ವಿಕ್ಷಿಪ್ತರೆಂಬ ಆಧಾರಸ್ಥಂಭಗಳು!!--ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆ: ಭಾಗ ೪

To prevent automated spam submissions leave this field empty.


 


(೧೨)


     ಕಲಾಭವನದ ವಿಶೇಷತೆ ಎಂದರೆ ಅಲ್ಲಿನ ಬದಲಾವಣೆ. ಏನೂ ಬದಲಾಗದಿರುವುದೇ ಅಲ್ಲಿನ ನಿತ್ಯ ನಿರಂತರವಾದ ಬದಲಾವಣೆ. ಸ್ಥಾವರಕ್ಕೂ ಜಂಗಮಕ್ಕೂ ವ್ಯತ್ಯಾಸವಿಲ್ಲದಿರುವುದನ್ನೇ ಕಲಾಭವನವೆನ್ನಬಹುದು. ಮರಗಳಲ್ಲಿ ಜೇಡಕಟ್ಟಿರುವುದನ್ನು ನಾನು ಕಂಡಿರುವುದು ಅಲ್ಲಿ ಮಾತ್ರವೇ! ಕಾಲವೇ ನಿಂತಂತಹ ಭಾವ ಅಲ್ಲಿ. ೧೯೯೦ರ ದಶಕದಲ್ಲಿ ಅದು ೧೯೪೭ರಲ್ಲಿ ಸ್ವಾತಂತ್ರ ಬಂದಾಗ ಭಾರತ ಹೇಗಿತ್ತೆಂದು ನಾವು ಓದಿದ್ದೆವೋ ಹಾಗಿತ್ತು. ಈಗ ೨೦೧೦ರಲ್ಲಿ ಸ್ವಲ್ಪ ಪರವಾಗಿಲ್ಲ: ೧೯೫೦ರ ದಶಕದ ಗಣರಾಜ್ಯ ಬಂದ ಕಾಲಕ್ಕೆ ತೆವಳಿ ಬಂದಂತಿದೆ. ಅಲ್ಲಿನ ಜನಕ್ಕೂ ವಯಸ್ಸಾಗುವಂತೆ ಕಾಣುವುದೇ ಇಲ್ಲ. ಆಗಲೂ ಈಗಲೂ ನನ್ನ ಕ್ಲಾಸ್ಮೆಟ್ಗಳೆಲ್ಲ ಮಧ್ಯವಯಸ್ಕರಂತೆಯೇ ಇದ್ದರು/ಇದ್ದಾರೆ. ಈಗ ಸ್ವಲ್ಪ ಜಾಸ್ತಿ 'ಮದ್ಯ'ವಯಸ್ಕರಾಗಿದ್ದಾರಷ್ಟೇ.


     ಶಂಶುಲ್ ದಾ ಎಂಬ ಕ್ಯಾಮರಾಮನ್ ಕಲಾವಿದ ಆಗ ಇದ್ದ. ದಕ್ಷಿಣ ಭಾರತೀಯರಾದ ಕೆಲವರು ಆ ಬೆಂಗಾಲಿಯನ್ನು ಕಾಮ-ರಾಮನ್ ಎಂದೇ ಕರೆಯುತ್ತಿದ್ದರು. ಆತ ಸುಮಾರು ಹದಿನೇಳು ವರ್ಷಗಳಿಂದ, ಬೆಳಗಿನಿಂದ ಸಂಜೆಯವರೆಗೂ ಕ್ಯಾಂಪಸ್ಸಿನಲ್ಲೇ ಇರುತ್ತಿದ್ದ. ಅವರು ಕಲೆಯ ಡಿಗ್ರಿಯನ್ನು ಐದು ವರ್ಷಕಾಲ ಮುಗಿಸಿದ ನಂತರದ ಹದಿನೇಳು ವರ್ಷವಾದ ನಂತರದ ಬಗ್ಗೆ ನಾನು ಮಾತನಾಡುತ್ತಿರುವುದು!


     ಎಲ್ಲರ ಕಲಾಕೃತಿಗಳ ಫೋಟೋ ತೆಗೆದುಕೊಡುವುದು ಆತನ ಕಾಯಕ. ಹದಿನೇಳು ವರ್ಷಕಾಲ ಕಲಾಭವನದ ವಿದ್ಯಾರ್ಥಿಗಳೆಲ್ಲರಿಗೂ ಆತನೇ ಕ್ಯಾಮರಾಮನ್. ಕೆಲವರಿಗೆ ಮಾತ್ರ ಕಾಮ-ರಾಮನ್. ಲಕ್ ಚೆನ್ನಿದ್ದಲ್ಲೆಲ್ಲ ತನ್ನ ಕಾಯವನ್ನೂ ದಾನ ಮಾಡುವ ಅಭ್ಯಾಸವೂ ಆತನಿಗಿತ್ತು. ಪ್ರತಿವರ್ಷಕ್ಕೆ ಒಂದರಂತೆ ಆತನಿಗೆ ಸುಮಾರು ಹದಿನೇಳು ಗೆಳತಿಯರು ಆಗಿಹೋಗಿದ್ದರೆಂದು ದಂತಕಥೆ ಚಾಲ್ತಿಯಲ್ಲಿದೆ, ಕಳೆದ ಹದಿನೆಂಟು ವರ್ಷಗಳಿಂದ (೧೯೯೨ ರಿಂದ).     ಏನಾದರೇನು, ಒಬ್ಬ ಹುಡುಗನೊಂದಿಗಾದರೂ ಆತನ ಗೆಳೆತನವಿದ್ದಿದ್ದಲ್ಲಿ ಆತನನ್ನು 'ಹ್ಯಾಪಿ ಅಂಡ್ ಗೇ' ಅಂತ ಕರೆಯಬಹುದಾಗಿತ್ತು ಎಂದು ನೇರವಲ್ಲದ ಕೆಲವು ಗೆಳೆಯರು (ಸಲಿಂಗೀಯರು) ಶಂಶುಲನನ್ನು ಆಗಾಗ ಆಕ್ಷೇಪಿಸುತ್ತಿದ್ದರು.


