ಮಾಸ್ಟರ್ ಮೊಶಾಯರ ಅದೃಶ್ಯ ನಡೆದಾಟ: ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆ: ಭಾಗ ೯

To prevent automated spam submissions leave this field empty.

(೩೨)


     ಕಲಾಕೃತಿಗಳನ್ನು ನೋಡುವಾಗ ನಾವು ಏಕೆ ಛಾಯಾಚಿತ್ರದಷ್ಟು ನೈಜವಿರುವ ಚಿತ್ರಗಳನ್ನೇ ಇಷ್ಟಪಡುತ್ತೇವೆ ಎಂಬುದು ಎಷ್ಟು ಮುಖ್ಯವೋ ಅಷ್ಟೆ ಮುಖ್ಯ ಅಮೂರ್ತ ಚಿತ್ರಗಳು ನಮಗೇಕೆ ಇಷ್ಟವಾಗುವುದಿಲ್ಲ? ಎಂಬ ಪ್ರಶ್ನೆ ಕೂಡ!


     ಕಲಾಭವನದಲ್ಲಿ ಕಲಾಇತಿಹಾಸಕಾರ ಆರ್.ಶಿವಕುಮಾರ್ ನನ್ನ ಮೇಲೆ ಆಗ ಬಹಳ ಪ್ರಭಾವ ಬೀರಿದ ಗುರು. ಆದರೆ ನನಗೆ ಅವರೊಂದಿಗೆ ಯಾವುದೇ ಔಪಚಾರಿಕ ತರಗತಿಗಳು ಇರುತ್ತಿರಲಿಲ್ಲ. ಬೇರೆಯವರಿಗೆ ಕ್ಲಾಸುಗಳನ್ನು ತೆಗೆದುಕೊಳ್ಳುವಾಗ ತಪ್ಪದೆ ನಾನೂ ತರಗತಿಗಳಿಗೆ ಹಾಜರು. ಕೆಲವೊಮ್ಮೆ ಇಬ್ಬರು ಕಲಾಇತಿಹಾಸದ ವಿದ್ಯಾರ್ಥಿಗಳಿಗೆ ಅವರು ಕ್ಲಾಸ್ ತೆಗೆದುಕೊಳ್ಳುವಾಗ, ಅವರಿಬ್ಬರೂ ಅನುಪಸ್ಥಿತರಾಗಿರುತ್ತಿದ್ದರು! ಬದಲಿಗೆ ನನ್ನಂತೆ ಆಸಕ್ತರಾದವರು ನಾಲ್ಕು ಮಂದಿ ಇರುತ್ತಿದ್ದರು. ಅಂತಹ ಸಂದರ್ಭಗಳಲ್ಲಿ ಶಿವಕುಮಾರ್ ತಮ್ಮ ಗಡ್ಡದಡಿಯಲ್ಲಿ ನಾಲ್ಕು ಎಂ.ಎಂ ನಗೆ ಸೂಸುತ್ತಿದ್ದರು. ಸಾಧಾರಣವಾಗಿ ಅವರು ಯಾವುದೇ ಭಾವವನ್ನು ಪ್ರಕಟಪಡಿಸುತ್ತಿರಲಿಲ್ಲ. ವ್ಯಕ್ತಪಡಿಸಿದರೂ ದೃಶ್ಯ-ವಿದ್ಯಾರ್ಥಿಗಳಾದ ನಮಗೂ ಅದನ್ನು ಅಷ್ಟು ಸುಲಭವಾಗಿ ಓದಲಾಗುತ್ತಿರಲಿಲ್ಲ!


     "ಅವರು ನವರಸ ಭಾವನೆಗಳನ್ನೆಲ್ಲ ’ಅರೆದು’ ಕುಡಿದುಬಿಟ್ಟಿದ್ದಾರೆ. ಆದ್ದರಿಂದ ಅವರ ಮುಖಭಾವವನ್ನು ಓದುವವರ ಅಭಾವವಿದೆ," ಎಂದು ಪ್ರಕ್ಷುಬ್ದ ಆಗಾಗ ತಮಾಷೆ ಮಾಡುತ್ತಿದ್ದ, ಅವರ ಹಿಂದೆ. ಇಂದು ಕಲಾಭವನದ ಸಮಗ್ರ ಇತಿಹಾಸವನ್ನು ಬರೆದವರ ಪಟ್ಟಿ ನೋಡಿದರೆ ಅದರಲ್ಲಿ ಸಿಂಹಪಾಲು ಶಿವಕುಮಾರರದ್ದು. ಕೇರಳ ಮೂಲದ ಇವರು ಕೆಜಿಎಸ್ ಬಗ್ಗೆ ಅಥಾರಿಟಿ, ಕುವೆಂಪುಗೆ ದೇಜೇಗೌ ಹೇಗೋ, ಕಾಸರವಳ್ಳಿಯವರಿಗೆ ಮನು ಚಕ್ರವರ್ತಿ ಹೇಗೋ ಹಾಗೆ.


