ನಮ್ಮ ಈ ಹಿತ್ತಲ ಗಿಡಗಳು ನಮಗೆ ಮದ್ದಲ್ಲ!

To prevent automated spam submissions leave this field empty.

  ’ಹಿತ್ತಲ ಗಿಡ ಮದ್ದಲ್ಲ’ ಎಂಬಂತೆ, ನಮ್ಮ ಸನಿಹದಲ್ಲೇ ಇರುವ ಅನೇಕ ಪ್ರೇಕ್ಷಣೀಯ ಸ್ಥಳಗಳು ಮತ್ತು ಯಾತ್ರಾ ಸ್ಥಳಗಳು ನಮಗೆ ದರ್ಶನಾರ್ಹ ಸ್ಥಳಗಳಾಗಿ ಅರಿವಿಗೆ ಬರುತ್ತಿಲ್ಲ. ನಾನಿರುವ ಬೆಂಗಳೂರಿನ ಆಜುಬಾಜಿನಲ್ಲೇ ಇಂಥ ಪ್ರವಾಸಯೋಗ್ಯ ಸ್ಥಳಗಳು ಸಾಕಷ್ಟಿವೆ. ಬಿಡುವು ದೊರೆತಾಗೆಲ್ಲ ಇಂಥ ಸ್ಥಳಗಳಿಗೆ ಪ್ರವಾಸ ಹೋಗಿಬರುವುದು ನನ್ನ ಉಲ್ಲಾಸದಾಯಕ ಚಟುವಟಿಕೆಗಳಲ್ಲೊಂದು. ದಶಕಗಳಿಂದ ಬೆಂಗಳೂರಿನಲ್ಲಿದ್ದೂ ವಿಧಾನಸೌಧವನ್ನೇ ನೋಡಿರದವರೂ ಇರುವಾಗ ಸುತ್ತಲಿನ ಈ ತಾಣಗಳನ್ನು ಅದೆಷ್ಟು ಮಂದಿ ಕಂಡಿದ್ದಾರು?
  ’ಕರಕರೆ ದೇವರಿಗೆ ಕಾಯಿಕಾಯಿ ಬಾಳೆಹಣ್ಣು’ ಎಂಬಂತೆ, ಪ್ರವಾಸಿಗರ ಕೊರತೆ ಎದುರಿಸುತ್ತಿರುವ ಇಂಥ ಪ್ರವಾಸಿ ತಾಣಗಳ ಸಂರಕ್ಷಣೆಯೂ ತೃಪ್ತಿಕರವಾಗಿಲ್ಲ, ಪ್ರವಾಸಿಗರನ್ನು ಆಕರ್ಷಿಸಲು ಸೂಕ್ತ ಪ್ರಚಾರವೂ ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಕೈಗೊಳ್ಳಲಾಗುತ್ತಿಲ್ಲ.