     ನೆಗಟಿವ್ ಕ್ಯಾಮರ ಅಥವ ರೀಲ್ ಹಾಕಿ ಶೂಟ್ ಮಾಡುವ ಕ್ಯಾಮರವಿದ್ದಾಗ ಎಲ್ಲರಿಗೂ ಶಂಶುಲ್ ದಾ ಬೇಕಿತ್ತು. ಮೊನ್ನೆ ಎರಡು ದಶಕದ ನಂತರ ಏಪ್ರಿಲ್ಲಿನಲ್ಲಿ ಹೋಗಿದ್ದಾಗ ಆತ ನಾಪತ್ತೆ.


     ಕಾಯಕ ಇಲ್ಲದೆಡೆ ಕಾರ್ಮಿಕನಿಗೇನು ಕೆಲಸ ಆ ಮಾಕ್ಸಿಸ್ಟ್ ನಾಡಿನಲ್ಲಿ?


     ಎಲ್ಲಿ ಆತ ಎಂದು ಕೇಳಿದ್ದಕ್ಕೆ ಪರದೇಸೀಯ ವಿದ್ಯಾರ್ಥಿನಿಯೊಬ್ಬಳು ಮಾರ್ಮಿಕವಾಗಿ ತನ್ನ ಡಿಜಿಟಲ್ ಕ್ಯಾಮರದ ಹಗ್ಗದಿಂದ ಅದನ್ನು ಭೂಚಕ್ರದಂತೆ ತಿರುಗಿಸಿ ಹೀ ಈಸ್ ಲಾಸ್ಟ್ ಇನ್ ದೇರ್ ಎಂದುಬಿಟ್ಟಳು.


(೧೩)


     ಕಲಾಭವನದ ನಂದನ್ ಆಫೀಸಿನಲ್ಲಿ ಮೂರು ದಶಕಕಾಲ ದುಡಿದು ರಿಟೈರ್ ಆಗಿಯೇ ನಾಲ್ಕು ದಶಕವಾದಂತಿದ್ದ 'ಗರಿಗರಿ ಲಲ್ಲ'. ಸೈಕಲ್ ಮೇಲೆ, ನಡಿಗೆಗಿಂತಲೂ ನಿಧಾನವಾಗಿ ತುಳಿಯುತ್ತ ಬರುತ್ತಿದ್ದ ಮುದುಕಪ್ಪನೀತ. ಯಾವಾಗಲೂ ಆಫೀಸಿಗೆ ಹೋಗಿ ಈಗ ಕಾರ್ಯನಿರತರಾಗಿರುವ ಗು-ಮಾಸ್ತರುಗಳಿಗೆ ಸುಮ್ಮನೆ ಬಯ್ಯುವುದು ಲಲ್ಲನ ಅಭ್ಯಾಸ. ಆತನ ಬಾಯಿಂದ ಹಲ್ಲುಗಳೆಲ್ಲವೂ ವಿಚ್ಛೇದನ ಹೊಂದಿದ್ದರಿಂದ ಆತನ ಮನಸ್ಸಿನ ಯೋಚನೆಗೂ ಬಾಯಿಂದ ಮೆಟ್ಟಿಲಿಳಿದು ಬರುತ್ತಿದ್ದ ಪದಗಳಿಗೂ ಹೊಂದಾಣಿಕೆ ಇಲ್ಲದೇ ಹೋಗಿ, ಯಾರಿಗೂ ಆತನ ಬಯ್ಗಳ ಬಗ್ಗೆ ಬೇಸರವಾಗುತ್ತಿರಲಿಲ್ಲ. ಏಕೆಂದರೆ ಅವರಿಗೇನೂ ಅರ್ಥವಾಗುತ್ತಿರಲಿಲ್ಲ!    ಬೆಳಿಗ್ಗೆಯಿಂದ ಸಂಜೆಯವರೆಗೂ, ಮಧ್ಯೆ ಆಫೀಸಿನಲ್ಲಿ ಬಯ್ಯುವ ಸಮಯವನ್ನು ಹೊರತುಪಡಿಸಿ, ಕ್ಯಾಂಟೀನಿನ ಬಳಿ ಕುಳಿತಿರುತ್ತಿದ್ದ ಲಲ್ಲ. ಹೋಗಿಬರುವ ಎಲ್ಲ ಕಲಾಭವನದ ವಿದ್ಯಾರ್ಥಿಗಳ ಎದುರಿಗೂ ಎಲ್ಲ ಉಪಾಧ್ಯಾಯರ ಹಿಂದೆಯೂ ಆತ ಅವರುಗಳನ್ನು ಕುರಿತ ಒಂದು ನಾಣ್ನುಡಿ, ಒಂದು ಕಥೆ, ಒಂದು ಐಹಿತ್ಯವನ್ನು ವಿವರವಿವರವಾಗಿ ಹೇಳಿದ್ದನ್ನೇ ಹೇಳುತ್ತಿದ್ದ. ಆತ ಹೇಳಿದ ಘಟನೆಯ ಪುನರಾವರ್ತನೆಯಲ್ಲಿ ಏನಾದರೂ, ಎಳ್ಳಷ್ಟಾದರೂ ವ್ಯತ್ಯಾಸವಿದೆಯೇ ಎಂದು ಬೆಟ್ಸ್ ಕಟ್ಟಿಕೊಂಡು ನಾವೆಲ್ಲ ಆತನ ಸುತ್ತಲೂ ಚಹಾ ಸೇವಿಸುತ್ತಿದ್ದೆವು-ಆಕ್ಷನ್ ರಿಪ್ಲೈಯಲ್ಲಾದರೂ ಭಾರತದ ಟೀಮು ಗೆದ್ದೀತೆ ಎಂದು ಭಾರತದ ಒಂದು ಭಾಗದವರು ಕಾದಂತೆ ಇದು. ಆತ ಹೇಳಿದ ಎಲ್ಲ ಘಟನೆಗಳನ್ನೂ ನಾನು ನಿಮಗೆ ಹೇಳತೊಡಗಿದರೆ ಅವುಗಳನ್ನು ಮುಗಿಸುವಷ್ಟರಲ್ಲಿ ಗರಿಗರಿ ಲಲ್ಲನ ತೀರಿಕೊಂಡಾಗ ಆಗಿದ್ದಷ್ಟು ವಯಸ್ಸಾಗಿಬಿಡುತ್ತದೆ ನನಗೆ!


