ನಾಲ್ಕು ವರ್ಷದ ನಂತರವೂ ರಾಜ್ಕುಮಾರ್ ! -- ಭಾಗ ೧

To prevent automated spam submissions leave this field empty.

(ನಾಲ್ಕು ವರ್ಷದ ಹಿಂದಿನ ಮಾತು. ರಾಜ್ಕುಮಾರ್ ತೀರಿಕೊಂಡ ದಿನ, ರಾತ್ರಿ ಮತ್ತು ಮಾರನೇ ದಿನ ಬರೆದು ಮುಗಿಸಿದ ಲೇಖನವಿದು--ಗೆಳೆಯ ಎನ್.ಎ.ಎಂ.ಇಸ್ಮಾಯಿಲ್ರ ಒತ್ತಾಯವೆಂಬ ಆದೇಶದ ಮೇರೆಗೆ. ಇದನ್ನು ಬರೆದು ಮುಗಿಸುವವರೆಗಿನ ಆ ಹತ್ತನ್ನೆರೆಡು ಗಂಟೆಕಾಲವೂ ಸೂತಕದ ವಾತಾವರಣ. ಮೊದಲು ’ಉದಯವಾಣಿ’ಯಲ್ಲಿ, ನಂತರ ವಾರ್ತಾ ಮತ್ತು ಪ್ರಚಾರ ಇಲಾಖೆಯ ಪತ್ರಿಕೆಯಲ್ಲಿ, ತದನಂತರ ’ಸಂಪದದಲ್ಲಿ’ (೧೦ನೆ ಮೇ, ೨೦೦೬) ಯಥಾವತ್ ಪ್ರಕಟವಾಗಿತ್ತು. ಈಗ ಅಲ್ಪ-ಸ್ವಲ್ಪ ಬದಲಾವಣೆಯ ನಂತರ ಪುನಃ ಸಂಪದದಲ್ಲಿ ಪ್ರಕಟಿಸುತ್ತಿದ್ದೇನೆ. ಇತ್ತೀಚೆಗೆ ಬರುತ್ತಿರುವ ಕನ್ನಡ ಸಿನೆಮಗಳ, ನಟರ ಅವತಾರಗಳ ಭೀಕರತೆಯು, ಈ ಪುನರ್-ಪ್ರಕಟಣೆಯ ತುರ್ತಿನ ಹಿಂದಿನ ಪ್ರೇರಣೆಯಾಗಿರಬಹುದೆಂಬ ಸಣ್ಣ ಅನುಮಾನದ ಬಗ್ಗೆ ಎಳ್ಳಷ್ಟೂ ಡೌಟು ಬೇಡ)


 (ಅ)  


     ಐದು ವರ್ಷಗಳ ಹಿಂದಿನ ಮಾತು. ವೀರಪ್ಪನಿಂದ ಬಿಡಿಸಿಕೊಂದು ಜಕ್ಕೂರಿನ ಏರ್ಪೋರ್ಟಿನಲ್ಲಿ ಕಾಲಿರಿಸಿದ ಕೂಡಲೇ ರಾಜ್ಕುಮಾರ್ ಮಾಡಿದ ಮೊದಲ ಕೆಲಸವೆಂದರೆ ಮಂಡಿಯೂರಿ, ನೆಲಕ್ಕೆ ಬಾಗಿ, ಈ ಮಣ್ಣಿಗೆ ಮುತ್ತಿಟ್ಟಿದ್ದು! ಸಂಕೋಚ ಸ್ವಭಾವದ ಕನ್ನಡಿಗರಿಗೆ ಇದೊಂದು ಅದ್ಭುತ ಸಂಕೇತವಾಗಿ ಹೋಗಬೇಕಾಗಿತ್ತು. 


