ್ವೀರ್’ ಛಾಯಾಚಿತ್ರ ಗ್ಯಾಲರಿಯಲ್ಲಿ (ಬ್ರಿಟಿಷ್ ಕೌನ್ಸಿಲ್ ಲೈಬ್ರರಿಗೆ ಅಂಟಿಕೊಂಡ ನೆಲಮಾಳಿಗೆ ಇದು) ಒಂದು ಪ್ರದರ್ಶನದಲ್ಲಿ ಜೀವಂತಾಕಾರದ (ಲೈಫ್ ಸೈಜ್) ಕೆಲವು ಛಾಯಾಚಿತ್ರಗಳಿದ್ದವು. ಆ ಕಡೆಯಿಂದ ನೋಡಿದರೆ, ಭಾರತದಿಂದ ಹೊರಡುವ ಮುನ್ನ ಅವರುಗಳು ತೊಟ್ಟಿದ್ದ ಇಲ್ಲಿನ ವಸ್ತ್ರ ಕಂಡುಬರುತ್ತದೆ, ಅವರ ದೇಹದ ಸುತ್ತಲೂ. ಎರೆಡು ಹೆಜ್ಜೆ ಪಕ್ಕಕ್ಕಿರಿಸಿ ನೋಡಿದರೆ, ಅಲ್ಲಿ ಹೋದ ಮೇಲೆ ಅವರು ತೊಟ್ಟ ವಸ್ತ್ರದೊಂದಿಗೆ ಅವರೇ ಪ್ರಕಟಗೊಳ್ಳುತ್ತಾರೆ. ಆಗ ಅವರು ಇಲ್ಲಿ ಕಳಚಿಹೋದ ವಸ್ತ್ರವನ್ನೇ ಎಥ್ನಿಕ್ ಎನ್ನಬಹುದೇನೋ! ಈ ಛಾಯಾಚಿತ್ರ ಪ್ರದರ್ಶನದ ಅನುಭವದ ಸಂಕೀರ್ಣತೆಯು ಅದರ ಸೃಷ್ಟಿಕರ್ತೆಯ ಹೆಸರಿನಂತೆಯೇ ಇದೆಃ ಅನು ಪಲಕನ್ಹತು ಮ್ಯಾಥ್ಯೂ!


     ಹಳದಿ ಜುಬ್ಬ, ಬಿಳಿಯ ಪೈಜಾಮ ಹುಡುಗರಿಗೆ, ಅರ್ಧ ಬಿಳಿಯ ಬಣ್ಣದ, ಕೆಂಪಂಚಿನ ಸೀರೆ ತೊಟ್ಟ ಹುಡುಗಿಯರು, ಹುಡುಗಿಯರದ್ದೇ ವಿನ್ಯಾಸದ ಬೈಸಿಕಲ್ ತುಳಿಯುತ್ತ, ಬೈಸಿಕಲ್ ಮುಂದೆ ಒಂದು ಬುಟ್ಟಿಯಲ್ಲಿ ಅಮರ‍್ಕುಟೀರದ ’ಹೆಗಲಚೀಲ’ ತುಂಬಿಕೊಂಡು ಹೋಗುತ್ತಿರುತ್ತಾರೆ, ಇಲ್ಲ ಬರುತ್ತಿರುತ್ತಾರೆ. ಅದನ್ನು ’ಬಗಲಚೀಲ’ ಎನ್ನುವುದೇ ವಾಸಿ, ಅಲ್ಲಿ. ಖಡ್ಡಾಯವಲ್ಲದಿದ್ದರೂ ಸಮವಸ್ತ್ರವನ್ನು ತೊಟ್ಟು ಅಭ್ಯಾಸವಾಗಿರುವ ಅಲ್ಲಿನ ಪಾಠಶಾಲದ ಮಕ್ಕಳು (ಪ್ರೈಮರಿ ಶಾಲೆ) ಕಾಲೇಜಿಗೆ ಬಂದಾಗಲೂ ಸಮವಸ್ತ್ರವನ್ನು ಬಂದ್ ಮಾಡಲು ನಿರಾಕರಿಸುತ್ತಾರೆ. ಅಲ್ಲಿಯೇ ಓದಿದವರ್ ಯಾರು, ಹೊರಗಿನವರ್ ಯಾರು ಎಂಬುದನ್ನು ಸಮವಸ್ತ್ರವು ಬಿಚ್ಚಿ ತೋರಿಸಿಬಿಡುತ್ತದೆ.


