Podcastingನ ೭ನೇ ಸಂಚಿಕೆ: ಕೆ ಎಸ್ ನಿಸಾರ್ ಅಹ್ಮದ್ ರವರೊಂದಿಗೆ

To prevent automated spam submissions leave this field empty.
ಸಂದರ್ಶನ ಇಲ್ಲೇ ಕೇಳಿ: 

ಮುನ್ನುಡಿ: ಒಮ್ಮೆ ಅನಂತಮೂರ್ತಿಯವರು "ಇಸ್ಮಾಯಿಲ್ ನಂತೆ ಸಂದರ್ಶನ ಬೇರೊಬ್ಬರು ಮಾಡಿದ್ದಿಲ್ಲ" ಎಂದಿದ್ದರು. ನಾವುಗಳು ನಸುನಕ್ಕು ಸುಮ್ಮನಾಗಿದ್ದೆವು. ಈಗ ಸಂಪದದ ೭ನೇ podcast ಹೊರತರುತ್ತಿರುವ ಸಮಯದಲ್ಲಿ ಪ್ರತಿ ಬಾರಿಯೂ "ಬಹಳ ಒಳ್ಳೆಯ ಪ್ರಶ್ನೆ" ಎಂದು ಶಹಬ್ಬಾಸ್ ಎನಿಸಿಕೊಳ್ಳುವ ಇಸ್ಮಾಯಿಲ್ ಬಗ್ಗೆ ಅನಂತಮೂರ್ತಿಯವರ ಆ ಮಾತು ಉತ್ಪ್ರೇಕ್ಷೆಯೆಂದನಿಸದು. ೭ನೇ ಕಂತು ಸಂಪದವನ್ನು ಸಂಪದವಾಗಿಸಿದ ಇಸ್ಮಾಯಿಲ್, ಓ ಎಲ್ ಎನ್, ಹಾಗೂ ಉಳಿದೆಲ್ಲ ಸ್ನೇಹಿತರಿಗೆ ಮುಡುಪು.

ಗಮನಿಸಿ: ಈ ಸಂಚಿಕೆಯಿಂದ ಪ್ರಾರಂಭಿಸಿ ಸಂದರ್ಶನದ ಆಡಿಯೋ [:http://en.wikipedia.org/wiki/Ogg_Vorbis|ogg vorbis] ಫಾರ್ಮ್ಯಾಟಿನಲ್ಲಿ ಕೂಡ ಲಭ್ಯ. ಈ ಸಂದರ್ಶನದ [:http://sampada.net/article/nisar_interview|ಲಿಖಿತ ರೂಪ ಕೂಡ ಲಭ್ಯವಿದೆ]. ಬರೆಹ ರೂಪಕ್ಕೆ ಇಳಿಸಿದ್ದು. [:http://sampada.net/user/suresh_k|ಸುರೇಶ್ ಕೆ] - ಹರಿ ಪ್ರಸಾದ್ ನಾಡಿಗ್

seperator
Nisar Ahmed

ಹರಿಪ್ರಸಾದ್ ಮತ್ತೊಂದು ಪಾಡ್ ಕ್ಯಾಸ್ಟಿಂಗ್ ಕೂಡಾ ನನ್ನಿಂದಲೇ ಮಾಡಿಸಿಬಿಟ್ಟರು! ಈ ಬಾರಿ ಅವರು ನನ್ನನ್ನು ಸ್ವಾವಲಂಬಿಯಾಗಲು ಪ್ರೇರಪಿಸಿದರು. ಈ ಬಾರಿ ಸಂದರ್ಶಕನೂ ನಾನೇ, ಧ್ವನಿಮುದ್ರಣ ತಂತ್ರಜ್ಞನೂ ನಾನೇ. ದೇವರು ದೊಡ್ಡವನನು (ಅವನಿದ್ದರೆ!). ಜತೆಗೆ ನನ್ನ ಗೆಳೆಯ ಹಾಗೂ ಉದಯವಾಣಿಯಲ್ಲಿ ನನ್ನ ಸಹೋದ್ಯೋಗಿ ಸುರೇಶ್ ಕೆ. ಇದ್ದರು. ನಮ್ಮ ಛಾಯಾಗ್ರಾಹಕ ಡಿ.ಸಿ.ನಾಗೇಶ್ ಇದ್ದರು. ಇಷ್ಟು ಸಾಲದು ಎಂಬಂತೆ ಈ ಟಿವಿ ಕನ್ನಡದಲ್ಲಿ ದುಡಿಯುತ್ತಿರುವ ನಮ್ಮ ಗೆಳೆಯರ ಬಳಗದ ಸದಸ್ಯೆ ಜ್ಯೋತಿ ಇರ್ವತ್ತೂರು ಕೂಡಾ ಜತೆಗೂಡಿದ್ದರು. ಈ ಪಾಡ್ ಕ್ಯಾಸ್ಟಿಂಗ್ ನ ಬಗ್ಗೆ ನಾವ್ಯಾರೂ ಯೋಚಿಸಿರಲಿಲ್ಲ. ಶನಿವಾರ ಬೆಳಿಗ್ಗೆ (16-12-2006) 73ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನಾಧ್ಯಕ್ಷರಾದ ಡಾ.ಕೆ.ಎಸ್. ನಿಸಾರ್ ಅಹಮದ್ ಅವರನ್ನು "ಉದಯವಾಣಿ"ಗಾಗಿ ಸಂದರ್ಶಿಸುವ ಉದ್ದೇಶದಿಂದ ನಾನು ಮತ್ತು ಸುರೇಶ್ ಅವರ ಮನೆಗೆ ಹೊರಟೆವು. ಪದ್ಮನಾಭ ನಗರದಲ್ಲಿರುವ ನಿಸಾರ್ ಅವರ ಮನೆಗೆ ಹೋಗುವ ಮುನ್ನ ದಾರಿ ಕೇಳಲು ಛಾಯಾಗ್ರಾಹಕ ಡಿ.ಸಿ ನಾಗೇಶ್ ಅವರಿಗೆ ಫೋನಾಯಿಸಿದರೆ ಅವರು ಇಲ್ಲೇ ಹತ್ತಿರ ಮೊದಲು ನಮ್ಮ ಮನೆಗೆ ಬನ್ನಿ ಎಂದರು. ನ್ಯಾಷನಲ್ ಕಾಲೇಜು ಫ್ಲೈ ಓವರ್ ಕೆಳಗಿರುವ ಅವನ ಮನೆಯಲ್ಲಿ ಒಳ್ಳೆಯ ಕಾಫೀ ಸಮಾರಾಧನೆಯ ಬಳಿಕೆ ಹೊಸ ಹೊಸ ಐಡಿಯಾಗಳು ಹೊಳೆಯತೊಡಗಿದವು. ಮೊದಲನೆಯದ್ದು ನಿಸಾರ್ ಅವರ ಹೊಸ ಭಂಗಿಯ ಫೋಟೋಗಳನ್ನು ತೆಗೆಸುವುದು. ಈ ಕುರಿತು ಚರ್ಚಿಸುತ್ತಿರುವಾಗಲೇ ಸಂಪದಕ್ಕೊಂದು ಪಾಡ್ ಕ್ಯಾಸ್ಟಿಂಗ್ ಯಾಕಾಗಬಾರದು ಎನಿಸಿತು. ತಕ್ಷಣ ಹರಿಪ್ರಸಾದ್ ಅವರಿಗೆ ಫೋನಾಯಿಸಿದರೆ ಅವರು ಪ್ರಸ್ತಾಪವನ್ನು ಒಪ್ಪಿದರು. ಆದರೆ "ನಾನು ನಿಮಗೆ ಲ್ಯಾಪ್ ಟಾಪ್ ಮತ್ತು ಮೈಕ್ ಕೊಡುತ್ತೇನೆ. ನನಗೆ ಸಂದರ್ಶನಕ್ಕೆ ಬರಲು ಸಾಧ್ಯವಿಲ್ಲ" ಎಂದರು.

