ನಾಲ್ಕು ವರ್ಷದ ನಂತರವೂ ರಾಜ್ಕುಮಾರ್ ! -- ಭಾಗ ೨

To prevent automated spam submissions leave this field empty.

 
(ಹಿಂದಿನ ಸಂಚಿಕೆಯಿಂದ...)                                                                    


                                                            (ಆ)
 
     ಕಳೆದ ಶತಮಾನದ 70ರ ದಶಕದಲ್ಲಿ ಕನ್ನಡ ಶಾಲೆಗೆ ಹೋದವರೆಲ್ಲ ಈಗ ನಲ್ವತ್ತರ ಆಸುಪಾಸಿನಲ್ಲಿರುವವರು. ಅಣ್ಣಾವ್ರ ಚಿತ್ರಗಳನ್ನು ಮೊದಲ ದಿನದ, ಮೊದಲ ಶೋ ಆಗಿ ಕಂಪಲ್ಸರಿ ನೋಡುವುದರ ಜೊತೆ ಜೊತೆಗೇ ಇವರುಗಳಿಗೆಲ್ಲ ಮತ್ತೊಂದು ಸ್ಥಿತಿಪಲ್ಲಟವುಂತಾದುದುಂಟು. ಆರ್ಥಿಕವಾಗಿ ಸ್ಥಿತಿವಂತರಾದ ತಂದೆತಾಯಿಗಳನ್ನು ಪಡೆದಿದ್ದವರು ಇಂಗ್ಲೀಷ್ ಕಲಿತರು. ’ರಾಜ್ ಮತ್ತು ಕನ್ನಡ’ ಹಾಗೂ ’ರಾಜ್ -ರೀತಿಯ ಕನ್ನಡಕ್ಕೆ’ ಹೊಂದಿಕೊಂಡಿದ್ದ ಇಂತಹವರು ಇಲ್ಲಿಂದ ತಮ್ಮ ಬದುಕಿಗೆ ಅಗತ್ಯವಿರುವ ಭೌಗೋಳಿಕ ಮಾದರಿಗಳನ್ನು ಅರಸಿಕೊಂಡು ಎಲ್ಲೆಲ್ಲಿಗೋ ಹೋದದ್ದಿದೆ. ಸರಳವಾಗಿ ಇಂತಹವರನ್ನು ಎ.ಬಿ.ಸಿ.ಡಿ ಗಳು ಎನ್ನುತ್ತೇವೆ. ’ಅಮೇರಿಕನ್ನರಿಗೆ ಬಾರ್ನ್ ಆದ ಕನ್ಫ್ಯೂಸ್ಡ್ ದೇಸಿಗಳು’ ಎಂದಿದರ ಅರ್ಥ. ಅವರೆಲ್ಲ ತಮ್ಮ ತಮ್ಮ ಭೌತಿಕ ಅಗತ್ಯಗಳನ್ನು ಪೂರೆಸಿಕೊಂಡ ನಂತರದ ತಂಪುಹೊತ್ತಿನಲ್ಲಿ ರಾಜ್ಕುಮಾರ್ ನೆನಪಾಗಿ ಉಳಿದುಕೊಂಡಿದ್ದರ ಹಿಂದಿನ ನಾಸ್ಟಾಲ್ಜಿಕ್ ಯಾತನೆಯ ರಹಸ್ಯ ಅವರಿಗೇ ಅರ್ಥವಾಗುತ್ತಿಲ್ಲ.
 
     ಆದರೆ ವಿದೇಶಗಳಲ್ಲಿ ನೆಲೆನಿಂತವರು ಟಿ.ವಿಯಲ್ಲಿ ಅಣ್ಣಾವ್ರು ಅಪಹರಣದ, ಅವಾರ್ಡಿನ ಇತ್ಯಾದಿ ಕಾರಣಗಳಿಂದ ಕಾಣಿಸಿಕೊಂಡಾಗ ಕೂಡಲೆ `ಏನೋ' ಕಳೆದುಕೊಂಡವರಂತೆ ತಡಬಡಾಯಿಸುವುದು ಒಂದು ನಿತ್ಯಸತ್ಯ. ತಮ್ಮ ಮಕ್ಕಳಿಗೂ ಈ ತಳಮಳವನ್ನು ವಿವರಿಸಲಾಗದ ಅಸಹಾಯಕತೆ. ವಲಸಿಗ ಸಂಸ್ಕೃತಿ, ತಂತ್ರಜ್ಞಾನದ ಆಗಮನ ಇತ್ಯಾದಿ ಜಾಗತೀಕರಣದ ಸೊಬಗಿನ ಸಂಕೀರ್ಣತೆಯೂ ಸೋತು ತಲೆಬಾಗುವುದು ರಾಜ್ ಎಂಬ ಸ್ಥಳೀಯ ನಾಸ್ಟಾಲ್ಜಿಯದ ಸೊಗಡಿಗೆ!
 
     ಏನಿಲ್ಲವೆಂದರೂ ಅರವತ್ತರ ದಶಕದಿಂದ ನಾಲ್ಕಾರು ತಲೆಮಾರು ಈ ಸೊಗಡಿನ ಸವಿಯನ್ನು ಸವಿದಿದ್ದಾರೆ. ಚಿತ್ರೀಕರಣದ ತಾಂತ್ರಿಕ ಅದ್ಭುತಗಳಿಗೆಲ್ಲ ಆ ಒಂದು ಮುಖ, ಒಂದು ಡೈಲಾಗ್, ಒಂದು ಚಲನೆ, ಒಂದು ಭಾವ ಪರ್ಯಾಯ ಉತ್ತರವಾಗಿತ್ತು ರಾಜ್ರಲ್ಲಿ. ಆದ್ದರಿಂದಲೇ ಅವರ ಸಂಸ್ಥೆ ನಿರ್ಮಿಸಿದ ಸಿನೆಮಗಳಲ್ಲಿ ತಾಂತ್ರಿಕ ಚಮತ್ಕಾರವು ರಾಜ್-ಅಭಿನಯದ ’ರೂಪದಲ್ಲಿಯೇ’ ಅಷ್ಟೊಂದು ಕಂಡುಬರುವುದು. ರಾಜ್ರನ್ನೇ ಕುರಿತಾದ ಹಾಡಿನ ಸಾಲು, "ನಿನ್ನ ಮುಖ ಕಂಡ ಜನ ಹಿಗ್ಗಿ ನೂತನ, ಬಣ್ಣನೆಗೆ ಬಾರದಿಯ ನೂರು ತಲ್ಲಣ" ನೆನಪಿದೆಯೆ?


     ಮತ್ತೊಂದೆಡೆ ಸ್ಥಿತಿವಂತರಲ್ಲದೆ, ಕನ್ನಡ ಶಾಲೆಯಲ್ಲಿಯೇ ಓದಿದವರು ಸಮಾಜದ ಮಧ್ಯಮವರ್ಗದ ನಿರ್ಮಿತಿಯ ಒಳಗೇ ಉಳಿದುಕೊಂಡು, ಬೆಂಗಳೂರೆಂಬುದು ಮೇಲ್ವರ್ಗಕ್ಕೆ ಮಾತ್ರ ಸೇರಿದ್ದೆಂದು ಬೆಚ್ಚುತ್ತಿದ್ದಾಗ್ಯೂ ಅವರ ನೈತಿಕ ಸ್ಥೆರ್ಯಕ್ಕೆ ಆಸರೆಯಾಗಿ ನಿಂತದ್ದು ರಾಜ್ ವ್ಯಕ್ತಿತ್ವದ ಮೇಲ್ವಿಚಾರಣೆಯೇ!
 
                                                          (ಇ)
 
     ಇಂದಿನ ಬೆಂಗಳೂರು ಹಾಗೂ ಕನ್ನಡಕ್ಕೂ ಮಧ್ಯೆ ಇದ್ದಂತಹ ಕೊನೆಯ ಗಟ್ಟಿ ಕೊಂಡಿ ರಾಜ್. ಕಾಸ್ಮೊಪೊಲಿಟನ್ ಬೆಂಗಳೂರನ್ನು ಸಂಕೇತಿಸುವ ಕೋಶಿಸ್ ನಂಥ ಸ್ಥಳಗಳಲ್ಲಿ ಬೆಂಗಳೂರಿಗೆ ವಲಸಿಗರಾಗಿ ಬಂದವರಿಗೆ ರಾಜ್ಕುಮಾರ್ ಅವರನ್ನು `ಸರಿಯಾಗಿ' ಪರಿಚಯಿಸುವುದು ಒಂದು ಕ್ಲಿಷ್ಟಕರ ವಿಚಾರ. "ಐದು ದಶಕಗಳ ಕಾಲ ನಿರಂತರವಾಗಿ ಒಂದು ಭಾಷಾ ಪ್ರಾಂತ್ಯದಲ್ಲಿ ಸೂಪರ್ಸ್ಟಾರಾಗಿ ಮೆರೆದವರನ್ನು ಎಲ್ಲಾದರೂ ಕಂಡಿರುವಿರಾ?" ಎಂದು ಮ್ಯಾಕ್ಸ್ ಮುಲ್ಲರ್ ಭವನದ ಹುಡುಗಿಯೊಬ್ಬಳನ್ನು ಕೇಳಿದೆ. ಇಲ್ಲವೆಂದು ತಲೆಯಾಡಿಸಿದಳು.


     ಕಳೆದ ವರ್ಷ ಲಂಡನ್ನಿನ ರಾಯಲ್ ಕಾಲೇಜ್ ಆಫ್ ಆರ್ಟ್ಸ್ನಲ್ಲಿ--ಆಶಿಶ್ ರಾಜಾಧ್ಯಕ್ಷ ಸಹಸಂಪಾದಕರಾಗಿರುವ ಭಾರತೀಯ ಸಿನಿಮ ಎನಂಸೆಕ್ಲೋಪಿಡಿಯದಲ್ಲಿ--ರಾಜ್ ಬಗೆಗಿನ ವಿವರವಿರುವ ಪುಟಕ್ಕಾಗಿ ಹುಡುಕಾಡಬೇಕಾಯಿತು. ಬಾಲಿವುಡ್ ಸಿನಿಮಾಗಳೇ ಭಾರತದ ಮುಖ್ಯ ಸಿನಿಮಾಗಳು ಎನಿಸಿಬಿಡುವಂತೆ ಸಂಯೋಜನೆಗೊಂಡಿರುವ ಆ ಬೃಹತ್ ಸಂಪುಟದ ಹೊದಿಕೆಯ ಮೇಲೆ ಒಂದು ದೊಡ್ಡ ಎಂ.ಜಿ. ಆರ್. ಫೋಟೊ! ಟೆಲಿವಿಷನ್ನಿನ ಹಿಂದಿ ಚಾನೆಲ್ಲುಗಳಲ್ಲಿ "ಕನ್ನಡ್" ಸಿನೆಮ ಸೂಪರ್ಸ್ಟಾರ್ ನಿಧನ ಎನ್ನುವಾಗಲೂ ಹಿಂದಿ ಹೊರತುಪಡಿಸಿದ ಭಾರತೀಯ ಭಾಷೆ, ಸಿನೆಮಾ, ಸಂಸ್ಕೃತಿಗಳೆಲ್ಲ ಅಂಚಿನವು ಎಂಬಂತಹ ಭಾವ.
 
     ಕಾಲೇಜಿನಲ್ಲಿದ್ದಾಗ ಕುತ್ತಿಗೆ ಸುತ್ತಲಿನ ತಾಯಿತದಲ್ಲಿ ದೇವರ ಬದಲು ಪುಟ್ಟ ರಾಜ್ಕುಮಾರ್ ಫೋಟೋ ಹಾಕಿಕೊಳ್ಳುತ್ತಿದ್ದೆ ಎಂದು ನಮ್ಮ ಅಂದಿನ ದಿನಗಳ ಬಗ್ಗೆ ಹೇಳಿದರೆ ವಸಾಹತುಶಾಹಿಗಳು ವಸಾಹತೀಕರಣಗೊಂಡವರನ್ನು ನೋಡುವಂತ ಕರುಣಾಜನಕ ನೋಟ ಬೀರುತ್ತಾರೆ ಬೆಂಗಳೂರಿಗೆ ಬಂದ ಹೊಸಬರು. ರಾಜ್ ತೀರಿಕೊಂಡ ಸಂಜೆಯ ಆಗುಹೋಗುಗಳ ನಂತರ ಅಣ್ಣಾವ್ರ ಭಕ್ತನಾಗಿದ್ದ ಗೆಳೆಯನೊಬ್ಬ ಮ್ಯಾಕ್ಸ್ ಮುಲ್ಲರ್ ಭವನದ ಅದೇ ಹುಡುಗಿಗೆ ಕೇಳುತ್ತಿದ್ದ, "ಈಗ ತಿಳಿಯಿತೆ ರಾಜ್ಕುಮಾರ್ ಎಂದರೆ ಯಾರೆಂದು?"
 
