ಪ್ರಕ್ಷುಬ್ಧ ಮೋಕ್ಷದ ಕಥಾಲೋಕಃ ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆಃ ಭಾಗ ೧೨

To prevent automated spam submissions leave this field empty.

(೩೯)


’ಪ್ರಕ್ಷುಬ್ಧ’ ಅಥವ ಪವನ್ ಕುಮಾರ್ ಭಟ್ಟಾಚಾರ್ಯ ನಿಜಕ್ಕೂ ಪ್ರಕ್ಷುಬ್ಧ ವ್ಯಕ್ತಿತ್ವದವ. "ನನಗೆ ಮೋಕ್ಷ ದೊರಕಿದೆ" ಎಂದು ಆಗಾಗ ಹೇಳಿಕೊಳ್ಳುತ್ತಿದ್ದ. ನಾನು ನಗುತ್ತಿದ್ದೆ. ಆದರೆ ಆತ ಅಕ್ಷೇಪಿಸುತ್ತಿರಲಿಲ್ಲ. "ನೀನು ಮೊರ್ಖ, ನಾನು ಸುಳ್ಳ" ಎಂಬೆರಡು ವ್ಯತಿರಿಕ್ತ ಅರ್ಥ ಕೊಡುವಂತಹ ನಗೆ ಸೂಸುತ್ತಿದ್ದ. ಆ ನಗುವನ್ನು ನಾನು ’ಆರ್ಕಾಯಿಕ್ ನಗು’ ಎಂದು ವಿಂಗಡನೆ ಮಾಡಿದ್ದೆ. ಗ್ರೀಕ್ ಶಿಲ್ಪಗಳು ಆರಂಭಗೊಳ್ಳುತ್ತಿದ್ದ ಕಾಲಕ್ಕೆ, ಅವುಗಳ ಮುಖದಲ್ಲಿದ್ದ ನಿಗೂಢ ಮಂದಹಾಸವನ್ನು ’ಆರ್ಕಾಯಿಕ್ ನಗು’ ಎಂದು ಕಲಾಇತಿಹಾಸದಲ್ಲಿ ಗುರ್ತಿಸಲಾಗುತ್ತದೆ.


"ನಿನ್ನ ಬಗ್ಗೆ ನೀನೇ ನಿಯತ್ತಾಗಿ ಪರಿಚಯ ಮಾಡಿಕೋ ವತ್ಸ" ಎಂದು ಡಿಮ್ಯಾಂಡ್ ಮಾಡಿದ್ದೆ ಒಮ್ಮೆ.


"ನಾನೇ ಮೋಕ್ಷ" ಎಂದಿದ್ದ, ಮತ್ತೆ ಆರ್ಕಾಯಿಕ್ ನಗುವಿನಲ್ಲಿ.


"ಓಕೆ. ನಿನಗೇ ನಿರ್ದಿಷ್ಟವಾದ ಮೋಕ್ಷವನ್ನು ವಿವರಿಸು" ಎಂದೆ, ನಾನೂ ಸಹ ಆರ್ಕಾಯಿಕ್ ನಗುವನ್ನು ಸೂಸುತ್ತ.


"ಓಕೆ, ಓಕೆ. ನನಗೆ ಜೀವನದಲ್ಲಿ ಗೊತ್ತು ಗುರಿ ಇಲ್ಲ. ಆದರೆ ಸೋಂಬೇರಿಯಲ್ಲ. ಯಾವ ಸಾಧನೆಯೂ ಸಾವೆಂಬ ಸಾಧನೆಗೆ ಸಮನಲ್ಲ", ಎಂದಿದ್ದ.


"ನಿಲ್ಲಿಸದೇ ಪೂರ್ಣ ಪರಿಚಯ ಮಾಡಿಕೊಡು ಗುರುವೆ ನಿನ್ನ ಬಗ್ಗೆ. ಸಾವು ಅನಿವಾರ್ಯವೇ ಹೊರತು ಒಂದು ಸಾಧನೆ ಹೇಗಾದೀತು?" ಎಂದೆ.


"ಓಕೆ. ಪುನರ್ಜನ್ಮದಲ್ಲಿ, ಜನ್ಮಾಂತರದಲ್ಲಿ, ದೇವರು-ದೆವ್ವಗಳಲ್ಲಿ ನಂಬಿಕೆ ಇದೆಯೆ?" ಎಂದ.