Nisar Ahmed

ಈವರೆಗಿನ ಎಲ್ಲಾ ಪಾಡ್ ಕ್ಯಾಸ್ಟಿಂಗ್ ಗಳ ಅವಿಭಾಜ್ಯ ಅಂಗವಾಗಿದ್ದ ಹರಿಪ್ರಸಾದ್ ಅವರನ್ನು ಬಿಟ್ಟು ಹೋಗುವುದಕ್ಕೆ ನಮಗೆ ಮನಸ್ಸಿರಲಿಲ್ಲ. ಆದರೆ ಅವರಿಗೆ ಸಮಯವಿರಲಿಲ್ಲ. ನರಸಿಂಹರಾಜ ಕಾಲೋನಿಯಿಂದ ಪದ್ಮನಾಭ ನಗರಕ್ಕೆ ಲ್ಯಾಪ್ ಟಾಪ್ ಹೊತ್ತು ತಂದ ಹರಿ ತಕ್ಷಣ ಹಿಂದಿರುಗಿದರು. ಸುರೇಶ್ ಮತ್ತು ಜ್ಯೋತಿ ನನಗೆ ಬೆಂಬಲವಾಗಿ ನಿಂತು ಯಾವ ಪ್ರಶ್ನೆಗಳನ್ನು ಕೇಳಬಹುದೆಂಬುದನ್ನು ಸೂಚಿಸಿದರು. ಪಾಡ್ ಕ್ಯಾಸ್ಟಿಂಗ್ ಗೆ ಮಾನಸಿಕವಾಗಿ ಸಿದ್ಧನಾಗಿ ಇರದಿದ್ದ ನಾನು ಹಲವು ಪ್ರಶ್ನೆಗಳನ್ನು ತಡವರಿಸುತ್ತಾ ತಪ್ಪು ತಪ್ಪಾಗಿಯೇ ಕೇಳಿದ. ಹರಿಪ್ರಸಾದ್ ಅವರ ಸಂಪಾದನಾ ಕೌಶಲ್ಯದಲ್ಲಿ ಈ ತಪ್ಪುಗಳು ಕೆಲಮಟ್ಟಿಗೆ ಮುಚ್ಚಿ ಹೋಗಿವೆ. ನಿಸಾರ್ ರಲ್ಲಿ ಒಂದು ಕವನ ವಾಚಿಸುವಂತೆ ಕೇಳಿಕೊಳ್ಳಬಹುದಿತ್ತು ಎಂಬುದು ಈಗ ನೆನಪಾಗುತ್ತಿದೆ. ಕೆಲವೊಮ್ಮೆ ಇತಿಹಾಸವೂ ಪಾಠ ಕಲಿಸುವುದಿಲ್ಲ ಎಂಬುದಕ್ಕೆ ಇದೂ ಒಂದು ನಿದರ್ಶನವೇನೋ? ಕನ್ನಡ-ಇಂಗ್ಲಿಷ್ ಮಾಧ್ಯಮ ವಿವಾದಕ್ಕೆ ಸಂಬಂಧಿಸಿದಂತೆ ಈ ಸಂದರ್ಶನದಲ್ಲಿ ಬಹಳ ಚೆನ್ನಾಗಿ ಮಾತನಾಡಿದ್ದಾರೆ ಎಂಬುದು ನನ್ನ ಸ್ವಂತ ಅನಿಸಿಕೆ. ಹಾಗೆಯೇ ವಿಜ್ಞಾನ ಬರೆವಣಿಗೆ, ಮುಸ್ಲಿಂ ಸಂವೇದನೆಯಂಥ ವಿಷಯಗಳ ಬಗ್ಗೆಯೂ ಮುಕ್ತವಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 'ಸಂಪದ' ಬಳದ ಪ್ರಯತ್ನಕ್ಕೆ ಅವರು ವಿಶೇಷಾಭಿನಂದನೆಗಳನ್ನು ತಿಳಿಸಿದ್ದಾರೆ. ಪಾಡ್ ಕ್ಯಾಸ್ಟಿಂಗ್ ಕೇಳಿ ನಿಮಗಿಷ್ಟವಾಯಿತೆ ಇಲ್ಲವೇ ಎಂದು ತಿಳಿಸಿ. ಎಲ್ಲದಕ್ಕಿಂತ ಮುಖ್ಯವಾಗಿ ನಿಸಾರ್ ಅವರ ವ್ಯಕ್ತಪಡಿಸಿರುವ ಹಲವು ವಿಷಯಗಳು ಕನ್ನಡದ ಬಗ್ಗೆ ಕಾಳಜಿಯುಳ್ಳ ಎಲ್ಲರನ್ನೂ ಚಿಂತನೆಗೆ ಹಚ್ಚುವಂಥವು. ನಿಮ್ಮ ನಿಮ್ಮ ಚಿಂತನೆಗಳನ್ನು ಸಂಪದದಲ್ಲಿ ದಾಖಲಿಸಿ.
> ಸಂದರ್ಶನದ ಆಡಿಯೋ ಕೇಳಲು ಇಲ್ಲಿ ಕ್ಲಿಕ್ ಮಾಡಿ. mp3 file (೪೫ MB) > ಸಂದರ್ಶನದ ಆಡಿಯೋ ಕೇಳಲು ಇಲ್ಲಿ ಕ್ಲಿಕ್ ಮಾಡಿ. Ogg Vorbis file (೨೫ MB)