     ಮೊದಲ ಸೆಮಿಸ್ಟರಿನಲ್ಲೇ ಶಿವಕುಮಾರ್ ನನಗೊಂದು ವಿಚಿತ್ರ ಕೆಲಸ ವಹಿಸಿಕೊಟ್ಟರುಃ ಅದೇನೆಂದರೆ ಶಾಂತಿನಿಕೇತನದಾದ್ಯಂತ ಇರುವ ಭಿತ್ತಿಚಿತ್ರಗಳನ್ನು ಅಮೂಲಾಗ್ರವಾಗಿ, ಅಕ್ಷರಶಃ ಟೇಪಿನಿಂದ ಅಳತೆ ಮಾಡಿ, ದಾಖಲೆ ಮಾಡುವ ಕೆಲಸ!


     ಸೈಕಲ್ಲಿನ ಮೇಲೆ ಏಣಿಯನ್ನು (ವಿಕ್ರಮ ಬೇತಾಳನನ್ನು ಹೊತ್ತಂತೆ) ಹೆಗಲಿಗೇರಿಸಿಕೊಂಡು, ಟೇಪು, ಟಿಪ್ಪಣಿ ಪುಸ್ತಕ, ಛತ್ರಿ ಹಿಡಿದು, ಛತ್ರಿಯಂತಿದ್ದ ಗೆಳೆಯರನ್ನು ಪುಸಲಾಯಿಸಿಕೊಂಡು ಪ್ರತಿ ಭವನಗಳಿಗೂ ಭೇಟಿ ನೀಡುತ್ತಿದ್ದೆ! ಆಗಾಗ ಆ ಯೋಜನೆಯನ್ನೇ ಮರೆತುಬಿಡುತ್ತಿದ್ದೆ. ಆಗಾಗ ಎಂದರೆ ತಿಂಗಳಾನುಗಟ್ಟಲೆ ಎಂದರ್ಥ! ಮತ್ತೆ ಶಿವಕುಮಾರ ಹರಕು ಮುರುಕು ಹಿಂದಿಯಲ್ಲಿ ಜ್ಞಾಪಿಸುತ್ತಿದ್ದರು, "ತೋಡ ಖ್ಯಾಲ್ ರಕ್ನಾ ಯಾರ್" ಎಂದು. ನನಗೆ ಅವರ ಹಿಂದಿ ಸ್ಪಷ್ಟವಾಗಿ ಅರ್ಥವಾಗುತ್ತಿದ್ದುದು ನನ್ನ ತಪ್ಪಿತಸ್ಥ ಭಾವದಿಂದಲ್ಲ. ನನ್ನದೂ ಹರುಕು ಮತ್ತು ಮುರುಕು ಹಿಂದಿಯಾದ್ದರಿಂದ! ’ಬಾಲಿವುಡ್ ಕಾಲಿಂಗ್’ ಸಿನೆಮದಲ್ಲಿ ಪರದೇಶಿ ನಟನಿಂದ ಕಾಡಿಸಿ, ಬೇಡಿಸಿಕೊಂಡು ಶೂಟಿಂಗ್ ಪೂರ್ತಿಯಾದ ನಂತರ ಆ ಸಿನೆಮದ ಸ್ಕ್ರಿಪ್ಟ್ ದೊರಕಿಸಿಕೊಳ್ಳುತ್ತಾನಲ್ಲ ಹಾಗಾಯಿತು ಶಿವಕುಮಾರರ ಸ್ಥಿತಿ.     ಕಲಾಭವನದ ಭಿತ್ತಿಚಿತ್ರಗಳ ಬಗ್ಗೆ ಅವರು ಬರೆಯುತ್ತಿದ್ದ ಸಚಿತ್ರ ಪುಸ್ತಕದ ಸಲುವಾಗಿ ಅದು ಬೇಕಿತ್ತು!