     ರಾಜ್ ಹುಟ್ಟುಹಾಕಿದ ಆದರ್ಶ ಮಧ್ಯಮವರ್ಗದ ಮಾದರಿಯನ್ನು ತಾತ್ವಿಕವಾಗಿ ವಿವರಿಸಲು, ಜಾಗತೀಕರಣದ ತೆಕ್ಕೆಯೊಳಕ್ಕೆ ಸೇರಿಸಲು ದೊಡ್ಡ ತೊಡಕಿದೆ. ಕನ್ನಡ ಸಾಹಿತ್ಯವು ಕನ್ನಡ ಸಂಸ್ಕೃತಿಯ ತಾತ್ವಿಕ ಗುತ್ತಿಗೆ ಪಡೆದಿರುವುದು, ಮತ್ತು ಆ ಸಾಂಸ್ಕೃತಿಕ ವಿರಚನೆಯು (ಡಿಸ್ಕೋರ್ಸ್) ವಾಚ್ಯ ಪ್ರಧಾನವಾಗಿದ್ದುಕೊಂಡು, ದೃಶ್ಯಸಂಸ್ಕೃತಿಯ ಬಗ್ಗೆ ಕುರುಡಾಗಿರುವುದು--ಇವೆರೆಡೂ ಈ ತೊಡಕಿಗೆ ಮುಖ್ಯ ಕಾರಣಗಳು.
 
                                                                     (ಈ)
 
     'ಬ್ರಾಹ್ಮಣೀಯ' ಗುಣಗಳೇ ಹೆಚ್ಚಿದ್ದ, ಅಕ್ಷರೇತರ ಕಲೆಗಳಿಗಿಂತ ಅಕ್ಷರಗಳದ್ದೇ ಆಧಿಪತ್ಯವಿದ್ದ ಕನ್ನಡದ ಸಂಸ್ಕೃತಿಯಲ್ಲಿ ಅಬ್ರಾಹ್ಮಣ ವ್ಯಕ್ತಿತ್ವವೊಂದು, ಜಾತ್ಯತೀತ ಮೆಚ್ಚುಗೆ ಪಡೆದುದು ವಿಮರ್ಶಕರ ಮೆಚ್ಚುಗೆಯ ಅಂಶವೂ ಹೌದು, ವೋಟು ಕೇಳುವವರ ಹೊಟ್ಟೆಯುರಿಗೆ ಕಾರಣವೂ ಹೌದು.
 
     ಇಲ್ಲಿ `ಬ್ರಾಹ್ಮಣ್ಯ' ಎಂಬುದನ್ನು, ಅದರ ವಿರುದ್ಧ ಪದವನ್ನೂ ಒಂದು ಮನಸ್ಥಿತಿಯನ್ನಾಗಿ ನೋಡಬೇಕೇ ಹೊರತು ಒಂದು ಜಾತಿ-ನಿಷ್ಠ ದೃಷ್ಟಿಕೋನದಿಂದಲ್ಲವೆಂದು ಸೂಚಿಸುವುದೇ ಒಂದು ಕ್ಲೀಷೆಯಾಗಿ ಹೋಗಿದೆ. ಅಕ್ಷರಗಳಿಗೂ ಬ್ರಾಹ್ಮಣ ಕುಲಕ್ಕೂ ಇರುವ ಆತ್ಮೀಯತೆಯು ಐತಿಹಾಸಿಕ ಸತ್ಯವಾಗಿರುವಂತೆ ಅಕ್ಷರೇತರ (ದೃಶ್ಯಾತ್ಮಕ, ಅಭಿನಯಾತ್ಮಕ) ಕಲೆಗೂ ಶೂದ್ರತ್ವಕ್ಕೂ ಹೆಚ್ಚಿನ ನಂಟಿದೆ. ಅದೇ ಕಾರಣದಿಂದಾಗಿ ಅವಾಚ್ಯ ಕಲೆಗಳಿಗೆ ವಿಮರ್ಶೆಯ ಸೌಕರ್ಯವೂ ಕಡಿಮೆ ಇದೆ. ಆದ್ದರಿಂದಲೇ ದೃಶ್ಯಕಲೆ ಹೇಗಿರಬೇಕೆಂದು ಹೇಳುವ ಗ್ರಂಥಗಳು ಶಾಲಾ ಕಾಲೇಜುಗಳಲ್ಲಿ ಕಂಡುಬಂದರೆ, ಅವುಗಳನ್ನಾಧರಿಸಿ ಮೂಡಿಸಲಾದ ದೃಶ್ಯಕಲೆಯು ಟೈಂಪಾಸಿಗಿರುವ, ಟೂರಿಸ್ಟ್ ತಾಣವಾಗಿವೆ.
 
    ಕನ್ನಡ ಮಾಧ್ಯಮದಲ್ಲಿ ಮೂರನೇ ತರಗತಿಯಷ್ಟೇ ಓದಿರುವ ರಾಜ್ಕುಮಾರ್ ಶಾಲಾಕಾಲೇಜನ್ನೂ ಮನರಂಜನಾ ತಾಣಗಳನ್ನು ಬೆಸೆದ ಏಕೈಕ ಸಾಂಸ್ಕೃತಿಕ ವ್ಯಕ್ತಿತ್ವ.
 
     ರಾಜ್ನೇತೃತ್ವ ವಹಿಸಿದ್ದ ಕನ್ನಡದ ಗೋಕಾಕ್ ಚಳವಳಿಯು (೧೯೮೨) ’ಸ್ಕ್ರೀನ್’ ಎಂಬ ಸಿನಿಮಾ ಪತ್ರಿಕೆಗೆ ಮಿನಿ-ಹಿಟ್ಲರ್ನ ಚಟುವಟಿಕೆಗಳಂತೆ ಕಂಡಿತ್ತು. ಅದೇ ಚಳುವಳಿ ಕನ್ನಡದ ತಾತ್ವಿಕರಿಗೆ ಸಮೂಹ ಸನ್ನಿಯಂತೆಯೂ ಕಂಡಿದ್ದಿದೆ. ಅಣ್ಣಾವ್ರ ನಭೂತೋ ಎಂಬಂತಹ ಜನಪ್ರಿಯತೆಯ ಜಲಸಿ ಇದಕ್ಕೆ ಕಾರಣವಿರಬಹುದೇನೋ?


     ಡಾ. ಯು. ಆರ್. ಅನಂತಮೂರ್ತಿಯವರು ಇದಕ್ಕೆ ಪೂರಕವಾದ ಒಂದು ಘಟನೆಯ ಬಗ್ಗೆ ಹೆಗ್ಗೋಡಿನಲ್ಲೊಮ್ಮೆ ಮಾತನಾಡಿದ್ದರು. ಅವರು ಹೇಳಿದ್ದು ಸಮಗ್ರವಾಗಿ ರಾಜಕುಮಾರ್ ಎಂಬ ಸಾಂಸ್ಕೃತಿಕ ವ್ಯಕ್ತಿತ್ವವನ್ನು ಹೇಗೆ ಶೈಕ್ಷಣಿಕ ಅಧ್ಯಯನವು ಮುಂದೆ ಒಟ್ಟುಗೂಡಿಸಬಹುದೆಂಬುದಕ್ಕೆ ಸಾಕ್ಷಿಃ
 
"ಕನ್ನಡ ಸಾಹಿತ್ಯ ಸಮ್ಮೇಳನಗಳಾದಾಗ ಕಂಬಾರರ ಮಾತನ್ನು ಕೊನೆಯಲ್ಲಿಡುತ್ತಿದ್ದರು. ಏಕೆಂದರೆ ಅಷ್ಟು ಚೆನ್ನಾಗಿ ಅವರು ಹಾಡು ಹೇಳುತ್ತಿದ್ದರು. ನಮಗೆಲ್ಲ ಆಗ ಒಂದು ರೀತಿಯ ಇರಿಸುಮುರಿಸು. ಒಮ್ಮೆ ಅಂತಹ ಸಮ್ಮೇಳನವೊಂದಕ್ಕೆ ರಾಜ್ಕುಮಾರ್ ಆಗಮಿಸಿದ್ದರು. ಆಗ ಕೊನೆಯಲ್ಲಿ ಮಾತನಾಡಿ ಹಾಡುವ ಅವಕಾಶವಿದ್ದುದು ರಾಜ್ಕುಮಾರರಿಗೆ. ಜನ ಎದ್ದು ಹೋಗದಿರಲು ಎಂದು ಆ ಉಪಾಯ ಮಾಡಿದ್ದರು. ಆಗ ನಮಗೆ ಕಂಬಾರರ ಮೇಲೆ ಸೇಡು ತೀರಿಸಿಕೊಳ್ಳುವ ಅವಕಾಶ ದೊರಕಿತ್ತು." ಎಂದು ಮಾರ್ಮಿಕವಾಗಿ ಹೇಳಿದ್ದರು ಯು.ಆರ್.ಎ.
 
     ಕಳೆದ ಒಂದು ಸಾವಿರ ವರ್ಷದ ಕನ್ನಡ ಭಾಷೆಯ ಇತಿಹಾಸದಲ್ಲಿ ಡಾ. ರಾಜ್ಕುಮಾರರಷ್ಟು ಕನ್ನಡ ಭಾಷೆಯೊಂದಿಗೆ ಗುರ್ತಿಸಿಕೊಂಡು ಜನಪ್ರಿಯವಾದ ವ್ಯಕ್ತಿತ್ವ ಮತ್ತೊಂದಿಲ್ಲ. ಮತ್ತು ಇದು ಉತ್ಪ್ರೇಕ್ಷೆಯೂ ಅಲ್ಲ!//

 
 


 

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

<< ಕಳೆದ ಒಂದು ಸಾವಿರ ವರ್ಷದ ಕನ್ನಡ ಭಾಷೆಯ ಇತಿಹಾಸದಲ್ಲಿ ಡಾ. ರಾಜ್ಕುಮಾರರಷ್ಟು ಕನ್ನಡ ಭಾಷೆಯೊಂದಿಗೆ ಗುರ್ತಿಸಿಕೊಂಡು ಜನಪ್ರಿಯವಾದ ವ್ಯಕ್ತಿತ್ವ ಮತ್ತೊಂದಿಲ್ಲ. ಮತ್ತು ಇದು ಉತ್ಪ್ರೇಕ್ಷೆಯೂ ಅಲ್ಲ!>> ಒಂದು ಸಾವಿರ ವರುಷದ ಇತಿಹಾಸದಲ್ಲಿ ಕನ್ನಡ ಭಾಷೆಯಲ್ಲಿ ಸಾಹಿತ್ಯಕೃಷಿ ಮಾಡಿದವರ ಕಾರ್ಯಗಳನ್ನು ಈ ರೀತಿ ಅವಹೇಳನ ಮಾಡುವುದರ ಅಗತ್ಯ ಇತ್ತೇ? ಹಿಂದಿನ ೯೫೦ ವರುಷಗಳಲ್ಲಿ ಯಾರು ಯಾರು ಜನಪ್ರಿಯ ವ್ಯಕ್ತಿಗಳು ಇದ್ದರೆಂಬ ಜ್ಞಾನ ಎಲ್ಲಿಂದ ಸಿಕ್ಕಿತು? ಇತ್ತೀಚೆಗಿನ ಕುವೆಂಪು, ಬೇಂದ್ರೆ, ಡಿ.ವಿ.ಜಿ.,ರಾಜರತ್ನಂ, ಅನಕೃ, ತರಾಸು, ಇನ್ನಿತರ ಹಲವಾರು ಸಾಧಕರ ಸಾಧನೆಗಳು ಒಬ್ಬ ಸಿನಿಮಾ ಕಲಾವಿದನ ಸಾಧನೆಯ ಮುಂದೆ ಹೇಳ ಹೆಸರಿಲ್ಲದೇ ಹೋದವೇ? ಇದು ಉತ್ಪ್ರೇಕ್ಷೆ ಅಲ್ಲದೇ ಮತ್ತೇನು? ತನ್ನ ಅಪಹರಣದ ಹಿಂದಿನ ಕೈವಾಡ ಯಾರದ್ದು ಎನ್ನುವುದರ ಬಗೆಗಿನ ಸತ್ಯಾಸತ್ಯತೆಯನ್ನು ತನ್ನ ಅಭಿಮಾನಿ ದೇವರುಗಳಿಂದ ಮರೆಮಾಚಿದ್ದು ಅದೆಷ್ಟು ನ್ಯಾಯ? ಕನ್ನಡಿಗರಿಗೆ ಮಾಡಿದ ಮೋಸ ಅಲ್ಲವೇ ಅದು? ಇನ್ನು ಸದ್ಯದ ಮಟ್ಟಿಗೆ ಹೇಳೋದಾದರೆ ಹೇಳೋದಾದರೆ ಪಾರ್ವತಮ್ಮ ಇದ್ದಾರಲ್ಲಾ...? ಯಾಕಂದ್ರೆ ರಾಜ್‍ಕುಮಾರ‍್ರನ್ನು ಅರೆಗಳಿಗೆಯೂ ಒಂಟಿಯಾಗಿ ಬಿಡದೇ (ಅಪಹರಣವಾದ ಸಂದರ್ಭವನ್ನುಳಿದು) ಇದ್ದ ಆಕೆ ಆತನಷ್ಟೇ ಜನಪ್ರಿಯ ವ್ಯಕ್ತಿ ಅಲ್ವೇ? ನನಗೆ ಆತನಿಗಿಂತಲೂ ಆತನನ್ನು ಆ ಎತ್ತರಕ್ಕೆ (ಬಲವಂತವಾಗಿ ಲಗಾಮು ಹಿಡಿದು) ಬೆಳೆಸಿದ ಆಕೆಯ ಮೇಲೆ ಗೌರವ ಜಾಸ್ತಿ ಇರಬೇಕು ಅನ್ಸುತ್ತೆ.