Nisar Ahmed
ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಸಂದರ್ಶನ ಚೆನ್ನಾಗಿ ಮೂಡಿಬಂದಿದೆ..ನಾನು ಅವರ ಸಂದರ್ಶನವನ್ನು ಟೀವಿಗಳಲ್ಲಿ ನೋಡಿದ್ದೇನೆ..ಆದರೆ ಅವರನ್ನು ಈ ಸಂದರ್ಶನದಲ್ಲಿ ತಿಳ್ಕೋಂಡಷ್ಟು, ಬೇರೆ ಯಾವುದೇ ಸಂದರ್ಶನಲ್ಲಿ ತಿಳ್ಕೊಳ್ಳಿಕ್ಕೆ ಸಾಧ್ಯವಾಗಲಿಲ್ಲ..ಅವರ ಕಾವ್ಯದ ಬಗ್ಗೆಗಿನ ಮಾತು, ಮುಸ್ಲೀಮ್ ಸಂವೇದನಶೀಲತೆಯ ಬಗ್ಗೆ ಹೇಳಿದ್ದು,ಕನ್ನಡದಲ್ಲಿ ವಿಜ್ಝಾನ ಸಾಹಿತ್ಯ ಮತ್ತು ಕನ್ನಡದ ಬಗ್ಗೆಗಿನ ಕಾಳಜಿ- ಇವೆಲ್ಲವುಗಳ ಬಗ್ಗೆ ಮನ ಬಿಚ್ಚಿ ಮಾತನಾಡಿದ್ದಾರೆ..ಧನ್ಯವಾದಗಳು..

ತುಂಬ ಚನ್ನಾಗಿದೆ. ನಿತ್ಯೊತ್ಸವ ಕವಿತೆ ಅಷ್ಟೆ ಮದುರವಾಗಿದೆ, ಹಾಗು ನಮ್ಮ ಕಣ್ಣು ತೆರೆಸುತ್ತದೆ.