     ಅದರಿಂದಾದ ಪ್ರಯೋಜನವೆಂದರೆ ಅಲ್ಲಿನ ಎಲ್ಲ ಭಿತ್ತಿಚಿತ್ರಗಳನ್ನು ನೋಡಿರುವ ಒಬ್ಬನೇ ಕಲಾವಿದ್ಯರ್ಥಿಯೆಂದರೆ 'ಅದು ನಾನೇ' ಎಂದು ಖ್ಯಾತನಾಗಿಹೋಗಿದ್ದೆ, ನನ್ನ ಪ್ರಕಾರ! ಅಂದರೆ ಕಲಾವಿದ್ಯಾರ್ಥಿಗಳಲ್ಲದವರು ಎಲ್ಲವನ್ನೂ ನೋಡಿದ್ದಾರೆ ಎಂದರ್ಥವಲ್ಲ. ಎಲ್ಲವನ್ನೂ ಅಳತೆ ಮಾಡುವಷ್ಟರಲ್ಲಿ ನನ್ನ ನಾಲ್ಕೂ ಸೆಮಿಸ್ಟರ್ಗಳ ಅಧ್ಯಯನ ಮುಗಿದು ಹೋಗಿತ್ತು!


     ಇಷ್ಟಾದರೂ ಒಂದು ಭಿತ್ತಿಚಿತ್ರ ಮಾತ್ರ ನನ್ನ ಕಣ್ಣಿಗೆ ಅಡ್ಡಬರದೆ, ಅಂದರೆ ನನಗೆ ಸಿಗದೆ ಬಹಳಷ್ಟು ಸತಾಯಿಸಿಬಿಟ್ಟಿತ್ತು. ಭಾರತ ದೇಶದ ಎಲ್ಲ ರಾಜ್ಯಗಳಲ್ಲಿಯೂ ಇರುವ ಗಾಂಧಿಭವನದ ಮೇಲಿರುವ, ಗಾಂಧಿತಾತ ಕೋಲು ಹಿಡಿದುಕೊಂಡು ನೊಡುಗರ 'ಎಡ'ಕ್ಕೆ ನಡೆದಾಡುತ್ತಿರುವ ಆಳೆತ್ತರದ ರೇಖಾ-ಉಬ್ಬು ಭಿತ್ತಿಚಿತ್ರವದು. "ಎಡ(ಪಂಥ)ಕ್ಕೆ ವಾಕ್ ಮಾಡುತ್ತಿರುವುದರಿಂದಲೇ ಈ ನಿರ್ದಿಷ್ಟ ಗಾಂಧಿ ನಿನಗೆ ದಕ್ಕುತ್ತಿಲ್ಲ," ಎಂದು ಲೇವಡಿ ಮಾಡಿದ ಎಡಪಂಥೀಯ ಸಂತನೂ ಲೋಧನಿಗೂ ಅದರ ಇರುವು ಗೊತ್ತಿರಲಿಲ್ಲ!


     ಅಸಲಿ ಕೃತಿಯನ್ನು ನಂದಲಾಲ್ ಬೋಸ್ ರಚಿಸಿದ್ದು. ಅದರ ಇರುವಿಕೆಯ ಬಗ್ಗೆ ಶಿವಕುಮಾರರನ್ನು ಕೇಳುವುದಕ್ಕೆ ಸಂಕೋಚ ಬೇರೆ. "ಇಷ್ಟು ತಡವಾಗಿ ಕೇಳುತ್ತಿದ್ದೀಯ?" ಅಥವ "ಕಲಾಇತಿಹಾಸದ ವಿದ್ಯಾರ್ಥಿಯಾಗಿ ಅದರ ಇರುವು ಗೊತ್ತಿಲ್ಲವೆ?" ಎಂದು 'ಆ' ಅಥವ 'ಈ' ಪ್ರಶ್ನೆ ಕೇಳಿಬಿಟ್ಟರೆ ಎಂಬ ಸಂಕೋಚವಲ್ಲ. ಸಾಧಾರಣವಾಗಿ ಮುಖಕ್ಕೆ ಹೊಡೆದ ಹಾಗೆ ಅವರು ಮಾತಾಡುತ್ತಿರಲಿಲ್ಲ. ಆದರೆ, ನನ್ನೆದುರಿಗೆ ತಮ್ಮ ಮನಸ್ಸಿನೊಳಗೇ, ಮೌನವಾಗೇ ಹಾಗೇನಾದರೂ ಕೇಳಿಬಿಟ್ಟಲ್ಲಿ ಎಂಬ ಅವ್ಯಕ್ತ ಭಯ! ಪ್ರತಿಷ್ಠೆಯ ಹಿಂದೆ ಬಿದ್ದರೆ ತಡಬಡಾಯಿಸುವಿಕೆ ಕಟ್ಟಿಟ್ಟ ಬುತ್ತಿ! ಕಲಾಇತಿಹಾಸದ ಅಧ್ಯಯನವು ನನಗೆ ಮನಸ್ಸುಗಳನ್ನು ಓದುವ ಸಾಮರ್ಥ್ಯ ದೊರಕಿಸಿಕೊಟ್ಟುಬಿಟ್ಟಿತೆಂಬ ನಂಬಿಕೆಯನ್ನು ನನಗೆ ನಾನೇ ಬೆಳೆಸಿಕೊಂಡುಬಿಟ್ಟೆ.