ಆತ್ಮೀಯ ಸರಿಯಾದ ಮಾತು ಕನ್ನಡಕ್ಕೋಸ್ಕರ ದುಡಿದ ಮಹಾನುಭವರಿಗೆ ಬೆಲೆಯಿಲ್ಲ ರಾಜ್ಕುಮಾರರಿಗೆ ಅಗ್ರ ಪೀಠ . ಕನ್ನಡ ಅ೦ದ್ರೆ ರಾಜ್ಕುಮಾರ್ ಅ?. ಆತನ ಅವಧಿಯಲ್ಲಿ ಕಮರಿಹೋದ ಕಲಾವಿದರು ನೂರಾರು. ಹರಿ

ರಾಜ್ಕುಮಾರ್ ಬಗ್ಗೆ ಮಾತ್ರ ಮಾತನಾಡುವ ನಾವು, ಅವರ ಸಮಕಾಲೀನರಾದ ನರಸಿಂಹರಾಜು, ಬಾಲಕೃಷ್ಣ,ಅಶ್ವಥ್ ಸೇರಿದಂತೆ ಹಲವರನ್ನು ಜ್ಞಾಪಿಸಿಕೊಳ್ಳುವುದೇ ಇಲ್ಲ. ಅವರೆಲ್ಲರೂ ಕನ್ನಡ ಚಿತ್ರರಂರಗಕ್ಕಾಗಿಯೇ ದುಡಿದವರು ತಾನೆ. ದುರಾದೃಷ್ಟ ಅವರೆಲ್ಲರೂ ತೆರೆಯ ಮೇಲೆ ಬಂದಾಗ ಮಾತ್ರ ನೆನಪಿಗೆ ಬರುತ್ತಾರೆ.

ಅನಿಲ್ ಕುಮಾರರೇ, ನಿಮ್ಮ ರಾಜಕುಮಾರರ ಎರಡೂ ಭಾಗಗಳನ್ನು ಓದಿದೆ. ಏಕೋ ಮನಸ್ಸಿಗೆ ಸ೦ತೋಷ ಮತ್ತು ಬೇಸರ ಎರಡೂ ಒಟ್ಟಿಗೇ ಆದವು. ಮೊದಲನೆಯದಾಗಿ, ನೀವು ರಾಜಕುಮಾರರನ್ನು ೧೦೦೦ ವರ್ಷಗಳವರೆಗೆ ನಿಗದಿ ಪಡಿಸಿದಿರಿ! ತಪ್ಪು. ಕನ್ನಡದ ಅಮರ ನಾಯಕನೆನ್ನಿ! ಅದೇ ಸರಿ!ಹ.ಹ. ಎರಡನೆಯದಾಗಿ ನೀವು ನೇರವಾಗಿ ಕನ್ನಡ ಸಾಹಿತ್ಯ-ಸಾ೦ಸ್ಕೃತಿಕ ಲೋಕಕ್ಕೊಬ್ಬನೇ ನಾಯಕ ಎ೦ದಿದ್ದರೂ ಬೇಸರವಾಗುತ್ತಿರಲಿಲ್ಲ ಆದರೆ ಅವರನ್ನು ನೀವು ವೈಭವೀಕರಿಸುತ್ತಾ ಮತ್ತೆಲ್ಲಾ ಕನ್ನಡ ಸಾಹಿತಿಗಳನ್ನು ಒಮ್ಮೆಲೇ ಮೂಲೆಗೆಸೆದು ಬಿಟ್ಟಿರಿ! ಇದು ಮನಸ್ಸಿಗೆ ಅತ್ಯ೦ತ ಬೇಸರದ ವಿಚಾರ. ಮೂರನೆಯದಾಗಿ, ನನಗನಿಸುತ್ತದೆ ನೀವು ಸುಖಾ ಸುಮ್ಮನೆ ರಾಜಕುಮಾರರನ್ನು ದೇವರ ಪಟ್ಟಕ್ಕೇರಿಸುತ್ತಿದ್ದೀರಿ! ನಿಜವಾಗಿಯೂ ಅವರಿಗೇ ಬೇಸರವಾಗುತ್ತೇನೋ? ರಾಜಕುಮಾರ್ ಕನ್ನಡ ಚಿತ್ರರ೦ಗದಲ್ಲಿ ಒ೦ದು ಸಾ೦ಸ್ಕೃತಿಕ ಹಾಗೂ ಸಾಹಿತ್ಯಿಕ ಅಲ್ಲದೆ ಒ೦ದು ರೀತಿಯ ಸದಭಿರುಚಿಯ ಗಾಳಿ ಬೀಸಲು ಕಾರಣವಾದವರು ಒಪ್ಪೋಣ. ಆದರೆ ನೀವು ಹೇಳುವ ಮಟ್ಟಕ್ಕೆಲ್ಲಾ ಅಲ್ಲ! ರಾಜ್ ಕುಮಾರ್ ಒಬ್ಬ ಉತ್ತಮ ಕನ್ನಡ ನಟ,ಗೋಕಾಕ್ ಚಳುವಳಿಯ ಉತ್ತು೦ಗಕ್ಕೆ ಕಾರಣಕರ್ತ, ಕನ್ನಡ ಭಾಷೆಗಾಗಿ ಸೇವೆ ಸಲ್ಲಿಸಿದವರು. ಅತ್ಯುತ್ತಮ ಸಾಮಾಜಿಕ ಸ೦ದೇಶಗಳನ್ನುಳ್ಳ ಚಿತ್ರಗಳನ್ನು ನೀಡಿದವರು, ನಿರ್ಮಿಸಿದವರು,ರಾಜ್ ರನ್ನು ಕೆಟ್ಟ ಪಾತ್ರಗಳಲ್ಲಿ ನಟಿಸುವುದನ್ನು ನೋಡಲು ಅಭಿಮಾನಿಗಳು ಇಷ್ಟಪಡುತ್ತಿರಲಿಲ್ಲ, ಎಲ್ಲಾ ಸರಿ ಒಪ್ಪುವ, ಆದರೆ ನನಗನ್ನಿಸಿದ ಒ೦ದು ಸತ್ಯ ಸ೦ಗತಿ ಏನೆ೦ದರೆ ರಾಜ್ ತಾವು ಮಾತ್ರ ಬೆಳೆದರು! ಬೇರೆ ಯಾರನ್ನೂ ಬೆಳೆಯಗೊಡಲಿಲ್ಲ! ಎಲ್ಲವನ್ನೂ ನು೦ಗಿ ತಾನೊ೦ದೇ ತೇಗಿದ ಆಕ್ಟೋಪಸ್ ನ೦ತೆ! ಅವರು ಆಲ್ ರೌ೦ಡರ್ ಆಗಿದ್ದಲ್ಲ! ಅವರನ್ನು ಕನ್ನಡಿಗರು ಮಾಡಿದ್ದು! ರಾಜ್ ಎ೦ತಹ ಅತ್ಯುತ್ತಮ ಕಲಾವಿದನಾಗಿದ್ದರೂ ಅವರ ಅನೇಕ ಚಿತ್ರಗಳ ನಟನೆಯಲ್ಲಿ ಏಕತಾನತೆ ಕ೦ಡುಬರುತ್ತಿತ್ತು! ತಾವೇ ಹೇಳಿದ೦ತೆ ರಾಜ್ ಶೈಲಿ! ವ್ಯಕ್ತಿಗಳನ್ನು ವ್ಯಕ್ತಿಗಳ೦ತೆಯೇ ನೋಡಿ! ಅವರ ಒಳಿತು-ಕೆಡುಕು ಎರಡನ್ನೂ ಗುರುತಿಸಿ! ಕೇವಲ ಒ೦ದೇ ರೀತಿಯ ಚಿ೦ತನೆ ಮಾಡುವುದರಿ೦ದ ನಾವು ಓದುಗರಿಗೆ ತಪ್ಪು ಕಲ್ಪನೆಯನ್ನು ನೀಡಿದ ಹಾಗಾಗುತ್ತದೆಯಲ್ಲವೇ? ಉತ್ಪ್ರೇಕ್ಷೆಯಲ್ಲ ಎನ್ನುತ್ತಲೇ ಕೇವಲ ಅತಿಶಯೋಕ್ತಿಗಳನ್ನೇ ಲೇಖಿಸುತ್ತಾ ಹೋದರೆ ಅದನ್ನು ಏನೆನ್ನಬೇಕು? ಈಗಲೂ ಗಾ೦ಧಿನಗರದಲ್ಲಿ ರಾಜ್ ಮೇಲಿನ ಹಾಗೂ ರಾಜ್ ಕುಟು೦ಬದ ಮೇಲಿನ ಜನರಿಗಿರುವ ಭಕ್ತಿಯೆ೦ದರೆ ಬ೦ದೂಕು ತೋರಿಸಿ ಪಡೆಯುವ ನಮಸ್ಕಾರವಿದ್ದ೦ತೆ! ನಾನೂ ಒಬ್ಬ ಅಪ್ಪಟ ರಾಜಕುಮಾರ್ ಅಭಿಮಾನಿಯೇ! ಆದರೆ ಅವರ ನಟನೆಯ ಹಾಗೂ ಸ೦ಗೀತದ ಅಭಿಮಾನಿ! ಅದಕ್ಕಿ೦ತ ಹೆಚ್ಚಿಲ್ಲ! ರಾಜ್ ರನ್ನು ವೀರಪ್ಪನ್ ಅಪಹರಿಸಿದ್ದು ಏಕೆ ಎ೦ಬ ಸತ್ಯ ಇಡೀ ಕರ್ನಾಟಕಕ್ಕೇ ಗೊತ್ತಿತ್ತು! ಅವರ ಬಿಡುಗಡೆಗೆ ಹಣ ಎಲ್ಲಿಯದೂ ಎ೦ತಲೂ ಗೊತ್ತಿತ್ತು! ತನ್ನ ಅಭಿಮಾನಿಗಳನ್ನು ದೇವರುಗಳೆ೦ದು ಸ೦ಭೋಧಿಸುವ ವ್ಯಕ್ತಿಯೊಬ್ಬ ಆ ವಿಚಾರವನ್ನು ಅವರಿ೦ದಲೇ ಮುಚ್ಚಿಟ್ಟಿದ್ದು ಏಕೆ? ಆ ಸತ್ಯದ ಬಗ್ಗೆಯೂ ಜನರಿಗೆ ಗೊತ್ತು! ಕೊನೆಯದಾಗಿ ನಿಮ್ಮ ಲೇಖನಗಳಲ್ಲಿ ಹೆಚ್ಚೆಚ್ಚಾಗಿ ಆ೦ಗ್ಲ ಪದಗಳನ್ನು ಬಳಸುತ್ತಿದ್ದೀರಲ್ಲ! ಅದರ ಬದಲು ಕನ್ನಡ ಪದಗಳನ್ನೇ ಬಳಸಬಹುದಲ್ಲ! ತೀರಾ ಅವಶ್ಯಕವೆನ್ನಿಸದ ಹೊರತಾಗಿ , ಹೆಚ್ಚೆಚ್ಚು ಆ೦ಗ್ಲ ಪದಗಳನ್ನು ಬಳಸುವುದು ಅಸಹನೀಯ. ಈ ವಿಚಾರದಲ್ಲಿ ರಾಜಕುಮಾರರನ್ನೇ ಏಕೆ ನೀವು ಆದರ್ಶವನ್ನಾಗಿಸಿಕೊಳ್ಳಬಾರದು? ನಮಸ್ಕಾರ. ನನ್ನಿ.

ಡಾ ರಾಜ್ ಅವರನ್ನ ಸುಖಾ ಸುಮ್ಮನೆ ವೈಭವೀಕರಿಸಿದ್ದೀರಿ.. ಕನ್ನಡಕ್ಕೆ,ಕನ್ನಡ ಸಾಹಿತ್ಯಕ್ಕೆ ಬೇರೆ ಯಾರೂ ಕೆಲ್ಸಾ ಮಾಡಿಲ್ಲ ಅನ್ನೋದನ್ನ ಪದೇ ಪದೇ ಹೇಳೀರಿ..ಇದು ಕನ್ನಡದ ಬೇರೆ ಸಾಹಿತಿಗಳಿಗೆ ಚಿತ್ರರಂಗದ ಇತರೇ ಮೇರು ಜನರಿಗೆ ಅಪಮಾನ ಮಾಡುವಂತಹ ಲೇಖನ.. ಇನ್ನು ಇದು ನಾಲ್ಕು ವರ್ಷಗಳ ಮೊದಲು ರಾಜ್ ತೀರಿಕೊಂಡಾಗ ಬರೆದ ಲೇಖನ,,ಆ ಸಮಯದ ಸೂತಕದ ಮನಸ್ಥಿತಿಗೆ ಮಾತ್ರ ಸೂಕ್ತವಾದಂತಹ ಹಾಗೂ ಮುದ ನೀಡುವಂಥದ್ದು.. ನಮ್ಮಲ್ಲಿ ಯಾರಾದರೂ ಮಡಿದಾಗ ಅವರನ್ನ ತೆಗಳುವುದು ಕಡಿಮೆ ಹೊಗಳುವುದು ಜಾಸ್ತಿ..ಇದು ಅದೇ ರೀತಿಯ ಲೇಖನ..

