ವಿದ್ಯಾರ್ಥಿಯಿಂದ ’ಶಿಕ್ಷಕ’ನಾಗುವ ನಡುವಣ ಜನರೇ-ಷನ್ ಗ್ಯಾಪ್ -- ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆ: ಭಾಗ 3ಅ

To prevent automated spam submissions leave this field empty.

                                                                        


                                                     ()


     ಶಾಂತಿನಿಕೇತನ ಮೂಲಭೂತವಾಗಿ ಸಂತಾಲಿಗಳೆಂಬ ಬುಡಕಟ್ಟು ಜನರಿದ್ದ, ಇರುವ ತಾಣ. ಬರಡು ನೆಲದಲ್ಲಿ ಹಸಿರು ಗಿಡ ನೆಟ್ಟದ್ದು ರವೀಂದ್ರನಾಥ್ ಟಾಗೂರ್, ಅವರ ತಂದೆ ದೇವೇಂದ್ರನಾಥ್ ಟಾಗೂರ್ ಮತ್ತು ಅವರ ಸಹವರ್ತಿಗಳು. ಅಂದು ಅವರುಗಳು ನೆಟ್ಟ (’ಆಲ’ವಲ್ಲದ) ಮರಗಳು ಇಂದಿಗೂ ಇವೆ. ಅವುಗಳ ವಯಸ್ಸು ನೂರುವರ್ಷ ದಾಟಿ ಐದಾರು ವರ್ಷಗಳಾಗಿವೆ: (೧) ಮನುಷ್ಯ ಸೃಷ್ಟಿಯಾದ್ದರಿಂದ, (೨) ಅವುಗಳಿಗೆ ನೂರು ವರ್ಷವಾಗಿರುವುದರಿಂದ (೩) ಮತ್ತವು ಕಲಾಭವನದಾದ್ಯಂತ ಇರುವುದರಿಂದ -- ಅಲ್ಲಿ ಹೋಗುವುದೆಂದರೆ ಆಂಟಿಕ್, ಪ್ರಾಚ್ಯ ಕೃತಿಯೊಂದರೊಳಗೆ ಹೋಗಿ, ನಾವೂ ಒಮ್ಮೆ ಪ್ರಾಚ್ಯವಸ್ತುಗಳಾಗಿ, ಹೊರಬಂದಂತೆಯೆ ಅನ್ನಿಸುತ್ತದೆ.


ಬರಡು ಭ್ಹೋಲ್ಪುರದ ನಡುವೆ ಶಾಂತಿನಿಕೇತನ ಎಲ್ಲಿ? ಎಂದು ಮನುಷ್ಯರ್ಯಾರನ್ನೂ ಕೇಳಬಾರದು. ಸೀದ ಮರಗಳನ್ನು ಮಾತಾಡಿಸಿ. ಅವುಗಳೇ ಶಾಂತಿನಿಕೇತನದ ಸೀಮೆಯ ಬೇಲಿ ಹಾಕಿರುವುದು, ಅವುಗಳೇ ಶಾಂತಿ-ನಿಕೇತನವನ್ನಾಗಿಸಿರುವುದು.  ಶಾಂತಿನಿಕೇತನವು ಗಾಢಪ್ರಭಾವ ಬೀರಬಹುದೇ ಹೊರತು ಶಾಂತಿಯನ್ನು ಪ್ರಸರಿಸುವ ತಾಣವಂತೂ ಅಲ್ಲವೇ ಅಲ್ಲ! ಈ ನಿಟ್ಟಿನಲ್ಲಿ ಅದು ಲಂಡನ್ ನಗರದಂತೆ. ಅದನ್ನು ನೀವು ಇಷ್ಟಪಡಬಹುದು ಅಥವ ದ್ವೇಷಿಸಬಹುದು. ಅದು ನಿಮ್ಮ ಆಯ್ಕೆ. ಆದರ ಇವೆರಡನ್ನೂ ನೀವು ಮನಸ್ಸಿನಿಂದ ಬದಿಗೆ ಸರಿಸಲಾರಿರಿ. 


     ಆದ್ದರಿಂದಲೇ ಇರಬೇಕು ಟಾಗೂರ್ ಅದನ್ನು 'ಪ್ರಶಾಂತಿನಿಕೇತನ' ಎಂದು ಹೆಸರಿಸಲಿಲ್ಲ!">


     ಅತಿಹತ್ತಿರದಲ್ಲೇ ಇರುವ ಬೋಲ್‍ಪುರವು ರೌಡಿಗಳಿಗಾಗಿ, ರೌಡಿಸಂಗಾಗಿ, ನಕ್ಸಲ್ ಚಳುವಳಿಗೆ ಮತ್ತು ಭಾರತೀಯ ದೇಸೀ ಶೈಲಿಯ ಮಾರ್ಕ್ಸಿಸಂಗಾಗಿ ದೇಶದಾದ್ಯಂತ ಜಗತ್ಪ್ರಸಿದ್ಧವೂ ಆಗಿದೆ. ಎರಡು ನೋಬಲ್ ಪ್ರಶಸ್ತಿಗಳು ಐನೂರು ಎಕರೆಯಷ್ಟಿರುವ ಶಾಂತಿನಿಕೇತನದಲ್ಲಿ ನೆಲೆಸಿದ್ದ/ಸಿರುವ ಇಬ್ಬರು ಭಾರತೀಯ ವ್ಯಕ್ತಿಗಳಿಗೇ ಸಂದಿದೆ! ಟಾಗೂರು ಹಾಗೂ ಆರ್ಥಿಕತಜ್ಞ ಅಮಾರ್ತ್ಯ ಸೇನರಿಗೆ.  ಒಬ್ಬರ ಪ್ರಶಸ್ತಿ ಕಳೆದುಹೋಗಿದೆ ಮತ್ತೊಬ್ಬರು ತಮ್ಮದು ಕಳೆದುಹೋದರೂ ತೊಂದರೆ ಏನಿಲ್ಲವೆಂದಿದ್ದಾರೆಪ್ರಶಸ್ತಿಯ ಗೌರವ ಇರುವುದು ಗುರ್ತಿಸುವವರ ಭಾವನೆಯಲ್ಲಿಯೇ ಹೊರತು ವಸ್ತುವಿನಲ್ಲಲ್ಲ, ಅಲ್ಲವೆ? 