     ತನ್ನ ಟೋಪಿಯ ಮೇಲೆ ಎಲ್ಲ ದೇಶಭಾಷೆಗಳಿಂದ ಬಂದವರ ಭಾಷೆಯಲ್ಲಿ ತನ್ನ ಹೆಸರನ್ನು ಬರೆಸಿಕೊಳ್ಳುತ್ತಿದ್ದ ಲಲ್ಲ. ಗುಲ್ಬರ್ಗದ ಗೆಳೆಯ ಚಂದ್ರಹಾಸ್ ಜಾಲಿಹಾಳ ಒಮ್ಮೆ ನನ್ನ ಬಳಿ ಹೇಳಿದ್ದ,


"ಲೋ ಗೆಳ್ಯ. ಲಲ್ಲನ ಟೋಪಿಯ ಮುಂಭಾಗದಲ್ಲಿ ಕನ್ನಡದಲ್ಲಿ ಏನೋ ಬರೆದುಕೊಟ್ಟಿದ್ದೇನೆ," ನೋಡು ಎಂದ.


"ಆತನ ಹೆಸರೇ ಇರಬೇಕು," ಎಂದೆ.


"ಹೌದು," ಎಂದ, "ಅಲ್ಲ," ಎನ್ನುವ ಬದಲಿಗೆ.


     ಅಲ್ಲಿ ಹೋಗಿ ಲಲ್ಲನ ಟೋಪಿಯ ಮೇಲಿನ ಕನ್ನಡ ಓದಿದ ಮೇಲೆ ತಿಳಿಯಿತು 'ಹೌದು' ಮತ್ತು 'ಇಲ್ಲ'ಗಳ ನಡುವೆ ವ್ಯತ್ಯಾಸವಿಲ್ಲದ ಅಪರೂಪದ ಪ್ರಸಂಗ ಅದೆಂದು. ಅಲ್ಲಿ ಸ್ಫಷ್ಟವಾಗಿ ಮಾರ್ಕರ್ ಪೆನ್ನಿನಿಂದ ಬರೆದಿತ್ತು, ನಾನು ಕಳ್ಳ ಎಂದು! ಈ ಸಲ ಅಲ್ಲಿ ಹೋದಾಗ ಲಲ್ಲನನ್ನು, ಆತನ ಟೋಪಿಯನ್ನು ನಿಜಕ್ಕೂ ಮಿಸ್ ಮಾಡಿಕೊಂಡೆ. ಬ್ರಹ್ಮಚಾರಿಯಾಗಿದ್ದ, ಕಲಾಭವನವನ್ನೇ ಮನೆಯನ್ನಾಗಿಸಿಕೊಂಡಿದ್ದ ಆತ ತೀರಿಕೊಂಡು ಹತ್ತು ವರ್ಷವಾಗಿತ್ತು!


(೧೪)


 


     ಗರಿಗರಿ ಲಲ್ಲ ಯಾವಾಗಲೂ ಬಯ್ಯುತ್ತಿದ್ದುದು, ಯಾವಾಗಲೂ ಆತನ ಜಾಗದಲ್ಲೇ ಕುಳಿತುಕೊಂಡುಬಿಟ್ಟಿರುತ್ತಿದ್ದ ಡೀಮ್ ಬೂಡಿ (ಮೊಟ್ಟೆ ಮುದುಕಿ) ಎಂಬಾಕೆಯನ್ನು. ೧೯೯೧ರ ಚಳಿಗಾಲದ ಒಂದು ದಿನ ಧುತ್ತನೆ ಬಂದಿಳಿದಳು ಆ ಬೂಡಿ. ಮಂಡನ ಮಾಡಿರುವ ತಲೆ, ಮೇಲಿಂದ ಕೆಳಗಿನವರೆಗೂ ಸುತ್ತಲಾಗಿರುವ ಒಂದೇ ಬಿಳಿಯ ಬ್ಯಾನರ್ ಬಟ್ಟೆ (ಸೀರೆಯಂತೆಯೇ ಕಾಣುತ್ತಿತ್ತು), ಕೈಯಲ್ಲೊಂದು ಯಾವಾಗಲೂ ನಿಗಿನಿಗಿ ಹೊಳೆಯುವಂತೆ ಶುದ್ಧವಾಗಿಡಲಾಗುತ್ತಿದ್ದ ಸಿಲ್ವರ್ ಬಟ್ಟಲು (ಅದೊಂದೇ ಆಕೆಯ ಆಸ್ತಿ), ಪ್ರಶ್ನಾರ್ಥಕ ಚಿಹ್ನೆಯಂತೆ ಬಾಗಿರುವ ದೇಹ.    ಡೀಮ್ ಬೂಡಿ ಯಾವುದೋ ಶ್ರೀಮಂತ ಮನೆತನದವಳು. ಇದ್ದೊಬ್ಬನೇ ಮಗನ ಹೆಸರಿಗೆ ಆಸ್ಥಿಯನ್ನು ಬರೆದುಕೊಟ್ಟ ಮಾರನೇ ದಿನವೇ ಆಕೆಯನ್ನು ಸಂಸಾರ ಸಮೇತ ತೀರ್ಥಯಾತ್ರೆಗೆ ಕರೆದುಕೊಂಡು ಉತ್ತರಭಾರತವನ್ನೆಲ್ಲ ಸುತ್ತಿಸಿ, ಕಲಾಭವನಕ್ಕೆ ಕರೆತಂದು, ಆಕೆಯನ್ನು ಅಲ್ಲಿ ತೊರೆದು, ವಿಳಾಸವೇನೂ ಆಕೆಗೆ ಇಲ್ಲದಂತೆ ಮಾಡಿ, ತೊರೆದುಹೋಗಿದ್ದ ಮಗರಾಯ-ಈ ವಾಕ್ಯವನ್ನು ಓದುವಷ್ಟೆ ಅತಿಶೀಘ್ರ ಕಾಲಮಾನದಲ್ಲಿ. ವಯಸ್ಸಾಗಿದ್ದರೂ ಆಕೆಯನ್ನು ದೈಹಿಕವಾಗಿಯೂ ಶೋಷಿಸಿದ್ದರು ಕಲಾಭವನದ ಸುತ್ತಲೂ ಇದ್ದ ಸೈಕಲ್ ರಿಕ್ಷಾತುಳಿಯುವವರು.