  ಏಕಶಿಲಾಗಿರಿಯಾಗಿ ಗಮನ ಸೆಳೆಯುವ ಮಧುಗಿರಿ ಅನಾಥ ಸ್ಮಾರಕದಂತೆ ನಿಂತಿದೆ. ಶ್ರೀರಾಮನ ಶರಪ್ರಯೋಗದಿಂದ ಬಂಡೆಯಲ್ಲಿ ನೀರು ಚಿಮ್ಮಿತೆಂದು ಹೇಳಲಾಗುವ ನಾಮದ ಚಿಲುಮೆಯಲ್ಲಿ ಆ ಚಿಲುಮೆ ನೀರು ಇಂದು ಕೊಳಚೆ ನೀರಾಗಿ ನಿಂತಿದೆ. ಇತಿಹಾಸಪ್ರಸಿದ್ಧವೂ ಅತಿಸುಂದರವೂ ಆದ ದೇವರಾಯನ ದುರ್ಗದಲ್ಲಿ ಬೆಟ್ಟದಮೇಲಿನ ಪುಷ್ಕರಿಣಿ ಗಬ್ಬು ಗಲೀಜಾಗಿದೆ. ಜಕಣಾಚಾರ್ಯ ನಿರ್ಮಿತ ಅತ್ಯುತ್ಕೃಷ್ಟ ಶಿಲ್ಪವಿರುವ ಕೈದಾಳ ದೇವಾಲಯವು ಕ್ಷೀಣ ಉಸ್ತುವಾರಿಯಿಂದ ಮತ್ತು ಪ್ರವಾಸಿಗರ ಕೊರತೆಯಿಂದ ಮಂಕಾಗಿದೆ. ಭೃಗು ಮಹರ್ಷಿಗಳು ಸ್ಥಾಪಿಸಿದ ಗಣಪತಿಯನ್ನು ಹೊಂದಿದ್ದ ಗೂಳೂರು ಈಗ ಮೂಲ ವಿಗ್ರಹವನ್ನೇ ಕಳೆದುಕೊಂಡಿದೆ. ಅಂತರಗಂಗೆ ಬೆಟ್ಟದಲ್ಲಿ ಕಲ್ಯಾಣಿಗೆ ಬೀಳುವ ನೀರನ್ನು ಸುತ್ತಮುತ್ತಲ ಜನ ಪ್ಲಾಸ್ಟಿಕ್ ಡಬ್ಬಿಗಳಲ್ಲಿ ತುಂಬಿಕೊಂಡು ಹೋಗುವುದರಿಂದಾಗಿ ಪುಷ್ಕರಿಣಿ ಒಣಗಿ ನಿಂತಿದೆ. ಲವಕುಶರ ಜನ್ಮಸ್ಥಳವೆಂಬ ಪ್ರತೀತಿ ಇರುವ ಆವಣಿಯಲ್ಲಿ ರಾಮಲಿಂಗೇಶ್ವರ ದೇವಾಲಯವನ್ನು ಹೊರತುಪಡಿಸಿ ಅದೇ ಪೌಳಿಯೊಳಗಿರುವ ಉಳಿದೆಲ್ಲ ಪ್ರಾಚೀನ ದೇವಾಲಯಗಳೂ ಬಿಕೋ ಎನ್ನುತ್ತಿವೆ. ಈ ಪೈಕಿ ವಿಗ್ರಹವೇ ನಾಪತ್ತೆಯಾಗಿರುವ ಒಂದು ದೇವಾಲಯ ಈಗ ಉಗ್ರಾಣವಾಗಿ ಬಳಕೆಯಾಗುತ್ತಿದೆ. ಕೋಟಿಲಿಂಗೇಶ್ವರಕ್ಕೆ ಭೆಟ್ಟಿ ನೀಡಿದಷ್ಟು ಜನರು ಸನಿಹದಲ್ಲಿರುವ ಸುಂದರ ಕ್ಷೇತ್ರ ಬಂಗಾರು ತಿರುಪತಿಗೆ ಭೆಟ್ಟಿ ನೀಡುವುದಿಲ್ಲ. ಬೃಹತ್ತಾದ ಗಣೇಶ ವಿಗ್ರಹದಿಂದ ಕಂಗೊಳಿಸುತ್ತಿರುವ ಪ್ರಾಚೀನ ದೇವಾಲಯವುಳ್ಳ ಕುರುಡಮಲೈಗೂ ಪ್ರವಾಸಿಗರ ಸಂಖ್ಯೆ ಸಾಕಷ್ಟಿಲ್ಲ. ತಲಕಾಡು, ಸೋಮನಾಥಪುರಗಳದ್ದೂ ಇದೇ ಸ್ಥಿತಿ. ಹಾರನಹಳ್ಳಿಯ ಪ್ರಾಚೀನ ಸೋಮೇಶ್ವರ ದೇವಾಲಯಕ್ಕಂತೂ ಪ್ರವಾಸಿಗರು ಅತಿ ವಿರಳ. ಪ್ರಸಿದ್ಧವೂ ಸುಂದರವೂ ಆಗಿರುವ ಮಾಲೇಕಲ್ಲು ತಿರುಪತಿ ಬೆಟ್ಟಕ್ಕೆ ಕೂಡ ಪ್ರವಾಸಿಗರು ನಿರೀಕ್ಷಿತ ಸಂಖ್ಯೆಯಲ್ಲಿಲ್ಲ. ಕೊಕ್ಕರೆ ಬೆಳ್ಳೂರಿಗೆ ಪ್ರವಾಸಿಗರೂ ಕಮ್ಮಿ, ಸಾರಿಗೆ ಸೌಕರ್ಯವೂ ಅಸಮರ್ಪಕ. ಪುರಾಣದಲ್ಲಿ ’ಸೋಮಗಿರಿ’ ಎಂದು ಕರೆಯಲ್ಪಡುವ ಮುಡುಕುತೊರೆ ಬೆಟ್ಟದ ಅವಸ್ಥೆಯೂ ಇದೇ. ರಾಮಾಯಣದ ಐತಿಹ್ಯವುಳ್ಳ ಮತ್ತು ಅತಿ ಸುಂದರ ಜಲಪಾತವಿರುವ ಚುಂಚನಕಟ್ಟೆಯದೂ ಇದೇ ಗತಿ. ಮಿನಿ ಟಿಬೆಟ್‌ನಂತೆ ಭಾಸವಾಗುವ ಬೈಲಕುಪ್ಪೆಯ ಬೌದ್ಧಕ್ಷೇತ್ರದ ಸ್ಥಿತಿಯೂ ಇದೇ. ಯೋಗಿನಾರೇಯಣರ ಸ್ಥಳ ಕೈವಾರಕ್ಕೂ ಸಾರಿಗೆ ವ್ಯವಸ್ಥೆ ಸಮರ್ಪಕವಾಗಿಲ್ಲ. ಚಿನ್ಮಯ ಸಾಂದೀಪನಿ ಆಶ್ರಮವಿರುವ ಮತ್ತು ಬೃಹದಾಕಾರದ ಗಣಪತಿ ಪ್ರತಿಮೆ ಹೊಂದಿರುವ ಚೊಕ್ಕಹಳ್ಳಿ ಬಹುತೇಕರಿಗೆ ಅಪರಿಚಿತ.
  ಇವೆಲ್ಲವೂ ಬೆಂಗಳೂರಿನ ಸುತ್ತಮುತ್ತ ಇರುವ ಸ್ಥಳಗಳು. ಬೆಂಗಳೂರಿಗೆ ಸನಿಹದಲ್ಲೇ ಇನ್ನೂ ಅನೇಕ ಪ್ರಸಿದ್ಧ ಸ್ಥಳಗಳಿದ್ದು, ಅಲ್ಲಿಗೆಲ್ಲ ಸೂಕ್ತ ಸಾರಿಗೆ ವ್ಯವಸ್ಥೆ ಇರುವುದರಿಂದ ಮತ್ತು ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಭೆಟ್ಟಿನೀಡುವುದರಿಂದ ಅವುಗಳ ಹೆಸರುಗಳನ್ನು ಇಲ್ಲಿ ಉಲ್ಲೇಖಿಸಿಲ್ಲ.
  ವಯಸ್ಸು ಅರವತ್ತು ಸಮೀಪಿಸುತ್ತಿರುವ ನಾನು ಸಾರ್ವಜನಿಕ ಸಾರಿಗೆ ವ್ಯವಸ್ಥೆ ಬಳಸಿಕೊಂಡು ಕಳೆದೊಂದು ವರ್ಷದಲ್ಲಿ ಈ ಎಲ್ಲ ಸ್ಥಳಗಳಿಗೂ ಏಕಾಂಗಿಯಾಗಿ ಹೋಗಿಬಂದಿದ್ದೇನೆ. ಎಲ್ಲ ಬೆಟ್ಟಗಳನ್ನೂ ಹತ್ತಿ ಇಳಿದಿದ್ದೇನೆ. ಪ್ರಾಕೃತಿಕ ದೃಶ್ಯವೈಭವವನ್ನು ಸವಿದಿದ್ದೇನೆ. ಪುರಾಣ-ರಾಮಾಯಣ-ಮಹಾಭಾರತಗಳ ಘಟನೆಗಳ ಕುರುಹುಗಳನ್ನು ಅವಲೋಕಿಸಿದ್ದೇನೆ.