ಸರಿಯಾಗಿ ಹೇಳಿದ್ದೀರಿ ಶ್ರೀಕಾ೦ತ್, ನಾಲ್ಕು ವರುಶದ ಹಿ೦ದೆ ಸ೦ಪೂರ್ಣ ಸಮೂಹ ಸನ್ನಿಗೆ ಒಳಗಾಗಿ ಬರೆದ ಲೇಖನವಿರಬೇಕು. ಅ೦ಧ ಅಭಿಮಾನವಲ್ಲದೆ ಬೇರೇನೂ ಅಲ್ಲ.

ಹೌದು ಹೊಸೂರರೇ, ಕೆಲವೊ೦ದು ವಿಚಾರಗಳಿಗೆ ನಾನು ಪ್ರತಿಕ್ರಿಯಿಸಬಾರದು, ವೃಥಾ ಕಾಲಹರಣ ವೆ೦ದು ಸುಮ್ಮನಿದ್ದುಬಿಡುತ್ತೇನೆ. ಆದರೆ ಈ ಥರಹದ ವ್ಯಕ್ತಿತ್ವವನ್ನು ವೈಭವೀಕರಿಸಿದ ಲೇಖನ ಕ೦ಡು ಬ೦ದಾಗ ಪ್ರತಿಕ್ರಿಯಿಸಲೇ ಬೇಕಾಗುತ್ತದೆ! ಡಾ|| ರಾಜರ ನಟನೆಯ ಹತ್ತಿರ ಅವರ ಮಕ್ಕಳು ಸುಳಿಯಲಿಕ್ಕಾದರೂ ಆಗುತ್ತದೆಯೇ? ಎ೦ಥೆ೦ಥ ಪ್ರತಿಭಾವ೦ತ ನಟರೆಲ್ಲಾ ಅವರಡಿ ನಲುಗಿ ಹೋಗಿದ್ದಾರೆ! ಶಿವರಾಜ್ ಕುಮಾರ್ ಆಗಲೀ ರಾಘಣ್ಣನಾಗಲೀ ಯಾ ಈಗಿನ ಪುನೀತ್ ಆಗಲೀ ಒಬ್ಬರಲ್ಲಿಯಾದರೂ ನಟನೆಯ ಗ೦ಧವಾದರೂ ಇದೆಯೇ? ರಾಜ್ ಕುಮಾರ್ ನಿರ್ದೇಶಕರ ನಟನಾಗಿದ್ದರು. ಹಿ೦ದಿನ ರಾಜ್ ರ ಹಿಟ್ ಚಿತ್ರಗಳಿಗೆ ಆ ಕಾಲದ ಅತ್ಯುತ್ತಮ ನಿರ್ದೇಶಕರ ನಿರ್ದೇಶನ ಹಾಗೂ ರಾಜ್ ರ ನಟನೆಯೂ ಕಾಣಿಕೆಯಾಗಿ ದೊರೆತಿತ್ತು! ಆದರೆ ಅವರ ಮಕ್ಕಳ ಹಿಟ್ ಚಿತ್ರಗಳೆ೦ದು ಪರಿಗಣಿಸಲಾದ ಪಟ್ಟಿಯಲ್ಲಿ ನಿರ್ದೇಶನ, ಕಥೆ, ಸ೦ಗೀತ ಮತ್ತು ಉಳಿದ ತಾ೦ತ್ರಿಕ ವರ್ಗದ ಸಹಾಯ ಬಿಟ್ಟರೆ ನಟನೆಯಿ೦ದ ಏನು ಕಾಣಿಕೆ ಆ ಚಿತ್ರಗಳಿಗೆ ಸಿಕ್ಕಿದೆ? ಕೇವಲ ರಾಜ್ ರ ಹೆಸರಿನಿ೦ದ ಮಾತ್ರವೇ ಅವರ ಮಕ್ಕಳ ಬೇಳೆ-ಕಾಳು ಬೇಯುತ್ತಿರೋದೇ ವಿನ: ಅವರ ಸ್ವ-ಸಾಮರ್ಥ್ಯದಿ೦ದಲ್ಲ!

ರಾಘವೇಂದ್ರ, ಅಸು, ಹರಿ ಮತ್ತು ಶ್ರೀಕಾಂತ್ ಅವ್ರೆ, ನಿಮ್ಮ ಮಾತು-ಅಭಿಪ್ರಾಯಗಳಿಗೆ ನನ್ನ ಸಹಮತವಿದೆ. ರಾಜಕುಮಾರ ಒಬ್ಬ ಅಪ್ರತೀಮ ಕಲಾವಿದಾ, ಕಲಾದೇವಿಯ ಆರಾಧಕ ಅನ್ನೋದ್ರಲ್ಲಿ ಎರಡು ಮಾತಿಲ್ಲ..ಆದ್ರೆ ಅವರೊಬ್ಬರಿಂದಲೇ ಕನ್ನಡ ಅಂದ್ರೆ ಅದು ಕನ್ನಡದ ಪ್ರಗತಿಗಾಗಿ ದುಡಿದ , ಕನ್ನಡವನ್ನ ಶ್ರೀಮಂತಗೊಳಿಸಿದ ಅಸಂಕ್ಯಾತ ಮಹನೀಯರಿಗೆ ಮಾಡಿದ ಅಪಚಾರವಗುತ್ತೆ...!!! "ಕಾಣದಿಹ ಕೈಯೊಂದು ಸೂತ್ರಾ ಹಿಡಿದಿದೆ" ಅನ್ನೋದನ್ನ ಅವ್ರೆ ಹೇಳಿದ್ದಾರೆ.ಅದು ಚಿತ್ರಗೀತೆಯಾದರು ಅವರ ಬಾಳಿಗೆ ಹಿಡಿದ ಕನ್ನಡಿಯನ್ತಿದ್ದ ಹಾಡು. ರಾಜಕುಮಾರ್ ಬಗ್ಗೆ ಪ್ರತಿಯೊಬ್ಬ ಕನ್ನಡಿಗನಿಗೂ ಹೆಮ್ಮೆ ಇದ್ದೆ ಇರುತ್ತೆ ಆದ್ರೆ ನೀವು ಹೇಳಿದಷ್ಟು ಅಲ್ಲ ಅನ್ನೋದು ನನ್ನ ಅಭಿಪ್ರಾಯ... - ನಮಸ್ಕಾರಗಳೊಂದಿಗೆ ಸಿದ್ದು...

ನಮ್ಮನ್ನು ಉದ್ದೇಶಿಸಿ ಆರಂಭಿಸಿದ ನೀವು, ಕೊನೆಗೆ, ಈ ಕೆಳಗಿನಂತೆ ಬರೆದು, ಅಪಾರ್ಥಕ್ಕೆ ಆಸ್ಪದ ಮಾಡಿದ್ದೀರಿ. <<ರಾಜಕುಮಾರ್ ಬಗ್ಗೆ ಪ್ರತಿಯೊಬ್ಬ ಕನ್ನಡಿಗನಿಗೂ ಹೆಮ್ಮೆ ಇದ್ದೆ ಇರುತ್ತೆ ಆದ್ರೆ ನೀವು ಹೇಳಿದಷ್ಟು ಅಲ್ಲ ಅನ್ನೋದು ನನ್ನ ಅಭಿಪ್ರಾಯ>>

ಅಸು ಅವ್ರೆ , ನನ್ನ ಮಾತಿನ ಅರ್ಥ - " ಇ ಲೇಖನದ ಲೇಖಕರು ಹೇಳಿರುವ೦ತೆ ಕನ್ನಡಿಗರಿಗೆ ರಾಜ್ ಮೇಲೆ ಅಷ್ಟೊಂದು ಹೆಮ್ಮೆ ಇಲ್ಲಾ ಅಂತ...." -- ಅಪಾರ್ಥಕ್ಕೆ ಎಡೆ ಮಾಡಿಕೊಟ್ಟಿದ್ದಕ್ಕೆ ಕ್ಷಮೆ ಇರಲಿ... - ನಮಸ್ಕಾರಗಳೊಂದಿಗೆ ಸಿದ್ದು...

ಪುನೀತ್ - ಹೆಚ್ಚು ಕಡಿಮೆ ಎಲ್ಲಾ ಚಿತ್ರಗಳೂ ಹಿಟ್, ಕನ್ನಡದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ. ಇದರೊಂದಿಗೆ ಬಾಲನಟನಾಗಿ ರಾಷ್ಟ್ರ ಪ್ರಶಸ್ತಿ ರಾಘಣ್ಣ - ನಂಜುಂಡಿ ಕಲ್ಯಾಣ, ಗಜಪತಿ ಗರ್ವಭಂಗ, ಕಲ್ಯಾಣ ಮಂಟಪ - ಸಾರ್ವಕಾಲಿಕ ಶ್ರೇಷ್ಟ ಚಿತ್ರಗಳು. ಆಸೆಗೊಬ್ಬ ಮೀಸೆಗೊಬ್ಬ, ಸೂತ್ರಧಾರ, ಪಕ್ಕದ್ಮನೆ ಹುಡುಗಿ ಎಲ್ಲಾ ಜನ ಮೆಚ್ಚುಗೆ ಪಡೆದವುಗಳು ಶಿವಣ್ಣ - ಆನಂದ್-ರಥಸಪ್ತಮಿ-ಮನಮೆಚ್ಚಿದ ಹುಡುಗಿ (ಹ್ಯಾಟ್ರಿಕ್ ಹೀರೊ), ಜನುಮದ ಜೋಡಿ, ನಮ್ಮೂರ ಮಂದಾರ ಹೂವೆ. ಇತ್ತೀಚೆಗೆ ಜೋಗಿ, ತವರಿಗೆ ಬಾ ತಂಗಿ ಬಹಳ ಜನಪ್ರಿಯತೆ ಪಡೆದವುಗಳು. ಪುನೀತ್, ಶಿವಣ್ಣರಂತೆ ಕುಣಿತ ಕನ್ನಡದಲ್ಲಿ ಬಂದಿಲ್ಲ (ವಿನೋದ್ ರಾಜ್ ಬಿಟ್ಟು) ಪೂರ್ವ ಜಗತ್ತಿನ ಯಾವ ಚಿತ್ರನಟರ ಮಕ್ಕಳೂ ಈ ಕಾಲದಲ್ಲಿ ಆ ಪಾಟಿ ಮಿಂಚುತ್ತಾರೆಂದು ಅಪೇಕ್ಷಿಸುವುದು ಸಾಧ್ಯವಿಲ್ಲ. ಯಾಕೆಂದರೆ ಈಗ ಯಾರೂ ಅಷ್ಟೊಂದು ವ್ಯಕ್ತಿ ಪೂಜೆ ಮಾಡೊಲ್ಲ. ಕಾಂಪಿಟೇಶನ್ ಕೂಡಾ ಈಗ ಜಾಸ್ತಿ. ಇದಕ್ಕೆ ಇತರ ತಾರಾ ಸುಪುತ್ರರಾದ ಅಭಿಷೇಕ್ ಬಚ್ಚನ್ ಹಿಡಿದು ರಜನಿಕಾಂತನ ಮಗನವರೆಗೂ ಸಾಕ್ಷಿ

