ಕಲಿವುದೆಂದರೆ ಮಾರ್ಗವೆಂಬುದು ಪ್ರಯಾಣವಲ್ಲವೆಂಬ ಅರಿವು : ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆ: ಭಾಗ ೬

To prevent automated spam submissions leave this field empty.

 


 
(೨೧)


     ಇಪ್ಪತ್ತು ವರ್ಷದ ನಂತರ ಶಾಂತಿನಿಕೇತನಕ್ಕೆ ವಾಪಸ್ ಬಂದಿದ್ದೇನೆ ಬಾಹ್ಯಾ ಪರೀಕ್ಷಾಥರ್ಿಯಾಗಿ. ಎಂ.ವಿ.ಎ (ಮಾಸ್ಟಸರ್್ ಆಪ್ ಫೈನ್ ಆಟ್ಸರ್್) ಪದವಿಯ ಅಂತಿಮ ವರ್ಷದ ಪ್ರಾತ್ಯಕ್ಷಿಕಾ ಪರೀಕ್ಷೆಯನ್ನು ಮೌಲ್ಯಮಾಪನ ಮಾಡಲಿಕ್ಕಾಗಿ ನಾಲ್ಕುದಿನದ ಮಟ್ಟಿಗೆ ಬಂದಿದ್ದೇನೆ. ಬೆಂಗಳೂರಿನ ವಾತಾವರಣದಿಂದ ಕುಲಗೆಟ್ಟಿರುವ ಮೈ ನನ್ನದು: ಆರಕ್ಕೂ ಏರದ ಮೂರಕ್ಕೂ ಇಳಿಯದ ಪಕ್ಕಾ ಕನ್ನಡಿಗ ಶರೀರ/ಶಾರೀರವಿದು. ಅಲ್ಲಾದರೋ ೪೪ಡಿಗ್ರಿ ಸುಡುವ ಧಗೆ! 


     "ಮುಂದೊಂದು ದಿನ ಬೆಂಗಳೂರಿನಲ್ಲಿ ಜನ ಸಾಯುವುದು ಧಗೆಯಿಂದಲ್ಲ, ಶಬ್ಧಮಾಲಿನ್ಯದಿಂದ!೧೫೦ ಡೆಸಿಬಲ್ಲೋ ಎಂಥದ್ದೋ, ಅಷ್ಟು ಕಿವಿಗೆ ಸದ್ದು ಬಿದ್ರೆ ಕಿವುಡಾಗ್ತಾರಂತೆ. ಬೆಂಗ್ಳೂರಲ್ಲಿ ಮುಖ್ಯ ರಸ್ತೆಗಳ ಪಕ್ದಲ್ಲಿರೋ ಮನೆಗಳ್ಗೆ ದಿನನಿತ್ಯ ೧೧೦ ಡೆಸಿಬಲ್ಲೋ ಎಂಥದ್ದೋ ಸದ್ದು ಬರ್ತದಂತೆ. ಇನ್ನು ಜನ ಕಿವುಡ್ರಾಗ್ದೇ ಏನ್ಮಾಡ್ಯಾರು. ಕಿವುಡ್ರಾದ್ರು ಪರ್ವಾಗಿಲ್ಲ, ಈ ಐ.ಟಿ.ಐಕ್ಳುಗಳೆಲ್ಲ ಸಂಬಂಧಗಳ ಬಗ್ಗೇನೇ ಕಿವುಡ್ರಾಗ್ಬಿಡ್ತಿದರಲ್ಲ, ಎಂದು ತಮ್ಮ ಜ್ಞಾನದಾನ ಮಾಡಿದ್ದರು ಹಿರಿಯರೊಬ್ಬರು, ಇತ್ತೀಚೆಗೊಮ್ಮೆ.     ೧೯೯೨ರಲ್ಲಿ ಕಲಾಇತಿಹಾಸದ ಸ್ನಾತಕೋತ್ತರ ವಿದ್ಯಾಥರ್ಿಯಾಗಿ ಅಲ್ಲಿಂದ ಹಿಂದಿರುಗಿದ್ದೆ. ಈಗ ಬಾಹ್ಯಾ ಪರೀಕ್ಷಕನಾಗಿ, ಕಲಾಇತಿಹಾಸಕಾರನಾಗಿ ಅಲ್ಲಿಗೆ ಬಂದಿದ್ದೇನೆ. 'ಕಾಲದ ವ್ಯತ್ಯಾಸ' ಹಾಗೂ 'ಹಿನ್ನೆನಪು' ಇವೆರಡೂ ಅಲ್ಲಿನ ನನ್ನನ್ನು ಕಾಡಿದ ಮುಖ್ಯ ಅಂಶಗಳು. ಶಾಂತಿನಿಕೇತನದ ಬಗ್ಗೆ ಬರೆವುದೆಂದರೆ ಈಗಾಗಲೇ ಪ್ರಸಿದ್ಧವಾಗಿರುವ ಅದರ ಇತಿಹಾಸವನ್ನು ಹೊರಗಿನಿಂದ ಭಿನ್ನಗೊಳಿಸುವುದೇ ಆಗಿದೆ.