     ಕಲಾಭವನದ ಕ್ಯಾಂಟೀನಿನ ಮಾಮಾ ಶಿಸ್ತುಬದ್ಧವಾಗಿ ಡೀಮ್ ಬೂಡಿಗೆ ಬೆಳಿಗ್ಗೆ ಎರಡು ಬ್ರೆಡ್ ಪೀಸ್ಗಳ ನಡುವೆ ಎರಡು ಕಾಲಾರ್ ಜಾಮೂನುಗಳನ್ನಿಟ್ಟು, ಒಂದು ಕಪ್ಪು ಚಹ ಮತ್ತು ಗುಗುನಿ (ಕಾಳಿನ ಎಸರು) ಕೊಡುತ್ತಿದ್ದ. ದೈನಂದಿನ ಆಕೆಯ ಯಾರಿಗೂ ಗೊತ್ತಿಲ್ಲದ, ಎಲ್ಲೆಲ್ಲಿಯೂ ಹೋಗಿಬರದ ಸುತ್ತಾಟದ ನಂತರ, ಕಾಣಿಸಿಕೊಂಡಾಗಲೆಲ್ಲ, ಮಾಮಾ ಆಕೆಗೆ ಊಟ ನೀಡುತ್ತಿದ್ದ. ಈ ಸಲ ಅಲ್ಲಿ ಹೋದಾಗ ಆಕೆ ಇನ್ನೂ ಬದುಕಿರುತ್ತಾಳೆಂಬ ಯಾವ ಗ್ಯಾರಂಟಿಯೂ ಇರಿಸಿಕೊಂಡಿರಲಿಲ್ಲ. ಬೇರೆಯವರ ಸಾವನ್ನು ಕುರಿತ ನನ್ನ ಎಣಿಕೆಗಳು ಸತ್ಯಕ್ಕೆ ಹತ್ತಿರ ಹಾಗೂ ಜೀವಂತ ಎಂದೂ ಹೇಳಬೇಕಿಲ್ಲ! ಪ್ರಾಯಶ: ಲಲ್ಲ ಹಾಗೂ ಬೂಡಿಯ ಬಗ್ಗೆ ಇಷ್ಟೂ ನಿರ್ಭಾವುಕವಾಗಿ ಬರೆಯುತ್ತಿರುವುದಕ್ಕೆ ಕಾರಣವೆಂದರೆ ನನ್ನ ಆ ಎರಡು ವರ್ಷಕಾಲದ ಕಲಾಭವನಾನುಭವದ ಅನಿವಾರ್ಯ ಭಾಗವಾಗಿದ್ದ ಅವರ ಇಲ್ಲದಿರುವಿಕೆಯ ಭಾವತೀವ್ರತೆಯನ್ನು ಮುಚ್ಚಿಕೊಳ್ಳಲಿರಬಹುದು.


     ಅಳುವುದು ಗಂಡಸರ ಹಾಗೂ ವಯಸ್ಕರ ಲಕ್ಷಣವಲ್ಲದಿರಬಹುದು. ಆದರೆ ಅಳುವ ಹಕ್ಕು ಜಾತ್ಯಾತೀತ, ಲಿಂಗಾತೀತ ಹಾಗೂ ವಯಸ್ಸಾತೀತವಲ್ಲವೆ?


     "ಬೆಂಗಾಲಿಗಳು ಬೆಳಿಗ್ಗೆ ಬೆಳಿಗ್ಗೆ ಸ್ವೀಟ್ಸನ್ನು ಆ ಬ್ರೇಡ್ಗಳಲ್ಲಿ ತುರುಕಿಕೊಂಡು ನಾಷ್ಟಾ ಮಾಡ್ತಾರಲ್ಲ, ಈ ಪಾಟಿ ಸ್ವೀಟ್ಸ್ ತಿನ್ನುತ್ತಾರಲ್ಲ. ಡಯಾಬಿಟೀಸ್ ಆಗುವುದಿಲ್ಲವೆ ಮಾಮಾ ಇವರಿಗೆಲ್ಲ?" ಎಂದು ಕೇಳಿದ್ದೆ ಒಮ್ಮೆ ಕ್ಯಾಂಟೀನ್ ಮಾಮಾನನ್ನು.


     ಮಾಮಾ ಸ್ವಲ್ಪ ತಲೆ ಎತ್ತಿ, ಕನ್ನಡಕದೊಳಗಿನಿಂದ ಬೆಂಗಾಲಿ ಜನರ ಮನಃಸ್ಥಿತಿಯನ್ನು ಬೂದುಗಾಜು ಹಾಕಿ, ಹುಡುಕಿ, ತನಗೇ ವಿಶಿಷ್ಟವಾಗಿರುವ ಸ್ಲೋಮೋಷನ್ ಶೈಲಿಯಲ್ಲಿ ಮಾತನಾಡಿದ್ದ,


     "ಏನ್ ಮಾಡೋದು. ಡಯಾಬಿಟೀಸ್ ಬರೋವರೆಗೂ ತಿನ್ತಾರೆ. ಆಮೇಲೆ ನಿಲ್ಲಿಸಿಬಿಡ್ತಾರೆ. ಸ್ವೀಟ್ಸ್ ತಿನ್ನುವುದರಿಂದ ಖಾಯಿಲೆ ಬರುತ್ತೋ, ಖಾಯಿಲೆ ಬರುವ ಭಯದಿಂದ ಅದರ ಆಗಮನದ ಮುನ್ನವೇ ಸಾಕಷ್ಟು ಅಥವ ಬೇಕಾದಷ್ಟು ತಿನ್ನುತ್ತಾರೆ ಹೇಳುವುದಕ್ಕೆ ಬರುವುದಿಲ್ಲ," ಎಂದು ನಗಾಡಿದ್ದರು.