     ಕಲಾಭವನದಲ್ಲಿ ಇರುವ ಮಾಸ್ಟರ‍್ಪೀಸ್ ಭಿತ್ತಿಚಿತ್ರ, ಶಿಲ್ಪಗಳು ಸಾಲದೆಂಬಂತೆ ವಿದ್ಯಾರ್ಥಿಗಳೇ ನಿರ್ಮಿಸಿದ ಇನ್‍ಸ್ಟಲೇಷನ್ ಇತ್ಯಾದಿಗಳ ಪ್ರದರ್ಶನ. ಕಲಾಭವನದ ಸುತ್ತಲಿನ ಶಾಂತಿನಿಕೇತನದ ಜನಸಾಮಾನ್ಯರು, ಕೊಲ್ಕೊತ್ತ, ದೆಹಲಿ, ಮುಂಬಯಿಗಳಿಂದ ಕಲಾವಿದರ/ವಿದ್ಯಾರ್ಥಿಗಳ ಕಲಾಕೃತಿಗಳನ್ನು ಕೊಳ್ಳಲು ಬಂದಿರುವವರ ನೂಕುನುಗ್ಗಲು. ’ಇದು ನಮ್ಮ ಕ್ಯಾಂಪಸ್ಸಾ?" ಎಂದು ತಲೆಕೆಡಿಸಿಕೊಳ್ಳುವಷ್ಟು ಹೊರಗಿನ ಮಂದಿ. ಅದಕ್ಕೇ ಹೇಳುವುದುಃ ಕಲಾಭವನವು ಅರ್ಧ ಕಲಾಶಾಲೆ ಮತ್ತರ್ಧ ಹೊರಾಂಗಣ ಸಂಗ್ರಹಾಲಯವೆಂದು. ನಂದನ್ ಮೇಳದ ಕಾಲಕ್ಕಂತೂ ಅದು ಪೂರ್ಣಪ್ರಮಾಣದ ಜಾತ್ರಾಭವನವಾಗಿರುತ್ತದೆ. ರಾತ್ರಿಯೆಲ್ಲನ್ಡೆವ ನಮ್ಮ ಕಡೆಯ ನಾಟಕಗಳ ಗ್ರಾಮೀಣ ಬೆಂಗಾಲಿ ಆವೃತ್ತಿಯನ್ನು ’ಜಾತ್ರಾ’ ಎನ್ನುತ್ತಾರೆ. ಎಲ್ಲ ಸ್ಟೂಡಿಯೋಗಳೂ ಔಪಚಾರಿಕವಾಗಿ ಬಂದ್--ಬಾಗಿಲು ತೆರೆದಿದ್ದರು ಅಲ್ಲಿ ನಡೆವ ಚಟುವಟಿಕೆಗಳು ಮೇಳಕ್ಕೆ, ಹಿಮ್ಮೇಳಕ್ಕೆ, ಸಮ್ಮಿಲನಕ್ಕೆ, ಗಲಭೆ ಗೋಜಲಿಗೆ ಸಂಬಂಧಿಸಿದವು.


     ಕಾಮನ ಹಬ್ಬದ ದಿನದ ನಡವಳಿಕೆಯೂ ಅಲ್ಲಿ ಎಲ್ಲೆಡೆ ಆಗುವಂತೆ, ಕಾಮನ್. ಮಧ್ಯಾಹ್ನ ಊಟದ ಸಮಯದವರೆಗೂ ಯಾರು ಯಾರಿಗೆ ಬೇಕಾದರೂ ಬಣ್ಣಗಳನ್ನು ಎರಚಬಹುದು. ಅದನ್ನು ನಿಯಂತ್ರಿಸಲು ಅಲ್ಲಿಯೇ ಅಡ್ಡಾಡುತ್ತಿರುತ್ತಾರೆ ನಂದು (ನಂದಲಾಲ್ ಮುಖರ್ಜಿ, ಭಿತ್ತಿಚಿತ್ರದ ಉಪಾಧ್ಯಾಯ). ಯಾರಾದರೂ ಯಾರ ಬಗ್ಗೆಯಾದರೂ ಆರೋಪ ಹೊರಿಸಬೇಕಾದರೆ ಇವರನ್ನೇ ಸಂಪರ್ಕಿಸಬೇಕು. ಅವರನ್ನು ಹುಡುಕುವುದೂ ಸಹ ಸುಲಭ. ಅಂದು ಯಾವ ವ್ಯಕ್ತಿ ಅತಿ ಹೆಚ್ಚಿನ ಬಣ್ಣವನ್ನು ಮೈಮೇಲೆ ಬಟ್ಟೆಯಂತೆ ಹೊದ್ದಿರುತ್ತಾರೋ ಅವರೇ ಅಲ್ಲಿನ ಮೇಲ್ವಿಚಾರಕ ಉರುಫ್ ನಂದು ?!