     ಕೊಲ್ಕೊತ್ತದಿಂದ ಶಾಂತಿನಿಕೇತನಕ್ಕಿರುವ ವ್ಯತ್ಯಾಸ ಬೆಂಗಳೂರಿನಿಂದ ಮೈಸೂರಿಗಿರುವಷ್ಟು ವ್ಯತ್ಯಾಸದಷ್ಟೇ. ೧೯೧೦ರ ಸುಮಾರಿಗೆ ರವೀಂದ್ರನಾಥ್ ಟಾಗೋರರ ತಂದೆ ದೇವೇಂದ್ರನಾಥ್ ಟಾಗೋರ್ ಆರಂಭಿಸಿದ ಶಾಂತಿನಿಕೇತನದಲ್ಲಿ ಕಲೆಯ ಸೃಷ್ಟಿಗಾಗಿ ಶುರುವಾದ ಶಾಲೆ: ಕಲಾಭವನ. ಅದರ ಸುತ್ತಲೂ ಪಾಠಭವನ, ಸಂಗೀತಭವನ, ಹಿಂದಿ ಭವನ, ಚೀನೀ ಭವನ, ಜಪಾನ್ ಭವನ, ತತ್ವಶಾಸ್ತ್ರ, ವಿಜ್ಞಾನ, ಗಣಿತ, ಭಾಷಾವಿಭಾಗ ಇವೇ ಮುಂತಾದ ವಿಭಾಗಗಳಿದ್ದಾವೆ, ಜೊತೆಗೆ.


ಬರಡು ನೆಲವಾಗಿದ್ದ ಆ ಊರಿನ ಹತ್ತಿರದ ರೈಲ್ವೇ ಸ್ಟೇಷನ್ ಎಂದರೆ ಬೋಲ್ಪುರ ಸ್ಟೇಷನ್.


     ೧೯೯೦-೯೨ರಲ್ಲಿ, ನಾನಲ್ಲಿ ಓದುತ್ತಿರುವಾಗ, ಯಾಕಾದರೂ ರಜೆಗೆ ಬೆಂಗಳೂರಿಗೆ ಬರುವೆನೋ ಎನ್ನಿಸಿಬಿಡುತ್ತಿತ್ತು. ಅಂದರೆ ಅದರ ಆಕರ್ಷಣೆ ಅಂತಹುದ್ದೆಂತಲ್ಲ, ಅಲ್ಲಿಂದ ಇಲ್ಲಿಗೆ ಬರುವ ಸರಿಯಾದ ಮಾರ್ಗವೆಂಬುದೇ ಇರುತ್ತಿರಲಿಲ್ಲ. ಇದ್ದರೂ ತಿಳಿಯುತ್ತಿರಲಿಲ್ಲ. ಪ್ರತಿಸಲ ಶಾಂತಿನಿಕೇತನಕ್ಕೆ ಬೆಂಗಳೂರಿನಿಂದ ರೈಲ್ವೇ ಟಿಕೆಟ್ ಬುಕ್ ಮಾಡುವುದೊಂದು 'ಟ್ರೆಷರ್ ಹಂಟ್' ಮಾಡಿದಂತಾಗುತ್ತಿತ್ತು:     ಬೋಲ್ಪುರ ಎನ್ನುವ ನಿಲ್ದಾಣ ಬೆಂಗಾಲದಲ್ಲೆಲ್ಲೂ ಇಲ್ಲ ಕಣ್ರೀ ಎನ್ನುತ್ತಿದ್ದ ಬೆಂಗಳೂರಿನ ರೈಲ್ವೇ ಬುಕ್ಕಿಂಗ್ ಕೌಂಟರಿನಲ್ಲಿದ್ದಾತ.


ಕಂಪ್ಯೂಟರ್ ಈ ಕಡೆ ತಿರುಗಿಸಿ. ತೋರಿಸುವೆ' ಎನ್ನಬೇಕಿತ್ತು, ಆದಷ್ಟು ದೈನ್ಯ ಭಾವದಿಂದ. ಪದಗಳ ಬಳಕೆಯಲ್ಲಿ ಮೂದಲಿಕೆ ಮತ್ತು ಪದಗಳ ಏರಿಳಿತದಲ್ಲಿ ಅತೀವ ದೈನ್ಯವನ್ನು ಸೂಕ್ತವಾಗಿ ಸಮ್ಮಿಶ್ರಗೊಳಿಸಿದಲ್ಲಿ ಮಾತ್ರ ಕೌಂಟರಿನಲ್ಲಿರುವವರು ನಮ್ಮ ಮಾತು ಕೇಳುವುದು.


ಸ್ವಲ್ಪ ಜೋರು ಮಾಡಿ ವಿಚಾರಿಸಿದಲ್ಲಿ,


     "ಬೋಲ್ಪುರವೆಂಬುದು ಭೂಮಿಯ ಮೇಲೇ ಇಲ್ಲ ಕಣಯ್ಯ, ಹೋಗ್ ಹೋಗ್," ಎಂದು ರೇಗಿಬಿಡುವ ಎಲ್ಲ ಅರ್ಹತೆ ಕೌಂಟರಿನೊಳಗಿನವರಿಗಿತ್ತು.