     ಪ್ರಕ್ಷುಬ್ಧ ಒಂದು ಕ್ಲೂ ಕೊಟ್ಟ, "ಮೂಗು ಹಿಡಿಯಲೇ ಬೇಕಾಗಿ ಬಂದ ಸಂದರ್ಭದಲ್ಲಿ ನಂದಲಾಲರ ಗಾಂಧಿ ದೊರಕಿಯಾನು" ಎಂದು. ಮೂಗು ತೋರಿದರೆ, ಅದಕ್ಕೆ ಕನ್ನಡಕವನ್ನೇ ತೊಡಿಸಬೇಕಾಗಿ ಬಂದಿದ್ದ ನನ್ನ ಕಣ್ಣು ಕಣ್ಣು ಬಿಡುವ ಆಗಿನ ಸ್ಥಿತಿಗೆ ಏನೋ ವಾಸನೆ ಬಡಿಯಿತು. ಅಂದರೆ "ಬಚ್ಚಲ ವಾಸನೆ ಎಲ್ಲಿದೆ " ಎಂದು ಹುಡುಕಬೇಕೆಂಬ ಬುದ್ಧಿಯನ್ನು ಆ ರೂಪಕದ ವಾಸನೆ ಸೂಚಿಸಿತು.


     ಕೊನೆಗೂ ಅದನ್ನು ಪತ್ತೆಮಾಡಿಬಿಟ್ಟೆ! ಕಲಾಭವನದ ಕಟ್ಟಡದ ಹಿಂದೆ, ಹುಡುಗಿಯರ ಹಾಸ್ಟೆಲ್ಲಿನ ಕಡೆಗೆ ಮುಖಮಾಡಿ, ನಂದಲಾಲರ ಅಸಲಿ ಗಾಂಧಿ ತಾತ ನೋಡುವವರ ಕಣ್ಣ ಎಡಕ್ಕೆ, ಅಂದರೆ ರಾಮ್‍ಕಿಂಕರ‍್ಬೈಜ(ಬೆಂಗಾಲಿ ಸಿನೆಮ ದಿಗ್ಗಜ ರಿತ್ವಿಕ್ ಘಟಕ್‍ರ ಬೊಹಿಮಿಯನ್ ಜೀವನಶೈಲಿ ಇವರ ಬದುಕಿನೊಂದಿಗೆ ಸಾಕಷ್ಟು ತಾಳೆಯಾಗುತ್ತದೆ) ವಿವಾದಾತ್ಮಕ ಗಾಂಧಿ ಶಿಲ್ಪದ ಕಡೆಗೆ ನಡೆದು ಹೋಗುತ್ತಿದ್ದ! ಅಂದರೆ "ನಂದಲಾಲರ ’ಖಾದಿ ಗಾಂಧಿ’ಯ ರೇಖಾಚಿತ್ರವು ರಾಮ್‍ಕಿಂಕರರ, ತಲೆಬುರುಡೆಯನ್ನು ತುಳಯುತ್ತಿರುವ ’ಶಿಲ್ಪ ಗಾಂಧಿ’ಯೆಡೆ ನಡೆದುಹೋಗಿ, ’ಹಿಂಸೆ ನಿಷಿದ್ಧ’ ಎಂದು ಸ್ವತಃ ತಮ್ಮ ಪ್ರತಿರೂಪಕ್ಕೇ ಹೇಳುತ್ತಿದ್ದಾರೆ" ಎಂದು ನಾವೆಲ್ಲ ಆಡಿಕೊಳ್ಳತೊಡಗಿದೆವು!