     "ಎಂ.ಜಿ.ಆರ್, ಶಿವಾಜಿ ಗಣೇಶನ್ಗಿಂತಲೂ ರಾಜ್ ನನಗೆ ಆತ್ಮೀಯವೆನಿಸಲು ಕಾರಣ ಅವರು ಸ್ವಇಚ್ಛೆಯಿಂದ ರೂಪಿಸಿಕೊಂಡ ಒಂದು `ಸಿಂಬಾಲಿಸಂ'. ಅದೇನೆಂದರೆ ತಮ್ಮ ಜನ್ಮಸಿದ್ಧ ಮುಗ್ಧತೆಯಿಂದ ರಾಜಕಾರಣ ಪ್ರವೇಶ ಮಾಡದಿದ್ದುದು. ತನ್ಮೂಲಕ ತನ್ನ ದೇಹ-ಮನಸ್ಸುಗಳು ರೂಢಿಗತವಾಗಿ, ಶಿಸ್ತುಬದ್ದವಾಗಿ ಯಾವುದಕ್ಕೆ ತಯಾರಾಗಿತ್ತೋ ಅಂತಹ `ಅಭಿನಯಕ್ಕೆ', `ಸಾಂಸ್ಥೀಕರಣದ ಹೊರಗಿನ' ಕನ್ನಡದ ಭಾಷಾಭಿಮಾನದ ಕಟ್ಟುನಿಟ್ಟಿಗೆ ಅವರು ಒಳಪಟ್ಟದ್ದು. ಇಂತಹ ಸ್ನಿಗ್ದ ಸಿಂಬಾಲಿಸಂಗಳೇ ವ್ಯಕ್ತಿಗಳನ್ನು ಸಹಜವಾಗಿ ದಂತಕಥೆಗಳನ್ನಾಗಿಸುವುದು," ಎಂದು ಕಮಲಹಾಸನ್ ಟಿ.ವಿ. ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ (೧೨ನೇ ಏಪ್ರಿ ೨೦೦೬) ಹೇಳಿದ್ದಾರೆ. ಈ ತಾರೀಕಿನ ವಿಶೇಷವೆಂದರೆ ಅಂದು ರಾಜ್ ಭೌತಿಕವಾಗಿ ಅವರ ಅಭಿಮಾನಿ ದೇವರುಗಳಿಂದ ಬಿಡುಗಡೆ ಪಡೆದುಕೊಂಡ ದಿನ!


      ಭಾವತೀವ್ರತೆಯ ಪರಿಯ ಹೊರಗಿನಿಂದ ಮಾತನಾಡಿದ ಕಮಲ್ಗೆ, ಈ ವಾಕ್ಯವು, ಅವರ ನಾಲಿಗೆಯ ತುದಿಯಲ್ಲಿಯೇ ಇರಬೇಕಾದರೆ, ಅದೊಂದು ಸಾಕಷ್ಟು ಚಿಂತನೆ ಮಾಡಿದ ನಂತರ ಹುಟ್ಟಿದ ಹೇಳಿಕೆಯೇ ಇರಬೇಕು. "ಶಿವಾಜಿ ರಾಜಕಾರಣ ಪ್ರವೇಶ ಮಾಡಿದಾಗ ನಾನು ಇದೇಕೆ ಹೀಗೆ ಮಾಡುತ್ತಿದ್ದಾರೆ ಎಂದುಕೊಂಡೆ. ರಾಜ್ ಹಾಗೆ ಮಾಡದಿರಲಿ ಎಂದೂ ಭಾವಿಸಿಕೊಂಡೆ. ಮನೆಗೆ ಹಿರಿಯರಾದವರಿಗೆ ಚಿಕ್ಕವನಾದ ನಾನು ನನಗನಿಸಿದ್ದನ್ನು ಹೇಳಲು ಸಾಧ್ಯವೆ? ನಾನು ಹೇಳದೆಲೇ ರಾಜ್ ನನಗನಿಸಿದ್ದನ್ನು, ತಮಗನಿಸಿದ್ದನ್ನು ಮಾಡಿದರು. ಅಭಿಮಾನಿಗಳ ಭಾವನೆಗಳೊಂದಿಗೆ ಒಂದು `ಎಂಪಥಿ' (ಸಾಹಚರ್ಯ) ರಾಜ್ ಅವರಿಗೆ ಸಾಧ್ಯವಾದುದರಿಂದಲೇ, ಆ ಎಂಪಥಿಯು ಅವರನ್ನೊಬ್ಬ ಅತ್ಯುತ್ತಮ ದೃಶ್ಯಕಲಾವಿದನನ್ನಾಗಿಸಿತ್ತು," ಎಂದು ಮುಂದುವರೆಸಿದ್ದರು ಕಮಲ್.