ತೀರ ದೈನ್ಯವಾಗಿ ಕೇಳಿದಲ್ಲಿ,


     "ಭೋಲ್ಪುರವೆಂಬುದು ಭೂಮಿಯ ಮೇಲೆಯೇ ಇಲ್ಲವಲ್ಲಯ್ಯ. ಸುಮ್ಮನೆ ಸಮಯ ಹಾಳು ಮಾಡಿ, ಕಾಲ ವ್ಯರ್ಥ ಮಾಡಿಕೊಳ್ಳಬೇಡ. ಹೋಗಪ್ಪ, ನೆಕ್ಸ್ಟ್ ಯಾರ್ರೀ!," ಎಂದು ಮೃದುವಾಗಿ ಗದರಿಬಿಡುವ ಅರ್ಹತೆ ಕೌಂಟರಿನೊಳಗಿನವರಿಗಿತ್ತು. ಹಾಳು ಸಮಯ ಅವರದ್ದು, ವ್ಯರ್ಥ ಸಮಯ ನನ್ನದು!


ಸಾಧ್ಯವಾದಷ್ಟೂ ಹೆಂಗಸರೇ ಇರುವ ಕೌಂಟರಿಗೆ ಹೋಗುತ್ತಿದ್ದೆ, ಕರುಣಾಮಯಿಗಳೆಂದು. ಹೆಣ್ಣಿನ ಧ್ವನಿಯ ಗದರಿಕೆಯು ಗಂಡಿನ ಧ್ವನಿಯ ನಯವಾದ ಮಾತುಗಳಿಗಿಂತಲೂ ಮಧುರವಾಗಿರುತ್ತಿತ್ತು! ಮಂಗಳೂರಿನ ಜನರ ಕನ್ನಡದ ಬಯ್ಗುಳಕ್ಕಿಂತಲೂ ಜಿಜಾಪುರದವರ ಮೃದುಮಾತುಗಳು ಒರಟಾಗಿ ಕೇಳುತ್ತದಲ್ಲ ಹಾಗೆ ಇದು.


     "ಬೋಲ್ಪುರ್ ಎಂಬ ನಿಲ್ದಾಣವಿಲ್ಲ. 'ಬೋಲ್ಪುರ ಶಾಂತಿನಿಕೇತನ' ವೆಂಬ ನಿಲ್ದಾಣವಿದೆ. ಬರ್ಧಮಾನ್ ಮುಖ್ಯ ನಿಲ್ದಾಣವಾದ ಮೇಲೆ, ಕೊಡಲೆ?" ಎನ್ನುತ್ತಿದ್ದರಾಕೆ.


"ಬೋಲ್ಪುರಕ್ಕೂ ಬರ್ಧಮಾನಕ್ಕೂ ನಡುವೆ ಗುಶ್ಕರಾ ಎಂಬ ನಿಲ್ದಾಣವಿದೆಯೆ?" 


"ಇಲ್ಲ "ಎಂದು ಆಕೆ ತಲೆಯಾಡಿಸುತ್ತಿದ್ದರು. ನನ್ನದೇ ರಿಸ್ಕ್ ತೆಗೆದುಕೊಂಡು ನಾನು ಟಿಕೆಟ್ ತೆಗೆದುಕೊಳ್ಳುತ್ತಿದ್ದೆ, ಗೌಹಾಟಿ ಎಕ್ಸ್ಪ್ರೆಸ್ಸಿನಲ್ಲಿ.


(೨೨)


     ಶುಕ್ರವಾರ ಮಧ್ಯಾಹ್ನ ಶುರುವಾಗುತ್ತಿದ್ದ ಗೌಹಾಟಿ ಎಕ್ಸ್ಪ್ರೆಸ್ ತಲುಪುತ್ತಿದ್ದುದು ನಾಳೆ ಮಧ್ಯರಾತ್ರಿ ಅಥವ ನಾಡಿದ್ದು ಮುಂಜಾನೆಗೇ. ಶಾಂತಿನಿಕೇತನದಿಂದ ಬೆಂಗಳೂರಿಗೆ ನಾವು ರೈಲು ಹಿಡಿಯುತ್ತಿದ್ದುದು ಇನ್ನೂ ಮಜವಾಗಿರುತ್ತಿತ್ತು, ಪ್ರಭಾತಫೇರಿಯಂತೆ:


     ರಾತ್ರಿ ಏಳು ಗಂಟೆಗೆ ಶಾಂತಿನಿಕೇತನದಲ್ಲಿ ಗೌಹಾಟಿ ಟ್ರೈನ್ ಬರುತ್ತಿತ್ತು, ಗೌಹಾಟಿಯಿಂದ. ಬೆಂಗಳೂರಿಗೆ ಬರುವ ನಾವೆಲ್ಲರೂ ಬೆಳಗಿನಿಂದಲೇ ಕಲಾಭವನದಲ್ಲಿರುವ ಗುರುಗಳಿಗೆ, ವಿದ್ಯಾರ್ಥಿಗಳಿಗೆಲ್ಲ ಬಾಯ್ ಬಾಯ್, ಚಾವ್ ಚಾವ್ ಹೇಳಿ, ಜಾವ್ ಜಾವ್ ಎಂದು ಅವರಿಂದ ಅನ್ನಿಸಿಕೊಂಡು, ಅಲ್ಲಿಂದ ಮೂರು ಕಿಲೋಮೀಟರ್ ದೂರವಿರುವ ಬೋಲ್ಪುರಕ್ಕೆ ಹೋಗುತ್ತಿದ್ದೆವು, ಸೈಕಲ್ ರಿಕ್ಷಾದಲ್ಲಿ. ನಮ್ಮನ್ನು ಕಳಿಸಿಕೊಡಲು ಒಂದೈದಾರು ಜನ ಸಹವಿದ್ಯಾರ್ಥಿಗಳೂ ಬಂದಿರುತ್ತಿದ್ದರು. ಏಕೆಂದರೆ ಅವರುಗಳು ಊರಿಗೆ ಹೋಗುವಾಗ ನಾವ್ಗಳೆಲ್ಲ ಅವರನ್ನು ಕಳಿಸಲು ಹೋಗಿರಲಿಲ್ಲವೆ, ಅದಕ್ಕೆ!