ಮಧ್ಯಾಹ್ನದ ನಂತರ ಬಣ್ಣದ ಬಳಕೆ ಈ ವರ್ಣಕಲಾಶಾಲೆಯಲ್ಲಿ ಬಂದ್. ಹಾಗೂ ನೀರು ಮತ್ತಿತರ ಜಲಬೆರೆತ ಬಣ್ಣಗಳ ಬಳಕೆ ಬಿಲ್‍ಕುಲ್ ಬಂದ್. ಜೊತೆಗೆ ಎಲ್ಲರಿಗೂ ಅದೆಲ್ಲಿಂದಲೋ ದೊರಕುವ ಭಾಂಗ್ ಅಥವ ರಾಮರಸ ಕುಡಿಯದಿರುವವರಿಗೆ ಕಲಾಭವನದಲ್ಲಿ ಎಂಟ್ರಿಯೊ ಬಂದ್!


     ಕಲಾವಿದ್ಯಾರ್ಥಿಗಳ ಸಂಘವು, ಕಲೆಯ ಹೆಸರಿನಲ್ಲಿ ಸಂಘಕ್ಕಾಗಿ, ಸಂಘದ ಹೆಸರಿನಲ್ಲಿ ಕಲೆಗಾಗಿ ಮಾಡಿಕೊಳ್ಳುವ ಕಾರ್ಯಕ್ರಮ ನಂದನ್ ಮೇಳ. ಕಳೆದ ವರ್ಷ ಮೇಳವು ಸಂಪಾದಿಸಿಕೊಟ್ಟ ಒಟ್ಟು ಮೊತ್ತ ನಲವತ್ತು ಲಕ್ಷ! ಈ ಕೂಡಿಟ್ಟ ಮೊತ್ತದಿಂದ ಬಡವಿದ್ಯಾರ್ಥಿಗಳ ಫೀಜು, ಯಾರಾದರೂ ಎಮರ್ಜೆನ್ಸಿಯಾಗಿ ಖಾಯಿಲೆ ಬಿದ್ದಲ್ಲಿ ಆಸ್ಪತ್ರೆ ಬಿಲ್ಲು ಬಾಣಗಳ ಪಾವತಿ, ಅಂತಹವರನ್ನು ಫ್ಲೈಟ್‍ನಲ್ಲಿ ಅವರವರ ಊರುಗಳಿಗೆ ರಫ್ತು ಮಾಡುವುದು, ಅಥವ ಅಂತಹವರ ಮಾತಾಪಿತೃಗಳನ್ನು ಇಲ್ಲಿಗೆ ಆಮದು ಮಾಡಿಕೊಳ್ಳುವ ಬಿಲ್ ಇತ್ಯಾದಿಗಳಿಗೆ ಈ ಸಂಪಾದನೆ ಸಲ್ಲುತ್ತಿತ್ತು. ಮುಂದಿನ ನಂದನ್ ಮೇಳದ ಕಲಾಕೃತಿಗಳ ರಚನೆಗಾಗಿ ಅಸಲು ಹಣ ತೊಡಗಿಸುವುದೂ ಈ ಸಂಘವೇ. ಅದೇ ತಾರೀಕಿನಂದು ಕಲೆಯನ್ನು ಕುರಿತಾದ ಬೆಂಗಾಲಿ ಮತ್ತು ಆಂಗ್ಲ ಭಾಷೆಯಲ್ಲಿ ಪಂಡಿತರ ಲೇಖನಗಳನ್ನೊಳಗೊಂಡ ’ನಂದನ್’ ಪತ್ರಿಕೆಯ ಬಿಡುಗಡೆ ಕೂಡ. ಕಲಾಇತಿಹಾಸದ ವಿಭಾಗ ಇದನ್ನು ಪ್ರಕಟಿಸುವುದು.          