      ಅದಾಗಲೇ ಕಾಸ್ಮೊಪಾಲಿಟನ್ ನಗರವಾಗಲು ತೊಡಗಿದ್ದ ಬೆಂಗಳೂರು ಇದನ್ನು ಅರಿಯದೇ ಹೋಯಿತು! ಪ್ರತಿ ಮೆಟ್ರೊಪಾಲಿಟನ್ ನಗರದಲ್ಲಾಗುವಂತೆ ಇಲ್ಲಿನ ಅಲ್ಪಸಂಖ್ಯಾತರಾಗಿರುವ ಕನ್ನಡಿಗರಿಗೆ ಮಾತ್ರ ಧುತ್ತನೆ 'ತಮ್ಮತನದ' ಭಾವವು, ರಾಜ್ ನೆಲಕ್ಕೆ ಮುತ್ತಿಡುತ್ತಿದ್ದ ಪತ್ರಿಕಾ ಫೋಟೋಗಳ ಮೂಲಕ ಉದ್ದೀಪಿತವಾದುದು ದಿಟ. ರಾಜ್ ಕೊನೆಯ ಚಿತ್ರ "ಶಬ್ದವೇದಿ" ಅದಾಗಲೇ ತೆರೆಕಂಡದ್ದಾಗಿತ್ತು. ಅದಾದ ನಂತರ ರಾಜ್ ವೀರಪ್ಪನ್ನಿಂದ ಅಪಹರಣಕ್ಕೊಳಗಾದ ಕೂಡಲೇ ಅಭಿಮಾನಿಗಳ ಸಿಟ್ಟಿಗೆ ಹೊಸ ಗುರಿಯಾಗಿ ದಕ್ಕಿದ್ದು ಕಟ್ಟಡಗಳ ಬೃಹತ್ ಗಾಜುಗಳು!


      ಮೊದಲೆಲ್ಲ ಸರ್ಕಾರಿ ಆಸ್ತಿಯಾದ ಬಸ್ಸುಗಳು ಗುರಿಯಾಗಿದ್ದು, ಈಗ ಕಟ್ಟಡಗಳ ಗಾಜುಗಳಿಗೆ ಆ `ಗುರಿ' ಬದಲಾಗಲು ೧೯೮೦, ೯೦ರ ಸಾಂಸ್ಕೃತಿಕ ಸ್ಥಿತ್ಯಂತರವೇ ಕಾರಣ. ಗಾಜುಗಳನ್ನು ಉಳಿಸಿಕೊಳ್ಳಲು ಹೊರಗಿನ, ನವ-ಶ್ರೀಮಂತರಿಗೆ (ನಿಯೊ ರಿಚ್) ಸ್ವತಃ ರಾಜ್ ಆಶ್ರಯವಾದುದೂ ಒಂದು ವಿಶೇಷ. ರಾಜ್ ಪೋಸ್ಟರುಗಳನ್ನು ಅಂಟಿಸಲ್ಪಟ್ಟ ಗಾಜುಗಳೆಲ್ಲ ಜೀವ ಉಳಿಸಿಕೊಂಡವು. ಜಾಹಿರಾತಿಲ್ಲದೆ ಬದುಕುಳಿದ ಕನ್ನಡದ ’ಜಾಣ/ಣೆ’ ಸಾಂಸ್ಕೃತಿಕ ಪತ್ರಿಕೆಗಳೂ ಈ ನವೀನ ಜಾಹಿರಾತು ತಂತ್ರವನ್ನು ಅದಾಗಲೇ ಬಳಸಿಕೊಂಡಾಗಿತ್ತು. ಅಲ್ಲಿ, ಆರಿಂಚು, ನಾಲ್ಕಿಂಚು ರಾಜ್ ಭಾವಚಿತ್ರ ಮುಖಪುಟದಲ್ಲಿ, ಆ ಅಳತೆಗಿಂತಲೂ ಸಣ್ಣದಾದ ರಾಜ್ ಬಗೆಗಿನ ಒಂದು ಸಣ್ಣ ಸುದ್ದಿ ಕಾಣದ ಒಳಗಿನ ಪುಟಗಳಲ್ಲಿ!