  ಈ ಎಲ್ಲ ಸ್ಥಳಗಳ ಬಗ್ಗೆಯೂ ನಮ್ಮ ಪ್ರವಾಸೋದ್ಯಮ ಇಲಾಖೆ ಸೂಕ್ತ ಪ್ರಚಾರ ನೀಡಬೇಕು. ಈ ಸ್ಥಳಗಳಲ್ಲಿ ಉತ್ತಮ ಸೌಲಭ್ಯ ಕಲ್ಪಿಸಬೇಕು. ಸ್ಥಳಗಳ ಸಂರಕ್ಷಣೆಯೆಡೆ ಸರ್ಕಾರ ಗಮನಹರಿಸಬೇಕು. ಸಾರ್ವಜನಿಕರಿಗೆ ಸಮರ್ಪಕ ಸಾರಿಗೆ ವ್ಯವಸ್ಥೆ ಒದಗಿಸಬೇಕು. ತತ್ಫಲವಾಗಿ ಈ ಸ್ಥಳಗಳಿಗೆ ಪ್ರವಾಸಿಗರ/ಯಾತ್ರಾರ್ಥಿಗಳ ಸಂಖ್ಯೆ ಹೆಚ್ಚಬೇಕು.
  ನಮ್ಮ ಸುತ್ತಲ ಪ್ರಕೃತಿವೈಭವವನ್ನು ನಾವು ಸವಿಯದಿದ್ದರೆ ಮತ್ತು ನಮ್ಮ ಸುತ್ತಲಿರುವ ಪುರಾಣೇತಿಹಾಸ ಪ್ರಸಿದ್ಧ ಸ್ಥಳಗಳನ್ನೊಮ್ಮೆ ಕಣ್ಣಾರೆ ನೋಡದಿದ್ದರೆ ಅದು ಜೀವನದಲ್ಲಿ ನಮ್ಮ ಸೋಮಾರಿತನದಿಂದ ನಮಗಾಗುವ ದೊಡ್ಡ ನಷ್ಟ.

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ನಿಜ, ಶಾಸ್ತ್ರಿಗಳೇ. ಪರಿಚಯ, ಪ್ರಚಾರ ಇರುವ ಸ್ಥಳಗಳಿಗೇ ಭೇಟಿ ಕೊಡುವವರೇ ಹೆಚ್ಚು. ಚೆನ್ನಾಗಿರುವ ಆದರೆ ಪ್ರಚಾರವಿರದ ಸ್ಥಳಗಳನ್ನು ನೋಡಿದವರೂ ಅದಕ್ಕೆ ಮಹತ್ವ ಕೊಡದಿರುವುದು ಜಾಹಿರಾತು ಯುಗದ ಪ್ರಭಾವವಿರಬಹುದು. 'ಹೀಗೂ ಉಂಟೆ' ಅಂತಹ ಕಾರ್ಯಕ್ರಮದಲ್ಲಿ ಪ್ರಚಾರವಾದರೆ ಎಲ್ಲರೂ ಅಲ್ಲಿಗೆ ನುಗ್ಗುತ್ತಾರೆ.