ಈ ಸಂದರ್ಶನ ನಮಗೆ ತಲುಪಿಸಿದಕ್ಕೆ ಸಂಪದ ಬಳಗಕ್ಕೆ ತುಂಬ ಧನ್ಯವಾದಗಳು.

ಈ ರೀತಿ ಸಂದರ್ಶನಗಳು ಹೆಚ್ಚು ಬರಲಿ ಎಂದು ಆಶಿಸುತ್ತೆನೆ.

-ನಿಮ್ಮ ಬೆಂಬಿಡದ ಬೇತಾಳ .....

ನಾನು ಸಂಪದದ ಬಗ್ಗೆ ತಿಳಿದುಕೊಳ್ಳುತ್ತಿರುವುದು ೩-೪ ದಿನದಿಂದಷ್ಟೆ. ಒಂದು ಕಡೆಯಿಂದ ಗಮನಿಸುತ್ತಿದ್ದೇನೆ ನನಗೆ ಏನೇನೋ ವಿಷೇಶಗಳು ಕಾಣಿಸುತ್ತಿವೆ. ಸಧ್ಯಕ್ಕೆ ನಮ್ಮ ನಿಸಾರ್ ಅಹ್ಮದ್ ರವರ ಸಂದರ್ಶನ ಕೇಳಿ ಮನಸ್ಸು ಪ್ರಫುಲ್ಲ. ನನ್ನ ಊರಿನಲ್ಲಿ ಸ್ಪೀಡ್ ಇಂಟರ್ನೆಟ್ ಸೌಲಭ್ಯ ಇಲ್ಲ. ಆ ಕಾರಣಕ್ಕೋ ಏನೋ ನಾನು ಸಂದರ್ಶನ ಕೇಳಲು ಶುರು ಮಾಡಿದಾಗ ನಿಂತು ನಿಂತು ಬರ್ತಿತ್ತು ಮತ್ತು ಏನೂ ಸರಿಯಾಗಿ ಅರ್ಥ ಆಗ್ತಿರಲಿಲ್ಲ. ಅಮೇಲೆ ಅದರ ಲಿಂಕ್ ಕಾಪಿ ಮಾಡಿಕೊಂಡು ಪೂರ್ತಿ ಸಂದರ್ಶನವನ್ನ ನನ್ನ ಕಂಪ್ಯೂಟರ್ ಗೆ ಡೌನ್ ಲೋಡ್ ಮಾಡಿಕೊಂಡು ಕೇಳಿದೆ. ನೀವೆಲ್ಲರೂ ಕೇಳೇ ಇರ್ತೀರಿ. ಏನು ಹೇಳಲಿ ಮನಸ್ಸು ಮೂಕ ಮೂಕ. ಇದನ್ನು ಸಾಧ್ಯವಾಗಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು. ನೀವು ಆಸೆ ಅತಿಯಾಯ್ತು ಅಂದರೂ ಪರವಾಗಿಲ್ಲ ಹೇಳುಬಿಡ್ತೇನೆ ಸಂದರ್ಶನ ಇನ್ನೂ ದೊಡ್ಡದಾಗಿರಬೇಕಿತ್ತು(ಸುಮಾರು ಒಂದೂವರೆ ಗಂಟೆ). ಈ ಸಂದರ್ಶನವನ್ನ ಇನ್ನೂ ಕೇಳದೆ ಇರುವವರು ದಯವಿಟ್ಟು ಕೇಳಿ.