      ಹೊಸದಾಗಿ ಪರಿಚಯವಾಗಿದ್ದ ಪಿಂಕಿ (ಬಿಹಾರ), ಕಲ್ಪನಾರಿಗೆ (ಅಸ್ಸಾಂ) ಕನ್ನಡದಲ್ಲಿ ಪದಗಳನ್ನು ಬರೆದುಕೊಟ್ಟಿರುತ್ತಿದ್ದೆವು. ಪತ್ರ ಬರೆವ ಗೀಳು ಅವರುಗಳಿಗೆ. 'ಅಣ್ಣ' ಎಂದಿರಬೇಕಾದ ಕಡೆ 'ಕತ್ತೆ' ಎಂದು ಸುಮಾರು ಪದಗಳನ್ನು ಅನರ್ಥಕರವಾಗಿ ಬರೆದು ಕೊಟ್ಟಿರುತ್ತಿದ್ದೆವು, ಅವರು ಖಂಡಿತ ರಜೆ ಕಾಲದಲ್ಲಿ ಪತ್ರ ಬರೆಯಲಾರರೆಂದು. 'ಹೇಗಿದ್ದೀಯ?'ಎಂಬರ್ಥಕ್ಕೆ 'ನೀನು ಹಲ್ಕ' ಎಂದು, 'ಊಟ ಮಾಡಿದೆಯ?'ಕ್ಕೆ 'ನೀನು ದರಿದ್ರ' ಎಂದು ಇತ್ಯಾದಿ. ತೀರ ಎಚ್ಚರದಿಂದ, ಪತ್ರ ಬರೆಯುವುದಿದ್ದರೆ ಗುಲ್ಬರ್ಗದ ನಮ್ಮ ಸ್ನೇಹಿತರಿಗೆ ಬರೆಯಬೇಕೆಂದೂ, ನನಗೆ ಅಪ್ಪಿತಪ್ಪಿಯೂ ಬರೆಯಬಾರದೆಂದೂ, ನಾನು ಮನೆಯಲ್ಲಿರಲಾರೆನು, ಎಂದೂ ತಾಕೀತು ಮಾಡಿ ಹೇಳಿರುತ್ತಿದ್ದೆ.     ಬೆಂಗಳೂರಿನ ಮನೆ ತಲುಪಿದ ಮೂರ್ನಾಲ್ಕು ದಿನಗಳಲ್ಲೆ ಕಾಗದಗಳು ಬರುತ್ತಿದ್ದವು ಪಿಂಕಿ-ಕಲ್ಪನ ಎಂಬ ಜೋಡಿಗಳಿಂದು, ಭಿನ್ನ ಅಡ್ರೆಸ್ಗಳಿಂದ:


     "ನನ್ನ ಮನೆಗೇ!: ಪ್ರೀತಿಯ ಕತ್ತೆ, ನೀನು ಹಲ್ಕ. ನೀನು ದರಿದ್ರ? ತಿಂದು ಕೊಬ್ಬು ಜಾಸ್ತಿಯಾಯ್ತಾ" ಎಂದು! ಯೋಗಾನುಯೋಗವೆಂಬಂತೆ, ಅಂತಹ ಕಾಗದಗಳೆಲ್ಲವೂ, ನನ್ನ ಮನೆಯವರೆಲ್ಲರೂ ಓದಿದ ನಂತರ, ಕೊನೆಯದಾಗಿ ನನಗೆ ಸಿಗುತ್ತಿತ್ತು! ಮತ್ತೂ ದುರಂತವೆಂದರೆ, ಮನೆಯವರೆಲ್ಲ ಯಾರಿಗೂ ಏನೂ ಗೊತ್ತೇ ಇಲ್ಲವೆಂಬಂತೆ ಸುಮ್ಮನೆ ಮುಸಿಮುಸಿ ನಗುತ್ತಿದ್ದರು. ನೀನು ಮಾಡಿದ್ದು ನಿನಗೇ ಎಂಬ ಗಾದೆಯನ್ನು ಮಾತ್ರ ಅವರುಗಳು ಮನಸ್ಸಿನಲ್ಲಿ ಹೇಳಿಕೊಂಡರೂ, ನನಗೆ ಕೇಳಿಸುತ್ತಿದ್ದುದು ಆಗ ನಿಜವೆನ್ನಿಸಿ, ಈಗ ಭ್ರಮೆ ಎನ್ನಿಸುತ್ತಿರುವುದು ಮಾತ್ರ ಸುಳ್ಳಲ್ಲ!