"ನಿನ್ನ ಬಗ್ಗೆ ಹೇಳು ಎಂದರೆ, ನಿನ್ನ ಗುರುಗಳ, ಭ್ರಮೆಗಳ ಅಡ್ರಸ್ ಹೇಳುತ್ತಿದ್ದೀಯಲ್ಲ. ಮೋಕ್ಷವನ್ನು ವಿವರಿಸಪ್ಪ. ವಿವರಿಸಲಾಗದ್ದನ್ನು ಮೋಕ್ಷ ಎಂದು ಉಡಾಫೆ ಉತ್ತರ ಕೊಡಬೇಡ" ಎಂದೆ.


ಈಗ ಪ್ರಕ್ಷುಬ್ಧ ಗಂಭೀರನಾಗಿ ಮಾತನಾಡತೊಡಗಿದ, "ಉಡಾಫೆ ಹಾಗೂ ಸತ್ಯಗಳ ನಡುವಣ ವ್ಯತ್ಯಾಸಗಳಿಗೆ ಕಲೆಯಲ್ಲಿ ಮೌಲ್ಯವಿಲ್ಲ. ಕಲೆ ಮೊಲಭೂತವಾಗಿ ಹಿಪೊಕ್ರಿಟಿಕಲ್, ವ್ಯತಿರಿಕ್ತತೆ. ಬದುಕೂ ಹಾಗೆಯೇ ಅಲ್ಲವೆ. ನಾನು ಸಸ್ಯಾಹಾರಿ ಎಂಬ ಒಂದೇ ಕಾರಣಕ್ಕೆ ಹುಲಿ, ವಿಧಿ ಹಾಗೂ ಕಾರ್ಯ-ಕಾರಣ ಸಂಬಂಧವು ನಮ್ಮನ್ನು ಕಬಳಿಸದೆ ಇದ್ದೀತೆ?" ಎಂದು ಕಣ್ಗಳನ್ನು ಗಂಭೀರವಾಗಿಸಿದ. ನಗು ಮಾತ್ರ ಮೋರೆಯ ಮೇಲೆ ಹಾಗೇ ಇದ್ದಿತು, "ನೀನು ಯು.ಜಿ.ಕೃಷ್ಣಮೂರ್ತಿಯ ಬರವಣಿಗೆಗೆಳನ್ನು ಓದಿದ್ದೀಯ? ಆತ ಹಿಂದಿ ಸಿನೆಮ ನಿರ್ದೇಶಕ ಮಹೇಶ್ ಭಟ್‍ರ ಗುರು. ಹೋಗಲಿ ನಿಮ್ಮ ಶಿವರಾಮ ಕಾರಂತರ ಹತ್ತು ಮನಸ್ಸಿನ ಹುಚ್ಚು ಮುಖಗಳನ್ನು ಓದಿದ್ದೀಯ. ಅದರಲ್ಲಿ ಹತ್ತು ವರ್ಷಕಾಲ ಅವರು ದೇವರನ್ನು ಹುಡುಕಿ ಹೋಗಿ ವಾಪಸ್ ಬಂದದ್ದು ನೆನಪಿದೆಯ?" ಎಂದ.