ಶಾಸ್ತ್ರಿಗಳೇ, ಈಗೀಗ ವಾರಾಂತ್ಯ ಬಂದರೆ ಸಾಕು ಬರೀ ಶಾಪಿಂಗ್ ಮಾಲ್, ಫೋರಂ ಮಾಲ್, ಗರುಡ ಮಾಲ್, ಪಿಜ್ಜಾ ಕಾರ್ನೆರ್ ಅನ್ನುವ ಬೆಂಗಳೂರಿಗರಿಗೆ ನಿಮ್ಮ ಈ ಬರಹ ಬಹಳ ಉಪಯುಕ್ತ ಅನ್ಸುತ್ತೆ. ಅಂತೂ ನಮ್ಮ ಕೋಲಾರ ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳು ಮತ್ತು ಯಾತ್ರಾ ಸ್ಥಳಗಳು ಸಂಪದಿಗರಿಗೆ ತಿಳಿಸಿದಕ್ಕೆ ಧನ್ಯವಾದಗಳು. ಹಾಗೆ, ಚಿಕ್ಕಬಳ್ಳಾಪುರದ ಹತ್ತಿರ "ರಂಗಸ್ಥಳ" ವೂ ಒಂದು ನೋಡಬಹುದಾದ ಸ್ತಳ, ಅಲ್ಲಿ ರಂಗನಾಥ ಸ್ವಾಮಿಯ ದೇವಸ್ಥಾನ ಹೊಯ್ಸಳರ ಕಾಲದ್ದು. ಅಲ್ಲೇ ನಂದಿ ಬೆಟ್ಟದ ತಪ್ಪಲಿನಲ್ಲಿ ಮುದ್ದೇನಹಳ್ಳಿ( ಸರ್ ಎಮ್ಮ್.ವಿಶ್ವೇಶ್ವರಯ್ಯನವರ ಊರು),ಕೋಲಾರದ ಕೋಲಾರಮ್ಮನ ದೇವಸ್ಥಾನ,ಕೋಲಾರ ಚಿನ್ನದ ಗಣಿ(ಈಗ ನೋಡಲು ಒಳಗೆ ಬಿಡುವುದಿಲ್ಲ), ಮಾರ್ಕಂಡೇಯ ಬೆಟ್ಟ ಹಾಗು ಡ್ಯಾಮ್, ಮೂಡಳಬಾಗಿಲು(ಮುಳಬಾಗಿಲು) , ಲವ ಕುಶ ಹುಟ್ಟಿದ ಸ್ತಳ -ಆವಣಿ. ಮಂಡ್ಯ ಜಿಲ್ಲೆಯ ಮದ್ದೂರಿನ ವೈದ್ಯನಾಥೇಶ್ವರ ದೇವಸ್ಥಾನ ಬಹಳ ಅದ್ಬುತ. ನಾಗರಾಜರೇ, >>>ಪರಿಚಯ, ಪ್ರಚಾರ ಇರುವ ಸ್ಥಳಗಳಿಗೇ ಭೇಟಿ ಕೊಡುವವರೇ ಹೆಚ್ಚು. ಚೆನ್ನಾಗಿರುವ ಆದರೆ ಪ್ರಚಾರವಿರದ ಸ್ಥಳಗಳನ್ನು ನೋಡಿದವರೂ ಅದಕ್ಕೆ ಮಹತ್ವ ಕೊಡದಿರುವುದು ಜಾಹಿರಾತು ಯುಗದ ಪ್ರಭಾವವಿರಬಹುದು. 'ಹೀಗೂ ಉಂಟೆ' ಅಂತಹ ಕಾರ್ಯಕ್ರಮದಲ್ಲಿ ಪ್ರಚಾರವಾದರೆ ಎಲ್ಲರೂ ಅಲ್ಲಿಗೆ ನುಗ್ಗುತ್ತಾರೆ.>>>> ನಿಮ್ಮ ಮಾತು ಒಪ್ಪುತ್ತೇನೆ. -ಚೈತನ್ಯ