     ಒಂದೆರೆಡು ಗಂಟೆ ಮುಂಚೆಯೇ ರೈಲ್ವೇ ನಿಲ್ದಾಣಕ್ಕೆ ಹೋಗಿರುತ್ತಿದ್ದ ನಾವುಗಳು, ಗೌಹಾಟಿ ಎಕ್ಸ್ಪ್ರೆಸ್ ಸಹಜವಾಗಿ, ನಿಯಮದಂತೆ ಒಂದೆರೆಡುಮೂರು ಗಂಟೆ ಕಾಲ ತಡವಾಗಿ ಬರುವುದಕ್ಕೆ ಒಗ್ಗಿಹೋಗಿದ್ದೆವು. ಆದರೆ ರಾತ್ರಿ ಏಳಕ್ಕೆ ಬರುವ ರೈಲು ಏನಾದರೂ ಹನ್ನೆರಡಾದರೂ ಬರದಿದ್ದಲ್ಲಿ, ಬೋಲ್ಪುರದ ಸ್ಟೇಷನ್ ಮಾಸ್ಟರ್ ಬಂದು ನಮಗೆ ಹೇಳುತ್ತಿದ್ದುದು ಹೀಗೆ,


     "ಇನ್ನು ಕಾದು ಪ್ರಯೋಜನವಿಲ್ಲ. ಇಂದು ಸಂಜೆಯ ಏಳು ಗಂಟೆಯ ರೈಲು ನಾಳೆ ಸಂಜೆ ಏಳಕ್ಕೇ ಬರುವುದು. ವಾಪಸ್ ಕ್ಯಾಂಪಸ್ಸಿಗೆ ಹೋಗಿ ನಾಳೆ ಸಂಜೆ ಏಳಕ್ಕೆ ಬನ್ನಿ."


ನಾಳೆ ಬೆಳಿಗ್ಗೆ ಕಲಾಭವನದ ಕೇಂದ್ರ ಹೃದಯವಾದ ಚಾತಾಲ್ನಲ್ಲಿ (ಕ್ಯಾಂಟಿನ್) ಕುಳಿತು  ಸ್ನೇಹಿತರ ನಡುವೆ ಲೇವಡಿಗೆ ಸಿಕ್ಕಿಕೊಳ್ಳುತ್ತಿದ್ದೆವು.


"ಅರೆ! ಇನ್ನೂ ಇಲ್ಲೇ ಇದ್ದೀರ? ಅಥವ ಬೆಂಗಳೂರಿಗೆ ಹೋಗಿ ಇಷ್ಟು ಬೇಗ ವಾಪಸ್ ಏನಾದರೂ ಬಂದುಬಿಟ್ಟಿರ?" ಎಂದು!


(೨೩)


     ಒಮ್ಮೆ ಗೆಳೆಯನೊಬ್ಬ ಕಾದು ಕುಳಿತು, ನಿಂತು, ಮಲಗಿ, ಕಾದುಹೋಗಿ, ಮೈಯೆಲ್ಲ ಸುಟ್ಟುಬಿಡುವಷ್ಟು ದೇಹದ ಧಗೆ ಹತ್ತಿಸಿಕೊಂಡು, ಎಷ್ಟು ಬೇಸರದಲ್ಲಿದ್ದನೆಂದರೆ ಬೋಲ್ಪುರದಿಂದ ಕರ್ನಾಟಕ ಗುಲ್ಬರ್ಗಕ್ಕೆ ದಿಕ್ಕಿಗೆ ಮುಖಮಾಡಿ ಕುಳಿತಿದ್ದವ ಕುಂತಲ್ಲೇ ತೂಕಡಿಸತೊಡಗಿಯೇ ಐದು ಗಂಟೆ ತಡವಾದ ನಂತರ, ಅರ್ಧ ಗಂಟೆಯಾಗಿ ಹೋಗಿತ್ತು! ಪಾಪ, ಹೊಸದಾಗಿ ಮದುವೆ ಬೇರೆ ಆಗಿದ್ದು, ಆತನ ಪತ್ನಿ ಉತ್ತರ ಕರ್ನಾಟಕದಲ್ಲಿದ್ದಳು.


     ನಾನೂ ಸಹ ತೂಕಡಿಸತೊಡಗಿ, ನಡುವೆ ಏಕೋ ಎಚ್ಚರವಾಯಿತು. ತಲೆ ಎತ್ತಿ ನೋಡಿದರೆ ಇರುವ ಎರಡೇ ಪ್ಲಾಟ್‍ಫಾರ್ಮಿನ ಮೊದಲನೆಯದರಲ್ಲಿ ಟ್ಘ್ರೈನ್ ಒಂದು ನಿಂತಿದೆ. ಆದರೆ ಅದು ವಿರುದ್ಧ ದಿಕ್ಕಿನ ಡಾರ್ಜೀಲಿಂಗಿಗೆ ಹೋಗುವ ಟ್ರೈನ್! ಆದ್ದರಿಂದ ಮತ್ತೆ ತಲೆ ತಗ್ಗಿಸಿ ತೂಕಡಿಸಿದೆ. ಆರನೆಯದ್ದೊ ಏಳನೆಯದ್ದೋ ಇಂದ್ರೀಯ ಜಾಗೃತವಾಗಿ ಎಡಕ್ಕೊಮ್ಮೆ ಬಲಕ್ಕೊಮ್ಮೆ ಹತ್ತ ಶೇಖಡ ಕಣ್ಣು ತೆರೆದು ನೋಡಿದೆ. ಕರ್ನಾಟಕಕ್ಕೆ ಹೋಗಬೇಕಾದ ಗೆಳೆಯ ಅಲ್ಲಿಲ್ಲ!


     ಟೀ ಕುಡಿಯಲು ಅಥವ ಸ್ವಾರ್ಥಿಯಲ್ಲದಿದ್ದ ಪಕ್ಷದಲ್ಲಿ ನನಗೂ ಒಂದು ಕಪ್ ತರಲು ಹೋಗಿರಬೇಕೆಂದುಕೊಂಡು ಕಣ್ಮುಚ್ಚಿದೆ. ಏನೋ ಅನುಮಾನ ಬಂದು ಕಣ್ತೆರೆದು ನೋಡಿದೆ. ಹೋಗಬೇಕಿದ್ದ ದಿಕ್ಕಿನ ವಿರುದ್ಧ ದಿಕ್ಕಿನ ಟ್ರೈನಿನಲ್ಲಿ ಗೆಳೆಯ ನಿಂತಿರುವುದು ಕಿಟಕಿಯಿಂದ ಕಾಣುತ್ತಿದೆ! ಸ್ಲೋ ಮೋಷನ್ನಿನಲ್ಲಿ ಗಾಡಿ ಮುಂದೆ ಹೋಗತೊಡಗಿದೆ! ಜಗತ್ತು ಗುಂಡಗಿದೆ, ಹೋಗಬೇಕಾದ ಗಮ್ಯವು ಎತ್ತಲಿಂದ ಹೋದರೂ ಸಿಗುತ್ತದೆ ಎಂಬ ಸಿದ್ಧಾಂತ ಆತನಿಂದ ಕಲಿತೆ.


"ಬಿಡಯ್ಯ. ನಾನು ಹೆಂಗೋ ಹೋಗೇನೆ. ಸಾಕಾಯ್ತು ಕಾದು ಕಾದು ಎಂದ ಗೆಳೆಯ," ನಾನು ಹಿಡಿದು ಆತನನ್ನು ಟ್ರೈನಿನಿಂದ ಲಗ್ಗೇಜು ಸಮೇತ ಪ್ಲಾಟ್‍ಫಾರ್ಮಿನ ಮೇಲಕ್ಕೆ ಎಳೆದಾದ ಮೇಲೆ!!


 ಹೋಗಲಿಚ್ಛಿಸುವ ಟ್ರೈನ್ ಎಷ್ಟು ತಡವಾಯಿತೆಂದರೆ ಅದರ ವಿರುದ್ಧ ದಿಕ್ಕಿನ ಗರಿಯಾಹಟ್ಗೆ ಹೋಗುವ ಟ್ರೈನ್ ಹತ್ತಿ ಕುಳಿತಿದ್ದ ಗೆಳೆಯ!                                                                        (೨೪)


      ಏಪ್ರಿಲ್ ೧೬ರ ರಾತ್ರಿ ಹನ್ನೊಂದುವರೆಗೆ ಬೋಲ್ಪುರ ಶಾಂತಿನಿಕೇತನ ರೈಲ್ವೇ ಸ್ಟೇಷನ್ನಿಗೆ ಬಂದಿಳಿದೆ. ಅಲ್ಲಿಂದ ಕಲ್ಕತ್ತಕ್ಕೆ ದಿನವಹಿ ಹೋಗುವುದರಲ್ಲಿ ಕೇವಲ ಮುರು-ನಾಲ್ಕೇ ಟ್ರೈನ್ಗಳು ನಿಲ್ಲುವುದು. ಕೇವಲ ಮೂರು ನಿಮಿಷದ ನಿಲುಗಡೆ. ಎರಡೇ ಪ್ಲಾಟ್‍ಫಾರ್ಮ್ ಇದ್ದದ್ದು ಈಗ ಮೂರಾಗಿದೆ. ಓವರ್ಬ್ರಿಜ್ ಬಂದಿದೆ. 1990ರಲ್ಲಿ ಅಲ್ಲಿ ಸೈಕಲ್ ರಿಕ್ಷಾಗಳು ಮಾತ್ರಇದ್ದವು. ಈಗ ಸೈಕಲ್ರಿಕ್ಷಾಗಳೊಂದಿಗೆ ಒಂದೆರೆಡು ಟ್ಯಾಕ್ಸಿಗಳಿದ್ದವು. ನಡುವೆ ಒಂದಷ್ಟು ಆಟೋರಿಕ್ಷಾಗಳು.


     ಸೈಕಲ್ ರಿಕ್ಷಾ ಹತ್ತಿ ಕುಳಿದೆ. ವಿಶ್ವವಿದ್ಯಾಲಯದ ಪೂರ್ವಪಲ್ಲಿ ಗೆಸ್ಟ್ಹೌಸಿಗೆ ನಾಲ್ಕು ಕಿಲೋಮೀಟರು, ಕೇವಲ ಇಪ್ಪತ್ತೈದು ರೂಪಾಯಿ, ಅದೂ ಮಧ್ಯರಾತ್ರಿಯಲ್ಲಿ. ಬೆಂಗಾಲಿಯಾದರೆ, ದಿನದ ಹೊತ್ತಿನಲ್ಲಿ ಹತ್ತು ರೂಪಾಯಿಗಿಂತ ನಾಲ್ಕಾಣಿ ಹೆಚ್ಚು ಕೊಡುತ್ತಿರಲಿಲ್ಲ, ಒಂದು ಗಂಟೆಯ ಚೌಕಾಸಿಯ ನಂತರ. ಮಧ್ಯರಾತ್ರಿಯಲ್ಲಿ ಬೆಂಗಾಲಿಯೊಬ್ಬ ಹನ್ನೆರೆಡು ರೂಪಾಯಿಗಿಂತ ನಯಾಪೈಸ ಹೆಚ್ಚು ನೀಡುತ್ತಿರಲಿಲ್ಲ. ಹೆಚ್ಚು ಟಾಕಾ (ಹಣ) ಬೇಕೇಬೇಕೆಂದು ಸೈಕಲ್ ರಿಕ್ಷಾವಾಲಾ ಅಪರೂಪಕ್ಕೆ ಹಠ ಹಿಡಿದಲ್ಲಿ -- ನಮ್ಮ ಆಟೋರಿಕ್ಷಾ ಡ್ರೈವರ್ಗಳಂತೆ -- ಬೇಕುಬೇಕಾದಷ್ಟು ಬಿಟ್ಟಿಯಾಗಿ ಸಿಗುತ್ತಿದ್ದುದು ಬಾಯ್ತುಂಬ ಬೆಂಗಾಲಿ ಬೈಯ್ಗಳ -- ಏಕೆಂದರೆ ಬೆಂಗಾಲಿಗಳು ವಾಚಾಳಿಗಳು.


     ನಾನು ಓದುವುದರ ಅಭ್ಯಾಸ ಪ್ರಾರಂಭಿಸಿದ್ದು ಕಲಾಭವನದಲ್ಲಿ. ಅದರ ರೂಢಿಮಾಡಿಕೊಂಡದ್ದು ರೈಲುಪ್ರಯಾಣಗಳಲ್ಲಿ. ಮೊದಲ ಬಾರಿಗೆ ಅಲ್ಲಿ ಹೋದಾಗ, ೨೦೦೦ಕಿಲೋಮೀಟರ್ ಪ್ರಯಾಣ. ನನ್ನ ಹೆಸರು ವೈಟಿಂಗ್ ಲಿಸ್ಟಿನಲ್ಲಿತ್ತು - ರೈಲಿನಲ್ಲಲ್ಲ, ಕಲಾಭವನದ ಕಲಾಇತಿಹಾಸ ವಿಭಾಗದಲ್ಲಿ. ಆದ್ದರಿಂದ ಒಂದೇ ದಿನದಲ್ಲಿ ರಿಸರ್ವೇಷನ್ ಇಲ್ಲದೆ ಬರೋಡದ ಎಂ.ಎಸ್.ವಿಶ್ವವಿದ್ಯಾಲಯದ ಕಲಾವಿಭಾಗಕ್ಕೆ ಹೋದೆ.


     ಇಲ್ಲಿಂದ ಅಲ್ಲಿಗೆಷ್ಟು ದೂರವೋ, ಅಷ್ಟೇ ದೂರ ಅಲ್ಲಿಂದ ಮತ್ತಲ್ಲಿಗೆ. ಅಲ್ಲೂ ವೈಟಿಂಗ್ ಲಿಸ್ಟೇ ಗತಿಯಾಯ್ತು. ವಾಪಸ್ ಶಾಂತಿನಿಕೇತನಕ್ಕೆ ಬಂದೆ, ಸೀಟು ಖಾಲಿಯಾಗಿದೆಯೆಂದು ಯಾರೋ ಹೇಳಿದ್ದರಿಂದ! ಕೂಡಲೆ ಸೇರಿಕೊಂಡು, ಬೆಂಗಳೂರಿಗೆ ವಾಪಸ್ಸಾದೆ, ಒಂದು ವಾರದ ನಂತರ ಬರುವೆನೆಂದು. ವಾಪಸ್ಸು ಹೋಗಿದ್ದೂ ಆಯ್ತು. ಪ್ರತಿ ಪ್ರಯಾಣವು ರಿಸರ್ವೇಷನ್ ಇಲ್ಲದ ನಲವತ್ತೈದು ಗಂಟೆ ಪ್ರಯಾಣ. ಸಿಕ್ಕಿದಾಗ ಸಿಕ್ಕಿದ್ದೇ ಊಟ. ನಡುವೆ ಒಂದೇ ದಿನದ ಟಿಕಾಣಿ. ಒಟ್ಟು ಹದಿನೈದು ದಿನದಲ್ಲಿ ೧೦೦೦೦ ಸಾವಿರ ಕಿಲೋಮೀಟರ್ ರಿಸರ್ವೇಷನ್ ಇಲ್ಲದೆ (ಟ್ರೈನಿನಲ್ಲಿ ಹಾಗೂ ಕಲಾಶಾಲೆಗಳಲ್ಲಿ) ಒಡಿಯಾಡುವಾಗ ಪ್ರಾರಂಭಿಸಿದ್ದು ಓದುವ ಅಭ್ಯಾಸವನ್ನ.


