ಸೀಳು ವ್ಯಕ್ತಿತ್ವದ ಕ್ಯಾಂಪಸ್ -- ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆಃ ಭಾಗ ೧೧

To prevent automated spam submissions leave this field empty.


(೩೭)


     ಸೀಳು ವ್ಯಕ್ತಿತ್ವಗಳಿಗೆ ಕಾರಣ ಏಕತಾನತೆ. ಶಾಂತಿನಿಕೇತನದಿಂದ ಕೊಲ್ಕೊತ್ತಕ್ಕೆ ನಾಲ್ಕೂವರೆ ಗಂಟೆ ಪಯಣ ಹಾಗೂ ದಿನವೊಂದಕ್ಕೆ ಖರ್ಚು ಇನ್ನೂರು ಮುನ್ನೂರು ರೂಪಾಯಿ--೧೯೯೦ರಲ್ಲಿ, ಕಲ್ಕತ್ತಕ್ಕೆ ಒಂದು ದಿನದ ಮಟ್ಟಿಗೆ ಹೋಗಿಬರಲು. ಕೊಲ್ಕೊತ್ತಕ್ಕಂತೂ ಆಗ ಹೋಗಲು ಸಾಧ್ಯವೇ ಇರುತ್ತಿರಲಿಲ್ಲ. ಏಕೆಂದರೆ ಆಗಿನ್ನೂ ’ಕೊಲ್ಕೊತ್ತ’ ಎಂಬ ನಾಮಕರಣ ಮಾಡಿರಲಿಲ್ಲ!


     ಆಗ ನನ್ನ ಹಾಸ್ಟೆಲ್ಲಿನ ರೂಮಿನ ಬಾಡಿಗೆ ಹತ್ತು ರೂಪಾಯಿ, ಕಾಲೇಜು ಫೀಝು ಹತ್ತು ರೂ ಮತ್ತು ಊಟದ ಮೆಸ್‍ನ ತಿಂಗಳ ಕಂತು ನೂರ ಅರವತ್ತು ರೂಗಳು. ತಿಂಗಳಿಗೆ ಒಟ್ಟು ನೂರ ಎಂಬತ್ತು ರೂಗಳು--ಖರ್ಚು ಹಾಗೂ ನನಗೆ ಬರುತ್ತಿದ್ದ ವಿಶ್ವವಿದ್ಯಾಲಯದ ತಿಂಗಳ ಸ್ಕಾಲರ‍್ಶಿಪ್! ಬೇರೇನೂ ಖರ್ಚಿಲ್ಲದಿದ್ದಲ್ಲಿ ಅಷ್ಟರಲ್ಲೇ ಬದುಕಿಬಿಡಬಹುದಿತ್ತು. ಕೇರಳದ ನನ್ನ ಗೆಳೆಯರನೇಕರು ಅಷ್ಟರಲ್ಲೇ ತಿಂಗಳಿಗೊಪ್ಪತ್ತಿನಂತೆ, ವರ್ಷಾನುಗಟ್ಟಲೆ ಬದುಕಿದ್ದಿದೆ!


    ಬೆಳಿಗ್ಗೆ ಹತ್ತುಗಂಟೆಗೆ ಔಪಚಾರಿಕವಾಗಿ ತರಗತಿಗಳೆಲ್ಲ ಬಂದ್ ಆಗುತ್ತಿದ್ದವು. ಆಮೇಲೆ ವಿದ್ಯಾರ್ಥಿಗಳುಂಟು, ಗ್ರಂಥಾಲಯಗಳುಂಟು--ಸ್ಟೂಡಿಯೊಗಳುಂಟು. ಇಪ್ಪತ್ತನಾಲ್ಕೂ ಗಂಟೆ ಕಾಲ ಕಲಾಕೃತಿ ರಚಿಸುತ್ತ ಕುಳಿತುಕೊಳ್ಳಲು ಅದೇನು ಐಟಿ ಬಿಟಿ ಕೆಲಸ ಕೆಟ್ಟುಹೋಯಿತೆ! ಮೂಡು ಬಂದಾಗ ಕೆಲಸ ಮಾಡುತ್ತಿದ್ದರು ವಿದ್ಯಾರ್ಥಿಗಳು. ಆದರೆ ಹುಡುಗಿಯರ ಕಥೆ ಹಾಗಲ್ಲವಲ್ಲ. ಅವರುಗಳು ಹಾಸ್ಟೆಲ್ಲಿನಿಂದ ಬೆಳಿಗ್ಗೆ ಐದು ಗಂಟೆಯ ನಂತರವೇ ಹೊರಬಂದು ರಾತ್ರಿ ಒಂಬತ್ತರ ಒಳಗೆ, ಒಳಗಿನಿಂದ ಬೀಗ ಹಾಕುವ ಗೂಡು ಸೇರಿಕೊಳ್ಳಬೇಕಾಗುತ್ತಿತ್ತು.