      ಒಬ್ಬ ಜನಪ್ರಿಯ ಪಾಪ್ ಐಕಾನ್, ಸಂಸ್ಕೃತಿಯೊಂದರ ನಿರ್ಮಿತಿಗೆ ಬದ್ಧವಾಗಿರುವ ಭಾಷಾಪತ್ರಿಕೆಯ ಉಳಿವಿಗೂ ಅನಿವಾರ್ಯವಾಗಿ ಹೋದುದರ ಅರ್ಥವಿಷ್ಟೆ. ಜಾಹಿರಾತಿನ ಭೌಗೋಳಿಕ ಮುಖವನ್ನು ನಿರಾಕರಿಸಿದ ಒಂದು ಕನ್ನಡದ ಡಿಸ್ಕೋರ್ಸಿಗೂ ಕನ್ನಡದೊಳಗಿನಿಂದಲೇ ಹುಟ್ಟಿಕೊಂಡ `ಜನಪ್ರಿಯ ಐಕಾನ್' ಒಂದು ತನ್ನದೇ ಒಂದು ಭಾಗವಾಗಿ ಕಂಡದ್ದು ಹೇಗೆ ಸಾಧ್ಯವಾಯಿತು? ಕಳೆದ ಒಂದು ಸಾವಿರ ವರ್ಷದ ಕನ್ನಡ ಭಾಷೆಯ ಇತಿಹಾಸದಲ್ಲಿ ಡಾ. ರಾಜ್ಕುಮಾರರಷ್ಟು ಕನ್ನಡ ಭಾಷೆಯೊಂದಿಗೆ ಗುರ್ತಿಸಿಕೊಂಡು ಜನಪ್ರಿಯವಾದ ವ್ಯಕ್ತಿತ್ವ ಮತ್ತೊಂದಿಲ್ಲ. ಮತ್ತು ಇದು ಉತ್ಪ್ರೇಕ್ಷೆಯೂ ಅಲ್ಲ. ಮತ್ತೊಂದು ಸಾವಿರ ವರ್ಷದ ಕನ್ನಡದ ಇತಿಹಾಸದಲ್ಲಿ ಈ ಭಾಷೆಯನ್ನು ನಿರ್ದಿಷ್ಟ ಪ್ರಾಂತ್ಯೀಕರಣದ `ಇಕ್ಕಳದಿಂದ', ಇವರಂತೆ, ಮೀರಿಸಿ ನಿಲ್ಲಿಸುವವರು ಬರುವುದಿಲ್ಲ. ಅದೇ ಕಾರಣಕ್ಕೆ ಸಾವಿರ ವರ್ಷದ ನಂತರದ ಕನ್ನಡವು ಇಂದಿನ ಕನ್ನಡದೊಂದಿಗೆ ಹೋಲಿಕೆ ಮಾಡುವಂತಹ ಸ್ಥಿತಿಯಲ್ಲಿ ಉಳಿದುಕೊಳ್ಳುವ ಸಾಧ್ಯತೆಯೂ ಅತಿ ಕ್ಷೀಣ.