ಕೈಯೆತ್ತಿ, ಅದರೊಳಗಿನ ಕೊನೆಯದಲ್ಲದ, ಮಿಕ್ಕುಳಿದ ನಾಲ್ಕರಲ್ಲಿ ಒಂದು ಬೆರಳನ್ನು ಮೇಲೆತ್ತಿದೆ, ’ನನ್ನದೊಂದು ಪ್ರಶ್ನೆ ಇದೆ’ ಎಂದು. ಆದರೆ ಆತ ಮಾತು ನಿಲ್ಲಿಸಲಿಲ್ಲ, "ನನಗೆ ಗೊತ್ತು. ವಿಷಯಾಂತರ ಮಾಡುತ್ತೀದ್ದೇನೆಂದು ನಿನ್ನ ಆಕ್ಷೇಪಣೆಯಲ್ಲವೆ. ಅದು ಸುಳ್ಳು. ಕಾರ್ಯ-ಕಾರಣ ಸಂಬಂಧದ ಚಟಕ್ಕೆ ಮನುಕುಲ ತನ್ನನ್ನು ತುಂಬ ಅಂಟಿಸಿಕೊಂಡುಬಿಟ್ಟಿದೆ. ನೀನು ಒಳ್ಳೆಯವನಾದರೆ ಸ್ವರ್ಗಕ್ಕೆ ಹೋಗ್ತೀಯ ಅಂತ ಹಳಬರು ನಂಬುತ್ತಿದ್ದರು. ಈಗ ಒಳ್ಳೆಯವನಾದ್ದರಿಂದ ಕೆಲಸದಲ್ಲಿ ಪ್ರಮೋಷನ್ ಸಿಕ್ಕಿದೆ ಎನ್ನುವಷ್ಟು ಕೀಳುಮಟ್ಟಕ್ಕೆ ಇಳಿದಿದ್ದಾರೆ. ಮನುಷ್ಯರನ್ನು ಸೃಷ್ಟಿ ಮಾಡಿದ್ದು ಯಾರು?"


"ದೇವರೆಂಬ ಕಲ್ಪನೆ"


"ಆ ದೇವರೆಂಬ ಕಲ್ಪನೆಯನ್ನು ಸೃಷ್ಟಿ ಮಾಡಿದ್ದು ಯಾರು?"


"ಮನುಷ್ಯ"


"ಕಳೆದ ನಾಲ್ಕೈದು ವಾಕ್ಯಗಳನ್ನು ಹುಷಾರಾಗಿ ಒಂದೈವತ್ತು ಸಲ ಮನಸ್ಸಿನಲ್ಲೇ ತಿರುವಿಹಾಕು. ಅದರರ್ಥಗಳು ಏನೇನು ಎಂದು ಹೇಳು" ಎಂದು ಚಹಾ ತರಲು ಹೊರಟ ಪ್ರಕ್ಷುಬ್ಧ.


 (೪೦)


"ನೀನು ಚೀನಾ-ಜಪಾನಿನ ಝೆನ್, ತಾವೊ ಹಾಗೂ ಕನ್‍ಫುಶಿಯಸ್ ತತ್ವಗಳನ್ನು ಬೇಡವಾದ ರೀತಿಯಲ್ಲಿ ಕಲಬೆರೆಕೆ ಮಾಡಿ ಮಾತನಾಡುತ್ತಿದ್ದೀಯ. ನಿಜ ಹೇಳು ನಿನಗೆ ಮೋಕ್ಷ ಸಿಕ್ಕಿರುವುದು ದಿಟವೆ?"


"ನೀನೇನೆಂದು ಭಾವಿಸಿದ್ದೀಯೋ ’ಅದು’ ಅದಲ್ಲ ಎಂಬುದನ್ನು ಜೀರ್ಣಿಸಿಕೊಳ್ಳುವುದು ಕಷ್ಟ. ಮುಂಚಿನ ವಾಕ್ಯದ ’ಅದು’ ಜಾಗದಲ್ಲಿ, ಕಲೆ-ಬದುಕು-ಝೆನ್ ಮುಂತಾದುವನ್ನು ಎಲ್ಲ ಸಂಸ್ಕೃತಿಯವರು, ಎಲ್ಲ ಧರ್ಮದವರೂ ಒಂದಲ್ಲ ಒಂದು ರೀತಿಯಲ್ಲಿ ನಿರೂಪಿಸಿದ್ದಾರೆ" ಎಂದ.


"ಮೋಕ್ಷ ಪ್ಲೀಸ್" ಎಂದೆ.