     ಹುಡುಗಿಯರ ಹಾಸ್ಟೆಲಿನ ’ಒಳಗಿನ’ ಕಥೆಗಳನ್ನು ಗೆಳತಿಯರು ಹೇಳುವುದನ್ನು ಬೆಳಗಿನ ಕ್ಯಾಂಟೀನ್ ಮಾಮಾನ ಬ್ರೇಡ್ಡಿನೊಳಗಿನ ಜಾಮೂನು, ಗುಗುನಿಗಳೊಂದಿಗೆ ನಿಯಮಿತವಾಗಿ ನಂಚಿಕೊಳ್ಳುತ್ತಿದ್ದೆವು. ಹುಡುಗಿಯರಿಗೆ ಮಾತಿನ ಚಟವಾದರೆ, ಹುಡುಗರಿಗೆ ಕೇಳುವ ಚಟ. ಕೊರೆವ ಚಳಿಗಾಲದ ದೆಸೆಯಿಂದ ಕೊರೆಯುವ ಗೆಳತಿಯರು ಬರಲಿಲ್ಲವೆಂದಿಟ್ಟುಕೊಳ್ಳಿಃ ಆಗ ಯಾರಾದರೊಬ್ಬ ವಾಚಾಳಿ ಹುಡುಗ ಗೆಳತಿಯ ಹಾವಭಾವದ ಅನುಕರಣೆಯೊಂದಿಗೆ ನೆನ್ನೆಯದೇ ಕಥೆಯನ್ನು ರಿ-ಟೆಲಿಕಾಸ್ಟ್ ಮಾಡುತ್ತಿದ್ದ. ಅದೇ ರೀತಿ ಹುಡುಗರ ಕಥೆಗಳನ್ನು ಒಬ್ಬ ಹುಡುಗಿ ಹುಡುಗಿಯರ ಹಾಸ್ಟೆಲಿನಲ್ಲಿ, ರಾತ್ರಿಯ ಹೊತ್ತು ಟೆಲಿಕಾಸ್ಟ್ ಮಾಡುತ್ತಿದ್ದಳು, ಎಂದು ಮಾರನೇ ದಿನ ಹುಡುಗಿಯರೆಲ್ಲ ಎಲ್ಲ ಹುಡುಗರಿಗೂ ಹೇಳಿತ್ತಿದ್ದರು. ಅಂದರೆ ಹುಡುಗರ ಕಥೆಯೂ ಕೊರೆವ ಹುಡುಗಿಯರ ಕಥೆಗಳಾಗಿ ರೂಪಾಂತರಗೊಳ್ಳುತ್ತಿದ್ದುದು, ಮಹಿಳಾ ಉಪಾಧ್ಯಾಯರುಗಳೇ ಇಲ್ಲದ ಕಲಾಭವನದ ವಿಶೇಷವಾಗಿತ್ತು!     ಬೆಂಗಳೂರಿನ ಸಮತಟ್ಟು ವಾತಾವರಣದಲ್ಲಿ ಬೆಳೆದವ ನಾನು, ಶುದ್ಧ ಕನ್ನಡಿಗರ ಹಾಗೆಃ ಆರಕ್ಕೂ ಏರದೆ ಮೂರಕ್ಕೂ ಇಳಿಯದ ದೇಹ ಪ್ರಕೃತಿ. ಅಲ್ಲಿನ ಕೊರೆವ ಚಳಿಯು ನಮ್ಮ ಸೀಳು ವ್ಯಕ್ತಿತ್ವಗಳನ್ನು ಹತ್ತಾರು ಕೋನಗಳಲ್ಲಿ ಸೀಳಿಬಿಡುತ್ತಿತ್ತು. ಜೊತೆಗೆ ಯಾವುದೇ ವಿಶೇಷ ಸಂಧರ್ಭವಿರಲಿ, ಡೋಲು, ಅಸ್ಸಾಮಿನ "ಬಾಗುರಂಬ" ಹಾಡು, ಸಂತಾಲಿಗಳ "ಸಿಂಕುಮಕೂರಾಕೇ ಕುಯೂ ಕುಯೂ ಕೇ" ಹಾಡು. ಮತ್ತು ಅಂತಹ ಪ್ರತಿ ಸಂದರ್ಭದ ಆರಂಭದಲ್ಲಿ ಮತ್ತು ಅಂತ್ಯದಲ್ಲಿ "ಆ ಆ ಒಮದೇರ್ ಶಾಂತಿನಿಕೊತನ್" (ನಮ್ಮ ಶಾಂತಿನಿಕೇತನ) ಹಾಡುಗಳ ಏಕತಾನತೆಯ ಕಡ್ಡಾಯ ಬೇರೆ! ಇವೆಲ್ಲಕ್ಕೂ ಕೆಳಗೆ ಗೀಟು ಹಾಕಿದಂತೆ ರೊಬಿಂದರ್ ಸಂಗೀತವನ್ನು ಸ್ಲೋ-ಮೋಷನ್ನಿನಲ್ಲಿ ಅಧ್ಬುತವಾಗಿ ಹಾಡುತ್ತಿದ್ದರು ಬೆಂಗಾಲಿ ವಿದ್ಯಾರ್ಥಿಗಳು.