     ಮಾಮಾನ ಲೆಕ್ಕ ಈಗ ಜಗತ್ಪ್ರಸಿದ್ಧ ಎಂದು ಮುಂಚಿನ ಅಧ್ಯಾಯಗಳಲ್ಲೆಲ್ಲೋ ತಿಳಿಸಿದ್ದೇನೆ, ಪ್ರತಿಕ್ರಿಯೆಯ ರೂಪದಲ್ಲಿ. ಮಾರ್ಕ್ಸ್ ವಾದದ ಕಲಾಭವನದಲ್ಲಿ ನಿಜವಾದ ಬಂಡವಾಳಶಾಹಿ ಮಾಮ. ಯಾರ ಬಳಿಯೂ ಕ್ಯಾಷ್ ತೆಗೆದುಕೊಳ್ಳದೆ (ಕಂಡೀಷನ್ ಅಪ್ಲೈ -- ಆದ್ದರಿಂದ) ಹತ್ತು ಮಂದಿಗೆ ಒಬ್ಬರ ಹೆಸರಲ್ಲಿ ಕೊಡಿಸುವ ಚಹಾದ ಲೆಕ್ಕವನ್ನು ನಿಯತ್ತಾಗಿ ಆ ಒಬ್ಬರ ಹೆಸರಿಗೆ ಲೆಕ್ಕ ಬರೆದು, ನಂತರವಷ್ಟೇ ಇನ್ನುಳಿದ ಒಂಬತ್ತು ಮಂದಿಯ ಲೆಕ್ಕಕ್ಕೂ ಸೇರಿಸುತ್ತಿದ್ದರು. ಮೊಬೈಲು ಮೊದಲು ಬಂದಾಗ ಅದನ್ನು ಕೊಳ್ಳಲು ಹಿಂದುಮುಂದು ನೋಡಿದಂತೆ, ಅಲ್ಲಿ ಮಾಮಾನ ಲೆಕ್ಕಕ್ಕೆ ಸಿಕ್ಕದೇ ಹೋಗುವ ಸಾಹಸ-ಇವೆರಡನ್ನೂ ಕೇವಲ ಕೆಲವೇ ದಿನ ಮುಂದೂಡಬಹುದಷ್ಟೇ. 'ಊರಿಗೆ ಬಂದವಳು ನೀರಿಗೆ ಬರಳೆ' ಎಂಬ ಗಾದೆಯ ಬೆಂಗಾಲಿ ಅವತರಣಿಕೆಯೇ ಮಾಮಾನ ಲೆಕ್ಕಾಚಾರ. 


     ನೀವು ಹೊಸದಾಗಿ ಕಲಾಭವನಕ್ಕೆ ಹೋಗಿ, ಹಲವು ದಿನಕಾಲ ಮಾಮಾನ ಬಳಿ ಅಕೌಂಟ್ ತೆರೆಯದಿದ್ದರೂ, ಒಂದಲ್ಲಾ ಒಂದು ದಿನ ನಿಮ್ಮೊಡನೆ ಚಾಯ್ ಕುಡಿಯುವವರ್ಯಾರೋ ನಿಮ್ಮೊಡನೆ ಮಾತನಾಡಿದರೂ ಸಾಕು: ನಿಮ್ಮ ಹೆಸರಿನ ಅಕೌಂಟೊಂದು ಮಾಮಾನಲ್ಲಿ ಓಪನ್ ಆಗಿ, ಎದುರಿನವರ ಖರ್ಚಿನ ನೊಂದಣೆ ನಿಮ್ಮ ಅಕೌಂಟಿನಲ್ಲಿ ಆಗಿಬಿಟ್ಟಿರುತ್ತಿತ್ತು!


     ಈಗಲೂ ಮಾಮಾ ಅಲ್ಲಿಯೇ ಅದೇ ಕ್ಯಾಂಟೀನ್ ನಡೆಸುತ್ತಿದ್ದಾರೆ. ಸ್ವಲ್ಪ ಸಣ್ಣವಾಗಿದ್ದಾರೆ. ಡಯಾಬಿಟಿಸ್ ಆಗಿದೆ, ಅದಕ್ಕೆ ಎಂದಿದ್ದರು ಕಾರಣವೆಂಬಂತೆ!!


(೧೫)