  ನೋಬೆಲ್ ಪ್ರಶಸ್ತಿಯ ಫಲಕವು ಟಾಗೂರ್ ಸಂಗ್ರಹಾಲಯವಾದ 'ಉತ್ತರಾಯಣ'ದಿಂದ ಒಂದೆರೆಡು ವರ್ಷದ ಹಿಂದೆ ಕಳೆದುಹೋಗುವವರೆಗೂ ಅಲ್ಲಿನ ವಾಚ್‍ಮನ್‍ಗಳು ಲಾಠಿ ಹಿಡಿದುಕೊಂಡೇ ಕಾರ್ಯನಿರ್ವಹಿಸುತ್ತಿದ್ದರು. ಈಗ ಸ್ಟೆನ್‍ಗನ್ ಹಿಡಿದು ಓಡಾಡುತ್ತಾರೆ. ಇದರ ನೀತಿಪಾಠವೆಂದರೆ: ವ್ಯಕ್ತಿಯೊಬ್ಬನ ಸಾಧನೆಗೆ ಸಂದ ಗೌರವದ ಭೌತಿಕರೂಪ ಕಳೆದಲ್ಲಿ ಅದರ ಸಂರಕ್ಷಕರು ಸಾಧನೆಯನ್ನೇ ಕಳೆದುಕೊಂಡವರಂತೆ ಆಡುತ್ತಾರೆ! ಉದಾಹರಣೆ: ಉತ್ತರಾಯಣದ ಹೊರಗಿನ ವಾಚ್ಮನ್ಗಳು ಸ್ಟನ್ಗನ್ಮೆನ್ ಆಗಿಬಿಟ್ಟಿರುವುದು!  


                                                                (೮)


       ಮಲ್ಲೇಶ್ವರದ ಹಿಮಾಂಶು ಜ್ಯೋತಿಕಲಾ ಪೀಠ ಪ್ರಾಥಮಿಕ ಶಾಲೆಯಲ್ಲಿ ೧೯೭೭ರಲ್ಲಿ ನಾನು ಏಳನೇ ತರಗತಿ ಓದುತ್ತಿರುವಾಗ, ನಮಗೆ, ಆಗಲೇ ರಿಟೈರ್ ಆಗಿ ಪಾಠ ಮುಂದುವರೆಸುತ್ತಿದ್ದ ಶ್ರೀನಿವಾಸ್ ಅಯ್ಯಂಗಾರ್ ಎಂಬ ಮೇಷ್ಟರು ಇದ್ದರು. ಇಂಗ್ಲೀಷ್ ಆಗ ನನ್ನ ಬದುಕೆಂಬ ಕಂಪ್ಯೂಟರಿಗೆ ಅತಿ ದೊಡ್ಡ ವೈರಸ್. ಈಗೆಲ್ಲ ವೈರಸ್ಗಳಿಗೆ ಕಲಾವಿದರ ಹೆಸರುಗಳ (ದೌರ್)ಭಾಗ್ಯ ಬಂದುಬಿಟ್ಟಿವೆ, ಬಿಡಿ--ಮಿಕೆಲೆಂಜೆಲೊ ವೈರಸ್, ವ್ಯಾನ್ ಗೋ ವೈರಸ್ ಇತ್ಯಾದಿ. ಆಗ ಇಂಗ್ಲೀಷಿನಲ್ಲಿ "ಓಪನ್ ಏರ್ ಸ್ಕೂಲ್ -- ಶಾಂತಿನಿಕೇತನ್" ಎಂಬ ಒಂದು ಪಾಠವಿತ್ತು. ಅಯ್ಯಂಗಾರ್ ಮೇಷ್ಟ್ರು ಸೊಗಸಾಗಿ ಅದನ್ನು ವಿವರಿಸಿ, ವರ್ಣಿಸುತ್ತಿದ್ದರು. ನಾಲ್ಕು ಗೋಡೆಗಳಿಲ್ಲದ ಶಾಲೆಯಲ್ಲಿ ಮಳೆಬರುವಾಗ ಕುಳಿತುಕೊಳ್ಳುವುದಾದರೂ ಹೇಗಪ್ಪ ಎಂದು ನಮಗೆಲ್ಲ ಶಾಂತಿನಿಕೇತನದ ಬಗ್ಗೆ ಸೋಜಿಗ!