     ಸಂಜೆ ಕಡ್ಡಾಯವಾಗಿ, ಪ್ರತಿದಿನ ಮೂರರಿಂದ ಐದುಗಂಟೆಗಳ ಕಾಲ ಲೋಡ್ ಶೆಡ್ಡಿಂಗ್. ಮಧ್ಯಾಹ್ನದ ಊಟದ ನಂತರ ಅಷ್ಟೇ ಕಡ್ಡಾಯವಾದ ಸಿಯೆಸ್ಟ (ಮಧ್ಯಾಹ್ನದ ನಿದ್ರೆ). ಸಂಜೆ ಕರೆಂಟ್ ಇಲ್ಲದ ಕಗ್ಗತಲಿನಿಂದಾಗಿ ಪ್ರೇಮಿಗಳು ಹೆಚ್ಚಾದರೋ ಅಥವ ಪ್ರೇಮಿಗಳೇ ಮ್ಯಾಚಿ-ಫಿಕ್ಸಿಂಗ್ ಮಾಡಿ ಲೋಡ್-ಶೆಡ್ ಮಾಡಿಸುತ್ತಿದ್ದರೋ ತಿಳಿಯದು. ಅಲ್ಲಲ್ಲಿ ಮರಗಳ ಕೆಳಗೆ ಎರಡು ಭಿನ್ನ ಭಿನ್ನ ಲಿಂಗೀಯ ದೇಹಗಳ ಹೊರರೇಖೆಗಳು ಕಾಣುತ್ತಿದ್ದವು--ಕಣ್ಣಲ್ಲಿ ಕಣ್ಣಿಟ್ಟು ನೋಡಿದಲ್ಲಿ ಮಾತ್ರ. ಅಂತಹ ಎರಡು ಆಕಾರಗಳ ನಡುವೆ ಆರಂಭದಲ್ಲಿ ಇರುತ್ತಿದ್ದ ಕಪ್ಪುನೀಲಿ ಆಕಾಶವು ಕ್ರಮೇಣ ಮಾಯವಾಗಿರುತ್ತುತ್ತು, ಟಾಗೂರರ ಚಿತ್ರಗಳಂತೆ! ದೃಶ್ಯಕಲೆಯ ಆ ಸಂಸ್ಥೆಯಲ್ಲಿ ಹೇಳಿ ಮಾಡಿಸಿದಂತಹ ಆರೋಗ್ಯಪೂರ್ಣ ಅಥವ ಪೂರ್ಣ ಆರೋಗ್ಯದ ಕಣ್ಣಿನ ಸ್ಥಿರತೆಯ ಪರೀಕ್ಷೆ ಅಲ್ಲಿ ಆಗುತ್ತಿತ್ತು. ಅಂದ ಹಾಗೆ ಗೆಳತಿಯರಿಲ್ಲದ, ಗೆಳೆಯರಿಲ್ಲದ ವಿದ್ಯಾರ್ಥಿಗಳಿಗೆ ಮಾತ್ರ ಇಂತಹ ಕಣ್ಣಿನ ಕವಾಯತಕ್ಕೆ ಅನುಮತಿ ಇರುತ್ತಿತ್ತು! ಇದ್ದವರಾದಲ್ಲಿ ಇಲ್ಲದವರ ಹಾಗೆ ಇರಬೇಕಾದರು ಏಕೆ ಹೇಳಿ! ಬ್ಲಾಕ್-ಹೌಸಿನ (ರಾಮ್‍ಕಿಂಕರ್ ವಿದ್ಯಾರ್ಥಿಗಳೊಂದಿಗೆ ೧೯೩೦ರ ದಶಕದಲ್ಲಿ ಭಿತ್ತಿಶಿಲ್ಪಗಳಿಂದ ಶೃಂಗರಿಸಿದ ಸೀನಿಯರ್ ಹುಡುಗರ ಹಾಸ್ಟೆಲ್. ಒಬ್ಬೊಬ್ಬರಿಗೆ ಒಂದೊಂದು ರೂಮುಗಳು ದೊರಕುತ್ತಿದ್ದುದು ಚೀಟಿ ವ್ಯವಸ್ಥೆಯಿಂದಾಗಿ) ಹೊರಗೆ ಬೆಳಗಿನ ಹೊತ್ತು ಗರ್ಭನಿರೋಧಕಗಳ ರಂಗೋಲಿ!     ಎಲ್ಲ ವಯಸ್ಸಿನ ವಿದ್ಯಾರ್ಥಿಗಳೂ ಅಲ್ಲಿರುತ್ತಿದ್ದರು. ಕೆಲವೊಮ್ಮೆ ಇಬ್ಬಿಬ್ಬರು ಬಾಯ್ ಅಥವ ಗರ್ಲ್ ಫ್ರೆಂಡ್‍ಗಳಿದ್ದವರಿರುತ್ತಿದ್ದರು. ಮತ್ತೂ ಆಶ್ಚರ್ಯವೆಂದರೆ (ಆಗ, ಈಗಲ್ಲ) ಮೂವರೂ ಒಟ್ಟಾಗಿ ಸೈಕಲ್ ತಳ್ಳಿಕೊಂಡು ಹೋಗುವುದು ಮೋಜಿನದಾಗಿರುತ್ತುತ್ತು. ’ಅವಳದನ್ನು ಇವಳಿಗೆ ತೊಡಿಸಿ ನೊಡುವ’ ಕನ್ನಡ ಕವಿಯ ಆಸೆ ಬೆಂಗಾಲದಲ್ಲಿ ಪೂರೈಸುತ್ತಿದ್ದುದು ಹೀಗೆ!