 


     ಎಷ್ಟೊ ಮಹಾನ್ ಕಲಾವಿದರುಗಳಿಗೇ ಮಹಾನ್ ಎನ್ನಿಸಿದ ಕಲಾವಿದರು, ಗುರುಗಳು ಓಡಿಯಾಡಿದ ತಾಣ-ಕಲಾಭವನ. ಕಲೆಗೆ ಸಂಬಂಧಿಸದವರಿಗೆ ಗೊತ್ತಿರುವುದು ಟಾಗೂರ್ ಒಬ್ಬರೇ. ಆದರೆ ಸ್ವತಃ ಆ ಜಾಗದಲ್ಲಿ ಅವರಿಗಿಂತಲೂ ಬಿನೋದ್ ಬಿಹಾರಿ ಮುಖರ್ಜಿ ಎಂಬ ಕಲಾವಿದ/ಗುರುವಿನ ಬಗ್ಗೆ ನಮಗೆಲ್ಲ ಇನ್ನಿಲ್ಲದ ಗೌರವ. ಹುಟ್ಟುತ್ತಲೇ ಅರೆ-ಕುರುಡಾಗಿದ್ದ ಅವರು, ಕೊನೆಕೊನೆಯಲ್ಲಿ ನೂರು ಅಡಿ ಅಗಲ, ಹತ್ತಡಿ ಎತ್ತರದ ಭಿತ್ತಿಚಿತ್ರ ರಚಿಸುವಷ್ಟರಲ್ಲಿ ಪೂರ್ತಿ ಕುರುಡಾಗಿದ್ದರು. "ದ ಇನ್ನರ್ ಐ" (ಒಳಗಣ್ಣು) ಎಂಬ, ಅವರನ್ನು ಕುರಿತು ಸತ್ಯಜಿತ್ ರೇ ನಿರ್ಮಿಸಿದ ಸಾಕ್ಷ್ಯಚಿತ್ರ ಸಿನೆಮದಲ್ಲಿ ಒಂದು ಮನಃಕಲಕುವ ದೃಶ್ಯವಿದೆಃಪೂರ್ತಿ ಕುರುಡಾದ ಮೇಲೂ, ಸ್ವಯಂಪ್ರೀತಿ, ಕನಿಕರದಿಂದಿರದೆ ಆತ್ಮವಿಶ್ವಾಸದಿಂದಲೇ ದಶಕಗಳ ಕಾಲ ಕಲಾಕೃತಿ ರಚಿಸಿದ ಮುಖರ್ಜಿಯವರು ರೇಖಾಚಿತ್ರ ಬಿಡಿಸುತ್ತಿರುವ ದೃಶ್ಯವದು. ಸರಾಗವಾಗಿ, ಕಣ್ಣುಕಾಣುತ್ತದೆಯೋ ಎನ್ನುವಷ್ಟು ಅಸಲಿಯಾಗಿ ಸ್ಕೆಚ್ ಮಾಡುತ್ತಿರುವ ಮುಖರ್ಜಿಯವರ ಮುಖದಿಂದ ಅವರ ರೇಖಾಚಿತ್ರದ ಹಾಳೆಯ ಕಡೆ ಕ್ಯಾಮರ ಪ್ಯಾನ್ ಆಗುತ್ತದೆ. ಅವರು ಬರೆಯುತ್ತಿರುವ ಪೆನ್ನಿನಲ್ಲಿ ಇಂಕ್ ಮುಗಿದುಹೋಗಿರುತ್ತದೆ! ಆದರೂ ಮುಖರ್ಜಿ ಸ್ಕ್ರಿಬಲ್ ಮಾಡುತ್ತಲೇ ಇರುತ್ತಾರೆ!
                                              (೩೩)
     ನಂದಲಾಲ್ ಬೋಸರನ್ನು ಮಾಸ್ಟರ್ ಮೊಶಾಯ್ ಎಂದೇ ಎಲ್ಲರೂ ಕರೆಯುವುದು. ಕಲಾಇತಿಹಾಸದ ಉಪಾಧ್ಯಾಯನಾದ ಗೆಳೆಯ ಪರ್ವರೇಝ್, ಇತ್ತೀಚೆಗಷ್ಟೇ ನಡೆದ, ಅವರನ್ನು ಕುರಿತು ಒಂದು ಮೈ ಜುಮ್ಮೆನಿಸುವ ಘಟನೆಯನ್ನು ವಿವರಿಸಿದ್ದಃ