     ಮಾರ್ಕ್ಸ್ ವಾದವನ್ನು ಕಲಾಭವನದೊಳಕ್ಕೆ ತೂರಿಬಿಡುವ ಹುನ್ನಾರ ಪ್ರತಿನಿತ್ಯ ನಡೆಯುತ್ತಿತ್ತಲ್ಲಿ. ಆಗಿನ್ನೂ ಭಾರತಕ್ಕೆ ತೆರೆದ ಸೇಲ್ ಬೆಂಚ್ (ಓಪನ್ ಮಾರು ಕಟ್ಟೆ) ಇನ್ನೂ ಬಂದಿರಲಿಲ್ಲ. ಕಲಾಭವನಕ್ಕೆ ದಿನನಿತ್ಯ, ಉಪಾಧ್ಯಾಯರೆಲ್ಲ ಮನೆಗೆ ಹೋದಮೇಲೆಯೇ (ಬೆಳಿಗ್ಗೆ ಸುಮಾರು ೯.೩೦ಗಂಟೆಗೇ!) ಅದೆಲ್ಲಿಂದಲೋ ಬಂದು, ಅದೆಲ್ಲಿಗೋ ಹೋಗಿಬಿಡುತ್ತಿದ್ದ ಕಾಮ್ರೇಡ್ ಹೆಸರು ಕ್ಯಾಪ್ಟನ್. ಕಾಮ್ರೇಡ್ ಹೆಸರು ಕ್ಯಾಪ್ಟನ್ ಎಂದಿದ್ದರೂ ಕ್ಯಾಪ್ಟನ್ ಹೆಸರು ಏನೆಂದು ಯಾರಿಗೂ ತಿಳಿದಿರಲಿಲ್ಲ. ದಿನವೂ ಅಲ್ಲಿ ಯಾವುದೋ ಮರದ ಕೆಳಗೆ ಕುಳಿತಿರುತ್ತಿದ್ದ ಆತ, ಬಂದಾಗ ಒಬ್ಬನಾದರೂ/ಒಬ್ಬಳಾದರೂ ವಿದ್ಯಾರ್ಥಿ/ನಿ ಓಡೋಡಿ ಬಂದು, ಧಡಕ್ಕನೆ ಆತನ ಪಾದಕ್ಕೆ ಬಿದ್ದಂತೆ ನಡೆದುಕೊಂಡು ಆತನ ಬೇಕು ಬೇಡಗಳಾದ ಚಹಾ, ಸಿಗರೇಟು, ಡ್ರಗ್ಗಿದ್ದರೆ ಡ್ರಗ್ಗು (ಔಷದಿ ಎಂಬ ಅರ್ಥವೂ ಇದೆಯೆಂಬುದ ಮರೆಯದಿರಿ, ಓ ಓದುಗ ಮತಬಾಂಧವರೆ), ಸಿಹಿ ಇತ್ಯಾದಿ ಸೇವೆ ಆತನಿಗಾಗುತ್ತಿತ್ತು. ಸಿಹಿ ಒಂದೇ ಆತನಿಗೆ ಬೇಡವಾಗಿದ್ದದ್ದು. ಈಚೆಗೆ ಗೊತ್ತಾದದ್ದು ಈ ಮಾರ್ಕ್ಸಿಸ್ಟ್ ಕಾಮ್ರೇಡ್ 'ಕ್ಯಾಪ್ಟನ್ ದಾ' ಸತ್ತದ್ದು ಯಾವುದೇ ತತ್ವ, ವಾದ, ವಾಗ್ವಾದ, ನಂಬಿಕೆಗಾಗಿಯಲ್ಲ, ಚಟಕ್ಕಾಗಿಯೆಂದು. ಬೋಲ್ಪುರದ ಈತ ಕುಡಿತದಿಂದಾಗಿ ಸತ್ತಿದ್ದ. ಆದರೆ ಆತನ ಅನುಯಾಯಿಗಳು ಆ ಸಾವನ್ನೂ ಒಂದು ಸಾಹಸವೆಂಬಂತೆ ಚಿಂತಿಸತೊಡಗಿರುವುದು ಆತ್ಮಹತ್ಯಾತ್ಮಕವಲ್ಲದೆ ಮತ್ತೇನೂ ಅಲ್ಲ.     "ಆತ ಕುಡಿಯುತ್ತಿದ್ದುದು ಏಕೆ? ಚಿಂತೆ ಮತ್ತು ಯೋಚನೆಯಿಂದಾಗಿ. ಚಿಂತಿ ಯೋಚನೆ ಯಾವುದರ ಬಗ್ಗೆ? ಈ ಮಾರ್ಕ್ಸಿಸ್ಟ್ ನಾಡಾದ ಕೇರಳ-ಬೆಂಗಾಲದಲ್ಲಿ ಸಿ.ಪ.ಎಂ ಮತ್ತು ಸಿ.ಪಿ.ಐಗಳು ಕಾಂಗ್ರೆಸ್ಸಿಗಿಂತಲೂ ಭಿನ್ನವಾಗಿಲ್ಲವೇಕೆಂದು. ಈ ಅಭಿನ್ನತೆ ಏಕೆ? ಮನುಷ್ಯ ಮೂಲಭೂತವಾಗಿ ಸ್ವಾರ್ಥಿಯಾದುದರಿಂದ. ಸ್ವಾರ್ಥ ಏಕೆ? ಕ್ಯಾಪ್ಟನ್ ದಾ ಅಂತಹವರು ಬದುಕಿಲ್ಲ, ಅಥವ ಅಂತಹವರನ್ನು ಬದುಕಲು ಬಿಡಲಿಲ್ಲ" ಎಂಬ ಕಾರಣಕ್ಕೆ. ಆದ್ದರಿಂದ ಆತ ಕುಡಿತದಿಂದ ಸತ್ತದ್ದೂ ಸಹ ತಾತ್ವಿಕತೆಯ ಆಧಾರದಿಂದ, ತತ್ವಾದರ್ಶಕ್ಕಾಗಿ ಎಂದು ಜೋರು ಜೋರಾಗಿ ವಾದಿಸಿದ್ದರು ಅವರ ಅಳಿದುಳಿದ ಶಿಷ್ಯರು. ಈ ಎಡ-ಬಲ ಪಂಥಗಳು, ನೋಡುವ ಕಲೆಯ ಮೇಲೆ ಅದರ ಪರಿಣಾಮದ ಫಜೀತಿಗಳು, ಕಲ್ಲೂ ಮಾತನಾಡುವಂತೆ ಮಾಡಬಲ್ಲ ಮಾರ್ಕ್ಸ್ವಾದ-ಇವುಗಳ ಬಗ್ಗೆ ಮುಂದೆ ಬರೆಯುವೆ. ಅಂದ ಹಾಗೆ ಅಂಕಗಳು ಕಡಿಮೆ ಬಂದಾಗ ಎಂದೂ ಮಾತನಾಡದವರೂ ಮಾತನಾಡತೊಡಗುವುದನ್ನು ಮಾರ್ಕ್ಸ್ ವಾದವೆನ್ನುತ್ತೇವೆ!     ಹಿಂದಿನ ದಿನದ ಘಟನೆ ಏನೇ ನಡೆದಿರಲಿ, ಹುಡುಗರು, ಅವರಿಗೂ ಮೊದಲು ಹುಡುಗಿಯರು ಕಾರ್ಟೂನುಗಳನ್ನು, ವರ್ಣಮಯ ಪೋಸ್ಟರ್ಗಳನ್ನು ಸೃಷ್ಟಿಸಿ ಕ್ಯಾಂಟೀನಿನ ಮೇಲೆ ಅಚಿಟಿಸಿಬಿಡುತ್ತಿದ್ದರು. ಯಾವ ಟೀಚರನ್ನು ಯಾವ ವಿದ್ಯಾರ್ಥಿಯನ್ನು ಬೇಕಾದರೂ ದೃಶ್ಯಾತ್ಮಕವಾಗಿ ಲೇ(ವ)ಡಿ ಮಾಡಬಹುದಿತ್ತು. ರಾತ್ರೋ ರಾತ್ರಿ, ರಾತ್ರಿಯಿಡೀ ಸೃಷ್ಟಿಸಲ್ಪಡುತ್ತಿದ್ದ ಈ ಪೋಸ್ಟರ್ಗಳು ಕಲಾಕೃತಿಗಳಿಗಿಂತಲೂ ಯಾವ ರೀತಿಯಲ್ಲಿಯೂ ಕಡಿಮೆ ಎನಿಸುತ್ತಿರಲಿಲ್ಲ.