ಉತ್ತಮ ಸಲಹೆ ನೀಡಿರುವ ನಾಗರಾಜರಿಗೂ, ಮೆಚ್ಚುಗೆಯ ಜೊತೆಗೆ ಪೂರಕ ಮಾಹಿತಿ ಒದಗಿಸಿರುವ ಚೈತನ್ಯ ಅವರಿಗೂ ಧನ್ಯವಾದಗಳು. ಬರೆಯಬೇಕೆಂದರೆ, ನಾನು ನೋಡಿದ ಇಂಥ ಸ್ಥಳಗಳ ಪಟ್ಟಿ ಸುದೀರ್ಘವಿದೆ. ಅಂಥದೊಂದು ಪ್ರವಾಸದಿಂದ ಹಿಂತಿರುಗಿದ ದಿನ, ಹೀಗೇ ಮನಸ್ಸನ್ನು ಕಾಡಿದ ಒಂದಿಷ್ಟನ್ನು ಗೀಚಿ ಇಲ್ಲಿ ಪ್ರಕಟಿಸಿದೆ ಅಷ್ಟೆ. ಈ ಹಿಂದೆಯೂ ಇಲ್ಲಿ ಮತ್ತು ವಿವಿಧ ಪತ್ರಿಕೆಗಳಲ್ಲಿ ವಿವಿಧ ಸ್ಥಳಗಳ ಬಗ್ಗೆ ನಾನು ಬರೆದದ್ದನ್ನು ಸಂಪದಿಗ ಮಿತ್ರರು ಗಮನಿಸಿರಬಹುದು. ಬಿಡುವು ದೊರೆತಾಗ, ಪ್ರವಾಸವೆಂಬ ಮಹದಾನಂದದ ಬಗ್ಗೆ ಮತ್ತು ನಮ್ಮ ಆಲಸಿ ಪ್ರವಾಸೋದ್ಯಮ ಇಲಾಖೆಯ ಬಗ್ಗೆ ವಿವರವಾಗಿ ಬರೆಯಬೇಕೆಂದುಕೊಂಡಿದ್ದೇನೆ. ನೋಡೋಣ.

ನನ್ನ ಹವ್ಯಾಸಕ್ಕೆ ಒಂದು ವರ್ಷಕ್ಕೆ ಸಾಕಾಗೋವಷ್ಟು ಸರಕನ್ನ ಒಂದೇ ಲೇಖನದಲ್ಲಿ ತಿಳಿಸಿದ್ದೀರ.. ಇವಲ್ಲಿ ಕೆಲವನ್ನಾದರೂ ಭೇಟಿಮಾಡುವ ಪ್ರಯತ್ನ ಮಾಡುತ್ತೇನೆ!

ನಾಗರಾಜರೆ, ಬೇಗೂರಿನ ಬಳಿ ಒಂದು ಸಾವಿರ ವರ್ಷದ ಪುರಾತನ ದೇವಸ್ಥಾನ ದ ಮಾಹಿತಿ ಕೊಡ್ತೀರ ಪ್ಲೀಸ್, ಹಾಗೆ ಬೆಂಗಳೂರು ಸುತ್ತಮುತ್ತ ಹೀಗೆ ಯಾವ್ದಾದ್ರು ದೇವಸ್ಥಾನಗಲಿದ್ರೆ ಹೇಳಿ. -ಚೈತನ್ಯ

ನಿಮ್ಮ ಲೇಖನ ಬಹಳ ಚೆನ್ನಾಗಿದೆ, ಚಿಂತನೆಗೆ ಎಡೆ ಮಾಡಿಕೊಟ್ಟಿದೆ. ನನ್ನ ಅನಿಸಿಕೆ ಪ್ರಕಾರ, ಎಲ್ಲಿ ಹೆಚ್ಚು ಹೆಚ್ಚು ಪ್ರೇಕ್ಷಕರು, ಪ್ರವಾಸಿಗಳು ಇರ್ತಾರೋ ಅಲ್ಲಿ ತನಕ ಸರ್ಕಾರ ಕೂಡ ವ್ಯವಸ್ಥೆಗಳನ್ನ ಸರಿಯಾಗಿ ನೋಡಿಕೊಳ್ಳತ್ತೆ. ಒಳ್ಳೆಯ ಆದಯ ಇರತ್ತೆ ನೋಡಿ. ಹೀಗಿರುವಾಗ ನಾವು ನಾಗರೀಕರು ಇಂತಹ ಸ್ಥಳಗಳಿಗೆ ಹೆಚ್ಚು ಹೆಚ್ಚು ಭೇಟಿಕೊಡುವುದರ ಮೂಲಕ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಬಹುದು.