ವಿದ್ಯಾರ್ಥಿಯಿಂದ ’ಶಿಕ್ಷಕ’ನಾಗುವ ನಡುವಣ ಜನರೇ-ಷನ್ ಗ್ಯಾಪ್ -- ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆ: ಭಾಗ 3ಆ

To prevent automated spam submissions leave this field empty.


 


(ಭಾಗ ೩ಅ ದಿಂದ ಮುಂದುವರೆದಿರುವುದು...)


" ವಿದ್ಯಾರ್ಥಿಯ ಅಪ್ಪಮ್ಮನ? ನಾನು, ಅವರ ಲೆಕ್ಚರರ್. ಏನು? ನನ್ನ ಹೆಸರನ್ನು ಕೇಳಿಯೇ ಇಲ್ಲವೆ? ನಾನು ನಿಮ್ಮ ಮಗುವಿನ ಲೆಕ್ಛರರ್. ಯಾವತ್ತೂ ನನ್ನ ಹೆಸರನ್ನು ನಿಮ್ಮ ಮಗ(ಳು) ನಿಮಗೆ ಹೇಳಿಯೇ ಇಲ್ಲವೆ? ಮೋಸ್ಟ್ಲಿ ಸೆಮಿಸ್ಟರ್ ನಾನು ಆತನ/ಆಕೆಯ ಕ್ಲಾಸನ್ನು ಹೆಚ್ಚು ಹ್ಯಾಂಡಲ್ ಮಾಡುತ್ತಿಲ್ಲ. (ಎಲ್ಲ ಕ್ಲಾಸ್ಗಳನ್ನೂ ನೀವೇ ಹ್ಯಾಂಡಲ್ ಮಾಡುತ್ತಿರುತ್ತೀರ). ಅದಕ್ಕಿರಬಹುದು. ನಿಮ್ಮ ಪುತ್ರ/ಪುತ್ರಿಯನ್ನು ಕುರಿತಾದ ಕಂಪ್ಲೇಂಟ್ ಲೆಟರ್ ಬಂದಿದೆಯಲ್ಲ ನಿಮಗೆ, ನೆನ್ನೆ. ಹ್ಞಾಂ. ಪ್ರಿನ್ಸಿಪಾಲರ ಸಹಿ ಇರುವುದು. ಅವರೇ ನಮ್ಮ ಡಿಪಾರ್ಟ್‍‍ಮೆಂಟಿನ ಹೆಡ್ಡು ಕೂಡ. ಇಲ್ಲ ಎನೋ ವ್ಯತ್ಯಾಸವಾಗಿದೆ. ನಿಮ್ಮ ಮಗ(ಳು) ಜಾಣ(ಣೆ)ನೇ. ಸ್ವಲ್ಪ ಮೂಡ್ ಆಫ್ ಬೇಗ ಆಗಿಬಿಡುತ್ತದೆ, ಅಷ್ಟೇ. ಆದ್ದರಿಂದಲೇ ಕ್ಲಾಸಿಗೆ ಒಂದೈದತ್ತದಿನೈದಿಪ್ಪತ್ತೈದು ನಿಮಿಷ ಲೇಟಾಗಿ ಬರುತ್ತಾನೆ/ಳೆ.
 
ಅಷ್ಟರಲ್ಲಿ ಪ್ರಿನ್ಸಿಪಾಲರು, ಅದೇ ನಮ್ಮ ಹೆಡ್ಡು, ಅಟೆಂಡೆನ್ಸ್ ತೆಗೆದುಕೊಂಡದ್ದೂ ಆಗಿಬಿಟ್ಟಿರುತ್ತದೆ.    ಹೀಗಾಗಿ ನಿಮ್ಮ ಮಗುವಿಗೆ ಅಟೆಂಡೆನ್ಸ್ ಇಲ್ಲಂದಂತಾಗಿರಬೇಕು, ಅಷ್ಟೇ. ನಮ್ಮ ಹೆಡ್ಡು ಸ್ವಲ್ಪ ಲೂಸು. ನಿಮ್ಮ ಹುಡುಗ(ಗಿ) ಓಕೆ. ಒಂದು ಸಲ ಬಂದು ನಮ್ಮ ಬಾಸ್ ಹತ್ತಿರ ಸುಮ್ಮನೆ ಹುಡುಗನ ಪರ ವಹಿಸದೆ ಮಾತನಾಡಿಬಿಡಿ. ಆದರೆ ನಿಮ್ಮ ಮಗುವನ್ನು ಪಾಪ ಮನೆಗೆ ಬಂದ ಮೇಲೆ ಬೈಯಬೇಡಿ. ಪಾಪ ಮೊದಲೇ ಸೂಕ್ಷ್ಮ
ಕಲೆಯ ಶಿಕ್ಷಣದ ಲೈನಿನಲ್ಲಿ ಅಟೆಂಡೆನ್ಸು, ಮಾರ್ಕ್ಸು ಅಂತೆಲ್ಲ ಯಾರು ಮುಖ ನೋಡ್ತಾರೆ. ಸರಿಯಾಗಿ ಕಲಾವಿದರಾಗಿ ಸೆಟ್ಲ್ ಆಗದವರು ಮಾತ್ರ ಟೀಚರ್ಗಳಾಗುತ್ತಾರೆ ಅಷ್ಟೇ. ಆದ್ದರಿಂದ ನಮ್ಮ ಪ್ರಿನ್ಸಿಪಾಲರಂತಹ ಟೀಚರ್ಗಳಿಗೆ ಮುಂದೆ ತಮಗಿಂದ ಹೆಚ್ಚು ಉದ್ದಾರವಾಗಿಬಿಡುವ ನಿಮ್ಮ ಮಕ್ಕಳಂತಹ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಕಂಡರೆ ಸ್ವಲ್ಪ ಹೊಟ್ಟೆಉರಿ ಇದ್ದೇ ಇರುತ್ತದೆ. ಅಂತಹವರು ಕ್ಲಾಸ್ ಶುರು ಆಗುವುದಕ್ಕಿಂತಲೂ ಮುಂಚೆಯೇ ಅಟೆಂಡೆನ್ಸ್ ತೆಗೆದುಕೊಂಡುಬಿಡುತ್ತಾರೆ. ಅದು ಅಪ್ರಜ್ಞಾವಸ್ಥೆಯಲ್ಲಿ ಇಂತಹ ಚೀಟಿ ಬರೆದು ನಿಮ್ಮಂತಹ ಪೇರೆಂಟ್ಸ್ಗಳಿಗೆ ಕಳಿಸಿಬಿಡುತ್ತಾರೆ, ಅಷ್ಟೇ. ನೀವೇನೂ ತಲೆಕೆಡಿಸಿಕೊಳ್ಳಬೇಡಿ. ನಿಮ್ಮ ಮಗುವಿಗೆ ಸರಿಯಾಗಿ ತಿದ್ದಿಹೇಳಿದ್ದೇನೆ. ನನ್ನ ಹೆಸರು ಅದೇ...," ಎನ್ನುವಲ್ಲಿಗೆ ಭಾರತೀಯ ವಿದ್ಯಾರ್ಥಿಗಳು 'ಶಿಕ್ಷೆಗೆ' ಮಾತ್ರ ಸ್ವಲ್ಪ ಹೆದರಿದಂತಾಡಿ, ಸ್ವಲ್ಪ ಕಲಿಯುವುದು ಸಾಧ್ಯವೆಂದಂತಾಯ್ತು.


ಆಮೇಲೆ ಕಲೆಯ ಬಗ್ಗೆ ಅಬ್ಸೆಸ್ಡ್ ಆಗಿ ಅದರ ಪ್ರೀತಿಯಲ್ಲಿ ಬಿದ್ದರೋ: ಆಗಲೂ ಶಿಕ್ಷಕರ ಅಗತ್ಯ ಅವರಿಗೆ ಬೀಳುವುದಿಲ್ಲ. ಶಾಂತಿನಿಕೇತನದ ಕಲಾಭವನದ ವಿಶೇಷತೆಯೇ ಅದು!                                                               (೧೦)


      ಕಲಾಭವನದಲ್ಲಿ ೧೯೯೦ರಲ್ಲಿ ನಾನು ಎಂ.ಎಫ್.ಎ (ಮಾಸ್ಟರ್ಸ್ ಆಪ್ ಫೈನ್ ಆರ್ಟ್ಸ್) ಓದುವಾಗ ನನಗೆ ೧೮೦ ರೂಪಾಯಿ ಸ್ಕಾಲರ್ಶಿಪ್ ದೊರಕುತ್ತಿತ್ತು. ಮಧ್ಯಾಹ್ನ ಹಾಗೂ ರಾತ್ರಿ ಮೆಸ್ನಲ್ಲಿ ಊಟ ಮಾಡಲು ತಿಂಗಳ ಫೀಸು ೧೬೦ ರೂಪಾಯಿ. ಕಾಲೇಜು ಫೀಸು ೧೦ ರೂಪಾಯಿ. ಹಾಸ್ಟೆಲ್ ರೂಮಿನ ಬಾಡಿಗೆ ೧೦ ರೂಪಾಯಿ! ಅಲ್ಲಿ ಬಂದ ಸ್ಕಾಲರ‍್ಶಿಪ್ ಅಲ್ಲಿಗೆ ಸರಿದೂಗುತ್ತಿತ್ತು. 
ಆಗ ಭವನದ ಮಾಮಾನ ಕ್ಯಾಂಟೀನಿನಲ್ಲಿ ಮಣ್ಣಿನ ಮಡಕೆಯ ಚಹವೊಂದಕ್ಕೆ ೫೦ ಪೈಸೆ. ದಿನಕ್ಕೆ ಸುಮಾರು ಹತ್ತರಿಂದ ಹದಿನೈದು ಚಹಾ ಕುಡಿಯುತ್ತಿದ್ದೆವು, "ಬೆಂಗಳೂರಿನ ಖರ್ಚಿಗೆ ಹೋಲಿಸಿದರೆ ಇದೆಷ್ಟು ಚೀಪ್ ಅಲ್ಲವೆ," ಎಂಬ ಚಹಾದ ಬೆಲೆಯ ವಿಷಯದ ಬಗ್ಗೆ ಚರ್ಚಿಸುತ್ತ!


      ಈಗ ೨೦೧೦ರಲ್ಲಿ ಅದು ಶೇಖಡ ೩೦೦ರಷ್ಟು ಏರಿದೆ. ಚಹಾ ಈಗ ಒಂದೂವರೆ ರೂಪಾಯಿ. ಕೇವಲ ಇಪ್ಪತ್ತು ವರ್ಷದ ಹಿಂದಿನ ಅಲ್ಲಿನ ಖರ್ಚನ್ನು ನೆನೆಸಿಕೊಂಡರೆ ಅದು ಇನ್ನೂರು ವರ್ಷದ ಹಿಂದಿನದ್ದೋ ಎಂಬಂತೆನಿಸುತ್ತಿದೆ, ಈಗ. ಮಾಮಾನ ಲೆಕ್ಕಾಚಾರವನ್ನಂತೂ ಜಗತ್ತಿನ ಬೇರ್ಯಾವ ಚಾರ್ಟರ್ಡ್ ಅಕೌಂಟೆಂಟೂ ಮಾಡಲು ಸಾಧ್ಯವಿಲ್ಲ. ನಾನು ನನ್ನ ಗೆಳೆಯ (ಅಥವ ಗೆಳೆತಿ) ಮಾಮಾನ ಕ್ಯಾಂಟೀನಿನಲ್ಲಿ ಎರಡು ಚಾಯ್ ಕೊಂಡುಕೊಂಡೆವು ಎಂದಿಟ್ಟುಕೊಳ್ಳಿ. ನನ್ನ ಲೆಕ್ಕಕ್ಕೆ ಹಾಕಿ, ಎಂದು ನಾನು ಹೇಳಿದೆ ಎಂದಿಟ್ಟುಕೊಳ್ಳಿ. ಮಾಮ ಇಬ್ಬರ ಖಾತೆಯಲ್ಲಿಯೂ ಎರೆಡೆರೆಡು ಚಾಯ್ ಲೆಕ್ಕ ಬರೆದುಬಿಟ್ಟಿರುತ್ತಿದ್ದ! ಎಂದೂ ಯಾರ ಬಳಿಯೂ ಕಾಸು ತೆಗೆದುಕೊಳ್ಳುತ್ತಿರಲಿಲ್ಲ. ಎಲ್ಲರದ್ದೂ ಒಂದು ಖಾತೆ ಆತನ ಬಳಿ ಇರುತ್ತಿತ್ತು. ಹತ್ತು ಜನ ಹತ್ತು ಚಾಯ್ ತೆಗೆದುಕೊಂಡಲ್ಲಿ, ಪ್ರತಿಯೊಬ್ಬರ ಖಾತೆಯಲ್ಲೂ ಹತ್ತು ಚಾಯ್ ಬಾಕಿ ನಮೂದಾಗಿ, ನೂರು ಚಾಯ್ ಲೆಕ್ಕವಾಗಿರುತ್ತಿತ್ತು! ತಿಂಗಳ ಹಿಂದೆ ಕಲಾಭವನಕ್ಕೆ ಹೋಗಿದ್ದಾಗ, ಮಾಮಾ ಇನ್ನೂ ಅಲ್ಲೇ ಇದ್ದ(ರು). ಲೆಕ್ಕ ಹಾಕಿ, ಖಾತೆ ಚುಕ್ತಾ ಮಾಡುತ್ತಿದ್ದರು.                                                             (೧೧)


    ಎಂ.(ಎಫ್) ಎ. ಕ್ಲಾಸಿನಲ್ಲಿ ಕೇವಲ ಒಂದು ಕುರ್ಚಿ ಇರುತ್ತಿತ್ತು, ಈಗಿರುವಂತೆಯೇ. ವಿದ್ಯಾರ್ಥಿಗಳೆಲ್ಲ ನೆಲದ ಮೇಲೇ ಕುಳಿತುಕೊಳ್ಳಬೇಕು ಇಂದಿಗೂ. ಎಲ್ಲರ ಚಪ್ಪಲಿಗಳೂ ಕ್ಲಾಸಿನಿಂದ ಹೊರಗೆ-ದೇವಸ್ಥಾನವನ್ನು ಪ್ರವೇಶಿಸುತ್ತಿರುವಂತೆ. ಶೂಗಳಿಗೆ ಪ್ರವೇಶವಿದೆಯೋ ಇಲ್ಲವೋ ತಿಳಿದಿಲ್ಲ, ಆದರೆ ಅಲ್ಯಾರೂ ಶೂ ಹಾಕುವವರು ಆಗ ಇರಲಿಲ್ಲ. ಈಗ ಹಾಕಿಕೊಳ್ಳುವ ಮೇಷ್ಟ್ರುಗಳು ಡಯಾಬಿಟಿಸ್ಗೆ ಔಷದಿಯೆಂಬಂತೆ ಹಾಗೆ ತೊಡುತ್ತಿದ್ದಾರಷ್ಟೇ. ಕಲಾಭವನದ ಪ್ರತಿ ಪ್ರೊಫೆಸರ್ ಅಂದು ಒಂದು ಸೈಕಲ್, ಛತ್ರಿ, ಟಾರ್ಚು, ಹವಾಯ್ ಚಪ್ಪಲಿ ತೊಟ್ಟು ಬರುತ್ತಿದ್ದರು. ಬೆಂಗಾಲದ ವಾತಾವರಣ ಹಾಗೂ ಬೆಂಗಾಲಿ ಹುಡುಗಿ - ಇಬ್ಬರನ್ನೂ ನಂಬಬೇಡ. ಏಕೆಂದರೆ, ಅವೆರೆಡೂ ಸಹ ಸ್ವತಃ ತಮ್ಮನ್ನು ತಾವೇ ನಂಬವು ಎಂಬ ಪಿತೃಪ್ರಧಾನವದ ಗಾದೆಮಾತೊಂದನ್ನು ಹುಡುಗರು ಆಡಿಕೊಳ್ಳುವುದನ್ನು ಬಹಳಷ್ಟು ಸಲ ಕೇಳಿದ್ದೇನೆ, ಹುಡುಗಿಯರು ಇಲ್ಲದಿರುವಾಗ ಮಾತ್ರ!


    ಕೈತುಂಬ ಸಿಗುತ್ತಿದ್ದ ಸಂಬಳವನ್ನು ಖರ್ಚುಮಾಡಲು ಅಲ್ಲಿ ಮಾಲುಗಳು, ರುಮಾಲೆಗಳು ಮತ್ತು ಮಾಲುಗಳ ವ್ಯಾಪಾರವಿರುತ್ತಿರಲಿಲ್ಲ. ಆದ್ದರಿಂದ ಎಲ್ಲರೂ ದೊಡ್ಡದೊಡ್ಡ ಬಂಗಲೆಗಳನ್ನು, ಅದಕ್ಕಿಂತಲೂ ಬೃಹತ್ತಾದ ತೋಟಗಳನ್ನು ಬೆಳೆಸಿಕೊಂಡು, ಅದರೊಳಗಿನ ಮಿಣುಕು ಬೆಳಕಿನಲ್ಲಿ ಬದುಕುತ್ತಿದ್ದರು. ಒಮ್ಮೊಮ್ಮೆ ಅಂತಹ ಬಂಗಲೆಗಳಲ್ಲಿ ಇಂತಹ ಜನವೆ? ಎನ್ನಿಸಿಬಿಡುವ ಕಾಂಟ್ರಾಸ್ಟ್ ಇರುತ್ತಿತ್ತು.


     ಕಲಾಭವನದ ಕ್ಲಾಸ್ಗಳು ನಡೆಯುತ್ತಿದ್ದುದು ಬೆಳಿಗ್ಗೆ ಏಳರಿಂದ ಒಂಬತ್ತೂವರೆಯವರೆಗಷ್ಟೇ. ಆಮೇಲೆ ಗುರುಶಿಷ್ಯರೆಲ್ಲ ಒಟ್ಟಿಗೆ ಮಾಮನ ಕ್ಯಾಂಟೀನಿನ ಚಹಾ ಸೇವಿಸಿ, ಗುರುಗಳೆಲ್ಲ ಮನೆಗೆ, ಶಿಷ್ಯರೆಲ್ಲ ಸ್ಟುಡಿಯೋಕ್ಕೋ ಗ್ರಂಥಾಲಯಕ್ಕೋ ಹೋಗುತ್ತಿದ್ದರು. ಈಗ ಒಂದೇ ವ್ಯತ್ಯಾಸವೆಂದರೆ, ಆಗ ಕೇವಲ ಕೆ.ಜಿ.ಸುಬ್ರಹ್ಮಣ್ಯನ್ ಮತ್ತು ಸೋಮನಾಥ್ ಹೋರ್ ಅಂತಹ ಘಟಾನುಘಟಿ ಕಲಾವಿದ-ಗುರುಗಳು ಮಾತ್ರ ಕ್ಯಾಂಟೀನಿನಲ್ಲಿ ಹೊಗೆಬತ್ತಿ ಸೇದುತ್ತಿದ್ದರು. ಈಗ ಗುರು, ಶಿಷ್ಯರು ಒಟ್ಟಾಗಿ ಒಂದೇ ಕ್ಯಾಂಟೀನಿನ ಸುತ್ತಲೂ ಹಾಗೆ ಮಾಡುತ್ತಾರೆ!


      ಕಲಾಭವನದಲ್ಲಿ ಜೀವಂತ ನಗ್ನ ವ್ಯಕ್ತಿಗಳ (ಮುಖ್ಯವಾಗಿ ಹೆಂಗಸರ) ಅಧ್ಯಯನ ಒಂದು ಅನಿವಾರ್ಯ ಅಂಗ. ಅಲ್ಲಿ ದಿನವಿಡೀ ಕುಳಿತುಕೊಳ್ಳುವುದು, ಅದೂ ನಗ್ನವಾಗಿ, ಒಂದು ಲಾಭದಾಯಕ ಉದ್ಯಮವಾಗಿ ಹೋಗಿತ್ತು ಖೇಲಿ ದೀ ಎಂಬಾಕೆಗೆ. ಕಳೆದ ಮುವತ್ತು ವರ್ಷದಿಂದ ಹಾಗೆ ಕುಳಿತುಕೊಳ್ಳುತ್ತಿರುವ ಖೇಲಿ ದಿ ಹೊಸದಾಗಿ ಹಾಗೆ ಕುಳಿತುಕೊಳ್ಳಲು ಬಂದಾಕೆಯನ್ನು, ಆಕೆ ವಿವಸ್ತ್ರಳಾಗುವ ಮುನ್ನವೇ, ವಸ್ತ್ರಾಭರಣ ಸಮೇತ ಕ್ಯಾಂಪಸ್ಸಿನಿಂದ ಓಡಿಸಿಬಿಟ್ಟಿದ್ದಳು, ಒಮ್ಮೆ!// 

ಲೇಖನ ವರ್ಗ (Category):