     ಕ್ಯಾಂಟೀನಿನ ಸುತ್ತಲೂ ತರಗತಿಗಳು. ಮಾಮ ಅದರೊಳಗಿ (ಕ್ಯಾಂಟೀನ್) ಒಳಗೆ ಡಾನ್ ತರಹ ಕುಳಿತು ಸುತ್ತಲೂ ಕಣ್ಣಾಡಿಸಿದರೆ, ಯಾರು ಯಾವ ಕ್ಲಾಸಿನಲ್ಲಿ ಪಾಠ ಮಾಡುತ್ತಿದ್ದಾರೆ, ಯಾರು 'ಟೂ ನೈಂಟಿ' ಮಾಡುತ್ತಿದ್ದಾರೆ ಎಂದು ಹೇಳಿಬಿಡುತ್ತಿದ್ದರು. ಮಾಮಾ ಟೂಥ್ ಪೇಸ್ಟಿನ ಆತ್ಮದ ತಿರುವು ಮರುವಾದ ರೂಪವಾಗಿದ್ದರು. ಸುದ್ದಿಯು ಅವರ ಒಳಕ್ಕೆ ಹೋಗುತ್ತಿತ್ತೇ ಹೊರತು ಅವರಿಂದ ಹೊರಕ್ಕೆ ಬರುತ್ತಿರಲಿಲ್ಲ. ಪೇಸ್ಟ್ ಟ್ಯೂಬಿನಿಂದ ಹೊರಬರುತ್ತದೆಯೇ ಹೊರತು ಒಳಹೋಗುವುದಿಲ್ಲ! ಮಾಮಾನ ಮೆಮೊರಿಯನ್ನು ಅವರು ಸುಲಿವ ತೆಂಗಿನಕಾಯಿಯ ನಾರಿನಂತೆ ಸುಲಿಯಬಹುದಾದರೆ, ಕಳೆದ ಐವತ್ತು ವರ್ಷದ, ಪ್ರತಿ ವರ್ಷದ, ಪ್ರತಿ ಜೋಡಿಯ ಕಥೆಗಳು ಮೊದಲು ಕಪ್ಪು ಬಿಳುಪಿನಲ್ಲಿ, ನಂತರ ಸೇಪಿಯಾದಲ್ಲಿ, ಆಮೇಲೆ ವರ್ಣದಲ್ಲಿ ಧಡಧಡನೆ ಹರಿದು ಬಂದೀತು, ಅಲ್ಲಿನ ಮೇಳಗಳಲ್ಲಿ ಹಾಕುವ ಮೈಲುದ್ದದ ಒಲ್ಪೊನದಂತೆ (ರಂಗೋಲಿ).


     ಇಂತಹ ಮಾಮಾನಂತಹ ಮಾಮಾನೇ ಸಂಭಾಳಿಸಲಾಗದೇ ಹೋದ ಒಬ್ಬ ವಿದ್ಯಾರ್ಥಿನಿ, ಈಗ ಒಬ್ಬ ಖ್ಯಾತ ಕಲಾವಿದೆ: ಎಲಿನಾ ಬಾನಿಕ್!


     ನಾನು ೧೯೯೦ರಲ್ಲಿ ಎಂ.ಎಫ್.ಎ ಮೊದಲ ವರ್ಷದಲ್ಲಿದ್ದಾಗ ಎಲಿನ ಫೌಂಡೇಷನ್ ವಿದ್ಯಾರ್ಥಿನಿಯಾಗಿ ಸೇರಿದ್ದಳು. ಕಲ್ಕತ್ತದ ಹುಡುಗಿ. ಹಾಸ್ಟೆಲ್ಲಿನಲ್ಲಿ ರಾತ್ರಿ ಒಂಬತ್ತು ಗಂಟೆಯ ಒಳಗಿರುವುದು, ಬೆಳಿಗ್ಗೆ ಐದುಗಂಟೆಯವರೆಗೂ ಹೊರಬರಲಾಗದಿರುವುದು -ಇವೆರಡೂ ಆಕೆಗೆ ಕಷ್ಟವಾಗುತ್ತಿತ್ತು. ಆದ್ದರಿಂದ ಕ್ಯಾಂಪಸ್ಸಿನಿಂದ ಹೊರಗೆ ಒಂದು ಮನೆಯನ್ನೇ ಮಾಡಿಬಿಟ್ಟಳು. ಅಗಾಗ ಅವಳಮ್ಮ ಕಲ್ಕತ್ತದಿಂದ ಬಂದು ಒಂದೆರೆಡು ದಿನವಿದ್ದು ಮಗಳ ಊಟ, ಉಪಚಾರ ಮಾಡಿ ಹಿಂದಿರುಗುತ್ತಿದ್ದರು.


     ಎಲಿನಳ ಕಲಾಭವನ ಸೇರಿದ ತಿಂಗಳಲ್ಲೇ ವಿಕ್ಷಿಪ್ತ ಹುಡುಗಿ ಎಂದು (ಕು)ಖ್ಯಾತಳಾಗಿಬಿಟ್ಟಳು. ಇಂದಿನವರೆಗೂ ಆಕೆಯ ಖ್ಯಾತಿಯು, ಕಲಾಭವನದಲ್ಲಿ ಓದಿ, ಜಗತ್ತಿನೆಲ್ಲೆಡೆ ನೆಲೆಸಿರುವವರ ಮನದಲ್ಲಿ ಅಳಿಸಲಾಗದಂತಾಗಿದೆ:


     ಒಂದು ಮುಂಜಾನೆ ಕ್ಯಾಂಟೀನಿನ ಬಳಿ, ಎಲ್ಲರೂ ಇರುವಾಗ ಪ್ರೊಫೆಸರರೊಬ್ಬರು ಟೀ ಕುಡಿವಾಗ, ಎಲಿನ ಬಂದು ಅವರನ್ನು ನೇರವಾಗಿ ಉದ್ದೇಶಿಸಿ, ಎಲ್ಲರಿಗೂ ಸ್ಪಷ್ಟವಾಗಿ ಕೇಳಿಸುವಂತೆ, "ದಾದಾ, ನಾನು ನಿಮ್ಮ ನ್ಯೂಡ್ ಸ್ಟಡಿ ಮಾಡಬೇಕು. ನಗ್ನರಾಗಿ ಪೋಸ್ ಮಾಡುತ್ತೀರ?" ಎಂದು ಕೇಳಿಬಿಟ್ಟಳು. ನಿಂತ ನೆಲವೇ ಕರಗಿ ನೀರಾಗಬಾರದೆ ಎಂಬ ಮುಖಭಾವ ಮಾಡಿದ ಗಂಡಸನ್ನು ಮೊದಲ ಹಾಗೂ ಕೊನೆಯ ಬಾರಿಗೆ ನಾನು ನೋಡಿದ್ದು ಅಂದೇ. ಅಸ್ಸಾಂ ಮೊಲದ ಆ ಉಪಾಧ್ಯಾಯರು ಪದಗಳಿಗಾಗಿ ಹುಡುಕಾಡಿದ್ದರು. ಆಮೇಲೆ ಆ ಪ್ರಸಂಗದ ಫಲಿತಾಂಶವೆಂದರೆ: ಮರುದಿನ, ಯಾವುದು ನೈಜತೆಯಲ್ಲಿ ಅಸಾಧ್ಯವಾದುದಾಗಿತ್ತೋ ಅದರ ಕಾರ್ಟೂನು ಕ್ಯಾಂಟಿನ್ ಗೋಡೆಯನ್ನು ರಾರಾಜಿಸುತ್ತಿತ್ತು!