     ತಮಾಷೆಯಾಗಿರುತ್ತಿದ್ದ ಸಂಬಂಧಗಳು ಕೆಲವೊಮ್ಮೆ ಗಂಭೀರ ಸ್ವರೂಪ ತಾಳಿಬಿಡುತ್ತಿತ್ತು. ಸಹಜವಾದ ಸಂಬಂಧದ ಬುದ್ಧನ ಮಧ್ಯಮ ಮಾರ್ಗವೆಂಬುದೇ ಅಂತಹವುಗಳಲ್ಲಿ ಇರುತ್ತಿರಲಿಲ್ಲ. ಆಗಿನ ಇದೊಂದು ಘಟನೆಯನ್ನು ಗಮನಿಸಿಃ                                                                       (೩೮)


     ಹುಡುಗಿಯರ ಹಾಸ್ಟೆಲ್ಲಿನ ಇಬ್ಬರಿಗಾಗಿ ಇದ್ದ ರೂಮೊಂದರಲ್ಲಿ ವಿದ್ಯಾರ್ಥಿನಿಯೊಬ್ಬಳು ಬಂದು ನೋಡುತ್ತಾಳೆಃ ನೇಣು ಹಾಕಿಕೊಳ್ಳಲು ಬೇಕಾದುದೆಲ್ಲವೂ ಸ್ಟುಡಿಯೋ ಸೆಟ್ಟಿಂಗಿನಂತೆ ತಯಾರಾಗಿ ಕುಳಿತಿದೆ, ಒಳಗಡೆ! ಕುರ್ಚಿಗಳು ನಿಂತಿರುತ್ತವೋ ಕುಳಿತಿರುತ್ತವೋ ಇಂದಿಗೂ ನನಗೆ ತಿಳಿಯದು. ಆದರೆ ಅಲ್ಲಿ, ಮಂಚದ ಮೇಲೊಂದು ಕುರ್ಚಿಯ ಮೇಲೊಂದು ಸ್ಟೂಲಿನ ಮೇಲೆ, ಸ್ವಲ್ಪ ದೂರದಲ್ಲೆ ನೇಣಿನ ಹಗ್ಗ ತೂಗಾಡುತ್ತಿದೆ. ಆದರೆ ಎಲ್ಲವನ್ನು ತಯಾರಿ ಮಾಡಿಟ್ಟ ಹುಡುಗಿ ಮಾತ್ರ ಒಂದು ಆತ್ಮಹತ್ಯೆಯ ಚೀಟಿ ಬಿಟ್ಟು ಎಲ್ಲಿಯೋ ಹೊರಗೋಗಿಬಿಟ್ಟಿದ್ದಾಳೆ.