     ಮಳೆ, ಗಾಳಿ, ಚಳಿ, ಬಿಸಿಲು ಇವೆಲ್ಲ ಬಂದರೆ ಅಂದು ಶಾಲೆಗೆ ರಜ ಇರಬೇಕು ಅಲ್ಲಿ, ಎಂದುಕೊಳ್ಳುತ್ತಿದ್ದೆವು. ನಮಗೂ ಅಲ್ಲಿಯೇ ವಿದ್ಯಾರ್ಥಿಗಳಾಗಿದ್ದರೆ ಚೆನ್ನಿರುತ್ತಿತ್ತು ಎಂದುಕೊಳ್ಳುತ್ತಿದ್ದೆವು. ಕಾರಣ ನಿಮಗೆ ತಿಳಿದೇ ಇದೆ. ಪರೀಕ್ಷೆಗಳೇ ಇಲ್ಲದ ಅಂತರರಾಷ್ಟ್ರೀಯ ಶಾಲೆಗಳು ಬೆಂಗಳೂರಿನ ತುಂಬ ಈಗಿದ್ದಾವಲ್ಲ, ಹಾಗೆ. ಜೊತೆಗೆ ನಮ್ಮ ಬುಧುವಾರ ಅಲ್ಲಿ ಭಾನುವಾರ. ಆದ್ದರಿಂದ ಮಂಗಳವಾರ ಅಲ್ಲಿ ಶನಿವಾರ. ಬೆಳಿಗ್ಗೆಯನ್ನು 'ಶೊಕಾಲೆ' ಎನ್ನುತ್ತಾರೆ, ಸಾಯಂಕಾಲವನ್ನು 'ಬಿಕಾಲೆ' ಎನ್ನುತ್ತಾರೆ ಬೆಂಗಾಲಿಗಳಿ. ಕನ್ನಡವನ್ನು ತಲೆಕೆಳಗು ಮಾಡಿದರೆ ಬೆಂಗಾಲಿಯಾಗುತ್ತದೆಂಬ ಮಾತು ಬೆಂಗಾಲ್-ಲೂರಿನ ಆಣೆಗೂ ಸತ್ಯ!
      ಅಲ್ಲಿಂದ ಯಾರಾದರೂ ಬಂದವರಾಗಿದ್ದಲ್ಲಿ ಅವರೆಲ್ಲ ನೇರವಾಗಿ ಹಿಮಾಲಯದಾಚೆಗಿನ ಸ್ವರ್ಗದಿಂದ, ಮಹಾಭಾರತದ ಕಾಲದ ಸೆಟಪ್ಪಿನಿಂದ ಇಳಿದು ಬಂದವರಂತೆ ಕಾಣುತ್ತಿದ್ದರು ಶಾಲಾಹುಡುಗರಾದ ನಮಗೆ. ಆದರೆ ಹಾಗೆ ಅಂತಲ್ಲಿ ಹೋಗಿದ್ದವರ್ಯಾರೂ ನಮಗೆ ಆಗ ಗೊತ್ತಿರಲಿಲ್ಲ. ಅಯ್ಯಂಗಾರ್ ಮೇಷ್ಟ್ರು ಯಾವಾಗಲೋ ಅಲ್ಲಿಗೆ ಟೂರ್ ಹೋಗಿದ್ದರೆಂದು ಹೇಳಿದ್ದು ಈಗಷ್ಟೇ ನನಗೆ ನೆನಪಾಗುತ್ತಿರುವುದರಿಂದ ಆ ಸುದ್ದಿಯ ಗ್ಯಾರಂಟಿಯಿಲ್ಲ. ಅಂದರೆ ಅವರು ಅಲ್ಲಿಗೆ ಹೋಗಿರಬಹುದೇನೋ.. ಆದರೆ ಅದನ್ನು ನಮಗೆ ಹೇಳಿದ್ದರ ನೆನಪು ಇಂದು, ನನಗೆ ಈಗಷ್ಟೇ ಹುಟ್ಟಿಕೊಂಡಂತೆನಿಸುತ್ತಿದೆ.
      ನೆನಪುಗಳ ಸಾತತ್ಯವನ್ನು ಜ್ಞಾನಾರ್ಜನೆಗಾಗಿ ಮಾತ್ರ ಸ್ವೀಕರಿಸಬಹುದೇ ಹೊರತು ಸಾಕ್ಷ್ಯದ ಒಡೆತನಕ್ಕಾಗಿಯಲ್ಲವಲ್ಲ!
ಹಾಗೆಂದರೆ-ಓಪನ್ ಏರ್ ಎಂದರೆ--ಕನ್ನಡದಲ್ಲಿ ಏನು ಎಂದು ಗೆಳೆಯನೊಬ್ಬನನ್ನು ಕನ್ನಡದಲ್ಲಿ ಕೇಳಿದ್ದೆ, ಮೇಷ್ಟರಿಲ್ಲವೆಂದು  ನಾವೇ ಭಾವಿಸಿಕೊಂಡುಬಿಟ್ಟಿದ್ದ ಸಮಯದಲ್ಲಿ.
"ಹಾಗೆಂದರೆ ನಮ್ಮ ಅಯ್ಯಂಗಾರ್ ಮೇಷ್ಟ್ರು ಎಂದರ್ಥ" ಎಂದು ಆ ವಯಸ್ಸಿಗೇ ಮಾರ್ಮಿಕವಾಗಿ ಉತ್ತರಿಸಿದ್ದ ಗೆಳೆಯ ಶ್ಯಾಮ್. ಸ್ವಲ್ಪವೇ ಕಣ್-ಫ್ಯೂಸ್ಡ್ ಭಾವ ಪ್ರಕಟಪಡಿಸಿದ್ದೆ ಕನ್ನಡದಲ್ಲಿ.