     ಕ್ಯಾಂಟೀನಿನ ಬಾಗಿಲಿನ ಎದುರಿಗೆ ನಕ್ಷತ್ರಾಕಾರದ ಕಟ್ಟಡವು ಈಗ ಕಲಾಇತಿಹಾಸ ವಿಭಾಗ. ಈ ಏಪ್ರಿಲ್ನಲ್ಲಿ ಮಧ್ಯರಾತ್ರಿ ಸುಮಾರಿಗೆ ಒಬ್ಬನೇ ಬಂದ ಪರ್ವರೇಝ್ ಏನೋ ಬ್ರೌಸ್ ಮಾಡುತ್ತಿದ್ದನಂತೆ ಒಳಗಿನ ಕೋಣೆಯಲ್ಲಿ. ಬಾಗಿಲಿಗೇ ಮುಖಮಾಡಿ ಕುಳಿತಿದ್ದ ಆತನಿಗೂ ಬಾಗಿಲಿಗೂ ನಡುವೆ ಹದಿನೈದಡಿ ವ್ಯತ್ಯಾಸ. ಬಾಗಿಲು ಮತ್ತು ಆತನ ನಡುವೆ ನಿಧಾನಕ್ಕೆ ಆರಂಭವಾಯಿತಂತೆ ಹೆಜ್ಜೆಯ ಸಪ್ಪಳ. ಕತ್ತೆತ್ತಿ ನೊಡಿದರೆ ಯಾರೂ ಇಲ್ಲ. ಕತ್ತಲೆಯೂ ಇಲ್ಲ. ಆದರೆ ಯಾರೋ ಅಲ್ಲೇ ಸುತ್ತುಹಾಕುತ್ತಿರುವ ಹೆಜ್ಜೆಯ ಧ್ವನಿ ಹತ್ತಿರಕ್ಕೆ ಬಂದಾಗ, ಪರ್ವರೇಝನಿಗೆ ಕೇವಲ ಒಂದಡಿ ಹತ್ತಿರದಲ್ಲಿರುತ್ತಿತ್ತಂತೆ. ಸುಮಾರು ಇಪ್ಪತ್ತೈದು ನಿಮಿಷ ನಿಲ್ಲದ, ದೀಪದ ಬೆಳಕಿನಲ್ಲಿಯೂ ಆಕಾರವಿಲ್ಲದ ಧ್ವನಿದೇಹ ಅದಾಗಿತ್ತು. ಮುಚ್ಚಿದ ಬಾಗಿಲು ಮುಚ್ಚಿದಂತೆಯೇ ಇತ್ತಂತೆ. ಮಧ್ಯರಾತ್ರಿಯಲ್ಲಿ ಅದೃಶ್ಯ ವಾಕಿಂಗ್. ಅಷ್ಟರಲ್ಲಿ ಈತ ಅರ್ಧ ತರಲೆ, ಅರ್ಧ ಗಂಭೀರವಾಗಿ ಕೆಲವರಿಗೆ ತನ್ನ ಮೊಬೈಲಿನಿಂದ ಎಸ್ಎಂಎಸ್ ಮಾಡಿದ್ದನಂತೆಃ "ಬೆಳಗಿನ ಜಾವದ ಹೊತ್ತಿಗೆ ನಾನು ಇಲ್ಲಿ ಸತ್ತುಬಿದ್ದಿದ್ದರೆ ಯಾರೂ ಆಶ್ಚರ್ಯಪಡಬೇಕಿಲ್ಲ" ಎಂದು.


     ಬೆಳಗಾದ ನಂತರ ಯಾರೋ ಹಿರಿಯರು, ಇನ್ನೂ ಜೀವಂತವಿದ್ದ ಪರ್ವರೇಝ್‍ನಿಗೆ ಹೇಳಿದರಂತೆ, "ಈ ಕೋಣೆಯಲ್ಲಿಯೇ ಮಾಸ್ಟರ್ ಮೊಶಾಯ್ ಕಲಾಕೃತಿ ರಚಿಸುತ್ತಿದ್ದುದು. ಕೆಲವೊಮ್ಮೆ ಇಲ್ಲಿಯೇ ರಾತ್ರಿಯ ಹೊತ್ತು ಮಲಗಿಕೊಳ್ಳುತ್ತಿದ್ದರು," ಎಂದು.ಮಾಸ್ಟರ್ ತೀರಿಕೊಂಡ (೧೮೮೨-೧೯೬೬) ಎಷ್ಟೋ ವರ್ಷಗಳ ನಂತರವೇ ಪರ್ವರೇಝ್ ಹುಟ್ಟಿದ್ದು!///


  

ಲೇಖನ ವರ್ಗ (Category):