ಪುತ್ರತ್ರಯದ ಸಿನೆಮಾಗಳ ಬಗ್ಗೆ ತಾವು ಹೇಳಿದ್ದೆಲ್ಲಾ ಸರಿಯೇ.. ಇಲ್ಲಿಯೇ ಉದ್ಬವಿಸುತ್ತದೆ ಮೂಲಭೂತ ಪ್ರಶ್ನೆ.. ಒಂದುವೇಳೆ ಇವರು ರಾಜಣ್ಣನ ಮಕ್ಕಳಾಗದೇ ಇದ್ದಲ್ಲಿ ಇವರಿಗೆ ತಮ್ಮ ಕೆರಿಯರ್-ನಲ್ಲಿ ಸಿಕ್ಕ ಅವಕಾಶ ಸಿಗುತ್ತಿತ್ತೇ? ಇವರ ಸಿನೆಮಾಗಳನ್ನು ನೋಡಲು ಜನರತ್ತ ಸೆಳೆದ ಶಕ್ತಿಗಳಲ್ಲಿ ಕನ್ನಡಿಗರಿಗೆ ರಾಜಣ್ಣನ ಮೇಲಿದ್ದ ಅಸ್ಖಲಿತ ಪ್ರೀತಿಯೇ, ಹಾಗೂ ಅಣ್ಣಾವ್ರ ಮಕ್ಕಳು ಎಂಬ ಮಮಕಾರವೇ ಅತಿ ಮುಖ್ಯ ಕಾರಣ, ಹೊರತಾಗಿ ಈ ತ್ರಿಮೂರ್ತಿಗಳ ಅಸಾಮಾನ್ಯ ಪ್ರತಿಭೆಯೇನೂ ಅಲ್ಲ. ತಮ್ಮ ಕುಟುಂಬದ ಪ್ರಭಾವದ ಮೂಲಕ (ಅದರ ಹಿಂದಿದ್ದ ರಾಜಣ್ಣನವರ ಪ್ರಬಲ ಜನಪ್ರಿಯತೆಯ ಮೂಲಕ) ಇವರೆಲ್ಲಾ ತಮ್ಮ ಬೇಳೆ ಬೇಯಿಸಿಕೊಂಡರು ಅಷ್ಟೇ.. ಹಾಗೂ ಹೀಗೂ ಮಾಡಿ ಕನ್ನಡ ಸಿನೆಮಾದಲ್ಲಿ ತಮ್ಮವರ ಬಳುವಳಿ ಮುಂದುವರೆಯುವಮತೆ ನೋಡಿಕೊಂಡಿದ್ದಾರೆ. ಇರುವ ಮೂವರಲ್ಲಿ ಪುನೀತು ಸ್ವಲ್ಪ ಪರವಾಗಿಲ್ಲ.. ಇನ್ನು ನನ್ನ ಪ್ರಕಾರ ಇತರ ತಾರಾಪುತ್ರರು ಇತ್ತೀಚೆಗೆ ಅಂದರೆ ಜಾಗತೀಕರಣ, ಇಲೆಕ್ಟ್ರಾನಿಕ್ ಯುಗದಲ್ಲಿ ಬರುತ್ತಿರುವವರು. ಈಗಿನದು ವಿಶಾಲ ಜಗತ್ತು. ಇಲ್ಲಿ ಖಂಡಿತ ವ್ಯಕ್ತಿಪೂಜೆ ಸಾಧ್ಯವಿಲ್ಲ. ಇಲ್ಲಿ ಯಶಸ್ವಿಯಾಗಲು ಬೇರೆಯದೇ ರೀತಿಗಳಿವೆ. ಆದರೆ ಅದೇ ನಮ್ಮ ತ್ರಿಮೂರ್ತಿಗಳು ಇದಕ್ಕೆ ಸಾಕಷ್ಟು ಹಿಂದೆಯೇ ತಮ್ಮ ಝಾಂಡಾ ಹೂಡಿಯಾಗಿತ್ತು ಅಲ್ಲವೇ..

ನೀವು ಹೇಳುವುದು ನೋಡಿದರೆ ಅಪ್ಪನ ದುಡ್ಡೆಲ್ಲಾ ದಾನಕ್ಕೇ ಮೀಸಲೆಂದು ಕಾಣ್ತದೆ. ಇದ್ಯಾವ ಹೊಸ ಕಾನೂನೋ ಕಾಣೆ. ಇನ್ಮೇಲೆ ಇದರ ವಿರುದ್ಧ ದಾವೆ ಹೂಡಲು ಶುರು ಆಗುತ್ತೆಂದು ಭಯ ನನಗೆ. ಸದ್ಯ ಯಾರಾದರೂ ಈ ತರ ಅಪ್ಪನ ಹಣ ಕಳಕೊಂಡವರ ಸಲಹೆ ಕೇಳಬೇಕು. ಆದರೆ ಅಭಿಷೇಕ್, ಸೈಫ್, ನಾಗಾರ್ಜುನಾದಿಗಳು ಇನ್ನೂ ಅಪ್ಪನಾಸ್ತಿ ಇಟ್ಟುಕೊಂಡು ಮುಂದೆ ಬರ್ತಿರೋದೊಂದು ಧೈರ್ಯ ! ಅಂತೂ ಪುನೀತು ಸ್ವಲ್ಪ ಪರವಾಗಿಲ್ಲ ಅನ್ನೋಷ್ಟರ ವರೆಗೆ ಬಂದ್ರಲ್ಲ್ಲ, ಅದೊಂದು ಸಮಾಧಾನ. ಇವರ ಯಶಸ್ಸಿನ ಬಗೆಗಿನ ನಿಮ್ಮ ಇತರೆ ಗೊಂದಲಗಳ ಬಗೆಗೆ ನನಗೆ ಆಸಕ್ತಿ ಇಲ್ಲ.

ನೀವು ಈಗ ಹೇಳಿರುವುದಕ್ಕೆಲ್ಲಾ ನನ್ನ ಪ್ರತಿಕ್ರಿಯೆಗಳು ಕಾರಣವಾಗಿದ್ದರೆ, ಒಂದೋ ಹೇಳಬೇಕಾದುದನ್ನು ನಾನು ಸರಿಯಾಗಿ ಹೇಳಿಲ್ಲ, ಯಾ ಓದಿ ಅರ್ಥ ಮಾಡಿಕೊಳ್ಳಬೇಕಾದವರು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ. ಪುನೀತು ಹಾಗೂ ಇನ್ನಿಬ್ಬರ ಕುರಿತಾದ ನನ್ನ ಅಭಿಪ್ರಾಯಗಳನ್ನ ಮೊದಲಿನಿಂದ ಸರಿಯಾಗಿ ಓದಿದ್ದಲ್ಲಿ ನಿಮಗೆ ಈ ಸಮಾಧಾನ ಸ್ವಲ್ಪ ಮೊದಲೇ ಆಗುತ್ತಿತ್ತೋ ಏನೋ!! ಅನಗತ್ಯವಾಗಿ ಚರ್ಚೆ ಎಳೆಯುವುದರಲ್ಲಿ ನನಗೂ ಆಸಕ್ತಿ ಇಲ್ಲ. ಅವರವರ ಅಭಿಪ್ರಾಯ ಅವರಿಗೆ. ಜೈ!!

ರಾಜ್ ಕನ್ನಡ ಸಿನೆಮಾ/ರಂಗಭೂಮಿ ಸಂಸ್ಕೃತಿಯ ಅನರ್ಘ್ಯ ರತ್ನ ಹೌದು, ಇದರಲ್ಲಿ ಎರಡು ಮಾತಿಲ್ಲ ಆದರೆ ೧) ಸಿನೆಮಾ ಸಾಹಿತ್ಯಕ್ಕಿಂತ ಹೆಚ್ಚು ಜನರನ್ನು ತಲುಪಿದ ಮಾಧ್ಯಮ. ಆದ್ದರಿಂದ ಸಿನೆಮಾ ಕ್ಷೇತ್ರದಲ್ಲಿರುವ ವ್ಯಕ್ತಿ ಸಾಹಿತ್ಯಿಕ ವಲಯದಿಂದ ಹೆಚ್ಚು ಜನಪ್ರಿಯ ಮತ್ತು ಪ್ರಭಾವಶಾಲಿಯಾಗಿರುತ್ತಾನೆ. ಉದಾಹರಣೆಗೆ ಬಾ ನಲ್ಲೆ ಮಧುಚಂದ್ರಕೆ, ನನ್ನ ಪ್ರೀತಿಯ ಹುಡುಗಿ, ಬೆಳದಿಂಗಳ ಬಾಲೆ, ಎಡಕಲ್ಲು ಗುಡ್ಡದ ಮೇಲೆ .. ಇವೆಲ್ಲ ಚಲನಚಿತ್ರಗಳು ಎಲ್ಲರಿಗು ಗೊತ್ತು ಆದರೆ ಹೆಚ್ಚಿನವರಿಗೆ ಇವು ಕಾದಂಬರಿ ಆಧಾರಿತ ಎಂದು ಗೊತ್ತಿಲ್ಲ. ಇನ್ನೊಂದು ಉದಾಹರಣೆ ನನ್ನ ಮಾತನ್ನು ಹೆಚ್ಚು ಸಮರ್ಥಿಸಬಲ್ಲದು. ಡಾ ಎ ಪಿ ಜೆ ಅಬ್ದುಲ್ ಕಲಾಮ್ ಶೂನ್ಯದಿಂದ ಆಕಾಶದ ಎತ್ತರಕ್ಕೆ ಬೆಳೆದವರು. ಆದರೆ ಅವರು ಅಷ್ಟು ಜನಪ್ರಿಯರಲ್ಲ. ಅವರ ಹೆಸರು ಸಮಾಜದ ಒಂದು ಸ್ತರದಲ್ಲಿ ಮಾತ್ರ ಗುರುತಿಸಲಾಗುತ್ತದೆ. ಅದ್ದರಿಂದ ಜನರನ್ನು ತಲುಪಲು ಯಾವ ಮಾಧ್ಯಮವನ್ನು ಬಳಸಲಾಗಿದೆ ಎಂಬುದು ಪ್ರಮುಖವಾಗುತ್ತದೆ. (ಶಶಿಕುಮಾರ್ ಬರೆದ ಒಂದು ಲೇಖನಕ್ಕೆ ನಾನು ನೀಡಿದ ಪ್ರತಿಕ್ರಿಯೆಯ ಭಾಗ) ೨) ರಾಜ್ ಅಭಿನಯಿಸಿದ ಪಾತ್ರಗಳಿಂದ ಎಲ್ಲರ ಮೆಚ್ಚುಗೆ ಪಡೆದರು. ತಾನು ಧರಿಸುವ ಪಾತ್ರಗಳು ಯಾವ ರೀತಿಯ Image ಸೃಷ್ಟಿಸುತ್ತವೆ ಎಂದರೆ ಇನ್ನೊಂದು ಉದಾಹರಣೆ ನೀಡುತ್ತೇನೆ. ರಮಾನಂದ್ ಸಾಗರ್ ರ 'ರಾಮಾಯಣ' ಬಂದಾಗ ಅರುಣ್ ಗೋವಿಲ್ ಹೋದ ಕಡೆಯೆಲ್ಲ ಜನರು ಅವರ ಕಾಲಿಗೆ ಬೀಳುತ್ತಿದ್ದರಂತೆ. ೩) ಕನ್ನಡ ಚಿತ್ರರಂಗದಲ್ಲಿ ರಾಜ್ ಕುಟುಂಬದ dominance ಕೂಡ ಮಹತ್ವದ ಪಾತ್ರವಹಿಸುತ್ತದೆ. ೪) <<ಅದೇನೆಂದರೆ ತಮ್ಮ ಜನ್ಮಸಿದ್ಧ ಮುಗ್ಧತೆಯಿಂದ ರಾಜಕಾರಣ ಪ್ರವೇಶ ಮಾಡದಿದ್ದುದು>> ಜನ್ಮ ಸಿದ್ಧ ಮುಗ್ಧತೆಯಿಂದ ರಾಜ ಕಾರಣ ಪ್ರವೇಶ ಮಾಡಲಿಲ್ಲ, ಆದರೆ ಮುಗ್ಧತೆ ಒಂದು limit ತನಕ ಮಾತ್ರ ಇದ್ದಾರೆ ಚೆನ್ನ ಅಲ್ಲವೇ. ಆ ಮುಗ್ಧತೆ ಲೀಲಾವತಿಯವರ ವಿಷಯದಲ್ಲೂ ಅನ್ವಯವಾಗುತ್ತದೆ ಎಂದು ಅಂದುಕೊಳ್ಳುತ್ತೇನೆ ೫) <<ಆಲ್ರೌಂಡರ್>> ಹಾಡು ಹಾಡುವುದು ಮತ್ತು ನಟನೆಯಿಂದ ಆಲ್ರೌಂಡರ್ ಆಗುವುದಾದರೆ ಶಂಕರ್ ನಾಗ್ ರನ್ನು ಏನೆನ್ನಬೇಕು, ರವಿಚಂದ್ರನರನ್ನು ಏನೆನ್ನಬೇಕು? ರಾಜ್ ಕನ್ನಡದ ಸಂಸ್ಕೃತಿಯ ಒಂದು ಮುಖ ಎಂದು ಹೇಳಬಹುದೇ ವಿನಃ <<ಕಳೆದ ಒಂದು ಸಾವಿರ ವರ್ಷದ ಕನ್ನಡ ಭಾಷೆಯ ಇತಿಹಾಸದಲ್ಲಿ ಡಾ. ರಾಜ್ಕುಮಾರರಷ್ಟು ಕನ್ನಡ ಭಾಷೆಯೊಂದಿಗೆ ಗುರ್ತಿಸಿಕೊಂಡು ಜನಪ್ರಿಯವಾದ ವ್ಯಕ್ತಿತ್ವ ಮತ್ತೊಂದಿಲ್ಲ. ಮತ್ತು ಇದು ಉತ್ಪ್ರೇಕ್ಷೆಯೂ ಅಲ್ಲ!//>> ಎಂದು ಹೇಳುವುದು ಉತ್ಪ್ರೇಕ್ಷೆ ಅಲ್ಲದೆ ಬೇರೇನೂ ಅಲ್ಲ. ಏಕೆಂದರೆ ಒಂದು ಸಾವಿರ ವರ್ಷಗಳಲ್ಲಿ ಬಂದು ಹೋದ ಬಸವಣ್ಣ, ಕನಕದಾಸ, ಪುರಂದರ ದಾಸ, ಕುವೆಂಪು, ಬೇಂದ್ರೆ, ಇನ್ನೂ 'ಸಾವಿರ' ವ್ಯಕ್ತಿಗಳನ್ನು ಕಡೆಗಣಿಸಿದಂತಾಗುತ್ತದೆ