     "ಅರ್ಥವಾಗಲಿಲ್ಲವೆ ಪೆದ್ದು. ನಮ್ಮ ಮೇಷ್ಟ್ರೂ ಆಗಾಗ ಗಾಳಿಯನ್ನು ತೆರೆದು ತೆರೆದು ಬಿಡುತ್ತಿರುತ್ತಾರೆ. ಕ್ಲಾಸ್ ರೂಮನ್ನೇ ಬಾಥ್ರೂಂ ಎಂಬಂತೆ. ಶಾಂತಿನಿಕೇತನವೂ 'ತೆರೆದ ಗಾಳಿಯನ್ನು ಬಿಡುವ' ಶಾಲೆಯಂತೆ. ಇದೇ ಇವರಿಬ್ಬರಿಗಿರುವ ಸಾಮ್ಯತೆ," ಎಂದಿದ್ದ. ಅಯ್ಯಂಗಾರ್ ಸಾರು ಅದೇಕೋ ಶಾಂತಿನಿಕೇತನವನ್ನು ಕುರಿತ ಐದಾರು ಕ್ಲಾಸ್ಗಳನ್ನು ಕ್ಲಾಸ್ ರೂಮಿನ ಹೊರಗೆ, ಮರಗಳ ಕೆಳಗೆ ತೆಗೆದುಕೊಂಡಿದ್ದರು. ಪುತಿನರ ಕವನಗಳನ್ನು ಮೇಲುಕೋಟೆಯಲ್ಲಿ ಕುಳಿತು ಓದಿದಂತೆ ಮತ್ತು ಶರ್ಲಾಕ್ ಹೋಮ್ಸನ ಸಾಹಸಗಳನ್ನು ಲಂಡನ್ನಿನ ಕೆಫೆಯೊಂದರಲ್ಲಿ ಕುಳಿತು ಓದಿದಂತೆ ಇದು: ಒರಿಜಿನಲ್ ಫೀಲ್ ಗ್ಯಾರಂಟಿ


     "ಹಾಗೆಲ್ಲ ಮಾತಾಡಬಾರದು. ನನಗೇನೂ ಹಾಗೇ ಕಲ್ಪಿಸಿಕೊಳ್ಳಲು ಆಗಲ್ಲ ಅಂತೇನಿಲ್ಲ. ಆದರೆ ಡೀಸೆನ್ಸಿ ಅನ್ನೋದೊಂದಿರುತ್ತಲ್ಲ ಎಂದಿದ್ದೆ," ಯಾರೋ ಹಿರಿಯರ ಮಾತನ್ನು ನೆನಪಿಸಿಕೊಂಡು, ಅದನ್ನೇ ಅನುಕರಿಸುತ್ತ.
"ಓಪನ್ ಏರ್ ಬಗ್ಗೆ ಏನ್ ಗುರು ನಿನ್ನ ಡೀಸೆನ್ಸಿ. ಎಲ್ಲರೂ ಮಾಡುವುದೇ ಅಲ್ಲವೆ ಅದನ್ನ? ಅಯ್ಯಂಗಾರ್ ಸಾರು ತಮ್ಮ ದೇಹವನ್ನೇ ಶಾಂತಿನಿಕೇತನ ಎಂದುಕೊಂಡುಬಿಟ್ಟಿರುತ್ತಾರೆ," ಎಂದು ಶ್ಯಾಮ್ ರೇಗಿದ್ದ. 


"ಜೋಕ್ ಮಾಡೋ ಕೆಪಾಸಿಟಿ ಇಲ್ಲದವರು ಮಾತ್ರ ಇಂತ ಅಸಹ್ಯದ ಆಧಾರ ಪಡೆದು ನಗಿಸುವ ಪ್ರಯತ್ನ ಮಾಡುತ್ತಾರೆ," ಅಂದು ಮಾತು ಮುಗಿಸಿದ್ದೆ.