      `ಸ'ಕಾರ, `ಶ'ಕಾರದಷ್ಟು ಸರಳ, ಮೂಲಭೂತ ಕನ್ನಡದ ಉಚ್ಛಾರಣೆಗಳಿಗೆ ಕನ್ನಡ ಟಿ.ವಿ, ರೇಡಿಯೋಗಳಿರಲಿ--ಕನ್ನಡದ ಉತ್ಕೃಷ್ಟ ಅಧ್ಯಯನ ಸಂಸ್ಥೆಗಳಲ್ಲಿಯೇ ಸಂಚಕಾರ ಬಂದಿದೆ. ಮೂರನೇ ಇಯತ್ತೆ ಪಾಸ್ ಮಾಡಿದ್ದ ರಾಜ್ಗೆ ಸಾಮಾಜಿಕ, ಐತಿಹಾಸಿಕ, ಪೌರಾಣಿಕದ ಅವಶ್ಯಕತೆಗೆ ತಕ್ಕಂತೆ ಭಾಷಾ ಶುದ್ಧತೆ ಹಾಗೂ ರೂಪಾಂತರವು ಸಾಧ್ಯವಾದುದು, ಸಾಂಸ್ಥೀಕರಣದ ಹೊರಗೇ ಕನ್ನಡದ ಉಳಿವು ಸಾಧ್ಯವೆಂಬುದನ್ನು ನಿರೂಪಿಸುತ್ತದೆ. ಈ ನಿಟ್ಟಿನಿಂದ, ಆಂತರ್ಯದಲ್ಲಿ ರಾಜ್ ಇಪ್ಪತ್ತನೇ ಶತಮಾನದ ಕನ್ನಡ ಭಾಷೆಯ ಜಾನಪದ ವಚನಕಾರ!


      ಒಂದೇ ಹುಟ್ಟಿದ ತಾರೀಕನ್ನು (ಏಪ್ರಿಲ್ ೨೪) ಹಂಚಿಕೊಂಡಿದ್ದಾರೆಂಬ ಅಂಶವನ್ನು ಹೊರತುಪಡಿಸಿಯೂ ಸಚಿ ತೆಂಡುಲ್ಕರ್ ಹಾಗೂ ಡಾ.ರಾಜ್ಕುಮಾರ್ಗೆ ಇದ್ದಂತಹ ಸಾಮ್ಯತೆಗಳು ಏನೇನು? ಇಬ್ಬರೂ ತಮ್ಮ ತಮ್ಮ ವೃತ್ತಿಬದುಕಿನ 'ಆರಂಭದಿಂದಲೇ' ದಂತಕಥೆಯಾಗುವ ಅನಿವಾರ್ಯ ಜವಾಬ್ದಾರಿ ಹೊತ್ತು ಬಂದವರು. ಆದ್ದರಿಂದ, ತದನಂತರ, ಅವರುಗಳಿಗೆ ಇನ್ನಿಲ್ಲದ ತೊಂದರೆ ಆರಂಭವಾಯಿತು. ಅದೇನೆಂದರೆ ತಮ್ಮ ತಮ್ಮ ಸಾಧನೆಗಳನ್ನು ಹೋಲಿಕೆ ಮಾಡಿಕೊಳ್ಳಲು ಅವರುಗಳಿಗೆ ಇದ್ದಂತಹ ಒಂದೇ ಮಾನದಂಡ, ಬೆಂಚ್ ಮಾರ್ಕ್ಗಳೆಂದರೆ--ಸ್ವತಃ ಅವರುಗಳೇ! ತಮಗೆ ತಾವೇ ಮಾದರಿಗಳಾಗಿ ಹೋಗುವ ದಂತಕಥೆಗಳ (ಸಂ)ಕಷ್ಟ ಎಂತಹದ್ದು ಎಂಬುದನ್ನು ಬಿಡಿಸಿ, ವಿವರಿಸಿ ಹೇಳಬಲ್ಲವರು -- ಸ್ವತಃ ಅವರುಗಳೇ!