"ಓ. ಅದಾ. ದೋಡ್ಡ ರಬ್ಬರ್ ಬ್ಯಾಂಡಿನಿಂದ ನಿನ್ನನ್ನು ಕಂಬವೊಂದಕ್ಕೆ ಕಟ್ಟಿಹಾಕಿದ್ದಾರೆ ಎಂದುಕೊ. ಕಂಬದ ಸುತ್ತಲಿನ ಆರಡಿ ಮಾತ್ರ ಸಹಜ ನೆಲವಿದ್ದು, ಅದರ ಹೊರಗೆ ಎಲ್ಲ ದಿಕ್ಕುಗಳಲ್ಲಿಯೂ ಉರಿವ ಬೆಂಕಿ ಕೆಂಡ ಇರುತ್ತದೆ ಎಂದಿಟ್ಟುಕೊ. ಕಂಬದ ಸುತ್ತಲೂ ಮುಳ್ಳುಗಳನ್ನು ಹೊರಮುಖವಾಗಿರಿಸಿದ್ದಾರೆ ಎಂದೂ ನೆನೆಸಿಕೊ.ಆ ರಬ್ಬರ್ ಬ್ಯಾಂಡ್ ಎಷ್ಟು ವಿಸ್ತರಿತವಾಗುತ್ತದೆಯೋ ಅಷ್ಟು ದೂರ ಕೆಲವರು ನಿನ್ನನ್ನು ಎಳೆದು ಹೋಗುತ್ತಾರೆ ಎಂದುಕೋ. ನಿನ್ನ ಪ್ರಯತ್ನದಿಂದಲೋ ಅಥವ ಯೋಗಾನುಯೋಗವೋ, ನಿನ್ನನ್ನು ಅವರು ಕೈಬಿಟ್ಟರು ಅಥವ ಅವರಿಂದ ನೀನು ಬಿಡಿಸಿಕೊಂಡೆ ಎಂದುಕೋ. ರಭಸಕ್ಕೆ ನೀನು ಕಂಬಕ್ಕೆ ಬರುತ್ತ, ಬೆಂಕಿಯ ಬಿಸಿ ತಪ್ಪಿಸಿಕೊಂಡು, ಕಂಬದ ಆರಡಿ ವಿಸ್ತರಣೆಯ ಒಳಕ್ಕೆ ಸರಾಗವಾಗಿ ಬರುತ್ತಿದ್ದೀಯ. ಆದರೆ ಕಂಬದ ಹೊರಕವಚದ ಮುಳ್ಳು ನಿನ್ನ ದೇಹವನ್ನು ಒಂದು ಡಜನ್ ಕಡೆಯಾದರೂ ತೂತುಮಾಡದೆ ಉಳಿಸದು.


     ಅದು ಹೇಗೋ ಏನೋ ನೀನು ಕಂಬದ ಆರಡಿ ಸುತ್ತಲಿನ ಗಟ್ಟಿನೆಲಕ್ಕೆ ಬಂದು, ಆದರೂ ಕಂಬದ ಮುಳ್ಳುಗಳಿಂದ ಕೆಲವೇ ಸೆಂಟಿಮೀಟರ್ ದೂರದಲ್ಲಿ ಸ್ಥ್ರಿರವಾಗಿ ನಿಂತೆ ಎಂದುಕೊ. ಅತ್ತ ಧರಿ ಇತ್ತ ಪುಲಿ ಎನ್ನುವ ಹಾಗೆ. ಅದ್ಯಾವ ಕಾರಣಕ್ಕೋ ನೀನು ಬೆಂಕಿಗೂ ಸಿಲುಕದೆ, ಮುಳ್ಳಿಗೂ ಧಕ್ಕದೆ ನಿಂತಕಡೆಯೇ ನಿರಂತರವಾಗಿರುವ ಭಾಗ್ಯ ದೊರಕುತ್ತದೆ ಎಂದುಕೊ. ಉಳಿದವರೆಲ್ಲ ಇತರ ಕಂಬಗಳಿಗೆ ಕಚ್ಚಿಕೋಂಡು ಜೀವಬಿಟ್ಟಿರುತ್ತಾರೆ. ಅಥವ ಸುತ್ತಲಿನ ಬೆಂಕಿಯ ಧಗೆಯಲ್ಲಿ ಉರಿದುಹೋಗಿರುತ್ತಾರೆ.


     ಬೆಂಕಿ, ಮುಳ್ಳು, ನಿನ್ನ ಎಳೆದವರು, ಸುತ್ತಲಿನವರು -- ಇವರೆಲ್ಲ ಚಟ, ಕರ್ಮ, ಈ ಜೀವನಕ್ಕೆ ಸಂಬಂಧಿಸಿದವರು, ಸಹವರ್ತಿಗಳು ಎಂದು ಕ್ರಮಬದ್ಧವಾಗಿ ಅರ್ಥೈಸಿಕೊ. ನೀನಿರುವ ಅಥವ ಬಂದು ತಲುಪಿರುವ ನಿಶ್ಚಿಂತ ಸ್ಥಿತಿಯನ್ನೇ ಮೋಕ್ಷವೆನ್ನುವುದು!" ಎಂದು ತನ್ನ ಪ್ರಕ್ಷುಬ್ಧ ಮಾತುಗಳನ್ನು ಮುಗಿಸಿದ್ದ ಪ್ರಕ್ಷುಬ್ಧ!