    ಡೀಸೆನ್ಸಿ ಎಂಬ ಹೊಸ ಇಂಗ್ಲೀಷ್ ಪದ ನನ್ನ ಬಾಯಿಂದ ಹೊರಬಿದ್ದುದ್ದರಿಂದಲೋ ಅಥವ ಅದರ ನಿಜವಾದ ಅರ್ಥಕ್ಕೆ ಅಷ್ಟು ಬೆಲೆಯಿತ್ತೋ ಏನೋ. ನನಗೆ ಅರ್ಧ ಗುದ್ದು ಬಿದ್ದಿತ್ತು. ಶ್ಯಾಮನಿಗಾದರೆ ಡಬಲ್ ಗುದ್ದು ಬಿದ್ದಿತ್ತು. ಒಂದು ಗುದ್ದು: ಆತ ನೆಲಕ್ಕೆ ಬಿದ್ದದ್ದು. ಎರಡನೇ ಗುದ್ದುಃ ಅದಕ್ಕೆ ಮೂಲಕಾರಣವೆಂಬಂತೆ ಯಾರೋ ಜೋರಾಗಿ ತಮ್ಮ ಮುಷ್ಠಿಯಿಂದ ಆತನ ಬೆನ್ನಿಗೆ ಗುದ್ದಿದ್ದರು. ಹಾಗೆ ಗುದ್ದಿದವರು (೧) ಬಿಳಿಯ ತುಂಬು ತೋಳಿನ ಅಂಗಿ ತೊಟ್ಟಿದ್ದರು. ಮತ್ತು (೨) ಶರ್ಟಿನ ಕಾಲರಿನ ಮೇಲೆ ಏನೂ ಕಾಣದಷ್ಟು ಕಪ್ಪಗಿದ್ದರು. ಮತ್ತು (೩) ಅವರು ಮಾತ್ರ ಹಾಗೆ ಗುದ್ದುತ್ತಿದ್ದುದು ಹಿಮಾಂಶು ಶಾಲೆಯಲ್ಲಿ. ನಮ್ಮ ಮಾತುಗಳನ್ನು ಸಾಧ್ಯಂತವಾಗಿ ಕೇಳಿ ಕೆಂಡಾಮಂಡಲವಾಗಿದ್ದರು ಶ್ರೀನಿವಾಸ ಅಯ್ಯಂಗಾರ್ ಮೇಷ್ಟ್ರು!
     ಮೊದಲ ಬಾರಿಗೆ 'ತೆರೆದ ಗಾಳಿಯ' ಶಾಂತಿನಿಕೇತನ ನನಗೆ ಏಳನೇ ಕ್ಲಾಸಿನಲ್ಲೇ ಪರಿಚಯವಾದುದು ಹೀಗೆ -ಅರ್ದ ಗುದ್ದು ತಿನ್ನುವ ಮೂಲಕ. ಮುಂದೊಂದು ದಿನ, ಹದಿಮೂರು ವರ್ಷಗಳ ನಂತರ ನಾನಲ್ಲಿ ಎರಡು ವರ್ಷ ವ್ಯಾಸಂಗ ಮಾಡುತ್ತೇನೆಂದು ಅಯ್ಯಂಗಾರ್ ಮೇಷ್ಟ್ರ ಗುದ್ದಿನಾಣೆಗೂ ಭಾವಿಸಿರಲಿಲ್ಲ. ಶಾಂತಿನಿಕೇತನದಲ್ಲಿದ್ದ ಎರಡು ವರ್ಷದ ಪ್ರತಿಯೊಂದು ದಿನವೂ ನನಗೆ ಹದಿಮೂರು ವರ್ಷದ ಹಿಂದೆ, ಬೆನ್ನಿಗೆ ಬಿದ್ದಿದ್ದ ಗುದ್ದಿನ ಬೆನ್ನೆನಪು ಹಾಗೂ ಹಿನ್ನೆನಪು ಬೆನ್ನು ಬಿದ್ದುಬಿಟ್ಟಿತ್ತು!


ಆಗ ಮುಂದಿನ ಬೆಂಚಿನ ವಿದ್ಯಾರ್ಥಿಯೂ ಅಲ್ಲ, ತೀರ ಹಿಂದಿನ ಬೆಂಚಿನವನೂ ಆಗಿರಲಿಲ್ಲ. ಎಲ್ಲ ಕಥೆ, ಕಾದಂಬರಿ, ಸಿನೆಮಗಳನ್ನು ಒಮ್ಮೆ ಮನಸ್ಸಿನಲ್ಲೇ ರಿವೈಸ್ ಮಾಡಿ ನೋಡಿ: ಇವೆರಡೂ ಅಲ್ಲದ ಮಧ್ಯದ ಬೆಂಚಿನವರ ಬಗ್ಗೆ ಯಾರೂ ಮಾತನಾಡುವುದೇ ಎಲ್ಲ-ಕಥೆ ಕಾದಂಬರಿಗಳಲ್ಲಿ. ತೀರ ಎಡಕ್ಕೂ ಅಲ್ಲದ, ತೀರ ಬಲಕ್ಕೂ ಇಲ್ಲದ, ಎಡ-ಬಲ ಪಂಥೀಯನೂ ಅಲ್ಲದೇ ಹೋಗಿದ್ದ ಈ ನಾನೆಂಬ ನಾನೊಬ್ಬನೇ ನನ್ನ ಕ್ಲಾಸಿನಿಂದ, ಓದುತ್ತಿರುವ ಪಾಠದೊಳಕ್ಕೇ -ಅಕ್ಷರಶ: ಶಾಂತಿನಿಕೇತನಕ್ಕೆ--ಎಂಟ್ರಿ ತೆಗೆದುಕೊಳ್ಳುವ ಭಾಗ್ಯ ಪಡೆದವನಾಗಿದ್ದೆ.


                                                    (೯)