      ಗಂಗೂಲಿಯಿನ್ನೂ ಟೀಮಿನ ಒಳಗೇ ಇದ್ದಾಗೊಮ್ಮೆ ಸುರೇಶ್ ಮೇನನ್, ತಮ್ಮ ಲೇಖನವೊಂದರಲ್ಲಿ ಒಂದು ಕುತೂಹಲಕರ ಅಂಶದ ಕಡೆ ಗಮನ ಸೆಳೆದಿದ್ದರು. ಯಾರಿಗಿಂತ ಯಾರು ಚೆನ್ನಾಗಿ ಆಡುತ್ತಾರೆಂಬ ಅಂಶವನ್ನು ಬದಿಗಿರಿಸಿದರೂ ಗಂಗೂಲಿಗಿಂತಲೂ ದ್ರಾವಿಡ್ ಎಲ್ಲರಿಗೂ ಇಷ್ಟವಾಗುವ ಆಟಗಾರ. ("ಬೆಂಗಾಲಿಗಳನ್ನು ಹೊರತುಪಡಿಸಿ" ಎಂದೇನು ಮೇನನ್ ಲೇವಡಿ ಮಾಡಿರಲಿಲ್ಲ. ಐ.ಪಿ.ಎಲ್ ಆರಂಭಗೊಳ್ಳುವ ಮುನ್ನ ಪ್ರಕಟವಾದ ಲೇಖನವಿದು). ವೈಯಕ್ತಿಕ ರೆಕಾರ್ಡ್ಗಳನ್ನು ಹೊರತುಪಡಿಸಿಯೂ ಜನಪ್ರಿಯ ವ್ಯಕ್ತಿಗಳು ಒಬ್ಬರಿಗಿಂತ ಒಬ್ಬರು ಹೇಗೆ ಹೆಚ್ಚು ಇಷ್ಟವಾಗುತ್ತಾರೆ ಎಂಬ ಸೂಕ್ಷ್ಮ ಪ್ರಶ್ನೆಯೊಂದಿಗೆ ಮೇನನ್ ಲೇಖನ ಮುಗಿಸಿದ್ದರು. ರಾಜ್ ತಮ್ಮ ಸುತ್ತಮುತ್ತಲಿದ್ದ ನಟರನ್ನು, ಕಲಾವಿದರನ್ನು ಮೀರಿ ಆಲ್ರೌಂಡರ್ ಪಟ್ಟ ದಕ್ಕಿಸಿಕೊಂಡದ್ದು ಹೀಗೆ. ಮಿಕ್ಕೆಲ್ಲ ಘಟಾನುಘಟಿಗಳೆಲ್ಲ ಇಷ್ಟದ ಪಟ್ಟಿಯಿಂದ ಕಳಚಿಕೊಂಡರೂ ರಾಜ್ ಮಾತ್ರ ಕೊನೆಯವರೆಗೂ ಇಷ್ಟವಾಗಿಯೇ ಉಳಿದುಕೊಂಡದ್ದಕ್ಕೆ ನಿರ್ದಿಷ್ಟ ಕಾರಣಗಳಿವೆಃ ಸುದ್ದಿಪತ್ರಿಕೆಗಳಿಂದ ಒಂದು ಮರ್ಯಾದೆಯ-ದೂರ ಉಳಿಸಿಕೊಂಡಿದ್ದಾಗಲೂ ರಾಜ್ ನಟನೆಂಬ ವ್ಯಕ್ತಿತ್ವವನ್ನು ಮೀರಿ ಈ `ಇಷ್ಟವಾಗುವ' ವ್ಯಕ್ತಿತ್ವ ಪಡೆದುಕೊಂಡದ್ದು ಅವರ ಪ್ರಮುಖ ಸಾಧನೆಗಳಲ್ಲಿ ಒಂದು.