                                                                       (೪೨)


     ’ನಂದನ್’ ಪತ್ರಿಕೆಯ ಬೆಲೆ ತೀರ ಕಡಿಮೆಯಾದರೂ, ಬೇಗ ಬಿಕರಿಯಾಗುತ್ತಿತ್ತು. ಆದರೂ, ಈಗಲೂ, ಹಳೆಯ ಸಂಚಿಕೆಗಳು ಅಲ್ಲಿ ಲಭ್ಯ.’ನಂದನ್’ ಪತ್ರಿಕೆಯು ಅಲ್ಲಿನ ಕಡ್ಡಾಯ ಸಾಸಿವೆ ಎಣ್ಣೆಯ ಊಟದ ಹಾಗೆ. ಕೋಟಿ ಕೊಟ್ಟರು ನೀವು ಅದರ ರುಚಿ ಬದಲಾಯಿಸಲಾರಿರಿ. ಅದಕ್ಕಿಂತ ರುಚಿಯಾದುದನ್ನು ಅಲ್ಲಿ ಎಲ್ಲಿಯೊ ದೊರಕಿಸಿಕೊಳ್ಳಲಾರಿರಿ--ಊಟ ಹಾಗೂ ಪತ್ರಿಕೆಯನ್ನು! ಬೆಂಗಳೂರಿನಿಂದ ಡಿ.ಡಿ, ಚೆಕ್ಕು, ಎಂ.ಒ ಏನೇ ಕಳಿಸಿ, ನೀವು ಅಲ್ಲಿ ಹೋದ ಪಕ್ಷದಲ್ಲಿ ಮಾತ್ರ ನಂದನ್ ಪತ್ರಿಕೆ ನಿಮಗೆ ದೊರಕುವುದು! ಅಲ್ಲಿನ ಎಲ್ಲ ಪ್ರಕಟಣೆಗಳಿಗೂ ಒಂದೇ ಮುಖಪುಟ ಬಣ್ಣ ಹಾಗೂ ವಿನ್ಯಾಸಃ ಹಳದಿ ಓಕರ್ ವರ್ಣ. ಅಕ್ಷರದ ಶೈಲಿಯೊ ಒಂದೇಃ ಎಲ್ಲವೂ ಟಾಗೂರ್ ವಾಸನೆ ಉಳ್ಳವು! ಸ್ವಲ್ಪ ಅಂತಿಂತಹವರಾದರೆ ಇವೆಲ್ಲ ಪುಸ್ತಕಗಳನ್ನೂ ಒಬ್ಬರೇ ಬರೆದವರೇನೋ ಎಂದುಕೊಂಡುಬಿಡುವಷ್ಟು ಏಕತಾನವಾಗಿದ್ದವು. ಏಕತಾನತೆಯಲ್ಲಿಯೊ ಸೊಗಸಿದೆ ಎಂದು ನನಗೆ ಗೊತ್ತಾದದ್ದೇ ಈ ಪುಸ್ತಕಗಳ ವಾಸನೆ ಹಿಡಿದಾಗ. ವಾಸನೆ ಎಂದರೆ ಅಕ್ಷರಶಃ ವಾಸನೆ. ೧೯೧೦ರಲ್ಲಿ ಪ್ರಕಟವಾದ, ನನ್ನ ತಾತ-ಅಜ್ಜಿಯರೂ ಇನ್ನೂ ಹುಟ್ಟಿರದಿದ್ದ ಕಾಲದ ಪ್ರಕಟಣೆಗಳು ಇನ್ನೂ ಅಲ್ಲಿದ್ದವು. ನಾವು ಊರು ಬಿಟ್ಟು, ದೇಶಾಂತರ ಹೋದಾಗ, ಹೋದಲ್ಲೆಲ್ಲ ಮೈಸೂರು ಸ್ಯಾಂಡಲ್ ಸೋಪಿನಲ್ಲಿ ಸ್ನಾನ ಮಾಡುವುದು ಏಕೆ? ಪಾಸ್‍ಪೋರ್ಟ್, ವೀಸ, ಏರ್ ಟಿಕೆಟ್ ಹಾಗೂ ಕಾಲದ ಬಾಧೆಯಿಲ್ಲದೆ ಒಮ್ಮೆ ನಮ್ಮೊರಿಗೆ, ನಮ್ಮ ಬಾಲ್ಯದ ಏಕತಾನತೆಗೆ ಚಕ್ಕನೆ ಭೇಟಿ ಕೊಟ್ಟು ಹಿಂದಿರುಗಲಲ್ಲವೆ! ಹಾಗೆ ಅಲ್ಲಿನ ಪ್ರಕಟಣೆಗಳು!