  ಕೆಳ-ಮಧ್ಯಮವರ್ಗದಿಂದ ಬಂದ ನಮ್ಮಂತಹವರಿಗೆ ಶಿಕ್ಷೆಯ ಕಲ್ಪನೆಯಿಲ್ಲದ ಶಿಕ್ಷಣ ಅಲ್ಪವೆಂದೇ ಅನ್ನಿಸುವುದು. ಹದಿನೆಂಟು ವರ್ಷಕಾಲ ವಾಸ್ತುಕಲಾ ಶಾಲೆ ಮತ್ತು ಕಲಾಶಾಲೆಗಳಲ್ಲಿ ಪಾಠ ಹೇಳಿದ ಮೇಲೂ ನನಗನ್ನಿಸುವುದು ಇದೇ: ಒಳ್ಳೆಯ ಮಾತು, ಪ್ರೀತಿ, ಸಹನೆ, ತಾಳ್ಮೆಯನ್ನು ವಿದ್ಯಾರ್ಥಿಗಳ ಮುಂದೆ ಶಿಕ್ಷಕರಾದವನು ಪ್ರಕಟಿಸುವುದು, ಸಬ್ಮೀಷನ್ ಅನ್ನು ಹುಡುಗರು ಕೊನೆಯ ತಾರೀಕಾದರೂ ಕೊಡದಿದ್ದರೂ ಅವರಿಗೆ (ಸಾಧನೆಗಿಂತಲು, ಯೋಗ್ಯತೆಯನ್ನು ಆಧರಿಸಿ) ಮಾರ್ಕ್ಸ್ ಕೊಡುವುದು. ಅದಾದ ಮೇಲೂ ಸಬ್ಮೀಷನ್ ನಿಮಗೆ ಅವರು ಸಲ್ಲಿಸದಿರುವುದು. ಸ್ಟ್ರೈಕ್ ಕುಳಿತಾಗ ನೀವು ನಿರೀಕ್ಷಿಸದ ನಿಮ್ಮ ಮುಂಚಿನ ತಮಾಷೆಯ ಜೆಸ್ಚರ್‍ಗಳು ಸಹ ನಿಮ್ಮ ವಿರುದ್ಧದ ಗಂಭೀರ ಆರೋಪವಾಗಿ ಮಾರ್ಪಡುವುದು -- ಇವೆಲ್ಲ ಒಂದು ಕಡೆ ಇರಲಿ. ಒಂದು ಅಂಚೆಚೀಟಿಯಲ್ಲಿ 'ತಪ್ಪು ಮಾಡದ ಅಥವ ಸರಿಯಾಗಿ ಓದದ/ನಡೆದುಕೊಳ್ಳದ' ವಿದ್ಯಾರ್ಥಿ‍ಗಳ ವಿರುದ್ಧ ಬರೆದು, ಸುಮ್ಮನೆ ಅವರ ತಂದೆ-ತಾಯಿಗಳಿಗೆ ಅಥವ ಅವರ ಕೇರ್‍ಟೇಕರ್ ವಿಳಾಸಕ್ಕೆ ಅಂಚೆಯಲ್ಲಿ ಹಾಕಿ. ಮರುದಿನವೇ, ಎಂದೂ ಕಾಣದ ಯುವಕ ಅಥವ ಯುವತಿಯೊಬ್ಬಳು ನಿಮ್ಮೆದಿರು ಬಂದು ನಿಂತಿರುತ್ತಾನೆ/ಳೆಃ


"ಏನ್ ಸರ್/ಮೇಡಮ್, ಏನ್ ಬೇಕಿತ್ತು?"


"ಸಾ. ನಮ್ಮನೆಗೆಲ್ಲ ಲೆಟರ್ ಕಳಿಸುವ ಅವಶ್ಯಕತೆ ಇತ್ತೆ ಸಾ?"


"ಯಾರ್ರೀ ನೀವು?"


"ನಾನೆ ಸಾ. ನಿಮ್ಮ ಸ್ಟೂಡೆಂಟ್  ’ಸೋ ಅಂಡ್ ಸೋ’" ಎಂದು ಗೋಳಾಡಿಬಿಡುತ್ತಿದ್ದರು. ಅದರ ಪ್ರಭಾವ - ಅಂಚೆ ಕಾಗದದ್ದು -- ಒಂದು ಸೆಮಿಸ್ಟರ್‍ವರೆಗಾದರೂ ಇರುತ್ತಿತ್ತು. ಅಷ್ಟೇ ಅಲ್ಲ. ಹುಡುಗರು ಎಂತಹ ಸ್ಮಾರ್ಟ್ ಎಂದರೆ, ನಿಮ್ಮನ್ನೇ ಕಾಡಿಬೇಡಿ ವಾಪಸ್ ಮನೆಗೆ ಅಪ್ಪಮ್ಮಂದಿರಿಗೆ ನಿಮ್ಮಿಂದಲೇ ನಿಮ್ಮದೇ ಮೊಬೈಲಿನಿಂದಲೇ ಫೋನಾಯಿಸಿಸಿ, ಪ್ರಿನ್ಸಿಪಾಲರಿಗೆ ಗೊತ್ತಿಲ್ಲದಂತೆ ನೀವು ವಿದ್ಯಾರ್ಥಿಗಳ ಪರವಾಗಿ ಕ್ಷಮೆ ಬೇಡಬೇಕಾಗುತ್ತಿತ್ತುಃ ....(ಭಾಗ ೩ ಆ ಮುಂದುವರೆದಿದೆ)


 

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಶಾಂತಿನಿಕೇತನದಲ್ಲಿ ಓದಬೇಕೆಂಬ ನನ್ನ ಮಹದಾಸೆಗೆ ನನ್ನ ಕಲಾಶಾಲೆಯ ಇಂಟರ್ನಲ್ ಪ್ರಾಬ್ಲಂ ಗಳಿಂದಾಗಿ ಅಲ್ಲಿಗೆ ಪ್ರವೇಶ ಪಡೆಯಲು ಸಾದ್ಯವಾಗದೇ ಹೋದರು....ನಿಮ್ಮ ಬರವಣಿಗೆಯ ಮೂಲಕ ಕಟ್ಟಿಕೊಡುತ್ತಿರುವ ಶಾಂತಿನಿಕೇತನದ ನನ್ನ ಕಲ್ಪನೆ ಈಗ ಮತ್ತೆ ಅಲ್ಲಿಗೆ ಸೇರಲು ಪ್ರೇರೇಪಿಸುತ್ತಿದೆ...