ಸಾಂಸ್ಕೃತಿಕವಾಗಿ ಒಂದು ಉತ್ತಮ ಮಟ್ಟದ ಬದುಕನ್ನು .. ಇಡಿ-ಇಡಿಯಾಗಿ ಮೂರು ತಲೆಮಾರುಗಳಿಗೆ ಕಟ್ಟಿಕೊಟ್ಟವರಾರು..? ಸರಳತೆಯ ಜೀವನ ನಡೆಸಿದ ವ್ಯಕ್ತಿಯ ಬಗ್ಗೆ ಮಾತಾಡುವಾಗ.. ಆತನ ಸಂಬಂದಿಕರನ್ನೆಳೆದು ತರುವುದೇತಕ್ಕೆ..? ಕನ್ನಡಿಗರು ಅಲ್ಪಸಂಖ್ಯಾತರೇ .. ಎಲ್ಲಿ ಎಂದು ಕೇಳುವ ಮುನ್ನ ಬೆಂಗಳೂರಲ್ಲಿ ಬಂದು ನೋಡಿ... ಸ್ವಾಮಿ.. ರಾಜ್ ರಿಂದಾಗಿ ಕಲಾವಿದರು ಕಮರಿದರೆನ್ನುವ ಮಾತಿಗೇನಾದರೂ ಪುರಾವೆ ಇದೆಯೇ..? ಈಗ ಬೆಳಕಿಗೆ ಬಂದ(!) ಪ್ರತಿಭೆಗಳ ಬೆಳಕು ಎಷ್ಟು ದಿನ ಬೆಳಗುತ್ತಿದೆ? ರಮೇಶ್ ಅಂತಹ ಕಲಾವಿದರು ಈಗ ಇಬ್ಬರು ಹೆಂಡಿರ ಸಂಸಾರದಂತ ಅಸಂಬದ್ದ ಸಿನೆಮಾ ಮಾಡುವುದರಲ್ಲಿ ಏಕೆ ನಿರತರಾಗಿದ್ದಾರೆ? ಎಷ್ಟು ಜನ ಕಲಾವಿದರು ನಿಮ್ಮ-ನಮ್ಮ ಬದುಕಿನ ಗುರಿ ಕಟ್ಟಿಕೊಡುವಲ್ಲಿ ಸಫಲರಾಗಿದ್ದಾರೆ. ರಾಜ್ ಚಿಂತನೆಯ ಗೂಡಾಗಿರಲಿಲ್ಲ. ಅವರು ಹಿರಿಯ ಚೇತನಗಳ ಚಿಂತನೆಗಳನ್ನು ಸರ್ವರಿಗೂ ತಲುಪಿಸುವ ಮಾಧ್ಯಮವಾಗಿದ್ದರು .. ರಾಜ್ ನನ್ನ ಬದುಕಿನಲ್ಲಿ ನಾನು ಅತ್ಯಂತ ಗೌರವಿಸುವ ಕೆಲವೇ ವ್ಯಕ್ತಿಗಳಲ್ಲಿ ಒಬ್ಬರು. ಮೊದ್ಮಣಿ --

<<ರಾಜ್ ನನ್ನ ಬದುಕಿನಲ್ಲಿ ನಾನು ಅತ್ಯಂತ ಗೌರವಿಸುವ ಕೆಲವೇ ವ್ಯಕ್ತಿಗಳಲ್ಲಿ ಒಬ್ಬರು.>> ಸಿನಿಮಾ ಕಲಾವಿದರ ಅಭಿಮಾನಿಗಳ ದೊಡ್ಡ ದೊಡ್ಡ ಸಂಘಗಳೇ ಇವೆ. ಇದೇನೂ ವಿಶೇಷವಲ್ಲ. ವ್ಯಕ್ತಿ ಪೂಜೆ ಹೊಸದೇನೂ ಅಲ್ಲ. ನಮ್ಮ ದೇಶದಲ್ಲಿ ವ್ಯಕ್ತಿ ಮುಖ್ಯನಾಗುತ್ತಾನೆಯೇ ವಿನಃ ಆತನ ಉಪದೇಶಗಳಲ್ಲ. ರಾಮನನ್ನು ಪೂಜಿಸುವವರ ಮಾತಾ ಪಿತರು ಅನಾಥರಾಗಿರುತ್ತಾರೆ. ಕೃಷ್ಣನನ್ನು ಪೂಜಿಸುವವರು ಕೆಲಸಕ್ಕೆ ರಜೆಹಾಕಿ ದೇವಸ್ಥಾನಕ್ಕೆ ಪೂಜೆ ಮಾಡಲು ಹೋಗುತ್ತಾರೆ. ರಾಜಕುಮಾರನ ಜೀವನ ಒಂದು ಸರಳ ಜೀವನ ಅನ್ನುವುದಕ್ಕೆ ನನಗೂ ಯಾವ ಪುರಾವೆಯೂ ಸಿಕ್ಕಿಲ್ಲ. ನನ್ನ ದೃಷ್ಟಿಯಲ್ಲಿ ಆತ ಒಬ್ಬ ವಿಧೇಯ ವ್ಯಕ್ತಿ ಅಷ್ಟೇ. ಅದಕ್ಕಿಂತ ಹೆಚ್ಚೇನೂ ಕಂಡು ಬಂದಿಲ್ಲ ನನಗೆ. ಈ ವಿಧೇಯತೆಯೇ ಆತನ ಸಿಸಿಮಾ ವೃತ್ತಿಗೆ ಬೆಳವಣಿಗೆಗೆ ಪೂರಕವೂ ಸಹಕಾರಿಯೂ ಆಯ್ತು. ಆತ ೪೦ - ೪೫ ವರುಷಗಳಷ್ಟು ಕಾಲ ನಟನೆ ಮಾಡಿದ್ದಾನೆ ಅನ್ನುವುದು ವಿಶೇಷವೇನಲ್ಲ. ಅದು ಅವನ ವೃತ್ತಿ. ಅದನ್ನು ಬಿಟ್ಟು ಆತನಿಗೆ ಬೇರೇನು ಬರುತ್ತಿತ್ತು? ಅದರಲ್ಲೂ ಎಲ್ಲರಂತೆ ಆತನೂ ಕೋಟ್ಯಾನು ಕೋಟಿ ಸಂಪಾದಿಸಿದ್ದು ಸುಳ್ಳೇ? ಓರ್ವ ಯೊಧನ ಜೀವನ ಅದಕ್ಕಿಂತ ಮಿಗಿಲು. ಓರ್ವ ರೈತನ ಜೀವನ ಅದಕ್ಕಿಂತ ಮಿಗಿಲು. ಓರ್ವ ನಿಸ್ವಾರ್ಥಿ ವೈದ್ಯನ ಜೀವನ ಅದಕ್ಕಿಂತ ಮಿಗಿಲು. ಎಲ್ಲಾ ವೃತ್ತಿಗಳೂ ತಮ್ಮ ತಮ್ಮ ಸ್ಥಾನಗಳಲ್ಲಿ ಮಿಗಿಲೇ. - ಆಸು ಹೆಗ್ಡೆ

<<ಸಾಂಸ್ಕೃತಿಕವಾಗಿ ಒಂದು ಉತ್ತಮ ಮಟ್ಟದ ಬದುಕನ್ನು .. ಇಡಿ-ಇಡಿಯಾಗಿ ಮೂರು ತಲೆಮಾರುಗಳಿಗೆ ಕಟ್ಟಿಕೊಟ್ಟವರಾರು..?>> ಸಾಮ್ಸ್ಕೃತಿಕವಾಗಿ ಅಮ್ದರೆ ಹೇಗೆ. ಅವರ ಸಂಸಾರದಲ್ಲಿ ಯಾವ ಸಂಸ್ಕೃತಿ ಯಾವ ರೀತಿಯ ಸಂಸ್ಕಾರ ಇದೆ ಅಂತ ಯಾರಿಗೆ ಗೊತ್ತು. ಆತನ ಮಕ್ಕಳಿಗೆ ಕೊಟ್ಟಷ್ಟು ಪ್ರಾಮುಖ್ಯತೆ, ಆ ಮಕ್ಕಳಿಗಿಂತ ಸ್ಪುರದ್ರೂಪಿಯಾಗಿರುವ ಆತನ ಅಳಿಯದೇವರಿಗೆ (ರಾಮ್‍ಕುಮಾರ್) ಕೊಡಲೇ ಇಲ್ಲ ಏಕೆ? ಆತನೂ ನಟನೇ ತಾನೇ? ಆತ ಅವರೆಲ್ಲರಿಗಿಂತ ಒಳ್ಲೆಯ ನಟ ಅಂತ ನನ್ನ ಅನಿಸಿಕೆ. >>ರಾಜ್ ಚಿಂತನೆಯ ಗೂಡಾಗಿರಲಿಲ್ಲ. ಅವರು ಹಿರಿಯ ಚೇತನಗಳ ಚಿಂತನೆಗಳನ್ನು ಸರ್ವರಿಗೂ ತಲುಪಿಸುವ ಮಾಧ್ಯಮವಾಗಿದ್ದರು ..>> ಇತರರಿಗಿಂತ ಭಿನ್ನವಾದ ಚಿಂತನಾಧಾರೆ ಯಾವುದದು? ಒಂದು ನಾಲ್ಕು ಸಾಲು ಬರೆಯುತ್ತೀರಾ? <<ರಮೇಶ್ ಅಂತಹ ಕಲಾವಿದರು ಈಗ ಇಬ್ಬರು ಹೆಂಡಿರ ಸಂಸಾರದಂತ ಅಸಂಬದ್ದ ಸಿನೆಮಾ ಮಾಡುವುದರಲ್ಲಿ ಏಕೆ ನಿರತರಾಗಿದ್ದಾರೆ?>> ದಾರಿ ತಪ್ಪಿದ ಮಗ ಅನ್ನುವ ಚಿತ್ರ ಹೇಗಿತ್ತು? ಶಂಕರ್ ಗುರುವಿನ "ಬಿಡಿಸುವೇ ಈಗಲೇ ನಿನ್ನ ಕನ್ಯಾಸೆರೆ" ಅನ್ನುವ ಸಾಲಿರುವ ಆ ಹಾಡು ಹೇಗಿತ್ತು? <<ಎಷ್ಟು ಜನ ಕಲಾವಿದರು ನಿಮ್ಮ-ನಮ್ಮ ಬದುಕಿನ ಗುರಿ ಕಟ್ಟಿಕೊಡುವಲ್ಲಿ ಸಫಲರಾಗಿದ್ದಾರೆ.>> ಆತನ ಬದುಕಿನಲ್ಲಿ ಯಾವ ಗುರಿ ಇತ್ತು? ನಮಗೆ ಅದು ಯಾವ ರೀತಿಯಲ್ಲಿ ಆದರ್ಶಪ್ರಾಯವಾಗಿತ್ತು? ನಮ್ಮ ಜೀವನದ ಗುರಿಯನ್ನು ಬೇರೆಯವರು ಕಟ್ಟಿಕೊಡಬೇಕೇಕೆ? ಮಾತಾಪಿತರನ್ನೇ ಗೌರವಿಸದವರಿಗೆ ಸಿನಿಮಾನಾಯಕರ ಜೀವನ ಆದರ್ಶವೇ? ತಂದೆಯ ಹೆಸರು ಹೇಳಲಾಗದ ಮಗನಿಗೆ ಜನ್ಮವಿತ್ತದ್ದು ನಮಗೆ ಆದರ್ಶವೇ?

ತನ್ನ ಪಾಲಿಗೆ ಬಂದ ಕಾಯಕವನ್ನು ಅದ್ಭುತವಾಗಿ, ಹ್ರುದಯ ಮುಟ್ಟುವ ರೀತಿಯಲ್ಲಿ ಮಾಡಿ ಮುಗಿಸಿರುವ ನಟ ನಮ್ಮ ಅಣ್ಣವರು. ಅವರು ಅವರೇ ಹೇಳುವಂತೆ ನಿರ್ದೇಶಕರ ನಟ. ಕಲೆಗೋಸ್ಕರ ಅವರು ಕಲಿತ ವಿದ್ಯೆಗಳು ಅಪಾರ. ಕಲಿಕೆಯಲ್ಲಿನ ಚಾತಿ, ವೇಗ, ಶ್ರದ್ದೆ, ಭಕ್ತಿ ನಮಗೆಲ್ಲಾ(ನನಗಂತೂ) ಆದರ್ಶ. ಕನ್ನಡನಾಡಿನ ಮಹಾನ್ ಚೇತನಗಳು, ವೀರಾಧಿವೀರರು, ಕವಿಗಳು ...etc.. ಬಹುಜನಕ್ಕೆ ತಿಳಿದಿದ್ದೇ ಇವರ ಪೌರಾಣಿಕ ಪಾತ್ರಗಳಿಂದ. ಅವರ ಪಾತ್ರಗಳಿಂದ ಇಸ್ಟೆಲ್ಲಾ ಕಂಡ ನಾವು ಪಾತ್ರಧಾರಿಯನ್ನೇ ಪಾತ್ರಗಳಿಗಿಂತ ಆರಾಧಿಸಿದೆವು ಎ೦ಬುದು ನನ್ನ ಮಟ್ಟಿಗೆ ಸುಳ್ಲಲ್ಲ. ಅವರನ್ನು ಪರದೆಯ ಮೇಲೆ ನೊಡುವುದೇ ಒಂತರಾ ಖುಶಿ. ಬೇರೆ ಕೆಲವು ನಟರ ನಟನೆ ನೋಡಿದರೆ ಇನ್ನೂ ಸ್ವಲ್ಪ ಚನ್ನಾಗಿ ಮಾಡಬಹುದಿತ್ತೇನೋ ಅನ್ನಿಸಬಹುದು. ಆದರೆ ಅಣ್ಣವರ ನಟನೆ.... ಅದ್ಯಾವುದೇ ಇರಲಿ.... ವಿಷ್ಲೇಶಣೆ ಮಾಡುವ ಮನಸೇ ಬರದೆ ಪಾತ್ರದೊಳಗೆ ನಾನೂ ಮುಳುಗಿರುತ್ತೇನೆ, ಸಂತೋಷ ಪಡುತ್ತೇನೆ... ಅವರು ಕನ್ನಡ ಚಿತ್ರರಂಗದ ಒಬ್ಬರು ಮಹಾನ್ ಚೇತನ.