-ಧ್ರುವ

 

ಈಗ ತಾನೆ ಶ್ರೀ ನಿಸ್ಸಾರ್ ರವರ ಜೊತೆಗಿನ ಸಂದರ್ಶನ ಕೇಳಿದೆ. ಮೊಟ್ಟಮೊದಲು ಈ ಮಾಧ್ಯಮವನ್ನು ಇಷ್ಟು ಸುಂದರವಾಗಿ ಬಳಸಿಕೊಂಡು ನಮಗೆ. ನಾವೇ ನಿಸ್ಸಾರ್ ಜೊತೆಗಿದ್ದಂತೆ ಭಾವನೆ ಮೂಡಿಸುವಂತೆ ನೀಡಿರುವ ಸಂದರ್ಶನಕ್ಕೆ ಧನ್ಯವಾದಗಳು. ಅಂತೆಯೇ ಕನ್ನಡವನ್ನು ಉಳಿಸುವ ಬೆಳಸುವ ಬಗ್ಗೆ ಅವರ ನಿಖರವಾದ ಅಭಿಪ್ರಾಯಗಳನ್ನು ಬಹಳ ಗಂಭೀರವಾಗಿ ಪರಿಗಣಿಸಿ, ಆ ಮಾರ್ಗದಲ್ಲಿ ನಮ್ಮ ಯುವಜನರು ಮುಂದುವರಿದರೆ ಕನ್ನಡದ ಏಳಿಗೆ ಹಾಗೂ ಕನ್ನಡಿಗರ ಏಳಿಗೆಯಾಗುವುದರಲ್ಲಿ ಸಂದೇಹವಿಲ್ಲ.

ಸಿರಿಗನ್ನಂಡಂ ಗೆಲ್ಗೆ

ನಿರ್ಮಲ

 

ಮಾನ್ಯರೇ,

ನಾನು ಇತ್ತೀಚಿಗಷ್ಟೆ 'ಸ೦ಪದ' ದ ಸದಸ್ಯನಾಗಿದ್ದು, podcasting ನ ಎಲ್ಲ ಏಳೂ ಸ೦ದರ್ಶನಗಳನ್ನು download ಮಾಡಿಕೊ೦ಡು ಕೇಳಿದ್ದೇನೆ, ಎಲ್ಲವೂ ಚೆನ್ನಾಗಿ ಮೂಡಿ ಬ೦ದಿವೆ.

ಸ೦ದರ್ಶನದ ಜೊತೆಗೆ, ಸ೦ದರ್ಶಕರ ಕಿರುಪರಿಚಯ, ಅವರ ಸ೦ಪರ್ಕ ವಿವರ(ಅವರ ಒಪ್ಪಿಗೆ ಇದ್ದಲ್ಲಿ) ಇತ್ಯಾದಿಗಳನ್ನೂ ಕೊಟ್ಟರೆ ಒಳ್ಳೆಯದು. ಅಲ್ಲದೆ, ನೀವು photo ಗಳನ್ನು ಕೊಡುವಾಗ, ಫೊಟೊದಲ್ಲಿಯ ವ್ಯಕ್ತಿಗಳ ಅನುಕ್ರಮ ಹೆಸರುಗಳನ್ನು ಫೊಟೊದಡಿ ನಮೂದಿಸಿದರೆ ಹೆಚ್ಚು ಅನುಕೂಲ.

ಧನ್ಯವಾದಗಳೊ೦ದಿಗೆ,

-ಪಿಟಿ

ಸಂದರ್ಶನಾರ್ಥಿ, ಸಂದರ್ಶಕ ಇವೆಲ್ಲಾ ಗೊಂದಗಗಳಿಗಿಂತ, ಮಾತಾಡಿದವರು(interviewee), ಮಾತಾಡಿಸಿದವರು(interviewer), ಮಾತುಕತೆ (interview) ಅಂದರೆ ಆಯ್ತು, ಸಣ್ಣ ಮಕ್ಕಳಿಂದ ಹಿಡಿದು ಮುದುಕರ ವರೆಗೆ ಸರಳವಾಗಿ ತಿಳಿಯುತ್ತದೆ.