ಸೇರಬಹುದು. ಆದರಲ್ಲಿ ಗೋಡೆಮೇಲೆ ಚಿತ್ರಬರೆಯಲು ಯಾರೂ ಕಾಸು ಕೊಡೋಲ್ಲ. ಬರೀ ಸುಡಾವೆಮಣ್ಣಿನ (ಟೆರಕೋಟ) ಭಿತ್ತಿಚಿತ್ರ ರಚಿಸಬೇಕಾಗುತ್ತದೆ. ಸಾಸಿವೆ ಎಣ್ಣೆಯ ಊಟದಿಂದಾಗಿ ಮೈ ಸ್ವಲ್ಪ ಇಳಿಯದಿದ್ದರೂ, ಸೈಕಲ್ ತುಳಿಯಲೇ ಬೇಕಾದ ಅನಿವಾರ್ಯತೆಯಿಂದಾಗಿ ಮೈ ಇಳಿಯುತ್ತದೆ. ಒಂದು ವಾರದೊಳಗೆ ಸೈಕಲ್ಲಿಗೆ ಕ್ಯಾರಿಯರ್ ಬರುತ್ತದೆ. ಗರ್ಲ್ ಫ್ರೆಂಡ್ ಅಲ್ಲಿ ಅನಿವಾರ್ಯ. ತೂಕಡಿಸುವವರಿಗೆ ಹಾಸಿಗೆ ಹಾಕಿಕೊಟ್ಟಂತೆ, ಅಲ್ಲಿನ ಹುಡುಗಿಯರಿಗೆ ಸಕತ್ ಸೈಕಲ್ ತುಳುಯಲು ಬಂದರೂ, ಹುಡುಗರ ಗಾಡಿಯ ಹಿಂದಿನ ಕ್ಯಾರಿಯರ್ ನೋಡಿ, ಕಾಲು ನೋವು ಬರುವುದು ಸಹಜ. ನಾನು ಅಲ್ಲಿ ಸೇರಿದ ಸಂಜೆ ಸ್ಪಷ್ಟವಾಗಿ ನೆನಪಿದೆ (೧೯೯೦). ಪ್ರಾಂಶುಪಾಲರಾದ ಖ್ಯಾತ ಗ್ರಾಫಿಕ್ ಕಲಾವಿದ ಸನತ್ ಕರ‍್ ಅವರಿಗೆ ನನ್ನನ್ನು ಕಲಾಭವನಕ್ಕೆ ಸೇರಿಸಿಕೊಂಡದ್ದಕ್ಕೆ ಧನ್ಯವಾದ ಅರ್ಪಿಸಿದೆ. ಅವರು ಸ್ಪಷ್ಟವಾದ ಬೆಂಗಾಲಿಯಲ್ಲಿ ಮಾತನಾಡತೊಡಗಿದರು. ನನಗೆ ಏನೂ ಅರ್ಥವಾಗಲಿಲ್ಲ. ಆದರೆ ಅವರು ಹೇಳಿದ್ದನ್ನೆಲ್ಲ ಸ್ಫಷ್ಟವಾಗಿಯೇ ಗ್ರಹಿಸಿದ್ದೆ: "ನಿನಗೆ ಒಳ್ಳೆಯದಾಗಲಿ. ಚೆನ್ನಾಗಿ ಓದು. ಮೊದಲು ಬೆಂಗಾಲಿ ಕಲಿ. ಬೆಂಗಾಲಿ ಕಲಿಯಲಿರುವ ಸುಲಭ ಉಪಾಯವೆಂದರೆ ಬೆಂಗಾಲಿ ಹುಡುಗಿಯೊಂದಿಗೆ ಸ್ನೇಹ ಮಾಡಿಕೊ. ಅಥವ ೨೯೦ ಯನ್ನಾದರೂ ಮಾಡಿಕೊ", ಎಂದು. ಪಕ್ಕದಲ್ಲಿದ್ದ ಕನ್ನಡಿಗ, ಸೀನಿಯರ್, ನಾಗಪ್ಪನಿಗೆ ೨೯೦ ಎಂದರೇನೆಂದು ಕೇಳಿದ್ದೆ, ಈಚೆ ಬಂದ ಕೂಡಲೆ. "ಪ್ರೇಮಿಸಿ ಹುಡುಗ ಹುಡುಗಿಗೆ, ಹುಡುಗಿ ಹುಡುಗನಿಗೆ ಕೈ ಕೊಟ್ಟಾಗ, ಅದಕ್ಕೆ ೨೯೦ ಎನ್ನುತ್ತಾರೆ ಕಲಾಭವನದಲ್ಲಿ. ಸಂಬಂಧಿಸಿದ ನ್ಯಾಯಾಲಯದ ದಾವೆಯ ಸಂವಿಧಾನ ಸಂಖ್ಯೆಯೂ ೨೯೦!" ಜೊತೆಗೆ ಶಾಂತಿನಿಕೇತನದಲ್ಲಿರುವ ಎರಡೇ ಚಿತ್ರಮಂದಿರಗಳಲ್ಲಿ (’ಚಿತ್ರೊ’ ಮತ್ತು ’ಬಿಚಿತ್ರೊ’) ಬಾಲ್ಕನಿ ಟಿಕೆಟ್ಟಿಗೆ ಬೆಲೆ ೨೯೦! ಕಲಾಭವನ ಸೇರುವುದು ಸುಲಭ, ಬಿಡಿಸಿಕೊಳ್ಳುವುದಲ್ಲ!!!