     ಮತ್ತೊಂದು ದಿನ ಎಲಿನ ಎಲ್ಲರೂ ನೊಡಿತ್ತಿದ್ದಂತೆಯೇ, ಕಣ್ಮುಚ್ಚಿಕೊಂಡು ಕ್ಯಾಂಟೀನಿನ ಪಕ್ಕದ ದೊಡ್ಡ ಮರದ ಬಳಿ ನಡೆದು ಬಂದಳು. ಬ್ಯಾಗು, ಹಾಳೆಯ ರೋಲು, ಬ್ರಷಿನ ಸೆಟ್ಟು -ಇವೆಲ್ಲವನ್ನೂ ನೆಲಕ್ಕೆಸೆದಳು. ಹಾಗೇ, ಕಣ್ಮುಚ್ಚಿದ್ದಂತೆಯೇ ವಿಶಾಲವಾದ ಆ ಮರವನ್ನು ತಬ್ಬಿ ಹಿಡಿದಳು. 'ಹ್ಞಾಂ, ಹ್ಞೂಂ' ಎಂದು ಸದ್ದು ಮಾಡುತ್ತ, ಮರವನ್ನು ತಬ್ಬಿ ಸುತ್ತಾಕಲು ಆಕೆಗೆ ಹತ್ತಿಪ್ಪತ್ತು ಹೆಜ್ಜೆಯೇ ಬೇಕಾಯಿತು.


     ಶಿಲ್ಪಕಲೆಯ ಗುರುಗಳು ಆಕೆಗೆ, ನೀನು ಶಿಲ್ಪ ಮಾಡಬೇಕೆಂದರೆ ಶಿಲ್ಪಾಕಾರವಿರುವ ನೈಸರ್ಗಿಕ ವಸ್ತುಗಳ ಘನತೆಯನ್ನು ಎರಡೂ ಕೈಗಳಲ್ಲಿ ತಬ್ಬಿ ಹಿಡಿದು ಅನುಭವಿಸಬೇಕು ಎಂದಿದ್ದರಂತೆ. 


     ಹಿಂದೊಮ್ಮೆ ನಗ್ನ ಸ್ಟಡಿ ಮಾಡಬೇಕೆಂದಿದ್ದ ಎಲಿನ ಆ ಪ್ರೊಫ್ರೆಸರನ್ನೇ ನಗ್ನವಾಗಿ ತಬ್ಬಿ ಹಿಡಿದು ಫೀಲ್ ಮಾಡುತ್ತಿದ್ದ ದೃಶ್ಯವೇ ಕ್ಯಾಂಟೀನಿನ ಮೇಲೆನ ವ್ಯಂಗ್ಯಚಿತ್ರವಾಗಿತ್ತು ಮಾರನೇ ದಿನ ಎಂಬುದನ್ನು ಒತ್ತಿ ಹೇಳುವ ಅವಶ್ಯಕತೆಯಿಲ್ಲವಷ್ಟೇ!// 
 

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

<< ಕಲಾಭವನದ ವಿಶೇಷತೆ ಎಂದರೆ ಅಲ್ಲಿನ ಬದಲಾವಣೆ. ಏನೂ ಬದಲಾಗದಿರುವುದೇ ಅಲ್ಲಿನ ನಿತ್ಯ ನಿರಂತರವಾದ ಬದಲಾವಣೆ. ಸ್ಥಾವರಕ್ಕೂ ಜಂಗಮಕ್ಕೂ ವ್ಯತ್ಯಾಸವಿಲ್ಲದಿರುವುದನ್ನೇ ಕಲಾಭವನವೆನ್ನಬಹುದು.>> ನಿಮ್ಮ ನಿರೂಪಣೆಯ ’ವಸ್ತು’ವಿಗೆ ತಕ್ಕಂತೆ ನಿಮ್ಮ ಬರವಣಿಗೆ ಇದೆ. ಆದರೆ ಸ್ಥಾವರವೋ, ಜಂಗಮವೋ -ಬದಲಾವಣೆ ಇಲ್ಲದ ವಸ್ತು ಯಾವುದೂ ಇಲ್ಲ. ಕಾಲ ನಿಂತಿದೆ ಎಂಬ ಭಾವ ಯಾವಾಗಲೂ ಓಡುವ, ಬಹಿರ್ಮುಖವಾಗಿರುವ, ವಾಸ್ತವಕ್ಕೆ ಕೇಂದ್ರೀಕರಿಸಲಾರದ ಮನಸ್ಸಿನ ಲಕ್ಷಣ. ಇದು ನಿರೂಪಕ ತನ್ನದೇ ಮನಸ್ಥಿತಿಯ ಬಗೆಗೆ ಮಾಡಿರುವ ಕಾಮೆಂಟ್.

ನಿಜ. ಇದು ನಿರೂಪಕ ತನ್ನದೆ ಮನಸ್ಥಿತಿಯ ಬಗೆಗೆ ಮಾಡಿರುವ ಕಾಮೆಂಟ್ ಎಂಬುದು ಶೇಕಡಾ ನೂರರಷ್ಟು ಸತ್ಯ. ಈ ಪ್ರವಾಸದ ಶೀರ್ಷಿಕೆಯೇ ಅದು: ’ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆ’. ಧನ್ಯವಾದಗಳು!