      "ನನ್ನ ಸಾವಿಗೆ ನನ್ನ ಕ್ಲಾಸ್‍ಮೆಟ್ ಪ್ರೇಮಿಯೂ ಕಾರಣನಲ್ಲ, ನನ್ನ ಸೀನಿಯರ್ ಮದುವಣಿಗನೂ ಕಾರಣವಲ್ಲ" ಎಂದು. ಚೀಟಿಯೊಂದಿಗೆ ಮತ್ತು ಇತರೆ ಗೆಳತಿಯರೊಂದಿಗೆ ಆ ಕೋಣೆಯ ಸಹವಾಸಿ ಹಾಸ್ಟೆಲ್ಲಿನ ವಾರ್ಡನ್‍ನ ರೂಮಿಗೆ ಹೋದರೆ, ಆಕೆ "ತಡೆಯಿರಿ, ಸೀರಿಯಲ್ ಮುಗಿಯಲಿ. ನಿಮ್ಮದೆಲ್ಲ ಇದ್ದದ್ದೇ" ಎಂದು ದೂರದರ್ಶನದೊಳಗೇ ಹೋಗಿ ಕುಳಿತುಬಿಟ್ಟಿದ್ದಾಳೆ ವಾರ್ಡನ್ ದೀದಿ! ಹದಿನೈದು ನಿಮಿಷ ತಡೆದು, ಜಾಹಿರಾತು ಬರುವ ಕಾಲಕ್ಕೆ ಮತ್ತೆ ಹುಡುಗಿಯರು ಪತ್ರ ತಂದು ತೋರಿಸಲು ಪ್ರಯತ್ನಿಸಿದ್ದಾರೆ. ಧಾರಾವಾಹಿ ಇನ್ನೂ ಉಳಿದಿರುವುದರಿಂದ "ಮತ್ತೆ ತಡೆಯಿರಿ’ ಎಂದ ದೀದಿ ಕಾರಣವನ್ನೂ ಕೇಳಲಿಲ್ಲ.


     "ಅರ್ಜೆಂಟ್ ದೀದೀ"


     "ಸ್ವಲ್ಪ ತಡೆಯಲಿಕ್ಕೆ ಹೇಳಿ"


     "ದೀದಿ ಒಬ್ಬ ಹುಡುಗಿಯ ಆತ್ಮಹತ್ಯೆಯ ಚೀಟಿ ಇದೆ"


    "ಇಲ್ಲ. ಅದು ನಾಳಿನ ಎಪಿಸೋಡಿನಲ್ಲಿ ಬರುತ್ತದೆ"!


     ಕೊನೆಗೂ ದೀದಿ ಆತ್ಮಹತ್ಯೆಯ ಚೀಟಿಯನ್ನು ಕಣ್ಣೆತ್ತಿಯೂ ನೋಡಲಿಲ್ಲ. ಅಷ್ಟರಲ್ಲಿ ಆಗಬಾರದ್ದು ಆಗಿಹೋಗಿತ್ತು!