     ೧೯೯೧ರಲ್ಲಿ ಆ ೧೯೧೦-೨೦ರ ದಶಕದಲ್ಲಿ ಪ್ರಕಟವಾಗಿ ಇನ್ನೂ ಮಾರಾಟದಲ್ಲಿದ್ದ ಪುಸ್ತಕಗಳ ಬೆಲೆ ಕೆಲವೊಮ್ಮೆ ೧೫ ರಿಂದ ೨೫ ಪೈಸೆ ಇರುತ್ತಿತ್ತು. ಅಷ್ಟರಲ್ಲಿ ಆ ಮೊತ್ತವು ಚಾಲನೆ ಕಳೆದುಕೊಂಡುಬಿಟ್ಟಿದ್ದವು--ಭಿಕ್ಷುಕರಲ್ಲಿಯೊ ಸಹ! ಆ ಪುಸ್ತಕಗಳ ಹಾಳೆಗಳನ್ನು ಸೂಕ್ಷ್ಮವಾಗಿ ತೆರೆಯಬೇಕಿತ್ತು--ನಾವೇ ಇಂಡಿಯಾನ ಜೋನ್ಸ್ ಎಂಬಂತೆ. ಜೋರಾಗಿ ಹಾಳೆ ತಿರುಗಿದರೆ ಹಪ್ಪಳದಂತೆ, ಲಟಲಟನೆ ಮುರಿದುಬೀಳುತ್ತಿತ್ತು. ಪುಸ್ತಕವನ್ನು ಕೊಳ್ಳುತ್ತಿದ್ದೇನೋ ಅಥವ ಆಂಟಿಕ್ ಆದ ಶಾಂತಿನಿಕೇತನದ ಒಂದು ಭಾಗವನ್ನೇ ಕೊಳ್ಳುತ್ತಿದ್ದೇನೋ ತಿಳಿಯದಂತಾಗಿತ್ತು. ಕಲಾವಿದರೂ ಅಂದಿನಿಂದಲೂ ಓದುವ ಅಭ್ಯಾಸದವರಲ್ಲ. ಆದ್ದರಿಂದಲೇ ಪಾಪಿಗಳು ಕೊಳ್ಳದೆ ಅವುಗಳನ್ನು ಹಾಗೇ ಬಿಟ್ಟಿದ್ದಾರೆಂದುಕೊಂಡೆ. ಅವೆಲ್ಲ ಮುಕ್ತಿಗಾಗಿ ಕಾಯುತ್ತಿರುವ ಶಾಪಗ್ರಸ್ತ ಪೂರ್ವಜರ ಪ್ರೇತಗಳಂತಿದ್ದವು.


     ಧೈರ್ಯಮಾಡಿ ಹತ್ತು ರೂಪಾಯಿಗಾಗುವಷ್ಟು ಪುಸ್ತಕಗಳನ್ನು ಕೊಂಡೆ. ಪ್ರತಿ ಹಾಳೆ ತೆಗೆದಾಗ ಅದರಲ್ಲಿನ ಗ್ರಂಥಾಲಯದ ವಾಸನೆಗೆ ಮಾಂತ್ರಿಕ ಶಕ್ತಿಯಿತ್ತು. ಅಥವ ಪರದೇಶದಲ್ಲಿ ಮೈತೊಳೆವಾಗಿನ ಮೈಸೂರು ಸ್ಯಾಂಡಲ್ ಸೋಪಿನ ಶಕ್ತಿಯಿತ್ತ! ಕೌಂಟರಿನಲ್ಲಿ ಬಿಲ್ ಪಾವತಿ ಮಾಡಲು ಹೋದಾಗ ಮತ್ತೊಂದು ಫಜೀತಿ ಶುರುವಾಯಿತುಃ

ಲೇಖನ ವರ್ಗ (Category):