'ಮಾತುಕತೆ' ಎಂಬುದನ್ನು interview, conversation ಎರಡಕ್ಕೂ ಬಳಸಬಹುದು. ಹರುವುಳ್ಳ ನೋಟದಲ್ಲಿ interview, conversation ಎರಡರ ತಿಳಿವೂ ಒಂದೇ.

mp3 file (೪೫ MB)
Ogg Vorbis file (೨೫ MB)
ಹೀಗೆ ಅಪಾರ ಗಾತ್ರದ ಕಡತಗಳನ್ನು ನೋಡಿದರೆ 3gp/amr formatನಲ್ಲಿ ಪ್ರಕಟಿಸಿದ್ದರೆ ಅನುಕೂಲವಿತ್ತೇನೊ ಅನಿಸಿತು. ಸಮಯ ಹಾಗೂ ಸಂಗ್ರಹಣೋಪಾಧಿಯ ಗಾತ್ರವನ್ನು ಕಡಿಮೆಗೊಳಿಸಬಹುದಾಗಿತ್ತು.

ನಮಸ್ಕಾರಗಳು ನಾನು ’ಸಂಪದ’ವನ್ನು ತಿಳಿಯುತ್ತಿರುವುದು ಇತ್ತೀಚೆಗಶ್ಟೆ. ಈಗ ತಾನೆ ಕವಿ ಪ್ರೊ|| ನಿಸ್ಸಾರ್ ಅಹ್ಮದ್ ರವರ ಚೆನ್ನುಡಿಗಳನ್ನು ಕೇಳಿ ಪುಳಕಾಂಕಿತನಾದೆ. ಸಂದರ್ಶನ ಬಹಳ ಅರ್ಥಪೂರ್ಣವಾಗಿ ಒಡಮೂಡಿದೆ. ಕೇಳುತ್ತಿದ್ದ ಪ್ರಶ್ನೆಗಳೂ, ನೀಡುತ್ತಿದ್ದ ಪ್ರತಿಕ್ರಿಯೆಗಳೂ ಸಾಂದರ್ಭಿಕವಾಗಿದ್ದವು ಮತ್ತು ವಿಚಾರವಂತಿಕೆಯಿಂದ ಕೂಡಿದ್ದವು. ಇಂತಹ ಸುವರ್ಣಾವಕಾಶ ಒದಗಿಸಿದ್ದಕ್ಕಾಗಿ ಧನ್ಯವಾದಗಳು.

ಸಂದರ್ಶನ ಬಹಳ ಚೆನ್ನಾಗಿ ಮೂಡಿ ಬಂದಿದೆ. ನಿಸ್ಸಾರ್ ಅಹಮದ್ ಅವರ ಮಾತುಗಳು ಬಹಳ ಸ್ವಾರಸ್ಯಕರವಾಗಿ ಮೆಚ್ಚುಗೆಯಾಯಿತು. ಸಂದರ್ಶನ ನಡೆಸಿಕೊಟ್ಟವರು ತೂರಿದ ಪ್ರಶ್ನೆಗಳು ಅಮೂಲ್ಯವಾಗಿತ್ತು. ಸಂಪದ ಮತ್ತು ಈ ಸಂದರ್ಶನಕ್ಕೆ ಕಾರಣರಾದ ಎಲ್ಲರಿಗೂ ಅಬಿನಂದನೆಗಳು ! ನಿಸ್ಸಾರ್ ಅವರು, ಈ ವಯಸ್ಸಿನಲ್ಲೂ ಎಷ್ಟು ಹೆಮ್ಮೆ , ಹುಮ್ಮಸ್ಸಿನಿಂದ ಕನ್ನಡ ಭಾಷೆಯ ಸತ್ವ, ಸತ್ಯಗಳನ್ನು ಇಲ್ಲಿ ಹಂಚ್ಕೊಂಡಿದ್ದಾರೆ, ಎನ್ನುವುದು ಕನ್ನಡಿಗರಿಗೆಲ್ಲ ಹೆಮ್ಮೆಯ ವಿಷಯವಾಗಿದೆ. ~ಮೀನಾ