                                                                                                    (೪೧)


     "ಹಾಗಿದ್ದಲ್ಲಿ, ಜನ ಕಲಾಕೃತಿಯನ್ನು ಏಕೆ ರಚಿಸುತ್ತಾರೆ ಎಂಬುದನ್ನು ಏಕೆ ಪ್ರಶ್ನಿಸಿಕೊಳ್ಳುವುದಿಲ್ಲ?"


     "ಕಲಾಕೃತಿ ಏಕೆ ರಚಿಸಬಾರದೆಂದು ಪ್ರಶ್ನಿಸಿಕೊಳ್ಳುವ ಕ್ರಿಯೆಯನ್ನೇ ಕಲಾ-ರಚನೆ ಎನ್ನುತ್ತೇವೆ!" ಎಂದ ಪ್ರಕ್ಷುಬ್ಧ. ನಮ್ಮಿಬ್ಬರದ್ದೂ ತಡೆರಹಿತವಾಗಿ ಸಾಗಿರುತ್ತಿತ್ತು ಇಂಟೆಲೆಕ್ಚುಯಲ್ ವಾದವಾಗುತ್ತಿತ್ತು. ವಾದ ನನ್ನದು, ಇಂಟೆಲೆಕ್ಚ್ಯುಯಲ್ ಅವನದ್ದು!


    "ಮನುಷ್ಯನಿಗೆ ಮೊಲಭೂತವಾದ ವೃತ್ತಿ ಒಂದೇ, ಇತರೆ ಪ್ರಾಣಿಗಳೊಂದಿಗೆ ಇದೊಂದೇ ಸಾಮ್ಯತೆ. ಅದೆಂದರೆ ತನ್ನ ಜೀವ ಉಳಿಸಿಕೊಳ್ಳುವ ಉಪಾಯ ಹುಡುಕುವುದು. ಸಾವಿನ ಭಯ, ಎಲ್ಲ ತರಹದ ಹಸಿವು ಹಾಗೂ ಅದನ್ನು ತೃಪ್ತಿಕೊಳಿಸುವುದು--ಇವು ಆಮೇಲೆ ಹುಟ್ಟಿಕೊಂಡದ್ದು. ಆಶ್ಚರ್ಯವೆಂದರೆ, ಆದಿಮಾನವನಿಂದ ಇಂದಿನವರೆಗೂ, ಹಣ್ಣುಹಂಪಲು ತಿನ್ನುತ್ತಿದ್ದ ಕಾಲದಿಂದ ರಾಕೆಟ್ ಉಡಾಯಿಸುವ ಕಾಲದವೆರೆಗೂ ಪರಿಹರಿಸಲಾಗದ ಒಂದೇ ಪ್ರಶ್ನೆಯೆಂದರೆ ಇದುಃ "ನೋವಿನಿಂದ ಭಯವೋ, ಭಯದಿಂದ ನೋವೋ ಎಂಬುದು! ಮನುಷ್ಯ ಇಲ್ಲಿಯವರೆಗೂ ಕೈಗೊಂಡಿರುವ ಎಲ್ಲ ತರಹದ ವೃತ್ತಿ, ಈಗ ಮಾಡುತ್ತಿರುವ ಕೆಲಸಕಾರ್ಯ, ಮುಂದೆ ಮಾಡಲಿರುವ ಕ್ರಿಯಾಕರ್ಮಗಳೆಲ್ಲವೂ ಈ ಭಯ-ನೋವೆಂಬ ಪರಿಹರಿಸಲಾಗದ ವೃತ್ತದಲ್ಲೇ ಬಂಧಿತವಾಗಿದೆ. ಅದನ್ನು ಮೀರಿದವರು ನಾನು ಈ ಮುಂಚೆ ಹೇಳಿದ ’ಭಾಗ್ಯ’ದ ತೂಗುಯ್ಯಾಲೆಯ ನೆಲೆಯಲ್ಲಿರುತ್ತಾರೆ."