      ಸ್ಥಳೀಯ ಭಾಷೆಯ ಸಾವಿನ ಭೀತಿಯಿಂದ ಟ್ರಿನಿಡಾಡ್-ಟೊಬಾಗೋದಲ್ಲಿ (ವೆಸ್ಟ್ ಇಂಡೀಸ್) ಆ ಭಾಷೆಯ ರೇಡಿಯೋ ಸ್ಟೇಷನ್ ಒಂದನ್ನು ಪ್ರಾರಂಭಿಸಲಾಗಿತ್ತು. ಈಗ ಅದು ಅಂತರರಾಷ್ಟ್ರೀಯ ಪ್ರಸರಣವಿರುವ ಸ್ಥಳೀಯ ಭಾಷೆಯ ರೇಡಿಯೋ ಛಾನಲ್! ರಾಜ್ ಪ್ರಾರಂಭಿಸಿದ ಸ್ಥಳೀಯ ಭಾಷೆಯ ಉಳಿವಿನ ಛಾನೆಲ್ಲನ್ನು ಹಾಗೆ ಮುಂದುವರೆಸಲು ಇರುವ ಉಪಾಯಗಳೇನು? ಬೀದಿಯಲ್ಲಿ ಗೋಲಿ ಆಡದಿರಲು, ಚಿಕ್ಕದಾಗಿ ಕಟಿಂಗ್ ಮಾಡಿಸಿಕೊಳ್ಳಲು, ಶುದ್ದ ಬಟ್ಟೆ ಹಾಕಿಕೊಳ್ಳಲು, ಎಲ್ಲದಕ್ಕೂ "ರಾಜ್ಕುಮಾ ಇದ್ದಂಗಿದ್ದೀಯ" ಎಂದು-ಈಗ ನಲ್ವತ್ತು-ನಲವತ್ತೈದನೇ ವಯಸ್ಸಿನಲ್ಲಿರುವವರು ಮಕ್ಕಳಾಗಿದ್ದಾಗ- ಹೇಳಿಸಿಕೊಳ್ಳುತ್ತಿದ್ಡ ಸಂಪ್ರದಾಯವು ತೀರ ಇತ್ತೀಚಿನವರೆಗೂ ಬೆಂಗಳೂರಿನಲ್ಲಿ ಚಾಲ್ತಿಯಲ್ಲಿತ್ತು. ಗ್ರಾಮೀಣ ಪ್ರದೇಶಗಳಲ್ಲಿ ಈಗಲೂ ಜೀವಂತವಿರುವ ಒಂದು ಆಚರಣೆ ಇದು. ರಾಜ್ರಂತೆ ಮಾತನಾಡುವುದು, ನಡೆದಾಡುವುದು, ಕುಟುಂಬ ರಕ್ಷಣೆಗೆ ನಿಲ್ಲುವ ಆತ್ಮೀಯ ನಡವಳಿಕೆ, ಜೂಜು-ಕುಡಿತ-ಅಶ್ಲೀಲತೆ ಮುಂತಾದುವುಗಳಿಂದ ದೂರವಿರುವುದು, ಇತ್ಯಾದಿ ಗುಣಗಳು ರಾಜ್ ಅಭಿಮಾನಿಗಳು ಅಳವಡಿಸಿಕೊಂಡಿರಬಹುದಾದ ರಾಜ್-ಪ್ರಭಾವಿತ ಗುಣಗಳು.


      ’ರಾಜ್ರಿಂದ ಯಾರ್ಯಾರು ಏನೇನನ್ನು ಕಲಿತರು?’ ಎಂಬುವುದು ಮುಖ್ಯವಲ್ಲ. ಕನ್ನಡ ಸಾಹಿತ್ಯ, ಸಂಸ್ಕೃತಿಗಳಲ್ಲಿ ಘಟಾನುಘಟಿಗಳಿದ್ದಾಗಲೂ--ಅಲ್ಲಿ ಮಾತ್ರವೇ ಘಟಾನುಘಟಿಗಳಿದ್ದ ಸಂದರ್ಭದಲ್ಲಿ--ಎಲ್ಲ ಬಿಟ್ಟು ಈ ಸಿನೆಮದ ನಟ ರಾಜ್ಕುಮಾರ ’ಒಳ್ಳೆತನದ ಚಟ’ ಹತ್ತಿಸಿದ್ದು ಆಶ್ಚರ್ಯ. ಕೂಲ್ಡ್ರಿಂಕ್ಸ್ ಯಾಕೆ ಎಂದ ನಟರ ದಂಡು ಚಟ್ಟದವರೆಗೂ ಎಳೆದೊಯ್ಯಬಲ್ಲ ಚಟ ಹತ್ತಿಸುವ ಜಾಹಿರಾತುಗಳ ಜಾಡು ಹಿಡಿದ ಹಿನ್ನೆಲೆಯಲ್ಲಿ ರಾಜ್ ’ಮಾದರಿ ನಡವಳಿಕೆ’ಗೆ ಮಾತ್ರ ಜಾಹಿರಾತುದಾರರಾದುದು. ಇವೆಲ್ಲ ಸಾಮಾಜಿಕ ವ್ಯಕ್ತಿತ್ವಗಳನ್ನು ರೂಪಿಸುವ ಚೀನೀಯರ ಕನ್ಫ್ಯೂಷಿಯಸ್ ಎಂಬಾತನ ತತ್ವಾದರ್ಶಕ್ಕೆ ಪೂರಕ.