     ಆಗ ಓದುವಾಗ ರೈಲು ಅಲ್ಲಾಡುತ್ತಿತ್ತು. ಈಗ ಯೋಚನೆಗಳು ಅಲ್ಲಾಡುತ್ತವೆ-ಓದುವಾಗ. ನೆನಪಿಟ್ಟುಕೊಳ್ಳುವ ಸಲುವಾಗಿ ಓದಿದರೆ ಏನೂ ನೆನಪಿನಲ್ಲುಳಿಯದು. ಓದುವ ಅಂಶಗಳನ್ನು ತರ್ಕಕ್ಕೆ ಒಪ್ಪಿಸಿ, ನಮ್ಮ ಇತಿಮಿತಿಯಲ್ಲಿ ಅದನ್ನು ವಿವೇಚಿಸಬೇಕು. ಒಂದು ವಿಷಯದ ಬಗ್ಗೆ ತೀರ್ಮಾನಕ್ಕೆ ಬರುವಾಗಲೂ ಅದು ಕಾಲಬದ್ಧವೆಂಬುದನ್ನು ಒಪ್ಪಿಕೊಂಡಿರಬೇಕು. ಕಾಲದ ಇಕ್ಕಳಕ್ಕೆ ಸಿಗುವುದನ್ನೇ ತೀರ್ಮಾನವೆನ್ನುತ್ತೇವೆ.     ಓದುವಾಗ ನಾನೇ ನನ್ನನ್ನು ವಿರೋಧಿಸಬೇಕು. ಆಗ ನಮ್ಮ ಕೊಬ್ಬು, ಈಗೋ, ಸ್ವಯಮಿಕೆ, ಅಹಮಿಕೆ ಎಲ್ಲವೂ ಭೂಮಿಗಿಳಿದು, ತಿಳುವಳಿಕೆ ಎಂಬ ಹೆಸರು ಹಾಗೂ ಆಕಾರ ಪಡೆಯುತ್ತವೆ. ಅಂತಹ ತಿಳುವಳಿಕೆಯಿಂದ ಹುಟ್ಟುವ ಕರುಣೆಗೂ ಆಗಾಗ ಹೊಡೆತ ಬೀಳುತ್ತಿರುತ್ತದೆ: ಈ ಘಟನೆ ನೋಡಿ:


     ಕಲಾಭವನದ ಪಕ್ಕದ ಟಾಗೂರ್ ಸಂಗ್ರಹಾಲವಾದ 'ಉತ್ತರಾಯಣ'ದ ಮುಂದೊಬ್ಬ ಮುದುಕ. ಆತನ ಮುಂದೆ ಮಣ್ಣಿನಿಂದ ಮಾಡಲಾದ ಏಕ್ ಟಕ ಟಾಗೂರ್. ಒಂದೇ ರೂಪಾಯಿಗೊಬ್ಬ ಟಾಗೂರ್. ಆತನ (ಮಾರಾಟಮಾಡುವವನ) ಅಂಗಿಗೆ ನೂರಾರು ತೂತುಗಳು. ಗೆಳತಿ ನನ್ನಲ್ಲಿದ್ದ ಮೂರೇ ಅಂಗಿಯಲ್ಲಿ ಒಂದನ್ನು ಬೇಡಿಕೆಯ ಆದೇಶ ಹೊರಡಿಸಿ ಆತನಿಗೆ 'ಅಯ್ಯೋ ಪಾಪವೇ' ಎಂದು ದಾನ ಮಾಡಿದಳು.


     ಮಾರನೇ ದಿನ: ಆತ ಅದೇ ತೂತುಗಳ ಮಧ್ಯೆ ಇದ್ದ ಬಟ್ಟೆಯೆಂಬ ಚೂರುಪಾರುಗಳಿಂದಾದ ಅಂಗಿಯನ್ನೇ ಧರಿಸಿದ್ದ! ಹಿಂದಿನ ದಿನ ಕೊಟ್ಟಿದ್ದ ನನ್ನ ಅಂಗಿಯನ್ನು ಮಾರಿ, ಕುಡಿದು, ತೂತಂಗಿ ಧರಿಸಿದ್ದ!


"ಒಳ್ಳೆ ಬಟ್ಟೆ ಹಾಕಿಕೊಂಡು ಮಾರಾಟ ಮಾಡಿದರೆ ಕೊಳ್ಳುವವರು ಯಾರು?" ಎಂದು ನನ್ನ ಗೆಳತಿಯ ಜೋರಿಗೆ ಪ್ರತಿಜೋರು ಮಾಡಿದ್ದ. ಬೀದಿವ್ಯಾಪಾರಕ್ಕೂ ಬೀದಿಗೆ ಬೀಳದ ತರ್ಕದ ಅವಶ್ಯಕತೆ ಇದೆ!


     ಓದಿನಿಂದ ಬುದ್ದಿ, ಬುದ್ದಿಯಿಂದ ಮತಿ, ಮತಿಯಿಂದ ತಿಳುವಳಿಕೆ, ಅದರಿಂದ ಕರುಣೆ, ಕರುಣೆಯಿಂದ ಧೋಕ! //


  

ಲೇಖನ ವರ್ಗ (Category):