     "ಅದನ್ನೇ ಮೋಕ್ಷವೆನ್ನುವುದೆ? ಹಾಗಿದ್ದರೆ ಜನ ಕಲೆಯನ್ನು ಏಕೆ ಸೃಷ್ಟಿಸಬೇಕು ಎಂಬ ಪ್ರಶ್ನೆಯನ್ನೇಕೆ ಯಾವಾಗಲೂ ಕೇಳುತ್ತಿರುತ್ತಾರೆ?"


     "ನೋವು-ಭಯದ ವೃತ್ತ ಮೀರುವ ನೋವಿನ ಪ್ರಯತ್ನದ ಭಯ ಅವರನ್ನು ಕಾಡುತ್ತಿರುತ್ತದೆ. ಅದಕ್ಕೆ. ನೋವು, ದುಃಖವನ್ನು ತಡೆಯುವ ಸಾಮರ್ಥ್ಯ ಪ್ರತಿಯೊಬ್ಬನಲ್ಲೂ, ಅವರವರ ವ್ಯಕ್ತಿತ್ವವನ್ನು ಆಧರಿಸಿ ವಿವಿಧ ಹಂತಗಳಲ್ಲಿರುತ್ತವೆ. ಅದನ್ನೂ ನೋವು ಮೀರಿದರೆ ಅಂತಹವ ಮೊರ್ಛೆ ಬೀಳುತ್ತಾನೆ. ನೋವು ಮೊರ್ಛೆಯನ್ನು ಮೀರುವ ಸ್ಥಿತಿ ತಲುಪಿದಲ್ಲಿ ಆತ ಸಾಯುತ್ತಾನೆ" ಎಂದ.


     "ನಾನಿದನ್ನು ಒಪ್ಪೋಲ್ಲ. ಕಲೆ ಸೃಷ್ಟಿಸಲು ಬೇರೇನೋ ಕಾರಣವಿರುತ್ತದೆ. ಕಾಲವು ಏಕಪ್ರಕಾರವಾಗಿರದೆ ಪ್ರತಿಯೊಬ್ಬನ ದೇಹದಲ್ಲಿರುವ ಜೈವಿಕ-ಗಡಿಯಾರದೊಂದಿಗೆ ಒಡಂಬಡಿಕೆ ಮಾಡಿಕೊಳ್ಳುವ ಇರುವ ಉಪಾಯವೇ ಕಲೆ" ಎಂದೆ. ಸುತ್ತಲೂ ಜನ ನೆರೆದಿದ್ದರು.


     ಕಲಾಭವನದಲ್ಲಿ ಕೆಲವೊಮ್ಮೆ ವಾದಗಳು ಜಗಳಗಳಾಗಿಬಿಡುತ್ತಿದ್ದವು. ಮಾತು ಅತಿಯಾಗಿ--ವಿಪರ್ಯಾಸವೆನ್ನುವಂತೆ--ಮಾತು ಬಿಟ್ಟವರಿದ್ದರು. ಕಲೆ ತಾನಾಗಿ ಮಾತನಾಡಬೇಕು, ಅದಕ್ಕೆ ವಿವರಣೆ ಬೇಕಿಲ್ಲ ಎನ್ನುವವರು ೧೯೯೦ರ ದಶಕದವರೆಗೂ ಬಹಳ ಜನಪ್ರಿಯರಾದ ಕಲಾವಿದರೂ ಇದ್ದರು. ದೃಶ್ಯವನ್ನು ಅಕ್ಷರವನ್ನಾಗಿ ರೂಪಿಸುವುದನ್ನು ಕಲೆಯನ್ನು ಕುರಿತ ಚರ್ಚೆಯೆನ್ನುತ್ತೇವೆ. ೯೦ರ ದಶಕದ ನಂತರ ಮಾತಿಲ್ಲದೆ ಕಲೆಯೇ ಇಲ್ಲವೆನ್ನುವವರೂ ಭಾರತದಲ್ಲಿ ಹುಟ್ಟಿಕೊಂಡರು.//


 

ಲೇಖನ ವರ್ಗ (Category):