     ಸಹಪಾಠಿಯನ್ನು ಪ್ರೀತಿಸುತ್ತಿದ್ದ ಹುಡುಗಿಗೆ ಸೀನಿಯರನೊಂದಿಗೆ ಮದುವೆ ನಿಶ್ಚಯ ಮಾಡಿದ್ದರು ಉದಾರಿ ಮಾತಾಪಿತೃಗಳು. ಎರಡೂ ಮಾಡಲಾಗದೆ, ಎರಡರಲ್ಲಿ ಒಂದೂ ಮಾಡಲಾಗದೆ ಆ ಹುಡುಗಿ ಆತ್ಮಹತ್ಯೆಯ ನಿರ್ಧಾರ ’ಕತ್ತು’ಗೊಂಡಿದ್ದಳು. ನೇಣಿಗೆ ತಲೆಕೊಡುವ ಮುನ್ನ, ಕೊನೆಯ ಸಹಪಾಠಿಗೆ "ಬೈ ಬೈ, ಮತ್ತೆ ಹೇಗಿದ್ದರೂ ಸಿಕ್ಕೇ ಸಿಗಬೇಕಲ್ಲ" ಎಂದು ಹೇಳಿಬರಲು ಹೋಗಿದ್ದಳು. ಸೀರಿಯಲ್ ಮುಗಿವ ಮುನ್ನವೇ ವಾಪಸ್ಸಾಗಿದ್ದಳು!ಆಕೆ ಸಾವು ಬದುಕಿನ ಪ್ರಶ್ನೆಯನ್ನು ಪರಿಹರಿಸಿಕೊಂಡು ಬಂದಿದ್ದರೂ ಧಾರಾವಾಹಿ ಮಾತ್ರ ಮುಗಿದಿರಲಿಲ್ಲ!


    "ಇಲ್ಲ. ಆತ್ಮಹತ್ಯೆ ಕ್ಯಾನ್ಸಲ್" ಎಂದು ಖುಷಿಯಾಗಿ ಒಳಗೆ ಬಂದು ಆತ್ಮಹತ್ಯೆಯ ಚಿಟಿಯನ್ನು ತಾನೇ ಹರಿದುಹಾಕಿದ್ದಳು. ಸೀನಿಯರನ್ನು ಮದುವೆಯಾಗಲು ನಿರ್ಧರಿಸಿದ್ದಳು. ಆಕೆಯ ಮದುವೆಯ ಮೊದಲರಾತ್ರಿಯ ಅನುಭವವನ್ನು ಮರುದಿನ ಗೆಳತಿಯರು ಛೇಡಿಸುವ ಸಲುವಾಗಿ ಕೇಳಿದಾಗ, ಮುಗ್ಧವಾಗಿ ಆಕೆ ಉತ್ತರಿಸಿದ್ದು ಹೀಗೆಃ "ಏನೂ ಮಾಡ್ಲಿಲ್ಲಪ್ಪ. ಆತ ’ಜಂಟಲ್‍ಮ್ಯಾನ್" ಎಂದು! ಅಂದಿನಿಂದ ಕಲಾಭವನದ ಹುಡುಗರೆಲ್ಲರೂ "ದೇವ್ರಾಣೆಗೂ ನಾನು ಜಂಟಲ್‍ಮನ್ ಅಲ್ಲ" ಎಂದು ಆಕೆಯನ್ನು ಚುಡಾಯಿಸುತ್ತಿದ್ದರು!


   ಎರಡು ವರ್ಷದ ನಂತರ ತಿಳಿದದ್ದು ಇದುಃ ಆಕೆ ಸೀನಿಯರಣ್ಣನಿಗೆ ಪ್ಯಾಟಿಸ್ (ಡಿವೊರ್ಸ್) ಕೊಟ್ಟಿದ್ದಳು. ಮತ್ತು, ಸಹಪಾಠಿಯಣ್ಣನನ್ನು ಮದುವೆಯಾಗಿದ್ದಳು. ಆದರೆ ಅಪ್ಪಿತಪ್ಪಿಯೂ ಅಂತಿಮ ಪತ್ರ ಬರೆವ ಶ್ರಮವನ್ನು ಮತ್ತೆ ತೆಗೆದುಕೊಳ್ಳಲಿಲ್ಲ.


     ಅಳಿಸಲಾಗದ ಲಿಪಿಯ ಬರೆದು ಹರಿಯಬಾರದಲ್ಲವೆ!


(ಚಿತ್ರಗಳು: ಲೇಖಕ)


ಲೇಖನ ವರ್ಗ (Category):