// ಸಾಮ್ಸ್ಕೃತಿಕವಾಗಿ ಅಮ್ದರೆ ಹೇಗೆ. ಇತ್ತೀಚಿನ ಚಿತ್ರಗಳ ರೌಡಿಸಂ ಅಂತೂ ಅಲ್ಲ್ . //ಇತರರಿಗಿಂತ ಭಿನ್ನವಾದ ಚಿಂತನಾಧಾರೆ ಯಾವುದದು? ಒಂದು ನಾಲ್ಕು ಸಾಲು ಬರೆಯುತ್ತೀರಾ? ಭಿನ್ನವಾದ ಚಿಂತನಧಾರೆಯ ಬಗ್ಗೆ ನಾನು ಎಲ್ಲೂ ಹೇಳಿಲ್ಲ್. //ಶಂಕರ್ ಗುರುವಿನ "ಬಿಡಿಸುವೇ ಈಗಲೇ ನಿನ್ನ ಕನ್ಯಾಸೆರೆ" ಅನ್ನುವ ಸಾಲಿರುವ ಆ ಹಾಡು ಹೇಗಿತ್ತು? ಕನ್ಯಾಸೆರೆ ಬಿಡಿಸುವುದು ಅಂದರೆ ಮದುವೆಯಾಗುವುದು ಅನ್ನುವ ಅರ್ಥ ಬಹುಜನಕ್ಕೆ ಗೊತ್ತಿದೆ ಎಂದು ನನ್ನ ಅಭಿಪ್ರಾಯ. //ಆತನ ಬದುಕಿನಲ್ಲಿ ಯಾವ ಗುರಿ ಇತ್ತು? ನಮಗೆ ಅದು ಯಾವ ರೀತಿಯಲ್ಲಿ ಆದರ್ಶಪ್ರಾಯವಾಗಿತ್ತು? ೧೪-೪-೨೦೧೦ ರ ಕನ್ನಡಪ್ರಭ ಪುಟ ೧೦ನ್ನು ಓದಿ ನೋಡಿ. //ನಮ್ಮ ಜೀವನದ ಗುರಿಯನ್ನು ಬೇರೆಯವರು ಕಟ್ಟಿಕೊಡಬೇಕೇಕೆ? ನಮ್ಮಂತ ಹುಲುಮಾನವರು ಅವರಿವರಿಂದ ನೋಡಿ, ಕೇಳಿ, ತಿಳಿದುಕೊಳ್ಳುತ್ತೇವೆ. //ಮಾತಾಪಿತರನ್ನೇ ಗೌರವಿಸದವರಿಗೆ ಸಿನಿಮಾನಾಯಕರ ಜೀವನ ಆದರ್ಶವೇ? ನಾವು ಮಾತಾಪಿತರನ್ನು ಗೌರವಿಸದವರು ಎಂದು ನಿಮಗನ್ನಿಸದಿರಲು ಕಾರಣವಾದರೂ ಏನು..? ಮಾತಾಪಿತರನ್ನು ಗೌರವಿಸುವ ಗುಣ ರಾಜಕುಮಾರರ ಪಾತ್ರಗಳಿಂದ ನಮಗೆ ಬಂದಿದ್ದರೂ ಅಚ್ಚರಿಯಿಲ್ಲ್. // ತಂದೆಯ ಹೆಸರು ಹೇಳಲಾಗದ ಮಗನಿಗೆ ಜನ್ಮವಿತ್ತದ್ದು ನಮಗೆ ಆದರ್ಶವೇ? ಆದರ್ಶವಾಗಿ ಏನನ್ನು ತೆಗೆದುಕೊಳ್ಳಬೇಕೆಂಬ ಅರಿವಿರಬೇಕು. ವಂದನೆಗಳೊಂದಿಗೆ. ಮೊದ್ಮಣಿ --

>>>//ಶಂಕರ್ ಗುರುವಿನ "ಬಿಡಿಸುವೇ ಈಗಲೇ ನಿನ್ನ ಕನ್ಯಾಸೆರೆ" ಅನ್ನುವ ಸಾಲಿರುವ ಆ ಹಾಡು ಹೇಗಿತ್ತು? ಕನ್ಯಾಸೆರೆ ಬಿಡಿಸುವುದು ಅಂದರೆ ಮದುವೆಯಾಗುವುದು ಅನ್ನುವ ಅರ್ಥ ಬಹುಜನಕ್ಕೆ ಗೊತ್ತಿದೆ ಎಂದು ನನ್ನ ಅಭಿಪ್ರಾಯ. >>> ಮೊದ್ಮಣಿ, ಕನ್ಯಾಸೆರೆ ಬಿಡಿಸುವುದು ಅಂದರೆ ಮದುವೆಯಾಗುವುದು ಅನ್ನುವ ಅರ್ಥ ನನಗಂತೂ ಗೊತ್ತಿದೆ , ಆದರೆ 'ಅಸು' ಹೆಗ್ಡೆ ಯವರಿಗೆ ಇನ್ಯಾವ ರೀತಿಯಲ್ಲಿ ಅರ್ಥ ಆಗಿದೆಯೋ ಅವರೇ ಬಿಡಿಸಿ ಹೇಳಬೇಕು !! 'ಅಸು' ಹೆಗ್ಡೆ, >>>ಅದರಲ್ಲೂ ಎಲ್ಲರಂತೆ ಆತನೂ ಕೋಟ್ಯಾನು ಕೋಟಿ ಸಂಪಾದಿಸಿದ್ದು ಸುಳ್ಳೇ? >>> ಯಾಕೆ ಸಂಪಾದಿಸ್ಬಾರ್ದು ಸ್ವಾಮಿ ?? ಪಾಪ ಸಿನಿಮಾ ನಟನೆ ಬಿಟ್ಟು ಬೇರೇನೂ "ದಂಧೆ " ಇರಲಿಲ್ಲವಲ್ಲ ಆ ಮನುಷ್ಯನಿಗೆ. ಯಾರ್ಯಾರೋ ನಟನೆಯ ಗಂದವೇ ಗೊತ್ತಿಲ್ದೆ ಇರೋರು ಸುಮ್ನೆ ಹಂಗ್ ಬಂದು ಹಿಂಗ್ ಹೋಗಿ ಸಿನಿಮಾ ಮಾಡಿ ಕೋಟಿ ಸಂಪಾದಿಸ್ತರಲ್ಲ ಅದಂತೂ ಸುಳ್ಳಲ್ಲ ಬಿಡಿ. -ಚೈತನ್ಯ