      'ಮನೆಯವರೆಲ್ಲರೂ ಕುಳಿತು ನೋಡಬಲ್ಲ' ಈಡಿಯಂ ಕನ್ನಡ ಸಿನೆಮದಲ್ಲಿ ಉದಯಿಸಿದ್ದಕ್ಕೆ ಕಾರಣ ರಾಜ್ ಅಭಿನಯಿಸಿದ ಮತ್ತು ನಿರ್ಮಿಸಿದ ಚಿತ್ರಗಳು. ಸಮಾಜವಿರೋಧಿ ಇರಲಿ `ಸಮಾಜಕ್ಕೆ ವಿಮುಖಿಯಾದ' ರೂಪಕವನ್ನೂ ರಾಜ್ ಊರ್ಜಿತಗೊಳಿಸಿದ್ದಿಲ್ಲ. ಬೌದ್ಧರ ಝೆನ್ ತತ್ವದಲ್ಲಿ ಇದಕ್ಕೆ ಆಸ್ಪದವುಂಟು. ಅನ್ಯಾಯವನ್ನು ಬಗ್ಗುಬಡಿಯುವಾಗಲೂ ರೋಷಾವೇಶವು ನಿಷಿದ್ದ. ಏಕೆಂದರೆ ಅದು ಮೊದಲು ವ್ಯಕ್ತಿಯ ಭಾವನೆ ಹಾಗೂ ನಂತರ ಆರೋಗ್ಯವನ್ನು ಹದಗೆಡಿಸಬಹುದೆಂಬ, ಸಮಾಜವಿಮುಖಿಯಾದ ವೈಯಕ್ತಿಕತೆಗೇ ಝೆನ್ ಮೂಲಭೂತವಾಗಿ ಬದ್ಧ. ಸಮಾಜವೆಂಬುದು ಕೇವಲ ಒಂದು ಪ್ರಜ್ಞಾಪೂರ್ವಕ 'ನಿರ್ಮಿತಿ' (ಕಸ್ಟ್ರಕ್ಟ್) ಎಂದು ಝೆನ್ ಭಾವಿಸಿದರೆ ಅದೇ ಅತ್ಯಂತಿಕ ಎಂದು ನಂಬುವ ಕನ್ಫ್ಯೂಷಿಯಸ್ ಪಂಥದ ಸ್ಥಳೀಯ ವಕ್ತಾರ ರಾಜ್. ಜಾತ್ಯಾತೀತ ಮಧ್ಯಮವರ್ಗದ ಕನ್ನಡಿಗರಿಗೆ ಈ ಮಾದರಿಯು ಆತ್ಮೀಯವಾದುದು. ನಟನೆ ಹಾಗೂ ಸ್ವಯಂ-ವಿರಚಿತ ಭಾಷಾಭಿಮಾನದ ಹೊರಗೂ 'ರಾಜ್ಕುಮಾರ್' ಅರವತ್ತು ಎಪ್ಪತ್ತರ ದಶಕದ ಮಕ್ಕಳಿಗೆ ಒಬ್ಬ ರಾಜಕುಮಾರನೇ ಆಗಿಹೋದುದು ಹೇಗೆ? ಆಗ ಹಾಗೆ ಆಗಿದ್ದು ಒಂದು ಹಿಸ್ಟರಿ, ಅದು ಆಗಿದ್ದು ಹೇಗೆಂಬುದು ಮಾತ್ರ ಈಗಲೂ ಒಂದು ಮಿಸ್ಟರಿ!(...ಎರಡನೆಯ ಭಾಗದಲ್ಲಿ ಮುಕ್ತಾಯವಾಗುತ್ತದೆ)

ಲೇಖನ ವರ್ಗ (Category):