ಬಾಲ್ಕನಿ ಟಿಕೆಟ್ಟಿನ ಕಥೆ ಏನಾಗುತ್ತೋ ಗೊತ್ತಿಲ್ಲ.. ಯಾಕಂದ್ರೆ ಹೇಗಿದ್ರೂ ನಮ್ಮದು "ಗಾಂದಿ" ಕ್ಲಾಸಲ್ವಾ? ಆದ್ರೆ ಸೈಕಲ್ನ ವಿಶಯಕ್ಕೆ ಬಂದ್ರೆ.. ಸಾದ್ಯವಾದಷ್ಟೂ ಸ್ಕೂಟರ್ನ ಮೊರೆ ಹೋಗ್ತೀವಿ ಅಥವ... ಹುಡುಗಿಯರ ಬೈಕ್ ಡ್ರಾಪ್ ಕೇಳ್ತೀವಿ.. ಅದೂ ಇಲ್ಲಾ ಅಂದ್ರೆ ಹುಡುಗಿಯರ ಜೊತೆ ಮಾರ್ನಿಂಗ್ ವಾಕ್ ಮತ್ತು ಈವ್ನಿಂಗ್ ವಾಕ್ ಮಾಡ್ತಾ.. ಅಕಸ್ಮಾತ್ ಮಳೆ ಬಂದ್ರೆ.. ರಾಜ್ ಕಪೂರ್ನ "ಪ್ಯಾರ್ ಹುವಾ ಹುವಾ ಇಕರಾರ್ ಹುವಾ" ಹಾಡ್ಕೊಂಡ್ ದಾರಿ ಕಳೀತಿನಿ. ಗೋಡೆ ಪೈಂಟಿಂಗ್ ವಿಶಯಕ್ಕೆ ಬಂದ್ರೆ ಇಲ್ಲಿನ ಬಿಬಿಎಂಪಿ ಇಂಜಿನಿಯರ್ಸ್ನೆಲ್ಲಾ ಅಲ್ಲಿಗೆ ಟ್ರಾನ್ಸ್ಫರ್ಮ್ ಮಾಡಿಸ್ಕೊಂಡು ಅಲ್ಲೂ ಗೋಡೆ ಬರಹ ಪ್ರಾಜೆಕ್ಟ್ ಶುರು ಮಾಡ್ಕೊಳ್ತೀನಿ...

ಇಷ್ಟಕ್ಕೂ ನಿಮಗೆ ಎಷ್ಟು ಗರ್ಲ್ ಫ್ರೆಂಡ್ಸ್ ನ ಪರಿಚಯ ಮಾಡ್ಕೊಂಡ್ರೋ ಹೇಳಿಲ್ಲ.. ಅಟ್ಲೀಸ್ಟ್ ಕೌಂಟಿಂಗ್ ಕೊಟ್ರೆ ನಾವೂ ಈಗಿನ ಕಲಾಭವನದಲ್ಲಿ ಪ್ರಯತ್ನಿಸಬಹುದು... ;-)

ಅನಿಲ್ ಕುಮಾರರೇ, ನಮಸ್ಕಾರಗಳು. ಶಾ೦ತಿನಿಕೇತನದ ಬಗ್ಗೆ ಬಹಳಷ್ಟು ವಿಚಾರಗಳನ್ನು ಅರಿತುಕೊ೦ಡೆ. ಚೆನ್ನಾಗಿದೆ. ನಿಮ್ಮನ್ನು ನೋಡಿದಾಗಲೆಲ್ಲ ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ಮಣಿರತ್ನ೦ ರನ್ನು ನೋಡಿದ ಹಾಗೆ ಆಗುತ್ತದೆ. ಅವರ ಹಾಗೂ ನಿಮ್ಮ ಮುಖಾರವಿ೦ದಗಳೆರಡಕ್ಕೂ ಸ್ವಲ್ಪ ಹೋಲಿಕೆಯಿದೆ.

ಮುಂದ..! ನಿಮ್ಮ ಲೇಖನದಲ್ಲಿ ಮೆಚ್ಚಿದ quote ಗಳು .. ಜೋಕ್ ಮಾಡೋ ಕೆಪಾಸಿಟಿ ಇಲ್ಲದವರು ಮಾತ್ರ ಇಂತ ಅಸಹ್ಯದ ಆಧಾರ ಪಡೆದು ನಗಿಸುವ ಪ್ರಯತ್ನ ಮಾಡುತ್ತಾರೆ ಪ್ರಶಸ್ತಿಯ ಗೌರವ ಇರುವುದು ಗುರ್ತಿಸುವವರ ಭಾವನೆಯಲ್ಲಿಯೇ ಹೊರತು ವಸ್ತುವಿನಲ್ಲಲ್ಲ, ಅಲ್ಲವೆ? ವ್ಯಕ್ತಿಯೊಬ್ಬನ ಸಾಧನೆಗೆ ಸಂದ ಗೌರವದ ಭೌತಿಕರೂಪ ಕಳೆದಲ್ಲಿ ಅದರ ಸಂರಕ್ಷಕರು ಆ ಸಾಧನೆಯನ್ನೇ ಕಳೆದುಕೊಂಡವರಂತೆ ಆಡುತ್ತಾರೆ ಇಂಗ್ಲೀಷ್ ಆಗ ನನ್ನ ಬದುಕೆಂಬ ಕಂಪ್ಯೂಟರಿಗೆ ಅತಿ ದೊಡ್ಡ ವೈರಸ್. ಕುತೂಹಲಕರ ಘಟ್ಟದಲ್ಲಿ ನಿಲ್ಲಿಸಿದ್ದೀರಿ.. ಮುಂದ...! @ಮಂಸೋರೆ.. ಭಲಾ.. ಬೆಂಗಳೂರಿನ ಇಂಜಿನಿಯರುಗಳನ್ನ ಶಾಂತಿನಿಕೇತನಕ್ಕೆ ವರ್ಗಾಯಿಸುವ ನಿಮ್ಮ ಕಲ್ಪನೆಯೇ ನೀವು ಕಲಾ-ವಿದ ಎಂದು ಸಾರಿ ಹೇಳುತ್ತದೆ. :)