ಮೊದ್ಮಣಿಯವರ ಕೆಲವು ಪ್ರಶ್ನೆಗಳು.. <<ಸಾಂಸ್ಕೃತಿಕವಾಗಿ ಒಂದು ಉತ್ತಮ ಮಟ್ಟದ ಬದುಕನ್ನು .. ಇಡಿ-ಇಡಿಯಾಗಿ ಮೂರು ತಲೆಮಾರುಗಳಿಗೆ ಕಟ್ಟಿಕೊಟ್ಟವರಾರು..?>> ಕೇವಲ ರಾಜ್ ಚಿತ್ರಗಳಿಂದಲೇ ಈ ಕೊಡುಗೆ ಎಂದು ತಮ್ಮ ಅಭಿಪ್ರಯವಾದಲ್ಲಿ ಅದು ತಪ್ಪು ಎಂದು ನನ್ನ ಅಭಿಪ್ರಾಯ. ಆ ಕಾಲದ ಕನ್ನಡ ಸಿನೆಮಾ ಕ್ಷೇತ್ರವೇ ಹಾಗಿತ್ತು. ಕಮರ್ಶಿಯಲ್ ಸಿನೆಮಾಗಳಲ್ಲೂ, ಆಫ್ ಬೀಟ್ ಚಲನಚಿತ್ರಗಳಲ್ಲೂ ಕನ್ನಡವು ಮಲೆಯಾಳಂ, ಬೆಂಗಾಲಿಯಂಥಾ ಭಾಷೆಗಳನ್ನೇ ಮೀರಿಸುವಂತಿತ್ತು. ನಾಸಿರುದ್ದೀನ್ ಶಾ, ಮಣಿರತ್ನಂ ಮುಂತಾದ ಕನ್ನಡೇತರ ಕಲಾವಿದರೂ ಸಹ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡಲು ಆಸಕ್ತರಿದ್ದರು.ಈಗ ಅದು ಸಾಧ್ಯವಿದೆಯೇ? ಕಲಾತ್ಮಕ ಚಿತ್ರಗಳಲ್ಲಿ ಗಿರೀಶ್ ಕಾರ್ನಾಡ್, ಗಿರೀಶ್ ಕಾಸರವಳ್ಳಿ, ಎಂ ಎಸ್ ಸತ್ಯು, ಪಿ.ಲಂಕೇಶ್ ಮುಂತಾದ ಘಟಾನುಘಟಿಗಳಿದ್ದರು. ಕಮರ್ಶಿಯಲ್ ಸಿನೆಮಾಗಳಲ್ಲಿ ಪುಟ್ಟಣ್ಣ ಕಣಗಾಲ್, ದೊರೈ ಭಗವಾನ್, ಸಿದ್ಧಲಿಂಗಯ್ಯ ನಂಥಾ ಅತಿರಥ ಮಹಾರಥ ನಿರ್ದೇಶಕರಿದ್ದರು. ರಾಜಣ್ಣ, ನರಸಿಂಹರಾಜು, ಅಶ್ವಥ್, ಬಾಲಕೃಷ್ಣ, ನಂಥಾ ಹಿರಿಯ ಕಲಾವಿದರೂ, ವಿಷ್ಣು, ಅಂಬಿ, ಅನಂತ ನಾಗ್, ಶಂಕರ ನಾಗ್, ನಂಥ ಉದಯೋನ್ಮುಖ ಪ್ರತಿಭಾವಂತ ನಟರೂ ಇದ್ದರು. ಉದಾಹರಣೆಗೆಂದು ತೆಗೆದುಕೊಳ್ಳುವುದಾದಲ್ಲಿ: ರಾಜ್ ಚಿತ್ರಗಳಷ್ಟೇ ಅನಂತನಾಗ್-ಲಕ್ಷ್ಮಿ ಜೋಡಿಯ ಚಿತ್ರಗಳೂ ಜನಪ್ರಿಯವಾಗಿದ್ದವು ಎಂದು ಹೇಳಬಹುದಲ್ಲವೇ? ಈ ಚಿತ್ರಗಳಿಂದ ಏನೂ ಸಾಂಸ್ಕೃತಿಕ ಕೊಡುಗೆ ಇಲ್ಲವೇ? ಯಾವಾಗಿನಿಂದ ರಾಜ್ ಕುಟುಂಬದ ಇನ್-ಬ್ರೀಡಿಂಗ್ ನಮ್ಮ ಚಿತ್ರರಂಗದಲ್ಲಿ ಪ್ರಾರಂಭವಾಯಿತೋ ಅಂದಿನಿಂದ ಒಂದು ರೀತಿಯ ಏಕಸ್ವಾಮ್ಯ ಆಗಿಹೋಗಿದೆ. ಈ ಕೆಟ್ಟಗ್ರಹ ಇನ್ನೂ ಬಿಟ್ಟಿಲ್ಲ. <<ರಾಜ್ ರಿಂದಾಗಿ ಕಲಾವಿದರು ಕಮರಿದರೆನ್ನುವ ಮಾತಿಗೇನಾದರೂ ಪುರಾವೆ ಇದೆಯೇ..?>> ಇಂಥದ್ದಕ್ಕೆಲ್ಲಾ ಭೌತಿಕ ಪುರಾವೆ ಹುಡುಕುವುದು ಸಾಧ್ಯವೇ? ಲತಾ ಮಂಗೇಶ್ಕರ್ ಕೈವಾಡದಿಂದಾಗಿ ಅನೇಕ ಒಳ್ಳೆ ಗಾಯಕಿಯರ ಪ್ರತಿಭೆ ಸರಿಯಾಗಿ ಹಿಂದಿ ಚಿತ್ರರಂಗದಲ್ಲಿ ಗುರುತಿಸುವುದಕ್ಕಾಗಲಿಲ್ಲ ಎಂಬುದು ಸಾಮಾನ್ಯ ಜನರೂ ಮಾತನಾಡುವ ವಿಷಯ. ಇದಕ್ಕೆ ಪುರಾವೆ ಹುಡುಕುವುದಕ್ಕಾಗುತ್ತದೆಯೇ? ಕಪಿಲ್ ದೇವ್ ತಾನು ರಿಚರ್ಡ್ ಹ್ಯಾಡ್ಲಿಯ ದಾಖಲೆ ಮುರಿಯುವುದಕ್ಕಾಗಿ ಟೆಸ್ಟ್ ಮ್ಯಾಚ್ ಆಡುತ್ತಲೇ ಹೋದುದರಿಂದ ಜಾವಗಲ್ ಶ್ರೀನಾಥ್-ನಂಥ ಅಧ್ಬುತ ಬೌಲರ್ ಸರಿಯಾಗಿ ಬೇರೂರುವುದರಲ್ಲಿ ಎರಡು ಮೂರು ವರ್ಷಗಳ ತಡವಾಗಲು ಕಾರಣವಾಯಿತು. ಇದಕ್ಕೆ ಯಾರಾದರೂ ಪುರಾವೆ ನೀಡಲು ಸಾಧ್ಯವಿದೆಯೇ? ಕಲ್ಯಾಣ್ ಕುಮಾರ್, ಉದಯ ಕುಮಾರ್, ರಾಜೇಶ್ ಮುಂತಾದ ಹಳೆ ಕಲಾವಿದರಾಗಲೀ, ವಿಷ್ಣು, ರಜನಿ, ಮುಂತಾದವರಾಗಲೀ ಇದಕ್ಕೆ ಪುರಾವೆಯಾಗಬಲ್ಲರಷ್ಟೇ. ಇವೆಲ್ಲಾ ಒಬ್ಬನ ಕೆರಿಯರ್ ಮುಂದುವರೆಯಲು ಇತರರನ್ನು ಬಲಿ ತೆಗೆದುಕೊಳ್ಳುಲು ನಡೆಸುವ ಕುಟಿಲತನ ಎಂದು ಬೇಕಾದರೂ ತಿಳಿದುಕೊಳ್ಳಬಹುದು. ಬಹುಶಃ ಶಂಕರ್ ನಾಗ್ ಇಂದಿಗೆ ಬದುಕಿದ್ದಿದ್ದರೆ ಬೇರೆ ರೀತಿಯದೊಂದು ಕನ್ನಡ ಚಿತ್ರರಂಗ ನಮ್ಮ ಮುಂದಿರುತ್ತಿತ್ತೇನೋ. ಆದರೆ.... <<ರಾಜ್ ಚಿಂತನೆಯ ಗೂಡಾಗಿರಲಿಲ್ಲ. ಅವರು ಹಿರಿಯ ಚೇತನಗಳ ಚಿಂತನೆಗಳನ್ನು ಸರ್ವರಿಗೂ ತಲುಪಿಸುವ ಮಾಧ್ಯಮವಾಗಿದ್ದರು ..>> ಯಾವ ಅಂಥಾ ಚಿಂತನೆಗಳು ಎಂದು ಕೇಳಬಹುದೇ ಮೊದ್ಮಣಿಯವರೇ? ಕನ್ನಡ ಪರ ವಿಚಾರಗಳೇ? ರಾಜ್ ಕನ್ನಡದ ಬಗ್ಗೆ ಸಾಕಷ್ಟು ಅತ್ಯುತ್ತಮ ಕೆಲಸಗಳನ್ನು ಮಾಡಿದ್ದಾರೆ. ಹಾಗೆಯೇ ಈ ಬಗ್ಗೆ ಕೆಲವೊಂದು ಗೊಂದಲಗಳ ಗೂಡು ಸಹ ಆಗಿದ್ದರು ಎಂಬುದಕ್ಕೆ ಸಾಕಷ್ಟು ಪುರಾವೆಯಿದೆ. ಕನ್ನಡ ಚಿತ್ರರಂಗದಲ್ಲಿ ಪರಭಾಷಾ ನಾಯಕಿಯರ ದಾಳಿ ಆರಂಭವಾಗಲು ರಾಜಣ್ಣನವರ ಕೊಡುಗೆಯೇ ದೊಡ್ಡದು. ತನ್ನ ವೈಯಕ್ತಿಕ ಜೀವನದ ಅನಾಹುತಗಳನ್ನು ಸರಿಪಡಿಸಲು (ಈ ಬಗ್ಗೆ ಸಂಪದದಂಥಾ ಸಾರ್ವಜನಿಕ ವೇದಿಕೆಯಲ್ಲಿ ವಿವರವಾಗಿ ಬರೆಯುವ ಅಗತ್ಯವೇನೂ ಕಾಣಿಸುತ್ತಿಲ್ಲ) ಬೇರೆ ಭಾಷೆಯ ನಾಯಕಿಯರು ನಮ್ಮ ಚಿತ್ರರಂಗದಲ್ಲಿ ಬಲವಾಗಿ ಬೇರೂರಲು ಕಾರಣವಾದರು. ಕನ್ನಡದ ಬಗ್ಗೆ ಅಷ್ಟು ಅಭಿಮಾನ ಇದ್ದಲ್ಲಿ ತಮ್ಮ ಮಕ್ಕಳನ್ನು ಚೆನ್ನೈನಲ್ಲಿ ಬಿಟ್ಟು ಇಂಗ್ಲಿಷ್ ಮಾಧ್ಯಮದಲ್ಲಿ ಓದಿಸುತ್ತಿರಲಿಲ್ಲ. <<ಸರಳತೆಯ ಜೀವನ ನಡೆಸಿದ ವ್ಯಕ್ತಿಯ ಬಗ್ಗೆ ಮಾತಾಡುವಾಗ.. ಆತನ ಸಂಬಂದಿಕರನ್ನೆಳೆದು ತರುವುದೇತಕ್ಕೆ..?>> ತನ್ನನ್ನು ಅಪಹರಿಸಿದ್ದ ವೀರಪ್ಪನ್, ಕಾಡಿನಲ್ಲಿದ್ದಾಗ ಉಡದ ಸಾರು ಮಾಡಿದ್ದ, ಅದು ತುಂಬಾ ರುಚಿಯಾಗಿತ್ತು ಅಂತ ಹೇಳುವುದೂ ಸರಳತೆಯಿಂದಲೇ ಅಂತ ಭಾವಿಸಿಕೊಳ್ಳಬಹುದೇ? ತಿಂಗಳಾನುಗಟ್ಟಲೆ ನಡೆದ ಈ ಅಪಹರಣವೆಂಬ ಪ್ರಹಸನದಲ್ಲಿ ಒಮ್ಮೆಯಾದರೂ ಇವರು "ಕನ್ನಡಿಗರೇ, ನನ್ನ ಪ್ರಾಣದ ಕುರಿತು ಚಿಂತಿಸಬೇಡಿ. ನನಗೆ ಕನ್ನಡ ನಾಡಿನ ಅಭಿಮಾನ ಮುಖ್ಯ, ನನ್ನ ವೈಯಕ್ತಿಕ ಜೀವನವಲ್ಲ. ನಾನು ಸಾಧಿಸುವುದನ್ನು ಸಾಧಿಸಿಯಾಗಿದೆ" ಎಂಬ ಒಂದು ಹೇಳಿಕೆ ಬಂದಿದ್ದರೆ ರಾಜಣ್ಣ ನನ್ನ ಪಾಲಿಗೆ ಎಲ್ಲಾ ದೇವರಿಗಿಂತಲೂ ಮಿಗಿಲಾಗಿರುತ್ತಿದ್ದರು. ಈ ರೀತಿ ಮಾಡಿದರೇ? ಇಲ್ಲ; ಕಾಡಿನಿಂದ ಕಳಿಸುತ್ತಿದ್ದ ಸಂದೇಶದಲ್ಲೂ "ನಾನು ಚೆನ್ನಾಗಿದ್ದೀನಿ, ಯೋಗ ಮಾಡ್ತಾ ಇದ್ದೀನಿ, ಸೊಳ್ಳೆ ಜಾಸ್ತಿ ಇದೆ, ವೀರಪ್ಪನ್ ಚೆನ್ನಾಗಿ ನೋಡ್ಕೊತಾ ಇದ್ದಾನೆ, ಉಡದ ಸಾರು ಚೆನ್ನಾಗಿತ್ತು" ಅಂತೆಲ್ಲಾ ಹೇಳುವ ಮೂಲಕ ಇವರ ಸರಳತೆ, ಚಿಂತನೆ ಎಲ್ಲಾ ಜಗಜ್ಜಾಹೀರಾಗಿಬಿಟ್ಟಿತು.. ರಾಜಣ್ಣನನ್ನು ಅವರ ವೃತ್ತಿ ಜೀವನದ ಎರಡನೇ ಅರ್ಧಭಾಗದಲ್ಲಿ ಸೂತ್ರದ ಗೊಂಬೆಯಂತೆ ಆಡಿಸಿದ ಅವರ ಸಂಬಂಧಿಕರನ್ನು, ಈ ರೀತಿ ಆಡಿಸಲು ಅವಕಾಶ ಕೊಟ್ಟ ರಾಜಣ್ಣನವರ ಕುರಿತಾದ ಚರ್ಚೆಯಲ್ಲಿ ತರದೇ ಇದ್ದಲ್ಲಿ ಆ ಚರ್ಚೆ ಸಂಪೂರ್ಣವಾಗುವುದಿಲ್ಲ. <<ಈಗ ಬೆಳಕಿಗೆ ಬಂದ(!) ಪ್ರತಿಭೆಗಳ ಬೆಳಕು ಎಷ್ಟು ದಿನ ಬೆಳಗುತ್ತಿದೆ?>> ಸ್ವಲ್ಪ ಕಾಲಕ್ಕಾದರು ಬೆಳಗುವಂಥ ಪ್ರತಿಭೆಗಳು ಬೆಳಕಿಗೆ ಬರುವುದಕ್ಕಾದರೂ ಈಗ ಅವಕಾಶ ಸಿಕ್ಕುತ್ತಿದೆಯಲ್ಲಾ. ಅದೇ ನಮ್ಮ ಶಿವಣ್ಣ ರಾಘಣ್ಣ ತಮ್ಮ "ಉಚ್ಛ್ರಾಯ" ಕಾಲದಲ್ಲಿದ್ದಾಗಿನ ಸ್ಥಿತಿ ಒಮ್ಮೆ ನೆನಪಿಸಿಕೊಳ್ಳಿ. ಸಾಮಾನ್ಯ ಪ್ರತಿಭೆಗಳು ಎಷ್ಟು ಮಂದಿ ನೆನಪಿಗೆ ಬಂದರು? ರವಿಚಂದ್ರನ್? ಇವರ ತಂದೆಯೂ ಸಿನೆಮಾ ವಿತರಕರಾಗಿದ್ದವರು. ಉಳಿದಂತೆ ಯಾರಾದರೂ ನೆನಪಾಗುತ್ತಾರೆಯೇ? ಹೀಗಾದರೆ ಶಿವಣ್ಣ, ರಾಘಣ್ಣ, ಪುನೀತು ಗಳಂಥಾ "ಪ್ರತಿಭೆ"ಗಳು ಮಾತ್ರ ಉಳಿದು ಬೆಳೆಯಲು ಕಾರಣವೇನು?

>>>>>ಅವರು ಅವರೇ ಹೇಳುವಂತೆ ನಿರ್ದೇಶಕರ ನಟ. ಕಲೆಗೋಸ್ಕರ ಅವರು ಕಲಿತ ವಿದ್ಯೆಗಳು ಅಪಾರ. ಕಲಿಕೆಯಲ್ಲಿನ ಚಾತಿ, ವೇಗ, ಶ್ರದ್ದೆ, ಭಕ್ತಿ ನಮಗೆಲ್ಲಾ(ನನಗಂತೂ) ಆದರ್ಶ. ಕನ್ನಡನಾಡಿನ ಮಹಾನ್ ಚೇತನಗಳು, ವೀರಾಧಿವೀರರು, ಕವಿಗಳು ...etc.. ಬಹುಜನಕ್ಕೆ ತಿಳಿದಿದ್ದೇ ಇವರ ಪೌರಾಣಿಕ ಪಾತ್ರಗಳಿಂದ. ಅವರ ಪಾತ್ರಗಳಿಂದ ಇಸ್ಟೆಲ್ಲಾ ಕಂಡ ನಾವು ಪಾತ್ರಧಾರಿಯನ್ನೇ ಪಾತ್ರಗಳಿಗಿಂತ ಆರಾಧಿಸಿದೆವು ಎ೦ಬುದು ನನ್ನ ಮಟ್ಟಿಗೆ ಸುಳ್ಲಲ್ಲ.>>>>> ಒಟ್ಟಿನಲ್ಲಿ ಅದೇನೇ ಇರ್ಲಿ, ರಾಜ್ಕುಮಾರರ ಚಿತ್ರಗಳನ್ನು ಎಷ್ಟು ಸರ್ತಿ ನೋಡಿದರೂ ಬೇಜಾರಾಗೋಲ್ಲ, ಅವರ ಒಂದೊಂದು ಚಿತ್ರಗಳೂ ನಮಗೆಲ್ಲ ಆದರ್ಶ. ಅವರ ವಯಕ್ತಿಕ ವಿಷಯಗಳು ಏನೇ ಇರ್ಲಿ ಅದೆಲ್ಲ ನಮಗೆ ಬೇಕಿಲ್ಲ, -ಚೈತನ್ಯ